ಕೊಳಚೆ ನೀರಿನಲ್ಲಿರುವ ಸೂಕ್ಷ್ಮಜೀವಿಗಳು, ಪ್ರಬೇಧಗಳು ಮಾನವನ ಹಾಗೂ ಇತರ ಪ್ರಾಣಿಗಳ ಆರೋಗ್ಯಕ್ಕೆ ಅತ್ಯಂತ ಮಾರಕ ಎಂಬುದು ಎಲ್ಲರಿಗೂ ತಿಳಿದಿದೆ. ಈ ಕೊಳಚೆ ನೀರಿನಲ್ಲಿ ಘನವಸ್ತುಗಳು ಹಾಗೂ ಕರಗಿದ ಅನೇಕ ಪದಾರ್ಥಗಳಿವೆ.  ಈ ಎಲ್ಲಾ ಕೊಳಚೆಯನ್ನು ಕಡಿಮೆ ಮಾಡಲು ರಾಸಾಯನಿಕ ಚಟುವಟಿಕೆಗಳ ಮೂಲಕ ಕಡಿಮೆ ಮಾಡುವುದು ಅಥವಾ ನಿಷ್ಕ್ರಿಯಗೊಳಿಸುವಿಕೆ ನಡೆಯುತ್ತದೆ.  ಆದರೆ ಜೈವಿಕ ಚಿಕಿತ್ಸೆಯನ್ನು ನೀಡಿ ಈ ಕೊಳಚೆ ನೀರನ್ನು ಮರುಬಳಕೆಗೆ ಯೋಗ್ಯವಾಗಿಸಲು ಸಾಧ್ಯ.

ಕೊಳಚೆ ನೀರಿನ ಗುಣಲಕ್ಷಣಗಳು

ಕೊಳಚೆ ನೀರು ಅದರ ಮೂಲವನ್ನಾಧರಿಸಿ ಮಲಿನಗೊಂಡಿರುತ್ತದೆ.

೧. ಕಾರ್ಖಾನೆ ತ್ಯಾಜ್ಯ ೨. ಮನೆ ತ್ಯಾಜ್ಯ.  ಇದರಲ್ಲಿ ಮಣ್ಣು, ಮಲಮೂತ್ರದೊಳಗಿನ ಸೂಕ್ಷ್ಮಜೀವಿಗಳು, ಬ್ಯಾಕ್ಟೀರಿಯಾ, ಯೀಸ್ಟ್, ಫಂಗಸ್, ಆಮ್ಲಜನಕ ಸೇವಿಸುವ ಹಾಗೂ ಸೇವಿಸದ ಬ್ಯಾಕ್ಟೀರಿಯಾಗಳು ಇರುತ್ತವೆ.

ಕೊಳಚೆಯು ವಿವಿಧ ರಾಸಾಯನಿಕಗಳಿಂದ ಅಥವಾ ಕೊಳೆತ ಪ್ರೋಟೀನ್ ಪದಾರ್ಥಗಳಿಂದ ದುರ್ಗಂಧ ಸೂಸುತ್ತದೆ.  ಪೋಲಿಯೋ, ಜಾಂಡೀಸ್, ಟೈಫಾಯಿಡ್, ಇನ್‌ಫ್ಲುಯೆಂಜಾ, ಹೆಪಟೈಟಸ್, ಡೆಂಗ್ಯೂಜ್ವರ ಮುಂತಾದವುಗಳಿಗೆ ಕಾರಣ ಇದರಲ್ಲಿರುವ ಸೂಕ್ಷ್ಮಜೀವಿಗಳು.  ಮಲಿನಕಾರಿ ವಸ್ತುಗಳ ಗುಣವನ್ನಾಧರಿಸಿ ಅವುಗಳನ್ನು ವಿಂಗಡಿಸಲಾಗುತ್ತದೆ.

೧. ರಾಸಾಯನಿಕ ಮಲಿನಕಾರಿಗಳು : ಇವು ಸಾವಯವ ಹಾಗೂ ನಿರವಯವ ರೂಪದಲ್ಲಿವೆ.  ನೀರಿನ Pಊ ಮಟ್ಟವನ್ನು ಬದಲಾಯಿಸುತ್ತವೆ.  ವಿಷಭರಿತಗೊಳಿಸುತ್ತವೆ.  ಸೂಕ್ಷ್ಮಜೀವಿಗಳ ಬದುಕನ್ನು ನಾಶಗೊಳಿಸುತ್ತವೆ.  ತ್ಯಾಜ್ಯವು ಅಡಿಯಲ್ಲಿ ಶೇಖರಗೊಳ್ಳುವಂತೆ, ಜಿಡ್ಡು ಶೇಖರಗೊಳ್ಳುವಂತೆ ನೋಡಿಕೊಳ್ಳುತ್ತವೆ.

೨. ಭೌತಿಕ ಮಲಿನಕಾರಿಗಳು : ಬಣ್ಣಗೆಡಿಸುವಿಕೆ, ನೀರಿನ ಚಲನೆಯ ವ್ಯತ್ಯಯ, ಘನವಸ್ತುಗಳ ತೇಲುವಿಕೆ, ನೊರೆ ಹಾಗೂ ವಿಕಿರಣಕಾರಿ ವಸ್ತುಗಳಿಂದ ಕೂಡಿದೆ.

೩. ಶಾರೀರಿಕ ಮಲಿನಕಾರಿಗಳು : ಇವು ನೀರಿನ ವಾಸನೆ ಹಾಗೂ ರುಚಿಯನ್ನು ಕೆಡಿಸಿ ಮಲಿನ ಮಾಡುತ್ತವೆ.

೪. ಜೈವಿಕ ಮಲಿನಕಾರಿಗಳು : ನೀರಿನಿಂದ ಬರುವ ಎಲ್ಲಾ ರೀತಿಯ ರೋಗಗಳ ಮೂಲವಸ್ತು.

೫. ವಿಕಿರಣಕಾರಿ ಮಲಿನಗಳು

ಇವುಗಳನ್ನು ನಿರ್ವಹಿಸಲು ಅನೇಕ ಹಂತಗಳ ಅವಶ್ಯಕತೆಯಿದೆ.  ಪೂರ್ವತಯಾರಿ ; ಮೊದಲು ಘನವಸ್ತುಗಳ ಮಿಶ್ರಣವನ್ನು ತೆಗೆಯಬೇಕು.  ಗ್ರೀಸ್ ಮತ್ತು ಗರಣೆಗಟ್ಟಿದ ಎಣ್ಣೆವಸ್ತುಗಳನ್ನು ಬೇರ್ಪಡಿಸಬೇಕು.  ಬೇರೆ ಬೇರೆ ಕ್ರಿಯಾವಿಧಾನಗಳಿಂದ ದುರ್ಗಂಧ ನಿವಾರಣೆ, ಕ್ಲೋರಿನೇಶನ್ ಹಾಗೂ ಪ್ರವಾಹದ ಅಳತೆ ಮಾಡಬೇಕಾಗಬಹುದು.  ಘನವಸ್ತುಗಳನ್ನು ಶೇಖರಿಸಲು ದೊಡ್ಡ ದೊಡ್ಡ ಕಬ್ಬಿಣದ ರಾಡ್‌ಗಳಿಂದ ಕೂಡಿದ ಗ್ರೈಂಡರ್ ಉಪಯುಕ್ತವಾಗಬಹುದು.  ಅವು ಘನತ್ಯಾಜ್ಯಗಳನ್ನು ಚೂರು ಮಾಡುತ್ತವೆ.  ಟ್ಯಾಂಕಿನ ಅಡಿಯಲ್ಲಿ ಶೇಖರವಾಗಲು ಸಹಾಯಕ.

ಪ್ರಾಥಮಿಕಚಿಕಿತ್ಸೆ

ಟ್ಯಾಂಕ್ ಅಡಿಯಲ್ಲಿ ಶೇಖರ ಮಾಡುವಿಕೆ ಮತ್ತು ಕ್ಲೋರಿನೇಶನ್ ಮುಗಿದ ಮೇಲೆ ಕೊಳಚೆ ಅಥವಾ ರಾಡಿಯನ್ನು ಡೈಜೆಸ್ಟರ್‌ಗೊಳಿಸುವುದು.  ಹಾಗೆಯೇ ಟ್ಯಾಂಕ್ ಅಡಿಯಲ್ಲಿ ಶೇಖರಗೊಂಡ ಘನತ್ಯಾಜ್ಯವನ್ನು ವಾಯುರಹಿತ ಹುದುಗು ಬರಿಸುವಿಕೆಗೆ ಒಳಪಡಿಸಿ ಸುಸ್ಥಿರಗೊಳಿಸುವುದು.

ದ್ವಿತೀಯಹಂತದಚಿಕಿತ್ಸೆ

. ರಾಡಿಯನ್ನು ಚೈತನ್ಯಗೊಳಿಸುವಿಕೆ

ಗರಣೆಗಟ್ಟದ ರಾಡಿಗೆ ಆಮ್ಲಜನಕದ ಪೂರೈಕೆ ಮಾಡುವ ಮೂಲಕ ಅದರಲ್ಲಿರುವ ಸೂಕ್ಷ್ಮಜೀವಿಗಳಿಗೆ ಚೈತನ್ಯ ನೀಡಲಾಗುವುದು.  ಸಾಮಾನ್ಯವಾಗಿ ಈ ರಾಡಿಯಲ್ಲಿ ಝೂಗ್ಲೋ ರಾಮಿಗೆರಾ [Zoogloea ramigera] ಸೂಕ್ಷ್ಮಜೀವಿ ಕಾಣಿಸುತ್ತದೆ.  ಇದು ಪಾಲಿಸ್ಸಾಕರೈಡ್ ಜೆಲ್‌ನ್ನು ಸ್ರವಿಸುತ್ತದೆ ಹಾಗೂ ರಾಡಿಯೊಂದಿಗೆ ಸಂಯೋಗಗೊಳ್ಳುತ್ತದೆ.  ಇದರಿಂದಾಗಿ ಸೂಕ್ಷ್ಮಜೀವಿಗಳೆಲ್ಲಾ ಒಟ್ಟು ಸೇರಿ ಗರಣೆಗಟ್ಟುವಿಕೆಯುಂಟಾಗುತ್ತದೆ.

ಇದರ ಮುಖ್ಯ ಕೆಲಸ ತೇಲಾಡುವ ಘನತ್ಯಾಜ್ಯವನ್ನು ಹಾಗೂ ರಾಡಿಯಲ್ಲಿ ಚಲಿಸುತ್ತಿರುವ ಪದಾರ್ಥಗಳನ್ನು ಸಾಮ್ಯಗೊಳಿಸುವುದು. ಹೀಗೆ ಗರಣೆಯೊಂದಿಗೆ ತೇಲಾಡುವ ಘನತ್ಯಾಜ್ಯವನ್ನು ಬೆರೆಸಿ ಅದನ್ನು ಆಮ್ಲಜನಕೀಕರಣಕ್ಕೆ ಒಳಪಡಿಸುವುದು ಈ ಚಿಕಿತ್ಸೆಯ ಮುಖ್ಯ ಉದ್ದೇಶ.

ತ್ಯಾಜ್ಯವು ಈ ಕ್ರಿಯೆಯಿಂದ ಅಗತ್ಯಮಟ್ಟವನ್ನು ತಲುಪಲು ವಿಫಲವಾಗಬಹುದು.  ಅದರಲ್ಲಿ ತೆಳುಪರದೆಯಂತಹ ಸೂಕ್ಷ್ಮಜೀವಿಗಳು ಮತ್ತು ಏಕಕೋಶಜೀವಿಗಳು ಪ್ರಮುಖ ಪಾತ್ರ ವಹಿಸುತ್ತವೆ.  ಏಕಕೋಶ ಜೀವಿಗಳು ರಾಡಿಯಲ್ಲಿರುವುದನ್ನೆಲ್ಲಾ ತಿನ್ನತೊಡಗುತ್ತವೆ.  ಅಂದರೆ ಗರಣೆಗಟ್ಟಿದ ಬ್ಯಾಕ್ಟೀರಿಯಾಗಳನ್ನು ತಿಂದು ತ್ಯಾಜ್ಯವು ತಿಳಿಯಾಗುವಂತೆ ಮಾಡುತ್ತದೆ.

ಈ ಎರಡೂ ರೀತಿಯ ಕ್ರಿಯೆಯು ಮಿಶ್ರ ತ್ಯಾಜ್ಯದಲ್ಲಿ ಆದರೆ ಶೇಕಡಾ ೯೦ರಷ್ಟು ರಾಡಿಯು ಚೈತನ್ಯಗೊಂಡಿರುತ್ತದೆ.

. ಹನಿ ಹನಿ ಸೋಸುವಿಕೆ

ಒಂದು ದೊಡ್ಡ ಪಾತ್ರೆಯ ತಳದಲ್ಲಿ ಸೂಕ್ಷ್ಮಜೀವಿಗಳು ಇರುತ್ತವೆ.  ಅದಕ್ಕೆ ರಾಡಿಯನ್ನು ಹನಿಹನಿಯಾಗಿ ಬೀಳುವಂತೆ ಮಾಡಬೇಕು.  ಸೂಕ್ಷ್ಮಜೀವಿಯ ಉಸಿರಾಟಕ್ಕೆ ಆಮ್ಲಜನಕವನ್ನು ಅಡಿಯಲ್ಲಿ ಒದಗಿಸಬೇಕು.  ಹೀಗೆ ರಾಡಿಯನ್ನು ಸೂಕ್ಷ್ಮಜೀವಿಯು ಚೊಕ್ಕಗೊಳಿಸುತ್ತದೆ.  ಆಮ್ಲಜನಕವು ಇಡೀ ಪಾತ್ರೆಯೊಳಗೆ ಸುತ್ತುವಂತೆ ವಾತಾನುಕೂಲ ವ್ಯವಸ್ಥೆ ಮಾಡಿದರೆ ಕೆಲಸ ಚುರುಕುಗೊಳ್ಳುತ್ತದೆ.  ರಾಡಿಯಲ್ಲಿ ಒಂದು ಪದರ ಏರ್ಪಡುತ್ತದೆ.  ಹೀಗೆ ಶೇಖರಗೊಂಡ ಸೂಕ್ಷ್ಮಜೀವಿ ಅಥವಾ ಪಾಚಿಯು ಒಟ್ಟು ಸೇರಿ ಹ್ಯೂಮಸ್ ಆಗುತ್ತವೆ.  ಇದನ್ನು ಪಾತ್ರೆಯಿಂದ ಮೇಲೆ ತೆಗೆದರೆ ಉಳಿದ ನೀರು ತಿಳಿಯಾಗಿರುತ್ತದೆ.  ಹ್ಯೂಮಸ್ ಗಿಡಗಳಿಗೆ ಉತ್ತಮ ಗೊಬ್ಬರ.

ಈ ವಿಧಾನವನ್ನು ದೊಡ್ಡ ಟ್ಯಾಂಕ್ ನಿರ್ಮಿಸಿಯೂ ಸೋಸಬಹುದಾಗಿದೆ.  ಇದರಲ್ಲಿ ಉತ್ಪತ್ತಿಯಾಗುವ ಫಂಗಸ್ ಹಾಗೂ ಪ್ರೋಟೋಝೋವಾಗಳನ್ನು ತಿನ್ನಲು ಹುಳುಗಳು ಹಾಗೂ ಕೀಟಗಳು ಸೇರುತ್ತವೆ.  ಇವುಗಳ ಸಂಖ್ಯೆಯು ಹೆಚ್ಚದಂತೆ ನೋಡಿಕೊಳ್ಳಬೇಕು.  ಆಗ ಮಾತ್ರ ರಾಡಿಯು ಸ್ವಚ್ಛವಾಗುತ್ತದೆ.  ಇದರ ಚಿಕಿತ್ಸೆಯ ಕಾರ್ಯಕ್ಷಮತೆ ಶೇಕಡಾ ೮೫ ಮಾತ್ರ.

. ಕೊಳಚೆ ಕೊಳಗಳ ನಿರ್ಮಾಣ

ಎರಡು ಅಡಿ ಆಳದ ಅಗಲವಾದ ಕೊಳಗಳನ್ನು ನಿರ್ಮಿಸಿ ಅದಕ್ಕೆ ರಾಡಿಯನ್ನು ಹಾಯಿಸುವುದು.  ವಾತಾವರಣದ ಆಮ್ಲಜನಕದಿಂದಾಗಿ ಮೇಲಿನ ನೀರು ತಿಳಿಯಾಗುತ್ತದೆ.  ಅಡಿಯಲ್ಲಿ ಘನತ್ಯಾಜ್ಯಗಳು ನಿಲ್ಲುತ್ತವೆ.  ಈ ಕೊಳಗಳಿಂದ ಪ್ರತಿವಾರವೂ ಘನತ್ಯಾಜ್ಯಗಳನ್ನು ತೆಗೆದು ಗೊಬ್ಬರ ಮಾಡಲು ಉಪಯೋಗಿಸಬೇಕು.  ಮೇಲೆ ನಿಲ್ಲುವ ತಿಳಿಯನ್ನು ಮತ್ತಷ್ಟು ಚಿಕಿತ್ಸೆಗೆ ಒಳಪಡಿಸಬೇಕು.  ಇದೇ ರೀತಿ ಕೊಳಚೆ ನದಿಗಳ ಮೂಲಕವೂ ಅಂತಿಮವಾಗಿ ತಿಳಿನೀರು ಸಿಗುವಂತೆ ಮಾಡಲು ಸಾಧ್ಯ.  ಕೊಳಚೆಯು ಹರಿಯುವ ವೇಗದ ನಿಯಂತ್ರಣ-ನಿರ್ದಿಷ್ಟ ವೇಗದ ಏರ್ಪಾಡು ಹಾಗೂ ಆಗಾಗ ಅಡಿಯಲ್ಲಿ ಸಿಗುವ ಘನತ್ಯಾಜ್ಯಗಳ ಶೆಖರಣೆ ಮಾಡುವುದು ಕಡ್ಡಾಯ.

ಮೂರನೇಹಂತದಚಿಕಿತ್ಸೆ

. ಗರಣೆಗಟ್ಟಿಸುವಿಕೆ

ಜೈವಿಕ ವಿಧಾನದಲ್ಲಿ ಗರಣೆಗಟ್ಟಿಸಲು ಸಾಧ್ಯವಾಗದ ವಸ್ತುಗಳನ್ನು ಕೃತಕವಾಗಿ ಗರಣೆಗಟ್ಟಿಸಿ ಬೇರ್ಪಡಿಸಬೇಕಾಗುತ್ತದೆ.  ಉಷ್ಣಾಂಶ ಹೆಚ್ಚಿಸುವುದರ ಮೂಲಕ ಅಥವಾ ಕೆಲವು ಅಯಾನುಗಳನ್ನು ಸೇರಿಸುವುದರ ಮೂಲಕ ಉಳಿದ ತ್ಯಾಜ್ಯನೀರಿನಲ್ಲಿರುವ ಖನಿಜಗಳನ್ನು ಬೇರ್ಪಡಿಸಲು ಸಾಧ್ಯ.

. ಜೀವಕೋಶಗಳ ಗುಂಪು ಸೇರಿಸುವಿಕೆ

ತ್ಯಾಜ್ಯನೀರಿನಲ್ಲಿರುವ ಕರಗುವ ಆಯಾನುಗಳು ಹಾಗೂ ಕಣಗಳನ್ನು ಅಂಟಿಕೊಂಡ ಪ್ರಭೇದಗಳನ್ನು ಸೂಕ್ಷ್ಮಜೀವಿಗಳನ್ನು ಮೊದಲು ಸ್ಥಿರೀಕರಿಸಿ ಅನಂತರ ಬೇರ್ಪಡಿಸಲು ಈ ವಿಧಾನ ಬಳಸಲಾಗುತ್ತದೆ.

. ಕೋಪ್ರಸಿಪಿಟೇಷನ್

ತ್ಯಾಜ್ಯನೀರಿನಲ್ಲಿರುವ ಒಂದು ಅಯಾನನ್ನು ತೆಗೆದರೆ ಆಗ ನೀರಿನಲ್ಲಿ ಕರಗಿರುವ ಕೆಲವು ವಸ್ತುಗಳು ಗಟ್ಟಿಯಾಗಿ ನೀರಿನಡಿ ಸೇರಿಕೊಳ್ಳುತ್ತದೆ.  ತಿಳಿಯಾದ ನೀರು ಮೇಲುಳಿಯುತ್ತದೆ.  ಇದರಲ್ಲಿ ಎರಡು ತಾಂತ್ರಿಕತೆಗಳು ಕೆಲಸ ಮಾಡುತ್ತವೆ.  ಹೀರಿಕೊಳ್ಳುವಿಕೆ ವಿಧಾನ, ಮತ್ತೊಂದು ಅಯಾನುಗಳನ್ನು ಬಲೆಯಲ್ಲಿ ಸಿಕ್ಕಿಸುವಿಕೆ ವಿಧಾನ.

. ಸೋಸುವಿಕೆ

ಮೇಲಿನ ವಿಧಾನಗಳೆಲ್ಲಾ ಆದಮೇಲೆ ಈ ವಿಧಾನ ಅಳವಡಿಸುವುದು ಮುಖ್ಯ.  ಇಲ್ಲದಿದ್ದರೆ ಅಂಟಿಕೊಂಡ ಪ್ರಭೇದಗಳು ಸೋಸುವಿಕೆ ವಿಧಾನದಲ್ಲಿ ಬೇರಾಗದು.  ಮರಳು ಸೋಸುವಿಕೆ, ಇದ್ದಿಲಿನಿಂದ ಸೋಸುವಿಕೆಗಳು ಪ್ರಮುಖವಾಗಿವೆ.  ಹೀಗೆ ಸೋಸಿದ ಮೇಲೆ ಸಿಗುವ ತಿಳಿನೀರನ್ನು ಕ್ಲೋರಿನೇಶನ್‌ಗೆ ಒಳಪಡಿಸಬೇಕು.  ಈ ನೀರು ಕುಡಿಯಲು ಯೋಗ್ಯವಾಗುತ್ತದೆ.

ಕೊಳಚೆ ನೀರಿನಿಂದಲೂ ವಿದ್ಯುತ್ ಉತ್ಪಾದನೆ

ಕಳೆದ ವರ್ಷ ಬೆಂಗಳೂರಿನ ಕೊಳಚೆ ಸಾಗಾಣಿಕೆ ಬಗ್ಗೆ, ವೃಷಭಾವತಿ ನದಿ ಕೊಳಚೆ ನದಿಯಾಗಿದ್ದ ಬಗ್ಗೆ ಸರಣಿ ದೋಷಾರೋಪಗಳು ಪತ್ರಿಕೆಗಳಲ್ಲಿ ಸ್ಫೋಟಗೊಂಡವು.  ತಮ್ಮದೇ ತ್ಯಾಜ್ಯಗಳನ್ನು ತಮ್ಮದೆಂದು ಮರೆತು ಯಾರು ಯಾರನ್ನೋ ಅಪರಾಧಿಗಳನ್ನಾಗಿ ಮಾಡಿ ಕೊನೆಗೆ ಏನೊಂದೂ ಬದಲಾವಣೆಯಾಗದೇ ಸಮಸ್ಯೆ ಹಾಗೇ ಉಳಿಯಿತು.

ಅದೇ ಸಮಯದಲ್ಲಿ ಅಮೇರಿಕಾದಲ್ಲಿ ಕೊಳಚೆ ಪೆಡಂಭೂತ ವಿಜ್ಞಾನಿಗಳಿಗೆ ಸವಾಲಾಗಿತ್ತು.  ಕೊಳಚೆಯನ್ನು ಅಲ್ಲಿನ ವಿಜ್ಞಾನಿಗಳು ಮೂಸಿ ನೋಡಿ, ಬಿಸಿ ನೋಡಿ, ಅಳೆದು, ಸುರಿದು, ವಿಂಗಡಿಸಿ, ವಿಭಜಿಸಿ ಏನೆಲ್ಲಾ ಮಾಡುತ್ತಿದ್ದರು.  ಕೊಟ್ಟಕೊನೆಗೆ ಕೊಳಚೆ ನೀರಿನಲ್ಲೂ ವಿದ್ಯುತ್ ಶಕ್ತಿ ಇದೆ ಎಂದು ಹೇಳಿದರು.

ಬರೀ ಹೇಳಿದರೆ ನಂಬುವವರಾರು?!  ಮಹಾನಗರದ-ಕೊಳಚೆಯೆಲ್ಲಾ ಹಳ್ಳಿಗರಿಗೆ ಉಚಿತ ಕೊಡುಗೆ ತಾನೆ?  ಅದರಿಂದ ಜೋಳ, ಭತ್ತ, ರಾಗಿ, ಈರುಳ್ಳಿ, ಸೊಪ್ಪು, ತರಕಾರಿಗಳು, ಸೋಯಾ ಹೀಗೆ ಏನೆಲ್ಲಾ ಬೆಳೆಯಬಹುದು.  ಅದನ್ನು ತಿರುಗಿ ಮಹಾನಗರದ ಮಹಾಜನತೆಗೇ ಮಾರಿ ಲಾಭ ಹೊಂದಬಹುದು ಎಂದು ಹಳ್ಳಿಗರೂ ಪ್ರಾಯೋಗಿಕವಾಗಿ ಅರಿತಿರುವಾಗ, ಕೊಳಚೆ ನೀರಿನಲ್ಲಿ ವಿದ್ಯುತ್ ಶಕ್ತಿ ಇದೆ.  ಅದನ್ನು ಉತ್ಪಾದಿಸುತ್ತೇವೆಂದರೆ ಒಪ್ಪುವವರು ಯಾರು?

ಅಮೇರಿಕಾದ ವಿಜ್ಞಾನಿಗಳು ಗೊತ್ತಲ್ಲ.  ಹಠಮಾರಿಗಳು.  ಬಿಡಲೇ ಇಲ್ಲ.  ಎಂಎಫ್‌ಸಿ ಎನ್ನುವ ಸೂಕ್ಷ್ಮಾಣುಜೀವಿ ಇಂಧನ ಘಟಕವೆಂಬ ಯಂತ್ರವನ್ನು ಆವಿಷ್ಕರಿಸಿದರು.

ಕೊಳಚೆ ನೀರಿನಲ್ಲಿ ಬ್ಯಾಕ್ಟೀರಿಯಾಗಳ ಸಂತೆಯೇ ನೆರೆದಿರುವುದು ಎಲ್ಲರಿಗೂ ಗೊತ್ತು.  ಇವು ಅಲ್ಲಿರುವ ಜೈವಿಕ ವಸ್ತುಗಳನ್ನು ತಮಗೆ ಅನುಕೂಲಕರ ಮಾಡಿಕೊಳ್ಳಲು ಆಮ್ಲಜನಕೀಕರಣ ಮಾಡಿಕೊಳ್ಳುತ್ತವೆ.  ಅದಕ್ಕೆ ಕಿಣ್ವಗಳನ್ನು ಬಳಸುತ್ತವೆ.  ಆಗ ನಡೆವ ರಾಸಾಯನಿಕ ಕ್ರಿಯೆಯಲ್ಲಿ ಎಲೆಕ್ಟ್ರಾನ್‌ಗಳು ಬಿಡುಗಡೆಯಾಗುತ್ತವೆ.  ಅವು ಮತ್ತೆ ಆಮ್ಲಜನಕದೊಂದಿಗೆ ಸೇರುತ್ತವೆ.  ಈ ಸಮಯದಲ್ಲಿ ಎಂಎಫ್‌ಸಿಯು ಆ ಎಲೆಕ್ಟ್ರಾನನ್ನು ಆಮ್ಲಜನಕದೊಂದಿಗೆ ಬೆರೆಯಲು ಬಿಡದೆ ಹಿಡಿದಿಟ್ಟುಕೊಳ್ಳುತ್ತದೆ.

ಎಂಎಫ್‌ಸಿಯಲ್ಲಿ ಪುಟ್ಟದೊಂದು ಡಬ್ಬಿಯಿದೆ.  ಅದರೊಳಗೆ ಕ್ಯಾಥೋಡ್ ನಳಿಕೆಯಿದೆ.  ಅದರ ಸುತ್ತ ಎಂಟು ಅನೋಡ್ ನಳಿಕೆಗಳಿವೆ.  ಕೊಳಚೆ ನೀರು ಹರಿದುಬಂದು ಎಂಎಫ್‌ಸಿ ಹಾಯ್ದಾಗ ಸುತ್ತ ಇರುವ ಬ್ಯಾಕ್ಟೀರಿಯಾಗಳು ಕಿಣ್ವ ಉತ್ಪಾದಿಸತೊಡಗುತ್ತವೆ.  ರಾಸಾಯನಿಕ ಕ್ರಿಯೆ ನಡೆದಂತೆ ಎಲೆಕ್ಟ್ರಾನ್-ಪ್ರೋಟಾನ್‌ಗಳು ಉತ್ಪತ್ತಿಯಾಗತೊಡಗುತ್ತವೆ.

ಎಂಎಫ್‌ಸಿಯು ಎಲೆಕ್ಟ್ರಾನ್‌ಗೆ ಆಮ್ಲಜನಕ ಸಿಗದಂತೆ ಮಾಡಿ ಅನೋಡ್‌ಗೆ ಕಳಿಸುತ್ತದೆ.  ಪ್ರೋಟಾನ್‌ಗಳು ಉಳಿದ ಕೊಳಚೆಯೊಂದಿಗೆ ಕ್ಯಾಥೋಡ್‌ಗೆ ಹೋಗುತ್ತವೆ.  ಈ ವರ್ಗಾವಣೆ ಪ್ರಕ್ರಿಯೆಯಲ್ಲಿ ವಿದ್ಯುತ್ ಜನಿಸುತ್ತದೆ.

ಹೀಗೆ ಕ್ರಿಯೆ-ಪ್ರಕ್ರಿಯೆಗಳೊಂದಿಗೆ ಎಂಎಫ್‌ಸಿಯು ಕೊಳಚೆ ನೀರನ್ನು ಶುದ್ಧಗೊಳಿಸುವ ಕೆಲಸವನ್ನೂ ಮಾಡುತ್ತದೆ.  ಕೊಳಚೆ ನೀರನ್ನು ಶುದ್ಧಗೊಳಿಸಲು ಅಪಾರ ವಿದ್ಯುತ್ ಬೇಕು.  ಈ ಯಂತ್ರದಿಂದ ಕೊಳಚೆ ನೀರು ಶುದ್ಧೀಕರಣ ಮತ್ತು ವಿದ್ಯುತ್ ಉತ್ಪಾದನೆ ಎರಡೂ ಏಕಕಾಲದಲ್ಲಿ ಆಗುತ್ತದೆ.

ಓಹೋಯ್ ಮಾರಾಯರೆ, ಎಂಎಫ್‌ಸಿ ಖರೀದಿಸಲು ಹೊರಟಿರೋ ಹೇಗೆ?  ಅಮೇರಿಕಾದವರು ಅದನ್ನು ಈಗಲೇ ಕೊಡುವುದಿಲ್ಲವಂತೆ!  ಮೆಸಾಚ್ಯುಸೆಟ್ಸ್ ವಿಶ್ವವಿದ್ಯಾನಿಲಯದ ವಿಜ್ಞಾನಿ ಡೆರಿಕ್ ಲವ್ಲಿಯವರು ಈ ತಂತ್ರವಿನ್ನೂ ಹಸುಳೆ.  ಈಗಷ್ಟೇ ಹುಟ್ಟಿದೆ.  ನಮ್ಮ ಯೋಚನೆಯಂತೆ ಕೆಲಸವನ್ನು ಶಿಸ್ತಾಗಿ ಮಾಡುತ್ತದೆ ಅಂತ ನಂಬುವುದು ಹೇಗೆ ಎಂದು ಅಡ್ಡಗಾಲು ಹಾಕುತ್ತಾರೆ.

ಏನೇ ಇರಲಿ, ಇಂತಹದೊಂದು ಯಂತ್ರದ ಹುಟ್ಟು ಆಗಿದೆ.  ಕೊಳಚೆನೀರಿನಲ್ಲಿರುವ ಜೈವಿಕ ಆಹಾರಗಳನ್ನು ಜೀರ್ಣಿಸುವ ರಾಸಾಯನಿಕ ತಂತ್ರದ ಆವಿಷ್ಕಾರವೂ ಆಗಿದೆ.  ಆದರೆ ಕೊಳಚೆಯಲ್ಲಿರುವ ಲೆಡ್, ಪಾದರಸ, ಫಾಸ್ಪೇಟ್, ವಿಕಿರಣ ವಸ್ತುಗಳಂತಹ ಅಜೈವಿಕಗಳನ್ನೇನು ಮಾಡುವುದು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ.  ಅಜೈವಿಕಗಳನ್ನು ನಿಯಂತ್ರಿಸುವ ಯಾವುದೇ ಯಂತ್ರ ಆವಿಷ್ಕಾರ ಆಗುವುದು ಯಾವಾಗ?  ಈ ಯಂತ್ರದ ಜನಕ ಬ್ರೂಸ್ ಲೋಗಾನ್ ಸಧ್ಯ ಎಂಎಫ್‌ಸಿಯನ್ನು ಹೆಚ್ಚು ನಿಖರವಾಗುವಂತೆ ಮೌಲ್ಯವರ್ಧನೆಯ ಪ್ರಯೋಗ ಮಾಡುತ್ತಿದ್ದಾನೆ.  ಅಷ್ಟೇ ಅಲ್ಲ, ಒಂದು ಲಕ್ಷ ಜನರಿಂದ ಹೊರಹೊಮ್ಮುವ ಕೊಳಚೆಯಿಂದ ೫೧ ಕಿಲೋವ್ಯಾಟ್ ವಿದ್ಯುತ್ ಉತ್ಪಾದಿಸಬಹುದು ಎಂದು ಲೆಕ್ಕಾಚಾರ ಬೇರೆ ಹಾಕಿಬಿಟ್ಟಿದ್ದಾನೆ.

ಇವರ ಪ್ರಯೋಗಕ್ಕೆ ಕೊಲ್ಕೊತ್ತಾದ ಮುಖ್ಯಮಂತ್ರಿಗಳು ಇಡೀ ಗಂಗಾನದಿಯನ್ನೇ ಉದಾರವಾಗಿ ನೀಡಲು ಸಿದ್ಧರಿದ್ದಾರಂತೆ.  ಕೊಲ್ಕೊತ್ತಾದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿ ಹತ್ತು ವರ್ಷಗಳಾದ ನಂತರ ಈಗ ಮತ್ತೆ ವಿದ್ಯುತ್ ಕೊರತೆ ಕಾಣಿಸಿಕೊಳ್ಳುತ್ತಿದೆ ಹಾಗೂ ಮಾಲಿನ್ಯದ ಪ್ರಮಾಣ ಹತ್ತುಪಟ್ಟು ಹೆಚ್ಚಿದೆ ಎಂದು ಮಾಧ್ಯಮಗಳು ಬೊಬ್ಬಿಡುತ್ತಿರುವುದೇ ಈ ನಿರ್ಧಾರಕ್ಕೆ ಕಾರಣವಂತೆ.

ಮಾಹಿತಿ ಮೂಲ : ನ್ಯೂಸೈಂಟಿಸ್ಟ್