ವಿದ್ಯಾರ್ಥೀಲಭತೇ ವಿದ್ಯಾಂ
ಧನಾರ್ಥೀಲಭತೇ ಧನಮ್‌ |
ಪುತ್ರಾರ್ಥೀಲಭತೇ ಪುತ್ರಾನ್‌
ಮೋಕ್ಷಾರ್ಥೀಲಭತೇ ಗತಿಮ್‌ ||

“ವಿದ್ಯಾರ್ಥಿಯು ವಿದ್ಯೆಯನ್ನೂ, ಹಣ ಅಪೇಕ್ಷಿಸುವವರು ಹಣವನ್ನೂ, ಮಕ್ಕಳನ್ನು ಅಪೇಕ್ಷಿಸುವವರು ಸತ್ಪುತ್ರರನ್ನೂ ಮತ್ತು ಮೋಕ್ಷವನ್ನು ಇಚ್ಛೆಪಡುವವರು ಸದ್ಗತಿಯನ್ನು ಪಡೆಯುತ್ತಾರೆ.”

– ಇದು ನಾರದರು ಗಣೇಶನ ಬಗ್ಗೆ ಹೇಳಿರುವ ಮಾತು.

ವಕ್ರತುಂಡ ಮಹಾಕಾಯ
ಸೂರ್ಯಕೋಟಿ ಸಮಪ್ರಭ |
ನಿರ್ವಿಘ್ನಂ ಕುರುಮೇದೇವ
ಸರ್ವಕಾರ್ಯೇಷು ಸರ್ವದಾ ||

“ವಕ್ರಮುಖದವನೂ, ದಪ್ಪದೇಹದವನೂ, ಕೋಟಿ ಸೂರ್ಯರಿಗೆ ಸಮಾನರಾಗಿ ಬೆಳಗುವವನೂ, ಸ್ವಾಮಿಯೂ ಆದ ಗಣಪತಿಯೆ, ನೀನು ಯಾವಾಗಲೂ ನಮ್ಮ ಕೆಲಸಗಳಿಗೆ ತೊಂದರೆಯಾಗದಂತೆ ಮಾಡು.”

ಗಣೇಶನ ಧ್ಯಾನದ ಶ್ಲೋಕಗಳು ಇಂತಹವು ಹಲವಿವೆ. ಯಾವ ಕೆಲಸವನ್ನು ಪ್ರಾರಂಭಿಸುವಾಗಲೂ, ಮೊದಲು ಇಂತಹ ಶ್ಲೋಕವನ್ನು ಭಕ್ತಿಯಿಂದ ಹೇಳಿ ಗಣೇಶನಿಗೆ ವಂದಿಸುವುದು ನಮ್ಮಲ್ಲಿ ಸಂಪ್ರದಾಯ.

ಗಣೇಶನು ಮಂಗಳಮೂರ್ತಿ. ಅವನು ಮನುಷ್ಯರಿಗೆ ಮಾತ್ರವಲ್ಲ. ದೇವತೆಗಳಿಗೂ ಪೂಜ್ಯ. ‘ಗಣೇಶ’ ಎಂದರೆ ಗಣಗಳಿಗೆ ಒಡೆಯ, ಶಿವನ ಗಣದವರಿಗೆ ಅವನೆ ಯಾಜಮಾನ . ಈ ಕಾರಣದಿಂದಲೆ ಅವನಿಗೆ ಗಣಪತಿ, ಗಣನಾಯಕ ಎಂದೂ ಹೆಸರು.

ಗಣೇಶನ ಸ್ವರೂಪ

ಗಣೇಶನ ರೂಪ ನಮಗೆಲ್ಲ ಚೆನ್ನಾಗಿ ಗೊತ್ತಿರುವುದೆ.  ಆನೆಯ ಮುಖ (ಗಜವದನ), ಮೊರದಂತಹ ಕಿವಿಗಳು (ಶೂರ್ಪಕರ್ಣ ), ದೊಡ್ಡ ಹೊಟ್ಟೆ (ಲಂಬೋದರ), ಮೂರು ಕೈಗಳಲ್ಲಿ ಪಾಶ, ಅಂಕುಶ ಮತ್ತು ಮೋದಕ, ನಾಲ್ಕನೆಯ ಕೈ ಭಕ್ತನಿಗೆ ‘ಹೆದರಬೇಡ’ ಎಂದು ಸೂಚಿಸುತ್ತದೆ (ಚತುರ್ಭುಜ), ಕೆಂಪುಬಣ್ಣದ ಸುಂದರ ದೇಹ; ಇದೇ ಗಣೇಶನ ಆಕೃತಿ. ಇಲಿ ಇವನ ವಾಹನ.

ಗಣಪತಿಯನ್ನು ಪಾರ್ವತಿಯು ತನ್ನ ಮೈ ಮಣ್ಣಿನಿಂದ ಮಾಡಿದಳು ಎಂದು ಕಥೆ ಇದೆ. ಗಣೇಶನ ಹಬ್ಬದಂದು ಮಣ್ಣಿನಿಂದ ಮಾಡಿದ ಮೂರ್ತಿಯನ್ನು ಪೂಜಿಸುತ್ತೇವೆ. ಇದು ಗಣೇಶನ ಆಕೃತಿ. ಇಲಿ ಇವನ ವಾಹನ.

ಗಣಪತಿಯನ್ನು  ಪಾರ್ವತಿಯು ತನ್ನ ಮೈ ಮಣ್ಣಿನಿಂದ ಮಾಡಿದಳು ಎಂದು ಕಥೆ ಇದೆ. ಗಣೇಶನ ಹಬ್ಬದಂದು ಮಣ್ಣಿನಿಂದ ಮಾಡಿದ ಮೂರ್ತಿಯನ್ನು ಪೂಜಿಸುತ್ತೇವೆ. ಇದು ಅವನಿಗೆ ಮಣ್ಣಿನ ಸಂಬಂಧವಿದೆ ಎಂದು ತೋರಿಸುತ್ತದೆ. ಗಣೇಶನಿಗೆ ನಾಲ್ಕು ಕೈಗಳಿವೆ. ಅವನ ಬಲ ಭಾಗದ ಎರಡು ಕೈಗಳಲ್ಲಿ ಒಂದರಲ್ಲಿ ಪಾಶವಿದೆ. ಇದು ಮಹಿಮೆಯಿಂದ ಕೂಡಿದ ಪಾಶ. ಗಣೇಶ ಇದರ ಸಹಾಯದಿಂದ ತನ್ನ ಭಕ್ತರ ಮನಸ್ಸನ್ನು ಆಕರ್ಷಿಸುತ್ತಾನೆ. ಇನ್ನೊಂದು ವರದಹಸ್ತ. ಇದು ಗಣೇಶನನ್ನು ಮೊರೆ ಹೊಕ್ಕವರಿಗೆ ಭಯವಿಲ್ಲ ಎಂಬುದನ್ನು ಸೂಚಿಸುತ್ತದೆ. ಹೀಗೆಯೇ ಎಡಭಾಗದ ಎರಡು ಕೈಗಳಲ್ಲಿ ಒಂದು ಅಂಕುಶವನ್ನು ಹಿಡಿದಿದೆ. ಇದು ನಮ್ಮ ಅಜ್ಞಾನವನ್ನು ನಿವಾರಿಸುವ ಸಂಕೇತ. ಮತ್ತೊಂದು ಕೈಯಲ್ಲಿ ಮೋದಕಗಳಿಂದ ತುಂಬಿದ ಪಾತ್ರೆಯಿದೆ. ಇದು ಗಣೇಶನು ಎಲ್ಲರಿಗೂ ಸಂತೋಷವನ್ನು ಕೊಡುತ್ತಾನೆ ಎಂದು ತೋರಿಸುತ್ತದೆ.

ಗಣಪತಿಯ ದೊಡ್ಡ ತಲೆ, ಅವನು ಮಹಾ ಬುದ್ಧಿಶಾಲಿ ಎಂಬುದನ್ನು ಸೂಚಿಸುತ್ತದೆ. ಅವನ ಕಿವಿಗಳು ಮೊರಗಳಂತೆ ಅಗಲವಾಗಿವೆ. ಮೊರದಲ್ಲಿ ಧಾನ್ಯವನ್ನು ಕೇರುತ್ತಾರೆ, ಅಲ್ಲವೇ? ಆಗ ಏನಾಗುತ್ತದೆ? ಹೊಟ್ಟು, ಕಾಳು ಬೇರೆ ಬೇರೆ ಆಗುತ್ತವೆ. ಹಾಗೆಯೇ ಗಣೇಶನು ಸತ್ಯವನ್ನೂ ಸತ್ಯ ಅಲ್ಲದುದನ್ನೂ ಬೇರೆಬೇರೆ ಮಾಡುತ್ತಾನೆ. ಈ ಅಗಲವಾದ ಕಿವಿಗಳು ಭಕ್ತರ ಪ್ರಾರ್ಥನೆಗಳನ್ನು ಅವನು ಗಮನವಿಟ್ಟು ಕೇಳುತ್ತಾನೆ ಎಂಬುದನ್ನು ತೋರಿಸುತ್ತವೆ ಎಂದೂ ಹೇಳಬಹುದು. ಯಾವಾಗಲೂ ಆಡುವ ಅವನ ಸೊಂಡಿಲು ಸದಾ ಕ್ರಿಯಾಶೀಲನಾಗಿರು ಎಂದು ಬೋಧಿಸಿದರೆ, ಏಕದಂತ ಒಂದೇ ಮನಸ್ಸಿನಿಂದ ಕೆಲಸ ಮಾಡಬೇಕು ಎಂದು ಸೂಚಿಸುತ್ತದೆ. ಅವನ ದೊಡ್ಡ ಹೊಟ್ಟೆಯು ಇಡೀ ಬ್ರಹ್ಮಾಂಡವೇ ಗಣಪತಿಯಲ್ಲಿ ಅಡಗಿದೆ ಎಂಬ ಅರ್ಥವನ್ನು ಕೊಡುತ್ತದೆ.

ಇಲಿ ಗಣೇಶ ವಾಹನವಲ್ಲವೇ? ಕೋಪ, ಅಹಂಕಾರ, ತನಗೇ ಎಲ್ಲ ಬೇಕು ಎಂಬ ಸ್ವಾರ್ಥ – ಇಂತಹ ಕೆಟ್ಟ ಗುಣಗಳನ್ನು ಇಲಿ ಸೂಚಿಸುತ್ತದೆ. ಈ ಕೆಟ್ಟ ಗುಣಗಳನ್ನು ಗಣಪತಿ ತಡೆದಿಡುತ್ತಾನೆ ಎಂದು ಇಲಿಯನ್ನು ಸವಾರಿ ಮಾಡುವುದು ತೋರಿಸುತ್ತದೆ.

ಹೆಸರುಗಳು

ಗಣೇಶನಿಗೆ ಒಂದಲ್ಲ ಎರಡಲ್ಲ, ಅನೇಕ ಹೆಸರುಗಳಿವೆ. ಒಂದೊಂದು ಹೆಸರಿಗೂ ಕಾರಣವೂ ಇದೆ. ಅವನಿಗೆ ಆನೆಯ ಮುಖವಿರುವುದರಿಂದ ಗಜಾನನ, ಶಿವನ ಗಣದವರಿಗೆ ನಾಯಕನಾದುದರಿಂದ ಗಣನಾಯಕ, ಭಕ್ತರಿಗೆ ವರಗಳನ್ನು  ನೀಡುವುದರಿಂದ ವರಸಿದ್ಧಿನಾಯಕ, ವಿದ್ಯೆ-ಬುದ್ಧಿಗಳನ್ನು ಕರುಣಿಸುವುದರಿಂದ ವಿದ್ಯಾಗಣಪತಿ, ಪಾರ್ವತಿಯ ಅನುಗ್ರಹದಿಂದ ಹುಟ್ಟಿದ ಕಾರಣ ಗೌರೀಪುತ್ರ, ಮುಖದಲ್ಲಿ ಒಂದೇ ದಂತವಿರುವುದರಿಂದ ಏಕದಂತ, ವಿಘ್ನಗಳಿಗೆಲ್ಲಾ ಒಡೆಯನಾದುದರಿಂದ ವಿಘ್ನೇಶ್ವರ – ಹೀಗೆ ನಾನಾ ಹೆಸರುಗಳುಂಟು.

ಗಣಪತಿಗೆ ಭಕ್ತರಲ್ಲಿ ತುಂಬ ಪ್ರೀತಿ ಎಂಬ ನಂಬಿಕೆಯೇ ಎಲ್ಲೆಲ್ಲೂ ಅವನ ಪೂಜೆ ನಡೆಯಲು ಕಾರಣ.

ಹೊರದೇಶಗಳಲ್ಲಿ

ಗಣೇಶನ ಪೂಜೆ ಎಷ್ಟೊಂದು ದೇಶಗಳಲ್ಲಿ ನಡೆಯುತ್ತದೆ! ಭಾರತದಾಚೆ ಎಷ್ಟೋ ದೇಶಗಳಲ್ಲಿ ಅವನ ದೇವಲಾಯಗಳಿವೆ.

ನೂರಾರು ವರ್ಷಗಳ ಹಿಂದೆ ನಮ್ಮ ದೇಶದ ಧರ್ಮಪ್ರಚಾರಕರು ಬೇರೆ ದೇಶಗಳಿಗೆ ಹೋದರು. ಆಗ ಪ್ರಥಮ ಆರಾಧ್ಯದೇವತೆಯಾದ ಗಣೇಶನ ವಿಗ್ರಹಗಳನ್ನೂ ತಮ್ಮ ಸಂಗಡ ಕೊಂಡೊಯ್ದರು. ಅವರು ಹೋದ ದೇಶಗಳಲ್ಲಿ ಅವನ ಆಕಾರ, ಶಕ್ತಿ, ಸಂಕೇತಗಳನ್ನು ಪ್ರಚಾರ ಮಾಡಿದರು. ವ್ಯಾಪಾರಿಗಳು ತಮ್ಮ ಪ್ರಯಾಣ ಮತ್ತು ವ್ಯಾಪಾರ ನಿರ್ವಿಘ್ನವಾಗಿ ಸಾಗಲಿ ಎಂಬ ಉದ್ದೇಶದಿಂದ ಗಣೇಶನ ಮೂರ್ತಿಗಳನ್ನು ವಿದೇಶಗಳಿಗೆ ತೆಗೆದುಕೊಂಡು ಹೋಗುತ್ತಿದ್ದರು. ಇಂತಹ ಹಲವು ಕಾರಣಗಳಿಂದಲೆ ವಿದೇಶಿಯರಿಗೆ ಗಣೇಶನ ಪರಿಚಯವಾಗಿರಬಹುದು. ಒಟ್ಟಿನಲ್ಲಿ ನಮ್ಮ ಗಣೇಶ ಹೊರದೇಶಗಳಲ್ಲೂ ಜನಪ್ರಿಯ ದೇವತೆಯಾಗಿದ್ದಾನೆ.

ಕೆಲವು ದೇಶಗಳಲ್ಲಿ ಗಣೇಶನ ಹೆಸರು, ಆಕೃತಿ, ಸಂಕೇತ ಇತ್ಯಾದಿಗಳು ಬೇರೆಬೇರೆ ರೀತಿಯಲ್ಲಿವೆ. ಟಿಬೆಟ್‌, ನೇಪಾಳ, ಸಿಂಹಳ (ಈಗ ಶ್ರೀಲಂಕಾ), ಆಫ್‌ಘಾನಿಸ್ತಾನ. ಚೀನ, ಜಪಾನ್‌, ಇಂಡೋನೇಷ್ಯ, ಕಾಂಬೋಡಿಯ, ಥಾಯ್ಲೆಂಡ್‌ ಮುಂತಾದ ದೇಶಗಳಲ್ಲಿ ಗಣೇಶ ನಾನಾ ರೂಪಗಳಲ್ಲಿ ನೆಲೆಸಿದ್ದಾನೆ. ನಾನಾ ಹೆಸರುಗಳಿಂದ ಪ್ರಸಿದ್ಧನಾಗಿದ್ದಾನೆ. ಬರ್ಮದಲ್ಲಿ ಒಂದು ಕೈಯಲ್ಲಿ ನೆಲವನ್ನು ಮುಟ್ಟಿರುವ ಗಣಪತಿ ವಿಗ್ರಹವಿದೆ . ಕಾಂಬೋಡಿಯದಲ್ಲಿ ಎರಡೇ ಭುಜಗಳಿರುವ ವಿನಾಯಕನ ಮೂರ್ತಿ ಇದೆ. ಚೀನದ ಕುಂಗ್‌ – ಹ್ಸಿಎನ್‌ ಬೌದ್ಧ ವಿಹಾರದಲ್ಲಿರುವ ಗಣಪತಿ ವಿಗ್ರಹದ ಎಡಗೈಯಲ್ಲಿ ಚಿಂತಾಮಣಿ ಇದೆ.

ಪಾರ್ವತಿಯ ಅಕ್ಕರೆಯ ಮಗ

ಈಶ್ವರನ ಲೋಕ ಕೈಲಾಸ. ಈಶ್ವರನ ಹೆಂಡತಿ ಪಾರ್ವತಿ . ಈಶ್ವರನಿಗೆ ನಂದಿ, ಭೃಂಗಿ ಮೊದಲಾದ ಸಾವಿರಾರು ಮಂದಿ ಸೇವಕರಿದ್ದರು.

ಒಂದು ದಿನ ಪಾರ್ವತಿ ಎಂದಿನಂತೆ ಸ್ನಾನಕ್ಕೆ ಹೋಗಬೇಕಾಯಿತು. ಬಾಗಿಲಲ್ಲಿ ನಂದಿ ಎಂಬುವನು ಕಾವಲಿದ್ದ.  ಪಾರ್ವತಿ ಅವನಿಗೆ “ಒಳಗೆ ಯಾರನ್ನೂ ಬಿಡಬೇಡ”  ಎಂದು ಹೇಳಿ ಸ್ನಾನಕ್ಕೆ ಹೋದಳು.

ಸ್ವಲ್ಪ ಹೊತ್ತಿಗೆ ಈಶ್ವರನು ಅಲ್ಲಿಗೆ ಬಂದನು. ನಂದಿ ಆತನಿಗೆ ಪಾರ್ವತಿಯು ಸ್ನಾನ ಮಾಡುತ್ತಿರುವ ವಿಚಾರವನ್ನು  ತಿಳಿಸಿದನು. ಆದರೂ ಈಶ್ವರ ಅವನ ಮಾತಿಗೆ ಕಿವಿ ಗೊಡದೆ ಒಳಗೆ ನಡೆದೇಬಟ್ಟ. ಹೀಗೆ ಅನಿರೀಕ್ಷಿತವಾಗಿ ತನ್ನ ಗಂಡನು ಒಳಗೆ ಬಂದದ್ದು ನೋಡಿ ಪಾರ್ವತಿಗೆ ಅಸಮಾಧಾನವಾಯಿತು.

ಮಾರನೆಯ ದಿನ ಪಾರ್ವತಿಯು ಮತ್ತೆ ಸ್ನಾನಕ್ಕೆ ಹೋಗುವ ಸಮಯವಾಯಿತು. ಆಗ ಆಕೆಯು ತನ್ನ ಮೈಕೊಳೆಯಿಂದ ಒಬ್ಬ ಬಾಲಕನನ್ನು ಸೃಷ್ಟಿಸಿಯೇ ಬಿಟ್ಟಳು. ಮುಂದೆ ಗಜಮುಖನೂ ಗಣೇಶನೂ ಆದದ್ದು ಈ ಬಾಲಕನೇ.

ಬಾಲಗಣೇಶ ಸರ್ವಾಂಗ ಸುಂದರನಾಗಿದ್ದ. ಅಷ್ಟೇ ಬಲಶಾಲಿಯೂ ಆಗಿದ್ದ. ಅವನು ತಾಯಿಯ ಮುಂದೆ ಭಯ-ಭಕ್ತಿಗಳಿಂದ ಬಾಗಿ ನಿಂತು “ಅಮ್ಮ , ಈಗ ನಾನು ಮಾಡಬೇಕಾದ ಕೆಲಸವೇನು?” ಎಂದು ಕೇಳಿದ.

ಸೂರ್ಯ ಚಂದ್ರರಗಿಂತಲೂ ಮಿಗಿಲಾದ ಗಣೇಶನ ಅದ್ಭುತ ತೇಜೋರಾಶಿಯನ್ನು ಕಂಡು ಪಾರ್ವತಿಯು ಹಿರಿಹಿರಿ ಹಿಗ್ಗಿದಳು! ಆಕೆಯು ಅವನನ್ನು ಹತ್ತಿರಕ್ಕೆ ಕರೆದು ವಾತ್ಸಲ್ಯದಿಂದ ಅವನ ತಲೆಯನ್ನು ನೇವರಿಸಿದಳು.  ಮಮತೆಯಿಮದ ಅವನ ಕೆನ್ನೆಗೆ ಮುತ್ತಿಟ್ಟಳು. ಅನಂತರ ಅವನ ಕೈಗೆ ಒಂದು ಬಲವಾದ ದೊಣ್ಣೆಯನ್ನು ಕೊಟ್ಟು, ‘ಮಗು, ನೋಡು, ನಾನೀಗ ಸ್ನಾನಕ್ಕೆ ಹೋಗುತ್ತೇನೆ . ಯಾರು ಬಂದರೂ ನನ್ನ ಅಪ್ಪಣೆ ಇಲ್ಲದೆ ಒಳಕ್ಕೆ ಬಿಡಬೇಡ” ಎಂದು ಹೇಳಿದಳು.

ಈಶ್ವರನನ್ನೂ ತಡೆದ

ಸ್ವಲ್ಪ ಹೊತ್ತಿಗೆ ಈಶ್ವರನೇ ಅಲ್ಲಿಗೆ ಬಂದನು.  ಗಣೇಶ ಆತನನ್ನು ಒಳಗೆ ಬಿಡದೆ ಬಾಗಿಲಲ್ಲೇ ತಡೆದನು.  ಈಶ್ವರನಿಗೆ ಬಹಳ ಕೋಪ ಬಂದಿತು. ಈಶ್ವರನು ಅವನನ್ನು ನೋಡಿಯೂ ಇರಲಿಲ್ಲ. ಅವನು ಆ ಬಾಲಕನನ್ನು ಕುರಿತು “ಎಲೈ ಬಾಲಕ, ಯಾರು ನೀನು? ನಾನು ಕೈಲಾಸಕ್ಕೆ ಯಜಮಾನ, ಪಾರ್ವತಿಯು ನನ್ನ ಹೆಂಡತಿ. ನನ್ನನ್ನೇ ತಡೆದು ನಿಲ್ಲಿಸುತ್ತಿರುವೆಯಾ? ಎಷ್ಟು ರ್ಧೈರ್ಯ ನಿನಗೆ?” ಎಂದು ಗುಡುಗಿದನು.

ಶಿವನ ಮಾತಿಗೆ ಗಣೇಶ ಜಗ್ಗಲಿಲ್ಲ. ಅವನು ಈಶ್ವರನನ್ನು ಕುರಿತು “ನೀನು ಯಾರಾದರೂ ನನಗೆ ಭಯವಿಲ್ಲ. ಈಗ ಅಮ್ಮ ಸ್ನಾನಕ್ಕೆ ಹೋಗಿದ್ದಾಳೆ. ಆಕೆಯ ಅಪ್ಪಣೆಯಿಲ್ಲದೆ ನಾನು ಯಾರನ್ನೂ ಒಳಗೆ ಬಿಡುವಂತಿಲ್ಲ. ಆದುದರಿಂದ ನೀನಿಲ್ಲಿಂದ ಹೊರಟುಹೋಗು” ಎಂದು ಹೇಳಿದನು.

ಅಸಹಾಯ ಶೂರ

ಬಾಲಗಣಪನ ಖಾರವಾದ ಮಾತುಗಳನ್ನು ಕೇಳಿ ಈಶ್ವರನ ಸಿಟ್ಟು ಕೆಂಡಕೆಂಡವಾಯಿತು. ಆಗ ಆತನು ಈ ಪೋರನ ಜತೆ ಏನು ಮಾತು ಎಂದುಕೊಳ್ಳುತ್ತಾ ಬಲವಂತವಾಗಿಯೇ ಒಳಗೆ ಹೆಜ್ಜೆ ಇಟ್ಟನು. ಆಗ ಕೋಪಗೊಂಡ ಗಣೇಶನು ಆತನನ್ನು ಬಲವಾಗಿ ತಳ್ಳಿ ಕೈಯಲ್ಲಿದ್ದ ದೊಣ್ಣೆಯಿಂದ ಪೆಟ್ಟುಕೊಟ್ಟ.

ಇದರಿಂದ ಈಶ್ವರನಿಗೆ ಮತ್ತಷ್ಟು ಅಪಮಾನವಾಯಿತು. ಆದರೂ ಸಹನೆ ತಂದುಕೊಂಡು ಒಂದು ಕ್ಷಣ ಯೋಚಿಸಿದನು. ತನ್ನಂತಹ ಲೋಕನಾಥನು ಈ ಸಾಮಾನ್ಯ ಬಾಲಕನನ್ನು ಶಿಕ್ಷಿಸಿದರೆ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವನ್ನು ಬಿಟ್ಟಂತಾಗುತ್ತದೆ, ಆದುದರಿಂದ ತನ್ನ ಗಣದವರಿಂದಲಾದರೂ ಇವನಿಗೆ ಬುದ್ಧಿ ಹೇಳಿಸಿ ನೋಡೋಣ ಎಂದುಕೊಳ್ಳುತ್ತಾ ಹೊರಟುಹೋದನು.

ಈಶ್ವರನ ಗಣದವರು ಅವನ ಅಪ್ಪಣೆಯಂತೆ ಬಾಲ ಗಣಪನಿಗೆ ಬುದ್ಧಿ ಹೇಳಿ ನೋಡಿದರು. ಅವನಿಗೆ ಈಶ್ವರನ ಶಕ್ತಿ – ಸಾಮರ್ಥ್ಯ, ಮಹಿಮೆ – ಹಿರಿಮೆಗಳನ್ನು ಬಣ್ಣಿಸಿ ಹೇಳಿದರು. “ನೀನು ನಿನ್ನ ತಪ್ಪಿಗಾಗಿ ಈಶ್ವರನಲ್ಲಿ ಕ್ಷಮೆ ಬೇಡು. ಆತನ ಕೃಪೆಗೆ ಪಾತ್ರನಾಗು” ಎಂದು ವಿವೇಕ ಹೇಳಿದರು. ಆದರೆ ಅವರ ಮಾತಿಗೆ ಗಣೇಶನು ಸ್ವಲ್ಪವೂ ಮಣಿಯಲಿಲ್ಲ.

ಈಗ ಈಶ್ವರನ ಗಣದವರಿಗೆ ಸಹನೆ ಮೀರಿತು. ಎಲ್ಲರೂ ಕೆರಳಿದರು. ಕೈಯಲ್ಲಿದ್ದ ಆಯುಧಗಳಿಂದ ಆ ಬಾಲಗಣಪನನ್ನು ತಿವಿಯಲು ಮುಂದಾದರು. ಆದರೆ ಗಣೇಶ ಇಷ್ಟಕ್ಕೆಲ್ಲಾ ಹೆದರುವನೆ? ಅವನು ತನ್ನ ದೊಣ್ಣೆಯನ್ನು ಸಜ್ಜು ಮಾಡಿಕೊಂಡು ಹೋರಾಟಕ್ಕೆ ಸಿದ್ಧನಾದ.

ಬಹಳ ಹೊತ್ತು ನಡೆದ ಹೋರಾಟದಲ್ಲಿ ಗಣೇಶನಿಗೇ ಜಯವಾಯಿತು. ಗಣೇಶನು ಪರಿಘಾಯಧ (ಗಧೆಯಂತಹ ಒಂದು ಶಸ್ತ್ರ) ಎಂಬ ಶಸ್ತ್ರವನ್ನು ಉಪಯೋಗಿಸಿದನು.

ಆದರೆ ಭಯಂಕರ ಪ್ರಹಾರಗಳಿಗೆ ಬೆದರಿ ಈಶ್ವರನ ಸೇವಕರು ಪಲಾಯನ ಮಾಡಿದರು.

ಈ ಸೋಲಿನ ಸಮಾಚಾರ ಈಶ್ವರನಿಗೆ ತಲುಪಿತು. ಮೊದಲೇ ಕೋಪದಿಂದ ಕುದಿಯುತ್ತಿದ್ದು ಆತನ ಕೋಪ ಎಲ್ಲೆ ಮೀರಿತು.  ಈ ಚೋಟುದ್ದ ಬಾಲಕನ ಅದ್ಭುತ ಪರಾಕ್ರಮವನ್ನು ಕಂಡು ಆತನಿಗೆ ವಿಸ್ಮಯವೂ ಆಯಿತು. ಅವನು ದೇವತೆಗಳನ್ನೆಲ್ಲ ಗಣೇಶನ ಮೇಲೆ ಯುದ್ಧಕ್ಕೆ ಕಳುಹಿಸಿದ. ಈ ಬಾಲವೀರನ ಕೈಯಲ್ಲಿ ಅವರೂ ಸೋತರು.

ಕಡೆಗೆ ಶಿವನೇ ಗಣೇಶನಿಗೆ ಬುದ್ಧಿ ಕಲಿಸುತ್ತೇನೆ ಎಂದು ಹೊರಟ. ತನ್ನ ತ್ರಿಶೂಲವನ್ನು ಪ್ರಯೋಗಿಸಿ ಗಣೇಶನ ತಲೆಯನ್ನು ಹಾರಿಸಿಬಿಟ್ಟ.

ಆನೆಯ ತಲೆ

ತನ್ನ ಮುದ್ದು ಮಗನ ಮರಣದ ಸುದ್ದಿಯನ್ನು ತಿಳಿದು ಪಾರ್ವತಿಗೆ ಬಹಳ ದುಃಖವಾಯಿತು. ದೇವತೆಗಳೆಲ್ಲಾ ಒಂದಾಗಿ ತನ್ನ ಮಗನ ಮೇಲೆ ನಡೆಸಿದ ದಾಳಿ-ದಬ್ಬಾಳಿಕೆಯನ್ನು ನೆನೆದು ಆಕೆಯ ರೋಷ ಉಕ್ಕಿತು. ಕೂಡಲೇ ಆಕೆಯು ತನ್ನ ಮಾಯೆಯಿಂದ ಲಂಬ ಶೀರ್ಷೆ, ಕುಬ್ಜಕಾ, ಖಂಜಾ, ಕರಾಲಿ ಮೊದಲಾದ ಸಾವಿರಾರು ಶಕ್ತಿ ದೇವತೆಗಳನ್ನು ಸೃಷ್ಟಿಸಿದಳು.  ಅನಂತರ ತನ್ನ ಮಗನ ವೈರಿಗಲಾದ ದೇವತೆಗಳನ್ನೆಲ್ಲಾ ನಾಶಮಾಡಿ ಬನ್ನಿ ಎಂದು ಅವರಿಗೆ ಅಪ್ಪಣೆ ಮಾಡಿದಳು.

ದೇವಿಯ ಅಪ್ಪಣೆಯಂತೆ, ಆ ಶಕ್ತಿದೇವತೆಗಳು ಕೈಗಳಲ್ಲಿ ಭಯಂಕರ ಆಯುಧಗಳನ್ನು ಹಿಡಿದು ದೇವತೆಗಳ ಮೇಲೆ ಬಿದ್ದರು. ಕೈಗೆ ಸಿಕ್ಕಿದವರನ್ನು ತರಿದುಹಾಕಿದರು. ಕೆಲವರನ್ನು ಸೀಳಿಹಾಕಿದರು. ಇವರ ಹಾವಳಿಯನ್ನು ತಾಳಲಾರದೆ ದೇವತಾಸಮೂಹ ತಲ್ಲಣಿಸಿಹೋಯಿತು.

‘ಮಗು ಗಣೇಶ, ಇಂದಿನಿಂದ ನಮ್ಮ ಗಣಗಳಿಗೆಲ್ಲ ನೀನೇ ನಾಯಕನಾಗಿರು.’

 ಆಗ ನಾರದ ಮತ್ತು ಬ್ರಹ್ಮ, ವಿಷ್ಣು, ಇಂದ್ರ ಮೊದಲಾದ ದೇವತೆಗಳು ಪಾರ್ವತಿಯ ಬಳಿಗೆ ಬಂದು, ಭಯ-ಭಕ್ತಿಗಳಿಂದ ಆಕೆಗೆ ಕೈಮುಗಿದು, “ಅಮ್ಮ ಪಾರ್ವತಿ, ಶಾಂತಳಾಗು, ನಿನ್ನ ಶಕ್ತಿದೇವತೆಗಳನ್ನು ಮೊದಲು ಹಿಂದಕ್ಕೆ ಕರೆಸಿಕೊ. ನಾಶವಾಗುತ್ತಿರುವ ದೇವತೆಗಳನ್ನು ರಕ್ಷಿಸು” ಎಂದು ಪರಿಪರಿಯಾಗಿ ಬೇಡಿದರು. ಆಗ ಪಾರ್ವತಿಯು, “ನನ್ನ ಮುದ್ದು ಮಗ ಹೋಗಿಬಿಟ್ಟನಲ್ಲ! ಅವನನ್ನು ಬದುಕಿಸಿಕೊಟ್ಟರೆ ಶಕ್ತಿದೇವತೆಗಳನ್ನು ಹಿಂದಕ್ಕೆ ಕರೆಯುತ್ತೇನೆ” ಎಂದಳು.

ಆಗ ನಾರದ, ಬ್ರಹ್ಮ ಮೊದಲಾದವರು ಈಶ್ವರನ ಬಳಿಗೆ ಹೋದರು.  ಆತನ ಕೋಪವನ್ನು ಶಾಂತಗೊಳಿಸಿ ಸಮಾಧಾನ ಹೇಳಿದರು. “ನೀನು ದಯವಿಟ್ಟು ಗೌರಿಪುತ್ರನನ್ನು ಬದುಕಿಸಿಕೊಡು; ಇಲ್ಲವಾದರೆ ಈ ಪ್ರಳಯ ನಿಲ್ಲುವುದಿಲ್ಲ. ದೇವಲೋಕ ಉಳಿಯುವುದೂ ಇಲ್ಲ” ಎಂದು ಭಕ್ತಿಯಿಂದ ಬೇಡಿಕೊಂಡರು. ಆಗ ಈಶ್ವರನ ಕೋಪ ತಣ್ಣಗಾಯಿತು. ಕೂಡಲೇ ಆತನು ಕೆಲವು ದೇವತೆಗಳನ್ನು ಕರೆದು, “ಉತ್ತರ ದಿಕ್ಕಿಗೆ ತಲೆಯಿಟ್ಟು ಯಾರಾದರೂ ಮಲಗಿದ್ದರೆ ಅಂಥವರ ತಲೆಯನ್ನು ಕತ್ತರಿಸಿ ತನ್ನಿ” ಎಂದು ಅಪ್ಪಣೆ ಮಾಡಿದನು. ಕೂಡಲೇ ದೇವತೆಗಳು ಹೋಗಿ ಉತ್ತರ ದಿಕ್ಕಿಗೆ ತಲೆಹಾಕಿ ಮಲಗಿದ್ದ ಒಂದು ಆನೆಯ ತಲೆಯನ್ನು ಕತ್ತರಿಸಿ ತಂದರು. ಆಗ ಶಿವನು ಆ ಆನೆಯ ತಲೆಯನ್ನೇ ಗಣೇಶನ ಮುಂದಕ್ಕೆ ಜೋಡಿಸಿ ಜೀವದಾನ ಮಾಡಿದನು.

ಮೊದಲನೆಯ ಪೂಜೆ ನಿನಗೆ ಸಲ್ಲಲಿ

ಮಗ ಬದುಕಿದ್ದನ್ನು ಕಂಡು ಪಾರ್ವತಿಗಾದ ಸಂತೋಷ ಅಷ್ಟಿಷ್ಟಲ್ಲ. ಆಕೆಯು ತನ್ನ ಮಗನನ್ನು ಬಾಚಿಕೊಂಡು ಮುದ್ದಾಡಿದಳು. ತನ್ನ ಶಕ್ತಿದೇವತೆಗಳನ್ನು ಹಿಂದಕ್ಕೆ ಕರೆಸಿಕೊಂಡು ದೇವತೆಗಳನ್ನು ಕಾಪಾಡಿದಳು.

ಆ ಬಳಿಕ ಪಾರ್ವತಿದೇವಿಯು, ಈಶ್ವರನಿಗೂ ಅಲ್ಲಿ ನೆರೆದಿದ್ದ ದೇವಸಮೂಹಕ್ಕೂ ಗಣೇಶ ಹೇಗೆ ಹುಟ್ಟಿದ ಎಂಬುದನ್ನು ವಿವರಿಸಿ ಹೇಳಿದಳು. ಆಗ ಈಶ್ವರನು ಬಾಲಗಣೇಶನನ್ನು ಪುತ್ರವಾತ್ಸಲ್ಯದಿಂದ ಆಲಂಗಿಸಿಕೊಂಡು ಸಂತೋಷಪಟ್ಟನು. ಇದೇ ಸಂದರ್ಭದಲ್ಲಿ ಆತನು ಎಲ್ಲ ದೇವತೆಗಳ ಅಭಿಪ್ರಾಯದಂತೆ ಗಣೇಶನಿಗೆ ಗಣಾಧ್ಯಕ್ಷನ ಪದವಿಯನ್ನು ಕೊಟ್ಟು ಆಶೀರ್ವದಿಸಿದನು. “ಮಗು ಗಣೇಶ,  ಇಂದಿನಿಂದ ನಮ್ಮ ಗಣಕ್ಕೆಲ್ಲಾ ನೀನೇ ನಾಯಕನಾಗಿರು.  ವಿಘ್ನಗಳಿಗೆಲ್ಲಾ ಒಡೆಯನಾಗಿರು. ಇಂದಿನಿಂದ ದೇವತೆಗಳೂ,  ಮಾನವರೂ ತಮ್ಮ ಮೊದಲ ಪೂಜೆಯನ್ನು ನಿನಗೆ ಸಲ್ಲಿಸಲಿ. ನಿನ್ನನ್ನು ಭಯ-ಭಕ್ತಿಗಳಿಂದ ಪೂಜಿಸಿದವರಿಗೆ ಯಾವ ಕಷ್ಟವೂ ಬಾರದಿರಲಿ. ಪ್ರತಿ ವರ್ಷವೂ ಭಾದ್ರಪದ ಶುದ್ಧ ಚೌತಿಯ ದಿನ ನಿನ್ನನ್ನು ವಿಶೇಷ ರೀತಿಯಲ್ಲಿ  ಪೂಜಿಸುವ ದೇವತೆಗಳು, ಮಾನವರು ಧನ್ಯರಾಗಲಿ” ಎಂದು ಹರಸಿದನು.

ಬ್ರಹ್ಮಾಂಡವನ್ನೆ ಸುತ್ತಿ ಬಂದಹೇಗೆ?

ಗಣೇಶನನ್ನು ಕುರಿತು ಲೆಕ್ಕವಿಲ್ಲದಷ್ಟು ಕಥೆಗಳಿವೆ.

ಗಣೇಶನಿಗೆ ಮದುವೆಯಾಯಿತು ಎಂದು ಒಂದು ಕಥೆ. ಇದು ಸ್ವಾರಸ್ಯವಾಗಿದೆ.

ಈಶ್ವರ ಪಾರ್ವತಿಯರ ಮಕ್ಕಳಾದ ಷಣ್ಮುಖ ಮತ್ತು ಗಣೇಶ ಬೆಳೆದು ದೊಡ್ಡವರಾದರು. ತಂದೆ ತಾಯಿ ಮಕ್ಕಳಿಗೆ ಮದುವೆ ಮಾಡಬೇಕು ಎಂದು ಆಲೋಚಿಸುತ್ತಲೇ ಇದ್ದರು.

ಒಂದು ದಿನ ಈಶ್ವರ ಪಾರ್ವತಿ ತಮ್ಮ ಮಕ್ಕಳಿಗೆ ತಮ್ಮ ಆಲೋಚನೆಯನ್ನು ತಿಳಿಸಿದರು. “ಮಕ್ಕಳೇ, ನೀವೀಗ ಈ ಬ್ರಹ್ಮಾಂಡವನ್ನು ಒಂದು ಸಲ ಸುತ್ತಿ ಬರಬೇಕು. ಈ ಕೆಲಸದಲ್ಲಿ ಮೊದಲು ಜಯಶಾಲಿಯಾಗಿ ಬಂದವರಿಗೆ ಮೊದಲು ಮದುವೆ ಮಾಡುತ್ತೇವೆ, ಆಗಬಹುದೆ?” ಎಂದು ಕೇಳಿದರು. ಅದಕ್ಕೆ ಮಕ್ಕಳಿಬ್ಬರೂ ಕೂಡಲೇ ಒಪ್ಪಿದರು.

ಷಣ್ಮುಖನು ಈ ಸ್ಪರ್ಧೆಯಲ್ಲಿ ತಾನೇ ಜಯಶಾಲಿಯಾಗಬೇಕೆಂಬ ಆತುರದಿಂದ, ತನ್ನ ವಾಹನವಾದ ನವಿಲನ್ನೇರಿ ಆಕಾಶಮಾರ್ಗವಾಗಿ ಹೊರಟೇಬಿಟ್ಟ. ಆದರೆ ದೊಡ್ಡ ಹೊಟ್ಟೆಯ ಗಣೇಶನಿಗೆ ಈ ಕೆಲಸ ಕಷ್ಟವಾಗಿ ಕಂಡಿತು. ಆದರೂ ಸ್ಪರ್ಧೆಯಲ್ಲಿ ಗೆಲ್ಲುವ ಆಸೆ ಇತ್ತು ಹಾಗಾದರೆ ಈಗೇನು ಮಾಡಲಿ ಎಂದು ಗಣೇಶ ಒಂದೆರಡು ಕ್ಷಣ ಯೋಚಿಸಿದ. ಅಷ್ಟರಲ್ಲಿ ಅವನಿಗೊಂದು ಉಪಾಯ ಹೊಳೆಯಿತು. ಚಟ್ಟನೆ ಅಲ್ಲಿಂದ ಎದ್ದುಹೋಗಿ ಸ್ನಾನ ಮಾಡಿದನು. ಅನಂತರ ಅತ್ಯಂತ ಭಯ-ಭಕ್ತಿಗಳಿಂದ ತನ್ನ ತಂದೆ-ತಾಯಿಯರ ಸುತ್ತಲೂ ಏಳು ಸಲ ಸುತ್ತಿ ಪ್ರದಕ್ಷಿಣೆ ನಮಸ್ಕಾರ ಮಾಡಿದನು.

ಶಿವ-ಪಾರ್ವತಿಯರಿಗೆ ಅವನ ವರ್ತನೆಯನ್ನು ನೋಡಿ ಆಶ್ಚರ್ಯವಾಯಿತು. ಅವರಿಬ್ಬರೂ ಮುಗುಳು ನಗೆ ನಗುತ್ತಾ ಒಬ್ಬರ ಮುಖ ಒಬ್ಬರು ನೋಡಿದರು. ಅನಂತರ ಶಿವನು ಗಣೇಶನನ್ನು ತನ್ನ ಸಮೀಪಕ್ಕೆ ಕರೆದು, “ಮಗು ಗಣೇಶ, ನೀನು ಬ್ರಹ್ಮಾಂಡವನ್ನು ಸುತ್ತಿ ಬರಲು ಹೋಗುವುದಿಲ್ಲವೆ?” ಎಂದು ಕೇಳಿದನು.

ಅದಕ್ಕೆ ಬುದ್ಧಿಯಲ್ಲೂ, ಮಾತಿನಲ್ಲೂ ಚತುರನಾದ ಗಣೇಶನು “ತಂದೆಯೇ, ಸಮಸ್ತ ಲೋಕಗಳೂ ಮಾತಾ-ಪಿತರಾದ ನಿಮ್ಮಿಬ್ಬರಲ್ಲೇ ಅಡಗಿವೆ. ಇದಕ್ಕೆ ವೇದ-ಪುರಾಣಗಳೇ ಸಾಕ್ಷಿ. ನಾನೀಗ ನಿಮ್ಮನ್ನು ಸುತ್ತಿ ಬ್ರಹ್ಮಾಂಡವನ್ನು ಸುತ್ತುವ ಕೆಲಸವನ್ನೇ ಮಾಡಿದಂತಾಗಿದೆ. ಆದುದರಿಂದ ನಾನು ಷಣ್ಮುಖನನ್ನು ಸೋಲಿಸಿದಂತೆ ಆಯಿತು” ಎಂದು ವಾದಿಸಿದನು.

ಗಣೇಶನ ಮಾತಿನಲ್ಲಿ ಸತ್ಯವಿತ್ತು. ಅವನ ಸೂಕ್ಷ್ಮ ಜ್ಞಾನವನ್ನು ಕಂಡು ಈಶ್ವರ ಪಾರ್ವತಿಗೆ ಬಹಳ ಸಂತೋಷವಾಯಿತು. ಅವರು ವಿಶ್ವಬ್ರಹ್ಮನ ಮಕ್ಕಳಾದ ಸಿದ್ಧಿ-ಬುದ್ಧಿ ಎಂಬ ಇಬ್ಬರು ಸುಂದರ ಕನ್ಯೆಯರನ್ನು ತಂದು ಗಣೇಶನಿಗೆ ಮದುವೆ ಮಾಡಿದರು.

ಮುಂದೆ ಅವನಿಗೆ ಕ್ಷೇಮ ಮತ್ತು ಲಾಭ ಎಂಬ ಇಬ್ಬರು ಗಂಡುಮಕ್ಕಳೂ ಆದರು ಎಂದು ಕೆಲವು ಕಥೆಗಳಲ್ಲಿ ಹೇಳಿದೆ.

ತಾಳಸುರನ ಗರ್ವಭಂಗ

ದಯಾಳುವಾದ ಗಣೇಶನು ತಾಳಾಸುರನನ್ನು ಕ್ಷಮಿಸಿದ.

ದೇವತೆಗಳಿಗೆ ಆಗಾಗ ರಾಕ್ಷಸರು ತೊಂದರೆ ಕೊಡುತ್ತಲೇ ಇದ್ದರು. ಕೆಲವು ಮಂದಿ ರಾಕ್ಷಸರು ಉಗ್ರವಾದ ತಪಸ್ಸು ಮಾಡಿ ಹರಿ, ಹರ, ಬ್ರಹ್ಮರಿಂದ ಬೇಕಾದ ವರಗಳನ್ನು ಪಡೆದು ಬಲಿಷ್ಠರಾಗುತ್ತಿದ್ದರು. ವರಬಲದಿಂದ ಗರ್ವಿತರಾಗಿ ಮೆರೆಯುತ್ತಿದ್ದರು. ಭೂ ಲೋಕದ ಮಾನವರನ್ನೂ ಸುರಲೋಕದ ದೇವತೆಗಳನ್ನೂ ಹಿಡಿದು ಹಿಂಸಿಸುವುದೇ ಅವರಿಗೊಂದು ಆನಂದದ ಕೆಲಸವಾಗಿತ್ತು. ಇಂತಹ ದುಷ್ಟ ದಾನವರಲ್ಲಿ ತಾಳಾಸರುನೂ ಒಬ್ಬನಾಗಿದ್ದ. ಒಂದು ದಿನ ಗಣೇಶನಿಂದ ಅವನ ಗರ್ವ ಮುರಿಯಿತು. ಆ ಕಥೆ ಹೀಗಿದೆ-

ತಾಳಾಸುರ ರಮಣಕ ಎಂಬ ಪಟ್ಟಣದ ರಾಜ. ಅವನು ಬಹಳ ಬಲಾಢ್ಯ, ಕೆಟ್ಟವನು. ಬಹು ಗರ್ವ, ಬಹು ಹಠದ ಸ್ವಭಾವ. ಅವನ ಹೆಸರು ಕೇಳಿದರೆ ಸಾಕು, ದೇವತೆಗಳೆಲ್ಲಾ ಹೆದರುತ್ತಿದ್ದರು.

ಈ ತಾಳಾಸುರನಿಗೆ ಬಹಳ ಕಾಲದಿಂದಲೂ ದೇವೇಂದ್ರನ ಮೇಲೆ ಕಣ್ಣಿತ್ತು. ಯುದ್ಧದಲ್ಲಿ ದೇವೇಂದ್ರನನ್ನು ಗೆಲ್ಲಬೇಕು, ಅವನ ಸಕಲ ವೈಭವಗಳನ್ನೂ ತನ್ನ ವಶ ಮಾಡಿಕೊಳ್ಳಬೇಕು ಎಂಬುದೇ ಅವನ ಗುರಿ.

ಒಂದು ದಿನ ಅವನ ಇಷ್ಟದಂತೆ ನಡೆದೇಹೋಯಿತು.

ಇಂದ್ರನ ಸಭೆ ಸಂಭ್ರಮದಿಂದ ನಡೆಯುತ್ತಿದೆ.

ಸಭಾಮಂದಿರವೆಲ್ಲ ಇಂಪಾದ ಸಂಗೀತದಿಂದ ತುಂಬಿ ಹೋಗಿದೆ. ಅಪ್ಸರೆಯರು ನೃತ್ಯ ಮಾಡುತ್ತಿದ್ದಾರೆ.

ಇಂದ್ರನೂ ದೇವತೆಗಳೂ ಸಂಗೀತ-ನೃತ್ಯಗಳಲ್ಲಿ ಮೈಮರೆತಿದ್ದಾರೆ. ಇದೇ ಸರಿಯಾದ ಸಮಯ ಎಂದು ತಾಳಾಸುರನು ತನ್ನ ರಾಕ್ಷಸಸೇನೆಯನ್ನು ದೇವಲೋಕಕ್ಕೆ ನುಗ್ಗಿಸಿದ, ಇಂದ್ರನ ಅರಮನೆಯ ಮೇಲೆಯೇ ದಾಳಿ ಮಾಡಿದ.

ಇದರಿಂದ ದೇವಸಭೆಯಲ್ಲಿ ಹಾಹಾಕಾರವೆದ್ದಿತು! ದೇವತೆಗಳು ಯುದ್ಧಕ್ಕೆ ಸಿದ್ಧವಾಗಿರಲಿಲ್ಲ. ಕಡೆಗೆ ಯುದ್ಧದಲ್ಲಿ ತಾಳಾಸುರನಿಗೇ ಜಯವಾಯಿತು. ಸೋತುಹೋದ ದೇವೇಂದ್ರ ಮತ್ತು ದೇವತೆಗಳು ಬೇಟೆಗಾರರನ್ನು ಕಂಡ ಜಿಂಕೆಗಳಂತೆ ಹೆದರಿ ಓಡಿದರು.

ಯುದ್ಧದನಂತರ ದೇವಸಭೆಯ ವೈಭವಗಳಿಗೆಲ್ಲಾ ತಾಳಾಸುರನೇ ಯಜಮಾನನಾದ. ಕಲ್ಪವೃಕ್ಷ, ಕಾಮಧೇನು, ಐರಾವತ ಮುಂತಾದ ಅಪೂರ್ವ ಪದಾರ್ಥಗಳೆಲ್ಲಾ ಅವನ ವಶವಾದವು.

ಇತ್ತ ತನ್ನ ಸರ್ವಸ್ವವನ್ನೂ ಕಳೆದುಕೊಂಡು ಕಂಗಾಲಾಗಿದ್ದ ದೇವೇಂದ್ರನು ತಾಳಾಸುರನಿಗೆ ಹೆದರಿ ಅವನ ಕಣ್ಣಿಗೆ ಬೀಳದಂತೆ ಅಲ್ಲಿ ಇಲ್ಲಿ ಇದ್ದುಕೊಂಡು ಕಾಲ ಹಾಕ ತೊಡಗಿದನು. ಏನಾದರೂ ಮಾಡಿ ಆ ದುಷ್ಟ ರಾಕ್ಷಸನಿಂದ ತನ್ನ ವೈಭವಗಳನ್ನು ಪುನಃ ಪಡೆಯಬೇಕೆಂದು ಪ್ರಯತ್ನಿಸತೊಡಗಿದನು.

ಬ್ರಹ್ಮನ ವರ

ಒಂದು ಸಲ ತಾಳಾಸುರನು ಬ್ರಹ್ಮನನ್ನು ಕುರಿತು ಉಗ್ರವಾದ ತಪಸ್ಸು ಮಾಡಿದನು. ಅವನ ಕಠಿಣ ತಪಸ್ಸಿಗೆ ಮೆಚ್ಚಿದ ಬ್ರಹ್ಮನು ಅವನಿಗೆ ಪ್ರತ್ಯಕ್ಷನಾಗಿ, “ತಾಳಾಸುರ, ನಾನು ನಿನ್ನ ಉಗ್ರ ತಪಸ್ಸಿಗೆ ಮೆಚ್ಚಿ ಬಂದಿದ್ದೇನೆ. ನಿನಗೇನು ಬೇಕೊ ಬೇಡಿಕೊ” ಎಂದನು . ಅದಕ್ಕೆ ತಾಳಾಸುರನು “ದೇವ , ನನಗೆ ಯಾರಿಂದಲೂ ಸಾವು ಬಾರದಂತೆ ವರ ನೀಡು” ಎಂದು ಕೇಳಿದನು. ಆಗ ಬ್ರಹ್ಮದೇವನು ಒಂದು ಕ್ಷಣ ಯೋಚಿಸಿ, “ಭಕ್ತ, ನೀನು ಇಷ್ಟು ಕಟ್ಟುನಿಟ್ಟಾದ ವರವನ್ನು ಬೇಡಿದರೆ ಹೇಗೆ? ಪ್ರಾಣಭಯದಿಂದ ನೀನು ಯಾರಿಗಾದರೂ ಅಂಜಲೇ ಬೇಕು; ಅಂತಹ ವರವನ್ನು ಬೇಡಿಕೊ . ಹೇಳು, ದೇವ ಜಾತಿ , ಮಾನವ ಜಾತಿ, ಪಶು ಈ ಜಾತಿ ಮತ್ತು ಪಕ್ಷಿ ಜಾತಿ ಈ ನಾಲ್ಕು ಜಾತಿಗಳಲ್ಲಿ ಯಾವ ಜಾತಿಯಿಂದ ನಿನಗೆ ಪ್ರಾಣಭಯವಿರಬೇಕು?” ಎಂದು ಕೇಳಿದನು.

ತಾಳಾಸುರ ಬ್ರಹ್ಮದೇವನ ಪ್ರಶ್ನೆಯನ್ನು ಒಂದೆರಡು ಕ್ಷಣ ಪರಿಶೀಲಿಸಿದ.  ಅನಂತರ ಆತನನ್ನು ಕುರಿತು , “ತಂದೆಯೆ, ದೇವತೆಗಳನ್ನೂ ಮಾನವರನ್ನೂ ದರ್ಪದಿಂದ ಆಳಬೇಕೆಂಬುದೇ ನನ್ನ ಆಸೆ. ಆದುದರಿಂದ ನನಗೆ ಅವರಿಂದ ಯಾವ ಭಯವೂ ಇಲ್ಲದಿರಲಿ. ಆದರೆ ಪಶು ಜಾತಿಯಲ್ಲಿ ಬಲಿಷ್ಠ ಪ್ರಾಣಿಯಾದ ಆನೆಯಿಂದ ಮಾತ್ರ ನನಗೆ ಪ್ರಾಣಭಯವಿರಲಿ”  ಎಂದು ಬೇಡಿದನು. ಬ್ರಹ್ಮನು ಆ ವರವನ್ನು ನೀಡಿ ಮಾಯವಾದನು.

ಮೊದಲೇ ದುಷ್ಟನೂ ದುರಾತ್ಮನೂ ಆದ ತಾಳಾಸುರನಿಗೆ, ಈಗ ಬ್ರಹ್ಮನ ವರಬಲವೂ ಬಂದದ್ದರಿಂದ ಅವನ ದರ್ಪ-ದುರಹಂಕಾರಕ್ಕೆ ಮಿತಿಯೇ ಇಲ್ಲದಂತಾಯಿತು. ಇಂದ್ರಾದಿ ದೇವತೆಗಳು ಅವನ ಕಣ್ಣಿಗೆ ಬೀಳದಂತೆ ಅಡಗಿಕೊಂಡಿದ್ದರೂ, ಅವರನ್ನು ಹುಡುಕಿ ಹುಡುಕಿ ಹಿಂಸಿಸತೊಡಗಿದನು.

ಗಣೇಶನು ಗೆಲ್ಲಬಲ್ಲ

ತಾಳಾಸುರನ ಕಾಟವನ್ನು ತಾಳಲಾರದೆ ತಳಮಳಿಸುತ್ತಿದ್ದ ದೇವೇಂದ್ರನು ಒಂದು ದಿನ ತನ್ನ ದೇವತೆಗಳನ್ನೆಲ್ಲಾ ಒಟ್ಟುಮಾಡಿಕೊಂಡು ಬ್ರಹ್ಮನ ಬಳಿಗೆ ಹೋದನು. ಅಲ್ಲಿ ಆತನಿಗೆ ತಾಳಾಸುರನಿಂದ ನಡೆಯುತ್ತಿದ್ದ ಅನ್ಯಾಯ ಅಧರ್ಮಗಳನ್ನು ಬಣ್ಣಿಸಿ ಹೇಳಿದನು. ಅನಂತರ ಅವನನ್ನು ನಾಶಮಾಡುವ ಉಪಾಯವನ್ನೂ ಕೇಳಿದನು. ಅದಕ್ಕೆ ಬ್ರಹ್ಮನು ದೇವೇಂದ್ರನನ್ನು ಕುರಿತು ‘ದೇವರಾಜ, ಆ ದುಷ್ಟರಾಕ್ಷಸನಿಗೆ ನನ್ನ ವರಬಲವಿದೆ. ಆನೆಯಿಲ್ಲದೆ ಮತ್ತಾರೂ ಅವನನ್ನು ಜಯಿಸಲಾರರು.  ಆದುದರಿಂದ ನೀನು ಈಶ್ವರನ ಬಳಿಗೆ ಹೋದರೆ, ಆತನು ತನ್ನ ಮಗನಾದ ಗಣೇಶನ ಮೂಲಕ ನಿನಗೆ ಸಹಾಯ ಮಾಡಬಹುದು. ಗಣೇಶನಿಗೆ ಆನೆಯ ಮುಖವಿರುವುದರಿಂದ ಅವನು ಆ ರಾಕ್ಷಸನನ್ನು ಸುಲಭವಾಗಿ ಗೆಲ್ಲಬಲ್ಲ” ಎಂದು ಸಲಹೆ ಮಾಡಿದು.

ಬ್ರಹ್ಮದೇವನ ಸಲಹೆಯಂತೆ ದೇವೇಂದ್ರನು ಕೈಲಾಸಕ್ಕೆ ಹೋದನು. ಅಲ್ಲಿ ಈಶ್ವರನಿಗೆ ತಾಳಾಸುರನ ವೃತ್ತಾಂತವನ್ನೂ ಬ್ರಹ್ಮದೇವನ ಸಲಹೆಯನ್ನೂ ವಿವರಿಸಿ ಹೇಳಿದನು.“ಪರಮೇಶ್ವರ,  ನಮ್ಮನ್ನು ಈ ಕಷ್ಟದಿಂದ ಆದಷ್ಟು ಬೇಗನೆ ಪಾರುಮಾಡು!” ಎಂದು ಪ್ರಾರ್ಥಿಸಿಕೊಂಡನು.

ಗಣೇಶನಿಂದ ಗರ್ವಭಂಗ

ಇಂದ್ರಾದಿ ದೇವತೆಗಳ ದುಸ್ಥಿತಿಯನ್ನು ಕಂಡು,  ಈಶ್ವರನಿಗೆ ಅವರ ಮೇಲೆ ಕನಿಕರ ಉಂಟಾಯಿತು. ಕೂಡಲೇ ಆತನು ಗಣೇಶನನ್ನು ಕರೆದು, “ಮಗು ಗಣೇಶ, ನೀನು ಈ ಕೂಡಲೇ ರಮಣಕ ಪಟ್ಟಣಕ್ಕೆ ಹೋಗಿ ದುರಾತ್ಮನೂ ಸುರವೈರಿಯೂ ಆದ ತಾಳಾಸುರನನ್ನು ಜಯಿಸಿ ಬಾ” ಎಂದು ಅಪ್ಪಣೆ ಮಾಡಿದನು.

ಸರ್ವಶಕ್ತನೂ, ರಾಕ್ಷಸವೈರಿಯೂ ಆದ ಗಣೇಶನು, ತಂದೆಯ ಅಪ್ಪಣೆಯಂತೆ ರಮಣಕ ನಗರಕ್ಕೆ ನುಗ್ಗಿದನು. ಅಲ್ಲಿ ತಾಳಾಸುರನ ವೈಭವಗಳನ್ನೆಲ್ಲಾ ನಾಶಮಾಡಿದನು. ಅವನ ಆಗಾಧವಾದ ರಾಕ್ಷಸ ಸೈನ್ಯವನ್ನೆಲ್ಲ ನಿರ್ಣಾಮ ಮಾಡಿದನು . ಅನಂತರ ತಾಳಾಸುರನನ್ನು ಕೆಣಕಿ ಅವನೊಡನೆ ಘೋರವಾಗಿ ಯುದ್ಧ ಮಾಡಿದನು. ರಣಕಲಿಯಂತಿದ್ದ ತಾಳಾಸುರನೂ ಸಹ ಗಣೇಶನೊಡನೆ ವೀಋಆವೇಶದಿಂದ ಕದನ ಮಾಡಿದನು. ಏನಾದರೂ ಗಣೇಶನ ಮುಂದೆ ಅವನ ಆಟವೇನೂ ಸಾಗಲಿಲ್ಲ. ಕಡೆಗೆ ಗಣೇಶನು ತನ್ನ ಸೊಂಡಿಲಿನಿಂದಲೇ ಅವನನ್ನು ಅನಾಮತ್ತಾಗಿ ಎತ್ತಿ ನೆಲಕ್ಕಪ್ಪಳಿಸದನು. ಆ ಬಿರುಸು ಏಟಿಗೆ ತತ್ತರಿಸಿದ ತಾಳಾಸುರನು ರಕ್ತಕಾರುತ್ತಾ ಎಚ್ಚರ ತಪ್ಪಿಬಿದ್ದನು. ಮತ್ತೆ ಅವನು ಎಚ್ಚರಗೊಂಡು  ನೋಡಿದಾಗ ಕೋಪಾವೇಶಗಳಿಂದ ಕುದಿಯುತ್ತಿದ್ದ ಗಣೇಶನು ಕೈಯಲ್ಲಿ ಪರಿಘಾಯುಧವನ್ನು ಝಳಪಿಸುತ್ತಾ ಅವನ ಮುಂದೆಯೇ ನಿಂತಿದ್ದನು. ತಾಳಾಸುರ ಅವನನ್ನೇ ಒಂದು ಕ್ಷಣ ಬೆದರು ಕಣ್ಣುಗಳಿಂದ ನೋಡಿದನು. ಆಗ ಅವನಿಗೆ ಬ್ರಹ್ಮನ ವರ ಸ್ಮರಣೆಗೆ ಬಂದಿತು. ತನಗೆ ಆನೆಯಿಂದಲೇ ಪ್ರಾಣಭಯ ಎಂಬುದು ನೆನಪಿಗೆ ಬಂದಿಕೂಡಲೇ ಅವನ ಬಲ-ಗರ್ವಗಳೆಲ್ಲಾ ಬಿಸಿ ತಾಕಿದ ಬೆಣ್ಣೆಯಂತೆ ಕರಗಿಹೋದವು. ಆಗ ಅವನು ಗಜಮುಖನಾದ ಗಣೇಶನ ಪಾದಗಳನ್ನು ಹಿಡಿದು “ವಿಘ್ನೇಶ್ವರ, ನನ್ನ ಅಪರಾಧಗಳನ್ನು ಕ್ಷಮಿಸು. ನನಗೆ ಜೀವದಾನ ಮಾಡು”  ಎಂದು ಬೇಡಿಕೊಂಡನು.

ಗಣಪತಿಯು ಎಷ್ಟು ಬಲಶಾಲಿಯೋ ಅಷ್ಟೇ ಕರುಣಾಳು.

ಅವನು ತಾಳಾಸುರನಿಗೆ, “ಅಯ್ಯಾ,  ತಾಳಾಸುರ, ನೀನು ಬಲದಿಂದ ಅಹಂಕಾರಪಟ್ಟೆ. ಬ್ರಹ್ಮನ ವರದಿಂದ ಗರ್ವಪಟ್ಟೆ. ಎಲ್ಲರಿಗೂ ಹಿಂಸೆ ಕೊಟ್ಟೆ. ದೇವಲೋಕದಿಂದ ಇಂದ್ರನನ್ನೆ ಓಡಿಸಿದೆ. ಇನ್ನಾದರೂ ಬುದ್ಧಿ ಕಲಿತುಕೊಳ್ಳುವ ಹಾಗಿದ್ದರೆ ನಿನ್ನನ್ನು ಜೀವಸಹಿತ ಬಿಡುತ್ತೇನೆ” ಎಂದ.

ತಾಳಾಸುರನು “ವಿನಾಯಕ, ನನ್ನದು ಮಹಾಪರಾಧವಾಯಿತು. ಇನ್ನು ನಾನು ನಿನ್ನ ಭಕ್ತರಲ್ಲಿ ಒಬ್ಬನಾಗಿರುತ್ತೇನೆ.ದೇವತೆಗಳಿಗೆ ತೊಂದರೆ ಮಾಡುವುದಿಲ್ಲ.ನಾನೇ ಬಲಿಷ್ಠ ಎಂದು ಮೆರೆಯುತ್ತಿದ್ದ ನನಗೆ ನೀನು ಬುದ್ಧಿ ಕಲಿಸಿದೆ. ನನ್ನನ್ನು ಕ್ಷಮಿಸು” ಎಂದು ಪ್ರಾರ್ಥಿಸಿದ.

ದಯಾಳುವಾದ ಗಣೇಶನು ಅವನನ್ನು ಕ್ಷಮಿಸಿದ.

ದೇವತೆಗಳಿಗೆ ಭಯ

ಗಣೇಶನು ವಿಘ್ನೇಶ್ವರ, ಎಂದರೆ ಅಡ್ಡಿಗಳನ್ನು, ತೊಂದರೆಗಳನ್ನೂ ನಿವಾರಿಸುತ್ತಾನೆ ಎಂದು ಭಕ್ತರ ನಂಬಿಕೆ. ಅವನ ದೇವತೆಗಳ ಕಷ್ಟವನ್ನೆ ಪರಿಹರಿಸಿದ ಎಂದು ಇನ್ನೂ ಅನೇಕ ಕಥೆಗಳುಂಟು.

ಲಂಕೆಯ ರಾಜ ರಾವಣ, ಮಹಾ ಬಲಶಾಲಿ.

ಒಂದು ಸಲ ಸ್ವರ್ಗದ ದೇವತೆಗಳಿಗೆ ರಾವಣನಿಂದ ಒಂದು ದೊಡ್ಡ ವಿಪತ್ತು ಬರುವ ಸೂಚನೆ ಕಂಡು ಬಂದಿತು.

ರಾವಣನಿಗೆ ಈಶ್ವರನಲ್ಲಿ ಬಹು ಭಕ್ತಿ. ಅವನು ಒಂದು ಸಲ ಈಶ್ವರನನ್ನು ಕುರಿತು ಉಗ್ರವಾದ ತಪಸ್ಸು ಮಾಡಿದ. ಅವನ ತಪಸ್ಸಿಗೆ ಈಶ್ವರನು ಬಲಿದ. ಅವನಿಗೆ ಪ್ರತ್ಯಕ್ಷನಾಗಿ, “ನಿನಗೆ ಬೇಕಾದ ವರವನ್ನು ಬೇಡು” ಎಂದ.

ರಾವಣ ಶಿವನ ಆತ್ಮಲಿಂಗವನ್ನೇ ಬೇಡಿದ.  (ಶಿವನ ಆತ್ಮಲಿಂಗವೆಂದರೆ ಲಿಂಗರೂಪದಲ್ಲಿರುವ ಶಿವನ ಪ್ರತಿ ರೂಪ. ಇದು ಹತ್ತಿರವಿದ್ದರೆ ಸಾಕ್ಷಾತ್‌ ಶಿವನೇ ಹತ್ತಿರವಿದ್ದಂತೆ).

ತಾನು ಶಿವನ ಶಕ್ತಿಯನ್ನೇ ವಶ ಮಾಡಿಕೊಂಡರೆ, ತನ್ನನ್ನು ಗೆಲ್ಲುವ ಶಕ್ತಿ ಯಾರಿಗೂ ಇರುವುದಿಲ್ಲ ಎಂದು ರಾವಣನ ಯೋಚನೆ.

“ನಿನಗೆ ಬೇಕಾದ ವರವನ್ನು ಬೇಡು” ಎಂದು ಹೇಳಿದ್ದ ಶಿವ. ಆದುದರಿಂದ ತನ್ನ ಆತ್ಮಲಿಂಗವನ್ನು ರಾವಣನಿಗೆ ಕರುಣಿಸಿದ. ಅನಂತರ “ರಾವಣ, ಈ ಲಿಂಗವನ್ನು ಯಾವ ಘಳಿಗೆಯಲ್ಲೂ ನೆಲದ ಮೇಲಿಡಬೆಡ. ಒಂದು ವೇಳೆ ಇಟ್ಟರೆ ನೀನಿದನ್ನು ಪಡೆಯಲಾರೆ”  ಎಂದು ಎಚ್ಚರಿಸಿ ಮಾಯವಾದ.

ಲೋಕಕಂಟಕನಾದ ರಾವಣನ ಕೈಗೆ ಶಿವನ ಆತ್ಮಲಿಂಗವೇ ಬಂದದ್ದನ್ನು ಕಂಡು ದೇವತೆಗಳೆಲ್ಲಾ ಹೆದರಿದರು. ನಮ್ಮ ಪರಮವೈರಿಯಾದ ರಾವಣನಿಗೆ ಶಿವಲಿಂಗವೇ ವಶವಾದ ಮೇಲೆ ನಮಗಿನ್ನು ಉಳಿಗಾಲವೆಲ್ಲಿ ಎಂದು ಅವರಿಗೆ ಭಯ.

ತಮ್ಮನ್ನು ಕಾಪಾಡುವವರು ಯಾರು ಎಂದು ಅವರಿಗೆ ಚಿಂತೆಯಾಯಿತು.

ಆಗ ಅವರಿಗೆ ಗಣೇಶನ ನೆನಪಾಯಿತು. ಕೂಡಲೆ ಅವರು ಅವನ ಬಳಿಗೆ ಹೋಗಿ ತಮ್ಮ ಕಷ್ಟಗಳನ್ನು ಹೇಳಿಕೊಂಡರು. ಕರುಣಾಳುವಾದ ಗಣೇಶನು ಅವರಿಗೆ ಸಮಾಧಾನವನ್ನು ಹೇಳಿದನು. “ನಾನು ದುಷ್ಟ ರಾವಣನಿಗೆ ಶಿವನ ಆತ್ಮಲಿಂಗವು ದಕ್ಕದಂತೆ ಮಾಡಿ, ನಿಮ್ಮ ಕಷ್ಟಗಳನ್ನು ನಿವಾರಿಸುತ್ತೇನೆ”  ಎಂದು ಅಭಯದಾನ ಮಾಡಿ ಅವರನ್ನು ಕಳುಹಿಸಿಕೊಟ್ಟನು.

ದೇವತೆಗಳು ಹೋದ ಕೂಡಲೆ ಗಣೇಶ ತನ್ನ ಕಾರ್ಯ ಸಾಧನೆಗಾಗಿ ರಾವಣನನ್ನು ಹಿಂಬಾಲಿಸಿ ಹೊರಟನು.

ಗಣಪತಿ ಗೆದ್ದ

ರಾವಣನು ಶಿವನ ಆತ್ಮಲಿಂಗವನ್ನು ತನ್ನ ಬೊಗಸೆ ಗೈಯಲ್ಲಿ ಭದ್ರವಾಗಿ ಹಿಡಿದು ಲಂಕೆಗೆ ನಡೆದಿದ್ದನು. ಅವನು ಪಶ್ಚಿಮ ಸಮುದ್ರತೀರಕ್ಕೆ ಬಂದ. ಆ ಹೊತ್ತಿಗೆ ಸಂಜೆಯಾಗಿಬಿಟ್ಟಿತು. ರಾವಣನು ಸಂಧ್ಯಾವಂದನೆ ಮಾಡುವ ಹೊತ್ತು. ರಾವಣನೀಗ ಪೇಚಿಗೆ ಸಿಕ್ಕಿಕೊಂಡನು. ಈ ಲಿಂಗವನ್ನು ಭೂಮಿಯ ಮೇಲೆ ಇಡಬಾರದೆಂದು ಈಶ್ವರನೇ ಹೇಳಿದ್ದಾನೆ. ಕೈಯಲ್ಲಿ ಆತ್ಮಲಿಂಗವನ್ನಿಟ್ಟುಕೊಂಡು ಸಂಧ್ಯಾವಂದನೆಯನ್ನು ಹೇಗೆ ಮಾಡುವುದು? ಈ ನಿರ್ಜನ ಪ್ರದೇಶದಲ್ಲಿ ಸಹಾಯಕರಾರೂ ಸಿಗುವುದಿಲ್ಲ. ‘ಈಗ ಸಂಧ್ಯಾವಂದನೆಯನ್ನು ಮಾಡದೇ ಬಿಡುವಂತಿಲ್ಲ. ಏನು ಮಾಡಲಿ? ಎಂದು ಯೋಚಿಸುತ್ತಾ ನಿಂತುಬಿಟ್ಟನು.

ಅವನ ಹಿಂದೆಯೇ ಸರಿಯಾದ ಅವಕಾಶಕ್ಕಾಗಿ ಕಾಯುತ್ತ ಹೆಜ್ಜೆ ಹಾಕುತ್ತಿದ್ದ ಗಣೇಶ. ರಾವಣನ ಪೇಚಾಟವನ್ನು ಗಣೇಶ ನೋಡಿದ. ಅವನು ಕೂಡಲೇ ಒಬ್ಬ ಬಾಲಬ್ರಹ್ಮಚಾರಿಯ ವೇಷದಲ್ಲಿ ರಾವಣನಿಗೆ ಕಾಣಿಸಿಕೊಂಡ. ಅಲ್ಲಿ ಅವನನ್ನು ಕಂಡ ರಾವಣನಿಗೆ ಮರಳುಗಾಡಿನಲ್ಲಿ ನೀರನ್ನು ಕಂಡಷ್ಟು ಹಿಗ್ಗಾಯಿತು.

ಗಣೇಶನು ಶಿವನ ಆತ್ಮಲಿಂಗವನ್ನು ನೆಲದ ಮೇಲೆ ಇಟ್ಟುಬಿಟ್ಟನು.

ರಾವಣ ಗಣೇಶನನ್ನು ಕರೆದ. “ಮಗೂ, ನಾನು ಸಂಧ್ಯಾವಂದನೆಯನ್ನು ಮಾಡಿ ಬರುವವರೆಗೆ ಈ ಲಿಂಗವನ್ನು ಹಿಡಿದುಕೊಂಡಿರುತ್ತೀಯ?” ಎಂದು ಕೇಳಿದ.

“ಅದು ಬಹಳ ಭಾರವಿರುವ ಹಾಗೆ ಕಾಣುತ್ತದೆ. ಕೆಳಗೆ ಇಟ್ಟು ಹೋಗಿ” ಎಂದ ಬಾಲಕವೇಷದ ಗಣೇಶ.

ಇಲ್ಲಪ್ಪ, ಅದನ್ನು ಕೆಳಗೆ ಇಡುವಹಾಗಿಲ್ಲ. ಇಡಬಾರದು. ನಾನು ಬರುವವರೆಗೆ ಕೈಯಲ್ಲೆ ಇಟ್ಟುಕೊಂಡಿರು ಎಂದ ರಾವಣ.

“ಭಾರವಾದರೆ-?” ಎಂದು ಕೇಳಿದ ಹುಡುಗ.

“ಬೇಗ ಬಂದುಬಿಡುತ್ತೇನಪ್ಪ, ಇದನ್ನು ಕೈಯಲ್ಲಿಟ್ಟುಕೊಂಡಿರು, ಜಾಣ” ಎಂದು ಮೃದುವಾಗಿ ಹೇಳಿದ ರಾವಣ.

ಹುಡುಗ ಒಪ್ಪಿಕೊಂಡ. ರಾವಣ ಶಿವನ ಆತ್ಮ ಲಿಂಗವನ್ನು ಅವನ ಕೈಯಲ್ಲಿಟ್ಟ. “ನೋಡು, ಇದನ್ನು ಭೂಮಿಯ ಮೇಲೆ ಖಂಡಿತ ಇಡಬಾರದು. ನೆನಪಿಟ್ಟುಕೊ” ಎಂದು ಹೇಳಿದ. ಸಂಧ್ಯಾವಂದನೆಗೆ ಎಂದು ಸಮುದ್ರದ ಕಡೆಗೆ ಹೊರಟ.

ರಾವಣನು ಅತ್ತ ಸಂಧ್ಯಾವಂದನೆಯನ್ನು ಪ್ರಾರಂಬಿಸಿದ ಕೂಡಲೇ ಇತ್ತ ಗಣೇಶ “ಅಯ್ಯೋ ಭಾರ! ಭಾರ!” ಎಂದು ಕೂಗಿಕೊಂಡನು. ಆಗ ರಾವಣನಿಗೆ ಭಯವಾಯಿತು. ಆದರೂ ಅವನು ಸಂಧ್ಯಾವಂದನೆಯನ್ನು ಅರ್ಧಕ್ಕೇ ನಿಲ್ಲಿಸಿ ಬರುವಂತಿರಲಿಲ್ಲ. ಆದುದರಿಂದ ಅವನು “ಮಗು, ನಾನು ಬೇಗನೆ ಬಂದುಬಿಡುತ್ತೇನೆ. ಲಿಂಗವನ್ನು ಮಾತ್ರ ಭೂಮಿಯ ಮೇಲಿಡಬೇಡ” ಎಂದು ನಿಂತಲ್ಲಿಂದಲೇ ಕೂಗಿಕೊಂಡನು. ಅವನು ಅರ್ಘ್ಯ ಬಿಡುವ ಸಮಯಕ್ಕೆ ಸರಿಯಾಗಿ ಗಣೇಶನು ಮತ್ತೊಮ್ಮೆ ಗಟ್ಟಿಯಾಗಿ ಕೂಗಿಕೊಳ್ಳುತ್ತಾ, “ಅಯ್ಯಾ ರಾವಣ, ಈ ಲಿಂಗದ ಭಾರವನ್ನು ನಾನಿನ್ನು ಖಂಡಿತ ತಡೆಯಲಾರೆ. ಇದನ್ನು ಇಲ್ಲಿಯೇ ಇಟ್ಟುಬಿಡುತ್ತೇನೆ!” ಎನ್ನುತ್ತಾ ಲಿಂಗವನ್ನು ಭೂಮಿಯ ಮೇಲಿಟ್ಟು ಅಲ್ಲಿಂದ ಓಡಿಬಿಟ್ಟನು. ರಾವಣ ಆತುರಾತುರವಾಗಿ ಸಂಧ್ಯಾವಂದನೆಯನ್ನು ಮುಗಿಸಿದವನೇ ಗಾಬರಿಯಿಂದ ಓಡಿಬಂದ. ಆದರೆ ಅವನು ಬರುವ ವೇಳೆಗೆ ಶಿವನ ಆತ್ಮಲಿಂಗ ಭೂಮಿಯಲ್ಲಿ ಸೇರಿಹೋಗಿತ್ತು. ಅವನು ಎಷ್ಟು ಪ್ರಯತ್ನಿಸಿದರೂ ಅದು ಅವನಿಗೆ ದಕ್ಕಲೇ ಇಲ್ಲ.

ಶಿವನ ಆತ್ಮಲಿಂಗವು ರಾವಣನಿಗೆ ಸಿಗದಂತೆ ಮಾಡುವುದು ಸಾಮಾನ್ಯ ಕೆಲಸವಾಗಿರಲಿಲ್ಲ. ಅಂತಹ ಸಾಹಸಕಾರ್ಯವನ್ನು ಗಣೇಶ ತನ್ನ ಬುದ್ಧಿಯ ಬಲದಿಂದ ಸುಲಭವಾಗಿ ಮಾಡಿಬಿಟ್ಟನು.

ಚಂದ್ರನಿಗೆ ಶಾಪ

ಒಂದು ದಿನ ಗಣೇಶನು ತನ್ನ ವಾಹನವಾದ ಇಲಿಯ ಮೇಲೆ ಕುಳಿತು ಲೋಕಸಂಚಾರ ಮಾಡುತ್ತಾ ಚಂದ್ರಲೋಕಕ್ಕೇ ಬಂದನು. ಚಂದ್ರನು ಅವನನ್ನು ನೋಡಿದನು. ಚಂದ್ರ ಸರ್ವಾಂಗಸುಂದರ. ಅದೇ ಅವನಿಗೆ ಜಂಬ. ಗಣಪತಿಯ ಆನೆಮುಖ, ಡೊಳ್ಳುಹೊಟ್ಟೆ ಮತ್ತು ಅವನ ಇಲಿಯನ್ನು ನೋಡಿ ಹಾಸ್ಯಮಾಡಿ ನಕ್ಕನು.

ಇದರಿಂದ ಅಪಮಾನಿತನಾದ ಗಣೇಶನಿಗೆ ಚಂದ್ರನ ಮೇಲೆ ಬಹಳ ಕೋಪ ಬಂದಿತು. ಕೂಡಲೇ ಅವನ ಕಣ್ಣುಗಳು ಕೆಂಪಾದವು. ಅವನು “ಎಲೈ ಚಂದ್ರ , ನಿನಗೆ ನಿನ್ನ ಸೌಂದರ್ಯದ ಮದ ಹೆಚ್ಚಿಹೋಗಿದೆ. ಎಲ್ಲ ಲೋಕಗಳೂ ಪೂಜಿಸುವ ನನನ್ನೇ ಹಾಸ್ಯಮಾಡಿ ನಗುತ್ತಿರುವೆಯಾ , ಮೂರ್ಖ! ಇದೊ, ನಿನ್ನ ಅಹಂಕಾರಕ್ಕೆ ತಕ್ಕ ಫಲವನ್ನು ಅನುಭವಿಸು!” ಎಂದು ಗುಡುಗಿದನು. “ನಿನ್ನ ಗರ್ವಕ್ಕೂ ಅಜ್ಞಾನಕ್ಕೂ ಕಾರಣವಾದ ನಿನ್ನ ಈ ಸೌಂದರ್ಯವು ಕುಂದಿ ಹೋಗಲಿ! ಇನ್ನು ಮುಂದೆ ನನ್ನ ಹುಟ್ಟಿದ ದಿನವಾದ ಭಾದ್ರಪದ ಶುದ್ಧ ಚೌತಿಯ ದಿನ ನಿನ್ನನ್ನು ನೋಡುವವರು ಸುಳ್ಳು ಅಪವಾದಕ್ಕೆ ಗುರಿಯಾಗಲಿ!” ಎಂದು ಶಾಪ ಕೊಟ್ಟನು.

ಈಗ ಶಾಪಗ್ರಸ್ತನಾದ ಚಂದ್ರನ ಅಹಂಕಾರವೆಲ್ಲಾ ಚೂರುಚೂರಾಯಿತು. ಅವನಿಗೆ ತನ್ನ ತಪ್ಪಿನ ಅರಿವಾಯಿತು. ಪಶ್ಚಾತ್ತಾಪವೂ ಆಯಿತು. ಆಗ ಅವನು ಗಣೇಶನ ಮುಂದೆ ಭಯ-ಭಕ್ತಿಗಳಿಂದ ಕೈಮುಗಿದು ನಿಂತು, “ಸ್ವಾಮಿ, ನನ್ನ ಅಜ್ಞಾನವನ್ನು ಕ್ಷಮಿಸಿಬಿಡು ನನಗೆ ಕೊಟ್ಟ ಶಾಪವನ್ನು ಹಿಂತೆಗೆದುಕೊಂಡು ನನ್ನನ್ನು ಉದ್ಧರಿಸು” ಎಂದು ಅಂಗಲಾಚಿ ಬೇಡಿಕೊಂಡನು.

ಆಗ ಕ್ಷಮಾಶೀಲನಾದ ಗಣೇಶನು ಶಾಂತನಾದನು. ಅವನು  ಸಂಕಟದಲ್ಲಿದ್ದ ಚಂದ್ರನನ್ನು ಸಂತೈಸುತ್ತಾ, “ಚಂದ್ರ ನೀನು ನಿನ್ನ ತಪ್ಪನ್ನು ತಿಳಿದುಕೊಂಡೆ. ನಿನ್ನ ಗರ್ವ ಹೋಗುವುದೇ ಮುಖ್ಯ. ಏನಾದರೂ ನನ್ನ ಶಾಪ ಎಂದಿಗೂ ಸುಳ್ಳಾಗದು. ಆದರೆ ಚೌತಿಯ ದಿನ ನಿನ್ನನ್ನು ನೋಡಿ ಮಿಥ್ಯಾಪವಾದಕ್ಕೆ ಗುರಿಯಾದವರು ಶುದ್ಧ ಬಿದಿಗೆಯ ದಿನವು ನಿನ್ನ ದರ್ಶನ ಮಾಡಿದರೆ ಅಥವಾ ಸ್ಯಮಂತಕ ಮಣಿಯ ಕಥೆಯನ್ನು ಕೇಳಿದರೆ ಅಂಥವರು ಅಪವಾದದಿಂದ ಮುಕ್ತರಾಗಲಿ” ಎಂದು ಹೇಳಿದನು. ಆಗ ಚಂದ್ರನಿಗೆ ಸಮಾಧಾನವಾಯಿತು.

ಶ್ರೀಕೃಷ್ಣನೂ ವಿನಾಯಕನನ್ನು ಪೂಜಿಸಿದ

ಗಣೇಶನ ಶಾಪ ಎಷ್ಟು ಪ್ರಬಲವಾದದ್ದು ಎಂಬುದಕ್ಕೆ ಸ್ಯಮಂತಕ ಮಣಿಯ ಕಥೆ ಹೇಳುತ್ತಾರೆ.

ದ್ವಾರಕೆಯಲ್ಲಿ ಸತ್ರಾಜಿತ ಎಂಬುವನ ಬಳಿ ಸ್ಯಮಂತಕ ಎಂಬ ರತ್ನವಿತ್ತು. ಆದರೆ ಪ್ರಭೆ ಕಣ್ಣನ್ನು ಕೋರೈಸುವಂತಹದು. ಅದನ್ನು ಭಕ್ತಿಯಿಂದ ಪೂಜಿಸಿದರೆ ಪ್ರತಿ ದಿನ ಬೇಕಾದಷ್ಟು ಚಿನ್ನವನ್ನು  ಕೊಡುತ್ತಿತ್ತು.

ಒಮ್ಮೆ ಸತ್ರಾಜಿತನ ತಮ್ಮ ಪ್ರಸೇನ ಎಂಬುವನು ಸ್ಯಮಂತಕವನ್ನು ಧರಿಸಿ ಬೇಟೆಗೆ ಹೊರಟ.  ಒಂದು ಸಿಂಹ ಅವನನ್ನು ಕೊಂದು ರತ್ನವನ್ನು ಕಚ್ಚಿಕೊಂಡು ಒಂದು ಗುಹೆಯನ್ನು ಹೊಕ್ಕಿತು. ಜಾಂಬವಂತನೆಂಬ ಕರಡಿ ಸಿಂಹವನ್ನು ಕೊಂದು ಸ್ಯಮಂತಕವನ್ನು ತನ್ನ ಮಗುವಿಗೆ ಆಟಕ್ಕೆ ಕೊಟ್ಟಿತು.

ಈ ಜಾಂಬವಂತ ಸಾಮಾನ್ಯ  ಕರಡಿಯಲ್ಲ, ಶ್ರೀರಾಮನ ಸೇವಕನಾಗಿದ್ದ ವೀರ.

ಪ್ರಸೇನ ಹಿಂದಕ್ಕೆ ದ್ವಾರಕೆಗೆ ಬರಲಿಲ್ಲ. ಕೃಷ್ಣನೇ ಸ್ಯಮಂತಕದ ಆಸೆಯಿಂದ ಅವನನ್ನು ಕೊಂದ ಎಂದು ಸತ್ರಾಜಿತನಿಗೆ ಎನ್ನಿಸಿತು. ಅವನಿಂದ ಇತರರಿಗೆ ಈ ಮಾತು ಹಬ್ಬಿತು.

ಯಾವ ತಪ್ಪೂ ಮಾಡದ ಕೃಷ್ಣಿಗೆ ಇದರಿಂದ ವ್ಯಥೆಯಾಯಿತು. ಅವನು ಪ್ರಸೇನನನ್ನು ಹುಡುಕಿಕೊಂಡು ಹೊರಟ.

ಪ್ರಸೇನನ ಹೆಣ ಕಾಣಿಸಿತು. ಅದರ ಪಕ್ಕದಲ್ಲಿ ಸಿಂಹದ ಹೆಜ್ಜೆ. ಈ ಹೆಜ್ಜೆಯನ್ನೆ ಹಿಡಿದು ಜಾಂಬವಂತನ ಗುಹೆಯನ್ನು ಕೃಷ್ಣ ಹೊಕ್ಕ. ಅಲ್ಲಿ ಇಪ್ಪತ್ತೆಂಟು ದಿನಗಳ ಕಾಲ ಜಾಂಬವಂತನ ಜೊತೆಗೆ ಹೋರಾಡಿದ. ಕಡೆಗೆ ಜಾಂಬವಂತನು, ಶ್ರೀಕೃಷ್ಣನೇ ಶ್ರೀರಾಮ ಎಂದು ಅರ್ಥ ಮಾಡಿಕೊಂಡ. ಸ್ಯಮಂತಕವನ್ನೂ ಅವನಿಗೆ ಒಪ್ಪಿಸಿದ.

ಕೃಷ್ಣನು ಸ್ಯಮಂತಕವನ್ನು ಸತ್ರಾಜಿತನಿಗೆ ಒಪ್ಪಿಸಿ, ತನಗೆ ಬಂದಿದ್ದ ಕೆಟ್ಟ ಹೆಸರನ್ನು ತೊಡೆದುಹಾಕಿದ.

ಕೃಷ್ಣನಿಗೆ ಆಶ್ಚರ್ಯವಾಯಿತು. “ಯಾವ ತಪ್ಪನ್ನೂ ಮಾಡದೆ ಇದ್ದ ನನಗೆ ಹೀಗೆ ಕೆಟ್ಟ ಹೆಸರು ಏಕೆ ಬಂದಿತು?” ಎಂದು   ಯೋಚಿಸಿದ. ಮಹರ್ಷಿಗಳು “ನೀನು ಚತುರ್ಥಿಯ ದಿನ ಚಂದ್ರನನ್ನು ನೋಡಿದೆ” ಎಂದು ಹೇಳಿ, ವಿನಾಯಕನು ಚಂದ್ರನಿಗೆ ಶಾಪ ಕೊಟ್ಟ ಕಥೆಯನ್ನು ಹೇಳಿದರು.

ಅನಂತರ ಶ್ರೀಕೃಷ್ಣನು ಗಣೇಶನನ್ನು ಪೂಜಿಸಿದ. ಭಾದ್ರಪದ ಮಾಸದ ಶುಕ್ಲಪಕ್ಷದಲ್ಲಿ ಚತುರ್ಥಿಯ ದಿನ ಸಿದ್ಧಿವಿನಾಯಕ ವ್ರತ – ಗಣೇಶನ ಪೂಜೆ. ಅಂದು ಚಂದ್ರನನ್ನು ನೋಡಿದವರು ಸ್ಯಮಂತಕದ ಕಥೆಯನ್ನು ಕೇಳಿದರೆ ಅವರಿಗೆ ಅಪವಾದ ಬರುವುದಿಲ್ಲ ಎಂದು ಭಕ್ತರು ನಂಬುತ್ತಾರೆ.

ಭಾರತವನ್ನು ಬರೆದುಕೊಂಡ ಗಣೇಶ

ಮಹಾಭಾರತ ಮಹಾಕಾವ್ಯ. ಪ್ರಪಂಚದ ಬಹು ಶ್ರೇಷ್ಠ ಕಾವ್ಯಗಳಲ್ಲಿ ಒಂದು. ಇದನ್ನು ರಚಿಸಿದವರು ವ್ಯಾಸರು. ಅವರು ಬಹು ಹಿರಿಯ ಜ್ಞಾನಿಗಳು, ಮಹರ್ಷಿಗಳು. ಮಹಾಭಾರತ ಯುದ್ಧ ಪಾಂಡವರಿಗೂ ಕೌರವರಿಗೂ ನಡೆಯಿತು, ಅಲ್ಲವೇ? ಪಾಂಡವರು, ಕೌರವರ ವಂಶವನ್ನು ಅವರ ತಾತನ ಕಾಲದಿಂದ ನೋಡಿದ್ದವರು, ಅವರ ವಂಶದವರಿಗೆ ಮತ್ತೆಮತ್ತೆ ಸಹಾಯ ಮಾಡಿದ್ದವರು ವ್ಯಾಸರು. ಮಹಾಭಾರತ ಯುದ್ಧದ ವಿಷಯವೆಲ್ಲ ಅವರಿಗೆ ಚೆನ್ನಾಗಿ ತಿಳಿದಿತ್ತು.

ವ್ಯಾಸರು ಮಹಾಭಾರತವನ್ನು ಯಾರ ಕೈಯಿಂದಲಾದರೂ ಬರೆಸುವ ಯೋಚನೆಯಲ್ಲಿದ್ದರು. ಆದರೆ ತಾನು ಹೇಳುವುದನ್ನು ತಪ್ಪಿಲ್ಲದೆ ಚುರುಕಾಗಿ ಬರೆಯುವ ಬುದ್ಧಿವಂತರು ಯಾರಿದ್ದಾರೆಂದು ಹುಡುಕುತ್ತಿದ್ದರು.

ಈ ಮಹಾಕಾರ್ಯಕ್ಕೆ ಗಣಪತಿಯೇ ಸರಿ ಎಂದು ಬ್ರಹ್ಮನು ನಿರ್ಧರಿಸಿದನು. ಅವನು ಗಣಪತಿಯನ್ನು ಕಳುಹಿಸಿದನು. ಅವನು ವ್ಯಾಸರ ಬಳಿಗೆ ಬಂದು , “ಪೂಜ್ಯರೆ, ಮಹಾಭಾರತವನ್ನು ನಾನು ಬರೆಯುತ್ತೇನೆ” ಎಂದನು. ಅದಕ್ಕೆ ವ್ಯಾಸರು “ಅಪ್ಪ ಗಣೇಶ, ನಾನು ಭಾರತವನ್ನು ಬೇಗ ಬೇಗೆ ಹೇಳಿಕೊಂಡು ಹೋಗುತ್ತೇನೆ. ನೀನು ತಪ್ಪಿಲ್ಲದೆ ಬರೆಯಬಲ್ಲೆಯಾ?” ಎಂದು ಕೇಳಿದರು. ಆಗ ಗಣೇಶನು “ಮಹಾತ್ಮರೆ , ನೀವು ಎಷ್ಟು ಬೇಗಬೇಗ ಹೇಳಿದರೂ, ನಾನು ಅಷ್ಟೇ ಬೇಗಬೇಗ ಯಾವ ತಪ್ಪೂ ಇಲ್ಲದೆ ಬರೆಯಬಲ್ಲೆ. ಆದರೆ ನೀವು ಭಾರತವನ್ನು ಹೇಳಲು ಪ್ರಾರಂಭಿಸಿದ ಮೇಲೆ, ಅದು ಮುಗಿಯುವವರೆಗೆ ಮಧ್ಯದಲ್ಲಿ ಎಲ್ಲಿಯೂ ನಿಲ್ಲಿಸಬಾರದು. ಆಗಬಹುದೆ? ಎಂದು ಅವರಿಗೇ ಮರುಸವಾಲು ಹಾಕಿದನು. ಅದಕ್ಕೆ ವ್ಯಾಸ ಮಹರ್ಷಿಗಳು ಒಪ್ಪಿದರು.

ಹೀಗೆ ಪರಸ್ಪರ ಒಪ್ಪಂದವಾದನಂತರ ವ್ಯಾಸರು ಕಥೆಯನ್ನು  ಹೇಳುತ್ತಾ ಹೋದರು. ಗಣಪತಿ ಬರೆದುಕೊಳ್ಳುತ್ತ ಹೋದ. ಮಹಾಭಾರತ ಪ್ರಪಂಚಕ್ಕೆ ಲಭ್ಯವಾಯಿತು.

ಗಣೇಶನ ಗುಡಿ ಇಲ್ಲದ ಊರಿಲ್ಲ

ಭಾರತೀಯರಿಗೆ ಬಹು ಪ್ರೀತಿಯ ದೇವರು ಗಣೇಶ. ಗಣೇಶನ ಗುಡಿ ಇಲ್ಲದ ಊರೇ ಭಾರತದಲ್ಲಿ ಇಲ್ಲ. ನಮ್ಮ ಹಿರಿಯ ನಾಯಕರಗಿದ್ದ ಬಾಲಗಂಗಾಧರ ತಿಲಕರು ಗಣೇಶನ ಹಬ್ಬವನ್ನು ಮನೆಮನೆಯಲ್ಲಿ ಆಚರಿಸಬೇಕು ಎಂದು ಸಾರಿದರು. ಅದು ರಾಷ್ಟ್ರೀಯ ಹಬ್ಬವಾಯಿತು.

ಗಣೇಶ ವಿಘ್ನಗಳ ನಾಯಕ, ವಿದ್ಯೆಯ ನಾಯಕ. ಯಾವ ವಿಘ್ನವನ್ನು ನಿವಾರಿಸುವುದಕ್ಕೂ ನಮ್ಮ ವಿದ್ಯೆಯನ್ನು ಹೆಚ್ಚಿಸಿಕೊಳ್ಳಬೇಕು, ಅಲ್ಲವೆ? ಒಂದು ಕಾಲದಲ್ಲಿ ಮನುಷ್ಯನಿಗೆ ಹತ್ತು ಮೈಲಿ ಹೋಗುವುದು ಕಷ್ಟವಾಗಿತ್ತು. ಒಂದು ಸಣ್ಣ ನದಿಯನ್ನು ದಾಟುವುದು ಹೇಗೆ ಎಂದು ಚಿಂತೆಯಾಗಿತ್ತು. ಮನುಷ್ಯ ಗಾಳಿಯಲ್ಲಿ ಹಾರಾಡಬಲ್ಲ ಎಂದರೆ ಜನ ನಕ್ಕುಬಿಡುತ್ತಿದ್ದರು, ಇದು ಅಸಾಧ್ಯ ಎಂದುಕೊಂಡಿದ್ದರು. ಇಂದು ಮನುಷ್ಯ ಲೀಲಾಜಾಲವಾಗಿ ಸಾವಿರಾರು ಮೈಲಿಗಳ ಪ್ರಯಾಣ ಮಾಡುತ್ತಾನೆ, ಸಮುದ್ರಗಳನ್ನು ದಾಟುತ್ತಾನೆ, ಚಂದ್ರಲೋಕದಲ್ಲಿ ಹೆಜ್ಜೆ ಊರುತ್ತಾನೆ. ಅಸಾಧ್ಯ ಎಂದು ತೋರುತ್ತಿದ್ದದ್ದು ಸಾಧ್ಯವಾದದ್ದು ಹೇಗೆ? ಮನುಷ್ಯನ ವಿದ್ಯೆ ಬೆಳೆದದ್ದರಿಂದ ಅಲ್ಲವೆ? ವಿಘ್ನಗಳು ಹೋಗಿ ಮನುಷ್ಯ ಮುಂದಕ್ಕೆ ಬರಬೇಕಾದರೆ, ವಿದ್ಯೆ ಹೆಚ್ಚಬೇಕು. ಹೋಗುತ್ತಿರುವ ಸೈಕಲ್‌ ನಿಂತುಹೋದರೆ , ಇದಕ್ಕೆ ಏನಾಗಿದೆ, ಹೇಗೆ ಸರಿ ಮಾಡಬೇಕು ಎಂಬುದು ತಿಳಿದಿದ್ದರೆ ಸರಿಮಾಡಿ ಮುಂದಕ್ಕೆ ಹೋಗುತ್ತೇವೆ; ತಿಳಿವಳಿಕೆಯಿಂದ ಅಡ್ಡಿ ನಿವಾರಣೆಯಾಯಿತು. ಚಂದ್ರಲೋಕಕ್ಕೆ ಹೋಗಬೇಕಾದರೆ ಅಡ್ಡಿಗಳೇನು, ಹೇಗೆ ಎಂದು ತಿಳಿದುಕೊಂಡು ಮನುಷ್ಯ ವಿದ್ಯೆಯನ್ನು ಬೆಳೆಸಿಕೊಂಡ, ಚಂದ್ರಲೋಕವನ್ನು ಮುಟ್ಟಿದ.

ವಿದ್ಯೆ ಎಂದರೆ ಹೊಸ ವಿಷಯಗಳನ್ನು ತಿಳಿಯುವುದು ಮಾತ್ರವಲ್ಲ. ಇತರರೊಡನೆ ಹೇಗೆ ನಡೆದುಕೊಳ್ಳಬೇಕು, ಜೀವನದಲ್ಲಿ ಯಾವುದು ಮುಖ್ಯ-ಯಾವುದು ಅಷ್ಟು ಮುಖ್ಯವಲ್ಲ ಎಂದು ಅರ್ಥ ಮಾಡಿಕೊಳ್ಳುವುದು, ನಮ್ಮ ಸುಖ ಅಧಿಕಾರಗಳನ್ನು ಮಾತ್ರವೇ ಯೋಚಿಸದೆ ಇತರರೂ ನಮ್ಮಂತೆಯೇ ಎಂಬ ತಿಳಿವಳಿಕೆಯನ್ನು ರೂಢಿಸಿಕೊಳ್ಳುವುದು, ಶ್ರೇಷ್ಠ ಗುರಿಯನ್ನು ಆರಿಸಿಕೊಳ್ಳುವುದು ಎಲ್ಲ ವಿದ್ಯೆಯ ಹೆಚ್ಚು ಹೆಚ್ಚು ಎತ್ತರದ ಮೆಟ್ಟಲುಗಳು. ವಿದ್ಯೆ ಬೆಳೆದಂತೆ, ಇತರರೊಡನೆ ಬಾಳಲು ಕಲಿಯುತ್ತೇವೆ. ದೊಡ್ಡ ರೀತಿಯಲ್ಲಿ ಸಾರ್ಥಕವಾಗಿ ಬಾಳಲು ಕಲಿಯುತ್ತೇವೆ. ಇದಕ್ಕೆ ಬರುವ ಅಡ್ಡಿಗಳನ್ನು ನಿವಾರಿಸಲು ಕಲಿಯುತ್ತೇವೆ.

ವಿದ್ಯೆ-ನಮ್ಮ ಹೊರಗೆ, ನಮ್ಮ ಒಳಗೆ ಬೆಳಕನ್ನು ಹೆಚ್ಚಿಸುವ ವಿದ್ಯೆ-ನಮಗೆ ಬರಲಿ, ಇದಕ್ಕೆ ಇರುವ ವಿಘ್ನಗಳೆಲ್ಲ ಕರಗಿಹೋಗಲಿ. ವರಸಿದ್ಧಿನಾಯಕ, ವಿದ್ಯಾಗಣಪತಿಯ ಕೃಪೆ ನಮಗಿರಲಿ.