ಗುರು ಬೀರಪ್ಪ

ನಂದನ ವನದಾಗ ಚಂದ ತೊಟ್ಟಿಲ ಕಟ್ಟಿ
ಕಂದ ಮನಗ್ಯಾನ ಗುರು ಬರಪ್ಪನೋ
ಬಾಳಿಯ ವನದಾಗ ಬಾಲೇರು ತೊಟ್ಲ ಕಟ್ಟಿ
ಬಾಲ ಮನಗ್ಯಾನ ಗುರು ಬೀರಪ್ಪನೋ

ತೊಟ್ಲಯಾರು ತೂಗಿದ್ದಾರು ಜೋಗುಳ್ಯಾರು ಹಾಡಿದ್ದಾರು
ಹೆಸರ‍್ಯಾರು ಇಟ್ಟಿದ್ದಾರು ಗುರು ಬೀರಪ್ಪಗ
ತೊಟ್ಟಲಾ ತೂಗ್ಯಾಳ ಲಕ್ಸುಂಬಾಯಿ
ಜೋಗುಳಾ ಹಾಡ್ಯಾಳ ಸರಸೋತಿ

ಹೆಸರಿಟ್ಟಾಳ ಪಾರವತಿ ಗುರು ಬೀರಪ್ಪಗ
ಗಾಳಿದೇವಿ ತೊಟ್ಟಿಲ ತೂಗಿ
ಹುಲಿರಾಜ ಜೋಗುಳ ಹಾಡಿ
ಹಾಲ್ಯಾರ ಕುಡಿಸ್ಯಾರ ಗುರು ಬೀರಪ್ಪಗ

ಹೊನ್ನ ಮೂಗಿನ ಹಕ್ಕಿ ಬಂದು
ಹಾಕತಿತ್ತೋ ಜೇನುತುಪ್ಪ
ಕಾವಲ್ಯಾರು ಮಾಡ್ಯಾರು ಗುರು ಬೀರಪ್ಪಗ
ಏಳ ಹೆಡಿ ನಾಗೆಂದ್ರಯ ಕಾವಲವ ಮಾಡಿದ್ದಾನು

ಕರಕೊಂಡ್ಯಾರು ಹೋದರು ಗುರು ಬೀರಪ್ಪನ್ನ
ಅಕ್ಕಮಾಯವ್ವ ಬಂದು ಎತ್ತಿಗೊಂಡು ಅಪ್ಪಿಗೊಂಡು
ಹರುಸಾಗಿ ನಿಂತಾದ್ದಾಳು ಗುರು ಬೀರಪ್ಪಗ
ತಮ್ಮನ ಮಾಡಿ ಎತ್ತಿಕೊಂಡು ಮಗನ ಮಾಡಿ ಮುದ್ದುಕೊಟ್ಟು

ಹರುಸದಿಂದ ಓದಾಳು ಗುರು ಬೀರಪ್ಪನ್ನ
ಆಡು ಕಾಯಲು ಹೋದ ಬೀರಣ್ಣ
ನಾಡು ನೋಡಲು ಹೋದಾನು
ನಾಡು ನೋಡಲು ಹೋದಾನು ಬೀರಣ್ಣ

ನಾಡಿನೊಳಗೇನು ಕಂಡಾನೋ
ನಾಡಿನೊಳಗೇನು ಕಂಡಾನು ಬೀರಣ್ಣ
ಕಲ್ಲ ಹಳ್ಳವ ಕಂಡಾನು
ಕಲ್ಲ ಹಳ್ಳವ ಕಂಡಾನು ಬೀರಣ್ಣ

ಆರು ಮಡಿಯೋ ಕಂಡಾನು
ಆರು ಮಡಿಯೋ ಕಂಡಾನು ಬೀರಣ್ಣ
ಆರು ಮಡಿಯೋ ಕಂಡಾನು ಬೀರಣ್ಣ
ಹಿಂಡ ನೀರಿಗೆ ತಿರಿವ್ಯಾನೋ

ಹಿಂಡ ನೀರಿಗೆ ತಿರಿವ್ಯಾನೋ ಬೀರಣ್ಣ
ಹಿಂಡ್ಗೆ ನೀರನು ಕುಡಿಸ್ಯಾನೋ
ಹಿಂಡ್ಗೆ ನೀರನು ಕುಡಿಸ್ಯಾನೋ ಬೀರಣ್ಣ
ಹಿಂಡ ಬಯಲಿಗೆ ತಿರುವ್ಯಾನೋ

ಹಿಂಡ ಬಯಲಿಗೆ ತಿರಿವ್ಯಾನೋ ಬೀರಣ್ಣ
ಮುಂದ ಮುಂದಕೆ ಹೊಂಟಾನೋ
ಮುಂದ ಮುಂದಕ್ಕೆ ಹೋಗುದರೊಳಗೆ
ಹಿಂದಿನ ಮರಿಗಳು ಶೀತಾವೋ

ಹಿಂದಿನ ಮರಿಗಳು ಶೀತಾವಂತ
ಹಿಂದಕ ಓಡುತ ಬಂದಾನೋ
ಹಿಂದು ಮುಂದಲಿ ಬೆದರ‍್ಯಾವೋ ಬೀರಣ್ಣ
ಹಿಂಡ ಆ ಕಡೆ ಹೊಡದಾನೋ

ಹಿಂಡ ಆ ಕಡೆ ಹೊಡೆದಾನ ಬೀರಣ್ಣ
ದೊಡ್ಡ ಗುಡ್ಡಕ ಹೋದಾನೋ
ದೊಡ್ಡ ಗುಡ್ಡದ ಒಳಗೇನೋ ಬೀರಣ್ಣ
ಅಲ್ಲಿ ಏನನು ಕಂಡಾನೋ

ಅಲ್ಲಿ ಏನನು ಕಂಡಾನ ಬೀರಣ್ಣ
ಕಂಚಿಗನ ಕಂಟಿ ಕಂಡಾನೋ
ಕಂಚಿಗನ ಕಂಟಿ ಬುಡಕೆ ಬೀರಣ್ಣ
ಹಾಸ ಬಂಡಿಯ ಕಂಡಾನೋ

ಹಾಸ ಬಂಡಿಯ ಕಂಡಾನ ಬೀರಣ್ಣ
ಹುಲಿಯ ಗವಿಯ ಕಂಡಾನೋ
ಹುಲಿಯ ಗವಿಯ ಕಂಡಾನೋ ಬೀರಣ್ಣ
ಹುಬ್ಬುಲಿ ಹುಲಿವೊಂದ ಕಂಡಾನೋ

ಹೆಬ್ಬುಲಿ ಹುಲಿವೊಂದು ಕಂಡಾನ ಬೀರಣ್ಣ
ಹಿಂದಕ ಹಿಂಡ ತಿರವ್ಯಾನೋ
ಹಿಂದಕ ಹಿಂಡ ತಿರವ್ಯಾನೋ ಬೀರಣ್ಣ
ತನ್ನ ಊರಿಗೆ ಬಂದಾನೋ

ತನ್ನ ಊರಿಗೆ ಬಂದಾನೋ ಬೀರಣ್ಣ
ಹಿಂಡ ದಡ್ಡಿಗೆ ಹೊಗಸ್ಯಾನೋ
ಉಣಲಾರದ ಮರಿಯ ಉಣಸ್ಯಾನೋ
ಉಣಲಾರದ ಮರಿಯ ಉಣಸ್ಯಾನ ಬೀರಣ್ಣ

ನೆಂಬಲಾರದ ಮರಿಯ ನೆಂಬಸ್ಯಾನೋ
ನೆಂಬಲಾರದ ಮರಿಯ ನೆಂಬಸ್ಯಾನೋ ಬೀರಣ್ಣ
ಕಂಡಗ ಮುಳ್ಳ ಕಡಿದಾನೋ
ಕಂಡಗ ಮುಳ್ಳ ಕಡದಾನ ಬೀರಣ್ಣ

ಮೇಲು ಮುಳ್ಳ ಸೆಳದಾನೋ
ಕುರಿಯ ಹಿಂಡ ಕಾದಾನೋ
ಅಲ್ಲಿಗಿಲ್ಲಿಗೆ ಇದು ಒಂದು ಸಂದು
ಹಾಡಿದವರ ಪದ ಮುಂದ್ಕೇಳ್ಕೋ

 

ಬೀರಯ್ಯಲಿಂಗ

ಶಿವನೇ ನಮ್ಮಯ್ಯ ದೇವರು ಬಂದಾನ ಬನ್ನಿರೇ
ದೇವಿ ಮನೆಗೆ ದ್ಯಾವರ ಹೋದರ ದೇವಿಯೆದ್ದು ಪಾದಾ ತೊಳದಾಳ
ದೇವಿಯೊಳು ಪಾರ್ವತಿ ನಮ್ಮ ದೇವರೊಳು ಪರಮೇಸೂರನೆ
ಪರಮೇಸೂರನ ಬೆವರಿಲೆ ಹುಟ್ಟಿದ್ಯೋ ಬ್ರಹ್ಮಪುತ್ರ ಬೀರಣ್ಣ
ಬಲಾದಿ ಬ್ರಹ್ಮನ ಮಗನೆ ನೀ ಸೂರವತಿಯ ಕೊಮಾರನೇ
ಸೂರವತಿಯ ಕೊಮಾರನಪ ನೀ ನಾರಾಯಣ ದೇವರಳಿಯನೇ
ನಾರಾಯಣ ದೇವರಳಿಯಪ ನೀ ನಗರಿ ಪಟ್ಟಣದರಸನೇ
ನಗರಿ ಪಟ್ಟಣದರಸನಪ ನೀ ಕನಕ ಮರಳಿ ಪುರುಷನೇ
ಸಿದ್ಧ ಹೌದೋ ಬೀರೈಲಿಂಗಾ ಸೂರವತಿಯ ಹೊಟ್ಟಿಲೇ
ಸೂರವತಿಯ ಹೊಟ್ಟಿಲೇ ಹುಟ್ಟಿದಾಗ ನಾರಾಯಣ ದೇವರು
ತಂಗಿ ಹೊಟ್ಟಿಲೆ ಮಗನು ಹುಟ್ಟಿದರ ಮಗಳಿಗೆ ಮೂಲಂದಾನೆ
ಮಗಳಿಗೆ ಮೂಲಂದನ ನಾರಾಯಣ ಅಡವಿಪಾಲ ಮಾಡಬೇಕಂದಾನೆ
ಒಂಟಿ ದೋತರ ಉಟ್ಟಾನ ನಾರಾಯಣ ಗಂಟಿ ನಾಗರ ಇಟ್ಟಾನ
ಗಂಟಿನಾಗರ ಇಟ್ಟಾನ ನಾರಾಯಣ ಎಂಟೆಳಿ ಜನಿವರ ಹಾಕ್ಕಾನ
ಎಂಟೆಳಿ ಜನಿವಾರ ಹಾಕ್ಯಾನ ನಾರಾಯಣ ಕಯ್ಯಾಗ ಪಂಚಾಂಗ ಹಿಡಿದಾನ
ಕಯ್ಯಾಗ ಪಂಚಾಂಗ ಹಿಡಿದನ ನಾರಾಯಣ ತಂಗಿಯರಿಗೆ ಹೊಂಟಾನ
ಅರಳೀ ಬಾವಿಗೆ ಹೋಗ್ಯಾನ ನಾರಾಯಣ ಅಗಸಿಬಾಗಲಕ ನಿಂತಾನ
ಇದೇ ಊರೊಳಗೇನು ಶಿವನೆ ಕೋಡಿ ಕಂದ ಹುಟ್ಟ್ಯಾನ
ಊರಿಗೊಳಿತಿಲ್ಲಂದಾನ ನಾರಾಯಣ ಕೇರಿಗೊಳಿತಿಲ್ಲಂದಾನ
ಇಂತ ನುಡಿಯ ಅಂದಾನ ನಾರಾಯಣ ಅಗಸಿ ದಾಟ್ಯಾನೇನಯ್ಯ
ಅಗಸಿ ದಾಟ್ಯಾನಲ್ಲೋ ಶಿವನೆ ಚಾವಡಿ ಮುಂದ ನಿಂತಾನೆ
ಚಾವಡಿ ಮುಂದ ನಿಂತಾನ ನಾರಾಯಣ ಎನಂತಾನೋ ನಮ್ಮಯ್ಯ
ಇದೇ ಊರ ಒಳಗೋ ಶಿವನೆ ಕೋಡಿ ಕಂದಾ ಹುಟ್ಟ್ಯಾನೇ
ಊರಿಗೊಳಿತಿಲ್ಲಂದಾನ ನಾರಾಯಣ ಕೇರಿಗೊಳಿತಿಲ್ಲಂದಾನೆ
ಊರಾಳುವ ಗೌಡ ಕುಲಕರ್ಣಿಗೆ ಒಳಿತಿಲ್ಲಂದಾನೆ
ಇಂತ ನುಡಿಯ ಸಾರ‍್ಯಾನಲ್ಲ ತಂಗಿ ಓಣಿಗೆ ಹೋಗ್ಯಾನ
ತಂಗಿ ಮನಿಮುಂದ ನಿಂತೋ ಶಿವನೆ ಏನಂತಾನೋ ನಮ್ಮಯ್ಯ
ಇದೇ ಓಣಿಯೊಳಗ ಏನೋ ಕೋಡಿ ಕಂದಾ ಹುಟ್ಟ್ಯಾನ
ಓಣಿಗೊಳಿತಿಲ್ಲಂದನ ನಾರಾಯಣ ಕೇರಿಗೊಳಿತಿಲ್ಲಂದಾನೆ
ತಾಯಿಗೊಳಿತಲ್ಲಂದಾನ ನಾರಾಯಣ ತಂದಿಗೊಳಿತಿಲ್ಲಂದಾನೆ
ಸೋದರಮಾವಾ ನಾರಾಯಣ ದೇವರಿಗೆ ಒಳಿತಿವಿಲ್ಲೋ ನಮ್ಮಯ್ಯ
ಇಂತ ನುಡಿಯ ಕೇಳಿ ಸೂರವತಿ ಹೊರಗ ಬಂದಾಳೋ ನಮ್ಮಯ್ಯ
ಈಗ ಸಾರಿದ ನುಡಿ ಏನಪ್ಪ ಇನ್ನೊಮ್ಮೆ ಸಾರಿ ಹೇಳಯ್ಯ
ಆವಾಗ ನೋಡೋ ಜೋಸಿಗೇರಣ್ಣ ಏನಂತಾನೊ ನಮ್ಮಯ್ಯ
ನಿನ್ನ ಹೊಟ್ಟಿಲಿ ಹೌದೇನವ್ವ ಕೋಡಿ ಕಂದಾ ಹುಟ್ಟ್ಯಾನ
ತಾಯಿಗೊಳಿತಿಲ್ಲಂದಾ ನಮ್ಮಯ್ಯ ತಂದಿಗೊಳಿತಿಲ್ಲಂದಾನ
ಸೋದರ ಮಾವಾ ನಾರಾಯಣ ದೇವರಿಗೆ ಒಳಿತಿಲ್ಲವೆಂದಾನೆ
ಇದೇ ಕೂಸು ಹಟಮಾಡಿ ಅತ್ತರ ನಾರಾಯಣದೇವರಿಗಲ್ಲೇಳೆ
ನಾರಾಯಣ ದೇವರಿಗಲ್ಲೇಳವ್ವ ಮರಣ ಆದಾವಂದಾನ
ಆವಾಗ ನೋಡೋ ಸೂರವತಿಯು ಏನಂತಳೊ ನಮ್ಮಯ್ಯ
ಬಾರೋ ಬಾರೋ ಜೋಸಿಗೇರಣ್ಣ ಮನ್ಯಾಕ ಬಾರೇಳಂದಾಳೆ
ಆವಾಗ ನೋಡೋ ಜೋಸಿಗೇರಣ್ಣ ಮನ್ಯಕ ಹೋಗ್ಯಾನೇನಯ್ಯ
ನಿನ್ನ ಹೊಟ್ಟಿಲೆ ಹೌದೇನವ್ವ ಕೋಡಿ ಕಂದಾ ಹುಟ್ಟ್ಯಾನ
ಸೋದ ಮಾವ ನಾರಾಯಣ ದೇವರಿಗೆ ಒಳಿತಿಲ್ಲ ಅಂದಾನೆ
ಇದೇ ಕೂಸಾ ಹಟಮಾಡಿ ಅತ್ತರ ನಾರಾಯಣ ದೇವರಿಗಲ್ಲೇಳ
ನಾರಾಯಣ ದೇವರಿಗಲ್ಲೇಳವ್ವ ಮರಣ ಆದಾವೆಂದಾನ
ನಾರಾಯಣ ದೇವರಿಗಲ್ಲೇಳವ್ವ ದೌಲತ ಹಾಳ ಆದಾವವ್ವ
ಆನಿಪಾಗಾ ಆಳದಾವವನ ಒಂಟಿ ಪಾಗಾ ಆಳದಾವ
ನಾರಾಯಣ ದೇವರು ಸತ್ತಮ್ಯಾಲ ತವರ ಮನಿಯೋ ನಮ್ಮಯ್ಯ
ಹೆಣ್ಣು ಮಕ್ಕಳ ಜೀವೋ ಶಿವನೇ ತವರ ಮನಿಯ ಮ್ಯಾಲೇನೋ
ನನ್ನ ಶಿವನೆ ನನ್ನ ಗುರುವೇ ಹ್ಯಾಂಗ ಮಾಡಬೇಕಂದಾಳೆ
ಆವಗ ನೋಡೊ ಜೋಸಿಗೇರಣ್ಣ ಏನಂತಾನೋ ನಮ್ಮಯ್ಯ
ಇದೇ ಮಗನೇ ಸತ್ತರವ್ವ ಮುಂದ ಕಂಡಿ ಅಂದಾನೆ
ಕೇಲಸಂದಿ ಲಲ್ಲವ್ವ ತಂಗಿ ಮಗಿಯ ಉಳ್ಳುವೇ ಕೇಳು
ನಾರಾಯಣ ದೇವರು ಸತ್ತರವ್ವ ತವರ ಮನಿಯ ಇಲ್ಲದಂಗಾದವ್ವಾ
ಬಾರೋ ಬಾರೋ ಜೋಸಿಗೇರಣ್ಣಾ ಹ್ಯಾಂಗ ಮಾಡಬೇಕಂದಾಳೆ
ಆವಾಗ ನೋಡೋ ಜೋಸಿಗೇರಣ್ಣ ಏನಂತಾನೋ ನಮ್ಮಯ್ಯ
ಏಳಮಂದಿ ಯಮದೂತರನ ಕರಿಸಬೇಕಂದಾನೆ
ತೊಟ್ಟಲ ಹೊರಸು ಬೇಕಂದಾನಲ್ಲ ಆರ‍್ಯಾಣಕೊಯ್ಯಬೇಕಂದಾನೆ
ಆರ‍್ಯಾಣಕೊಯ್ಯಬೇಕೇಳವ್ವ ಕಂದನ್ಹೊಡಿ ಬೇಕಂದಾನೆ
ಕಂದನ್ಹೊಡದಾಗಲ್ಲೇಳವ್ವ ನಾರಾಯಣ ದೇವರಿಗಲ್ಲೇಳ

ನಾರಾಯಣ ದೇವರಿಗಲ್ಲೇಳವ್ವ ಮರಣ ಹಿಂದ ಆದಾವ
ಆವಾಗ ನೋಡೊ ಸೂರವತಿಯು ಏನಂತಾಳೋ ನಮ್ಮಯ್ಯ
ಏಳುಮಂದಿ ಯಮದೂತರು ನನಗ ಹ್ಯಾಂಗ ಬಂದಾರು
ಏಳುಮಂದಿ ಯಮದೂತರನು ನಾನು ಕರಿಸೇನಂದಾನೆ
ಆವಾಗ ನೋಡೋ ಜೋಸಿಗೇರಣ್ಣ ನಾನು ಕರಿಸೇನಂದಾನೆ
ತಾನು ಕರಿಸ್ಯಾನಲ್ಲೋ ಶಿವನೆ ತೊಟ್ಟಿಲಿಳಿವೆನಂದಾನ
ಆವಾಗ ನೋಡೋ ಸೂರವತಿಯೋ ಏಳು ಅರವಿ ಹಾಸ್ಯಾಳ
ಏಳು ಅರಿವಿ ಹಾಸ್ಯಾಳಲ್ಲ ಏಳು ಅರಿವಿ ಹೊಚ್ಚ್ಯಾಳ
ಆವಾಗ ನೋಡೋ ನಾರಾಯಣದೇವರು ಸುತ್ತುಮುತ್ತೊ ನಮ್ಮಯ್ಯ
ಸುತ್ತಮುತ್ತ ಅಲ್ಲೋ ಶಿವನೆ ಏಳು ಸೂಲ ಇಟ್ಟಾನೆ
ಆವಾಗ ನೋಡೋ ಸೂರವತಿಯು ಮುಚ್ಚಳದಾಗೋ ನಮ್ಮಯ್ಯ
ಮುಚ್ಚಳದಾಗ ಅಲ್ಲೋ ಶಿವನೆ ಅಗಲು ಮಾಡ್ಯಾಳೇನಯ್ಯ
ಅಗಲ ಮಾಡ್ಯಾಳಲ್ಲೋ ಶಿವನೆ ತೊಟ್ಟಲದಾಗ ಇಟ್ಟಾಳೋ
ಏಳುಮಂದಿ ಯಮದೂತರಿಗೆ ಏನಂತಾನೋ ನಮ್ಮಯ್ಯ
ಇದೇ ಕೂಸಿನಲ್ಲೋ ಶಿವನೆ ಆರ‍್ಯಾಣಕೊಯ್ಯಬೇಕಂದಾನೆ
ಹಾಲ ಸಮುದರ ದಾಟಬೇಕೋ ಕೀಲ ಸಮುದರ ದಾಟಬೇಕೋ
ಕೀಲ ಸಮುದರದಾಚೆಗಪ್ಪ ಇಂಜಾಣಾ ಮಲಿ ಮಂಜಾಣಾ
ಇಂಜಾಣಾ ಮಲಿ ಮಂಜಾಣದಾಚೆಗೆ ಕೊದಲಿನಂದನ ಬನವೇನೊ
ಕೊದಲಿನಂದನ ಬನದಾಗಪ್ಪ ಕಂದನ ಹೊಡಿಬೇಕಂದಾನೆ
ಹಾಲ ಸಮುದರ ಕೀಲ ಸಮುದರ ನಾವ್ಹ್ಯಾಂಗ ದಾಟಬೇಕಂದಾರ
ಇಂಜಾಣ ಮಲಿ ಮಂಜಾಣಲ್ಲ ನಾವ್ಯಾಂಗ ದಾಟಬೇಕಂದಾರ
ಆವಾಗ ನೋಡೋ ನಾರಾಯಣ ದೇವರು ಏಳುಹಳ್ಳ ಮಂತರಿಸ್ಯಾನ
ಏಳು ಹಳ್ಳ ಮಂತ್ರಿಸ್ಯಾನಲ್ಲ ಅವರ ಕೈಲೆ ಕೊಟ್ಟಾನ
ಹಾಲ ಸಮುದರ ಕೀಲ ಸಮುದರಕ ಹಳ್ಳ ಒಗದರ ಹಾದಿ ಬಿದ್ದಾವಂದಾನೆ
ಇಂಜಾಣ ಮಲಿ ಮಂಜಾಣಕಪ್ಪ ಹಳ್ಳ ಒಗಿಬೇಕಂದಾನೆ
ಹಳ್ಳ ಒಗದರ ಮಲಿ ಮಂಜಾಣ ಕಡದು ಹಾದಿ ಆಗುವದೆಂದಾನೆ
ಏಳುಮಂದಿ ಯಮದೂತರೆಲ್ಲ ತೊಟ್ಟಲೆತ್ತ್ಯಾರೇನಯ್ಯ
ಏಳು ದಿನದ ಕೂಸು ಶಿವನೆ ಏಳು ಮಂದಿಗೆ ಅಲ್ಲೇನು
ಏಳು ಮಂದಿಗಲ್ಲೋ ಶಿವನೆ ಏಳವಲ್ಲದೋ ನಮ್ಮಯ್ಯ
ಏಳು ಮಂದಿಗೆ ಏಳವಲ್ಲದಂತ ತಾನು ಎತ್ತ್ಯಾನೇನಯ್ಯ
ಆವಾಗ ನೋಡೋ ನಾರಾಯಣ ದೇವರು ಏನಂತಾನೋ ನಮ್ಮಯ್ಯ
ಬಾರೋ ಬಾರೋ ಹಡದ ತಂಗೆವ್ವ ಹರಕಿ ಕೊಡಬೇಕಂದಾನೆ
ಆವಾಗ ನೋಡೋ ಸೂರವತಿಯು ಹರಕಿ ಕೊಡತಾಳೇನಯ್ಯ
ಸತ್ಯರ ಮಗ ನೀ ಆದರಪ್ಪ ಮತ್ತೊಂದು ಯುಗದಲ್ಲಿ ಹುಟ್ಟಪ್ಪ
ಕಲ್ಲಿನಕಿನ ಕಣಿಯಾಗ ಮಗನೆ ಮುಳ್ಳಿನಕಿನ ಮೊನ್ಯಾಗು ಮಗನೆ
ವೈರಿಯ ಅಸ್ಥಕರೇನ ನಿನ್ನಸ್ಥ ಮೇಲಾಗಲಿ ಮೆರೆಯಲಿ
ಕೋಟೀಸ್ಥನಾಗೇಳೋ ಮಗನೆ ಕೊನೆಯ ಭಾಗೇಳಂದಾಳೆ
ಆವಾಗ ನೋಡೋ ಸೂರವತಿಯು ತೊಟ್ಟಿಲ್ಹಿಡದಾಳೇನಯ್ಯ
ಏಳುಮಂದಿ ಯಮದೂತರೆಲ್ಲಾ ತೊಟ್ಟಿಲ್ಹೊತ್ತಾರೇನಯ್ಯ
ತೊಟ್ಟಿಲ್ಹೊತ್ತಾರಲ್ಲೋ ಶಿವನೇ ಆರ‍್ಯಾಣ ದಾರಿ ಹಿಡಿದಾರ
ಆರ‍್ಯಾಣ ದಾಟ್ಯಾರಲ್ಲೋ ಶಿವನೆ ಹಾಲ ಸಮುದರಕ್ಹೋಗ್ಯಾರ
ಹಾಲ ಸಮುದರಕ್ಹೋಗ್ಯಾರಲ್ಲ ಅಲಿಗೊಂದ ಹಳ್ಳ ಒಗದಾರ
ಅಲಿಗೊಂದ ಹಳ್ಳ ಒಗದಾಗೆಲ್ಲ ನೀರ ಮ್ಯಾಲ ಹಾದಿ ಬಿದ್ದಾವ
ನೀರ ಮ್ಯಾಲ ಹಾದಿ ಬಿದ್ದಾಗ ದಾಟಿ ಹೋಗ್ಯಾರೇನಯ್ಯ
ಹಾಲ ಸಮುದರ ದಾಟ್ಯಾರಲ್ಲ ಕೀಲ ಸಮುದರಕ್ಹೋಗ್ಯಾರ
ಕೀಲ ಸಮುದರಕ್ಹೋಗ್ಯಾರಲ್ಲ ಅಲಿಗೊಂದ ಹಳ್ಳ ಒಗದಾರ
ಅಲಿಗೊಂದ ಹಳ್ಳ ಒಗದಾಗೆಲ್ಲ ನೀರ ಮ್ಯಾಲ ದಾರಿ ಬಿದ್ದಾವ
ನೀರ ಮ್ಯಾಲ ದಾರಿಬಿದ್ದಾಗ ದಾಟಿ ಹೋಗ್ಯಾರೇನಯ್ಯ
ಕೀಲ ಸಮುದರ ದಾಟ್ಯಾರಲ್ಲ ಇಂಜ್ಯಾಣ ಮಲಿ ಮಂಜ್ಯಾಣ
ಇಂಜ್ಯಾಣ ಮಲಿ ಮಂಜ್ಯಾಣಕೆಲ್ಲ ಅಲಿಗೊಂದ ಹಳ್ಳ ಒಗದಾರ
ಅಲಿಗೊಂದ ಹಳ್ಳ ಒಗದಾಗೆಲ್ಲ ಮಲಿ ಕಡದು ಬಯಲಾಗ್ಯಾವ
ಹನ್ನೆರಡು ಗಾವದ ನೆಲವ ಶಿವನೆ ಮಲಿಯ ದಾಟ್ಯಾದೇನಯ್ಯ
ಇಂಜಣ ಮಲಿ ಮಂಜಣದಾಚೆಗೆ ಕೊದಲಿನಂದನ ಬನವೇನೋ
ಕೊದಲಿ ನಂದನ ಬನದಾಗೆಲ್ಲ ಬಾರಂಗ ಬಾಯಿ ಇದ್ದಾವ
ಬಾರಂಗ್ಬಾಯಿ ಮ್ಯಾಲೋ ಶಿವನೆ ಕಂಚಿ ಆಲದ ಮರವೇನೋ
ಕಂಚಿ ಆಲದ ಮರದ ನೆರಳಿಗೆ ತೊಟ್ಟಿಲಿಳಿವ್ಯಾರೇನಯ್ಯ
ತೊಟ್ಟಿಲಿಳಿವ್ಯಾರೇನೋ ಶಿವನೆ ನೀರ ಕುಡಿದಾರೇನಯ್ಯ
ನೀರ ಕುಡಿದಾರೋ ಶಿವನೆ ಅಗಲ ನೋಡ್ಯಾರೇನಯ್ಯ
ಅದರಾಗೆಲ್ಲ ಒಬ್ಬ ಶಿವನೆ ಏನಂತಾನೋ ನಮ್ಮಯ್ಯ
ಮುಚ್ಚಳದೊಳಗಿನ ಅಗಲ ಊಟ ಮಾಡಬೇಕಂದನೆ
ಅದರಾಗಲ್ಲೊ ಒಬ್ಬ ಶಿವನೇ ಏನಂತಾನೋ ನಮ್ಮಯ್ಯ
ಒಬ್ಬ ಒಬ್ಬ ಅಲ್ಲ ಅಪ್ಪ ಒಕ್ಕಳನ್ನ ಉಣ್ಣವರು ನಾವು
ಒಕ್ಕಳನ್ನ ಉಣ್ಣವರಿಗೆಲ್ಲ ಮುಚ್ಚಳದಾಗಿನ ಅಗಲೇನೋ
ಮುಚ್ಚಳದಾಗಿನ ಅಗಲೇನಪ್ಪ ಯಾರಿಗೆ ಸಾತೀತಂದಾನೆ
ಅದರಾಗಲ್ಲೋ ಒಬ್ಬ ಶಿವನೇ ಏನಂತಾನೋ ನಮ್ಮಯ್ಯ
ಸಾತಟ ಸಾತೀತಲ್ಲೇಳೆಪ್ಪ ಎಲ್ಲರೂ ಉಣ್ಣುನಂದಾನೆ
ತೊಟ್ಟಲದೊಳಗಿನ ಅಗಲ ಶಿವನೆ ಬೈಲಿಗೆ ತಗದರೇನಯ್ಯ
ಬೈಲಿಗೆ ತಗದಾರಲ್ಲೊ ಶಿವನೆ ಸುತ್ತುಮುತ್ತ ಕುಂತಾರ
ಸುತ್ತುಮುತ್ತ ಕುಂತಾರಲ್ಲ ಊಟ ಮಾಡ್ಯಾರೇನಯ್ಯ
ಏಳುಮಂದಿಗೆಲ್ಲಾ ಶಿವನೆ ಶಾಂತಿ ಆಗ್ಯಾವೇನಯ್ಯ
ಶಾಂತಿ ಆದಾಗೆಲ್ಲಾ ಶಿವನೆ ನೀರ ಕುಡದಾರೇನಯ್ಯ
ಅದರಾಗಲ್ಲೋ ಒಬ್ಬ ಶಿವನೆ ಕೂಸಿನ್ಹೊಡಿಬೇಕಂದಾನೆ
ಕೂಸಿನ್ಹೊಡಿಬೇಕಂದಾನಲ್ಲ ಅದರಾಗೊಬ್ಬವ ನಮ್ಮಯ್ಯ
ಇದೇ ಕೂಸಿನ ಉಪ್ಪು ಉಂಡು ಹ್ಯಾಂಗ ಹೊಡಿಬೇಕಂದಾನೆ
ಅದರಾಗಲ್ಲೋ ಒಬ್ಬ ಶಿವನೆ ಏನಂತಾನೋ ನಮ್ಮಯ್ಯ
ಕೂಸಿನ ಬಿಟ್ಟು ಹೋದರಪ್ಪ ಕೂನ ಏನು ಒಯ್ಯತೀರಿ
ಕೂನ ಒಯ್ಯದಲ್ಲ ಅಪ್ಪ ಏನು ಅಗಾದ ಅಂದಾನೆ
ರಕ್ತ ಹೊನ್ನೀಮರ ಕಡದು ರಕ್ತ ಮಾಡಿಕೋಳುನಂದಾನೆ
ಬಾಯಾಗ ಬಂದ ಅಡ್ಡಗೊಲ್ಲೆಕ ತೊಟ್ಟಲಕ ಕಟ್ಟ್ಯಾರೇನಯ್ಯ
ತೊಟ್ಟಲಕ ಕಟ್ಟ್ಯಾರಲ್ಲೋ ಶಿವನೆ ದಾರಿ ಹಿಡದಾರೇನಯ್ಯ
ಏಳದಿಂದ ಬೀರೈಲಿಂಗ ಒಡನುಡಿದು ಮಾತಾಡ್ಯಾನ

ಹೋದವರು ಹೋಗತೀರಲ್ಲೇಳಪ ನೀವು ತಿರುಗಿ ನೋಡಲಾರದೆ
ತಿರುಗಿ ನೋಡಲಾರದಪ್ಪ ನೀವು ಹೋಗಬೇಕಂದಾನೆ
ಏಳುಮಂದಿ ಯಮದೂತರೆಲ್ಲಾ ಏನಂತಾರೋ ನಮ್ಮಯ್ಯ
ಏಳದಿಂದ ಕೂಸು ಈಗ ಹಿಂಗ್ಯಾಕಂದಿತೇನಯ್ಯ
ಹಿಂಗ್ಯಾಕಂದಿತಂದರಲ್ಲ ಮುಂದ ನೋಡಿ ದಾರಿ ಹಿಡದಾರಲ್ಲ
ಮುಂದ ನೋಡಿ ದಾರಿ ಹಿಡಿದರಲ್ಲ ಅದರಾಗೊಬ್ಬ ನಮ್ಮಯ್ಯ
ಅದರಾಗೊಬ್ಬ ಅಲ್ಲೋ ಶಿವನೆ ಅಮರಿ ಗಿಡದ ಹಂತೀಲೆ
ಅಮರಿ ಗಿಡದ ಹಂತಿಲೆ ನಿಂತು ಹಿಂದಕ್ಹೊಳ್ಳಿ ನೋಡ್ಯಾನೆ
ಹಿಂದಕ್ಹೊಳ್ಳಿ ನೋಡಿದರಲ್ಲಾ ಅಮರಿಗಿಡದ ಈರಪ್ಪ ಆಗ್ಯಾನ
ಆರುಮಂದಿ ಉಳದಾರಲ್ಲ ಮುಂದಕ್ಹೋಗ್ಯಾರೇನಯ್ಯ
ಬನ್ನೀ ಗಿಡದ ಹಂತಿಲಿ ನಿಂತು ಹಿಂದಕ್ಹೊಳ್ಳಿ ನೋಡ್ಯಾರೇನಯ್ಯ
ಹಿಂದಕ್ಹೊಳ್ಳಿ ನೋಡಿದರೆಲ್ಲಾ ಹೊಲದ ನೀರಪ್ಪಾಗ್ಯಾನ
ಐದುಮಂದಿ ಉಳದಾರಲ್ಲ ಸಾಗಿ ಮುಂದಕ ನಡದಾರಲ್ಲ
ಸಾಗಿ ಮುಂದಕ ನಡದಾರಲ್ಲ ಸೀಮಿಗ್ಹೋಗ್ಯಾರೇನಯ್ಯ
ಸೀಮಿಗ್ಹೋಗ್ಯಾರಲ್ಲೋ ಶಿವನೆ ಅದರಾಗೊಬ್ಬವ ನಮ್ಮಯ್ಯ
ಅದರಾಗೊಬ್ಬ ಅಲ್ಲೋ ಶಿವನೆ ತಿರುಗಿ ನೋಡ್ಯಾನೇನಯ್ಯ
ಹಿಂದಕ ತಿರುಗಿ ನೋಡಿದರವನು ಸೀಮಿಕಲ್ಲು ಆಗ್ಯಾನ
ಸೀಮಿಕಲ್ಲ ಅಂಬುದಪ್ಪ ಅಂದಿಗ್ಹುಟ್ಟಿತೋ ನಮ್ಮಯ್ಯ
ನಾಲ್ಕು ಮಂದಿ ಉಳದಾರಲ್ಲ ಮುಂದಕ ನಡದಾರೇನಯ್ಯ
ಅದರಾಗೊಬ್ಬ ಅಲ್ಲೋ ಶಿವನೆ ಹಣಮಂತ ದೇವರ ಗುಡಿಮುಂದ
ಹಣಮಂತದೇವರ ಗುಡಿ ಮುಂದ ನಿಂತು ಹಿಂದಕ್ಹೊಳ್ಳಿ ನೋಡ್ಯಾನ
ಹಿಂದಕ್ಹೊಳ್ಳಿ ನೋಡಿದರವನು ಮಾಲಗಂಬಾ ಆಗ್ಯಾನು
ಮೂರು ಮಂದಿ ಉಳದಾರಲ್ಲ ಸಾಗಿ ಮುಂದಕ ನಡೆದಾರಲ್ಲ
ಅಗಸಿ ಹೊರಗ ನಿಂತಾನಲ್ಲ ಹಿಂದಕ್ಹೊಳ್ಳಿ ನೋಡ್ಯಾನ
ಹಿಂದಕ್ಹೊಳ್ಳಿ ನೋಡಿದರವನು ಹೊರುಕಲ್ಲು ಆಗ್ಯಾನ ಅವನು
ಇಬ್ಬರುಳದಾರಲ್ಲೋ ಶಿವನೆ ಅಗಸಿ ಹೊರಗೊಂದು ಕಾಲೇನೋ
ಅಗಸಿ ಹೊರಗ ಒಂದು ಕಾಲು ಅಗಸಿ ಒಳಗ ಒಂದು ಕಾಲು
ಅಗಸಿ ಒಳಗ ಒಂದು ಕಾಲು ಹಿಂದಕ ಹೊಳ್ಳಿ ನೋಡ್ಯಾನ
ಹಿಂದಕ ಹೊಳ್ಳಿ ನೋಡಿದರವನು ಬಡ್ಡಗಲ್ಲು ಆಗ್ಯಾನ
ಅದರಾಗೊಬ್ಬ ಉಳದಾನಲ್ಲ ಅಗಸಿ ಒಳಗ ಆಗ್ಯಾನ
ಅಗಸಿ ಒಳಗ ನಿಂತಾನಲ್ಲ ಹಿಂದಕ್ಹೊಳ್ಳಿ ನೋಡ್ಯಾನ
ಹಿಂದಕ ಹೊಳ್ಳಿ ನೋಡಿದರವನು ಒಳಕಲ್ಲು ಆಗ್ಯಾನೇನಯ್ಯ
ಪಾರ್ವತಿ ಪರಮೇಸೂರ ರಾಜ್ಯಾ ನೋಡಬೇಕಂದಾರ
ರಾಜ್ಯಾ ನೋಡಬೇಕಂತೋ ಶಿವನೆ ನಂದಿ ತಯಾರಮಾಡ್ಯಾರ
ಕೊರಳಗಂಟ್ಯೋ ಕೋಡಿಲಣಸೋ ಇಣಿಸುತ್ತ ಮಾಣಿಕೋ
ಮುತ್ತಿನ ಮುಗದಾಣ ಹಾಕ್ಯಾರಲ್ಲ ಬಂಗಾರ ಮಗಡಾ ಹಾಕ್ಯಾರೋ

ಬಂಗಾರ ಮಗಡಾ ಹಾಕ್ಯಾರಲ್ಲ ಬೆಳ್ಳಿಯ ಸಿಡಿ ಹಗ್ಗೇನು
ಹೂವಿನ ಮುಟ್ಟಾ ಹಾಕ್ಯಾರಲ್ಲ ಮಗ್ಗಿ ಪಟ್ಟಲಿ ಬಿಗದಾರಲ್ಲ
ಪಾರ್ವತಿ ಪರಮೇಸೂರ ನಂದಿ ತಯಾರ ಮಾಡ್ಯಾರಲ್ಲ.
ನಂದಿ ತಯಾರ ಮಾಡ್ಯಾರಲ್ಲ ನಂದಿ ಮ್ಯಾಲ ಕುಂತಾರ
ದೇವಲೋಕಾ ಬಿಟ್ಟಾರಲ್ಲಾ ಮೃತ್ಯುಲೋಕಕಿಳದಾರಲ್ಲಾ
ಅಂತರಂಗ ಮಾರ್ಗದಲ್ಲಿ ನಂದನ ಬನಕ ಇಳದಾರ
ನಂದನ ಬನಕ ಇಳದಾರಲ್ಲ ಪಾರ್ವತಿಯೋ ನಮ್ಮಯ್ಯ
ಪಾರ್ವತಿಯು ಅಲ್ಲೋ ಶಿವನೆ ಕಂಚಿ ಆಲದ ಮರದಾಗ
ಆಲದ ಮರದಾಗಲ್ಲೋ ಶಿವನೆ ತೊಟ್ಟಲ ಕಣ್ಣಿಲೆ ಕಂಡಾಳೋ
ತೊಟ್ಟಲ ಕಣ್ಣಿಲೆ ಕಂಡಾಗೆಲ್ಲಾ ಏನಂತಾಳೋ ನಮ್ಮಯ್ಯ
ಕೊದಲಿ ನಂದನ ಬನದಾಗೆಲ್ಲಾ ಹಕ್ಕಿ ಸುಳುವು ಇಲ್ಲೇನೋ
ಹಕ್ಕಿ ಸುಳಿವು ಇಲ್ಲೇನೋ ಇಲ್ಲೆ ಪಕ್ಕಿ ಸುಳುವು ಇಲ್ಲೇನೋ
ಮಂದಿ ಸುಳುವು ಇಲ್ಲೇನೋ ಇಲ್ಲೆ ಮಾನವರ ಸುಳುವು ಇಲ್ಲೇನೋ
ಮಾನವರ ಸುಳುವು ಇಲ್ಲದಲ್ಲ್ಯಾಕ ತೊಟ್ಟಲ್ಯಾಕ ಅದಾವ
ಪಾರ್ವತಿಯು ಮತ್ತೆ ಶಿವನೆ ಪರಮೇಸೂರನ ಕೇಳ್ಯಾಳೋ
ಆವಾಗ ನೋಡೋ ಪರಮೇಸೂರ ಏನ ಹೇಳಬೇಕಂದಾನೆ
ನಿನಗ ಗೊತ್ತಿದ್ದ ಮಾತ ಅದ ಹೇಳಬೇಕು ಅಂದಾಳೆ
ಹೇಳಬೇಕಂದಾಗೆಲ್ಲಾ ಏನಂತಾನೋ ನಮ್ಮಯ್ಯ
ನಾರಾಯಣದೇವರು ಕಿಡಿಗೇಡಿ ಅಲ್ಲಾ ತಂಗಿ ಮಗನು ಅಲ್ಲೇನು
ತಂಗಿಮಗನು ಹೌದೇಳ ಪಾರ್ವತಿ ಮಗಳಿಗೆ ಮೂಲಂದಾನೆ
ಮಗಳಿಗೆ ಮೂಲಂದಾನಲ್ಲ ಆರ‍್ಯಾಣ ಪಾಲಾ ಮಾಡ್ಯಾನ
ಆರ‍್ಯಾಣ ಪಾಲಾ ಮಾಡಿದರಲ್ಲಾ ಕೂಸಿನ ಜ್ವಾಕಿ ಹ್ಯಾಂಗ ಅಂದಾಳೆ
ಹ್ಯಾಂಗಮಾಬೇಕಂದಾನಲ್ಲ ಪರಮೇಸೂರನು ನಮ್ಮಯ್ಯ
ಜ್ವಾಕಿ ಮಾಡು ಹಂಚಿಕಿಯನ್ನು ನೀ ಮಾಡಬೇಕಂದಾನೆ
ನೀ ಮಾಡಬೇಕಂದಾನಲ್ಲಾ ಚಂದ್ರಗಾವಿ ಗುಡ್ಡೇನ
ಚಂದ್ರಗಾವಿ ಗುಡ್ಡದ ಮ್ಯಾಲ ಚಂದ್ರಲೋಪನದ ಹುತ್ತೇನ
ಚಂದ್ರಲೋಪದ ಹುತ್ತಿನ ಮಾಲ್ಯ ಮಲಿಹಾಲ ಹಿಂಡ್ಯಾಳ
ಮಲಿಹಾಲ ಹಿಂಡ್ಯಾಳ ಪಾರ್ವತಿ ಕೆಸರ ಕಲಿಸ್ಯಾಳೇನಯ್ಯ
ಕೆಸರ ಕಲಿಸ್ಯಾಳಲ್ಲೋ ಶಿವನೆ ಅಡ್ಡ ಬಂದ ಕೊಲ್ಲೇಕ
ಅಡ್ಡ ಬಂದ ಕೊಲ್ಲೇಕೆಲ್ಲ ಕೆಸರ ಒಗದಾಳೇನಯ್ಯ
ಬೀರ ಅಣ್ಣ ಸಂಗಾಟೆಲ್ಲಾ ಹೇಲ ಅರಿವಿ ಸಂಗಾಟ
ಹೇಲ ಅರಿವಿ ಸಂಗಾಟೆಲ್ಲ ನೊಣಗಳು ಬಂದಾವೇನಯ್ಯ
ನೊಣದ ಹುಳಗಳ ಹಿಡದು ಪಾರ್ವತಿ ಜೇನಹುಳ ಮಾಡ್ಯಾಳೆ
ಹೆಬ್ಬ ಜೇನು ಅಲ್ಲೋ ಶಿವನೆ ಅಂದಿಗ್ಹುಟ್ಟತೋ ನಮ್ಮಯ್ಯ
ಆವಾಗ ನೋಡೋ ಪಾರ್ವತಿ ನಾನು ಮಾಡುದು ಮಾಡೀನಿ
ನಾನು ಮಾಡುದು ಮಾಡಿನಂತ ಪಾರ್ವತಿದೇವಿ ಅಂದಾಳ
ಆವಾಗ ನೋಡೋ ಪರಮೇಸೂರ ತಾನು ಮಾಡೂದಲ್ಲೇನ
ಬಾರಂಗ್ಬಾಯಿ ಒಳಗೇನಲ್ಲಾ ಕಾಳಿಂಗರಾಯ ಇದ್ದಾನಲ್ಲಾ
ಏಳುಹೆಡಿಯ ಕಾಳಿಂಗರಾಯನ ಪರಮೇಶ್ವರ ಕರದನಯ್ಯಾ
ಪರಮೇಶ್ವರನು ಕರದು ಹೇಳ್ಯಾನ ಕೂಸಿನ ಜೋಪಾನ ಮಾಡಂತ
ಏಳು ಹೆಡಿಯ ಕಾಳಿಂಗರಾಯಾ ಏನಂತಾನೋ ನಮ್ಮಯ್ಯ
ಮೂಗಂಡಗ ವಿಷವ ಕೊಟ್ಟೀದಿ ಶಿವನೆ ಹ್ಯಾಂಗ ಜೋಪಾನ ಮಾಡಲಿ
ಆವಾಗ ನೋಡೋ ಪರಮೇಸೂರ ಏನಂತಾನೋ ನಮ್ಮಯ್ಯ
ತೊಟ್ಟಲ ಕಟ್ಟಿದ ಕೊಲ್ಲೆಕೆಲ್ಲಾ ಜೀನ ಇಟ್ಟಾದಂದಾನೆ
ಜೇನು ಇಟ್ಟದಲ್ಲೋ ಕಾಳಿಂಗ ಕೂಸುಹಟಮಾಡಿ ಅತ್ತಾಗ
ಕೂಸುಹಟಮಡಿ ಅತ್ತಾಗ ಕಾಳಿಂಗ ಬಾಲಿಲೆ ತೂತ ಮಾಡಯ್ಯ
ಆವಾಗ ನೋಡೋ ಕಾಳಿಂಗರಾಯಾ ಗಿಡವ ಏರ‍್ಯಾನೇನಯ್ಯ
ಗಿಡವ ಏರ‍್ಯಾನಲ್ಲೋ ಶಿವನೆ ತೊಟ್ಟಲದೊಳಗೆ ಕುಂತಾನೋ
ಕೂಸು ಹಟಮಾಡಿ ಅತ್ತಾಗೆಲ್ಲಾ ಬಾಲಿಲೆ ತೂತ ಮಾಡ್ಯಾನೆ
ಜೇನ ತುಪ್ಪ ಉಂಡು ಬೆಳದ್ಯೋ ಹಬ್ಬಲಿ ಕೋಣಗನೂರವನೆ
ನಾಗೇಂದ್ರಯನ ಹೆಡಿ ತೆಳಗಾಡಿದ್ಯೊ ಗೂಳಿಕೋಣಗನೂರವನೆ
ನಾಗಕ್ಕಿ ನಾಗಗನ್ನೇರಪ್ಪ ನಾಗೇಂದ್ರಾಯನ ಮಕ್ಕಳೋ
ದೇವಕ್ಕಿ ದೇವಗನ್ನೇರಪ್ಪ ದೇವೇಂದ್ರಾಯನ ಮಕ್ಕಳೋ
ವಕ್ತನಿಲ್ಲದ ಬಾಲೇರಪ್ಪ ಮಲಿಮೂಗಿನಲ್ಲದ ಸೂಳೇರು
ಹಗಲಿ ಹಂಗನಬ್ಯಾಟಿ ಆಡವರು ಇಗಳಿಗಿಡಗನ ಬ್ಯಾಟಿ ಆಡವರು
ಕೊದಲಿನಂದನ ಬನದಾಗೆಲ್ಲಾ ಬ್ಯಾಟಿ ಆಡುತ ಹೊಂಟಾರ
ಕಡಿ ಹುಟ್ಟ ಹೆಣ್ಣು ಮಗಳು ಬಂದಮ್ಮ ಕಂದನ ಶಬ್ದ ಕೇಳ್ಯಾಳ
ಬನ್ನಿ ಬನ್ನಿ ಅಕ್ಕದೇರ‍್ಯಾ ಕೊದಲಿನಂದನ ಬನದಾಗ
ಕೊದಲಿ ನಂದನ ಬನದಾಗವ್ವ ಕಂದನ ಶಬ್ದ ಕೇಳ್ಯಾವ
ಏಳುಮಂದಿ ಹೆಣಮಕ್ಕಳೆಲ್ಲಾ ಕಿವಿಗೊಟ್ಟು ಕೇಳ್ಯಾರ
ಚಲಮಾರಿ ಹೌದೋ ಬೀರೈಲಿಂಗಾ ಸುಮ್ಮನಾಗೇನೇನಯ್ಯ
ಆರುಮಂದಿ ಹೆಣಮಕ್ಕಳೆಲ್ಲಾ ಏನಂತಾರೋ ನಮ್ಮಯ್ಯ
ಕೊದಲಿ ನಂದನ ಬನದಾಗವ್ವ ಹಕ್ಕಿ ಸುಳುವು ಇಲ್ಲೇನ
ಹಕ್ಕಿ ಸುಳವು ಇಲ್ಲ ಇಲ್ಲೆ ಪಕ್ಶಿ ಸುಳವು ಇಲ್ಲೇನ
ಮಂದಿ ಸುಳವು ಇಲ್ಲ ಇಲ್ಲೇ ಮಾನವರ ಸುಳುವು ಇಲ್ಲೇನ
ಮಂದಿ ಸುಳುವು ಇಲ್ಲದಲ್ಲೇ ಕಂದನ ಶಬ್ದ ಹ್ಯಾಂಗ ಆದಾವ
ಎಂಥಾ ಹಗಮಾಲಿ ಹೆಂಗಸುವ್ವ ನೀ ಏಂಥಾ ದಿಗಮಾಲಿ ಹೆಂಗಸವ್ವ
ಎಂಥಾ ದತ್ತೂರಿ ಹೆಂಗಸ ಏಳುಮಂದಿ ಅಲ್ಲೋ ಶಿವನೆ
ಆವಾಗ ನೋಡೋ ಬೀರೈಲಿಂಗಾ ಹಟಮಾಡಿ ಅತ್ತಾನೇನಯ್ಯಾ
ಕಡಿಹುಟ್ಟ ಹೆಣ್ಣುಮಗಳು ಕಿವಿಲೆ ಕೇಳ್ಯಾಳೇನವ್ವ
ಬರ್ರಿ ಬರ್ರಿ ಅಕ್ಕದೇರ‍್ಯಾ ಕೊದಲಿನಂದನ ಬನದಾಗ
ಕೊದಲಿನಂದನ ಬನದಾಗವ್ವ ಕಂದನ ಶಬ್ದ ಆದಾವ
ಏಳುಮಂದಿ ಹೆಣಮಕ್ಕಳೆಲ್ಲಾ ಕಿವಿಯಕೊಟ್ಟು ಕೇಳ್ಯಾರ
ಕಣ್ಣ ಮುಟ್ಟ ನೋಡ್ಯಾರಲ್ಲ ಕೂಸು ನಂದು ನಿಂದು ಅಂದಾರ
ನಂದು ನಿಂದು ಅಂದಾರಲ್ಲಾ ಹಿರಿಯ ಅಕ್ಕನು ನಮ್ಮಯ್ಯ
ಹಾಲ ಹರದ ಮಾಯವ್ವ ಸಮಾಜ ಹೇಳ್ಯಾಳೇನಯ್ಯ
ವಕ್ತನಿಲ್ಲದ ಬಾಲೇರವ್ವ ನಾವುಮಲಿಮೂಗಿಲ್ಲದ ಬಾಲೇರ
ನಾವ್ಯಾಕ ಮುಂದ ಹೋಗತೀವವ್ವ ಅವರದು ಕೂಸೇಳಂದಾಳ
ಕಡಿಹುಟ್ಟ ಹೆಣ್ಣುಮಗಳು ಬಂದಮ್ಮ ಕಾಲಿಲೆ ಚಮತ ಇದ್ದಾಳ
ಕಾಲಿಲೆ ಚಮತ ಇದ್ದಾಳಲ್ಲಾ ಅವಸರಲೆ ಮುಂದಕ ಹೋಗ್ಯಾಳಲ್ಲಾ
ಅವಸರಲೆ ಮುಂದಕ ಹೋಗ್ಯಾಳಲ್ಲಾ ಗಿಡವ ತೆಕ್ಕಿಲೆ ಹಿಡದಾಳಲ್ಲಾ
ಗಿಡವ ತೆಕ್ಕಿಲೆ ಹಿಡದಾಳಲ್ಲಾ ಮ್ಯಾಲಕೇರ‍್ಯಾಳೇನಯ್ಯ
ಮ್ಯಾಲಕೇರ‍್ಯಾಳಲ್ಲೋ ಶಿವನೆ ತೊಟ್ಟಲ ಹಂತ್ಯಾಕ ಹೋಗ್ಯಾಳಲ್ಲಾ
ಏಳು ಹೆಡಿ ಕಾಳಿಂಗರಾಯಾ ದುಮ್ಮಡಿಸಿ ಮೈಮ್ಯಾಲ ಬಂದಾನ
ಕಡಿಹುಟ್ಟ ಹೆಣ್ಣು ಮಗಳು ಬಂದಮ್ಮ ಜೀವಕ ಹೆದರ‍್ಯಾಳೇನಯ್ಯ
ಜೀವಕ ಹೆದರ‍್ಯಾಳಲೋ ಶಿವನೆ ಗಿಡವ ಇಳದಾಳೇನಯ್ಯ
ಆವಾಗ ನೋಡೋ ಹಿರಿಯ ಅಕ್ಕಾ ಏನಂತಾಳೋ ನಮ್ಮಯ್ಯ
ಆರುಮಂದಿ ತಂಗೀದೇರಿಗೆ ಸಕಾಜ ಹೇಳತಾಳೇಳಯ್ಯ
ವಗತನ ಇಲ್ಲದ ಬಾಲೆರವ್ವ ನಾವು ಮಲಿಮೂಗು ಇಲ್ಲ ಸಂಗಡೇರು
ಪಟ್ಟಣಕ ಪತಿಗರ್ತೆರು ಏಳುಮಂದಿ ಅಲ್ಲೇಳವ್ವ ಸಾಲ ನಿಂದ್ರೊಣಂದಾಳ
ಆವಾಗ ನೋಡೋ ಹಿರಿಯ ಅಕ್ಕ ಏನಂತಾಳೋ ನಮ್ಮಯ್ಯ
ಐದು ಸುತ್ತು ಅಲ್ಲೇಳವ್ವ ಗಿಡಕ ಪರದಕ್ಷಿಣಿ ಹಾಕೂನ
ಐದು ಸುತ್ತ ಸುತ್ತರಿಯುವದರೊಳಗ ಮಲಿಯ ಮೂಗು ಚಿಗಿಬೇಕ
ಮಲಿಯ ಮೂಗು ಚಿಗತೇನವ್ವ ತೊಟ್ಟಲಕ ಹಾಲು ಚಿಮ್ಮಬೇಕ
ತೊಟ್ಟಲಕ ಹಾಲು ಚಿಮ್ಮಿದರೇಳೆ ಅವರದು ಕೂಸು ಅಂದಾಳೆ
ಏಳುಮಂದಿ ಅಲ್ಲೋ ಶಿವನೆ ಗಿಡವನ್ನು ಸುತ್ತುವರಿದಾರೆ
ಹಿರಿಯ ಅಕ್ಕಗಲ್ಲೋ ಶಿವನೆ ಮಲಿಯ ಮೂಗು ಚಿಗತಾವ
ಕಣ್ಣಿಗಿ ಕಾಡಿಗಿ ಆಗೆದಲ್ಲಾ ಬೆನ್ನಿಗರಿಸಿಣ ಆಗೇದ
ಬೆನ್ನಿಗರಿಸಿಣಾಗೇದಲ್ಲ ಹಣಿಗೆ ಕೂಕಮ ಆಗೇದ
ಹಣಿಗೆ ಕೂಕಮ ಆಗೆದಲ್ಲ ತೊಟ್ಟಲಕ ಹಾಲು ಚಿಮ್ಮ್ಯಾವೆ
ಹಾಲಹರದ ಹರಮಾಯವ್ವ ಗಿಡವ ತೆಕ್ಕಿಲಿ ಹಿಡದಾಳ
ಗಿಡವ ತೆಕ್ಕಿಲಿ ಹಿಡದಾಳೆಲ್ಲ ಮ್ಯಾಲಕೇರ‍್ಯಾಳೇನಯ್ಯ
ಏಳ್ಹೆಡಿ ಕಾಳಿಂಗರಾಯಾ ದುಮ್ಮಸಿ ಮೈಮ್ಯಾಲ ಬಂದಾನ
ದುಮ್ಮಸಿ ಮೈಮಾಲ ಬಂದರ ಕಾಳಿಂಗ ಕೂಸುನಂದ ಆದಾನಪ್ಪ
ಕೂಸು ನಿಂದು ಇದ್ದರವ್ವ ನಾನು ಜ್ವಾಕಿ ಮಾಡತೀನಿ
ನೀನು ಜ್ವಾಕಿ ಮಾಡಿದರಪ್ಪ ನಿನಗ ಚಾಚಾ ಕೊಟ್ಟೇನ
ನನಗ ಜಾಜಾ ಅಲ್ಲೇಳವ್ವ ನೀಯೇನ ಕೊಡತೀದಂದಾನೆ
ನಾಡ ಮ್ಯಾಲ ಅಲ್ಲೋ ಕಾಳಿಂಗಾ ನಾಗೂರ ಜಾತುರಿ ಅನಸೇನ

ಅತ್ತಿ ಮನಿಯ ಸೊಸಿಯರನೆಲ್ಲ ತವರ ಮನಿಗೆ ಕರಿಸೇನ
ತವರ ಮನಿಗೆ ಕರಿಸೇನ ಕಾಳಿಂಗಾ ಬರಿಗಾಲೊಂದ ತಿದ್ದೇನ
ಬರಿಗಾಲೊಂದ ತಿದ್ದೇನ ಕಾಳಿಂಗಾ ಬೆಲ್ಲದ ಹಾಲ ಎರದೇನ
ಬಿಲ್ಲದ ಹಾಲ ಎರದೇನ ಕಾಳಿಂಗಾ ಬಿಳಿಯ ಹಾಲಾ ಎರದೇನ
ಏಳು ಹೆಡಿಯ ಕಾಳಿಂಗರಾಯಾ ಚಾಜಾ ಗೆದ್ದಾನೇನಯ್ಯ
ಹಾಲಹರದ ಹರಮಾಯವ್ವ ಚಾಜಾ ಕೊಟ್ಟಾಳೇನಯ್ಯ
ನಾಗರ ಪಂಚಮಿ ಅಂಬೂದು ಅಂದಿಗ್ಹುಟ್ಟಿತೋ ನಮ್ಮಯ್ಯ
ಹಾಲ ಹರದ ಹರಮಾಯವ್ವ ತೊಟ್ಟಲುಚ್ಚ್ಯಾಳೇನಯ್ಯ
ತೊಟ್ಟಲುಚ್ಚ್ಯಾಳಲ್ಲೋ ಶಿವನೆ ಗಿಡದ ಇಳದಾಳೇನಯ್ಯ
ಗಿಡವ ಇಳದಾಳಲ್ಲೋ ಶಿವನೆ ಆರುಮಂದಿ ತಂಗಿದೇರಿಗೆ
ಆರುಮಂದಿ ತಂಗಿದೇವರಿಗೆ ಸಮಾಜ ಹೇಳತಾಳೇನಯ್ಯ
ಏಳುಮಂದಿಗಲ್ಲೇಳವ್ವ ತಮ್ಮ ಅಂದರ ಇವನೇನ
ತಮ್ಮ ಅಂದರ ಇವನೇನವ್ವ ತವರು ಅಂದರ ಇವನೇನ
ತಂದಿ ಅಂದರ ಇವನೇನವ್ವ ತಾಯಿ ಅಂದರ ಇವನೇನ
ಆರುಮಂದಿ ತಂಗಿದೇರಿಗೆ ಸಮಾಜ ಹೇಳ್ಯಾಳೇನಯ್ಯ
ಚತ್ರೇರ ಕುಲದವ ದೇವರಲ್ಲಾ ಮಿತ್ರೇರ ಕುಲದಕಿ ಅಕ್ಕವ್ವ
ಕೂಡಬಾರದ ಕೂಡ್ಯಾರಪ್ಪಿವರು ಕೊದಲಿನಂದನ ಬನದಾಗ
ಏಳುಮಂದಿ ಹೆಣ್ಣುಮಕ್ಕಳಿವರು ತೊಟ್ಟಲ್ಹೊತ್ತಾರೇನಯ್ಯ
ತೊಟ್ಟಿಲ್ಹೊತ್ತಾರೋ ಶಿವನೆ ಬಾರಂಗ್ಬಾಯಿ ಬಿಟ್ಟಾರ
ಬಾರಂಗ್ಬಾಯಿ ಬಿಟ್ಟಾರಲ್ಲಾ ಮುಂದಕ ಹೋಗ್ಯಾರೇನಯ್ಯ
ಕದ್ನರೆಂಬುವ ಕದನರಲ್ಲಾ ಮದ್ನರೆಂಬುವ ಮಡಾವನಲ್ಲಾ
ಮದ್ನ ಎಂಬುವ ಮಡುವಿನಲ್ಲಿ ಹುಲ ಜೋಪಡಿ ಹಾಕ್ಯಾರ
ಹುಲ್ಲ ಜೋಪಡಿ ಹಾಕ್ಯಾರವರು ಒಳಗ ತೊಟ್ಟಲ ಕಟ್ಟ್ಯಾರ
ಒಳಗ ತೊಟ್ಟಲ ಕಟ್ಟ್ಯಾರವರು ಅಲಿಗೊಂದ ವಸ್ತಿಮಾಡ್ಯಾರ
ಮುಂಜಾನೆ ಎದ್ದಾಳ ಮಾಯವ್ವ ಆರುಮಂದಿ ತಂಗಿದೇರಿಗೆ
ಆರುಮಂದಿ ತಂಗಿದೇರಿಗೆ ಸಮಾಜ ಹೇಳತಾಳೇನಯ್ಯ
ಆರುಮಂದಿ ಅಲ್ಲೇಳವ್ವ ನೀವು ಬ್ಯಾಟಿಗ್ಹೋಗಿ ಬರುದ್ರಾಗ
ಬ್ಯಾಟಿಗ್ಹೋಗಿ ಬರೂದರೊಳಗ ಅಡಗಿ ಮಾಡತೀನಂದಾಳ
ಕೂಸಿನ ಹಂತಿಲೆ ಇದ್ದಂಗಾಗತದ ಅಡಗಿ ಮಾಡತೀನಂದಾಳ
ಆರುಮಂದಿ ತಂಗಿದೇರು ಅಕ್ಕನ ಮಾತು ಕೇಳ್ಯಾರ
ಅಕ್ಕನ ಮಾತ ಕೇಳ್ಯಾರವರು ಬ್ಯಾಟಿಗೆ ಹೋಗ್ಯಾರೇನಯ್ಯ
ಆಗ ಬಿತ್ತಿ ಆಗ ಬೆಳೆಯುವ ಬೀಜ ಅವರ ಹಂತೀಲಿದ್ದಾವ
ಅವರ ಹಂತೀಲಿದ್ದಾಗ ಮಾಯವ್ವ ಮಡಿಯ ಮಾಡ್ಯಾಳೇನಯ್ಯ
ಬೀಜ ಚಲ್ಲ್ಯಾಳಲ್ಲೋ ಶಿವನೆ ಒಮ್ಮೆ ನೀರ ಹಾಕ್ಯಾಳೇನಯ್ಯ
ಒಮ್ಮೆ ನೀರ ಹಾಕಿದರಲ್ಲ ಬೆಳೆಯು ಆಗ್ಯಾವೇನಯ್ಯ
ಮತ್ತೊಮ್ಮೆ ನೀರ ಹಾಕಿದ ರಾಗ ಹೊಡಿಯ ತೆನೆಗೆ ಬಂದಾವೆ
ಮತ್ತೊಂದು ನೀರಿಗೆ ಕೊಯ್ದು ರಾಸಿ ಮಾಡ್ಯಾರೆ
ಕೊಯ್ದು ರಾಸಿ ಮಾಡ್ಯಾಳಲ್ಲಾ ಬೀಸಿ ಅಡಗಿ ಮಾಡ್ಯಾಳ
ಬೀಸಿ ಅಡಗಿ ಮಾಡ್ಯಾಳಲ್ಲಾ ತಂಗಿದೇರಿಗೋ ನಮ್ಮಯ್ಯ
ತಂಗಿದೇರು ಬರೂದರೊಳಗ ಜಳಕಕ ನೀರ ಇಟ್ಟಾಳ
ಆರುಮದಿ ತಂಗಿದೇರು ಬ್ಯಾಟಿ ಆಡ್ಯಾರೇನಯ್ಯ
ಹಾರು ಹಕ್ಕಿ ಹೊಡದಾರಲ್ಲವರು ಹಾರು ಗಿಡಗ ಹೊಡದಾರ
ಹುಲಿ ಹೊಡದಾರಲ್ಲೊ ಶಿವನೆ ಕರಡಿ ಹೊಡದಾರೇನಯ್ಯ
ಸಾರಂಗ ಹೊಡದಾರ ಸಾರಂಗನ ಕೋಡು ಮೆಟ್ಟ್ಯಾರ
ಸಾರಂಗನ ಕೋಡು ಮೆಟ್ಟಿ ಸಾವಿರ ಮಿಕವ ಹೊಡದಾರ
ಬ್ಯಾಸಿಗಿ ಬಿಸಲು ವಸಂತಕಾಲೋ ಬ್ಯಾಟಿ ಆಡ್ಯೋ ನಮ್ಮಯ್ಯ
ಬ್ಯಾಟಿ ಆಡಿ ಅಲ್ಲೋ ಶಿವನೆ ಬಾಳ ಬ್ಯಾಸರಗೊಂಡಾರ
ಬಾಳ ಬ್ಯಾಸರಗೊಂಡಾರಲ್ಲವರು ಗಿಡದ ನೆರಳಿಗೆ ಕೂತಾರ
ಗಿಡದ ನೆರಳಿಗೆ ಕುಳಿತು ಏನಂತಾರೋ ನಮ್ಮಯ್ಯ
ಅದೇ ಕೂಸಿನ ದಸಿಂದಲ್ಲ ಅಕ್ಕ ಒತ್ತಟ್ಟ್ಯಾದಾಳ
ಅಕ್ಕ ಒತ್ತಟ್ಟ್ಯಾದಳಲ್ಲ ನಾವು ಒತ್ತಟ್ಟ್ಯಾದೇವ
ಅಕ್ಕ ಏನಾದರೇನ ನಮಗ ಎನು ತಿಳಿಬೇಕ
ನಮ್ಮಗ ಏನಾದರ ಅಕ್ಕಗ್ಹ್ಯಾಂಗ ತಿಳಿಬೇಕ
ಅದೆ ಕೂಸಿನ್ಹೊಡದರಲ್ಲ ಅಕ್ಕ ನಮ್ಮಗೂಡ ಬಂದಾಳಲ್ಲ
ಇಂದಿನ ರಾತ್ರಿ ಅಲ್ಲೋ ಶಿವನೆ ಅಕ್ಕಗ ನಿದ್ರಿ ಹತ್ತಿದಾಗ
ಅಕ್ಕಗ ನಿದ್ದಿ ಹತ್ತಿದಾಗಲ್ಲ ಕೂಸಿನ ಕುತ್ತಿಗೆ ಹಿಚಗೂನ
ಕೂಸಿನ ಕುತ್ತಿಗಿ ಹಿಚಗಿದರಲ್ಲ ನಮ್ಮ ಕೂಡ ಬರತಾಳ
ಇಂಥ ಮಾತ ಮನಸಿನಾಗ ಮಾಡಿ ಗುಡಸಲಕ ಬಂದಾರೇನಯ್ಯ
ಹಾಲಹರದ ಹರಮಾಯವ್ವ ನೀರ ಕಾಸ್ಯಾಳೇನಯ್ಯ
ಅಡಗಿ ಮಾಡ್ಯಾಳಲ್ಲೋ ಶಿವನೆ ನೀರ ಕಾಸ್ಯಾಳೇನಯ್ಯ
ಬ್ಯಾಟಿ ಆಡಿ ದಣಿದು ಬಂದಿರಂತ ಕೈಕಾಲು ಒತ್ತ್ಯಾಳೇನಯ್ಯ
ಕಾಲು ಒತ್ತ್ಯಾಳೇನಯ್ಯ ಶಿವನೆ ನೀರ ಹಾಕ್ಯಾಳೇನಯ್ಯ
ಮೈಯ ಕೈಯ ಒತ್ತ್ಯಾಳಯ್ಯಾ ಜಳಕ ಮಾಡಿಸ್ಯಾಳೇನಯ್ಯ
ಜಳಕ ಮಾಡಿಸ್ಯಾಳೇನೊ ಶಿವನೆ ಉಣ್ಣಾಕ ನೀಡ್ಯಾಳೇನಯ್ಯ
ಊಟಾ ಮಾಡಿಸ್ಯಾಳೇನಯ್ಯ ಹಾಸಿ ಹೊಚ್ಚಿ ಮಲಿಗಿಸ್ಯಾಳ
ದಣದ ಬಂದ ನಾರೇರೆಲ್ಲ ಮಲಗಿಕೊಂಡಾರೇನಯ್ಯ
ಸಿದ್ಧ ಹೌದೋ ಬೀರೈಲಿಂಗಾ ಒಡನುಡಿದು ಮಾತಾಡ್ಯಾನೋ
ಇಂದಿನ ದಿನವು ಅಲ್ಲೇಳವ್ವ ಇಲ್ಲಿ ಇದ್ದರ ನಮ್ಮಯ್ಯ
ನಿಮ್ಮ ತಂಗಿದೇರೇಳವ್ವ ನನ್ನ ಜೀವಾ ಹೊಡದಾರ
ನನ್ನ ಜೀವ ಹೊಡದಾರವ್ವ ಜಾಗಾ ಬಿಡಬೇಕಂದಾನ
ಹಾಲ ಹರದ ಹರಮಾಯವ್ವಾ ತೊಟ್ಟಲ ಹೊತ್ತಾಳೇನಯ್ಯ
ತೊಟ್ಟಿಲ್ಹೊತ್ತಾಳಲ್ಲೋ ಶಿವನೆ ನಾಗರ ಬಟ್ಟಕ ಬಂದಾಳೋ
ಹಾಲ ಹರದ ಹರಮಾಯವ್ವಾ ದುಃಖ ಮಾಡ್ಯಾಳೇನಯ್ಯ
ಮೂಡಲ ನಾಡಾ ಬಿಟ್ಟಾಳ ಮಾಯವ್ವ ಪಡುವಲ ನಾಡಿಗೆ ಬಂದಾಳ
ಕೊದಲಿ ನಂದನ ಬನವ ಬಿಟ್ಟಾಳ ಬ್ಯಾರೆ ಆರಣ್ಯಾಕ ಬಂದಾಳ