ಭಾರತೀಯರಲ್ಲಿ ಅತ್ಯಂತ ಜನಪ್ರಿಯನಾಗಿರುವ ದೇವರೆಂದರೆ ನಿಸ್ಸಂಶಯವಾಗಿಯೂ ಗಣೇಶನೇ. ಬೇರೆ ದೇವತೆಗಳಿಗಿಲ್ಲದ ಆಂಗಿಕ ನಿಲುವು ಆತನ ಜನಪ್ರಿಯತೆಗೆ ಕಾರಣವೋ? ಅಥವಾ ಆತನ ದೈವೀ ಶಕ್ತಿಗಳ ಬಗೆಗಿನ ಕಥೆಗಳು, ನಂಬಿಕೆಗಳು ಕಾರಣವೋ? ಅಥವಾ ವಿಘ್ನ ನಿವಾರಕನೆಂಬುದಕ್ಕೋ?… ಕಾರಣಗಳೇನೇ ಇದ್ದರೂ ಗಣಪತಿಯು ಭಾರತೀಯರಲ್ಲಿ ಸರ್ವಾದರಣೀಯನೂ, ಸರ್ವಾಂತರ್ಯಾಮಿಯೂ, ಆಗಿದ್ದಾನೆಂಬುದರಲ್ಲಿ ಅನುಮಾನವೇ ಇಲ್ಲ.

ಅಫ಼ಘಾನಿಸ್ಥಾನದ ನಿಂತಿರುವ ಭಂಗಿಯ ಗಣೇಶ

ವಿವರವಾಗಿ ನೋಡಿದರೆ ಭಾರತದಲ್ಲಷ್ಟೇ ಅಲ್ಲದೆ ಪ್ರಪಂಚದ ಹಲವಾರು ದೇಶಗಳಲ್ಲಿಯೂ ಗಣಪತಿಯ ಅಸ್ಥಿತ್ವವೂ, ಪ್ರಭಾವವೂ ಇರುವುದು ಕಂಡು ಬರುತ್ತದೆ. ಪ್ರಾಚೀನ ಕಾಲದಿಂದಲೂ ಹಿಂದೂ ರಾಜರುಗಳ ಆಡಳಿತಕ್ಕೆ ಒಳಪಟ್ಟಿದ್ದ ನೆರೆಯ ದೇಶಗಳಲ್ಲಿ ಹಿಂದೂ ರಾಜರುಗಳಿಂದಾಗಿ ಗಣೇಶ ಸಹಜವಾಗೇ ಅಲ್ಲಿ ಇದ್ದ. ಅದು ಬಿಟ್ಟರೆ ಭಾರತದ ವರ್ತಕರು ತಮ್ಮ ವಾಣಿಜ್ಯ ಉದ್ದೇಶಗಳಿಗಾಗಿ ಬೇರೆಬೇರೆ ದೇಶಗಳಿಗೆ ಹೋಗುವಾಗ ವ್ಯಾಪಾರಿಗಳ ರಕ್ಷಕನೆಂಬ ನಂಬಿಕೆಯಲ್ಲಿ ಗಣಪತಿಯನ್ನು ಆ ದೇಶಗಳಿಗೆಲ್ಲಾ ಕೊಂಡೊಯ್ದು ಪರಿಚಯಿಸಿದರಂತೆ, ಭಾರತದಲ್ಲಿ ಹುಟ್ಟಿ ನಂತರ ವಿದೇಶಗಳಲ್ಲಿ ನೆಲೆ ಕಂಡುಕೊಂಡ ಬೌದ್ಧಧರ್ಮವು (ಮಹಾಯಾನ ಪಂಥ) ತನ್ನ ತಾಂತ್ರಿಕ ಅಂಶಗಳ ಗಣಪತಿಯನ್ನು ವಿದೇಶಗಳಲ್ಲಿ ಪರಿಚಯಿಸಿತು. ವಿದೇಶಗಳಿಂದ ಭಾರತಕ್ಕೆ ಬಂದ ಸನ್ಯಾಸಿಗಳೂ, ಪ್ರವಾಸಿಗಳೂ ಇಲ್ಲಿನ ಭೂ ಭಾಗಗಳಲ್ಲಿ ದೀರ್ಘಕಾಲ ಸಂಚಾರ ಮಾಡಿದ ಕಾರಣದಿಂದ ಗಣಪತಿಯಿಂದ ಪ್ರಭಾವಿತರಾಗಿ ಗಣಪತಿಯ ಕಲ್ಪನೆಯನ್ನು ತಮ್ಮ ತಮ್ಮ ದೇಶಗಳಿಗೆ ಕೊಂಡೊಯ್ದರು. ಹೀಗೆ ಗಣಪತಿಯು ನಿಜ ಅರ್ಥದಲ್ಲಿ ವಿಶ್ವವ್ಯಾಪಿಯಾದ. ಭಾರತದಲ್ಲಿ ಗಣಪತಿಯನ್ನು ದೈವಿಕವಾಗಿಯೇ ನೋಡಿದರೆ ವಿದೇಶದಲ್ಲಿ ಆತನ ಸ್ಥಾನ ಸ್ವಲ್ಪ ವಿಭಿನ್ನವಾಗಿರುವುದು ಕಾಣುತ್ತದೆ. ಅಲ್ಲಿ ಆತ ದೇವರೂ ಆಗಬಲ್ಲ, ದುಷ್ಟ್ಟಶಕ್ತಿಯ ಪ್ರತೀಕವೂ ಆಗಬಲ್ಲ!. ಸ್ತ್ರೀ ರೂಪಿಯೂ ಆಗಬಲ!!. ವಜ್ರಯಾನದ ಸಾಧಕರಿಗಂತೂ ಅವರ ಸಾಧನೆಯ ಹಾದಿಯಲ್ಲಿ ಅಡ್ಡಿ ಮಾಡುವ ಗಣಪತಿಯು ದುಷ್ಟ ಶಕ್ತಿಯಾಗಿಯೇ ಕಾಣುತ್ತಾನೆ, ಜೊತೆಗೆ ವಜ್ರಯಾನದ ಅಸಂಖ್ಯಾತ ದೇವರುಗಳ ಹಿರಿಮೆಯನ್ನು ಸಾರಲು ಅವರಿಂದ ದಮನಕ್ಕೊಳಗಾಗುವ ಬಲಿಪಶುವೂ ಆಗಿದ್ದಾನೆ, ಹಠ ಯೋಗಿಗಳ ಮತ್ತು ತಾಂತ್ರಿಕ ಮಾರ್ಗದ ಸಾಧಕರ ಸಾಧನೆಯ ಹಾದಿಯಲ್ಲಿ ಕಾಮರೂಪಿಯಾಗಿಯೂ ಕಾಣಿಸಿಕೊಳ್ಳುವ ಗಣೇಶನ ಕೆಲ ರೂಪಗಳು ಭಾರತೀಯರಿಂದ ಕಲ್ಪಿಸಿಕೊಳ್ಳಲೂ ಸಹಾ ಸಾಧ್ಯವಿಲ್ಲದಂತಿವೆ!!

ವಿನಾಯಕನ ವಿಶ್ವ ಪರ್ಯಟನೆ

ಭಾರತದಿಂದ ಹೊರಟ ಗಣೇಶನ ವಿದೇಶ ಯಾತ್ರೆಯು ಎಲ್ಲೆಲ್ಲಿಗೆ ಮುಟ್ಟಿದೆಯೆಂದು ನೋಡಿದರೆ ಶ್ರೀಲಂಕಾ, ಬಾಂಗ್ಲಾ, ಬರ್ಮಾ, ಭೂತಾನ್, ಅಫ಼್ಘಾನಿಸ್ಥಾನ, ಥೈಲ್ಯಾಂಡ್, ವಿಯೆಟ್ನಾಮ್, ಇಂಡೋನೇಶಿಯಾ, ಜಾವಾ, ಮಲಯ, ನೇಪಾಳ, ಟಿಬೆಟ್, ಚೀನಾ, ಜಪಾನ್‌ಗಳಲ್ಲೆಲ್ಲಾ ಹರಡಿದ್ದುದು ಕಂಡುಬರುತ್ತದೆ.

[ಇತ್ತೀಚಿನ ದಿನಗಳಲ್ಲಿ ಇಂಗ್ಲೆಂಡ್, ಅಮೆರಿಕಾ, ಕೆನಡಾ, ಸಿಂಗಾಪೂರ್ ಮೊದಲಾದೆಡೆ ಗಣೇಶನ ದೇವಾಲಯಗಳು ರೂಪುಗೊಳ್ಳುತ್ತಿರುವುದು ಹೊಸ ಬೆಳವಣಿಗೆಗಳು]

ಭೂತಾನದ ಕುಳಿತಿರುವ ಗಣೇಶ.

ಶ್ರೀಲಂಕಾ, ಬಾಂಗ್ಲಾ, ಬರ್ಮಾ, ಅಫ಼್ಘಾನಿಸ್ಥಾನಗಳಲ್ಲಿ ಗಣೇಶನ ಅಸ್ಥಿತ್ವಕ್ಕೆ ಬೇರೆ ಕಾರಣಗಳೇ ಬೇಕಾಗಿರಲಿಲ್ಲ. ಯಾಕೆಂದರೆ ಆ ಎಲ್ಲಾ ದೇಶಗಳೂ ಹಿಂದೊಮ್ಮೆ ಭಾರತ ಉಪಖಂಡದ ಭಾಗಗಳೇ ಆಗಿದ್ದುವು. ತಮಿಳ್ನಾಡಿನಲ್ಲಿ ಆಡಳಿತ ನಡೆಸುತ್ತಿದ್ದ  ಚೋಳ ಚಕ್ರವರ್ತಿಗಳು ಶ್ರೀಲಂಕಾವನ್ನು ಆಕ್ರಮಿಸಿಕೊಂಡಿದ್ದರಿಂದ ಅಲ್ಲಿ ಗಣಪತಿ [ಪಿಳ್ಳೆಯಾರ್] ಸಹಜವಾಗಿಯೇ ಪ್ರಧಾನ ದೇವತೆಗಳಲ್ಲೊಬ್ಬನಾಗಿದ್ದ. ಉತ್ತರ ಭಾರತದ ಅರಸರಾಗಿದ್ದ ಕುಶಾನರು, ಗುಪ್ತರೇ ಮೊದಲಾದ ರಾಜವಂಶೀಯರಿಂದಾಗಿ ಬಾಂಗ್ಲಾ, ಬರ್ಮಾ, ಅಫ಼್ಘಾನಿಸ್ಥಾನಗಳಲ್ಲಿ ಹಿಂದೂ ಧರ್ಮದ ಜೊತೆಜೊತೆಗೆ ಗಣೇಶನೂ ಇದ್ದ. ಈ ಕಾರಣದಿಂದಲೇ ಅಲ್ಲೆಲ್ಲಾ ಗುಪ್ತರ, ಕುಶಾನರ ಕಾಲದ ಶಿಲ್ಪ ಶೈಲಿಯ [ಪ್ರಮುಖವಾಗಿ ಗಾಂಧಾರ ಶೈಲಿ]  ಪ್ರಾತಿನಿಧಿಕ ಗಣಪತಿ ವಿಗ್ರಹಗಳು ಕಂಡುಬರುತ್ತವೆ. ಬಾಲಗಣಪತಿ ನೃತ್ಯಗಣಪತಿ, ಸಿಂಹಗಣಪತಿ ಮೊದಲಾದ ಗಣಪತಿಯ ವಿಗ್ರಹಗಳು ಅಲ್ಲಿ ಕಂಡು ಬರುತ್ತವೆ. ಅಫ಼್ಘಾನಿಸ್ಥಾನದಲ್ಲಿ ಸಿಕ್ಕಿರುವ ಗಣೇಶನ ವಿಗ್ರಹವೊಂದು ಭಾರತೀಯ ಕಲ್ಪನೆಯಲ್ಲಿರುವಂತೆಯೇ ಸಿದ್ಧಿ-ಬುದ್ಧಿಯರ ಜೊತೆಗೆ ಸ್ಥಾನಕ [ನಿಂತ] ಭಂಗಿಯಲ್ಲಿದೆ. ಈ ದೇಶದಲ್ಲಿ ಕೈಯಲ್ಲಿ ಬಿಲ್ಲು-ಬಾಣಗಳಿರುವ ಬೇಟೆಗಾರಪಂಗಡದ ದೇವರಂತಿರುವ ವಿಗ್ರಹಗಳೂ ಸಿಕ್ಕಿವೆ. ಇಷ್ಟಾದರೂ ಈ ದೇಶಗಳಲ್ಲಿ ಕಾಲ ಕ್ರಮೇಣ ಹಿಂದೂ ಧರ್ಮ ದುರ್ಬಲವಾಗುವುದರೊಂದಿಗೆ ಗಣೇಶನ ಪ್ರಾಮುಖ್ಯತೆಯೂ ನಿಧಾನಕ್ಕೆ ಕಡಿಮೆಯಾಯಿತು.

ಥಾಯ್‌ಲ್ಯಾಂಡ್, ವಿಯೆಟ್ನಾಂ, ಜಾವಾ, ಕಾಂಬೋಡಿಯಾಗಳಲ್ಲಿ ಇಂದು ಬೌದ್ಧ ಧರ್ಮವು ಅಧಿಕೃತ ಧರ್ಮವಾಗಿ ಸ್ವೀಕರಿಸಲ್ಪಟ್ಟ್ಟಿದೆಯಾದರೊ ಮೊದಲು ಇಲ್ಲಿ ಹಿಂದೂ ಧರ್ಮವೂ, ಭಾರತೀಯ ಸಂಜಾತ ಅರಸರುಗಳ ಆಳ್ವಿಕೆಯೂ ಇತ್ತು. ಈ ದೇಶಗಳಲ್ಲಿದ್ದ ‘ಮಾನ್’ ಮತ್ತು ‘ಖ್ಮೇರ್’ ವಂಶದ ದೊರೆಗಳು ಕಟ್ಟಿಸಿದ್ದ ಅನೇಕ ಗಣೇಶಾಲಯಗಳಿವೆ. ಅಲ್ಲದೆ ಬೇರೆ ದೇವತೆಗಳ ದೇವಾಲಯಗಳಲ್ಲಿ ಸ್ಥಾನಕ ಮತ್ತು ಕ್ಶೇತ್ರಪಾಲನಾದ ಗಣಪತಿ ವಿಗ್ರಹಗಳು ಸೇರಿಸಲ್ಪಟ್ಟಿವೆ, ಖ್ಮೇರ್‌ನ ಶೈಲಿಯಲ್ಲಿನ ಗಣೇಶನ ವಿಗ್ರಹವೊಂದು ಒಂದು ಕೈನಲ್ಲಿ ಬರೆಯುವ ಲೇಖನಿ [ಮುರಿದ ದಂತವೂ ಇರಬಹುದು!] ಹಿಡಿದು, ನಾಗಾಭರಣಗಳನ್ನು ಧರಿಸಿ ಕುಳಿತಿರುವ ಭಂಗಿಯಲ್ಲಿದೆ. ಇವುಗಳ ಜೊತೆಜೊತೆಗೆ ಗಣೇಶನ ಹಲವಾರು ಬಿಡಿ ವಿಗ್ರಹಗಳೂ ಈ ದೇಶಗಳಲ್ಲಿ ಸಿಕ್ಕಿವೆ. ಇಲ್ಲಿನ ವಿಗ್ರಹಗಳು ದ್ವಿಭುಜ ಮತ್ತು ಚತುರ್ಭುಜಗಳನ್ನು ಹೊಂದಿದ್ದು ಸುಮಾರು ೭ರಿಂದ್ದ ೧೩ನೇ ಶತಮಾನದ ಕಾಲಾವಧಿಯಲ್ಲಿ ನಿರ್ಮಾಣಗೊಡಿವೆ. ಈ ಗಣೇಶನ ವಿಗ್ರಹಗಳ ಮಾಧ್ಯಮ ಪ್ರಧಾನವಾಗಿ ಶಿಲೆಯೇ ಆಗಿದ್ದರೂ ಲೋಹಮಾಧ್ಯಮದಲ್ಲೂ, ಮಣ್ಣಿನಲ್ಲೂ ರಚಿಸಿದ ಮೂರ್ತಿಗಳಿವೆ, ಜೊತೆಗೆ ಅಲ್ಲಿನ ‘ಚಾಮ್’, ‘ಖ್ಮೇರ್’ ಮೊದಲಾದ ಚಿತ್ರ ಶೈಲಿಯಲ್ಲಿಯೂ ಗಣೇಶನ ಕಂಡರಣೆಯಿದೆ.

ಇಂಡೋನೇಷಿಯಾದ ಗಣೇಶ.

ಈ ದೇಶಗಳಲ್ಲಿ ರಚಿತವಾಗಿರುವ ಗಣೇಶನ ವಿಗ್ರಹಗಳಲ್ಲಿ ಭಾರತೀಯತೆಯ ಒಂದಿಷ್ಟು ಪ್ರಭಾವವನ್ನು ಕಾಣಬಹುದು. ಭಾರತದಂತೆ ಈ ದೇಶಗಳಲ್ಲೂ ಗಣಪತಿಯನ್ನು ವಿಘ್ನನಿವಾರಕನಾಗಿಯೇ ಸ್ವೀಕರಿಸಲಾಗಿತ್ತು. ಹಾಗೇ ಪ್ರತಿಮಾ ಲಕ್ಷಣಗಳೂ ಭಾರತೀಯತೆಗೆ ಹತ್ತಿರವಾಗೇ ಇದೆಯಾದರೂ ಭಾರತೀಯರ ಕಲ್ಪನೆಯಲ್ಲಿದ್ದಂತೆ ಸಾವಿರಾರು ರೂಪಗಳ ಪರಿಚಯವಿದ್ದಂತಿಲ್ಲ. ನಿಂತ (ಸ್ಥಾನಕ) ಕುಳಿತ (ಆರಾಮಾಸನ) ಭಂಗಿಯ ವಿಗ್ರಹಗಳೇ ಹೆಚ್ಚು. ಭಾರತದಲ್ಲಿ ಕಂಡುಬರುವಂತಹ ದ್ವಿಭುಜ, ಚತುರ್ಭುಜದ, ಕುಬ್ಜ ದೇಹದ, ಕಿರೀಟವಿರುವ [ಹಾಗೂ ಕೆಲವೊಮ್ಮೆ ಕಿರೀಟವಿಲ್ಲದ], ಮೊರದಗಲ ಕಿವಿಗಳನ್ನುಳ್ಳ ಮತ್ತು ಯಗ್ನೋಪವೀತ ಧರಿಸಿರುವ ವಿಗ್ರಹಗಳು ಕಂಡುಬರುತ್ತವೆ. ಹೆಚ್ಚಿನ ವಿಗ್ರಹಗಳು ಸುಖಾಸೀನವಾಗಿ ಕೈಯಲ್ಲಿ ಪುಸ್ತಕ ಮತ್ತು ಲೇಖನಿಯನ್ನು ಹಿಡಿದ ವಿಗ್ರಹಗಳೇ. ಜೊತೆಗೆ ಅಲ್ಲಿನ ಸ್ಥಳೀಯ ಕಲ್ಪನೆಗಳಾದ ಚಂದನಾದ್ರಿ ಗಣೇಶ, ಕಾಲಾಂತಕ ಗಣೇಶ, ಕಪಾಲಿ ಗಣೇಶ, ಭೈರವ ಗಣೇಶ ಇತ್ಯಾದಿ ರೂಪಾಂತರಗಳೂ ಕಾಣಸಿಕ್ಕುತ್ತವೆ. ಕೆಲವು ವಿಗ್ರಹಗಳ ಕಿರೀಟದಲ್ಲಿ ಹಾಗೂ ಪೀಠದಲ್ಲಿ ತಲೆಬುರುಡೆಗಳ ಕೆತ್ತನೆಯಿರುವುದೊಂದು ವಿಶೇಷ!  ಮತ್ತೂ ವಿಶೇಷದ ಸಂಗತಿಯೆಂದರೆ ಇಲ್ಲಿನ ಕೆಲವು ವಿಗ್ರಹಗಳಲ್ಲಿ ಮುರಿದ ದಂತದ ಬದಲು ಮೂಲಂಗಿ ಇರುವುದು ಕಾಣುತ್ತದೆ. ಮುರಿದ ದಂತವೇ ಮೂಲಂಗಿಯಾಯಿತೆಂದು ಒಂದು ನಂಬಿಕೆ. ಅಥವಾ ಗಣೆಶನ ದೇಶವಿದೇಶಗಳ  ಪ್ರತಿಮಾ ಶಾಸ್ತ್ರವನ್ನು ಸೂಕ್ಷ್ಮವಾಗಿ ಅಭ್ಯಾಸ ಮಾಡಿರುವ ಮಾಸ್ಟರ್ ಕ್ರಾಫ಼್ಟ್ಸ್‌ಮನ್ ಶ್ರೀ. ಗಣೇಶ ಭಟ್ಟರು ಹೇಳುವಂತೆ ಅವರೆಲ್ಲಾ ಗಣಪತಿಯನ್ನು ಆನೆಯ ಪ್ರತಿರೂಪವಾಗಿ ಸ್ವೀಕರಿಸಿರುವುದರಿಂದ, ಆನೆಗೆ ಮೂಲಂಗಿ ಸಹಾ ಪ್ರಿಯವಾದ ಆಹಾರಗಳಲ್ಲೊಂದಾಗಿರುವುದರಿಂದ ಗಣಪತಿಯ ಕೈಗೆ ಮೂಲಂಗಿಯನ್ನು ಕೊಟ್ಟಿರಬಹುದು. ಜೊತೆಗೆ ಪ್ರೊ.ಎಸ್.ಕೆ.ರಾಮಚಂದ್ರ ರಾವ್ ನೆನಪಿಸುವಂತೆ ಯಾಗ್ನ್ಯವಲ್ಕ್ಯಸ್ಮೃತಿಯಲ್ಲಿ ಗಣೇಶನಿಗೆ ಪೂಜೆಯನ್ನು ಮಾಡುವಾಗ ನೈವೇದ್ಯದಲ್ಲಿ ಇತರ ವಸ್ತುಗಳ ಜೊತೆಗೆ ಮೂಲಂಗಿಯನ್ನೂ ಇಡಬೇಕೆಂದು ಸೂಚಿಸಿರುವುದನ್ನು ಗಮನಿಸಿದರೆ ಗಣೇಶನ ಕೈಗೆ ಮೂಲಂಗಿ ಬಂದಿರುವುದಕ್ಕೆ ಕಾರಣಗಳು ಸಿಕ್ಕಬಹುದು.

ಈ ದೇಶಗಳಲ್ಲಿ ರಾಜರಿಂದಲೂ, ವರ್ತಕರಿಂದಲೂ, ಬೇಟೆಗಾರ ಪಂಗಡಗಳಿಂದಲೂ ಪೂಜಿಸಲ್ಪಡುತ್ತಿದ್ದ ವಿನಾಯಕನ ಮಹತ್ವವು ಹಿಂದೂ ಧರ್ಮವು ಅವನತಿಯನ್ನು ಹೊಂದುವುದರೊಡನೆ ಇಳಿಮುಖವಾಯಿತು. ಆದರೂ ಅಲ್ಲಿನ ಅಳಿದುಳಿದ ಗಣೇಶ ವಿಗ್ರಹಗಳು ಸರ್ಕಾರಗಳ ಆಸಕ್ತಿಯಿಂದ ವಸ್ತು ಸಂಗ್ರಹಾಲಯಗಳಲ್ಲಿ ಸುರಕ್ಷಿತವಾಗಿವೆ.

ಬೌದ್ಧಪ್ರಭಾವದಲ್ಲಿ ಗಣೇಶ

ಬೌದ್ಧ ಧರ್ಮದ ಪ್ರಭಾವದಡಿಯಲ್ಲಿ ಸಾಕಾರಗೊಂಡಿರುವ ಗಣಪತಿಯ ರೂಪಗಳು ವಿಶಿಷ್ಟವೆನ್ನಿಸುತ್ತವೆ.

ಜಪಾನದ ಕಾಂಗಿ-ತೇನ್

ಅಶೋಕ ಚಕ್ರವರ್ತಿಯು ಕಳಿಂಗ ಯುದ್ಧದ ನಂತರ ಮನನೊಂದು ಅಹಿಂಸಾ ಮಾರ್ಗದತ್ತ ತಿರುಗಿದ ಮೇಲೆ ಭಾರತದಲ್ಲಿ ಬುದ್ಧನ ಬೋಧನೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಬಂದು ಬೌದ್ಧ ಧರ್ಮವು ಲಗುಬಗೆಯಿಂದ ಬೆಳೆಯಿತಾದರೂ ನಂತರದ ದಿನಗಳಲ್ಲಿ ಅದು ಭಾರತದಿಂದ ಕಣ್ಮರೆಯಾಗಿ ನೆರೆಯ ದೇಶಗಳಲ್ಲಿ ನೆಲೆ ಕಂಡುಕೊಂಡಿತು. ನೇಪಾಳ, ಟಿಬೆಟ್, ಚೀನಾ, ಮಂಗೋಲಿಯಾ ಮತ್ತು ಜಪಾನ್‌ಗಳಲ್ಲಿ ಪಸರಿಸಿತು. ನಮ್ಮ ನೆರೆಯ ದೇಶಗಳಾದ ನೇಪಾಳ, ತಿಬೆಟ್, ಚೀನಾ ಮತ್ತು ದೂರದ ಜಪಾನ್‌ಗಳಲ್ಲಿ ಗಣೇಶನ ಬೆಳವಣಿಗೆ ಮತ್ತು ಅಸ್ತಿತ್ವವು ಕುತೂಹಲಕಾರಿಯಾಗಿದೆ. ಬುದ್ಧನ ನಿರ್ವಾಣದ ನಂತರ ಬೌದ್ಧಧರ್ಮವು ಹಲವಾರು ಶಾಖೆಗಳಾಗಿ ಒಡೆಯಿತು. ಮಹಾಯಾನ, ವಜ್ರಯಾನ, ತೇರವದ, ಝೆನ್ ಹೀಗೆ ಕವಲೊಡೆದ ಹಲವಾರು ಶಾಖೆಗಳಲ್ಲಿ [ಮುಖ್ಯವಾಗಿ ಮಹಾಯಾನ ಪಂಥದ ವಜ್ರಯಾನದಲ್ಲಿ] ಗಣಪತಿಯ ಪಯಣವೂ, ಪಯಣದ ಹಾದಿಯಲ್ಲಿನ ರೂಪಾಂತರಗಳೂ ಕುತೂಹಲಕಾರಿಯಾಗಿವೆ.

ಆರಂಭದಲ್ಲಿ ಗಣೇಶನೂ ಬುದ್ಧನ ಒಂದು ಅವತಾರವೆಂದೇ ಜನಗಳು ನಂಬಿದ್ದ ಕಾರಣದಿಂದಾಗಿ ಗಣಪತಿಯು ಇತರ ಹಿಂದೂ ದೇವರುಗಳಂತೆ ಪ್ರಧಾನವಾಗೆ ಸ್ವೀಕಾರಗೊಂಡಿದ್ದ. ಬೌದ್ಧ ಧರ್ಮದ ಪ್ರಸಾರಕ್ಕೆ ಭಾರತದಿಂದ ನಿಯುಕ್ತರಾಗಿ ಹೋಗಿದ್ದ ಭಿಕ್ಷುಗಳು ಶುಭದಾಯಕವೆಂದು ತಮ್ಮೊಡನೆ ಗಣೇಶನ ವಿಗ್ರಹಗಳನ್ನೂ ಕೊಂಡೊಯ್ದಿದ್ದರು. ಬಂಗಾಳ ಪ್ರಾಂತ್ಯದಲ್ಲಿ ಟಿಸಿಲೊಡೆದ ವಜ್ರಯಾನದ ಹಲವಾರು ಯೋಗಿಗಳು ಮತ್ತು ಸಾಧಕರು ವಜ್ರಯಾನವನ್ನು ನೇಪಾಳ ಮತ್ತು ಟಿಬೆಟ್‌ಗಳಲ್ಲಿ ಪರಿಚಯಿಸುವ ಕಾಲಕ್ಕೆ ತಮ್ಮೊಡನೆ ಗಣೇಶನ ಕಲ್ಪನೆಯನ್ನು ವಿಗ್ರಹಗಳ ಜೊತೆಗೇ ಕೊಂಡೊಯ್ದರು. ಧರ್ಮಪ್ರಸಾರದ ಜೊತೆಜೊತೆಗೇ ಭಾರತೀಯ ವ್ಯಾಪಾರಿಗಳಿಂದಲೂ, ಪ್ರವಾಸಿಗರಿಂದಲೂ ಗಣೇಶ ಈ ದೇಶಗಳಲ್ಲಿ ಬೇಗ ಪ್ರಚಾರ ಮತ್ತು ಜನಪ್ರಿಯತೆಯನ್ನು ಪಡೆದುಕೊಂಡ. ಆರಂಭಕಾಲದಲ್ಲಿ ಹಿಂದೂ ದೇವತೆಗಳೇ ಅಲ್ಲೂ ಸಲ್ಲುತ್ತಿದ್ದರು, ಗಣೇಶನಂತೂ ನಮ್ಮಲ್ಲಿಯಂತೆಯೇ ಅಲ್ಲೂ ಪ್ರಥಮ ವಂದ್ಯನಾಗಿದ್ದ. ಗಣೇಶನನ್ನು ಪೂಜಿಸುವುದರ  ಜೊತೆಗೆ ಅವರ ನಿಗೂಡ ಸಂಕೇತಾರ್ಥಗಳ ಮಂಡಲಗಳ ರಚನೆಯಲ್ಲೂ ಗಣೇಶನಿಗೆ ಪ್ರಮುಖ ಸ್ಥಾನವಿತ್ತು.

ವಿಯೆಟ್ನಾಂನ ಸರಳ ಗಣೇಶ.

ನೇಪಾಳ, ಟಿಬೆಟ್, ಚೀನಾಗಳಲ್ಲಿ ಹೇರಂಭ ಗಣಪತಿ, ವಜ್ರಧಾತು ಗಣಪತಿ, ನಾಟ್ಯ ಗಣಪತಿ, ಬೇಟೆಗಾರರ ದೇವತೆಯೆಂಬ ಕಲ್ಪನೆಯಲ್ಲಿ ಹುಲಿ ಚರ್ಮ ಧರಿಸಿದ ಗಣಪತಿ , ಸ್ತ್ರೀ ರೂಪಿ ಗಣಪತಿ [ಗಣೇಶಾನಿ} ದ್ವಿಭುಜದ ಮತ್ತು ಚತುರ್ಭುಜದ ಗಣಪತಿ ಇವೆಲ್ಲ ರೂಢಿಯಲ್ಲಿದ್ದ ಗಣಪತಿಯ ವೈವಿಧ್ಯಗಳಾದರೆ ಜಪಾನಿನಲ್ಲಿ ಗಣೇಶನ ಮತ್ತೊಂದೇ ಬಗೆಯಿದೆ. ಜಪಾನಿನಲ್ಲಿ ಬೌದ್ಧ ಧರ್ಮದ ಹೊಸದೊಂದು ಕವಲಿಗೆ ಕಾರಣನಾದ ‘ಕುಕೈ’ ಎಂಬ ಬಿಕ್ಷು ಚೀನಾದಿಂದ ಜಪಾನ್‌ಗೆ ಗಣೇಶನನ್ನು ಪರಿಚಯಿಸಿದನೆಂದು ಹೇಳುತ್ತಾರೆ. ಜಪಾನ್‌ಲ್ಲಿ ಗಣೇಶನ ಹೆಸರು ಕಾಂಗಿ-ತೆನ್. ಕಾಂಗಿ-ತೆನ್ ಎಂದರೆ ಸಂತೋಷದ ದೇವತೆ ಎಂದು ಅರ್ಥವಂತೆ. ಶೂ-ತೆನ್ ಎಂಬುದು ಮತ್ತೊಂದು ಹೆಸರು. ಜಪಾನಿನಲ್ಲಿ ಗಣೇಶನ ಮಾತಾ ಪಿತರಿಗೂ ಬೇರೆಯದೇ ಹೆಸರಿದೆ. ಶಿವ ಪಾರ್ವತಿಯರಿಲ್ಲಿ ಡೈಜಿ ಟೆನ್ ಮತ್ತು ಬೊಸಾತ್ಸು ಆಗಿದ್ದಾರೆ. ಜಪಾನಿನ ಗಣೇಶ ಶಿಲ್ಪಗಳಿಗೆ ಕಾಂಗಿ ಆರ್ಟ್ ಎನ್ನುತ್ತಾರೆ. ಪುರುಷ ಮತ್ತು ಸ್ತ್ರೀ ರೂಪದ ಅಪ್ಪಿಕೊಂಡಿರುವ ಭಂಗಿಯ ಗಣೇಶ [ಗಣೇಶ ಮತ್ತು ಗಣೇಶಾನಿ] ಕಾಂಗಿ ಕಲೆಯ ವಿಶೇಷ. ತಬ್ಬಿಕೊಂಡಿರುವ ಗಣೇಶ-ಗಣೇಶಾನಿ ವಿಗ್ರಹಗಳನ್ನು ದ್ವಂದ್ವ ವಿಗ್ರಹಗಳೆಂದು ಸಾಮಾನ್ಯವಾಗಿ ಹೇಳುತ್ತಾರಾದರೂ ಅವುಗಳಿಗೆ ಸ್ತ್ರೀ-ಪುರುಷರ ಮಿಲನದ ಗೂಢಾರ್ಥಗಳೂ ಇವೆಯೆಂದು ವಿಮರ್ಷಕರು ಅಭಿಪ್ರಾಯ ಪಡುತ್ತಾರೆ. ತಬ್ಬಿಕೊಂಡಿರುವ ಕಾಂಗಿ-ತೇನ್‌ಗಳಲ್ಲದೆ ಜಪಾನಿನಲ್ಲಿ ಇನ್ನೂ ಹಲವಾರು ರೀತಿಯ ಗಣೇಶನ ವಿಗ್ರಹಗಳು ಗಮನ ಸೆಳೆಯುತ್ತವೆ. ಗಣೇಶನ ಕೈಗಳಿಗೆ ಮೂಲಂಗಿಯ ಜೊತೆಗೆ ಪರಶು[ಕೊಡಲಿ], ಖಡ್ಗ, ಚತ್ರಿ, ಹೂವಿನ ಹಾರ ಮೊದಲಾದುವನ್ನು ಕೊಟ್ಟಿರುವುದು ಕಾಣುತ್ತದೆ. ಕೈಲಿರುವ ಆಯುಧಕ್ಕೆ ತಕ್ಕಂತೆ ಅವುಗಳ ಹೆಸರು ಖಡ್ಗ ವಿನಾಯಕ, ಛತ್ರ ವಿನಾಯಕ, ಧನುರ್ ವಿನಾಯಕ ಇತ್ಯಾದಿಯಾಗಿ ಇರುತ್ತದೆ. ಅಲ್ಲದೆ ಸೂಜಿಗದ ಸಂಗತಿಯೆಂದರೆ ಇಲ್ಲಿನ ಗಣೇಶನಿಗೆ ನi ಪುರಾಣಗಳಲ್ಲಿ ಸೂಚಿಸಿರುವ ಯಾವುದೇ ವಾಹನಗಳಿಲ್ಲ! ಜೊತೆಗೆ ಗಣೇಶನ ಹೆಗ್ಗುರುತಾದ ದಪ್ಪ ಹೊಟ್ಟೆಯೇ ಇಲ್ಲ !!!. ಜಪಾನೀಯರ ನಂಬಿಕೆಯಂತೆ ಗಣೇಶ ಸಂತೋಷ ಮತ್ತು ಸುಖದ ಅಧಿದೇವತೆಯಾಗಿರುವುದರಿಂದ ಆಲಂಗಿಸಿಕೊಂಡಿರುವ ಗಣೇಶ-ಗಣೇಶಾನಿಯ ವಿಗ್ರಹಗಳು ಶುಭದಾಯಕವೆಂದು- [ನಗುವ ಬುದ್ಧ ಮತ್ತು ಅವಲೋಕಿತೇಶ್ವರನ ವಿಗ್ರಹಗಳಂತೆ ] ಮನೆಗಳಲ್ಲಿ ಇರಿಸಿಕೊಳ್ಳುವುದು ರೂಢಿಯಲ್ಲಿದೆಯಂತೆ.

ವಿಪರ್ಯಾಸವೆಂದರೆ ಗಣೇಶನನ್ನು ದೇವರಂತೆ ಪೂಜಿಸುವವರಿರುವಂತೆ, ಆತನೊಬ್ಬ ದುಷ್ಟಶಕ್ತಿ ಎಂದೂ, ಸಾಧಕರಿಗೆ ಅಡ್ಡಿಬರುವ ಕೆಡುಕ ಎಂದು ಪರಿಗಣಿಸುವವರೂ ಇದ್ದಾರೆ. ಆ ಭಾವನೆ ಹೆಚ್ಚಾಗಿ ಕಂಡುಬರುವುದು ಟಿಬೆಟ್, ಚೀನಾ ಮೊದಲಾದ ದೇಶಗಳಲ್ಲಿ.

ಖ್ಮೇರ್ ಶೈಲಿಯ (ಕಾಂಬೋಡಿಯಾ) ಗಣೇಶ.

ಕಾಲಕಳೆದಂತೆ ಬುದ್ಧನ ನೇರ ಅನುಯಾಯಿಗಳ ಹೀನಯಾನ ಪಂಥವು ಕಣ್ಮರೆಯಾಗಿ ಮಹಾಯಾನ ಪಂಥವು ಬೇರು ಬಿಟ್ಟು ಬೆಳೆಯತೊಡಗಿತು. ಬಂಗಾಳದಲ್ಲಿ ಹುಟ್ಟಿಕೊಂಡ ಮಹಾಯಾನದ ಮತ್ತೊಂದು ಕವಲಾದ ವಜ್ರಯಾನ ಪಂಥವು ವಜ್ರಯಾನದ ಗುರು ಪದ್ಮ ಸಂಭವನ ಮೂಲಕ ನೇಪಾಳ, ಟಿಬೆಟ್‌ಗಳಲ್ಲಿ ಹರಡಿತು. ತಾಂತ್ರಿಕ ವಜ್ರಯಾನದಲ್ಲಿನ ಸಾಧಕರು, ಯೋಗಿಗಳು ತಮ್ಮ ಸಾಧನೆಯ ಹಾದಿಯಲ್ಲಿ ತಮ್ಮವೇ ಹಲವಾರು  ಹೊಸ ದೇವ ದೇವತೆಗಳನ್ನು ಸೃಷ್ಟಿಸಿಕೊಳ್ಳತೊಡಗಿದಂತೆ ಭಾರತೀಯ ದೇವತೆಗಳಿಗೆ ಕುತ್ತು ಬಂತು!! ಹಿಂದೂ ದೇವರುಗಳಿಗೆ ಪ್ರಾಧಾನ್ಯ ಕಮ್ಮಿಯಾಗುವುದರ ಜೊತೆಗೆ ವಜ್ರಯಾನದ ದೇವತೆಗಳೇ ಶ್ರೇಷ್ಟ ಎಂಬ ಭಾವನೆ ಬಲಿತಂತೆ ವಜ್ರಯಾನದ ದೇವತೆಗಳು ಭಾರತೀಯ ದೇವತೆಗಳನ್ನು ಮೆಟ್ಟಿ ನಿತೊಡಗಿದರು. ಆ ಹಾದಿಯಲ್ಲಿ ಪಾಪ!. . . ಗಣೇಶನೂ ಬಲಿಯಾಗಬೇಕಾಯಿತು. ಅದುವರೆವಿಗೂ ವಿಘ್ನ ನಿವಾರಕನಾಗಿಯೇ ಇದ್ದ ಗಣೇಶ ಇದ್ದಕ್ಕಿದ್ದಂತೆ ವಿಘ್ನಕಾರಿ ಎನ್ನಿಸತೊಡಗಿದ. ಸಾಧನೆಯ ಹಾದಿಯಲ್ಲಿ ಕಠೋರ ತಪಸ್ಸಿನಲ್ಲಿ ಕುಳಿತ ಯೋಗಿಗಳಿಗೆ ವಿಘ್ನ ಒಡ್ದುತ್ತಾನೆಂಬ ಆಪಾದನೆ ಗಣಪತಿಯ ಮೇಲೆ ಬಂದಿತು! ಆಗ ಗಣಪತಿಯನ್ನು ವಿಘ್ನಾಂತಕನೆಂಬ ವಜ್ರಯಾನದ ದೇವರು ಓಡಿಸಿ ಸಾಧಕರುಗಳಿಗೆ ರಕ್ಷಣೆ ನೀಡಿದನಂತೆ! ಈ ರೀತಿ ಗಣಪತಿಯನ್ನು ದಮನಿಸಲು ಹುಟ್ಟಿಕೊಂಡ ದೇವತೆಗಳಲ್ಲಿ ಪರ್ಣ ಶಬರಿ, ಅಪರಾಜಿತೆ ಎಂಬ ಗುಂಪಿನ ಪ್ರಮುಖ ದೇವತೆಗಳಿದ್ದಾರೆ. ಅವರೆಲ್ಲ ಧರ್ಮವನ್ನು ರಕ್ಷಿಸುವ “ಧರ್ಮಪಾಲ” ದೇವತೆಗಳಂತೆ!! ಆ ಗುಂಪಿನ ಪ್ರಧಾನ ದೇವತೆ ‘ಗಣಪತಿ ಸಮಾಕ್ರಾಂತೆ’. ಗಣಪತಿಯನ್ನು ಮರ್ಧಿಸುವ ಮತ್ತೊಂದು ದೇವತೆಯೆಂದರೆ ‘ಮಹಾಕಾಲ’ ಹೀಗೆ ಹಲವಾರು ದೇವತೆಗಳಿಂದ ಗಣಪತಿ ನಿರಂತರ ತುಳಿತಕ್ಕೊಳಗಾಗಬೇಕಾಯಿತು. ಅಷ್ಟಕ್ಕೂ ತಾಂತ್ರಿಕರಿಗೆ ಗಣಪತಿಯ ಮೇಲೇಕೆ ಸಿಟ್ಟು? ಕಠೋರ ತಪಸ್ಸಿನಲ್ಲಿದ್ದ ಸಾಧಕರ ಸಾಧನೆಯ ಹಾದಿಯಲ್ಲಿ ಮತ್ತು ಬೌದ್ಧ ಧರ್ಮದ ಪ್ರಚಾರದ ಹಾದಿಯಲ್ಲಿ ಗಣಪತಿಯೇ ಪ್ರಮುಖ ಅಡ್ಡಿಯಾಗಿದ್ದಾನಂತೆ!!! [ಸ್ಮರಣೆ ; ಮೂರ್ತಿಶಿಲ್ಪ ನೆಲೆ-ಹಿನ್ನೆಲೆ]

ಕೊನೆಕೊನೆಗೆ ಟಿಬೆಟ್ ಮತ್ತು ಚೀನಾಗಳಲ್ಲಿ ಗಣೇಶನ ರೂಪಾಂತರವು ಎಷ್ಟು ಅತಿರೇಕಕ್ಕೆ ಹೋಯಿತೆಂದರೆ ಗಣೇಶನ ಸರ್ಮಸಮ್ಮತ ಕೆಂಪು ಬಣ್ಣವೇ ಬದಲಾಗಿ ಆತನಿಗೆ ರಾಕ್ಷಸತ್ವದ ಪ್ರತೀಕವಾಗಿ ಕಪ್ಪುಬಣ್ಣ ಪ್ರಾಪ್ತವಾಯಿತು. ಉದ್ದವಾದ ಕಪ್ಪು ಕೂದಲು ಬೆಳೆಯಿತು. ಮತ್ತು ಹಣೆಯ ಮೇಲೆ ಮೂರನೇ ಕಣ್ಣೊಂದು ಬಂದಿತು. ಕೈಗಳ ಸಂಖ್ಯೆ ಎರಡರಿಂದ ಹನ್ನೆರಡಕ್ಕೇರಿತು, ಆ ಕೈಗಳಲ್ಲಿ ರಾಕ್ಷಸಾಯುಧಗಳ ಜೊತೆಗೆ ರಕ್ತ ಮಾಂಸಗಳ ಪಾತ್ರೆಗಳು!! ಹೀಗೆ ಗಣಪತಿಯನ್ನು ರಾಕ್ಷಸ ರೂಪದಲ್ಲಿ ಕಲ್ಪಿಸಿಕೊಳ್ಳುವ ಪರಂಪರೆ ಅರಂಭವಾಯಿತು.

ಟಿಬೆಟ್ ಮತ್ತು ನೇಪಾಳಗಳ ಚಿತ್ರಕಲೆಗಳಲ್ಲಿ [ಮುಖ್ಯವಾಗಿ ತಂಕಾ ಮಾದರಿಯಲ್ಲಿ] ಬೋಧಿಸತ್ವರುಗಳ ಜೊತೆಗೆ ಭಾರತೀಯ ದೇವತೆಗಳ ವಿಶೇಷವಾಗಿ ಗಣಪತಿಯ ಚಿತ್ರಣಗಳೂ ಇವೆ. ಬೌದ್ಧ ಧರ್ಮದ ಮೇಲೆ ತಾಂತ್ರಿಕ ಆರಾಧನೆಯ ಪದ್ಧತಿಯ ಪ್ರಭಾವ ಹೆಚ್ಚಾಗುತ್ತಿದ್ದಂತೆ ರಹಸ್ಯ ಪೂಜೆಗಳಲ್ಲಿ‘ಸ್ತ್ರೀರೂಪ’ಗಳಿಗೂ’ಕಾಮ’ಕ್ಕೂ ಪ್ರಾಧಾನ್ಯತೆ ಬಂದು ಗಣಪತಿಯನ್ನು ಕಾಮರೂಪಿಯಾಗಿಯೂ, ಕಾಮ ದೇವತೆಯಾಗಿಯೂ ಪರಿಗಣಿಸಲಾಯಿತು. ಕಾಮದೇವತೆಯಾದ ಅವನನ್ನು ಶೃಂಗಾರಿ, ಸುಖನಿಧಿ, ಉನ್ಮತ್ತ ಇತ್ಯಾದಿಯಾಗಿ ಕರೆಯಲಾಯಿತು. ಇದೇ ಹಾದಿಯಲ್ಲಿ ಮುಂದುವರೆದು ಆತನನ್ನು ಕೆಲವು ಸ್ತ್ರೀ ದೇವತೆಗಳ ಜೊತೆಗೆ ‘ವಿಷಯಾಸಕ್ತ ಭಂಗಿ’ಗಳಲ್ಲೂ ತೋರಿಸಿರುವುದು ಮಾತ್ರಾ ಗಣಪತಿಯ ಬಗ್ಗೆ ಭಕ್ತಿ ಭಾವನೆಯನ್ನು ಹೊಂದಿರುವವರಿಗೆ ಒಪ್ಪಿಕೊಳ್ಳಲಾರದ ವಿಷಯವಾಗಿದೆ!

[ಚಿತ್ರಗಳುಶಿಲ್ಪಿ ಗಣೇಶ ಭಟ್ ಮತ್ತು ಕೇಶವ ಕುಡ್ಲ]