ಗಮಕಿ ರಾಮಕೃಷ್ಣ ಶಾಸ್ತ್ರಿಗಳವರ ವಿಷಯ ಕೇಳಿದ್ದೇನೆಯೇ ಹೊರತು ಅವರನ್ನು ನೋಡುವ ಅವಕಾಶ ನನಗೆ ಒದಗಿ ಬರಲಿಲ್ಲ.

ಶಾಸ್ತ್ರಿಗಳು ಬಹುಮುಖ ಪ್ರತಿಭೆಯ ಕಲಾವಿದರು. ಗಮಕ, ಸಂಗೀತ, ಹರಿಕಥೆ, ನಾಟಕ ಹೀಗೆ ಕಲೆಯ ಎಲ್ಲಾ ಪ್ರಕಾರಗಳಲ್ಲೂ ಕೈಯಾಡಿಸಿದವರು. ಜೊತೆಗೆ ಉತ್ತಮ ಸಾಹಿತಿ ಕೂಡ.

೧೯೮೬ರಲ್ಲಿ ಸಂಗೀತ ನೃತ್ಯ ಅಕಾಡೆಮಿಯ ಡಾ. ದೊರೆಸ್ವಾಮಿ ಅಯ್ಯಂಗಾರರ ಅಧ್ಯಕ್ಷತೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ್ಗೆ ಕರ್ನಾಟಕದ ಕೀರ್ತನಕಾರರ ಪರಿಚಯ ಗ್ರಂಥವನ್ನು ಬರೆಯುವ ಜವಾಬ್ದಾರಿಯನ್ನು ನನಗೆ ವಹಿಸಿತ್ತು. ಆಗ್ಗೆ ನಾನು ಹರಿಕಥಾರಂಗದಲ್ಲಿ ಸುಮಾರು ನಲವತ್ತು ವರ್ಷಗಳಿಗೂ ಮಿಕ್ಕಿ ಸೇವೆ ಸಲ್ಲಿಸಿದ ರಾಮಕೃಷ್ಣ ಶಾಸ್ತ್ರಿಗಳ  ಬಗ್ಗೆ ವಿಷಯ ಸಂಗ್ರಹಿಸಲು ಪ್ರಯತ್ನಿಸಿದೆ. ಆದರೆ ಹೆಚ್ಚು ಮಾಹಿತಿ ದೊರೆಯಲಿಲ್ಲ. ಕರ್ನಾಟಕ ಕೀರ್ತನ ಕಲಾಪರಿಷತ್ತು. ಕರ್ನಾಟಕ ಗಮಕ ಕಲಾ ಪರಿಷತ್ತು. ಗಮಕಿ ಎಂ. ರಾಘವೇಂದ್ರರಾವ್‌ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ‘ಕರ್ನಾಟಕದ ಗಮಕಿಗಳು’ ಪುಸ್ತಕಗಳ ಮೂಲಕ ಸಾಧ್ಯವಾದಷ್ಟು ವಿಷಯ ಸಂಗ್ರಹಿಸಿದ್ದೇನೆ. ಇದರಿಂದ ಶಾಸ್ತರಿಗಳ ಪರಿಚಯ ಗಮಕ ಕ್ಷೇತ್ರಕ್ಕೆ ದೊರೆಯಲು ಸಹಾಯಕವಾಗಬಹುದೆಂದೇ ನನ್ನ ನಂಬುಗೆ.

 

ಗಮಕಿ ರಾಮಕೃಷ್ಣಶಾಸ್ತ್ರಿಗಳು ಜನಿಸಿದ್ದು ಈಗ್ಗೆ ೧೦೮ ವರ್ಷದ ಹಿಂದೆ (೧ಂದರೆ ಸುಮರು ೧೯೯೬), ಮೈಸೂರಿನಲ್ಲಿ. ಆ ಕಾಲದಲ್ಲಿ ಪ್ರಸಿದ್ಧ ಗಮಕಿಗಳೆನಿಸಿದ್ದ ಮೈಸೂರು ಜವಳಿ ಅಂಗಡಿ ತಮ್ಮಯ್ಯನವರಲ್ಲಿ ಬಾಲ್ಯದಲ್ಲೇ ಗಮಕ ಕಲೆಯ ಅಭ್ಯಾಸ ಮಾಡಿದ್ದರು ಶಾಸ್ತ್ರಿಗಳು.

ತಮ್ಮಯ್ಯನವರ ಹೆಸರಿಗೆ ಮಾತ್ರ ‘ಜವಳು ಅಂಗಡಿ’ ಅಂಟಿಕೊಂಡಿತ್ತೇ ಹೊರತು ಒಂದು ದಿನಕ್ಕಾದರೂ ಜವಳಿ ವ್ಯಾಪಾರ ಮಾಡಿದವರಲ್ಲ. ಮೈಸೂರಿನಲ್ಲಿ ಇವರು ಪುರಾಣದ ತಮ್ಮಯ್ಯನವರೆಂದೇ ಖ್ಯಾತರಾಗಿದ್ದರು. ಗಮಕ ಕಲೆಯಲ್ಲಿ ವಿಶೇಷ ಪಾಂಡಿತ್ಯ ಹೊಂದಿದ್ದ ತಮ್ಮಯ್ಯನವರು ತಮ್ಮ ಗಮಕ ಗುರುಕುಲದ ಮೂಲಕ ಅನೇಕ ಶಿಷ್ಯರನ್ನು ತಯಾರು ಮಾಡಿದ್ದಾರೆ. ಇದರಲ್ಲಿ ಶಾಸ್ತ್ರಿಗಳು ಹಾಗೂ ಗಮಕಿ ಎಂ. ರಾಘವೇಂದ್ರರಾಯರು ಪ್ರಮುಖರು. ಉತ್ತಮ ವ್ಯಾಖ್ಯಾನಕಾರರೂ ಆಗಿದ್ದ ರಾಮಕೃಷ್ಣಶಾಸ್ತ್ರಿಗಳು ಮಂಡೀಪೇಟೆ ನರಹರಿ ಜೋಯಿಸರ ಮನೆಯಲ್ಲಿ ನಡೆಯುತ್ತಿದ್ದ ಗಮಕ ಕಾರ್ಯಕ್ರಮಗಳಲ್ಲಿ ಬಾಲಕನಾಗಿದ್ದ ರಾಘವೇಂದ್ರರಾಯರ ವಾಚನಕ್ಕೆ ವ್ಯಾಕ್ಯಾನ ನೀಡುತ್ತಿದ್ದರು.

ಮೈಸೂರು ವಾಸುದೇವಾಚಾರ್ಯರು, ಚಿಕ್ಕರಾಮರಾಯರು ಹಾಗೂ ಬೆಳಕವಾಡಿ ಶ್ರೀನಿವಾಸ ಐಯ್ಯಂಗಾರರಲ್ಲಿ ಸಮಗೀತ ಶಿಕ್ಷಣವನ್ನೂ ಪಡೆದಿದ್ದ ಶಾಸ್ತ್ರಿಗಳು ಗಮಕ ವಾಚನದಲ್ಲಿ ಸಂಗೀತಕ್ಕೆ ಹೆಚ್ಚಿನ ಒತ್ತು ಕೊಡುತ್ತಿದ್ದರು.

ಹರಿಕೇಶ್‌ನಲ್ಲೂರ್ ಮುತ್ತಯ್ಯ ಭಾಗವತರ್, ಸಂಬಂಧಮೂರ್ತಿ ಭಾಗವತರ್ ಮುಂತಾದ ಘನವಿದ್ವಾಂಸರು ಸಂಗೀತದ ಜೊತೆಗೆ ಹರಿಕಥಾ ಕಲೆಯನ್ನು ರೂಢಿಸಿಕೊಂಡಿದ್ದು ಕಥೆ ನಡೆಯುತ್ತಿದ್ದುದನ್ನು ಕೇಳಿ ಅದರಿಂದ ಪ್ರಭಾವಿತರಾಗಿ ತಾವೂ ಗಮಕದ ಜೊತೆಗೆ ಹರಿಕಥೆಯ ಕಡೆಗೂ ವಾಲಿದರು.

ಅಂದಿನ ಮೆಟ್ರಿಕ್ಯುಲೇಶನ್‌ವರೆಗೆ ವಿದ್ಯಾಭ್ಯಾಸ ಮಾಡಿದ್ದ ಶಾಸ್ತ್ರಿಗಳು ಕನ್ನಡ, ಸಂಸ್ಕೃತ ಎರಡೂ ಭಾಷಾ ಸಾಹಿತ್ಯಗಳಲ್ಲಿ ಉತ್ತಮ ಪ್ರಭುತ್ವವನ್ನು ಹೊಂದಿದ್ದವರು. ತಮ್ಮ ಸಾಹಿತ್ಯ ಜ್ಞಾನದ ಬಲದಿಂದ ಗಮಕ ವಾಚನದ ಜೊತೆಗೆ ವ್ಯಾಖ್ಯಾನವನ್ನು ರೂಢಿಸಿಕೊಂಡರು. ೧೯೨೦ ರಲ್ಲೇ ಮೈಸೂರಿನ ಆಸ್ಥಾನ ವಿದ್ವಾಂಸರೂ ಸಂಸ್ಕೃತ ಪಾಠಶಾಲಾ ಪ್ರಾಚಾರ್ಯರೂ ಆಗಿದ್ದ ನಂಜನಗೂಡು ಶ್ರೀಕಂಠ ಶಾಸ್ತ್ರಿಗಳ ಅಧ್ಯಕ್ಷತೆಯಲ್ಲಿ “ಗಮಕಿ” ಎಂಬ ಬಿರುದು ಇವರಿಗೆ ಸಂದಿತ್ತು. ಮುಂದೆ ಇವರು ಹರಿಕಥಾ ವಿದ್ವಾಂಸರಗಿ, ನಾಟಕಕಾರರಾಗಿ ಪ್ರಸಿದ್ಧರಾದರೂ ಈ ‘ಗಮಕಿ’ ಬಿರುದು ಇವರ ಬೆನ್ನಿಗೆ ಅಂಟಿಕೊಂಡೇ ಬಂದು ಗಮಕಿ ರಾಮಕೃಷ್ಣಶಾಸ್ತ್ರಿಗಳೆಂದೇ ಪ್ರಸಿದ್ಧರಾದರು.

 

ಗಮಕ ರಂಗದಲ್ಲಿ ಸಾಕಷ್ಟು ಕೃಷಿ ಮಾಡಿದ ಶಾಸ್ತ್ರಿಗಳು ಹಿಂದಿನ ಗಮಕಿಗಳಂತೆ ಕೇವಲ ಕುಮಾರವ್ಯಾಸನಿಗೇ ಅಂಟಿಕೊಳ್ಳಲಿಲ್ಲ. ಹೆಚ್ಚಿನಂಶ ವೀರಶೈವ ಸಾಹಿತ್ಯದ ಕಡೆಗೆ ಗಮನ ಹರಿಸಿದರು. ರಾಜಶೇಖರ ವಿಳಾಸ, ಬಸವ ಪುರಾಣ, ವಚನ ಸಾಹಿತ್ಯ, ಪ್ರಭುಲಿಂಗಲೀಲೆ ಮುಂತಾದ ಅನೇಕ ಕಾವ್ಯಗಳನ್ನು ವಾಚಿಸುವಲ್ಲಿ ನಿಷ್ಣಾತರೆನಿಸಿದ್ದರು. ಇವರು ಗಮಕ ವಾಚನ ಮಾಡುತ್ತಿದ್ದರು ಎಂದು ಕೇಳಿದ್ದೇವೆಯೇ ಹೊರತು ಹೇಗೆ ಮಾಡುತ್ತಿದ್ದರು ಎಂಬ ಬಗೆಗಾಗಲೀ ಇವರ ವಾಚನದ ಶೈಲಿ ಬಗ್ಗೆಯಾಗಲೀ, ಇವರ ಕಂಠ ಹೇಗಿತ್ತು ಎಂಬುದಾಗಲೀ ನನಗೆ ತಿಳಿಯದ ವಿಷಯ. ಆದರೆ ಹರಿಕಥೆಯಲ್ಲಿ ಸಂಗೀತದ ಬಳಕೆ ವಿಪುಲವಾಗಿದ್ದು ಕೇಳಲು ಮಾಧುರ್ಯವಾಗಿರುತ್ತಿತ್ತು ಎಂದು ಕೀರ್ತನ ವಲಯದ ಹಲವು ವಿದ್ವಾಂಸರಿಂದ ಕೇಳಿದ್ದರಿಂದ ಗಮಕ ಕಲೆಯಲ್ಲೂ ಇವರ ಹಾಡಿಕೆ ಅಷ್ಟೇ ಇಂಪಾಗಿರಬೇಕು ಎಂದು ಮಾತ್ರ ಊಹಿಸಲು ಸಾಧ್ಯ. ಏನೇ ಇರಲಿ ಗಮಕ ಕ್ಷೇತ್ರದಲ್ಲಿ ಇವರ ಹೆಸರು ಚಿರಸ್ಥಾಯಿಯಾಗಿ ನಿಲ್ಲುವಂಥದ್ದು.

ಆಕಾಶವಾಣಿಯ ಪ್ರಥಮ ಕಲಾವಿದ: ಮೈಸೂರು ಆಕಾಶವಾಣಿಯ ಮಾನ್ಯ ಶ್ರೀ ಗೋಪಾಲಸ್ವಾಮಿಯವರ ನೇತೃತ್ವದಲ್ಲಿ ಪ್ರಾರಂಭವಾದ ಮೊದಲ ದಿನವೇ ಶಾಸ್ತ್ರಿಗಳ ಹರಿಕಥೆ ಪ್ರಸಾರವಾದದ್ದು ಇವರ ಹೆಗ್ಗಳಿಕೆ. ಹೀಗಾಗಿ ಕೀರ್ತನ ರಂಗದಲ್ಲಿ ಆಕಾಶವಾಣಿಯ ಪ್ರಥಮ ಕಲಾವಿದ ಎಂಬ ಖ್ಯಾತಿಗೆ ಪಾತ್ರರಾದರು ಶಾಸ್ತ್ರಿಗಳು. ಸಾಹಿತ್ಯ ಜ್ಞಾನವನ್ನೂ ವಿಪುಲವಾಗಿ ಬೆಳೆಸಿಕೊಂಡಿದ್ದ ಶಾಸ್ತ್ರಿಗಳು ಪದ್ಯ, ಗದ್ಯ ರಚನಕಾರರಾಗಿದ್ದುದೇ ಅಲ್ಲದೆ ಅನೇಕ ಕಥಾ ಪ್ರಸಂಗಗಳನ್ನು ಕೀರ್ತನ ರೂಪದಲ್ಲಿ ರಚಿಸಿ ಹರಿಕಥಾ ಕ್ಷೇತ್ರಕ್ಕೆ ಒಂದು ಉತ್ತಮ ಕೊಡುಗೆಯನ್ನೇ ನೀಡಿದ್ದರಲ್ಲದೆ ಇಂದಿನ ಅನೇಕ ಕೀರ್ತನ ಕಲಾವಿದರಿಗೆ ಮಾರ್ಗದರ್ಶಕರಾಗಿದ್ದರು.

 

ನಾಟಕಕಾರರಾಗಿ-ನಟರಾಗಿ: ಕೀರ್ತನ ಕ್ಷೇತ್ರದ ಬಹುತೇಕ ಕಲಾವಿದರು ನಾಟಕ ವೃತ್ತಿಯಲ್ಲಿದ್ದು ಮುಂದೆ ನಾಟಕ ಕ್ಷೇತ್ರ ಅವನತಿಯ ಹಾದಿ ಹಿಡಿದಾಗ ಉದರಂಭರಣಕ್ಕಾಗಿ ಹರಿಕಥೆಯ ಮೊರೆ ಹೊಕ್ಕರು. ಆದರೆ ಶಾಸ್ತ್ರಿಗಳ ವಿಷಯದಲ್ಲಿ ಇದು ತದ್ವಿರುದ್ಧ. ತಮ್ಮ ಕೀರ್ತನ ಕಲಾಕೌಶಲ್ಯದಿಂದ, ಗಮಕಕ ಪಾಂಡಿತ್ಯದ ಪ್ರಭಾವದಿಂದ, ನಾಟಕ ಕಲೆಗೆ ವಾಲಿ ನಾಟಕ ಕ್ಷೇತ್ರಕ್ಕೆ ಒಂದು ರೀತಿಯ ಜೀವ ನಾಡಿಯಾದರು. ಇವರು ರಚಿಸಿದ ‘ಮಾತೃಭಕ್ತಿ’, ‘ಸತಿ ಸಾವಿತ್ರಿ’, ‘ರಾವಣ ದಿಗ್ವಿಜಯ’ ನಾಟಕಗಳು ಅಂದಿನ ಮೈಸೂರರಸರಾಗಿದ್ದ ನಾಲ್ವಡಿ ಕೃಷ್ಣರಾಜರ ಸಮ್ಮುಖದಲ್ಲಿ ಪ್ರದರ್ಶಿಸಲ್ಪಟ್ಟು ಪ್ರಭುಗಳ  ಪ್ರಶಂಸೆಗೆ ಪಾತ್ರವಾದವು. ಕ್ರಮೇಣ ಚಲನ ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದ ಶಾಸ್ತ್ರಿಗಳು ಹೆಸರಾಂತ ನಟ ಸುಬ್ಬಯ್ಯನಾಯ್ಡು, ನಾಗೇಂದ್ರರಾಯರು ಅಭಿನಯಿಸಿದ್ದ ಭೂ ಕೈಲಾಸ, ವಸಂತಸೇನೆ, ಕಬೀರ್ ದಾಸ್‌, ಹರಿಶ್ಚಂದ್ರ ಮುಂತಾದ ಚಿತ್ರಗಳಿಗೆ ಹಾಡು ಪದ್ಯಗಳನ್ನು ರಚಿಸಿಕೊಟ್ಟಿದ್ದಾರೆ. ಅಲ್ಲದೆ ಕರ್ನಾಟಕದ ವಿದ್ಯಾ ಸಚಿವರಾಗಿದ್ದ ಕೆ.ವಿ. ಶಂಕರಗಾವಡರು ರಚಿಸಿ ಅಭಿನಯಿಸಿದ ‘ಪಾದುಕಾ ಕಿರೀಟ’ ನಾಟಕಕ್ಕೆ ಬಳಸಿದ ಎಲ್ಲ ಗೀತೆಗಳೂ ಶಾಸ್ತ್ರಿಗಳ ರಚನೆಗಳು.

ಕವಿ, ಸಾಹಿತಿ, ಗೀತರಚನಕಾರರಾಗಿ: ಕಾವ್ಯಾವಲೋಕನದ ಅನುಭವದಿಂದ ಶಾಸ್ತ್ರಿಗಳು ಅನೇಕ ಪುರಾಣಗಳ ಕಥಾ ಪ್ರಸಂಗಗಳನ್ನು ಕೀರ್ತನ ರೂಪದಲ್ಲಿ ರಚಿಸಿರುವುದಲ್ಲದೆ ಅನೇಕ ಗ್ರಂಥಗಳನ್ನೂ ರಚಿಸಿದ್ದಾರೆ. ಇದರಲ್ಲಿ ಶೈವ ಗ್ರಂಥಗಳೇ ಹೆಚ್ಚು. ಅನೇಕರು ಇವರ ಸಾಹಿತ್ಯರಚನೆಗಳನ್ನು ಕೃತಿಚೌರ್ಯಮಾಡಿ ತಮ್ಮ ಹೆಸರಿನಲ್ಲಿ ಪ್ರಕಟಿಸಿದ್ದೂ ಉಂಟು. ಇಂಥ ಅನೇಕ ಕಹಿ ಅನುಭವಗಳು ಶಾಸ್ತ್ರಿಗಳ ಜೀವನದಲ್ಲಿ ಬಂದರೂ ಅದಕ್ಕಾಗಿ ಅವರು ತಲೆಕೆಡಿಸಿಕೊಂಡವರಲ್ಲ. ತಮ್ಮ ರಚನಾ ಕಾರ್ಯವನ್ನು ನಿಲ್ಲಿಸಿದವರೂ ಅಲ್ಲ. ವಿಪುಲವಾಗಿ ಹರಿಯಿತು ಅವರ ಕಾವ್ಯಧಾರೆ.

ಧಾರವಾಡ ಆಕಾಶವಾಣಿಯಿಂದ ಆಗಾಗ್ಗೆ ಪ್ರಸಾರವಾಗುತ್ತಿದ್ದ ‘ಶ್ರೀರಾಮ ಸುಪ್ರಭಾತ’ ರಚಯಿತರು ಶಾಸ್ತ್ರಿಗಳೇ. ಆನಂದ ರಾಮಾಯಣ, ಅದ್ಭುತ ರಾಮಾಯಣ, ದೇವೀ ಭಾಗವತಗಳ ಅನೇಕ ಪ್ರಸಂಗಗಳನ್ನು ಕೀರ್ತನ ರೂಪೀ ಸಾಹಿತ್ಯದಲ್ಲಿ ರಚಿಸಿರುವುದೇ ಅಲ್ಲದೆ ಸ್ವಾತಂತ್ರ ಸಂಗ್ರಾಮ ಸಮಯದಲ್ಲಿ ಗಾಂಧೀಜೀ, ರಾಮಕೃಷ್ಣ ಪರಮಹಂಸರ ಜೀವನದ ಧ್ಯೇಯಗಳ ದೃಷ್ಟಾಂತರೂಪೀ ಕಥೆಗಳನ್ನು ರಚಿಸಿರುವುದರೊಂದಿಗೆ ತಾನೇ ಅನೇಕ ಕಡೆ ಕಥೆ ನಡೆಸಿದ್ದೂ ಉಂಟು.

 

ಗೋಂದಾವಳೀ ಬ್ರಹ್ಮ ಚೈತನ್ಯದ ಚರಿತ್ರೆಯನ್ನೊಳಗೊಂಡ ಕಾವ್ಯಭಾಮಿನೀ ಷಟ್ಪದಿಯಲ್ಲಿ ರಚಿತವಾಗಿದ್ದು ಸುಮಾರು ಒಂದು ಸಾವಿರ ಪದ್ಯಗಳಿಗೂ ಮಿಕ್ಕಿರುವ ಬೃಹದ್ಗಂಥ, ‘ಕೇದಾರ-ಬದರೀ ಯಾತ್ರದರ್ಪಣ’, ‘ಶ್ರೀ ಸಾಯೀ ರಾಮ ಸುಧಾ’, ‘ಶೃಂಗಗಿರಿ ಮಹಾತಪಸ್ವಿ’, ಇವರು ರಚಿಸಿದ ಗದ್ಯ ಗ್ರಂಥಗಳು. ಶೃಂಗೇರಿ ಸಂಸ್ಥಾನದ ಜಗದ್ಗುರುಗಳ ಸಮ್ಮುಖದಲ್ಲಿ ಹಲವಾರು ಬಾರಿ ಕಾವ್ಯವಾಚನ-ಕೀರ್ತನೆಗಳನ್ನು ನಡೆಸಿದ್ದಾರೆ. ಹೊರರಾಜ್ಯಗಳಾದ ಬಂಗಾಳ, ಮಹಾರಾಷ್ಟ್ರ, ದೆಹಲಿ, ಮಧ್ಯಪ್ರದೇಶಗಳಲ್ಲಿ ಸಂಚರಿಸಿ ಕಾರ್ಯಕ್ರಮ ನೀಡಿದ್ದಾರೆ.

ಶಿಷ್ಯ ಸಂಪತ್ತು: ಕಾವ್ಯವಾಚನ ಮತ್ತು ಕೀರ್ತನ ಕ್ಷೇತ್ರದಲ್ಲಿ ಅನೇಕ ಶಿಷ್ಯರನ್ನು ತಯಾರು ಮಾಡಿದ್ದಾರೆ ಶಾಸ್ತ್ರಿಗಳು. ಗಮಕ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಬಾಳಗಂಚಿ ನಂಜುಂಡಯ್ಯನವರು ಇವರ ಶಿಷ್ಯರಲ್ಲಿ ಪ್ರಮುಖರು. ಅಂತೆಯೇ ಕೀರ್ತನ ಕ್ಷೇತ್ರದಲ್ಲಿ ಇಂದು ಮನೆ ಮಾತಾಗಿರುವ ಭದ್ರಗಿರಿ ಸಹೋದರರ ಪ್ರಮುಖ ಶಿಷ್ಯರಾದ ಲಕ್ಷ್ಮಣ ದಾಸ್‌ ವೇಲ್ಹಣಕರ್ ಅವರು ಶಾಸ್ತ್ರಿಗಳಲ್ಲಿ ಸಂಗೀತ ಕೀರ್ತನ ಕಲೆಯನ್ನು ಅಭ್ಯಾಸ ಮಾಡಿದವರು.

ಶಾಸ್ತ್ರಿಗಳ ಮಕ್ಕಳಾದ ದಿ.ಹೆಚ್‌.ಆರ್. ಸೀತಾರಾಮಶಾಸ್ತ್ರಿಗಳು ಸುಗಮ ಸಂಗೀತ ಕ್ಷೇತ್ರದಲ್ಲಿ ಮಂಚೂಣಿಯಲ್ಲಿದ್ದವರು. ಮಗಳು ಗಾಯತ್ರಿ ಸುಬ್ಬರಾವ್‌ ಅವರು ಸಂಗೀತ, ಗಮಕಗಳಲ್ಲಿ ಪಾಂಡಿತ್ಯ ಪಡೆದಿದ್ದಾರೆ. ದಿಲ್‌ರುಬಾ ನಾಗರಾಜ್‌ ಎಂದೇ ಪ್ರಸಿದ್ಧರಾಗಿ ಆಕಾಶವಾಣಿ ನಿಲಯ ಕಲಾವಿದರಾಗಿದ್ದ ನಾಗರಾಜಶಾಸ್ತ್ರಿಗಳು ಇವರ ಮತ್ತೊಬ್ಬ ಪುತ್ರರು.

 

ಬೆಂಗಳೂರು ರಾಜಾಜಿನಗರದ ದಾಸಾಶ್ರಮದಲ್ಲಿ ೧೯೬೪ರಲ್ಲಿ ನಡೆದ ಅಖಿಲ ಕರ್ನಾಟಕ ಕೀರ್ತನಕಾರರ ಪ್ರಥಮ ಸಮ್ಮೇಳನದಲ್ಲಿ ಇವರನ್ನು ಕೀರ್ತನ ಭೂಷಣ ಎಂಬ ಬಿರುದಿನೊಂದಿಗೆ ಸನ್ಮಾನಿಸಲಾಯಿತು.

ದ್ವಾರಕಾ ಶೃಂಗೇರಿ ಜಗದ್ಗುರುಗಳಿಂದ ಕೀರ್ತನ ಕಲಾನಿಧಿ, ಶಿವಮೊಗ್ಗ ವಿದ್ವನ್ಮಂಡಲಿಯಿಂದ ಕೀರ್ತನ ಕಮಲ ಭಾಸ್ಕರ, ೧೯೨೦ರಲ್ಲಿ ನಂಜನಗೂಡು ಶ್ರೀಕಂಠಶಾಸ್ತ್ರಿಗಳಿಂದ ಗಮಕಿ ಎಂಬ ಬಿರುದು ಗೌರವಗಳು ಇವರಿಗೆ ಸಂದಿವೆ.

ಅನೇಕ ವೀರಶೈವ ಜಗದ್ಗುರುಗಳು ಶರಣ ಸಾಹಿತ್ಯಕ್ಕೆ ಇವರು ನೀಡಿದ ಕೊಡುಗೆಗಳಾಗಿ ಗೌರವಿಸಿ ಸನ್ಮಾನಿಸಿದ್ದಾರೆ.

ಹೀಗೆ ಸಂಗೀತ, ಸಾಹಿತ್ಯ, ನಾಟಕ, ಗಮಕ, ಕೀರ್ತನ ಕ್ಷೇತ್ರಗಳ ಬಹುಮುಖ ಪ್ರತಿಭೆಯ ಕಲಾವಿದರಾಗಿದ್ದ ಗಮಕಿ ರಾಮಕೃಷ್ಣ ಶಾಸ್ತ್ರೀಗಳು ಕಲಾಕ್ಷೇತ್ರದ ಮೇರುವಾಗಿ ಮೆರೆದವರು. ಇವರ ಕೀರ್ತಿ ಇಂದಿಗೂ ಅಜರಾಮರ.