ವಿಲಿಯಂ ಲುಸ್ರಾದೋ ಅವರದು ಒಂದೇ ಹಠ. ಭಟ್ಟರೆ, ನಮ್ಮ ಮಾವನ ಮನೆಯ ಹಿತ್ತಲಿನಲ್ಲಿ ಒಂದು ಹಲಸಿನ ಮರವಿದೆ. ಅದರಲ್ಲಿ ಮೇಣವೇ ಇಲ್ಲ. ಅದರದ್ದೊಂದು ಕಸಿ ಮಾಡಿಕೊಡಿ ಮಾರಾಯ್ರೇ.

ಅಂತೂ ಒಂದು ದಿನ ಮಂಗಳೂರಿನ ಕುದುಪ್ಪಾಡಿಯಲ್ಲಿರುವ ತಿಮೋತಿ, ಮೆನೆಂಜಿಸ್‌ರವರ ಮನೆಗೆ ಹೋದದ್ದು, ಅಲ್ಲಿ ಹಲಸಿನಹಣ್ಣು ನೋಡಿದ್ದು, ತಿಂದದ್ದು, ಒಂದಿಷ್ಟು ಗೆಲ್ಲುಗಳನ್ನು ತಂದದ್ದು ಎಲ್ಲಾ ಆಯಿತು.

ಮೆನೆಂಜಿಸ್‌ ಹೇಳುವಂತೆ, ಅವರ ನೆಂಟರಾರೋ ಮಲೇಸಿಯಾದಿಂದ ತಂದ ಹಣ್ಣಿನಲ್ಲಿರುವ ಬೀಜ ಹೀಗೆ ಆದದ್ದು. ಅಷ್ಟೆ, ಬೇರೆ ಮಾಹಿತಿ ಇಲ್ಲ. ಮರ ಕಾಂಪೌಂಡ್‌ ಪಕ್ಕ ಚೆನ್ನಾಗಿಯೇ ಬೆಳೆದಿತ್ತು. ವರ್ಷಂಪ್ರತಿ ಫಸಲು. ನೂರಕ್ಕೆ ಕಮ್ಮಿಯಿಲ್ಲ. ತಿನ್ನಲು ರುಚಿ, ಕೊಬ್ಬರಿ ತಿಂದಂತೆ. ಹಣ್ಣನ್ನು ಯಾರು ಬೇಕಾದರೂ ಕತ್ತರಿಸಬಹುದು. ಕೈಗೆ ಅಂಟಾಗಿರುವ ಮೇಣ ಹತ್ತದು.

ಸುಮಾರು ೫೦ ಗಿಡಗಳಿಗೆ ಕಸಿ ಮಾಡಿದೆ. ೨೫ ಗಿಡಗಳು ಯಶಸ್ವಿ. ಎಲ್ಲವನ್ನೂ ಲುಸ್ರಾದೋ ಒಯ್ದರು. ಮನೆಯಲ್ಲಿ ಹಳೆಯಮರದ ಕುತ್ತಿಗೆಗೆ ೧೩ ಗೆಲ್ಲು(ಕಡ್ಡಿ)ಗಳನ್ನು ಕಸಿ ಮಾಡಿದೆ. ಎಲ್ಲವೂ ಚೆನ್ನಾಗಿಯೇ ಆಯಿತು. ಮೂರನೇ ವರ್ಷದಲ್ಲೇ ಹಣ್ಣು ಬಂತು.

ಪ್ರಾರಂಭದಲ್ಲಿ ನೂರು, ಆಮೇಲೆ ಇನ್ನೂರು. ಈಗಂತೂ ಮರದ ತುಂಬಾ ಹಲಸು. ಸಣ್ಣಗಾತ್ರ. ಹೆಚ್ಚೆಂದರೆ ೨೫ ಕಿಲೋಗ್ರಾಂ. ಮೂಲತಳಿಯ ರುಚಿಯೇ ಬಂದಿದೆ. ನಾರಿನ ಅಂಶವಿಲ್ಲ. ಎಷ್ಟು ತಿಂದರೂ ಗ್ಯಾಸ್‌ ಆಗದು. ಅಜೀರ್ಣ ಆಗದು.

ಆಮೇಲೆ ಬೀಜ ಹಾಕಿ ಗಿಡವನ್ನೂ ಮಾಡಿದ್ದೆ. ಕೆಲವು ತುಳವ, ಕೆಲವು ಅಂಟುಮೇಣ. ತಾಯಿಯ ಗುಣ ಯಾವುದಕ್ಕೂ ಇಲ್ಲ. ಕಸಿಯೇ ಆಗಬೇಕು. ಆಗ ಹುರುಪಿತ್ತು. ಕಸಿಗಿಡಗಳ ತಯಾರಿಕೆ ಕೊಡಗು, ಚಿಕ್ಕಮಗಳೂರು, ಬೆಂಗಳೂರು, ತುಮಕೂರು, ಉತ್ತರಕನ್ನಡ, ಶಿವಮೊಗ್ಗ, ಮೈಸೂರು ಹೀಗೆ ಅಕ್ಕಪಕ್ಕದ ಜಿಲ್ಲೆ, ರಾಜ್ಯಗಳಿಗೂ ಹೋಯಿತು. ಸಾವಿರಾರು ಗಿಡಗಲೂ ಎಲ್ಲೆಲ್ಲೋ ಸೇರಿಕೊಂಡವು.

ಮೊದಲಿಗೇ ನಮ್ಮ ಪಕ್ಕದೂರಿನ ಮಿಂಚಿಕಲ್ಲು ಹರಿಶ್ಚಂದ್ರ ಶೆಟ್ಟಿಯವರೂ ಕಸಿಗಿಡ ಒಯ್ದರು. ತಮ್ಮ ನರ್ಸರಿಯಲ್ಲೇ ಬೆಳೆಸಿ ಇನ್ನಷ್ಟು ಕಸಿ ಮಾಡಿದರು. ಇನ್ನಷ್ಟು ಅಭಿವೃದ್ಧಿಪಡಿಸಿದರು. ಎಲ್ಲೆಲ್ಲೂ ಸುದ್ದಿಯಾಗಿ ಪತ್ರಿಕೆಗಳಲ್ಲೂ ಬಂತು.

ರಾಷ್ಟ್ರೀಯ ಅನುಶೋಧನಾ ಪ್ರತಿಷ್ಠಾನದವರು ಹರಿಶ್ಚಂದ್ರ ಶೆಟ್ಟಿಯವರಿಗೆ ಅನುಶೋಧಕ ಪ್ರಶಸ್ತಿಯನ್ನು ನೀಡಿದರು. ಅವರೂ ಸಾವಿರಾರು ಗಿಡ ಮಾರಿರಬಹುದು.

ಹಲಸಿನಹಣ್ಣನ್ನು ಕತ್ತರಿಸಿದಾಗ ಮೇಣ ಅರ್ಥಾತ್‌ ಅಂಟು ಇಲ್ಲವೇ ಎಲ್ಲ ಎಂದಲ್ಲ. ಆ ಒಳಗಿರುವ ದಿಂಡಿನ ಭಾಗದಲ್ಲಿ ಬೆವರಹನಿಯಂತಹ ಬಿಳಿದ್ರವ ಅಲ್ಲಲ್ಲಿ ಬರುತ್ತದೆ. ಆದರದು ಅಂಟಲ್ಲ. ಅಂಟಿನ ರೀತಿ ಅಷ್ಟೆ. ಬೇರೆ ಎಲ್ಲೆಲ್ಲೂ ಅಂಟುಮೇಣವಿಲ್ಲ.

ಇದರ ತೊಳೆಯೊಂದೇ ಅಲ್ಲ, ಸಿಪ್ಪೆಯೊಂದನ್ನು ಬಿಟ್ಟು ಉಳಿದದ್ದನ್ನೆಲ್ಲಾ ಅಡುಗೆಗೆ ಬಳಸಬಹುದು. ಅವೂ ರುಚಿಯಾಗಿಯೇ ಇವೆ.

ಕತ್ತರಿಸಿದಾಗ ಅಂಟು ಅಂಟಿಕೊಳ್ಳದ ಕಾರಣ ಇನ್ನು ರೇಜಿಗೆ ಎನ್ನುವವರು ಬೆಳೆಯಬಹುದು, ತಿನ್ನಲೂಬಹುದು.

ಅರಬಿಯವರ ಗಡ್ಡಕ್ಕಂತೂ ಈ ಹಲಸು ತಿಂದರೆ ಮೇಣ ಹತ್ತದು. ಗಡ್ಡ ಬೋಳಿಸುವ ಕಾಲವೂ ಬರಲಿಕ್ಕಿಲ್ಲ.

ಸುಳ್ಯದ ಬೆಳ್ಳಿಪ್ಪಾಡಿಯ ಅರವತ್ತೊಂಬತ್ತು ವರ್ಷದ ಮಹಾಲಿಂಗೇಶ್ವರ ಭಟ್ಟರು ಹದಿನೇಳು ವರ್ಷಗಳ ಹಿಂದಿನ ಕಥೆ ನೆನಪಿಸಿಕೊಂಡದ್ದು.