ಮಾಲೂರು ಟಿ. ವೆಂಕಟಪ್ಪ

ಜನನ : ೧೫-೨-೧೯೧೫ ರಂದು ಮಾಲೂರಿನಲ್ಲಿ

ಮನೆತನ : ಹೆಸರಾಂತ ಕೀರ್ತನಕಾರರ ಹಾಗೂ ರಂಗಭೂಮಿ ಕಲಾವಿದರ ಮನೆತನ.

ತಾತ ಹನುಮಯ್ಯನವರು ಯಕ್ಷಗಾನ ಕಲಾವಿದರಾಗಿದ್ದವರು. ತಂದೆ ತಿಮ್ಮಯ್ಯದಾಸರು ಕೀರ್ತನಕಾರರು ಹಾಗೂ ನುರಿತ ನಟರಾಗಿದ್ದರು. ತಾಯಿ ನರಸಮ್ಮ.

ಗುರುಪರಂಪರೆ: ತಂದೆಯವರಾದ ತಿಮ್ಮಯ್ಯದಾಸರೇ ಇವರಿಗೆ ಗಮಕ ಶಿಕ್ಷಣದ ಗುರುಗಳು ಸಂಗೀತದಲ್ಲೂ ಸಾಕಷ್ಟು ಪರಿಶ್ರಮವಿದ್ದು ತಬಲಾ, ಮೃದಂಗ ವಾದನದಲ್ಲೂ ನಿಷ್ಣಾತರೆನಿಸಿದ್ದರು. ಪ್ರಸಿದ್ಧ ವೈಣಿಕ- ಗಾಯಕ ಎಲ್. ರಾಜಾರಾಯರ ಬಳಿ ಸಂಗೀತದಲ್ಲಿ ಮಾರ್ಗದರ್ಶನ ಪಡೆದಿದ್ದಾರೆ. ಚಿತ್ರಕಲೆಯಲ್ಲೂ ಪರಿಶ್ರಮವಿತ್ತು. ಸಾಮಾನ್ಯ ವಿದ್ಯಾಭ್ಯಾಸದಲ್ಲಿ ವಿಜ್ಞಾನ ಶಾಸ್ತ್ರ ಪದವೀಧರರು.

ಸಾಧನೆ : ಕಾಲೇಜಿನ ವ್ಯಾಸಂಗ ಸಮಯದಲ್ಲಿ ’ಯೂನಿವರ್ಸಿಟಿ ಯೂನಿಯನ್ ವಾದ್ಯಗೋಷ್ಠಿ’ ಯಲ್ಲಿ ತಬಲ ವಾದಕರಾಗಿದ್ದರು. ಕಾಲೆಜಿನಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಉತ್ಸವಗಳ ಸಂದರ್ಭದಲ್ಲಿ ಒಮ್ಮೆ ಕಳಲೆ ಸಂಪತ್ಕುಮಾರಾಚಾರ್ಯರ ವಾಚನ ಕೇಳಿ ಅವರ ಗಮಕ ಕಲಾ ನೈಪುಣ್ಯಕ್ಕೆ ಮಾರುಹೋಗಿ ತಾವೂ ಆ ಕಲೆಯನ್ನು ಅಭ್ಯಸಿಸಿದರು. ತಂದೆಯೇ ಇರವ ಗುರುಗಳಾದರು. ಮುಂದೆ ಗಮಕ ದಿಗ್ಗಜಗಳೆನಿಸಿದ್ದ ಗಮಕಿ ಎಂ. ರಾಘವೇಂದ್ರರಾಯರು, ಹು. ಮ. ರಾಮಾರಾಧ್ಯರು, ಶಕುಂತಲಾಬಾಯಿ ಪಾಂಡುರಂಗರಾವ್ ಅವರುಗಳ ಗಮಕ ವಾಚನಗಳನ್ನು ಕೇಳಿ ಅದರಿಂದ ಪ್ರಭಾವಿತರಾದರು. ಪಂಪನಿಂದ ಹಿಡಿದು ಕುವೆಂಪುರವರ ರಾಮಾಯಣ ದರ್ಶನಂ ಕಾವ್ಯದವರೆಗಿನ ಎಲ್ಲಾ ಛಂದಸ್ಸಿನ ಕಾವ್ಯಗಳನ್ನು ಅಭ್ಯಸಿಸಿದರು. ಪ್ರಮುಖವಾಗಿ ಜೈಮಿನಿ ಭಾರತ, ಕುಮಾರವ್ಯಾಸ ಭಾರತ, ಚಾಮರಸನ ಪ್ರಭುಲಿಂಗಲೀಲೆ ಕಾವ್ಯ ವಾಚನಗಳನ್ನು ಹಲವಾರು ಕಡೆ ನಡೆಸಿ ನೂರಾರು ಕಾರ್ಯಕ್ರಮಗಳು ನೀಡಿರುತ್ತಾರೆ. ಕುವೆಂಪುರವರ ರಾಮಾಯಣ ದರ್ಶನಂ ಕಾವ್ಯವನ್ನು ಸಮಗ್ರವಾಗಿ ನಿತ್ಯ ಪಾರಾಯಣಮಾಡಿದ್ದಾರೆ. ಡಿ.ವಿ.ಜಿ.ಯವರು ಮಂಕುತಿಮ್ಮನ ಕಗ್ಗದ ವಾಚನವನ್ನೂ ಮಾಡಿರುತ್ತಾರೆ. ಗಮಕ ಕಲೆಯ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಗಮಕ ತರಗತಿಗಳನ್ನು ನಡೆಸಿ ಕೋಲಾರದ ಆಸುಪಾಸಿನಲ್ಲೆಲ್ಲಾ ಗಮಕ ಕಲಾ ಪ್ರಚಾರ ಮಾಡಿರುತ್ತಾರೆ. ೧೯೮೨ ರಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು ಸ್ಥಾಪನೆಯಾದಾಗ ಪರಿಷತ್ತಿನ ಕೋಲಾರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದೆ ಅಲ್ಲದೆ ಪರಿಷತ್ತಿನ ಲಾಂಛನವನ್ನು ವಿನ್ಯಾಸ ಮಾಡಿದ ಹೆಗ್ಗಳಿಕೆ ಇವರದು. ೧೯೮೮ ರಲ್ಲಿ ಕೋಲಾರದಲ್ಲಿ ಜಿಲ್ಲಾಮಟ್ಟದ ಸಮ್ಮೇಳನವನ್ನು ಮುಳಬಾಗಿಲಿನಲ್ಲಿ ನಡೆಸಿದರು. ಹು. ಮ. ರಮಾರಾಧ್ಯರ ಗಮಕ ರೂಪಕಗಳಿಂದ ಪ್ರಭಾವಿತರಾಗಿ ತಾವೂ ಹಲವಾರು ರೂಪಕಗಳನ್ನು ರಚಿಸಿ ವಿದ್ಯಾರ್ಥಿಗಳಿಂದ ಪ್ರದರ್ಶಿಸಿದ್ದಾರೆ. ೧೯೯೨ ರಲ್ಲಿ ಕರ್ನಾಟಕ ಗಾನ ಕಲಾ ಪರಿಷತ್ತು ಮೈಸೂರಿನಲ್ಲಿ ನಡೆಸಿದ ಸಂಗೀತ ವಿದ್ವಾಂಸರ ಸಮ್ಮೇಳನದಲ್ಲಿ ಅನೇಕ ಸಂಗೀತ ದಿಗ್ಗಜರ ಸಮ್ಮುಖದಲ್ಲಿ ಕನಕದಾಸರ ’ರಾಮಧಾನ್ಯ’ ಚರಿತ್ರೆ ಗಮಕ ರೂಪಕ ನಡೆಸಿಕೊಟ್ಟು ಹಿರಿಮೆಯನ್ನು ಸಾಧಿಸಿದ್ದಾರೆ. ಗಮಕ ಕಲೋಪಾಸನೆ ಇವರ ಜೀವನದುಸಿರು.

ಕೆಲವು ಕಾಲ ಮಿಲಿಟರಿ ಸೇವೆಯಲ್ಲಿದ್ದರು. ಆಗ ಅವರ ಹಿರಿಯ ಅಧಿಕಾರಿಗಳಾಗಿದ್ದವರು ಹೆಸರಾಂತ ಸಾಹಿತ್ಯ- ಕವಿ ಪು.ತಿ. ನರಸಿಂಹಾಚಾರ್ಯರು. ಹಾಗಾಗಿ ಅವರ ಸಂಪರ್ಕವೂ ಇತ್ತು. ಪ್ರಸಿದ್ಧ ಹಾರ್ಮೋನಿಯಂ ವಾದಕ ಅರುಣಾಚಲಪ್ಪನವರ ಸ್ನೇಹ ಇವರಿಗಿದ್ದು ಇವರ ಕಾರ್ಯಕ್ರಮಗಳಿಗೆ ಅವರು ಪಕ್ಕವಾದ್ಯ ನುಡಿಸಿದ್ದಾರೆ.

ಪ್ರಶಸ್ತಿ – ಪುರಸ್ಕಾರಗಳು : ಗಮಕ ಕಲಾಕ್ಷೇತ್ರ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿನ ಸಾಧನೆಗಳಿಗಾಗಿ ಅನೇಕ ಪ್ರಶಸ್ತಿ ಪುರಸ್ಕಾರಗಳು ವೆಂಕಟಪ್ಪನವರನ್ನು ಅರಸಿಕೊಂಡು ಬಂದವು.

೧೯೮೩ ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಪ್ರಥಮ ಗಮಕ ಸಮ್ಮೇಳನದ ಸಂದರ್ಭದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು ಇವರನ್ನು ಗೌರವಿಸಿ ಸನ್ಮಾನಿಸಿತು. ೧೯೯೮ ರಲ್ಲಿ ಮಾಲೂರಿನ ನಾಗರಿಕರು ಕನ್ನಡ ಸಂಘದ ವತಿಯಿಂದ ಇವರನ್ನು ಗೌರವಿಸಿ ಸನ್ಮಾನಿಸಿದ್ದಾರೆ. ೧೯೯೦ ರಲ್ಲಿ ಇವರ ಜನ್ಮದಿನದ ಅಮೃತ ಮಹೋತ್ಸವವನ್ನು ಆಚರಿಸಿ ನಾಗರಿಕರು “ಮಾಲೂರ ಮಾಣಿಕ್ಯ” ಎಂಬ ಅಭಿನಂದನಾ ಗ್ರಂಥವನ್ನು ತಂದಿರುವುದಲ್ಲದೆ ಬಿರುದು ಬಿಲ್ಲತ್ತುಗಳನ್ನು ನೀಡಿ ಗೌರವಿಸಿದ್ದಾರೆ. ಈ ಸಂದರ್ಭದಲ್ಲಿ ಇವರಿಗೆ ಅರ್ಪಿಸಿದ ನಿಧಿಯನ್ನು ಒಂದು ಪುದುವಟ್ಟನ್ನಾಗಿ ಇಟ್ಟು ಅದರಿಂದ ಬರುವ ಆದಾಯದಿಂದ ಪುರಂದರ-ತ್ಯಾಗರಾಜ ಆರಾಧನೆ ಹಾಗೂ ಕವಿ ಜಯಂತ್ಯುತ್ಸವವನ್ನು ಆಚರಿಸುವಂತೆ ಏರ್ಪಾಡು ಮಾಡಿದ್ದಾರೆ.

೧೯೯೨ ರಲ್ಲಿ ಗಮಕಕಲೆ ಸಾಹಿತ್ಯ ಅಕಾಡೆಮಿಯಿಂದ ಸಂಗೀತ ನೃತ್ಯ ಅಕಾಡೆಮಿಯ ವ್ಯಾಪ್ತಿಗೆ ಬಂದಾಗ ಮೊಟ್ಟ ಮೊದಲಿಗೆ ವೆಂಕಟಪ್ಪನವರಿಗೆ ೯೨-೯೩ರ ಸಾಲಿನ ಗಮಕ ಪ್ರಶಸ್ತಿಯನ್ನು “ಕರ್ನಾಟಕ ಕಲಾತಿಲಕ” ಬಿರುದಿನೊಂದಿಗೆ ನೀಡಿ ಸನ್ಮಾನಿಸಿತು.

ದಿನಾಂಕ : ೧೪-೯-೧೯೯೫ ರಂದು ವೆಂಕಟಪ್ಪನವರು ನಿಧನರಾದರು.