ಗುರುನಾಥ ಕರಿಯಪ್ಪ

ಬಸವಣ್ಣನ ಭಕ್ತಿಗೆ ಮಹಾದೇವ ತಾ ಮೆಚ್ಚಿ ಮರ್ತ್ಯಕ್ಕೆ ಬಂದಂತೆ ಶಂಕರನು
ಮಳ್ಳ ಮಾಯಪ್ಪನ ಮನದೊಳು ತಾ ಮೆಚ್ಚಿ ಮಳಲ ಗದ್ದಿಗೆ ಹೊಯ್ದು ಕರಿಯಪ್ಪನೋ
ಹುಟ್ಟಿ ಕಾಮಾಲೆ ಹಾವ ಹುತ್ತಿಗೆ ಹಾಲು ಕರೆದು ಉದಿ ಹಾಯ್ದ ಕರಿಯಪ್ಪನೋ
ಕಾಮಜನಗ ಹಾಲಕರದುಂಡ ಮಾಳಪ್ಪಗ ವರಕೊಟ್ಟ ಗುರುನಾಥ ಕರಿಯಪ್ಪನೋ
ವರಕೊಟ್ಟ ಗುರುವಿಗೆ ಅರಿವಿಟ್ಟು ನಡೆದರ ತಪ್ಪದೆ ಭಾಷೆಕೊಟ್ಟ ಕರಿಯಪ್ಪನೋ
ಶೀತಾಳ ಮಿನುಗುವಂಥ ಶಿರಿಮಂತ ಶಿವನಿಗೆ ಗಂಧ ಕಸ್ತೂರಿ ಧರಿಸಿದ ಕರಿಯಪ್ಪನೋ
ಗೊಂಡೇದ ನಡುಕಟ್ಟು ಗುಂಡಿಗೆ ಮುಂಡಾಸ ಕಂಡಿರಿ ಕಿರಿಜಾಡಿ ಕರಿಯಪ್ಪನೋ
ಕರಿಯ ಮಲ್ಲಿಗೆಯೊಳಗೆ ಕಣಗಿಲ ಹೂಚಾಯಾ ಗರಿಕ್ಯಾದಗಿ ಮುಡಿದ ಕರಿಯಪ್ಪನೋ
ಬೇಗಿನ ಪೂಜೆಗೆ ಹೊಳೆವಂಥ ಕ್ಯಾದಿಗಿ ಹವಳ ಮಲ್ಲಿಗ ಸರ ಕರಿಯಪ್ಪನೋ
ಸಂಜೆಯ ಪೂಜೆಗೆ ಬಂಗಾರ ಕಿರಿಟವೋ ಖಂಡಗದ್ಹೂವ ಮುಡಿದಾ ಕರಿಯಪ್ಪನೋ
ಹೊನ್ನಾರಿ ಹೂವಿನ್ಯಾಂಗ ಕೆಂಗರಿಗಣ್ಣ ತೆರೆದುಂಗರ ಮೀಸಿ ನೋಡೊ ಕರಿಯಪ್ಪನೋ
ಜಂಗಿನ ಅಯ್ಯರು ಅಂಗಿಯ ತೊಡುವರು ಮುಂದಿನ ಮಳೆ ಹೇಳೋ ಕರಿಯಪ್ಪನೋ
ಬತ್ತಿಯ ಮುಂಡಾಸ ಅತ್ತಿ ಹೂವಿನ ಶ್ಯಾಲ ಹೊತ್ತ ಕುಂತಾನ ಗುರು ಕುರಿಯಪ್ಪನೋ

 

ವರವಿನ ಸಿದ್ಧ

ಯಾವಲ್ಲಿ ಹುಟ್ಟಿದ್ಯೊ ಯಾವಲ್ಲಿ ಬೆಳದ್ಯೋ
ಯಾವಲ್ಲಿ ಹುಡಿಯ ಹಾಯ್ದಯ್ಯ
ಅಂದನ ಗಿರಿಯಾಗ ಹುಟ್ಟಿದೆವಪ್ಪ ನಾವು
ಮುಂದನ ಗಿರಿಯಾಗ ಬೆಳದೇವೊ

ಅಂದನ ಗಿರಿಯಂದರ‍್ಯಾವದಪ್ಪ ನಿಂದು
ಮಂದನ ಗಿರಿಯಂದ್ರ ಯಾವದೊ
ಅಂದನ ಗಿರಿಯಂದ್ರ ತಾಯಿಯ ಒಡಲೊ
ಮಂದನ ಗಿರಿಯಂದ್ರ ಮಲಿಹಾಲೊ

ಮಂದನ ಗಿರಿಯ ಮಲಿಹಾಲ ಕುಡದು
ಕಂದ ಸಿದ್ಧ ತಾ ಬೆಳದಾನೊ
ಪಂಚ ಪರ‍್ವತ ಒಳಗಪ್ಪ
ಮೂರ ಏಣಿನ ಮರವೇಳೊ

ಮೂರ ಏಣಿನ ಮರಮೇಳಪ್ಪ
ಕಂದನ ತೊಟ್ಟಿಲ ಕಟ್ಟ್ಯಾವೊ
ಸಿದ್ಧನ ಸೇವಾ ನೋಡಪ್ಪ
ಎಂತೆಂಥವರು ಮಾಡ್ಯಾರೊ

ಮೇಘರಾಜ ಬಂದ ಚಳಿಯ ಕೊಟ್ರ
ವಾಯು ತೊಟ್ಟಿಲ ತೂಗ್ಯಾನೆ
ಮೃಗಗಳ ರಾಜ ಹುಲಿಯ ನೋಡಪ್ಪ
ಪಾದವನೊತ್ತುತ ಕುಳಿತಾನೊ

ಏಳ ಹೆಡಿಯ ಕಾಳಿಂಗನೊ
ಏಳ ಸುತ್ತನು ಹಾಕಿದನೊ
ಕೋಗಿಲ ಕೊಳಲನೂದ್ಯಾವು
ನರಿಗಳ ಸೋಬಾನ ಪಾಡ್ಯಾವ

ಶಿವನ ವರವಿನ ಸಿದ್ಧನೊ
ಅಂ ಅಂತ ಅಳವುತ ಇದ್ದಾನೊ
ಅಂ ಅಂತ ಅಳುವ ಹೊತ್ತಿಗೆ
ಜೇನ ತುಪ್ಪ ಹೊಯ್ಯಲೊ

ಜೇನ ತುಪ್ಪ ಹೊಯ್ಯಾಲ ಕಡಿದರ
ಕಂದ ಸಿದ್ಧತಾ ಮಲಗ್ಯಾನ
ಚಂದಾಗಿ ನಿದ್ದಿ ಮಾಡ್ಯಾನ
ಹೆಚ್ಚಿ ಹೆಚ್ಚಿಗೆ ಪವಾಡ ಮಾಡ್ಯಾನ
ಸುರ್ಚಿ ಮಾಯವ್ವನ ತಮ್ಮನೋ

˜™

ಮಾಳಪ್ಪ – ದ್ಯಾಮವ್ವ

ದೇವದೇವತೆರ ಕತಿಯ ಕೇಳರಿ
ದೈವ ಕುರಿತು ಹಿತದಿಂದ
ದೇವಿ ನಿಂತಾಳ ಕೈಲಾಸದಲ್ಲಿ
ದ್ಯಾಮವ್ವ ಕೇಳತಾಳ ಮಾದೇವಗಲ್ಲಿ

ಅಂತು ಮಾಳಪ್ಪನ ಸ್ವಂತ್ಹೋಗಿ
ತರತೀನಿ ದೀಡ ತಾಸಿನಲ್ಲಿ
ಮಾದೇವ ಹೇಳತಾನ ದ್ಯಾಮವ್ವಗಲ್ಲಿ
ಹೊಗಬೇಡ ಮಗಳೆ ಮರತ್ಯದಲ್ಲಿ

ಮಾಳಪ್ಪ ಭಕ್ತಿವಾನ ಭವದಾಗ
ಹ್ವಾದರ ಅಲ್ಲೆ ಬರುದಿಲ್ಲ ಇಲ್ಲೆ
ತಿರುಗಿ ಕೈಲಾಸದಲ್ಲಿ
ಸಿಟ್ಟಿಗೇರಿ ದ್ವಾಮವ್ವ

ಕ್ವಾಣನ ಬಂಡಿ ಹೂಡ್ಯಾಳ
ಮೂಗಂಡ ಇಸ ಹೇರ‍್ಯಾಳ ಬಂಡ್ಯಾಗ
ಶರ್ಪಿನ ಬಾರಕೋಲ ಹಿಡದಾಳ ದ್ಯಾಮವ್ವ
ಕುಂತಾಳ ಬಂಡಿಯ ಮ್ಯಾಗ

ಪೋತರಾಜ ಮುಂದ ಕೈಲಾಸದಿಂದ
ಇಳದಾಳೋ ಬೇಜಗುತ್ತಿ ಬೈಲಾಗ ಬಂದು
ಹುಡಕತಾಳ ಸಿದ್ಧ ಮಾಳಿಂಗರಾಯನೋ
ಹುಡುಕಿ ಬ್ಯಾಸತ್ತು ಬಂದು ನಿಂತಾಳೋ

ಸತ್ಯ ಸಿಡಿಯಾಣದಾಗೋ
ಬಿರಪ್ಪ ಹೇಳತಾನ ದ್ಯಾಮವ್ವಗಲ್ಲಿ
ಇಸ ಬಿಡಬೇಡ ತಾಯಿ ಮರತ್ಯದಲ್ಲಿ
ನೀನು ಉಳಸವ್ವ ಜನರಿಗೋ

ಭಾಗ್ಯದ ಹಟ್ಯಾಗ ಮಾಳಪ್ಪದಾನಂತ
ಬೀರಪ್ಪ ಹೇಳ್ಯಾನೀಗ
ಸಿಟ್ಟಿಗೇರಿ ದ್ಯಾಮವ್ವ ಹೋಗ್ಯಾಳೋ
ಭಾಗ್ಯದ ಹಟ್ಟೀಗಿ

ಹೋಗಿ ಹಿಡಿದಾಳೋ ಮಾಳಪ್ಪನ
ಮೂರು ದಿವಸಾಯ್ತೋ ಹುಡಕತೀನಿ ನಿನ್ನ
ನಡಿಯೋ ಕೈಲಾಸಕೀಗ
ಇಬ್ಬರೂ ಕೂಡಿ ಕುಂತಾರೋ ಜೋಡಿ

ಬಂಡಿ ಹೊಡದರಾಗೋ
ಮಾಳಪ್ಪ ಭಗತಿವಾನ ಭವದಾಗೋ
ಬಂಡಿಯ ಗಾಲಿ ತುಂಡಾಗಿ ಬಿದ್ದಾವೋ
ಮುತ್ತಲಮೋರಿ ಹಳದಾಗೋ

ಮಾಳಪ್ಪ ಕೇಳತಾನ ದ್ಯಾಮವ್ವಗಲ್ಲಿ
ಮೂಗತೆಲ್ಲೆದ ಹೇಳ್ತಾಯಿ ನಿನ್ನ
ನಡಿಯೋ ಕೈಲಾಸಕೀಗ
ಇಬ್ಬರೂ ಕೂಡಿ ಕುಂತಾರೋ ಜೋಡಿ

ಬಂಡಿ ಹೊಡದರಾಗೋ
ಮಾಳಪ್ಪ ಭಗತಿವಾನ ಭವದಾಗೋ
ಬಂಡಿಯ ಗಾಲಿ ತುಂಡಾಗಿ ಬಿದ್ದಾವೋ
ಮುತ್ತಲಮೋರಿ ಹಳದಾಗೋ

ಮಾಳಪ್ಪ ಕೇಳತಾನ ದ್ಯಾಮವ್ವಗಲ್ಲಿ
ಮೂಗತೆಲ್ಲೆದ ಹೇಳ್ತಾಯಿ ನಿನ್ನ ಮೂಗಿನಾಗೋ
ಹುಡಕತಾಳೋ ಮುತ್ತಲಮೋರಿ ಹಳದಾಗೋ
ಕಲ್ಲು ಮಣ್ಣ ಗ್ವಾಳೇ ಮಾಡಿ ಮೆಟ್ನಾಲಿಗಚ್ಚಿ

ತೋರತಾಳೋ ಮುತ್ತಲಮೋರಿ ಹಳ್ಳದಾಗೋ
ದ್ವಾಮವ್ವ ಕೇಳತಾಳ ಮಳಪ್ಪಗಾಗ
ಮೂಗ್ತೆಲ್ಲದ ಹೇಳಪ್ಪ ನೀ ನನಗೀಗ
ನಾನು ಸೋತ ನಿಂತೆ ಭವದಾಗ

ಕೈಲಾಸಕ ಹೋಗುದಿಲ್ಲ
ಜಾಗ ಕೊಡುವೋ ನನಗ
ಮಾಳಪ್ಪ ಹೇಳತಾನ ದ್ಯಾಮವ್ವಗಳಲ್ಲಿ
ಮೂಗತಿ ಆದ ನೋಡ ತಾಯಿ ನಿನ್ನುಡಿಯಲ್ಲಿ

ಸುಳ್ಳೆ ಹೈರಾಣ ಭವದಲ್ಲಿ
ಸಿದ್ಧರೊಳಗ ಶೀಲವಂತ ನೆನದಾಳೋ
ಸಿದ್ಧರೊಳಗ ಶೀಲವಂತ ನೆನದಾಳೋ
ಸತ್ಯ ಸಿಡಿಯಾಣದಾಗೋ

˜™

ಗುಡ್ಡದ ಸ್ವಾಮಿ

ಹರಾ ಹರಾ ದೇವsರ ಬಂದಾವ ಬನ್ನಿರೆ
ಮೈಲಾರ ಲಿಂಗನ ದೇವsರ ಬಂಧಾವ ಬನ್ನಿರೆ

ಅವತಾರ ಪುರುಷಾಗಿ ಬಂದನು ಸ್ವಾಮಿ
ಏಳು ಗುಡ್ಡದ ಕಣಿವೆಯಲಿ
ಭಕ್ತರು ಕರೆದರು ಮೈಲಾರ ಗುಡ್ಡ
ಭಕ್ತರ ಉದ್ಧಾರ ಆದೀತೋ

ವೇಷವ ಅಡಗಿಸಿ ದೇಶವ ತಿರುಗುತ
ದೇಶದ ಉದ್ಧಾರ ಮಾಡುತಲಿ
ಶಿಷ್ಟರ ಉದ್ದಾರ ಮಾಡುತ ಸ್ವಾಮಿ
ದುಷ್ಟರ ಸಂಹಾರ ನಡೆಸಿದನು

ಕಾಮದ ಗಾಳಿ ಬೀಸಿತು ಜೋರ
ಮಾವಿನ ತೋಪು ಚಿಗುರೀತ
ವಸಂತಮಾಸ ಬಂದಿತು ಬೇಗ
ಸ್ವಾಮಿಗೆ ಮಾಡಿತು ಮೋಡಿಯ

ಮಾಲಾಪುರಕೆ ಬಂದನು ನಡೆಯುತ
ಸೃಷ್ಟಿಯ ಸೊಬಗ ನೋಡೂತ
ದೃಷ್ಟಿಗೆ ಬಿದ್ದಳು ಗರತಿ ಗಂಗಮ್ಮ
ಕಾಮಗ ಸೋತನು ಕಣದಲ್ಲಿ

ಪುಂಗಿಯ ನಾದಕೆ ನಾಗನು ಸೋತಂತೆ
ಗಂಗಿಯ ರೂಪಕ ಸೋತನು
ಮಂಗನು ಆದನು ಮೈಲಾರಸ್ವಾಮಿ
ತಂಗಿಯ ಪಾದಕ ಬಿದ್ದಾನು

ನಾಚಿಕೆ ಬಿಟ್ಟು ಹೇಳುತ ಸ್ವಾಮಿ
ತಂಗಿಯ ಮಂದೆ ತನ್ನಾಸೆ
ಗಂಗಿ ಮಾಳಮ್ಮಗ ಗಂಡನು ಇರುವನು
ತಗಿಬ್ಯಾಡ ತಮ್ಮ ಆಕಿ ಹೆಸರ

ಮುತ್ತಿನಂಥ ಮಾತು ಮರತವು ಆಂವಗ
ಮುತ್ತಿನ ಮುಖದ ನೆನಪಲ್ಲಿ
ಕೈಗೆ ತ್ರಿಸೂಲ ಬಂದಿತು ಸ್ವಾಮಿಗೆ
ಕೊರಳಿಗೆ ಡಮರು ಏರೀತ

ಅಂಬಲಿ ಡೋಣಿ ಬಿದ್ದಿತು ಬೆನ್ನಿಗೆ
ತಲೆಮೇಲೆ ಜುಟ್ಟ ಕಟ್ಟಿದನು
ಭಂಡಾರ ಚೀಲ ತೂಗಿತು ಕೊರಳಿಗೆ
ಮಾಳಿಯ ಮನೆಕಡೆ ನಡದಾನ

ಮಾಯ್ಕಾರ ಮಾದೇವನಾಟ ಕೇಳುದೇನು
ಮಾಳಿಯ ಮನೆ ಮುಂದ ನಿಂತಿಹನು
ಅತ್ತಿತ್ತ ನೋಡುತ ಒಳಗೆ ಇಣುಕುತ
ಡಮರಿನ ನಾದವ ಮಾಡಿದನು

ಏಳುಕೋಟಿ ಏಳುಕೋಟಿ ಎನ್ನುತ
ಒಳಗೆ ಇಣುಕುತ ಕೂಗಿದನು
ಮಾಳವ್ನ ತಾಯಿ ಬಂದಳು ಹೊರಗ
ಮರತುಂಬ ಕಾಳು ನೀಡಾಕ

ಮುದುಕಿಯರ ಕೈಯಾನ ಭಿಕ್ಷೆ ……
ಸೋಗು ಹಿಡಿದನು ಮೈಲಾರಸ್ವಾಮಿ
ಮಾಳಿಯು ಬಂದಳು ಭಿಕ್ಷೆ ನೀಡಾಕ
ಮೈತುಂಬ ಸೆರಗ ಹೊತ್ಕೊಂಡು

ಕಾಳನು ಸುರಿದಾಳ ಸ್ವಾಮಿ ಜೋಳಿಗೆ
ನೆಲವನು ನೋಡುತ ಮಾಳಮ್ಮ
ಕಾಳು ನೀಡಿ ಹಿಂದಕ ಹೋಗುವಾಗ ಸ್ವಾಮಿ
ಸೆರಗು ಹಿಡಿದು ಜಗ್ಗಿದನು

ಗಂಟು ಮುಖದಲಿ ನೋಡ್ಯಾಳ ತಾಯಿ
ಸೆರಗು ಹಿಡಿದ ಬಟಂನ್ನ
ಕೈಯಾಗ ಸೆರಗು ಹಿಡಿಯುತ ಸ್ವಾಮಿ
ತನಗ ಸತಿಯಾಗೆಂದು ಕೇಳಿದನು

ಸೆರಗನು ಬಿಡೋ ಬಿಕ್ಷುಕ ಗೊರವ
ಗಂಡನು ನನಗೆ ಇರುವನು
ಗಂಡನು ನನಗೆ ಇರುವನು ಅವನೊಂದು
ಕೂಸಿನ ತಂದೆ ಆಗಿಹನು

ಕೈಯನು ಕೊಸರುತ ಗೊರವನ ಕೈಯಿಂದ
ಗಂಡನ ಹೆದರಿಕೆ ಹೇಳ್ಯಾಳ
ಈ ಸುದ್ದಿ ನನ್ನ ಗಂಡಗ ತಿಳಿದರ
ಹಾರಿತ್ನೋಡೊ ನಿನ ರುಂಡ

ಗಾಬರಿಯಿಂದ ಓಡ್ತಾಳ ಒಳಗ
ಕೂಸನ್ನು ಹೊರಗ ಬಿಟಗೊಟ್ಟು
ಕೂಸಿನ ಎತ್ತಿ ಹಿಡಿಯುತ ಸ್ವಾಮಿ
ಬೆಟ್ಟದ ಹಾದಿ ಹಿಡದಾನ

ಸ್ವಾಮಿಯ ಹಿಂದೆ ಬಂದಳು ತಾಯಿ
ಮಗನ ಕೊಡೆಂದು ಕೇಳೂತ
ಮಗನ ಕೊಡೆಂದು ಕೇಳೂತ ಮಾಳಿ
ಬಹುದೂರ ನಡೆದು ಬಂದಾಳ]

ಯುದ್ಧಕೆ ಹೋದ ಮಾಳಿಯ ಪತಿರಾಯ
ಮರಳಿ ಮನೆಗೆ ಬಂದಿಹನು
ಚೆನ್ನಿಗರಾಯ ಹೋದನು ಒಳಗ
ತಾಯಿಂದ ಸುದ್ದಿ ತಿಳದಾನು

ಹೆಂಡತಿಗಾಗಿ ಮರಗುತ ಕಲಿರಾಯ
ಕೈಯಲ್ಲಿ ಖಡುಗ ಎತ್ತಿದನು
ಕೈಯಾಗ ಖಡುಗ ಹಿಡಿಯುತ ರಾಯ
ಸ್ವಾಮಿಯ ಕೊಲ್ಲಲು ಬಯಸಿದನು

ಮಾಯ್ಕಾರ ಸ್ವಾಮಿಗೆ ತಿಳಿದಿತು ವಿಷಯ
ದಡ ದಡ ಈ ಕಡೆ ಬಂದಿಹನು
ಮನೆ ಮೇಲೆ ಬಂಡಾರ ಚೆಲ್ಲುತ ಸ್ವಾಮಿ
ಮನೆ ಭಸ್ಮ ಮಾಡಿ ಕೊಂದನು

ಮಾಡುತ ನಾಶ ವೈರಿಯ ಜನುಮ
ಗುಡ್ಡದ ಹಾದಿ ಹಿಡಿದಿಹನು
ಸ್ವಾಮಿಯ ಬೆನ್ನತ್ತಿ ಬಂದಳು ತಾಯಿ
ಕೂಸಿನ ಕರುಳಿನ ಆಸೆಯಲಿ

ತಾಯಿಯ ಪಾದಕೆ ಬೀಳುತ ಸ್ವಾಮಿ
ತಾಯಿಗೆ ಸುದ್ದಿ ಹೇಳಿದನು
ಕೋಪವ ಮಾಡ್ಯಾಳ ಮಗನ ಮೇಲೆ
ಸಿಟ್ನಿಂದ ಬೈದು ಕಳಿಸಿದಳು

ಗುಡ್ಡವ ಹತ್ತಿ ಗುಡ್ಡವ ಇಳಿಯುತ
ಏಳು ಗುಡ್ಡದ ಕಣವಿಗೆ ಬಂದನು
ಮಾಳಮ್ಮನ ಜತೆಗೂಡಿ ಬಂದನು ಸ್ವಾಮಿ
ಅಲ್ಲೆ ಕಲ್ಲಾಗಿ ನಿಂತಿಹನು