ಮಿಶ್ರಾ ಆಯೋಗದ ಮನವಿಗಳು

ಎಲ್.ಎಸ್.ಮಿಶ್ರಾ ತಕ್ಷಣವೇ ಕಾರ್ಯಾರಂಭ ಮಾಡಿದರು. ೨೭.೦೪.೫೩ರಂದು ಬಳ್ಳಾರಿಯಲ್ಲಿ ಎಲ್.ಎಸ್.ಮಿಶ್ರಾ ಅವರು ಕಛೇರಿಯನ್ನು ತೆರೆದು ವಿಚಾರಣೆಯನ್ನು ಆರಂಭಿಸಿದರು. ಬಳ್ಳಾರಿ ತಾಲ್ಲೂಕಿನ ಸಮಸ್ಯೆಯ ಬಗೆಗೆ ಮನವಿಗಳನ್ನು ಸ್ವೀಕರಿಸಲಾಯಿತು. ಅಂಕಿ ಅಂಶ ಸಂಗ್ರಹಣಾ ಕಾರ್ಯಕ್ಕೆ ಐ.ಎ.ಎಸ್. ಅಧಿಕಾರಿಯೊಬ್ಬರನ್ನು ನೇಮಿಸಲಾಯಿತು. ೧.೫.೧೯೫೩ರಿಂದ ೮.೫.೧೯೫೩ರವರೆಗೆ ಬಳ್ಳಾರಿಯಲ್ಲೇ ವಿಚಾರಣೆ ನಡೆಯಿತು. ಮುಂದೆ ಪ್ರಸ್ತಾಪಿಸುವ ಪಂಚಮುಖಿ ಅವರ ದಾಖಲೆಯ ಪ್ರಕಾರ ೯.೫.೫೩ರಂದೂ ಮಿಶ್ರಾ ಮನವಿಗಳನ್ನು ಸ್ವೀಕರಿಸಿ ಸಂದರ್ಶನಕ್ಕೆ ಅವಕಾಶ ನೀಡಿದರು. ನಂತರದ ಎರಡು ದಿನಗಳು ಮೈಸೂರಿನಲ್ಲಿ ವಿಚಾರಣೆ ನಡೆಸಿದ ಮಿಶ್ರಾ ಹೈದ್ರಾಬಾದ್‌ನಲ್ಲಿ ಬಳ್ಳಾರಿ ಜಿಲ್ಲೆಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ಪರಿಶೀಲಿಸಿದರು. ಮಿಶ್ರಾ ಅವರಿಗೆ ವ್ಯಕ್ತಿಗಳು, ಸಂಘ ಸಂಸ್ಥೆಗಳಿಂದ ಬಂದ ಮನವಿಗಳಲ್ಲಿ ಕರ್ನಾಟಕದ ಪರ ೨೨೨ ಮತ್ತು ಆಂಧ್ರದ ಪರ ೧೩೨ ಇದ್ದವು. ಕೆ.ಪಿ.ಸಿ.ಸಿ.ಯ ಉಪಸಮಿತಿಯ ಪರವಾಗಿ ಎಸ್.ನಿಜಲಿಂಗಪ್ಪ ಮನವಿ ಸಲ್ಲಿಸಿದರು. ಮೈಸೂರು ಸರ್ಕಾರವು ತನ್ನ ವಿಶೇಷಾಧಿಕಾರಿ ಶೇಷಗಿರಿರಾವ್ ಅವರ ಮೂಲಕ ಮನವಿ ಸಲ್ಲಿಸಿತು. ಮದ್ರಾಸ್ ಸರ್ಕಾರ ಇಬ್ಬರು ಮಂತ್ರಿಗಳನ್ನು ಕಳುಹಿಸಿತು. ಬಳ್ಳಾರಿ ಜಿಲ್ಲಾ ಕರ್ನಾಟಕ ಕ್ರಿಯಾ ಸಮಿತಿಯ ಪದಾಧಿಕಾರಿಗಳು, ಬಳ್ಳಾರಿ ಶಹರ ಮತ್ತು ಗ್ರಾಮಾಂತರ ಪ್ರದೇಶದಿಂದಲೂ ಅನೇಕ ಸಂಘ ಸಂಸ್ಥೆಗಳು ಮನವಿಗಳನ್ನು ಸಲ್ಲಿಸಿದವು. ಮಿಶ್ರಾ ಅವರು ಮನವಿಗಳನ್ನು ಸ್ವೀಕರಿಸಿದ್ದು ಮಾತ್ರವಲ್ಲದೆ ಸಾವಿರಕ್ಕೂ ಹೆಚ್ಚು ಜನರನ್ನು ಸಂದರ್ಶಿಸಿ, ಅವರ ಅಭಿಪ್ರಾಯಗಳನ್ನು ದಾಖಲಿಸಿದರು. ಬಳ್ಳಾರಿ ನಗರ ಮತ್ತು ಅದರ ನೆರೆಯ ಹಳ್ಳಿಗಳಲ್ಲಿ ಖುದ್ದಾಗಿ ಸಂಚರಿಸಿ ಅಲ್ಲಿನ ಪರಿಸ್ಥಿತಿಯನ್ನು ಅಭ್ಯಸಿಸಿದರು. ಅವರ ಪ್ರಕಾರ ಎಲ್ಲ ಹಳ್ಳಿಗಳಲ್ಲೂ ಎರಡು ಪಕ್ಷಗಳ ಜನರಿದ್ದು, ಪರಸ್ಪರ ಘರ್ಷಣೆಗಳು ನಡೆಯುತ್ತಲೇ ಇದ್ದವು. ಬಳ್ಳಾರಿ ನಗರದಲ್ಲಿ ಕನ್ನಡ, ತೆಲುಗು ಮತ್ತು ಉರ್ದು ಮನೆ ಮಾತಾಗಿ ಹೊಂದಿದ ಮಿಶ್ರ ಜನಸಂಖ್ಯೆಯಿದ್ದು, ಬಹುತೇಕ ಜನರಿಗೆ ಎಲ್ಲಾ ಮೂರು ಭಾಷೆಗಳು ತಿಳಿದಿದ್ದವು. ಮನವಿ ಸಲ್ಲಿಸಿದವರಲ್ಲಿ ಧಾರವಾಡದ ಕನ್ನಡ ಸಂಶೋಧನ ಸಂಸ್ಥೆಯ ನಿವೃತ್ತ ನಿರ್ದೇಶಕ ಆರ್. ಎಸ್. ಪಂಚಮುಖಿಯವರೂ ಒಬ್ಬರಾಗಿದ್ದರು. ಅವರು ದಾಖಲಿಸಿರುವಂತೆ ೫.೫.೧೯೫೩ರಂದು ಅವರಿಗೆ ಬಳ್ಳಾರಿ ಕರ್ನಾಟಕಕ್ಕೆ ಸೇರಬೇಕಾದ ಔಚಿತ್ಯದ ಬಗೆಗೆ ತಿಳುವಳಿಕೆ ನೀಡಬೇಕೆಂದು ತಂತಿ ಸಂದೇಶ ಬಂದಿತು. ೯.೫.೧೯೫೩ರಂದು ಪಂಚಮುಖಿಯವರು ಮಿಶ್ರಾ ಅವರನ್ನು ಕಾಣಲು ಹೋದಾಗ, ವಿಚಾರಣೆ ನಡೆಸುತ್ತಿದ್ದ ಕಟ್ಟಡದ ಹೊರಗೆ ಸಾವಿರಾರು ಜನರ ಗುಂಪು ಸೇರಿತ್ತು. ಆ ಗುಂಪಿನಲ್ಲಿ ಕರ್ನಾಟಕ ಆಂಧ್ರ ಪರವಾದಿಗಳ ಎರಡೂ ಜನರಿದ್ದು ಪರ ಮತ್ತು ವಿರೋಧಿ ಘೋಷಣೆಗಳಿಂದ ವಾತಾವರಣವು ಅತ್ಯಂತ ಗಂಭೀರವಾಗಿತ್ತು. ಸಾವಿರಾರು ಜನರು ಮನವಿ ನೀಡಲು ನಿಂತಿದ್ದರು. ವಿಚಾರಣೆಯ ಸಂದರ್ಶನದಲ್ಲಿ ಪಂಚಮುಖಿಯವರ ಸಂದರ್ಶನಕ್ಕೆ ಅವಕಾಶ ನೀಡದೆ ಮನವಿಯನ್ನು ಮಾತ್ರ ಸ್ವೀಕರಿಸಲು ಒಪ್ಪಿದರು. ಆದರೆ ಅನೇಕ ನಾಯಕರ ಒತ್ತಾಯದ ಮೇರೆಗೆ ಕೇವಲ ಮೂರು ನಿಮಿಷಗಳ ಕಾಲಾವಕಾಶ ನೀಡಿ ತಾವು ಈಗಾಗಲೇ ಆಂಧ್ರದ ಪ್ರತಿನಿಧಿಗಳಿಂದ ಮತ್ತು ಅವರು ಒದಗಿಸಿದ ಕೆಲವು ಗ್ರಂಥಗಳಿಂದ ಅಲ್ಲಿನ ಇತಿಹಾಸದ ಬಗೆಗೆ ತಿಳಿದಿರುವುದಾಗಿಯೂ, ಕೇವಲ ಹೊಸ ವಿಚಾರಗಳಿದ್ಧರೆ ಮಾತ್ರ ತಿಳಿಸಿಬೇಕಾಗಿಯೂ ಸೂಚಿಸಿದರು. ಪಂಚಮುಖಿ ಅವರು ವಿಜಯನಗರ ಕಾಲದ ಶಾಸನಗಳ, ಸಾಹಿತ್ಯ ಕೃತಿಗಳ ಮತ್ತು ವಾಸ್ತು ಶಿಲ್ಪದ ಮೂಲಕ ಆ ಭಾಗವು ಎಷ್ಟರ ಮಟ್ಟಿಗೆ ಕನ್ನಡದ್ದೆ ಆಗಿತ್ತು, ಕನ್ನಡದವರದೇ ಆಗಿತ್ತು ಎಂದು ಮನವರಿಕೆ ಮಾಡಿದರು. ಆ ಸಂಬಂಧವಾಗಿ ಹಿರಿಯ ಇತಿಹಾಸಕಾರರ ಅಭಿಪ್ರಾಯಗಳು, ಪ್ರಕಟವಾಗುತ್ತಿರುವ ಕೃತಿಗಳು ಮತ್ತು ಛಾಯಾ ಚಿತ್ರಗಳನ್ನೆಲ್ಲಾ ಮಿಶ್ರಾ ಅವರ ಗಮನಕ್ಕೆ ತಂದರು. ಪ್ರಾಗೈತಿಹಾಸಿಕ ಯುಗದಿಂದ ೧೭೯೯ರವರೆಗೆ ಅದು ಹೇಗೆ ಕನ್ನಡಿಗರದೇ ಆಗಿತ್ತು ಎಂದು ಮನವರಿಕೆ ಮಾಡಿದರು. ಕಳೆದ ಕೆಲವು ವರ್ಷಗಳಿಂದೀಚೆಗೆ ವ್ಯಾಪಾರ/ವಾಣಿಜ್ಯ/ನೌಕರಿಗೆ ಸಂಬಂಧಿಸಿದಂತೆ ನೆರೆ ಹೊರೆಯ ಪ್ರಾಂತ್ಯಗಳಿಂದ ಬಂದು ನೆಲೆಗೊಂಡ ಜನ, ಆ ನೆಲ ಮೊದಲಿನಿಂದಲೂ ತಮ್ಮದೇ ಆಗಿತ್ತು ಎಂದು ಹಕ್ಕು ಸ್ಥಾಪಿಸಲು ಪ್ರಯತ್ನಿಸುತ್ತಿರುವುದನ್ನು ಪಂಚಮುಖಿ ಬಯಲಿಗೆಳೆದರು. ಮೂರು ನಿಮಿಷಗಳ ಅವಕಾಶ ನೀಡಿ ನಲವತ್ತು ನಿಮಿಷಗಳಿಗೂ ಹೆಚ್ಚುಕಾಲ ಪಂಚಮುಖಿ ಅವರ ವಾದವನ್ನು ಕೇಳಿದ ಮಿಶ್ರಾ ಅವರಿಗೆ ಕೇಳಿ ತಿಳಿದು ರೂಪಿಸಿಕೊಂಡಿದ್ದ ಅಭಿಪ್ರಾಯವನ್ನು ಬದಲಿಸಿಕೊಳ್ಳಲೇಬೇಕಾಗಿದೆಯೆಂಬ ಮಾತನ್ನಾಡಿದರು. ಅನೇಕ ಪ್ರಶ್ನೆಗಳನ್ನು ಕೇಳುತ್ತಾ ತಮ್ಮ ಕುತೂಹಲ ಮತ್ತು ಆಸಕ್ತಿಗಳನ್ನು ವ್ಯಕ್ತ ಪಡಿಸಿದರು.

ಬಳ್ಳಾರಿ ನಗರದಲ್ಲಿ ತೆಲುಗರ ಸಂಖ್ಯೆ ಅಧಿಕವೆನಿಸಿದರೂ (ಮಿಶ್ರ ಭಾಷೆಯ ಜನ ವಾಸಿಸುವ ನಗರವಾದ್ದರಿಂದ) ಇಡಿಯಾಗಿ ಬಳ್ಳಾರಿ ತಾಲ್ಲೂಕಿನಲ್ಲಿ ಕನ್ನಡಿಗರ ಸಂಖ್ಯೆಯೇ ಅಧಿಕವಾಗಿರುವುದರಿಂದ ಇಡೀ ತಾಲ್ಲೂಕನ್ನು ಒಂದು ಘಟಕವಾಗಿ ಪರಿಗಣಿಸಬೇಕು ಎಂಬುದು ಕನ್ನಡಿಗರ ಪ್ರಮುಖ ವಾದವಾಗಿತ್ತು. ಬಳ್ಳಾರಿ ನಗರದ ಕನ್ನಡೇತರರು ವಲಸೆ ಬಂದು ನೆಲೆಗೊಂಡವರೆಂದು ತಿಳಿಸಲಾಗಿತ್ತು. ಕೇಳ್ಕರ್‌ ವರದಿಯ ಪ್ರಕಾರವೂ ಬಳ್ಳಾರಿ ತಾಲ್ಲೂಕು ಕರ್ನಾಟಕಕ್ಕೆ ಸೇರಿತ್ತು. ಆದರೆ ಆಂಧ್ರದವರು ಬಳ್ಳಾರಿಯು ಆಂಧ್ರದೊಡನೆ ಹೆಚ್ಚು ಸಂಪರ್ಕ ಪಡೆದಿದೆ, ಅಲ್ಲಿನ ಶಿಕ್ಷಣ ಮಾಧ್ಯಮ, ವ್ಯಾಪಾರ ವ್ಯವಹಾರಗಳ ಭಾಷೆಯೆಲ್ಲಾ ತೆಲುಗು ಆಗಿದೆ ಎಂಬ ವಾದವನ್ನು ಮುಂದೊಡ್ಡಿದರು. ಜನರ ಅಭಿಪ್ರಾಯಗಳು ಗೊಂದಲಕಾರಿ ಎನಿಸಿದಾಗ ಮಿಶ್ರ ೧೯೫೧ರ ಜನಗಣತಿಯ ಅಂಕಿ – ಅಂಶಗಳನ್ನು ಪರಿಶೀಲಿಸಿದರು. ಆ ಪ್ರಕಾರ ಬಳ್ಳಾರಿ ನಗರ ಮತ್ತು ತಾಲ್ಲೂಕುಗಳಲ್ಲಿನ ಪ್ರಮುಖ ಭಾಷಾ ವರ್ಗದ ಜನಸಂಖ್ಯೆ ಕಳಗಿನಂತಿತ್ತು.

ಪ್ರದೇಶ ಒಟ್ಟು ಜನಸಂಖ್ಯೆ ಕನ್ನಡ ತೆಲುಗು ಇತರೆ
ಒಟ್ಟು ಬಳ್ಳಾರಿ ತಾಲ್ಲೂಕು ೧,೮೪,೭೩೩ ೯೧.೧೬೯ ೫೧,೬೪೧ ೪೯,೯೨೩
ಬಳ್ಳಾರಿ ಹಳ್ಳಿಗಳು ೧,೧೪,೨೭೦ ೭೩,೮೩೬ ೨೮,೬೦೮ ೧೧,೮೨೬
ಬಳ್ಳಾರಿ ನಗರ ೭೦,೪೬೩ ೧೭,೩೩೩ ೨೩,೦೩೩ ೩೦,೦೯೭

ಮೇಲಿನ ಅಂಕಿ ಅಂಶಗಳ ಪ್ರಕಾರ ಬಳ್ಳಾರಿ ನಗರದಲ್ಲಿ ಮಾತ್ರ ಕನ್ನಡಿಗರ ಪ್ರಮಾಣ ಉಳಿದ ಭಾಷಿಕರ ಪ್ರಮಾಣಕ್ಕಿಂತ ಕಡಿಮೆಯಾಗಿದೆ. ಇತರ ಭಾಷಿಕರ ಸಂಖ್ಯೆಯೇ ಅಧಿಕವಾಗಿದ್ದು ನಂತರದ ಸ್ಥಾನ ತೆಲುಗುರದಾಗಿ ಕೊನೆಯ ಸ್ಥಾನ ಕನ್ನಡಿಗರದಾಗುತ್ತದೆ. ಆದರೆ ನಗರದ ಜನಸಂಖ್ಯೆಯಲ್ಲಿ ವ್ಯಾಪಾರ ಮತ್ತು ಉದ್ಯೋಗಗಳಿಗೆ ಬಂದಿದ್ದ ತಾತ್ಕಾಲಿಕ ಜನರೂ ಇರುತ್ತಾರೆಂಬುದನ್ನು ಮರೆಯುವಂತಿಲ್ಲ. ಮಿಶ್ರಾ ಅವರೇ ನಿರ್ಧರಿಸಿದ ಪ್ರಕಾರ ಇಡಿಯಾಗಿ ಬಳ್ಳಾರಿ ತಾಲ್ಲೂಕಿನಲ್ಲಿ ಕನ್ನಡಿಗರ ಪ್ರಮಾಣ ಶೇಕಡಾ ೫೨.೫೨. ತೆಲುಗರ ಪ್ರಮಾಣ ೨೫.೨೯ ಮತ್ತು ಇತರರ ಪ್ರಮಾಣ ೨೨.೧೯, ಇದರಿಂದ ತಾಲ್ಲೂಕಿನಲ್ಲಿ ಕನ್ನಡಿಗರೇ ಬಹುಸಂಖ್ಯಾತರು ಎಂಬುದು ನಿರ್ಧಾರವಾಯಿತು. ತಕರಾರು ಇದ್ದುದೆಲ್ಲಾ ರೂಪನಗುಡಿ, ಬಳ್ಳಾರಿ ಮತ್ತು ಮೋಕಾ ಫಿರ್ಕಾಗಳಿಗೆ ಸಂಬಂಧಿಸಿದಂತೆ ಮಾತ್ರ. ಈ ಪ್ರದೇಶದಲ್ಲಿ ಉರ್ದು ಮನೆ ಮಾತಾಗಿವುಳ್ಳ ಮುಸಲ್ಮಾನರ ಸಂಖ್ಯೆಯು ಅಧಿಕವೇ ಆಗಿರುವುದನ್ನು ಗಮನಿಸಿದ ಮಿಶ್ರಾ ಅವರು ಹಳ್ಳಿ ಫಿರ್ಕಾ, ತಾಲ್ಲೂಕು ಹೀಗೆ ಯಾವ ದೃಷ್ಟಿಯಿಂದ ನೋಡಿದರೂ, ಬಳ್ಳಾರಿ ನಗರ ಮತ್ತು ತಾಲ್ಲೂಕು ಭಾಷಿಕವಾಗಿ ಆಂಧ್ರಕ್ಕೆ ಸೇರಲು ಸಾಧ್ಯವಿಲ್ಲ. ಆಂಧ್ರರದು ನ್ಯಾಯಯುತವಾದ ಬೇಡಿಕೆಯಲ್ಲ ಎಂಬ ಅಭಿಪ್ರಾಯಕ್ಕೆ ಬಂದರು. ೧೮೮೧ರಿಂದ ೧೯೫೧ರವರೆಗೆ ನಡೆದ ಜನಗಣತಿಯ ಅಂಕಿ – ಅಂಶಗಳ ಪ್ರಕಾರ ಎಲ್ಲ ಸಂದರ್ಭಗಳಲ್ಲೂ ಬಳ್ಳಾರಿ ಜಿಲ್ಲೆಯಲ್ಲಿ ಕನ್ನಡಿಗರು ಅರ್ಧಕ್ಕಿಂತಲೂ ಅಧಿಕವಾಗಿರುವುದನ್ನು ಮಿಶ್ರಾ ಸಮಿತಿ ಗುರುತಿಸಿತು. ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ ಜಿಲ್ಲಾ ಮ್ಯಾನ್ಯುಯಲ್ (೧೮೭೨), ಬಳ್ಳಾರಿ ಜಿಲ್ಲಾ ಗೆಜೆಟಿಯರ್ (೧೯೦೪) ಮತ್ತು ಇಂಪೀರಿಯಲ್ ಗೆಜೆಟಿಯರ್ ಆಫ್ ಇಂಡಿಯಾ (೧೯೦೮) ಗಳಲ್ಲಿ ಬಳ್ಳಾರಿ ತಾಲ್ಲೂಕಿನ ಪ್ರಚಲಿತ ಭಾಷೆಯು ಕನ್ನಡ ಎಂದು ನಿರ್ವಿವಾದವಾಗಿ ದಾಖಲಾಗಿದ್ದು, ಈಚಿನ ಜನಗಣತಿಯ ಅಂಕಿ ಅಂಶಗಳಲ್ಲಿ ಮಾತ್ರ ಕೆಲವು ವೈಪರೀತ್ಯಗಳು ಕಂಡುಬಂದಿವೆ ಎಂದು ಮಿಶ್ರಾ ತಿಳಿಸಿದರು. ಐತಿಹಾಸಿಕ ಅಂಶಗಳು, ಸಾಂಸ್ಕೃತಿಕ ಸಂಬಂಧಗಳು, ಆಡಳಿತಾನುಕೂಲ, ಆರ್ಥಿಕ ಪ್ರಗತಿ ಇತ್ಯಾದಿ ಎಲ್ಲ ಅಂಶಗಳನ್ನೂ ಗಮನದಲ್ಲಿರಿಸಿಕೊಂಡು ಮಿಶ್ರಾ ಅವರು ಮೇಲೆ ಹೇಳಿದ ಮಾತುಗಳಿಂದ, ಬಳ್ಳಾರಿ ತಾಲ್ಲೂಕು ಸಂಪೂರ್ಣವಾಗಿ ಕೆಲವು ತಾತ್ಕಾಲಿಕ ಮಧ್ಯ ಕಾಲದ ಏರ್ಪಾಡುಗಳಿಗೆ ಒಳಪಟ್ಟು ಮೈಸೂರಿಗೆ ಸೇರಬೇಕೆಂದು ವಿಶದವಾಗಿರುತ್ತದೆ ಎಂದು ಅಂತಿಮ ತೀರ್ಪು ನೀಡಿ ತಾತ್ಕಾಲಿಕ ಮಧ್ಯಕಾಲಿನ ಏರ್ಪಾಡುಗಳಿಗೂ ಕೆಲವು ಸಲಹೆಗಳನ್ನು ನೀಡಿದರು.

೧೯೫೩ನೇಯ ಮೇ ೧೮ರಂದು ಮಿಶ್ರಾ ಅವರು ಭಾರತ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ವರದಿಯನ್ನು ಕೇಂದ್ರ ಸರ್ಕಾರದ ಸಚಿವ ಸಂಪುಟದ ಸಭೆ ೧೯೫೩ನೇಯ ಮೇ ೨೦ರಂದು ಸ್ವೀಕರಿಸಿತು. ನಿಯಮಿತ ಕಾಲಾವಧಿಯಲ್ಲಿ ನಿಷ್ಠೆಯಿಂದ ಕಾರ್ಯ ನಿರ್ವಹಿಸಿ ತ್ವರೆಯಿಂದ ವರದಿ ಸಲ್ಲಿಸಿದ ಮಿಶ್ರರಿಗೆ ಕೃತಜ್ಞತೆಗಳನ್ನರ್ಪಸಿದ ಸರ್ಕಾರ, ಮಿಶ್ರಾ ಅವರ ವರದಿಯನ್ನು ಅಂಗೀಕರಿಸಿರುವುದನ್ನು ಪ್ರಕಟಿಸಿತು. ಆಂಧ್ರ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯ ಕಾರ್ಯದರ್ಶಿ ಪಿ.ವಿ.ಜಿ.ರಾಜು ಅವರುಗಳೆಲ್ಲರೂ ಮಿಶ್ರಾ ವರದಿಯನ್ನು ಒಪ್ಪಿಕೊಂಡರು. ಬಳ್ಳಾರಿ, ಕೋಲಾರ, ಮಡಿಕೇರಿ, ಚಿತ್ರದುರ್ಗ ಜಿಲ್ಲೆಯ ಕೆಲವು ಭಾಗಗಳ ಬೇಡಿಕೆ ಮುಂದಿಟ್ಟು ಹೋರಾಟ ನಡೆಸುತ್ತಿದ್ದ ವಿಶಾಲಾಂಧ್ರ ಚಳುವಳಿಗಾರರೂ ಸಹ, ಆಂಧ್ರ ರಚನೆ ವಿಳಂಬವಾಗದಿರಲಿ ಎಂಬ ಕಾರಣದಿಂದ ತಮ್ಮ ಬೇಡಿಕೆಗಳನ್ನು ಕೈ ಬಿಟ್ಟರು. ಈ ಸಂದರ್ಭದಲ್ಲಿ ಆಂಧ್ರದ ಕಮ್ಯುನಿಸ್ಟ್ ನಾಯಕ ಹಾಗೂ ರಾಜ್ಯಸಭಾ ಸದಸ್ಯರಾಗಿದ್ದ ಪಿ.ಸುಂದರಯ್ಯ ಅವರ ಪಾತ್ರ ಮುಖ್ಯವಾಗಿತ್ತು.

ಮಿಶ್ರಾ ವರದಿಯ ಅಂಗೀಕಾರದ ನಂತರ ಆಂಧ್ರಪ್ರದೇಶದ ರಚನೆಯ ದಿನ ದೂರವಿಲ್ಲವೆಂಬುದು ಖಚಿತವಾಯಿತು. ಆದರೆ ಕರ್ನಾಟಕ ಪ್ರಾಂತ್ಯ ರಚನೆಯ ಮಾತು ದೂರವೇ ಉಳಿಯಿತು. ಹುಬ್ಬಳ್ಳಿಯ ಘಟನೆ ನಂತರವೂ ಕೇಂದ್ರ ಸರ್ಕಾರದ ನಾಯಕರು ಕರ್ನಾಟಕ ಪ್ರಾಂತ್ಯ ರಚನೆಯ ಬಗೆಗೆ ತೀವ್ರವಾದ ಆಸಕ್ತಿ ತೋರಿಸಲಿಲ್ಲ. ಇದರಿಂದ ಕರ್ನಾಟಕದ ಜನತೆಯ ಅಸಹನೆ ಹೆಚ್ಚುತ್ತಿತ್ತು. ಮಿಶ್ರಾ ಅವರ ವರದಿಯು ಬಳ್ಳಾರಿ ತಾಲ್ಲೂಕನ್ನು ಒಡೆಯುತ್ತದೆಂಬ ಸಂಶಯ ಬಹುತೇಕ ಕನ್ನಡಿಗರಿಗಿದ್ದರೂ, ವರದಿ ಪ್ರಕಟವಾಗಿ ಅದು ಸ್ವೀಕಾರವಾದ ನಂತರ ಆ ಸಂಶಯವೇನೋ ನಿವಾರಣೆಯಾಯಿತು. ಬಳ್ಳಾರಿ ತಾಲ್ಲೂಕು ಮೈಸೂರಿನಲ್ಲೇ ಉಳಿಯುವುದೆಂದು ಸಂತೋಷವಾಯಿತು.

ಈ ಘಟ್ಟದಲ್ಲಿ ಒಂದು ಸಮಸ್ಯೆ ಉದ್ಭವಿಸಿತು. ಬಳ್ಳಾರಿ ತಾಲೂಕು ಆಡಳಿತ ಮತ್ತು ಭಾಷಾ ದೃಷ್ಟಿಯಿಂದ ಕರ್ನಾಟಕ ಪ್ರದೇಶವೆಂದು ಮಿಶ್ರಾ ಆಯೋಗ ತೀರ್ಪು ಕೊಟ್ಟಿದ್ದರಿಂದ, ಅದು ಆಂಧ್ರ ಪ್ರಾಂತ್ಯಕ್ಕೆ ಸೇರಬೇಕೆಂಬ ವಾದ ತಿರಸ್ಕೃತವಾಯಿತು. ಇನ್ನೂ ಕರ್ನಾಟಕ ಪ್ರಾಂತ ರಚನೆಯ ಆಲೋಚನೆಯೂ ಇರಲಿಲ್ಲ. ಬಳ್ಳಾರಿಯ ೬ ತಾಲ್ಲೂಕುಗಳು ಆಂಧ್ರದಲ್ಲಿ ಸೇರಲು ಇಚ್ಚಿಸಲಿಲ್ಲ. ಹಾಗಾದರೆ ಕರ್ನಾಟಕ ಪ್ರಾಂತ್ಯ ರಚನೆ ಆಗುವವರೆಗೆ ಬಳ್ಳಾರಿ ಎಲ್ಲಿರಬೇಕು ಈ ಪ್ರಶ್ನೆ ಬಂದಾಗ ವಿಧಿಯಿಲ್ಲದೆ ನೆರೆಯ ಮೈಸೂರು ಸೀಮೆಗೆ ಸೇರಿಸಿಕೊಳ್ಳುವುದೊಂದೇ ಉಳಿದಿದ್ದ ದಾರಿ. ಆದರೆ ಮೈಸೂರು ಸೀಮೆಯಲ್ಲಿ ಸೇರಿಸಿಕೊಳ್ಳುವುದಕ್ಕೆ ಅಂದಿನ ಸರ್ಕಾರ ಸಂಪೂರ್ಣ ಸಿದ್ಧವಿರಲಿಲ್ಲ. ಮದ್ರಾಸಿನಲ್ಲಿ ಉಳಿಸಿಕೊಳ್ಳಲು ರಾಜಾಜಿ ಸಿದ್ಧವಿರಲಿಲ್ಲ. ಆಗ ಬಳ್ಳಾರಿ ಕರ್ನಾಟಕ ಕ್ರಿಯಾಸಮಿತಿ ಮಾಡಿದ ಪ್ರಚಂಡ ಪ್ರಯತ್ನ ಉಲ್ಲೇಖಾರ್ಹ. ಮುಖ್ಯಮಂತ್ರಿ ಹನುಮಂತಯ್ಯನವರಿಗೆ ಏಕೀಕರಣಕ್ಕೂ, ಬಳ್ಳಾರಿ ಮೈಸೂರಿನಲ್ಲಿ ಸೇರುವುದಕ್ಕೂಸಮ್ಮತಿಯಿತ್ತು. ಆದರೆ ಹಳೇ ಮೈಸೂರಿನ ಕೆಲವು ಶಾಸಕರಿಗೆ ಅಷ್ಟೊಂದು ಆಸಕ್ತಿಯಿರಲಿಲ್ಲ. ಆದ್ದರಿಂದ ಬಳ್ಳಾರಿ ಕರ್ನಾಟಕ ಕ್ರಿಯಾಸಮಿತಿ ನಿಯೋಗವೊಂದು ಮುಖ್ಯಮಂತ್ರಿಗಳನ್ನು, ಅವರ ಸಚಿವ ಸಂಪುಟದ ಸದಸ್ಯರನ್ನು ಶಾಸಕರನ್ನು ಭೇಟಿ ಮಾಡಿತು. ಆ ನಿಯೋಗದಲ್ಲಿ ಸಮಿತಿ ಅಧ್ಯಕ್ಷ ಶ್ರೀ ಜಂತಕಲ್ಲು ಗಾದಿಲಿಂಗಪ್ಪ ಇತರ ಪದಾಧಿಕಾರಿಗಳಾದ ಹರಗಿನಡೋಣಿ ಸಣ್ಣ ಬಸವನಗೌಡ, ಅಲ್ಲಂ ಕರಿಬಸಪ್ಪ, ಕೊಳಗಾನಹಳ್ಳಿ ಲಿಂಗಣ್ಣ, ಬಿ.ಎಂ.ರೇವಣಸಿದ್ದಯ್ಯ, ಮುಸ್ಲಿಮರ ಮುಖಂಡ ಮಾಜಿ ನಗರ ಸಭಾಧ್ಯಕ್ಷ ಅಬ್ದುಲ್ ರಜಾಕ್ ಸಾಹೇಬ್, ಕ್ರಿಯಾ ಸಮಿತಿ ಕಾರ್ಯದರ್ಶಿ ಕೋ.ಚನ್ನಬಸಪ್ಪ, ಗಡಿಗಿ ಮರಿಸ್ವಾಮಪ್ಪ ಮುಂತಾದ ಸುಮಾರು ೧೫ ಜನ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಬಳ್ಳಾರಿ ಜಿಲ್ಲೆಯನ್ನು ಮೈಸೂರಿನಲ್ಲಿ ಸೇರಿಸಿಕೊಳ್ಳಬೇಕಾದ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟರು. ತರುವಾಯ ನಿಯೋಗದಲ್ಲಿದ್ದವರಲ್ಲಿ ೫ ಸದಸ್ಯರು ಶ್ರೀ ಅಲ್ಲಂ ಕರಿಬಸಪ್ಪ, ಅಬ್ದುಲ್ ರಜಾಕ್ ಸಾಹೇಬ್, ಕೋ.ಚನ್ನಬಸಪ್ಪ, ಗಡಿಗಿ ಮರಿಸ್ವಾಮಪ್ಪ, ಬಿ.ಎಂ.ರೇವಣಸಿದ್ದಯ್ಯ, ಮೈಸೂರು ಶಾಸನ ಸಭೆಯ ಬಹುತೇಕ ಎಲ್ಲ ಸದಸ್ಯರನ್ನು ಅವರಿದ್ದಲ್ಲಿಗೆ ಹೋಗಿ ಖುದ್ದಾಗಿ ಕಂಡು ಬಳ್ಳಾರಿ ಜಿಲ್ಲೆಯನ್ನು ಮೈಸೂರು ರಾಜ್ಯಕ್ಕೆ ಸೇರಿಸಿಕೊಳ್ಳಬಹುದೆಂಬ ಮನವಿಗೆ ಸಹಿ ಪಡೆದು ಮಾನ್ಯ ಮುಖ್ಯಮಂತ್ರಿಗಳಿಗೆ ಅರ್ಪಿಸಲಾಯಿತು. ಆ ಒಪ್ಪಿಗೆಯ ಮನವಿಯ ಆಧಾರದ ಮೇಲೆ ಮೈಸೂರು ವಿಧಾನಸಭೆ ಬಳ್ಳಾರಿಯನ್ನು ಮೈಸೂರಿನಲ್ಲಿ ವಿಲೀನ ಮಾಡಬೇಕೆಂದು ಸರ್ವಾನುಮತದ ಗೊತ್ತುವಳಿಯನ್ನು ಅಂಗೀಕರಿಸಿತು. ಈ ಗೊತ್ತುವಳಿಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸಲಾಯಿತು.

ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು

ಆಂಧ್ರ ಪ್ರಾಂತ್ಯ ರಚನೆಯ ನಿರ್ಧಾರ, ಕರ್ನಾಟಕ ರಾಜ್ಯ ರಚನೆಯ ವಿಳಂಬ, ದ್ವಿ ಕರ್ನಾಟಕ ಸ್ಥಾಪನೆಗೆ ನಾಯಕರ ಮತ್ತು ಸರ್ಕಾರದ ವಿಳಂಬ ಧೋರಣೆ, ಹುಬ್ಬಳ್ಳಿಯ ಗೋಲಿಬಾರ್ ಇತ್ಯಾದಿಗಳಿಂದಾಗಿ ಪ್ರೇರಿತರಾಗಿ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣವೇ ಆಗಬೇಕೆಂದು ಹಂಬಲಿಸುತ್ತಿದ್ದ ಕಾಂಗ್ರೆಸ್ಸೇತರ ರಾಜಕೀಯ ಪಕ್ಷಗಳ ನಾಯಕರು ಶತಾಯಗತಾಯ ಏಕೀಕರಣವನ್ನು ಸಾಧಿಸಬೇಕೆಂಬ ಧೃಢ ಸಂಕಲ್ಪದಿಂದ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತನ್ನು ಸ್ಥಾಪಿಸಿದರು. ಅ.ಕ.ರಾ.ನಿ. ಪರಿಷತ್ತಿನ ಮೊದಲ ಅಧಿವೇಶನವು ೨೮.೫.೧೯೫೩ರಂದು ದಾವಣಗೆರೆಯಲ್ಲಿ ನಡೆಯಿತು. ಅಧಿವೇಶನದ ಅಧ್ಯಕ್ಷತೆಯನ್ನು ಕೆ.ಆರ್. ಕಾರಂತರು ವಹಿಸಿದ್ದರು. ಲೋಕಸಭಾ ಸದಸ್ಯ ಅಳವಂಡಿ ಶಿವಮೂರ್ತಿ ಸ್ವಾಮಿಗಳು ಉದ್ಘಾಟನೆ ಮಾಡಿದರು. ಕೆ.ಆರ್. ಕಾರಂತರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಆವರೆಗಿನ ಕರ್ನಾಟಕ ಏಕೀಕರಣ ಚಳುವಳಿಯ ಪ್ರಮುಖ ಘಟ್ಟಗಳನ್ನು ಗುರುತಿಸಿ ಈಗ ಕರ್ನಾಟಕ ಪ್ರಾಂತ್ಯ ನಿರ್ಮಾಣಕ್ಕೆ ಯಾವ ಅಡ್ಡಿಗಳೂ ಇಲ್ಲ. ನೂತನ ಆಂಧ್ರ ಪ್ರಾಂತ್ಯದ ಭವಿಷ್ಯವನ್ನು ಕಾದು ನೋಡಿ, ಅನಂತರ ಬೇರೆ ಬೇರೆ ಪ್ರಾಂತ್ಯಗಳ ರಚನೆಗೆ ಕೈ ಹಾಕುವುದೆಂದು ಕೆಲವು ನಾಯಕರು ಯೋಚಿಸುತ್ತಿದ್ದಾರೆ. ಇಂಥ ಯೋಚನೆ ಸಾಧುವಾದುದಲ್ಲ. ಏಕೆಂದರೆ ಒಂದು ಪ್ರಾಂತ್ಯದ ಸಮಸ್ಯೆ ಇನ್ನೊಂದು ಪ್ರಾಂತ್ಯಕ್ಕಿರಲಾರದು. ಒಂದರ ಸಾಧಕ ಬಾಧಕಗಳು ಇನ್ನೊಂದಕ್ಕಿರಲಾರವು ಎಂದು ಮನವರಿಕೆ ಮಾಡಿದರು. ಕರ್ನಾಟಕ ರಾಜ್ಯ ನಿರ್ಮಿಸುವುದು ಕನ್ನಡಿಗರ ಜನ್ಮ ಸಿದ್ಧ ಹಕ್ಕು ಎಂದು ಕರೆ ನೀಡಿದ ಕಾರಂತರು ಕನ್ನಡ ನಾಡಿನ ಇತಿಹಾಸದಲ್ಲಿ ಇದೊಂದು ಸಂಧಿಕಾಲ. ಈಗ ಎಲ್ಲ ಪಕ್ಷ, ಪ್ರತಿಪಕ್ಷಗಳಲ್ಲಿಯೂ ತಾಳ್ಮೆ, ಸಹನೆ, ಸೌಹಾರ್ದತೆ, ಪರಸ್ಪರ ವಿಶ್ವಾಸ, ದೂರದೃಷ್ಟಿ ಅಗತ್ಯ. ಒಂದು ಪಕ್ಷ ಮತ್ತೊಂದು ಪಕ್ಷವನ್ನು ಕೆರಳಿಸುವ ಭಾವಾತಿರೇಕ ಪ್ರದರ್ಶನಕ್ಕೆ ಎಡೆಗೊಡಬಾರದು. ಎಲ್ಲರೂ ನಿಷ್ಠೆಯಿಂದ ದೃಢತೆಯಿಂದ, ಪ್ರತಿಜ್ಞಾಬದ್ಧರಾಗಿ ನಿಂತಲ್ಲಿ ಕರ್ನಾಟಕ ಪ್ರಾಂತ್ಯ ನಿರ್ಮಾಣ ನಾಳಿನ ಕನಸಾಗುಳಿಯದೆ ಇಂದಿನ ನನಸಾಗುವುದರಲ್ಲಿ ಸಂದೇಹವಿಲ್ಲ ಎಂದು ದೃಢಪಡಿಸಿದರು. (ಪ್ರಬುದ್ಧ ಕರ್ನಾಟಕ, ಸಂಪುಟ ೩೫, ಸಂಚಿಕೆ ೧, ೧೯೫೩, ಮೈಸೂರು, ಪು.೧೨೩).

ದಾವಣಗೆರೆಯಲ್ಲಿ ಸ್ಥಾಪಿತವಾದ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನ (ಕೆಲವರು ‘ಅಖಂಡ’ದ ಬದಲಿಗೆ ಅಖಿಲ ಎಂದು ಉಲ್ಲೇಖಿಸಿದ್ದಾರೆ) ಮೊದಲ ಅಧ್ಯಕ್ಷರಾಗಿ ಕೆ.ಆರ್. ಕಾರಂತರೂ ಕಾರ್ಯದರ್ಶಿಗಳಾಗಿ ಬಿ.ವಿ.ಕಕ್ಕಿಲ್ಲಾಯರೂ ಆಯ್ಕೆಯಾದರು. ಶಾಂತವೇರಿ ಗೋಪಾಲಗೌಡರು ಉಪಾಧ್ಯಕ್ಷರಲ್ಲೊಬ್ಬರಾಗಿ ಆಯ್ಕೆಯಾದರು. ಅಕರಾನಿ ಪರಿಷತ್ತಿನ ಮೊದಲ ಅಧೀವೇಶನ ದಾವಣಗೆರೆಯಲ್ಲಿ ನಡೆಯುವುದಕ್ಕೆ ಒಂದು ವಾರ ಮೊದಲು, ೧೯೫೩ನೆಯ ಮೇ ೨೦ರಂದು ಲೋಕಸಭೇಯಲ್ಲಿ ಬಳ್ಳಾರಿ ತಾಲ್ಲೂಕಿನ ಸಮಸ್ಯೆಯನ್ನು ಕುರಿತು ಎಲ್.ಎಸ್.ಮಿಶ್ರಾ ಅವರು ಸಲ್ಲಿಸಿದ್ದ ವರದಿಯು ಸ್ವೀಕೃತವಾಗಿತ್ತು. ಬಳ್ಳಾರಿ ತಾಲ್ಲೂಕು ಮೈಸೂರು ರಾಜ್ಯಕ್ಕೆ ಸೇರಬೇಕೆಂದು ಮಿಶ್ರಾ ಅವರ ಸಲಹೆ ಸ್ವೀಕೃತವಾಗಿ, ಆ ಸಮಸ್ಯೆ ಬಗೆಹರಿದಿತ್ತು. ಕರ್ನಾಟಕದ ಎಲ್ಲೆಡೆ ಏಕೀಕರಣದ ಬಗೆಗೆ ಜಾಗೃತಿ ಮೂಡಿತ್ತು. ೧೯೫೩ನೆಯ ಜುಲೈ ೨೬ರಂದು ಕೊಯಮತ್ತೂರು ಜಿಲ್ಲೆಯ ಕೊಳ್ಳೇಗಾಲದ ಕನ್ನಡಿಗರ ಸಮ್ಮೇಳನ ನಡೆದಿತ್ತು. ಬಿ.ಶಿವಮೂರ್ತಿಶಾಸ್ತ್ರಿಗಳು ಮತ್ತು ಸಿದ್ವನಹಳ್ಳಿ ಕೃಷ್ಣಶರ್ಮರು ಆಗ ಕೊಳ್ಳೇಗಾಲ ತಾಲ್ಲೂಕು, ತಾಳವಾಡಿ, ಪಿರ್ಕಾ ಮತ್ತು ಬರಗೂರು ಅರಣ್ಯಭಾಗಗಳು ಮೈಸೂರಿಗೆ ಸೇರಬೇಕೆಂದು ಒತ್ತಾಯಿಸಿದ್ದರು. ೧೯೫೩ನೆಯ ಜುಲೈ ೨೬ರಂದು ನಡೆದ ಸಮ್ಮೇಳನದ ಸ್ವಾಗತಾಧ್ಯಕ್ಷರಾಗಿದ್ದ ಶಾಸನಸಭಾ ಸದಸ್ಯ ಎಸ್.ಪಿ. ವಿರೂಪಾಕ್ಷಯ್ಯನವರು ತಲಕಾಡು ಗಂಗರ ಕಾಲದಿಂದ ಟಿಪ್ಪುವಿನ ಪತನದವರೆಗೆ ಕರ್ನಾಟಕದ ಭಾಗವೇ ಆಗಿದ್ದ ಕೊಳ್ಳೇಗಾಲ ತಾಲ್ಲೂಕು, ತಾಳವಾಡಿ ಫಿರ್ಕಾ ಮತ್ತು ಬರಗೂರು ಅರಣ್ಯ ಭಾಗಗಳು ಕರ್ನಾಟಕಕ್ಕೆ ಸೇರಬೇಕೆಂದು ಅಂಕಿ ಅಂಶಗಳ ಸಹಿತ ಮಂಡಿಸಿದರು. ಆ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷತೆ ವಹಿಸಿದ್ದವರು ಬೆಂಗಳೂರು ನಗರದ ಮಾಜಿ ಮೇಯರ್ ಆರ್. ಅನಂತರಾಮ್. ಮಾಸ್ತಿ ವೆಂಕಟೇಶ ಅಯ್ಯಂಗಾರ್, ಬಿ.ಶಿವಮೂರ್ತಿಶಾಸ್ತ್ರಿ ಮುಂತಾದ ಗಣ್ಯರು ಭಾಷಣಕಾರರಾಗಿ ಆಗಮಿಸಿದ್ದರು.

ಮಿಶ್ರಾ ವರದಿ ಸ್ವೀಕಾರ

೧೯೫೩ನೆಯ ಮೇ ೨೦ರಂದು ಎಲ್.ಎಸ್. ಮಿಶ್ರಾ ಅವರ ವರದಿಯನ್ನು ಲೋಕಸಭೆಯು ಸ್ವೀಕರಿಸಿದ ವಾರ್ತೆಯನ್ನು ಅದೇ ದಿನ ರಾತ್ರಿ ೯ ಗಂಟೆಗೆ ಆಕಾಶವಾಣಿಯು ಪ್ರಸಾರ ಮಾಡಿತು.

ಅದನ್ನು ಕೇಳಿದ ಬಳ್ಳಾರಿಯ ಕನ್ನಡಿಗರು ಸಂತೋಷದಿಂದ ಹೂವಿನ ಮತಾಪುಗಳನ್ನು ಹಚ್ಚಿ ಸಂಭ್ರಮಪಟ್ಟರು. ಆದರೆ ಗಲಭೆಯಾಗಬಹುದೆಂಬ ಕಾರಣದಿಂದ ಹರ್ಷೋದ್ಗಾರಗಳಿಗೆ ಪೋಲಿಸರು ತಡೆಯೊಡ್ಡಿದರು. ೨೨ನೆಯ ತಾರೀಕಿನಿಂದ ಬಳ್ಳಾರಿಗೆ ಧಾವಿಸಿದ ಕೆಲವು ತೆಲುಗು ಭಾಷೆಯ ನಾಯಕರು ಪ್ರಚೋದನಾತ್ಮಕ ಭಾಷಣಗಳನ್ನು ಮಾಡತೊಡಗಿದರು. ಕಾಮಿರೆಡ್ಡಿ ಎಂಬುವವರು ಬಳ್ಳಾರಿಯ ಸಾಂಬಮೂರ್ತಿ ಮೈದಾನದಲ್ಲಿ ಮಿಶ್ರಾ ವರದಿಯ ತೀರ್ಪನ್ನು ವಿರೋಧಿಸಿ ಆಮರಣಾಂತ ಉಪವಾಸವನ್ನು ಆರಂಭಿಸಿದರು. ವರದಿಯನ್ನೊಪ್ಪಿದ ಆಂಧ್ರದ ನಾಯಕರನ್ನು ಟೀಕಿಸಿದರು. ತಮ್ಮ ಉಪವಾಸ ಸತ್ಯಾಗ್ರಹದಿಂದ ಯಾವ ಪ್ರಯೋಜನವೂ ಆಗದೆಂದು ಮನವರಿಕೆಯಾದ ನಂತರ ಕಾಮಿರೆಡ್ಡಿ ಅವರು ೫೧ನೆಯ ದಿನ ತಮ್ಮ ಉಪವಾಸವನ್ನು ಮುಕ್ತಾಯಗೊಳಿಸಿದರು.

೧೯೫೩ನೆಯ ಆಗಸ್ಟ್ ೧೩ರಂದು ಆಂಧ್ರ ಪ್ರಾಂತ್ಯ ಮಸೂದೆಯು ಲೋಕಸಭೆಯಲ್ಲಿ ಪ್ರಸ್ತಾಪಿತವಾಯಿತು. ಬಳ್ಳಾರಿಯ ಪ್ರಶ್ನೆಯು ಬಗೆಹರಿದಿದೆಯೆಂದು ಪ್ರಧಾನಿ ನೆಹರೂ ಅವರು ಲೋಕಸಭೆಯಲ್ಲಿ ಸ್ಪಷ್ಟಪಡಿಸಿದರು. ಮಸೂದೆಯ ಮೇಲೆ ಚರ್ಚೆಯನ್ನು ಆರಂಭಿಸಲು ಗೃಹಮಂತ್ರಿ ಕೆ.ಎನ್. ಕಾಟ್ಜೂ ಅವಕಾಶ ಮಾಡಿದರು. ಸ್ವೀಕೃತವಾಗಿರುವ ವಾಂಛೂ ಮತ್ತು ಮಿಶ್ರಾ ಅವರ ವರದಿಗಳನ್ನು ಪ್ರಸ್ತಾಪಿಸಿದ ಕಾಟ್ಜೂ ಅವರು ಬಳ್ಳಾರಿಯ ತಾಲ್ಲೂಕಿನ ಸಮಸ್ಯೆಯೂ ಬಗೆಹರಿದಿದೆ ಎಂಬುದನ್ನು ಸ್ಪಷ್ಟಪಡಿಸಿದರು.

ಮೈಸೂರಿನೊಡನೆ ಬಳ್ಳಾರಿ ವಿಲೀನ

ಇಂತಹ ಬೇಡಿಕೆ, ಪ್ರತಿಭಟನೆ, ಬಂಧನ ಇತ್ಯಾದಿ ಗೊಂದಲದ ಸನ್ನಿವೇಶದಲ್ಲಿ ಕರ್ನಾಟಕ ಏಕೀಕರಣದ ಮೊದಲ ಹಂತವಾಗಿ ಬಳ್ಳಾರಿ ಜಿಲ್ಲೆಯ ಏಳು ತಾಲ್ಲೂಕುಗಳು ಮೈಸೂರು ರಾಜ್ಯದೊಂದಿಗೆ ವಿಲೀನಗೊಂಡು, ಏಕೀಕರಣ ಪ್ರಕ್ರಿಯೆ ಆರಂಭವಾಯಿತು. ೧೯೫೩ನೆಯ ಅಕ್ಟೋಬರ್ ೧ರಂದು ೧೯೫೩ನೆಯ ಸೆಪ್ಟೆಂಬರ್ ೩೦ರ ರಾತ್ರಿ ೧೨ ಘಂಟೆ ಆದಾಗ ಬಳ್ಳಾರಿ ನಗರದ ಕೋಟೆಯ ಮೇಲೆ ೨೧ ತೋಪುಗಳನ್ನು ಹಾರಿಸಿ, ಮಂಗಳವಾದ್ಯಗಳ ಮೊಳಗಿನೊಂದಿಗೆ ಬಳ್ಳಾರಿ ಜಿಲ್ಲೆಯ ಮೈಸೂರು ರಾಜ್ಯದೊಂದಿಗೆ ವಿಲೀನಗೊಂಡಿತು. ಕರ್ನಾಟಕದ ಎಲ್ಲ ಪತ್ರಿಕೆಗಳು ೧೯೫೩ನೆಯ ಅಕ್ಟೋಬರ್ ೧ರಂದು ವಿಶೇಷ ಸಂದೇಶದಲ್ಲಿ ಬಳ್ಳಾರಿ ಜಿಲ್ಲೆಯ ಕನ್ನಡಿಗರನ್ನು ತುಂಬು ಪ್ರೀತಿಯಿಂದ ಸ್ವಾಗತಿಸಿದರು. ಒಂದೇ ಭಾಷೆಯ ಮತ್ತು ಸಂಸ್ಕೃತಿಯ ಜನ ಬಹುವರ್ಷಗಳ ನಂತರ ಒಂದಾದ ಸಂದರ್ಭದಲ್ಲಿ ಕೋ.ಚೆನ್ನಬಸಪ್ಪ, ಅ.ನ.ಕೃ., ತಿ.ತಾ.ಶರ್ಮ, ತೊಗರಿ ಸರ್ವಮಂಗಳಮ್ಮ ಮುಂತಾದ ಗಣ್ಯರು ವಿಶೇಷ ಲೇಖನಗಳ ಮೂಲಕ ಬಳ್ಳಾರಿ ಜಿಲ್ಲೆಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿರಿಮೆ, ಗರಿಮೆಯನ್ನು ಕನ್ನಡಿಗರಿಗೆ ಪರಿಚಯಿಸಿದರು. ಬೆಂಗಳೂರಿನ ಪೂರ್ಣಿಮಾ ಅಡ್ವರ್‌ಟೈಜಿಂಗ್ ಸಂಸ್ಥೆಯು ಬಳ್ಳಾರಿ ವಿಲೀನಗೊಂಡ ಸಂದರ್ಭಕ್ಕೆ ವೆಲ್ಕಂ ಬಳ್ಳಾರಿ ಎಂಬ ಸ್ಮರಣ ಸಂಚಿಕೆಯನ್ನು ಪ್ರಕಟಿಸಿತು.

ಅದರ ಮೂಲಕ ಮೈಸೂರಿನ ಮಹಾರಾಜರು, ಮುಖ್ಯಮಂತ್ರಿ ಕೆ.ಹನುಮಂತಯ್ಯ, ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹೆಚ್.ಕೆ.ವೀರಣ್ಣಗೌಡ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎಸ್.ನಿಜಲಿಂಗಪ್ಪ, ಮೈಸೂರು ಛೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಎಂ.ವಿ.ಕೃಷ್ಣಮೂರ್ತಿ ಅವರುಗಳಲ್ಲದೆ ಕೇಂದ್ರ ಸರ್ಕಾರದಲ್ಲಿ ಮಂತ್ರಿಗಳಾಗಿದ್ದ ಕರ್ನಾಟಕದ ಡಿ.ಪಿ.ಕರಮರ್‌ಕರ್, ಎಂ.ವಿ.ಕೃಷ್ಣಪ್ಪ ಮುಂತಾದವರು ಬಳ್ಳಾರಿ ಜಿಲ್ಲೆಯು ಮೈಸೂರಿಗೆ ಸೇರಿದ್ದನ್ನು ಸ್ವಾಗತಿಸಿದ ಸಂದೇಶಗಳು ಪ್ರಕಟವಾದವು. ರಾಷ್ಟ್ರಕವಿ ಎಂ.ಗೋವಿಂದ ಪೈ, ಅ.ನ.ಕೃ., ಪಿ.ಬಿ.ದೇಸಾಯಿ, ಎಂ.ಜಿ.ವೆಂಕಟೇಶಯ್ಯ, ಡಾ. ಎಸ್.ಶ್ರೀಕಂಠಶಾಸ್ರ‍್ತಿ, ಪಿ.ರಮಾನಂದ, ಕೋ.ಚನ್ನಬಸಪ್ಪ, ಸಿ.ವ.ಚೆನ್ನವೇಶ್ವರ, ಬೀಚಿ, ಪಿ.ಎಲ್. ಸ್ಯಾಮ್ಯುಯಲ್, ವೈ.ಮಹಾಬಲೇಶ್ವರಪ್ಪ, ಎಂ. ನರಸಿಂಹಯ್ಯ, ಡಾ.ಆರ್.ನಾಗನಗೌಡ ಮುಂತಾದವರು ಆ ಸ್ಮರಣ ಸಂಚಿಕೆಗೆ ಅತ್ಯಮೂಲ್ಯ ಲೇಖನಗಳ ಕೊಡುಗೆ ನೀಡಿ ಬಳ್ಳಾರಿ ಜಿಲ್ಲೆಯ ಸರ್ವತೋಮುಖ ಹಿರಿಮೆ ಗರಿಮೆಗಳನ್ನು ದಾಖಲಿಸಿದರು. ಅದೇ ಸಂಚಿಕೆಯಲ್ಲಿ ಬಳ್ಳಾರಿ ಜಿಲ್ಲೆಯು ಮೈಸೂರಿಗೆ ಸೇರಲು ಕಾರಣವಾದ ಮಿಶ್ರಾ ಅವರ ವರದಿಯನ್ನು ಕೋ.ಚನ್ನಬಸಪ್ಪನವರು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದರು.

ರೈತ ಪತ್ರಿಕೆಯ ೧೯೫೩ನೆಯ ಜನವರಿ ೨ರ ವಿಶೇಷ ಸಂಚಿಕೆಯು ಬಳ್ಳಾರಿಯಲ್ಲಿ ಪ್ರಚಂಡ ವಿಲಯನ ಮಹೋತ್ಸವವೆಂದು, ಆ ಸಂದರ್ಭವನ್ನು ಹೀಗೆ ದಾಖಲಿಸಿದೆ.

೧೯೫೩ನೆಯ ಸೆಪ್ಟೆಂಬರ್ ೩೦ನೆಯ ದಿನರಾತ್ರಿ ೧೨ ಗಂಟೆ ನಿಮಿಷಕ್ಕೆ ಬಳ್ಳಾರಿ ಮೈಸೂರಿಗೆ ಸೇರಿದುದರ ಘನ ಸಮಯದ ಗುರುತಾಗಿ ೨೧ ಗುಂಡುಗಳನ್ನು ಹಾರಿಸಿದರು. ವಿಜಯ ಮಂದಿರದ ಐದನೇ ಅಂತಸ್ತಿನ ಮೇಲೆ ನಗಾರಿ ನೌಬತ್ತು ಕಹಳೆಗಳನ್ನು ಹಿಡಿಯಲಾಯಿತು. ಬಳ್ಳಾರಿ ಗುಡ್ಡದ ಮೇಲೆ ದೊಡ್ಡ ದೊಡ್ಡ ಕಕ್ಕಡ ದೀಪಗಳನ್ನು ಹಚ್ಚಿ, ಅಲ್ಲಿಂದಲೂ ಇಪ್ಪತ್ತೊಂದು ಔಟುಗಳನ್ನು ಹಾರಿಸಿದರು. ಅಲ್ಲಿಂದ ಕನ್ನಡಿಗರ ಜಯಸೂಚಕವಾದ ಬೆಲೂನುಗಳನ್ನು ಹಾರಿಸಲಾಯಿತು. ಮಧ್ಯರಾತ್ರಿಯಿಂದ ಹಿಡಿದು ಬೆಳಗಾಗುವವರೆಗೆ ಬಳ್ಳಾರಿ ನಗರ ಉತ್ಸಾಹದ ಕಡಲಿನಲ್ಲಿ ಮುಳುಗೆದ್ದಿತು. ಕನ್ನಡಿಗರ ಆನಂದೋತ್ಸಾಹವನ್ನು ವರ್ಣಿಸುವುದು ಹೇಗೆ ಸಾಧ್ಯ? ಸಾವಿರಾರು ಬಡ ಜನರಿಗೆ ಅನ್ನ ಹಾಕಲಾಯಿತು.

೧೯೫೩ನೆಯ ಅಕ್ಟೋಬರ್ ೧ರಂದು ಬೆಳಗ್ಗೆ ಬಳ್ಳಾರಿಯಲ್ಲಿ ನಡೆದ ಸಂತಸದ, ಸಂಭ್ರಮದ ಕಾರ್ಯಕ್ರಮವನ್ನು ರೈತ ಪತ್ರಿಕೆ ಹೀಗೆ ವರದಿ ಮಾಡಿದೆ.

ಬಳ್ಳಾರಿ ನಗರ ಸುಪ್ರಭಾತದ ಮಂಗಳ ವಾದ್ಯಗಳೊಡನೆ ಕಣ್ತೆರೆಯಿತು. ಎಲ್ಲ ದೇವಾಲಯ, ಚರ್ಚು, ಮಸೀದಿಗಳಲ್ಲಿ ಪೂಜೆ, ಪ್ರಾರ್ಥನೆ, ನಮಾಜುಗಳ ಮಂಗಳ ವಾದ್ಯದಿಂದ ಪ್ರತಿಧ್ವನಿತವಾಗಿದ್ದವು. ಹಿರಿಯರು, ಕಿರಿಯರು, ಹೆಂಗಸರು, ಮಕ್ಕಳು ಹೊಸ ಉಡುಪುಗಳಿಂದ ಶೋಭಿತರಾಗಿ, ಗಂಡಭೇರುಂಡ ಧ್ವಜವನ್ನು ಮನೆ ಮನೆಗಳ ಮೇಲೆ ಹಾರಿಸಿ ಜೈ ಕರ್ನಾಟಕ ಮಾತೆ ಎಂದು ಮಾಡುತ್ತಿದ್ದು ಘೋಷ ಎಂಥವರನ್ನು ಹರ್ಷಪುಲಕಿತರನ್ನಾಗಿ ಮಾಡಿತು. ಅಲ್ಲಲ್ಲಿ ಹಾರಿಸುತ್ತಿದ್ದ ಔಟು, ಪಟಾಕಿಗಳು ಕನ್ನಡ ಜಯಭೇರಿಯನ್ನು ದಿಗಂತಕ್ಕೆ ಸಾರುತ್ತಿದ್ದಿತು. ಬೆಳಗಿನ ಜಾವ ಎರಡು ಮೂರು ಸಾವಿರ ವಿದ್ಯಾರ್ಥಿಗಳ ಹಾಗೂ ಸ್ವಯಂ ಸೇವಕ ದಳದವರ ಪ್ರಭಾತಪೇರಿ ನಡೆಯಿತು. ಊರಿನಲ್ಲೆಲ್ಲಾ ಕನ್ನಡ ಬಾಲಕ ವೃಂದದ ಜಯಘೋಷ ತುಂಬಿತ್ತು. ಕರ್ನಾಟಕ ಮಾತಾಕೀ ಜೈ, ಭುವನೇಶ್ವರಿ ದೇವಿ ಕೀ ಜೈ, ಮೈಸೂರು ಸರಕಾರ ಜಿಂದಾಬಾದ್ ಎಂಬ ಘೋಣೆಗಳ ಮೊಳಗು ಓತಪ್ರೋತವಾಗಿ ಕೇಳಿಸುತ್ತಿತ್ತು. ಸಾಂಬ ಮೂರ್ತಿ ಮೈದಾನದಲ್ಲಿ ಧ್ವಜವಂದನೆಯೊಡನೆ ಬೆಳಗಿನ ಕಾರ್ಯಕ್ರಮ ಮುಕ್ತಾಯವಾಯಿತು.

೧೯೫೩ನೆಯ ಅಕ್ಟೋಬರ್ ೨ರಂದು ಮೈಸೂರು ರಾಜ್ಯದ ಮುಖ್ಯಮಂತ್ರಿ ಕೆ.ಹನುಮಂತಯ್ಯ ಅವರು ಬಳ್ಳಾರಿಯ ಬಿ.ಡಿ.ಎ. ಮೈದಾನದಲ್ಲಿ ನಡೆದ ಬಳ್ಳಾರಿ ಮೈಸೂರು ವಿಲೀನ ಸಮಾರಂಭದಲ್ಲಿ ಭಾಗವಹಿಸಿ ಕರ್ನಾಟಕ ಏಕೀಕರಣದಲ್ಲಿ ಇದು ಮೊದಲ ಹೆಜ್ಜೆ ಎಂದು ತಿಳಿಸುತ್ತಾ ನನ್ನ ಮನಸ್ಸನ್ನು ದೇಹವನ್ನು ನಿಮ್ಮ ಸೇವೆಗೆ ಮುಡಿಪಾಗಿ ಇಡುತ್ತೇನೆ ಎಂದು ಬಳ್ಳಾರಿ ಜನತೆಗೆ ಆಶ್ವಾಸನೆ ನೀಡಿದರು.

ಸಮಾರಭದಲ್ಲಿ ಎಚ್.ಸಿದ್ಧವೀರಪ್ಪ, ಟಿ.ಚನ್ನಯ್ಯ, ಜೋಳದರಾಶಿ ದೊಡ್ಡನಗೌಡ, ಬಿ.ಶಿವಮೂರ್ತಿಶಾಸ್ತ್ರಿ, ಟೇಕೂರು ಸುಬ್ರಮಣ್ಯಂ, ಡಾ.ನಾಗನಗೌಡ ಮುಂತಾದ ಗಣ್ಯರು ಭಾಗವಹಿಸಿದ್ದರು. ಆಲೂರು, ರಾಯದುರ್ಗ, ಆದವಾನಿ ತಾಲ್ಲೂಕುಗಳ ವಿನಾ ಉಳಿದ ಬಳ್ಳಾರಿ ಜಿಲ್ಲೆಯಲ್ಲಿ ಇಡಿಯಾಗಿ ವಿಜಯದ ದಿನವನ್ನು ಹಬ್ಬದಂತೆ ಆಚರಿಸಲಾಯಿತು.