ಜಿಲ್ಲೆ: ೧೦ ಕಿ.ಮೀ.

ಲಕ್ಕುಂಡಿ:

ಲಕ್ಕುಂಡಿ ಗದಗ ಜಿಲ್ಲೆಯ ಒಂದು ಮಹತ್ವದ ಊರು. ಇದರ ಐತಿಹಾಸಿಕ ಹೆಸರು ಲೊಕ್ಕಿಗುಂಡಿ. ಲೊಕ್ಕಿ ಎನ್ನುವ ದೇವತೆ ಈ ಊರಿನ ಅಧಿದೇವತೆ. ಇವಳು ಜೈನ ದೇವತೆಯಾಗಿರಬಹುದು.

ಲಕ್ಕುಂಡಿಯನ್ನು ಕಲ್ಯಾಣದ ಚಾಲುಕ್ಯರು, ಕಳಚೂರಿಗಳು, ಯಾದವರು ಹಾಗೂ ಹೊಯ್ಸಳರು ಆಳಿದ್ದಾರೆ. ೧೧೯೨ರಲ್ಲಿ ೨ನೇ ವೀರಬಲ್ಲಾಳನು ಲಕ್ಕುಂಡಿಯನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನು. ಲಕ್ಕುಂಡಿಯೊಂದಿಗೆ ದಾನಚಿಂತಾಮಣಿ ಅತ್ತಿಮಬ್ಬೆಯ ಹೆಸರು ಚಿರಸ್ಥಾಯಿಯಾಗಿ ನೆಲೆ ನಿಂತಿದೆ. ಇರಿವೆ ಬೆಡಂಗ ಸತ್ಯಾಶ್ರಯದೇವನು ಗುಜರಾತವನ್ನು ಗೆದ್ದು ಬಂದ ಸಂದರ್ಭದಲ್ಲಿ ಅತ್ತಿಮಬ್ಬೆ ಲೊಕ್ಕಿಗುಂಡಿಯಲ್ಲಿ (ಲಕ್ಕುಂಡಿಯಲ್ಲಿ) ೧೫೦೦ ಜಿನಬಸದಿಗಳನ್ನು ಕಟ್ಟಿಸಿದಳು. ಶರಣ ಶಿರೋಮಣಿಗಳಾದ ಅಣ್ಣ, ತಂಗಿ ಅಜಗಣ್ಣ ಹಾಗು ಮುಕ್ತಾಯಕ್ಕರಿಗೆ ಆಶ್ರಯ ನೀಡಿದ ತಾಣ ಲಕ್ಕುಂಡಿ.

ಲಕ್ಕುಂಡಿಯಲ್ಲಿ ಸುಮಾರು ೨೦ರಷ್ಟು ಸುಂದರ ಪ್ರಾಚೀನ ದೇವಸ್ಥಾನಗಳಿವೆ. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕಗಳ ಅದ್ಭುತ ಮಿಶ್ರಣವಾದ ವೇಸರ ಶೈಲಿಯಲ್ಲಿ ರಚಿತವಾದ ಕಾಶಿ ವಿಶ್ವೇಶ್ವರ ದೇವಸ್ಥಾನವು ಇಲ್ಲಿಯ ಅತ್ಯಂತ ಖ್ಯಾತ ಪ್ರಾಚೀನ ದೇವಸ್ಥಾನ.

ಕ್ರಿ.ಶ. ೧೧-೧೨ ನೆಯ ಶತಮಾನದಲ್ಲಿ ಇಲ್ಲಿ ನಾಣ್ಯ ಟಂಕಿಸುವ ಟಂಕಶಾಲೆ ಇದ್ದುದಾಗಿ ಶಾಸನಗಳು ಹೇಳುತ್ತವೆ.

 

ಲಕ್ಕುಂಡಿಯ ದೇವಾಲಯಗಳು– ಜನಾಲಯಗಳು

ಬ್ರಹ್ಮ ಜನಾಲಯ::

ಲಕ್ಕುಂಡಿಯ ಪುರಾತನ ಕಟ್ಟಡಗಳಲ್ಲಿ ಸುಂದರ ಹಾಗೂ ಬೃಹತ್ ಕಟ್ಟಡವೆಂದರೆ ಬ್ರಹ್ಮ ಜಿನಾಲಯ. ಕ್ರಿ. ಶ. ೧೦೦೭ರಲ್ಲಿ ದಾನ ಚಿಂತಾಮಣಿ ಅತ್ತಿಮಬ್ಬೆ ಹಲವಾರು ದಾನಗಳನ್ನು ನೀಡಿ ದೇವಾಲಯವನ್ನು ಕಟ್ಟಿಸುವುದರೊಂದಿಗೆ ಕಲ್ಯಾಣ ಚಾಲುಕ್ಯ ದೊರೆ ಇರಿವೆ ಬೆಡಂಗ ಸತ್ಯಾಶ್ರಯ ಆಹವಮಲ್ಲನಿಂದ ದೇವಾಲಯಕ್ಕೆ ದೇಣಿಗೆಯನ್ನು ಕೊಡಿಸಿದಳು. ದೇವಾಲಯವು ಚೌಕಾಕಾರದ ಗರ್ಭಗೃಹ, ಅರ್ಧಮಂಟಪ, ನವರಂಗ ಹಾಗೂ ತೆರೆದ ಮುಖಮಂಟಪ ಹೊಂದಿದೆ. ಚೌಕಾಕಾರದ ಗರ್ಭಗೃಹದಲ್ಲಿ ಎತ್ತರವಾದ ಅಲಂಕೃತ ಪಾಣಿಪೀಠದ ಮೇಲೆ ನಿಂತಿರುವ ಮಹಾವೀರನ ವಿಗ್ರಹವನ್ನು ಬ್ರಹ್ಮಜಿನನೆಂದು ಕರೆಯಲಾಗಿದ್ದು, ತುಂಬ ಆಕರ್ಷಕವಾಗಿದೆ. ಈ ಕಪ್ಪುಶಿಲಾಮೂರ್ತಿಯ ಹಿಂಭಾಗದಲ್ಲಿ ಅಲಂಕೃತ ಪ್ರಭಾವಳಿ ಹಾಗೂ ಅಕ್ಕಪಕ್ಕದಲ್ಲಿ ಚಾಮರಧಾರಣಿಯರ ಉಬ್ಬು ಶಿಲ್ಪಗಳಿವೆ.

 

ನನ್ನೇಶ್ವರ ದೇವಾಲಯ:

ನನ್ನೇಶ್ವರ ದೇವಾಲಯದಲ್ಲಿ ಗರ್ಭಗೃಹ, ಅರ್ಧಮಂಟಪ, ನವರಂಗ ಹಾಗೂ ಮುಂಭಾಗದಲ್ಲಿ ತೆರೆದ ಮುಖಮಂಟಪಗಳಿವೆ. ಗರ್ಭಗೃಹದಲ್ಲಿ ಶಿವಲಿಂಗವಿದ್ದು, ನವರಂಗಕ್ಕೆ ಪೂರ್ವ ಹಾಗೂ ದಕ್ಷಿಣದಿಂದ ಎರಡು ಪ್ರವೇಶದ್ವಾರಗಳಿವೆ. ನವರಂಗದ ಕಂಬಗಳೂ ತುಂಬ ನುಣುಪಾಗಿದ್ದು ನೋಡುವವರ ಮುಖ ಪ್ರತಿಫಲಿಸುವಂತಿವೆ. ಹೊರಗೋಡೆಯಲ್ಲಿ ಕೋಷ್ಠ ಪಂಜರಗಳಿವೆ. ನವರಂಗಕ್ಕಿರುವ ಮಹಾದ್ವಾರಬಂಧವು ಅಲಂಕಾರಿಕ ವಿಫುಲ ಕೆತ್ತನೆಗಳನ್ನು ಹೊಂದಿದೆ.

 

ಮುಸಕಿನ ಬಾದಿ:

ನನ್ನೇಶ್ವರ ದೇವಾಲಯ ಮುಂಭಾಗದಲ್ಲಿ ವಿಶಾಲವಾದ ನಿವೇಶನದಲ್ಲಿ ಕಲ್ಲಿನಿಂದ ಅಲಂಕೃತಗೊಂಡ ದೊಡ್ಡದಾದ ನೆಲಬಾವಿ ಅಥವಾ ಪುಷ್ಕರಣಿ  ಇದೆ. ಇದನ್ನು ಮುಸುಕಿನ ಬಾವಿಯಂತಲೂ, ಸಿದ್ಧರ ಬಾವಿಯಂತಲೂ ಕರೆಯುತ್ತಾರೆ. ಆದರೆ ಶಾಸನದಲ್ಲಿ ಇದು ನಾಗರಬಾವಿ ಎಂದು ಉಲ್ಲೇಖಿತವಾಗಿದೆ. ಬಾವಿಯ ಕಲ್ಲಿನ ಕಟ್ಟಡವು ದೇವಾಲಯಕ್ಕೆ ಉಪಯೋಗಿಸಲಾಗುವ ಕಪ್ಪುಶಿಲೆಯಿಂದಲೇ ನಿರ್ಮಿಸಲಾಗಿದ್ದು, ಸುತ್ತಲೂ ಹಲವಾರು ಚಿಕ್ಕ ಚಿಕ್ಕ ಗುಡಿಗಳಿದ್ದು ಈಗ ಖಾಲಿ ಇವೆ. ನೀರನ್ನು ತಲುಪಲು ಸುವ್ಯವಸ್ಥಿತವಾದ ಮೆಟ್ಟಿಲುಗಳಿವೆ.

ಹಾಲಗುಂದ ಬಸವೇಶ್ವರ ದೇವಾಲಯ

ತ್ರಿಕೂಟೇಶ್ವರ ಅಥವಾ ಗವರೇಶ್ವರ ದೇವಾಲಯವೆಂದೂ ಕರೆಯುವ ಈ ದೇಗುಲ ಚಾಲುಕ್ಯ ಶೈಲಿಯ ತ್ರಿಕೂಟಾಚಲ. ಮೂರು ಗರ್ಭಗೃಹಗಳ ಮುಂಭಾಗದಲ್ಲಿ ಪ್ರತ್ಯೇಕ ಅರ್ಧಮಂಟಪಗಳಿದ್ದು ಮಧ್ಯಭಾಗದಲ್ಲಿ ಕೇಂದ್ರಿಯ ನವರಂಗವಿದೆ. ಮೂರು ಗರ್ಭಗೃಹಗಳ ಲಲಾಟದಲ್ಲಿ ಗಜಲಕ್ಷ್ಮಿಯ ಶಿಲ್ಪಗಳಿವೆ. ಮುಖ್ಯದ್ವಾರಬಂಧವು ಹಲವಾರು ಶಿಲ್ಪಗಳಿಂದ ಅಲಂಕೃತವಾದ ಆಕರ್ಷಕವಾಗಿದೆ. ಈ ದೇವಾಲಯವು ನಂದಿಯ ಬೃಹತ್ ವಿಗ್ರಹವಿದ್ದು ಅದು ಪೂರ್ವಾಭಿಮುಖವಾಗಿದೆ. ಈ ದೇವಾಲಯದ ಎದುರು ಭಾಗದಲ್ಲಿ ಸ್ಥಳೀಯವಾಗಿ ಮಜ್ಜಲಬಾವಿ ಎಂದು ಕರೆಯುವ ಒಂದು ಬಾವಿ. ಇದೆ. ಇದರಲ್ಲಿರುವ ನೀರು ಕೆಲವು ಮಾಸಗಳಲ್ಲಿ ಕೆಂಪು, ನೀಲಿ ಹಾಗೂ ಕಪ್ಪು ಬಣ್ಣಗಳಲ್ಲಿ ತೋರುತ್ತದೆ ಎಂದು ಹೇಳಲಾಗುತ್ತದೆ.

ಇತರ ದೇವಾಲಯಗಳು:

ಒಟ್ಟು ನೂರೊಂದು ಬಾವಿ, ನೂರೊಂದು ದೇಗುಲಗಳಿದ್ದವೆಂದು ಹೇಳಲಾಗುವ ಲಕ್ಕುಂಡಿಯಲ್ಲಿ ಇಂದು ಕೆಲವು ದೇವಾಲಯಗಳು ಮಾತ್ರ ಕಾಣಲು ಸಿಗುತ್ತವೆ. ಅವುಗಳಲ್ಲಿ ಶಿಥಿಲಾವಸ್ಥೆಯಲ್ಲಿರುವವೂ ಸೇರಿವೆ.ಚಂದ್ರಮೌಳೇಶ್ವರ, ಮಲ್ಲಿಕಾರ್ಜುನ, ವಿರೂಪಾಕ್ಷ, ಲಕ್ಷ್ಮೀನಾರಾಯಣ, ವೀರಭದ್ರ, ಸೋಮೇಶ್ವರ, ನೀಲಕಂಠೇಶ್ವರ, ವಿಶ್ವನಾಥ, ಕುಂಬಾರ ಗಿರೀಶ್ವರ (ಅಥವಾ ನಾರಾಯಣದೇವ) ಮುಂತಾದ ದೇಗುಲಗಳು ಉಲ್ಲೇಖಾರ್ಹವಾಗಿವೆ.

ಗದಗ ಜಿಲ್ಲೆಗೆ ಬಂದವರು ಲಕ್ಕುಂಡಿಯನ್ನು ಸಂದರ್ಶಿಸದೇ ಮುಂದೆ ಹೋಗುವುದೇ ಇಲ್ಲ. ಅಪೂರ್ವ ಶಿಲ್ಪ ಕೆತ್ತನೆಗಳಿಂದ ಕೂಡಿದ ಈ ಶಿಲ್ಪಕಾಶಿ ಪ್ರವಾಸಿಗರನ್ನು ಕೈಮಾಡಿ ಕರೆಯುತ್ತಿವೆ.

 

ಕೇಂದ್ರ ಪ್ರಾಚ್ಯವನ್ನು ಸರ್ವೇಕ್ಷಣಾಲಯ (ವಸ್ತು ಸಂಗ್ರಹಾಲಯ):

ಬ್ರಹ್ಮ ಜಿನಾಲಯದ ಬಲಭಾಗದಲ್ಲಿ ಕೇಂದ್ರ ಪ್ರಾಚ್ಯವಸ್ತು ಸರ್ವೇಕ್ಷಣಾಲಯವಿದೆ. ಈ ವಸ್ತು ಸಂಗ್ರಹಾಲಯದಲ್ಲಿ ನಾನಾ ಭಾಗಗಳಿಂದ ತಂದಿರುವ ಅನೇಕ ಬಿಡಿ ಶಿಲ್ಪಗಳನ್ನು ಕಾಲಕ್ಕನು ಗುಣವಾಗಿ ವಿಂಗಡಿಸಿ ಪ್ರದರ್ಶಿಸಲಾಗಿದೆ. ತೀರ್ಥಂಕರ, ದ್ವಾರ ಪಾಲಕ, ಶೇಷಶಯನ,ವಿಷ್ಣು ಚಾಮರಧಾರಿಣಿ, ಸಿಂಹಮುಖ ಕುಬೇರ, ಋಷಭನಾಥ, ಸ್ತ್ರೀ ವಿಗ್ರಹ (ಭಗ್ನ), ತೀರ್ಥಂಕರ, ಕಾಮದೇವ, ಸಪ್ತಮಾತೃಕೆ (ಭಗ್ನ) ಶಿವಪರಮೇಶ್ವರ, ತೀರ್ಥಂಕರ ಶಿರೋಭಾಗ, ಜೈನ ಪಾರ್ಶ್ವನಾಥ, ಕಾರ್ತಿಕೇಯ, ಚಾಮರಧಾರಿಣಿ, ಆನೆ, ವಿಷ್ಣು, ಕೀರ್ತಿಮುಖ ಇತ್ಯಾದಿ ಸುಂದರ ಚಾಳುಕ್ಯ ಶೈಲಿಯ ಶಿಲ್ಪಗಳಿವೆ. ಹೊರ ಆವರಣದಲ್ಲಿಯ ವೀರಗಲ್ಲುಗಳು, ಶಾಸನಗಳು ಮುಂತಾದ ಶಿಲ್ಪಗಳು ಪ್ರವಾಸಿಗರಿಗೂ, ಅಭ್ಯಾಸಿಗಳಿಗೂ ಕೈಮಾಡಿ ಕರೆಯುತ್ತಿವೆ.

 

ಚಿಂಚಲಿ : ಛಾಯಾ ಚಂದ್ರನಾಥ:

ಜಿಲ್ಲೆ: ೧೫ ಕಿ.ಮೀ.

ಗದಗ ತಾಲ್ಲೂಕಿನ ಚಿಂಚಲಿ ಸಮೀಪದ ಗುಡ್ಡದ ದಕ್ಷಿಣ ಭಾಗದಲ್ಲಿರುವ ಶಿಲೆಯ ಮೇಲಣ ಛಾಯಾ ಚಂದ್ರನಾಥ ಜೈನರ ಶ್ರದ್ಧಾಕೇಂದ್ರವಾಗಿದೆ. ಬೆಳಗಿನ ಪ್ರಥಮ ಸೂರ್ಯಕಿರಣಗಳು ಈ ಶಿಲೆಯ ಮೇಲೆ ಬಿದ್ದಾಗ ತೀರ್ಥಂಕರ ರೂಪದ ಗುಲಾಬಿ ಬಣ್ಣದ ಆಕೃತಿ ಗೋಚರಿಸುತ್ತಿದ್ದು ಇದನ್ನೆ ಛಾಯಾ ಚಂದ್ರನಾಥ ಎಂದು ಕರೆಯಲಾಗುತ್ತದೆ. ಅನೇಕ ಜೈನ ಯತಿಗಳು, ವಿದ್ವಾಂಸರು, ಸಾಹಿತಿಗಳು ಹಾಗೂ ಸಾವಿರಾರು ಶ್ರದ್ಧಾಳುಗಳು ಈ ದೃಶ್ಯ ವೀಕ್ಷಿಸಿ ವಿಸ್ಮಿತರಾಗಿದ್ದಾರೆ.

 

ಮುಳಗುಂದ:

ಜಿಲ್ಲೆ ೨೧ ಕಿ.ಮೀ.

ಜಿಲ್ಲಾ ಕೇಂದ್ರದಿಂದ ೨೧ ಕಿಲೋಮೀಟರ ದೂರದಲ್ಲಿರುವ ಮುಳಗುಂದ ಪ್ರಸಿದ್ಧ ಐತಿಹಾಸಿಕ ಸ್ಥಳವಾಗಿದೆ. ಪ್ರಾಚೀನ ಕಾಲದಲ್ಲಿ ಬೆಳ್ವೊಲ – ೩೦೦ ಪ್ರದೇಶ ವ್ಯಾಪ್ತಿಯಲ್ಲಿದ್ದು ಮುಳಗುಂದ – ೧೨ ಎಂಬ ಆಡಳಿತ ವಿಭಾಗದ ರಾಜಧಾನಿಯಾಗಿದ್ದ ಈ ಸ್ಥಳ ಧರ್ಮ, ಸಾಹಿತ್ಯ, ಸಂಸ್ಕೃತಿಗಳ ನೆಲೆವೀಡು, ಮುಳಗುಂದದಲ್ಲಿರುವ ಶೋಭನೇಶ್ವರ, ನಗರೇಶ್ವರ, ಸಿದ್ಧೇಶ್ವರ ದೇವಾಲಯಗಳು ಪ್ರೇಕ್ಷಣೀಯವಾಗಿವೆ. ಒಂದು ಕಾಲದಲ್ಲಿ ಪ್ರಮುಖ ಜೈನಕೇಂದ್ರವಾಗಿದ್ದ ಮುಳಗುಂದದಲ್ಲಿ ಈಗ ಉಲ್ಲೇಖಿಸಬಹುದಾದ ಬಸದಿಗಳೆಂದರೆ ಪಾರ್ಶ್ವನಾಥ ಮತ್ತು ಚಂದ್ರನಾಥ ಬಸದಿಗಳು. ಅನುಭಾವಿ ಕವಿ ಬಾಲಲೀಲಾ ಮಹಾಂತ ಶಿವಯೋಗಿಗಳ ಗವಿಮಠ ಇಲ್ಲಿದ್ದು ಈಗಿನ ಪೀಠಾಧಿಪತಿಗಳಾದ ಪೂಜ್ಯ ಮಲ್ಲಿಕಾರ್ಜುನ ಮಹಾಸ್ವಾಮಿಗಳಿಂದ ಜೀರ್ಣೋದ್ಧಾರಗೊಳ್ಳುತ್ತಿದೆ.

 

ದಾವಲ್ ಮಲಿಕ್ :

ಲಕ್ಷ್ಮೇಶ್ವರ- ಗದಗ ಮಾರ್ಗ ಮಧ್ಯದಲ್ಲಿ ಮುಳಗುಂದ ಗ್ರಾಮದ ಹತ್ತಿರದ ಗುಡ್ಡದ ಮೇಲಿರುವ ಕಲ್ಲಿನ ಕಟ್ಟಡವೇ ದಾವಲ ಮಲಿಕ್ ಇದು ಹಿಂದೂ ಮುಸ್ಲಿಂ ಭಾವೈಕ್ಯತೆಯ ಕೇಂದ್ರವಾಗಿದೆ. ಪ್ರತಿ ಅಮವಾಸ್ಯೆ ದಿನದಂದು ಸಾವಿರಾರು ಹಿಂದೂ-ಮುಸ್ಲಿಂ ಭಕ್ತರು ದರ್ಶನ ಪಡೆದು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಂಡಿದ್ದಾರೆ.

 

ಕಣಗಿನಹಾಳ
ಜಿಲ್ಲೆ : ೧೦ ಕಿ.ಮೀ.

ಏಷ್ಯಾ ಖಂಡದ ಪ್ರಪ್ರಥಮವಾಗಿ ಕಣಗಿನಹಾಳ ಗ್ರಾಮದಲ್ಲಿ “ಕೃಷಿ ಪತ್ತಿನ ಸಹಕಾರ ಸಂಘವನ್ನು ಪ್ರಾರಂಭಿಸಿದವರು ಶ್ರೀ ಸಿದ್ಧನಗೌಡ ಸಣ್ಣರಾಮನಗೌಡ ಪಾಟೀಲರವರು (೧೮೪೩-೧೯೩೩)’’

ಈ ಗ್ರಾಮದಲ್ಲಿ ಇರುವ ನಾರಾಯಣದೇವರ ಗುಡಿ  ಸುಮಾರು ಕ್ರಿ.ಶ. ೧೨ನೇ ಶತಮಾನದಲ್ಲಿ ಚಾಲುಕ್ಯ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಗುಡಿಯಾಗಿದ್ದು, ಗರ್ಭಗೃಹ, ಅಂತರಾಳ ಹಾಗೂ ನವರಂಗವನ್ನು ಹೊಂದಿದೆ. ಗರ್ಭಗೃಹದ ಮೂಲೆಯಲ್ಲಿರುವ ಕಿರುಪ್ರಮಾಣದ ಉಮಾಮಹೇಶ್ವರ ಶಿಲ್ಪವಿದ್ದು, ಇದರ ಬಾಗಿಲವಾಡದ ಲಲಾಟದಲ್ಲಿ ಗಜಲಕ್ಷ್ಮೀ ಇದೆ. ದುಂಡಾದ ಅಡ್ಡಕೊಯ್ತದ ನಾಲ್ಕು ಸ್ಥಂಭಗಳು ನವರಂಗ ಛತ್ತನ್ನು ಹೊತ್ತು ನಿಂತಿದ್ದು, ಸುಂದರವಾಗಿ ಬಿಡಿಸಿದ ಕಮಲದ ಮೊಗ್ಗು ಅಲಂಕರಿಸಿದೆ.

 

ಕೋಟುಮಚಗಿ : ಸೋಮೇಶ್ವರ ಗುಡಿ

ಜಿಲ್ಲೆ: ೧೮ ಕಿ.ಮೀ.

ಇದು ಶಾಸನೋಕ್ತ ಸ್ವಯಂಭು ಸೋಮೇಶ್ವರ ಗುಡಿಯಾಗಿದ್ದು ಸುಮಾರು ಕ್ರಿ. ಶ. ೧೧ ನೇ ಶತಮಾನದಲ್ಲಿ ನಿರ್ಮಾಣಗೊಂಡ ಚಾಲುಕ್ಯ ಶೈಲಿಯ ಗುಡಿ ಇದಾಗಿದೆ. ಗರ್ಭಗೃಹ, ಅಂತರಾಳ, ನವರಂಗ ಹಾಗೂ ನಂತರದಲ್ಲಿ ಸೇರಿರುವ ತೆರೆದ ಮುಖಮಂಟಪವನ್ನು ಹೊಂದಿದೆ. ಎತ್ತರದ ಪ್ರಾಕಾರದ ಪ್ರವೇಶದ್ವಾರವನ್ನು ಕಪ್ಪು ಅಮೃತಶಿಲೆಯಿಂದ ರಚಿಸಲಾಗಿದ್ದು ಲಲಾಟದಲ್ಲಿ ಇರುವ ಉಮಾಮಹೇಶ್ವರ ಕೆತ್ತನೆ ಚಿತ್ತಾಕರ್ಷಕವಾಗಿದೆ. ಗರ್ಭಗೃಹದಲ್ಲಿ ಶಿವಲಿಂಗವಿದ್ದು ನವರಂಗದಲ್ಲಿ ನಂದಿಯಿದೆ. ಹೊರಭಿತ್ತಿಯಲ್ಲಿ ಕಿರು ಶಿಖರ ಹಾಗೂ ಅಲಂಕಾರಿಕ ಕಂಬಗಳಿವೆ. ಗುಡಿಗೆ ದ್ರಾವಿಡ ಶೈಲಿಯ ಶಿಖರವಿದೆ.

 

ಹೊಂಬಳ :ಶಂಕರಲಿಂಗ ಗುಡಿ:

ಜಿಲ್ಲೆ ೨೦ ಕಿ.ಮೀ.

ಇದು ಶಂಕರಲಿಂಗ ಗುಡಿ ಎಂದು ಗುರುತಿಸುವ ದೇವಾಲಯ ಬಹುಶಃ ಶಾಸನೋಕ್ತ ಕುಮಾರ ಬೋಂತೇಶ್ವರ ಗುಡಿಯಾಗಿದ್ದಿರ ಬೇಕೆಂದೆನಿಸುತ್ತದೆ. ವಿಶಾಲವಾದ ಪ್ರಾಕಾರದಲ್ಲಿ ಎತ್ತರವಾದ ಸ್ಥಳದಲಿ ಪೂರ್ವಾಭಿಮುಖವಾಗಿರುವ ಈ ಗುಡಿಯು ಗರ್ಭಗೃಹ, ನವರಂಗ ಹಾಗೂ ಸಭಾಮಂಟಪಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಸ್ವಯಂಭೂ ಲಿಂಗವಿದ್ದು, ಇದರ ಬಾಗಿಲವಾಡ ಆಕರ್ಷಕವಾಗಿದೆ. ನವರಂಗದಲ್ಲಿ ಐದು ದೇವಕೋಷ್ಣಗಳಿದ್ದು ಇವುಗಳಲ್ಲಿ ಉಮಾಮಹೇಶ್ವರ, ಅನಂತಪದ್ಮನಾಭ, ಮಹಿಶಮರ್ದಿನಿ ಹಾಗೂ ಗಣಪತಿ ಶಿಲ್ಪಗಳಿವೆ.

 

ವೆಂಕಟಾಪುರ:

ವೆಂಕಟೇಶ್ವರ ದೇವಾಲಯ

ಜಿಲ್ಲೆ ೧೬ ಕಿ.ಮೀ.

ಗದುಗಿನಿಂದ ವಾಯುವ್ಯಕ್ಕೆ ೧೬ ಕಿ.ಮೀ  ದೂರದಲ್ಲಿ ಗುಡ್ಡದ ಮೇಲೆ ನೈಸರ್ಗಿಕ ಪರಿಸರದಲ್ಲಿರುವ ವೆಂಕಟೇಶ್ವರ ದೇವಾಲಯ ಒಂದು ಪವಿತ್ರ ಕ್ಷೇತ್ರವಾಗಿದೆ. ಈ ದೇವಾಲಯವು ಆಧುನಿಕ ಕಟ್ಟಡವನ್ನು ಹೊಂದಿದ್ದು ಇದನ್ನು ಸುಮಾರು ೧೫೦ ವರ್ಷಗಳ ಹಿಂದೆ ನಿರ್ಮಿಸಿದರೆಂದು ಹೇಳಲಾಗುತ್ತಿದೆ. ಗರ್ಭಗೃಹದಲ್ಲಿ ವೆಂಕಟೇಶನ ಸ್ಥಾನಿಕ ಮೂರ್ತಿಯಿದ್ದು, ಇದರ ಪಕ್ಕದಲ್ಲೇ ಲಕ್ಷ್ಮೀದೇವಿಯ ಆಸೀನ ವಿಗ್ರಹವೂ ಇದೆ.

ಇತರ ಪ್ರಾಚೀನ ದೇವಾಲಯಗಳು:
ಸೂರ್ಯನಾರಾಯಣ ಗುಡಿ ಅಂತೂರು, ಈಶ್ವರ ದೇವಾಲಯ, ಅಸುಂಡಿ ಕೆರೆಯವ್ವನ ಗುಡಿ ಭೋಗೇಶ್ವರ ದೇವಾಲಯ ಎಲೆಶಿರೂರು, ಈಶ್ವರ ದೇವಾಲಯ, ಮೈಲಾರಲಿಂಗನ ಗುಡಿ ಕಣವಿ, ಕಲ್ಮೇಶ್ವರ ದೇವಸ್ಥಾನ, ವೀರಭದ್ರ ಗುಡಿ ಕುರ್ತಕೋಟಿ, ಸೋಮೇಶ್ವರ ಗುಡಿ ಕೋಟುಮಚಗಿ, ಮಲ್ಲಿಕಾರ್ಜುನ ದೇವಾಲಯ, ಬಸವಣ್ಣ ದೇವಾಲಯ ಚಿಂಚಲಿ, ಸೋಮೇಶ್ವರ ದೇವಾಲಯ, ಕೋಡಿ ಬಸವಣ್ಣನಗುಡಿ ನಾಗಾವಿ, ಶಂಭುಲಿಂಗೇಶ್ವರ ದೇವಾಲಯ, ಬೆಂತೂರು ಸೋಮೇಶ್ವರ ಹಾಗೂ ನಾರಾಯಣ ದೇವಾಲಯಗಳು ನೀಲಗುಂದ, ಈಶ್ವರ ಗುಡಿ ಬೆಳಹೊಡ, ನಾರಾಯಣ ಗುಡಿ, ಸೊರಟೂರು ಹಾಗೇ ಹರ್ತಿ ಗ್ರಾಮದಲ್ಲಿ ಬಸವಣ್ಣನ ದೇವಸ್ಥಾನಗಳು ಬಳಗಾನೂರಿನ ಶ್ರೀ ಚನ್ನವೀರ ಶರಣರಮಠ, ಇತ್ತೀಚಿನ ರಾಜರಾಜೇಶ್ವರಿ ದೇವಾಲಯವು ಪವಿತ್ರ ಪ್ರೇಕ್ಷಣೀಯ ಸ್ಥಳಗಳಾಗಿವೆ.