ಗರ್ಭಿಣಿ ಹೆಂಡತಿ ಮತ್ತು ಲೈಂಗಿಕತೆ

ಪ್ರಾಣಿ ಜೀವಶಾಸ್ತ್ರ ಮತ್ತು ಮನೋವಿಜ್ಞಾನ ಲೋಕದಲ್ಲಿ ಹೆಣ್ಣು ವಿಶೇಷ ಸ್ಥಾನವನ್ನು ಪಡೆದಿರುತ್ತಾಳೆ. ಪ್ರಪಂಚದಲ್ಲಿ ಕೆಲವೇ ಸಸ್ತನಿಗಳು ಮಾತ್ರ ಬಸಿರು ಉಂಟಾದ ನಂತರ ಗರ್ಭವತಿ ಆಗಿರುವ ತನಕ ಸೆಕ್ಸ್‌ನ್ನು ಮುಂದುವರೆಸುವುದು. ಈ ಬಗ್ಗೆ ಇನ್ನೂ ಚರ್ಚೆ ಮುಂದುವರೆಯುತ್ತಿದೆ. ಆದರೆ, ಹೆಣ್ಣು ಗರ್ಭವತಿ ಆಗಿದ್ದರೂ ಕೂಡಾ ಲೈಂಗಿಕ ಸಂತೋಷವನ್ನು ಗಳಿಸುತ್ತಿರುತ್ತಾಳೆ ಮತ್ತು ಲೈಂಗಿಕ ಸಂತೋಷವನ್ನು ಗಂಡನಿಗೂ ನೀಡುತ್ತಿರುತ್ತಾಳೆ.

 

 

ಗರ್ಭಿಣಿ ಸ್ತ್ರೀಗೆ ಅನುಕೂಲಕರವಾದ ಮಲಗುವ ಭಂಗಿಗಳು

ಅನೇಕ ದಂಪತಿಗಳು ಬಸಿರಾಗಿರುವ ತನಕವು ಸಾಮಿಪ್ಯ ಸುಖವನ್ನು ಆನಂದಿಸುತ್ತಿರುತ್ತಾರೆ. ಈ ರೀತಿಯ ದಾಂಪತ್ಯ ಸಾಮಿಪ್ಯ ಸುಖ ಬಸಿರಿನ ಅಂಕುರಾರ್ಪಣೆಯ ಭಾಗವು ಆಗಿರುತ್ತದೆ.

ದಂಪತಿಗಳ ಲಿಂಗಕೂಟದ (ಇಂಟರ್ ಕೋರ್ಸ್) ಸಂದರ್ಭ ದಲ್ಲಿ ಬಸಿರಿಗೆ ಪೀಠಿಕೆ ಹಾಕಲ್ಪಡುತ್ತದೆ. ವೈದ್ಯರ ಸಲಹೆಯ ಮೇರೆಗಷ್ಟೆ ಕೆಲವು ದಂಪತಿಗಳು ಹಾಸಿಗೆ ಪಥ್ಯವನ್ನು ಪರಿಪಾಲಿಸುವುದುಂಟು. ಆದರೆ, ಸ್ತ್ರೀ ಆರೋಗ್ಯವಂತ ಬಸಿರಿ ಆಗಿದ್ದರೆ, ದಂಪತಿಗಳ ನಡುವೆ ಲೈಂಗಿಕ ಸಂಬಂಧವನ್ನು ಮುಂದುವರೆಸಲು ಪ್ರೋತ್ಸಾಹ ನೀಡುತ್ತಾರೆ.

ನಿಮ್ಮ ಪತಿಯ ಕಡೆಗೂ ಗಮನ ಕೊಡಿರಿ

ನೀವು ಗರ್ಭವತಿ ಆದ ನಂತರ, ಕೆಲವು ಮಾನಸಿಕ ಸಮಸ್ಯೆಗಳು ನಿಮ್ಮ ಯಜಮಾನರಲ್ಲಿ ಮೂಡಬಹುದು, ಪ್ರೇಮ ಪೂರ್ಣ ಸಂತಸ ಲೈಂಗಿಕ ಜೀವನ ಕಡಿಮೆಗೊಳ್ಳುತ್ತದೆ. ಅಲ್ಲದೆ, ಆತ ಲೈಂಗಿಕತೆಯಿಂದಲೇ ತಾತ್ಕಾಲಿಕವಾಗಿ ದೂರವಿರಲು ಇಷ್ಟಪಡಬಹುದು. ಆದರೆ, ಆರೋಗ್ಯ ಪೂರ್ಣ ಲೈಂಗಿಕತೆ, ಬಸಿರಾದ ನಂತರ ಮತ್ತು ಆರಂಭದ ಬಸಿರಿನಲ್ಲಿ ಸಮಸ್ಯೆ ಯನ್ನು ಪರಿಹರಿಸಬಹುದು. ಕೆಲವು ಗಂಡಂದಿರು, ಮೊದಲಿನಂತೆ ಲೈಂಗಿಕ ಕ್ರಿಯೆಗೆ ಪತ್ನಿ ಅವಕಾಶ ಮಾಡಿಕೊಡದಿದ್ದರೆ, ಕಾಮೋದ್ರೇಕದ ಶಮನವನ್ನು ನಿವಾರಿಸದಿದ್ದರೆ ಗರ್ಭದಲ್ಲಿ ಬೆಳೆಯುತ್ತಿರುವ ಕೂಸಿನ ಬಗ್ಗೆಯೇ ಅಸೂಯೆ ತೋರಬಹುದು. ಇಂತಹ ಅಸೂಯೆ ಪರಗಂಡಂದಿರು ವಿರಳವೆಂದೇ ಹೇಳಬಹುದು. ಕಾಮೋದ್ರೇಕ ಗೊಂಡಿರುವ ಗಂಡನ ಲೈಂಗಿಕಾಸೆಯನ್ನು ಪತ್ನಿ ಸಂಭೋಗಕ್ಕೆ ಅವಕಾಶ ಮಾಡಿಕೊಡುವುದರ ಮೂಲಕವಾಗಲೀ ಅಥವಾ ಹಸ್ತ ಮೈಥುನ ನಡೆಸಿ ನಿವಾರಿಸಬೇಕಾದ್ದು ಆಕೆಯ ಕರ್ತವ್ಯವಾಗಿರುತ್ತದೆ.

ಬಸಿರಿ ಹೆಂಗಸಿನ ಶರೀರದ ವಿನ್ಯಾಸ
ಚಿತ್ರ . ಗರ್ಭಧರಿಸದವಳು (ಬಸಿರಿ ಅಲ್ಲದ ಹೆಣ್ಣಿನ ಸಾಮಾನ್ಯ ಚಿತ್ರ).ಚಿತ್ರ . ಮೂರು ತಿಂಗಳ ಬಸಿರಿ (೧೪ ವಾರಗಳು)ಗರ್ಭಕೋಶ, ಗಾತ್ರದಲ್ಲಿ ದೊಡ್ಡದಾಗಲು ಆರಂಭಗೊಳ್ಳುತ್ತದೆ. ಮತ್ತು ಪಿಂಡ ಅಥವಾ ಭ್ರೂಣವು ಈ ಹಂತದಲ್ಲಿ ೧೦. Z ನಷ್ಟು ಮಾತ್ರ ತೂಕವಿರುತ್ತದೆ. ಅಲ್ಲದೆ, ಈ ಹಂತದಲ್ಲಿ ಹೆಣ್ಣು ೫ರಿಂದ ೬ಪೌಂಡುಗಳಷ್ಟು ಶರೀರದ ತೂಕದಲ್ಲಿ ಹೆಚ್ಚಾಗಿರುತ್ತಾಳೆ. ಹೆಣ್ಣಿನ ಶರೀರದ ರಚನೆ ಸಾಮಾನ್ಯ ಹೆಂಗಸರ ರೀತಿಯಲ್ಲಿಯೇ ಇರುತ್ತದೆ. ಆದರೆ, ಹೆಣ್ಣಿನ ಬಸಿರಿಯ ಭಾವನೆಗಳು ಉಂಟಾಗಿರುತ್ತವೆ. ಹೊಟ್ಟೆ, ಮೊಲೆಗಳು ಗಾತ್ರದಲ್ಲಿ ದೊಡ್ಡದಾಗುವ ಭಾವನೆಯನ್ನು ಹೊಂದಿರುತ್ತಾಳೆ.

ಚಿತ್ರ . ಆರು ತಿಂಗಳ ನಂತರದ ಬಸಿರಿ (೨೮ ವಾರಗಳು).

ಪಿಂಡಗೂಸು, ಈಗ ಸುಮಾರು ೧ ೧/೨ ಪೌಂಡಿನಷ್ಟು (೧ ೧/೨ lb) ತೂಕವಿರುತ್ತದೆ. ಅಲ್ಲದೆ, ಬಸಿರಿ ಹೆಣ್ಣಿನ ಶರೀರದ ತೂಕ ೧೪ರಿಂದ ೧೬ಪೌಂಡಿ (lb) ನಷ್ಟು ಅಧಿಕವಾಗಿರುತ್ತದೆ. ಆಕೆಯ ಮೊಲೆಗಳು, ಹೊಟ್ಟೆ ಇನ್ನೂ ಗಾತ್ರದಲ್ಲಿ ದೊಡ್ಡದಾಗಿರುತ್ತವೆ.

ಚಿತ್ರ . ಒಂಬತ್ತು ತಿಂಗಳ ನಂತರ ಬಸಿರಿ (೪೦ ವಾರಗಳು).

ಪಿಂಡಗೂಸು ತೂಕದಲ್ಲಿ ಸುಮಾರು ೭ ಪೌಂಡಿನಷ್ಟಿರುತ್ತದೆ. (೭lb) ಆಕೆಯ ತೂಕ ೨೬ ರಿಂದ ೩೦ ಪೌಂಡಿನಷ್ಟು (lb) ಅಧಿಕಗೊಂಡಿರುತ್ತದೆ. ಹೊಟ್ಟೆಯು ಗರಿಷ್ಠ ಪ್ರಮಾಣದಲ್ಲಿ ದೊಡ್ಡದಾಗಿರುತ್ತದೆ. ಮಗುವಿನ ತಲೆ, ತಲೆಕೆಳಕ್ಕಾಗಿರುತ್ತದೆ. ಆದರೆ, ಜನಿಸಲು ತಯಾರಾಗಿರುತ್ತದೆ.

ಬಸಿರಿ ಹೆಂಗಸಿನ ಉತ್ತಮ ರೀತಿಯ ಭಂಗಿ (೧. ಕಿವಿ. ೨. ತೋಲಿನ ಕೀಲು ೩. ತೊಡೆಯ ಕೀಲು ೪. ಮೊಣಕಾಲಿನ ಕೀಲು)

ಪತ್ನಿ ತಾನು ಗರ್ಭಿಣಿ ಆಗಿದ್ದಾಗ ಲೈಂಗಿಕ ಸಂಭೋಗಕ್ಕೆ ಅವಕಾಶ ಮಾಡಿಕೊಡಲಾಗದಿದ್ದರೆ, ಸ್ಪರ್ಶಸುಖ, ಬಾಯಿ ಕಾಮ, ಕೈ ಕಾಮವೇ ಮೊದಲಾದ ಇತರೆ ವಿಧಾನಗಳಿಂದ ‘ಕಾಮ ಸುಖ’ವನ್ನು ಪತಿರಾಯರಿಗೆ ನೀಡುವುದರಿಂದ ಆತನ ಲೈಂಗಿಕ ಉದ್ವೇಗ ನಿವಾರಣೆಯಾಗುತ್ತದೆ.

ಪತಿರಾಯರು ಕೂಡ ತನ್ನ ಪತ್ನಿಯ ದೇಹಸ್ಥಿತಿ, ಮಾನಸಿಕ ಸ್ಥಿತಿಯನ್ನು ಗಮನಿಸಿ ಯಾವುದು ಸೂಕ್ತವೋ ಅಂತಹಲೈಂಗಿಕ ಕ್ರಿಯೆಯನ್ನು ನಡೆಸಲು ಪತ್ನಿಗೆ ನಿರ್ದೇಶಿಸುವುದು ಸೂಕ್ತ ಹಾಗೂ ಸಮಂಜಸ.

ಪಿಂಡಗೂಸಿಗೆ ಸೆಕ್ಸ್ ಒಳ್ಳೆಯದು!

ಕೆಲವು ಸೂಚನೆಗಳ ಪ್ರಕಾರ (ಇನ್ನೂ ಈ ಬಗ್ಗೆ ಖಚಿತವಾಗಿ ಅರ್ಥವಾಗಿಲ್ಲ ಮತ್ತು ಸ್ಪಷ್ಟವಾಗಿ ಗೊತ್ತಾಗಿಲ್ಲ) ಗರ್ಭ ಕೋಶದೊಳಗಡೆ ಬೆಳೆಯುತ್ತಿರುವ ಕೂಸಿಗೆ ದಂಪತಿಗಳು ನಡೆಸುವ ನವಿರಾದ ಲೈಂಗಿಕ ಕ್ರಿಯೆ ಒಳ್ಳೆಯದೆಂದು ತಜ್ಞರು ತಿಳಿಸಿದ್ದಾರೆ. ಈ ಆಲೋಚನೆ ಕೆಲವು ವೈದ್ಯರಿಂದ ಮೂಡಿ ಬಂದಿರುವುದರಿಂದ ಕ್ರಮವಾದ ಲೈಂಗಿಕ ಸಂಪರ್ಕ, ವಿಶೇಷವಾಗಿ ಮೊದಲ ಹಂತದ ಬಸಿರಿನಲ್ಲಿ ಅಂದರೆ, ಪಿಂಡಗೂಸು ಸ್ವಯಂ ರೂಪವನ್ನು ತಾಳುತ್ತಿರು ವಾಗ ಗರ್ಭಕೋಶಕ್ಕೆ ಒಳ್ಳೆಯ ರಕ್ತ ಪೂರೈಕೆ ಆಗುತ್ತದೆಂದು ತಿಳಿಸಿದ್ದಾರೆ. ಲೈಂಗಿಕ ಸಂಭೋಗದ ಸಂದರ್ಭದಲ್ಲಿ ಮತ್ತು ವಿಶೇಷವಾಗಿ ಹೆಣ್ಣು ಭಾವಪ್ರಾಪ್ತಿ (ಆರ್ಗ್ಯಾಸಮ್) ಹೊಂದಿದ ಸಮಯದಲ್ಲಿ ಎಲ್ಲಾ ಲೈಂಗಿಕಾಂಗಗಳು ರಕ್ತ ತುಂಬಿಕೆಯಿಂದ ಕೂಡಿರುತ್ತದೆ. ಇದರಿಂದ, ಸಾಕಷ್ಟು ಪ್ರಮಾಣದ ಅಗತ್ಯವಾದ ಪೌಷ್ಠಿಕ ಆಹಾರ, ಆಮ್ಲಜನಕ ಬೆಳೆಯುತ್ತಿರುವ ಕೂಸಿಗೆ ಪೂರೈಕೆ ಆಗುತ್ತದೆಂದು ತಜ್ಞರು ಅಭಿಪ್ರಾಯ ಪಟ್ಟಿರುತ್ತಾರೆ. ಅಲ್ಲದೆ, ತೃಪ್ತಿಕರವಾಗಿ ಪಿಂಡಗೂಸು ಗರ್ಭಕೋಶದಲ್ಲಿ ಒಳನಾಟಲ್ಪಡುತ್ತದೆ ಎಂತಲೂ ತಿಳಿಸಿರುತ್ತಾರೆ.

ರತಿಯಾಸೆ (ಕಾಮದಾಸೆ) ಹೆಚ್ಚಳ

ಹೆಣ್ಣಿನ ಬದುಕಿನಲ್ಲಿ ಬಸಿರಿನ ಕಾಲ ಬಲವಾದ ಲೈಂಗಿಕ ಆಸಕ್ತಿಯ ಸಮಯ ವಾಗಿರಬಹುದು ಅಥವಾ ಮಿತಪ್ರಮಾಣದ ಲೈಂಗಿಕತೆಯನ್ನು ಹೊಂದಿರಬಹುದು. ಇದು ಸ್ತ್ರೀಯ ಶಾರೀರಿಕ, ಮಾನಸಿಕ ಆರೋಗ್ಯ ಭಾವನೆಯನ್ನು ಅವಲಂಬಿಸಿರುತ್ತದೆ. ಬಸಿರಿನ ಸಂದರ್ಭದಲ್ಲಿ ಕೆಲವು ದಂಪತಿಗಳ ಸಂಬಂಧ ಅಧಿಕಗೊಂಡು ಆಶ್ಚರ್ಯಕರ ಆನಂದವನ್ನು ಸಹ ಅನುಭವಿಸಬಹುದು. ಈ ರೀತಿಯ ‘ಸುಖಾನುಭಾವ’ ಯೋಜಿತ ಹಾಗೂ ಕೂಸಿನ ಬಗ್ಗೆ ದಂಪತಿಗಳಿಬ್ಬರಿಗೂ ಆಸಕ್ತಿ ಇದ್ದಾಗ ಉಂಟಾಗುತ್ತದೆ.

ಗರ್ಭಕೋಶದಲ್ಲಿ ಬೆಳೆಯುತ್ತಿರುವ ಕಂದನ ಬಗ್ಗೆ ದಂಪತಿಗಳಿಬ್ಬರಿಗೂ ಆಸೆ-ಅಭಿಮಾನ ಇದ್ದರೆ ಅವರಿಬ್ಬರಲ್ಲೂ ಸಾಮಿಪ್ಯ ಸಂಪರ್ಕ ಸುಖಾನುಭವ ತಾನಾಗಿಯೇ ಉಂಟಾಗುತ್ತಿರುತ್ತದೆ. ತೊಡಕು ಉಂಟಾದರು ತಾವೇ ಅದನ್ನು ಸರಿಪಡಿಸಿಕೊಳ್ಳಲು ಸಿದ್ದರಾಗಿರುತ್ತಾರೆ.

ಬಹಳಷ್ಟು ಪುರುಷರಿಗೆ ಪತ್ನಿಯ ವಿಸ್ತರಿತ ಹೊಟ್ಟೆಯ ಆಕಾರ ಆಕರ್ಷಕವಾಗಿ ಹಾಗೂ ಸೆಕ್ಸಿಯಾಗಿಯೂ ಕಾಣುತ್ತದೆ. ಅಲ್ಲದೆ, ತಮ್ಮ ಪುರುಷತ್ವದ ಬಗ್ಗೆಯೂ ಹೆಮ್ಮೆ ಪಟ್ಟುಕೊಳ್ಳುವುದುಂಟು. ಬಸಿರುತನ ಹೊಳಪು, ಹೊಸತನ ಹಾಗೂ ಆರೋಗ್ಯಕರ ನೋಟವನ್ನು ನಿರೀಕ್ಷಿತ ತಾಯಿಯಲ್ಲಿ ಮೂಡಿಸುತ್ತದೆ. ಅಲ್ಲದೆ, ಮೊದಲಿಗಿಂತಲೂ ಸ್ತ್ರೀ ತಾನು ಗರ್ಭಿಣಿ ಆಗಿದ್ದಾಗ ವೈವಿಧ್ಯಮಯವಾದ ಸೌಂದರ್ಯದ ಅನುಭವವನ್ನು ಅನುಭವಿಸುತ್ತಾಳೆ.

ಶರೀರದಲ್ಲಿ ಚಂದದ ಚರ್ಮ ಮತ್ತು ಆರೋಗ್ಯದ ಅಲಂಕಾರ ಪ್ರಕಟಗೊಳ್ಳುತ್ತದೆ. ಅನೇಕ ಪುರುಷರು, ತಮ್ಮಪತ್ನಿಯಲ್ಲಿ ಬಸಿರು ಉಂಟಾಗಿ ಆಕೆಯ ಹೊಟ್ಟೆಯ ಭಾಗ ಗಾತ್ರದಲ್ಲಿ ದೊಡ್ಡದಾಗ ಆಕರ್ಷಿತರಾಗುತ್ತಾರೆ. ಅಲ್ಲದೆ, ಕೆಲವು ದಂಪತಿಗಳು ಕಾಮನೆಯ ಭಾವನೆಯನ್ನು ಅನುಭವಿಸುತ್ತಾರೆ. ಮೈ, ಕೈ ತುಂಬಿಕೊಂಡಿರುವ ಪತ್ನಿಯನ್ನು ಕಂಡ ಕೆಲವು ಪುರುಷರಲ್ಲಿ ಆರೋಗ್ಯಕರವಾದ ಲೈಂಗಿಕ ಭಾವನೆಯೂ ಉಂಟಾಗುತ್ತದೆ. ಸ್ತ್ರೀ ಗರ್ಭಿಣಿ ಆಗಿದ್ದಾಗ ಆಕೆಯ ಶರೀರದಲ್ಲಿ ಹೊರ ಚೋದನಿಕೆಗಳು (Pheromones) ಉತ್ಪತ್ತಿ ಆಗುತ್ತದೆಂದು ತಜ್ಞರು ತಿಳಿಸಿದ್ದಾರೆ. ಈ ಹೊರ ಚೋದನಿಕೆಗಳ ಉತ್ಪತ್ತಿಯಿಂದ ಆಕೆಯ ಶರೀರದಲ್ಲಿ ಮಧುರತೆಯೂ ಉಂಟಾಗುವುದರಿಂದ ಆ ಸಂದರ್ಭದಲ್ಲಿ ಪತಿರಾಯರಲ್ಲಿ ಲೈಂಗಿಕ ಚೇತರಿಕೆ ಉಂಟಾಗುತ್ತದೆಂದು ಕೆಲವು ತಜ್ಞರು ಅಭಿಪ್ರಾಯ ಪಡುತ್ತಾರೆ.

ಒಮ್ಮೆ ಆರೋಗ್ಯವಂತ ಹೆಣ್ಣು ಗರ್ಭವತಿ ಆದರೆ, ಆಕೆ ಸ್ವಯಂ ಸಂತೋಷಗೊಂಡು (ಆಕೆಗೆ ಗರ್ಭಪಾತ ಆಗುವುದಿಲ್ಲ ಎಂದು ಖಚಿತವಾದ ನಂತರ) ಮಹತ್ತ್ವ ಪೂರ್ಣವಾದ ಶಾರೀರಕ ಸಂವೇದನೆಯನ್ನು ಅನುಭವಿಸುತ್ತಾಳೆ. ಇದರಿಂದ ಆಕೆ ಗಂಡನಿಗೆ ಲೈಂಗಿಕ ಕ್ರಿಯೆಗೆ ಅವಕಾಶ ಕಲ್ಪಿಸಿಕೊಡಬಹುದು ಅಥವಾ ವಿರೋಧ (ಕೆಲವರು)ವನ್ನು ತೋರಬಹುದು. ಅಲ್ಲದೆ, ಸ್ಪರ್ಶ, ಚುಂಬನ ಮೊದಲಾದ ಅಧಿಕ ಸಂವೇದನೆಯನ್ನು ಪರಸ್ಪರ ದಂಪತಿಗಳು ಅನುಭವಿಸಬಹುದು.

ಸ್ತ್ರೀಯ ಸ್ತನಗಳು ಮೊದಲಿಗಿಂತಲೂ ಆಕೆ ಗರ್ಭವತಿ ಆಗಿದ್ದಾಗ ಅಧಿಕವಾದ ಸಂವೇದನಾ ಸ್ಪರ್ಶವನ್ನು ನೀಡುತ್ತದೆ.

ರತಿಯಾಸೆ (ಕಾಮದಾಸೆ) ಕಡಿಮೆಗೊಂಡಿರುವಿಕೆ)

ಕೆಲವು ಸ್ತ್ರೀಯರಲ್ಲಿ ಅವು ಗರ್ಭವತಿಯರಾಗಿದ್ದಾಗ ಅಧಿಕವಾದ ಲೈಂಗಿಕ ಮನೋಭಾವನೆ ಇರುತ್ತದೆ. ಮತ್ತೆ ಕೆಲವಲ್ಲಿ ಲೈಂಗಿಕ ನಿರಾಸಕ್ತಿಯೂ ಇರುತ್ತದೆ. ಅಲ್ಲದೆ, ಕೆಲವು ಸ್ತ್ರೀಯರು ಬಸಿರಾಗಿದ್ದಾಗ ನಾಚಿಕೆ ಪಟ್ಟುಕೊಂಡು ಲೈಂಗಿಕತೆಯಿಂದ ದೂರ ಇರುವುದುಂಟು. ಆದುದರಿಂದ, ಪತಿರಾಯರು ತಮ್ಮ ಪತ್ನಿ ಗರ್ಭಿಣಿ ಆಗಿದ್ದಾಗ ಆಕೆಯ ಮನೋಸ್ಥಿತಿಯನ್ನು ಅರಿತು, ಆಕೆಯ ಶರೀರದಲ್ಲಿ ಉಂಟಾಗುವ ಸಹಜ ಬದಲಾವಣೆಗಳನ್ನು ಅರಿತು, ಅದಕ್ಕೆ ಪೂರಕವಾಗಿ ಸಂಯಮದಿಂದ ವರ್ತಿಸಿದರೆ, ಪ್ರೀತಿ ವಿಶ್ವಾಸವನ್ನು ತೋರಿದರೆ, ಮೃದು ಮಾತಕತೆ ಆಡಿದರೆ ನಿಮ್ಮ ಸಂಗಾತಿ, ನಿಮ್ಮಲೈಂಗಿಕ ಆಸೆಯನ್ನು ಅರಿತು ಅದನ್ನು ನೆರವೇರಿಸಲು ಅನುಕೂಲವಾಗುತ್ತದೆ. ಆಕಸ್ಮಿಕವಾಗಿಆಕೆಗೆ ಲೈಂಗಿಕಾಸೆ ಇಲ್ಲದಿದ್ದರೆ, ಆಕೆ ತಿರಸ್ಕರಿಸಿದರೆ ಬಲಾತ್ಕಾರ ಮಾಡಲು ಪುರುಷ (ಪತಿ) ಮುಂದಾಗುವುದು ತಪ್ಪು. ಪತ್ನಿ ಗರ್ಭಿಣಿ ಆಗಿದ್ದಾಗ ನವಿರಾಗಿ ವರ್ತಿಸದೆ, ಲೈಂಗಿಕ ಸಂಭೋಗಕ್ಕಾಗಿ ಪಶುರೀತಿಯಲ್ಲಿ ವರ್ತಿಸಿದರೆ ಆಕೆಯ ಮನುಸ್ಸು ನೊಂದು ಕೊಳ್ಳುತ್ತದೆ. ಅಲ್ಲದೆ, ಗರ್ಭಪಾತ ಆಗುವ ಸಾಧ್ಯತೆಯೂ ಉಂಟಾಗಬಹುದು.

ಗರ್ಭಿಣಿ ಪತ್ನಿಯೂ ಕೂಡಾ ತನಗೆ ಲೈಂಗಿಕ ಆಸೆ ಇಲ್ಲದಿದ್ದರೆ ಯಾಕಿಲ್ಲ ಎಂಬ ವಿಷಯವನ್ನು ಪತಿಗೆ ಸ್ನೇಹ ಪೂರ್ವಕವಾಗಿ ತಿಳಿಸಿದರೆ ಆತನಿಗೆ ನಿಜ ಸಂಗತಿ ತಿಳಿದ ನಂತರ ಆತ ಆರೋಗ್ಯಕರ ವಾಗಿ ವರ್ತಿಸಲು ಅನುಕೂಲವಾಗುತ್ತದೆ.

ಚೊಚ್ಚಲು ಬಸಿರಲ್ಲಿ ಮಾತ್ರ ಕೆಲವು ಸ್ತ್ರೀಯರಲ್ಲಿ ಲೈಂಗಿಕಾಸೆ ಇಲ್ಲದೆ ಇರಬಹುದು. ಆದರೆ, ಅದೇ ಎರಡನೆ ಭಾರಿ ಆಕೆ ಬಸಿರಾದಾಗ, ಲೈಂಗಿಕಾಸೆಯನ್ನು ವ್ಯಕ್ತಗೊಳಿಸಬಹುದು. ಆದುದರಿಂದ, ಸ್ತ್ರೀ, ಗರ್ಭಿಣಿ ಆದಾಗಲೆಲ್ಲಾ ಆಕೆಯಲ್ಲಿ ‘ಸೆಕ್ಸ್’ ಭಾವನೆ ಇರುವುದಿಲ್ಲ ಎಂದು ತಪ್ಪು ತಿಳಿಯಬಾರದು.

ಪ್ರತಿ ಸಾರಿ ಹೆಣ್ಣು ಬಸಿರಾದಾಗಲೂ ಆಕೆಯ ಭಾವನೆಗಳು ವ್ಯತ್ಯಾಸವಾಗಿರುತ್ತವೆ ಅಲ್ಲದೆ, ಗಂಡಸರ ಭಾವನೆಗಳು ಕೂಡ ವ್ಯತ್ಯಾಸವಾಗಿರುತ್ತವೆ. ಎಂಬುದನ್ನು ದಂಪತಿಗಳು ಅರಿತಿರಬೇಕು.

ಹೆಣ್ಣಿನಲ್ಲಿ ಲೈಂಗಿಕಾಸೆ ಕಡಿಮೆಯಾಗಲು ಸಾಮಾನ್ಯ ಕಾರಣಗಳೆಂದರೆ, ಆರಂಭದ ಬಸಿರಿನಲ್ಲಿ ಉಂಟಾಗುವ ಭಯದ ಭಾವನೆ. ಅನೇಕ ಸ್ತ್ರೀಯರು ಬೆಳಗಿನ ವೇಳೆಯಲ್ಲಿ ನರಳಿಕೆ (ಮಾರ್ನಿಂಗ್ ಸಿಕ್‌ನೆಸ್) ಯಿಂದ ಸ್ವಲ್ಪ ಮಟ್ಟಿಗೆ ತೊಂದರೆ ಪಡುತ್ತಾರೆ. ಈ ನರಳಿಲಕೆ ಬೆಳಗಿನ ವೇಳೆಯೇ ಅಲ್ಲದೇ, ಹಗಲು ಹೊತ್ತಿನಲ್ಲಿ ಅಥವಾ ಇಡೀ ದಿನವು ಉಂಟಾಗಬಹುದು. ಅಥವಾ ಸಂಜೆಯ ವೇಳೆಯು ಉಂಟಾಗಬಹುದು. ಇದರಿಂದ, ಗರ್ಭಿಣಿ ಸ್ತ್ರೀ, ಆಯಾಸ, ಅನಾಸಕ್ತಿಯನ್ನು ತೋರಬಹುದು. ಈ ಸ್ಥಿತಿ ಉಂಟಾಗಲು ಕಾರಣ ಹೆಣ್ಣಿನ ತಪ್ಪಲ್ಲ. ಬಸಿರು ಸ್ತ್ರೀಯ ಶರೀರದಲ್ಲಿ ಉಂಟಾಗುವ ಸಹಜ ಬದಲಾವಣೆಗಳು ಕಾರಣ. ಗರ್ಭಿಣಿ ಸ್ತ್ರೀ ಬೆಳಗಿನ ನರಳಿಕೆ ಮತ್ತು ಆಯಾಸವನ್ನು ಗಂಡನಿಗೆ ತಿಳಿಸಿದರೆ ಆತನು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಆರೈಕೆ ಮಾಡಲು ಸಹಾಯಕವಾಗುತ್ತದೆ. ಸ್ತ್ರೀಯು, ಬಸಿರಿನ ಚಿನ್ನೆಗಳನ್ನೇ ದೊಡ್ಡದು ಮಾಡಿ ಪತಿರಾಯರ ಸಾಮಿಪ್ಯವನ್ನೆ ದೂರ ಮಾಡಿಕೊಳ್ಳಬಾರದು. ಅಲ್ಲದೆ, ಬಸಿರಿ ಹೆಂಗಸು ಮೌನವಾಗಿ ವರ್ತಿಸದೆ ಲವಲವಿಕೆಯಿಂದ ವರ್ತಿಸುವುದರಿಂದ ಯಜಮಾನರಿಗೆ, ಕುಟುಂಬದವರಿಗೆ ಸಂತೋಷ ಉಂಟಾಗುತ್ತದೆ.

ಸ್ತ್ರೀಯ ಗರ್ಭಕೋಶದಲ್ಲಿ ನವ ಶಿಶುವಿನ ರೂಪದ ಪ್ರಕ್ರಿಯೆ ನಡೆಯುತ್ತಿರುವುದರಿಂದ ದಂಪತಿಗಳ ನಡುವೆ ಕೆಲವು ರಿಯಾಯಿತಿಗಳು ಇರಬೇಕಾದ್ದು ಅಗತ್ಯ. ಆರಂಭಿಕ ಬಸಿರಿನ ತೊಂದರೆಗಳು ತಾತ್ಕಾಲಿಕವಾದವುಗಳಾಗಿರುತ್ತವೆ. ಆರಂಭದ ಬಸಿರಿನ ಚಿನ್ನೆಗಳು ಮೊದಲ ಹನ್ನೆರಡರಿಂದ ಹದಿನಾಲ್ಕು ವಾರಗಳೊಳಗೆ ಕಾಣದಾಗುತ್ತವೆ. ಅನೇಕ ಗರ್ಭಿಣಿ ಸ್ತ್ರೀಯರು ಮಧ್ಯದ ಬಸಿರಿನ ತಿಂಗಳುಗಳಲ್ಲಿ ಉತ್ತಮವಾಗಿ ವರ್ತಿಸುತ್ತಾರೆ. ಈ ಮಧ್ಯದ ಬಸಿರಿನ ತಿಂಗಳುಗಳಲ್ಲಿ ಹೆಣ್ಣು ಚಟುವಟಿಕೆಯಿಂದ ಓಡಾಡುತ್ತಾಳೆ. ಸಣ್ಣ ಪುಟ್ಟ ಮನೆಗೆಲಸಗಳನ್ನು ಕೂಡ ಮಾಡಬಲ್ಲರು, ಆದುದರಿಂದ, ನರಳಿಕೆಯ ಭಾವನೆ ತಾತ್ಕಾಲಿಕ ಸಮಸ್ಯೆಯೇ ಹೊರತು, ದೀರ್ಘವಾದ ಸಮಸ್ಯೆಯೇನಲ್ಲ.

ಬಸಿರು ಹೆಣ್ಣಿನ ಸ್ತನಗಳು ಗಾತ್ರದಲ್ಲಿ ದೊಡ್ಡದಾಗುವುದರಿಂದ ಮತ್ತು ಹೊಟ್ಟೆಯು ಸಹ ಗಾತ್ರದಲ್ಲಿ ದೊಡ್ಡದಾಗುವುದರಿಂದಲೂ ಕೂಡ ಆಕೆಯಲ್ಲಿ ಲೈಂಗಿಕ ನಿರಾಸಕ್ತಿ ಉಂಟಾಗಿರಬಹುದು. ಬಸಿರಿನ ಸ್ತ್ರೀಯ ಸ್ತನಗಳು ಗಾತ್ರದಲ್ಲಿ ದೊಡ್ಡದಾಗಿರುವುದರಿಂದ ಪುರುಷ ಆಕೆ ಸ್ತನಗಳ ಮೇಲೆ ಒತ್ತಡವನ್ನು ಹೇರಿದರೆ ಅಥವಾ ಶಾರೀರಿಕವಾಗಿ, ಒರಟಾಗಿ ವರ್ತಿಸಿದರೆ ಆಕೆಯಲ್ಲಿ ಕೋಪ, ಉದ್ರೇಕ ಉಂಟಾಗುತ್ತದೆ. ಆದುದರಿಂದ, ಸ್ತ್ರೀ ಗರ್ಭಿಣಿ ಆಗಿದ್ದಾಗ (ಅಂದರೆ ಆಕೆಯ ಹೊಟ್ಟೆ ಗಾತ್ರದಲ್ಲಿ ದೊಡ್ಡದಾಗಿರುವಾಗ) ಪುರುಷ ಮೇಲಿನ ಸಂಭೋಗಾಸನಕ್ಕಿಂತಲೂ ಬೇರೆ ರೀತಿಯ ಲೈಂಗಿಕಾಸಗಳನ್ನು ಪರಿಪಾಲಿಸುವುದು ಸೂಕ್ತ.

ಅಲ್ಲದೆ, ಪತಿರಾಯರು ಕೂಡ ಲೈಂಗಿಕ ಸಂಭೋಗದ ಸಮಯದಲ್ಲಿ ಶಿಶ್ನವನ್ನು ಗರ್ಭಿಣಿ ಪತ್ನಿಯ ಯೋನಿಯೊಳಕ್ಕೆ ತೀರ ಒಳಕ್ಕೆ ನೂಕಬಾರದು. ಅಲ್ಲದೆ, ಬಸಿರಿ ಹೆಂಗಸಿನ ಹೊಟ್ಟೆ ಗಾತ್ರದಲ್ಲಿ ದೊಡ್ಡದಾಗುತ್ತಿರುವಾಗ ಪುರುಷ ಮೇಲಿನ ಸಂಭೋಗಾಸನ ಕ್ಕಿಂತಲೂ ಕೂತು ನಡೆಸುವ ಸಂಭೋಗಾಸನ ಉತ್ತಮವಾದದ್ದು. ದಂಪತಿಗಳು, ಕುಳಿತು ನಡೆಸುವ ಸಂಭೋಗದಲ್ಲಿ ಗರ್ಭಿಣಿ ಸ್ತ್ರೀ ಶಿಶ್ನ ಒಳ ತೂರಿಕೆಯನ್ನು ನಿಯಂತ್ರಿಸಿಕೊಳ್ಳಲು ಅನುಕೂಲವಾಗುತ್ತದೆ. ಪತ್ನಿ ಇಚ್ಛಿಸಿದರೆ ಹೆಣ್ಣು ಮೇಲಿನ ಸಂಭೋಗಾಸನವನ್ನು ಪಾಲಿಸಬಹುದು. ಅಥವಾ ಮುಖ ಮೈಥುನ ಕ್ರಿಯೆಯಲ್ಲಿ ದಂಪತಿಗಳು ತೊಡಗಬಹುದು.

ಹೆಣ್ಣು, ಬಸಿರಾಗಿದ್ದಾಗ ಆಕೆಯಲ್ಲಿ ಲೈಂಗಿಕ ಆಸೆ ಕಡಿಮೆ ಆಗುವುದು ಸಹಜವಾದ ಪ್ರವೃತ್ತಿ ಆಗಿರುತ್ತದೆ. ಅಲ್ಲದೆ, ಸಸ್ತನಿಗಳು (ಮೊಲೆಗಳಿರುವಂತಹವು) ಬಸಿರಾಗಿದ್ದಾಗ ‘ಸೆಕ್ಸ್’ನ್ನು ತಿರಸ್ಕರಿಸುವುದೇ ಹೆಚ್ಚು. ಫಲವಂತಿಕೆಯ ಸಮಯದಲ್ಲಿ (Female Fertility) ಹೆಣ್ಣಿನ ಲೈಂಗಿಕಾಸಕ್ತಿ ಹೆಚ್ಚಿರುತ್ತದೆ. ಅನಂತರ, ಸಹಜವಾಗಿ ಕಡಿಮೆ ಯಾಗುತ್ತಾ ಹೋಗುತ್ತದೆ.

ಅಲ್ಲದೆ, ಈ ಹಿಂದೆ ಪ್ರತಿ ಸಾರಿ ಪುರುಷ (ಗಂಡ) ಲೈಂಗಿಕ ಸಂಭೋಗ ಮಾಡುವಾಗ ಸ್ತ್ರೀ (ಹೆಂಡತಿ) ಭಾವಪ್ತಾಪ್ತಿ (ಆರ್ಗ್ಯಾಸಮ್) ಅಥವಾ ಕಾಮಾವೇಶವನ್ನು ಹೊಂದಿದ್ದರೆ ಅಂತಹ ಸ್ತ್ರೀಯರು ಬಸಿರಿನ ಸಮಯದಲ್ಲಿ ಕೂಡ ಪತಿಯ ಒಡನಾಟವನ್ನು ಇಚ್ಛಿಸುತ್ತಾರೆ; ಲೈಂಗಿಕ ಆಸಕ್ತಿಯನ್ನು ಪಡೆದಿರುತ್ತಾರೆ. ಅಲ್ಲದೆ, ಅವರಲ್ಲಿ ಭಾವಪ್ರಾಪ್ತಿ (ಆರ್ಗ್ಯಾಸಮ್) ಬಸಿರಿನ ಸಂದರ್ಭದಲ್ಲಿ ಉಂಟಾಗದಿದ್ದರೂ ‘ಸಂತೋಷ ಸಾಮಿಪ್ಯ’ದ ಸುಖಾನುಭವವನ್ನು ಹೊಂದುತ್ತಾರೆ. ಕೆಲವು ಸ್ತ್ರೀಯರು ಭಾವಪ್ರಾಪ್ತಿ ಹೊಂದಿದರೆ ಗರ್ಭಪಾತ ಆಗಬಹುದು. ಪಿಂಡ ಗೂಸಿಗೆ ತೊಂದರೆ ಆಗಬಹುದೆಂದು ಭಾವಸಿ ಭಾವಪ್ರಾಪ್ತಿಯನ್ನು ಹೊಂದಲು ಇಷ್ಟಪಡುವುದಿಲ್ಲ. ಆರೋಗ್ಯವಂತ ಪಿಂಡಗೂಸು, ಗರ್ಭಕೋಶದಲ್ಲಿ ಸರಿಯಾದ ಸ್ಥಾನವನ್ನು ಹೊಂದಿದ್ದರೆ ಅದಕ್ಕೆ ಯಾವ ರೀತಿಯ ತೊಡಕು ಉಂಟಾಗುವುದಿಲ್ಲ. ಆಕಸ್ಮಿಕವಾಗಿ ಗರ್ಭಪಾತ (ಅಬಾರ್ಶನ್) ವಾದರೆ ದಂಪತಿಗಳು ಪರಸ್ಪರ ದೂಷಣೆ ಮಾಡಿಕೊಳ್ಳುವುದು ಕೂಡ ಸೂಕ್ತವಲ್ಲ.

 

ಈ ಚಿತ್ರದಲ್ಲಿ ಗರ್ಭಕೋಶ ಮತ್ತು ಯೋನಿಗೆ ನೇರ ಸಂಪರ್ಕ ಇಲ್ಲದೆ ಇರುವುದನ್ನು ಗಮನಿಸಬಹುದು. ಮತ್ತು ಪುರುಷನ ಶಿಶ್ನ ನವಿರಾಗಿ ಯೋನಿಯೊಳಕ್ಕೆ ಸೇರಿಸಲ್ಪಟ್ಟಿದ್ದಾಗ ಶಿಶ್ನ ಮತ್ತು ಪಿಂಡಗೂಸಿಗೂ ನಿಕಟ ಸಂಪರ್ಕ ಇರುವುದಿಲ್ಲ. ಪಿಂಡಗೂಸು ಚೆನ್ನಾಗಿ ಗರ್ಭಕೋಶದಲ್ಲಿ ರಕ್ಷಿಸಲ್ಪಟ್ಟಿರುತ್ತದೆ.

ಬಸಿರಿನ ಕೊನೆಯ ಮೂರು ತಿಂಗಳಲ್ಲಿ ಲೈಂಗಿಕ ಸಂಭೋಗ ಕಷ್ಟವಾಗುತ್ತದೆ. ಯಾಕೆಂದರೆ, ಹೊಟ್ಟೆಯ ಗಾತ್ರದಲ್ಲಿ ದೊಡ್ಡದಾಗಿರುವುದರಿಂದ, ಮಗು ಗರ್ಭಕೋಶದಲ್ಲಿ ಬೆಳೆದಿರುವುದರಿಂದ ಅಲ್ಲದೆ, ಬಸಿರಿನ ಕೊನೆಯ (೭,೮,೯ ನೇ ತಿಂಗಳುಗಳಲ್ಲಿ) ಮೂರು ತಿಂಗಳು ಹೆಣ್ಣು ಅನಾನುಕೂಲತೆ, ಅನಾಕರ್ಷಣೆಯನ್ನು ಪಡೆದಿರುತ್ತಾಳೆ. ಈ ಸಂದರ್ಭದಲ್ಲಿ ಎದೆ ಉರಿ, ಸಣ್ಣಪುಟ್ಟ ಶಾರೀರಿಕ ತೊಂದರೆಗಳು ಕೂಡ ಕೆಲವು ಬಸಿರಿ ಹೆಂಗಸರಲ್ಲಿ ಕಾಣಿಸಿಕೊಳ್ಳಬಹುದು.

ತಮ್ಮ ಪತ್ನಿ ರಾತ್ರಿ ಪೂರ್ಣವಾಗಿ ಆಯಾಸಗೊಂಡಿದ್ದರೆ ಹಗಲು ವೇಳೆ ಲೈಂಗಿಕತೆಗಾಗಿ, ಪತಿರಾಯರು ಪ್ರಯತ್ನಿಸಬಹುದು. ಬಸಿರುತನ ಹೆಣ್ಣಿನ ಲೈಂಗಿಕ ಜೀವನದಲ್ಲಿ ಹೊಸ ರೀತಿಯ ಲಯಬದ್ಧತೆಯನ್ನು ಮೂಡಿಸುತ್ತದೆ. ಆದುದರಿಂದ, ಹೆಣ್ಣು ಬಸಿರುತನವನ್ನು ಸಂತೋಷ ಮತ್ತು ಸಮಾಧಾನಕರವಾಗಿ ಸ್ವೀಕರಿಸಬೇಕು. ಅಲ್ಲದೇ ಪತಿರಾಯರನ್ನು ತಿರಸ್ಕರಿಸಿ, ತಾನು ಬಸಿರಾಗಿದ್ದಾಗ ದೂರಮಾಡಿಕೊಳ್ಳಬಾರದು. ಗಂಡನ ಇಷ್ಟದಂತೆ ಸಂಭೋಗವನ್ನು ನಡೆಸಲಾಗದಿದ್ದರೆ ಆತನು ಇಷ್ಟ ಪಡುವ ಬೇರೆ ವಿಧಾನದಿಂದ ‘ಪ್ರೇಮೋದ್ರೇಕ’ವನ್ನು ಶಮನ ಮಾಡುವುದು ಕೂಡ ಬಸಿರಿ ಹೆಂಡತಿಯ ಕರ್ತವ್ಯವಾಗಿರುತ್ತದೆ ಎಂಬುದನ್ನು ಮರೆಯಬಾರದು.

ಬಸಿರುತನ ಲೈಂಗಿಕತೆಗೆ ಒಳ್ಳೆಯದೇ?

ಸ್ತ್ರೀ ಗರ್ಭಿಣಿಯಾಗಿದ್ದಾಗ ಲೈಂಗಿಕತೆ ಉತ್ತಮವಾದುದೆಂದು ಕೆಲವು ಆರೋಗ್ಯವಂತ ಸ್ತ್ರೀಯರು ಅಭಿಪ್ರಾಯ ಪಡುತ್ತಾರೆ.

ಬಸಿರಾಗಿದ್ದಾಗ ಪ್ಲಸೆಂಟಾ (Placenta) ಅಂದರೆ, ಮಗುವಿನ ಹೊಕ್ಕಳು ಬಳ್ಳಿ ಗರ್ಭಕೋಶವನ್ನು ಸೇರುವ ಜಾಗದಲ್ಲಿ ಹಾರ್ಮೋನ್‌ಗಳಾದ ಫ್ರೊಜಿಸ್ಟರೋನ್ ಮತ್ತು ಈಸ್ಟ್ರೋಜೆನ್‌ನ ಪ್ರಮಾಣ ಅಧಿಕವಾಗಿ ಉತ್ಪತ್ತಿಯಾಗುತ್ತದೆ.

ಇದರಿಂದ, ಗರ್ಭಿಣಿ ಹೆಂಗಸರು ಸುಖವಾದ, ಶಾಂತತೆಯನ್ನು ಮತ್ತು ‘ಸೆಕ್ಸ್‌ಭಾವನೆ’ಯನ್ನು ಹೊಂದಿರುತ್ತಾರೆ.

ಕೆಲವು ಗರ್ಭಿಣಿ ಸ್ತ್ರೀಯರು ಈ ಹಿಂದೆಯೆಲ್ಲಾ ಗರ್ಭಪಾತಗಳಾಗಿದ್ದರೆ ‘ನಾನು ಗರ್ಭವತಿ ಆಗಿದ್ದಾಗ ಸೆಕ್ಸ್ ಅನುಭವಿಸಲು ತಜ್ಞ ವೈದ್ಯರಿಂದ ಶಿಫಾರಸ್ಸು ಪಡೆದಿಲ್ಲ’ ಆದರೆ ನನ್ನ ಪತಿಯ ಕಾಮೋದ್ರೇಕವನ್ನು ಸಂಭೋಗದಲ್ಲದೆ, ಬೇರೆ ಬೇರೆ ರೀತಿಯ ಕಾಮ ಚಟುವಟಿಕೆ (ಹಸ್ತ ಮೈಥುನ ಇತ್ಯಾದಿ) ನಡೆಸಿ ಪರಿಹರಿಸಬಲ್ಲೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.

* * *