1952ರ ನ೦ತರ ಸರಕಾರವು ಕೃಷಿ ಅಭಿವೃದ್ಢಿಗಾಗಿ ಹಲವು ಯೋಜನೆಗಳನ್ನು ರೂಪಿಸಲು ಆರ೦ಭಿಸಿತ್ತು. ಆಗ ಪ್ರತೀ  ಬ್ಲಾಕ್ (ಹೋಬಳಿ)ಗೆ ಆರು ಜನರ ಅಭಿವೃದ್ಢಿ ಸಮಿತಿಯನ್ನು ಸರಕಾರ ಸ೦ಘಟಿಸಿತ್ತು. ಪ್ರತೀ ಬ್ಲಾಕ್‌ಗೂ ಒಬ್ಬರು ಅಧಿಕಾರಿಯ ನೇಮಕವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹದಿನಾರು ಬ್ಲಾಕ್‌ಗಳಿದ್ದುವು.

ಹೆಜಮಾಡಿ ಮುದ್ದಣ್ಣ ಶೆಟ್ಟರು ಆಗ ಮ೦ಗಳೂರಿನ ಬಿಡಿ‌ಒ ಆಗಿದ್ದರು. ಅವರು ಮೊದಲು ವಿಜ್ಞಾನ ಅಧ್ಯಾಪಕರಾಗಿ, ಅನ೦ತರ ವಿಸ್ತರಣಾ ಇಲಾಖೆಗೆ ಸೇರಿ, ಅಧಿಕಾರಿಯಾದವರು. ಭತ್ತದ ಬೆಳೆಯ ಅಭಿವೃದ್ಡಿಗೆ ಅಗತ್ಯವಾದ ಬೀಜದ ತಳಿ, ಆರೈಕೆ, ಪರಿಷ್ಕರಣೆ, ನೇಜಿ ನೆಡುವ ಕ್ರಮ, ಸಾವಯವ ಮತ್ತು ಕೃತಕ ಗೊಬ್ಬರಗಳ ಬಳಕೆ, ಕೀಟ ಹತೋಟಿ – ಈ ಎಲ್ಲಾ ವಿಷಯಗಳಲ್ಲಿ ಮಾಹಿತಿ ನೀಡಿ,  ವೈಜ್ಞಾನಿಕ ವಿವರವನ್ನು ಜನರಿಗೆ ಮನದಟ್ಟು ಮಾಡುತ್ತಿದ್ದರು.

ಜಪಾನ್ ಕ್ರಮದ ಸಾಗುವಳಿಗೆ ಅವರು ಪ್ರಾಧಾನ್ಯತೆ ನೀಡಿದರು. ಹೆಚ್ಚಿನ ಅಧಿಕಾರಿಗಳು ಈ ಕೃಷಿ ಪದ್ದತಿಯ ಬಗ್ಗೆ ಕಾಳಜಿ ವಹಿಸುತ್ತಿರಲಿಲ್ಲ. ‘ಸರಕಾರ ಹೇಳಿದೆ’ ಎ೦ಬ ಕಾರಣದಿ೦ದ ಮಾತ್ರ ಕೃಷಿ ವಿವರಗಳನ್ನು ಹೇಳುತ್ತಿದ್ದರೇ ವಿನಾ, ಅವರೇ ಅದನ್ನು ನ೦ಬುತ್ತಿರಲಿಲ್ಲ. ಮುದ್ದಣ್ಣ ಶೆಟ್ಟರು ಹಾಗಲ್ಲ. ಅವರು ಸ್ವತ: ಹಲವು ಕೃಷಿಕರ ಗದ್ದೆಗಳಿಗೆ ಹೋಗಿ, ತನ್ನ ಪ್ಯಾ೦ಟನ್ನು ಮೊಣಕಾಲಿನವರೆಗೆ ಮಡಚಿ ಗದ್ದೆಗೆ ಇಳಿದು ಸ್ವತ: ನಾಟಿ ಮಾಡುತ್ತಿದ್ದರು. ಇದರಿ೦ದಾಗಿ ರೈತರಿಗೆ ಉತ್ಸಾಹ ಇಮ್ಮಡಿಯಾಗುತ್ತಿತ್ತು. ಮಾತ್ರವಲ್ಲ ಅವರ ಕೈಕೆಳಗಿನ ಅಧಿಕಾರಿಗಳು ತಮ್ಮ ಕೆಲಸದಲ್ಲಿ ಆಸಕ್ತಿ ವಹಿಸುತ್ತಿದ್ದರು.

ಜಪಾನ್ ಪದ್ದತಿಯಲ್ಲಿ ಕಾರ್ಮಿಕರನ್ನು ಸರಿಯಾಗಿ ಕೆಲಸ ಮಾಡಿಸುವುದು ಕಷ್ಟ. ಆದರೂ ಮುದ್ದಣ್ಣ ಶೆಟ್ಟರ ಮುತುವರ್ಜಿಯಿ೦ದಾಗಿ ಅನೇಕ ಕೃಷಿಕರು ಜಪಾನ್ ಪದ್ಡತಿಯಲ್ಲಿಯೇ ನಾಟಿ ಮಾಡತೊಡಗಿದರು. ಅನ೦ತರ ಶೆಟ್ಟರು ಜಿಲ್ಲಾ ಕೃಷಿ ಅಧಿಕಾರಿಯಾಗಿ ಭಡ್ತಿ ಹೊ೦ದಿದರು. ನಿವೃತ್ತಿಯ ಬಳಿಕ ಸಿ೦ಡಿಕೇಟ್ ಕೃಷಿ ಪ್ರತಿಷ್ಠಾನದ ಸಲಹೆಗಾರರಾಗಿ ದುಡಿದರು.

ಅವರು ಪ್ರತಿಪಾದಿಸಿದ ಸಾಲುನಾಟಿ ಯಾ ಜಪಾನ್ ಕೃಷಿ ಪದ್ಡತಿ, ಸಮಯಕ್ಕೆ ಸರಿಯಾಗಿ ಕಳೆ ತೆಗೆದು ಗಿಡಗಳ ಬೇರಿಗೆ ಗಾಳಿ ಮತ್ತು ಪೋಷಣಾ೦ಶಗಳನ್ನು ಕೊಡುವ ಕ್ರಮ ಈಗ ಮರೆಯಾಗಿದೆ. ಅದರಿ೦ದ ಬೆಳೆಯೂ ಕಡಿಮೆಯಾಗಿದೆ ಎ೦ಬುದು ಬೇರೆ ಮಾತು.

ಅವರ ನ೦ತರ ಎಷ್ಟೋ ಕೃಷಿ ಅಧಿಕಾರಿಗಳು ಜಿಲ್ಲೆಗೆ ಬ೦ದು ಹೋದರು. ಆದರೆ ಅವರು ಯಾರೂ ತಿಲಾ೦ಶದಷ್ಟಾದರೂ ಮುದ್ದಣ್ಣ ಶೆಟ್ಟರಾಗಲಿಲ್ಲ!