ಕುಮಾರವ್ಯಾಸ

ಕುಮಾರವ್ಯಾಸ ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕುಮಾರವ್ಯಾಸನ ಮೂಲ ಹೆಸರು ನಾರಾಯಣಪ್ಪ “ಗದುಗಿನ ನಾರಾಯಣಪ್ಪ” ಎಂದು ಸಾಮಾನ್ಯವಾಗಿ ಕುಮಾರವ್ಯಾಸನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯ ನಾಮ ಕುಮಾರವ್ಯಾಸ. ಈತನ ಕಾಲ ಸುಮಾರು ಕ್ರಿ. ಶ. ೧೪೩೦ ಎಂದು ನಿಗದಿಪಡಿಸಿವೆ.

ಕುಮಾರವ್ಯಾಸನ ಹುಟ್ಟೂರು ಈಗ ಗದಗ ಜಿಲ್ಲೆಯಲ್ಲಿರುವ ಕೋಳಿವಾಡ ಗ್ರಾಮ; ಕಾವ್ಯರಚನೆಯನ್ನು ಮಾಡಿದ್ದು ಗದುಗಿನ ವೀರನಾರಾಯಣ ಗುಡಿಯಲ್ಲಿ. ಈಗಲೂ ಸಹ ಆ ಗುಡಿಯಲ್ಲಿ ಕುಮಾರವ್ಯಾಸನ ಕಂಬ ಎಂಬ ಒಂದು ಕಂಬವಿದೆ “ಕುಮಾರವ್ಯಾಸ ಈ ಕಂಬದ ಅಡಿಯಲ್ಲೇ ಭಾರತವನ್ನು ರಚಿಸಿ ಓದುತ್ತಿದ್ದ ಎಂಬ ಪ್ರತೀತಿ ಸಹ ಇದೆ.

ಕುಮಾರವ್ಯಾಸನ ಅತಿ ಪ್ರಸಿದ್ಧ ಕೃತಿ ಕರ್ಣಾಟ ಭಾರತ ಕಥಾಮಂಜರಿ. ಇದಕ್ಕೆ ಗದುಗಿನ ಭಾರತ, ಕನ್ನಡ ಭಾರತ, ಕುಮಾರವ್ಯಾಸ ಭಾರತ ಎಂದೂ ಹೆಸರು. ಮಹಾಕವಿ ವ್ಯಾಸರ ಸಂಸ್ಕೃತ ಮಹಾಭಾರತದ ಅನುವಾದ ಎನ್ನಬಹುದು. ಆದರೆ ಕೇವಲ ಅನುವಾದವಾಗಿ ಉಳಿಸದೆ ಕುಮಾರವ್ಯಾಸ ತನ್ನ ಕಾವ್ಯಸಾಮರ್ಥ್ಯವನ್ನು ಈ ಕೃತಿಯಲ್ಲಿ ಸಂಪೂರ್ಣವಾಗಿ ಧಾರೆಯೆರೆದಿದ್ದಾನೆ.

 

ಪಂಚಾಕ್ಷರಿ ಗವಾಯಿಗಳು

ಶ್ರೀ ಪಂಚಾಕ್ಷರ ಗವಾಯಿಗಳು ಗದುಗಿನಲ್ಲಿರುವ ಪ್ರಸಿದ್ಧ ಸಂಗೀತ ಆಶ್ರಮವಾದ “ಶ್ರೀ ವೀರೇಶ್ವರ ಪುಣ್ಯಾಶ್ರಮ” ದ ಸಂಸ್ಥಾಪಕರು.

ಸಂಗೀತಶಾಲೆಗಳ ಖರ್ಚು ತೂಗಿಸಲು ನಾಟಕ ಕಂಪನಿಯೊಂದನ್ನು ಪ್ರಾರಂಭಿಸಿ ಕೈಸುಟ್ಟುಕೊಂಡರು. ನಡುವೆ ೧೯೩೦ರಲ್ಲಿ ಬರಗಾಲ ಬಿದ್ದದ್ದರಿಂದ ಪಂಚಾಕ್ಷರಿ ಗವಾಯಿಗಳು ತಮ್ಮ ಶಿಷ್ಯರಿಗಾಗಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಆಗ ಮುಂದೆ ಬಂದು ನೆರವು ನೀಡಿದವರು ಬಸರಿಗಿಡದ ವೀರಪ್ಪನವರು. ಇವರು ಗವಾಯಿಗಳಿಗಾಗಿ ಗದಗಿನಲ್ಲಿಯೇ ತಮ್ಮ ಜಾಗದಲ್ಲಿ ಒಂದು ತಗಡಿನ ಪಾಠಶಾಲೆ ಕಟ್ಟಿಸಿಕೊಟ್ಟು, ಧನ-ಧಾನ್ಯದ ಸಹಾಯವನ್ನು ಸಹ ನೀಡಿದರು. ಈ ಸಂಗೀತಶಾಲೆಗೆ ಗವಾಯಿಗಳು “ಶ್ರೀ ವೀರೇಶ್ವರ ಪುಣ್ಯಾಶ್ರಮ” ಎಂದೇ ಹೆಸರಿಟ್ಟರು.

ಸುಮಾರು ನಾಲ್ಕು ವರ್ಷಗಳವರೆಗೆ ಗವಾಯಿಗಳು ಉದರ ರೋಗದಿಂದ ಬಳಲಿದರು. ಕೊನೆಗೆ ದಿನಾಂಕ ೧೧ ನೇ ಜೂನ್ ೧೯೪೪ ರಂದು ಪಂಚಾಕ್ಷರ ಗವಾಯಿಗಳು ವಿಶ್ವ ಸಂಗೀತದಲ್ಲಿ ಲೀನರಾದರು.

 

ಭೀಮಸೇನ ಜೋಷಿ:

ಪಂಡಿತ ಭೀಮಸೇನ ಜೋಷಿ, (ಗುರುರಾಜ ಜೋಷಿ) ಇವರು ೪ ಫೆಬ್ರುವರಿ ೧೯೨೨ ರಲ್ಲಿ ಗದಗ ಜಿಲ್ಲೆಯ ಗದಗ ತಾಲ್ಲೂಕಿನ ಹೊಂಬಳ ಗ್ರಾಮದಲ್ಲಿ ಜನಿಸಿದರು. ಹಿಂದುಸ್ತಾನಿ ಸಂಗೀತ ಪದ್ಧತಿಯ ಅತಿ ಪ್ರಸಿದ್ಧ ಗಾಯಕರಲ್ಲಿ ಒಬ್ಬರು. ಇವರು ಭಾರತ ರತ್ನ ಪ್ರಶಸ್ತಿ ಪಡೆದ ಮೊದಲು ಹಿಂದುಸ್ತಾನಿ ಸಂಗೀತ ಪದ್ಧತಿಯ ಗಾಯಕರು.

ಸಣ್ಣ ವಯಸ್ಸಿನಲ್ಲಿಯೇ ಸಂಗೀತ ಕಲಿಯಲೆಂದು ಮನೆಯನ್ನು ಬಿಟ್ಟು ಜೋಷಿಯವರು ಧಾರವಾಡ ಜಿಲ್ಲೆಗೆ ಹಿಂದಿರುಗಿ ಕುಂದಗೋಳದ ಪ್ರಸಿದ್ಧ ಗಾಯಕರಾದ ಸವಾಯಿ ಗಂಧರ್ವರ ಶಿಷ್ಯರಾದರು.

ಕನ್ನಡ ಭಾಷೆಯ ದಾಸಶ್ರೇಷ್ಟರ ಪದ್ಯಗಳಾದ “ಭಾಗ್ಯದ ಲಕ್ಷ್ಮೀ ಬಾರಮ್ಮ’’ ಮತ್ತು “ಎನ್ನ ಪಾಲಿಸೋ’’ ಹಾಡುಗಳನ್ನು ಸೊಗಸಾಗಿ ಗಾಯನ ಮಾಡಿದ್ದಾರೆ. ಇವು ಭೀಮಸೇನ ಜೋಷಿಯವರ ಮುಖ್ಯ ಆಲ್ಬಮ್ ಗಳಾಗಿವೆ.

 

ವೀರನಾರಾಯಣ ದೇವಸ್ಥಾನ :

ವೀರನಾರಾಯಣ ದೇವಸ್ಥಾನ ಗದಗನಲ್ಲಿದೆ. ಗದುಗಿನ ಮಹಾಭಾರತ ಅಥವಾ ಕರ್ನಾಟ ಭಾರತ ಕಥಾಮಂಜರಿ ರಚಿಸಿದ ಕುಮಾರವ್ಯಾಸ ಇದೇ ದೇವಸ್ಥಾನದಲ್ಲಿ ಕುಳಿತು ಮಹಾಭಾರತವನ್ನು ರಚಿಸಿದನೆಂದು ಹೇಳಲಾಗುತ್ತದೆ. ಆತ ದೇವಸ್ಥಾನದ ಯಾವ ಕಂಬದ ಕೆಳಗೆ ಕುಳಿತು ಪ್ರತಿದಿನ ಮಹಾಭಾರತ ಬರೆಯುತ್ತಿದ್ದನೋ ಇವತ್ತಿಗೂ ಅದು ಕುಮಾರವ್ಯಾಸ ಕಂಬವೆಂದೇ ಪ್ರಸಿದ್ದಿಯಾಗಿದೆ.

ಹೊಯ್ಸಳ ದೊರೆ ಬಿಟ್ಟಿದೇವನು ಶ್ರೀ ರಾಮಾನುಜಾಚಾರ್ಯ ರಿಂದ ದೀಕ್ಷೆ ಪಡೆದು ವೈಷ್ಣವನಾದ ಮೇಲೆ ಗುರುವಿನ ಆಜ್ಞೆಯಂತೆ ೧೧೧೭ರಲ್ಲಿ ಶ್ರೀ ವೀರನಾರಾಯಣ ದೇವಸ್ಥಾನ ಕಟ್ಟಿಸಿದನೆಂದು ಪ್ರತೀತಿ ಇದೆ. ಈತ ಕಟ್ಟಿಸಿದ ಪಂಚನಾರಾಯಣ ದೇವಸ್ಥಾನಗಳಲ್ಲಿ ಇದೂ ಒಂದು. ಚಾಲುಕ್ಯ, ಹೊಯ್ಸಳ ಹಾಗೂ ವಿಜಯನಗರ ಶಿಲ್ಪಗಳ ಸುಂದರ ಸಂಗಮ ಶ್ರೀ ವೀರನಾರಾಯಣ ದೇವಸ್ಥಾನ, ಗರ್ಭಗುಡಿ ಹಾಗೂ ಅದರ ಮೇಲಿನ ಶಿಲಾಗೋಪುರ ಚಾಲುಕ್ಯ ಶಿಲ್ಪದ ಮಾದರಿಯಲ್ಲಿದ್ದರೆ, ಗರುಡಗಂಭ, ರಂಗಮಂಟಪಗಳು ಹೊಯ್ಸಳ ಶಿಲ್ಪದ ಮಾದರಿಗಳಾಗಿವೆ. ಗುಡಿಯ ಮಹಾದ್ವಾರ ಗೋಪುರ ವಿಜಯನಗರ ಶೈಲಿಯದು.

 

ತ್ರಿಕೂಟೇಶ್ವರ ದೇವಸ್ಥಾನ :

“ಸ್ವಯಂಭೂ ಈಶ್ವರ”. “ತ್ರೈಪುರುಷ”, “ಸ್ವಯಂ ಭೂ ತ್ರಿಕೂಟೇಶ್ವರ” ಎಂದು ಕಾಲದಿಂದ ಕಾಲಕ್ಕೆ ಕರೆಯಿಸಿಕೊಂಡ ತ್ರಿಕೂಟೇಶ್ವರ ದೇವಸ್ಥಾನ ಕ್ರಿ. ಶ. ೧೦೦೨ ರಲ್ಲಿ ನಿರ್ಮಾಣವಾಗಿದೆ. ಇದು ಕಲ್ಯಾಣ ಚಾಲುಕ್ಯ- ವಾಸ್ತುಶಿಲ್ಪವಾಗಿದ್ದು, ಹೊಯ್ಸಳ ಹಾಗೂ ವಿಜಯನಗರ ಅರಸರಿಂದ ಇದು ಅಭಿವೃದ್ಧಿಗೊಂಡಿದೆ. ಗರ್ಭಗುಡಿಯಲ್ಲಿ ತ್ರಿಕೂಟೇಶ್ವರ ಸ್ಥಿತನಾಗಿದ್ದು ಇದು ಸ್ವಯಂಭೂ ಎಂದೂ, ಬ್ರಹ್ಮ, ವಿಷ್ಣು, ಮಹೇಶ್ವರರ ಪ್ರತಿರೂಪವೆಂದೂ “ಕೃತಪುರ ಮಹಾತ್ಮೆ” ಯಲ್ಲಿ ವಿವರಿಸಲಾಗಿದೆ.

 

ಸರಸ್ವತಿ ದೇವಾಲಯ:

ಗದುಗಿನ ತ್ರಿಕೂಟೇಶ್ವರ ದೇವಸ್ಥಾನದ ಪ್ರಾಕಾರದಲ್ಲಿರುವ ಸರಸ್ವತಿ ದೇವಾಲಯ “ಚಾಲುಕ್ಯರ ಶಿಲ್ಪಕಲೆಯ ವೈಭವಪೂರ್ಣ ಕಾಲಾವಧಿಯಲ್ಲಿ ನಿರ್ಮಾಣವಾದ ಉತ್ಕೃಷ್ಟ ದೇವಾಲಯಗಳಲ್ಲಿ ಒಂದು”ಎಂದು ವಿದ್ವಾಂಸರ ಪ್ರಶಂಸೆಗೆ ಪಾತ್ರವಾಗಿದೆ. ಈ  ದೇವಾಲಯವು ಗರ್ಭಗೃಹ, ಅಂತರಾಳ, ಸಭಾಮಂಟಪ ಹಾಗೂ ಒಂದು ಮುಖ್ಯದ್ವಾರದಿಂದ ಕೂಡಿದೆ. ಗರ್ಭಗೃಹದಲ್ಲಿ ಸ್ಥಾಪಿತವಾದ ಸರಸ್ವತಿ ಮೂರ್ತಿ ಭಗ್ನಗೊಂಡಿದೆಯಾದರೂ ಅದರ ಮೂಲ ಚೆಲುವಿಕೆಗೆ ಸಾಕ್ಷಿಯಾಗಿ ನಿಂತಿದೆ. ಎತ್ತರದ ಪೀಠದಲ್ಲಿ ಹಂಸವಾಹಿನಿಯಾಗಿ ಪದ್ಮಾಸನದಲ್ಲಿ ಕುಳಿತಿರುವ ಶಾರದೆಯು ರತ್ನಹಾರ, ಸ್ತನಹಾರ, ಉದರಹಾರ, ತೋಳಬಂಧಿ, ಸೊಂಟಪಟ್ಟಿ, ಮುಕುಟ ಮುಂತಾದ ಆಭರಣಗಳಿಂದ ಅಲಂಕೃತಳಾಗಿದ್ದಾಳೆ. ಹೂವಿನ ಚಿತ್ರವುಳ್ಳ ನೆರಿಗೆಗಳಿಂದ ಕೂಡಿದ ಪಾರದರ್ಶಕದಂತಹ ಸೀರೆಯ ಕೆತ್ತನೆ ಶಿಲ್ಪಿಯ ಕಲಾಕೌಶಲ್ಯಕ್ಕೆ ಸಾಕ್ಷಿ ನುಡಿಯುವಂತಿದೆ. ಈ ಮೂರ್ತಿಯು ಭಗ್ನವಾಗಿದ್ದರಿಂದ ಕೆಲವು ವರ್ಷಗಳ ಹಿಂದೆ ಮತ್ತೊಂದು ಮೂರ್ತಿಯನ್ನು ಸ್ಥಾಪಿಸಲಾಗಿದೆ.

 

ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ:

ಈ ಮಠವು ೧೫ನೇಯ ಶತಮಾನದಲ್ಲಿ ಬದುಕಿ ಬಾಳಿದ ಶಿವಯೋಗಿ ಸೂರ್ಯ ಶ್ರೀ ಯಡೆಯೂರು ತೋಂಟದ ಶ್ರೀ ಸಿದ್ದಲಿಂಗ ಯತಿಗಳ ನೇರ ವಾರಸುದಾರಿಕೆಯ ಮಠ ಸದ್ಯ ಈ ಮಠದ ೧೯ ನೇಯ ಪೀಠಾಧಿಕಾರಿಗಳಾಗಿರುವವರು ಜಗದ್ಗುರು ಡಾ|| ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು.

 

ವೀರೇಶ್ವರ ಪುಣ್ಯಾಶ್ರಮ

ಪೂಜ್ಯ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳವರ ಕರುಣೆಯ ಕಂದರಾಗಿ ಬೆಳೆದ ಪೂಜ್ಯ ಶ್ರೀ ಪಂಚಾಕ್ಷರಿ ಗವಾಯಿಗಳವರಿಂದ ಶ್ರೀ ವೀರೇಶ್ವರ ಪುಣ್ಯಾಶ್ರಮ ಸ್ಥಾಪಿತವಾಯಿತು. ಈಗಿರುವ ಪೀಠಾಧಿಪತಿಗಳು ಉಭಯಗಾಯನ ವಿಶಾರದ ಪಂಡಿತ ಪೂಜ್ಯ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರು. ಗುರು ಶಿಷ್ಯರಿಬ್ಬರು ಅಂಧರಾಗಿದ್ದರು. ಇವರಿಂದ ಅಸಂಖ್ಯಾತ ದೀನರು, ಅನಾಥರು, ಅಂಧರು ತಮ್ಮ ಬದುಕಿಗೆ ಬೆಳಕನ್ನು ಕಂಡುಕೊಂಡಿದ್ದಾರೆ. ಈಗಲೂ ನೂರಾರು ಅನಾಥ ಅಂಧ ಮಕ್ಕಳಿಗೆ ಅನ್ನ ,ಆಶ್ರಯ, ಅರಿವು ನೀಡಿ ಸಲಹುತ್ತಿದ್ದಾರೆ

 

ಮಸೀದಿಗಳು:

ಕೆಲವು ಕಾಲ ವಿಜಾಪೂರ ಆದಿಲ್ ಶಾಹಿಗಳ ಆಡಳಿತಕ್ಕೆ ಒಳಪಟ್ಟ ಈ ನಗರದಲ್ಲಿ ಅನೇಕ ಮಸೀದಿಗಳು ದರ್ಗಾಗಳು ಇವೆ. ದಿಲೇರ್ ಖಾನ್ ಎಂಬ ಔರಂಗಜೇಬನ ಸೇನಾನಿ ಕಟ್ಟಿಸಿದನೆಂದು ಹೇಳಲಾಗುವ ಒಂದು ಕರೀಕಲ್ಲಿನ ಆಕರ್ಷಕ ಮಸೀದೆ ನಗರದ ಜವಳಿ ಬಜಾರ ಭಾಗದಲ್ಲಿ ಇದೆ. ಜಾಮೀ ಮಸೀದೆ, ವೀರನಾರಾಯಣ ಗುಡಿ ಹಾಗೂ ತ್ರಿಕೂಟೇಶ್ವರ ದೇವಾಲಯಕ್ಕೆ ಸಂಬಂಧಿಸಿದಂತೆ ಒಂದೇ ಟ್ರಸ್ಟ್ ಇರುವುದು ಉಲ್ಲೇಖಾರ್ಹ.

 

ಚರ್ಚುಗಳು

ರೆ.ಕ್ಯಾನಲ್ ಸಿಸಿಲ್ ಎಸ್. ರೇವ್ಹಿಂಗಟನ್ ರಿಂದ ೧೯೦೧ ರಲ್ಲಿ ಸ್ಥಾಪಿತವಾದ ಎಸ್.ಪಿ.ಜಿ.ಚರ್ಚ ಮೇ, ೭-೨೦೦೦ ದಂದು ತನ್ನ ಶತಮಾನೋತ್ಸವವನ್ನು ಆಚರಿಸಿಕೊಂಡಿದೆ. ಬೆಟಗೇರಿಯ ಬಾಸೆಲ್ ಮಿಶನ್ ಚರ್ಚ ಹಾಗೂ ರೋಮನ್ ಕೆಥೋಲಿಕ್ ಚರ್ಚಗಳು ಕ್ರಿಶ್ಚಿಯನ್ ಬಂಧುಗಳ ದೇವಾರಾಧನೆ, ಆತ್ಮೋಜೀವಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿವೆ.

 

ಮಲ್ಲರಾಯನ ಕಟ್ಟೆ, ಬೆಟಗೇರಿ:

ಕರ್ನಾಟಕದ ವೀರಪರಂಪರೆಗೆ ಗದಗ- ಬೆಟಗೇರಿಯೂ ಹೊರತಾಗಿಲ್ಲ ಗ್ರಾಮರಕ್ಷಣೆ ಹಾಗೂ ಮಹಿಳೆಯರ ಮಾನರಕ್ಷಣೆಗೆ ಹೋರಾಡಿ ಮಡಿದ ವೀರ ಸ್ಮಾರಕವಾಗಿ ನಿಲ್ಲಿಸಿದ ವೀರಗಲ್ಲುಗಳ ಸಮೂಹವೇ ಇಲ್ಲಿದೆ.

 

ಭೀಷ್ಮ ಕೆರೆ :

ಗದಗ-ಬೆಟಗೇರಿ ನಗರದ ಜೀವನಾಡಿಯಾಗಿರುವ ಭೀಷ್ಮಕೆರೆ ತುಂಬಾ ಪ್ರಾಚೀನವಾದದ್ದು. ಈ ಕೆರೆಯ ಒಟ್ಟು ೧೦೩ ಎಕರೆ ಕ್ಷೇತ್ರದ ಅಭಿವೃದ್ಧಿ ಕಾರ್ಯ ಕೈಗೊತ್ತಿಕೊಂಡಿದ್ದು ಈಗಾಗಲೇ ೪೪ ಎಕರೆ ಕ್ಷೇತ್ರದಲಿ ಹೂಳೆತ್ತುವ ಕಾರ್ಯ ಪೂರ್ತಿಗೊಂಡಿದೆ. ೧.೯೦ ಕಿಲೋ ಮೀಟರ್ ಉದ್ದದ ಜಾಗಿಂಗ್ ಪಥ ನಿರ್ಮಾಣವಾಗಿದೆಯಲ್ಲದೆ ಪಕ್ಷಿಗಳನ್ನಾಕರ್ಷಿಸಲು ಎರಡು ನಡುಗಡ್ಡೆಗಳು ನಿರ್ಮಾಣವಾಗಿವೆ. ಕೆರೆಯ ಸುತ್ತಲೂ ನೆಟ್ಟಿರುವ ಹೂ-ಗಿಡಗಳು, ವಿಶ್ರಾಂತಿಗಾಗಿ ನಿರ್ಮಿಸಿದ ಆಸನಗಳು, ಸಂಜೆ, ಕೆರೆಯನ್ನು ವಿಶಿಷ್ಟ ಕಾಂತಿಯಲ್ಲಿ ಮೀಯಿಸುವ ದೀಪಗಳಿಂದಾಗಿ ಕೆರೆ ಆಕರ್ಷಣೀಯವಾಗಿದೆ.

 

ಪ್ರಾಣಿ ಸಂಗ್ರಹಾಲಯ:

ಗದಗ ನಗರದಿಂದ ಸುಮಾರು ೩ಕಿಮಿ ದೂರದಲ್ಲಿರುವ ನಗರ ವ್ಯಾಪ್ತಿಗೆ ಸೇರಿದ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ ಗದಗ ನಗರದ ಜನತೆಗೆ ಮನರಂಜನೆಯ ಮತ್ತು ಆಕರ್ಷಕ ತಾಣವಾಗಿದೆ. ಬೆಟ್ಟದಲ್ಲಿ ದಟ್ಟವಾದ ಅರಣ್ಯವನ್ನು ಬೆಳಸಲಾಗಿದೆ. ಇಲ್ಲಿರುವ ಪರಿಸರದಲ್ಲಿ ಅನೇಕ ಪ್ರಾಣಿಗಳನ್ನು, ಪಕ್ಷಿಗಳನ್ನು ಇಂಂμಂuಇ ಮಾಡಲಾಗುತ್ತದೆ. ಉದ್ಯಾನವನಗಳು ಮಕ್ಕಳನ್ನು ಕೈ ಬೀಸಿ ಕರೆಯುತ್ತಿವೆ. ರಜಾ ದಿನಗಳಲ್ಲಿ ಪ್ರವಾಸಿಗಳಿಗೆ ವನಭೋಜನ ಸ್ಥಳವಾಗಿದೆ ಇಲ್ಲಿ ಅನೇಕ ಜಾತಿಯ ಗಿಡಮರ ಬೆಳೆಸಲಾಗುತ್ತದೆ. ನರ್ಸರಿ ಕೂಡಾ ಇದೆ.