.ಆಗಮನ

ನೀಲವ್ಯೋಮ ವಿಶಾಲ ಪಥದಲಿ
ಶ್ರಾವಣ ನೀರದ ನೀಲ ರಥದಲಿ
ಗೌರಿಗಣೇಶರು ಬರುವರದೊ!
ಭಾದ್ರಪದಾದಿಯ ಶಾದ್ವಲ ವೇದಿಯ
ಶ್ಯಾಮಲ ಪೃಥಿವಿಯ ಕೋಮಲ ವಕ್ಷಕೆ
ಶ್ರೀ ಕೈಲಾಸವ ತರುವರದೊ!

ಅವರೈತರುವಾ
ಮುಗಿಲಿನ ತೇರಿಗೆ ಬೆಳ್ಳಕ್ಕಿಯ ಸಾಲೆ
ತೋರಣ ಹೂ ಮಾಲೆ;
ಕೊಕ್ಕಿನ ಕುಂಕುಮವೆರಸಿದ ಪಸುರಿನ
ಗಿಳಿವಿಂಡಕ್ಷತೆ;
ತಳಿವಳು ಬನದೇವಿ,
ಹೊಸ ಅತಿಥಿಯನೋವಿ.
ಬಿತ್ತಿದ ಗದ್ದೆಯ ಬಿತ್ತರದೆದೆಯಲಿ
ಬತ್ತದ ಪೈರಿನ ಚಿನ್ನದ ಕನಸಿನ
ಕಥೆ ಹೇಳಿ

ಸುಯ್ಯನೆ ಬೀಸುತ್ತಿದೆ ಗಾಳಿ,
ಅಲೆ ಅಲೆ ಅಲೆ ಛಂದದಲಿ,
ಆಶಾಬಂಧದಲಿ.
ಸಹ್ಯಾದ್ರಿಯ ಮಳೆನೀರ್ ತುಂಬಿದ ಹೊಳೆ
ಕಾವೇರಿ
ಕೆಳಕೆಳಗಿಳಿಯುವ ತೇರಿನೊಳಮ್ಮನ
ತೊಡೆಯೇರಿ
ಕುಳಿತ ಗಣೇಶನ ಕಣ್ಣಿನಚ್ಚರಿಗೆ
ರಜತ ರೇಖೆಯೊಲು ತೋರಿ
ಹರಿಯುತ್ತಿರುವಳು ಕನ್ನಡ ತಾಯಿಯ
ತುಂಬೆದೆ ಸೂಸಿದ ಸುಕುಮಾರಿ!

ಆ ಮುಗಿಲಿನ ತೇರ್
ನೇಸರ್ ತಿಂಗಳ್ ಅರಿಲುಗಳೂರನು ದಾಟಿ,
ಸಾಗರ ಮುದ್ರಿತ ಪೃಥಿವೀ ಗೋಲವ ಸುತ್ತಿ,
ನಾನಾ ದೇಶದ ನಾನಾ ದೃಶ್ಯವ ನೋಡಿ; —
ಪುಣ್ಯ ಹಿಮಾಚಲ ಶಿರ ಶಿಖರದೊಳವತರಿಸಿ
ಭಾರತಭೂಮಿಯ ಗಿರಿನದಿವನಗಳ ಚರಿಸಿ
ಕಡೆಗೈತಂದಿದೆ ಕನ್ನಡನಾಡನ್ ವರಿಸಿ,
ಕೈಲಾಸವನುಳಿದೈತಂದವನನ್,
ಕಂದಾ, ನಿನ್ನನ್ ಸ್ಮರಿಸಿ!
ಸುತ್ತುತ್ತಿಳಿವಾ ಮುತ್ತಿನ ತೇರ್
ಹತ್ತಿರೆ ಹತ್ತಿರೆ ಬರುತಿದೆ ಪಾರ್;
ಶ್ರಾವಣದಂತ್ಯ ಪ್ರಾತಃ ಕಾಲದ
ಚಿನ್ನದ ಬಿಸಿಲಲಿ ತಳಿಸುವ ತೇರ್;
ಭಾದ್ರಪದಾನಿಲ ಪಕ್ಷಗಲೋಲಿಹ
ಜಲಧರ ಹಂಸಗಳೆಳೆಯುವ ತೇರ್;
ನದೀ ಶರಾವತಿ ಗೇರುಸೊಪ್ಪೆಯಲಿ ತೇರ್;
ಧುಮುಧುಮುಕುವವೋಲಿಳಿಯುವ ತೇರ್;
ಬೇಲೂರಿನ ದೇವಾಲಯ ರಚನೆಗೆ
ಕನ್ನಡಿ ಹಿಡಿದಿಹ ಕನ್ನಡ ತೇರ್; —
ಅಡಕೆಯ ಹೂವಿನ ಬಮಗಾರದ ತೇರ್;
ತೆಂಗಿನ ಹೂವಿನ ಬಂಗಾರದ ತೇರ್;
ಬಾಳೆಯ ಹೂವಿನ ಸಿಂಗಾರದ ತೇರ್;
ಮಲ್ಲಿಗೆ ತಾವರೆ ಸಂಪಗೆ ಕೇದಗೆ
ಸೇವಂತಿಗೆ ಸೀತಾಳಿಯ ತೇರ್;
ಮಾವಿನ ಹಲಸಿನ ತಳಿರಿನ ತೋರಣ
ಮಿಳಿರುವ ಚಂದದ ಗಂಧದ ತೇರ್; —
ಸುತ್ತುತ್ತಿಳಿವಾ ಮುತ್ತಿನ ತೇರ್
ಬಂತದೊ, ಬಂತದೊ, ಬಂತದೊ, ಪಾರ್!
ಪೋ, ಬಳಿಸಾರ್; ಬಾ, ಬಾ, ಬಾ, ಬಳಿಸಾರ್;
ಇಳಿಯಿತು ನೆಲಮುಟ್ಟಿತು ದೇವರ ತೇರ್!
ಅದೆ ಕಾಣ್ ಪರಮೇಶ್ವರಿ, ಶಿವೆ , ಗೌರಿ,
ಶುಭಕರಿ, ಶಂಕರಿ, ಶೈಲಕುಮಾರಿ.
ಆಕೆಯ ಕೈಲಾಸದ ಮಾರಾಣಿ;
ಕಠೋರಪತದೀಂ ರುದ್ರ ಕಪರ್ದಿಯ
ಕಳೇಬರಾರ್ಧವ ಪಡೆದ ಶಿವಾಣಿ.
ವಿಶ್ವವತ್ಸಲತೆ ಮೆಯ್ವೆತ್ತಾಕೆಯೆ
ಮೋಲೋಕದ ಮಾತಾಯಿ;
ಕಾಲ್ವಿಡಿ, ಕೈಮುಗಿ; ಒಲಿ, ನಲಿ, ಮಣಿ, ಕುಣಿ;
ಮುತ್ತಿಡುವಳೊ ಮಾತಾಯಿ!
ವಿದ್ಯಾಮೂರ್ತಿ ಗಣೇಶನ ತಾಯಿ,
ಕಂದಾ,
ಬುದ್ಧಿಯನೀವಳೋ ನಿನಗೆ ಮಿಠಾಯಿ!
ಸುರ ಸೇನಾಪತಿ ಕುಮಾರ ಸ್ವಾಮಿಯ
ಪಡೆದಾ ಮಾತಯಿ
ಕ್ಷಾತ್ರತೇಜದಾ ಖಡ್ಗವನಾತ್ಮಕೆ
ಮಾಳ್ಪಳೋ ವೀರ ತುರಾಯಿ!
ತಪಸ್ವಿ ಶಿವನನೆ ತಪದಿಂ ಗೆಲ್ದಾ
ಮಹಾ ತಪಸ್ವಿನಿ ಕಲ್ಯಾಣಿ,
ಕೇಳ್, ತಂಗೀ,
ಮನದನ್ನನ ಮನವೊಲಿಸುವ ಕಲೆಯನೆ
ಕೊರಳಿಗೆ ಮಾಳ್ಪಳ್ ಕಟ್ಟಾಣಿ!
ಎಲ್ಲರು ಬನಿ; ಎಲ್ಲರು ಬನ್ನಿ;
ಹಿರಿಯರು ಬನ್ನಿ; ಕಿರಿಯರು ಬನ್ನಿ;
ಸುರುವರು ಐತನಿ:
“ನಮಸ್ಕಾರ! ನಮಸ್ಕಾರ!
ನಮಸ್ಕಾರ!” ಎನ್ನಿ!

“ನಮಸ್ಕಾರ, ನಮಸ್ಕಾರ,
ನಮಸ್ಕಾರ, ದೇವಿ!
ಮಕ್ಕಳು ನಾವ್ ಚಿಕ್ಕವರನ್
ಅಕ್ಕರೆಯಿಂದೋವಿ,
ಪೊರೆ ತಿರೆಯನ್; ಪೊರೆ ನೆರೆಯನ್;
ಪೊರೆ ನಮ್ಮನ್, ತಾಯಿ!
ತಂದೆಯ ಕಾಯ್, ತಾಯಿಯ ಕಾಯ್,
ಒಲವನ್ ಕಾಯ್, ತಾಯಿ!
ನಮಸ್ಕಾರ, ನಮಸ್ಕಾರ,
ನಮಸ್ಕಾರ, ದೇವಿ!”

 

. ಆತಿಥ್ಯ
ಓಂ ಮಂಗಳ, ಹ್ರೀಂ ಮಂಗಳ, ಓಂ ಹ್ರೀಂ ಓಂ!
ಓಂ ಸತ್ಯಕೆ, ಹ್ರೀಂ ಧರ್ಮಕೆ, ಓಂ ಹ್ರೀಂ ಓಂ!
ಒಲವಿಗೆ ಓಂ, ಚೆಲುವಿಗೆ ಓಂ, ಓಂ ಓಂ ಓಂ!
ಶಾಂತಿಗೆ ಓಂ, ಸತ್ವಕೆ ಓಂ, ಓಂ ಓಂ ಓಂ!
ವೀಣೆಯ ತನ್ನಿ; ಪಿಟೀಲನು ತನ್ನಿ;
ನಾಗಸ್ವರ ಸುರವೇಣುವ ತನ್ನಿ.
ಸಮುದ್ರ ಮಂದ್ರ ಮೃದಂಗವ ತನ್ನಿ;
ಗಂಭೀರಾಂಬುದ ಭೇರಿಯ ತನ್ನಿ.
ವೈಣಿಕ ವರ್ಯನ, ಗಾಯಕ ವರ್ಯನ.
ಕವಿ ಚಕ್ರೇಶನ ಕರೆತನ್ನಿ;
ಜಗನ್ಮಾತೆಗೆ ಗಣೇಶಗಾಥೆಯ
ಹಾಡುವ, ಕುಣಿದಾಡುವ, ಬನ್ನಿ.
ಜಯವೆನ್ನಿ!
ಶುಭವೆನ್ನಿ!
ಅರ್ಘ್ಯವ ತನ್ನಿ; ಪಾದ್ಯವ ತನ್ನಿ:
ಧೂಪ, ದೀಪ, ಪುಷ್ಪ, ಗಂಧ್,
ಓಕುಳಿಯನು ತನ್ನಿ,
ಅಮ್ಮಗೆ ಕುಶಲವೆ? ಅಯ್ಯಗೆ ಕುಶಲವೆ?
ತಂಗಿ, ತಮ್ಮ , ಅಕ್ಕ, ಅಣ್ಣ,
ಕುಶಲವೆ ಪಿತೃಗಳಿಗೆನ್ನಿ.
ಕೈಲಾಸಾದ್ರಿಗೆ ಕುಶಲವೆ ಕೇಳಿ.
ಲಕ್ಷ್ಮೀ ಸ್ವಾಮಿಗೆ ಸೌಖ್ಯವೆ ಕೇಳಿ.
ವಾಣೀಪ್ರಿಯನಿಗೆ ಶಾಂತಿಯೆ ಕೇಳಿ.
ಲೋಕೇಶ್ವರರಿಗಶೋಕವೆ ಕೇಳಿ.
ಕ್ಷೇಮಂಕರನಿಗೆ ಆ ಶಂಕರನಿಗೆ
ಸುಕ್ಷೇಮವೆ ಆದನೂ ಕೇಳಿ!
“ಕುಶಲ! ಸೌಖ್ಯ! ಶಾಂತಿ! ಕ್ಷೇಮ!”
ಎಂಬಾ ಉತ್ತರಗಳೆ ವರವಾಗಲ್,
ಕೇಳ್ದರಿಗಾಶೀರ್ವಾದಗಳಾಗಲ್,
ಮಾತೆಗೆ ವಂದಿಸಿ ಮುದತಾಳಿ!
ಬುದ್ಧಿಗಣೇಶಾ, ಸಿದ್ಧಿಗಣೇಶಾ,
ಬಾರ, ಗಣೇಶ, ದೇವಕುಮಾರ!
ವಿದ್ಯಾರ್ಥಿಯ ಸಖ, ಹೇ ವಿದ್ಯಾಸುಖ,
ಬಾರ, ವಿನಾಯಕ, ಬಾರ;
ಗೌರಿಯ ಹಣೆಯಾ ಕುಂಕುಮವೊತ್ತಿಹ
ಇಭಮುಖ ಕಮಲವ ತೋರ;
ಬ್ರಹ್ಮಚರ್ಯದಾ ಸಂಯಮ ಸಂಭವ
ವಿದ್ಯುತ್ ತೇಜವ ತಾರ;
ಬಾರ, ಗಣೇಶಾ, ಬಾರ!
ಕೈಕಾಲ್ ತೊಳೆಯಲು ಬಿಸಿನೀರಿದೆ ಕೋ;
ಒದ್ದೆಯನಾರಿಸೆ ವಸ್ತ್ರವ ಕೋ.
ಶ್ರಾವಣ ನೀರದಯಾತ್ರೆಯ ದೂರದ
ದಣಿವಾರಿಸೆ ತೃಣಮಂಚವ ಕೋ.
ಕಡುಬಿದೆ ಕೊಳ್; ಕಾಯಿದೆ ಕೊಳ್;
ಬಾಳೆಯ ಹಣ್ಣಿದೆ; ಹಲಸಿನ ಹಣ್ಣಿದೆ,
ಮಾವಿನ ಹಣ್ಣಿದೆ ಕೊಳ್;
ಕಿತ್ತಳೆ ತೊಳೆಯಿದೆ ಕೊಳ್. —
ಹಾಲಿದೆ ಕೋ; ಜೇನಿದೆ ಕೋ;
ಕಬ್ಬಿನ ರಸವಿದೆ ಕೋ.
ಬೆಲ್ಲವ ಕೋ; ಬೆಣ್ಣೆಯ ಕೋ;
ಹೆಪ್ಪಿನ ಮೊಸರಿದೆ ಕೋ;
ಶ್ಯಾಮಿಗೆ ಪಾಯಸ ಕಾಯ್ಹಾಲ್ ಇದೆ ಕೋ.
ಯಾವುದು ಬೇಕೋ? ಯಾವುದು ಸಾಕೋ?
ಹೇಳಣ್ಣಾ, ನಾಣ್ ನಿನಗೇಕೋ?
ರಜತಾದ್ರಿಯ ಸಿರಿಯನು ಕಂಡವ ನೀನ್
ನಮ್ಮ ಬಡತನಕೆ ಪೇಸುವೆಯೇನ್?
ನಿನ್ನ ತಂದೆಯಾ ಭಿಕ್ಷಾಟಯನೆ
ಕೈಕೊಂಡಿಹಳಯ್ ಭಾರತಿ ತಾನ್!
ನಿನ್ನಯ ಕೃಪೆಯಿರೆ, ದೇವಿಯ ಕೃಪೆಯಿರೆ,
ಕೈಲಾಸೇಶ್ವರ ಕೃಪೆಯಿರಲು,
ಸುರಸೇನಾಪತಿ ಕುಮಾರಸ್ವಾಮಿಯ
ಧೀರ ಕ್ಷಾತ್ರದ ಕೃಪೆಯಿರಲು.
ಬರುವಾ ಕಾಲಕೆ ಭಾರತ ಮಾತೆಗೆ
ಸ್ವಾತ್ರಂತ್ರ್ಯದ ಶ್ರೀಯೈತರಲು,
ಕಾಮಧೇನುವಿನ ಕೆಚ್ಚಲಿನಮೃತವ
ಕೊಡುವೆವು ಬೆಳ್ಳಿಯ ಬಟ್ಟಲಲಿ!
ಕಲ್ಪವೃಕ್ಷದಾ ರಸಘನ ಫಲವನೆ
ಇಡುವೆವೊ ಚಿನ್ನದ ತಟ್ಟೆಯಲಿ!
ಸ್ಕಂದನ ಹೋಲುವ ಧುರಧರವೀರರ್,
ನಿನ್ನನೆ ಹೋಲುವ ಸನ್ಮತಿ ಧೀರರ್,
ಭಾರತಾಂಬೆಯಾ ಕೀರ್ತಿಯ ಶೂರರ್
ಹುಟ್ಟಲಿ ಅವಳಾ ಹೊಟ್ಟೆಯಲಿ!
ಹಬ್ಬದ ಸಂತೋಷಕೆ ಬಂದತಿಥಿಗೆ
ಕೊರತೆಯನೊರೆದನ್, ತಪ್ಪಾಯ್ತು!
ನಾಡಿನ ಎದೆಯನ್ ಕೊರೆಯುವ ನೋವಿಗೆ
ನಾಲಗೆಯಿತ್ತನ್; ತಪ್ಪಾಯ್ತು!
ಬಡತನವಿರಲಿ, ದಾಸ್ಯವೆ ಇರಲಿ.
ಸಂಕಟವಿರಲಿ, ಏನೇ ಇರಲಿ
ನಮ್ಮಾತಿಥ್ಯಕೆ ಕುಂದಿಲ್ಲ.
ಈ ಸ್ಥಿತಿಯಲ್ಲೂ ಈ ಗತಿಯಲ್ಲೂ
ಪುಣ್ಯಭೂಮಿಯೀ ಮಕ್ಕಳು ಕೊಡುವಾ
ದಿವ್ಯಾತಿಥ್ಯಕೆ ಸಮನಿಲ್ಲ;
ಬೇರೆ ನಾಡುಗಳಿಗೆಲ್ಲಿಗೆ ಹೋಗು
ವಂಚನೆ ಕೋಟಲೆ ಹಿಂಸೆಯ ಕೂಗು!
ಇನ್ನುಳಿದಾರೊಳ್ ವೇದ ಉಪನಿಷತ್
ಭಾರತ ರಾಮಾಯಣಗಳ ರಸ ಸತ್?
ನಮ್ಮ ಮಹಾತ್ಮನ್ ಮತ್ತೆಲ್ಲಿಹನಯ್?
ಆ ಮುಕ್ತಾತ್ಮನ ಕೃಪೆ ಹಿಡಿದೆದೆ ಕಯ್
ಬಂಧನವೂ ಸ್ವಾತಂತ್ರ್ಯಕೆ ಮಿಗಿಲಯ್!
ಇದು ಪಾಶ್ಚಾತ್ಯರ ನೆಲದೊಲವಲ್ಲಯ್;
ಈ ಹೆಮ್ಮಗೆ ಪರಮಾರ್ಥವೆ ಉಸಿರಯ್!
ಅದರಿಂದಾಮರ್ಪಿಪ ನೈವೇದ್ಯಮ್
ಇನ್ನುಳಿದಾರ್ಗಂ ದುಸ್ಸಾಧ್ಯಮ್:
ಆತ್ಮದ ಬೆಳ್ಳಿ, ಅತ್ಮದ ಚಿನ್ನ,
ಪುಣ್ಯಲೋಚನೆಗಳ ಪರಮಾನ್ನ,
ನಾಂ ನಿಮಗಿಕ್ಕುವ ಅಮೃತಾನ್ನ! —
ವಾಗ್ದೇವಿಯ ವಾತ್ಸಲ್ಯದ ವತ್ಸನ್
ರಚಿಸುತ್ತಿಹ ಹೊಸ ರಾಮಾಯಣವನ್
ಓದುವೆ ಬಾ, ತಾಯೀ.
ಕೈಲಾಸದೊಳೂ ಯಾರೂ ಕೇಳದ
ಹೊಸಗನ್ನಡ ಹೊಸ ಹೊಸ ಹಾಡುಗಳನ್
ಹಾಡುವೆ ಕೇಳ್, ತಾಯಿ.
ನೀನೂ ನಿನ್ನೀ ಮಗವೂ ಕೇಳಲ್
ಮತ್ಕೃತಿ ಕೃತಕೃತ್ಯಮ್!
ನಿಮ್ಮೀರ್ವರ ಬಗೆಯೊಳಗದು ಬಾಳಲ್
ನನ್ನಾಕೃತಿ ಸತ್ಯಮ್;
ಮೇಣ್ ನಿತ್ಯಮ್:
ದೇವರ ಕಿವಿ ಕೇಳಲ್
ದೇವರ ಬಗೆ ತಾಳಲ್,
ಕವಿಕಲ್ಪನೆ ತಾಂ ಘನತರ ಸತ್ಯಮ್!
ಕೇಳ್, ಸತ್ಯಕೆ ಸತ್ಯಮ್!

 

. ಪ್ರಯಾಣ
ಏತರ ವೈರಾಗಿಯೊ ಅವನು!
ನೀವ್ ಬಂದೆಲ್ಲಾ
ವಾರವು ಮುಗಿದಿಲ್ಲ.
ದೂತರ ಹಿಂಗಡೆ ದೂತರನಟ್ಟಿ.
ಅಲ್ಲಿಗೆ ಇಲ್ಲಿಗೆ ಸೇತುವೆ ಕಟ್ಟಿ,
ಕಾತರನಾದನೆ ಪರಶಿವನು?
ಯೋಗಕ್ಷೇಮವೊ? ಯೋಗಿಯ ಪ್ರೇಮವೋ?
ಯಾವುದೊ? ನಮಗಿನಿತನು ತಿಳುಹಿ.
ಸತಿಗೋ? ಸುತಗೋ? ಅಂತೂ ವಿರಹಿ
ಯತಿಗಳ ಯತಿಯಾಗಿಹ ಅವನೂ!
ಇಂದೇ ಬೀಳ್ಕೊಳ್ಳುವಿರೇನ್, ತಾಯಿ?
ಬೀಳ್ಕೊಳಿ ಎನ್ನಲ್ ಬರುವುದೆ ಬಾಯಿ?
ಸ್ವರ್ಗವೆ ಕಿಂಕರವಾಗಿತ್ತೆಮಗೆ;
ಕೈಲಾಸವೆ ಕಯ್ಗೂಡಿತ್ತೆಮ್ಮಿ ಬಡಮನೆಗೆ,
ತಾಯಿ, ನೇವೈತಂದು;
ನಿಮ್ಮಿ ಸಂಗದ ಪುಣ್ಯಸ್ಮರಣೆಯೆ ಜೊತೆ ಬಂದು
ಸವಿಸೊದೆಯಾಗ್ಲಿ ಈ ವಿಷು* ಸಂವತ್ಸರವೊಂದು
ಸುಖವಾಗಲಿ ಗಾಳಿಯ ಬಟ್ಟೆಯ ಪಯಣಂ;
ಸುಖವಾಗಲಿ ಮೋಡದ ನಾಡಿನ ಪಯಣಂ;
ಸುಖವಾಗಲಿ ರವಿ ಶಶಿ ತಾರೆಯ ಪಯಣಂ;
ಸುಖವಾಗಲಿ ಕೈಲಾಸಕೆ ಶ್ರೀ ಪಯಣಂ!

ದೇವರ ದೇವಗೆ, ಲೋಕವ ಕಾವಗೆ,
ಕಯ್ ಮುಗುದೆವು, ಹೇಳಿ.
ತೃಪ್ತಿಯ ಕೃಪೆಗೂ ಶಾಂತಿಯ ಕೃಪೆಗೂ
ವಂದಿಸಿದೆವು, ಹೇಳಿ.
ವರುಷ ವರುಷವೂ ತಮ್ಮಿರ್ವರನೂ
ತಪ್ಪದೆ ಕಳಿಸುವ ಕೃಪೆಮಾಡಲ್
ತಪ್ಪದೆ ನೀವ್ ಹೇಳಿ.
ವರುಷ ವರುಷವೂ ನಮ್ಮೆಲ್ಲರನೂ
ತಪ್ಪಿರೆ ಮನ್ನಿಸಿ ಕಾಪಾಡಲ್
ತಪ್ಪದೆ ನೀವ್ ಕೇಳಿ.
ನೀವ್ ಬರದಿದ್ದರೆ, ನೀವ್ ತರದಿದ್ದರೆ,
ದರಿದ್ರಮಿ ಧರೆ, ದೇವಿ!
ತಪ್ಪದೆ ಬನ್ನಿ; ತಪ್ಪದೆ ಬನ್ನಿ;
ತಪ್ಪದೆ ನಮ್ಮನ್ ಓವಿ!
ನಮಸ್ಕಾರ,ನಮಸ್ಕಾರ,
ನಮಸ್ಕಾರ, ದೇವಿ! —
ಏರಿತು ತೇರ್, ಮೋಡದ ತೇರ್,
ನೋಡದೊ ದೂರ, ದೂರ, ದೂರ.
ನಮಸ್ಕಾರ, ನಮಸ್ಕಾರ,
ಶಿವಕುಮಾರ!
ನಮಸ್ಕಾರ, ನಮಸ್ಕಾರ,
ನಮಸ್ಕಾರ!* ೨೬-೮-೧೯೪೧.