ಅತಿ ಪ್ರಾಚೀನ ಕಾಲದಿಂದಲೂ ಅಕ್ಕಪಕ್ಕದ ರಾಜ್ಯ ಮತ್ತು ಪ್ರಾಂತ್ಯಗಳ ನಡುವೆ ಗಡಿಗಾಗಿ ಕಲಹಗಳಾಗುತ್ತಲೇ ಇವೆ. ಇಂದಿನ ದಿನಗಳಲ್ಲಿಯೂ ನಡೆಯುತ್ತಿರುವ ಈ ರೀತಿಯ ಘರ್ಷಣೆಗಳಲ್ಲಿ ಕೆಲವಕ್ಕೆ ಆರ್ಥಿಕ ಸ್ಪರ್ಧೆ ಕಾರಣವಾದರೆ, ಮತ್ತೆ ಕೆಲವು ಅಜ್ಞಾನದ ಪರಿಣಾಮಗಳಾಗಿವೆ. ಈ ಹಂತದಲ್ಲಿ ನಮ್ಮ ತಿಳಿವು ಹೆಚ್ಚಿದಂತೆ ಪ್ರಾಂತ್ಯ ಪ್ರಾಂತ್ಯಗಳ ಪರಸ್ಪರ ಅವಲಂಬನೆ ಹಾಗೂ ಅಭಿವೃದ್ಧಿಯ ವಿಷಯದಲ್ಲಿ ಹೆಚ್ಚಿನ ಅರಿವು ಮತ್ತು ಮೆಚ್ಚುಗೆಗಳು ಮೂಡುತ್ತವೆ. ಇದಕ್ಕೆ ನಮ್ಮ ರಾಷ್ಟ್ರ ಹಾಗೂ ರಾಜ್ಯಗಳಲ್ಲಿ ನಡೆದ, ನಡೆಯುತ್ತಿರುವ ಚಳುವಳಿಗಳೇ ಕಾರಣವಾಗಿವೆ.

ಕರ್ನಾಟಕದಲ್ಲಿ ನಡೆದ ವಚನಕಾರರ ಚಳುವಳಿ, ದಾಸರ ಭಕ್ತಿ ಚಳವಳಿ, ಸ್ವಾತಂತ್ಯ್ರ ಚಳವಳಿ, ಕರನಿರಾಕರಣ ಚಳವಳಿ, ಕ್ವಿಟ್ ಇಂಡಿಯಾ ಚಳವಳಿ, ವಿವಿಧ ರೈತ ಚಳವಳಿಗಳು, ಏಕೀಕರಣ ಚಳವಳಿ, ಗಡಿನಾಡಿನ ಒಳಿತಿಗಾಗಿ ಚಳವಳಿ, ಹಿಂದುಳಿದ ವರ್ಗಗಳ ಚಳವಳಿ, ದಲಿತ ಮತ್ತು ಬಂಡಾಯ ಚಳವಳಿಗಳು. ಇವೆಲ್ಲ ಹೆಚ್ಚು ಪ್ರಸಿದ್ಧವಾಗಿವೆಯಾದರೂ ಭೂದಾನ ಚಳವಳಿ, ಸಹಕಾರ ಚಳವಳಿ, ಖಾದಿ ಚಳವಳಿ, ಹಿಂದಿ ಚಳವಳಿ, ಸಾಮೂಹಿಕ ವಿವಾಹ ಚಳವಳಿ, ಹೈದರಾಬಾದ್ ಕರ್ನಾಟಕದ ಮುಕ್ತಿ ಚಳವಳಿ, ಜವಾಬ್ದಾರಿ ಸರಕಾರ ಚಳವಳಿ, ಪಾನ ನಿರೋಧ ಚಳವಳಿ, ವಯಸ್ಕರ ಶಿಕ್ಷಣ ಚಳವಳಿ, ಕಾನೂನು ನೆರವು ಚಳವಳಿ, ಬ್ರಾಹ್ಮಣೇತರ ಚಳವಳಿ, ಮಹಿಳಾ ವಿಮೋಚನಾ ಚಳವಳಿ, ವಿದ್ಯಾರ್ಥಿ ಚಳವಳಿ, ಕುಟುಂಬ ಯೋಜನಾ ಚಳವಳಿ ಮುಂತಾದ ಚಳವಳಿಗಳು ಕರ್ನಾಟಕದ ಸಾಮಾಜಿಕ ಪರಿವರ್ತನೆಯ ವಿವಿಧ ಕಾಳಜಿಗಳನ್ನು ಪ್ರತಿಬಿಂಬಿಸುತ್ತವೆ. ಇದು ನಿಜ. ಆದರೆ ಅದೇ ರೀತಿಯಲ್ಲಿ ಕರ್ನಾಟಕವು ಚಳವಳಿಗಳಿಂದ ಮುಕ್ತವಾದ ಪ್ರದೇಶ ಎಂಬ ಮಿಥ್ಯೆಯನ್ನು ಹುಸಿಗೊಳಿಸುತ್ತದೆ. ಸಾಮಾನ್ಯವಾಗಿ ಮೇಲೆ ಹೆಸರಿಸಿರುವ ಎಷ್ಟೋ ಚಳುವಳಿಗಳು ಹುಟ್ಟುತ್ತಲೇ ಅಡಗಿಹೋಗಿವೆ. ಮತ್ತೆ ಕೆಲವನ್ನು ಚಳವಳಿಗಳೆಂದು ಕರೆಯುವುದೋ, ಬೇಡವೋ ಎಂಬ ಸಂದಿಗ್ಧತೆಯಲ್ಲಿವೆ. ಮೇಲಿನವುಗಳಲ್ಲಿ ಕೆಲವು ಮಾತ್ರ ಕರ್ನಾಟಕಕ್ಕೆ ವಿಶಿಷ್ಟವಾದ ಅಥವಾ ಕರ್ನಾಟಕಕ್ಕೆ ಸೀಮಿತವಾದಂತಹ ಚಳವಳಿಗಳಲ್ಲ. ಉದಾಹರಣೆಗೆ ಕ್ವಿಟ್ ಇಂಡಿಯಾ ಚಳವಳಿ, ಸ್ವಾತಂತ್ರ್ಯ ಚಳವಳಿ, ಪಾನನಿರೋಧ ಚಳವಳಿ, ಭೂದಾನ ಚಳವಳಿ ಮುಂತಾದ ಅಖಿಲ ಭಾರತ ಮಟ್ಟದ ವಿಶಾಲ ಚಳವಳಿಯ ಅಂಗವಾಗಿ ಕರ್ನಾಟಕದಲ್ಲಿಯೂ ಕಾಣಿಸಿಕೊಂಡವು. ಆದರೆ ಕೆಲವೇ ಕೆಲವು ಮಾತ್ರ ಖಂಡಿತವಾಗಿಯೂ ಕರ್ನಾಟಕಕ್ಕೆ ವಿಶಿಷ್ಟವೆನಿಸುವಂತಹ ಚಳವಳಿಗಳು. ಉದಾಹರಣೆಗೆ ೧೨ನೆಯ ಶತಮಾನದಲ್ಲಿ ಉಂಟಾದಂತಹ ವಚನಕಾರರ ಚಳವಳಿಯು ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ. ಹಾಗೆ ೧೯೫೬ರ ಭಾಷಾವಾರು ಪ್ರಾಂತ್ಯ ರಚನೆಯಲ್ಲಿ ಕರ್ನಾಟಕಕ್ಕೆ ಆದಂತಹ ಅನ್ಯಾಯದ ವಿರುದ್ಧ ಬೃಹತ್ ಪ್ರಮಾಣದಲ್ಲಿ ರಾಜ್ಯದಾದ್ಯಂತ ಗಡಿನಾಡಿನ ರಕ್ಷಣೆಗಾಗಿ ಚಳವಳಿಗಳು ನಡೆದವು. ಅವು ಇಂದಿಗೂ ಸಹ ನಿಲ್ಲದೆ ನಡೆದುಕೊಂಡು ಬರುತ್ತಲಿವೆ. ಪ್ರಸ್ತುತ ಈ ಲೇಖನದಲ್ಲಿ ನಮ್ಮ ರಾಜ್ಯದ ಏಕೀಕರಣದ ನಂತರ ಗಡಿಪ್ರದೇಶದಲ್ಲಿ ಗಡಿಯ ರಕ್ಷಣೆಗೆ ಹಾಗೂ ನೆರೆಯರಾಜ್ಯ ಸೇರಿರುವಂತಹ ಕನ್ನಡ ಪ್ರದೇಶಗಳನ್ನು ಪಡೆಯುವುದಕ್ಕಾಗಿ ನಡೆದುಕೊಂಡು ಬರುತ್ತಿರುವ ಚಳವಳಿಗಳನ್ನು ಅಧ್ಯಯನ ಮಾಡಲಾಗಿದೆ.

ಸುಮಾರು ಎರಡು ಸಾವಿರ ವರ್ಷಗಳ ಚರಿತ್ರೆ ಹಾಗೂ ಸಂಸ್ಕ್ರತಿಯನ್ನು ಪಡೆದಿರುವ ಕರ್ನಾಟಕವನ್ನು ಆಳಿಹೋದ ಶಾತವಾಹನರು, ಕದಂಬರು, ಗಂಗರು, ಚಾಲಿಕ್ಯರು, ರಾಷ್ಟ್ರಕೂಡರು, ಹೊಯ್ಸಳರು ಹಾಗೂ ವಿಜಯನಗರದ ಅರಸರ ಈಮ ಪ್ರಾಚೀನ ನಾಡಿನ ಶೌರ್ಯ, ಸಾಹಸ, ಸ್ವಾತಂತ್ರ್ಯ ಪ್ರೇಮ, ಪ್ರಜಾನುರಾಗ, ಸರ್ವಸಮನ್ವಯ ದೃಷ್ಟಿ ಹಾಗೂ ಧವಳಕೀರ್ತಿಯನ್ನು ಮೆರೆಸಿ ಮರೆಯಾಗಿದ್ದಾರೆ. ಇಮ್ಮಡಿ ಪುಲಕೇಶಿ, ವಿಕ್ರಮಾದಿತ್ಯ, ನೃಪತುಂಗ, ಧ್ರುವ, ಇಮ್ಮಡಿ ಫ್ರೌಢದೇವರಾಯ ಹಾಗೂ ಕೃಷ್ಣದೇವರಾಯ ಮೊದಲಾಠದ ಕರ್ನಾಟಕದ ಚಕ್ರವರ್ತಿಗಳು ಪ್ರಪಂಚದ ಮಹಾನ್ ಚಕ್ರವರ್ತಿಗಳಿಗೆ ಸಮನಾಗಿರುತ್ತಾರೆ.

ಕನ್ನಡಕ್ಕೆ ಅಂದಿನ ಕಾಲದಲ್ಲಿಯೇ ಸಂಸ್ರ‍್ಕರತದ ಸ್ಥಾನವನ್ನು ದೊರೆಸಿಕೊಟ್ಟ ಪಮಪ, ರನ್ನರು; ಕನ್ನಡವನ್ನು ಜನವಾಣಿಯನ್ನು ಮಾಡಿದಂತಹ ಬಸವ, ಅಲ್ಲಮ, ಚೆನ್ನಬಸವ, ಅಕ್ಕಮಹಾದೇವಿಯರು; ಶ್ರೀಸಾಮಾನ್ಯನ್ನು ಅಸಮಾನ್ಯವಾಗಿ ಚಿತ್ರಿಸಿದ ಹರಿಹರ; ಸತ್ಯವೇ ಶಿವನೆಂದು ಸಾರಿದ ರಾಘವಾಂಕ; ಅಲ್ಲಮ ಪ್ರಭುವಿನ ಸಂಪ್ರದಾಯವನ್ನು ನಿರೂಪಿಸಿದ ಚಾಮರಸ; ಶ್ರೀಕೃಷ್ಣನ ವಿರಾಟ್‌ಸ್ವರೂಪವನ್ನು ತೋರಿಸಿದ ಕುಮಾರವ್ಯಾಸ; ಕಲ್ಲನ್ನು ಕಲೆಯನ್ನಾಗಿ ಮಾಡಿದ ಜಕಣಾಚಾರ್ಯ ಮೊದಲಾದವರು ಕನ್ನಡಿಗರು. ವಿಶ್ವವಿಖ್ಯಾತರು. ಇವುಗಳ ಜೊತೆಗೆ ಕುಳಿತಲ್ಲಿಯೇ ಕಾವ್ಯವನ್ನು ರಚಿಸಿದ ಕೀರ್ತಿ ಕರ್ನಾಟಕದ ಜನಪದ ಕವಿಗಳಿಗೆ ಸಲ್ಲುತ್ತದೆ.

ಹಿಂದೊಮ್ಮೆ ಕರ್ನಾಟಕದ ಗಡಿಯು ಹಿಮಾಲಯದವರೆಗೂ ಹಬ್ಬಿತ್ತು. ಸಿಂಹಳವೂ ಸಹ ಕರ್ನಾಟಕದ ಒಂದು ಭಾಗವೇ ಆಗಿತ್ತು. ಕರ್ನಾಟಕದ ಸೈನ್ಯ ಅಂದಿನ ಕಾಲದಲ್ಲಿಯೇ ಜಗತ್ ಪ್ರಸಿದ್ಧವಾಗಿತ್ತು. ಔರಂಗಜೇಬನನ್ನು ಎದುರಿಸಿ ಶಿವಾಜಿ ಮಗ ರಾಜಾರಾಮನಿಗೆ ಆಶ್ರಯವಿತ್ತ ಕೆಳದಿ ಚೆನ್ನಮ್ಮಾಜಿ, ಸ್ವತಃ ಶಿವಾಜಿ ಮಹಾರಾಜನ ಸೈನ್ಯವನ್ನೆ ಎದುರಿಸಿದ ಬೆಳವಡಿ ಮಲ್ಲಮ್ಮ, ಆಂಗ್ಲರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮವನ್ನು ಹೂಡಿದ ಪ್ರಥಮ ಸ್ವಾತಂತ್ರ್ಯ ಯೋಧೆ ಕಿತ್ತೂರ ಚೆನ್ನಮ್ಮ ಕನ್ನಡದವರೆ. ಪರಾಕ್ರಮದಲ್ಲಿ, ಪ್ರತಾಪದಲ್ಲಿ, ಪರಧರ್ಮ ಸಹಿಷ್ಣುತೆಯಲ್ಲಿ, ಪರೋಪಕಾರದಲ್ಲಿ, ಪ್ರಜಾಪಾಲನೆಯಲ್ಲಿ, ಧರ್ಮ ಸಾಹಿತ್ಯ ಹಾಗೂ ಸಂಸ್ಕೃತಿಗಳ ಪೋಷಣೆಯಲ್ಲಿ ಹಾಗೂ ಪರಧರ್ಮವನ್ನು ಸಮನ್ವಯವಾಗಿ ಕಂಡಂತಹ ಕನ್ನಡದ ಸಾಮ್ರಾಟರಿಗೆ ಸರಿ ಸಮನಾಗಿ ಸಿಗುವುದು ಅಪರೂಪ.

ಇತಿಹಾಸ ಅಧ್ಯನದಿಂದ ತಿಳಿದು ಬರುವ ಹಾಗೆ, ಭರತಖಂಡವನ್ನು ಬೆಳಗಿದಂತಹ ಕನ್ನಡನಾಡು ಕಾಲದ ಕ್ರೂರ ಚಕ್ರಕ್ಕೆ ಸಿಲುಕಿ ಸಂಸ್ಥಾನಗಳಾಗಿ ಹಂಚಿ ಹೀದದ್ದು ಐತಿಹಾಸಿಕ ದುರಂತವೆಂದು ಹೇಳಬಹುದು. ಇದರಿಂದಾಗಿ ಕನ್ನಡಿಗರ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಕೈಗಾರಿಕೆಗಳ ಪ್ರಗತಿಯು ಕುಂಠಿತಗೊಂಡು ಕನ್ನಡ ನಾಡಿನಲ್ಲಯೂ ಅವರು ಅಲ್ಪಸಂಖ್ಯಾತರಾಗಿ ಬಾಳಬೇಕಾಯಿತು. ಅಂದು ಅವರ ಕೂಗನ್ನು ಕೇಳುವವರೇ ಇಲ್ಲದಾಯಿತು. ಈ ಹಂತದಲ್ಲಿ ಭಾರತದ ಸ್ವಾತಂತ್ರ್ಯ ಹೀರಾಟವು ಕರ್ನಾಟಕದ ಏಕೀಕರಣ ಚಳುವಳಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರೇರಣ ನೀಡಿತು. ಕರ್ನಾಟಕದ ಏಕೀಕರಣ ಚಳುವಳಿಯೂ ಸಹ ಸ್ವಾತಂತ್ರ್ಯ ಸಂಗ್ರಾಮದ ಒಂದು ಅಂಗವಾಗಿಯೇ ಬೆಳೆಯಲಾರಂಭಿಸಿತು.

ಕನ್ನಡದ ಪ್ರಥಮ ಗ್ರಂಥವೆಂದು ಕರೆಸಿಕೊಳ್ಳುವ ಕವಿರಾಜಮಾರ್ಗವು (ಸು.೮೫೦) ಕರ್ನಾಟಕದ ಮೇರೆಯನ್ನು ಕುರಿತು,[1]

ಕಾವೇರಿಯಿಂದ ಗೋ |
ದಾವರಿವರಮಿರ್ದ ನಾಡದಾ ಕನ್ನಡದೊಳ್ |
ಭಾವಿಸಿದ ಜನಪದಂ ವಸು |
ಧಾವಲಯವಿಲೀನವಿಶದವಿಷಯ ವಿಶೇಷಂ | (೩೬)[2]
ಅದರೊಳಗಂ ಕಿಸುವೊಳಲಾ |

ವಿದಿತ ಮಹಾಕೊಪಣನಗರದಾ ಪುಲಿಗೆರೆಯಾ |
ಸದಭಿಸ್ತುತಮಪ್ಪೊಂಕುಂ |
ದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್ | (.೩೨)[3]

ಎಂದು ಗುರುತಿಸಿದೆ. ಅಲ್ಲಿಂದ ಇಲ್ಲಿಯವರೆಗೆ ನಮ್ಮ ರಾಜ್ಯವನ್ನು ಹತ್ತಾರು ರಾಜವಂಶದವರು ಹಾಗೂ ವಿದೇಶಿಯರು ಆಳ್ವಿಕೆ ನಡೆಸಿದರು. ವಿದೇಶಿಯವರಿಂದ ನಮ್ಮ ರಾಷ್ಟ್ರಕ್ಕೆ ಸ್ವಾತಂತ್ರ್ಯ ದೊರಕಿ ಐದು ದಶಕಗಳೇ ಕಳೆದವು. ಕರ್ನಾಟಕ ರಾಜ್ಯ ಅಸ್ತಿತ್ವದಲ್ಲಿ ಬಂದ ಸಂಭ್ರಮದ ನೆನಪಿನಿಂದ ನಾವು ಪ್ರತಿ ವರ್ಷವೂ ಆಚರಿಸಿಕೊಂಡು ಬರುತ್ತಿರುವ ಕನ್ನಡ ರಾಜ್ಯೋತ್ಸವಕ್ಕೆ ಅರವತ್ತು ವಸಂತಗಳು ಸಂಧಿಸುತ್ತಿದ್ದರೂ (ಸುವರ್ಣ ಕರ್ನಾಟಕ ದಿನಾಚರಣೆಯನ್ನು ಆಚರಿಸುತ್ತಿರುವ ಇಂದಿನ ದಿನದಲ್ಲಿಯೂ) ಕರ್ನಾಟಕದ ಭೌಗೋಳಿಕ ಗಡಿಗಳು ಮಾತ್ ಚರ್ಚೆಗೆ, ವಿವಾದಕ್ಕೆ ಇನ್ನೂ ಕಾರಣವಾಗುತ್ತಿರುವುದು ವಿಪರ್ಯಾಸವೇ ಸರಿ. ಉತ್ತಮ ಸಂಸ್ಕೃತಿಗೆ, ಸಂಸ್ಕಾರಕ್ಕೆ ಕಾರಣವಾಗಿರಬೇಕಾದ ಭಾಷೆಗೆ ಎಲ್ಲಯೂ ಯಾವ ಬಗೆಯು ಲಕ್ಷ್ಮಣ ರೇಖೆಯೂ ಇರುವುದು ಕಂಡುಬರುವುದಿಲ್ಲ. ಇತಿಹಾಸದಲ್ಲಿ ನಾವೆಲ್ಲ ತಿಳಿದಿರುವ ಹಾಗೆ ಕಾವೇರಿಯಿಂದ ಗೋದಾವರಿಯವರೆಗೆ ವಿಸ್ತರಿಸಿದ್ದ ಕನ್ನಡದ ನೆಲಕ್ಕೆ ಈಗಿನ ಭೌಗೋಳಿಕ ಗಡಿಗಳು ಸಂಪೂರ್ಣವಾಗಿ ಬೇರೆಯೇ. ಇದಕ್ಕೆ ಮೂಲಕಾರಣ ಇತಿಹಾಸ. ಆದರೆ ಕನ್ನಡದ ಪ್ರಾದೇಶಿಕ ಪರಿಸರದಲ್ಲಿ ಮೂಡಿಬಂದ ಸಂಸ್ಕೃತಿಯ ಬೆಳಕನ್ನು ಹಾಗೂ ಭೌಗೋಳಿಕ ಗಡಿಗಳನ್ನು ಸ್ವಲ್ಪವೂ ಗಮನದಲ್ಲಿಟ್ಟುಕೊಳ್ಳದೆ ಗುರುತಿಸುವುದು ಸಾಧ್ಯವೆನಿಸುತ್ತದೆ.

೧೯೪೭ರಲ್ಲಿ ದೇಶವು ಸ್ವತಂತ್ರವಾದ ನಂತರ ದೇಶದಲ್ಲಿ, ಅದರಲ್ಲಿಯೂ ಸಕ್ಷಿಣ ಭಾರತದಲ್ಲಿ ಭಾಷಾವಾರು ಪ್ರಾಂತ ರಚನೆಗೆ ಹೆಚ್ಚಿನ ಬೇಡಿಕೆ ಉಂಟಾಯಿತು. ಇದರ ಅಂಗವಾಗಿ ಚಳುವಳಿಗಳು ನಡೆಯಲಾರಂಭಿಸಿದವು. ಪ್ರಮುಖವಾಗಿ ಆಂಧ್ರ ಪ್ರದೇಶದಲ್ಲಿ ಶ್ರೀ ಪೊಟ್ಟಿ ಶ್ರೀರಾಮುಲು ಅವರ ಮುಂದಾಳತ್ವದಲ್ಲಿ ಬೃಹತ್ ಪ್ರಮಾಣದ ಪ್ರತ್ಯೇಕ ರಾಜ್ಯ ಚಳುವಳಿ ನಡೆಯಲಾರಂಭಿಸಿತು. ಚಳವಳಿ ಯಾವ ಸ್ವರೂಪ ಪಡೆಯಿತೆಂದರೆ ಪೊಟ್ಟಿ ಶ್ರೀರಾಮುಲು ಅವರು ಉಪವಾಸ ಕೈಗೊಂಡು ಉಪವಾಸದ ಸ್ಥಳದಲ್ಲಿಯೇ ಕೋಟಿ ಕೋಟಿ ಅಭಿಮಾನಿಗಳ ಮುಂದೆಯೇ ಮಡಿದರು. ಇಂತಹ ಸಂದರ್ಭದಲ್ಲಿ ನೆಹರು ನೇತೃತ್ವದ ಕೇಂದ್ರ ಸರ್ಕಾರವು ಭಾಷಾವಾರು ಪ್ರಾಂತ್ಯ ರಚನೆಗೆ ಆದ್ಯತೆ ನೀಡಿ ಮೂರು ಸದಸ್ಯರೊಳಗೊಂಡ ಒಂದು ಗಡಿ ರಚನಾ ಆಯೋಗವನ್ನು ರಚಿಸಿತು. ನಿಯೋಗದ ಜವಾಬ್ದಾರಿಯನ್ನು ಅಂದು ಮಧ್ಯಪ್ರದೇಶದ ರಾಜ್ಯಪಾಲರಾಗಿದ್ದ ಹೆಚ್. ವಿ. ಪಾಟಸ್ಕರ್ ಅವರು ವಹಿಸಿಕೊಂಡರು. ಅವರ ಜೊತೆಗೆ ಹೃದಯನಾಥ ಕುಂಜ್ರು ಮತ್ತು ಸರದಾರ ಫಣಿಕರ್ ಅವರು ಸದಸ್ಯರಾಗಿದ್ದರು. ಈ ಸಮಯದಲ್ಲಿ ನಿಯೋಗದ ಮುಂದೆ ಮರಾಠಿ, ತೆಲುಗು, ಕನ್ನಟ, ತಮಿಳು, ಮಲಯಾಳಿ ಭಾಷಿಕರು ತಮ್ಮ ತಮ್ಮ ಬೇಡಿಕೆಯನ್ನು ಮುಂದಿಟ್ಟು ಹೋರಾಡಿ ಕೊನೆಗೆ ತಮ್ಮದೇ ಆದ ಒಪ್ಪಂದಕ್ಕೆ ಬಂದರು. ಇದರ ಅಂಗವಾಗಿ ೧೯೫೩ರಲ್ಲಿ ಭರತದಲ್ಲಿಯೇ ಪರಥಮವಾಗಿ ಆಂಧ್ರಪ್ರದೇಶವು ಭಾಷೆಯ ಆಧಾರದ ಮೇಲೆ ಪ್ರತ್ಯೇಕ ರಾಜ್ಯವಾಗಿ ರೂಪಗೊಂಡಿತು. ಇದಾದ ನಂತರ ೧೯೫೬ರಲ್ಲಿ ರಾಷ್ಟ್ರೀಯ ಪುನರಚನಾ ಆಯೋಗದ ಅನ್ವಯದಂತೆ ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳ ಉದಯವಾಯಿತು. ಇಷ್ಟಕ್ಕೇ ಈ ಸಮಸ್ಯೆ ಕೊನೆಗೊಂಡಿತೆಂದು ಹೇಳಲು ಸಾಧ್ಯವಾಗುವುದಿಲ್ಲ. ಆಂದ್ರ, ತಮಿಳುನಾಡು, ಕೇರಳ, ಮಹಾರಾಷ್ಟ್ರ ರಾಜ್ಯಗಳೊಂದಿಗೆ ಕರ್ನಾಟಕದ ಗಡಿ ಪ್ರದೇಶಗಳ ಸಮಸ್ಯೆಯು ಹೆಚ್ಚಾಯಿತು. ಮುಷ್ಕರ, ಹೋರಾಟ, ಚಳುವಳಿಗಳು ನಿರಂತರವಾಗಿ ನಡೆಯಲಾರಂಬಿದವು. ಕರ್ನಾಟಕ ಸರ್ಕಾರವು ಇದರ ಸಮಗ್ರ ವರದಿಯನ್ನು ಕೇಂದ್ರ ಸಕಾರಕ್ಕೆ ಮನವಿ ರೂಪದಲ್ಲಿ ಸಲ್ಲಿಸಿತು.

ಫಜಲ್ ಆಲಿ ಅಯೋಗ

ರಾಷ್ಟ್ರೀಯ ಪುನರಚನಾ ಅಯೋಗದ ನಿರ್ಣಯವು ಉಭಯ ರಾಜ್ಯಗಳಿಗೆ ಹೆಚ್ಚಿನ ಸಮಸ್ಯೆಯನ್ನು ತಂದೊಡ್ಡಿತು. ಅದರಲ್ಲಿಯೂ ಕನ್ನಡಿಗರ ಒತ್ತಾಯಕ್ಕೆ ಮನ್ನಣೆ ನೀಡಿ ಕೇಂದ್ರ ಸಕಾರವು ನ್ಯಾಯಮೂರ್ತಿ ಫಜಲ್ ಆಲಿಯವರ ನೇತೃತ್ವದಲ್ಲಿ ಮತ್ತೊಮದು ಆಯೋಗವನ್ನು ನೇಮಿಸಿತು. ಇದರಿಂದಾಗಿ ಕನ್ನಡಿಗರಿಗೆ ಹಾರಿಹೋದ ಪ್ರಾಣ ಮರಳಿ ಬಂದಂತಾಯಿತೆನ್ನಬಹುದು. ಫಜಲ್ ಆಲಿ ಆಯೋಗವು ಸುಮಾರು ೩೮ ಸಾವಿರ ಮೈಲು ಸಂಚರಿಸಿ ೧೦೪ ಸ್ಥಳಗಳಲ್ಲಿ ವಿಚಾರಣೆ ನಡೆಸಿ, ಸುಮಾರು ಒಂಬತ್ತು ಸಾವಿರ ಗಡಿನಾಡಿನ ಜನರನ್ನು ಸಂದರ್ಶಿಸಿತು. ಈ ಸಮಯದಲ್ಲಿ ಕರ್ನಾಡಕದ ರಾಜಕಾರಣಿಗಳು, ಸಾಹಿತಿಗಳು, ಸ್ವಾಮೀಜಿಗಳು, ವ್ಯಾಪಾರಿಗಳು, ಕಾರ್ಮಿಕರು ಹಾಗೂ ಅಲ್ಪಸಂಖ್ಯಾತ ಮುಖಂಡರುಗಳು ಸಂಪೂರ್ಣ ಏಕೀಕೃತ ಕರ್ನಾಟಕ ರಾಜ್ಯದ ನಿರ್ಮಾಣವನ್ನು ಬೆಂಬಲಿಸಿ ನಿಂತರು.[4]ಮೈಸೂರು ಸಂಸ್ಥಾನದ ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯನವರು ಕರ್ನಾಟಕ ಏಕೀಕರಣಕ್ಕೆ ತಮ್ಮ ಸಂಪೂರ್ಣ ಒಪ್ಪಿಗೆಯನ್ನು ನೀಡಿದರು. ಈ ಸಮಯದಲ್ಲಿ ಮೈಸೂರು ಸಂಸ್ಥಾನದಲ್ಲಿ ಕೆಲವರು ಕರ್ನಾಟಕದ ಏಕೀಕರಣವನ್ನು ವರೋಧಿಸಿದರು. [5] ಆದೋನಿ, ಆಲೂರು, ಸೊಲ್ಲಾಪುರ, ಜತ್ತಿ, ಕಾಸರಗೋಡು, ಮಡಕಶಿರ, ಹೋಸುರುಗಳನ್ನು ಕರ್ನಾಟಕಕ್ಕೆ ಸೇರಿಸಬೇಕೆಂದು ಈ ಭಾಗದ ಜನತೆ, ರಾಜಕಾರಣಿಗಳು, ಸಾಹಿತಿಗಳು, ವಿದ್ಯಾರ್ಥಿಗಳು, ವ್ಯಾಪಾರಸ್ಥರೂ ಮತ್ತು ಉದ್ಯಮಿಗಳು ಫಜಲ್ ಆಲಿ ಆಯೋಗವನ್ನು ನೇರವಾಗಿ ಕಂಡು ಒತ್ತಾಯಿಸಿದರು. ಇಂಥ ಸಮಯದಲ್ಲಿಯೇ ಉತ್ತರ ಕರ್ನಾಟಕದಲ್ಲಿ ವಿದ್ಯಾರ್ಥಿ ಪರಿಷತ್ ಜನ್ಮ ತಾಳಿದ್ದು.

ಕರ್ನಾಟಕ ವಿದ್ಯಾರ್ಥಿ ಪರಿಷತ್ತಿನ ಐತಿಹಾಸಿಕ ಸಭೆ

ಕರ್ನಾಟಕ ಏಕೀಕರಣದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದಂತಹ ಪರಿಷತ್ತು ಏಕೀಕರಣದ ನಂತರವೂ ನೆರೆಯ ರಾಜ್ಯಗಳಲ್ಲಿಯೇ ಉಳಿದಂತಹ ಅಚ್ಚಕನ್ನಡದ ಪ್ರದೇಶಗಳನ್ನು ಮರಳಿ ಪಡೆಯಲು ಮುಂದಾಯಿತು. ಮುಂದಿನ ಕಾರ್ಯದ ಬಗ್ಗೆ ಚರ್ಚಿಸಲು ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿಗಳನ್ನು ಸಂಘಟಿಸಿ ಬೃಹತ್‌ ಪ್ರದರ್ಶನವನ್ನು ಏರ್ಪಡಿಸಿತು. ಕರ್ನಾಟಕದ ಏಕೀಕರಣಕ್ಕಾಗಿ ಜೈಲುವಾಸದಲ್ಲಿ ಅನುಭವಿಸಿದಂತಹ ಶ್ರೀ ಅನ್ನದಾನಯ್ಯ ಪುರಾಣಿಕರ ಪ್ರಯತ್ನದ ಫಲವಾಗಿ ಹೈದ್ರಾಬಾದಿನಲ್ಲಿ ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತಿನ ಪ್ರಥಮ ಅಧಿವೇಶನವು ೧೯೫೬ನೆಯ ಫೆಬ್ರವರಿ ೭ನೆಯ ತಾರೀಕು ನಡೆಯಿತು, ಈ ಐತಿಹಾಸಿಕ ಅಧಿವೇಶನವು ನಿಜಾಮ ಕಾಲೇಜಿನಲ್ಲಿ ಡಾ. ಮೇಲ್ಕೋಟಿಯವರ ಅಧ್ಯಕ್ಷತೆಯಲ್ಲಿ ಸೇರಿತು. ಕೇಂದ್ರ ಸಚಿವರಾಗಿದ್ದಂತಹ ಕೆ.ಸಿ.ರೆಡ್ಡಿಯವರು ಈ ಅಧಿವೇಶನವನ್ನು ಉದ್ಘಾಟಿಸಿದರು. ಕರ್ನಾಟಕದ ಎಲ್ಲಾ ಭಾಗಗಗಳಿಂದ ವಿದ್ಯಾರ್ಥಿ ಪ್ರತಿನಿಧಿಗಳು ಈ ಮಹತ್ವದ ಅಧಿವೇಶನಕ್ಕೆ ಬಂದಿದ್ದರು. ಅಖಿಲ ಕರ್ನಾಟಕ ವಿದ್ಯಾರ್ಥಿ ಪ್ರತಿನಿಧಿಗಳನ್ನು ಒಂದು ವೇದಿಕೆಯ ಮೇಲೆ ಸೇರಿಸಲು ಸ್ವಾಗತಾಧ್ಯಕ್ಷರಾದ ಅನ್ನದಾನಯ್ಯ ಪುರಾಣಿಕರು ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಕರೆತಂದಿದ್ದರು. ಇವರಿಗೆ ಕಾರ್ಯದರ್ಶಿಗಳಾಗಿದ್ದಂತಹ ದೇವೇಂದ್ರ ಕುಮಾರ ಹಕಾರಿಯವರು ಹೆಚ್ಚಿನ ಸಹಕಾರ ನೀಡಿದರು. ರಾಷ್ಟ್ರಕವಿ ಕುವೆಂಪು ಅವರು ಈ ಮಹತ್ವದ ಅಧಿವೇಶನಕ್ಕೆ ಸಂದೇಶವೊಂದನ್ನು ಕಳುಹಿಸಿದ್ದರು. ಕರ್ನಾಟಕದ ಚರಿತ್ರೆಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳ ಪ್ರತಿನಿಧಿಗಳು ಮೊಟ್ಟಮೊದಲ ಬಾರಿಗೆ ಒಂದೆಡೆಗೆ ಸೇರಿ ಅಖಂಡ ಕರ್ನಾಟಕದ ನಿರ್ಮಾಣದ ಬಗ್ಗೆ ಚರ್ಚಿಸಿದರು. ತರುವಾಯ ಕರ್ನಾಟಕ ವಿದ್ಯಾರ್ಥಿ ಪ್ರತಿನಿಧಿಗಳು ಅಖಂಡ ಕರ್ನಾಟಕವನ್ನು ಕೂಡಲೇ ರಚಿಸಬೇಕೆಂದು ಕೇಂದ್ರ ಸರ್ಕಾರವನ್ನು ಒಗ್ಗಟ್ಟಿನಿಂದ ಒತ್ತಾಯಪಡಿಸಿದರು. ಈ ಅಧಿವೇಶನವು ಯಶಸ್ವಿಯಾಗಲು ಮೈಸೂರು ರಾಜ್ಯದ ಮಂತ್ರಿಗಳ ಪಾತ್ರ ಮುಖ್ಯವಾಗಿತ್ತು. ಮಾನ್ಯರಾದ ಅಣ್ಣಾ ರಾವ್ ಗಣಮುಖಿ, ಡಾ. ಮೇಲ್ಕೋಟಿ, ವೈ. ವಿರೂಪಾಕ್ಷಪ್ಪ, ಪ್ರೊ. ಭೀಮಸೇನರಾವ್, ಮಾನ್ವಿ ನರಸಿಂಗರಾವ್, ಸಿದ್ಧಯ್ಯ ಪುರಾಣಿಕ ಮೊದಲಾದವರು ಈ ಹಂತದಲ್ಲಿ ತುಂಬಾ ನೆರವಾದರು. ಈ ರೀತಿಯ ಚರಿತ್ರಾರ್ಹವಾದ ವಿದ್ಯಾರ್ಥಿ ಅಧಿವೇಶನದಿಂದ ಕರ್ನಾಟಕದ ಎಲ್ಲಾ ಪ್ರದೇಶಗಳ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿತು. ಕರ್ನಾಟಕ ಏಕೀಕರಣದ ಜೊತೆಗೆ ಬಳ್ಳಾರಿಯು ಕರ್ನಾಟಕದಲ್ಲಿ ಉಳಿಯಲು ಅನುವಾಯಿತು.

ಏಕೀಕೃತ ಕರ್ನಾಟಕದಲ್ಲಿ ಬಳ್ಳಾರಿ

ಆಂಧ್ರ ಪ್ರಾಂತ್ಯ ರಚನೆ ಮಾಡಲು ನಿರ್ಧರಿಸಿದ ಕೇಂದ್ರ ಸರ್ಕಾರ, ಬಳ್ಳಾರಿ ಜಿಲ್ಲೆಯ ಬಗೆಗೆ ಖಚಿತವಾದ ನಿರ್ಧಾರ ಮಾಡುವುದು ಅನಿವಾರ್ಯವಾಗಿತ್ತು. ೧೯೨೧ರಲ್ಲಿ ತಾತ್ಕಾಲಿಕವೆಂದು ಎನ್.ಸಿ.ಕೇಳ್ಕರ್‌ರ ಶಿಫಾರಸ್ಸಿನ ಮೇಲೆ ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ವ್ಯಾಪ್ತಿಗೆ ಸೇರಿದ್ದ ಬಳ್ಳಾರಿ ಜಿಲ್ಲೆಯ ಆದವಾನಿ, ಆಲೂರು, ರಾಯದುರ್ಗ ತಾಲ್ಲೂಕುಗಳು ಎಂದೆಂದಿಗೂ ತಮ್ಮದೇ ಆಗಿ ಉಳಿಯುವುದೆಂಬ ಕನಸು ತೆಲುಗರದಾಗಿತ್ತು. ಅದಕ್ಕಾಗಿ ಅವರು ಪ್ರಬಲ ಹೋರಾಟ ನಡೆಸಲೂ ಸಿದ್ದರಾಗಿದ್ದರು. ೧೯೨೧ರಲ್ಲಿ ತಿಲಕರು ಕಾಲವಾದ ಮರುವರ್ಷ, ಭಾಷಾವಾರು ಪ್ರಾಂತೀಯ ಕಾಂಗ್ರೆಸ್ ಸಮಿತಿಗಳನ್ನು ರಚಿಸಲು ತೀರ್ಮಾನಿಸಿದಾಗ ಬಳ್ಳಾರಿ ಯಾವ ಪಿ.ಸಿ.ಸಿ.ಗೆ ಸೇರಬೇಕೆಂಬ ಪ್ರಶ್ನೆ ಉಂಟಾಯಿತು. ಆಂಧ್ರರು ಬಳ್ಳಾರಿ ಜಿಲ್ಲೆ ಆಂಧ್ರ ಪ್ರ.ಕಾ.ಸಮಿತಿಯ ವ್ಯಾಪ್ತಿಯಲ್ಲಿ ಬರಬೇಕೆಂದು ಹಠ ಹಿಡಿದರು. ಆಗ ಎ.ಐ.ಸಿ.ಸಿ. ಅಧ್ಯಕ್ಷರು ಎನ್.ಸಿ.ಕೇಳ್ಕರ್‌ರನ್ನು ಈ ವಿವಾದ ಇತ್ಯರ್ಥ ಮಾಡಲು ಕೋರಿದರು. ಅವರು ಜಿಲ್ಲೆಯ ಭಾಷಾವಾರು ಜನಸಂಖ್ಯೆಯನ್ನು ಪರಿಶೀಲಿಸಿ, ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲೂಕನ್ನು ಒಳಗೊಂಡು ಪಶ್ಚಿಮದ ತಾಲೂಕುಗಳು ಸಿರಗುಪ್ಪ, ಹೊಸಪೇಟೆ, ಹಡಗಲಿ, ಹರಪನಹಳ್ಳಿ, ಕೂಡ್ಲಿಗಿ ಕೆ.ಪಿ.ಸಿ.ಸಿ. ವ್ಯಾಪ್ತಿಯಲ್ಲಿರಬೇಕೆಂದು, ಪೂರ್ವದ ಮೂರು ತಾಲೂಕುಗಳು ಆದವಾನಿ, ಆಲೂರು, ರಾಯದುರ್ಗ ಎ.ಪಿ.ಸಿ.ಸಿ. ವ್ಯಾಪ್ತಿಯಲ್ಲಿರಬೇಕೆಂದು ತೀರ್ಪು ಕೊಟ್ಟರು. ಜೆ.ವಿ.ಪಿ. ಸಮಿತಿಯು ಬಳ್ಳಾರಿ ಜಿಲ್ಲೆಯು ಕರ್ನಾಟಕಕ್ಕೆ ಸೇರುವುದರ ಬಗೆಗೆ ಒಲವು ತೋರಿತ್ತು. ೧೯೫೨ರ ಚುನಾವಣೆಯಲ್ಲಿ ಕನ್ನಡ ಪರ ಅಭ್ಯರ್ಥಿಗಳು ಸೋತು ತೆಲಗು ಪರ ಅಭ್ಯರ್ಥಿ ಬಳ್ಳಾರಿ ವಿಧಾನಸಭಾ ಕ್ಷೇತ್ರದಿಂದ ಆರಿಸಿ ಬಂದಿದ್ದರು. ಜನಗಣತಿಯ ಕಾಲದಲ್ಲಿ ನಡೆಯಿತೆನ್ನಲಾದ ಅಪ್ರಾಮಾಣಿಕ ಚಟುವಟಿಕೆಗಳು ತೆಲುಗರ ಪರವಾಗಿದ್ದವು. ಆದರೆ ಬಳ್ಳಾರಿ ಜಿಲ್ಲೆಯು ತೆಲುಗರ ಮತ್ತು ಕನ್ನಡಿಗರ ಪಣದ ವಸ್ತುವಾಗಿತ್ತು. ಆಂಧ್ರ ಪ್ರಾಂತ್ಯ ರಚನೆಯ ಬಗ್ಗೆ ವರದಿ ಸಲ್ಲಿಸಲು ಕೇಂದ್ರ ಸರ್ಕಾರ ರಾಜಾಸ್ಥಾನದ ಶ್ರೇಷ್ಠ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ವಾಂಛೂ ಅವರನ್ನು ನೇಮಿಸಿತು. ೫.೧.೧೯೫೩ ರಂದು ನೇಮಕಗೊಂಡ ಆಯೋಗವು ೩೧.೧.೧೯೫೩ ರೊಳಗೆ, ಅಂದರೆ ಕೇವಲ ೨೯ ದಿನಗಳಲ್ಲಿ ವರದಿ ನೀಡಬೇಕಾಗಿತ್ತು. ಕಾರ್ಯ ಮಾತ್ರ ಅಧಿಕವಾಗಿತ್ತು.

೧೯೪೯ರಲ್ಲಿ ಮದ್ರಾಸ್ ಸರಕಾರವು ನೇಮಿಸಿದ್ದ ಆಂಧ್ರ ವಿಭಜನಾ ಸಮಿತಿಯ ಸದಸ್ಯರಲ್ಲಿ ಕನ್ನಡಿಗರು ಯಾರೂ ಇರಲಿಲ್ಲ. ಆ ಸಮಿತಿಯು ನೀಡಿದ್ದ ವರದಿಯ ಪ್ರಕಾರ ಕೇಳ್ಕರ್‌ರ ವರದಿಯನ್ವಯದ ಆಲೂರು, ಆದವಾನಿ ಮತ್ತು ರಾಯದುರ್ಗ ತಾಲ್ಲೂಕುಗಳು, ಇಡೀ ಚಿತ್ತೂರು ಮತ್ತು ಅನಂತಪುರ ಜಿಲ್ಲೆಗಳನ್ನು ಸೇರಿಸಿ ಆಂಧ್ರ ಪ್ರಾಂತದ ರಚನೆಯಾಗಬೇಕೆಂದು ಶಿಫಾರಸ್ಸು ಮಾಡಿತ್ತು. ಬಳ್ಳಾರಿ ತಾಲ್ಲೂಕು ಆಂಧ್ರ ಪ್ರಾಂತದ ರಚನೆಯಾಗಬೇಕೆಂದು ಶಿಫಾರಸ್ಸು ಮಾಡಿತ್ತು. ಬಳ್ಳಾರಿ ತಾಲ್ಲೂಕು ಆಂಧ್ರ ಪ್ರಾಂತಕ್ಕೆ ಸೇರಬೇಕೆಂದು ಅದು ಪ್ರಸ್ತಾಪಿಸಿರಲಿಲ್ಲ. ವಾಂಛೂ ಅವರನ್ನು ಅನೇಕ ಸಂಘ, ಸಂಸ್ಥೆಗಳವರು, ರಾಜಕೀಯ ಪಕ್ಷಗಳವರು ಭೇಟಿ ಮಾಡಿ ಮನವಿಗಳನ್ನು ಸಲ್ಲಿಸಿದರು. ವಾಂಛೂ ಬಳ್ಳಾರಿ ಜಿಲ್ಲೆಯು ಆಂಧ್ರದೊಡನೆ ಸೇರಲು ಹಲವು ತೊಂದರೆಗಳಿರುವುದನ್ನು ಗಮನಿಸಿದರು. ಆಂಧ್ರ ಪರ ವಾದಿಸಿದವರು ಬಳ್ಳಾರಿ ಜಿಲ್ಲೆಯು ಇಡಿಯಾಗಿ ಆಂಧ್ರಕ್ಕೆ ಸೇರಬೇಕೆಂದು ಒತ್ತಾಯಿಸಿದರು. ವಿಜಯನಗರ ಅರಸರ ಕಾಲದಿಂದಲೂ ಅದು ತೆಲುಗರಿಗೆ ಸೇರಿದ್ದು ಎಂಬುದು ಅವರ ನಂಬಿಕೆಯಾಗಿತ್ತು. ಆಲೂರು, ಆದವಾನಿ ಮತ್ತು ರಾಯದುರ್ಗಗಳಲ್ಲದೆ ಬಳ್ಳಾರಿ ನಗರ ಸೇರಿದಂತೆ ಬಳ್ಳಾರಿ ತಾಲ್ಲೂಕು ಸಹ ತೆಲುಗು ಭಾಷಿಕರೇ ಬಹುಸಂಖ್ಯಾತವಾಗಿರುವ ಪ್ರದೇಶವಾದ್ದರಿಂದ ಬಳ್ಳಾರಿ ಜಿಲ್ಲೆಯು ಇಡಿಯಾಗಿ ಆಂಧ್ರಕ್ಕೆ ಸೇರಬೇಕೆಂಬ ಅವರ ವಾದವನ್ನು ಕನ್ನಡಿಗರು ಎಂದೂ ಒಪ್ಪಲು ಸಾಧ್ಯವಿರಲಿಲ್ಲ. ಇತಿಹಾಸ ಕಾಲದಿಂದಲೂ ಈವರೆಗೆ ನಿರಂತರವಾಗಿ ಬಳ್ಳಾರಿ ಜಿಲ್ಲೆಯು ಕನ್ನಡಿಗರದೇ ಎಂದು ಕನ್ನಡಿಗರು ಸಾಬೀತು ಮಾಡಲು ಪ್ರಯತ್ನಿಸಿದರು.

ವಾಂಛೂ ಅನೇಕರ ವಾದ, ಪ್ರತಿವಾದಗಳನ್ನು ಕೇಳಿ ಮನವಿಗಳನ್ನು ಅಭ್ಯಸಿಸಿ, ಬಳ್ಳಾರಿ ಜಿಲ್ಲೆಯಲ್ಲಿನ ವಾಸ್ತವ ಪರಿಸ್ಥಿತಿಯನ್ನು ಖುದ್ದು ನೋಡಿ ಸಿದ್ಧಪಡಿಸಿದ ವರದಿಯನ್ನು ೭.೨.೧೯೫೩ರಂದು ಸರ್ಕಾರಕ್ಕೆ ಸಲ್ಲಿಸಿದರು. ವಾಂಛೂ ಕರ್ನಾಟಕ ಏಕೀಕರಣ ಸಮಿತಿಯ ಸದಸ್ಯರ ನಿಯೋಗಕ್ಕೆ ಸಂದರ್ಶನದ ಅವಕಾಶ ನಿರಾಕಸಿದರು. ಗದಗಿನಿಂದ ಬಂದ ಅವಕಾಶ ಬೇಡಿಕೆ ಪತ್ರವನ್ನು ಗಮನಿಸಿದ ವಾಂಛೂ ಗದಗ ಇರುವುದು ಬೊಂಬಾಯಿ ಪ್ರಾಂತ್ಯದಲ್ಲಿ ಅಲ್ಲಿನ ಜನರಿಗೂ ಆಂಧ್ರ ಸಮಸ್ಯೆಗೂ ಸಂಬಂಧವಿಲ್ಲ ಎಂಬ ಕಾರಣ ನೀಡಿದರು. ಆದರೆ ಕೆ.ಪಿ.ಸಿ.ಸಿ. ಅಧ್ಯಕ್ಷ ನಿಜಲಿಂಗಪ್ಪನವರ ನೇತೃತ್ವದ ನಿಯೋಗವನ್ನು ಭೇಟಿ ಮಾಡಿದರೆಂದು ತಿಳಿದಿದೆ (ಜೀವನ, ಮಾರ್ಚ್ ೧೯೫೩). ಅವರ ವರದಿಯ ಪ್ರಕಾರ ಹೈದರಾಬಾದ್ ಮತ್ತು ಮದ್ರಾಸ್ ರಾಜ್ಯಗಳಲ್ಲಿ ಮಾತ್ರ ಸೇರಿರುವ ತೆಲುಗು ಅಧಿಕ ಜನರ ಮಾತೃಭಾಷೆಯಾಗಿರುವ ೧೧ ಜಿಲ್ಲೆಗಳನ್ನು ಮಾತ್ರ ಕೂಡಿಸಿ ಆಂಧ್ರ ಪ್ರಾಂತ ರಚನೆ ಮಾಡಬಹುದೆಂದೂ, ಬಳ್ಳಾರಿ ಜಿಲ್ಲೆಯ ಮೂರು ತಾಲ್ಲೂಕುಗಳನ್ನು ಆಂಧ್ರಕ್ಕೆ ಸೇರಿಸಬಹುದಾದರೂ ಅಲ್ಲಿಯೂ ಕನ್ನಡಿಗರ ಸಂಖ್ಯೆ ತೀರಾ ಗೌಣವಾಗಿಲ್ಲ ಎಂದೂ ತಿಳಿಸಿದರು. ಹೊಸದಾದಿ ಕಾಣಿಸಿಕೊಂಡಿದ್ದ ಬಳ್ಳಾರಿ ತಾಲ್ಲೂಕಿನ ಸಮಸ್ಯೆಯ ಬಗೆಗೆ ಅವರು ಯಾವುದೇ ಖಚಿತ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಹೈದರಾಬಾದ್ ಮತ್ತು ಮದ್ರಾಸ್ ಸರ್ಕಾರಗಳು ಸಂಯುಕ್ತವಾಗಿ ಕೈಗೊಂಡಿದ್ದ ತುಂಗಭದ್ರಾ ಅಣೆಕಟ್ಟಿನ ಮುಗಿಯಬೇಕಾದ ಕೆಲಸ, ಅದರ ಬಳಕೆಯ ಪಾಲು ಇತ್ಯಾದಿಗಳ ಬಗೆಗೂ ವಾಂಛೂ ಅವರು ಸ್ಪಷ್ಟವಾದ ತೀರ್ಪು ಕೊಡಲಾಗಲಿಲ್ಲ. ಬಳ್ಳಾರಿ ಜಿಲ್ಲೆಯನ್ನು ಇಡಿಯಾಗಿ ಕರ್ನಾಟಕ ಪ್ರಾಂತ ನಿರ್ಮಾಣವಾಗುವವರೆಗೆ ಆಂಧ್ರದೊಡನೆಯೇ ಸೇರಿಸಬಹುದೆಂದು ತೀರ್ಮಾನಿಸಿದರೆ ಕನ್ನಡಿಗರು ಪ್ರಬಲವಾಗಿ ವಿರೋಧಿಸುವವರಿದ್ದರು. ಇನ್ನೂ ಕರ್ನಾಟಕ ಪ್ರಾಂತ್ಯ ನಿರ್ಮಾಣದ ನಿರ್ಧಾರವೇ ಅಗಿಲ್ಲದಿದ್ದುದರಿಂದ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ, ಮೂರು ತಾಲ್ಲೂಕುಗಳನ್ನು ಆಂಧ್ರಕ್ಕೆ ನೀಡಿದರೆ ಉಳಿದ ತಾಲ್ಲೂಕುಗಳ ಭವಿಷ್ಯವು ಅತಂತ್ರವಾಗುತ್ತಿತ್ತು. ಅವುಗಳಲ್ಲಿ ಆರು ತಾಲ್ಲೂಕುಗಳು ಸ್ಪಷ್ಟವಾಗಿ ಕನ್ನಡದವೇ ಆಗಿದ್ದುದರಿಂದ ಮೈಸೂರಿನ ಜೊತೆ ಸೇರಿಸುವುದು ಕಷ್ಟವಾಗಿರಲಿಲ್ಲ. ಆದರೆ ಬಳ್ಳಾರಿ ನಗರ ಮತ್ತು ತಾಲ್ಲೂಕುಗಳು ಹೊಸ ಸಮಸ್ಯೆಯನ್ನು ಸೃಷ್ಟಿಸಿದ್ದವು. ವಾಂಛೂ ಅವರು ಹೊಸ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಲಿಲ್ಲ.

ವಾಂಛೂ ಅವರ ವರದಿಯನ್ನು ಆಧರಿಸಿ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ೨೫.೩.೧೯೫೩ರಂದು ಪ್ರಕಟಿಸಿದ ನಿರ್ಧಾರ ಕೆಳಕಂಡಿತ್ತು.

೧. ಬಳ್ಳಾರಿ ಜಿಲ್ಲೆಯನ್ನು ಆಂಧ್ರ ಅಥವಾ ಕರ್ನಾಟಕಕ್ಕೆ ಸೇರಿಸುವ ಸಂದರ್ಭದಲ್ಲಿ ಅದನ್ನು ಒಂದೇ ಘಟಕವೆಂದು ಪರಿಗಣಿಸಲು ಸಾಧ್ಯವಿಲ್ಲ.

೨. ಬಳ್ಳಾರಿ ಜಿಲ್ಲೆಯಲ್ಲಿ ತೆಲುಗರು ಅಧಿಕ ಸಂಖ್ಯಾತರಾಗಿರುವ ಆಲೂರು, ಆದವಾನಿ ಮತ್ತು ರಾಯದುರ್ಗ ತಾಲ್ಲೂಕುಗಳನ್ನು ಆಂಧ್ರ ಪ್ರಾಂತ್ಯದಲ್ಲಿ ಸೇರಿಸಬಹುದು.

೩. ಹರಪನಹಳ್ಳಿ, ಹಡಗಲಿ, ಹೊಸಪೇಟೆ, ಕೂಡ್ಲಿಗಿ, ಸೊಂಡೂರು ಮತ್ತು ಸಿರಗುಪ್ಪ ಈ ಆರು ತಾಲ್ಲೂಕುಗಳಲ್ಲಿ ಕನ್ನಡಿಗರು ಅಧಿಕ ಸಂಖ್ಯಾತರಾಗಿರುವುದರಿಂದ ಅವುಗಳನ್ನು ಮೈಸೂರು ರಾಜ್ಯಕ್ಕೆ ಸೇರಿಸಬಹುದು.

ಬಳ್ಳಾರಿ ತಾಲ್ಲೂಕು ಮಿಶ್ರಭಾಷೆಯ ಪ್ರದೇಶವೆಂದು ವಾದಗ್ರಸ್ತವಾಗಿದ್ದರಿಂದ ಆ ಬಗ್ಗೆ ಯಾವ ತೀರ್ಮಾನವನ್ನು ಮಾಡಲಿಲ್ಲ.

ಮಿಶ್ರಾ ಆಯೋಗ

ಬಳ್ಳಾರಿ ತಾಲ್ಲೂಕಿನ ಸಮಸ್ಯೆಯು ಭಾಷಾತ್ಮಕ ಮಾತ್ರವಾಗಿರದೆ, ತುಂಗಭದ್ರಾ ಅಣೆಕಟ್ಟಿಗೆ ಸಂಬಂಧಿಸಿದಂತೆಯೂ ಇತ್ತು. ಇದನ್ನು ಬಗೆಹರಿಸಲು ಭಾರತದ ರಾಷ್ಟ್ರಪತಿಗಳು ಹೈದರಾಬಾದ್‌ನ ಮುಖ್ಯ ನ್ಯಾಯಾಧೀಶ ಎಲ್. ಎಸ್. ಮಿಶ್ರಾ ಅವರನ್ನು ನೇಮಿಸಿದ ಆಜ್ಞೆಯು ೨೧.೪.೧೯೫೩ರಂದು ಪ್ರಕಟವಾಯಿತು. ೨೩.೪.೧೯೫೩ರಿಂದ ಕಾರ್ಯಾರಂಭ ಮಾಡಿ ೧೫.೫.೧೯೫೩ರ ಒಳಗೆ ವರದಿಯನ್ನು ಸಲ್ಲಿಸಬೇಕೆಂದು ಎಲ್.ಎಸ್.ಮಿಶ್ರಾ ಅವರನ್ನು ಕೋರಲಾಯಿತು.

೨೫.೩.೧೯೫೩ರಂದು ಆಂಧ್ರ ಪ್ರಾಂತ್ಯ ರಚನೆಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಚರ್ಚೆ ಮತ್ತು ಮಿಶ್ರಾ ಸಮಿತಿಯ ನೇಮಕವಾದ ನಂತರ ಕನ್ನಡಿಗರ ಅತೃಪ್ತಿ ಅಸಂತೋಷಗಳು ಅಧಿಕವಾದವು. ಕೆ.ಪಿ.ಸಿ.ಸಿ.ಯ ನಾಯಕರಿಗೂ ಅದರ ಕಾವೂ ತಟ್ಟಿತ್ತು. ಹೈದರಾಬಾದಿನ (ನಾನಲ ನಗರ)ದಲ್ಲಿ ನಡೆದ ವಾರ್ಷಿಕ ಕಾಂಗ್ರೆಸ್ ಅಧಿವೇಶನದ ಫಲಶ್ರುತಿಯು ಕೆ.ಪಿ.ಸಿ.ಸಿ. ನಾಯಕರು ಮತ್ತು ಇತರ ಪಕ್ಷೇತರ ಕರ್ನಾಟಕ ಏಕೀಕರಣವಾದಿಗಳಿಗೆ ನೋವುಂಟು ಮಾಡಿದ್ದವು. ಇದೇ ನೋವಿನ ವಾತಾವರಣದಲ್ಲಿ ೧೯.೦೪.೧೯೫೩ರಂದು ಹುಬ್ಬಳ್ಳಿಯಲ್ಲಿ ಕೆ.ಪಿ.ಸಿ.ಸಿ.ಯ ವಿಶೇಷ ಸಭೆಯನ್ನು ನಡೆಸಲು ಏರ್ಪಾಡಾಗಿತ್ತು. ಕಾಂಗ್ರೆಸ್ಸೇತರ ರಾಜಕೀಯ ಪಕ್ಷಗಳು ೧೯೫೧ರ ಮೇ ತಿಂಗಳಲ್ಲಿನಲ್ಲೇ ಸ್ಥಾಪಿಸಿ, ಆ ನಂತರ ಗಣರಾಜ್ಯದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆಗೂ ಇಳಿದಿದ್ದ ಪಕ್ಷೇತರ ಕರ್ನಾಟಕ ಏಕೀಕರಣ ಪರಿಷತ್ತು ಪ್ರಬಲವಾಗುತ್ತಿತ್ತು. ಚುನಾವಣೆಯಲ್ಲಿ ಸೋತರೂ ಕರ್ನಾಟಕ ಏಕೀಕರಣದ ಬೇಡಿಕೆಗೆ ಪ್ರಬಲವಾದ ಚಾಲನೆ ಒದಗಿಸಿತು. ಆಂಧ್ರ ಪ್ರಾಂತ್ಯ ರಚನೆಯ ಸಂಬಂಧ ವಾಂಛೂ ಸಮಿತಿಯ ನೇಮಕವಾಗಿ, ಸದ್ಯಕ್ಕೆ ಕರ್ನಾಟಕ ಪ್ರಾಂತ ರಚನೆ ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗುತ್ತಿದ್ದಾಗಲೇ ಕಾಂಗ್ರೆಸ್‌ನ ಧೋರಣೆಗಳನ್ನು ಸಂಪೂರ್ಣವಾಗಿ ವಿರೋಧಿಸಿ ತನ್ನದೇ ಆದ ರೀತಿಯಲ್ಲಿ ಅದು ಪ್ರತಿಭಟನೆಯನ್ನು ಪ್ರಕಟಿಸಲಾರಂಭಿಸಿತು. ಸಮಾಜವಾದಿ ಮತ್ತು ಕಮ್ಯನಿಸ್ಟ್ ಪಕ್ಷಗಳು ಏಕೀಕರಣ ಬೇಡಿಕೆಯನ್ನು ಪ್ರಧಾನವಾಗಿಸಿದವು. ಎಸ್, ಗೋಪಾಲ ಗೌಡರು, ಬಿ.ವಿ. ಕಕ್ಕಿಲಾಯ, ಅಳವಂಡಿ ಶಿವಮೂರ್ತಿಸ್ವಾಮಿ ಮುಂತಾದ ರಾಜಕೀಯ ಪಟುಗಳು ಶತಾಯಗತಾಯ ಕರ್ನಾಟಕ ಏಕೀಕರಣವನ್ನು ಸಾಧಿಸಲೇಬೇಕೆಂದು ಪಣ ತೊಟ್ಟಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಜನತೆಯನ್ನು ಉದ್ದೇಶಿತ ಕಾರ್ಯಗಳಿಗೆ ಅಣಿಗೊಳಿಸಿದರು. ಅವರ ನರವಿಗೆ ಅನೇಕ ಜನನಾಯಕರು ಮುಂದೆ ಬಂದರು. ಜಯದೇವಿತಾಯಿ ಲಿಗಾಡೆ, ಶಾಂತಿನಾಥ ಇಂಗಳೆ, ಇಂಚಗೇರಿಯ ಮಹಾದೇವಪ್ಪ ಮುರುಗೋಡು, ಚನ್ನಪ್ಪವಾಲಿ, ತಲ್ಲೂರ ರಾಯನಗೌಡ, ಕೋಟ ರಾಮಕೃಷ್ಣ ಕಾರಂತ, ಹೊಸಮನಿ ಸಿದ್ದಪ್ಪ, ಕೋ.ಚೆನ್ನಬಸಪ್ಪ ಮುಂತಾದ ಪ್ರಮುಖರು ಪಕ್ಷೇತರ ಕರ್ನಾಟಕ ಏಕೀಕರಣ ಹೋರಾಟದ ಸಂಘಟನೆಯನ್ನು ಬೆಂಬಲಿಸಿದರು.

[1] ‘ಕನ್ನಡ’ ಎಂಬುದು ದೇಶ ಹಾಗೂ ಭಾಷಾವಾಚಕವಾಗಿ ‘ಕವಿರಾಜಮಾರ್ಗ’ದಲ್ಲಿಯೇ, ಪ್ರಯೋಗವಾಗಿರುವುದನ್ನು ಗಮನಿಸಬಹುದು. ದೇಶದ ಹೆಸರನ್ನು ಸೂಚಿಸುವ ಬಹುಪರಿಚಿತವಾದ ಇಲ್ಲಿಯ ಉಲ್ಲೇಖ ಮಹತ್ವವಾಗಿದೆ.

[2] ಪದ್ಯ – ೧ – ೩೬ರ ಸಾರಾಂಶವೆಂದರೆ: “ಕಾವೇರಿ ನದಿಯಿಂದ ಆ ಗೋದಾವರಿ ನದಿಯವರೆಗೆ ಇರುವ ಆ ನಾಡು ಪ್ರಸಿದ್ಧವಾದ ಜನಪದವೆನಿಸಿದೆ. ಭೂಮಂಡಲದೊಳಗೆ ಸೇರಿರುವ ನಿರ್ಮಲ ರಾಜ್ಯ ವಿಶಿಷ್ಟವೆನಿಸಿದೆ. ಆ ‘ಕನ್ನಡ’ದ ತಿರುಳು ಪ್ರದೇಶಗಳನ್ನು ಪದ ೧ – ೩೭ರಲ್ಲಿ ವಿವರಿಸಲಾಗಿದೆ.

[3] ಕಿಸುವೊಳಲಾ (ಬಿಜಾಪುರ ಜಿಲ್ಲೆಯ ಪಟ್ಟದಕಲ್ಲು), ಕೊಪಣನಗರ(ಕೊಪ್ಪಳನಗರ), ಪುಲಿಗೆರೆಯಾ (ಧಾರವಾಡ ಜಿಲ್ಲೆಯ ಲಕ್ಷ್ಮೇಶ್ವರ), ಒಂಕುಂದ (ಬೆಳಗಾಂ ಜಿಲ್ಲೆಯ ಈಗಿನ ಒಕ್ಕುಂದ) ಇವುಗಳ ನಡುವಿನ ನಾಡೇ ಆ ಕನ್ನಡದ ತಿರುಳಾದ ಪ್ರದೇಶ.

ಮೇಲಿನ ಎರಡು ಪದ್ಯಗಳಲ್ಲಿ ಕನ್ನಡ ಶಬ್ದ ದೇಶವಾಚಕವಾಗಿಯೇ ಇರುವುದು ಗಮನಿಸಬಹುದಾಗಿದೆ.

[4] ಸ್ವಾತಂತ್ರ ಬಂದ ನಂತರ ಭಾಷಾವಾರು ಆಧಾರದ ಮೇಲೆ ಪ್ರತ್ಯೇಕವಾಗಿ ನಿರ್ಮಾಣಗೊಂಡ ಕನ್ನಡ ಪ್ರದೇಶವನ್ನು ‘ಮೈಸೂರು ರಾಜ್ಯ’ ಎಂದು ಕರೆಯಲಾಗುತ್ತಿತ್ತು. ೧೯೭೧ರ ನವೆಂಬರ್‌ನಲ್ಲಿ ದಿವಂಗತ ಡಿ.ದೇವರಾಜು ಅರಸು ಅವರು ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ‘ಕರ್ನಾಟಕ’ ಎಂದು ನಾಮಕರಣ ಮಾಡಿದರು.

[5] ಕರ್ನಾಟಕ ಏಕೀಕರಣವನ್ನು ಮೈಸೂರು ಸಂಸ್ಥಾನದ ಜನರು ವಿರೋಧಿಸುವುದಕ್ಕೆ ಪ್ರಮುಖ ಕಾರಣ ಸಂಪನ್ಮೂಲ ಹಾಗೂ ರಾಜಕೀಯ. ಮೈಸೂರು ಸಂಸ್ಥಾನವು ಭೌಗೋಳಿಕವಾಗಿ ಶ್ರೀಮಂತ ಪ್ರದೇಶ. ಕೃಷಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ, ತಂತ್ರಜ್ಞಾನ ಹಾಗೂ ರಾಜಕೀಯವಾಗಿ ಉಜ್ವಲವಾಗಿ ಮುನ್ನಡೆಯುತ್ತಿತ್ತು. ಆದರೆ ಉತ್ತರ ಕರ್ನಾಟಕದ ಶೇ.೯೦ ಭಾಗ ಭೂಮಿ ಬಂಜರು ಪ್ರದೇಶವಾಗಿತ್ತು. ಬಡತನ ಹೇಳತೀರದಾಗಿತ್ತು. ಇಂಥ ಸಂದರ್ಭದಲ್ಲಿ ಮೈಸೂರು ಅಖಂಡ ಕರ್ನಾಟಕದೊಂದಿಗೆ ವಿಲೀನಗೊಂಡರೆ ಮೈಸೂರು ಸಂಸ್ಥಾನದ ಸಂಪತ್ತು ಕೈ ಜಾರುತ್ತದೆ ಎನ್ನುವುದು ಒಂದಾದರೆ, ಜಾತಿ ಆಧಾರಿತ ರಾಜಕೀಯ ಎರಡನೆಯದು. ಮೈಸೂರು ಸಂಸ್ಥಾನದಲ್ಲಿ ಪ್ರಬಲ ಕೋಮಿನವರು ಒಕ್ಕಲಿಗರು. ಆದರೆ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಿಂಗಾಯತರು ಇಲ್ಲ. ಪ್ರಾಬಲ್ಯ ಕಳೆದುಕೊಳ್ಳಬಹುದೆಂಬುದು ಎರಡನೆಯದು. ಇದಕ್ಕಾಗಿ ಕೆಲವು ಮೈಸೂರು ಪ್ರಾಂತ್ಯದ ರಾಜಕಾರಣಿಗಳು ಅಖಂಡ ಕರ್ನಾಟಕ ಏಕೀಕರಣವನ್ನು ವಿರೋಧಿಸಿದರೆಂದು ಹೇಳಬಹುದು.