ಗದಗ

ಗದಗ ಉತ್ತರ ಕರ್ನಾಟಕದ ಒಂದು ಜಿಲ್ಲೆ. ಇಲ್ಲಿ ಬೆಳೆಯಲ್ಪಡುವ ಮುಖ್ಯ ಬೆಳೆಗಳು ಜೋಳ, ಗೋಧಿ, ಮೆಕ್ಕೆಜೋಳ, ಬೇಳೆಗಳು, ನೆಲಗಡಲೆ, ಸೂರ್ಯಕಾಂತಿ, ಹತ್ತಿ, ಈರುಳ್ಳಿ ಮತ್ತು ಮೆಣಸಿನಕಾಯಿ.

ಪ್ರಾಕೃತಿಕ ಪರಿಚಯ:

ಇದು ಒಂದು ಒಳನಾಡು ಬಯಲು ಪ್ರದೇಶದ ಜಿಲ್ಲೆ. ಉತ್ತರದ ಗಡಿಯಲ್ಲಿ ಮಲಪ್ರಭೆ, ದಕ್ಷಿಣದ ಗಡಿಯಲ್ಲಿ ತುಂಗಭದ್ರೆ ನದಿಗಳು ಹರಿಯುತ್ತವೆ. ಇದಲ್ಲದೇ ಜಿಲ್ಲೆಯಲ್ಲಿ ಹರಿದಿರುವ ಬೆಣ್ಣೆಹಳ್ಳ, ರೋಣ ತಾಲೂಕಿನಲ್ಲಿ ಮಲಪ್ರಭಾ ನದಿಯನ್ನು ಸೇರುತ್ತದೆ. ಜಿಲ್ಲೆಯಾದ್ಯಂತ ಕಪ್ಪುಮಣ್ಣು, ಅಲ್ಲಲ್ಲಿ ಕೆಂಪು ಭೂಮಿಯೂ ಇದೆ.

ಹವಾಮಾನ :

ಉಷ್ಣಾಂಶದಿಂದ ಕೂಡಿದ ಹಿತಕರ ಮತ್ತು ಆರೋಗ್ಯಕರ ಹವಾಮಾನವನ್ನು ಜಿಲ್ಲೆಯೊಳಗೊಂಡಿದೆ. ಫೆಬ್ರುವರಿಯಿಂದ ಮೇ ವರೆಗೆ ಬೇಸಿಗೆ ಕಾಲ, ಜೂನ್ ದಿಂದ ಸಪ್ಟೆಂಬರವರೆಗೆ ಮುಂಗಾರು ಮಳೆಗಾಲದಿಂದ ಹವೆ ತಂಪಾಗಿರುತ್ತದೆ. ಅಕ್ಟೋಬರ್ – ನವ್ಹಂಬರ್ ತಿಂಗಳುಗಳಲ್ಲಿ ಈಶಾನ್ಯ ಮಾರುತ ಕಾರಣವಾಗಿ ಮಳೆ ಬೀಳುವ ಸಾಧ್ಯತೆಗಳಿವೆ. ಡಿಸೆಂಬರದಿಂದ ಫೆಬ್ರುವರಿವರೆಗೆ ಚಳಿಗಾಲ. ಏಪ್ರೀಲ್ ಮೇ ತಿಂಗಳಲ್ಲಿ ಗರಿಷ್ಠ ಉಷ್ಣಾಂಶ ೪೨ ಸೆಂ. ಗ್ರೆ. ಮತ್ತು ಡಿಸೆಂಬರ್ ಜನೆವರಿ ತಿಂಗಳುಗಳಲ್ಲಿ ಕನಿಷ್ಠ ಉಷ್ಣಾಂಶ ೧೬ ಸೆಂ. ಗ್ರೇಡ್ ವರೆಗೂ ಇರುತ್ತದೆ.

ಗದಗದ ವಿಶೇಷ ಖಾದ್ಯ ಮಿರ್ಚಿ ಭಜಿಯನ್ನು ಸಾಮಾನ್ಯ ಭಜಿಯ ಹಾಗೆಯೇ ಎಣ್ಣೆಯಲ್ಲಿ ಕರಿದು ತಯಾರಿಸಲಾಗುತ್ತದೆ. ಆದರೆ ವಿಶೇಷತೆಯೆಂದರೆ ಅದರೊಳಗಿರುವ ಖಾರವಾದ ಮಿರ್ಚಿ ಅಂದರೆ ಹಸಿಮೆಣಸಿನಕಾಯಿ. ಇದು ಭಜಿಗೆ ಬೇಕಾದ ರುಚಿಯನ್ನು ನೀಡುತ್ತದೆ. ಇದು ಜಿಲ್ಲೆಯ ವಿಶೇಷ ಖಾದ್ಯ.

ಒಂದು ಕಾಲದಲ್ಲಿ ಗದಗ ಶಹರದಲ್ಲಿ ಎಲ್ಲೇ ನಿಂತು ಕಲ್ಲು ತೂರಿದರೂ ಅದು ಯಾವದಾದರೊಂದು ಪ್ರಿಂಟಿಂಗ್ ಪ್ರೆಸ್‌ಗೆ ಹೋಗಿ ಬೀಳುತ್ತದೆಂಬ ಪ್ರತೀತಿ ಇತ್ತು. ಅಕರ್ಷಕ ಮುದ್ರಣಾಲಯಗಳು ಗದಗನಲ್ಲಿದ್ದವು. ಮುದ್ರಣ ಕ್ಷೇತ್ರದಲ್ಲಿ ಕರ್ನಾಟಕದಲ್ಲೇ ಗದಗನ್ನು ಮೀರಿಸಿದವರಿಲ್ಲ.

ಧಾರ್ಮಿಕ ಸಮನ್ವಯ::

ಧರ್ಮ ಸಹಿಷ್ಣುತೆಗೆ ಇಡೀ ರಾಷ್ಟ್ರಕ್ಕೆ ಮಾದರಿಯಾಗಬಲ್ಲ ಜಿಲ್ಲೆ ಗದಗ. ವೈಷ್ಣವ ಸಂಪ್ರದಾಯದ ಶ್ರೀ ವೀರನಾರಾಯಣ ದೇವಾಲಯ, ಶೈವ ಸಂಪ್ರದಾಯದ ಶ್ರೀ ತ್ರಿಕೂಟೇಶ್ವರ ದೇವಾಲಯ ಹಾಗೂ ಇಸ್ಲಾಂ ಧರ್ಮದ ಜುಮ್ಮಾಮಸೀದೆ ಈ ಮೂರು ಧಾರ್ಮಿಕ ಸಂಸ್ಥೆ ಸೇರಿ ಒಂದೇ ಟ್ರಸ್ಟ್ ಇರುವುದು ವಿಶ್ವಕ್ಕೆ ಮಾದರಿ. ಶಿರಹಟ್ಟಿಯ ಫಕ್ಕೀರೇಶ್ವರ, ವರವಿಯ ಮೌನೇಶ್ವರ ಹಿಂದೂ- ಇಸ್ಲಾಂ ಎರಡೂ ಧರ್ಮಗಳ ಸಮನ್ವಯದ ಸಾಮರಸ್ಯ ಕೇಂದ್ರಗಳು. ಗದುಗಿನ ಶ್ರೀ ಜಗದ್ಗುರು ತೋಂಟದಾರ‍್ಯ ಮಠವಂತೂ ಸರ್ವಧರ್ಮಗಳಿಗೆ ಮುಕ್ತವಾಗಿ ಬಾಗಿಲನ್ನು ತೆರೆದು ಸರ್ವಧರ್ಮೀಯರ ಶ್ರದ್ಧಾಕೇಂದ್ರ. ಲಕ್ಷ್ಮೇಶ್ವರದ ದೂದ ಪೀರಾ ಸೂಫೀ ಗದ್ದುಗೆಯು ಹಿಂದೂ – ಮುಸ್ಲಿಂಮರಿಗೆ ಸಮಾನ ಪೂಜ್ಯ ಸ್ಥಳ.

 

ಸಾಹಿತ್ಯ – ಸಂಸ್ಕೃತಿ – ಕ್ರೀಡಾಲೋಕ :

ಕವಿ ಕುಮಾರವ್ಯಾಸನ ಕರ್ಮಭೂಮಿ, ಕವಿ ಚಾಮರಸನ ಜನ್ಮಭೂಮಿ (ನಾರಾಯಣಪುರ). ಗದಗ ಜಿಲ್ಲೆ, ಅಲ್ಲದೇ ರೋಣ ತಾಲೂಕಿನ ಸವಡಿ ಗ್ರಾಮದ ದುರ್ಗಸಿಂಹ, ಮುಳಗುಂದ ದನಯಸೇನ, ಮಲ್ಲಿಷೇಣ, ಬಾಲಲೀಲಾ ಮಹಾಂತ ಶಿವಯೋಗಿ, ಲಕ್ಕುಂಡಿಯ ಮುಕ್ತಾಯಕ್ಕ, ಲಕ್ಷ್ಮೇಶ್ವರದ ಆಚಣ್ಣ, ಪರಮಭಕ್ತ ಕವಿ, ಸುರಂಗ ಕವಿ, ಬೆಟಗೇರಿಯ ಸಿದ್ಧಮಲ್ಲಾರ್ಯ, ದಾನಪಾರ್ಯ, ನರಗುಂದದ ಶ್ರೀಧರಾಚಾರ್ಯ ಮುಂತಾದ ಕವಿಕೋಗಿಲೆಗಳ ಪುಣ್ಯಧಾಮವಿದು.

ಆಧುನಿಕ ಸಾಹಿತ್ಯ ಕ್ಷೇತ್ರಕ್ಕೂ ಗದಗ ಜಿಲ್ಲೆಯ ಕೊಡುಗೆ ದೊಡ್ಡದು. ಹುಯಿಲಗೋಳ ನಾರಾಯಣರಾಯರು, ಕನ್ನಡ ಕುಲ ಪುರೋಹಿತರು ಆಲೂರು ವೆಂಕಟರಾಯರು, ಶಾಂತಕವಿಗಳು, ಸಂಗ್ಯಾ-ಬಾಳ್ಯಾ ಖ್ಯಾತಿಯ ಪತ್ತಾರ ಮಾಸ್ತರ, ರಂ. ಶ್ರೀ. ಮುಗಳಿ, ಡಾ|| ಆರ್. ಸಿ. ಹಿರೇಮಠ, ಕವಿ. ಸಂ. ಶಿ. ಭೂಸನೂರಮಠ, ಚೆನ್ನವೀರ ಕಣವಿ, ಸೋಮಶೇಖರ ಇಮ್ರಾಪುರ. ಎಂ. ಎಸ್. ಸುಂಕಾಪುರ, ಕೋಡಿಕೊಪ್ಪದ ಬಸವರಾಜ ಶಾಸ್ತ್ರಿ, ಬಿ.ವಿ. ಮಲ್ಲಾಪುರ, ನಾಟಕಕಾರ ಗರೂಡ ಸದಾಶಿವರಾಯರು, ಎಚ್.ಎನ್. ಹೂಗಾರ, ಫ. ಶಿ. ಭಾಂಡಗೆ, ಎನ್ಕೆ ಕುಲಕರ್ಣಿ, ಕೆ. ಬಿ. ಅಂಗಡಿ, ಜಿ. ಎನ್. ಜಾಡಗೌಡರ, ಎಂ. ಜೀವನ ಮುಂತಾದವರೆಲ್ಲ ಕನ್ನಡ ಸಾಹಿತ್ಯಕ್ಕೆ ಗದಗ ಜಿಲ್ಲೆ ಸಲ್ಲಿಸಿದ ಸಾಹಿತ್ಯ ಸುಮಗಳು.

ಖ್ಯಾತ ಅಂತರ ರಾಷ್ಟ್ರೀಯ ಕ್ರಿಕೆಟ ಕ್ರೀಡಾಪಟು ಸುನೀಲ್ ಜೋಶಿ, ಕಬಡ್ಡಿ, ಆಟಗಾರ್ತಿ ಸುನಿತಾ ಬಟ್ಟೂರ, ರಾಷ್ಟ್ರೀಯ ಅಥ್ಲೆಟ್ ವಿಲಾಸ ನೀಲಗುಂದ, ಸೈಕ್ಲಿಸ್ಟ ನೀಲಮ್ಮ ಮಲ್ಲಿಗವಾಡ ಇನ್ನೂ ಮೊದಲಾದ ಕ್ರೀಡಾ ಪ್ರತಿಭೆಗಳು ಗದಗ ಜಿಲ್ಲೆಯಲ್ಲಿದ್ದಾರೆ.

 

ಗದಗ ಜಿಲ್ಲೆಯಲ್ಲಿರುವ ತಾಲೂಕುಗಳು :

  • ಗದಗ (ಶಹರ ಮತ್ತು ಗ್ರಾಮೀಣ)
  • ಮುಂಡರಗಿ
  •  ನರಗುಂದ
  •  ರೋಣ
  •  ಶಿರಹಟ್ಟಿ