ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಗರೂಡ ಸದಾಶಿವರಾಯರು ದೊಡ್ಡ ಹೆಸರು, ದೊಡ್ಡ ವ್ಯಕ್ತಿತ್ವ, ದೊಡ್ಡ ಗುಣ ಮತ್ತು ದೊಡ್ಡ ಸ್ವಭಾವ.

ಇವರು ರಂಗಭೂಮಿಯ ನಟರಾಗಿ, ನಾಟಕಕಾರರಾಗಿ, ರಾಷ್ಟ್ರ ಸೇವಕರಾಗಿ, ಧರ್ಮ ಪ್ರಸಾರಕರಾಗಿ, ನಾಟಕ ಸಂಸ್ಥೆಯ ಒಡೆಯರಾಗಿ ಪ್ರಸಿದ್ಧರು. ಹಿಡಿದ ಕೆಲಸವನ್ನು ಚೊಕ್ಕವಾಗಿ, ಶ್ರದ್ಧೆಯಿಂದ ನಿರ್ವಹಿಸಿದ ಕರ್ಮಯೋಗಿಗಳು; ಹಠಯೋಗಿಗಳೂ ಕೂಡ.

ಪವಿತ್ರವಾದ ದೇವಾಲಯ

“ರಂಗಭೂಮಿ ಸಂಪಾದನೆಯ ಸಾಧನವಲ್ಲ. ಅದು ಪವಿತ್ರವಾದ ದೇವಾಲಯ. ಅಲ್ಲಿನ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು. ಅಭಿನಯವೆಂದರೆ, ಅದು ದೇವರ ಪೂಜೆ. ರಂಗಭೂಮಿಯ ಮೂಲಕ, ಅಭಿನಯದ ಮೂಲಕ ಸಮಾಜಸೇವೆ ಮಾಡಬೇಕು. ಜನಜಾಗೃತಿಯನ್ನು ಮೂಡಿಸಬೇಕು. ಧರ್ಮಪ್ರಸಾರವನ್ನು ಕೈಗೊಳ್ಳಬೇಕು. ನಮ್ಮ ನಾಟಕಗಳಲ್ಲಿ ದೇಶಸೇವೆಯ ಪ್ರವೃತ್ತಿ, ರಾಷ್ಟ್ರೀಯ ಮನೋಭಾವ ತುಂಬಿ ತುಳುಕಾಡಬೇಕು.”

-ಇದು ಗರೂಡ ಸದಾಶಿವರಾಯರ ಜೀವನ ಸಿದ್ಧಾಂತವಾಗಿತ್ತು. ಈ ಸಿದ್ಧಾಂತದ ಅನುಷ್ಠಾನಕ್ಕಾಗಿ ಅವರು ತಮ್ಮ ಜೀವಮಾನವೆಲ್ಲ ಶ್ರಮಿಸಿದರು; ಸಾಧಿಸಿದರು. ರಂಗಭೂಮಿಯಲ್ಲಿ ಸಿದ್ಧಿ ಪಡೆದು ‘ರಂಗತಪಸ್ವಿ’ಯಾಗಿ ರಾರಾಜಿಸಿದರು. ರಸಿಕರನ್ನು ರಂಜಿಸಿದರು. ಜಾಗೃತಿಯ ಕಹಳೆಯನ್ನು ಊದಿದರು. ರಾಷ್ಟ್ರೀಯ ಮನೋಧರ್ಮದ ನಗಾರಿ ಬಾರಿಸಿದರು.

ರಂಗಭೂಮಿಯಲ್ಲಿನ ಅಭಿನಯಕ್ಕೆ ಗರೂಡ ಸದಾಶಿವರಾಯರು ಅಗ್ರಸ್ಥಾನವನ್ನು ನೀಡಿದ್ದರು. ಅಭಿನಯ ಕಲೆಯನ್ನು ಅವರು ಪವಿತ್ರವಾದ ಯೋಗ ವಿದ್ಯೆ ಎಂದು ಭಾವಿಸಿ ಪೂಜಿಸಿದರು. ಶಿಷ್ಯವೃಂದಕ್ಕೂ ಇದನ್ನೇ ಬೋಧಿಸಿದರು. ಪಾತ್ರಗಳ ಅನುಭವದ ನಿವೇದನೆಯೇ ಅಭಿನಯ; ಅಪಾರ ತನ್ಮಯತೆಯಿಂದ ಇದನ್ನು ಸಾಧಿಸಬೇಕು ಎಂಬುದು ಅವರ ತತ್ತ್ವ. ರಂಗಭೂಮಿಗೆ, ಅಭಿನಯ ಕಲೆಗೆ ಇಷ್ಟು ವಿಶಾಲದ ಅರ್ಥವನ್ನು ಕೊಟ್ಟ ಹಿರಿಯರಲ್ಲಿ ಗರೂಡರಿಗೆ ಅಗ್ರಸ್ಥಾನ.

ಬಾಲ್ಯ

ಗರೂಡ ಸದಾಶಿವರಾಯರು ೧೮೭೯ರಲ್ಲಿ ಕೊಪ್ಪಳ ತಾಲ್ಲೂಕಿನ ಕೌಲೂರಿನಲ್ಲಿ ಜನಿಸಿದರು. ಇವರದು ಸುಸಂಸ್ಕೃತ ಸಂಪ್ರದಾಯಸ್ಥ ವೈದಿಕ ಮನೆತನ. ತಂದೆ ಗುರುನಾಥ ಶಾಸ್ತ್ರಿಗಳು ಸಂಸ್ಕೃತದ ಹಿರಿಯ ವಿದ್ವಾಂಸರು. ಸಂಗೀತ ಪರಿಣತರು. ನಿಷ್ಠಾವಂತ ವೈದಿಕರು. ಇವರ ಮುದ್ದು ಮಗ ಸದಾಶಿವ; ಮನೆಯವರು ಅಕ್ಕರೆಯಿಂದ ಕರೆಯುತ್ತಿದ್ದ ಹೆಸರು – ಸದಯ್ಯ. ಇವರ ತಮ್ಮ ಸಾಂಬಾಜಿ ರಾಯ. ಇವರಿಗೆ ಒಬ್ಬ ತಂಗಿಯೂ ಇದ್ದಳು.

ಸದಾಶಿವನಿಗೆ ಚಿಕ್ಕಂದಿನಲ್ಲಿಲಯೇ ತಾಯಿಯ ಪ್ರೇಮ ಇಲ್ಲವಾಯಿತು; ತಾಯಿ ಸುಭದ್ರಾಬಾಯಿ ಮಕ್ಕಳು ಇನ್ನೂ ಚಿಕ್ಕವರಾಗಿದ್ದಾಗಲೇ ಸ್ವರ್ಗಸ್ಥರಾದರು.

ಗುರುನಾಥ ಶಾಸ್ತ್ರಿಗಳೇ ತಂದೆಯೂ ತಾಯಿಯೂ ಆಗಿ ಅಕ್ಕರೆಯಿಂದ ಮಕ್ಕಳನ್ನು ಬೆಳೆಸಿದರು.

‘ಗರೂಡ’ ಎಂಬುದು ಸದಾಶಿವರಾಯರ ಮನೆತನದ ಹೆಸರು. ಬಹಳ ಅಪರೂಪವಾದ ಹೆಸರಿನ ಮನೆತನ ಇದು. ‘ಗರೂಡ’ ಮನೆತನದವರಿಗೂ ವೈದ್ಯ ವಿದ್ಯೆಗೂ ನಿಕಟ ಸಂಪರ್ಕ. ಗುರುನಾಥ ಶಾಸ್ತ್ರಿಗಳಿಗೆ ವೈದ್ಯ ತಿಳಿದಿತ್ತು. ಅವರು ತಮ್ಮ ಮಕ್ಕಳಿಗೂ ಈ ವಿದ್ಯೆಯ ಪರಿಚಯವನ್ನು ಮಾಡಿಸಿ ಕೊಟ್ಟಿದ್ದರು.

ಸದಾಶಿವರಾಯರ ತಂದೆ ಗುರುನಾಥ ಶಾಸ್ತ್ರಿಗಳು ಸಂಸ್ಕೃತದ ದೊಡ್ಡ ವಿದ್ವಾಂಸರು. ಹೆಂಡತಿ ಸತ್ತ ಮೇಲೆ ಇವರು ಮರುಮದುವೆಯ ಯೋಚನೆಯನ್ನು ಮಾಡದೆ, ಮಕ್ಕಳ ಯೋಗಕ್ಷೇಮ ಮತ್ತು ಅವರ ವಿದ್ಯಾಭ್ಯಾಸಕ್ಕೆ ಗಮನ ನೀಡಿದರು. ಅವರು ಸದಾಕಾಲ ವ್ಯಾಸಂಗದಲ್ಲಿ ನಿರತರಾಗಿರುತ್ತಿದ್ದರು. ಇವರಿಗೆ ನಾಟಕ ಕಲೆಯ ಬಗ್ಗೆ ಪ್ರೀತಿ ಇದ್ದಿತು. ಇವರು ತಮ್ಮ ತಾರುಣ್ಯದಲ್ಲಿ ಒಮ್ಮೆ ‘ಬಾಣಾಸುರ’ ನಾಟಕದಲ್ಲಿ ಅಭಿನಯಿಸಲು ಅಭ್ಯಾಸ ಮಾಡಿ, ಮನೆಯ ವರ ವಿರೋಧ ಬರಲು ನಾಟಕದಲ್ಲಿ ಅಭಿನಯಿಸುವ ಅಪೇಕ್ಷೆಯನ್ನು ಕೈಬಿಟ್ಟಿದ್ದರಂತೆ. ತಂದೆಯ ಅಭಿನಯ ಕಲೆಯ ಆಸಕ್ತಿ, ಮುಂದೆ ಮಗನಲ್ಲಿ ಆವಿರ್ಭವಿಸಿತು.

ಶಾಸ್ತ್ರಿಗಳದು ಕಟ್ಟುನಿಟ್ಟಾದ ಶಿಸ್ತಿನ ಜೀವನ. ಅವರೇ ಒಂದು ತಂಬೂರಿಯನ್ನು ತಯಾರಿಸಿದ್ದರು. ಪ್ರತಿದಿನ ಸಂಜೆ ಅವರು ಆ ತಂಬೂರಿಯನ್ನು ಮೀಟುತ್ತಾ, ಎಡಬಲದಲ್ಲಿ ಇಬ್ಬರು ಗಂಡು ಮಕ್ಕಳನ್ನು ಕೂಡಿಸಿಕೊಂಡು ಭಜನೆಯನ್ನು ಮಾಡುತ್ತಿದ್ದರು. ಭಜನೆ ಸುಶ್ರಾವ್ಯವಾಗಿರುತ್ತಿತ್ತು. ಅದನ್ನು ಕೇಳಲು ಬೀದಿಯವರೆಲ್ಲ ಬಂದು ಕೂಡುತ್ತಿದ್ದರು.

ಮುಂಜಾನೆಯೇ ಏಳುತ್ತಿದ್ದ ಸದಾಶಿವನಿಗೆ ತಂದೆ ಅಮರಕೋಶವನ್ನು ಹೇಳಿಕೊಡುತ್ತಿದ್ದರು. ಸಂಕೀರ್ತನೆಗಳನ್ನು ಕಲಿಸುತ್ತಿದ್ದರು. ಹುಡುಗ ಇದನ್ನು ಶ್ರದ್ಧೆಯಿಂದ ಕಲಿಯುತ್ತಿದ್ದ. ಅಪಾರ ಆಸಕ್ತಿಯನ್ನು ವ್ಯಕ್ತಪಡಿಸುತ್ತಿದ್ದ. ತಂದೆಗೆ ಅದೆಷ್ಟೋ ಸಂತೋಷ.

ಸದಾಶಿವನಿಗೆ ಸಂಸ್ಕೃತವೆಂದರೆ ಚಿಕ್ಕಂದಿನಿಂದಲೂ ಆಸಕ್ತಿ. ತಂದೆಯವರಿಂದ ಸಂಸ್ಕೃತವನ್ನೂ ಶ್ರದ್ಧೆಯಿಂದ ಕಲಿತ.

ಮನೆತನದ ಸಂಪ್ರದಾಯದಂತೆ ಸದಾಶಿವನಿಗೆ ಅವನ ಎಂಟನೆಯ ವಯಸ್ಸಿನಲ್ಲಿಯೇ ಉಪನಯನ ಮಾಡಲಾಯಿತು. ಉಪನಯನವಾದ ಮೇಲೆ ಸದಾಶಿವ ತಪ್ಪದೆ ಸಂಧ್ಯಾವಂದನೆ ಮಾಡುತ್ತಿದ್ದುದಲ್ಲದೆ ತಂದೆಯವರಿಂದ ಪೂಜೆಯ ಮಂತ್ರ, ಶ್ರೀಸೂಕ್ತ, ಪುರುಷಸೂಕ್ತಗಳನ್ನು ಕಲಿತ. ಸಂಸ್ಕೃತ ಸುಭಾಷಿತಗಳನ್ನು ಕಂಠಸ್ಥ ಮಾಡಿಕೊಂಡ.

ಬಾಲ್ಯದ ಈ ಶಿಕ್ಷಣ ಸದಾಶಿವನ ಭವ್ಯ ಭವಿಷ್ಯಕ್ಕೆ ಉತ್ತಮವಾದ ಭೂಮಿಕೆಯಾಯಿತು.

 

ತಂದೆಯವರು ಇಬ್ಬರು ಮಕ್ಕಳನ್ನು ಕೂಡಿಸಿಕೊಂಡು ಭಜನೆ ಮಾಡುತ್ತಿದ್ದರು

ವಿದ್ಯಾಭ್ಯಾಸ

 

ಮನೆಯಲ್ಲಿ ಸದಾಶಿವನಿಗೆ ಪರಂಪರಾನುಗತವಾದ ಶಿಕ್ಷಣ ದೊರೆಯಿತು.

ಅವನನ್ನು ಕೌಲೂರಿನ ಸಣ್ಣ ಶಾಲೆಗೆ ಸೇರಿಸಲಾಯಿತು ತಾತ್ಯಾ ಮಾಸ್ತರ್ ಎಂಬವರು ಅಲ್ಲಿನ ಉಪಾಧ್ಯಾಯರು. ಮರಾಠಿ ಮತ್ತು ಕನ್ನಡದ ಶಿಕ್ಷಣ ಇಲ್ಲಿ ಆರಂಭವಾಯಿತು. ಉಪನಯನವಾಗುವವರೆಗೂ ಇಲ್ಲಿ ವಿದ್ಯಾಭ್ಯಾಸ ನಡೆಯಿತು.

ಗರೂಡರಿಗೆ ಶಾಲೆಗೆ ಹೋಗುವುದೆಂದರೆ ಬೇಸರ. ಏನಾದರೊಂದು ನೆಪದಿಂದ ತಪ್ಪಿಸಿಕೊಳ್ಳುತ್ತಿದ್ದರು. ಶಾಲೆಗೆ ಚಕ್ಕರ್ ಹಾಕಲು ಅವರು ಹುಡುಕುತ್ತಿದ್ದ ಉಪಾಯ ಒಡ್ಡುತ್ತಿದ್ದ ತಂತ್ರಗಳು ಸಹ ಕಲಾತ್ಮಕ.

ತಾತ್ಯಾ ಮಾಸ್ತರರು ದೂರ್ವಾಸ ಮುನಿಗಳ ಅಪರಾವತಾರ. ಸದಾ ಮೂಗಿನ ತುದಿಯಲ್ಲಿಯೇ ಕೋಪ ನಿಂತಿರುತ್ತಿತ್ತು. ಅವರದು ಮಿಲಿಟರಿ ಶಿಸ್ತು. ತಿಂಗಳಿಗೆ ಎರಡೇ ದಿನ ಶಾಲೆಗೆ ರಜೆ; ಅಮಾವಾಸ್ಯೆ ಮತ್ತು ಹುಣ್ಣಿಮೆಗಳಂದು ಅವರು ಪಾಠ ಮಾಡುತ್ತಿರಲಿಲ್ಲ. ಆ ದಿನಗಳಲ್ಲಿ ರಜೆ ಇದ್ದರೂ ವಿದ್ಯಾರ್ಥಿಗಳು ಶಾಲೆಗೆ ಬಂದು ಗುಡಿಸಿ ಸಾರಿಸಿ ಚೊಕ್ಕಟ ಮಾಡಬೇಕು. ಗರೂಡರ ನಾಯಕತ್ವದ ಗುಂಪು ಈ ಕೆಲಸವನ್ನು ಮಾಡಿ ಒಂದಕ್ಕೆ ಬದಲಾಗಿ ಎರಡು ದಿನ ರಜೆ ಗಿಟ್ಟಿಸುತ್ತಿದ್ದರು. ಹೇಗೆಂದರೆ, ಶಾಲೆಯದು ಮಣ್ಣಿನ ನೆಲ. ಅಮಾವಾಸ್ಯೆಯಂದು ಸಗಣಿ ನೀರಿನಲ್ಲಿ ಸಾರಿಸುತ್ತಿದ್ದರು. ಗುರುಗಳಿಗೆ ಕಾಣದ ಹಾಗೆ ನೆಲದ ಮಧ್ಯೆ ಮಧ್ಯೆ ಗುಣಿಗಳನ್ನು ತೋಡಿಬಿಡುತ್ತಿದ್ದರು. ಸಗಣಿಯ ನೀರು ಒಣಗದೆ ಮಾರನೆ ದಿನವೂ ಒದ್ದೆಯಾಗಿ ಅಲ್ಲೇ ನಿಂತಿರುತ್ತಿತ್ತು. ಅಂತಹ ನೆಲದ ಮೇಲೆ ಹುಡುಗರು ಕೂಡುವುದು ಹೇಗೆ? ಸರಿ ಆ ದಿನವೂ ರಜೆ. ನೆಲ ಒಣಗುವ ತನಕ ರಜೆ.

ಶಾಲೆಯು ಬೆಳಿಗ್ಗೆ. ಮಧ್ಯಾಹ್ನ ಎರಡು ಹೊತ್ತೂ ನಡೆಯುತ್ತಿತ್ತು. ಮಧ್ಯಾಹ್ನದ ಶಾಲೆಯನ್ನು ತಪ್ಪಿಸಿಕೊಳ್ಳಲು ಗರೂಡರು ಒಂದು ಉಪಾಯವನ್ನು ಕಂಡು ಹಿಡಿದಿದ್ದರು. ಬಿಸಿಲಿಗೆ ಕಾದ ಬಂಡೆಯ ಮೇಲೆ ಸ್ವಲ್ಪ ಹೊತ್ತು ಮಲಗಿದ್ದು, ಮೈ ಬಿಸಿಯಾದ ಮೇಲೆ ಮನೆಗೆ ಬಂದು ಜ್ವರ ಬಂದಿದೆಯೆಂದು ಮನೆಯವರಿಗೆ ಮೈ ಮುಟ್ಟಿಸಿ ತೋರಿಸಿ ಮಲಗಿ ಬಿಡುತ್ತಿದ್ದರು. ಈ ಉಪಾಯ ಕಠಿಣವಾಗಿದ್ದರೂ ಭಾವಿ ಕಲಾವಿದ ಇದನ್ನು ಸೊಗಸಾಗಿ ಅಭಿನಯಿಸಿ ಶಾಲೆಗೆ ಚಕ್ಕರ್ ಹೊಡೆಯುತ್ತಿದ್ದ.

ರಾಯಚೂರು, ಕಲ್ಬುರ್ಗಿ

ಸದಾಶಿವನಿಗೆ ಮುಂದಿನ ಶಿಕ್ಷಣ ರಾಯಚೂರಿನಲ್ಲಿ. ಉಪನಯನದ ನಂತರ ಈ ಬಾಲಕನನ್ನು ವಿದ್ಯಾಭ್ಯಾಸಕ್ಕಾಗಿ ರಾಯಚೂರಿನ ಅವನ ಸೋದರಮಾವನ ಮನೆಗೆ ಕಳುಹಿಸಿ ಕೊಡಲಾಯಿತು. ಇಲ್ಲಿ ಇಂಗ್ಲಿಷ್‌ ಶಾಲೆಯಲ್ಲಿ ವಿದ್ಯಾಭ್ಯಾಸ. ಇಲ್ಲಿನ ಪೇಂಡಸೆ ಮಾಸ್ತರ್ ತುಂಬಾ ಒಳ್ಳೆಯವರು. ಸದಾ ಹಸನ್ಮುಖಿಗಳಾಗಿ ನಗುನಗುತ್ತಲೇ ಹುಡುಗರಿಗೆ ಪಾಠ ಕಲಿಸುತ್ತಿದ್ದರು.

ಸಂಪ್ರದಾಯ ವಾತಾವರಣದಲ್ಲಿ ಬೆಳೆದಿದ್ದ ಸದಾಶಿವನಿಗೆ ರಾಯಚೂರಿನಲ್ಲಿ ಅಚ್ಚರಿಯ ಅನುಭವಗಳಾದವು. ಊಟ ತಿಂಡಿಗಳನ್ನು ದುಡ್ಡಿಗೆ ಮಾರುವ ಖಾನಾವಳಿ(ಹೋಟೆಲ್‌) ಯನ್ನು ಕಂಡು ಈ ಹುಡುಗನಿಗೆ ಹೀಗೂ ಉಂಟೆ ಎಂದು ಆಶ್ಚರ್ಯ. ಸಂಧ್ಯಾವಂದನೆ ಇಲ್ಲದೆ ನೇರವಾಗಿ ಬಂದು ಎಲೆಯ ಮುಂದೆ ಕುಳಿತು ಊಟ ಮಾಡುತ್ತಿದ್ದವರನ್ನು ಕಂಡು ಮನಸ್ಸಿನಲ್ಲಿಯೇ ಕಸಿವಿಸಿ.

ರಾಯಚೂರಿನಲ್ಲಿ ಸದಾಶಿವನ ವಿದ್ಯಾಭ್ಯಾಸ ಮುಂದುವರಿಯಿತು. ಮರಾಠಿಯ ನಾಲ್ಕನೆ ತರಗತಿ, ಇಂಗ್ಲಿಷಿನ ಒಂದನೇ ತರಗತಿ ಮುಗಿಯಿತು. ಮಾಧ್ಯಮಿಕ ಶಾಲೆಯ ಶಿಕ್ಷಣವನ್ನು ಹುಡುಗ ಲೀಲಾಜಾಲವಾಗಿ ಪೂರೈಸಿದ. ಸದಾಶಿವನ ‘ಸಾಹಿತ್ಯಗುರು’ ಪಂಢರಿನಾಥಾಚಾರ್ಯರು ದೊರಕಿದ್ದು ಇಲ್ಲಿಯೇ; ಈ ಘಟ್ಟದಲ್ಲಿಯೇ. ಈ ಗುರುವಿನ ಮಾರ್ಗದರ್ಶನದಲ್ಲಿ ಹುಡುಗ ಅನೇಕ ಮರಾಠಿ ಗ್ರಂಥಗಳನ್ನು ವ್ಯಾಸಂಗ ಮಾಡಿದ. ಸಾಹಿತ್ಯ ರಚನೆ, ಕವಿತ್ವಕ್ಕೆ ಕೈಹಾಕಿದ.

ಸೋದರಮಾವನಿಗೆ ರಾಯಚೂರಿನಿಂದಿ ಕಲ್ಬುರ್ಗಿಗೆ ವರ್ಗವಾದುದರಿಂದ ಸದಾಶಿವನೂ ಅವರೊಡನೆ ಪ್ರಯಾಣ ಬೆಳೆಸಿದ. ಪ್ರೌಢಶಾಲೆಯ ವಿದ್ಯಾಭ್ಯಾಸ ಅಲ್ಲಿ ನಡೆಯಿತು.

ಕಲ್ಬುರ್ಗಿಯ ಜೀವನ ಮಹತ್ವಪೂರ್ಣವಾದುದು. ಸದಾಶಿವನ ವ್ಯಕ್ತಿತ್ವಕ್ಕೆ ಒಂದು ಬಗೆಯ ಸ್ಪಷ್ಟ ಸ್ವರೂಪ ದೊರೆತುದುದು ಇಲ್ಲಿಯೇ.

ಸದಾಶಿವನ ಚಟುವಟಿಕೆ ಕಲ್ಬುರ್ಗಿಯಲ್ಲಿ ಬಿರುಸಾಯಿತು. ಸಮವಯಸ್ಕರ ದಂಡು ಕಟ್ಟಿಕೊಂಡು ಗರಡಿ ಮನೆಯಲ್ಲಿ ಕಸರತ್ತು: ಮೈಗೆ ಪುಷ್ಟಿ. ಹಿಂದು ಧರ್ಮ-ಸಂಸ್ಕೃತಿಗಳ ಬಗ್ಗೆ ಅಪಾರ ಆಸಕ್ತಿ. ಭಜನೆ ಹಾಡುಗಳ ಮೇಳ.

ಸದಾಶಿವ ಸಮವಯಸ್ಕ ಸ್ನೇಹಿತರೊಡಗೂಡಿ, ಅಭಿನಯಪಟು ಪಾಂಡುರಂಗರಾಯರ ದೇವಳಗಾಂವ ಅವರ ಮುಂದಾಳುತನದಲ್ಲಿ ‘ಪಾಂಡುರಂಗ ಕೃಷ್ಣ ಮತ್ತು ಮಂಡಲಿ’ ಎಂಬ ಸಾಂಸ್ಕೃತಿಕ ಕಾರ್ಯಕ್ರಮದ ಸಂಘವನ್ನು ಕಟ್ಟಿದ ಸದಾಶಿವನ ಅಭಿನಯ ಕಲೆಗೆ ಪಾಂಡು ರಂಗರಾಯರೇ ಮೊದಲ ಗುರುಗಳು.

ರಂಗಪ್ರವೇಶ

‘ಪಾಂಡುರಂಗ ಕೃಷ್ಣ ಮತ್ತು ಮಂಡಲಿ’ ಸತತವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿತ್ತು. ಆ ಬಾರಿಯ ಶಿವಾಜಿ ಜಯಂತಿ ಸಮಾರಂಭದಲ್ಲಿ ನಾಟಕವೊಂದನ್ನು ಆಡಲು ಸಿದ್ಧತೆ ನಡೆಯಿತು. ಮರಾಠಿಯ ನಾಟಕ. ಪಾಂಡುರಂಗ ರಾಯರೇ ನಾಟಕದ ನಿರ್ದೇಶಕರು. ಅವರದೇ ಲೋಕಮಾನ್ಯ ತಿಲಕರ ಪಾತ್ರ.ಲೋಕಮಾನ್ಯರಿಗೆ ಸಹಕಾರಿಯಾದ ಜ್ಯೂರಿ ಪಾತ್ರ ಸದಾಶಿವರಾಯರದು.

ನಾಟಕದ ಹೆಸರು ‘ಬಂಧ ವಿಮೋಚನೆ’. ಈ ನಾಟಕದಿಂದಲೇ ಗರೂಡ ಸದಾಶಿವರಾಯರು ರಂಗಭೂಮಿಯನ್ನು ಪ್ರವೇಶಿಸಿದರು.

ಶಿವಾಜಿ ಜಯಂತಿಯಂದು ‘ಬಂಧ ವಿಮೋಚನೆ’ ನಾಟಕವನ್ನು ಯಶಸ್ವಿಯಾಗಿ ಅಭಿನಯಿಸಲಾಯಿತು. ಗರೂಡರ ಪಾತ್ರ ಚಿಕ್ಕದಾದರೂ ಅವರು ಚೊಕ್ಕವಾಗಿ ಅಭಿನಯಿಸಿ ಪ್ರೇಕ್ಷಕರನ್ನು ಆಕರ್ಷಿಸಿದರು.

ಈ ನಾಟಕದ ಅಭಿನಯದಿಂದ ಗರೂಡರಲ್ಲಿ ಸುಪ್ತವಾಗಿದ್ದ ಅಭಿನಯ ಕಲೆ, ಆಕಾಂಕ್ಷೆ ಹೆಮ್ಮರವಾಗಿ ಬೆಳೆಯಲು ಆರಂಭವಾಯಿತು.

ಲೋಕಮಾನ್ಯ ತಿಲಕರ ಆದರ್ಶದ ಹಿನ್ನೆಲೆಯಲ್ಲಿ ರಾಷ್ಟ್ರಪ್ರೇಮವನ್ನು ಹುರಿದುಂಬಿಸಿ, ಭಾರತ ಮಾತೆಯನ್ನು ಪರರ ದಾಸ್ಯದಿಂದ ವಿಮುಕ್ತಿಗೊಳಿಸುವ ಕ್ರಾಂತಿಕಾರಿ ವಿಚಾರ ‘ಬಂಧ ವಿಮೋಚನೆ’ ನಾಟಕದಿಂದ ಗರೂಡರ ಗುಂಪಿನಲ್ಲಿ ಬೇರೂರಿತು. ಇದಕ್ಕಾಗಿ ಶಿಸ್ತಿನ ಸ್ವಯಂಸೇವಕರಾಗಲು ಅವರು ಕಟ್ಟುನಿಟ್ಟಾದ ಕ್ರಮವನ್ನು ಆರಂಭಿಸಿದರು.

ಈ ಶಿಸ್ತಿನ ಜೀವನದ ದೀಕ್ಷೆ ವಹಿಸಿದ ಗರೂಡ ಸದಾಶಿವರಾಯರು ಮುಂಜಾನೆ ನಾಲ್ಕು ಗಂಟೆಗೆ ನಿದ್ರೆಯಿಂದ ಎದ್ದು ಬಿಡುತ್ತಿದ್ದರು. ಮುಂಜಾನೆ ನಾಲ್ಕರಿಂದ ಐದರವರೆಗೆ ಅಂಗಸಾಧನೆ ಮಾಡುತ್ತಿದ್ದರು. ಅನಂತರ ಮಳೆ ಇರಲಿ,ಚಳಿ ಕೊರೆಯುತ್ತಿರಲಿ ತಣ್ಣೀರಿನಲ್ಲೇ ಸ್ನಾನ. ಸೂರ್ಯೋದಯವಾಗುತ್ತಿದ್ದಂತೆಯೇ ಅರ್ಘ್ಯ ಕೊಟ್ಟು ಹಾಲನ್ನು ಸೇವಿಸಿ, ಶಾಲೆಯ ಪಾಠ ಪ್ರವಚನಗಳು. ಹತ್ತು ಗಂಟೆಗೆ ಊಟ ಮಾಡಿ ಶಾಲೆಗೆ ಹೋಗುತ್ತಿದ್ದರು. ನಾಲ್ಕೂವರೆಗೆ ಶಾಲೆಯಿಂದ ಬಂದ ಮೇಲೆ ಕಾಲ್ಚೆಂಡು ಇಲ್ಲವೆ ಇನ್ನಿತರ ಕ್ರೀಡೆ. ಆಮೇಲೆ ಸ್ವಲ್ಪ ವಿಶ್ರಾಂತಿ. ಅನಂತರ ರಾತ್ರಿ ಎಂಟು ಗಂಟೆಯ ತನಕ ಭಜನೆ, ಸಂಕೀರ್ತನ, ಗಾಯನ. ಆಮೇಲೆ ಒಂದು ಗಂಟೆಯ ಹೊತ್ತು ಪಾಠ ಓದಿ, ಊಟ, ನಿದ್ರೆ. ಗರೂಡರ ವಿದ್ಯಾರ್ಥಿ ದೆಸೆಯ ನಿತ್ಯ ಕಾರ್ಯಕ್ರಮವಾಯಿತು.

ಕಣ್ತೆರಿಸಿದ ಹರಿಶ್ಚಂದ್ರ

ಈ ಸಮಯದಲ್ಲಿ ಕನ್ನಡದ ಸಂಗೀತ ನಾಟಕ ಮಂಡಲಿಯೊಂದು ಕಲ್ಬುರ್ಗಿಗೆ ಬಂದು ಮೊಕ್ಕಾಂ ಮಾಡಿ ‘ಸತ್ಯಹರಿಶ್ಚಂದ್ರ’ ನಾಟಕವನ್ನು ಅಭಿನಯಿಸಲು ಆರಂಭಿಸಿತು. ಗರೂಡರು ತಮ್ಮ ಮಿತ್ರ ವೃಂದದೊಡನೆ ಹೋಗಿ ಈ ನಾಟಕವನ್ನು ನೋಡಿಕೊಂಡು ಬಂದರು. ಕನ್ನಡಿಗರಾದ ಗರೂಡರಿಗೆ ಈ ಕನ್ನಡ ನಾಟಕ ತುಂಬಾ ಸಂತೋಷವನ್ನುಂಟುಮಾಡಿತು. ಗರೂಡರ ಮರಾಠಿ ಮಿತ್ರರಿಗೆ ಈ ನಾಟಕ ರುಚಿಸಲಿಲ್ಲ. ಅವರು ಈ ನಾಟಕದ ಬಗ್ಗೆ ವ್ಯಂಗ್ಯವಾಗಿ ಮಾತನಾಡಿ ಅಪಹಾಸ್ಯ ಮಾಡಿ ನಕ್ಕರು. ಗರೂಡರ ಕನ್ನಡ ಅಭಿಮಾನ ಕೆರಳಿತು. ಮರಾಠಿಗರನ್ನು ಸೋಲಿಸುವಂತಹ ಉತ್ತಮೋತ್ತಮವಾದ ಕನ್ನಡ ನಾಟಕಗಳನ್ನು ಅಭಿನಯಿಸಬೇಕೆಂದು ಗರೂಡರು ಮನಸ್ಸಿನಲ್ಲಿಯೇ ಸಂಕಲ್ಪಿಸಿದರು. ಈ ಉದ್ದೇಶದಿಂದ ಅವರು ಕಲ್ಬುರ್ಗಿಯ ತಮ್ಮ ಪರಿಚಿತ ಹಾಗೂ ಅಪರಿಚಿತ ಕನ್ನಡ ಯುವಕರನ್ನೆಲ್ಲಾ ಸಂಘಟಿಸಿ ‘ಶಿವಸುತ ಪ್ರಾಸಾದಿತ ನಾಟಕ ಮಂಡಲಿ’ಯನ್ನು ಸ್ಥಾಪಿಸಿದರು.

ಮಂಡಲಿಯಲ್ಲಿ ಅಭಿನಯಿಸುವುದಕ್ಕಾಗಿ ಕನ್ನಡ ನಾಟಕಗಳು ಬೇಕಾಗಿತ್ತು. ಈ ನಾಟಕಗಳನ್ನು ರಚಿಸಲು ಗರೂಡ ಸದಾಶಿವರಾಯರೇ ಮುಂದಾದರು.

ಕೀಚಕ ವಧೆ

ಕನ್ನಡದ ಗೆಳೆಯರಾದ ಶರಣಪ್ಪ ಮತ್ತು ತೆಂಗಳಿ ಪಾಂಡು ಇವರ ನಿರಂತರ ನೆರವಿನೊಡನೆ ಗರೂಡರು ‘ಕೀಚಕ ವಧೆ’ ಕನ್ನಡ ನಾಟಕವನ್ನು ರಚಿಸಿ ಮುಗಿಸಿದರು. ಕಲ್ಬುರ್ಗಿಯ ಶ್ರೀಮಂತರಾದ ದತ್ತೋಪಂತರು ಕನ್ನಡ ಯುವಕರ ಕಲಾ ಉತ್ಸಾಹಕ್ಕೆ ಉತ್ತೇಜನ ನೀಡಲು ಅವರ ಮಂಡಲಿಗೆ ಶ್ರುತಿ ಪೆಟ್ಟಿಗೆಯನ್ನು ಕೊಂಡು ಕೊಟ್ಟರು. ಅವರೇ ತಂಡಕ್ಕೆ ಮಾರ್ಗದರ್ಶಕರೂ ಆದರು. ಉತ್ಸಾಹ ದಿಂದ ನಾಟಕದ ಅಭ್ಯಾಸ ಆರಂಭವಾಯಿತು.

ಮಾಮೂಲಿಯ ‘ಕೀಚಕ ವಧೆ’ ಕಥೆಗೆ ಚತುರರಾದ ಗರೂಡರು ತಮ್ಮ ನಾಟಕದಲ್ಲಿ ಅಂದಿನ ರಾಜಕೀಯ ಮೆರುಗು ಕೊಟ್ಟರು. ಇಲ್ಲಿ ಕೀಚಕ ಸಾಮ್ರಾಜ್ಯ ಷಾಹಿ ಬ್ರಿಟಿಷರು; ಅವನ ಹಿಡಿತಕ್ಕೆ ಸಿಕ್ಕಿ ನರಳುವ ದ್ರೌಪದಿ ಭಾರತಮಾತೆ. ಈ ಕಲ್ಪನೆ ಅಂದಿನ ರಾಜಕೀಯ ಸನ್ನಿವೇಶಕ್ಕೆ ತುಂಬಾ ಸಮಂಜಸವಾಗಿತ್ತು. ನಾಟಕ ತುಂಬಾ ಸಾಂಕೇತಿಕವಾಗಿತ್ತು.

ಗಣೇಶ ಉತ್ಸವಕ್ಕೆಂದು ‘ಕೀಚಕ ವಧೆ’ ನಾಟಕವನ್ನು ಯಶಸ್ವಿಯಾಗಿ ಅಭಿನಯಿಸಲಾಯಿತು. ಗರೂಡರದೇ ನಾಯಕನ ಪಾತ್ರ. ನಡುರಾತ್ರಿಯ ನಂತರ ನಾಟಕ ಮುಗಿಯಿತು. ನಾಟಕ ಸರ್ವಜನಪ್ರಿಯವಾಯಿತು. ಎಲ್ಲರೂ ಮಂಡಲಿಯನ್ನೂ, ಗರೂಡರನ್ನು ಹಾಡಿ ಹೊಗಳಿದರು.

‘ಕೀಚಕ ವಧೆ’ಯ ಯಶಸ್ಸು, ತಮ್ಮ ಪಾತ್ರದ ಅಭಿನಯದ ಸಫಲತೆ ಗರೂಡ ಸದಾಶಿವರಾಯರಲ್ಲಿ ಮೊದಲಿಗಿಂತ ನೂರುಪಟ್ಟು ಉತ್ಸಾಹವನ್ನೂ, ಹೊಸ ಹುರುಪನ್ನೂ ಮೂಡಿಸಿದವು. ಹೆಚ್ಚು ಹೆಚ್ಚು ಕನ್ನಡ ನಾಟಕಗಳನ್ನು ಬರೆದು ಅಭಿನಯಿಸಬೇಕು, ಕನ್ನಡ ರಂಗ ಭೂಮಿಗೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿ ಕೊಂಡು ಬಿಡಬೇಕೆಂದು ಅವರು ನಿರ್ಧರಿಸಿದರು.

ಮಾರನೆ ವರ್ಷದ ಗಣೇಶೋತ್ಸವದಲ್ಲಿಯೂ ಗರೂಡರು ಇನ್ನೊಂದು ಕನ್ನಡ ನಾಟಕವನ್ನು ಅಭಿನಯಿಸಿದರು. ಅವರೇ ಬರೆದು, ನಿರ್ದೇಶಿಸಿ, ಮುಖ್ಯ ಪಾತ್ರವನ್ನು ವಹಿಸಿದ್ದ ‘ಮಾರ್ಕಂಡೇಯ’ ನಾಟಕವನ್ನು ಕಲ್ಬುರ್ಗಿಯ ಕಲಾರಸಿಕರೆಲ್ಲರೂ ಮೆಚ್ಚಿಕೊಂಡರು.

ಇದೇ ಸಮಯದಲ್ಲಿ ಗೆಳೆಯ ತಿತ್ತಣ್ಣನ ಸಲಹೆ ಯಂತೆ ಗರೂಡರೂ ಗಾಣಿಗಾಪುರದ ಶ್ರೀ ದತ್ತಾತ್ರೇಯರ ದರ್ಶನಕ್ಕೆ ತೆರಳಿದರು. ಯುಗಾದಿಯ ಅರುಣೋದಯಕ್ಕೆ ಶ್ರೀದತ್ತರ ದರ್ಶನ ಭಾಗ್ಯ ಲಭಿಸಿತು. ಗರೂಡರ ಚಿತ್ತಕ್ಕೆ ಹೊಸ ಚೈತನ್ಯದ ಲೇಪವಾಯಿತು. ಅಂದಿನಿಂದ ಸದಾ ಶಿವರಾಯರು ಶ್ರೀ ದತ್ತಾತ್ರೇಯನ ಆರಾಧಕರಾದರು. ಮುಂದೆ ತಾವು ಸ್ಥಾಪಿಸಿದ ನಾಟಕ ಕಂಪನಿಗೂ ಅವರು ತಮ್ಮ ಆರಾಧ್ಯ ದೇವತೆಯ ಹೆಸರನ್ನೇ ಇಟ್ಟರು.

ಸ್ವಂತ ನಾಟಕ ಸಂಸ್ಥೆ

ತಿತ್ತಣ್ಣ ಗರೂಡರ ಆತ್ಮೀಯ ಗೆಳೆಯ. ಕಾರಕೂನನಾಗಿದ್ದ ತಿತ್ತಣ್ಣನಿಗೆ ಕಲ್ಬುರ್ಗಿಯಿಂದ ಯಾದಗಿರಿಗೆ ವರ್ಗವಾಗಲು,ಗೆಳೆಯ ಗರೂಡರನ್ನೂ ಅಲ್ಲಿಗೇ ಕರೆಯಿಸಿಕೊಂಡ.

ಯಾದಗಿರಿಗೆ ಬಂದ ಗರೂಡ ಸದಾಶಿವರಾಯರು ಸ್ವಂತ ಸಂಸ್ಥೆಯನ್ನು ಸ್ಥಾಪಿಸಿ ರಂಗಭೂಮಿಯ ಸೇವೆಗೆ ಬದುಕನ್ನು ಮೀಸಲು ಮಾಡಲು ಸಂಕಲ್ಪ ಮಾಡಿದರು. ಇದಕ್ಕೆ ಗೆಳೆಯ ತಿತ್ತಣ್ಣನ ಸಂಪೂರ್ಣ ಸಹಕಾರ ಬೆಂಬಲ ದೊರಕಿತು. ಐದು ಮಂದಿ ಸ್ಥಾಪಕ ಸದಸ್ಯರುಗಳ ಸಹಕಾರದ ಆಧಾರದ ಮೇಲೆ ನಾಟಕ ಸಂಸ್ಥೆ ಪ್ರಾರಂಭವಾಯಿತು. ‘ಶಿವಸುತ ಪ್ರಾಸಾದಿತ ನಾಟಕ ಮಂಡಲಿ’ ಎಂದು ಸಂಸ್ಥೆಗೆ ನಾಮಕರಣ ಮಾಡಲಾಯಿತು.

ಯಾದಗಿರಿಯಲ್ಲಿ ಒಂದು ರೂಪಾಯಿ ಬಾಡಿಗೆಯ ಮೇಲೆ ಒಂದು ಮನೆಯನ್ನು ತೆಗೆದುಕೊಂಡರು. ಇದೇ ನಾಟಕ ಮಂಡಲಿಯ ಕಾರ್ಯಾಗಾರವಾಯಿತು. ತಿತ್ತಣ್ಣನ ಮಂಡಲಿಯ ಬಳಗಕ್ಕೆಲ್ಲಾ ಊಟದ ವ್ಯವಸ್ಥೆಯನ್ನೂ ಮಾಡಿದ್ದ.

ಕಂಪನಿಯನ್ನು ಸ್ಥಾಪಿಸಲು ನಿರ್ಧರಿಸಿದ ನಂತರ ಕೇವಲ ಮೂರೇ ತಿಂಗಳ ಅವಧಿಯಲ್ಲಿ ಗರೂಡರು ‘ಬಲಸಿಂಹ ತಾರಾ’,‘ಶಶಿಕಲಾ’, ‘ಶರಣಬಸವ’ ಎಂಬ ಮೂರು ನಾಟಕಗಳನ್ನು ರಚಿಸಿ ಕಂಪನಿಯ ಕಲಾವಿದರುಗಳಿಗೆ ಚೆನ್ನಾಗಿ ಅಭ್ಯಾಸ ಮಾಡಿಸಿದರು.

ಕಂಪನಿಯ ಸುದೈವ. ಪ್ರಥಮ ನಾಟಕದ ದಿನ ಸಂಜೆ ಐದು ಗಂಟೆಯೊಳಗಾಗಿ ಎಲ್ಲ ಟಿಕೇಟುಗಳು ಮುಂಗಡವಾಗಿಯೇ ಮಾರಾಟವಾಗಿ ಹೋಗಿ ಮುನ್ನೂರ ಐವತ್ತು ರೂಪಾಯಿಗಳ ಉತ್ಪತ್ತಿ ದೊರಕಿತು.

 

ಕಬೀರದಾಸ ಪಾತ್ರದಲ್ಲಿ


ಶ್ರೀಕೃಷ್ಣನ ಪಾತ್ರದಲ್ಲಿ

ಯಾದಗಿರಿಯ ಪುಟ್ಟ ರಂಗಮಂದಿರದ ತುಂಬಾ ಪ್ರೇಕ್ಷಕರು ಕಿಕ್ಕಿರಿದು ನೆರೆದಿದ್ದರು. ‘ಬಲಸಿಂಹ ತಾರಾ’ ಯಶಸ್ವಿ ಪ್ರಯೋಗಬಾಯಿತು. ಪ್ರಯೋಗವನ್ನೂ ನಾಟಕಕಾರರನ್ನೂ ಜನ ಶ್ಲಾಘಿಸಿದರು. ಈ ನಾಟಕ ಮತ್ತು ‘ಶರಣಬಸವ’ ನಾಟಕದಿಂದ ಗರೂಡರ ಹೆಸರು ಯಾದಗಿರಿಯ ಸುತ್ತಮುತ್ತಿನಲ್ಲೆಲ್ಲಾ ಜನಪ್ರಿಯವಾಯಿತು.

ಪ್ರವಾಸ, ಯಶಸ್ಸು

ಯಾದಗಿರಿಯಲ್ಲಿ ಶುಭ ಆರಂಭದ ಶುಭ ಶಕುನವನ್ನು ಕಂಡ ಗರೂಡರ ‘ಶಿವಸುತ ಪ್ರಾಸಾದಿತ ನಾಟಕ ಮಂಡಲಿ’ಯು ಮುಂದಕ್ಕೆ ನಾಟಕವಾಡಲು ರಾಯಚೂರಿಗೆ ಪ್ರಯಾಣ ಮಾಡಿತು. ಅಲ್ಲಿ ಗರೂಡರು ಎರಡು ತಿಂಗಳ ಕಾಲ ತಮ್ಮ ಮಂಡಲಿಯ ವಿವಿಧ ನಾಟಕಗಳನ್ನು ಅಭಿನಯಿಸಿ, ಜನಪ್ರಿಯತೆ ಗಳಿಸಿದರು.

ಇದೇ ಸುಮಾರಿನಲ್ಲಿ ವೀರಶೈವ ಮಹಾಸಭೆಯ ಅಧಿವೇಶನವು ಬಳ್ಳಾರಿಯಲ್ಲಿ ಸಮಾವೇಶಗೊಳ್ಳಲಿತ್ತು. ಗರೂಡರ ‘ಶರಣಬಸವ’ ನಾಟಕದ ಮಹತ್ವ ಮತ್ತು ಪ್ರೌಢಿಮೆಯನ್ನು ಕೇಳಿದ್ದ ವೀರಶೈವ ಮಹಾಸಭೆಯು ಅಧಿವೇಶನ ಕಾಲದಲ್ಲಿ ಬಳ್ಳಾರಿಗೆ ಬಂದು ನಾಟಕಗಳನ್ನು ಅಭಿನಯಿಸಬೇಕೆಂದು ಗರೂಡರಿಗೆ ವಿಶೇಷ ಆಹ್ವಾನವನ್ನು ನೀಡಿತು.

ಅದರಂತೆ ಅಲ್ಲಿ ‘ಶರಣಬಸವ’ ನಾಟಕವನ್ನು ಹೆಚ್ಚಿನ ಶ್ರದ್ಧೆಯಿಂದ ಅಭಿನಯಿಸಲಾಯಿತು. ಅಧಿವೇಶನದ ಪ್ರತಿನಿಧಿಗಳು, ಪಂಡಿತರು, ಪ್ರಾಜ್ಞರು, ಸಕಲರೂ ಗರೂಡರ ನಾಟಕವನ್ನು ಕೊಂಡಾಡಿದರು.

ಗರೂಡರ ನಾಟಕ ಮಂಡಲಿಯು ದುಧನಿಯಲ್ಲಿ ನಾಟಕಗಳನ್ನಾಡಲು ಬಂದಾಗ ಕನ್ನಡಿಗರಲ್ಲದೆ ಪರಪ್ರಾಂತದವರೂ ನೆರವಾದರು.

ಹಲವು ಸ್ಥಳಗಳಲ್ಲಿ ಯಶಸ್ವಿಯಾಗಿ ನಾಟಕಗಳನ್ನು ಅಭಿನಯಿಸಿ ಗರೂಡರು ಮಂಡಲಿಯೊಡನೆ ಗದಗ್‌ ಮತ್ತು ಬೆಟಗೇರಿಗೆ ಬಂದು ಮೊಕ್ಕಾಂ ಮಾಡಿದರು. ಅಲ್ಲಿ ಮೊದಲ ದಿನ ‘ಶಶಿಕಲಾ’ ನಾಟಕ. ಪ್ರಥಮ ದಿನ ನಾಟಕ ಮಂದಿರ ಕಿಕ್ಕಿರಿದು ತುಂಬಿತ್ತು. ನಾಟಕ ಆರಂಭವಾಯಿತು. ಪಾತ್ರ ವಹಿಸಿದ್ದ ಗರೂಡರು ರಂಗವನ್ನು ಪ್ರವೇಶಿಸಿ, ಅಭಿನಯಿಸುತ್ತಿದ್ದಂತೆಯೇ ಮುಂದಿನ ಸಾಲಿನಲ್ಲಿ ಕುಳಿತಿದ್ದ ಇಬ್ಬರನ್ನು ಕಂಡು ದಂಗು ಬಡಿದುಹೋದರು.

ಗರೂಡರ ತಂದೆ ಗುರುನಾಥ ಶಾಸ್ತ್ರಿಗಳು ಮತ್ತು ಸೋದರಮಾವ ಮುಂದಿನ ಸಾಲಿನಲ್ಲಿ ಕುಳಿತು ನಾಟಕ ವನ್ನು ನೋಡುತ್ತಿದ್ದರು.

ಗರೂಡರು ತಂದೆಯನ್ನು ನೋಡಿ ಆರೇಳು ವರ್ಷಗಳಾಗಿತ್ತು. ಅವರು ಮನಸ್ಸಿನಲ್ಲಿಯೇ ತಂದೆಗೆ ವಂದಿಸಿ ಅಭಿನಯವನ್ನು ಮುಂದುವರಿಸಿದರು.

ಮಗನ ಅಭಿನಯವನ್ನು ತಂದೆ ಮನಸಾರ ಮೆಚ್ಚಿದರು. ಅವರ ಎದೆಗೆ ಮಗನ ಕೀರ್ತಿ ಹಾಲೆರೆಯಿತು. ಮಗನ ನಾಟಕವನ್ನು ನೋಡಿ ಸಂತಸಪಟ್ಟರು. ಇದಾದ ಮೂರು ತಿಂಗಳ ಅನಂತರ ಗುರುನಾಥ ಶಾಸ್ತ್ರಿಗಳು ವಿಧಿವಶರಾಗಿಬಿಟ್ಟರು. ಗರೂಡರು ಶೋಕ ಸಾಗರದಲ್ಲಿ ಮುಳುಗಿದರು.

ಮದುವೆ

ನಾಟಕ ಕಂಪನಿಯನ್ನು ಕಟ್ಟಿಕೊಂಡು ಅದರ ಒಡೆಯರಾಗಿ, ನಟರಾಗಿ, ನಾಟಕಕಾರರಾಗಿ ಕೀರ್ತಿಶಾಲಿಗಳಾಗಿದ್ದರೂ ಇನ್ನೂ ಬ್ರಹ್ಮಚಾರಿಯಾಗಿಯೇ ಉಳಿದಿದ್ದ ಗರೂಡ ಸದಾಶಿವರಾಯರು ಗೃಹಸ್ಥಾಶ್ರಮವನ್ನು ಸ್ವೀಕರಿಸಿದರು.

ಅತ್ಯಂತ ಸಂಪ್ರದಾಯಸ್ಥ ಮನೆತನದ ಭೀಮಾಬಾಯಿ ಅವರು ಗರೂಡರ ಸೌಭಾಗ್ಯವತಿಯಾದರು. ಪತಿಯನ್ನು ನೆರಳಿನಂತೆ ಅನುಸರಿಸಿ ಆತನ ಶ್ರೇಯೋಭಿವೃದ್ಧಿಗೆ ಸಾಧಕರಾದರು.

ಕಷ್ಟಕಾರ್ಪಣ್ಯಗಳು

ಗರುಡರು ಮದುವೆಯಾಗುವುದಕ್ಕೆ ಸ್ವಲ್ಪ ಸಮಯದ ಮೊದಲು ಅವರಿಗೆ ನಾಟಕ ಸಂಸ್ಥೆ ನಿರ್ವಹಣೆಯ ಕೆಲವು ವಿದ್ಯಮಾನಗಳಿಂದಾಗಿ ಬೇಸರ ಬಂದಿತ್ತು.

ಒಂದು ಊರಿಗೆ ಬಂದು ಲೈಸೆನ್ಸ್ ಪಡೆಯುವಲ್ಲಿ, ಸಾಮಾನು ಸರಂಜಾಮುಗಳ ಸಾಗಾಣಿಕೆಯಲ್ಲಿ ಸರ್ಕಾರಿ ಕಛೇರಿ ಸಿಬ್ಬಂದಿಯೊಡನೆ, ಪೋಲೀಸರೊಡನೆ ಒಂದಲ್ಲ ಒಂದು ವಿಧವಾದ ಚಕಮಕಿ; ಬಿಟ್ಟಿ ಪಾಸುಗಳನ್ನು ಕೊಟ್ಟರೂ ಉಪದ್ರವ ತಪ್ಪಿದ್ದಲ್ಲ. ಪೋಲಿ-ಪುಡಾರಿಗಳ ಕಾಟವನ್ನು ಬೇರೆ ಎದುರಿಸಬೇಕು.

ಆಗಿನ ಕಾಲದಲ್ಲಿ ಹೆಂಗಸರು ರಂಗಭೂಮಿಯ ಮೇಲೆ ಬರುತ್ತಿರಲಿಲ್ಲ. ಯುವಕರೇ ಸ್ತ್ರೀ ಪಾತ್ರಗಳನ್ನು ಮಾಡುತ್ತಿದ್ದರು. ನೋಡುವುದಕ್ಕೆ ಚೆನ್ನಾಗಿದ್ದು, ಒಳ್ಳೆಯ ಕಂಠವಿದ್ದ ಯುವಕರನ್ನು ಹುಡುಕಬೇಕಾಗಿತ್ತು. ಅವರಿಗೆ ಅಭಿನಯವನ್ನೂ, ಹಾಡುವುದನ್ನೂ ಕಲಿಸಬೇಕಾಗಿತ್ತು. ಇಷ್ಟೆಲ್ಲ ಆದಮೇಲೆ ಬೇರೆ ಕಂಪನಿಯವರು ನಾಲ್ಕು ರೂಪಾಯಿ ಹೆಚ್ಚಿನ ಸಂಬಳ ಕೊಡುತ್ತೇವೆಂದರೆ ಅವರು ಹೇಳದೆ ಕೇಳದೆ ಹೊರಟುಹೋಗುತ್ತಿದ್ದರು. ಆಗ ಕಂಪನಿಗೆ ವಿಪರೀತ ತೊಂದರೆ. ಒಮ್ಮೆ ಹೀಗೆ ಒಬ್ಬಾತ ನಾಟಕ ಪ್ರಾರಂಭ ವಾಗುವ ಹೊತ್ತಿಗೆ ಮಾಯವಾಗಿ ಹೋಗಿ, ಆವತ್ತು ಮಾತ್ರ ವಲ್ಲದೆ ಅನೇಕ ದಿನ ನಾಟಕಗಳನ್ನು ನಿಲ್ಲಿಸಬೇಕಾಯಿತು. ಒಂದು ಬಾರಿ ಗರೂಡರು ಯಾರ ಜೊತೆಗೋ ಮಾತನಾಡುತ್ತ ಕುಳಿತಿದ್ದಾಗ ಎಮ್ಮೆಯ ಮೇಲೆ ಕುಳಿತು ಹೋಗುತ್ತಿದ್ದ ಹುಡುಗನೊಬ್ಬ ಹಾಡುತ್ತಿದ್ದುದು ಕೇಳಿಸಿತಂತೆ. ಅವನ ಕಂಠವನ್ನು ಕೇಳಿ ಅವರಿಗೆ ತುಂಬಾ ಸಂತೋಷವಾಯಿತು. ಅವನನ್ನು ಕರೆಸಿದರು. ಅವನಿಗೆ ಓದು-ಬರಹ ಏನೇನೂ ಬಾರದು. ಗರೂಡರು ಅವನಿಗೆ ಶಿಕ್ಷಣ ಕೊಟ್ಟು ರಂಗಭೂಮಿಗೆ ತಂದರು.

ಈ ಮಧ್ಯೆ ತಂದೆಯ ಸಾವು, ಎಷ್ಟು ದುಡಿದರೂ ಮಂಡಲಿಯವರ ಹೊಟ್ಟೆ-ಸಂಬಳಕ್ಕೆ ಸಾಕಾಗದಷ್ಟು ಸಂಪಾದನೆಯಿಂದ ನಿತ್ಯ ಸಮಸ್ಯೆ. ಸಾಲದ ಬಾಧೆ. ಇದೆಲ್ಲದರಿಂದ ಗರೂಡರಿಗೆ ನಾಟಕ ಕಂಪನಿಯ ಮೇಲೆ ಬೇಸರ ಬಂದುಬಿಟ್ಟಿತು. ಮಂಡಲಿಯ ಕಲಾವಿದರುಗಳನ್ನೆಲ್ಲಾ ಅವರವರ ಊರಿಗೆ ಕಳುಹಿಸಿಬಿಟ್ಟರು.

ಆದರೂ ಅವರು ಕೈಕಟ್ಟಿ ಕುಳಿತುಕೊಳ್ಳಲು ಆಗಲಿಲ್ಲ. ನಾಟಕ ಕಂಪನಿಯ ಸಂಬಂಧ ತಪ್ಪಲಿಲ್ಲ. ರಂಗಭೂಮಿಗೂ ಅವರಿಗೂ ಜನ್ಮ ಸಂಬಂಧವೇ ಇರಬೇಕು. ಅಭಿಮಾನದ ಒತ್ತಾಯದ ಆಹ್ವಾನದ ಮೇಲೆ ಗರೂಡರೂ ಉತ್ತರ ಕರ್ನಾಟಕದ ಪ್ರಸಿದ್ಧ ನಾಟಕ ಸಂಸ್ಥೆಯಾದ ‘ಕೊಪ್ಪಳ ನಾಟಕ ಮಂಡಲಿ’ಯಲ್ಲಿ ನಿರ್ದೇಶಕರಾಗಿ ನಿಲ್ಲಬೇಕಾಯಿತು.

ಗರೂಡರು ಮೂರು ವರ್ಷಗಳ ಕಾಲ ಕೊಪ್ಪಳ, ಹೊಂಬಳ ಮತ್ತು ಶಿರಹಟ್ಟಿ ನಾಟಕ ಮಂಡಲಿಗಳಲ್ಲಿ ನಾಟಕದ ಮಾಸ್ತರರಾಗಿ ಅರ್ಥಾತ್‌ ನಟರುಗಳ ದಿಗ್ದರ್ಶಕರಾಗಿ ಅನೇಕ ಮಂದಿ ಕಲಾವಿದರ ಅಭಿನಯ ವಿಕಾಸಕ್ಕೆ ಆಚಾರ್ಯರಾದರು. ಗರೂಡರ ಗರಡಿಯಲ್ಲಿ ಸಾಮು ಮಾಡಿ ಅನೇಕರು ಪ್ರಬುದ್ಧ ಕಲಾವಿದರಾದರು; ಪ್ರಸಿದ್ಧ ನಟರಾದರು.

(ಖ್ಯಾತ ನಟರುಗಳಾದ ಲಕ್ಷ್ಮೀನಾರಾಯಣ ಪಾವಂಜೆ, ಹುಲಿಮನೆ ಸೀತಾರಾಮಶಾಸ್ತ್ರೀ, ನೀಲಕಂಠಪ್ಪ ಹಮ್ಮಿಗಿ, ಶಾಂತಕುಮಾರ್, ನೀಲಕಂಠಪ್ಪ ಬುವಾ ಗಾಡಗೋಳಿ, ಕೆ. ಅಚ್ಯುತರಾವ್‌ ಮೊದಲಿಗರೆಲ್ಲಾ ಗರೂಡರ ಅಭಿನಯ ಗರಡಿಯಲ್ಲಿ ತರಬೇತಿ ಹೊಂದಿದವರು ಎಂಬುದು ಇಲ್ಲಿ ಗಮನಾರ್ಹ).

ಶ್ರೀ ದತ್ತಾತ್ರೇಯ ನಾಟಕ ಮಂಡಲಿ

ಹೆರವರ ಮಂಡಲಿಗಳಲ್ಲಿ ಮಾಸ್ತರರಾಗಿ ನಿಲ್ಲುವ ಯೋಗ ಗರುಡರಿಗೆ ಮೂರು ವರ್ಷದ ಮೇಲೆ ಇರಲಿಲ್ಲ. ಸ್ವಂತ ಕಂಪನಿಯ ಮಾಲೀಕರಾಗಿ ಅವರು ರಂಗಭೂಮಿಗೆ ಇನ್ನು ಮಹತ್ವದ ಕಾಣಿಕೆಗಳನ್ನು ಸಲ್ಲಿಸಬೇಕಾಗಿತ್ತು.

ಅದೊಂದು ದಿನ ಗರೂಡರು ಬೆಟಗೇರಿಯ ತಮ್ಮ ಮನೆಯಲ್ಲಿ ಆರಾಮ ಕುರ್ಚಿಯಲ್ಲಿ ಕುಳಿತು ಏನೋ ಚಿಂತನೆ ನಡೆಸಿದ್ದರು. ಆಗ ಯಾರೋ ಹತ್ತಾರು ಮಂದಿ ಬಂದು ಅವರ ಮನೆಯ ಹೊಸ್ತಿಲ ಮುಂದೆ ‘ಧರಣಿ’ ಕುಳಿತುಬಿಟ್ಟರು. ಗರೂಡರು ಎದ್ದು ಬಂದು ನೋಡಿದರು. ಅವರೆಲ್ಲರೂ ಪರಿಚಿತ ಕಲಾವಿದರು. ಹೊಂಬಳದ ನಾಟಕ ಮಂಡಲಿಯ ನಟವರ್ಗದವರು. ಗರೂಡರು ಈ ಕಂಪನಿಯಲ್ಲಿ ಸ್ವಲ್ಪಕಾಲ ಮಾಸ್ತರರಾಗಿದ್ದರು. ವಿಷಯವೇನೆಂದು ಅವರನ್ನು ವಿಚಾರಿಸಿದರು. ಆ ನಾಟಕ ಮಂಡಲಿ ನಿಂತು ಹೋದುದರಿಂದ ಅವರೆಲ್ಲರೂ ಅನಾಥರಾಗಿ ಆಶ್ರಯಕ್ಕಾಗಿ ಗುರುಗಳಾದ ಗರೂಡರನ್ನು ಹುಡುಕಿ ಕೊಂಡು ಬಂದು ಕುಳಿತಿದ್ದರು.ಗರೂಡರು ಅವಾಕ್ಕಾಗಿ ನಿಂತುಬಿಟ್ಟರು. ಏನು ಮಾಡಬೇಕೆಂದು ಅವರಿಗೆ ಒಂದೆರಡು ನಿಮಿಷ ಏನೂ ಹೊಳೆಯಲೇ ಇಲ್ಲ.

‘ಏನಾದರೂ ಮಾಡಿ, ಇವರಿಗೆ ಆಶ್ರಯ ಕೊಡು. ಪುನಃ ನಾಟಕ ಕಂಪನಿಯನ್ನು ಪ್ರಾರಂಭ ಮಾಡು.’

-ಎಂದು ಅವರ ಅಂತರಾತ್ಮ ಸಂದೇಶ ನೀಡಿದಂತಾಯಿತು. ಬಂದಿದ್ದ ಕಲಾವಿದರಿಗೆ ಅಭಯ ನೀಡಿದರು. ಅವರ ಊಟ-ವಸತಿಗೆ ವ್ಯವಸ್ಥೆ ಮಾಡಿದರು.

ಹೊಸ ಕಂಪನಿಯನ್ನು ಸ್ಥಾಪಿಸಬೇಕೆಂದು ತೀರ್ಮಾನವಾಯಿತು. ಬಂಡವಾಳದ ಹಣಕ್ಕಾಗಿ ಹೆಂಡತಿಯ ಮೈಮೇಲಿದ್ದ ಚಿನ್ನದ ಆಭರಣಗಳನ್ನೆಲ್ಲಾ ಗಿರವಿ ಇಟ್ಟು ದುಡ್ಡು ಸೇರಿಸಿದರು. ಮಾರಾಟಕ್ಕೆ ಬಂದಿದ್ದ ಕೊಣ್ಣೂರು ಕಂಪನಿಯ ರಂಗಪರಿಕರಗಳನ್ನು ಕೊಂಡರು. ನಾಟಕಗಳ ಅಭ್ಯಾಸವೂ ಆರಂಭವಾಯಿತು.

೧೯೧೯ನೆಯ ನವೆಂಬರ್ ೧೬ ರಂದು ‘ಗದಗ ಶ್ರೀ ದತ್ತಾತ್ರೇಯ ನಾಟಕ ಮಂಡಲಿ’ ಉದಯವಾಯಿತು; ಗರೂಡರ ಸ್ವಂತ ಕಂಪನಿಯು ಗದಗಿನಲ್ಲಿಯೇ ನಾಲ್ಕಾರು ನಾಟಕಗಳನ್ನು ಅಭಿನಯಿಸಿ ಸ್ವಲ್ಪ ಹಣವನ್ನು ಶೇಖರಿಸಿಕೊಂಡಿತು.

ಮೈಸೂರಿನ ಕಡೆಗೆ ಹೋಗಿ ಅಲ್ಲೆಲ್ಲ ನಾಟಕಗಳನ್ನು ಪ್ರದರ್ಶಿಸಿ ಯಶಸ್ಸು ಗಳಿಸಬೇಕೆಂಬುದು ಗರೂಡರ ಬಹು ದಿನಗಳ ಬಯಕೆಯಾಗಿತ್ತು. ಅವರು ಈ ಬಾರಿ ಮನಸ್ಸು ಮಾಡಿ ಆ ಕಡೆಗೆ ಹೊರಟರು. ಅನೇಕ ಸ್ಥಳಗಳಲ್ಲಿ ಯಶಸ್ವಿಯಾಗಿ ನಾಟಕಗಳನ್ನು ಪ್ರದರ್ಶಿಸಿ ಬೆಂಗಳೂರಿಗೆ ಬಂದರು.

 

‘ವಿಷಮ ವಿವಾಹ’ ನಾಟಕದಲ್ಲಿ ಗರೂಡರು ಅಶೋಕನಾಗಿ

ಆಗ ಬೆಂಗಳೂರಿನಲ್ಲಿ ಮೂರು ನಾಟಕ ಕಂಪನಿಗಳು ನಾಟಕಗಳನ್ನು ಅಭಿನಯಿಸುತ್ತಿದ್ದವು. ಗರೂಡರದು ನಾಲ್ಕನೆಯ ಕಂಪನಿ.

ಆದರೂ ಗರೂಡರು ತಮ್ಮ ಪ್ರತಿಭೆಯ ಮೇಲೆ ಆತ್ಮ ವಿಶ್ವಾಸವನ್ನಿರಿಸಿಕೊಂಡು ಧೈರ್ಯವಾಗಿ ಬೆಂಗಳೂರಿಗೆ ನಾಟಕ ಕಂಪನಿಯನ್ನು ತಂದಿದ್ದರು.

ಗರೂಡರ ಆತ್ಮವಿಶ್ವಾಸ, ಧೈರ್ಯ ಅವರನ್ನು ಕೈಬಿಡಲಿಲ್ಲ. ಬೆಂಗಳೂರು ಮೊಕ್ಕಾಂ ಯಶಸ್ವಿಯಾಯಿತು.

ಗರೂಡರ ‘ವಿಷಮ ವಿವಾಹ’ ನಾಟಕ ಬೆಂಗಳೂರಿನ ರಸಿಕರಿಗೆ ಬಹುವಾಗಿ ರುಚಿಸಿತು. ಗರೂಡರ ಪಾತ್ರವಂತೂ ನಗರದಲ್ಲಿ ಮನೆಮಾತಾಯಿತು.

ಬೆಂಗಳೂರಿನಲ್ಲಿ ನಾಟಕಗಳನ್ನಾಡಿ ಜಯಿಸಿಕೊಂಡರೆ ದೊಡ್ಡ ಪರೀಕ್ಷೆಯೊಂದರಲ್ಲಿ ಉತ್ತೀರ್ಣವಾದಂತೆ ಎಂಬ ಭಾವನೆ ವೃತ್ತಿನಾಟಕ ಮಂಡಲಿಗಳಲ್ಲಿ ಮೊದಲಿನಿಂದಲೂ ಬೇರೂರಿ ಬಂದಿದೆ. ಅವರು ಬೆಂಗಳೂರಿನಲ್ಲಿ ಯಶಸ್ವಿಯಾಗಿ ಕಠಿಣವಾದ ಪರೀಕ್ಷೆಯಲ್ಲಿ ಹಾದು ಬಂದು ಪುಟವಿಟ್ಟ ಚಿನ್ನದಂತಾದರು.

ಬೆಂಗಳೂರಿನಿಂದ ಹೊರಟ ಕಂಪನಿಯು ನಾನಾ ಕಡೆಗಳಲ್ಲಿ ಮೊಕ್ಕಾಂ ಮಾಡಿ ಉಡುಪಿಗೆ ಬಂದಿತು.

ದೇಶಭಕ್ತ

ಆಗ ಭಾರತ ಸ್ವಾತಂತ್ಯ್ರದ ಆಂದೋಳನದ ಕಾಲ. ರಾಷ್ಟ್ರೀಯ ಭಾವನೆ ತುಂಬಿ ತುಳುಕಾಡುತ್ತಿದ್ದ ಕಾಲ. ರಾಷ್ಟ್ರ ಸ್ವಾತಂತ್ಯ್ರಕ್ಕಾಗಿ ಜನಜಾಗೃತಿಯಾಗಿ ಎಚ್ಚರಗೊಳ್ಳುತ್ತಿದ್ದ ಸಮಯವದು.

ಗರುಡರು ಮೊದಲಿನಿಂದಲೂ ಉತ್ಕಟ ರಾಷ್ಟ್ರಪ್ರೇಮಿಗಳು. ಭಾರತದ ಬಂಧ ವಿಮೋಚನೆಗಾಗಿ ಅವರಿಗೆ ಅಪಾರ ಆಸ್ಥೆ. ಅವರ ಕಾಯಕ ಕ್ಷೇತ್ರ ರಂಗಭೂಮಿಯಾಗಿದ್ದುದರಿಂದ ಗರೂಡರು ತಮ್ಮ ನಾಟಕಗಳ ಮೂಲಕವೇ ಸ್ವಾತಂತ್ಯ್ರ ಚಳವಳಿಯನ್ನು ನಡೆಸಿದರು. ದೇಶಪ್ರೇಮವನ್ನು ಪ್ರಸಾರ ಮಾಡಿದರು. ಜನಜಾಗೃತಿಗಾಗಿ ಶ್ರಮಿಸಿದರು.

ಸ್ವಾತಂತ್ಯ್ರ ಆಂದೋಳನದ ಹಿನ್ನೆಲೆಯಲ್ಲಿ ಗರೂಡರು ‘ಮಾಯಾಬಜಾರ್’ ಎಂಬ ಹೊಸ ನಾಟಕವೊಂದನ್ನು ಬರೆದು ಅಭಿನಯಿಸಲಾರಂಭಿಸಿದರು. ನಾಟಕದ ಕಥಾವಸ್ತು ಪೌರಾಣಿಕವಾದರೂ ಅದರ ನಿರೂಪಣೆ ತಂತ್ರದಲ್ಲಿ ರಾಷ್ಟ್ರ ಭಾವನೆಯನ್ನು ಪ್ರಚೋದಿಸಲಾಗಿತ್ತು. ವಿದೇಶಿ ವಸ್ತ್ರಗಳನ್ನು ನಿಷೇಧಿಸುವ ತತ್ತ್ವವನ್ನು ನಾಟಕದಲ್ಲಿ ಪ್ರತಿಪಾದಿಸಲಾಗಿತ್ತು.

ಒಮ್ಮೆ ಹಿರಿಯ ಕಾಂಗ್ರೆಸ್‌ ನಾಯಕರೊಬ್ಬರು ಗರೂಡರ ‘ಮಾಯಾಬಜಾರ್’ ನಾಟಕವನ್ನು ನೋಡಿ, “ದೇಶಹಿತದ ಬಗ್ಗೆ ನೂರು ಭಾಷಣಗಳು ಮಾಡುವ ಕಾರ್ಯವನ್ನು ಸದಾಶಿವರಾಯರ ಈ ಒಂದು ನಾಟಕ ಮಾಡುತ್ತಿದೆ” ಎಂದು ಅಭಿಪ್ರಾಯಪಟ್ಟು ಕಂಪನಿಯ ಈ ಹಿರಿಯ ಆದರ್ಶವನ್ನು ಕೊಂಡಾಡಿದರು.

ಉಡುಪಿಯ ಕ್ಯಾಂಪಿನಲ್ಲಿ ಗರೂಡರು ಖಾದಿವ್ರತವನ್ನು ಕೈಗೊಂಡರು. ಅವರು ಖಾದಿ ವಸ್ತ್ರಗಳನ್ನು ಮಾತ್ರ ತೊಡಲಾರಂಭಿಸಿದರು. ಅವರು ಬದುಕಿರುವವರೆಗೂ ಖಾದಿ ಬಟ್ಟೆಗಳನ್ನೇ ಹಾಕಿಕೊಳ್ಳುತ್ತಿದ್ದರು. ಅವರ ನಾಟಕ ಮಂಡಲಿಯ ಕಲಾವಿದರು ಕೂಡಾ ಖಾದಿ ವಸ್ತ್ರಗಳನ್ನೇ ತೊಡಲಾರಂಭಿಸಿದರು.

ರಾಷ್ಟ್ರೀಯ ಭಾವನೆ ಪ್ರಚೋದನೆಯ ಹಿನ್ನೆಲೆಯಲ್ಲಿ ಗರುಡರು ಬರೆದು ಇನ್ನೊಂದು ನಾಟಕವೆಂದರೆ ‘ಪಾದುಕಾ ಪಟ್ಟಾಭಿಷೇಕ’. ಇದು ಅವರ ಅದ್ಭುತ ಸೃಷ್ಟಿ. ಈ ನಾಟಕದಲ್ಲಿ ಗರುಡರು ವಹಿಸುತ್ತಿದ್ದ ದಶರಥನ ಪಾತ್ರವಂತೂ ಚಿರಸ್ಮರಣೀಯ. ಅವರು ತಮ್ಮ ಅಭಿನಯ ಕಲೆಯ ತಪಸ್ಸನ್ನೆಲ್ಲಾ ಧಾರೆ ಎರೆದು ಈ ಪಾತ್ರವನ್ನು ಅಭಿನಯಿಸುತ್ತಿದ್ದರು. ರಾಮಾಯಣದ ದಶರಥನೇ ಜೀವಂತವಾಗಿ ರಂಗಭೂಮಿಗೆ ಬಂದು ಹೋಗುತ್ತಿದ್ದ -ಅಷ್ಟು ನೈಜವಾಗಿರುತ್ತಿತ್ತು ಗರೂಡರ ಈ ಪಾತ್ರ.

‘ಪಾದುಕಾ ಪಟ್ಟಾಭಿಷೇಕ’ವು ರಾಮಾಯಣದ ಕಥಾ ಭಾಗವಾದರೂ ಅದಕ್ಕೆ ಗರೂಡರು ಭಾರತ ಸ್ವಾತಂತ್ಯ್ರ ಸಂಗ್ರಾಮದ ಹಿನ್ನೆಲೆಯ ರಂಗು ಕೊಟ್ಟಿದ್ದರು. ಕೈಕೇಯಿಯ ದುರಾಕ್ರಮಣದ ಕುತ್ಸಿತ ಪ್ರವೃತ್ತಿಯನ್ನು ಸಾಮ್ರಾಜ್ಯಶಾಹಿ ಬ್ರಿಟಿಷರ ಭಾರತ ಆಕ್ರಮಣಕ್ಕೆ ಹೋಲಿಸಿ ಮಾರ್ಮಿಕವಾದ ಸಂಭಾಷಣೆ ಇತ್ತು. ಈ ನಾಟಕ ಜನತೆಯ ಮನಸ್ಸನ್ನು ಸೆರೆ ಹಿಡಿದಿತ್ತು, ಸೂರೆ ಮಾಡಿತ್ತು.

‘ವಿಷಮ ವಿವಾಹ’, ‘ಪಾದುಕಮಾ ಪಟ್ಟಾಭಿಷೇಕ’ ಗಳಂತೆಯೇ ಹೆಚ್ಚು ಹೆಚ್ಚು ಯಶಸ್ಸು ಗಳಿಸಿದ ಗರೂಡರ ಇನ್ನೊಂದು ನಾಟಕವೆಂದರೆ ‘ಎಚ್ಚಮನಾಯಕ’. ಇದು ಗಂಡು ಭಾಷೆಯ ಧೀಮಂತ ಚಾರಿತ್ರಿಕ ನಾಟಕ. ಇಲ್ಲಿ ವೀರರಸವೇ ಪ್ರಧಾನ. ಈ ನಾಟಕದ ನಾಯಕನ ಪಾತ್ರವನ್ನು ಗರೂಡ ಸದಾಶಿವರಾಯರು ಧೀರೋದಾತ್ತವಾಗಿ ಅಭಿನಯಿಸುತ್ತಿದ್ದರು. ಪ್ರೇಕ್ಷಕರು ಪುಳಕಿತರಾಗುತ್ತಿದ್ದರು.

ಬಹುಮುಖ ಪ್ರತಿಭೆ ವ್ಯಕ್ತಿತ್ವ

ಸಂಪ್ರದಾಯಸ್ಥ ಮನೆತನದಲ್ಲಿ ಜನಿಸಿ, ಶ್ರೋತ್ರೀಯ ವಾತಾವರಣದಲ್ಲಿ ಬೆಳೆದು, ಶುದ್ಧ ಹಿಂದು ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದ, ಸಂಸ್ಕಾರವಂತರಾದ ಗರೂಡ ಸದಾಶಿವರಾಯರು ಶಿಸ್ತಿನ ಸಿಪಾಯಿಯ ಜೀವನ ನಡೆಸಿದರು. ಅವರದು ಸಭ್ಯ, ಸಂಭಾವಿತ ಬದುಕು.

ಮರೆ, ಮೋಸ, ಕೊಂಕು ಇವುಗಳ ಪರಿಚಯವೇ ಇರದಿದ್ದ ಅವರು ಪ್ರಾಮಾಣಿಕ ಜೀವನ ನಡೆಸಿದ ಕನ್ನಡ ನಾಡಿನ ಕಣ್ಮಣಿ; ಸತ್ಪ್ರಜೆ.

ರಂಗಭೂಮಿಗೂ, ಗರೂಡರಿಗೂ ಜನ್ಮ-ಜನ್ಮದ ಮೈತ್ರಿ. ವಿದ್ಯಾರ್ಥಿದೆಸೆಯಲ್ಲಿಯೇ ರಂಗಭೂಮಿ ಅವರನ್ನು ಆಹ್ವಾನಿಸಿ, ಸ್ವೀಕರಿಸಿ, ‘ರಂಗದೀಕ್ಷೆ’ಯನ್ನು ಕಟ್ಟಿಬಿಟ್ಟಿತು. ಅವರು ರಂಗಭೂಮಿಯ ಮಹಾಯೋಗಿಯಾಗಿ ಸಾಧನೆ ನಡೆಸಿದರು. ಸಿದ್ಧಿ ಪಡೆದರು.

ನಟರಾಗಿ, ನಾಟಕಕಾರರಾಗಿ, ನಾಟಕ ಸಂಸ್ಥೆಯ ಒಡೆಯರಾಗಿ ಗರೂಡರು ಕನ್ನಡ ರಂಗಭೂಮಿಗೆ ಸಲ್ಲಿಸಿದ ಸೇವೆ ಅಪಾರ.

ನಾಟಕಕ್ಕೆ ಹೊಸ ರೂಪ

ಆ ಕಾಲದ ನಾಟಕಗಳಲ್ಲಿ ಸಂಗೀತವೇ ಪ್ರಧಾನವಾಗಿತ್ತು. ಎಷ್ಟೋ ವೇಳೆ ಸಂಗೀತವೇ ನಾಟಕವನ್ನು ಕೊಚ್ಚಿಕೊಂಡು ಹೋಗಿಬಿಡುತ್ತಿತ್ತು. ಪಾತ್ರ ವಹಿಸಿದವರಲ್ಲಿ ಹಾಡುವ ಸ್ಪರ್ಧೆ ಬಂದುಬಿಟ್ಟರೆ ಗಂಟೆಗಟ್ಟಲೆ ಸ್ಪರ್ಧೆಯೇ ನಡೆದು ನಾಟಕ ಹಿಂದುಳಿದು ಬಿಡುತ್ತಿತ್ತು. ಮುಖ್ಯ ಪಾತ್ರಗಳು ಎದ್ದರೆ ಹಾಡು, ಕುಳಿತರೆ ಹಾಡು, ಬಿದ್ದರೆ ಹಾಡು. ಅಲ್ಲದೆ ನಾಟಕದಲ್ಲಿ ಹಾಸ್ಯವಿರಬೇಕೆಂಧು ಎಲ್ಲ ಬಗೆಯ ಹಾಸ್ಯವನ್ನೂ ತುರುಕಿ ಬಿಡುತ್ತಿದ್ದರು. ಗಂಭೀರವಾದ ನಾಟಕದಲ್ಲಿಯೂ ಹಾಸ್ಯ ಕಾಲಿಡಬಾರದು ಎಂದಿಲ್ಲ. ಆದರೆ ಹಾಸ್ಯ ಒಳ್ಳೆಯ ಅಭಿರುಚಿಯದಾಗಿರಬೇಕು, ನಾಟಕದ ಮುಖ್ಯ ಉದ್ದೇಶಕ್ಕೆ ಪೋಷಕವಾಗಿರಬೇಕು. ಅಲ್ಲದೆ ಆಗಿನ ಕಾಲದಲ್ಲಿ ಪಾತ್ರ ವಹಿಸುವವರ ಋಷಿ ಬಂದ ಹಾಗೆ ಉಡುಪು. ಸೀತೆ-ಶಕುಂತಳೆಯರ ಪಾತ್ರ ವಹಿಸುವವರಿಗೆ ಆಸೆಯಾದರೆ ಕೈಗಡಿಯಾರಗಳನ್ನು ಕಟ್ಟಿಕೊಂಡು ಬರಬಹುದು. ದಶರಥನೂ ವಿಶ್ವಾಮಿತ್ರರೂ ಕಪ್ಪು ಕನ್ನಡಕ ಧರಿಸಬಹುದು.

ಗರೂಡರು ಇದೆಲ್ಲವನ್ನೂ ಬದಲಾಯಿಸಿದರು. ನಾಟಕದಿಂದ ಮನಸ್ಸಿಗೆ ಆನಂದವಾಗಬೇಕು. ಆದರೆ ಆ ಆನಂದ ನಾಟಕದ ಯೋಗ್ಯತೆ, ಅಭಿನಯಿಸುವವರ ಸಾಮರ್ಥ್ಯ ಇವುಗಳಿಂದ ಆಗಬೇಕು. ಎಂದರೆ ನಾಟಕ ಎಲ್ಲ ರೀತಿಯಲ್ಲಿ ಕಲಾತ್ಮಕವಾಗಿರಬೇಕು. ಸಂಗೀತ, ಹಾಸ್ಯ, ಉಡುಪು, ದೀಪ, ಭಾಷೆ – ಎಲ್ಲ ನಾಟಕದ ಉದ್ದೇಶಕ್ಕೆ, ಗಾಂಭೀರ್ಯಕ್ಕೆ ಪೋಷಕವಾಗಬೇಕು; ಅದರ ಕಲೆಗೆ ನೆರವಾಗಬೇಕು. ನಟರು ತಮಗೆ ಮನಸ್ಸು ಬಂದಂತೆ, ಮನಸ್ಸು ಬಂದಷ್ಟು ಹೊತ್ತು ಹಾಡುವುದು ಸರಿಯಲ್ಲ; ಹಾಸ್ಯದ ಹೊಳೆ ಹರಿಸುವುದೂ ಸರಿಯಲ್ಲ; ಋಷಿ ಬಂದ ಹಾಗೆ ಉಡುಪು, ಒಡವೆಗಳನ್ನು ಧರಿಸುವುದೂ ಸರಿಯಲ್ಲ. ಇಡೀ ನಾಟಕವನ್ನು ಕಲೆಯ ಆಕೃತಿಯನ್ನಾಗಿ ಕಂಡು ನಿರ್ದೇಶಕರು ನಿರ್ದೇಶಿಸಬೇಕು. ನಟರೂ ನಾಟಕದ ಕೇಂದ್ರ ಉದ್ದೇಶವನ್ನು ಅರ್ಥ ಮಾಡಿಕೊಂಡು, ತಾವು ಅಭಿನಯಿಸುವ ಪಾತ್ರದ ಜೀವಾಳವನ್ನು ಸ್ವಭಾವವನ್ನು ಅರ್ಥ ಮಾಡಿಕೊಂಡು ಅಭಿನಯಿಸಬೇಕು. ಹೀಗೆ ನಾಟಕದ ಅಭಿನಯಕ್ಕೆ ಕಲೆಯ ಸ್ವರೂಪವನ್ನು ಅರ್ಥವನ್ನೂ ಗಾಂಭೀರ್ಯವನ್ನೂ ತಂದುಕೊಟ್ಟರು ಗರೂಡರು.

ಈಗಲೂ ನಮ್ಮ ದೇಶದಲ್ಲಿ ಓದುಬರಹ ಬರುವವರ ಸಂಖ್ಯೆ ಬಹು ಕಡಿಮೆ. ಗರೂಡರು ನಾಟಕಗಳನ್ನು ಅಭಿನಯಿಸುತ್ತಿದ್ದ ಕಾಲದಲ್ಲಿ ನೂರ ಮಂದಿಯಲ್ಲಿ ಹತ್ತು ಮಂದಿಗೆ ಅಕ್ಷರ ಜ್ಞಾನ ಇತ್ತು. ಈ ಹತ್ತು ಜನರೂ ಶಾಲೆಗಳಿಗೆ ಹೋಗಿ ಹೆಚ್ಚಿನ ವಿದ್ಯಾಭ್ಯಾಸ ಪಡೆದವರಲ್ಲ. ಸ್ವಲ್ಪ ಓದಿ ಬರೆಯಲು ಬಲ್ಲವರು, ಅಷ್ಟೆ. ಆ ಕಾಲದಲ್ಲಿ ಕೆಲವೇ ಪತ್ರಿಕೆಗಳಿದ್ದವು, ಅವೂ ಈಗಿನಂತೆ ಹಳ್ಳಿಹಳ್ಳಿಗೆ ಹೋಗಲು ಸೌಲಭ್ಯವಿರಲಿಲ್ಲ.

ಆಗ ಭಾರತಕ್ಕೆ ಸ್ವಾತಂತ್ಯ್ರವಿರಲಿಲ್ಲ. ಇಂಗ್ಲಿಷರ ಆಡಳಿತ ಇಲ್ಲಿ. ನಾವೂ ಇಂಗ್ಲೀಷರಿಗೆ ಸಮ, ಸ್ವಾತಂತ್ಯ್ರ ನಮ್ಮ ಆಜನ್ಮಸಿದ್ಧ ಹಕ್ಕು, ಅದಕ್ಕಾಗಿ ಹೋರಾಡಬೇಕು-ಇಂತಹ ಯೋಚನೆಗಳನ್ನು ಹರಡಲು ಪತ್ರಿಕೆಗಳ ನೆರವಷ್ಟೇ ಸಾಲದಾಗಿತ್ತು, ಏಕೆಂದರೆ ನೂರಕ್ಕೆ ತೊಂಬತ್ತು ಮಂದಿಗೆ ಓದು ಬಾರದಿದ್ದಾಗ, ಹಳ್ಳಿಗಳಲ್ಲಿ ವಾಸಿಸುತ್ತಿದ್ದಾಗ ಪತ್ರಿಕೆಗಳನ್ನು ಓದುತ್ತಿದ್ದವರು ಎಷ್ಟು ಮಂದಿ?

ಆದರೆ ಒಂದೊಂದು ನಾಟಕವನ್ನು ನೋಡುವವರು ನೂರಾರು ಮಂದಿ. ನಾಟಕದಲ್ಲಿ ಹೇಳಿದುದು ಸುಲಭವಾಗಿ ನೂರಾರು ಮಂದಿಯ ಮನಸ್ಸನ್ನು ಹೊಕ್ಕುತ್ತದೆ. ಆ ಕಾಲದಲ್ಲಿ ಬ್ರಿಟಿಷ್‌ ಸರ್ಕಾರದ ವಿರುದ್ಧ ಒಂದು ಮಾತನ್ನು ಹೇಳುವುದೂ ಅಪಾಯದ ಸಂಗತಿ. ಆದರೂ ಗರೂಡರು ತಮ್ಮ ನಾಟಕಗಳಲ್ಲಿ ರಾಷ್ಟ್ರೀಯ ಭಾವನೆಗಳನ್ನು ಹೆಣೆದರು. ಈ ದೇಶದ ಜನಕ್ಕೆ ಚಿರಪರಿಚಿತವಾಗಿದ್ದ ಪೌರಾಣಿಕ ಕಥೆಗಳಲ್ಲಿ – ಕೀಚಕನ ಕೈಯಲ್ಲಿ ನೊಂದ ದ್ರೌಪದಿಯ ಕಥೆಯಲ್ಲಿ – ಕಂಸನ ದಬ್ಬಾಳಿಕೆಗೆ ಒಳಗಾದ ಮಧುರೆಯ ಕಥೆಯಲ್ಲಿ – ಭಾರತದ ಸ್ಥಿತಿಯನ್ನು ಚಿತ್ರಿಸಿದರು. ಇದರಿಂದ ಅವರು ತೊಂದರೆಗೆ ಒಳಗಾದದ್ದೂ ಉಂಟು. ನಾಟಕ ಆಡಲು ಸರ್ಕಾರ ಅಪ್ಪಣೆ ಕೊಡುತ್ತಿರಲಿಲ್ಲ. ಕೊಟ್ಟ ಅಪ್ಪಣೆಯನ್ನು ಹಿಂದಕ್ಕೆ ತೆಗೆದುಕೊಂಡದ್ದೂ ಉಂಟು.

ಒಳ್ಳೆಯ ಕಥಾವಸ್ತು, ಸಾಹಿತ್ಯ ಶಕ್ತಿಯ ನೆರವಿನಿಂದ ಉತ್ತಮ ನಾಟಕವಾಗಿ ಗುರಿ ಸಾಧಿಸಬಹುದೆಂಬುದನ್ನು ತಾವೇ ಬರೆದ ನಾಟಕಗಳಿಂದ ತೋರಿಸಿಕೊಟ್ಟರು. ‘ಶ್ರೀ ರಾಮಪಾದುಕಾ ಪಟ್ಟಾಭಿಷೇಕ’, ‘ಹೋಳಿ ಹುಣ್ಣಿಮೆ’, ‘ಎತ್ತಿದ ಕೈ’, ‘ದೇವರ ಮಗಳು’, ‘ತಂಗಿತಾಳಿ’, ‘ಹಣ್ಣು ಮಾರುವ ಹೆಣ್ಣು’, ‘ಸರ್ವಮಂಗಳಾ’,‘ಎಚ್ಚಮನಾಯಕ’, ‘ಮಾಯಾಬಜಾರ್’ ಮೊದಲಾದ ಹಲವು ನಾಟಕಗಳನ್ನು ಅವರು ಬರೆದರು. ಗರೂಡರು ನಾಟಕಗಲೂ ಸೇರಿದಂತೆ ಒಟ್ಟು ಐವತ್ತು ಕೃತಿಗಳನ್ನು ರಚಿಸಿದರೆಂದು ಕಾಣುತ್ತದೆ.

ಶ್ರೇಷ್ಠ ನಟ

ಗರೂಡ ಸದಾಶಿವರಾಯರು ನಾಟಕರಾರರಾಗಿದ್ದು ದರ ಜೊತೆಗೇ ಉತ್ತಮ ನಟರೂ ಆಗಿದ್ದರು. ನಾಟಕದಲ್ಲಿ ಅವರು ಅಭಿನಯಕ್ಕೆ ಅಗ್ರ ಸ್ಥಾನವನ್ನು ನೀಡಿದ್ದರು. ಅಭಿನಯವನ್ನು ಒಂದು ವಿಜ್ಞಾನವೆಂದು ಅವರು ಬೋಧಿಸುತ್ತಿದ್ದರು, ಅನುಸರಿಸುತ್ತಿದ್ದರು. ಗರೂಡರ ನಾಟಕ ಕಂಪನಿಯು ಅಭಿನಯ ಕಲಿಯುವವರಿಗೆ ಗರಡಿಯ ಮನೆಯಾಗಿತ್ತು. ಸದಾಶಿವರಾಯರ ಎಚ್ಚಮನಾಯಕ, ದಶರಥ, ಕಂಸ, ಕಬೀರ, ‘ಚೌತಿಚಂದ್ರ’ ನಾಟಕದ ಜಾಂಬವಮತ, ‘ವಿಷಮ ವಿವಾಹ’ ನಾಟಕದ ಅಶೋಕ, ‘ಮಾಯಾ ಬಜಾರ್’ ನಾಟಕದ ಶ್ರೀಕೃಷ್ಣನ ಪಾತ್ರಗಳು ತುಂಬಾ ಪ್ರಸಿದ್ಧವಾಗಿದ್ದವು. ಅವರಿಗೆ ರಂಗಭೂಮಿಯೇ ದೇವಾಲಯ; ನಾಟಕವೇ ಗಾಯತ್ರಿ, ವೇದ ಉಪನಿಷತ್ತು. ಅಭಿನಯ ಕಲೆಯನ್ನು ಕುರಿತು ಆಳವಾಗಿ ಅವರು ಯೋಚಿಸುತ್ತಿದ್ದರು. ಅದನ್ನು ಕುರಿತು ಪುಸ್ತಕವೊಂದನ್ನು ಬರೆಯುವ ನಿರ್ಧಾರವನ್ನೂ ಮಾಡಿದ್ದರು. ದುರದೃಷ್ಟದಿಂದ ಅದನ್ನು ಬರೆಯುವುದರೊಳಗೆ ತೀರಿಕೊಂಡರು.

ಗರೂಡರ ಅಭಿನಯ ಪ್ರತಿಭೆಗೆ ಮನ್ನಣೆ ನೀಡಿದ ನಾಡಿನ ಮಹಾಜನತೆ ಅವರಿಗೆ ‘ಅಭಿನಯಕೇಸರಿ’ ಎಂಬ ಅನ್ವರ್ಥ ಪ್ರಶಸ್ತಿಯನ್ನು ನೀಡಿ, ಗೌರವಿಸಿ, ಸನ್ಮಾನಿಸಿತ್ತು. ೧೯೨೮ರಲ್ಲಿ ಬೆಳಗಾವಿಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅವರಿಗೆ ‘ನಾಟಕಾಲಂಕಾರ’ ಎಂಬ ಬಿರುದನ್ನಿತ್ತಿತು. ಅವರು ತಮ್ಮ ಆಯುಷ್ಯದ ಎಪ್ಪತ್ತೈದು ವರ್ಷಗಳ ಅವಧಿಯಲ್ಲಿ ಅರ್ಧ ಶತಮಾನಕ್ಕೂ ಹೆಚ್ಚಿನ ಕಾಲವನ್ನು ರಂಗಭೂಮಿಯ ಸೇವೆಯಲ್ಲಿ ಕಳೆದರು.

ಸಮಾಜದ ವ್ಯಾಧಿಗೆ ನಾಟಕಗಳೇ ಔಷಧಿ ಎಂಬ ತತ್ತ್ವ ಅವರದಾಗಿತ್ತು. ನಾಟಕಗಳಿಂದ ಸಮಾಜ ಸುಧಾರಣೆ ಸಾಧ್ಯವೆಂದು ಅವರು ಅಚಲವಾಗಿ ನಂಬಿ ನಡೆಯುತ್ತಿದ್ದರು. “ನಾಟಕವೆಂದರೆ ನಮ್ಮ ರೂಪವನ್ನು ನಮಗೆ ತೋರಿಸಿ ಕೊಡುವ ಕನ್ನಡಿ. ಕನ್ನಡಿ ನೋಡಿ ನಮ್ಮ ಮುಖವನ್ನು ನಾವು ತಿದ್ದಿಕೊಳ್ಳುವಂತೆ, ನಾಟಕ ನೋಡಿ ನಮ್ಮ ಮನದ ವಿಕಾರಗಳನ್ನು ಹೊಡೆದೋಡಿಸಿ ಬಾಳು ನಿತ್ಯ ಸುಂದರವಾಗುವಂತೆ ತಿದ್ದಿಕೊಳ್ಳುವಂತಾಗಬೇಕು. ನಾಟಕವು ಕೇವಲ ವಿನೋದವಲ್ಲ, ವಿಲಾಸವಲ್ಲ. ನೋಡಿ, ಕೇಳಿ ಮರೆಯತಕ್ಕದ್ದಲ್ಲ. ಎಂದಿಗೂ ಹೃದಯಪಟದಲ್ಲಿ ಮೀಡಿ ನಿಲ್ಲಬೇಕಾದ ಚಿತ್ರ. ಎಂದೆಂದಿಗೂ ಕಿವಿಯಲ್ಲಿ ಝೇಂಕರಿಸಬೇಕಾದ ಓಂಕಾರದ ನಾದ. ಇಂತಹ ಸರ್ವೋತ್ಕೃಷ್ಟ ನಾಟಕ ಕಲೆಯು ಮುಗ್ಗರಿಸುತ್ತಿದ್ದರೆ ಮಾನವನ ಕಲೋಪಾಸನೆಯಲ್ಲಿ ಅಲಂಕಾರದ ಭೂತಾವೇಶವಾದ ಕುರುಹು ಅದು. ದೇಶಕ್ಕೆ, ಸಮಾಜಕ್ಕೆ ಅಂಟಿದ ಎಂತಹ ರೋಗಕ್ಕೂ ವೈದ್ಯ ಮಾಡಬಲ್ಲಂತಹ ರಂಗ ಕಲೆ, ತನ್ನ ಧ್ಯೇಯದ ದಾರಿ ತಪ್ಪಿದರೆ ಅದೇ ದೇಶಕ್ಕೆ ಮುಳುವಾಗುವಂತಹ ವ್ರಣವಾದೀತು” ಎಂದು ಗರೂಡರು ಹೇಳುತ್ತಿದ್ದರು.

ಗರೂಡರು ಮುಪ್ಪಿನಲ್ಲಿಯೂ ಒಮ್ಮೆ ಮುಂಬಯಿಯಲ್ಲಿ ನಾಟಕದಲ್ಲಿ ಪಾತ್ರ ವಹಿಸಿದ್ದರು. ಅವರು ಕಡೆಯವರೆಗೂ ರಂಗ ಮಂತ್ರವನ್ನೇ ಜಪಿಸುತ್ತಿದ್ದರು.

ಕನ್ನಡವೆಂದರೆ ಗರೂಡರಿಗೆ ಅಭಿಮಾನ ಮಾತ್ರವಲ್ಲ. ಭಕ್ತಿ. ಉತ್ತರ ಕರ್ನಾಟಕದಲ್ಲಿ ಕನ್ನಡತನವನ್ನು ಉಳಿಸಲು ರಂಗಭೂಮಿಯ ಮೂಲಕ ಶ್ರಮಿಸಿದ ಕೀರ್ತಿಯೂ ಅವರದಾಗಿದೆ.

ಗರೂಡರು ವೃದ್ಯಾಪ್ಯದಲ್ಲಿಯೂ ಸದಾ ಲವಲವಿಕೆಯಿಂದ ಇರುತ್ತಿದ್ದರು. ಹೆಜ್ಜೆ-ಹೆಜ್ಜೆಗೂ, ಮಾತು-ಮಾತಿಗೂ ‘ಜೈದತ್ತ’, ‘ಗುರುದತ್ತ’ ಎಂದು ತಮ್ಮ ಇಷ್ಟದೈವವನ್ನು ಸ್ಮರಿಸುತ್ತಿದ್ದರು. ಹೊಳೆಯುವ ಇಳಿಬಿದ್ದ ಬಿಳುಪಿನ ಗಡ್ಡ, ಹಣೆಯಲ್ಲಿ ಕುಂಕುಮಗಳಿಂದ ಋಷಿಗಳಂತೆ ಕಂಗೊಳಿಸುತ್ತಿದ್ದರು.

ವೃದ್ಧಾಪ್ಯದಲ್ಲಿ ಉಬ್ಬಸ ರೋಗ ಈ ರಂಗತಪಸ್ವಿಯನ್ನು ಕಾಡಿ, ಹಣ್ಣು ಹಣ್ಣು ಮಾಡಿಬಿಟ್ಟಿತು. ೧೯೫೪ರ ಆಗಸ್ಟ್ ೨೭ರಂದು ಗರೂಡ ಸದಾಶಿವರಾಯರು ವಿಧಿವಶರಾದರು. ಅರ್ಧ ಶತಮಾನದ ಕಾಲ ಕನ್ನಡ ರಂಗಭೂಮಿಯನ್ನು ಬೆಳಗಿದ ಜ್ಯೋತಿ ನಂದಿಹೋಯಿತು.

ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಗರೂಡರ ಸ್ಥಾನ ಅಮರ.