ಮಟ ಮಟ ಮಧ್ಯಾಹ್ನ. ಮಧ್ಯಭಾರತದ ಉರಿ ಬಿಸಿಲು. ಶಾಲೆಯಿಂದ ಬಂದು ಜಯನಾರಾಯಣ ಊಟ ಮುಗಿಸಿ ಜಗಲಿಯ ನೆರಳಿನಲ್ಲಿ ಮಲಗಿದ್ದ. ಗೋಮತಿದೇವಿಗೆ ಅಡಿಗೆ ಮನೆಯ ಕೆಲಸಗಳು ಇನ್ನೂ ಮುಗಿದಿರಲಿಲ್ಲ. ಮಗುವನ್ನು ಕರೆತಂದು ಪತಿಯ ಮಗ್ಗುಲಲ್ಲಿ ಮಲಗಿಸಿದಳು. ಒಳಕ್ಕೆ ಹೋಗಿ ತನ್ನ ಕೆಲಸಗಳಲ್ಲಿ ಮುಳುಗಿದಳು. ಅರ್ಧ ಗಂಟೆಯಲ್ಲಿ ಸರಸರನೆ ಕೆಲಸ ಮುಗಿಸಿ ತಾನೂ ಒಂದು ಗಳಿಗೆ ಉರುಳೋಣವೆಂದು ಹೊರಕ್ಕೆ ಬಂದಳು.

ಬಂದವಳು ಮಲಗಿದ್ದ ಗಂಡ, ಮಗುವಿನತ್ತ ಕಣ್ಣು ಹಾಯಿಸಿದಳು. ಹಾಗೇ ಹೌಹಾರಿ, ಸ್ತಂಭಿತಳಾಗಿ ನಿಂತಳು. ಮಗು ಮತ್ತು ತಂದೆಯ ನಡುವೆ ಮಾರುದ್ದದ ಘಟಸರ್ಪವೊಂದು ಮಲಗಿತ್ತು.

ಗೋಮತಿದೇವಿಗೆ ದಿಕ್ಕೇ ತೋರಲಿಲ್ಲ. ಕೂಗಿದರೆ! ಜನ ಓಡಿ ಬಂದು ಹಾವನ್ನು ಬಡಿದಾರು. ನಾಗರಾಜನನ್ನು ಬಡಿದು ಕೊಂದರೆ ಗತಿಯೇನು! ಇಡೀ ತನ್ನ ಕುಟುಂಬ ಶಾಪಗ್ರಸ್ತವಾದೀತು.

ಸುಮ್ಮನಿದ್ದರೆ! ಯಾವಾಗ, ಯಾವ ಕಾರಣಕ್ಕೆ ಹೆಡೆಯೆತ್ತಿದರೂ ತೀರಿತು. ಇನ್ನು ಗಂಡನನ್ನು ಎಬ್ಬಿಸೋಣ! ಗಂಡ ಎದ್ದಾಗ ಹಾವು ರೇಗಿದರೆ ಮಗುವಿನ ಗತಿಯೇನು?

ತಲ್ಲಣಿಸುತ್ತ ನಿಂತ ಆ ತರುಣಿಗೆ ತಟ್ಟನೆ ಒಂದು ಯುಕ್ತಿ ಹೊಳೆಯಿತು. ಮೆಲ್ಲನೆ ನಿಶ್ಯಬ್ದವಾಗಿ ಹಿಂದೆ ಸರಿದಳು. ಮಲಗುವ ಕೋಣೆಯಿಂದ ಒಂದು ದಪ್ಪ ದುಪ್ಪಟಿಯನ್ನು ಕೈಗೆತ್ತಿಕೊಂಡಳು. ಸರಸರನೆ ಬಂದು ನೋಡಿದಳು.

ಹಾವು ತೆಪ್ಪಗೆ ಮಲಗಿತ್ತು. ಶಬ್ದವಾಗದಂತೆ ಜಗಲಿಯನ್ನೇರಿ ಹಾವಿನ ಹಿಂದೆ ನಿಂತಳು. ದುಪ್ಪಟಿಯನ್ನು ಅನುಕೂಲವಾಗುವಂತೆ ಮಡಿಸಿಕೊಂಡಳು.

“ನಾಗರಾಜ! ಸ್ವಾಮಿ! ಕ್ಷಮಿಸು! ಎಂದು ಕೋರುತ್ತ ಮಡಿಸಿದ ದುಪ್ಪಟಿಯನ್ನು ಹಾವಿನ ಮೇಲೆ ಹಾಕಿ ಒತ್ತಿ ಹಾವನ್ನು ಕೈಗೆತ್ತಿಕೊಂಡಳು. ಒಂದೇ ಹಾರಿಗೆ ಹಾವಿನೊಂದಿಗೆ ಜಗಲಿಯಿಂದ ಧುಮುಕಿ, ಬದಿಯಲ್ಲಿದ್ದ ಮರದ ಬಳಿ ದುಪ್ಪಟ್ಟಿಯೊಂದಿಗೆ ಹಾವನ್ನು ಎಸೆದಳು. ಹಾವಿಗೆ ಏನು ತೋರಿತೋ? ಮರವನ್ನೇರತೊಡಗಿತು. ಗೋಮತಿ ದೆವಿಯು ದುಪ್ಪಟಿಯೊಂದಿಗೆ ಹಿಂತಿರುಗಿ ಮಗು, ಪತಿ ಮಲಗಿದ್ದ ಜಾಗಕ್ಕೆ ಬಂದಳು.

ತನ್ನ ಶಕ್ತಿಗೆ ಮೀರಿದ ಸಾಹಸ ಕಾರ್ಯದಿಂದ, ಉದ್ವೇಗದಿಂದ ಜ್ಞಾನತಪ್ಪಿ ಪತಿಯ ಮೇಲೆ ಬಿದ್ದಳು. ಎಚ್ಚರಗೊಂಡ ಜಯನಾರಾಯಣ ಹೆಂಡತಿಗೆ ಶೈತ್ಯೋಪಚಾರ ಮಾಡಿದ. ಚೇತರಿಸಿಕೊಂಡ ಗೋಮತಿದೇವಿ ನಡೆದುದನ್ನೆಲ್ಲ ಹೇಳಿದಳು. ಹಳ್ಳಿಗಾಡಿನಿಂದ ಬಂದ ತನ್ನ ಹೆಂಡತಿಯ ಜಾಣ್ಮೆ, ಧೈರ್ಯಗಳಿಗೆ ಜಯನಾರಾಯಣ ಮುಗ್ಧನಾದ. ಗಂಡ ಹೆಂಡಿರಿಬ್ಬರೂ ತಮ್ಮ ಕುಲದೈವಕ್ಕೆ, ನಾಗರಾಜನಿಗೆ ಕೋಟಿ ಪ್ರಣಾಮ ಸಲ್ಲಿಸಿದರು. ತಮ್ಮ ಕುಲದೀಪಕನನ್ನೆತ್ತಿ ಮುದ್ದಾಡಿದರು.

ಆ ಮಗುವೇ ಗಣೇಶ ಶಂಕರ ವಿದ್ಯಾರ್ಥಿ.

ಬಾಲ್ಯ, ವಿದ್ಯಾಭ್ಯಾಸ

ಜಯನಾರಾಯಣನು ಕಾನ್ಪುರದ ಸಮೀಪದಲ್ಲಿರುವ ಫತ್ತೇಪುರದವರು. ಹಿಂದಿ ಅಧ್ಯಾಪಕರಾಗಿ ಗ್ವಾಲಿಯರ್‌ರಾಜ್ಯದ ಮುಂಗಾವಲಿ ಎಂಬಲ್ಲಿ ನೆಲೆಸಿದ್ದರು. ಜಯ ನಾರಾಯಣ, ಗೋಮತಿದೇವಿ ದಂಪತಿಗಳಿಗೆ ೧೮೯೦ರಲ್ಲಿ ಒಂದು ಗಂಡುಮಗು ಹುಟ್ಟಿತು. ಹುಟ್ಟಿದ ನಕ್ಷತ್ರಕ್ಕೆ ಹೊಂದಿರುವಂತೆ ಮಗುವಿಗೆ ಗಣೇಶ ಶಂಕರನೆಂದು ಹೆಸರಿಟ್ಟರು.

ಬಹಳ ಮುದ್ದಿನಿಂದ ಬೆಳೆದ ಗಣೇಶ ಶಂಕರನ ಆರಂಭ ವಿದ್ಯಾಭ್ಯಾಸ ತನ್ನ ತಂದೆಯ ಶಾಲೆಯಲ್ಲೇ ನಡೆಯಿತು. ೧೯೦೭ರಲ್ಲಿ ಅಲಹಾಬಾದಿನ ಕಾಯಸ್ಥ ಪಾಠಶಾಲಾ ಕಾಲೇಜಿಗೆ ಸೇರಿದ ಗಣೇಶ ಶಂಕರ. ಆದರೆ ಬಡ ಅಧ್ಯಾಪಕ ಜಯನಾರಾಯಣರು ಮಗನಿಗೆ ಉನ್ನತ ವಿದ್ಯಾಭ್ಯಾಸ ನೀಡುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ಗಣೇಶನ ಉನ್ನತ ಶಿಕ್ಷಣ ಕೆಲವೇ ತಿಂಗಳುಗಳಲ್ಲಿ ಮುಕ್ತಾಯಗೊಂಡಿತು. ಈ ಕೊರತೆಯನ್ನು ಗಣೇಶ ಶಂಕರ ತನ್ನ ಸ್ವಶ್ರಮದಿಂದ ತುಂಬಿಕೊಂಡ. ಪಾಶ್ಚಾತ್ಯ ದೇಶಗಳಲ್ಲಿ ಕ್ರಾಂತಿಕಾರಕ ವಿಚಾರಗಳನ್ನು ಹರಿಸಿದ ರೂಸೋ, ಜೆ.ಎಸ್‌. ಮಿಲ್‌, ಮ್ಯಾಜಿನಿ ಮೊದಲಾದವರ ಕೃತಿಗಳ ಅಧ್ಯಯನ ಈ ತರುಣನಲ್ಲಿ ತನ್ನ ಸಂಕುಚಿತ ವಾತಾವರಣದ ಆಚಿನ ಜಗತ್ತಿನಲ್ಲಿ ನಡೆಯುತ್ತಿದ್ದ ಘಟನೆಗಳತ್ತ ಕುತೂಹಲ ಮೂಡಿಸಿತು. ಫ್ರಾನ್ಸಿನ ವಿಕ್ಟರ್‌ಹ್ಯೂಗೋವಿನ ಕಾದಂಬರಿಗಳು, ಇಂಗ್ಲೆಂಡಿನ ಶೆಲ್ಲಿಯ ಕವನಗಳು-ಹೀಗೆ ಪ್ರಪಂಚದ ಅತ್ಯುತ್ತಮ ಸಾಹಿತ್ಯದ ಪರಿಚಯವು ಆಳವಾದ ಮಾನವೀಯತೆ, ಅನ್ಯಾಯ ಅತ್ಯಾಚಾರಗಳನ್ನು ಎದುರಿಸಿ ನಿಲ್ಲುವ ಸ್ಥೈರ್ಯ, ತನ್ನ ಅಭಿಪ್ರಾಯಗಳನ್ನು ಒಪ್ಪದವರನ್ನು ಕುರಿತು ಗೌರವ, ಸಹನೆ ಇಂತಹ ಆದರ್ಶ ಗುಣಗಳನ್ನು ತರುಣ ಗಣೇಶ ಶಂಕರನಲ್ಲಿ ಹುಟ್ಟಿ ಹಾಕಿತು.

ನೌಕರಿಯಿಂದ ಪತ್ರಿಕೋದ್ಯಮಕ್ಕೆ

ವಿದ್ಯಾಭ್ಯಾಸ ಮೊಟಕಾದ ಮೇಲೆ ಗಣೇಶ ಶಂಕರ ಅವರು ಒಂದು ಹೈಸ್ಕೂಲಿನಲ್ಲಿ ಕೆಲಕಾಲ ಅಧ್ಯಾಪಕರಾಗಿದ್ದರು. ಅನಂತರ ಒಂದು ಬ್ಯಾಂಕಿನಲ್ಲಿ ಗುಮಾಸ್ತರಾಗಿ ನೌಕರಿಗೆ ಸೇರಿದರು. ಈ ನೌಕರಿಯಲ್ಲಿದ್ದಾಗ ನಡೆದ ಒಂದು ಘಟನೆ ಅವರ ಬಾಳಿನ ಹಾದಿಯನ್ನು ತಿರುಗಿಸಿತು.

ಪಂಡಿತ ಸುಂದರಲಾಲರೆಂಬ ದೇಶಭಕ್ತರು ಅಲಹಾಬಾದಿನಿಂದ “ಕರ್ಮಯೋಗಿ” ಎಂಬ ಪತ್ರಿಕೆಯನ್ನು ಹೊರಡಿಸುತ್ತಿದ್ದರು. ಮಹರ್ಷಿ ಅರವಿಂದರ ಕ್ರಾಂತಿಕಾರಿ ಭಾವನೆಗಳಿಂದ ಪ್ರಭಾವಿತಗೊಂಡಿದ್ದ ಪತ್ರಿಕೆ “ಕರ್ಮಯೋಗಿ” ಹಿಂದಿ ಪತ್ರಿಕೆಗಳಲ್ಲಿ ಅತ್ಯಂತ ಉಗ್ರವಾದಿ ಪತ್ರಿಕೆಯೆಂದು ಹೆಸರು ಗಳಿಸಿತ್ತು ಅದು. ಸರ್ಕಾರ ಹಾಗೂ ಪೊಲೀಸರ ಕಾಕದೃಷ್ಟಿ ಸದಾ ಅದರ ಮೇಲೆ. ಆ ಪತ್ರಿಕೆಯನ್ನು ಪ್ರತಿಬಂಧಿಸಿರಲಿಲ್ಲವಾದರೂ “ಕರ್ಮಯೋಗಿ”ಯನ್ನು ಓದುವವರೆಂದರೆ ಸಂಶಯಕ್ಕೆ ಗುರಿಯಾಗಿ ಗುಪ್ತಚಾರರ ಗಮನಕ್ಕೆ ಬರುವಂತಿತ್ತು. ಹಲವಾರು ವಿದ್ಯಾರ್ಥಿಗಳು ಕಾಲೇಜಿನಿಂದ ಅದನ್ನು ಓದಿದ ಏಕೈಕ ಕಾರಣಕ್ಕಾಗಿ ಹೊರದೂಡಲ್ಪಡುತ್ತಿದ್ದರು. ನೌಕರಿ ಕಳೆದುಕೊಂಡು ತರುಣರು ಬೀದಿಪಾಲಾಗುತ್ತಿದ್ದರು.

ಗಣೇಶ ಶಂಕ ವಿದ್ಯಾರ್ಥಿ “ಕರ್ಮಯೋಗಿ”ಯ ಓದುಗರಲ್ಲೊಬ್ಬರಾಗಿದ್ದರು. ಇದು ಬ್ಯಾಂಕಿನ ಮ್ಯಾನೇಜರನ ಗಮನಕ್ಕೆ ಬಂತು. ಅವರು ಪ್ರಾಮಾಣಿಕ, ನಿಷ್ಠ ಹಾಗೂ ಚುರುಕಿನ ನೌಕರರೆಂಬುದು, “ಕರ್ಮಯೋಗಿ”ಯ ಓದುಗರೆಂಬ ಮಹಾಪರಾಧದ ಮುಂದೆ ತೃಣವಾಯಿತು. ಗಣೇಶ ಶಂಕರ ಕೆಲಸ ಕಳೆದುಕೊಂಡರು.

ಬಾಲ್ಯದಲ್ಲೇ ವಿವಾಹವಾಗಿದ್ದುದರಿಂದ ಸಂಸಾರಸ್ಥರಾಗಿದ್ದರೂ ಹುರುಪಿನ ಹತ್ತೊಂಬತ್ತರ ತರುಣನಾಗಿ ಒಂದು ನೌಕರಿ ಕಳೆದುಕೊಂಡ ಮಾತ್ರಕ್ಕೆ ಅವರ ಧೃತಿಗೆಡಲಿಲ್ಲ. ಕ್ಷಮಾಪಣೆ ಕೋರಲಿಲ್ಲ. ಮುಚ್ಚಳಿಕೆ ಬರೆದುಕೊಡಲಿಲ್ಲ. ಮೇಲಾಗಿ ಶಾಲೆಯಲ್ಲಿ ತಾವು ಕಲಿತಿದ್ದ ಉರ್ದು, ಪರ್ಷಿಯನ್‌ಮತ್ತು ಇಂಗ್ಲಿಷ್‌ಭಾಷೆಗಳ ಜೊತೆಗೆ ಹಿಂದಿಯಲ್ಲೂ ಪರಿಣತಿ ಗಳಿಸಿದ್ದರು. ತಾವು ಬರಹವನ್ನು ವೃತ್ತಿಯಾಗಿ ಕೈಗೊಳ್ಳಬಲ್ಲೆನೆಂಬ ಆತ್ಮವಿಶ್ವಾಸ ತಳೆದಿದ್ದರು.

ನೌಕರಿ ಕಳೆದುಕೊಂಡ ಅವರು ಅಲಹಾಬಾದಿಗೆ ಹೋಗಿ ಪಂಡಿತ ಸುಂದರಲಾಲರನ್ನು ಕಂಡರು. ಅವರು ನಡೆಸುತ್ತಿದ್ದ ಹಿಂದಿ “ಕರ್ಮಯೋಗಿ” ಮತ್ತು ಉರ್ದು “ಸ್ವರಾಜ್ಯ” ಪತ್ರಿಕೆಗಳಿಗೆ ಕ್ರಮವಾದ ಬರಹಗಾರರಲ್ಲೊಬ್ಬರಾದರು. ಈ ಪತ್ರಿಕೆಗಳು ೮-೧೦ ತಿಂಗಳ ಕಾಲ ನಡೆದು ನಿಂತುಹೋದವು. ಆಗ ವಿದ್ಯಾರ್ಥಿಯವರು ಹಿಂದಿ ಭಾಷೆಯ ಸುಪ್ರಸಿದ್ಧ ಮಾಸ ಪತ್ರಿಕೆ “ಸರಸ್ವತಿ”ಯ ಸಂಪಾದಕವರ್ಗದಲ್ಲಿ ಸೇರಿದರು. ಅಲಹಾಬಾದಿನಿಂದ ಪ್ರಕಟವಾಗುತ್ತಿದ್ದ “ಸರಸ್ವತಿ”ಯ ಸಂಪಾದಕರಾಗಿದ್ದವರು ಪಂಡಿತ ಮಹಾವೀರ ಪ್ರಸಾದ ದ್ವಿವೇದಿ.

ಹೀಗೆ ಒಂದು ಉಗ್ರವಾದ ಪತ್ರಿಕೆ. ಒಂದು ಸಾಹಿತ್ಯದ ಪತ್ರಿಕೆಗಳ ಸಂಪರ್ಕ ಪಡೆದ ವಿದ್ಯಾರ್ಥಿಯವರು ೧೯೧೩ರಲ್ಲಿ ತಮ್ಮದೇ ಆದ “ಪ್ರತಾಪ್‌” ಎಂಬ ಪತ್ರಿಕೆಯನ್ನು ಆರಂಭಿಸಲು ನಿರ್ಧರಿಸಿದರು. ಆಗ ಪಂಡಿತ ಸುಂದರಲಾಲರು ಪತ್ರಿಕೋದ್ಯಮದಲ್ಲಿ ತಾವು ಪಡೆದ ಕಟು ಅನುಭವಗಳ ಆಧಾರದ ಮೇಲೆ ಸಮಯಕ್ಕನುಗುಣವಾಗಿ ಹೊಂದಿಕೊಂಡು ಹೋಗುವುದರ ಅವಶ್ಯಕತೆಯನ್ನು ಕುರಿತು ವಿದ್ಯಾರ್ಥಿಯವರಿಗೆ ದೀರ್ಘವಾದ ಬುದ್ಧಿವಾದ ಪತ್ರವನ್ನು ಬರೆದು. ಅವರು ಬುದ್ದಿವಾದದಂತೆ ನಡೆಯುವುದಾಗಿ ಆಶ್ವಾಸನೆಯಿತ್ತ ವಿದ್ಯಾರ್ಥಿಯವರು “ನಾನು “ಪ್ರತಾಪ”ವನ್ನು ಯಾರಾದರೂ ನುಂಗಬಹುದಾದ ಬೆಣ್ಣೆ ಮುದ್ದೆಯನ್ನಾಗಿ ಮಾಡಲು ಇಚ್ಚಿಸುವುದಿಲ್ಲ” ಎಂದು ತಮ್ಮ ಪತ್ರಿಕಾವೃತ್ತಿಯ ಆದರ್ಶವನ್ನು ಸಂಯಮಪೂರ್ಣ ಮಾತುಗಳಿಂದ ಘೋಷಿಸಿಕೊಂಡರು.

ಗ್ವಾಲಿಯರ್‌ರಾಜರೊಂದಿಗೆ ಚಕಮಕಿ

ಒಮ್ಮೆ”ಪ್ರತಾಪ”ದಲ್ಲಿ ಗ್ವಾಲಿಯರ್ ರಾಜ್ಯದ ಬಗ್ಗೆ ಕಟು ಟೀಕೆಗಳು ಪ್ರಕಟವಾದವು. ಆ ಲೇಖನವು ಆಗ ಗ್ವಾಲಿಯರಿನ ಮಹಾರಾಜರಾಗಿದ್ದ ಮಾಧವರಾವ್‌ಸಿಂಧ್ಯರ ಗಮನಕ್ಕೆ ಬಂದಿತು. ಆತ ಲೇಖನ ಓದಿ ಮಹಾಕ್ರುದ್ಧರಾದರು. ಪತ್ರಿಕೆಯ ಸಂಪಾದಕ ತಮ್ಮ ರಾಜ್ಯದ ಪ್ರಜೆ ಜಯನಾರಾಯಣರ ಮಗ ಎಂಬ ವಿಚಾರವೂ ತಿಳಿದು ಬಂತು. ಮುಗ್ಧರಾದ ಜಯನಾರಾಯಣರಿಗೆ ಹೇಳಿಕಳಿಸಿ ವಿದ್ಯಾರ್ಥಿಯವರಿಂದ ಕ್ಷಮಯಾಚನೆ ಮಾಡಿಸಬೇಕೆಂದೂ, ಅವರನ್ನು ಕರೆಸಬೇಕೆಂದೂ ಆದೇಶ ನೀಡಲಾಯಿತು.

ತಂದೆಯಿಂದ ಮಗನಿಗೆ ಬೇಗನೆ ಬರಬೇಕೆಂದು ಪತ್ರಹೋಯಿತು. ಕೂಡಲೇ ಗಣೇಶ ಶಂಕರ ವಿದ್ಯಾರ್ಥಿ ಹೊರಟು ಮುಂಗಾವಲಿಗೆ ಬಂದರು. ಜಯನಾರಾಯಣರು ವಿಚಾರವನ್ನು ಪ್ರಸ್ತಾಪ ಮಾಡಿದರು.

ವಿದ್ಯಾರ್ಥಿ ಹೇಳಿದರು. “ಅಪ್ಪಾಜಿ, ನೀವು ನೌಕರಿ ಬಿಟ್ಟು ಕಾನ್ಪುರಕ್ಕೆ ಬಂದುಬಿಡಿ. “ಪ್ರತಾಪ”ದ ಸಂಪಾದಕನಾಗಿ ನನ್ನ ಕರ್ತವ್ಯಪಾಲನೆಯನ್ನು ಬಿಡುವುದಂತೂ ಸಾಧ್ಯವಿಲ್ಲ”.

ಜಯನಾರಾಯಣರು ಸ್ವಲ್ಪ ವೇಳೆ ಸುಮ್ಮನಾದರು. ಅನಂತರ ಮೆಲುದನಿಯಲ್ಲಿ ಮಹಾರಾಜರನ್ನು ನೋಡಲು ಹೇಳಿ “ಮಗೂ, ಜಿದ್ದು ಮಾಡಬೇಡ. ಅವರು ನಮ್ಮ ಅನ್ನದಾತರು ಮಹಾರಾಜರು ಅವರನ್ನು ನೋಡುವುದೇ ಒಂದು ಸೌಭಾಗ್ಯ” ಎಂದರು.

"ಪ್ರತಾಪ"ದ ಸಂಪಾದಕನಾಗಿ ನನ್ನ ಕರ್ತವ್ಯಪಾಲನೆಯನ್ನೂ ಮಾಡುತ್ತೇನೆ"

ಈಗ ವಿದ್ಯಾರ್ಥಿ ಮೌನವಾದರು. ನಿಜ! ಸಂಪಾದಕನಾಗಿ ಕೆಲವು ಕರ್ತವ್ಯಗಳಿರುವಂತೆ, ಮಗನಾಗಿಯೂ ಕೆಲವು ಕರ್ತವ್ಯಗಳಿವೆ. ಎರಡನ್ನೂ ನಿರ್ವಹಿಸಬೇಕು. ಅವರು ಮಹಾರಾಜರನ್ನು ಭೇಟಿಯಾಗಲು ಒಪ್ಪಿದರು. ಗ್ವಾಲಿಯರಿಗೆ ಹೋಗಿ ಮಹಾರಾಜರನ್ನು ಭೇಟಿಯಾದರು.

ಶಿಷ್ಟಾಚಾರದ ಪ್ರಕಾರ ಪರಸ್ಪರ ವಂದನೆಯಾದ ನಂತರ ಮಹಾರಾಜ ಮಾಧವರಾವ್‌ಸಿಂಧ್ಯರು ವಿದ್ಯಾರ್ಥಿಯವರ ಗಮನವನ್ನು “ಪ್ರತಾಪ”ದಲ್ಲಿ ಪ್ರಕಟವಾಗಿದ್ದ ಲೇಖನದತ್ತ ತಿರುಗಿಸಿದರು. “ಇನ್ನು ಮುಂದೆ ನಮ್ಮ ಗ್ವಾಲಿಯರ್‌ರಾಜ್ಯದ ಆಡಳಿತವನ್ನು ಕುರಿತು ಯಾವುದೇ ರೀತಿಯ ಕಟುವಾದ, ಕಠೋರವಾದ ವಿಚಾರ ಹೊರಬರಬಾರದೆಂದು ನಮ್ಮ ಇಚ್ಚೆ” ಎಂದರು.

ವಿದ್ಯಾರ್ಥಿಯವರು ಕ್ಷಣಕಾಲ ಸುಮ್ಮನಿದ್ದರು. ಅವರ ಮುಖ ಮುದ್ರೆ ಗಂಭೀರವಾಯಿತು. ಅವರು ತಮ್ಮ ಸಹಜವಾದ ಓಜಸ್ವಿ ಧ್ವನಿಯಲ್ಲಿ ಹೀಗೆ ಹೇಳಿದರು.

“ಮಹಾರಾಜ ಸಿಂಧ್ಯಾ ಸಾಹೇಬರೇ, ಗ್ವಾಲಿಯರ್ ರಾಜ್ಯದಲ್ಲಿ ಅಧ್ಯಾಪಕರಾಗಿರುವ ಬಾಬು ಜಯನಾರಾಯಣಲಾಲರ ಮಗನಾಗಿ ನಾನು ಗ್ವಾಲಿಯರ್ ರಾಜ್ಯಕ್ಕೆ ನಿಷ್ಠಾವಂತನಾಗಿರುತ್ತೇನೆ. ಆದರೆ, ತಾವು ಕ್ಷಮಿಸಬೇಕು. “ಪ್ರತಾಪ”ದ ಸಂಪಾದಕನಾಗಿ ನನ್ನ ಕರ್ತವ್ಯ ಪಾಲನೆಯನ್ನೂ ಮಾಡುತ್ತೇನೆ.”

ಮಹಾರಾಜರು ತಮ್ಮ ಅಸಂತುಷ್ಟಿಯನ್ನು ಅದುಮಿ ಶಿಷ್ಟಾಚಾರಕ್ಕಾಗಿ “ನಿಜ, ನಿಮ್ಮ ವಿಚಾರವು ಒಪ್ಪತಕ್ಕದ್ದೇ” ಎಂದರು.

ಆ ರಾತ್ರಿ ವಿದ್ಯಾರ್ಥಿಯವರನ್ನು ಭೋಜನಕ್ಕೆ ಆಹ್ವಾನಿಸಿದರು. ಭೋಜನಾನಂತರ ಹರಿವಾಣದಲ್ಲಿ ಒಂದು ಭರ್ಜರಿ ಶಾಲನ್ನಿಟ್ಟು ತಾಂಬೂಲ ನೀಡಿದರು.

ಅದನ್ನು ಸ್ವೀಕರಿಸುವುದು ಸಮರ್ಪಕ ಎನ್ನಿಸಲಿಲ್ಲ. ವಿದ್ಯಾರ್ಥಿಯವರಿಗೆ. ಆದರೆ ಸ್ವೀಕರಿಸದಿದ್ದರೆ ಮಹಾರಾಜರು ಅದನ್ನು ತಮಗೆ ಆದ ವೈಯಕ್ತಿಕ ಅಪಮಾನ ಎಂದು ಭಾವಿಸಬಹುದು. ಆ ರೀತಿ ಬೇಡವೆನ್ನುವುದರಿಂದ ಆಗುವ ಮಹತ್ಸಾಧನೆಯಾದರೂ ಏನು?

ಪ್ರಸನ್ನ ಮುದ್ರೆಯಿಂದ ತಾಂಬೂಲ ಸ್ವೀಕರಿಸಿದರು. ಕಾನ್ಪುರಕ್ಕೆ ಹಿಂತಿರುಗಿ ಆ ಶಾಲನ್ನು ಪೆಟ್ಟಿಗೆಯ ತಳಕ್ಕೆ ಸೇರಿಸಿದರು. ಒಮ್ಮೆಯಾದರೂ ಅದನ್ನು ತೆಗೆದು ನೋಡಲಿಲ್ಲ. ಬಿಚ್ಚಿ ಹೊದೆಯಲಿಲ್ಲ. ಅದು ನುಸಿಗಳಿಗೆ ಆಹಾರವಾಯಿತು. ತಮ್ಮ ಸ್ವಾಭಿಮಾನ ಕಳೆದುಕೊಳ್ಳಲಿಲ್ಲ, ಮಹಾರಾಜರ ಸ್ವಾಭಿಮಾನವನ್ನೂ ಕಳೆಯಲಿಲ್ಲ.

ರಾಜಕೀಯ ರಂಗಕ್ಕೆ ಪ್ರವೇಶ

ಭಾರತದ ಮೂಲೆಮೂಲೆಯಲ್ಲೂ ರಾಷ್ಟ್ರೀಯ ಭಾವನೆಯ ಪ್ರವಾಹ ಉಕ್ಕಿ ಹರಿಯುತ್ತಿದ್ದ ಕಾಲ ಅದು. ಸುಮಾರು ೧೯೧೫ರಲ್ಲಿ ಕಾನ್ಪುರದಲ್ಲಿ ಒಂದು ರಾಜಕೀಯ ಸಮ್ಮೇಳನ ಏರ್ಪಟ್ಟಿತು. ಪ್ರಸಿದ್ಧ ವಾಗ್ಮಿಗಳಾಗಿದ್ದ ಶ್ರೀ ಗೋಕರ್ಣನಾಥ ಮಿಶ್ರ ಎಂಬುವರು ಪ್ರಮುಖ ಭಾಷಣಕಾರರಾಗಿದ್ದರು. ಸಾಮಾನ್ಯ ಜನರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದ ಮೊದಲನೆಯ ರಾಜಕೀಯ ಸಭೆ ಅದು. ಸಭೆ ಯಶಸ್ವಿಯಾಯಿತು. ವಿದ್ಯಾರ್ಥಿಯವರು ಆ ಸಮ್ಮೇಳನದ ಏರ್ಪಾಡಿನಲ್ಲಿ ಸಹಕಾರ ನೀಡಿದ್ದರು.

ಸಮ್ಮೇಳನ ಮುಗಿದ ನಂತರ ವಿದ್ಯಾರ್ಥಿಯವರು ತಮ್ಮ ಮಿತ್ರರೊಂದಿಗೆ “ನಾನೂ ಇನ್ನು ಮುಂದೆ ಸಭೆಗಳಲ್ಲಿ ಭಾಷಣ ಮಾಡಬೇಕೆಂದು ತೋರುತ್ತಿದೆ. ಹೇಗಿದ್ದೀತು?” ಎಂದರು. ಅವರ ಮಿತ್ರರೆಲ್ಲ ಒಂದಾಗಿ ಹುರಿದುಂಬಿಸಿದರು. ಕೆಲವೇ ದಿನಗಳಲ್ಲಿ ಸದಾವಕಾಶವೂ ಒದಗಿತು.

ಹೋಂರೂಲ್‌ಚಳವಳಿಯ ಸಂಬಂಧವಾಗಿ ಶ್ರೀಮತಿ ಆನಿ ಬೆಸೆಂಟ್‌, ಶ್ರೀ ಅರುಂಡೇಲ್‌ಹಾಗೂ ಶ್ರೀ ವಾಡಿಯಾ ಅವರು ಬಂಧಿತರಾದರು. ಪ್ರತಿಯೊಂದು ನಗರದಲ್ಲೂ ಈ ಬಂಧನದ ಖಂಡನೆಗಾಗಿ ಪ್ರತಿಭಟನಾ ಸಭೆಗಳು ಏರ್ಪಟ್ಟವು. ಕಾನ್ಪುರದಲ್ಲಿ ನಡೆದ ಅಂತಹ ಸಭೆಯಲ್ಲಿ ವಿದ್ಯಾರ್ಥಿಯವರು ಮೊದಲ ಭಾಷಣ ಮಾಡಿದರು. ಸರಳ ನಿರೂಪಣೆ, ಗಂಭೀರ ಧ್ವನಿ, ಮನ ಮುಟ್ಟುವ ವಿಚಾರ – ಇವುಗಳಿಂದಾಗಿ ಅವರ ಭಾಷಣ ಕಳೆಗಟ್ಟಿತು. ಆಗಿನಿಂದ ಅವರು ಕಾನ್ಪುರದ ಪ್ರಮುಖ ರಾಜಕೀಯ ಕಾರ್ಯಕರ್ತರೂ, ಭಾಷಣಕಾರರೂ ಆದರು.

ಸೆರೆಮನೆಯಲ್ಲಿ

೧೯೨೦ರ ಅಸಹಕಾರ ಚಳವಳಿಯ ದಿನಗಳಲ್ಲಿ ವಿದ್ಯಾರ್ಥಿಯವರು “ಪ್ರತಾಪ”ದಲ್ಲಿ ಬರೆದು ಪ್ರಕಟಿಸಿದ ಲೇಖನವೊಂದರ ಬಗ್ಗೆ ಸರ್ಕಾರ ಅವರನ್ನು ಬಂಧಿಸಿತು. ಸರ್ಕಾರ ಅವರನ್ನು “ಸಿ” ದರ್ಜೆಯ ಕೈದಿಯೆಂದು ಪರಿಗಣಿಸಿತು. ಆಗ “ಸಿ” ಕೈದಿಗಳ ಉಡುಪೆಂದರೆ, ಒಂದು ಒರಟು ಪಂಚೆ, ಒಂದು ಜುಬ್ಬ, ಒಂದು ಲಂಗೋಟಿ, ದುಪಟಿ ಮತ್ತು ಕಂಬಳಿ. ಪತ್ರಿಕೆಗಳನ್ನು ತರಿಸಿಕೊಳ್ಳಲು ಅನುಮತಿಯಿರುತ್ತಿರಲಿಲ್ಲ. ಆದರೆ ತಾವೇ “ಪ್ರತಾಪ”ದ ಸಂಪಾದಕರಾಗಿ ಪತ್ರಿಕೆಗಳ ಸಂಪರ್ಕವಿಲ್ಲದೆ ವಿದ್ಯಾರ್ಥಿಯವರಿಗೆ ಬಹಳ ಮುಜುಗರವಾಗುತ್ತಿತ್ತು. ಹೀಗಾಗಿ ಅವರು ಗುಪ್ತವಾಗಿ ಪತ್ರಿಕೆಗಳನ್ನು ತರಿಸಿಕೊಳ್ಳುತ್ತಿದ್ದರು.

ಒಂದು ದಿನ ಪಂಚೆ, ಜುಬ್ಬಗಳನ್ನು ಒಗೆದು ಒಣಗಿ ಹಾಕಿ ಬರೀ ಲಂಗೋಟಿಯಲ್ಲಿ ಕುಳಿತು ಪತ್ರಿಕೆಯೊಂದನ್ನು ಓದುತ್ತಿದ್ದರು. ಆಗ ಜೈಲಿನ ಸೂಪರಿಂಟೆಂಡೆಂಟರು ಅವರ ಬ್ಯಾರಕ್ಕಿಗೆ ಪ್ರವೇಶಿಸಿದರು. ಕೂಡಲೇ ವಿದ್ಯಾರ್ಥಿಯವರು ಪತ್ರಿಕೆಯನ್ನು ಲಂಗೋಟಿಯೊಳಕ್ಕೆ ತುರುಕಿಕೊಂಡು, ಕಂಬಳಿ ಹೊದ್ದು ಎದ್ದು ನಿಂತರು. ಅದೇ ಸ್ಥಿತಿಯಲ್ಲಿ ಸೂಪರಿಂಟೆಂಡೆಂಟರೊಡನೆ ಸ್ವಲ್ಪ ಹೊತ್ತು ಮಾತನಾಡಿದರು. ಅವರು ಹೊರಟು ಹೋದ ನಂತರ ಹೋದ ಜೀವ ಬಂದಂತಾಯಿತು. ಆಗ ಅವರನ್ನು ಶೋಧ ಮಾಡಿದ್ದರೆ ಪತ್ರಿಕೆ ತರಿಸಿದ ಅಪರಾಧಕ್ಕೆ ಶಿಕ್ಷೆಯಾಗುತ್ತಿತ್ತು; ಪತ್ರಿಕೆ ಬರುವುದೂ ನಿಂತು ಹೋಗುತ್ತಿತ್ತು.

ಚುನಾವಣೆಯ ಕಣ

೧೯೨೨ರ ಮೇ ತಿಂಗಲಲ್ಲಿ ಸೆರೆಮನೆಯಿಂದ ಬಿಡುಗಡೆಯಾದ ವಿದ್ಯಾರ್ಥಿಯವರನ್ನು ೧೯೨೩ರಲ್ಲಿ ಫತ್ತೇಪುರದಲ್ಲಿ ಜಿಲ್ಲಾ ರಾಜಕೀಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆರಿಸಿದರು. ಪಂಡಿತ ಮೋತಿಲಾಲ್‌ನೆಹರು ಅವರೂ ಭಾಗವಹಿಸಿದ್ದ ಈ ಸಮ್ಮೇಳನದಲ್ಲಿ ವಿದ್ಯಾರ್ಥಿಯವರು ತಮ್ಮ ಮನೆ ತೆರೆದು ಉಗ್ರಭಾವನೆಗಳನ್ನು ವ್ಯಕ್ತಪಡಿಸಿದರು. ಪರಿಣಾಮವಾಗಿ ಮತ್ತೆ ಸೆರೆಮನೆಯ ವಾಸ ಅನುಭವಿಸಿದರು.

ಈ ವೇಳೆಗೆ ಕ್ರಾಂತಿಯ ಕೌನ್ಸಿಲ್‌ಗಳಲ್ಲಿ ಕಾಂಗ್ರೆಸ್‌ಭಾಗವಹಿಸಬೇಕೇ, ಬಹಿಷ್ಕರಿಸಬೇಕೇ ಎಂಬುದನ್ನು ಕುರಿತು ಭಿನ್ನಾಭಿಪ್ರಾಯ ತ್ರೀವ್ರರೂಪ ತಾಳಿತ್ತು. ಚುನಾವಣೆಗಳಲ್ಲಿ ಭಾಗವಹಿಸಬೇಕು ಎಂದು ವಾದಿಸುತ್ತಿದ್ದವರೆಲ್ಲ ಮೋತಿಲಾಲ ನೆಹರು ಅವರ ನಾಯಕತ್ವದಲ್ಲಿ ಸ್ವರಾಜ್ಯ ಪಕ್ಷವನ್ನು ರಚಿಸಿಕೊಂಡರು. ವಿದ್ಯಾರ್ಥಿಯವರು ಆ ಪಕ್ಷಕ್ಕೆ ಸೇರಿದರು. ಆದರೆ ಉಗ್ರವಾದಿಗಳೇ ಬಹುಮತದಲ್ಲಿದ್ದ ಅಖಿಲ ಭಾರತೀಯ ಕಾಂಗ್ರೆಸ್‌ಸಮಿತಿಯು ಅಧಿವೇಶನವು ೧೯೨೫ರಲ್ಲಿ ಕಾನ್ಪುರದಲ್ಲಿ ಏರ್ಪಟ್ಟಿತು. ಈ ಅಧಿವೇಶನದ ಅಧ್ಯಕ್ಷಿಣಿ ಶ್ರೀಮತಿ ಸರೋಜಿನಿನಾಯ್ಡು. ಅಭಿಪ್ರಾಯ ಭೇದವಿದ್ದರೇನು? ಅಧಿವೇಶನದ ಯಶಸ್ಸಿಗಾಗಿ ವಿದ್ಯಾರ್ಥಿಯವರು ದುಡಿದು ಸಕಲರ ಮೆಚ್ಚುಗೆ ಗಳಿಸಿದರು.

೧೯೨೬ರಲ್ಲಿ ಪ್ರಾಂತೀಯ ಕೌನ್ಸಿಲ್‌ಗಳ ಚುನಾವಣೆ ನಡೆಯಿತು. ವಿದ್ಯಾರ್ಥಿಯವರು ಒಂದು ಕಡೆ, ಕಾನ್ಪುರದ ಪ್ರಸಿದ್ಧ ವಾಣಿಜ್ಯೋದ್ಯಮಿ ಚುನ್ನಿಲಾಲ್‌ಗರ್ಗ್‌ಒಂದು ಕಡೆ. ಜನಪ್ರಿಯತೆಯೊಂದೇ ಅವರಿಗಿದ್ದ ಬಂಡವಾಳ. ಎದುರು ಪಕ್ಷದ ಕಡೆಯಿಂದ ಹಣದ ಹೊಳೆ ಹರಿಯಿತು.

ಈ ಸಮಯದಲ್ಲಿ ಕೆಲವು ಮಿತ್ರರು “ಪ್ರತಾಪ”ದಲ್ಲಿ ತಮ್ಮ ಪ್ರಚಾರ ನಡೆಸಿಕೊಳ್ಳಿರೆಂಬ ಸಲಹೆಯನ್ನು ವಿದ್ಯಾರ್ಥಿಯವರ ಮುಂದೆ ಇಟ್ಟರು. ವಿದ್ಯಾರ್ಥಿಯವರು “ಚುನಾವಣೆಗೂ, ಪ್ರತಾಪಕ್ಕೂ ಯಾವ ಸಂಬಂಧವೂ ಇಲ್ಲ” ಎಂಬ ನಿಲುವು ತಳೆದರು. “ಪ್ರತಾಪ್‌”

"ಗಣೇಶ ಶಂಕರ ವಿದ್ಯಾರ್ಥಿ, ಭಗತ್‌ಸಿಂಗ್‌"

ಚುನಾವಣೆಯಲ್ಲಿ ನಿಷ್ಪಕ್ಷಪಾತವಾಗಿ ವರ್ತಿಸಿತು.  ವಿದ್ಯಾರ್ಥಿಯವರು ಪ್ರಚಂಡ ಬಹುಮತದಿಂದ ಚುನಾಯಿತರಾದರು.

ನರ್ವಲ ಸೇವಾಶ್ರಮ

ಮಾತು, ಬರಹಗಳಿಂದ ತೃಪ್ತರಾಗದ ವಿದ್ಯಾರ್ಥಿಯವರು ಗ್ರಾಮೀಣ ಜನರಲ್ಲಿ ನವಚೇತನ ಹುಟ್ಟಿಸಲು ಒಂದು ಯೋಜನೆ ತಯಾರಿಸಿದರು. ಅದರ ಫಲವಾಗಿ ಕಾನ್ಪುರ ಜಿಲ್ಲೆಯ ನರ್ವಲ ಗ್ರಾಮದಲ್ಲಿ ೧೯೨೯ರ ಫೆಬ್ರವರಿಯಲ್ಲಿ ಸೇವಾಶ್ರಮವೊಂದು ಸ್ಥಾಪನೆಯಾಯಿತು. ಈ ಆಶ್ರಮದ ಕಾರ್ಯ ಎಷ್ಟು ಪರಿಣಾಮಕಾರಿಯಾಯಿತೆಂದರೆ ೧೯೩೦-೩೧ರ ಅಸಹಕಾರ ಚಳುವಳಿಯಲ್ಲಿ ನಾಲ್ಕು ನೂರಕ್ಕೂ ಹೆಚ್ಚಿನ ಸತ್ಯಾಗ್ರಹಿಗಳನ್ನು ಈ ಸೇವಾಶ್ರಮವು ಹೋರಾಟಕ್ಕೆ ಇಳಿಸಿತು. ಇಂದಿಗೂ ಗಣೇಶ ಶಂಕರ ವಿದ್ಯಾರ್ಥಿಯವರ ನೆನಪನ್ನು ಈ ಸೇವಾಶ್ರಮ ಚಿರಸ್ಥಾಯಿಯಾಗಿ ಮಾಡಿ, ಕಾರ್ಯ ನಿರತವಾಗಿದೆ.

೧೯೩೦ರಲ್ಲಿ ಭಾರತದ ರಾಜಕೀಯ ಪರಿಸ್ಥಿತಿ ಬಿಗಡಾಯಿಸಿತು. ಆಂದೋಳನ ನಡೆಸದೆ ದಾರಿಯಿಲ್ಲವಾಯಿತು. ಮಹಾತ್ಮಗಾಂಧೀಜಿಯವರ ನೇತೃತ್ವದಲ್ಲಿ ಸತ್ಯಾಗ್ರಹ ಚಳವಳಿಯು ಅನಿವಾರ್ಯವಾಯಿತು. ಆ ವರ್ಷ ವಿದ್ಯಾರ್ಥಿಯವರ ರಾಜಕೀಯ ಜೀವನದ ಗೌರಿಶಂಕರ. ಸಂಯುಕ್ತ ಪ್ರಾಂತಗಳ ಕಾಂಗ್ರೆಸ್‌ಸಮಿತಿಯ ಅಧ್ಯಕ್ಷತೆ ಹಾಗೂ ಪ್ರಾಂತೀಯ ಚಳವಳಿಗೆ “ಡಿಕ್ಟೇಟರ್‌” ಪದವಿ ಅವರಿಗೆ ದೊರೆಯಿತು. ಮತ್ತೆ ಸೆರೆಮನೆಯೂ ಲಭಿಸಿತು.

ಗುಪ್ತ ಸಂಕೇತ

೧೯೧೭ರ ಜೂನ್‌ಅಥವಾ ಜುಲೈ ತಿಂಗಳಿನ “ಪ್ರತಾಪ”ದ ಸಂಚಿಕೆಗಳಲ್ಲಿ ಒಂದು ಸಣ್ಣ ಪ್ರಕಟಣೆ ಹೊರಬಿತ್ತು.

“ಮು.ಜ. ಪ್ರಾರ್ಥನೆ ಸ್ವೀಕೃತವಾಗಿದೆ-ಪ್ರತಾಪ” ಈ ಪ್ರಕಟಣೆಯನ್ನು ಅಚ್ಚು ಮಾಡಿದುದಕ್ಕಾಗಿ ವಿದ್ಯಾರ್ಥಿಯವರು ಕಾನ್ಪುರದ ಕಲೆಕ್ಟರವರನ್ನು ಭೇಟಿ ಮಾಡಿ ಸಮಜಾಯಿಷಿ ನೀಡಬೇಕಾಗಿ ಬಂತು.

ಏನು ಈ ಪ್ರಕಟಣೆಯ ಅರ್ಥ?

ಶ್ರೀ ಬಟುಕದೇವ ಶರ್ಮ ಗಾಜಿಪುರದವರು. ಕ್ರಾಂತಿಕಾರಿ ಬಳಗದ ಸದಸ್ಯರು. ಬೇರೆ ಬೇರೆ ಹೆಸರುಗಳಲ್ಲಿ “ಪ್ರತಾಪ”ಕ್ಕೆ ಆಗಾಗ್ಗೆ ಲೇಖನಗಳನ್ನು ಬರೆಯುತ್ತಿದ್ದವರು. ೧೯೧೬ರಲ್ಲಿ ಅವರು ಬಿಹಾರದ ಬಾಗಲ್ಪುರದಿಂದ ಹೊರಡುತ್ತಿದ್ದ ಶ್ರೀಕಮಲ ಎಂಬ ಮಾಸಪತ್ರಿಕೆಗೆ ಸರ್ಕಾರಿ ಸುದ್ದಿಗಳನ್ನು ಸಂಗಹಿಸುವ ಬಾತ್ಮಿದಾರರಾಗಿದ್ದರು. ಬಹಿರಂಗವಾಗಿ ಈ ನೌಕರಿ ಮಾಡುತ್ತಿದ್ದು ಗುಪ್ತವಾಗಿ ಕ್ರಾಂತಿಕಾರಿಗಳ ಸಂಘಟನೆಯಲ್ಲಿ ತೊಡಗಿದ್ದರು. ಕೆಲವು ದ್ರೋಹಿಗಳಿಂದ ಈ ವಿಚಾರ ಸರ್ಕಾರದ ಗಮನಕ್ಕೆ ಹೋಯಿತು. ಕೂಡಲೇ ಶರ್ಮ ಹಾಗೂ ಅವರ ಮಿತ್ರರ ಮೇಲೆ ಬಂಧನದ ವಾರಂಟುಗಳು ಹೊರಟವು. ಆದರೆ ಇವರನ್ನು ಬಂಧಿಸಬೇಕಾಗಿದ್ದ ಪೊಲೀಸ್‌ಅಧಿಕಾರಿಯೂ ಅಂತರಂಗದಲ್ಲಿ ಕಟ್ಟಾ ದೇಶಭಕ್ತ. ಆತ ಇವರುಗಳಿಗೆ ಸುದ್ದಿ ತಿಳಿಸಿದ. ಕೂಡಲೇ ತಮ್ಮಲ್ಲಿದ್ದ ಆಪತ್ಕಾರಿ ವಸ್ತುಗಳನ್ನು ನಾಶಮಾಡಿ ದಿಕ್ಕಾಪಾಲಾಗಿ ಓಡಿದರು.

ಶರ್ಮ ಅವರು ಅಲ್ಲಿ ಇಲ್ಲಿ ಅಲೆದು ರಾಂಪುರ್‌ಮಟಿಹಾನಿ ಎಂಬ ಗ್ರಾಮಕ್ಕೆ ಬಂದು ಅಲ್ಲಿನ ಶ್ರೀ ಅಂಭಿಕಾ ಪ್ರಸಾದ ಸಿಂಹ ಎಂಬುವರಲ್ಲಿ ಖಾಸಗಿ ಅಧ್ಯಾಪಕರು ಎನ್ನುವಂತೆ ತಂಗಿದರು. ಅಲ್ಲಿಂದ ಗಣೇಶ ಶಂಕರ ವಿದ್ಯಾರ್ಥಿಯವರಿಗೆ ಒಂದು ಪತ್ರ ಬರೆದು ಮೇಲೆ ಸೂಚಿಸಿದ ಪ್ರಕಟಣೆಯನ್ನು “ಪ್ರತಾಪ”ದಲ್ಲಿ ಎರಡು ಬಾರಿ ಮುದ್ರಿಸಿದರೆ ತಾವು ಕಾನ್ಪುರಕ್ಕೆ ಬರುವುದಾಗಿ ತಿಳಿಸಿದರು.

ಪ್ರಕಟಣೆ ಹೊರಬಂತು. ಶರ್ಮ ಕಾನ್ಪುರಕ್ಕೆ ಬಂದರು. “ಪ್ರತಾಪ”ದ ಕಾರ್ಯಾಲಯಕ್ಕೆ ಹೋದರು. ಆ ವೇಳೆಯಲ್ಲಿ ಕಾರ್ಯಾಲಯದಲ್ಲಿ ಅನಿಬೆಸೆಂಟರ ಬಂಧನದ ವಿರೋಧವಾಗಿ ಖಂಡನಾ ಸಭೆ ಜರುಗುತ್ತಿತ್ತು. ವಿದ್ಯಾರ್ಥಿಯವರು ಶರ್ಮಾರನ್ನು ಆದರದಿಂದ ಸ್ವಾಗತಿಸಿದರು.

ಗುಪ್ತಚರರಿಂದ ಈ ಸುದ್ದಿ ಕಲೆಕ್ಟರಿಗೆ ತಿಳಿದುಬಂತು. ಶರ್ಮರು ಕಾನ್ಪುರಕ್ಕೆ ಬಂದುದಕ್ಕೂ, “ಪ್ರತಾಪ”ದಲ್ಲಿ ಪ್ರಕಟವಾಗಿದ್ದ ವಿಚಿತ್ರ ಪ್ರಕಟಣೆಗೂ ಏನೊ ಸಂಬಂಧವಿದೆಯೆಂದು ಊಹೆ ಹುಟ್ಟಿತು. ಕಲೆಕ್ಟರು ವಿದ್ಯಾರ್ಥಿಯವರನ್ನು ತಮ್ಮಲ್ಲಿಗೆ ಕರೆಸಿದರು. ಕಲೆಕ್ಟರು “ಇಂತಹ ಗುಪ್ತ ಸಂಕೇತವನ್ನು ಮುದ್ರಿಸಿ ನೀವು ಅಪರಾಧ ಮಾಡಿದ್ದೀರಿ. ಸರ್ಕಾರಕ್ಕೆ ನಿಮ್ಮ ಮೇಲೆ ಅಸಮಾಧಾನವಾಗಿದೆ” ಎಂದರು. ವಿದ್ಯಾರ್ಥಿಯವರು ತಮ್ಮ ಸಹಜ ಗಂಭೀರ ಮುದ್ರೆಯಿಂದ, ನಸುನಗುತ್ತಾ, “ಸಾಹೇಬರೇ, ಒಂದು ಪಕ್ಷ ನಿಮ್ಮ ಮಾತೃಭೂಮಿಯು, ಜರ್ಮನಿ ಇಲ್ಲವೆ ಫ್ರಾನ್ಸಿನ ಅಧೀನವಾಯಿತು ಎಂದುಕೊಳ್ಳಿ. ತಾವೂ ನನ್ನಂತೆ ಒಬ್ಬ ಪತ್ರಿಕಾ ಸಂಪಾದಕರಾಗಿದ್ದರೆ ದೇಶಭಕ್ತರಿಗಾಗಿ ನಾನು ಮಾಡಿರುವಂತಹ ಸಣ್ಣ ನೆರವಿನ ಕಾರ್ಯ ಮಾಡಲಾರಿರಾ” ಎಂದು ಪ್ರತಿಪ್ರಶ್ನೆ ಹಾಕಿದರು.

ಕಲೆಕ್ಟರು ಸುಮ್ಮನಾದರು. ವಿದ್ಯಾರ್ಥಿಯವರು “ಪ್ರತಾಪ”ದ ಕಾರ್ಯಾಲಯಕ್ಕೆ ಹಿಂದಿರುಗಿದರು.

ಕಾಕೋರಿ ಕ್ರಾಂತಿಕಾರಿಗಳೊಂದಿಗೆ ಸಂಪರ್ಕ

ವಿದ್ಯಾರ್ಥಿಯವರಿಗೆ ಕ್ರಾಂತಿಕಾರಿ ಮಿತ್ರರ ಮೇಲೆ ಅಪಾರ ಪ್ರೇಮ. ತಾವು ಸ್ವತಃ ಹಿಂಸೆಗೆ ಇಳಿಯದಿದ್ದರೂ, ರಾಷ್ಟ್ರ ವಿಮೋಚನೆಗಾಗಿ ಹಿಂಸಾತ್ಮಕ ಸಂಘಟನೆಗಳಲ್ಲಿ ತೊಡಗಿದ್ದವರ ಬಗ್ಗೆ ಗೌರವ ಇಟ್ಟಿದ್ದರು. ಕ್ರಾಂತಿಕಾರಿಗಳು, ಅವರ ಮುಖಂಡರು ತಮ್ಮ ಸಮಸ್ಯೆಗಳನ್ನು ವಿದ್ಯಾರ್ಥಿಯವರ ಮುಂದಿಟ್ಟು, ಬಿಚ್ಚು ಮನಸ್ಸಿನಿಂದ ಚರ್ಚಿಸಿ ಪರಿಹಾರ ಹುಡುಕುತ್ತಿದ್ದರು.

೧೯೨೫ರಲ್ಲಿ ಭಾರತೀಯ ಕ್ರಾಂತಿಕಾರಿ ಚಳವಳಿಯ ಪ್ರಮುಖ ಘಟನೆಗಳಲ್ಲಿ ಒಂದಾದ ಕಾಕೋರಿ ರೈಲು ಡಕಾಯಿತಿ ನೆಡಯಿತು. ರಾಮಪ್ರಸಾದ್‌ಬಿಸ್ಮಿಲ್‌, ಅಷ್ಫಾಕ್‌ಉಲ್ಲಾ, ಚಂದ್ರಶೇಖರ ಆಜಾದ್‌ಮೊದಲಾದ ಇಪತ್ತನಾಲ್ಕು ಮಂದಿ ಕ್ರಾಂತಿಕಾರರ ಮೇಲೆ ಮೊಕದ್ದಮೆ ಹೂಡಲಾಯಿತು. ಆಜಾದ್‌ಬಂಧನಕ್ಕೆ ಸಿಕ್ಕದೆ ತಲೆತಪ್ಪಿಸಿಕೊಂಡಿದ್ದರು. ಕ್ರಾಂತಿಕಾರರ ಪರವಾಗಿ ಮೊಕದ್ದಮೆಯನ್ನು ನಡೆಸಲು ಹಣ, ವಕೀಲರು, ಪ್ರಚಾರ ಇವೆಲ್ಲ ಬೇಕಾಯಿತು. ವಿದ್ಯಾರ್ಥಿಯವರು ಈ ಕಾರ್ಯಕ್ಕಾಗಿ ಟೊಂಕಕಟ್ಟಿ ನಿಂತರು. ಆ ಆಪತ್ತಿನ ಸಮಯದಲ್ಲಿ ಸಹ ನಿರ್ಭೀತಿಯಿಂದ ಚಂದ್ರಶೇಖರ ಆಜಾದರನ್ನು ಭೇಟಿಯಾಗುತ್ತಿದ್ದರು.

ಮೊಕದ್ದಮೆಯಲ್ಲಿ ರಾಮಪ್ರಸಾದ ಬಿಸ್ಮಿಲ್‌, ಅಷ್ಫಾಕ್‌ಉಲ್ಲಾ, ರೋಷನ್‌ಸಿಂಹ ಮತ್ತು ರಾಜೇಂದ್ರ ಲಾಹಿರಿ ಈ ನಾಲ್ವರಿಗೆ ಮರಣದಂಡೆನ ವಿಧಿಸಲಾಯಿತು. ಈ ವೀರ ಯುವಕರನ್ನು ಪಾರುಮಾಡಲು ವಿದ್ಯಾರ್ಥಿಯವರು ವಿಶ್ವಪ್ರಯತ್ನ ಮಾಡಿದರು. ಸಕಲ ಪಕ್ಷಗಳ ರಾಜಕೀಯ ಧುರೀಣರಿಂದ ಸಹಿ ಮಾಡಿಸಿ, ವೈಸರಾಯರಿಗೆ ಮನವಿಯೊಂದನ್ನು ಸಲ್ಲಿಸಿದರು. ಕೇಂದ್ರೀಯ ವಿಧಾನ ಸಭೆಯ ಸದಸ್ಯರಿಂದ ಒಂದು ಮನವಿ ಮಾಡಿಸಿದರು. ಆದರೆ ಸರ್ಕಾರ ಜಗ್ಗಲಿಲ್ಲ. ವೀರರು ನೇಣುಗಂಬವನ್ನು ಏರಲೇಬೇಕಾಯಿತು.

ಹುತಾತ್ಮರಾದ ವೀರಯೋಧರಿಗೆ ಯೋಗ್ಯ ಶ್ರದ್ಧಾಂಜಲಿ ಸಲ್ಲಿಸಲು ವಿದ್ಯಾರ್ಥಿಯವರು ನಿರ್ಧರಿಸಿ “ಕಾಕೋರಿ ಷಹೀದ್” (ಕಾಕೋರಿ ಹುತಾತ್ಮರು), ಎಂಬ ಪುಸ್ತಕವನ್ನು ಬರೆದು ಪ್ರಕಟಿಸಿದರು.

ಮರಣದಂಡನೆಗೆ ಗುರಿಯಾಗಿ ಗೋರಕಪುರದ ಸೆರೆಮನೆಯಲ್ಲಿರುವಾಗ ರಾಮಪ್ರಸಾದ್‌ಬಿಸ್ಮಿಲ್‌ತಮ್ಮ ಆತ್ಮಕತೆಯನ್ನು ಬರೆದರು. ಅದನ್ನು ಗುಪ್ತವಾಗಿ ಪತ್ರಕರ್ತ ದಶರಥಪ್ರಸಾದ್‌ದ್ವಿವೇದಿಯವರಿಗೆ ಕಳುಹಿಸಿಕೊಟ್ಟಿದ್ದರು. ಅಲ್ಲಿಂದ ಅದು ವಿದ್ಯಾರ್ಥಿಯವರ ಕೈಗೆ ಬಂತು. “ಪ್ರತಾಪ” ಮುದ್ರಣಾಲಯದಲ್ಲಿ ಅಚ್ಚಾಗಿ ಪ್ರಕಟವಾಯಿತು. ಈ ಪುಸ್ತಕಗಳ ಪ್ರಕಟನೆಯೇ ಒಂದು ಸಾಹಸದ ಕತೆ. ಅಚ್ಚಾಗುವಾಗಲಾಗಲಿ, ಹೊರಬಿದ್ದ ಮೇಲಾಗಲಿ ಯಾವ ಕ್ಷಣವಾದರೂ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವ ಸಂಭವವಿತ್ತು. ಪ್ರಚಾರವಿಲ್ಲದೆ ಮುದ್ರಿಸುವುದು, ಮುದ್ರಿತ ಪುಟಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸುವುದು, ಸರ್ಕಾರದ ಗಮನಕ್ಕೆ ಬರುವ ಮೊದಲೇ ಸಾಧ್ಯವಾದಷ್ಟು ಪ್ರತಿಗಳನ್ನು ಹಂಚಿಬಿಡುವುದು-ಹೀಗೆ ವಿವಿಧ ಹಂತಗಳಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತಿತ್ತು. ಸದಾ ತಮ್ಮ ಹಿಂದೆ ಇರುತ್ತಿದ್ದ ಚಿತ್ರಗುಪ್ತರ ಕಣ್ಣುತಪ್ಪಿಸಿ ಈ ಪುಸ್ತಕಗಳನ್ನ ಪ್ರಕಟಿಸಿ, ವಿತರಣೆ ಮಾಡಿದುದು ವಿದ್ಯಾರ್ಥಿಯವರ ಕಾರ್ಯವಿಚಕ್ಷಣೆ, ಸಂಘಟನಾ ಕುಶಲತೆ ಹಾಗೂ ಕಟ್ಟುನಿಟ್ಟಾದ ಶಿಸ್ತನ್ನು ಎತ್ತಿ ತೋರುತ್ತದೆ.

ಕಾನ್ಪುರದಲ್ಲಿ ಭಗತ್‌ಸಿಂಗ್‌

ಭಗತ್‌ಸಿಂಗ್‌ಎಫ್‌.ಎ.ಪರೀಕ್ಷೆಯಲ್ಲಿ ತೇರ್ಗಡೆಯಾದ ಮೇಲೆ ಅವರ ಕುಟುಂಬದವರು ಮದುವೆಯಾಗೆಂದು ಬಲವಂತಗೊಳಿಸತೊಡಗಿದರು. ಅದರಿಂದ ಪಾರಾಗಲು ಆತ ದೆಹಲಿಗೆ ಓಡಿಹೋಗಿ ಅಲ್ಲಿ “ಅರ್ಜುನ” ಎಂಬ ಪತ್ರಿಕೆಯಲ್ಲಿ ಕೆಲಸಕ್ಕೆ ಸೇರಿದರು. ಆದರೆ ಮನೆಯವರಿಗೆ ದೆಹಲಿಯ ವಿಳಾಸವೂ ತಿಳಿದುಹೋಯಿತು. ಕೂಡಲೇ ಭಗತ್‌ಸಿಂಗ್‌ಕಾನ್ಪುರಕ್ಕೆ ಹೋದರು.

ಕಾನ್ಪುರದಲ್ಲಿ “ಪ್ರತಾಪ”ದ ಕಾರ್ಯಾಲಯಕ್ಕೆ ಹೋದರು. ಗಣೇಶ ಶಂಕರ ವಿದ್ಯಾರ್ಥಿಯವರಿಗೆ ಆ ಕ್ರಾಂತಿಕಾರಿ ಯುವಕನ ಮೇಲೆ ಅಭಿಮಾನ ಉಕ್ಕಿತು. “ಪ್ರತಾಪ”ದ ಬರಹಗಾರರ ಗುಂಪಿಗೆ ಸೇರಿಕೊಂಡರು. ಅಲ್ಲಿ ಭಗತ್‌ಸಿಂಗ್‌ರ ಹೆಸರು ಬಲವಂತ ಸಿಂಹ ಎಂದು ಬದಲಾಯಿತು.

ಆಗ ಭಗತ್‌ಸಿಂಗರಿಗೂ, ವಿದ್ಯಾರ್ಥಿಯವರಿಗೂ ನಡುವೆ ಬೆಳೆದ ಸ್ನೇಹ ಬಾಂಧವ್ಯ ಕ್ರಮೇಣ ಬಲವಾಯಿತು.

ಭಗತ್‌ಸಿಂಗರು ಲಾಹೋರ್‌ಪಿತೂರಿ ಮೊಕದ್ದಮೆಯಲ್ಲಿ ಮರಣದಂಡನೆಗೆ ಗುರಿಯಾದರು. ೧೯೩೧ರ ಮಾರ್ಚ್‌೨೩ರಂದು ಅವರನ್ನು ನೇಣು ಹಾಕಿದರು.

ಕಾನ್ಪುರದಲ್ಲಿ ಹರತಾಳ

ಭಗತ್‌ಸಿಂಗರು ಕಾನ್ಪರದಲ್ಲಿ ಇದ್ದುದು ಕೆಲವೇ ಕಾಲವಾದರೂ ಕಾನ್ಪುರವು ಅವರನ್ನು ತನ್ನ ವೀರಪುತ್ರನೆಂದೇ ಭಾವಿಸಿತ್ತು. ಅಂದು ಇಡೀ ನಗರವು ಹರತಾಳವನ್ನಾಚರಿಸಿತು. ಸಂಜೆ ಫೂಲ್‌ಬಾಗಿನಲ್ಲಿ ದೊಡ್ಡ ಸಭೆ ನಡೆಸಿ ವೀರ ಹುತಾತ್ಮರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿತು. ಕಣ್ಣೀರನ್ನೊರೆಸಿಕೊಳ್ಳುತ್ತ, ಗದ್ಗದ ಕಂಠದಲ್ಲಿ ಗಣೇಶ ಶಂಕರ ವಿದ್ಯಾರ್ಥಿಯವರು “ಶರೀರವನ್ನು ನಾಶಗೊಳಿಸುವುದರಿಂದ ಆತ್ಮ ನಾಶವಾಗುವುದಿಲ್ಲ. ಸರದಾರ್ ಭಗತ್‌ಸಿಂಗ್‌ಸಾಯಲಿಲ್ಲ; ಹುತಾತ್ಮರಾದರು, ಅಮರರಾದರು ಅವರೊಂದಿಗೆ ರಾಜಗುರು ಹಾಗೂ ಸುಖದೇವರನ್ನೂ ನೇಣುಗಂಬಕ್ಕೇರಿಸಿದರು. ನಿಜ, ಅವರುಗಳ ಶರೀರಕ್ಕೆ ಯಾತನೆಯಾಯಿತು. ಆದರೆ ಅವರ ಆತ್ಮಗಳು ಪ್ರಸನ್ನವಾಗಿದ್ದವು, ಸ್ವತಂತ್ರವಾಗಿದ್ದವು. ಅವುಗಳನ್ನು ಬಂಧಿಸಲು ಸಾಧ್ಯವಾಗಲಿಲ್ಲ. ಈ ಆತ್ಮಗಳು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲೂ ನೆಲೆಯಾಗುತ್ತದೆ. ಈ ಬಲಿದಾನ ನಿರರ್ಥಕವಾಗುವುದಿಲ್ಲ. ಭಾರತದ ಈ ಮಹಾವಿಭೂತಿಗಳು ಅಮರರು. ಬ್ರಿಟಿಷ್‌ಸರಕಾರವು ಈ ದೇಶಭಕ್ತರನ್ನು ನೇಣುಗಂಬಕ್ಕೇರಿಸಿ ತನ್ನ ಶವಪೆಟ್ಟಿಗೆಗೆ ತಾನೇ ಮೊಳೆ ಜಡಿದುಕೊಳ್ಳುತ್ತಿದೆ. ಈ ವೀರರ ರಕ್ತ ದೇಶಕ್ಕೆ ಉತ್ತೇಜನ ನೀಡುತ್ತದೆ. ಅದರ ಬಲಿದಾನ ನವಜಾಗೃತಿಯನ್ನುಂಟು ಮಾಡಿ ನವ ಚೇತನವನ್ನು ಹರಿಸುತ್ತದೆ. ಕ್ರಾಂತಿ ಭಾವನೆಗಳು ಬಲಗೊಳ್ಳುತ್ತವೆ. ನೀವು, ನಾವು, ಎಲ್ಲರೂ ನೋಡುನೋಡುತ್ತಿರುವಂತೆಯೇ ಬ್ರಿಟಿಷ್‌ಪ್ರಭುತ್ವ ಮಣ್ಣುಪಾಲಾಗುತ್ತಿದೆ. ಅದರ ಅಳಿವನ್ನು ಯಾವ ಶಕ್ತಿಯೂ ತಡೆಯಲಾರದು” ಎಂದು ಸಿಂಹಗರ್ಜನೆ ಮಾಡಿದರು. ಕಾನ್ಪುರವು ಅಂದು ತೋರಿದ ಒಗ್ಗಟ್ಟು ಯಾರನ್ನಾದರೂ ಹೊಡೆದೆಬ್ಬಿಸುವಂತಿತ್ತು.

ಯಾದವೀ ಕಲಹ

ಸಭೆ ಮುಗಿದು ವಿದ್ಯಾರ್ಥಿಯವರು ಮನೆಗೆ ಬಂದಿದ್ದರು. ಮನಸ್ಸು ಕಲಕಿತ್ತು; ದೇಹ ಆಯಾಸಗೊಂಡಿತ್ತು. ಹೆಂಡತಿಯ ಬಲವಂತಕ್ಕೆ ಮಂಚದ ಮೇಲೆ ಮಲಗಿದ್ದರು. ಆಗ ಅವರ ಮಿತ್ರ ರಾಮರತನ್‌ಗುಪ್ತರು ತಂದ ಸುದ್ದಿ ಭಯಾನಕವಾಗಿತ್ತು. ಕಾನ್ಪುರದ ಮೂಲೆ ಮೂಲೆಗಳಲ್ಲೂ, ಮೊಹಲ್ಲ ಮೊಹಲ್ಲಾಗಳಲ್ಲೂ ಹಿಂದು ಮುಸ್ಲಿಂ ಗಲಭೆ ನಡೆಯುತ್ತಿದೆ ಎಂದು ಗುಪ್ತರು ಹೇಳಿದರು.

ಹೆಂಡತಿ ತಡೆದರೂ ಕೇಳದೆ ತಕ್ಷಣ ಆ ಉರಿಯನ್ನು ಆರಿಸಲು ಹೊರಟರು ವಿದ್ಯಾರ್ಥಿ.

ಮೂಲ್‌ಗಂಜಿನಲ್ಲಿ ಕೈಕೈ ಮಿಲಾಯಿಸಿತ್ತು. ಜನರಲ್ ಗಂಜಿನಲ್ಲಿ ಇಬ್ಬರು ಮುಸಲ್ಮಾನರ ಅಂಗಡಿಗಳು ಲೂಟಿಯಾಗಿದ್ದವು. ಪ್ರತಿ ಮೊಹಲ್ಲಾದಲ್ಲೂ ಪರಿಸ್ಥಿತಿ ಆತಂಕಕಾರಿಯಾಗಿತ್ತು. ಮೇಸ್ಟನ್‌ರೋಡಿನಲ್ಲಿ ಒಂದು ದೇವಾಲಯದ ಆಜುಬಾಜಿನಲ್ಲಿ ಎರಡು ಪಕ್ಷಗಳವರೂ ಜಮಾಯಿಸಿ, ಪರಸ್ಪರ ಸವಾಲು ಕೂಗುತ್ತಿದ್ದರು. ವಿದ್ಯಾರ್ಥಿಯವರು ಅಲ್ಲಿಗೆ ಹೋಗಿ ತಮ್ಮ ಜಾಣ್ಮೆಯನ್ನೆಲ್ಲ ಬಳಸಿ ಎರಡು ಗುಂಪುಗಳನ್ನೂ ಶಾಂತಗೊಳಿಸಿದರು.

ರಾತ್ರಿ ಒಂಬತ್ತಾಗಿತ್ತು. ಚಟಾಯಿ ಮೊಹಲ್ಲದಲ್ಲಿ (ಸಹ) ಎರಡು ಗುಂಪುಗಳು ಹೊಡೆದಾಡಲು ಸಿದ್ಧರಾಗಿ ನಿಂತಿರುವುದಾಗಿ ಸುದ್ದಿ ಬಂತು. ವಿದ್ಯಾರ್ಥಿಯವರು ತಮ್ಮ ಸಂಗಡಿಗರೊಂದಿಗೆ ಅಲ್ಲಿಗ ಓಡಿದರು. ಅಲ್ಲಿಯೂ ಜನರನ್ನು ಶಾಂತಗೊಳಿಸಿದರು. ಮನೆಗೆ ಹಿಂತಿರುಗುವಾಗ್ಗೆ ಹತ್ತು ಗಂಟೆ ಹೊಡೆದಿತ್ತು. ಮನೆಯಲ್ಲಿ ಯಾರೂ ಊಟ ಮಾಡದೆ ಅವರಿಗಾಗಿ ಕಾತರದಿಂದ ಕಾಯುತ್ತಿದ್ದರು.

ಮರುದಿನ ಎಂಟುಗಂಟೆಗೇ ಮನೆ ಬಿಟ್ಟು ಹೊರಟರು. ಗಜ್ಜೂಲಾಲ್‌ಧರ್ಮಶಾಲೆಯ ಬಳಿ ದೊಡ್ಡ ಹಿಂದು ಗುಂಪು ಕೂಡಿತ್ತು. ಹತ್ತಿರದಲ್ಲೇ ಪುಟ್ಟ ಮನೆಯೊಂದರಲ್ಲಿ ಮುಸಲ್ಮಾನ ಕುಟುಂಬವೊಂದು ಬಚ್ಚಿಟ್ಟುಕೊಂಡಿತ್ತು. ಮೂರು ನಾಲ್ಕು ಸ್ವಯಂಸೇವಕರೊಂದಿಗೆ ಹೋಗಿ ಆ ಗುಂಪಿಗೆ ಬುದ್ಧಿಹೇಳಿ, ಆ ಕುಟುಂಬವನ್ನು ಅವರ ಮೊಹಲ್ಲಾಕ್ಕೆ ಕಳುಹಿಸಿಕೊಟ್ಟರು. ಹಿಂತಿರುಗಿ ಬರುವಾಗ ನಾಲೆಯಲ್ಲಿ ಬಿದ್ದಿದ್ದ ಎರಡು ಶವಗಳನ್ನೆತ್ತಿ ಸಂಸ್ಕಾರ ಮಾಡಿದರು.

೧೯೩೧ ಮಾರ್ಚ್‌೨೫

ಗಲಭೆಯ ಮೂರನೆಯ ದಿನ. ವಿದ್ಯಾರ್ಥಿಯವರು, ಗುಪ್ತರೊಂದಿಗೆ ಕೆಲವು ಸ್ವಯಂಸೇವಕರನ್ನು ಕೂಡಿಸಿಕೊಂಡು ರಾಮನಾರಾಯಣ ಬಜಾರ್ ಪ್ರದೇಶದಲ್ಲಿ ಗುಂಪುಗಳನ್ನು ಶಾಂತಗೊಳಿಸುತ್ತಿದ್ದರು. ಆಗ ಬಂಗಾಲಿ ಮೊಹಲ್ಲಾದಲ್ಲಿ ಹತ್ಯಾಕಾಂಡ ನಡೆದಿದೆಯೆಂಬ ಸುದ್ದಿ ಬಂತು ವಿದ್ಯಾರ್ಥಿಯವರು ಅಲ್ಲಿಗೆ ಧಾವಿಸಿದರು. ಅಲ್ಲಿ ಉದ್ರಿಕ್ತರಾಗಿದ್ದ ಹಿಂದುಗಳನ್ನು ಶಾಂತಗೊಳಿಸಿ ಒಂದು ಮನೆ ಮತ್ತು ಮಸೀದಿಗಳಲ್ಲಿ ಅಡಗಿದ್ದ ನೂರಾರು ಮುಸಲ್ಮಾನರನ್ನು ಹೊರತಂದು ಮುಸಲ್ಮಾನರ ಮೊಹಲ್ಲಗಳಿಗೆ ಕಳುಹಿಸಿಕೊಟ್ಟರು.

"ತಾವು ನನ್ನಂತೆ ಒಬ್ಬ ಪತ್ರಿಕಾ ಸಂಪಾದಕರಾಗಿದ್ದರೆ..."

ಗಾಯಾಳುಗಳನ್ನು ಮುಟ್ಟಿ ಹೆಣಗಳನ್ನು ಸರಿಸಿ, ವಿದ್ಯಾರ್ಥಿಯವರ ಮೈಮೇಲೆ ರಕ್ತ ಬಿದ್ದಿತ್ತು. ಬಟ್ಟೆಗಳು, ಕೈಗಳು ಹೊಲಸಾಗಿದ್ದವು. ಸ್ನಾನ ಮಾಡೋಣವೆಂದು ವಿದ್ಯಾರ್ಥಿಯವರು ಗುಪ್ತರೊಂದಿಗೆ ಅವರ ಮನೆಗೆ ಹೋದರು. ಬಟ್ಟೆಗಳ ವ್ಯವಸ್ಥೆ ಮಾಡಲು ಸ್ವಯಂ ಸೇವಕನೊಬ್ಬ ವಿದ್ಯಾರ್ಥಿಯವರು ಮನೆಗೆ ಹೋದ. ಮೊದಲು ಸ್ನಾನಮಾಡಲು ಗುಪ್ತರು ಬಚ್ಚಲು ಮನೆಗೆ ಹೋದರು.

ಆ ವೇಳೆಗೆ ಇಬ್ಬರು ಮುಸ್ಲಿಂ ಕಾರ್ಯಕರ್ತರು ಓಡಿ ಬಂದು “ಚಾವಲ್‌ಮಂಡಿಯಲ್ಲಿ ಕೆಲವು ಮುಸ್ಲಿಂ ಕುಟುಂಬಗಳು ಅಪಾಯದಲ್ಲಿವೆ. ಬೇಗ ಬನ್ನಿ” ಎಂದು ಕೇಳಿಕೊಂಡರು.

ವಿದ್ಯಾರ್ಥಿಯವರು ತಟ್ಟನೆ ಹೊರಟು, “ಗುಪ್ತಾಜಿ, ಇವರು ಕರೆಯುತ್ತಿದ್ದಾರೆ. ಹೋಗಿ ಹತ್ತು ನಿಮಿಷದಲ್ಲಿ ಬರುತ್ತೇನೆ” ಎಂದರು.

ಗುಪ್ತರು ಸ್ನಾನದ ಮನೆಯಿಂದಲೇ “ಬೇಡಿ, ಬೇಡಿ ನಾನು ಬರುತ್ತೇನೆ” ಎಂದರು. “ಈಗಲೇ ಬಂದೆ ಎನ್ನುತ್ತ ವಿದ್ಯಾರ್ಥಿಯವರು ಸ್ವಯಂ ಸೇವಕರೊಂದಿಗೆ ಬೀದಿಗೆ ಬಂದರು.”

ರಸ್ತೆಯಲ್ಲಿ ಅವರಿಗೆ ಹೊಸ ಸುದ್ದಿಬಂತು ಚೌಬೇಗೋಲಾ ಪ್ರದೇಶದಲ್ಲಿ ನೂರಾರು ಹಿಂದುಗಲು ಸಾವಿನ ದವಡೆಯಲ್ಲಿದ್ದಾರೆ ಎಂದರು. ಅವರು ಚೌಬೇಗೋಲಕ್ಕೆ ಹೊರಟರು.

ಏಕೆ ಹೋಗುತ್ತೀರಿ ಗಣೇಶ್‌ಜೀ?”

ಆ ರಸ್ತೆ ಬಜಾಜೇ ಚೌಕದ ಮೇಲೆ ಹಾದು ಹೋಗುತ್ತಿತ್ತು. ಅದು ಹಿಂದುಗಳ ಪ್ರದೇಶ. ಅಲ್ಲಿ ಹಿಂದುಗಳ ಗುಂಪೊಂದು ವಿದ್ಯಾರ್ಥಿಯವರನ್ನು ಸುತ್ತುವರಿದು “ಗಣೇಶ್‌ಜಿ, ಮುಂದಕ್ಕೆ ಹೋಗಲು ಬಿಡುವುದಿಲ್ಲ” ಎಂದು ತಡೆದರು. ವಿದ್ಯಾರ್ಥಿ ಹೇಳಿದರು, “ಅಯ್ಯಾ, ಅಲ್ಲಿ ನೂರಿನ್ನೂರು ಹೆಂಗಸರು ಮಕ್ಕಳು ಸಾವಿನ ದವಡೆಗೆ ಸಿಕ್ಕಿಬಿದ್ದಿದ್ದಾರೆ. ಅವರನ್ನು ಬಿಡಿಸಿ ತರಲು ಹೊರಟಿದ್ದೇನೆ. ಬಿಡಿ”

ವಿದ್ಯಾರ್ಥಿಯವರು ಗುಂಪಿನಿಂದ ಬಿಡಿಸಿಕೊಂಡು ಮುಂದೆ ಹೊರಟರು. ಜನ ಕೂಗಿದರು. “ಈಗ ಹೋಗಬೇಡಿ ಗಣೇಶ್‌ಜೀ! ಏಕೆ ಹೋಗುತ್ತಿದ್ದೀರಿ ಗಣೇಶ್‌ಜೀ?”

ಉಕ್ಕುತ್ತಿದ್ದ ಕೋಪದಿಂದ ವಿದ್ಯಾರ್ಥಿ ಹೇಳಿದರು. “ಸಾಯಲು ಹೊರಟಿದ್ದೇನೆ. ಧೈರ್ಯವಿರುವವರು ನನ್ನ ಹಿಂದೆ ಬನ್ನಿ.” ಜನರು ಸುಮ್ಮನಾದರು. ವಿದ್ಯಾರ್ಥಿಯವರು ಮುಂದೆ ನಡೆದರು.

ಚೌಬೇಗೋಲಕ್ಕೆ ಹೋಗಿ ನಯೀ ಸಡಕ್‌ನಲ್ಲಿರುವ ಮಹಾವೀರ ಮಠದ ಬಳಿ ನಿಂತರು. ಎದುರಿಗೆ ಬಾಕರ್‌ಮಂಡಿಗಲ್ಲಿ. ಬದಿಯಲ್ಲೇ ಕರೀಮನ ಗಿರಣಿ. ವಿದ್ಯಾರ್ಥಿ ತಮ್ಮ ತಂಡದೊಂದಿಗೆ ಅಲ್ಲಿಗೆ ಹೋದಾಗ ಮುಸಲ್ಮಾನರ ದೊಡ್ಡ ಗುಂಪೊಂದು ನಯೀ ಸಡಕ್‌ನಲ್ಲಿ ಬರುತ್ತಿತ್ತು. ಅವರೊಂದಿಗೆ ಮುಸ್ಲಿಂ ಸ್ವಯಂಸೇವಕ ಹೇಳಿದ-“ಸ್ವಲ್ಪ ತಡೆಯಿರಿ. ತಾನು ಹೋಗಿ ಸ್ವಯಂಸೇವಕ ಗಣೇಶ್‌ಜಿ ಬರುತ್ತಿದ್ದಾರೆಂದು ಹೇಳಿ ಬರುತ್ತೇನೆ.”

ವಿದ್ಯಾರ್ಥಿ, ಇತರರೊಂದಿಗೆ ನಿಂತರು. ಸ್ವಯಂ ಸೇವಕ ಹಿಂದಕ್ಕೆ ಬಂದು, “ಬನ್ನಿ, ಬನ್ನಿ, ಏನೂ ಭಯವಿಲ್ಲ” ಎಂದು ಹೇಳಿದ.

ಇವರುಗಳು ಮುಂದೆ ಹೋದರು. ಆ ಗುಂಪಿನಲ್ಲಿ ಸುಮಾರು ಇನ್ನೂರು ಮುಸಲ್ಮಾನರಿದ್ದರು. ಭವಕು ಪೈಲ್ವಾನನ ಗರಡಿಯ ಯಜಮಾನ ಚುನ್ನಿ ಖಾನರೂ ಅವರಲ್ಲೊಬ್ಬಾತ. ಆತ ಮತ್ತು ಇತರ ನಾಲ್ಕೈದು ಮಂದಿ ವಿದ್ಯಾರ್ಥಿಯವರ ಕೈ ಹಿಡಿದು ಮುತ್ತಿಟ್ಟು ಅವರನ್ನು ಅಪ್ಪಿಕೊಂಡರು.

ಕರೀಮನ ಗಿರಣಿ ಮನೆಯಲ್ಲಿ ಕೆಲ ಹಿಂದುಗಳು ಸಿಕ್ಕಿಬಿದ್ದಿದ್ದಾರೆಂದು ಅವರು ತಿಳಿಸಿದರು. ಚುನ್ನಿಖಾನ್‌ಮತ್ತು ಇತರ ಕೆಲವರು ಮುಸಲ್ಮಾನರು ಗಣೇಶ್‌ಜಿಯವರನ್ನು ಕರೆದುಕೊಂಡು ಆ ಮನೆಗೆ ಹೋದರು. ಕದ ತೆಗೆಸಿ ಅಲ್ಲಿ ಸಿಕ್ಕಿಬಿದ್ದವರನ್ನು ಹೊರಕ್ಕೆ ಕರೆತಂದರು. ಹಲವಾರು ಗಂಡಸರೊಂದಿಗೆ ಇಪ್ಪತ್ನಾಲ್ಕು ಹೆಂಗಸರು ಮಕ್ಕಳು ಇದ್ದರು. ಅವರನ್ನೆಲ್ಲ ಕರೆದುಕೊಂಡು ಬೇರೆ ಎಡೆಗೆ ಹೋದರು ವಿದ್ಯಾರ್ಥಿ.

ಹತ್ತು ನಿಮಿಷಗಳಲ್ಲಿ ಅವರು ಹಿಂತಿರುಗಿದರು. ಮುಂದೆ ಗಂಡಸರು, ಅವರ ಹಿಂದೆ ಹೆಂಗಸರು ಮಕ್ಕಳು, ಅವರ ಹಿಂದೆ ವಿದ್ಯಾರ್ಥಿಯವರು ಬರುತ್ತಿದ್ದರು. ವಿದ್ಯಾರ್ಥಿಯವರ ಹಿಂದೆ ಸುಮಾರು ಇನ್ನೂರು ಮುಸಲ್ಮಾನರ ಗುಂಪು. ಅವರುಗಳು ಮಹಾವೀರ ಮಠದ ಬಳಿಗೆ ಬರುವಾಗ್ಯೆ ಬಾಕರ್‌ಮಂಡಿ ಗಲ್ಲಿಯ ಕಡೆಯಿಂದ ಹತ್ತಿಪ್ಪತ್ತು ದುರಾತ್ಮರು ಭರ್ಜೀ, ದೊಣ್ಣೆಗಳನ್ನು ಆಡಿಸುತ್ತಾ ಬಿರುಸಾಗಿ ಬರುತ್ತಿದ್ದುದು ಕಾಣಿಸಿತು. ಅದನ್ನು ಕಂಡು ಹೆಂಗಸರು ಚೀರಿದರು. ಚುನ್ನಿಖಾನ್‌ಹಾಗೂ ಒಬ್ಬ ಮುಸಲ್ಮಾನ ಡಾಕ್ಟರು ದುರಾತ್ಮರ ಗುಂಪನ್ನು ತಡೆಯಲು ಹೋದರು.

ವಿದ್ಯಾರ್ಥಿಯವರು ಹೆಂಗಸರು, ಮಕ್ಕಳನ್ನು ಲಾರಿಯೊಂದಕ್ಕೆ ಹತ್ತಿಸಿ, “ನೀವು ಹೋಗಿ, ನಾನು ಇವರನ್ನು ತಡೆಯುತ್ತೇನೆ” ಎಂದರು. ಲಾರಿ ಹೊರಟಿತು.

ಎಲ್ಲ ಮತಗಳಲ್ಲಿ ಮತಾಂಧರಿರುವ ಹಾಗೆಯೇ ವಿಶಾಲ ಮನಸ್ಸಿನವರಿರುತ್ತಾರೆ, ನಿಜವಾಗಿ ಧರ್ಮವನ್ನು ತಿಳಿದವರಿರುತ್ತಾರೆ. ಹಿಂದುಗಳನ್ನು ರಕ್ಷಿಸಲು ನೆರವಾದ ಮುಸ್ಲಿಮರು, ಮುಸ್ಲಿಮರನ್ನು ರಕ್ಷಿಸಲು ನೆರವಾದ ಹಿಂದುಗಳು ಇಂತಹ ನಿಜವಾದ ಧರ್ಮಾನುಯಾಯಿಗಳು. ಕೆಲವರು ಹಿಂಸಾಕೃತ್ಯದಲ್ಲಿ ತೊಡಗಿದವರು ಬರುತ್ತಿದ್ದುದನ್ನು ಕಂಡು ಒಬ್ಬ ಮುಸ್ಲಿಂ ಯುವಕ ಓಡಿ ಬಂದು “ವಿದ್ಯಾರ್ಥಿಜೀ, ಓಡಿ, ಓಡಿ, ಅವರು ಇನ್ನೂ ದೂರ ಇದ್ದಾರೆ. ನಿಮ್ಮನ್ನು ಅವರು ಕಡಿದು ಹಾಕುತ್ತಾರೆ” ಎಂದು ಹೇಳಿ ಅವರ ಕೈ ಹಿಡಿದುಕೊಂಡು ಓಡಹತ್ತಿದ. ವಿದ್ಯಾರ್ಥಿ ಕೈ ಕೊಸರಿಕೊಂಡು, “ನಾನು ಎಂದು ಬೆನ್ನು ತೋರಿಸಿದವನಲ್ಲ. ಓಡಿ ಹೋಗಿ ಜೀವ ಉಳಿಸಿಕೊಳ್ಳುವುದಿಲ್ಲ. ನನ್ನನ್ನು ಕೊಲ್ಲುವುದರಿಂದ ಅವರ ರಕ್ತದಾಹ ಹಿಂಗುವುದಿದ್ದರೆ ಹಿಂಗಿಸಿಕೊಳ್ಳಲಿ” ಎಂದು ಶಾಂತರಾಗಿ ನುಡಿದರು.

ಇನ್ನಿಬ್ಬರು ನುಗ್ಗಿ ಬಂದು ವಿದ್ಯಾರ್ಥಿಯವರ ತಂಡದ ಸ್ವಯಂಸೇವಕನೊಬ್ಬನನ್ನು ಇರಿದರು. ಅವನು ಸತ್ತು ಬಿದ್ದ. ಇಪ್ಪತ್ತರ ಇನ್ನೊಬ್ಬ ಸ್ವಯಂಸೇವಕನನ್ನು ಇರಿದರು. ಅವನು ನೆಲಕ್ಕೆ ಬಿದ್ದ. ಹೊರಳಿ ಮತ್ತೆ ಏಳತೊಡಗಿದ. ಆಗ ಉಳಿದವರು ವಿದ್ಯಾರ್ಥಿಯವರ ಮೇಲೆ ಏರಿ ಬಂದರು. ವಿದ್ಯಾರ್ಥಿಯವರು ಅತ್ಯಂತ ಶಾಂತಿ ಮುದ್ರೆಯಿಂದ ಕೊರಳು ಬಗ್ಗಿಸಿ ಹೇಳಿದರು. “ನನ್ನ ರಕ್ತದಿಂದ ಶಾಂತರಾಗುವುದಾದರೆ….”

ಮಾತು ಮುಗಿಯುವಷ್ಟರಲ್ಲಿ ಚೂರಿಯೊಂದು ಬೆನ್ನಿನಲ್ಲಿ ನಾಟಿತು. ದೊಣ್ಣೆಯೊಂದು ತಲೆಯ ಮೇಲೆ ಜಜ್ಜಿತು.

ನೆಲಕ್ಕೆ ಬಿದ್ದ ವಿದ್ಯಾರ್ಥಿಯವರನ್ನು ಭರ್ಜಿಗಳು ಇರಿದವು. ಲಾಠಿಗಳು ಬಡಿದವು. ಅವರ ದೇಹ ಜರ್ಝರಿತವಾಯಿತು. ಜಜ್ಜಿ ಬಜ್ಜಿಯಾಯಿತು.

ಹೀಗೆ ೧೯೩೧ರ ಮಾರ್ಚ್‌೨೫ರಂದು ಗಣೇಶ್‌ಶಂಕರ ವಿದ್ಯಾರ್ಥಿಯವರು ಮತಾಂಧತೆಯ ಮಾರಿಗೆ ಬಲಿಯಾದರು.

ಮತಾಂಧತೆ ಯಾವ ಮತದವರಲ್ಲಿರಲಿ, ಅದು ಕೆಟ್ಟುದೇ. ಎಲ್ಲ ಧರ್ಮಗಳಲ್ಲಿ ಗೌರವವಿಡುವುದು ಯಾವ ಮತದವರಿಗೇ ಆಗಲಿ ಕರ್ತವ್ಯ.

ಮಹಾತ್ಮರ ಶ್ರದ್ಧಾಂಜಲಿ

ಆಗ ಕರಾಜಿಯಲ್ಲಿ ಕಾಂಗ್ರೆಸ್‌ಅಧಿವೇಶನ ನಡೆಯುತ್ತಿತ್ತು. ವಿದ್ಯಾರ್ಥಿಯವರು ಅಲ್ಲಿಗೆ ಬರುತ್ತಾರೆಂದು ಕಾದಿದ್ದ ಮಿತ್ರರಿಗೆ ಅವರ ಭೀಕರ ಹತ್ಯೆಯ ಸುದ್ದಿ ಮುಟ್ಟಿತು. ಇಡೀ ಶಿಬಿರ ದುಃಖದಲ್ಲಿ ಮುಳುಗಿತು. ಮಹಾತ್ಮಾ ಗಾಂಧಿಯವರು ಈ ಸುದ್ದಿ ಕೇಳಿ ಸ್ತಬ್ಧರಾದರು. ಕೆಲವು ದಿನಗಳ ನಂತರ ಅವರು ಒಂದು ಪ್ರಾರ್ಥನಾ ಸಭೆಯನ್ನು ಕುರಿತು.

“ಗಣೇಶ ಶಂಕರರ ಆತ್ಮಾಹುತಿಯು ವ್ಯರ್ಥವಾಯಿತೆಂದು ನಾನು ಎಣಿಸುವುದಿಲ್ಲ. ಅವರ ಆತ್ಮವು ನನ್ನ ಮನದ ಮೇಲೆ ಪರಿಣಾಮ ಬೀರುತ್ತದೆ. ಅವರ ಹೆಸರು ಸ್ಮರಣೆಗೆ ಬಂದಾಗಲೆಲ್ಲ ನನ್ನ ಮನದಲ್ಲಿ ಅವರ ಬಗ್ಗೆ ಈರ್ಷೆ ಹುಟ್ಟುತ್ತದೆ. ಈ ದೇಶದಲ್ಲಿ ಎರಡನೆಯ ಗಣೇಶ ಶಂಕರ ಹುಟ್ಟಿ ಬರಲಿಲ್ಲ; ಅವರ ಪರಂಪರೆ ಅವರೊಂದಿಗೇ  ಕೊನೆಗೊಂಡಿತು. ಅವರು ಇತಿಹಾಸದಲ್ಲಿ ಅಮರವಾಗಿಹೋದರು. ಅವರ ಅಹಿಂಸೆ ಸಿದ್ಧಿಗೊಂಡ ಅಹಿಂಸೆ” ಎಂದು ಪ್ರವಚನ ನೀಡಿ ಗಣೇಶ ಶಂಕರ ವಿದ್ಯಾರ್ಥಿಯವರಿಗೆ ಶ್ರದ್ಧಾಂಜಲಿಯನ್ನರ್ಪಿಸಿದರು.

ದ್ವೇಷದ ಎದುರಿನಲ್ಲಿ ಅಳುಕದೆ, ಅಂಜದೆ ಧೀರರಾಗಿ ಮರಣವನ್ನೆಪ್ಪಿದ ಮಹಾಚೇತನಗಳ ಸಾಲಿಗೆ ಸೇರಿದರು ಗಣೇಶ ಶಂಕರ ವಿದ್ಯಾರ್ಥಿ.