ಎಂದಿನಿಂದಲೊ ಏನೋ ಒಂದೇ ಸಮನೆ ನಡೆಯುತ್ತಲಿದೆ
ಈ ಗಡಿಯಾರ,
ಸೆಕೆಂಡು, ನಿಮಿಷ, ತಾಸುಗಳ ತೋರುತ್ತ ತಿರುಗುತಿವೆ ಮುಳ್ಳು
ಹಗಲೂ ಇರುಳು
ಗಂಟೆ, ಅರೆಗಂಟೆಗೊಂದೊಂದು ಸಲ ಮೊಳಗಿದೆ ಕೊರಳು,
ನಾಳ ನಾಳಗಳಲ್ಲಿ ಮಂಜಿನುರುಳು !

ಮಳೆಯೊ ಬಿಸಿಲೋ ಮಂಜೊ, ಏನಾದರೇನಂತೆ
ಕಪ್ಪು ಗಾಜಿನ ಒಳಗೆ ಚಲಿಸುತಿವೆ ನಕ್ಷತ್ರಗಣ
ನಿಶ್ಚಿಂತೆ –
ಎಡಬಿಡದೆ ಹೊಳೆ ಹರಿಯುತಿವೆ ಸಾಗರಕೆ ;
ಎಷ್ಟೊಂದು ಸಿಹಿನೀರ ಹೊಳೆ ಹರಿದರೂ ತೀರದಿದೆ
ಉಪ್ಪು ಕಡಲಿನ ಕಪ್ಪು ಬಾಯಾರಿಕೆ !

ರುದ್ರಭೂಮಿಯ ತುಂಬ ಬೆಂದ ಬದುಕಿನ ಬೂದಿ
ನೂರು ಗೋರಿಯ ಮೇಲೆ ಮೊಳೆವ ಹಸಿರು !
ಅರೆಮುರಿದು ನಿಂತಿರುವ ಕೋಟೆಕೊತ್ತಲಗಳಲಿ ಹಳುಬೆಳೆದು
ತೊಗಲ ಬಾವಲಿ ರೆಕ್ಕೆ ಬಡಿವ ಸದ್ದು.
ನೆಲದೊಳೆಂದೋ ಹೂತು ಹಾಳಾದ ನಗರಗಳ ಅಗೆದು
ಅವಶೇಷಗಳ ತೆಗೆವ ಪ್ರಾಚ್ಯ ಸಂಶೋಧಕರ
ಗುದ್ದಲಿಯ ಸದ್ದು !

ನಟ್ಟ ನಡುರಾತ್ರಿಯಲಿ ಎದ್ದು ಕುಳಿತನು ಇವನು :
ಭೋರ್ಗರೆದಿತ್ತು ಇರುಳಿನ ಹೊನಲು-
ಕಪ್ಪು ಮಡುವಿನ ಒಳಗೆ ಮೊಸಳೆ ಹಲ್ಲಿನ ಮಸೆತ :
ಟಿಕ್, ಟಿಕ್, ಟಿಕ್-
ಕೈಗಡಿಯಾರ ತಲೆದಿಂಬಿನಲಿ ಮಿಡಿಯುತಿದೆ,
ಎದೆ ನಡುಗುತಿದೆ !

ಕೋಳಿ ಕೂಗಿತು ; ಬೆಳಗು ಕರೆಯಿತು ಗಾಳಿ ಸಂಚಾರಕೆ,
ಚಿಗುರು ಹೂ ಹೀಚುಗಳ ಹಾದಿ ಮುಗಿಯಿತು ಇನ್ನು,
ಮುಂದೆ ಕಾಣುತ್ತಲಿದೆ ಬೋಳು ಮರಗಳ ರಸ್ತೆ,
ಅತ್ತಿತ್ತ ಅಸ್ತಿಪಂಜರ ನಿಂತು ಕೊಡುವ ಗೌರವ ರಕ್ಷೆ ;
ಉದುರಿದೆಲೆಗಳ ತುಳಿದು ನಡೆದು ಬಂದನು ಇವನು,
ಕಾಣಿಸಿತು ಅರುವತ್ತನೆಯ ಮೈಲಿಕಲ್ಲಿನ ನೆರಳು !

ಕೈಕೋಲ ಮೂಲೆಯೊಳಿಟ್ಟು ನಿಲುವುಗನ್ನಡಿಯೆದುರು
ಬಂದು ನಿಂತ.
ತಲೆತುಂಬ ಮಾಗಿಯ ಮುದ್ರೆ ; ಕಮರಿದ ಕೆನ್ನೆ ; ಮಾಸಿದ ಕಣ್ಣು ;
ತನ್ನದೇ ಈ ಚಿತ್ರ !
ಗೋಡೆಯ ಮೇಲೆ ತೂಗುತಿದೆ ಹರೆಯಗಳ ಹೊಂಬಿಸಿಲ
ಹಿಡಿದು ತೆಗೆಸಿದ ಫೋಟೊ,
ಅದರ ಮೇಲೇ ತೂಗುತಿದೆ ಈ ದೊಡ್ಡ ಗಡಿಯಾರ-
ಟಿಕ್-ಟಿಕ್-ಟಿಕ್-
*     *     *
ಕನ್ನಡಿಯೆದುರು ಒಂದೊಂದೆ ಬೆಳ್‌ನವಿರ
ಹಿಡಿದು ಕೀಳುವ ಚಪಲ ;
ಇಲ್ಲ, ಅಂಗಡಿಯಿಂದ ಕಪ್ಪು ಬಣ್ಣವ ತಂದು
ಬಳಿದು ಕರ್ರಗೆ ಮಾಡಿ, ಬೈತಲೆ ತೆಗೆದು,
ಹಳೆಯ ಸೂಟನು ಮತ್ತೆ ಇಸ್ತ್ರಿ ಮಾಡಿ
ತೊಟ್ಟು ಪೇಟೆಯ ತುಂಬ ಅಲೆವ ಬಯಕೆ.
ನಡುಮನೆಯಿಂದ ರೇಡಿಯೋ ದನಿ ಕೇಳಿಸಿತು :
‘ಭಜ ಗೋವಿಂದಂ ಭಜ ಗೋವಿಂದಂ
ಭಜ ಗೋವಿಂದಂ ಮೂಢಮತೇ’…

ಕುಸಿದು ಕುಳಿತನು ಕುರ್ಚಿಯಲಿ ಚಿಂತಾಕ್ರಾಂತ,
ಗಡಿಯಾರಗಳ ದನಿಗೆ ಕಿವಿಯ ಮುಚ್ಚಿ.
ಮನೆಯೊಳಗಿಂದ ಪುಟ್ಟ ಮೊಮ್ಮಗು ಬಂತು,
ಸಕ್ಕರೆಯ ತೊದಲಿಂದ ‘ಅಜ್ಜ’ ಎಂದಿತು ಒಮ್ಮೆ,
ಮುಂಬೆಳಗಿನೆಳೆಬಿಸಿಲು ಸಂಜೆಬಾನಿಗೆ ಬಿತ್ತು !