೧೯೦೬ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ವೆಂಕಟಪ್ಪನವರು ಕರ್ನಾಟಕದಲ್ಲಿಯೂ, ನೆರೆ ರಾಜ್ಯಗಳಲ್ಲಿಯೂ ಕೀರ್ತಿ ಯಶಸ್ಸಿನ ಜಯಭೇರಿ ಬಾರಿಸಿದ ಡೋಲು ವಾದಕರು. ಶ್ರೀ ಪುಟ್ಟಯ್ಯ ಹಾಗೂ ಶ್ರೀ ಶ್ರೀನಿವಾಸುಲು ಇವರ ಪ್ರಾರಂಭದ ಗುರುಗಳಾಗಿ ಶಿಕ್ಷಣ ನೀಡಿದರು. ನಂತರ ಮಾಯಾವರಂನಲ್ಲಿ ಶ್ರೀ ಸುಂದರೇಶನ್‌ ಅವರಿಂದ ಉನ್ನತ ಶಿಕ್ಷಣ ಪಡೆದ ವೆಂಕಟಪ್ಪನವರು  ಸ್ವತಂತ್ರವಾಗಿ ಡೋಲು ನುಡಿಸುವ ಲಯ ವಾದ್ಯಗಳ ಬೆಳವಣಿಗೆಯ ದಿಕ್ಕಿನಲ್ಲಿ ನಾನಾ ಮುಖವಾಗಿ ಕೆಲಸ ಮಾಡಿದರು. ಆಕಾಶವಾಣಿಯ ಪ್ರಥಮ ಶ್ರೇಣಿಯ ಕಲಾವಿದರಾಗಿ ಮಾನ್ಯತೆ ಪಡೆದರು.

ರಾಜ್ಯದ ಹಾಗೂ ನೆರೆ ರಾಜ್ಯಗಳ ಸುಪ್ರಸಿದ್ಧ ಸಂಗೀತ ಸಮ್ಮೇಳನಗಳಲ್ಲಿ ತಮ್ಮ ವಿದ್ವತ್ತನ್ನು ಪ್ರದರ್ಶಿಸಿದ್ದರು. ಖ್ಯಾತ ನಾಮರಾದ ನಾಗಸ್ವರ ಕಲಾವಿದರೆಲ್ಲರೂ ಸೇರಿದ ಅಧಿವೇಶನದಲ್ಲಿ ವೆಂಕಟಪ್ಪನವರನ್ನು ‘ತಾಳವಾದ್ಯ ಕಲಾರತ್ನ’ ಎಂದು ಸನ್ಮಾನಿಸಿದ್ದರು. ‘ತಾಳವಾದ್ಯ ಪ್ರವೀಣ’ ಎಂಬ ಕೀರ್ತಿಯನ್ನು ಗಳಿಸಿದ್ದ ಅವರ ಕಲಾ ಪ್ರದರ್ಶನಗಳಲ್ಲಿ ಒಬ್ಬ ಯಶಸ್ವಿ ಲಯ ವಾದ್ಯಗಾರನಿಗೆ ಇರಬೇಕಾದ ಲಕ್ಷಣಗಳೆಲ್ಲವೂ ಅವರಲ್ಲಿ ಇತ್ತೆಂದು ಎಲ್ಲ ರಸಿಕರೂ ಸಂಗೀತಜ್ಞರೂ ಗುರುತಿಸಿದ್ದರು.

ಇಂತಹ ಹಿರಿಯ ವಿದ್ವಾಂಸರು ೧೯೮೯-೯೦ರ ಸಾಲಿನ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾ ತಿಲಕ’ ಎಂಬ ಪ್ರಶಸ್ತಿಯನ್ನು ಸ್ವೀಕರಿಸಿದರು.

ಇವರ ನಾದ ಪರಿಪೂರ್ಣ ಕಲಾಚೇತನ ಮರುವರ್ಷದಲ್ಲಿ ಭಗವಂತನಲ್ಲಿ ಸೇರಿ ಹೋಯಿತು.