ಕೇರಳ ಮತ್ತು ಕರ್ನಾಟಕ

ಕಾಸರಗೋಡು ಪಟ್ಟಣವು ಪ್ರಸಿದ್ಧ ಚಂದ್ರಗಿರಿ ನದಿಯ ದಡದಲ್ಲಿ ನಿರ್ಮಿತವಾಗಿದೆ. ಇತಿಹಾಸದಲ್ಲಿ ಈ ರಾಜ್ಯವನ್ನು ಕನ್ನಡದ ಪ್ರಥಮ ರಾಜವಂಶವಾದಂತಹ ಕದಂಬರ ದೊರೆ ಮಯೂರವರ್ಮನು ಸಮುದ್ರ ಕಿನಾರೆಯಿಂದ ೬೪ ಭಾಗಗಳಾಗಿ ವಿಂಗಡಿಸಿ ಪ್ರತಿಯೊಂದು ಪ್ರಾಂತ್ಯಗಳನ್ನು ಒಬ್ಬೊಬ್ಬ ಬ್ರಾಹ್ಮಣ ಗವರ್ನರ್ ಆಳ್ವಿಕೆಗೆ ಒಳಪಡಿಸಿದನು. ಈ ೬೪ ಭಾಗಗಳಲ್ಲಿ ಕಾಸರಗೋಡು ಒಂದು ಎಂದು ಇತಿಹಾಸದಲ್ಲಿ ತಿಳಿದುಬರುತ್ತದೆ. ಶಾಸನಗಳ ಪ್ರಕಾರ ಕಾಸರಗೋಡನ್ನು ಕನ್ನಡದ ಪ್ರಸಿದ್ಧ ಪಾಳೇಗಾರ ವಂಶವಾಗಿದ್ದಂತಹ ಕೆಳದಿಯ ಇಕ್ಕೇರಿ ನಾಯಕರ ದೊರೆ ಶಿವಪ್ಪ ನಾಯಕನು ನಿರ್ಮಿಸಿದನೆಂದು ತಿಳಿದುಬರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಇಂದಿಗೂ ಶಿವಪ್ಪ ನಾಯಕನು ಕಾಸರಗೋಡಿನಲ್ಲಿ ಕಟ್ಟಿಸಿರುವ ಕೋಟೆಯನ್ನು ನೋಡಬಹುದು. ಇಂದು ಈ ಕೋಟೆ ಯಾವುದೇ ರೀತಿಯ ರಕ್ಷಣೆ ಇಲ್ಲದೆ ಅವನತಿಯ ಅಂಚಿನಲ್ಲಿದೆ. ಇಂತಹ ಐತಿಹಾಸಿಕ ಇತಿಹಾಸವನ್ನು ಹೊಂದಿರುವಂತಹ ಕನ್ನಡದ ನೆಲ ಇಂದು ಕೆಲವು ಜನರ ಸ್ವಾರ್ಥದಿಂದಾಗಿ ಹಾಗೂ ರಾಜಕೀಯ ಪ್ರಭಾವದಿಂದ ನೆರೆಯ ಕೇರಳ ರಾಜ್ಯದಲ್ಲಿ ವಿಲೀನಗೊಂಡಿದ್ದು ವಿಪರ್ಯಾಸವೆ ಸರಿ. ಶತಮಾನಗಳಿಂದಲೂ ಕನ್ನಡ ನಾಡಿನೊಂದಿಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಬೆಳೆದು ಬರುತ್ತಿದ್ದಂತಹ ಕಾಸರಗೋಡು ಎಂಬ ಸುಂದರ ಮನೆಯನ್ನು ೧೯೫೫ರಲ್ಲಿ ನೇಮಕಗೊಂಡ ರಾಷ್ಟ್ರೀಯ ಪುನರಚನಾ ಆಯೋಗವು ಕೇರಳಕ್ಕೆ ಸೇರಿಸುವ ಶಿಫಾರಸ್ಸನ್ನು ಮಾಡಿತು.

ಅಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಸ್ಥೆಯ ಸ್ಥಾಪಕ ರೂವಾರಿಯಾಗಿದ್ದಂತಹ ಕಾರ್ನಾಡ ಸದಾಶಿವರಾಯರು, ಮೂಡಬಿದ್ರಿ ಉಮೇಶರಾಯರು ಆಯೋಗದ ತೀರ್ಪಿಗೆ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿದರು. ಇವರುಗಳ ಜೊತೆಯಲ್ಲಿಯೇ ಸ್ವಾತಂತ್ರ್ಯ ಯೋಧರಾದಂತಹ ದೇವಪ್ಪಾಳ್ವರು, ಶ್ರೀಧರ ಕಕ್ಕಿಲಾಯರು ಹಾಗೂ ರಾಷ್ಟ್ರೀಯ ಪಕ್ಷಗಳ ಎಲ್ಲಾ ಮುಖಂಡರೂ ತಮ್ಮ ತಮ್ಮ ಪಕ್ಷಗಳಿಗೆ ರಾಜಿನಾಮೆಯಿತ್ತು ‘ಕರ್ನಾಟಕ ಸಮಿತಿ’ಯನ್ನು ರೂಪಿಸಿಕೊಂಡು ಕಾಸರಗೋಡಿಗಾಗಿ ಹೋರಾಟಕ್ಕಿಳಿದರು. ವಿದ್ಯಾರ್ಥಿಗಳು ಶಾಲೆ ಕಾಲೇಜುಗಳನ್ನು ಬಹಿಷ್ಕರಿಸಿದರು. ಮಹಿಳೆಯರು ಅದರಲ್ಲಿಯೂ ಕೆಲ ಮಹಿಳೆಯರಂತೂ ಹಸುಗೂಸುಗಳನ್ನು ಕಂಕುಳಲ್ಲಿ ಎತ್ತಿಕೊಂಡೇ ಸೆರೆಮನೆ ಸೇರಿದರು. ಹಳ್ಳಿಯಿಂದ ನಗರದವರೆವಿಗೂ ಪ್ರತಿಯೊಂದು ಸ್ಥಳದಲ್ಲಿಯೂ ಜಾತಿ ಧರ್ಮದ ಭೇದವಿಲ್ಲದೆ ಕಾಸರಗೋಡಿನ ಜನತೆಯು ಹೋರಾಟಕ್ಕಿಳಿಯಿತು. ಇಂತಹ ಸಂದರ್ಭದಲ್ಲಿಯೇ ಕಾಸರಗೋಡಿನ ಕಿಡಿಯಾಗಿ ಇಂದಿಗೂ ಹರೆಯದ ಹುಡುಗನಂತೆ ಕಾಸರಗೋಡು ಕರ್ನಾಟಕದೊಂದಿಗೆ ವಿಲೀನವಾಗಬೇಕೆಂದು ಹೋರಾಡಿಕೊಂಡು ಬರುತ್ತಿರುವ ನಾಡಿನ ಪ್ರಸಿದ್ಧಿ ಸಾಹಿತಿ, ಕವಿ ಡಾ.ಕಯ್ಯಾರ ಕಿಞ್ಞಣ್ಣರೈ ತಮ್ಮ ಲೇಖನಿಯಿಂದ ಕ್ರಾಂತಿಕಾರಿ ಗೀತೆಯನ್ನು ರಚಿಸಿದರು. ಆ ಗೀತೆಯನ್ನು ಧಾರವಾಡದಲ್ಲಿ ನಡೆದಂತಹ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೊದಲಿಗೆ ಹಾಡಿದರು. ಅಲ್ಲಿ ನೆರೆದಿದ್ದಂತಹ ಪ್ರತಿಯೊಬ್ಬನ ಹೃದಯದಲ್ಲೂ ಮನೆ ಮಾಡಿನಿಂತ ಕವಿತೆ ಹೀಗಿದೆ.

ಬೆಂಕಿ ಬಿದ್ದಿದೆ ಮನೆಗೆ ಬೇಗ ಬನ್ನಿ
ಎಲ್ಲರೂ ಎದ್ದೆದ್ದು ಓಡಿ ಬನ್ನಿ
ಕನ್ನಡದ ಗಡಿಕಾಯೆ, ಗುಡಿಕಾಯೆ, ನುಡಿಕಾಯೆ
ಕಾಯಲಾರೆನೆ ಸಾಯೆ ಬನ್ನಿಬೆಂಕಿ ಬಿದ್ದಿದೆ ಮನೆಗೆ!

ಇಂಥಹ ಕ್ರಾಂತಿಕಾರಕ ಪದಗಳೊಡನೆ ದುಃಖಕರವಾದ ಅಭಿಮಾನ ಅಂಶವನ್ನು ತುಂಬಿ ನಾಡಿನ ಜನತೆಗೆ ಕಾಸರಗೋಡು ನಮ್ಮದೆಂಬ, ಮನೋಭಾವನೆಯನ್ನು ಮೂಡಿಸಿದರು. ಇಂದಿಗೂ ಸಹ ರೈಯವರು ಮೇಲಿನಂತಹ ನೂರಾರು ಕವಿತೆಗಳನ್ನು ರಚಿಸಿ ಅಲ್ಲಿನ ಜನತೆಗೆ ಸ್ಫೂರ್ತಿ ನೀಡುತ್ತಾ ಬರುತ್ತಿದ್ದಾರೆ, ಹೋರಾಟದ ಸೆಲೆಯಾಗಿದ್ದಾರೆ.

ಕಾಸರಗೋಡಿನಲ್ಲಿ ೧೯೪೮ನೇ ಡಿಸೆಂಬರ್‌ನಲ್ಲಿ ಕನ್ನಡ ನಾಡು ಉದಯವಾಗಲಿ ಎಂದು ಹಿಗ್ಗಿ ಹಾಡಿದ ಚಾರಿತ್ರಿಕ ಮಹತ್ವವುಳ್ಳ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನ, ಹಾಗೆಯೇ ಹನ್ನೊಂದನೇ ಕರ್ನಾಟಕ ಏಕೀಕರಣ ಸಮ್ಮೇಳನಗಳೂ ವಿಜೃಂಭಣೆಯಿಂದ ನಡೆದಿದ್ದವು. ಆದರೆ ಕರ್ನಾಟಕ ಉದಯವಾದಾಗ ಕಾಸರಗೋಡಿನ ಎರಡು ಲಕ್ಷ ಕನ್ನಡಿಗರು ತಬ್ಬಲಿಗಳಾಗಿ ದುಃಖದಿಂದ ಕಣ್ಣೀರಿನ ಕೋಡಿ ಹರಿಸಬೇಕಾಯಿತು. ಕಾಸರಗೋಡಿನ ಕನ್ನಡಿಗರಿಗೆ ೩೦ – ೦೯ – ೧೯೫೫ನೇ ದಿನವನ್ನು ದುರಂತ ವಿಷಯ ಕೇಳಿದ ದಿನವೆನ್ನಬಹುದು. ಅಂದು ಮಧ್ಯಾಹ್ನದ ವೇಳೆಗೆ ದೆಹಲಿಯಿಂದ ಕ್ಷೇತ್ರದ ಪಾರ್ಲಿಮೆಂಟ್ ಸದಸ್ಯರಾಗಿದ್ದಂತಹ ಕೆ.ಎಸ್.ಹೆಗ್ಡೆಯವರಿಂದ ಬಂದಂತಹ ತಂತಿ ಸಂದೇಶವು ಕಾಸರಗೋಡನ್ನು ಕೇರಳ ರಾಜ್ಯಕ್ಕೆ ಸೇರಿಸುವಂತೆ ತ್ರಿಸದಸ್ಯ ಆಯೋಗದ ಸದಸ್ಯರಲ್ಲಿ ಒಬ್ಬರಾದ, ಅದರಲ್ಲಿಯೂ ಕೇರಳದವರೇ ಆದ ಕೆ.ಎಂ.ಫಣಿಕ್ಕರ್ ಅವರ ಶಿಫಾರಸ್ಸಿನಂತೆ ನಡೆದು ಹೋಗಿದೆ ಎಂದು ತಂತಿ ಸಂದೇಶವನ್ನು ಕಳುಹಿಸಿದರು. ಇದನ್ನು ತಿಳಿದ ತಕ್ಷಣವೇ ಹಿರಿಯ ನಾಯಕರಾದ ಮೂಡಬಿದ್ರೆ ಉಮೇಶರಾಯರ ಕಛೇರಿಯಲ್ಲಿ ಸಭೆ ಸೇರಿ ಅನ್ಯಾಯದ ಶಿಫಾರಸ್ಸಿನ ವಿರುದ್ಧ ಜನಾಭಿಪ್ರಾಯ ಸಂಗ್ರಹಿಸಿ ಪ್ರಕಟಿಸಲು, ಸತ್ಯಾಗ್ರಹವನ್ನು ಕೈಗೊಳ್ಳಲು ಏಕಕಂಠದಿಂದ ತೀರ್ಮಾನಿಸಿದರು. ಇದರ ಮುಂದಿನ ಕ್ರಮಕ್ಕಾಗಿಯೇ ಕಾಸರಗೋಡಿನಲ್ಲಿ ‘ಕರ್ನಾಟಕ ಪ್ರಾಂತೀಕರಣ ಸಮಿತಿ’ಯನ್ನು ರಚಿಸಿಕೊಂಡರು. ಪ್ರಾರಂಭದಲ್ಲಿ ಈ ಸಮಿತಿಯ ಅಧ್ಯಕ್ಷರಾಗಿ ಉಮೇಶರಾಯರು ಆಯ್ಕೆಯಾದರು. ಕಾರ್ಯದರ್ಶಿಯಾಗಿ ಕಳ್ಳಿಗೆ ಮಹಾಬಲ ಭಂಡಾರಿಯನ್ನು ಆಯ್ಕೆ ಮಾಡಲಾಯಿತು. ತಾಲ್ಲೂಕಿನಾದ್ಯಂತ ಉಗ್ರ ಪ್ರತಿಭಟನಾ ಮೆರವಣಿಗೆಗಳು ನಡಯುತ್ತಾ ಬಂದವು. ಶಾಲಾ – ಕಾಲೇಜುಗಳಿಂದ ವಿದ್ಯಾರ್ಥಿಗಳು ಹೊರಬಂದರು. ಸರ್ಕಾರಿ ಕಛೇರಿಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸಲಾಯಿತು. ಕೋರ್ಟಿನ ಮುಂದೆ ಉಪವಾಸ ಸತ್ಯಾಗ್ರಹಗಳು ನಡೆದವು. ಇದರಿಂದಾಗಿ ೧೦೦೦ಕ್ಕೂ ಹೆಚ್ಚು ಜನರು ಪೋಲಿಸರ ಬಂಧಿಗಳಾದರು. ಇವರಲ್ಲಿ ಹಲವಾರು ಮಂದಿಗೆ ಕಾರಾಗೃಹ ಶಿಕ್ಷೆಯನ್ನು ವಿಧಿಸಲಾಯಿತು.

ಮೇಲ್ಕಂಡ ಸಮಯದಲ್ಲಿ ಕಾಸರಗೋಡಿನ ಮಹಿಳೆಯರ ಪಾತ್ರ ಅಮೋಘವಾದುದು. ಕಡಲತೀರದ ರಾಣಿ ಎಂದೇ ಹೆಸರುವಾಸಿಯಾದ ಉಳ್ಳಾಲರಾಣಿ ಅಬ್ಬಕ್ಕಳ ಈ ನಾಡಿನಲ್ಲಿ ಇಲ್ಲಿನ ಮಹಿಳೆಯರು ರಾಷ್ಟ್ರೀಯ ಪುನರಚನಾ ಅಯೋಗ ತೀರ್ಮಾನವನ್ನು ಕೇಳಿ ಸುಮ್ಮನೇ ಕುಳಿತುಕೊಳ್ಳವಂತೆ ಮಾಡಲಿಲ್ಲ. ಕಾಸರಗೋಡು ತಾಲ್ಲೂಕು ಕರ್ನಾಟಕ ಪ್ರಾಂತೀಕರಣ ಸಮಿತಿಯು ಪ್ರತ್ಯೇಕವಾಗಿ ಒಂದು ಮಹಿಳಾ ವಿಭಾಗವನ್ನು ಸ್ಥಾಪಿಸಿ ಆಯೋಗದ ತೀರ್ಪಿನ ವಿರುದ್ಧ ಉಗ್ರ ಹೋರಾಟಕ್ಕೆ ಮುಂದಾಯಿತು. ಶ್ರೀಮತಿ ಕೆ.ಪಿ. ಸರಸ್ವತಿ ಬಾಯಿಯವರು ಮೊದಲು ಅಧ್ಯಕ್ಷರಾದರು. ಸುಹಾಸಿನಿ ಭಂಡಾರಿಯವರು ಕಾರ್ಯದರ್ಶಿಯಾದರು. ೧೯೫೬ನೇ ಜನವರಿ ೨೬ರಂದು ಮಹಿಳೆಯರು ಕಾನೂನು ಉಲ್ಲಂಘನೆ ಮಾಡಿ ಬಂಧನಕ್ಕೊಳಗಾಗುವುದೆಂದು ನಿರ್ಧರಿಸಿಕೊಂಡರು. ೨೬ನೇ ಜನವರಿ ಸಂಜೆ ಸರ್ಕಾರದ ಕ್ರಿಮಿನಲ್ ಕಾನೂನು ಸಂಹಿತೆಯ ೧೪೪ನೇ ಸೆಕ್ಷನ್ ಪ್ರಕಾರ ಯಾವುದೇ ರೀತಿಯ ಸಭೆ ಸಮಾರಂಭ ಮೆರವಣಿಗೆಗಳನ್ನು ನಡೆಸಬಾರದೆಂದು ನಿಷೇಧಿಸಿತು. ಇಂತಹ ಸಂದರ್ಭದಲ್ಲಿ ಮಹಿಳೆಯರು ಧೀರತನದಿಂದ ಆಯೋಗದ ತೀರ್ಪಿನ ಸದಸ್ಯರಾಗಿದ್ದಂತಹ ಕೇರಳದ ಕೆ.ಎಂ. ಪಣಿಕ್ಕರ್ ಅವರ ವಿರುದ್ಧ ಧಿಕ್ಕಾರ ಕೂಗಿದ್ದರು. ಅವರ ಭೂತದಹನ ಮಾಡಿದರು. ಪ್ರತಿಭಟನೆಯು ತೀವ್ರವಾದಂತೆ ಪೋಲಿಸರು ಇವರನ್ನು ಬಂಧಿಸಿದರು. ಇಂತಹ ಸಮಯದಲ್ಲಿ ಬಂಧನಕ್ಕೊಳಗಾದ ಪ್ರಮುಖ ಮಹಿಳಾ ಮುಖಂಡರೆಂದರೆ ಕಮಲಾಶೆಟ್ಟಿ, ಪಾರ್ಥ, ಜೆ. ಪರಮೇಶ್ವರಿ ಭಟ್, ರಾಧಾ ಕಾಮತ್, ಕೆ.ಪಿ. ಸರಸ್ವತಿಬಾಯಿ, ಸುಹಾಸಿನಿ ಭಂಡಾರಿ, ವಿದ್ಯಾರ್ಥಿನಿಯಾಗಿದ್ದಂತಹ ಯು.ಎಮ್.ಲತಾ ಅವರು. ಇವರಲ್ಲಿ ಶ್ರೀಮತಿ ಪರಮೇಶ್ವರಿ ಭಟ್ಟರು ತಮ್ಮ ಹಸುಗೂಸಿನೊಂದಿಗೆ ಜೈಲುವಾಸ ಅನುಭವಿಸಿರುವುದು ಸೆರೆಮನೆ ದಾಖಲೆಗಳಿಂದ ತಿಳಿದು ಬರುತ್ತದೆ.

ಮಂಗಳೂರಿನಲ್ಲಿ ಜಿಲ್ಲಾ ನಾಯಕರು ಪಕ್ಷ ಭೇದ ಮರೆತು ಸಭೆ ಸೇರಿದರು. ಕಾಸರಗೋಡಿನ ಬಗ್ಗೆ ಚಿಂತಿಸಿ ಅದನ್ನು ಪಡೆಯುವುದರ ಬಗ್ಗೆ ಹೋರಾಡಲು ಜಿಲ್ಲಾ ಸಂಘಟನೆಯನ್ನು ರಚಿಸಿಕೊಂಡರು. ಅಧ್ಯಕ್ಷರನ್ನಾಗಿ ಅಂದಿನ ಲೋಕಸಭಾ ಸದಸ್ಯರಾಗಿದ್ದ ಕೆ.ಆರ್.ಆಚಾರ್ ಅವರನ್ನು ನೇಮಿಸಿ ಶಾಂತಿಯುತ ಸತ್ಯಗ್ರಹಗಳ ಜೊತೆಗೆ ಉಗ್ರ ಪ್ರತಿಭಟನೆಗಳನ್ನು ನಡೆಸಿದರು. ಇಂತಹ ಸಂದರ್ಭದಲ್ಲಿ ತಮಿಳುನಾಡಿನ (ಅಂದು ಮದ್ರಾಸ್ ಪ್ರಾಂತ್ಯ) ಮುಖ್ಯಮಂತ್ರಿಯಾಗಿದ್ದಂತಹ ಕಾಮರಾಜ್ ಹಾಗೂ ಕೇಂದ್ರ ಮಂತ್ರಿಗಳಾಗಿದ್ದಂತಹ ಲಾಲ್ ಬಹದ್ದೂರ್ ಶಾಸ್ತ್ರಿ (ನೆಹರು ಮಂತ್ರಿಮಂಡಲ)ಯವರು ಮಂಗಳೂರಿಗೆ ಬರುವ ಕಾರ್ಯಕ್ರಮವಿದ್ದಿತು. ಇಂತಹ ಸಂದರ್ಭದಲ್ಲಿ ಮಂಗಳೂರು ಹಾಗೂ ಕಾಸರಗೋಡಿನ ಅಸಂಖ್ಯಾತ ಕನ್ನಡಿಗರು ಬೃಹತ್ ಮೆರವಣಿಗೆ ನಡೆಸಿ ಗಣ್ಯರಿಗೆ ಮನವಿ ಸಲ್ಲಿಸಿದರು. ಇಷ್ಟೆಲ್ಲಾ ಹೋರಾಟಗಳು ನಡೆದರೂ ಕಾಸರಗೋಡಿನ ಕನ್ನಡಿಗರಿಗೆ ಘೋರ ಅನ್ಯಾಯವಾಯಿತು. ಏಕೆಂದರೆ ಕಾಸರಗೋಡು ಕುರಿತ ಕರಡು ಪ್ರಾಂತ್ಯ ಪುನರ್‌ವಿಂಗಡನಾ ಮಸೂದೆಯ ಲೋಕಸಭೆ ಮತ್ತು ರಾಜ್ಯಸಭೆಯ ಸಮ್ಮತಿ ಪಡೆದು ಶಾಸನವಾಗಿ ಹೊರಹೊಮ್ಮಿತು. ಒಂದರ್ಥದಲ್ಲಿ ಅಂದು ಕಾಸರಗೋಡು ತಾಲ್ಲೂಕಿನ ಕನ್ನಡ ಪ್ರದೇಶವು ಕೆ.ಎಂ.ಫಣಿಕ್ಕರ್ ಅವರಿಂದಾಗಿ ಕೇರಳಕ್ಕೆ ದಾನವಾಗಿ ಸಂದಿತ್ತೆನ್ನಬಹುದು. ೧.೧೧.೧೯೫೬ಕ್ಕೆ ಕಾಸರಗೋಡು ಶಾಸ್ರ‍್ತೋಕ್ತವಾಗಿ, ಜನಾಭಿಪ್ರಾಯಕ್ಕೆ ಪ್ರಜಾಪ್ರಭುತ್ವ ತತ್ವಗಳಿಗೆ ವಿರೋಧವಾಗಿ ಕೇರಳಕ್ಕೆ ಸೇರಿದಾಗ ಕಾಸರಗೋಡಿನ ಕನ್ನಡ ಜನರೆಲ್ಲರೂ ಆ ಕೆಟ್ಟ ದಿನವನ್ನು ಕರಾಳದಿನವನ್ನಾಗಿ ಆಚರಿಸಿದರು. ಆ ದಿನವನ್ನು ಇಂದಿಗೂ ಸಹ ಕರಾಳ ದಿನವಾಗಿಯೇ ಆಚರಿಸಿಕೊಂಡು ಬರಲಾಗುತ್ತಿದೆ.

೧೯೬೭ನೆಯ ಸೆಪ್ಟೆಂಬರ್ ತಿಂಗಳಿನಲ್ಲಿ ಕಾಸರಗೋಡಿನ ಸಾವಿರಾರು ಕನ್ನಡಿಗರು ಬೆಂಗಳೂರಿಗೆ ಬೃಹತ್ ಜಾಥಾ ಹೊರಟರು. ಸುಮಾರು ೧೦ ಬಸ್ಸುಗಳಲ್ಲಿ ಮಡಿಕೇರಿ ಮಾರ್ಗವಾಗಿ ಬರುವಾಗ ಮಡಿಕೇರಿಯಲ್ಲಿ ನಗರಸಭಾ ಸದಸ್ಯರು ಹಾಗೂ ರಸ್ತೆಯ ಪಕ್ಕದಲ್ಲಿ ಸಿಗುವ ಗ್ರಾಮಗಳ ಜನರು ಇವರಿಗೆ ಸ್ವಾಗತ ಸಮಾರಂಭ ನಡೆಸಿ ಶುಭ ಕೋರಿದರು. ಕಾಸರಗೋಡು ಉಳಿವಿಗಾಗಿ ತಮ್ಮೆಲ್ಲರ ಬೆಂಬಲ ವ್ಯಕ್ತಪಡಿಸಿದರು. ಮರುದಿನ ಬೆಂಗಳೂರು ನಗರದಲ್ಲಿ ಬೃಹತ್ ಜಾಥಾ ನಡೆಸಿ ನಂತರ ವಿಧಾನ ಸಭೆ ನಡೆಯುತ್ತಿರುವ ಸಂದರ್ಭದಲ್ಲಿಯೇ ವಿಧಾನಸೌಧದ ಮುಂದೆ ಧರಣಿ ಸತ್ಯಾಗ್ರಹ ನಡೆಸಿದ್ದರು. ಧರಣಿ ನಡೆಯುತ್ತಿದ್ದಂತಹ ಸ್ಥಳಕ್ಕೆ ಆಗಮಿಸಿದ ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಹಾಗೂ ಅವರ ಸಹೋದ್ಯೋಗಿಗಳಾಗಿದ್ದಂತಹ ಕೆ.ಆರ್.ಆಚಾರ್, ಕೆ.ಬಾಲಕೃಷ್ಣರಾಯರು ತನ್ನ ನಾಡಿನ ಜನತೆಗೆ ಸಾಂತ್ವನದ ಮಾತುಗಳನ್ನಾಡಿದ್ದಲ್ಲದೆ ನಾನೂ ಸಹ ನಿಮ್ಮವನೇ ಎಂಬ ಭರವಸೆಯ ಮಾತನ್ನು ಒತ್ತಿ ಒತ್ತಿ ಹೇಳಿ ಸಭೆಗೆ ಹಾಗೂ ಜಾಥಾಕ್ಕೆ ಹೊಸ ಚೈತನ್ಯ, ಹುಮ್ಮಸ್ಸನ್ನು ಮೂಡಿಸಿದರು ಎಂದು ಪ್ರಜಾವಾಣಿ ದಿನಪತ್ರಿಕೆ (೧೮.೦೯.೧೯೬೭)ಯಲ್ಲಿ ಉಲ್ಲೇಖಿಸಲಾಗಿದೆ.

೧೯೫೭-೧೯೬೨-೧೯೬೭ರಲ್ಲಿ ನಡೆದಂತಹ ಮಹಾ ಚುನಾವಣೆಯಲ್ಲಿ ಕರ್ನಾಟಕ ಪ್ರಾಂತೀಕರಣ ಸಮಿತಿಯು ಕಾಸರಗೋಡಿನಲ್ಲಿ ಅಭ್ಯರ್ಥಿಗಳನ್ನೂ ಚುನಾವಣಾ ಕಣಕ್ಕಿಳಿಸಿತು. ಮಿಕ್ಕ ಕ್ಷೇತ್ರಗಳಲ್ಲಿ ಕಾಸರಗೋಡನ್ನು ಕರ್ನಾಟಕಕ್ಕೆ ವಿಲೀನಗೊಳಿಸಲು ಸಮ್ಮತಿಸುವಂತಹ ಅಭ್ಯರ್ಥಿಗಳನ್ನು ಬೆಂಬಲಿಸಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಉಮೇದುವಾರರ ಪರವಾಗಿ (ಕನ್ನಡ ನಾಡಿನ ಹಿರಿಮೆ ಗರಿಮೆಗಳನ್ನು ಸೇರಿಸಿಕೊಂಡು, ಕಾಸರಗೋಡು ಕನ್ನಡನಾಡಿನ ಅವಿಭಾಜ್ಯ ಅಂಗವೆಂದು ಅರಿವು ಮೂಡಿಸುವುದಕ್ಕಾಗಿ) ಮಾಡಿರುವ ಭಾಷಣಗಳು ಇಂದು ಇತಿಹಾಸದಲ್ಲಿ ಉಲ್ಲೇಖಿತವಾಗಿದೆ. ಉತ್ಸಾಹಿ ಕಾರ್ಯಕರ್ತರು ಕಾಸರಗೋಡಿನ ಮೂಲೆ ಮೂಲೆಗಳಲ್ಲಿ ಸಂಚರಿಸಿ, ಮನೆಮನೆಗಳನ್ನು ಸಂದರ್ಶಿಸಿ ಕಾಸರಗೋಡು ಕನ್ನಡ ನಾಡೆಂಬ ಕೂಗಿನ ಚಳವಳಿಗೆ ಪ್ರಚಾರ ಕೊಟ್ಟರು. ಚುನಾವಣೆ ಸಂದರ್ಭದಲ್ಲಿ ಜನರಿಗೆ “ಕಾಸರಗೋಡಿನ ಶ್ರೀಮಂತ ಸಂಸ್ಕೃತಿ ಪರಂಪರೆಯು, ಕೇರಳದ ನೆರೆ ನೀರಿನಲ್ಲಿ ಕೊಚ್ಚಿ ಹೋಗಬಾರದು. ನಾವು, ನಮ್ಮ ಮಕ್ಕಳು ನಮ್ಮತನವನ್ನು ಮರೆಯಬಾರದು” ಎಂಬ ಕಳಕಳಿಯ ಮಾತುಗಳನ್ನು ಹೇಳಿ ಜನರಲ್ಲಿ ಪ್ರೀತಿ, ಅಭಿಮಾನದ ಜೊತೆಗೆ ಕ್ರಾಂತಿಕಾರಕ ಮನೋಭಾವನೆಯನ್ನು ಸೃಷ್ಟಿಸಲು ಪ್ರಯತ್ನಿಸಿದರು.

ಇಂತಹ ಸಂದರ್ಭದಲ್ಲಿಯೇ ಮಹಾಜನ್ ಅವರು (ಏಪ್ರಿಲ್ ತಿಂಗಳು) ಮಂಗಳೂರಿಗೂ, ಕಾಸರಗೋಡಿಗೂ ಭೇಟಿ ನೀಡಿ ಸಾಕ್ಷ್ಯ ಸಂಗ್ರಹ ಮಾಡಿದರು. ಕರ್ನಾಟಕ ಸಮಿತಿಯ ಪರವಾಗಿ ಮಹಾಜನ್ ಆಯೋಗಕ್ಕೆ ಸಲ್ಲಿಸಲಾಗಿದ್ದ ವರದಿಯನ್ನು ಸುಮಾರು ಎರಡು ತಿಂಗಳಿಗಿಂತಲೂ ಹೆಚ್ಚು ದಿನ ಶ್ರಮ ವಹಿಸಿ ತಯಾರಿಸಿದರು. ಆಗ ಕರ್ನಾಟಕ ಸಮಿತಿಯ ಅಧ್ಯಕ್ಷರು ಬಿ.ಎನ್. ಕಕ್ಕಿಲ್ಲಾಯರಾಗಿದ್ದರು. ಕರ್ನಾಟಕ ಸರ್ಕಾರವು ಮಹಾಜನ ವರದಿ ಕಾರ್ಯ ಪ್ರಾರಂಭಿಸುವುದಕ್ಕೂ ಮೊದಲೇ ಅದರ ತೀರ್ಪಿಗೆ ಬದ್ಧರಾಗಿರುವುದು ತಿಳಿಸಿತು. ನಂತರ ೧೯೬೭ರಲ್ಲಿ ವರದಿಯು ಪ್ರಕಟಗೊಂಡಾಗ ಕಾಸರಗೋಡು ಕರ್ನಾಟಕಕ್ಕೆ ಸೇರಿಸುವಂತೆ ತೀರ್ಮಾನಿಸಲಾಗಿತ್ತು. ಇದರಿಂದ ಕಾಸರಗೋಡಿನ ಜನತೆಗೆ ಸಂತೋಷವಾಗುವಷ್ಟರಲ್ಲಿಯೇ ಬೆಳಗಾವಿಯು ಮಹಾರಾಷ್ಟ್ರಕ್ಕೆ ಸೇರಿಸಲಿಲ್ಲವೆಂದು ಮರಾಠಿಗಳು ಮಹಾಜನ ವರದಿಯ ಜಾರಿಯ ವಿರುದ್ಧ ಉಗ್ರ ಚಳವಳಿ ಮಾಡಿದ್ದಲ್ಲದೆ, ವರದಿಗೆ ಮೊದಲು ಒಪ್ಪಿಗೆ ನೀಡಿ ನಂತರ ಒಪ್ಪುವುದಿಲ್ಲವೆಂದು ಸಾರಿ, ಮಾತಿಗೆ ತಪ್ಪಿದರು.

ಇಂದು ಡಾ. ಕಯ್ಯಾರ ಕಿಞ್ಞಣ್ಣ ರೈ ಅವರ ಅಧ್ಯಕ್ಷತೆಯಲ್ಲಿ ಮುನ್ನಡೆದುಕೊಂಡು ಬರುತ್ತಿರುವ ‘ಕರ್ನಾಟಕ ಏಕೀಕರಣ ಸಮಿತಿ’ಯು ಕಾಸರಗೋಡಿನಲ್ಲಿ ಕನ್ನಡ ಭಾಷೆಗೆ, ಕನ್ನಡ ಜನರಿಗೆ ಕೇರಳ ಸರ್ಕಾರದಿಂದ ಹಾಗೂ ಸರ್ಕಾರಿ ನೌಕರರಿಂದ ಆಗುತ್ತಿರುವ ಅನ್ಯಾಯವನ್ನು ಕೇರಳ ಸರ್ಕಾರಕ್ಕೆ ಮತ್ತು ಕರ್ನಾಟಕ ಸರ್ಕಾರಕ್ಕೆ ಎಚ್ಚರಿಸುತ್ತಾ ಬರುತ್ತಿದೆ. ಇಂದಿಗೂ ಕಾಸರಗೋಡಿನಲ್ಲಿ ಕನ್ನಡಿಗರ ಏಕಮಾತ್ರ ಕಾವಲುಗಾರ ‘ಕರ್ನಾಟಕ ಏಕೀಕರಣ ಸಮಿತಿ’ ಎಂದರೆ ಹೆಮ್ಮೆಯ ಮಾತೆ ಸರಿ.

ನಮ್ಮ ಗಡಿನಾಡಿನಲ್ಲಿ ಕನ್ನಡದ ಪ್ರದೇಶದಲ್ಲಿದ್ದೂ ನೆರೆಯ ರಾಜ್ಯಕ್ಕೆ ಸೇರಲು ಹೋರಾಡುತ್ತಿರುವ ಸಹೋದರ ಸಹೋದರಿಯರಿಗೆ ಅಜಂತೆಯ ಚಿತ್ರಕಲಾ ವೈಭವ, ಬೇಲೂರು, ಹಳೆಬೀಡು, ಸೋಮನಾಥಪುರ, ತಲಕಾಡು, ಬಾದಾಮಿ, ವಿಜಯನಗರಗಳ ಶಿಲ್ಪ ವೈಭವ, ಮೈಸೂರು ಬೆಂಗಳೂರು ಅರಮನೆಗಳ ಸುಂದರ ಸೊಬಗಿನ ವೈಭವ ತಿಳಿದಿಲ್ಲವೆನ್ನಬಹುದು. ಕರ್ನಾಟಕ ಸಂಗೀತದ ನಾದವೈಭವ ಸಾವಿರಾರು ವರ್ಷಗಳಿಂದ ಬೆಳೆದು ಬಂದಿರುವ ಸಾಹಿತ್ಯ ಸಂಸ್ಕೃತಿಗಳ ವೈಭವವನ್ನು ಮರೆಯುತ್ತಿರುವುದೇಕೆ ಅನಿಸುತ್ತದೆ. ಕನ್ನಡದ ಗಡಿ ಪ್ರದೇಶಗಳು, ಅದು ಬೆಳಗಾವಿಯೇ ಆಗಿರಲಿ, ಕಾಸರಗೋಡೇ ಆಗಲಿ, ಅಥವಾ ಆಂಧ್ರದ ಗಡಿಭಾಗಗಳೇ ಆಗಿರಲಿ ಇವುಗಳೆಲ್ಲವೂ ವೀರರ ಭೂಮಿಗಳು. ಇದಕ್ಕೆ ಸಾಕ್ಷಿಯಾಗಿ ಇಂದಿಗೂ ಆ ಭಾಗದ ಊರು ಊರುಗಳಲ್ಲಿ ಕಂಡುಬರುವ ವೀರಗಲ್ಲುಗಳು, ಕನ್ನಡದ ಶಾಸನಗಳು ಪ್ರಾಣತ್ಯಾಗ ಮತ್ತು ಬಲಿದಾನ ವಿಷಯಗಳನ್ನು ಸಾರುತ್ತಾ ನಿಂತಿವೆ. ಇದನ್ನೇ ಡಾ. ಬಿ.ಆರ್. ಅಂಬೇಡ್ಕರ್‌ರವರು ಹೇಳಿದ್ದಾರೆ. ‘ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು’ ಎಂದು ಈ ಮಾತು ಸರ್ವಕಾಲಕ್ಕೂ ಪ್ರಸ್ತುತವೆನಿಸಿಕೊಳ್ಳುತ್ತದೆ. ಈ ಹಂತದಲ್ಲಿ ಕನ್ನಡಿಗರು ಎಚ್ಚರಗೊಳ್ಳಬೇಕಾದ ಪ್ರಮುಖ ಅಂಶಗಳು ಈ ಕೆಳಗಿನಂತೆ ಗುರುತಿಸಬಹುದಾಗಿದೆ.

ಇಂದು ಒಂದರ್ಥದಲ್ಲಿ ಜಾತಿ, ಕುಲ, ಪಂಥ, ಧರ್ಮಗಳ ಭಾವನೆಗಳಿಂದ ಹೊರತಾಗಿ, ನಾಡು, ನುಡಿಯ ಏಳ್ಗೆಯ ಗರ್ಭದಲ್ಲಿ ಬೆಳೆಯುತ್ತಿರುವ ನಾವು ನಮ್ಮ ನಾಡದೇವಿಯನ್ನು ಪೋಷಿಸುವುದರ ಮೂಲಕ ನಮ್ಮನ್ನು ನಾವೇ ಪೋಷಿಸಿಕೊಳ್ಳಬೇಕಾಗಿದೆ. ಕೇವಲ ಗತಕಾಲದ ಇತಿಹಾಸದ ವೈಭವೀಕರಿಸಿದ ಅಂಶವನ್ನು ಉದ್ಗರಿಸುವುದರಿಂದ ಯಾವ ಪ್ರಯೋಜನವೂ ಆಗಲಾರದು. ಕೇವಲ ಸಭೆ ಸಮ್ಮೇಳನಗಳಲ್ಲಿ ಘೋಷಣೆ, ಕಪ್ಪು ಬಾವುಟ ಪ್ರದರ್ಶನ, ಸಭಾತ್ಯಾಗ, ಮುಷ್ಕರ, ಘೇರಾವೋ, ಕ್ರೌರ್ಯ ಮಾಡುವುದರಿಂದ ಏನಾದೀತು? ಕುರುಡರಿಗೆ ರೇಬನ್ ಗ್ಲಾಸ್ ಹಾಕಿದರೆ ಆಗುವ ಪರಿಣಾಮವಾದರೂ ಏನು? ಮೊದಲು ಅವರಿಗೆ ಕಣ್ಣನ್ನು ಜೋಡಿಸಿ ಅವರ ಜೀವನಕ್ಕೆ ಚೈತನ್ಯ ನೀಡಬೇಕಾಗಿದೆ. ಅವರ ನರನಾಡಿನಲ್ಲಿ ನವ ಚೈತನ್ಯವನ್ನು ಉಂಟುಮಾಡಬೇಕಾಗಿದೆ. ಈ ಕಾರ್ಯ ಇಂದಿನ ದಿನದಲ್ಲಿ ನಮ್ಮ ರಾಜ್ಯದ ಗಡಿ, ನೆಲ, ಜಲದ ಉಳಿವಿಗಾಗಿ ಹೆಚ್ಚಾಗಿ ನಡೆಯಬೇಕಾಗಿದೆ. ಈ ಹಂತದಲ್ಲಿ ಭಾರತೀಯ ಸಂಸ್ಕೃತಿಗೆ ಕರ್ನಾಟಕದ ಕೊಡುಗೆಯನ್ನು ನೀಡಿ ಅಮರರಾದ ಧಾರ್ಮಿಕ ಮಹಾಪುರುಷರು, ಸಾಹಿತಿಗಳು, ಸಾಂಸ್ಕೃತಿಕ ಸಾಧಕರು ಅನುಸರಿಸಿದ, ಸಾರಿದ ತಪೋನಿಷ್ಠೆ ನಮ್ಮಲ್ಲಿ ಅಳವಡಿಸಬೇಕಾಗಿದೆ. ಜಗತ್ತಿನ ಗಮನವನ್ನು ಇಂದಿಗೂ ತನ್ನತ್ತಾ ಸೆಳೆದು ನಿಂತಿರುವ ವಾಸ್ತು ಶಿಲ್ಪಗಳ ಅಗಾಧ ಸಾಮರ್ಥ್ಯದ ಅಮರ ಸಂಕೇತಗಳಿಗೆ, ನಮ್ಮ ಕೊಡುಗೆಗಳನ್ನು ನೀಡಬೇಕಾಗಿದೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿರುವ ಶಾಸನಗಳು, ಕೈಫಿಯತ್ತುಗಳು ಹಾಗೂ ಸಾಂಸ್ಕೃತಿಕ ಸ್ಥಳಗಳ ಬಗ್ಗೆ ಆಳವಾದ ಅಧ್ಯಯನ ನಡೆಯಬೇಕಾಗಿದೆ. ಪ್ರಾಚೀನ ಪರಂಪರೆಯ ಉಜ್ವಲ ಇತಿಹಾಸವನ್ನೊಳಗೊಂಡ ಸಾಹಿತ್ಯ ಸೃಷ್ಟಿಯನ್ನು ಉಳಿಸಿಕೊಳ್ಳಲು ನಮ್ಮ ಪಾಲಿನ ಕರ್ತವ್ಯವನ್ನು ಅನುವುಗೊಳಿಸಬೇಕಾಗಿದೆ. ಭಾರತದ ಯಾವ ರಾಜ್ಯಗಳಲ್ಲಿಯೂ ದೊರೆಯದಷ್ಟು ನೈಸರ್ಗಿಕವಾಗಿ ದೊರೆತಿರುವ ಕರ್ನಾಟಕದ ಜಲಸಂಪತ್ತು ಇವುಗಳ ಪ್ರಯೋಜನವನ್ನು ಸಂಪೂರ್ಣವಾಗಿ ಪಡೆಯಬೇಕಾಗಿದೆ. ಭಾರತದಲ್ಲಿ ಮೊದಲನೇ ವರ್ಗದ ೨೨ ಖನಿಜಗಳಲ್ಲಿ ೧೬ ಖನಿಜಗಳು ಕರ್ನಾಟಕದಲ್ಲಿಯೇ ದೊರೆಯುತ್ತವೆ ಎಂದು ಸಂಶೋಧಕರು ಹೇಳುತ್ತಾರೆ. ಈ ಸಂಪತ್ತಿನ ಪೂರ್ಣ ಪ್ರಯೋಜನ ಕರ್ನಾಟಕಕ್ಕೆ ದೊರೆಯುವಂತೆ ನೋಡಿಕೊಳ್ಳಬೇಕಾಗಿದೆ.

ಕರ್ನಾಟಕದಲ್ಲಿ ಹರಿಯುತ್ತಿರುವ ಕೃಷ್ಣಾ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ಭೀಮಾ, ವರದಾ, ಕಾವೇರಿ, ಶರಾವತಿ, ಕಾಳಿ, ಅಘನಾಶಿನಿ, ನೇತ್ರಾವತಿ, ಕಪಿಲೆ, ತುಂಗಭದ್ರಾ, ಹೇಮಾವತಿ ಮುಂತಾದ ನದಿಗಳ ಪ್ರಯೋಜನವನ್ನು ಸಾಕಷ್ಟು ಪ್ರಮಾಣದಲ್ಲಿ ಪಡೆಯಬೇಕಾಗಿದೆ. ಕೋಲಾರದಲ್ಲಿ ಚಿನ್ನದಗಣಿ ಇದ್ದರೆ, ರಾಯಚೂರಿನಲ್ಲಿ ಹಟ್ಟಿ ಚಿನ್ನದಗಣಿ ಇದ್ದರೆ, ಮಲೆನಾಡಿನಲ್ಲಿ ಅರಣ್ಯ ಸಂಪತ್ತಿದೆ. ಚಿತ್ರದುರ್ಗದಲ್ಲಿ ತಾಮ್ರ ದೊರಕಿದರೆ, ಬಳ್ಳಾರಿಯಲ್ಲಿ ಖನಿಜ ಸಂಪತ್ತಿದೆ. ಇವುಗಳ ಸದುಪಯೋಗದ ಕಾರ್ಯ ಹೆಚ್ಚು ಹೆಚ್ಚಾಗಿ ಇಂದು ನಡೆಯಬೇಕಾಗಿದೆ.

ಜಗತ್ತಿನ ಅದ್ಭುತಗಳಲ್ಲೊಂದು ಎಂದು ಹೆಸರುವಾಗಿರುವ ವಿಜಾಪುರ ಗೋಳಗುಮ್ಮಟದ ಜೊತೆಗೆ ಐಹೊಳೆ, ಪಟ್ಟದಕಲ್ಲು, ಬಾದಾಮಿ, ಬೇಲೂರು, ಹಳೇಬೀಡು, ಹಂಪೆ, ಶ್ರವಣ ಬೆಳಗೊಳ, ಸೋಮನಾಥಪುರ, ತಲಕಾಡುಗಳಂಥ, ನೂರಾರು ಶಿಲ್ಪಕಲೆಗಳ ಅದ್ಭುತ ಸಂಕೇತಗಳ ರಕ್ಷಣೆಯಾಗಬೇಕಾಗಿದೆ. ಅಪಾರ ಸಮುದ್ರ ದಂಡೆಯನ್ನು ಪಡೆದಿರುವ ನಮ್ಮ ರಾಜ್ಯ ಕರಾವಳಿ ಪ್ರದೇಶದಲ್ಲಿ ಮೀನುಗಾರಿಕೆಯ, ಗೊಬ್ಬರದ, ಸಾಗಾಣಿಕೆಯ, ಚಿಕ್ಕಬಂದರುಗಳ ಹಾಗೂ ಅಂತಾರಾಷ್ಟ್ರೀಯ ಬಂದರುಗಳನ್ನು ಸ್ಥಾಪಿಸಿ ಅಭಿವೃದ್ಧಿ ಕಾರ್ಯವನ್ನು ಸಾಧಿಸಬೇಕಾಗಿದೆ. ಇವುಗಳೆಲ್ಲದರಲ್ಲಿಯೂ ಮುಖ್ಯವಾದದ್ದು ಅಹಾರ ಧಾನ್ಯ ಹಾಗೂ ವಾಣಿಜ್ಯ ಪದಾರ್ಥಗಳ ಹೆಚ್ಚು ಉತ್ಪಾದನೆಗೆ ಹೆಚ್ಚಿನ ಗಮನ ನೀಡಬೇಕಾಗಿದೆ.

ಈಗಿರುವ ಅನೇಕ ಸರ್ಕಾರಿ ಉದ್ದಿಮೆಗಳನ್ನು ಸುಸ್ಥಿತಿಯಲ್ಲಿ ಉಳಿಸಿಕೊಂಡು, ನೈಸರ್ಗಿಕ ಸಂಪತ್ತನ್ನು ಬಳಸಿಕೊಂಡು ಅನೇಕ ಹೊಸ ಹೊಸ ಉದ್ದಿಮೆಗಳನ್ನು ಪ್ರಾರಂಭಿಸಬೇಕಿದೆ. ಹೊರನಾಡಿನಿಂದ ಬಂದು ಕರ್ನಾಟಕವನ್ನು, ಅದರಲ್ಲೂ ರಾಜಧಾನಿ ಬೆಂಗಳೂರನ್ನು ಆಕ್ರಮಿಸಿಕೊಂಡು ಕನ್ನಡಿಗರನ್ನೇ ಅಲ್ಪಸಂಖ್ಯಾತರನ್ನಾಗಿ ಮಾಡಿರುವ ಔದ್ಯಮಿಕರ ಆಮದನ್ನು ತಡೆಗಟ್ಟಬೇಕಾಗಿದೆ. ಭಾರತದಲ್ಲಿ ಎಲ್ಲಿಯೂ ಅವಕಾಶ ಸಿಗದೇ ಇರುವ ಉದ್ಯಮಿಗಳಿಗೆ, ಕೂಲಿಕಾರರಿಗೆ, ವ್ಯಾಪಾರಿಗಳಿಗೆ, ಕರ್ನಾಟಕದಲ್ಲಿ ಆಶ್ರಯ ದೊರೆಯುತ್ತಿರುವುದನ್ನು ಪ್ರತಿಬಂಧಿಸದೇ ಹೋದರೆ ಈ ನಾಡು ತನ್ನ ಮೂಲ ಅಸ್ತಿತ್ವವನ್ನೇ ಕಳೆದುಕೊಳ್ಳಬಹುದು. ನೆರೆಯ ರಾಜ್ಯಗಳಿಂದ ವಲಸೆ ಬಂದು ನೆಲೆಸಿರುವವರಿಗೆ ಉದ್ಯಮಗಳಲ್ಲಿ ಅವಕಾಶ ನೀಡುತ್ತಿರುವ ಅಧಿಕಾರಿಗಳಿಗೆ ಹಾಗೂ ಅನ್ಯ ಭಾಷೆಯಲ್ಲಿ ತಯಾರಾದ ಚಲನಚಿತ್ರಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವವರಿಗೆ ತಕ್ಕ ಪಾಠವನ್ನು ಕಲಿಸುವ ಮುಖೇನ ಕನ್ನಡಿಗರಿಗೆ ಆದ್ಯತೆ ನೀಡುವಂತೆ ಕಟ್ಟುನಿಟ್ಟಿನ ಆಜ್ಞೆಯನ್ನು ಅನುಷ್ಠಾನಕ್ಕೆ ತರಬೇಕಾಗಿದೆ.

ರಾಜ್ಯದಲ್ಲಿ ತಾಂಡವವಾಡುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲು, ಗ್ರಾಮಾಂತರ ಪ್ರದೇಶಗಳಲ್ಲಿ ಸಣ್ಣ ಕೈಗಾರಿಕೆಗಳನ್ನು ದೊಡ್ಡ ಪ್ರಮಾಣದಲ್ಲಿ ಪ್ರಾರಂಭಿಸಿ ನಿರುದ್ಯೋಗಿ ಪದವೀಧರರಿಗೆ, ತಕ್ಕ ಮಟ್ಟಿನ ಪರಿಹಾರವನ್ನು ಒದಗಿಸಬೇಕಾಗಿದೆ. ಬಡತನದ ಪರಮಾವಧಿಯನ್ನು ಅನುಭವಿಸುತ್ತಿರುವ ರೈತ ಕೂಲಿಕಾರ, ಕೂಲಿಕಾರರಿಗೆ ಉದ್ಯೋಗಾವಕಾಶವನ್ನು ಒದಗಿಸುವುದಲ್ಲದೇ, ರೈತರ ಕೃಷಿ ಉತ್ಪನ್ನಗಳಿಗೆ ಬೆಂಬಲದ ಬೆಲೆಯನ್ನು ನಿಗದಿಪಡಿಸಿದ ಅವರಲ್ಲಿ ವಿಶ್ವಾಸ ಹೆಚ್ಚಿಸಬೇಕಾಗಿದೆ. ಜೊತೆಗೆ ಲಂಚ, ಸ್ವಜನ ಪಕ್ಷಪಾತ, ಅಧಿಕಾರ ದುರುಪಯೋಗ ಇತ್ಯಾದಿ ಘಾತುಕ ಕೃತ್ಯದಲ್ಲಿ ತೊಡಗಿರುವ ಅಧಿಕಾರಿಗಳನ್ನು ಕಂಡು ಹಿಡಿದು, ಮುಲಾಜಿಲ್ಲದೆ ಶಿಕ್ಷಿಸುವ ದಿಟ್ಟ ಕ್ರಮವನ್ನು ಆಡಳಿತ ಸುಧಾರಣೆಯ ಮೂಲಕ ತರಬೇಕಾಗಿದೆ. ಸ್ವಾರ್ಥಕ್ಕಾಗಿ ಜಾತಿ, ಉಪಜಾತಿಗಳನ್ನು ಪೋಷಿಸುತ್ತಾ ಜಾತಿಯ ಆಧಾರದ ಮೇಲೆ ಸಮಾಜವನ್ನು ಇಬ್ಭಾಗಿಸಿ, ಅಜ್ಞ ಜನರ ದುರುಪಯೋಗಪಡಿಸಿಕೊಳ್ಳುವ ರಾಜಕೀಯ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ಸಮಾಜದಿಂದ ದೂರವಿಡಬೇಕಾಗಿದೆ. ಮುಖ್ಯವಾಗಿ ಗಡಿ ಪ್ರದೇಶದಲ್ಲಿ ಕನ್ನಡ ಶಾಲೆ, ಕನ್ನಡ ಶಿಕ್ಷಕರ ಕೊರತೆ ಇಲ್ಲದಂತೆ ನೋಡಿಕೊಳ್ಳಬೇಕಾಗಿದೆ. ಹಾಗೆಯೇ ಈ ಭಾಗಗಳಲ್ಲಿ ಜನರು ಎದುರಿಸುತ್ತಿರುವ ಆರೋಗ್ಯ, ವಸತಿ, ಅಹಾರದಂತಹ ಮೂಲಭೂತ ಸೌಕರ್ಯದ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಈ ಭಾಗದ ಜನರಲ್ಲಿ ಕನ್ನಡ ನಾಡಿನ ಬಗ್ಗೆ ಹೆಮ್ಮೆ ಮೂಡಿಸುವ ಕೆಲಸ ತ್ವರಿತಗತಿಯಲ್ಲಿ ಮಾಡಬೇಕಾಗಿದೆ. ಕೇವಲ ರಾಜಕೀಯ ಪಕ್ಷಗಳ ವ್ಯಾಮೋಹಕ್ಕೆ ಒಳಗಾಗಿ ನಿರುಪಯುಕ್ತ ವ್ಯಕ್ತಿಗಳನ್ನು ಚುನಾಯಿಸುವ ಅನಿಷ್ಟ ಪದ್ಧತಿಯನ್ನು ಇನ್ನಾದರೂ ಕೈಬಿಟ್ಟು, ಯೋಗ್ಯತೆ ಇರುವ ಹಾಗೂ ಸಮಾಜದ (ಕ್ಷೇತ್ರದ) ಹಿತರಕ್ಷಣೆಯನ್ನು ಕಾಪಾಡಬಲ್ಲ ಯಾವುದೇ ವ್ಯಕ್ತಿಯಿರಲಿ, ಅಂಥವರನ್ನು ಚುನಾಯಿಸುವ ಪ್ರಜ್ಞೆ ಮತದಾರರಲ್ಲಿ ಮೂಡಬೇಕಾಗಿದೆ. ಕೊನೆಯದಾಗಿ ಕರ್ನಾಟಕ ರಾಜ್ಯ ನಿರ್ಮಾಣವಾಗಿ ೬೦ ವರ್ಷಗಳು ಗತಿಸಿವೆ. ರಾಜ್ಯ ಪುನರ್‌ವಿಂಗಡನಾ ಅಯೋಗದ ಅಚಾತುರ್ಯದ ಮೂಲಕ ಅನ್ಯ ರಾಜ್ಯಗಳೊಂದಿಗೆ ಸೇರ್ಪಡೆಯಾಗಿರುವ ಕನ್ನಡ ಪ್ರದೇಶಗಳು ಪುನಃ ಕರ್ನಾಟಕ ರಾಜ್ಯದಲ್ಲಿ ಸಮಾವೇಶಗೊಳ್ಳುವಂತೆ ಹೋರಾಡಬೇಕಾಗಿದೆ. ಇದಕ್ಕೆ ರಾಜಕೀಯದ ಜೊತೆ ಸಂಸ್ಕೃತಿಯ ಪ್ರಮುಖ ಪಾತ್ರ ವಹಿಸಬೇಕಾಗಿದೆ.

ಸುಖದ ಮೂಲ ಧರ್ಮ, ಧರ್ಮದ ಮೂಲ ಅರ್ಥ, ಅರ್ಥದ ಮೂಲ ರಾಜ್ಯ ಎಂದು ದಂಡ ನೀತಿಯನ್ನು ರಾಷ್ಟ್ರಕ್ಕೆ ಸಾರಿದ ಚಾಣಕ್ಯನು ಮೇಲಿನದನ್ನು ಎಷ್ಟೋ ಶತಮಾನಗಳ ಹಿಂದೆ ಸಾರಿದ್ದರೂ ಇಂದಿಗೂ ಸಹ ಪ್ರಸ್ತುತವೆನಿಸುತ್ತದೆ. ಇಂದು ನಮ್ಮ ನಾಡು ಎಲ್ಲಾ ರೀತಿಯಲ್ಲಿಯೂ ಏಕೀಕರಣಗೊಂಡಿದೆ. ಅದು ರಾಜಕೀಯ ಏಕೀಕರಣವಿರಬಹುದು ಅಥವಾ ಅಖಂಡ ಕರ್ನಾಟಕದ ಸಾಂಸ್ಕೃತಿಕ ಏಕೀಕರಣವಿರಬಹುದು. ಆದರೂ ಸಹ ಕರ್ನಾಟಕ ಸಂಪೂರ್ಣವಾಗಿ ಏಕೀಕರಣ ಹೊಂದಿದೆ ಎಂದು ಧೈರ್ಯವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಕನ್ನಡನಾಡಿನ ನೆಲ ಜಲಗಳು ವಿವಾದಗಳ ಸುಳಿಯಲ್ಲಿ ಸಿಲಿಕಿವೆ. ಇದು ನಮ್ಮ ಕನ್ನಡ ಹಾಗೂ ರಾಷ್ಟ್ರೀಯತೆಯ ಅಧೋಗತಿಗೆ ಹಿಡಿದ ಕನ್ನಡಿಯಾಗಿದೆ. ನಿಜ ಹೇಳಬೇಕೆಂದರೆ ಕನ್ನಡ ನಾಡಿನಲ್ಲಿ ಬೆಳೆದು ಜೀವನ ನಡೆಸುತ್ತಿದ್ದೂ ಕನ್ನಡ ನಾಡು ನುಡಿಯನ್ನು ಮರೆಯುತ್ತಿರುವವರನ್ನು ಆ ಭಾಷೆಯನ್ನು ಅಲಕ್ಷ್ಯದಿಂದ ಕಾಣುತ್ತಿರುವವರನ್ನು ಏನೆಂದು ಕರೆಯೋಣ. ನನ್ನ ದೃಷ್ಟಿಯಲ್ಲಿ ಅವರನ್ನು ಹಿಟ್ಲರ್ ಮುಸುಲೋನಿಗಳಂತೆ ಹೊರದೂಡಲು ಯತ್ನಿಸಬೇಕು. ಇಂದು ಕರ್ನಾಟಕದ ಗಡಿಯ ಉದ್ದಗಲಕ್ಕೂ ಮೇಲಿನ ತೊಂದರೆ ಕಾಣುತ್ತದೆ. ಬೆಳಗಾವಿ, ಕೋಲಾರ, ಬಳ್ಳಾರಿಗಳಲ್ಲಿ ಮರಾಠಿಗರು, ತೆಲುಗರು ಕನ್ನಡದ ಮಣ್ಣಿನಲ್ಲಿ ತಿಂದು ತೇಗುತ್ತಿದ್ದರೂ ಕನ್ನಡದ ಬಗ್ಗೆ ಕಿಂಚಿತ್ತೂ ಪ್ರೀತಿ ಇಲ್ಲ. ಈ ಪ್ರದೇಶಗಳಲ್ಲಿ ಕನ್ನಡದ ಕಾರ್ಯಕ್ರಮಗಳು ನಡೆಯುವುದಕ್ಕೂ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದಕ್ಕೆಲ್ಲಾ ಕನ್ನಡಿಗರಲ್ಲಿರುವ ಅಭಿಮಾನ ಶೂನ್ಯತೆಯೇ ಕಾರಣವೆನ್ನಿಸುತ್ತದೆ. ಹೀಗಾಗಬಾರದು. ಇಂಥ ಸಂದರ್ಭದಲ್ಲಿ ರಾಜ್ಯದ ಎಲ್ಲಾ ರಾಜಕೀಯ ಪಕ್ಷದವರು, ಸಾಹಿತಿಗಳು, ಚಿಂತಕರು, ಒಗ್ಗಟ್ಟಿನಿಂದ ಹೋರಾಡಿ ಜಯಗಳಿಸಬೇಕಾಗಿದೆ.