ಗರುಡಮಹಾವಿಷ್ಣುವಿನ ವಾಹನ ಎಂದು ಗರುಡನನ್ನು ಹಿಂದುಗಳು ಗೌರವಿಸುತ್ತಾರೆ. ತಾಯಿಯ ದಾಸ್ಯವನ್ನು ಬಿಡಿಸಲು ಸ್ವರ್ಗಕ್ಕೆ ಮುತ್ತಿಗೆ ಹಾಕಿ ಅಮೃತಕುಂಭವನ್ನು ಭೂಮಿಗೆ ತಂದ ವೀರ.

ಗರುಡ

ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುವ ಗರುಡನನ್ನು ನೋಡಿದ್ದೀರಲ್ಲವೆ? ಅವನೇ ಪಕ್ಷಿಗಳ ರಾಜ! ಮಹಾಶಕ್ತಿಶಾಲಿ. ಗಗನದಲ್ಲಿ ಅತಿ ಎತ್ತರದಲ್ಲಿ ವಿಹಂಗಮಿಸುವ ಈ ತೀಕ್ಷ  ದೃಷ್ಟಿಯ ಸ್ವಾತಂತ್ರ ಪ್ರೇಮೀ ಗರುಡನ ಕಥೆ ಬಹಳ ಉದ್ಬೋಧಕ. ನಮ್ಮ ಪುರಾಣ ಗ್ರಂಥಗಳಲ್ಲಿ ಗರುಡನಿಗೆ ಪೂಜ್ಯ ಸ್ಥಾನವಿದೆ. ಗರುಡನೆಂದಾಕ್ಷಣ ಗರುಡವಾಹನ ಭಗವಾನ್ ಶ್ರೀ ವಿಷ್ಣುವಿನ ಚಿತ್ರ ನಮ್ಮ ಕಣ್ಮುಂದೆ ಬರುತ್ತದೆ. ಶಂಖ ಚಕ್ರ ಗಾದ ಪದ್ಮಧಾರಿ ಭಗವಂತನನ್ನು ತನ್ನ ಬೆನ್ನ ಮೇಲೆ ಕೂಡಿಸಿಕೊಂಡು ಹಾಗೂ ತನ್ನ ಬಲಿಷ್ಠ ಕಾಲುಗಳಲ್ಲಿ ಸರ್ಪವನ್ನು ಹಿಡಿದು ಹಾರುತ್ತಿರುವ ಗರುಡನ ಚಿತ್ರವನ್ನು ಭಾರತದ ಮನೆಮನೆಯಲ್ಲೂ ನಾವು ಕಾಣುತ್ತೇವೆ.

ಸಾಕ್ಷಾತ್ ವಿಷ್ಣುವಿಗೇ ವಾಹನವಾಗಿರುವ ಶಕ್ತಿಶಾಲಿ ಗರುಡನ ಕಥೆಯನ್ನು ಮಹಾಭಾರತದ ಆದಿಪರ್ವದಲ್ಲಿ ಹೇಳಿದೆ. ಗರುಡನ ಮಾತೃಭಕ್ತಿಯ ಕಥೆಯೆಂದರೆ ನಮ್ಮ ಸಂಸ್ಕೃತಿಯ ಮೂಲಾಧಾರ ಗ್ರಂಥಗಳಾದ ಪುರಾಣಗಳಲ್ಲಿ ಹೃದಯಸ್ಪರ್ಶಿ ಅಧ್ಯಾಯವಾಗಿದೆ. ಈ ಜಗತ್ತಿನಲ್ಲಿ ಮಾತೆಗಿಂತ ಮಂಗಳಕರವಾದುದು ಯಾವುದಿದೆ? ಜಗತ್ತಿನ ಎಲ್ಲಾ ಋಣಗಳನ್ನು ತೀರಿಸಬಹುದು. ಆದರೆ ಮಾತೃಋಣ ಎಂದೆಂದಿಗೂ ತೀರುವಂಥದಲ್ಲ.

ಕಶ್ಯಪರ ಹೆಂಡತಿಯರು

ಪ್ರಜಾಪತಿ ರಾಜನಿಗೆ ಕದ್ರು ಹಾಗೂ ವಿನತೆ ಎಂಬ ಇಬ್ಬರು ಪುತ್ರಿಯರು. ಸುಂದರಿಯರು ಈ ರಾಜಕುವರಿಯರು. ಅಪೂರ್ವ ರಾಜವೈಭವದಲ್ಲಿ ಬೆಳೆದರು. ಪ್ರಜಾಪತಿ ರಾಜನಿಗೆ ಅವರಲ್ಲಿ ತುಂಬಾ ಪ್ರೀತಿ.

ಇಬ್ಬರು ಮಕ್ಕಳೂ ಬೆಳೆದು ದೊಡ್ಡವರಾದರು. ಅವರಿಗೆ ಮದುವೆ ಮಾಡಬೇಕೆಂದು ಪ್ರಜಾಪತಿ ಮಹಾರಾಜ ಅವರಿಗಾಗಿ ಯೋಗ್ಯ ವರ ಶೋಧನೆ ಮಾಡತೊಡಗಿದ.

ಒಂದು ದಿನ ಮಹರ್ಷಿ ಕಶ್ಯಪರು ರಾಜಸಭೆಗೆ ಬಂದರು. ಬಹು ದೊಡ್ಡ ಯೋಗಿಗಳಾದ ಕಶ್ಯಪರನ್ನು ರಾಜನು ಸಕಲ ರಾಜಮರ್ಯಾದೆಗಳೊಂದಿಗೆ ಸತ್ಕರಿಸಿದ. ಪ್ರಜಾಪತಿ ರಾಜನ ಭಕ್ತಿಯುತ ಆದರಾತಿಥ್ಯದಿಂದ ಮಹರ್ಷಿ ಕಶ್ಯಪರು ಬಹು ಸಂತುಷ್ಟರಾದರು.

ತನ್ನ ಮಕ್ಕಳಿಗೆ ಈ ಮಹರ್ಷಿಗಳೇ ತಕ್ಕ ವರ ಎನಿಸಿತು ರಾಜನಿಗೆ. ‘‘ನನ್ನ ಇಬ್ಬರು ಹೆಣ್ಣುಮಕ್ಕಳು ರೂಪವತಿಯರು, ಸದ್ಗುಣವಂತರು. ಅವರನ್ನು ಮದುವೆಯಾಗಿ ನಮ್ಮ ಮೇಲೆ ಅನುಗ್ರಹ ಮಾಡಬೇಕು’’ ಎಂದು ಕೈಮುಗಿದು ಪ್ರಾರ್ಥಿಸಿದ ಮಹಾರಾಜ.

ಕಶ್ಯಪಮುನಿಗಳು ರಾಜನ ಬಿನ್ನಹವನ್ನು ಮನ್ನಿಸಿದರು. ರಾಜ ಪುತ್ರಿಯರಾದ ಕದ್ರು ಮತ್ತು ವಿನತೆಯರನ್ನು ಮದುವೆಯಾದರು.

ಕಶ್ಯಪರು ಶ್ರೇಷ್ಠ ಮುನಿಗಳು, ಸಪ್ತರ್ಷಿಗಳಲ್ಲೊಬ್ಬರು; ಅಂತಹವರನ್ನು ಮದುವೆಯಾಗುವುದು ತಮ್ಮ ಭಾಗ್ಯ ಎಂದು ಕದ್ರು ಮತ್ತು ವಿನತೆಯರಿಗೂ ಸಂತೋಷವಾಯಿತು. ಗಂಡನೊಡನೆ ಆಶ್ರಮಕ್ಕೆ ಹೊರಟರು.

ಕಶ್ಯಪರ ಆಶ್ರಮವೆಂದರೆ ಪವಿತ್ರ ಪುಣ್ಯಕ್ಷೇತ್ರ. ಋಷಿಗಳ ಹೋಮಹವನ ಪೂಜೆ ಪುನಸ್ಕಾರ ಕಾರ್ಯದಲ್ಲಿ ಸ್ವಲ್ಪವೂ ಹೆಚ್ಚುಕಡಿಮೆ ಆಗದಂತೆ ಅಕ್ಕತಂಗಿಯರು ಸೇವೆ ಮಾಡುತ್ತಿದ್ದರು. ಹೀಗೇ ಹಲವು ವರ್ಷಗಳು ಸಂತೋಷವಾಗಿ ಕಳೆದವು.

ವರ ಕೇಳಿಕೊಳ್ಳಿ

ಒಮ್ಮೆ ಕಶ್ಯಪಮುನಿ ತಮ್ಮ ಇಬ್ಬರೂ ಪತ್ನಿಯರನ್ನು ಕರೆದು, ‘ನಿಮ್ಮ ಶ್ರದ್ದಾಭಕ್ತಿಗಳ ಸೇವೆಯಿಂದ ನಾನು ಸಂತುಷ್ಟನಾಗಿದ್ದೇನೆ. ಈಗ ನಾನು ದೀರ್ಘ ತಪಸ್ಸಿಗಾಗಿ ಹಿಮಾಲಯಕ್ಕೆ ಹೊರಡುವವನಿದ್ದೇನೆ. ನೀವು ಅಖಂಡವಾಗಿ ಸೇವೆ ಮಾಡಿದ್ದೀರಿ. ಯಾವ ವರವನ್ನಾದರೂ ಕೇಳಿ’’ ಎಂದರು.

ಕದ್ರು ಮತ್ತು ವಿನತೆ ಅಕ್ಕತಂಗಿಯರಾಗಿದ್ದರೂ ಅವರ ಸ್ವಭಾವ ವಿಚಾರಗಳಲ್ಲಿ ಬಹಳ ವ್ಯತ್ಯಾಸ. ಕದ್ರು ಸ್ವಾರ್ಥಿ. ಅವಳಿಗೆ ವಿನತೆಯ ಸೌಂದರ್ಯ ಸದ್ಗುಣಗಳ ಬಗ್ಗೆ ಹೊಟ್ಟೆಕಿಚ್ಚು. ಆದರೆ ವಿನತೆ ತನ್ನ ಅಕ್ಕನ ಬಗ್ಗೆ ಆದರ, ಪ್ರೇಮ ಭಾವನೆಗಳಿಂದ ವರ್ತಿಸುತ್ತಿದ್ದಳು. ಇಡೀ ಆಶ್ರಮದಲ್ಲಿ ತನ್ನ ಈ ಉದಾರ ಗುಣಗಳಿಂದ ಅವಳು ವಂದನೀಯಳಾಗಿದ್ದಳು. ಆದರೆ ಕದ್ರು ಮಾತ್ರ ಯಾವಾಗಲೂ ಸವತಿ ಮತ್ಸರದಿಂದ ಒಳಗಿಂದೊಳಗೇ ಕುದಿಯುತ್ತಿದ್ದಳು. ತನ್ನ ಸ್ವಂತ ತಂಗಿಯಾಗಿದ್ದರೂ ಸವತಿಯಾದ ವಿನತೆಯ ಕರುಣಾ ಸ್ವಭಾವ ಅವಳಿಗೆ ಒಳ್ಳೆಯದಾಗುತ್ತದೆ ಎಂದರೆ ಕದ್ರುವಿಗೆ ಅಸಹನೆ. ಆದರೆ ಪತಿಯ ಸೇವೆಯ ವಿಷಯದಲ್ಲಿ ಇಬ್ಬರಲ್ಲೂ ಪೈಪೋಟಿಯೆಂಬಂತಿತ್ತು. ಮುನಿಶ್ರೇಷ್ಠ ಕಶ್ಯಪರ ಸೇವೆ ಮಾಡುವಾಗ ಮಾತ್ರ ಅವರ ಸ್ವಭಾವದ ವ್ಯತ್ಯಾಸಗಳು ಅಡ್ಡ ಬರುತ್ತಿರಲಿಲ್ಲ. ಇಬ್ಬರೂ ಕಟ್ಟುನಿಟ್ಟಾಗಿ ತಮ್ಮ ಕರ್ತವ್ಯ ನೆರವೇರಿಸುತ್ತಿದರು.

ಇವರ ಸೇವೆಗೆ ಪ್ರತಿಫಲ ಕೊಡಬೇಕು ಎಂದು ಕಶ್ಯಪರು ನಿರ್ಧರಿಸಿದರು. ‘ವರ ಕೇಳಿ’ ಎಂದು ಇಬ್ಬರಿಗೂ ಹೇಳಿದರು.

ವರಗಳನ್ನು ಬೇಡಿದರು

ಪತಿಯ ಈ ಆಜ್ಞೆಯಿಂದ ಇಬ್ಬರಿಗೂ ತುಂಬಾ ಹರ್ಷವಾಯಿತು. ಹಿರಿಯವಳು ಕದ್ರು ಮಹಾ ಬುದ್ದಿವಂತಳು. ಬಹಳ ವಿಚಾರ ಮಾಡಿ ಅವಳೇ ಮೊದಲು ವರ ಕೇಳಿದಳು. ‘‘ಪ್ರಭುಗಳೇ, ನನಗೆ ಸಮಾನ ಸಾಮರ್ಥ್ಯದ ನೂರು ಬಲಶಾಲೀ ಸರ್ಪಗಳನ್ನು ಪಡೆಯುವ ಸೌಭಾಗ್ಯ ದಯಪಾಲಿಸಬೇಕು’’ ಎಂದು ಕೈ ಜೋಡಿಸಿ ಕೇಳಿದಳು. ಯತಿ ಶ್ರೇಷ್ಠರು ‘ತಥಾಸ್ತು’ ಎಂದರು.

ಅವರು ಅನಂತರ ವಿನತೆಯ ಕಡೆ ತಿರುಗಿ, ‘‘ನಿನಗೆ ಯಾವ ವರ ಬೇಕು ಕೇಳು’ ಎಂದರು. ವಿನತೆ ನಮ್ರತೆಯಿಂದ, ‘‘ಪೂಜ್ಯರೇ, ನನ್ನಲ್ಲಿ ಸರ್ವ ಸದ್ಗುಣಗಳನ್ನು ಪ್ರೇರೇಪಿಸಿದವರು ನೀವೇ. ನನಗೆ ಮಹಾಪರಾಕ್ರಮಶಾಲಿಗಳಾದ ಪರಮ ದೈವಭಕ್ತರಾದ ಇಬ್ಬರು ಪುತ್ರರನ್ನು ದಯಪಾಲಿಸಿ; ಅವರ ದೈವಭಕ್ತಿ ಎಂದೆಂದಿಗೂ ಸೋಲದಿರಲಿ’’ ಎಂದು ಕೈಮುಗಿದು ಕೇಳಿಕೊಂಡಳು. ತ್ರಿಕಾಲ ಜ್ಞಾನಿಗಳಾದ ಕಶ್ಯಪ ಮಹರ್ಷಿಗಳ ಮುಖದ ಮೇಲೆ ಸಮಾಧಾನ ಸಂತೋಷ ಮೂಡಿತು. ಅವರು ಆನಂದದಿಂದ ‘ತಥಾಸ್ತು’ ಎಂದರು.

ತಪಸ್ವಿಗಳ ವರವೆಂದ ಮೇಲೆ ಕೇಳಬೇಕೆ! ಕದ್ರುವಿನ ಪರ್ಣಕುಟಿಯಲ್ಲಿ ಹಸಿರು ಬಣ್ಣದ ನೂರು ತತ್ತಿಗಳು ಹಾಗೂ ವಿನತೆಯ ಪರ್ಣಕುಟಿಯಲ್ಲಿ ಬೃಹದಾಕಾರದ ಎರಡು ಶುಭ್ರತತ್ತಿಗಳು ಉದ್ಭವವಾದವು.

ಮಹರ್ಷಿಗಳು ತಪಸ್ಸಿಗೆ ಹೋಗುವ ದಿನ ಉದಯಿಸಿತು. ಕದ್ರು ವಿನತೆಯರ ಕಣ್ಣಲ್ಲಿ ನೀರಾಡಿತು. ತಾವು ಹೊರಡುವ ಮೊದಲು ಋಷಿಗಳು ಇಬ್ಬರು ಹೆಂಡತಿಯರಿಗೂ ಕೆಲವು ಸೂಚನೆಗಳನ್ನು ಕೊಟ್ಟರು. ಕದ್ರುವಿಗೆ ಹೇಳಿದರು: ‘‘ತತ್ತಿಗಳಿಂದ ನಿನ್ನ ಮಕ್ಕಳು ಹೊರಕ್ಕೆ ಬರುವವರೆಗೆ ತಾಳ್ಮೆಯಿಂದಿರು. ಸರಿಯಾದ ಸಮಯಕ್ಕೆ ಅವರು ಬರುತ್ತಾರೆ. ಆ ಸಮಯಕ್ಕೆ ಮುಂಚಿತವಾಗಿ ತತ್ತಿಗಳನ್ನು ಒಡೆಯುವ ಪ್ರಯತ್ನ ಮಾಡಬೇಡ.’’  ವಿನತೆಗೂ ಹಾಗೆಯೆ ಹೇಳಿದರು: ‘‘ತತ್ತಿಗಳಿಂದ ಮಕ್ಕಳು ಹೊರಕ್ಕೆ ಬರುವುದು ತಡವಾಗಬಹುದು. ಆತಂಕ ಬೇಡ. ಅಲ್ಲಿಯವರೆಗೆ ಸಹನೆಯಿಂದಿರು.’’ ಆಶ್ರಮದ ಕೆಲಸಕಾರ್ಯಗಳನ್ನು ಯಥಾಸಾಂಗವಾಗಿ ನಡೆಯಿಸಿಕೊಂಡು ಹೋಗಬೇಕೆಂದು ಇಬ್ಬರಿಗೂ ಕಶ್ಯಪರು ಹೇಳಿ ತಪಸ್ಸಿಗೆ ತೆರಳಿದರು. ಮಹರ್ಷಿಗಳ ನಿರ್ಗಮನದ ನಂತರ ಆಶ್ರಮ ಅದೇಕೋ ತನ್ನ ಸತ್ವವನ್ನೆ ಕಳಕೊಂಡಂತೆ ಕಾಣತೊಡಗಿತು.

ಕದ್ರುವಿನ ಮಕ್ಕಳು

ಕಾಲಚಕ್ರ ಉರುಳತೊಡಗಿತು. ಹಲವಾರು ವರ್ಷಗಳೇ ಕಳೆದವು.

ಕದ್ರುವಿನ ತತ್ತಿಗಳ ಸಮಯಮಿತಿ ಮುಗಿಯಿತು. ಅಂದು ನೂರು ಸರ್ಪಗಳು ಮಕ್ಕಳಾಗಿ ಹುಟ್ಟಿದರು. ಕದ್ರುವಿನ ಆನಂದವೇ ಆನಂದ.

ವಿನತೆಗೆ ಕಶ್ಯಪರು ಸೂಚಿಸಿದ್ದ ಕಾಲಮಿತಿ ಇನ್ನೂ ಮುಗಿದಿರಲಿಲ್ಲ. ಆದರೂ ಆಕೆಗೆ ಅಸೂಯೆ ಇರಲಿಲ್ಲ. ತನ್ನ ಅಕ್ಕ ಸವತಿಯ ನೂರು ಮಕ್ಕಳು, ಹುಟ್ಟಿದ ದಿನದ ಆನಂದದಲ್ಲಿ ಅವಳೂ ನಿರ್ವಿಕಾರ ಭಾವನೆಯಿಂದ ಪಾಲ್ಗೊಂಡಳು.

ಆದರೆ ಕದ್ರುವಿನ ಮನಸ್ಸಿನಲ್ಲಿ ದುರಭಿಮಾನ ತಾಂಡವವಾಡುತ್ತಿತ್ತು. ತನಗೆ ಪುತ್ರರತ್ನ ಪ್ರಾಪ್ತಿಯಾಯಿತು. ವಿನತೆಗೆ ಇನ್ನೂ ಸಮಯ ಬಂದಿಲ್ಲ ಎಂದು ಅವಳಿಗೆ ಹೆಮ್ಮೆ.

ಅರುಣ

ವಿನತೆ ಈ ಪರಮೋಚ್ಚ ಸುಖದ ಕ್ಷಣಕ್ಕಾಗಿ ಕಾಯತೊಡಗಿದಳು. ಕಣ್ಮುಂದೆ ಕದ್ರುವಿನ ಮಕ್ಕಳು ಆಡುತ್ತಿದ್ದರು. ಅದರಲ್ಲೂ ಕದ್ರುವಿನ ವರ್ತನೆ ಅವಳ ವೇದನೆ ಹೆಚ್ಚಿಸುತ್ತಿತ್ತು. ಆದರೆ ಮಹರ್ಷಿಗಳು ಕೊಟ್ಟ ಕಾಲಮಿತಿಗೆ ಇನ್ನೂ ಅವಕಾಶವಿತ್ತು. ಸಮಯ ಸಮೀಪಿಸುತ್ತಿತ್ತು. ವಿನತೆಯ ಉತ್ಕಂಠೆಯೂ ಹೆಚ್ಚುತ್ತಿತ್ತು.

ವಿನತೆಗೆ ತನ್ನ ಆಕಾಂಕ್ಷೆಯನ್ನು ಸಂಪೂರ್ಣವಾಗಿ ತಡೆದು ಹಿಡಿಯಲು ಸಾಧ್ಯವಾಗಲಿಲ್ಲ. ಅವಳಿಂದ ಪ್ರಮಾದವೊಂದು ಘಟಿಸಿತು. ಅವಳು ಕಾಲಾವಧಿ ಮುಗಿಯುವ ಸ್ವಲ್ಪಕಾಲ ಮುನ್ನ ಒಂದು ತತ್ತಿ ತೆಗೆದುನೋಡಿದಳು. ತತ್ತಿ ಒಡೆಯಿತು. ಅದರಿಂದ ಒಬ್ಬ ಅದ್ಬುತ ತೇಜಸ್ವೀ ಬಾಲಕ ಹೊರ ಬಂದ. ಆದರೆ ಅವನಲ್ಲಿ ಪೂರ್ಣಪ್ರತಿಭೆ ಅರಳಿರಲಿಲ್ಲ. ತಾಯಿಯ ಆತುರದ ಫಲ ಅದು. ಆ ತೇಜಸ್ವೀ ಬಾಲಕನನ್ನು ಕಂಡು ವಿನತೆಗೆ ಸಂತೋಷವನ್ನು ತಡೆಯಲಾಗಲಿಲ್ಲ.

ಆದರೆ ಆ ಹುಡುಗ ತನ್ನ ದಿವ್ಯವಾಣಿಯಿಂದ, ‘‘ಅಮ್ಮಾ, ಮಹರ್ಷಿ ಕಶ್ಯಪರು ಹಾಕಿಕೊಟ್ಟ ಕಾಲಮಿತಿಯ ಮೊದಲೇ ನೀನು ನನ್ನ ಜನ್ಮಕ್ಕಾಗಿ ಪ್ರಯತ್ನಿಸಿದೆ. ಅದರ ಪ್ರಭಾವದಿಂದ ನನ್ನಲ್ಲಿ ನ್ಯೂನತೆ ಪ್ರಾಪ್ತವಾಯಿತು. ನಿನ್ನ ಈ ಪ್ರಮಾದಕ್ಕೆ ನಿನಗೆ ಪ್ರಾಯಶ್ಚಿತ್ತ ಮಾಡುವ ಕಾಲ ಬರಲಿದೆಯೆಂದು ನನಗೆ ದುಃಖವಾಗುತ್ತಿದೆ. ಈಗ ನಾನು ನಿನ್ನೊಡನಿರಲಾರೆ. ಮುಂದೆ ಜನ್ಮ ತಾಳುವ ನನ್ನ ಪರಾಕ್ರಿಮೀ ತಮ್ಮ ನಿನ್ನನ್ನು ಪ್ರಾಯಶ್ಚಿತ್ತದಿಂದ ಮುಕ್ತಮಾಡುತ್ತಾನೆ. ಆದರೆ ನನ್ನ ವಿಷಯದಲ್ಲಿ ಪ್ರಮಾದ ಮಾಡಿದಂತೆ ಪುನಃ ಮಾಡಬೇಡ’’ ಎಂದು ಹೇಳಿ ಅಂತರ್ಧಾನನಾದ.

ಈ ಹುಡುಗನೇ ಸೂರ್ಯಭಗವಾನನ ರಥದ ಸಾರಥಿ ಅರುಣ. ವಿಶ್ವಕ್ಕೆ ಪ್ರಕಾಶ ನೀಡುವ ಸೂರ್ಯನ ಸಾರಥ್ಯ ಮಾಡುವ ಮಹಾಭಾಗ್ಯಶಾಲಿ ವಿನತೆಯ ಪ್ರಥಮ ಪುತ್ರ ಅರುಣ. ಅವನೇ ಪ್ರಕಾಶದ ಅಗ್ರದೂತ.

ಒಂದು ಸಂಜೆ

ಕದ್ರುವಿಗೆ ವಿನತೆಯನ್ನು ಕಂಡರೆ ದ್ವೇಷ. ಅದನ್ನು ಹೊರಗೆ ತೋರಿಸುತ್ತಿರಲಿಲ್ಲ. ಆದರೆ ಹೇಗಾದರೂ ಅವಳನ್ನು ತನ್ನ ಸೇವಕಿಯನ್ನಾಗಿ ಮಾಡಿಕೊಳ್ಳಬೇಕು ಎಂದು ಅವಳ ಹಂಬಲ.

ಪ್ರತಿನಿತ್ಯ ಆಶ್ರಮದ ದಿನಚರಿಗಳನ್ನು ಮುಗಿಸಿಕೊಂಡು ಕದ್ರು ಹಾಗೂ ವಿನತೆ ಸಾಯಂಕಾಲ ನದೀತಟದಲ್ಲಿ ವಿಹಾರಕ್ಕೆ ಹೋಗುತ್ತಿದ್ದರು. ಈ ವಿಹಾರ ಅವರ ದಿನನಿತ್ಯದ ವಾಡಿಕೆ. ಒಂದು ಸಂಜೆ ನದೀತಟದಲ್ಲಿ ಇಬ್ಬರು ಕುಳಿತು ಮಾತನಾಡುತ್ತಿದ್ದರು. ಸಾಯಂಕಾಲದ ಸೂರ್ಯನ ಸುವರ್ಣಬಣ್ಣದ ಕಿರಣಗಳು ಕೋಲು ಕೋಲಾಗಿ ನಿಸರ್ಗವನ್ನು ಮುತ್ತಿಡುತ್ತಿದ್ದವು. ಇಡೀ ಆಕಾಶವೆಲ್ಲ ಸಪ್ತವರ್ಣಗಳ ಶೃಂಗಾರ ಕೊಡೆಯನ್ನು ನಿಸರ್ಗದೇವತೆಗೆ ಹಿಡಿದಂತೆ ಕಾಣುತ್ತಿತ್ತು. ಹಸಿರು ಹೂದೋಟಗಳ ಮೇಲೆ ಈ ಬಣ್ಣದ ಪ್ರಕಾಶ ಸಂಧ್ಯಾ ಕಾಲದ ಮನೋಹರ ಸೊಬಗನ್ನು ಹೆಚ್ಚಿಸುತ್ತಿದ್ದವು. ಆಕಾಶದಲ್ಲಿ ಕಿತ್ತಳೆ ಬಣ್ಣದ ಮೋಡಗಳ ಸುಂದರ ಮಂಟಪವೇ ನಿರ್ಮಾಣವಾದಂತಿತ್ತು. ಈ ಅಪೂರ್ವ ಸೊಬಗನ್ನು ನೋಡುತ್ತ ಕದ್ರು ಹಾಗೂ ವಿನತೆಯರು ಸಂತೋಷವಾಗಿ ಮಾತನಾಡುತ್ತ ಕುಳಿತಿದ್ದರು.

ಆ ಮಾತು ಈ ಮಾತು ಆಡುತ್ತ ಉಚ್ಚೆ ಶ್ರವಸ್ಸು ಎಂಬ ಕುದುರೆಯ ವಿಷಯ ಬಂದಿತು. ಅದು ದೇವಲೋಕದ ಕುದುರೆ. ದೇವತೆಗಳೂ ರಾಕ್ಷಸರೂ ಸೇರಿ ಸಮುದ್ರವನ್ನು ಕಡೆದಾಗ ಮೇಲೆದ್ದ ದಿವ್ಯಾಶ್ವ ಅದು. ವಿನತೆ, ಕದ್ರು ಆ ಕುದುರೆಯ ವಿಷಯ ಮಾತನಾಡತೊಡಗಿದರು.

ಪಣ

ಕದ್ರು ಕೇಳಿದಳು: ‘ಕುದುರೆ ಯಾವ ಬಣ್ಣದ್ದಾಗಿರ ಬಹುದು? ಹೇಳು. ಯೋಚನೆ ಮಾಡಬಾರದು, ಥಟ್ಟನೆ ಹೇಳಬೇಕು, ಹೇಳು.’ ವಿನತೆ ಎಂದಳು: ‘ಕುದುರೆ ಬೆಳ್ಳಗಿದೆ.’

ಕದ್ರು ಹೇಳಿದಳು: ‘ಆದರೆ ಅದರ ಬಾಲ ಕಪ್ಪಗಿರುತ್ತದೆ.’

ವಿನತೆ ಉತ್ತರಿಸಿದಳು: ‘ಛೆ, ಸಾಧ್ಯವೇ ಇಲ್ಲ. ಇಡೀ ಕುದುರೆ ಹಾಲುಬಿಳುಪು.’

ಕದ್ರು ಎಂದಳು: ‘ಉಹುಂ, ಬಾಲ ಕಪ್ಪು.’

ಮಾತು ಬೆಳೆಯಿತು. ‘ಪಂದ್ಯ ಕಟ್ಟೋಣ’ ಎನ್ನುವ ಘಟ್ಟಕ್ಕೆ ಹೋಯಿತು. ಗೆದ್ದವರಿಗೆ ಬಹುಮಾನ ಏನು?

‘ಸೋತವರು ಗೆದ್ದವರಿಗೆ ದಾಸರಾಗಬೇಕು. ನೀನು ಸೋತರೆ ನೀನೂ ಮುಂದೆ ಹುಟ್ಟುವ ನಿನ್ನ ಮಗನೂ ನನಗೆ ದಾಸರು. ನಾನು ಸೋತರೆ ನಾನೂ ನನ್ನ ಮಕ್ಕಳೂ ನಿನಗೆ ದಾಸರು. ಒಪ್ಪಿಗೆಯೇ?’ ಕದ್ರು ಕೇಳಿದಳು.

‘ಓಹೋ, ಒಪ್ಪಿಗೆ’ ಎಂದಳು ವಿನತೆ. ಅಷ್ಟು ಖಂಡಿತ ಅವಳಿಗೆ ಇಡೀ ಕುದುರೆ ಬೆಳ್ಳಗಿರುತ್ತದೆ ಎಂದು.

ಮರುದಿನ ಕುದುರೆಯನ್ನು ನೋಡಿ ಯಾರು ಗೆದ್ದವರು ಎಂದು ತೀರ್ಮಾನಿಸಬೇಕು ಎಂದು ಹಿಂದಕ್ಕೆ ಹೊರಟರು.

ಕದ್ರುವಿನ ಯೋಚನೆ

ವಿನತೆಯ ಮನಸ್ಸಿನಲ್ಲಿ ಯಾವ ಅನುಮಾನವೂ ಇರಲಿಲ್ಲ. ಆಕೆ ನಿಶ್ಚಿಂತಳಾಗಿದ್ದಳು. ಆದರೆ ಕದ್ರು ವಿನತೆಗೆ ಮೋಸ ಮಾಡಬೇಕಾಗಿತ್ತು. ಅದಕ್ಕಾಗಿ ಅವಳು ಮೊದಲೇ ಒಂದು ಯೋಚನೆ ಮಾಡಿದ್ದಳು. ಹೇಗಾದರೂ ಮಾಡಿ ವಿನತೆಯನ್ನು ಅವಳು ಪಣದಲ್ಲಿ ಸೋಲಿಸಬೇಕಾಗಿತ್ತು. ಆಕೆ ತುಂಬಾ ಯೋಚಿಸಿ ತನ್ನ ಎಲ್ಲಾ ಸರ್ಪಪುತ್ರರನ್ನು ಕರೆದಳು. ಅವರಿಗೆ ತಮ್ಮ ಪಣದ ವಿಷಯ ಸವಿಸ್ತಾರವಾಗಿ ತಿಳಿಸಿ ತನ್ನ ಯೋಜನೆಯನ್ನು ತಿಳಿಸಿದಳು.

ಎಲ್ಲಾ ಹಾವುಗಳೂ ಕಪ್ಪು ಕೂದಲಿನ ಗಾತ್ರದವರಾಗಿ ಉಚ್ಚೆ ಶ್ರವಸ್ಸಿನ ಶುಭ್ರಬಾಲವನ್ನು ಮುಚ್ಚಬೇಕು. ಆಗ ಈ ಮಾಯಾರೂಪಿ ಸರ್ಪಗಳ ಕಾರಸ್ಥಾನದಿಂದ ಕುದುರೆಯ ಬಾಲ ಸಹಜವಾಗಿಯೇ ಕಪ್ಪು ಬಣ್ಣದ್ದಾಗಿ ಕಾಣುತ್ತದೆ. ಕದ್ರು ಗೆಲ್ಲುತ್ತಾಳೆ. ಇದು ಅವಳ ಯೋಚನೆ.

ತಾಯಿಯ

ಮಾತೇ ಮುಖ್ಯ

ಕದ್ರುವಿನ ಮಕ್ಕಳಿಗೂ ಇದು ಸರಿ ಎಂದು ತೋರಲಿಲ್ಲ. ಅವರು ‘‘ಇಲ್ಲ, ಅಮ್ಮ, ಇದು ನ್ಯಾಯವಲ್ಲ, ಬೇಡ’’ ಎಂದರು.

ಕದ್ರುವಿಗೆ ತಡೆಯಲಾರದಷ್ಟು ಕೋಪ ಬಂದಿತು. ಮನಸ್ಸು ಬೆಂಕಿಯಂತಾಯಿತು. ಈ ಮಕ್ಕಳು ತನ್ನ ಮಾತನ್ನು ಕೇಳಿದಿದ್ದಮೇಲೆ ಪಂಥದಲ್ಲಿ ತಾನು ಸೋಲಲೇಬೇಕು. ಎಂತಹ ಅಪಮಾನ! ಅಲ್ಲದೆ ವಿನತೆ ಹೇಳಿದಂತೆ ಕೇಳಬೇಕಲ್ಲ!

‘‘ನನ್ನ ಮಕ್ಕಳಾಗಿ ನನಗೆ ಬುದ್ಧಿ ಹೇಳಲು ಬರುತ್ತೀರಾ?’’ ಎಂದು ಬೈದಳು. ‘‘ಮುಂದೆ ಜನಮೇಜಯನು ಮಾಡುವ ಸರ್ಪಯಾಗದಲ್ಲಿ ನೀವೆಲ್ಲ ಸುಟ್ಟು ಹೋಗಿ’’ ಎಂದು ಶಾಪ ಕೊಟ್ಟಳು.

ಅವಳ ನೂರು ಮಕ್ಕಳಲ್ಲಿ ಕೆಲವರು ಈ ಶಾಪವನ್ನು ಕೇಳಿ ನಡುಗಿಹೋದರು. ಏನು ಮಾಡಬೇಕೆಂದು ಯೋಚಿಸಿದರು.

‘ನಮ್ಮ ತಾಯಿ ಹೇಳಿದ್ದು ಸರಿಯೇ ತಪ್ಪೇ ಎಂದು ಯೋಚಿಸುವುದಕ್ಕಿಂತಲೂ ನಮ್ಮತಾಯಿಯ ಮುಂದಿನ ಗತಿ ಏನು ಎಂದು ಯೋಚಿಸಬೇಕು’  ಎಂದು ಕೆಲವು ಹಾವುಗಳು ಹೇಳಿದವು.

‘ಪಂದ್ಯದಲ್ಲಿ ಸೋತರೆ ನಮ್ಮ ತಾಯಿಯೂ ನಾವೂ ವಿನತೆಯ ದಾಸರಾಗಬೇಕಲ್ಲ!’ ಇನ್ನು ಕೆಲವು ಹೇಳಿದವು.

ಕಡೆಗೆ ಅವು ತೀರ್ಮಾನ ಮಾಡಿದವು-ತಾಯಿಯ ಮಾತನ್ನು ನಡೆಸುವುದು, ತಾಯಿಗೆ ಜೀತವನ್ನು ತಪ್ಪಿಸುವುದು ಮುಖ್ಯ, ಅದೇ ನಮ್ಮ ಕರ್ತವ್ಯ; ಆದುದರಿಂದ ಮರುದಿನ ಕುದುರೆಯ ಬಾಲಕ್ಕೆ ಸುತ್ತಿಕೊಂಡು ಅದು ಕಪ್ಪಾಗಿ ಕಾಣುವಂತೆ ಮಾಡಬೇಕು.

ವಿನತೆ ದಾಸಿಯಾದಳು

ಮಾರನೆಯ ದಿನ ಸಂಜೆ ಕದ್ರು ಹಾಗೂ ವಿನತೆಯರು ನದೀತಟದಲ್ಲಿ ಬಂದು ಕುಳಿತರು. ನಿಶ್ಚಿತ ಸಮಯಕ್ಕೆ ಬೆಳ್ಳಿಮೋಡಗಳ ಮಧ್ಯೆ ಉಚ್ಚೆ ಶ್ರವಸ್ಸು ಕಾಣಿಸಿಕೊಂಡಿತು. ಕುದುರೆ ಬಹು ಸುಂದರ, ಹಾಲು ಬಿಳುಪು.

ಆದರೆ ಏನಾಶ್ಚರ್ಯ? ಅಶ್ವದ ಬಾಲವೆಲ್ಲ ಕಪ್ಪು! ಸರ್ಪಗಳೆಲ್ಲವೂ ತಮ್ಮ ಕೆಲಸವನ್ನು ಸರಿಯಾಗಿ ಮಾಡಿದ್ದವು. ಕದ್ರುವಿಗೆ ತುಂಬಾ ಸಂತೋಷವಾಯಿತು.

ಏನೂ ಅರಿಯದ ವಿನತೆ ಕುದುರೆಯ ಕರಿಯ ಬಾಲ ನೋಡಿ ಬೆರಗಾದಳು, ಮನಸ್ಸಿಗೆ ಅಘಾತವಾಯಿತು. ಅವಳ ಬಾಯಿಂದ ಮಾತೇ ಹೊರಡಲಿಲ್ಲ.

ಆದರೆ ಪಣದಲ್ಲಿ ತಾನು ಸೋತ ಬಗ್ಗೆ ಯಾವ ಅನುಮಾನವೂ ಉಳಿಯಲಿಲ್ಲ.

ಕದ್ರು ಆನಂದದಿಂದ ತಾನು ಗೆದ್ದುದಾಗಿ ಸಾರಿದಳು. ಪಾಪ, ವಿನತೆ ತನ್ನ ಸೋಲನ್ನೊಪ್ಪಿಕೊಳ್ಳಬೇಕಾಯಿತು.

ಯಾವ ಮೋಸವನ್ನೂ ತಿಳಿಯದ ವಿನತೆ ಕದ್ರುವಿನ ದಾಸಿಯಾದಳು. ಈಗ ಕದ್ರು ಹಾಗೂ ಸರ್ಪಪುತ್ರರ ಮೋಸ  ಜಯಗಳಿಸಿತು. ವಿನತೆಯ ಬಾಳು ಜೀತದ ಬಾಳಾಯಿತು.

ವೈನತೇಯ

ಅರುಣ ತಾಯಿಯ ತಪ್ಪನ್ನು ತಿಳಿಸಿಕೊಟ್ಟು ಅಂತರ್ಧಾನನಾದನಂತರ ವಿನತೆಯ ಮಾತೃಹೃದಯ ತಲ್ಲಣಿಸಿತು. ‘‘ನಾನೆಂಥ ಅಚಾತುರ್ಯ ಮಾಡಿಬಿಟ್ಟೆ?’’ ಎಂದು ದುಃಖಿಸಿದಳು. ಆದರೆ ಮತ್ತೊಬ್ಬ ಮಗ ಹುಟ್ಟುತ್ತಾನೆ ಎಂದು ಸಮಾಧಾನ ತಂದುಕೊಂಡಳು. ಆದರೆ ತಾನು ದಾಸಿಯಾಗಿದ್ದುದರಿಂದ ಮೊಟ್ಟೆಯನ್ನು ನೋಡಿಕೊಳ್ಳಲು ಸಾಧ್ಯವಾಗಲಿಲ್ಲ.

ಮಹರ್ಷಿ ಕಶ್ಯಪರು ಹಾಕಿದ ಕಾಲಮಿತಿ ಮುಗಿಯಿತು. ಪುತ್ರಪ್ರಾಪ್ತಿಗಾಗಿ ತವಕಿಸುತ್ತಿದ್ದ ಮಹಾಮಾತೆಗೆ ಮಹಾಪರಾಕ್ರಮಿಯಾದ ಗರುಡ ಹುಟ್ಟಿದ. ವಿನತೆಯ ಸಂತೋಷಕ್ಕೆ ಪಾರವೇ ಇಲ್ಲ. ಇಷ್ಟು ಕಾಲ ತಾಳ್ಮೆಯಿಂದ ನಿರೀಕ್ಷಣೆ ಮಾಡಿದ್ದರ ಫಲವಾಗಿ ಮಹಾಪ್ರತಾಪಿ ಹಾಗೂ ತೇಜಸ್ವಿ ಗರುಡ ಜನ್ಮತಾಳಿದ, ವಿನತೆಯ ಪುತ್ರನೆಂದು ‘ವೈನತೇಯ’ ಎಂದು ಪ್ರಸಿದ್ಧನಾದ.

ಕದ್ರುವಿಗೆ ಅರುಣನ ನಿರ್ಗಮನದಿಂದ ಸಂತೋಷವೇ ಆಗಿತ್ತು. ಅವಳ ಮಕ್ಕಳಲ್ಲಿ ತಾಯಿಗಿದ್ದ ತಾಮಸೀವೃತ್ತಿ, ಅಸೂಯೆ ಇವೇ ಮುಖ್ಯಗುಣಗಳಾದವು. ಎಷ್ಟೆಂದರೂ ಸರ್ಪಗುಣ. ಅವರಿಗೆ ಯಾವಾಗಲೂ ಗರುಡ ಎಂದರೆ ದ್ವೇಷ. ಆದರೆ-ಗರುಡ ಮಹಾ ಶಕ್ತಿಶಾಲಿ. ಹೀಗಾಗಿ ಗರುಡನ ಶಕ್ತಿಯ ಕಲ್ಪನೆಯಿದ್ದುದರಿಂದ ಸರ್ಪಗಳೆಲ್ಲ ಸುಮ್ಮನಿದ್ದರು. ಅವರ ಪಾಲಿಗೆ ಅಸೂಯೆಪಡುವುದೊಂದೇ ಸಾಧ್ಯವಾಗಿತ್ತು.

ಗರುಡ ತಾಯಿಯಂತೆ ಮಹಾ ದೈವಭಕ್ತ. ವಿಶ್ವೇಶ್ವರ ಮಹಾವಿಷ್ಣು ಗರುಡನ ಆರಾಧ್ಯದೇವತೆ. ತಾಯಿಯ ಒಳ್ಳೆಯ ಗುಣಗಳು ಗರುಡನಿಗೆ ಬಂದಿದ್ದವು. ಜನ ಗರುಡನನ್ನು ಪ್ರೀತಿ ಭಕ್ತಿಯಿಂದ ಕಾಣುತ್ತಿದ್ದರು. ಆದರೆ ಜನಕ್ಕೆ ತೊಂದರೆ ಕೊಡುವುದೇ ಹಾವುಗಳ ಕೆಲಸ. ಹೀಗಾಗಿ ಹಾವುಗಳೆಂದರೆ ಜನಕ್ಕೆ ಹೆದರಿಕೆ, ದ್ವೇಷ. ಕದ್ರು ಮನಸ್ಸಿನಲ್ಲೇ ದುಃಖಪಡುತ್ತಿದ್ದಳು.

ಗರುಡ ಸ್ವಲ್ಪ ದೊಡ್ಡವನಾದ. ತಾಯಿ ವಿನತೆ ಅವನಿಗೆ ಯೋಗ್ಯ ವಿದ್ಯಾಭ್ಯಾಸ ಮಾಡಿಸುತ್ತಿದ್ದಳು. ಗರುಡನ ಬುದ್ಧಿ ಬಹು ತೀಕ್ಷ . ವಯಸ್ಸು ಆದಂತೆಲ್ಲ ಅವನಲ್ಲಿ ಅದ್ಭುತ ಶಕ್ತಿಯೂ ಸಂಚಯವಾಗತೊಡಗಿತು.  ಚಿಕ್ಕ ವಯಸ್ಸಿನಲ್ಲಿ ಕೂಡ ಗರುಡನ ಶಕ್ತಿ ಪ್ರಚಂಡವಾಗಿತ್ತು. ಇಂಥ ಶಕ್ತಿವಂತ, ಬುದ್ಧಿವಂತ ವೈನತೇಯನ ಮುಂದೆ ಸಹಸ್ರ ಹಾವುಗಳು ಯಾವ ಲೆಕ್ಕಕ್ಕೂ ಇಲ್ಲದಾಯಿತು.

ಇವೆಲ್ಲವನ್ನು ಕಂಡು ಕದ್ರುವಿಗೆ ಕೋಪ, ಸಂಕಟ.

ದಾಸೀಪುತ್ರ

ಹೀಗೆಯೇ ಹಲವಾರು ವರ್ಷಗಳು ಕಳೆದವು. ಕದ್ರುವಿನ ದಾಸಿಯಾಗಿ ವಿನತೆ ಅಪಾರ ಕಷ್ಟ, ಅಪಮಾನಗಳನ್ನು ಸಹಿಸಬೇಕಾಗಿತ್ತು. ಹಗಲಿರುಳೂ ದುಡಿದು ಅವಳ ದೇಹ, ಮನಸ್ಸು ಎರಡರ ಆರೋಗ್ಯವೂ ಕೆಟ್ಟಿತು. ತನ್ನ ತಾಯಿ ಸಹಿಸುತ್ತಿದ್ದ ಅವರ್ಣನೀಯ ಯಾತನೆಗಳನ್ನು ಪರಾಕ್ರಮಶಾಲಿ ಗರುಡ ನೋಡುತ್ತಿದ್ದ. ರೋಷದಿಂದ ತಪ್ತನಾಗುತ್ತಿದ್ದ. ಅವನ ಅವಸ್ಥೆಯೂ ದುಃಖವನ್ನೆ ಉಂಟುಮಾಡುವಂತಹದು. ಹಾವುಗಳು ಕೇಳಿದಾಗ ಅವನ್ನು ಹೆಗಲ ಮೇಲೆ, ಬೆನ್ನ ಮೇಲೆ ಹೊತ್ತು ತಿರುಗಾಡಿಸಬೇಕು.

ಕ್ಷಣಾರ್ಧದಲ್ಲಿ ಎಲ್ಲರನ್ನೂ ನಿಶ್ಶೇಷ ಮಾಡಿ ತಾಯಿಯನ್ನು ದಾಸ್ಯದಿಂದ ಮುಕ್ತಮಾಡುವ ಸಾಮರ್ಥ್ಯ ಅವನಲ್ಲಿತ್ತು. ಆದರೆ ಗರುಡ ಏನೂ ಮಾಡುವಂತಿರಲಿಲ್ಲ. ಆತ ತಾಯಿಯ ಆಜ್ಞಾಧಾರಕ. ತಾಯಿ ಪಣದ ವಚನಕ್ಕೆ ಕಟ್ಟುಬಿದ್ದಿದ್ದಾಳೆ. ವಚನ ಪಾಲನೆಯೇ ಧರ್ಮ. ಗರುಡನಿಗೆ ಇದ್ದುದು ಒಂದೇ ಮಾರ್ಗ. ಜಗನ್ನಿಯಾಮಕ ಭಗವಾನ್ ಶ್ರೀಮನ್ನಾರಾಯಣ ನಲ್ಲಿ ಭಕ್ತಿ. ಅವನ ಭಕ್ತಿಯಲ್ಲಿಯೇ ಅವನ ನಿಜವಾದ ಶಕ್ತಿ ಅಡಗಿತ್ತು. ಆದರೆ ತನ್ನ ತಾಯಿ ಪ್ರತಿನಿತ್ಯ ಅನುಭವಿಸುತ್ತಿದ್ದ ಅಪಾರ ಯಾತನೆಯನ್ನು ಅವನಿಂದ ನೋಡಲಿಕ್ಕಾಗುತ್ತಿರಲಿಲ್ಲ.

ಒಮ್ಮೆ ಕದ್ರು ಗರುಡನಿಗೆ, ‘ನನ್ನ ಮಕ್ಕಳನ್ನು ನಿನ್ನ ಬೆನ್ನ ಮೇಲೆ ಕೂಡಿಸಿಕೊಂಡು ಓಡಾಡಿಸು’ ಎಂದಳು. ಸಾಹಸಿಯಾದ ಗರುಡ ಸರ್ಪಗಳನ್ನು ಬೆನ್ನ ಮೇಲೆ ಕೂಡಿಸಿಕೊಂಡ, ಆಕಾಶದಲ್ಲೆಲ್ಲ ಹಾರಾಡಿದ, ಸೂರ್ಯನ ಬಳಿಯವರೆಗೆ ಹೋದ. ಸೂರ್ಯನ ಕಾವನ್ನು ತಾಳಲಾರದೆ ಕದ್ರುವಿನ ಮಕ್ಕಳಲ್ಲಿ ಕೆಲವರು ಸತ್ತುಹೋದರು. ಕದ್ರುವಿಗೆ ಬಹಳ ಕೋಪ ಬಂದಿತು.

ಅಮ್ಮಾ, ನಿನಗೆ

ಈ ಪಾಡೇ?

ಒಮ್ಮೆ ಗರುಡನಿಗೆ ಕೋಪ, ದುಃಖಗಳನ್ನು ತಡೆಯಲಾಗಲಿಲ್ಲ. ಅವನಿಗೆ ಒಂದು ವಿಚಾರ ಹೊಳೆಯಿತು. ನೇರವಾಗಿ ತಾಯಿಯ ಮುಂದೆ ಬಂದು ನಮಸ್ಕರಿಸಿ ಹೇಳಿದ: ‘‘ಅಮ್ಮಾ, ನನ್ನ ತಾಯಿಗೆ ಸ್ವಾತಂತ್ರ ವಿದ್ದರೆ ನಾನು ಸ್ವತಂತ್ರ. ನನ್ನ ತಾಯಿ ಪಾರತಂತ್ರ ದಲ್ಲಿದ್ದರೆ ನಾನೂ ಗುಲಾಮ. ಮಹರ್ಷಿಗಳಾದ ಕಶ್ಯಪರು ನಿನ್ನ ಪತಿ. ಜಗತ್ತಿಗೆ ಪ್ರಕಾಶ ಕೊಡುವ ಸೂರ್ಯನ ಸಾರಥಿ ಅರುಣ ಮತ್ತು ಮೂರು ಲೋಕಗಳಲ್ಲಿ ಪರಾಕ್ರಮಿ ಎಂದು ಖ್ಯಾತನಾದ ಗರುಡ ನಿನ್ನ ಮಕ್ಕಳು. ಹೀಗಿರುವಾಗ ನಿನಗೆ ಈ ಪಾಡೇ?  ನೀನು ದಾಸಿಯಾಗಿರುವುದು ನನ್ನಿಂದ ಸಹಿಸಲಸಾಧ್ಯ. ನಾನು ನಿನ್ನನ್ನು ದಾಸ್ಯದಿಂದ ಬಿಡಿಸುತ್ತೇನೆ. ಇದೇ ನನ್ನ ಪ್ರತಿಜ್ಞೆ. ನಿನ್ನನ್ನು ದಾಸ್ಯದಿಂದ ಬಿಡಿಸಲಾಗದಿದ್ದರೆ ನಾನೇ ನಿರ್ನಾಮವಾಗುತ್ತೇವೆ. ನನ್ನ ಪ್ರತಿಜ್ಞಾ ಪೂರ್ತಿಗೆ ನಿನ್ನ ಅನುಮತಿಬೇಕು.’’

ಮಹಾಮಾತೆ ವಿನತೆ ಹೇಳಿದಳು: ‘‘ಮಗೂ, ನಿನ್ನ ಸಾಮರ್ಥ್ಯದ ಕಲ್ಪನೆ ನನಗಿದೆ. ಆದರೆ ನಾನು ಪ್ರತಿಜ್ಞಾಬದ್ಧಳಾಗಿದ್ದೇನೆ. ನನ್ನ ಪ್ರತಿಜ್ಞೆಯಲ್ಲಿ ನೀನು ಸಹಭಾಗಿ. ಇದರಿಂದ ನಾವಾಗಿ ಶಕ್ತಿ ಉಪಯೋಗಿಸಿ ಸ್ವಾತಂತ್ರ  ಪಡೆದರೆ ನಾವು ಕೊಟ್ಟ ಮಾತನ್ನು ಮುರಿದಂತಾಗುತ್ತದೆ. ಇದು ನಿನಗೆ ಇಷ್ಟವೇ? ಕದ್ರು ಕೂಡ ನಿನ್ನ ತಾಯಿಯೇ. ಅವಳು ಕೂಡ ನಮ್ಮನ್ನು ಈ ದಾಸ್ಯದಿಂದ ಮುಕ್ತ ಮಾಡಬಲ್ಲಳು. ಆದ್ದರಿಂದ ನೀನು ತಾಯಿ ಕದ್ರುವಿನ ಮನ ಒಲಿಸು. ಆದರೆ ಒಂದು ಮಾತು ಲಕ್ಷ ದಲ್ಲಿರಲಿ! ಕಲಹವಿಲ್ಲದೆ ಇದು ಆಗುವಂತಿದ್ದರೆ ನನ್ನ ಆಶೀರ್ವಾದವಿದೆ.’’

ಅಮೃತವನ್ನು

ತಂದುಕೊಡು

ಗರುಡ ವಿಚಾರ ಮಾಡತೊಡಗಿದ. ಕಲಹವಿಲ್ಲದೇ ಮಾತೆಯನ್ನು ಬಂಧನಮುಕ್ತ ಮಾಡಬೇಕೆಂದರೆ ಮಲತಾಯಿಯನ್ನು ಒಲಿಸಿಕೊಳ್ಳದೆ ಗತ್ಯಂತರವಿಲ್ಲ. ಆದರೆ ಅದು ಹೇಗೆ ಸಾಧ್ಯ? ಕದ್ರು ಮತ್ತು ಅವಳ ಮಕ್ಕಳು ತಮಗೆ ಬದ್ಧ ವೈರಿಗಳು. ಅವರ ನಿಷ್ಠುರ ದ್ವೇಷವೇ ತಮ್ಮ ದಾಸ್ಯದ ಮೂಲ. ವೈರಿಯ ಮನ ಒಲಿಸುವುದು ಹೇಗೆ?

ಗರುಡನಿಗೆ ಇದೊಂದು ಸಮಸ್ಯೆಯಾಯಿತು. ಕೊನೆಗೊಮ್ಮೆ ಮಲತಾಯಿ ಕದ್ರುವನ್ನೇ ಪ್ರಾರ್ಥಿಸಿ ನೋಡೋಣವೆಂದು ಮನಸ್ಸಿನಲ್ಲಿ ನಿಶ್ಚಯಿಸಿದ. ಕದ್ರುವಿನ ಮುಂದೆ ಹೋಗಿ ನಿಂತು ಕೈ ಜೋಡಿಸಿ ಪ್ರಾರ್ಥಿಸಿದ, ‘‘ಅಮ್ಮಾ, ನಾನು ನನ್ನ ಸರ್ವಸ್ವವನ್ನೂ ನಿನಗೆ ಅರ್ಪಿಸುತ್ತೇನೆ. ನನ್ನ ತಾಯಿಯನ್ನು ಸ್ವತಂತ್ರಳನ್ನಾಗಿ ಮಾಡು. ನಿನ್ನ ಯಾವ ಕೆಲಸವನ್ನಾದರೂ ಮಾಡಲು ನಾನು ಸಿದ್ಧ.’’

ಕದ್ರು ಮಹಾ ಧೂರ್ತ ಹೆಂಗಸು. ಗರುಡನ ಅಪಾರ ಸಾಮರ್ಥ್ಯದ ಕಲ್ಪನೆ ಅವಳಿಗಿತ್ತು. ತನ್ನ ಮಕ್ಕಳಾದ ಹಾವುಗಳಿಗೆ ಗರುಡ ಕಂಟಕಪ್ರಾಯನಾಗಿದ್ದ. ತನ್ನ ಮಕ್ಕಳು ಚಿರಂಜೀವಿಗಳಾಗಬೇಕಾದರೆ ಅದಕ್ಕೆ ಒಂದೇ ಮಾರ್ಗವಿತ್ತು. ಅದೆಂದರೆ ಅಮೃತವನ್ನು ದೊರಕಿಸುವುದು.

ಆದರೆ ಅಮೃತ ದೇವಲೋಕಕ್ಕೆ ಸೇರಿದ್ದು. ಅಲ್ಲಿಂದ ಅಮೃತಕುಂಭವನ್ನು ತಂದರೆ- ಎಂದು ಎಷ್ಟೋ ಬಾರಿ ಕನಸು ಕಂಡಿದ್ದಳು ಕದ್ರು. ಅದನ್ನು ತರಬಲ್ಲ ಸಾಹಸೀ ಶಕ್ತಿವಂತನೆಂದರೆ ಗರುಡ ಮಾತ್ರ. ಇಂಥ ಅಸಾಧ್ಯವಾದುದನ್ನೇ ಕೇಳಬೇಕು. ಒಂದು ವೇಳೆ ಗರುಡ ಯಶಸ್ವಿಯಾದರೆ ತನ್ನ ಪುತ್ರರು ಚಿರಂಜೀವಿಗಳಾಗುತ್ತಾರೆ. ಅಯಶಸ್ವಿಯಾದರೆ ಅವನಿಗೆ ಅಪಮಾನ. ಇದೆಲ್ಲವನ್ನೂ ವಿಚಾರಮಾಡಿ ಕದ್ರು ಗರುಡನಿಗೆ ಹೇಳಿದಳು: ‘‘ವತ್ಸಾ, ನೀನು ಮಹಾ ಪರಾಕ್ರಮಶಾಲಿಯೆಂಬುದು ನನಗೆ ಗೊತ್ತು. ನಿನ್ನ ಮಾತೆ ಪಣದಿಂದ ಮುಕ್ತಳಾಗಬೇಕಾದರೆ ನೀನು ಒಂದು ಕೆಲಸ ಮಾಡಬೇಕು. ಆದರೆ ಅದು ಬಲು ಕಠಿಣವಾದ ಕೆಲಸ. ನಿನ್ನಿಂದ ಅದು ಸಾಧ್ಯವಾಗಬಹುದೇ ಎಂದು ನಾನು ಯೋಚಿಸುತ್ತಿದ್ದೇನೆ.’’

ಅದಕ್ಕೆ ಗರುಡ, ‘‘ಮಾತೆ, ನೀನು ಅಪ್ಪಣೆ ಕೊಡು. ನನ್ನ ತಾಯಿಯ ಸ್ವಾತಂತ್ರ ಕ್ಕಾಗಿ ನಾನು ಎಂಥಾ ಬಲಿದಾನಕ್ಕೂ ಸಿದ್ಧ’’ ಎಂದ.

ಕದ್ರು, ‘‘ಹಾಗಿದ್ದರೆ ಕೇಳು, ಗರುಡ. ನನಗೆ ಅಮೃತಕುಂಭ ಬೇಕಾಗಿದೆ. ಅದು ದೇವಲೋಕದಲ್ಲಿ ಭದ್ರವಾಗಿದೆ. ಅದನ್ನ ನನಗೆ ತಂದುಕೊಟ್ಟರೆ ತಕ್ಷಣ ನಿನ್ನ ತಾಯಿಗೆ ಬಿಡುಗಡೆ. ಒಂದು ವೇಳೆ ತಪ್ಪಿದಲ್ಲಿ ಎಂದಿಗೂ ನಿಮಗೆ ದಾಸ್ಯ ತಪ್ಪಿದ್ದಲ್ಲ’’ ಎಂದಳು.

ಅಮ್ಮಾ, ನೀನು ಆಶೀರ್ವಾದ ಮಾಡು

ಸರ್ಪಗಳಿಗೆ ಅಮೃತಕುಂಭ ಕೊಡುವುದೆಂದರೆ ಅವರನ್ನು ಚಿರಂಜೀವಿಗಳಾಗಿ ಮಾಡುವುದು. ತನ್ನ ಶತ್ರುಗಳಿಗೆ ಸಾವೇ ಇಲ್ಲದಂತೆ ತಾನೇ ಮಾಡುವುದು! ಗರುಡ ವಿಚಾರ ಮಗ್ನನಾದ. ಆದರೆ ತಾಯಿಯ ಹಾಗೂ ತನ್ನ ಬಿಡುಗಡೆಯಾಗಬೇಕಿದ್ದರೆ ಬೇರೆ ದಾರಿಯೇ ಇಲ್ಲ. ಕೊನೆಗೆ ಗರುಡ ಅಮೃತಕಂಭ ತರುವುದಾಗಿ ಒಪ್ಪಿಕೊಂಡ.

ಅಲ್ಲಿಂದ ಗರುಡ ನೇರವಾಗಿ ಸಮುದ್ರ ಸ್ನಾನವನ್ನು ಮುಗಿಸಿದ. ಸೂರ್ಯಭಗವಾನ್ ಹಾಗೂ ಶ್ರೀಮನ್ನಾರಾಯಣ ವಿಷ್ಣುವಿನ ಆರಾಧನೆ ಮಾಡಿದ. ಅನಂತರ ಬಂದು ತಾಯಿಗೆ ವಂದಿಸಿ, ಮಲತಾಯಿಯೊಡನೆ ನಡೆದ ವೃತ್ತಾಂತವನ್ನೂ ನಿವೇದಿಸಿದ.

ದೇವಲೋಕದಿಂದ ಅಮೃತಕುಂಭ ತರುವುದೇ? ದೇವತೆಗಳು ಕೊಡುವರೆ? ಅವರೊಡನೆ ಹೋರಾಡಿ ತರುವುದು ಸಾಧ್ಯವೇ? ವಿನತೆಗೆ ಮನಸ್ಸು ಕಲಕಿತು.

ಆದರೆ ವಿಷ್ಣುವಿನ ಪರಮ ಭಕ್ತ, ಅತುಲ ಪರಾಕ್ರಮಶಾಲೀ ಗರುಡನಿಗೆ ಮಾತ್ರ ಅದಮ್ಯ ವಿಶ್ವಾಸವಿತ್ತು. ‘‘ಅಮ್ಮಾ, ನೀನು ಆಶೀರ್ವಾದ ಮಾಡು. ನಾನು ಈ ಕೆಲಸವನ್ನು ಸಾಧಿಸುತ್ತೇನೆ, ನಿನ್ನನ್ನು ಬಿಡುಗಡೆ ಮಾಡಿಸುತ್ತೇನೆ’’ ಎಂದ.

ವಿನತೆಯ ಕಣ್ಣುಗಳು ಅಭಿಮಾನದಿಂದ ತುಂಬಿದವು. ತುಂಬಿದ ಹೃದಯದಿಂದ ವಿಷ್ಣುವಿಗೆ, ಮಹರ್ಷಿ ಕಶ್ಯಪರಿಗೆ ಮನಸ್ಸಿನಲ್ಲೇ ವಂದಿಸಿ, ಮಗನನ್ನು ಆಶೀರ್ವದಿಸಿ ಬೀಳ್ಕೊಟ್ಟಳು.

ಸ್ವರ್ಗ ನಡುಗಿತು

ಗರುಡನ ಮೈಯಲ್ಲಿ ಅದ್ಭುತ ಶಕ್ತಿಯ ಸಂಚಾರವಾದಂತಾಯಿತು. ಅವನ ದೇಹವೆಲ್ಲ ಒಂದು ಅಪೂರ್ವ ಸಾಮರ್ಥ್ಯದಿಂದ ಸ್ಫುರಣಗೊಂಡಿತು. ಗರುಡ ಬೃಹದಾಕಾರ ತಾಳಿದ. ತನ್ನ ಬಲಿಷ್ಠವಾದ ರೆಕ್ಕೆಗಳನ್ನು ಒಮ್ಮೆ ಝಾಡಿಸಿದ ಮಾತ್ರಕ್ಕೆ ಭೂಮಿ ಕಂಪಿಸಿತು. ಕೊನೆಗೆ ದಿಗಂತದ ಕಡೆಗೆ ದೃಷ್ಟಿಯಿಟ್ಟು, ‘‘ಅಮೃತಕುಂಭ, ಅಮೃತಕುಂಭ’’ ಎಂದು ಗರ್ಜಿಸುತ್ತ ಹಾರಿದ.

ಅವನು ಹಾರಿದ ರಭಸಕ್ಕೆ ಆಕಾಶದಲ್ಲಿ ಮೇಘ ಗರ್ಜನೆಯಂತೆ ಸಪ್ಪಳವಾಯಿತು. ತನ್ನ ಅದ್ಭುತ ಶಕ್ತಿಯ ಝೇಂಕಾರದಿಂದ ಆಕಾಶವನ್ನೆ ಒಡೆಯುವಂತೆ ಶಬ್ದ ಮಾಡುತ್ತ ಬಾಣದ ವೇಗದಲ್ಲಿ ಹಾರತೊಡಗಿದ.

ಅಪಾರ ವೇಗದಲ್ಲಿ ಗರುಡ ಸ್ವರ್ಗದ ಬಾಗಿಲಿಗೆ ಧಾವಿಸಿದ. ಗರುಡನ ಭಯಂಕರ ಅವತಾರವನ್ನು ಕಂಡು ಹಲವರು ದ್ವಾರಪಾಲಕರು ಕಂಗಾಲಾಗಿ ದಿಕ್ಕೆಟ್ಟು ಓಡತೊಡಗಿದರು. ಗರುಡನ ಈ ರಭಸದ ದಾಳಿಯನ್ನು ನೋಡಿ ಇದೇನು ಸ್ವರ್ಗಕ್ಕೆ ಪ್ರಳಯ ಬಂದಿರಬಹುದೇ ಎಂದು ಭಯಭೀತರಾದರು. ಅಳಿದುಳಿದ ದ್ವಾರಪಾಲಕರು ಗರುಡನನ್ನು ತಡೆಯಲು ಯತ್ನಿಸಿದರು. ಆದರೆ ಗರುಡ ಅವರನ್ನು ಎತ್ತಿ ಒಗೆದ. ಸ್ವರ್ಗದ ಪ್ರಚಂಡ ಮಹಾಬಾಗಿಲಿಗೆ ಗರುಡ ಕೊಟ್ಟ ರಭಸದ ಹೊಡೆತದಿಂದ ಬಾಗಿಲು ನುಚ್ಚುನೂರಾಯಿತು. ಈ ಆಪತ್ತನ್ನು ನೋಡಿ ಯಕ್ಷ ಗಂಧರ್ವರು ಯುದ್ಧಕ್ಕೆ ಸಿದ್ಧರಾದರು. ಆದರೆ ಗರುಡನ ಮಹಾ ಪ್ರಹಾರಕ್ಕೆ ಕ್ಷಣಾರ್ಧದಲ್ಲಿ ತತ್ತರಿಸಿ ಓಡಿಹೋದರು. ಗರುಡ ಹಾಗೆಯೇ ಮುಂದೆ ಸಾಗಿದ. ದೇವಲೋಕದಲ್ಲಿ ಎಲ್ಲೆಲ್ಲೂ ಹಾಹಾಕಾರವೆದ್ದಿತು.

ಅಮೃತಕುಂಭ

ದೊರಕಿತು

ಅಮೃತಕುಂಭದ ಸುತ್ತ ತೀಕ್ಷ ವಾದ ಅಲುಗಿನ ಚಕ್ರವೊಂದು ಗಿರ್ರನೆ ತಿರುಗುತ್ತಿದ್ದಿತು. ಗರುಡನು ಬಹು ಸೂಕ್ಷ  ರೂಪದಿಂದ ಚಕ್ರದ ಅರೆಕಾಲಿನ ಮಧ್ಯದಿಂದ ನುಸುಳಿದನು. ಎರಡು ಘಟಸರ್ಪಗಳು ಕುಂಭವನ್ನು ಕಾಯುತ್ತಿದ್ದವು. ಅವುಗಳ ಕಣ್ಣುಗಳಿಗೆ ಧೂಳನ್ನು ಎರಚಿ, ಚಕ್ರವನ್ನು ಒಡೆದು, ಅಮೃತಕುಂಭವನ್ನು ಎತ್ತಿಕೊಂಡು ಗರುಡನು ಹಾರಿದನು.

ಅಮೃತ-ಸಾವೇ ಬಾರದಂತೆ ಉಳಿಸುವ ಅಮೃತ -ಗರುಡನದಾಯಿತು. ಆದರೆ ಅವನು ಅದನ್ನು ಕುಡಿಯುವ ಯೋಚನೆಯನ್ನು ಮಾಡಲಿಲ್ಲ. ಅವನ ಗುರಿ ಒಂದೇ: ಅಮೃತವನ್ನು ಕದ್ರುವಿಗೊಪ್ಪಿಸಿ ತಾಯಿಯ ದಾಸ್ಯವನ್ನು ಕೊನೆಗಾಣಿಸಬೇಕು.

ಅವನ ಈ ನಿಷ್ಠೆಯನ್ನು ನೋಡಿ ಮಹಾವಿಷ್ಣುವಿಗೆ ಬಹಳ ಸಂತೋಷವಾಯಿತು. ಅವನು ಗರುಡನಿಗೆ ಪ್ರತ್ಯಕ್ಷನಾದ. ಅವನು ತನ್ನ ವಾಹನವಾಗಬೇಕೆಂದು ಕೇಳಿದ. ಗರುಡ ಒಪ್ಪಿದ.

ಇಂದ್ರನೂ ಸೋತ

ಅಮೃತಕುಂಭವನ್ನು ಎತ್ತಿಕೊಂಡು ಹಾರಿದ ಗರುಡನಿಗೆ ಇಂದ್ರ ಅಡ್ಡವಾಗಿ ಬಂದ. ಅವನ ಮೇಲೆ ತನ್ನ ವಜ್ರಾಯುಧವನ್ನೇ ಪ್ರಯೋಗಿಸಿದ. ಗರುಡ ನಕ್ಕುಬಿಟ್ಟ. ಅನಂತರ ಹೇಳಿದ: ‘‘ದೇವೇಂದ್ರ, ನಿನ್ನ ವಜ್ರಾಯುಧ ನನಗೆ ಏನೂ ಮಾಡಲಾರದು. ಆದರೆ ನಿನ್ನ ವಜ್ರಾಯುಧವನ್ನು ಮಾಡಿರುವುದು ಮಹರ್ಷಿ ದಧೀಚಿಗಳ ಬೆನ್ನೆಲುಬಿನಿಂದ. ಅವರಿಗೆ ನಾನು ಗೌರವವನ್ನು ತೋರಿಸಬೇಕು.’’  ಹೀಗೆಂದು ಹೇಳಿ ಅವನು ಒಂದು ರೆಕ್ಕೆಯನ್ನು ಬೀಳಿಸಿದ.

ಅವನ ಶಕ್ತಿ, ಧೈರ್ಯಗಳನ್ನು ಕಂಡು ದೇವೇಂದ್ರ ಬೆರಗಾದ. ಇಂತಹ ಪರಾಕ್ರಮಿಯನ್ನು ತನ್ನ ಸ್ನೇಹಿತನನ್ನಾಗಿ ಮಾಡಿಕೊಳ್ಳಬೇಕು ಎನ್ನಿಸಿತು.

ಇಂದ್ರ ಗರುಡನಿಗೆ ಹೇಳಿದ: ‘‘ಅಯ್ಯಾ, ನಿನ್ನ ಪರಾಕ್ರಮವನ್ನು ನಾನು ಮೆಚ್ಚಿದೆ. ಅಮೃತಕುಂಭವನ್ನು ಹಸ್ತಗತ ಮಾಡಿಕೊಂಡು ನೀನು ತೆಗೆದುಕೊಂಡು ಹೋಗುತ್ತಿರುವೆ. ಆದರೆ ಸ್ವಲ್ಪ ವಿಚಾರಮಾಡು. ಹಾವುಗಳು ಅಮೃತವನ್ನು ಕುಡಿದರೆ ಜಗತ್ತಿನ ಗತಿ ಏನು? ಹಾವುಗಳೆಲ್ಲ ನಿನ್ನ ವೈರಿಗಳು. ಅವರಿಗೆ ನೀನು ಕಂಟಕಪ್ರಾಯ. ಆದುದರಿಂದ ನಾನು ಹೇಳುವಂತೆ ನೀನು ಮಾಡುವುದಾದರೆ ನಿನ್ನ ಪ್ರತಿಜ್ಞೆ ಪೂರ್ತಿಯಾಗುತ್ತದೆ. ಅಮೃತಕುಂಭವೂ ದೇವಲೋಕದಲ್ಲಿ ಶಾಶ್ವತವಾಗಿರುತ್ತದೆ.’’

‘‘ಹೇ ಭಗವಾನ್, ನಿಮ್ಮ ಆಜ್ಞೆಯನ್ನು ಶಿರಸಾಪಾಲಿಸುವೆ. ನನಗೆ ಬೇಕಾಗಿರುವುದು ಕೇವಲ ಪ್ರತಿಜ್ಞಾ ಪೂರ್ತಿ ಹಾಗೂ ತಾಯಿಯ ದಾಸ್ಯ ಕೊನೆಯಾಗುವುದು.’’

‘‘ಹಾಗಾದರೆ ನಾನು ಹೇಳಿದಂತೆ ಮಾಡು. ಈ ಅಮೃತಕುಂಭವನ್ನು ನೇರವಾಗಿ ಆಶ್ರಮಕ್ಕೆ ಒಯ್ದು ಕದ್ರುವಿನ ಮನೆಯ ಹೊರಗಡೆ ದರ್ಭೆಯ ರಾಶಿಯ ಮೇಲೆ ಸುರಕ್ಷಿತವಾಗಿಡು. ನಿನ್ನ ಪ್ರತಿಜ್ಞೆ ಪೂರೈಸುತ್ತದೆ. ಅನಂತರ ಕದ್ರುವಿಗೆ ಹಾಗೂ ಸರ್ಪಗಳಿಗೆ ಸಮುದ್ರ ಸ್ನಾನ ಮಾಡಿ ಬಂದು ಅಮೃತವನ್ನು ಕುಡಿಯಬೇಕು ಎಂದು ಹೇಳು. ಅನಂತರ ನಾನು ಅದನ್ನು ತೆಗೆದುಕೊಂಡು ಹೋಗುತ್ತೇನೆ.’’

‘‘ಪ್ರಭೂ, ನಿನ್ನ ಆಜ್ಞೆಯಂತೆಯೇ ಮಾಡುವೆ’’ ಎಂದ ಗರುಡ. ನೇರವಾಗಿ ಕದ್ರುವಿನ ಆಶ್ರಮಕ್ಕೆ ಬಂದ.

ಅಮೃತ ಸಿಕ್ಕೂ ತಪ್ಪಿಹೋಯಿತು

ಗರುಡ ಅಮೃತಕುಂಭದೊಂದಿಗೆ ಬಂದಿರುವುದನ್ನು ನೋಡಿ ಕದ್ರು ಮತ್ತು ಅವಳ ಮಕ್ಕಳಿಗೆ ಹಿಡಿಸಲಾರದಷ್ಟು ಸಂತೋಷ. ತಾವು ಅಮೃತವನ್ನು ಕುಡಿಯುತ್ತೇವೆ, ತಮಗೆ ಸಾವೇ ಬರುವುದಿಲ್ಲ ಎಂದು ಕುಣಿಯತೊಡಗಿದರು.

ಗರುಡ ಅಮೃತಕುಂಭವನ್ನು ಅವರ ಮನೆಯ ಹೊರಗಡೆ ದರ್ಭೆಯನ್ನು ಹಾಸಿ ಅದರ ಮೇಲಿಟ್ಟ. ತಕ್ಷಣವೇ ಕದ್ರುವಿನ ಮಕ್ಕಳು ಆತುರದಿಂದ ಅದನ್ನು ಕುಡಿಯಲು ಓಡಿಬಂದರು. ಗರುಡ ಅವರನ್ನು ತಡೆದು ಹೇಳಿದ: ‘‘ಯಾರೂ ಅಮೃತಕುಂಭವನ್ನು ಈಗಲೇ ಮುಟ್ಟಬೇಡಿ, ಅದು ಪರಮ ಪವಿತ್ರವಾದುದು. ಅದನ್ನು ಕುಡಿಯುವ ಮೊದಲು ಸಮುದ್ರ ಸ್ನಾನ ಮಾಡಿ, ಶುಭ್ರರಾಗಿ ದೇವರನ್ನು ಪೂಜಿಸಿ ಅನಂತರವೇ ಅದನ್ನು ಮುಟ್ಟಬೇಕು.’’

ಕದ್ರು ಅತೀವ ಆನಂದದಿಂದ ‘‘ಹಾಗೇ ಆಗಲಿ’’ ಎಂದು ನುಡಿದಳು. ಗರುಡನನ್ನು ಕರೆದು ಪ್ರೀತಿಯಿಂದ ಅವನ ತಲೆಯನ್ನು ನೇವರಿಸಿದಳು.

ಆಗ ಗರುಡ, ‘‘ಅಮ್ಮಾ, ನಾನು ನಿನ್ನ ಅಪ್ಪಣೆಯನ್ನು ನಡೆಸಿದ್ದೇನೆ. ಈಗ ನನ್ನ ಮಾತೆಯನ್ನು ದಾಸ್ಯದಿಂದ ಮುಕ್ತಿ ಮಾಡು’’ ಎಂದು ಬೇಡಿಕೊಂಡ.

ಆನಂದದ ಭರದಲ್ಲಿ ಕದ್ರು, ‘‘ಈಗ ನಿನ್ನ ತಾಯಿ, ನೀನು ಪೂರ್ಣ ಸ್ವತಂತ್ರರು. ನೀನು ಹೋಗಬಹುದು’’  ಎಂದು ಹೇಳಿದಳು. ಅವಳಿಗೆ ಅಮೃತವನ್ನು ಕುಡಿಯುವ ಆತುರ. ತನ್ನ ಮಕ್ಕಳೊಡನೆ ಸಮುದ್ರ ಸ್ನಾನಕ್ಕಾಗಿ ಹೊರಟಳು.

ಅವರು ಹೊತ್ತ ಹೋದುದೇ ತಡ, ದೇವೇಂದ್ರ ಅವರ ಮನೆಗೆ ಬಂದ. ಅಮೃತಕುಂಭವನ್ನು ತೆಗೆದುಕೊಂಡು ಸ್ವರ್ಗಕ್ಕೆ ಹಾರಿಹೋದ.

ಕದ್ರು ಪುತ್ರರು ಅಲ್ಲಿಗೆ ಧಾವಿಸಿ ಬಂದರು. ಆದರೆ ಅಮೃತಕುಂಭವೇ ಕಾಣುತ್ತಿಲ್ಲ. ಆಶ್ರಮದಲ್ಲೆಲ್ಲ ಹಾಹಾಕಾರ, ಕೋಲಾಹಲ, ಸರ್ಪಗಳು ರೊಚ್ಚಿಗೆದ್ದವು. ಮೇಲೆ ನೋಡುತ್ತಾರೆ. ದೇವೇಂದ್ರ ತಮ್ಮ ಅಮೃತಕುಂಭವನ್ನು ಒಯ್ಯುತ್ತಿದ್ದಾನೆ. ಕ್ರೋಧದಿಂದ ತಪ್ತರಾಗಿ ಬೆನ್ನಟ್ಟಲು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ.

ಸರ್ಪಗಳಿಗೆ ದುಃಖಕೋಪಗಳಿಂದ ಮೈ ಬಿರಿಯುವಂತಾಯಿತು. ಕುಂಭವಿದ್ದ ದರ್ಭೆಯನ್ನು ನೆಕ್ಕತೊಡಗಿದರು. ದರ್ಭೆ ಬಹು ಹರಿತ. ಅದನ್ನು ನೆಕ್ಕಿದ್ದರಿಂದ ಸರ್ಪಗಳ ನಾಲಿಗೆಗಳೇ ಸೀಳಿ ಎರಡಾದವು.

ಅದಕ್ಕಾಗಿಯೇ ಸರ್ಪಗಳು ಎರಡು ನಾಲಿಗೆಗಳ ಪ್ರಾಣಿಗಳಾದವು. ಮನೆಯ ಅಂಗಳಕ್ಕೆ ಬಂದ ಸಂಜೀವಿನೀ ಅಮೃತ ಅವರಿಗೆ ದಕ್ಕಲಿಲ್ಲ. ವಿನತೆಗೆ ಮೋಸಮಾಡಿ ಹಲವು ವರ್ಷಗಳವರೆಗೆ ದಾಸಿಯನ್ನಾಗಿ ಮಾಡಿ ಯಾತನೆಯನ್ನು ಕೊಟ್ಟ ಫಲಕ್ಕೆ ಈ ಪ್ರಾಯಶ್ಚಿತ್ತ.

ವಿಷ್ಣುವಾಹನ-ಮಾತೃಭಕ್ತ

ಗರುಡ ವಿಷ್ಣುವಿನ ವಾಹನವೂ ಆದ, ತಾಯಿಯ ದಾಸ್ಯವನ್ನು ಬಿಡಿಸಿದ.

ಭಗವತ್ ಪ್ರೀತಿ ಆಶೀರ್ವಾದಗಳಿಂದ ಪುನೀತನಾದ ಗರುಡ ತನ್ನ ತಾಯಿಯ ಕುಟೀರಕ್ಕೆ ಬಂದು ಅವಳ ಪಾದಾರವಿಂದಗಳ ಮೇಲೆ ಆನಂದಾಶ್ರುಗಳ ಅಭಿಷೇಕ ಮಾಡಿದ. ವಿನತೆಯ ಸಂತೋಷ ಹೇಳತೀರದು. ದಾಸ್ಯದಿಂದ ತನ್ನನ್ನು ಬಿಡಿಸಿದ ಮಗನನ್ನು ಪ್ರೀತಿಯಿಂದಲೂ ಅಭಿಮಾನದಿಂದಲೂ ಬಿಗಿದಪ್ಪಿದಳು.

ಮಾತೃಭಕ್ತ ಗರುಡ ತನ್ನ ತಾಯಿಯ ಆಜ್ಞೆಯಂತೆ ತನ್ನ ದಾಯಾದಿಗಳೊಡನೆ ಕಲಹವಿಲ್ಲದೆ ಸ್ವರ್ಗವನ್ನೇ ಜಯಿಸಿ ತನ್ನ ಮಲತಾಯಿ ಹಾಗೂ ದುಷ್ಟ ನಂಟರಿಂದ ತಾಯಿಯನ್ನು ಬಿಡಿಸಿದ.

ಪುಣ್ಯಕ್ಷೇತ್ರಗಳು

ಸ್ವರ್ಗದಿಂದ ಅಮೃತಕಲಶ ತರುವಾಗ ಅದರ ಕೆಲಬಿಂದುಗಳು ಈ ಭೂಮಿಯಮೇಲೆ ಬಿದ್ದವು. ಆ ಸ್ಥಳಗಳೇ ಇಂದಿನ ಹರಿದ್ವಾರ, ಪ್ರಯಾಗ, ಉಜ್ಜೆ ನಿ ಹಾಗೂ ನಾಸಿಕವೆಂದು ಪುಣ್ಯಕ್ಷೇತ್ರಗಳಾದವು ಎಂದು ಹೇಳುತ್ತಾರೆ. ಇಲ್ಲಿಯೇ ಕುಂಭಮೇಳಗಳು ಜರುಗುತ್ತವೆ. ಲಕ್ಷಾವಧಿ ಹಿಂದುಗಳು ಈ ಉತ್ಸವದಲ್ಲಿ ಭಾಗಿಗಳಾಗಿ ಧನ್ಯರಾಗುತ್ತಾರೆ.  ಈ ಅಮೃತಕುಂಭ ಗರುಡ ತಂದು ಭೂಮಿಯ ಮೇಲಿಟ್ಟಾಗ ಚಂದ್ರ ಅದು ಚೆಲ್ಲದಂತೆ ನೋಡಿದ. ಸೂರ್ಯನು ಕುಂಭ ಒಡೆಯದಂತೆ ದಕ್ಷತೆ ವಹಿಸಿದ. ದರ್ಭೆಯ ಮೇಲಿಟ್ಟಾಗ ಬೃಹಸ್ಪತಿ ಅದರ ರಕ್ಷಣೆ ಮಾಡಿದ. ಕಾರಣ ಸೂರ್ಯ, ಚಂದ್ರ ಹಾಗೂ ಬೃಹಸ್ಪತಿ ಒಂದೇ ರೇಖೆಯಲ್ಲಿ ಬಂದಾಗ ಅದಕ್ಕೆ ಕುಂಭಯೋಗ ಎನ್ನುತ್ತಾರೆ. ಗುರು ಹಾಗೂ ಸೂರ್ಯ ಮಕರರಾಶಿಯಲ್ಲಿದ್ದಾಗ ಅಂದು ರವಿವಾರ ಪೂರ್ಣಿಮೆಯಾದರೆ ಹರಿದ್ವಾರದಲ್ಲಿ ಕುಂಭಮೇಳ ಜರುಗುತ್ತದೆ. ಗುರು ಹಾಗೂ ಸೂರ್ಯ ಸಿಂಹರಾಶಿಯಲ್ಲಿದ್ದು ಗುರುವಾರ ಪೂರ್ಣಿಮೆ ಬಂದರೆ ನಾಸಿಕದಲ್ಲಿ ಕುಂಭಮೇಳ ಜರುಗುತ್ತದೆ. ಈ ತೀರ್ಥಕ್ಷೇತ್ರಗಳಲ್ಲಿ ಪವಿತ್ರ ಮುಹೂರ್ತದಲ್ಲಿ ಈ ಮಹೋತ್ಸವ ವರ್ಷಾನುವರ್ಷ ಅನಾದಿಕಾಲದಿಂದ ಅಖಂಡವಾಗಿ ನಡೆಯುತ್ತ ಬಂದಿದೆ.

ಗರುಡ, ನೀನು ಬಹು ಶಕ್ತಿವಂತ

ಇಷ್ಟು ವಿನಯವಂತನೂ ದೈವಭಕ್ತನೂ ಆದ ಗರುಡನಿಗೂ ಒಮ್ಮೆ ಅಹಂಕಾರ ಬಂದಿತು ಎಂದು ಹೇಳುತ್ತಾರೆ. ‘ಎಲ್ಲ ಲೋಕಗಳ ಒಡೆಯನಾದ ವಿಷ್ಣುವನ್ನೆ ನಾನು ಬೆನ್ನ ಮೇಲೆ ಕೂಡಿಸಿಕೊಂಡು ಹೋಗುತ್ತೇನೆ. ಎಂತಹ ಶಕ್ತಿವಂತ ನಾನು! ಯಾರು ನನಗೆ ಸಮ?’ ಎಂದು ಹೆಮ್ಮೆ ಪಟ್ಟ.

ವಿಷ್ಣುವಿಗೆ ಇದು ಅರ್ಥವಾಯಿತು. ‘ಅಯ್ಯಾ ಗರುಡ, ನೀನು ಬಹು ಶಕ್ತಿವಂತ. ಮೇಲಕ್ಕೇರು, ನೋಡೋಣ’ ಎಂದು ತನ್ನ ತೋಳನ್ನು ಅವನ ಮೇಲಿಟ್ಟ.

ವಿಷ್ಣುವನ್ನೇ ಬೆನ್ನ ಮೇಲೆ ಕೂರಿಸಿಕೊಂಡು ಲೋಕ ಲೋಕಗಳನ್ನು ಸುತ್ತುವ ನನಗೆ ಇದೇನು ಮಹಾ ಕಷ್ಟ? ಎಂದುಕೊಂಡು ಗರುಡ ಮೇಲಕ್ಕೇಳಲು ಪ್ರಯತ್ನಿಸಿದ.

ಉಹುಂ, ಆಗಲೆ ಇಲ್ಲ.

ತನ್ನ ಸರ್ವ ಸಾಮರ್ಥ್ಯವನ್ನೆಲ್ಲ ಬಳಸಿದ ಗರುಡ ಮೇಲೇಳಲು ಪ್ರಯತ್ನಿಸಿದ. ಆಗಲೇ ಇಲ್ಲ.

‘ಏಕೆ ಗರುಡ, ಏಳಲು ಇಷ್ಟವಿಲ್ಲವೆ?’’ ಎಂದ ವಿಷ್ಣು.

ಗರುಡನಿಗೆ ಈಗ ಅರ್ಥವಾಯಿತು-ವಿಷ್ಣುವನ್ನು ತಾನು ಕೂಡಿಸಿಕೊಂಡು ಓಡಾಡಲು ಸಾಧ್ಯವಾದದ್ದು ವಿಷ್ಣುವಿನ ಅನುಗ್ರಹದಿಂದ ಎಂದು. ನಾಚಿಕೊಂಡ. ‘ತಪ್ಪಾಯಿತು’ ಎಂದ.

ಅಹಂಕಾರದ ವಿಷ ಎಂತೆಂತಹ ಮಹಾತ್ಮರನ್ನೂ ಕಾಡಬಲ್ಲದು.

ನಮ್ಮ ಉಪನಿಷತ್ತುಗಳಲ್ಲಿ ಮಾತೆ, ಭೂಮಾತೆ ಹಾಗೂ ಜಗಜ್ಜನನಿಯ ಬಗ್ಗೆ ನೂರಾರು ವಂದನ ಶ್ಲೋಕಗಳಿವೆ. ನಮ್ಮ ಆಚಾರ್ಯರು, ಋಷಿಮುನಿಗಳು, ‘‘ಯಾ ದೇವಿ ಸರ್ವ ಭೂತೇಷು ಮಾತೃ ರೂಪೇಣ ಸಂಸ್ಥಿತಾ

ಸಮಸ್ತಸ್ಯೆ , ನಮಸ್ತಸ್ಯೆ , ನಮಸ್ತಸ್ಯೆ  ನಮೋನಮಃ’’ ಎಂದಿದ್ದಾರೆ. ಗರುಡನ ಕಥೆಯೆಂದರೆ ಮಾತೃಭಕ್ತಿಯ ಅಮರಕಾವ್ಯ.

‘‘ನ ಮಾತುಃ ಪರದೈವತಮ್’’