ಕರ್ನಾಟಕದ ಉತ್ತರದ ಗಡಿ

ಬೀದರ್ ನಗರವನ್ನು ಸಂಪೂರ್ಣವಾಗಿ ಆಂಧ್ರಪ್ರದೇಶಕ್ಕೆ ಸೇರಿಸಬೇಕೆಂಬ ಕುತಂತ್ರವನ್ನು ಬೀದರಿನ ಕನ್ನಡಿಗರು ಸಂಪೂರ್ಣವಾಗಿ ಭಗ್ನಗೊಳಿಸಿದರು. ನೆರೆಯ ಮಹಾರಾಷ್ಟ್ರಕ್ಕೆ ಸೇರಿದಂತಹ ಸೊಲ್ಲಾಪುರ, ಜತ್ ಪ್ರದೇಶಗಳನ್ನು ಕರ್ನಾಟಕದಲ್ಲಿ ಮರಳಿ ಪಡೆಯಲು ಬೀದರ್‌ನ ಜನರು ಹೋರಾಟಕ್ಕಿಳಿದರು. ಇದೇ ಸಂದರ್ಭದಲ್ಲಿ ಬೀದರ್ ನಗರದಲ್ಲಿ ಕಲ್ಬುರ್ಗಿಯ ಅಸಿಸ್ಟೆಂಟ್ ಕಮೀಷನರ್ ಆಗಿದ್ದಂತಹ ಸಿದ್ಧಯ್ಯ ಪುರಾಣಿಕರ ಪ್ರಯತ್ನದ ಫಲವಾಗಿ ಕನ್ನಡ ಸಾಹಿತ್ಯ ಸಮ್ಮೇಳನವು ಉತ್ತಂಗಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಅದೇ ಕಾಲಕ್ಕೆ ಎಸ್. ನಿಜಲಿಂಗಪ್ಪನವರ ಮುಖಂಡತ್ವದಲ್ಲಿ ಕರ್ನಾಟಕ ಏಕೀಕರಣ ಸಮ್ಮೇಳನವೂ ಸಹ ನಡೆಯಿತು. ಇಲ್ಲಿ ಏಕೀಕರಣಗೊಂಡ ನಂತರ ಕರ್ನಾಟಕದ ಹೊರಗುಳಿದ ಕನ್ನಡದ ಪ್ರದೇಶವನ್ನು ಪಡೆಯುವ ತೀರ್ಮಾನಕ್ಕೆ ಬರಲಾಯಿತು.

೧೯೫೬ರ ರಾಜ್ಯ ಪುನರ್‌ವಿಂಗಡನಾ ಆಯೋಗದ ಶಿಫಾರಸ್ಸಿನಂತೆ ಭಾರತದ ಭೂಪಟದಲ್ಲಿ ಅನೇಕ ಗಡಿ ಹೊಂದಾಣಿಕೆಗಳು ಭಾಷಾವಾರು ಪ್ರಾಂತಗಳ ರಚನೆಯ ಮೂಲಕ ಇತ್ಯರ್ಥವಾದವೆಂದುಕೊಂಡವು. ಅದರಂತೆ ನ್ಯಾಯ ಅನ್ಯಾಯಗಳನ್ನು ಪರಿಗಣಿಸದಂತೆ ಭಾರತದ ಅನೇಕ ರಾಜ್ಯಗಳು ಪುನರ್‌ವಿಂಗಡನಾ ಆಯೋಗದ ಶಿಫಾರಸ್ಸುಗಳನ್ನು ಮನ್ನಿಸಿ ಅಂದು ಜಾರಿಗೆ ತಂದ ಕಾನೂನಿಗೆ ತಲೆಬಾಗಿದವು. ರಾಷ್ಟ್ರೀಯ ಪುನರ್‌ವಿಂಗಡನಾ ಆಯೋಗದ ಶಿಫಾರಸ್ಸಿನಿಂದಾಗಿ ಕರ್ನಾಟಕಕ್ಕೆ ಆದ ನಷ್ಟ ತುಂಬದಿದ್ದರೂ ಅದನ್ನು ಮೊದಲು ಸ್ವಾಗತಿಸಿದ್ದು ಕರ್ನಾಟಕವೇ ಎಂಬುದು ಇಲ್ಲಿ ಸ್ಮರಣೀಯವಾಗಿದೆ.

ಆದರೆ ನೆರೆಯ ಮಹಾರಾಷ್ಟ್ರ ಎಂದಿನಂತೆ ದುರಾಗ್ರಹದ ಬೇಡಿಕೆಗಳನ್ನು ಮುಂದಿಟ್ಟಿತು. ಸಂವಿಧಾನಾತ್ಮಕವಾದ ಘಟನೆಯನ್ನು ಅವಮಾನಗೊಳಿಸಿತು. ಪ್ರಪಂಚದಲ್ಲಿಯೇ ಬೃಹತ್ ಪ್ರಜಾಪ್ರಭುತ್ವದ ಉನ್ನತ ಮಟ್ಟದ ಸಂಕೇತವಾದ ಲೋಕಸಭೆಯ ಅಂತಿಮ ತೀರ್ಮಾನವನ್ನು ಧಿಕ್ಕರಿಸಿತು. ಇಷ್ಟೇ ಅಲ್ಲದೆ ತನ್ನ ಕಿಡಿಗೇಡಿತನದ ಮೂಲಕ ಕರ್ನಾಟಕದ ಕೆಲ ಭಾಗಗಳನ್ನು ಇಂದಿಗೂ ಕಬಳಿಸಲು ಕಂಕಣತೊಟ್ಟು ನಿಂತಿರುವುದು ನಾಡಿನ ಸ್ವಾಭಿಮಾನಿಗಳಿಗೆ ದುಃಖದ ಜೊತೆಗೆ ಸ್ವಾಭಿಮಾನ ತರುವ ಸಂಗತಿಯಾಗಿದೆ.

ರಾಷ್ಟ್ರೀಯ ಪುನರಚನಾ ಆಯೋಗದ ವಿರುದ್ಧ ಮಹಾರಾಷ್ಟ್ರೀಯರ ಪ್ರತಿಭಟನೆ ಮುಗಿಲು ಮುಟ್ಟುತ್ತಿದ್ದಂತೆ ಮೊದಲು ಸುಮ್ಮನಿದ್ದಂತಹ ಕರ್ನಾಟಕ ತನ್ನ ನೆಲದ ಉಳಿವಿಗಾಗಿ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆಯನ್ನು ನಡೆಸಲಾರಂಭಿಸಿತು. ಇದರಿಂದಾಗಿ ಮಹಾ ರಾಷ್ಟ್ರೀಯರು ೧೯೬೬ರಲ್ಲಿ ಮುಂಬೈಯ ಮುಖ್ಯಮಂತ್ರಿಗಳ ಸರಕಾರಿ ನಿವೇಶನದ ಆವರಣದಲ್ಲಿ ಆಮರಣಾಂತರ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ಕಾಂಗ್ರೆಸ್ಸೇತರೊಬ್ಬರನ್ನು ಕೂರಿಸುವ ನಾಟಕ ಹೂಡಿತು. ಮಹಾರಾಷ್ಟ್ರೀಯರ ಈ ಆಮರಣಾಂತ ಉಪವಾಸಕ್ಕೆ ಹೆದರಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ಅಲ್ಲಿಗೆ ಭೇಟಿ ನೀಡುವಂತೆಯೂ ಮಾಡಿತು. ಅಂದು ಪ್ರಧಾನಿಯವರು ಮಹಾರಾಷ್ಟ್ರೀಯರಿಗೆ ನೀಡಿದ ಆಶ್ವಾಸನೆ ಎಂದರೆ ಗಡಿ ಸಮಸ್ಯೆಯನ್ನು ಬಗೆಹರಿಸಲು ಏಕಸದಸ್ಯ ಆಯೋಗವೊಂದನ್ನು ರಚಿಸಲಾಗುವುದು. ಪ್ರಧಾನಿಯವರ ನಿಲುವಿಗೆ ಅಂದು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಂತಹ ವಿ.ಪಿ.ನಾಯಕ್ ಸಂಪೂರ್ಣ ಒಪ್ಪಿಗೆ ನೀಡಿದರು. ಅಷ್ಟೇ ಅಲ್ಲದೇ ಆಯೋಗವು ನೀಡುವ ತೀರ್ಮಾನಕ್ಕೆ ಸಂಪೂರ್ಣ ಬದ್ಧರಿರುವುದಾಗಿಯೂ ಹೇಳಿದರು. ಕರ್ನಾಟಕವೂ ಸಹ ಈ ತೀರ್ಮಾನಕ್ಕೆ ಒಪ್ಪಿಕೊಂಡಿತು. ಈ ಎರಡು ರಾಜ್ಯಗಳ ಒಪ್ಪಿಗೆಯ ಜೊತೆಗೆ ಕೇರಳ, ಆಂಧ್ರ, ತಮಿಳುನಾಡಿನ ಗಡಿ ಸಮಸ್ಯೆಗೆ ಸೂಕ್ತ ಉತ್ತರ ದೊರಕಿಸಲು ರಚನೆಗೊಂಡಂತಹ ಏಕಸದಸ್ಯ ಆಯೋಗವೇ ಮೆಹರ್ ಚಂದ್ ಮಹಾಜನ್ (ಮಹಾಜನ್ ಆಯೋಗ) ಆಯೋಗ. ಇದು ೧೯೬೬ನೆಯ ಅಕ್ಟೋಬರ್ ೨೫ರಂದು ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.

ಬೆಳಗಾವಿ ಕಾರವಾರಗಳನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸುವ ಔದಾರ್ಯವನ್ನು ಮಹಾಜನ್ ಅವರು ತೋರಬಹುದೆಂಬ ಆಸೆಯಿಂದ ಮಹಾರಾಷ್ಟ್ರದ ಪ್ರತಿಯೊಬ್ಬ ರಾಜಕೀಯ ಮುಖಂಡರೂ ಸಹ ಮಹಾಜನ್ ಅವರ ಮೇಲೆ ಪ್ರಭಾವವನ್ನು ಬೀರಲು ಪ್ರಯತ್ನಿಸಿದರು. ಇದೇ ವೇಳೇಗೆ ರಾಜ್ಯ ಪುನರ್‌ವಿಂಗಡನಾ ಆಯೋಗದ ವರದಿಗೆ ಅಸಂಗತವಾದ ರೀತಿಯಲ್ಲಿ ಕೆಲವು ಸಣ್ಣ – ಪುಟ್ಟ ಗಡಿ ಹೊಂದಾಣಿಕೆಗಳನ್ನು ಮಹಾಜನ್ ಆಯೋಗವು ಸೂಚಿಸಿತು. ಮಹಾಜನ್ ಅವರು ವರದಿಯನ್ನು ಸಿದ್ಧಪಡಿಸಲು ಸಂಬಂಧಪಟ್ಟ ಗಡಿ ಪ್ರದೇಶಗಳಲ್ಲಿ ಸಂಚರಿಸಿದಾಗ ೮೫೭೨ ಜನರಿಂದ ಸಂದರ್ಶನ ಪಡೆದು ೩೨೪೦ ಬೇಡಿಕೆಗಳನ್ನು ಸ್ವೀಕರಿಸಿದರು. ಅಂತಿಮವಾಗಿ ನಿರ್ಣಯಿಸಿದ ತಮ್ಮ ವರದಿಯ ಪ್ರತಿಯನ್ನು ೧೯೬೭ನೆಯ ಆಗಸ್ಟ್ ೨೮ರಂದು ಕೇಂದ್ರ ಸರ್ಕಾರಕ್ಕೆ ಒಪ್ಪಿಸಿದರು. ಸುಮಾರು ಮೂರು ತಿಂಗಳುಗಳ ಕಾಲ ಮೂಲೆಯಲ್ಲಿಯೇ ಬಿದ್ದಿದ್ದಂತಹ ವರದಿಯು ಮಹಾರಾಷ್ಟ್ರೀಯರ ಒತ್ತಾಯದ ಮೇರೆಗೆ ೧೯೬೭ನೆಯ ನವೆಂಬರ್ ೪ ರಂದು ಪ್ರಕಟವಾಯಿತು. ವರದಿಯಲ್ಲಿ ಕರ್ನಾಟಕಕ್ಕೆ ಅನೇಕ ಹಾನಿಗಳಾಗಿದ್ದರೂ ಸಹ ಕೊಟ್ಟ ಭಾಷೆಗೆ ತಪ್ಪಬಾರದೆಂಬ ಸದುದ್ದೇಶದಿಂದ ಕರ್ನಾಟಕವು ವರದಿಯನ್ನು ಸ್ವಾಗತಿಸಿತು. ಆದರೆ ನೆರೆಯ ಮಹಾರಾಷ್ಟ್ರವು ಮತ್ತೆ ಕಾಳಸರ್ಪದಂತೆ ಹೆಡೆಯೆತ್ತಿ ನಿಂತಿತ್ತು. ಮುಷ್ಕರ, ಪ್ರತಿಭಟನೆ, ಸಭೆ, ಮೆರವಣಿಗೆ, ಘೇರಾವೋ, ಗೂಂಡಾಗಿರಿ, ಅವಾಚ್ಯ ಘೋಷಣೆ ಹಾಗೂ ಅವಿವೇಕತನದ ಪ್ರದರ್ಶನಕ್ಕೆ ಅನುವು ಮಾಡಿ ಶಿವಸೇನೆಯನ್ನು ಎತ್ತಿ ಕಟ್ಟುವ ಮೂಲಕ ಕನ್ನಡಿಗರನ್ನು ಕನ್ನಡದ ನೆಲದಲ್ಲಿಯೇ ಚಿತ್ರಹಿಂಸೆಗ ಗುರಿ ಮಾಡಿತು. ಬೇಳಗಾವಿ – ಕಾರವಾರಗಳನ್ನು ಮಹಾರಾಷ್ಟ್ರಕ್ಕೆ ಸೇರಿಸದ ವರದಿಗೆ ಹಾಗೂ ವ್ಯಕ್ತಿಗೆ ಧಿಕ್ಕಾರ ಎಂದು ಸತ್ಯಕ್ಕೆ ಅಪ್ಪಟ ಚರಮಗೀತೆ ಹಾಡಿತು. ಇಷ್ಟೇ ಅಲ್ಲದೇ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕ ಸದಸ್ಯದ ಆಯೋಗದ ತೀರ್ಪನ್ನೂ ಒಪ್ಪುವುದಲ್ಲದೇ ಕೇಂದ್ರ ಸರ್ಕಾರವು ಸಹ ಅದನ್ನು ಅನುಷ್ಠಾನಕ್ಕೆ ತರಬೇಕೆಂದು ಹೇಳಿಕೆ ನೀಡಿದ್ದರೂ, ಅವರೇ ಬೆಳಗಾವಿ ಮತ್ತು ಕಾರವಾರಗಳು ತಮಗೆ ದೊರಕಲಿಲ್ಲವೆಂಬ ಕಾರಣದಿಂದ ನಾಗಪುರದಲ್ಲಿ ನಡೆದ ಶಾಸನಸಭೆಯ ಉಭಯ ಅಧೀವೇಶನದಲ್ಲಿ ಮಹಾಜನ್ ಆಯೋಗದ ವರದಿಯನ್ನು ತಿರಸ್ಕರಿಸುವ ನಿರ್ಣಯವನ್ನು ಮಂಡಿಸಿದ್ದು ಅವರ ಹೊಣೆಗೇಡಿತನವಾಗಿತ್ತು.

ಏಕ ಸದಸ್ಯ ಆಯೋಗದ ಮುಂದೆ ಕರ್ನಾಟಕವು ಮಹಾರಾಷ್ಟ್ರದಿಂದ ೫೧೬ ಹಳ್ಳಿಗಳು ಬರಬೇಕೆಂದು ಬೇಡಿಕೆ ಸಲ್ಲಿಸಿತ್ತು. ಆದರೆ ಮಹಾರಾಷ್ಟ್ರದಿಂದ ಮಹಾರಾಷ್ಟ್ರೀಯರೇ ಸ್ವಯಂ ನಿರ್ಣಯದ ಆಧಾರದ ಮೇಲೆ ೨೧೬ ಹಳ್ಳಿಗಳನ್ನು ಬಿಟ್ಟುಕೊಡಲು ಒಪ್ಪಿದ್ದರು. ಆದರೆ ಆಯೋಗದ ಶಿಫಾರಸ್ಸಿನ ಅನ್ವಯ ೨೧೬ ಹಳ್ಳಿಗಳು ಮಾತ್ರ ಕರ್ನಾಟಕಕ್ಕೆ ಪುನರ್‌ ವಿಲೀನಗೊಳ್ಳಲು ಶಿಫಾರಸ್ಸಾಗಿ, ಸೊಲ್ಲಾಪುರ ನಗರವನ್ನು ಒಳಗೊಂಡು ೨೫೬ ಹಳ್ಳಿಗಳ ಪ್ರಶ್ನೆಯನ್ನು ಕೈ ಬಿಡಲಾಗಿರುವುದು ತಿಳಿದಿರುವ ವಿಷಯವೆ. ಪರಿಸ್ಥಿತಿಯು ಮೇಲಿನ ರೀತಿಯಲ್ಲಿದ್ದರೂ ಆಯೋಗವು ಶಿಫಾರಸ್ಸು ಮಾಡದೇ ಇರುವ ಕಾರಣ ಕರ್ನಾಟಕವು ಆ ಪ್ರಶ್ನೆಯನ್ನು ಎತ್ತಲಿಲ್ಲ. ಆದರೆ ಮಹಾರಾಷ್ಟ್ರವು ಕಾರವಾರನಗರ ಪೂರ್ಣ ಮತ್ತು ೩೦೦ ಹಳ್ಳಿಗಳು, ಸೂಪಾ ಹಾಗೂ ಹಳಿಯಾಳ ಪ್ರದೇಶಗಳು ತಮಗೆ ಸೇರಬೇಕೆಂದು ಬೇಡಿಕೆ ಸಲ್ಲಿಸಿತು. ಭಾಷೆಯ ದೃಷ್ಠಿಯಿಂದ ಈ ಭಾಗದಲ್ಲಿ ಕೊಂಕಣಿ ಮಾತನಾಡುವವರಿದ್ದರೂ ಸಹ ಕೊಂಕಣಿ ಭಾಷೆಯನ್ನು ಮರಾಠಿ ಭಾಷೆಯ ಒಂದು ಉಪಭಾಷೆಯೆಂದು ಪರಿಗಣಿಸಿ ಆ ಭಾಗವನ್ನೆಲ್ಲಾ ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಮೊಂಡುವಾದವನ್ನು ಹೂಡಿತ್ತು. ಆದರೆ ಆಯೋಗವು ಕೊಂಕಣಿ ಭಾಷೆಯು ಮರಾಠಿ ಭಾಷೆಯ ಉಪಭಾಷೆಯಲ್ಲ ಅದೊಂದು ಸ್ವತಂತ್ರ ಭಾಷೆ ಎಂದು ನಿರ್ಣಯಿಸಿತ್ತಲ್ಲದೆ, ಜಾತಿವಾದಿತ್ವದ ಹಾಗೂ ಭಾಷಾ ದುರಭಿಮಾನದ ಪ್ರಶ್ನೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿತು. ನಂತರ ಮಹಾರಾಷ್ಟ್ರವು ಕೇಳಿದಂತಹ ೮೧೪ ಹಳ್ಳಿಗಳಲ್ಲಿ ೫೧೩ ಹಳ್ಳಿಗಳ ಪ್ರಶ್ನೆ ಇತ್ಯರ್ಥವಾಗದೇ ಉಳಿದು ನಿಪ್ಪಾಣಿಯನ್ನೊಳಗೊಂಡ ೨೬೨ ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸುವ ಶಿಫಾರಸ್ಸು ಮಾಡಿತ್ತು.

ನಿಪ್ಪಾಣಿ ನಗರವು ಕರ್ನಾಟಕದ ಅತ್ಯಂತ ಹೆಚ್ಚಿನ ಆದಾಯವನ್ನು ತರುವ ನಗರಗಳಲ್ಲೊಂದಾಗಿದೆ. ನಿಪ್ಪಾಣಿ ಹಾಗೂ ಅದರ ಸುತ್ತ ಮುತ್ತಲಿನ ಪ್ರದೇಶವು ಅತ್ಯಂತ ಫಲವತ್ತಾದ ಭೂಮಿಯನ್ನೊಳಗೊಂಡಿದ್ದು ತಂಬಾಕು ಬೆಳೆಗೆ ಭಾರತದಲ್ಲಿಯೇ ಹೆಸರುವಾಸಿಯಾಗಿದೆ. ಇಲ್ಲಿ ಉತ್ಕಷ್ಟ್ರವಾಗಿ ಬೆಳೆಯುವ ಅರಿಶಿಣ, ತಂಬಾಕು, ಮೆಣಸಿನಕಾಯಿ, ಕಬ್ಬು ಕರ್ನಾಟಕದ ಯಾವ ಭಾಗಗಳಲ್ಲಿಯೂ ಬೆಳೆಯಲು ಸಾಧ್ಯವಾಗಿರುವುದಿಲ್ಲ. ಇದರಿಂದಾಗಿಯೇ ಮೇಲಿನ ಪದಾರ್ಥಗಳ ವಹಿವಾಟಿನಲ್ಲಿ ಇಂದಿಗೂ ಸಹ ನಿಪ್ಪಾಣಿ ನಗರವು ಭಾರತದಲ್ಲಿಯೇ ಒಂದು ಅತ್ಯಂತ ದೊಡ್ಡ ವ್ಯಾಪಾರಿ ಸ್ಥಳವೆಂದು ಹೆಸರು ಪಡೆದಿದೆ. ಈ ಭಾಗದಲ್ಲಿ ಆಯೋಗವು ಮಹಾರಾಷ್ಟ್ರಕ್ಕೆ ವರ್ಗಾಯಿಸುವಂತೆ ಸೂಚಿಸಿರುವ ನಾಗಪುರ ಮತ್ತು ಬೆಳಗಾವಿ ತಾಲ್ಲೂಕುಗಳ ಹಳ್ಳಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಹಾಗೂ ಕಬ್ಬನ್ನು ಬೆಳೆಯಲಾಗುತ್ತದೆ. ಆಯೋಗದ ಶಿಫಾರಸ್ಸಿನಂತೆ ಈ ಭಾಗಗಳನ್ನು ಮಹಾರಾಷ್ಟ್ರಕ್ಕೆ ಕೊಟ್ಟಿದ್ದೇ ಆದರೆ ಕರ್ನಾಟಕಕ್ಕೆ ತುಂಬ ಹಾನಿಯುಂಟಾಗುತ್ತದೆ ಎಂದು ವಿಷಾದದಿಂದಲೇ ಹೇಳಬೇಕಾಗಿದೆ. ಮಹಾಜನ್ ಅವರು ತಮ್ಮ ವರದಿಯಲ್ಲಿ ಈ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಲು ಶಿಫಾರಸ್ಸು ಮಾಡಿದ್ದಾರೆ.

ಇಂದು ನಾವು ಕರ್ನಾಟಕದ ಗಡಿ ಸಂಬಂಧಿತ ಚಳುವಳಿಗೆ ಸಂಬಂಧಿಸಿದಂತೆ ಬರೆಯುವಾಗ ಪ್ರಮುಖವಾಗಿ ಎರಡು ಅಂಶಗಳನ್ನು ಗಮನಿಸಬೇಕಾಗುತ್ತದೆ. ಅವುಗಳೆಂದರೆ,

೧. ಪ್ರಾಕೃತಿಕವಾಗಿ ಹಾಗೂ ಭಾವನಾತ್ಮಕವಾಗಿ ಕರ್ನಾಟಕದಲ್ಲಿಯೇ ಇರುವ, ಕೆಲವು ರಾಜಕಾರಣಿಗಳ ಸ್ವಾರ್ಥದಿಂಧ ನೆರೆಯ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಚಳುವಳಿ ನಡೆಸುತ್ತಿರುವ ಬೆಳಗಾವಿಯಂತಹ ಗಡಿ ಪ್ರದೇಶ.

೨. ಶತಮಾನಗಳ ಇತಿಹಾಸವನ್ನು ತಿರುಗಿಸಿದರೆ ಅಂದಿನಿಂದಲೂ ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದಂತಹ ಕಾಸರಗೋಡು ಕೇರಳಕ್ಕೆ ಸೇರಿಸಿರುವುದನ್ನು ವಿರೋಧಿಸಿ, ಕರ್ನಾಟಕಕ್ಕೆ ಸೇರಿಸಬೇಕೆಂದು ಹೋರಾಡುತ್ತಿರುವ ಕಾಸರಗೋಡು, ಆದವಾನಿ, ಆಲೂರು, ಮಡಕಶಿರಾ, ರಾಯದುರ್ಗಗಳಂಥ ಕನ್ನಡ ಗಡಿ ಪ್ರದೇಶಗಳಿಗೆ ಸಂಬಂಧಿಸಿದ ವಿಚಾರ.

ಮೇಲಿನ ವಿಚಾರಗಳಿಂದ ತಿಳಿದುಬರುವುದು, ಇರುವುದನ್ನು ಉಳಿಸಿಕೊಳ್ಳುವ ಜಾಣ್ಮೆಯೊಂದಾದರೆ, ಬರಬೇಕಾದುದನ್ನು ಪಡೆದುಕೊಳ್ಳುವ ಧೀಮಂತ ಸಾಹಸ ಇನ್ನೊಂದು ಕಡೆ ಎಂಬುದು. ಈ ಎರಡು ಸಫಲತೆಯನ್ನು ಪಡೆಯಲು ಕನ್ನಡಿಗರಾದ ನಾವು ತುಂಬ ಎಚ್ಚರಿಕೆಯಿಂದಲೂ ಬುದ್ಧಿವಂತಿಕೆಯಿಂದಲೂ ಶಕ್ತಿಮೀರಿ ಕಾರ್ಯಪೃವತ್ತರಾಗುವುದು ಆವಶ್ಯಕವಾಗಿದೆ. ಈ ಸಮಸ್ಯೆಗಳು ಹೆಚ್ಚಾಗಿ ರಾಜಕೀಯಕ್ಕೆ ಹತ್ತಿರವಾದದ್ದು. ಇದು ಯಾವುದೇ ಸನ್ನಿವೇಶದಲ್ಲಿಯೂ ರಾಜಕೀಯದಿಂದ ಭಿನ್ನವಾಗಿರುವುದಿಲ್ಲ. ಈ ದೃಷ್ಟಿಯಿಂದ ನಮ್ಮ ರಾಜಕಾರಣಿಗಳು ಪ್ರತಿಯೊಂದು ಸನ್ನಿವೇಶದಲ್ಲಿಯೂ ಮಹತ್ವದ ನಿರ್ಣಯ ಕೈಗೊಂಡು ಮುನ್ನಡೆಯಬೇಕಾಗಿದೆ. ಮಹಾಜನ್ ವರದಿಯೇ ಅಂತಿಮವೆಂದು ಹೇಳುತ್ತಿರುವ ಕರ್ನಾಟಕ, ಇದಕ್ಕೆ ಸಂಬಂಧಿಸಿದ ಪೂರಕ ಮಾಹಿತಿಯನ್ನು ಸಂಗ್ರಹಿಸಿ ಗಡಿನಾಡಿನ ಜನರಲ್ಲಿ ಅರಿವಿನ ಕಾರ್ಯಕ್ರಮ ಮಾಡುವ ಅಗತ್ಯವಿದೆ. ಕೇವಲ ರಾಜಕಾರಣಿಗಳು ವಿಧಾನಸೌಧದಲ್ಲಿ ಕುಳಿತು ಮಹಾಜನ್ ವರದಿ ಅಂತಿಮ ಎಂದರೆ ಸಾಲದು. ಇದಕ್ಕೆ ಆ ಭಾಗದ ನಾಡಿನ ಜನರ ಧ್ವನಿ ಸೇರಿದಾಗ ಅದಕ್ಕೆ ಹೆಚ್ಚಿನ ಮಹತ್ವ ಬರುತ್ತದೆ.

ಹೈದರಾಬಾದ್ ಕರ್ನಾಟಕದ ಹೋರಾಟ

ಹೈದರಾಬಾದ್ ಕರ್ನಾಟಕಕ್ಕೆ ಸೇರಿದ ಕಲ್ಬುರ್ಗಿ, ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಪ್ರದೇಶಗಳು ಚಾರಿತ್ರಿಕ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕವಾಗಿ ಪ್ರಖ್ಯಾತವಾದ ಪ್ರದೇಶಗಳು. ಬೀದರ್ ಜಿಲ್ಲೆಯಲ್ಲಿ ಕಲ್ಯಾಣ (ಇಂದಿನ ಬಸವ ಕಲ್ಯಾಣ) ವು ಚಾಲುಕ್ಯ ಚಕ್ರವರ್ತಿಗಳ ರಾಜಧಾನಿಯಾಗಿತ್ತು. ವಿಶ್ವಧರ್ಮ ಪ್ರತಿಪಾದಕ ಬಸವಣ್ಣನ ಕರ್ಮಭೂಮಿ ಕಲ್ಯಾಣ. ಕಲ್ಬುರ್ಗಿ ಜಿಲ್ಲೆಯ ಮಳಖೇಡವು ರಾಷ್ಟ್ರಕೂಟ ಸಾಮ್ರಾಟರ ರಾಜಧಾನಿ. ಕನ್ನಡದ ಪ್ರಥಮ ಗ್ರಂಥವೆಂದು ಕರೆಸಿಕೊಂಡಿರುವ ಕವಿರಾಜಮಾರ್ಗದ ಕರ್ತೃ ಶ್ರೀ ವಿಜಯ ಹಾಗೂ ಆಶ್ರಯದಾತ ನೃಪತುಂಗ ಮಹಾರಾಜನ ಕೇಂದ್ರ ಸ್ಥಾನವಾಗಿತ್ತು. ರಾಷ್ಟ್ರಕೂಟರ ಚಕ್ರವರ್ತಿಗಳಾದಂತಹ ಧ್ರುವ, ಗೋವಿಂದ, ಕೃಷ್ಣ ಮೊದಲಾದವರು ಕನ್ನಡನಾಡಿನ ಗಡಿಯನ್ನು ಹಿಮಾಲಯದವರೆಗೂ ವಿಸ್ತರಿಸಿದ್ದು ತಿಳಿದುಬರುತ್ತದೆ. ಕೊಪಣ ನಗರವು (ಇಂದಿನ ಕೊಪ್ಪಳ) ಕನ್ನಡದ ಗಂಡು ಮೆಟ್ಟಾಗಿತ್ತೆಂದು ಹೇಳಬಹುದು. ಈ ಪ್ರದೇಶವು ಅಚ್ಚಗನ್ನಡ ಚಕ್ರವರ್ತಿಗಳ ಅಚ್ಚುಮೆಚ್ಚಿನ ನಾಡಾಗಿತ್ತು.

ಈ ಮೇಲಿನ ಇತಿಹಾಸದಿಂದ ಕರ್ನಾಟಕದ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಈ ಪ್ರದೇಶದ ಕೊಡುಗೆಯನ್ನು ಕುರಿತು ಚರ್ಚಿಸುವುದು ಅವಶ್ಯಕವಾಗಿದೆ. ಭಾರತವು ಸ್ವತಂತ್ರವಾದ ನಂತರ ಹೈದರಾಬಾದ್ ವಿಮೋಚನೆಯ ಹೋರಾಟವನ್ನು ಈ ಭಾಗದ ಜನರು ನಡೆಸಬೇಕಾಯಿತು. ಹೈದರಾಬಾದ್ ವಿಲೀನದ ಆಂದೋಲನದಲ್ಲಿ ಈ ಭಾಗದ ಜನರು ಪ್ರಮುಖ ಪಾತ್ರವನ್ನು ವಹಿಸಿದರು. ಹೈದರಾಬಾದಿನಲ್ಲಿ ೧೯೫೪ರಲ್ಲಿ ಜರುಗಿದಂತಹ ಅಖಿಲ ಕರ್ನಾಟಕದ ವಿದ್ಯಾರ್ಥಿ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾದ ಅನ್ನದಾನಯ್ಯ ಪುರಾಣಿಕರು ಈ ಭಾಗದವರು. ಹೈದರಾಬಾದ್ ವಿಮೋಚನಾ ಹೋರಾಟ ನೇತಾರರಾಗಿ ಹಾಗೂ ಏಕೀಕರಣ ನಂತರ ನೆರೆಯ ಮಹಾರಾಷ್ಟ್ರ ನಂತರ ಆಂಧ್ರ ಪ್ರದೇಶದಲ್ಲಿ ಸೇರಿದ ಕನ್ನಡ ಪ್ರದೇಶಗಳನ್ನು ಪಡೆಯಲು ನಡೆದಂತಹ ಚಳವಳಿಯ ಮುಖಂಡತ್ವವನ್ನು ಅಳವಂಡಿ ಶಿವಮೂರ್ತಿ, ಜನಾರ್ಧನ ದೇಸಾಯಿ, ಗುಡಗುಂಡಿ ರಾಮಾಚಾರ್ಯರು, ಕೃಷ್ಣಾಚಾರ ಜೋಶಿ, ಜಗನ್ನಾಥ ರಾವ್ ಚಂಡರಕಿ, ಅಣ್ಣರಾವ್‌ ಗಣಮುಖಿ, ವೈ.ವಿರೂಪಾಕ್ಷಪ್ಪ, ಚಂದ್ರಶೇಖರ ಪಾಟೀಲ, ರಾಂಪುರ, ಅಬ್ಬಗೇರಿ ವಿರೂಪಾಕ್ಷಪ್ಪ, ಸರ್ದಾರ ಶರಣಗೌಡರು, ವೀರೇಂದ್ರ, ಚಂದ್ರಶೇಖರ ಶಾಸ್ತ್ರಿ, ಮುದ್ನಾಳ, ಅವರಾದಿ, ಸೊಗವೀರಶರ್ಮ, ಗುರುಸಿದ್ಧ ಶಾಸ್ತ್ರಿ, ವೀರೇಶ್ವರ ಶಾಸ್ತ್ರಿ ಮೊದಲಾದವರ ಹೋರಾಟ ಸ್ಮರಣೀಯವಾದುದು. ಅಂದು ಆಂಧ್ರಕ್ಕೆ ಸೇರಲಿದ್ದ ಬೀದರ್ ಜಿಲ್ಲೆಯನ್ನು ಉಳಿಸಿ ಕರ್ನಾಟಕಕ್ಕೆ ಸೇರುವಂತೆ ಹೋರಾಡಿದವರಲ್ಲಿ ಆರ್.ವಿ. ಬೀಡಪ್, ಪ್ರಭುರಾವ್, ವಕೀಲ ಭೀಮಣ್ಣ ಖಂಡ್ರೆ, ಕಪ್ಪೀಕರ್ ಮೊದಲಾದ ಹೆಸರುಗಳನ್ನು ಸೂಚಿಸಬಹುದು.

ಉತ್ತರ ಕರ್ನಾಟಕದ ಗಡಿಭಾಗದಲ್ಲಿ ಕನ್ನಡ ಭಾಷೆಯನ್ನು ಪೋಷಿಸಿ ಬೆಳೆಸಲು ಹೆಚ್ಚಿನ ರೀತಿಯಲ್ಲಿ ಪ್ರಚಾರ ಮಾಡಿ, ಕನ್ನಡಿಗರಲ್ಲಿ ಜಾಗೃತಿಯನ್ನುಂಟು ಮಾಡಿದಂತಹ ಡಿ.ಕೆ.ಭೀಮಸೇನರಾವ್, ತವಗ ಭೀಮಸೇನರಾವ್, ಕಪಟರಾಳ ಕೃಷ್ಣರಾವ್, ಮಾನ್ವಿ ನರಸಿಂಗರಾವ್ ಹಾಗೂ ಸಿದ್ಧಯ್ಯ ಪುರಾಣಿಕ್, ಪಾಂಡುರಂಗರಾವ್ ದೇಸಾಯಿ ಮೊದಾದವರು ಬೀದರ್‌ನಲ್ಲಿ ‘ರೈತ ಪರಿಷತ್ತ’ನ್ನು ಸ್ಥಾಪಿಸಿಕೊಂಡು ಗಡಿ ನಿರ್ಣಯಕ್ಕಾಗಿಯೇ ಸರ್ಕಾರದಿಂದ ನೇಮಕಗೊಂಡಿದ್ದಹ ‘ಫಜಲ್ ಅಲಿ’ ಆಯೋಗದ ಎದುರಿಗೆ ಕರ್ನಾಟಕದ ಗಡಿ (ಅವರ ಮೇರೆಯ ಬಗ್ಗೆ) ಪ್ರದೇಶಗಳ ಬಗ್ಗೆ ವಾದ ಮಾಡಿರುವುದು ಕಂಡುಬರುತ್ತದೆ. ನಂತರ ಈ ರೈತ ಪರಿಷತ್ತನ್ನು ಬೆಳೆಸಿ ಪೋಷಿಸಿಕೊಂಡು ಕರ್ನಾಟಕ ಏಕೀಕರಣಕ್ಕೆ ಅಮೂಲ್ಯ ಕೊಡುಗೆ ನೀಡಲು ಕಾರಣರಾದಂತಹ ಈ ಭಾಗದ ಗಣ್ಯರು ಹಲವಾರು. ಇವರ ಸಕ್ರಿಯ ಪಾತ್ರದಿಂದ ಗಡಿನಾಡಿನಲ್ಲಿ ನಾಡಿನ ಬಗ್ಗೆ ಅರಿವುಂಟಾಗಿ ಕನ್ನಡ ನಾಡು ಇಂದು ಈ ಸ್ಥಿತಿಯಲ್ಲಿರುವಂತಾಯಿತು. ಅವರುಗಳೆಂದರೆ ಅಗಡಿ ಸಂಗಣ್ಣ, ಸಂಕ್ಲಾಪುರ, ಕೃಷ್ಣಾಚಾರ್ಯ, ಲಿಂಗಣ್ಣ, ಹಂಪೀಕರ, ಬಂಗಾರಶೆಟ್ಟಿ, ಬೇವೂರು, ವಿರೂಪಾಕ್ಷಯ್ಯ, ಇಟಗಿ ದೇಸಾಯಿ, ಮಧ್ವರಾವ್, ಶಸ್ತರಿ, ಗೋರೆಬಾಳ, ಅನ್ಸರಿ, ಜೋಶಿ, ಶಾಂತರಸ, ಗುರುಪಾದ ಮಠ ಮೊದಲಾದವರ ಶ್ರಮ ಅಮೂಲ್ಯವಾದುದು. ತಮ್ಮ ಕೀರ್ತನೆಯ ಮೂಲಕ ಕರ್ನಾಟಕದ ಗಡಿಯನ್ನು ಗುರುತಿಸುತ್ತಿದ್ದಂತಹ, ಅದರ ಮೂಲಕ ಈ ಭಾಗದ ಜನರಿಗೆ ಉಪದೇಶಿಸುತ್ತಿದ್ದಂತಹ ಪ್ರವಚನಾಚಾರ್ಯರಾದ ದಿ.ರಾಮಾಚಾರ್ಯ ಮತ್ತು ಲಿಂ. ಪಂಡಿತರತ್ನ ಕಲ್ಲಿನಾಥ ಶಾಸ್ತ್ರಿ ಪುರಾಣಿಕರು ಮೊದಲಾದವರು ಸೇವೆ ಅಮೂಲ್ಯವಾದುದು ಹಾಗೂ ಚರಿತ್ರೆಯಲ್ಲಿ ಸ್ಮರಣೀಯವಾದದ್ದು ಆಗಿದೆ.

ಕರ್ನಾಟಕ ಏಕೀಕರಣದ ನಂತರವೂ ಗಡಿಭಾಗ ಸಮಸ್ಯೆಯಾಗಿಯೇ ಉಳಿಯಿತು. ಕನ್ನಡದ ಗಡಿ ಸಮಸ್ಯೆಯನ್ನು ಬಗೆಹರಿಸುವಲ್ಲಿ ಹೈದರಾಬಾದ್ ಕರ್ನಾಟಕ ಪ್ರತ್ಯೇಕವಾಗಿ ನಡೆಯದೆ, ಚಳವಳಿಯನ್ನು ಮಹಾನ್ ಹೋರಾಟದ ಒಂದು ಭಾಗವಾಗಿ ಮುಂದುವರಿಸಿಕೊಂಡು ಬಂದಿತು. ಈ ಭಾಗದ ಕನ್ನಡ ಸಾಹಿತ್ಯ ಪರಿಷತ್ತಿನ ಮುಖಾಂತರ ಬೀದರ್, ಗುಲ್ಬರ್ಗಾ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ನಾಡಹಬ್ಬ ಹಾಗೂ ವಿಶೇಷ ಕಾರ‍್ಯಕ್ರಮಗಳ ಮೂಲಕ ಕನ್ನಡಿಗರಲ್ಲಿ ಜಾಗೃತಿಯನ್ನು ಉಂಟುಮಾಡಿದವರೆಂದರೆ ಮಾನ್ವಿ ನರಸಿಂಗರಾಯರು ಹಾಗೂ ಸಿದ್ಧಯ್ಯ ಪುರಾಣಿಕರು. ೧೯೪೮ರಲ್ಲಿ ಕಲ್ಬುರ್ಗಿಯಲ್ಲಿ ರೆವರೆಂಡ್ ಉತ್ತಂಗಿ ಚೆನ್ನಪ್ಪನವರ ಅಧ್ಯಕ್ಷತೆಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಜೊತೆಗೆ ಕರ್ನಾಟಕ ಏಕೀಕರಣ ಸಮ್ಮೇಳನವು ನಡೆಯಿತು. ಇಲ್ಲಿ ಗಡಿ ರಕ್ಷಣೆಗಾಗಿ

೧. ಕನ್ನಡ ಶಾಲೆಗಳನ್ನು ತೆರೆಯುವುದು.

೨. ಕನ್ನಡ ಪಾಠ ಮಾಡುವ ಶಿಕ್ಷಕರಿಗೆ ವಿಶೇಷ ಸೌಲಭ್ಯ ನೀಡುವುದು. ಉದಾಹರಣೆಗೆ ಉಚಿತ ಮನೆ, ಹೆಚ್ಚಿನ ಸಂಬಳ ಇತ್ಯಾದಿ.

೩. ಗಡಿನಾಡಿನ ಕನ್ನಡ ಜನತೆಗೆ ಕಡಿಮೆ ಬೆಲೆಯಲ್ಲಿ ದವಸ ಧಾನ್ಯ ಹಾಗೂ ಬಟ್ಟೆಗಳ ಸೌಲಭ್ಯವನ್ನು ಒದಗಿಸುವುದು.

೪. ಸರ್ಕಾರಿ ಆರೋಗ್ಯ ಕೇಂದ್ರ ತೆರೆದು ಉಚಿತವಾಗಿ ಔಷಧಿಗಳನ್ನು ವಿತರಿಸುವುದು. ಇತ್ಯಾದಿ ಮೂಲಭೂತ ಸೌಕರ್ಯ ಕುರಿತ ಬೇಡಿಕೆಯ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಈ ನಿರ್ಣಯಗಳ ಅನ್ವಯ ಗಡಿನಾಡಿನ ಅಭಿವೃದ್ಧಿಗೆ ಶ್ರಮಿಸಲು ಮುಂದಾಗಬೇಕೆಂದು ಸರ್ಕಾರಕ್ಕೆ ಸೂಚಿಸಲಾಯಿತು.

ಕರ್ನಾಟಕ ಮತ್ತು ಮಹಾರಾಷ್ಟ್ರ

ಮಹಾರಾಷ್ಟ್ರೀಯರ ಹಾಗೆ ನಾವು ನೋಡುವುದಾದರೆ ಮಜಾಜನ ವರದಿಯಂತೆ ಕರ್ನಾಟಕಕ್ಕೆ ಬರಬೇಕಾದ ಕನ್ನಡ ಗಡಿ ಭಾಗಗಳು ಸೊಲ್ಲಾಪುರದ ಪ್ರದೇಶದಲ್ಲಿಯೇ ಇವೆ. ಆದರೆ ನಾವು ಅವುಗಳನ್ನು ಪಡೆಯಲು ಉಗ್ರವಾದ ಹೋರಾಟ ಮಾಡುವುದಿರಲಿ, ಆ ಪ್ರದೇಶಗಳಿಗೆ ಹೊರನಾಡ ಕನ್ನಡ ಪ್ರದೇಶಗಳೆಂದು ಕರೆಯುತ್ತಿದ್ದೇವೆ. ಆದರೆ ಮಹಾರಾಷ್ಟ್ರೀಯರು ಕರ್ನಾಟಕದಿಂದ ತಮ್ಮದೆಂದು ಕೇಳುತ್ತಿರುವ ಪ್ರದೇಶಗಳಿಗೆ ಹೊರ ಮಹಾರಾಷ್ಟ್ರ ಎಂದು ಹೆಸರಿಡದೆ ‘ಸೀಮಾ’ ಭಾಗಗಳೆಂದು ಕರೆದುಕೊಳ್ಳುತ್ತಿದ್ದಾರೆ. (ಸೀಮಾ ಎಂದರೆ ಎಲ್ಲೆಯನ್ನು ಗುರುತಿಸುವ ಗೆರೆ ಗಡಿ, ಮೇರೆ. ಗಡಿಯನ್ನು ನಿರ್ದೇಶಿಸುವ ಸ್ಥಳದಲ್ಲಿರುವ ಹಳ್ಳ, ಹೊಲ ಮುಂತಾದವು. ಒಟ್ಟಾರೆ ಮೇರೆಯನ್ನು ಸೂಚಿಸುವ ರೇಖೆ ಎಂದರ್ಥ). ಇದೇ ನಮ್ಮ ಹಾಗೂ ಅವರ ದೃಷ್ಟಿಕೋನಗಳಿರುವ ಪ್ರಮುಖ ವ್ಯತ್ಯಾಸ.

ಅಕ್ಕಲಕೋಟೆ, ದಕ್ಷಿಣ ಸೊಲ್ಲಾಪುರ ಹಾಗೂ ಜತ್ ತಾಲ್ಲೂಕುಗಳು ಕರ್ನಾಟಕಕ್ಕೆ ಸೇರಬೇಕೆಂದು ಸ್ವತಃ ಮಹಾರಾಷ್ಟ್ರ ಸರ್ಕಾರವೇ ಒಪ್ಪಿಕೊಂಡಿರುವುದಲ್ಲದೇ ಮಹಾಜನ್ ವರದಿಯು ಕಾರ್ಯರೂಪಕ್ಕೆ ಬಂದರೆ ಮೇಲಿನ ಎಲ್ಲಾ ಭಾಗಗಳು ಸಹ ಕರ್ನಾಟಕಕ್ಕೆ ಸೇರಲಿವೆ. ಸೊಲ್ಲಾಪುರ ಜಿಲ್ಲೆಯಲ್ಲಿ ಸೊಲ್ಲಾಪುರ ನಗರ ಪೂರ್ಣವಾಗಿ ಕನ್ನಡ ಮಾತನಾಡುವವರ ಸಂಖ್ಯೆ ಇಂದಿಗೂ ನೂರಕ್ಕೆ ಎಪ್ಪತ್ತೈದರಷ್ಟು. ಆದುದರಿಂದ ಮಹಾರಾಷ್ಟ್ರೀಯರು ಸೊಲ್ಲಾಪುರ ನಗರವನ್ನು ಆ ತಾಲ್ಲೂಕಿನಿಂದ ಬೇರ್ಪಡಿಸಿ ನಗರ ಸುತ್ತಲೂ ಇರುವ ಸುಮಾರು ಇಪ್ಪತ್ತು ಗ್ರಾಮಗಳನ್ನು ನೆರೆ ತಾಲ್ಲೂಕಿನಲ್ಲಿನ ಮರಾಠಿ ಪ್ರಾಧಾನ್ಯವಿರುವ ನಲ್ವತ್ತು ಗ್ರಾಮಗಳೊಂದಿಗೆ ಸೊಲ್ಲಾಪುರ ನಗರವನ್ನು ಸೇರಿಸಿ ಅದಕ್ಕೆ ಉತ್ತರ ಸೊಲ್ಲಾಪುರ ತಾಲ್ಲೂಕೆಂದು ಹೆಸರಿಟ್ಟಿದ್ದಾರೆ. ಈ ರೀತಿಯಲ್ಲಿ ಮರಾಠಿಗರು ಕನ್ನಡದ ಪ್ರದೇಶಗಳನ್ನು ತನ್ನ ಪ್ರದೇಶವನ್ನಾಗಿ ಪರಿವರ್ತಿಸಿಕೊಳ್ಳಲು ಎಷ್ಟು ಬೇಗ ಸಾಧ್ಯವೋ ಅಷ್ಟೇ ಶೀಘ್ರವಾಗಿ ನಿರ್ಣಯಗಳನ್ನು ಬದಲಾಯಿಸಿಕೊಂಡು ಬರುತ್ತಿದ್ದಾರೆ. ಮೇಲಿನ ಎರಡು ತಾಲ್ಲೂಕುಗಳ ಆಡಳಿತ ಕಛೇರಿಗಳು ಇಂದಿಗೂ ಸೊಲ್ಲಾಪುರ ನಗರದಲ್ಲಿಯೇ ಇದೆ. ಇದರ ಉದ್ದೇಶವೆಂದರೆ ತಾಲ್ಲೂಕನ್ನು ಘಟಕವಾಗಿ ಪರಿವರ್ತಿಸಿದರೆ ಸೊಲ್ಲಾಪುರವು ಕರ್ನಾಟಕಕ್ಕೆ ಸೇರದಂತೆ ಎಚ್ಚರಿಕೆ ವಹಿಸುವುದು. ೧೯೫೬ರ ಭಾಷಾವಾರು ಪ್ರಾಂತ್ಯ ರಚನೆಯ ನಂತರ ಈ ನಗರಗಳಲ್ಲಿ ಕನ್ನಡದ ಬೇರನ್ನೇ ಕಿತ್ತು ಒಗೆಯುವ ಕೆಲಸ ನಡೆಯಿತು. ಇದಕ್ಕೆ ಸಾಕ್ಷಿಯಂತೆ ಇಲ್ಲಿ ಕೆಲವು ಪ್ರಮುಖ ಉದಾಹರಣೆಗಳನ್ನು ನೀಡಬಹುದು. ಸೊಲ್ಲಾಪುರದಲ್ಲಿ ಸ್ಥಾಪಿತವಾಗಬೇಕಾಗಿದ್ದಂತಹ ಇಂಜಿನಿಯರಿಂಗ್ ಕಾಲೇಜನ್ನು ಕಿತ್ತು ಸತಾರಾ ಜಿಲ್ಲೆಯ ಕರಾಡಕ್ಕೆ ಕೊಂಡೊಯ್ದರು. ಸರ್.ಎಂ.ವಿಶ್ವೇಶ್ವರಯ್ಯನವರು ಮುಂಬಯಿ ಸರಕಾರದ ಎಂಜಿನಿಯರ್ ಹುದ್ದೆಯಲ್ಲಿದ್ದಾಗ ಯೋಜಿತಗೊಂಡಿದ್ದಂತಹ ಅಕ್ಕಲಕೋಟೆ ತಾಲ್ಲೂಕಿನ ಬೋರಿನದಿಗೆ ಅಣೆಕಟ್ಟು ಕಟ್ಟುವುದನ್ನು ನಳದುರ್ಗಕ್ಕೆ ವರ್ಗಾಯಿಸಿದರು. ಏಕೆಂದರೆ ಈ ಯೋಜನೆಯಿಂದ ಸೊಲ್ಲಾಪುರದ ಎರಡು ಕನ್ನಡ ತಾಲ್ಲೂಕುಗಳು ಸಂಪೂರ್ಣವಾಗಿ ನೀರುಂಡು ಸಮೃದ್ಧವಾಗಿ ಬೆಳೆ ಕೊಡುವಂತಿದ್ದವು. ಇದನ್ನು ಅವರು ಸಹಿಸಿಕೊಳ್ಳಲಿಲ್ಲ. ಹಾಗೆಯೇ ಸೊಲ್ಲಾಪುರದ ರೈಲ್ವೆ ಭಾಗವು ಮೊನ್ನೆಯವರೆಗೆ ಸಿಕಂದರಾಬಾದ್ – ಹುಬ್ಬಳ್ಳಿ ವಿಭಾಗಗಳೊಂದಿಗೆ ಜೋಡಿಸಲಾಗಿತ್ತು. ಆದರೆ ಮಹಾರಾಷ್ಟ್ರೀಯರು ಅದನ್ನು ಕಿತ್ತು ಮುಂಬಯಿಯಿಂದ ಮಧ್ಯೆ ರೈಲ್ವೆ ವಿಭಾಗಕ್ಕೆ ಜೋಡಿಸಿಕೊಂಡರು. ಇಲ್ಲಿ ಸ್ಥಾಪಿಸಬೇಕೆಂದಿದ್ದಂತಹ ರೈಲ್ವೆ ಲೋಕೋಮೋಟಿವ್ ಕಾರ್ಖಾನೆಯನ್ನು ಪುಣೆಯ ಹತ್ತಿರದ ಧೊಂಡದಲ್ಲಿ ಪ್ರಾರಂಭಿಸಿದರು. ಇದಕ್ಕೆ ಪ್ರಮುಖ ಕಾರಣವೆಂದರೆ ಕನ್ನಡ ಪ್ರದೇಶವಾಗಿರುವ ಸೊಲ್ಲಾಪುರ ನಗರವನ್ನು ಮೂರನೇ ದರ್ಜೆಯ ನಗರವನ್ನಾಗಿ ಮಾರ್ಪಡಿಸುವುದು. ಅಧಿಕ ಸಂಖ್ಯೆಯಲ್ಲಿ ಕನ್ನಡಿಗರೇ ಇರುವ ಸೊಲ್ಲಾಪುರವು ಮುಂದೆ ಯಾವುದಾದರೂ ಆಯೋಗ ರಚನೆಯಾಗಿ ಅಥವಾ ಮಹಾಜನ್ ವರದಿ ಜಾರಿಗೆ ಬಂದರೆ ಕರ್ನಾಟಕಕ್ಕೆ ಸೇರಿಸಬಹುದೆಂಬ ಭಯದಿಂದ ಈ ರೀತಿ ಕೆಲಸ ಮಾಡುತ್ತಾ ಬರುತ್ತಿದ್ದಾರೆ. ಈಗಾಗಲೇ ಮಹಾಜನ್ ವರದಿಯ ಪ್ರಕಾರ ಸೊಲ್ಲಾಪುರ ಸಂಪೂರ್ಣವಾಗಿ ಕರ್ನಾಟಕಕ್ಕೆ ಸೇರಿಸಲು ಶಿಫಾರಸ್ಸಾಗಿರುತ್ತದೆ.

೧೯೭೦ – ೭೧ನೇ ಸಾಲಿನಲ್ಲಿ ಬೆಳಗಾವಿ – ಸೊಲ್ಲಾಪುರಗಳಲ್ಲಿ ಉಂಟಾದಂತಹ ಚಳವಳಿ ಅಂದು ಕರ್ನಾಟಕದ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರ ಸರ್ಕಾರಕ್ಕೆ ಒಂದು ಸವಾಲಾಗಿಯೇ ಮಾರ್ಪಟ್ಟಿತು. ಆಗ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳೆರಡಕ್ಕೂ ಮಾತುಕತೆಯು ನಡೆದು ಈ ಕೆಳಗಿನ ಪ್ರದೇಶಗಳನ್ನು ಬಿಟ್ಟುಕೊಡಬೇಕೆಂದು ಮಹಾರಾಷ್ಟ್ರವು ಕೇಳಿಕೊಂಡಿತು. ಆದರೆ ಅದು ಕೈಗೂಡಲು ಸಾಧ್ಯವಾಗಲಿಲ್ಲ. ಅಂದು ಮಂಡಿಸಿದಂತಹ ಮಹಾರಾಷ್ಟ್ರೀಯರ ಬೇಡಿಕೆಗಳೆಂದರೆ

೧. ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲ್ಲೂಕಿನ ೨೦,೩೬೮ ಜನಸಂಖ್ಯೆ ಇರುವಂತಹ ೮೪ ಹಳ್ಳಿಗಳು

೨. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ೯೬,೯೨೦ ಜನಸಂಖ್ಯೆಯುಳ್ಳ ೨೦೬ ಹಳ್ಳಿಗಳು

೩. ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ೫೦,೬೭೦ ಜನಸಂಖ್ಯೆಯುಳ್ಳ ೧೦ ಗ್ರಾಮಗಳು

೪. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ೧,೮೬,೬೦೧ ಜನಸಂಖ್ಯೆಯುಳ್ಳ ೪೧ ಹಳ್ಳಿಗಳು

೫. ಬೆಳಗಾವಿ ಜಿಲ್ಲೆಯ ಹಿಕ್ಕೇರಿ ತಾಲ್ಲೂಕಿನ ೩೦,೪೨೦ ಜನಸಂಖ್ಯೆಯುಳ್ಳ ೧೮ ಹಳ್ಳಿಗಳು

೬. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ೯೦,೯೦೨ ಜನಸಂಖ್ಯೆಯುಳ್ಳ ೫೦ ಹಳ್ಳಿಗಳು

೭. ಉತ್ತರ ಕನ್ನಡ ಜಿಲ್ಲೆಯ ಸೂಪಾ ತಾಲ್ಲೂಕಿನ ೨೮,೫೪೧ ಜನಸಂಖ್ಯೆಯುಳ್ಳ ೨೦ ಹಳ್ಳಿಗಳು.

೮. ಬೀದರ್ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ೫೦,೩೦೩ ಜನಸಂಖ್ಯೆಯುಳ್ಳ ೨೮ ಹಳ್ಳಿಗಳು

೯. ಬೀದರ್ ಜಿಲ್ಲೆಯ ಬಾಲ್ಕಿ ತಾಲ್ಲೂಕಿನ ೭೬,೯೨೮ ಜನಸಂಖ್ಯೆಯುಳ್ಳ ೪೯ ಹಳ್ಳಿಗಳು

೧೦. ಬೀದರ್ ಜಿಲ್ಲೆಯ ಸಂತಪುರ ತಾಲ್ಲೂಕಿನ ೬೯,೯೯೬ ಜನಸಂಖ್ಯೆಯುಳ್ಳ ೬೯ ಹಳ್ಳಿಗಳು

೧೧. ಗುಲ್ಬರ್ಗಾ ಜಿಲ್ಲೆಯ ಆಳಂದಾ ತಾಲ್ಲೂಕಿನ ೬೯೭೮ ಜನಸಂಖ್ಯೆಯುಳ್ಳ ೮ ಹಳ್ಳಿಗಳು

ಕರ್ನಾಟಕಕ್ಕೆ ಮಹಾರಾಷ್ಟ್ರೀಯರು ತಾವಾಗಿಯೇ ಬಿಟ್ಟುಕೊಡಲು ಒಪ್ಪಿಗೆ ನೀಡಿದಂತಹ ಪ್ರದೇಶಗಳು ಕೆವಲ ಬಂಜರು ಭೂಮಿಗಳು ಮಾತ್ರ. ಇವು ಸದ್ಯಕ್ಕೆ ಯಾವುದೇ ರೀತಿಯ ಪ್ರಯೋಜನಕ್ಕೂ ಬಾರದ ಪ್ರದೇಶಗಳೆಂದು ಸರ್ವೇಕ್ಷಣೆಯಿಂದ ತಿಳಿದು ಬಂದಿದೆ. ಪ್ರತಿವರ್ಷವು ಬರಗಾಲಕ್ಕೆ ಒಳಗಾಗುತ್ತಿರುವ ಈ ಪ್ರದೇಶಗಳೆಂದರೆ ,

೧. ಸೊಲ್ಲಾಪುರ ಜಿಲ್ಲೆಯ ಸೊಲ್ಲಾಪುರ ತಾಲ್ಲೂಕಿನ ೧ ಲಕ್ಷ ೨೦ ಸಾವಿರದ ೬೭೯ ಜನಸಂಖ್ಯೆ ಇರುವ ೬೫ ಹಳ್ಳಿಗಳು

೨. ಸೊಲ್ಲಾಪುರ ಜಿಲ್ಲೆಯ ಮಂಗಳವಾಡ ತಾಲ್ಲೂಕಿನ ೮೦,೯೨೦ ಜನಸಂಖ್ಯೆಯುಳ್ಳ ೯ ಹಳ್ಳಿಗಳು

೩. ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲ್ಲೂಕಿನ ೧,೭೧,೪೦೩ ಜನಸಂಖ್ಯೆಯುಳ್ಳ ೯೯ ಹಳ್ಳಿಗಳು

೪. ದಕ್ಷಿಣ ಸತಾರಾ ಜಿಲ್ಲೆಯ ಜಿಲ್ ತಾಲ್ಲೂಕಿನ ೮೦,೮೬೨ ಜನಸಂಖ್ಯೆಯುಳ್ಳ ೪೪ ಹಳ್ಳಿಗಳು

೫. ಕೊಲ್ಲಾಪುರ ಜಿಲ್ಲೆಯ ಶರೋಳ್ ತಾಲ್ಲೂಕಿನ ೮೦,೬೦೨ ಜನಸಂಖ್ಯೆಯುಳ್ಳ ೧೯ ಹಳ್ಳಿಗಳು

೬. ಕೊಲ್ಲಾಪುರ ಜಿಲ್ಲೆಯ ಗಡಿಂಗ್ಲಬ್ ತಾಲ್ಲೂಕಿನ ೫೭,೦೨೬ಜನಸಂಖ್ಯೆಯುಳ್ಳ ೨೪ ಗ್ರಾಮಗಳು.

ಈ ಮಧ್ಯೆ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ನ್ಯಾಯವಾಗಿ ಸೇರಬೇಕಾದ ಪ್ರದೇಶಗಳ ಬಗ್ಗೆ ೧೯೫೭ ಮಾರ್ಚ್ ೩೧ರಂದು ಕರ್ನಾಟಕ ಸರ್ಕಾರವು ಈ ಕೆಳಕಂಡ ಪ್ರದೇಶಗಳ ಬೇಡಿಕೆಯ ಪತ್ರವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು. ಅವುಗಳೆಂದರೆ,

೧. ಸೊಲ್ಲಾಪುರ ಪೂರ್ತಿ ನಗರ

೨. ಸಂಪೂರ್ಣವಾಗಿ ಜತ್ ತಾಲ್ಲೂಕು

೩. ಸಂಪೂರ್ಣ ದಕ್ಷಿಣ ಸೊಲ್ಲಾಪುರ ತಾಲ್ಲೂಕು

೪. ಕೊಲ್ಲಾಪುರ ಜಿಲ್ಲೆಯ ಚಂದಗಡ್ ತಾಲ್ಲೂಕು

೫. ಸಂಪುರ್ಣ ಅಕ್ಕಲಕೋಟೆ ತಾಲ್ಲೂಕು

ಈ ಎರಡು ರಾಜ್ಯಗಳ ಜೊತೆಗೆ ಇತರ ರಾಜ್ಯಗಳೊಂದಿಗೆ ಉದ್ಭವಿಸಿದಂತಹ ಸಮಸ್ಯೆಗಳಿಗೆ ಅಂತಿಮ ತೆರೆ ಎಳೆಯಲು ಕೇಂದ್ರ ಸರ್ಕಾರವು ೧೯೬೬ರಲ್ಲಿ ಮೊದಲೆ ತಿಳಿಸಿರುವ ಹಾಗೆ ಮಹಾಜನ್ ಅವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ನೇಮಿಸಿತು. ಈ ವರದಿಯ ಪ್ರಕಾರ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಬಿಟ್ಟುಕೊಡಲು ಶಿಫಾರಸ್ಸಾದ ಪ್ರದೇಶಗಳೆಂದರೆ,

೧. ಖಾನಾಪುರ ತಾಲ್ಲೂಕಿನ ವ್ಯಾಪಾರಿ ಕೇಂದ್ರವಾದ ನಂದಗಡ ಹಾಗೂ ಅದರ ಸುತ್ತಮುತ್ತಲಿನ ಅರಣ್ಯ ಹಾಗೂ ಕಬ್ಬು ಹೆಚ್ಚಾಗಿ ಬೆಳೆಯುವ ಪ್ರದೇಶ. ಈ ತಾಲ್ಲೂಕಿನ ಪಶ್ಚಿಮ ಹಾಗೂ ದಕ್ಷಿಣ ಭಾಗದ ಭತ್ತ ಬೆಳೆಯುವ ಭೂ ಪ್ರದೇಶ.

೨. ಬೆಳಗಾವಿ ತಾಲ್ಲೂಕಿನ ಪಶ್ಚಿಮ ಭಾಗ

೩. ಚಿಕ್ಕೋಡಿ ತಾಲ್ಲೂಕಿನ ನಿಪ್ಪಾಣಿ ಮತ್ತು ಸುತ್ತಮುತ್ತಲಿನ ಪ್ರದೇಶ

೪. ಲೋಂಡ (ರೌಲ್ವೆಗೆ ಉಪಯೋಗಿಸುವ ಕಲ್ಲಿದ್ದಿಲಿನ ಗಣಿ ಪ್ರದೇಶ)

೫. ಪ್ರಮುಖವಾಗಿ ೭೫,೦೦೦ ಎಕರೆ ನೀರಾವರಿಯಾಗಬಹುದಾದ ಫಲವತ್ತಾದ ಭೂಮಿ ಹಾಗೂ ಮಲಪ್ರಭ ಮೇಲ್ದಂಡೆ ಯೋಜನೆ ಸಂಪೂರ್ಣವಾಗಿ.

೬. ೫,೯೦೦ ಎಕರೆ ನೀರಾವರಿಯಾಗಬಹುದಾದ ತಟ್ಟಿಹಳ್ಳ ಯೋಜನೆ.

೭. ೬೦೦ ಎಕರೆ ನೀರಾವರಿಯಾಗಬಹುದಾದ ಚೌನಕಟ್ಟಿ ಕೆರೆ ಯೋಜನೆ.

೮. ಬೆಳಗಾವಿ ತಾಲ್ಲೂಕು ರಕ್ಕಸಕೊಪ್ಪದಲ್ಲಿ ಅಂದಿನ ಕಾಲದಲ್ಲಿಯೇ ಒಂದು ಕೋಟಿ ರೂಪಾಯಿಯ ವೆಚ್ಚದಿಂದ ನೀರು ಸರಬರಾಜು ಕೇಂದ್ರವನ್ನು ನಿರ್ಮಿಸಿ ಅಲ್ಲಿಂದಲೇ ಬೇಳಗಾವಿ ನಗರಕ್ಕೆ ನೀರನ್ನು ಪೂರೈಸಲಾಗುತ್ತಿದೆ. ಈ ಹಳ್ಳಿಯು ಕರ್ನಾಟಕ ಮತ್ತು ಮಹಾರಾಷ್ಟ್ರಗಳೆರಡಕ್ಕೂ ಇಂದು ನೀರು ಸರಬರಾಜಿನ ಕೇಂದ್ರ. ಈ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಮಹಾಜನ್ ಅವರು ಶಿಫಾರಸ್ಸು ಮಾಡಿದ್ದಾರೆ,

೯. ಆಗಿನ ಕಾಲದಲ್ಲಿಯೇ ಒಂದು ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಿ ಕಟ್ಟಿಸಿದ ಹಿಂಡಲಗ ಜೈಲು ಮಹಾರಾಷ್ಟ್ರಕ್ಕೆ,

೧೦. ನಿಪ್ಪಾಣಿ ನಗರ ಮತ್ತು ಸುತ್ತಮುತ್ತಲ ೪೦ ಹಳ್ಳಿಗಳು. ಮಹಾರಾಷ್ಟ್ರಕ್ಕೆ ಈ ಭಾಗದಲ್ಲಿ ಅಧಿಕವಾಗಿ ಬೆಳೆಯುವ ತಂಬಾಕು ಮತ್ತಿತರ ಬೆಳೆಗಳ ಮಾರಾಟದಿಂದ ನಿಪ್ಪಾಣಿ ಮಾರುಕಟ್ಟೆಯಿಂದಲೇ ರಾಜ್ಯಕ್ಕೆ ಸಂದಾಯವಾಗುವ ೩೦ ಕೋಟಿ ರೂಪಾಯಿಗಳು ನೆರೆಯ ಮಹಾರಾಷ್ಟ್ರಕ್ಕೆ (೧೯೯೮ರ ಅಂಕಿ – ಅಂಶಗಳ ಪ್ರಕಾರ).

ಮೇಲ್ಕಂಡ ಅಂಶಗಳನ್ನು ಗಮನಿಸಿದರೆ ಕರ್ನಾಟಕಕ್ಕೆ ಬರಬಹುದಾದ ಯಾವೊಂದು ಪ್ರದೇಶವನ್ನು ಮಹಾಜನ್ ಅವರು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ವರ್ಗಾಯಿಸುವ ಶಿಫಾರಸ್ಸು ಮಾಡಲಿಲ್ಲ.

ಅಷ್ಟೇ ಅಲ್ಲದೆ ಮಹಾರಾಷ್ಟ್ರೀಯರಿಗೆ ಬೇಡವಾಗಿದ್ದಂತಹ ಹಳ್ಳಿಗಳನ್ನು ಕರ್ನಾಟಕಕ್ಕೆವರ್ಗಾಯಿಸಿ, ಕರ್ನಾಟಕದ ಸಂಪದ್ಭರಿತ ಪ್ರದೇಶಗಳನ್ನು (ಬೆಳಗಾವಿಯನ್ನು ಹೊರತುಪಡಿಸಿ) ಮಹಾರಾಷ್ಟ್ರಕ್ಕೆ ವರ್ಗಾಯಿಸುವ ಶಿಫಾರಸ್ಸುಗಳ ವರದಿಯನ್ನು ಮಾತ್ರ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು. ಇಂದಿಗೂ ಮಹಾರಾಷ್ಟ್ರೀಯರು ತಮ್ಮ ದುರ್ನಡತೆಯನ್ನು ಮಹಾರಾಷ್ಟ್ರ ಏಕೀಕರಣ ಸಮಿತಿಯ ಮುಖಾಂತರ ತೋರಿಸುತ್ತಾ ಬರುತ್ತಿದ್ದಾರೆ. ತಮ್ಮದೆಂದು ಕೇಳುತ್ತಿರುವ ಬೆಳಗಾವಿಯನ್ನು ಪಡೆಯುವುದಂತೂ ಕನಸಿನ ಮಾತೇ ಸರಿ. ನೆರೆಯ ಮಹಾರಾಷ್ಟ್ರೀಯರೇ ಈ ವಾದವನ್ನು ಸ್ವಲ್ಪವೂ ಒಪ್ಪುವುದಿಲ್ಲ. ೧೯೫೭ರಲ್ಲಿ ಮಹಾರಾಷ್ಟ್ರ ಸರ್ಕಾರ ಬೆಳಗಾವಿ ಪ್ರಶ್ನೆಗೆ ಚಾಲನೆ ನೀಡಿ ವಾಸ್ತವವಲ್ಲದ ಬೇಡಿಕೆಯನ್ನು ಮಹಾರಾಷ್ಟ್ರೀಯರ ಮನಸ್ಸಿನ ಮೇಲೆ ಮೂಡಿಸಿತು. ಮೊದಲೆ ಚರ್ಚಿಸಿದ ಹಾಗೆ ಇದೊಂದು ರಾಜಕೀಯ ಪ್ರೇರಿತ ಅಂಶವಾಗಿ ಪರಿವರ್ತನೆಗೊಂಡಿದೆ.

ಕರ್ನಾಟಕ ಅವಿಭಾಜ್ಯ ಅಂಗವಾಗಿರುವ ಬೆಳಗಾವಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳನ್ನ ಮಹಾರಾಷ್ಟ್ರೀಯರು ತಮ್ಮದೆಂದು ವಾದಿಸುತ್ತಿರುವುದಕ್ಕೆ ಅವರು ನೀಡುವ ಹೇಳಿಕೆ ಹಾಸ್ಯಾಸ್ಪದವಾಗಿದೆ.

೧. ಬೆಳಗಾವಿ ನಗರ ಕನ್ನಡ ಹಳ್ಳಿಗಳಿಗಿಂತ ಮರಾಠಿ ಭಾಷಿಕ ಹಳ್ಳಿಗಳಿಂದಲೇ ಹೆಚ್ಚು ಆವೃತವಾಗಿದೆ.

೨. ಸಾಂಸ್ಕೃತಿಕ ಪರಂಪರೆ ಮರಾಠಿಮಯವಾಗಿದೆ. ಮನೆಗಳ ಒಡೆತನ ಮರಾಠಿ ಭಾಷಿಕರದ್ದೇ ಹೆಚ್ಚು.

೩. ಬೆಳಗಾವಿ ನಗರ ಕರ್ನಾಟಕದ ಇತರ ಭಾಗಗಳಿಗಿಂತ ದಕ್ಷಿಣದಲ್ಲಿರುವ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಜತೆಗೆ ನಿಕಟ ಸಂಬಂಧ ಹೊಂದಿದೆ.

೪. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಬೇಕು ಎಂದು ಬೆಳಗಾವಿ ಪುರಸಭೆ ಹಲವಾರು ಸಲ ನಿರ್ಣಯಗಳನ್ನು ಅಂಗೀಕರಿಸಿದೆ. ಇದೇ ಕಾರಣಕ್ಕೆ ಮೈಸೂರು ಸರ್ಕಾರ ಈ ಪುರಸಭೆಯನ್ನು ‘ಸೂಪರ್ ಸೀಡ್’ ಮಾಡಿದೆ. ಇದು ೨೦೦೬ ಜನವರಿಯಲ್ಲಿ ಬೆಳಗಾವಿ ನಗರಪಾಲಿಕೆಯ ಮೇಯರ್ ಅಶೋಕ ಮೋರೆಯವರ ನೇತೃತ್ವದಲ್ಲಿ ಬೆಳಗಾವಿ ಸೇರಿದಂತೆ ಅದರ ಸುತ್ತಮುತ್ತಲಿನ ಕನ್ನಡ ಪ್ರದೇಶ ಮಹಾರಾಷ್ಟ್ರಕ್ಕೆ ಸೇರಬೇಕೆಂಬ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಿತು. ಅಂದು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎನ್. ಧರ್ಮಸಿಂಗ್ ಅವರು ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಕಾನೂನು ತಜ್ಞರ ನೆರವಿನೊಂದಿಗೆ ಬೆಳಗಾವಿ ನಗರಪಾಲಿಕೆಯನ್ನು ‘ಸೂಪರ್ ಸೀಡ್’ ಮಾಡಿದರು.

೫. ಬೆಳಗಾವಿ ಸುತ್ತಮುತ್ತಲಿನ ಬಹುತೇಕ ಎಲ್ಲಾ ಹಳ್ಳಿಗಳಲ್ಲಿ ಮರಾಠಿ ಭಾಷಿಕರೇ ಹೆಚ್ಚಾಗಿದ್ದಾರೆ.

೬. ಆಡಳಿತಾತ್ಮಕ ದೃಷ್ಟಿಯಿಂದ ಬೆಳಗಾವಿ ಮೈಸೂರು ರಾಜ್ಯದಲ್ಲಿಯೇ ಮುಂದುವರಿಯಬೇಕು ಎಂಬ ಆ ರಾಜ್ಯದ ವಾದವನ್ನು ಒಪ್ಪಲು ಸಾಧ್ಯವೇ ಇಲ್ಲ. ಬೆಳಗಾವಿ ಸುತ್ತ ಆರು ಜಿಲ್ಲೆಗಳು ಬರುತ್ತವೆ. ಈ ಪೈಕಿ ರತ್ನಗಿರಿ, ಕೊಲ್ಲಾಪುರ ಪೂರ್ಣ ಮರಾಠಿ ಜಿಲ್ಲೆಗಳು, ಬೆಳಗಾವಿ ಮತ್ತು ಕಾರವಾರ ಕನ್ನಡ ಮರಾಠಿ ದ್ವಿಭಾಷಾ ಜಿಲ್ಲೆಗಳು. ಧಾರವಾಡ ಮತ್ತ ವಿಜಾಪುರ ಮಾತ್ರ ಕನ್ನಡ ಜಿಲ್ಲೆಗಳು.

೭. ರಾಜ್ಯ ಪುನರ್ ವಿಂಗಡನಾ ಆಯೋಗ ಆಡಳಿತಾತ್ಮಕ ದೃಷ್ಟಿಯಿಂದ ಬಳ್ಳಾರಿ ಮತ್ತು ನಗರ ತಾಲ್ಲೂಕನ್ನು ಆಂಧ್ರ ಪ್ರದೇಶಕ್ಕೆ ಸೇರ್ಪಡೆ ಮಾಡುವಂತೆ ಸೂಚಿಸಿತ್ತು. ಆದರೆ ಸಂಸತ್ತು ಅದನ್ನು ಅಂಗೀಕರಿಸದೇ ಮೈಸೂರು ರಾಜ್ಯಕ್ಕೆ ಸೇರಿಸಲು ನಿರ್ಣಯ ಕೈಗೊಂಡಿತು. ಅದೇ ರೀತಿ ಆಯೋಗ ಬೆಳಗಾವಿ ಮತ್ತು ಬೆಳಗಾವಿ ತಾಲ್ಲೂಕುಗಳನ್ನು ಮೈಸೂರು ರಾಜ್ಯಕ್ಕೆ ಸೇರ್ಪಡೆ ಮಾಡಿದೆ. ಇದು ನ್ಯಾಯಸಮ್ಮತವಲ್ಲ.

೮. ಬೆಳಗಾವಿ ಸಹ್ಯಾದ್ರಿ ಪರ್ವತಗಳ ಪೂರ್ವದಲ್ಲಿದ್ದು ಕೊಂಕಣದ ಜತೆಗೆ ಹೊಂದಿಕೊಂಡಿದೆ. ರತ್ನಗಿರಿಯ ದಕ್ಷಿಣ ಭಾಗ ವ್ಯಾಪಾರ, ವಹಿವಾಟು, ಸಾಮಾಜಿಕ, ಭಾಷೆ, ಸಂಸ್ಕೃತಿ ಮತ್ತು ಧಾರ್ಮಿಕವಾಗಿ ಬೆಳಗಾವಿ ಜತೆಗೆ ಸಂಬಂಧ ಹೊಂದಿದೆ. ಕೊಂಕಣ ಬೆಳಗಾವಿಯ ವ್ಯಾಪಾರ ವಹಿವಾಟು ಸಂಬಂಧ ಅತ್ಯಂತ ಪುರಾತನವಾದದ್ದು.

೯. ಬೆಳಗಾವಿ ಆಡಳಿತಾತ್ಮಕವಾಗಿ ಕೇಂದ್ರಸ್ಥಾನ ಅಲ್ಲಿಯೇ. ಬೆಳಗಾವಿ ಜಿಲ್ಲೆಯ ಗಡಿಪೂರ್ವದಲ್ಲಿ ೬೦ ಮೈಲು, ಉತ್ತರದಲ್ಲಿ ೭೦ ಮೈಲು, ಈಶಾನ್ಯ ದಿಕ್ಕಿನಲ್ಲಿ ಸುಮಾರು ೧೦೦ ಮೈಲುಗಳಿಗೂ ಹೆಚ್ಚು ಚಂದಗಡ ತಾಲ್ಲೂಕನ್ನು ಮಹಾರಾಷ್ಟ್ರಕ್ಕೆ ಸೇರಿಸಿದ ಮೇಲೆ ದಕ್ಷಿಣ ಹಾಗೂ ಪಶ್ಚಿಮದಲ್ಲಿ ೨೦ ಮೈಲು ಹಾಗೂ ೭ – ೮ ಮೈಲು.

೧೦. ಮರಾಠಿ ಭಾಷಿಕರನ್ನು ಎರಡನೆಯ ದರ್ಜೆಯ ಪ್ರಜೆಗಳಂತೆ ನಡೆಸಿಕೊಳ್ಳಲಾಗುತ್ತದೆ. ಮರಾಠಿ ಭಾಷಿಕರ ಸಮಸ್ಯೆಗಳನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ. ಮೈಸೂರು ರಾಜ್ಯ ಸರ್ಕಾರ ಕಾನೂನು ರೂಪಿಸುತ್ತದೆ. ಆದರೆ ನಿಯಮಾವಳಿಗಳನ್ನು ಎಂದೂ ಮರಾಠಿಯಲ್ಲಿ ಪ್ರಕಟ ಮಾಡಿಲ್ಲ.

೧೧. ಬೆಳಗಾವಿ ತಮ್ಮದು ಎಂಬ ಕನ್ನಡಿಗರ ವಾದ ತಳಬುಡವಿಲ್ಲದ್ದು. ನಗರದ ಲಿಂಗಾಯತರು ಕೆಲವು ಹಿತಾಸಕ್ತಿಗಳನ್ನು ಹೊಂದಿದ್ದು ಬೆಳಗಾವಿ ಕರ್ನಾಟಕದ್ದು ಎಂದು ಸಾಧಿಸಲು ಹೊರಟಿದ್ದಾರೆ. ನಗರದಲ್ಲಿ ಕನ್ನಡಿಗರಿಗಿಂತ ಮರಾಠಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಗರದಲ್ಲಿ ಕೇವಲ ೧೫ ಪ್ರಾಥಮಿಕ ಶಾಲೆಗಳಿದ್ದು, ಅದರಲ್ಲಿ ೮,೦೨೧ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ಅಂಕಿ ಅಂಶಗಳನ್ನು ಗಮನಿಸಿದರೆ ನಗರದಲ್ಲಿ ಯಾವ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. (ಆಧಾರ : ಮಹಾಜನ ವರದಿ, ಡಾ. ಓಂಕಾರ ಕಾಕಡೆ, ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ, ಬೆಂಗಳರು).

ಮೇಲಿನ ಹುರುಳಿಲ್ಲದ, ಹಾಸ್ಯಾಸ್ಪದವಾದ ವಾದವನ್ನು ಮಂಡಿಸುತ್ತಾ, ಇದಕ್ಕಾಗಿ ನೇಮಕಗೊಂಡ ಆಯೋಗಗಳ ಮುಂದೆ ತಮ್ಮದೆಯಾದ ವಿಚಾರ ಮಂಡಿಸುತ್ತಿದೆ. ಆದರೆ ಇದುವರೆವಿಗೂ ಯಾವ ಆಯೋಗವು ಸಹ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವೆಂದು ಹೇಳಿದೆಯೇ ವಿನಾ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಯಾವ ಒಂದೇ ಒಂದು ಕಾರಣದಿಂದಲೂ ಹೇಳಿಲ್ಲ. ಭಾಷೆಯ ಆಧಾರದ ಮೇಲೆ ನಮ್ಮದೆಂದು ಹೇಳುವುದಾದರೆ ಈ ರಾಷ್ಟ್ರದಲ್ಲಿ ಹಲವಾರು ಗಡಿ ಸಮಸ್ಯೆಗಳು ಜನ್ಮ ತಾಳುತ್ತವೆ.

ಏಕೆಂದರೆ ಭಾಷೆ ಎಂಬುದು ರಾಷ್ಟ್ರದಲ್ಲಿ ಪ್ರಚಲಿತವಿರುವ ಎಲ್ಲಾ ಶೈಕ್ಷಣಿಕ ಮಾಧ್ಯಮಕ್ಕೆ ಅರ್ಹವಾಗಲಾರದೆನ್ನಬಹುದು. ಅಲ್ಲದೆ ಅನೇಕ ಭಾಷೆಗಳಿಗೆ ಲಿಪಿಯೇ ಇಲ್ಲ. ಪ್ರತಿಯೊಬ್ಬನು ತಮ್ಮ ತಮ್ಮ ಮಾತೃಭಾಷೆಯಲ್ಲಿಯೇ ಶಿಕ್ಷಣ ಪಡೆಯಲು ಬಯಸಿದರೆ ಅದೊಂದು ಬಿಡಿಸಲಾರದ ಸಮಸ್ಯೆಯೇ ಆಗುತ್ತದೆ. ಒಂದರ್ಥದಲ್ಲಿ ಭಾಷಾ ಅಲ್ಪಸಂಖ್ಯಾತರು ಯಾವುದೇ ರಾಜ್ಯದಲ್ಲಿ ಅನಿವಾರ್ಯ. ಅಲ್ಲದೆ ಅವರು ಮೂಲತಃ ಅಲ್ಪಸಂಖ್ಯಾತರೇ ಆಗಿರುತ್ತಾರೆ. ಆದ್ದರಿಂದ ಭಾಷಾ ಅಲ್ಪಸಂಖ್ಯಾತರ ಸಮಸ್ಯೆಗಳು ಪರಸ್ಪರ ಅಂತರ್ ಸಂಬಂಧ ಹೊಂದಿದ ಸಮಸ್ಯೆಗಳಾಗಿವೆ. ಉಭಯತರರಲ್ಲಿ ಅನ್ಯೋನ್ಯತೆ, ಪ್ರೀತಿ ವಿಶ್ವಾಸಗಳು ಪರಸ್ಪರವಾಗಿ ವರ್ಧಿಸಬೇಕೇ ಹೊರತು ಪ್ರತ್ಯೇಕ ವಸಾಹತುಗಳನ್ನು ನಿರ್ಮಿಸಿಕೊಂಡು ರಾಷ್ಟ್ರದ ಭಾವೈಕ್ಯತೆಗೆ ಧಕ್ಕೆ ಉಂಟುಮಾಡುವ ಪರಿಸ್ಥಿತಿ ತಲೆದೋರಬಾರದು. ಇಂದು ಭಾಷಾ ಅಲ್ಪಸಂಖ್ಯಾತರಿಗೆ ಸಂವಿಧಾನದಲ್ಲಿ ವಿಶಿಷ್ಟ ಹಕ್ಕುಗಳನ್ನು ನೀಡಲಾಗಿದೆ ನಿಜ. ಆದರೆ ಅದರ ಅರ್ಥ ಅವರನ್ನು ಈ ದೇಶದ ವಿಶೇಷ ಪ್ರಜೆಗಳನ್ನಾಗಿ ಪರಿಗಣಿಸಲಾಗಿದೆ ಎಂದಲ್ಲ. ಇದು ಕೇವಲ ತಾತ್ಕಾಲಿಕ ಅನುಕೂಲದ ಅವಕಾಶ ಮಾತ್ರ ಎಂಬುದನ್ನು ಅಲ್ಪಸಂಖ್ಯಾತರು (ಬೆಳಗಾವಿ ಮರಾಠಿಗಳು) ತಿಳಿಯಬೇಕು. ಕನ್ನಡ ನಾಡಿನಲ್ಲಿ ಕನ್ನಡ ಪ್ರಮುಖ ಭಾಷೆ. ಅಲ್ಲಿ ಇತರ ಭಾಷೆಗಳ ಸ್ಥಾನ ಎಂದೆಂದಿಗೂ ದ್ವಿತೀಯ ಸ್ಥಾನ ಎಂಬುದನ್ನು ಬೆಳಗಾವಿಯಲ್ಲಿರುವ ಮರಾಠಿಗರು ಮರೆಯಬಾರದು. ಅವರು ತಾವಿರುವ ರಾಜ್ಯಗಳನ್ನೇ ತಮ್ಮ ‘ಮಾತೃಭೂಮಿ’ ಎಂದು ಆಯಾ ರಾಜ್ಯದ ಭಾಷೆಯೇ ತಮಗೂ ಪ್ರಮುಖ ಭಾಷೆ ಎಂದು ಗೌರವಿಸಬೇಕು. ಇದು ಬೆಳಗಾವಿಯ ನಮ್ಮ ಮರಾಠಿ ಬಂಧುಗಳಿಗೆ ತಿಳಿದಿದ್ದರೆ ಈ ಸಮಸ್ಯೆ ಉದ್ಭವಿಸುವುದೇ ಇಲ್ಲ.