ಹಿಂದೂಸ್ಥಾನಿ ಸಂಗೀತ ಮಾಧ್ಯಮಕ್ಕೆ ಕರ್ನಾಟಕದ ಧಾರವಾಡ ಕೊಟ್ಟಿರುವ ಬಳುವಳಿ ಮಹತ್ತರವಾದುದು. ಧಾರವಾಡದ ಸಂಗೀತದ ಸ್ವರ-ಲಯಗಳ ಋಣವನ್ನು ಉಂಡು ಬೆಳೆಯುತ್ತಿರುವ ಪಕ್ಕದ ಉತ್ತರ ಕನ್ನಡ ಜಿಲ್ಲೆ ಸುಮಾರು ಮೂರು ದಶಕಗಳಿಂದ ತನ್ನ ಮಡಿಲಲ್ಲಿ ಹಿಂದೂಸ್ಥಾನಿ ಸಂಗೀತವನ್ನು ಸಲಹುತ್ತಾ ಬಂದಿದೆ. ಉತ್ತರ ಕನ್ನಡ ಜಿಲ್ಲೆಯಿಂದ ಹಿಂದೂಸ್ಥಾನಿ ಸಂಗೀತಕ್ಕೆ ಬಂದ ಒಂದು ದೊಡ್ಡ ಕೊಡುಗೆ ಶ್ರೀ ಗಣಪತಿಭಟ್ ಹಾಸಣಗಿ, ಆಹ್ಲಾದಕರ ಶಾರೀರ ಜನ್ಮಜಾತ ಪ್ರತಿಭೆ, ಕಠಿಣ ಪರಿಶ್ರಮ, ಇವೆಲ್ಲಕ್ಕೂ ಕಳಸವಿಟ್ಟಂತೆ ಗುರುಗಳ ಪೂರ್ಣ ಅನುಗ್ರಹ ದೊರೆತು ಇಂದು ಹಾಸಣಗಿಯವರು ಸಂಗೀತಕ್ಷೇತ್ರದಲ್ಲಿ ಮೇರು ಕಲಾವಿದರಾಗಿ ರೂಪುಗೊಂಡಿದ್ದಾರೆ. ಡಾ. ಬಸವರಾಜ ರಾಜಗುರು ಅವರಲ್ಲಿ ಶಿಷ್ಟವೃತ್ತಿ ಮಾಡುತ್ತಲೇ ಅವರ ಪೂರ್ಣ ಅನುಗ್ರಹಕ್ಕೆ ಪಾತ್ರರಾದ ಶ್ರೀಯುತರು ಕಲಿಕೆಯತ್ತಲೇ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಾ ಈಗಲೂ ಪಂಡಿತ್ ಸಿ.ಆರ್. ವ್ಯಾಸರಲ್ಲಿ ಗ್ವಾಲಿಯರ್ ಘರಾಣಿಯಲ್ಲಿ ಅಭ್ಯಾಸ ಮುಂದುವರಿಸಿದ್ದಾರೆ.

ಸಂಗೀತಾಗಾರರಾಗಿ, ಯಶಸ್ವೀ ಶಿಷ್ಯನಾಗಿ, ದಕ್ಷ ಗುರುವಾಗಿ ಕಳೆದ ಮೂರೂವರೆ ದಶಕಗಳಿಂದ ಹಾಸಣಗಿಯಂತಹ ಸಣ್ಣ ಹಳ್ಳಿಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ತಾವೂ ಬೆಳೆಯುತ್ತಾ, ಇಡೀ ಜಿಲ್ಲೆಯಲ್ಲಿ ಶ್ರೋತೃಗಳನ್ನು ಸಂಗೀತಕ್ಕೆ ಶೃತಿಗೊಳಿಸಿದ ಸಾಧಕರು ಗಣಪತಿಭಟ್ಟರು. ಪಶ್ಚಿಮ ಘಟ್ಟಗಳ ನಡುವಿನ ಹಾಸಣಗಿಗೆ ವಿಶ್ವ ಭೂಪಟದಲ್ಲೊಂದು ಸ್ಥಾನವೇನಾದರೂ ಇಂದು ದೊರೆತಿದೆಯೆಂದರೆ ಅದಕ್ಕೆ ಭಟ್ಟರ ಸಾಂಸ್ಕೃತಿಕ ಪ್ರಜ್ಞೆ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ.

ಸಂಘ ಸಂಸ್ಥೆಗಳಿಂದ, ಮಠ ಮಂದಿರಗಳಿಂದ ಅಭಿಮಾನದಿಂದ ಗೌರವಿಸಲ್ಪಟ್ಟಿರುವ ಶ್ರೀ ಗಣಪತಿಭಟ್ ಹಾಸಣಗಿ ಅವರ ಸಂಗೀತ ಬದ್ಧತೆಯನ್ನು ಗುರುತಿಸಿ ಅವರಿಗೆ ೨೦೦೭-೦೮ರ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಗೌರವಿಸಿದೆ.