ಪ್ರತಿ ವರುಷವೂ ಭಾದ್ರಪದ ಬಹುಳ ನವಮಿ ಅವಿಧವಾ ನವಮಿ ಎಂದು ಆಚರಿಸಲ್ಪಡುತ್ತದೆ ಅಷ್ಟೆ. ಪ್ರತಿವರುಷವು ಕುಂದಗೊಳದಲ್ಲಿ ಇದೊಂದು ಸಂಗೀತ ಸಮಾರಾಧನೆ. ಕಾರಣ ಅದು ಸವಾಯಿ ಗಂಧರ್ವರೆಂದೇ ಖ್ಯಾತರಾದ ರಾಮಭಾವೂ ಕುಂದಗೋಳಕರ ಅವರ ಪುಣ್ಯದಿನ. ಆ ಸಂದರ್ಭದಲ್ಲಿ ದೇಶದ ಎಲ್ಲಾ ಕಡೆಯಿಂದಲೂ ಹೆಸರಾಂತ ವಿವಿಧ ಘರಾಣೆಗಳ ಗಾಯಕರು ಬಂದು ಈ ಸಂಗೀತ ಪುಂಗವನಿಗೆ ತಮ್ಮ ಸಂಗೀತ ಸೇವೆಯನ್ನು ಸಲ್ಲಿಸಿ ಹೋಗುತ್ತಾರೆ. ಪ್ರತಿ ವರುಷದ ಸಮಾರಾಧನೆ ಜರುಗುವುದು ಸವಾಯಿ ಗಂಧರ್ವರ ಹಿರಿಯ ಶಿಷ್ಯೆ ಡಾ. ಗಂಗೂಬಾಯಿ ಹಾನಗಲ್ಲ ಅವರ ನೇತೃತ್ವದಲ್ಲಿಯೇ. ಸವಾಯಿ ಗಂಧರ್ವರ ಮತ್ತೊಬ್ಬ ಜಾಗತಿಕ ಪ್ರಖ್ಯಾತಿಯ ಡಾ. ಭೀಮಸೇನ ಜೋಶಿಯವರು ಪುಣೆಯಲ್ಲಿ ಭವ್ಯಪ್ರಮಾಣದಲ್ಲಿ ತಮ್ಮ ಗುರುಗಳ ಆರಾಧನೆಯನ್ನು ಮೂರು ದಿನಗಳ ಸಂಗೀತ ಸಭೆಯ ರೂಪದಲ್ಲಿ ಜರುಗಿಸುತ್ತಾರೆ. ಈ ಉತ್ಸವಕ್ಕೆಕ ಸಹಸ್ರಾರು ಶ್ರೋತೃಗಳು ಮುಂಗಡವಾಗಿ ಟಿಕೀಟನ್ನು ರಿಝರ್ವ ಮಾಡಿಸಿರುತ್ತಾರೆ. ಎಲ್ಲಡೆಗಳಿಂದ ಹಿರಿಯ ಕಿರಿಯ ಗಾಯಕರು ಈ ಮಹಾ ಸಮಾರಾಧನೆಯಲ್ಲಿ ತಮ್ಮ ಸಂಗೀತಸೇವೆ ಸಲ್ಲಿಸಲುವಿ ನಾ ಮುಂದೆ ತಾ ಮುಂದೆ ಎಂದು ಬರುತ್ತಾರೆ. ಕುಂದಗೋಳದಲ್ಲಿ ಜರುಗುವ ಸಂಗೀತ ಸಮಾರಾಧನೆಯ ಕ್ಷೇತ್ರವಾದ ನಾಡಿಗೇರವಾಡೆ ಶ್ರೋತೃಗಳಿಂದ ಕಿಕ್ಕಿರಿದು ಅನೇಕ-ಜನರು ಬೀದಿ ಬೀದಿಗಳ ಇಕ್ಕೆಲಗಳಲ್ಲಿಯೂ ರೈಲ್ವೆ ಕಂಬಿಗಳ-ಗುಂಟವೂ ಸಭೆಯ ಲೌಡ್‌ಸ್ಪೀಕರ್ ನಿಂದ ಸೂಸಿಬರುವ ಸಂಗೀತವಾಹಿನಿಯನ್ನು ಸವಿಯುವದಕ್ಕೆಂದು ಕುಳಿತಿರುತ್ತಾರೆ. ಅಂದಿನ ಕುಂದಗೋಳವೆಂದರೆ ಸಂಗೀತ ಗಂಗೋತ್ರಿಯಾಗಿರುತ್ತದೆ.

ಹಿಂದುಸ್ತಾನಿ ಸಂಗೀತ ನಿಕ್ಷೆಯಲ್ಲಿ ಕುಂದಗೋಳ ಕಿರೀಟಪ್ರಾಯವಾಗಿಕ ಮೆರೆಯುವಂಥದು. ಈ ಚಿಕ್ಕ ತಾಲೂಕು ಸ್ಥಳಕ್ಕೆ ಇಂತಹ ಒಂದು ಕೀರ್ತಿಯನ್ನು ತಂದುಕೊಟ್ಟವರೆಂದರೆ ರಾಮಚಂದ್ರ ಗಣೇಶ ಕುಂದಗೋಳಕರ ಊರ್ಫ್ ಸವಾಯಿ ಗಂಧರ್ವರು. ಕುಂದಗೋಳ ಅವರ ಮನೆತನದ ಊರು. ಆದರೆ ರಾಮಭಾವು ಅವರು ಜನಿಸಿದ್ದು ಧಾರವಾಡದ ಸಮೀಪದ ಅಮ್ಮಿನಬಾವಿ ಎಂಬ ಗ್ರಾಮದಲ್ಲಿ. ಅದು ಅವರ ತಾಯಿಯ ತವರೂರು. ಇವರು ಮುಂದೆ ಬೆಳೆದು ನೆಲೆಸಿದುದು ಕುಂದಗೋಳದಲ್ಲಿಯೇ. ಹಾಗಾಗಿ ಕುಂದಗೋಳಕರ ಎಂಬುದೇ ಅವರ ಅಡ್ಡಹೆಸರಾಯಿತು. ಜನವರಿ ೧೯, ೧೯೯೯ರಂದು ಅವರು ಜನಿಸಿದರು. ಮೊದಮೊದಲು ಜಮಖಂಡಿ ಸಂಸ್ಥಾನಕ್ಕೆ ಅಧೀನವಾಗಿದ್ದ ಕುಂದಗೋಳ ಮರಾಠಿಮಯವೇ ಆಗಿದ್ದಿತು. ಆಡಳಿತ ಭಾಷೆ, ಶಿಕ್ಷಣ ಮಾಧ್ಯಮ ಮರಾಠಿಯೇ. ಇಂತಹ ವಾತಾವರಣದಲ್ಲಿ ಬೆಳೆದ ರಾಮಚಂದ್ರ ಆಡುಭಾಷೆಯಾಗಿ ಮರಾಠಿಯನ್ನೇ ಅವಲಂಬಿಸಿದ. ಪ್ರಾಥಮಿಕ ಶಿಕ್ಷಣವೂ ಮರಾಠಿಯಲ್ಲಿಯೇ ನಡೆಯಿತು. ಬಾಲಕ ರಾಮಚಂದ್ರ ಶಾಲೆಯಲ್ಲಿ ಕವಿತೆ ಹೇಳುವಲ್ಲಿ ವರ್ಗದ ಎಲ್ಲ ಬಾಲಕರಿಗಿಂತಲೂ ಮೇಲು. ದೇವದತ್ತವಾದ ಕಂಚಿನ ಕಂಠ. ಸಂಗೀತದತ್ತ ಒಲವಿದ್ದ ತಂದೆಯವರು ಅಲ್ಲಿಯ ದತ್ತದೇವಸ್ಥಾನದಲ್ಲಿ ಭಜನೆ, ನಾಮಸ್ಮರಣೆ ನಡೆಸುತ್ತಿದ್ದರು. ದೇವರ ಪಲ್ಲಕ್ಕಿ ಸೇವೆ ನಡೆದಾಗ ಅಲ್ಲಿಯ ಭಜನೆ, ಕೀರ್ತನೆಗಳನ್ನು ಕೇಳಲು ರಾಮಚಂದ್ರ ಆಸಕ್ತಿಯಿಂದ ಕಿವಿದೆರೆದು ನಿಂತಿರುತ್ತಿದ್ದ.

ಕುಂದಗೋಳದಲ್ಲಿ ಆಗ ಇಂಗ್ಲೀಷ್‌ ಶಾಲೆ ಇದ್ದಿರಲಿಲ್ಲ. ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ರಾಮಚಂದ್ರನಿಗೆ ಮುಂದೆ ಏನುಮಾಡಬೇಕು ಎಂಬ ಪ್ರಶ್ನೆ. ತಂದೆ ಗಣೇಶರಾವ ಶ್ರೀಮಂತರಲ್ಲ. ಅವರ ಗಳಿಕೆ ತಿಂಗಳಿಗೆ ನಾಲ್ಕು ರೂಪಾಯಿ. ಅದೂ ಒಂದು ಹಳ್ಳಿಯ ಗೌಡಕಿಯಿಂದಾಗಿ, ಗಣೇಶರಾಯರು ಈ ನೌಕರಿಯನ್ನು ಬಿಟ್ಟು ಕುಂದಗೋಳದ ನಾಡಿಗೇರ ರಂಗನಗೌಡರ ಖಾಸಗಿ ಗುಮಾಸ್ತನೆಂದು ಅವರ ವಾಡೆಯಲ್ಲಿ ಕೆಲಸ ಮಾಡತೊಡಗಿದರು. ಗಣೇಶರಾಯರ ಮನೆ ತೀರ ಚಿಕ್ಕದು. ರಾಮಚಂದ್ರ ತನ್ನ ವೇಳೆಯನ್ನು ಹೆಚ್ಚಾಗಿ ವಾಡೆಯಲ್ಲಿಯೇ ತನ್ನ ಓರಿಗೆಯವರೊಂದಿಗೆ ಕಳೆಯುತ್ತಿದ್ದ. ಪ್ರಾಥಮಿಕಕ ಶಿಕ್ಷಣ ಮುಗಿಸಿದ ಮೇಲೆ ರಾಮಭಾವು ಒಂದೆರಡು ವರ್ಷ ತನ್ನ ಮಿತ್ರರೊಂದಿಗೆ ಹುಬ್ಬಳ್ಳಿಯ ಲ್ಯಾಮಿಂಗ್ಟನ್‌ ಹಾಯ್‌ಸ್ಕೂಲಿಗೆ ನಿತ್ಯವೂ ರೈಲಿನಿಂದ ಓಡಾಡುತ್ತ ಕಲಿಯತೊಡಗಿದ. ಆದರೆ ತಂದೆಗೆ ಆರ್ಥಿಕ ಅನುಕೂಲ ಇಲ್ಲದ್ದರಿಂದ ರಾಮಚಂದ್ರನ ವಿದ್ಯಾರ್ಜನೆ ಅಷ್ಟಕ್ಕೆ ನಿಂತುಹೋಯಿತು. ರಾಮಚಂದ್ರ ನಾಡಿಗೇರ ವಾಡೆಯಲ್ಲಿಯೇ ಹೆಚ್ಚಾಗಿ ವಾಸವಾಗಿರುತ್ತಿದ್ದ. ವಾಡೆಯಲ್ಲಿ ಆಗಾಗ ದೊಡ್ಡ ಸಂಗೀತಗಾರರ ಜಲಸಾ ಕಾರ್ಯಕ್ರಮಗಳು ಜರುಗುತ್ತಿದ್ದವು. ರಾಮಚಂದ್ರನ ಸಂಗೀತ ಆಸಕ್ತಿಗೆ ಇದರಿಂದಾಗಿ ಪುಟ ಸಿಕ್ಕಂತಾಯಿತು.

ಧಾರವಾಡದಲ್ಲಿ ಭಾಸ್ಕರಬುವಾ ಬಖಲೆ ಎಂಬ ಶ್ರೇಷ್ಠ ಸಂಗೀತಗಾರರು ಸಂಗೀತ ಶಿಕ್ಷಕರಾಗಿ ನೆಲೆಸಿದ್ದರಿಂದ ಅವರಲ್ಲಿಗೆ ಬೇರೆ ಬೇರೆ ಘರಾಣೆಗಳ ಸಂಗೀತಗಾರರು ಬಂದು ಹೋಗುತ್ತಿದ್ದರು. ನತ್ತನಖಾನ ಅವರಂತಹ ಶ್ರೇಷ್ಠ ಗವಾಯಿಗಳು ಹೆಸರಾಂತ ಮೈಸೂರ ಅರಮನೆಯ ದಸರಾ ಬೈಠಕ್‌ ಮುಗಿಸಿ ಹಿಂತಿರುಗುವಾಗ ಭಾಸ್ಕರಬುವಾ ಅವರನ್ನು ಭೇಟಿಯಾಗಿ ಎರಡು ದಿನ ಉಳಿದು ಮುಂದೆ ಹೋಗುತ್ತಿದ್ದರು. ಇಂತಹ ಗಾಯಕರಲ್ಲಿ ಮೀರಜದ ಖಾನಸಾಹೇಬ ಅಬ್ದುಲ್‌ ಕರೀಂಖಾನರೂ ಒಬ್ಬರು. ಅವರು ಧಾರವಾಡಕ್ಕೆ ಬಂದಾಗ ಕುಂದಗೋಳದ ರಂಗನಗೌಡರು ಒತ್ತಾಯದಿಂದ ತಮ್ಮ ವಾಡೆಗೆ ಕರೆಯಿಸಿಕೊಂಡರು. ಕಂಠಮಾಧುರ್ಯ ಕಲಾನೈಪುಣ್ಯಗಳಿಂದ ಖ್ಯಾತಿಗೆ ಬಂದ ಖಾನಸಾಹೇಬರು ವಾಡೇದಲ್ಲಿ ತಮ್ಮ ಜಲಸಾ ಕಾರ್ಯಕ್ರಮ ನಡೆಸಿದಾಗ ಭರ್ತಿ ತುಂಬಿದ ಸಂಗೀತ ಪ್ರೇಮಿಗಳ ಹೃದಯಗಳನ್ನು ಸೂರೆಗೊಂಡರು.

ಸ್ವರಸಾಧನೆ, ಸ್ವರದ ಇಂಪು, ಕಿರಾಣಾ ಘರಾಣೆಯ ಮುಖ್ಯ ವೈಶಿಷ್ಟ್ಯ. ಕುಂದಗೋಳ ವಾಡೇದಲ್ಲಿ ನಡೆದ ಕಿರಾನಾ ಘರಾಣೇಯ ಸಂಸ್ಥಾಪಕ ಖಾನಸಾಹೇಬರ ಸಂಗೀತ ಕಚೇರಿಯನ್ನು ಕೇಳಿದ ಬಾಲಕ ರಾಮಭಾವೂ ಮರುದಿನ ಭೈರವಿರಾಗದ ಜಮುನಾಕೆ ತೀರ ಎಂಬ ಚೀಜನ್ನು ಗುಣು ಗುಣಿಸುತ್ತಿರುವಾಗ ರಂಗನಗೌಡರನ್ನು ಖಾನ ಸಾಹೇಬರು “ಈ ಹುಡುಗ ಯಾರು” ಎಂದು ಪ್ರಶ್ನಿಸಿದರು. ಗೌಡರು ರಾಮಭಾವೂನನ್ನು ಬಳಿ ಕರೆದು “ನಮ್ಮ ಕಾರಕೂನ ಗಣಪತರಾಯರ ಮಗ. ಇವನಿಗೂ ಸಂಗೀತವೆಂದರೆ ಆಸಕ್ತಿ” ಎಂದು ಪರಿಚಯಿಸಿದರು. “ಗಾವೋ ಬೇಟಾ ಗಾವೋ” ಎಂದು ಖುಷಿಯಾಗಿದ್ದ ಖಾನಸಾಹೇಬರು ರಾಮಭಾವೂನ ಬೆನ್ನು ತಟ್ಟಿದರು.

ರಾಮಭಾವೂಗೆ ಅಷ್ಟೇ ಸಾಕಾಯಿತು. ಕಂಠಪಾಠವಾಗಿ ಬರುತ್ತಿದ್ದ ಕೆಲವು ಭಜನೆಗಳನ್ನು ಹೇಳಿ ಕೊನೆಯ ಭೈರವೀ ಭಜನೆಯಲ್ಲಿ ಜಮುನಾಕೆ ತೀರದ ಛಾಯೆಯನ್ನು ಕಂಡ ಖಾನಸಾಹೇಬರು ಮುಗುಳನಗೆ ನಕ್ಕರು. “ಗಲಾ ಅಚ್ಛಾ ಹೈ. ರಿಯಾಜ ಕರೋ” ಎಂದು ಉತ್ತೇಜನಪೂರ್ವಕವಾಗಿ ನುಡಿದರು. “ತಮ್ಮಂತಹ ಗುರುಗಳು ದೊರಕಿದರೆ ಹುಡುಗ ಮುಂದೆ ಬಂದಾನು” ಎಂದು ಗೌಡರು ಅರಿಕೆ ಮಾಡಿಕೊಂಡರು. ‘ಕುಛ ಪರವಾಹ ನಹಿ’ ಗುರುಗಳು ಸಮ್ಮತಿಯನ್ನು ಸೂಚಿಸಿಯೇ ಬಿಟ್ಟರು. ಇಂತಹ ಸುಂದರ ಶಾರೀರದ ಶಿಷ್ಯನೊಬ್ಬ ದೊರಕಿದುದರಿಂದ ಅವರಿಗೆ ಸಂತೋಷವೇ ಆಯಿತು.

ರಾಮಚಂದ್ರನಿಗೆ ಹೊಸ ಭವಿಷ್ಯ ಬಾಗಿಲು ತೆರೆಯಿತು. ಈ ತರುಣ ಕಲೋಪಾಸಕನನ್ನು ತಮ್ಮೊಡನೆಕ ಕರೆದುಕೊಂಡು ಹೋಗಲು ಕತಂದೆಯ ಅನುಮತಿ ಕೇಳಿದರು. ಕ್ಷಣಹೊತ್ತು ತಂದೆಯ ಹೃದಯ ಹೊಯ್ದಾಡಿತು. ರಂಗನಗೌಡರು ಹೇಳಿದರು. “ಗಣೇಶರಾವ, ನಿಮ್ಮ ಮಗನ ದೈವ ಖುಲಾಯಿಸಿತು. ಖಾನಸಾಹೇಬರ ಕಡೆ ಇದ್ದು ಕಲೀಲಿ. ನನ್ನ ಮಾತು ಕೇಳ್ರಿ. ಹುಡಗನ್ನ ಕಳಿಸಿಕೊಡ್ರಿ” ಎಂದು ಹೇಳಿದರು. ಗಣೇಶರಾಯರಿಗೆ ಖಾನಸಾಹೇಬರು ಅನ್ಯ ಜಾತಿಯವರಾಗಿದ್ದು ಅವರ ಊಟ-ಉಡುಗೆಗಳೇನೋ! ಅವರ ನಡತೆ ಸಂಪ್ರದಾಯಗಳೆನೋ! ಅದೂ ಅಲ್ಲದೆ ಹಿರಯ ಮಗನಾಗಿ ಮನೆತನದ ಹೊಣೆಗಾರಿಕೆ ವಹಿಸಬೇಕಲ್ಲ! ಮುಪ್ಪಿನ ಕಾಲಕ್ಕೆ ತಮ್ಮನ್ನು ನೋಡಿಕೊಳ್ಳುವವರಾರು? ಆಗಲೇ ಮನೆಯಲ್ಲಿ ಗೃಹಿಣಿ ಕಣ್ಮರೆಯಾಗಿ ಸಂಸಾರನೌಕೆ ಬುಡಮೇಲಾಗಿತ್ತು. ಬೇಗನೇ ಹಿರಿಯ ಸೊಸೆ ಮನೆತುಂಬಿ ಮನೆದೀಪ ಬೆಳಗಬೇಕು ಎಂಬುದು ತಂದೆಯ ಮನೀಷೆ. ತಾಯಿ ಇಲ್ಲದೇ ರಾಮಭಾವೂ ಚಿಕ್ಕಮ್ಮ ತುಳಸಕ್ಕನ ಆರೈಕೆ, ಆಸರೆಯಲ್ಲಿ ಬೆಳೆದಿದ್ದ. ಹಿರಿಯ ಮಗ ಕಣ್ಣಮುಂದೇ ಇರಲಿ ಆತನಿಂದಲೇ ಬಡತನದ ಬಾಳಿಗೆ ಬಿಡುಗಡೆ ದೊರತೀತು ಎಂದು ಕನಸು ಕಟ್ಟಿದ್ದ ಗಣೇಶರಾಯರು ಮೊದಮೊದಲಿಗೆ ಬೇಡವೆಂದರೂ ಮಗನ ಉತ್ಸುಕತೆ ಮತ್ತು ಗೌಡರ ಆಗ್ರಹಗಳಿಂದಾಗಿ ಒಪ್ಪಿಕೊಳ್ಳಲೇ ಬೇಕಾಯಿತು. ಗಣೇಶ ಸಂಶಿ ಅವರು ಖಾನಸಾಹೇಬರೊಂದಿಗೆ ಮಗನನ್ನು ಮೀರಜಿಗೆ ಕಳುಹಿಸಿಕೊಟ್ಟರು.

ಖಾನಸಾಹೇಬರು ಮುಂಬಯಿ, ಪುಣೆ, ಮೀರಜ್‌, ಬೆಳಗಾವಿ ಮೊದಲಾಸ ಸ್ಥಳಗಳಲ್ಲಿ ತಮ್ಮ ಆರ್ಯಸಂಗೀತ ವಿದ್ಯಾಲಯದ ಶಾಖೆಗಳನ್ನು ಸ್‌ಆಪಿಸಿದ್ದರು. ಮೀರಜ್‌ ವಿದ್ಯಾಲಯವು ಅವರ ಮುಖ್ಯ ಕೇಂದ್ರವಾಗಿತ್ತು. ಖಾನಸಾಹೇಬರ ಸಂಗೀತ ವೃತ್ತಿಯ ವೈಭವದ ಕಾಲವದು. ಅಂತೆಯೇ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚತೊಡಗಿತ್ತು. ವಿದ್ಯಾರ್ಥಿಗಳಿಂದ ಹಣವನ್ನು ಹೀರಿ ಚಿನ್ನದ ಮಹಲು ಕಟ್ಟಿಸಬೇಕೆಂಬ ವ್ಯಾಪಾರೀ ಮನೋವೃತ್ತಿ ಖಾನಸಾಹೇಬರದ್ದಾಗಿರಲಿಲ್ಲ. ಮುಖ್ಯವಾಗಿ ಕೆಲವರಾದರೂ ಶಿಷ್ಯರು ಕಿರಾನಾ ಘರಾಣೆಯ ಹೆಸರನ್ನು ಉಳಿಸಿಕೊಂಡು ಬರುವಂತೆ ಅವರಿಗೆ ತರಬೇತಿ ಕೊಡಬೇಕು ಎಂಬುದು ಅವರ ಆಶೆಯಾಗಿತ್ತು. ಅರ್ಧಕ್ಕೆ ಬಿಟ್ಟುಹೋದ ವಿದ್ಯಾರ್ಥಿಗಳು ಅರೆಪಾಂಡಿತ್ಯದಿಂದ ಸಂಗೀತ ಶಾರದೆಗೆ ಮತ್ತು ತಮ್ಮ ಘರಾಣೆಗೆ ಅಪಚಾರ ಮಾಡುವಂತಾಗಬಾರದೆಂಬ ಉದ್ದೇಶದಿಂದ ಎಂಟು ವರ್ಷದ ಒಂದು ಕರಾರು ಪತ್ರವನ್ನು ಶಿಷ್ಯರಿಂದ ಬರೆಸಿಕೊಳ್ಳುತ್ತಿದ್ದರು.

ರಾಮಭಾವೂ ಅತ್ಯಂತ ಶ್ರದ್ಧೆಯಿಂಧ ಶಿಷ್ಯತ್ವವನ್ನು ವಹಿಸಿದರು. ಗುರುಶುಶ್ರೂಷೆ ಅವರ ಸಂಗೀತ ಸಾಧನೆಗೆ ಒಂದು ತಪಃ ಕರ್ಮವಾಗಿತ್ತು. ಇತ್ತ ಗುರು ಖಾನಸಾಹೇಬರು ದೈವೀ ಮನೋಭಾವವುಳ್ಳವರು. ಶಿಷ್ಯರಿಂದ ಯಾವುದೇ ಬಗೆಯ ಸೇವಾ ಶುಶ್ರೂಷೆಯನ್ನು ಬಯಸಿದವರಲ್ಲ. ಅವರ ಪತ್ನಿ ತಾರಾಬಾಯಿ ಮಾತ್ರ ಶಿಷ್ಯರು ಹಣದಿಂದ ಸಲ್ಲಿಸಲಾಗದ್ದನ್ನು ಕಾಯಕಷ್ಟದಿಂದಲಾದರೂ ಸಲ್ಲಿಸಲಿ ಎಂಬ ಮನೋಭಾವ ಉಳ್ಳವರಾಗಿದ್ದರು. ಇದರಿಂದಾಗಿ ಖಾನಸಾಹೇಬರಿಗೂ ತಾರಾಬಾಯಿಗೂ ನಡು ನಡುವೆ ಮುನಿಸು ಮಿಡುಕುಗಳು ನಡೆಯುತ್ತಲೇ ಇದ್ದವು. ರಾಮಭಾವೂ ಗುರುಗಳ ಜೊತೆ ಮೀರಜದಿಂದ ಊರೂರಿಗೆ ಕಾರ್ಯಕ್ರಮಗಳಿಗಾಗಿ ಸಂಚಾರಮಾಡುತ್ತಲೇ ಇದ್ದರು. ಕಚೇರಿಗಳಲ್ಲಿ ಗುರುಗಳ ಜೊತೆಗೆ ತಂಬೂರಿ ಸಾಥಿ ಹೆಚ್ಚಾಗಿ ರಾಮಭಾವೂ ಅವರದೇ ಇರುತ್ತಿತ್ತು. ಗುರುಗಳ ಊರೂರಿನ ಬೈಠಕಿಗಳನ್ನು ತಾಸುಗಟ್ಟಲೆ ಕೇಳುವುದರಿಂದಲೆ ರಾಮಭಾವೂ ತನ್ನ ಸಂಗೀತದ ಕೃಷಿಮಾಡಿ ಪುಷ್ಟಿಗೊಳಿಸಿಕೊಳ್ಳುವರು. ಈ ಶ್ರವಣ ಸಂದರ್ಭಗಳನ್ನು ರಾಮಭಾವೂ ಎಂದೂ ಕಳೆದುಕೊಳ್ಳುತ್ತಿರಲಿಲ್ಲ. ಇದು ಕೂಡ ಗಂಟೆಗಟ್ಟಲೆ ನಡೆಯುವ ಉತ್ತಮ ಸಂಗೀತ ಪಾಠವೇ ಆಗಿರುತ್ತಿತ್ತು. ಸಂಗೀತ ಶಿಕ್ಷಣದಲ್ಲಿ ಶ್ರವಣವೇ ಪ್ರಧಾನವಾಗಿರಬೇಕು ಎಂಬುದು ಖಾನಸಾಹೇಬರ ಮತವಾಗಿದ್ದಿತು. ಖಾನಸಾಹೇಬರ ನೆಚ್ಚಿನ ಶಿಷ್ಯವರ್ಗದಲ್ಲಿ ರಾಮಭಾವೂ ಜೊತೆಗೆ ಕಪಿಲೇಶ್ವರಿ ಬಂಧುಗಳು, ದಶರಥ ಮುಳೆ, ಅನಂತ ಗಾಡಗೀಳ,ರಾಮಚಂದ್ರ ಬೋಡಸ್‌, ರಾಮಕೃಷ್ಣ ಶಿರೋಡಕರ, ಬೆಹರೆಬುವಾ, ಶಂಕರರಾವ ಸರನಾಯಕ ಇವರೇ ಮೊದಲಾದವರಿದ್ದರು.

ಖಾನಸಾಹೇಬರ ಶಿಕ್ಷಣ ಪದ್ಧತಿ ವಿಶಿಷ್ಟ ಪ್ರಕಾರದ್ದಾಗಿತ್ತು. ಶಾಸ್ತ್ರೀಯ ಸಂಗೀತದ ಸೈದ್ಧಾಂತಿಕ ಭಾಗವನ್ನು ಅಭ್ಯಾಸ ಮಾಡಿಸುವಲ್ಲಿ ಕೂಡ ಅವರು ಶಿಷ್ಯರಿಗೆ ಬರೆದುಕೊಳ್ಳಲು ಹೇಳುತ್ತಿದ್ದಿಲ್ಲ. ಎಲ್ಲವನ್ನು ಶಿಷ್ಯರು ಗುರುಮುಖೇನ ಕೇಳಿ ಕಲಿಯಬೇಕು. ಈ ಪ್ರಯೋಗಾತ್ಮಕ ಪದ್ಧತಿಯೇ ಹೆಚ್ಚು ಉಪಯುಕ್ತ ಎಂದು ಬಗೆದು ತಮ್ಮ ಶಿಷ್ಯರಿಗೆ ಅದೇ ರೀತಿ ಅಭ್ಯಾಸ ಮಾಡಿಸುತ್ತಿದ್ದರು. ಪ್ರತ್ಯಕ್ಷ ಹಾಡುಗಾರಿಕೆಯಲ್ಲಿ ಸಂಗೀತದ ಶಾಸ್ತ್ರೀಯ ಭಾಗವೂ ಅಡಕವಾಗಿರುತ್ತದೆ ಎಂದು ಖಾನ ಸಾಹೇಬರು ಹೇಳುತ್ತಿದ್ದರು. ಆಯಾ ರಾಗದ ಸ್ವರದ ಮೇಲೂ ಖಚಿತ ತಾಲೀಮು ಮಾಡುವ ಪ್ರಯೋಗಾತ್ಮಕ ಪದ್ಧತಿಯಿಂದ ಸ್ವರಜ್ಞಾನವಾಗಬೇಕಲ್ಲದೆ ಪುಸ್ತಕದೊಳಗಿನ ನೊಟೇಶನ್‌ ಓದಿಕೊಂಡಲೊಲಲ ಎಂದು ಅವರು ಅಭಿಪ್ರಾಯಪಡುತ್ತಿದ್ದರು. ಆ ಮೇರೆಗೆ ಶಿಷ್ಯರು ತಮ್ಮ ಸಂಗೀತ ಕಚೇರಿಗಳನ್ನೇ ಹೆಚ್ಚು ಹೆಚ್ಚಾಗಿ ಕೇಳುವ ಅವಕಾಶಗಳನ್ನು ಕಲ್ಪಿಸಿಕೊಡುತ್ತಿದ್ದರು. ರಾಮಭಾವು ಸಂಗೀತ ಸಭೆಗಳಲ್ಲಿ ತಂಬೂರಿ ಮೀಟುವುದಕ್ಕೆಂದು ಕುಳಿತಿದ್ದರು. ಗುರುವಿನೊಂದಿಗೆ ಸ್ವರಬೆರೆಸುತ್ತ ಹಾಡುತ್ತಿದ್ದರು. ಇದೇ ಅವರಿಗೆ ಹೆಚ್ಚಿನ ಪಾಠವಾಗುತ್ತಿತ್ತು. ಸಂಗೀತ ಪಾಠದ ಕಾಲಕ್ಕೆ ಒಬ್ಬೊಬ್ಬ ಶಿಷ್ಯನ ಬಗ್ಗೆಯೂ ಗುರುಗಳು ವೈಯುಕ್ತಿಕ ಗಮನ ನೀಡುತ್ತಿದ್ದರು. ಅವರ ಲೋಪದೋಷಗಳನ್ನು ತಿದ್ದುತ್ತಿದ್ದರು. ಇದರಿಂದ ಶಿಷ್ಯರಿಗೆ ತಮ್ಮ ದಾರಿಯಲ್ಲಿ ಮುಂದುವರಿಯುವುದಕ್ಕೆಕ ಮಾರ್ಗ ಮಾಡಿಕೊಟ್ಟಂತಾಗುತ್ತಿತ್ತು. ತಮ್ಮ ಸಂಗೀತ ಜಲಸಾ ಕಾರ್ಯಕ್ರಮಗಳಲ್ಲಿ ಖಾನಸಾಹೇಬರು ತರುಣ ಶಿಷ್ಯರಿಗೆ ತಂತಮ್ಮ ಕಲಾಪ್ರತಿಭೆಯನ್ನು ಪ್ರದರ್ಶಿಸುವುದಕ್ಕೆ ಅವಕಾಶ ಕಲ್ಪಿಸಿಕೊಡುತ್ತಿದ್ದರು.

ರಾಮಭಾವೂ ಅವರ ಸಂಗೀತ ಸಾಧನೆ ಇದೇ ರೀತಿಯಾಗಿ ಮುಂದುವರಿಯತೊಡಗಿತು. ಅವರು ಖಾನ್‌ಸಾಹೇಬರ ಶಿಷ್ಯತ್ವವನ್ನು ವಹಿಸುವ ಮುಂಚೆ ಬೆಳಗಾವಿಯ ಉಮಾಮಹೇಶ್ವರ ಬುವಾ ಎಂಬ ಗಾಯಕರಿಂದ ದ್ರುಪದ ಗಾಯಕಿ ಕಲಿತಿದ್ದರು. ಇದರಿಂದಾಗಿ ಕಿರಾನಾ ಘರಾಣೆಯ ಸಂಗೀತವು ಇವರಿಗೆ ಕರಗತವಾಗಲು ಸುಲಭವಾಯಿತು.

ರಾಮಭಾವೂ ಖಾನಸಾಹೇಬರ ಕಡೆಗೆ ಬಂದಾಗ ಗುರುದಕ್ಷಿಣೆಯ ಯಾವುದೇ ಕರಾರು ಇರಲಿಲ್ಲ. ನಿಷ್ಠೆ, ಶ್ರದ್ಧೆ, ದೈನಂದಿನ ಪರಿಶ್ರಮ ಇವೇ ಖಾನಸಾಹೇಬರಂತಹ ವಿದ್ಯಾಗುರುವಿಗೆ ಕೊಡಬೇಕಾದ ಕಾಣಿಕೆಯಾಗಿದ್ದವು.

ಗುರುಗಳ ಬಳಿ ನಸುಕಿನಲ್ಲಿ ರಾಮಭಾವೂ ತಂಬೂರಿ ಹಿಡಿದು ಕುಳಿತರೆಂದರೆ ಏಳೆಂಟು ಘಂಟೆಯವರೆಗೆ ಅಖಂಡ ಅಭ್ಯಾಸ ನಡೆಯುತ್ತಿತ್ತು. ರಾಗರಾಗಿಣಿಗಳನ್ನು ಕಲಿಸುವ ಪದ್ಧತಿಯಲ್ಲಿಯೂ ಖಾನಸಾಹೇಬರದೆ ಆದ ಒಂದು ವೈಶಿಷ್ಟ್ಯವಿದ್ದಿತು. ಬಹಳ ರಾಗಗಳನ್ನು ಕಲಿಯಬೇಕು ಇಲ್ಲವೆ ಕಲಿಸಬೇಕು ಎಂಬುದು ಖಾನಸಾಹೇಬರ ಮಹತ್ವಾಕಾಂಕ್ಷೆಯಾಗಿರಲಿಲ್ಲ. ರಾಮಭಾವೂಗೆ ಒಂದು ಪೂರಿಯಾರಾಗದ ಪಾಠವನ್ನೆ ಇಡಿಯ ವರ್ಷ ಕಲಿಸಿದರು. ಖಾನಸಾಹೇಬರ ಗರಡಿಯಲ್ಲಿ ರಾಮಭಾವೂ ಅವರ ಸಂಗೀತಸಾಧನೆ ಅವ್ಯಾಹತವಾಗಿ ಮುಂದುವರೆಯಿತು. ಗುರುಗಳಿಂದ ಪ್ರಾತಃ ಕಾಲ, ಅಪರಾಹ್ನ ಮತ್ತು ಸಾಯಂಕಾಲದಲ್ಲಿ ಹೇಳುವ ತೋಡಿ, ಮುಲ್ತಾನಿ, ಪೂರಿಯಾ ಎಂಬ ಮೂರು ಮುಖ್ಯ ರಾಗಗಳನ್ನು ಸಂಪೂರ್ಣವಾಗಿ ಕರಗತ ಮಾಡಿಕೊಂಡರು. ಗುರುಗಳ ಪ್ರಭಾವದಿಂದಾಗಿ ಈ ಮೂರು ರಾಗಗಳಿಂದ ನೂರು ರಾಗಗಳನ್ನು ಕಲಿತುಕೊಳ್ಳುವಂಥ ಸ್ವಬುದ್ಧಿ ಮತ್ತೆ ಅವರಲ್ಲಿ ಬಲವಾಗಿ ಬೆಳೆದುಬಂತು. ಶಿಷ್ಯನ ಸಾಧನೆ, ಪ್ರಗತಿ, ಪರಿಶ್ರಮಗಳನ್ನು ಕಂಡು ಗುರುವಿಗೆ ಆನಂದವೂ ಆಯಿತು. ಅಭಿಮಾನವೂ ಮೂಡಿತು.

ರಾಮಭಾವೂ ಶಾಸ್ತ್ರೀಯ ಸಂಗೀತದೊಡನೆ ಠುಮರಿ, ಭಜನ ಸಂಗೀತಗಳಲ್ಲಿ ಕೂಡ ನೈಪುಣ್ಯವನ್ನು ಸಾಧಿಸಿದರು. ಇದೆಲ್ಲವೂ ಗುರುಕರುಣೆಯಿಂದಲೆ ದೊರೆತ ಸಿರಯಾಗಿತ್ತು. ಖಾನಸಾಹೇಬರು ಭಾವಪೂರ್ಣವಾಗಿ ಹೇಳುತ್ತಿದ್ದ ‘ಗೋಪಾಲಾ ಮೇರೆ ಕರುಣಾ ಕ್ಯೂಂನ ಆವೆ; ರಾಮ ಹರಿಕಾ ಭೇದನ ಪಾಯೋ’ ಎಂಬ ಭಕ್ತಿಪರ ರಚನೆಗಳನ್ನು ರಾಮಭಾವೂ ಹಾಡಿದರೆ ಅವರ ಕಂಠಶ್ರೀಯಲ್ಲಿ ಖಾನಸಾಹೇಬರ ಶಾರೀರವೇ ಪ್ರತಿಧ್ವನಿಸುತ್ತಿತ್ತು.

ಶಾಸ್ತ್ರೀಯ ಸಂಗೀತವನ್ನು ಹೇಳುವಾಗ ರಾಗಗಳ ಸ್ವರೂಪವನ್ನು ಎತ್ತಿತೋರಿಸುವ ಆಲಾಪನೆಯ ರೀತಿ, ಭಾವನೆಯಿಂದ ತುಂಬಿದ ಸ್ವರಗಳ  ಇಂಪಿನಿಂದ ಕೇಳುಗರ ಅಂತಃಕರಣವನ್ನು ಸೂರೆಗೊಳ್ಳುವ ಸಾಧನೆ, ಇದೆಲ್ಲವೂ ಖಾನಸಾಹೇಬರ ವರಪ್ರಸಾದವೇ ಆಗಿತ್ತು. ಕಿರಾನಾ ಘರಾಣೆಯ ಮೂಲ ವೈಶಿಷ್ಟ್ಯವೆಂದರೆ ಇಂಚರ, ಸ್ವರ ಸಾಮರಸ್ಯ, ಸ್ವರ ಮಾಧುರ್ಯವೂ ರಾಮಭಾವೂ ಅವರ ಶಾರೀರದ ಸಹಜ ಲಕ್ಷಣವಾಗಿತ್ತು. ಶಾಸ್ತ್ರೀಯ ಸಂಗೀತದ ಮುಖ್ಯ ಲಕ್ಷಣಗಳಾದ ಮೀಂಡ್‌, ಬಢತ್‌, ಘಸೀಟ್‌, ಬೋಲ್ತಾನ್‌, ಮೂರ್ಛನಾ, ಖಟಕಾ, ಮುರ್ಕಿ, ಈ ಎಲ್ಲ ಅಲಂಕಾರಗಳು ವೈಶಿಷ್ಟ್ಯಪೂರ್ಣವಾಗಿ ಎದ್ದು ಕಾಣತೊಡಗಿದವು.

ಠುಮರಿ, ಭಕ್ತಿಗೀತೆಗಳನ್ನು ಹೇಳುವಾಗ ಶಾಸ್ತ್ರೀಯ ಸಂಗೀತದ ಬಿಗುವು ಲಾಲಿತ್ಯಕ್ಕೆ ಹೊರಳುತ್ತಿತ್ತು. ಮುಖ್ಯವಾಗಿ ಆಯಾ ರಚನೆಯ ರಸಭಾವಗಳನ್ನು ಅರಿತುಕೊಂಡು ಅದಕ್ಕೆ ಸರಿಯಾದ ಶೈಲಿಯನ್ನು ಅಳವಡಿಸಿಕೊಳ್ಳುವ ಹದವು ರಾಮಭಾವೂ ಅವರಿಗೆ ಸಾಧಿಸಿದ್ದಿತು. ‘ಐಸೆ ನಾಮಾರೋ ಪಿಚಕಾರಿ’ ಎಂಬ ಠುಮರಿ ಗಾಯನದಲ್ಲಿ ಶ್ರೀಕೃಷ್ಣನಿಗೆ ಗೋಪಿ ಜೀಕಳಿಯನ್ನು ಹೊಡೆಯಬೇಡ ಎಂದು ದೈನ್ಯದಿಂದ ಬೇಡಿಕೊಳ್ಳುವ ಕರುಣೆ, ಶೃಂಗಾರಗಳ ಸೊಗಸಾದ ಮಿಶ್ರಣವು ರಾಮಭಾವೂ ಅವರ ಕಂಠದಿಂದ ಹೊರಹೊಮ್ಮುತ್ತಿತ್ತು. ಇದರೊಂದಿಗೆ ಮರಾಠಿ ಅಭಂಗಗಳನ್ನು ತಮ್ಮದೇ ಆದ ಭಕ್ತಿಮಯವಾದ ಶೈಲಿಯಲ್ಲಿ ಅಳವಡಿಸಿಕೊಂಡಿದ್ದರು. ‘ಕಾಲ್ಹೆಒಬಾ ತುಝಿ ಘೊಂಗಡಿ ಚಾಂಗಲಿ ಆಮ್ಹಾಸಿ ಕಾಹಿಲಿ ಪಾಂಗಲಿ’ ಎಂಬ ಮರಾಠಿ ಅಭಂಗವನ್ನು ಹಾಡಿದರೆಂದರೆ ಗಾಯಕರೊಂದಿಗೆ ಶ್ರೋತೃಗಳೂ ಭಕ್ತಿಪರವಶರಾಗಿ ಹೋಗುತ್ತಿದ್ದರು. ಖಾನಸಾಹೇಬರು ಜಾತಿಯಿಂದ ಮಹಮ್ಮದೀಯರಾಗಿದ್ದರೂ ಶ್ರೀಕೃಷ್ಣನ ಮಹಿಮೆಯನ್ನು ಕೊಂಡಾಡುವ ಅನೇಕ ಧುನ್‌ಗಳನ್ನು ಹಿತವಾಗಿ ಹಾಡುತ್ತಿದ್ದರು. ಜೋಗಿಯಾ ರಾಗದ ‘ರಾಮಹರಿಕಾ ಭೇದನ ಪಾಯೋ’ ಎಂಬ ಭಕ್ತಿರಚನೆಯನ್ನು ಖಾನಸಾಹೇಬರು ಎಷ್ಟುಸಲ ಹಾಡಿರಬೇಕೊ ಅಷ್ಟು ಸಲವೂ ರಾಮಭಾವೂ ಅವರು ಅದನ್ನು ತನ್ಮಯತೆಯಿಂದ ಕೇಳಿ ಮೈಗೂಡಿಸಿಕೊಂಡಿದ್ದರು. ಇದರಿಂದಾಗಿ ಈ ಗೀತೆಯನ್ನು ಹೇಳುವಾಗ ತಾನ ತಾನಕ್ಕೂ His Master’s Voice ಎಂಬಂತೆ ಖಾನಸಾಹೇಬರ ಕಂಠವೇ ಪಡಿನುಡಿಯುತ್ತಿದೆಯೇನೋ ಎಂಬಂತೆ ತೋರುತ್ತಿತ್ತು.

ರಾಮಭಾವೂ ಅವರು ಗುರುಗಳು ಕಲಿಸಿದ ಗಾಯಕಿಯನ್ನು ಕಷ್ಟಪಟ್ಟು ಕರಗತಮಾಡಿಕೊಳ್ಳುವುದರ ಜೊತೆಗೆ ತಮ್ಮದೆ ಆದ ಪ್ರತಿಭೆ, ಕೌಶಲಗಳಿಂದ ಬೇರೆ ಬೇರೆ ಶ್ರೇಷ್ಠ ಸಂಗೀತಗಾರರ ಹಾಡುಗಾರಿಕೆಯನ್ನು ಕೇಳಿ ಕಿರಾನಾ ಘರಾಣೆಯ ತಳಹದಿಯ ಮೇಲೆ ಸ್ವಂತ ಪ್ರತಿಭೆಯ ಸೌಧವನ್ನು ಕಟ್ಟತೊಡಗಿದರು. ತಮ್ಮ ಘರಾಣೆಯ ವೈಶಿಷ್ಟ್ಯಕ್ಕೆ ಕುಂದುಬರದಂತೆ ರಾಮಕೃಷ್ಣಬುವಾ ವಝೆ ಅವರಿಂದಲೂ ತಮ್ಮ ಸಂಗೀತಕ್ಕೆ ವಿಶೇಷ ಪೋಷಣೆಯನ್ನು ಪಡೆದರು. ಧಾರವಾಡದಲ್ಲಿಯೆ ನೆಲೆಸಿದ್ದ ಭಾಸ್ಕರಬುವಾ ಬಖಲೆ ಅವರಲ್ಲಿಗೆ ಮೇಲಿಂಧ ಮೇಲೆ ಹೋಗಿ ಅವರ ಕಾರ್ಯಕ್ರಮಗಳನ್ನು ಕೇಳಿ ತಮ್ಮ ವಿದ್ಯೆಯನ್ನು ಆಳವಾಗಿಸಿಕೊಂಡರು. ಇತರ ಸಮಕಾಲೀನ ಪ್ರತಿಭಾವಂತ ಗಾಯಕರಾಗಿದ್ದ ರಹಿಮತ್‌ಖಾನ್‌ ಸಾಹೇಬರು, ಮಂಜೀಖಾನಸಾಹೇಬ ಮೊದಲಾದ ಬೇರ ಬೇರೆ ಘರಾಣೆಗಳ ಗಾಯಕರ ಗುಣ, ವೈಶಿಷ್ಟ್ಯಗಳನ್ನು ಗ್ರಹಿಸಿದರು. ತಮ್ಮ ಪ್ರತಿಭೆಯಿಂದ ಕಿರಾನಾ ಘರಾಣೆಯ ಹಾಡುಗಾರಿಕೆಯ ಸ್ವರಸುಂದರವಾದ ಶೈಲಿಗೆ ರಾಮಭಾವೂ ಅವರು ಒಂದು ಹೊಸ ರೂಪವನ್ನು ಕೊಟ್ಟರು.

ರಾಮಭಾವೂ ಒಂದೇ ರಾಗವನ್ನು ಅನೇಕ ಸಲ ಹೇಳಿದರೂ ಅದರಲ್ಲಿ ಪ್ರತಿಯೊಂದೂ ಸಲವೂ ಹೊಸತನವನ್ನು ಕಾಣಬಹುದಿತ್ತು. ಗ್ರಾಮೊಫೋನ್‌ ಕಂಪನಿಗೆ ಅವರು ಶಾಸ್ತ್ರೀಯ ಹಾಗೂ ಲಘು ಸಂಗೀತದ ಗೀತಗಳನ್ನು ಧ್ವನಿಮುದ್ರಿಸುವಾಗ ಯಾಂತ್ರಿಕವಾಗಿ ಹತ್ತಾರು ಸಲ ರಿಹರ್ಸಲ್‌ ಕಾಲಕ್ಕೆ ಹಾಡಿದುದೇ ಒಂದಾದರೆ ಧ್ವನಿಮುದ್ರಣ ಕಾಲಕ್ಕೆ ಮತ್ತೊಂದು ನಾವಿನ್ಯವೇ ತಲೆದೋರುತ್ತಿತ್ತು. ಇದನ್ನು ಕಂಡು ಅಲ್ಲಿಯ ಜನ ಹರ್ಷ, ಆಶ್ಚರ್ಯಚಕಿತರಾಗುತ್ತಿದ್ದರೆ ವಾದ್ಯಗಾರರು ಮಾತ್ರ ತಬ್ಬಿಬ್ಬಾಗಿ ಹೋಗುತ್ತಿದ್ದರು.

ರಂಗಭೂಮಿಯ ಪ್ರವೇಶವು ರಾಮಭಾವೂ ಅವರ ಜೀವನ ನಾಟಕದ ಎರಡನೆಯ ಅಂಕವಾಗಿದ್ದು ಅವರ ಜೀವನದ ಸುದೀರ್ಘಕಾಲದ ವೃತ್ತಿಯಾಯಿತು. ಇವರ ಸಂಗೀತಕ್ಕೆ ಮೆಚ್ಚಿದ ಮರಾಠಿ ನಾಟಕ ರಂಗಭೂಮಿ ಇವರನ್ನು ಮರಾಠಿ ನಟನೆಂದು ಸಂಭ್ರಮದಿಂದ ಸ್ವಾಗತಿಸಿತು. ಮಗನು ತಿಂಗಳಿಗೊಂದಿಷ್ಟು ಸಂಬಳ ತಂದುಹಾಕಿದರೆ ಸಾಕೆಂದು ತಂದೆಯೂ ಸಮ್ಮತಿಸಿದರು.

ನೂತನ ಸಂಗೀತ ನಾಟಕ ಮಂಡಳಿಯಲ್ಲಿ ಸ್ತ್ರೀಪಾತ್ರಧಾರಿಯಾಗಿ ಕೆಲಸ ಮಾಡತೊಡಗಿದರು. ೧೯೦೮ರಲ್ಲಿ ಅಮರಾವತಿಯಲ್ಲಿ ಮೊಕ್ಕಾಂ ಮಾಡಿದ್ದ ‘ನೂತನ ಸಂಗೀತ ನಾಟಕಮಂಡಳಿಯ ಸೌಭದ್ರ ನಾಟಕದಲ್ಲಿ ಸುಭದ್ರೆಯ ಪಾತ್ರದಲ್ಲಿ ರಾಮಭಾವೂ ಅವರು ಜನಮನವನ್ನು ಸೆಳೆದರು.

ಇಷ್ಟೊತ್ತಿಗಾಗಲೆ ರಾಮಭಾವವೂ ಅಬ್ದುಲ್‌ ಕರೀಂಖಾನ್‌ ಸಾಹೇಬರ ಶ್ರೇಷ್ಠ ಶಿಷ್ಯರೆಂದು ಹೆಸರು ಮಾಡಿದ್ದರು. ಸುಭದ್ರೆಯ ಪಾತ್ರದಲ್ಲಿ ರಾಮಭಾವೂ ಸೊಗಸಾಗಿಯೆ ಅಭಿನಯಿಸಿದರು. ಆಗ ರಾಮಭಾವೂ ಅವರಿಗೆ ೩೨ ವರ್ಷ ವಯಸ್ಸು. ಅಭಿನಯಕ್ಕೆ ಅನುಗುಣವಾದ, ಅದನ್ನು ಮೀರಿಸುವ ರಂಗ ಗೀತಗಳ ಸುರಿಮಳೆ. ಆಗಲೇ ಮರಾಠಿ ರಂಗಭೂಮಿಯ ಹೆಸರಾಂತ ನಟ ಬಾಲಗಂಧರ್ವ ಅವರು ಮರಾಠಿ ರಂಗಭೂಮಿಯ ಹೆಸರಾಂತ ನಟ ಬಾಲಗಂಧರ್ವ ಅವರು ಮರಾಠಿ ರಂಗಭೂಮಿಯನ್ನು ತಮ್ಮ ಮೋಹಿನಿ ವಿದ್ಯೆಯಿಂದ ಸ್ತ್ರೀರೂಪಮೇ ರೂಪಂ ಎಂಬಂತಹ ಮೋಹಕ ರೂಪದಿಂದ, ಗಂಧರ್ವಗಾನದಿಂದ ಸೆರೆಹಿಡಿದುಬಿಟ್ಟಿದ್ದರು. ಬಾಲಗಂಧರ್ವರೆಂದರೆ ರಸಿಕ ತರುಣರು ಹುಚ್ಚಾಗಿ ಹೋಗುತ್ತಿದ್ದರು. ರಂಗಭೂಮಿಯ ಮೇಲೆ ತುಂಬಿದ ತರುಣಿಗಿಂತ ಮಿಗಿಲಾಗಿ ಮೋಹಕತೆಯನ್ನು ಬೀರುವ ಬಾಲಗಂಧರ್ವರನ್ನು ಕಂಡು ಹುಬ್ಬುಹಾರಿಸಿ ಖೇಕರಿಸಿ ಖುಷಿಪಡದ ಮರಾಠಿ ನಾಟಕದ ತರುಣ ನೋಟಕನೆ ಇದ್ದಿರಲಿಲ್ಲ ಅನ್ನಬಹುದು. ಬಾಲಗಂಧರ್ವರ ಮೋಹಕ ಕೀರ್ತಿ ಮಹಾರಾಷ್ಟ್ರದ ಮೇರೆಯನ್ನೂ ಮೀರಿ ಕರ್ನಾಟಕದ ಗಡಿಯನ್ನೂ ತನ್ನ ಮಾಯಾಶಕ್ತಿಯಿಂದ ಸೆರೆ ಹಿಡಿದುಬಿಟ್ಟಿತ್ತು.

ಕರ್ನಾಟಕದ ರಾಮಭಾವೂ ಅವರು ಮಹಾರಾಷ್ಟ್ರದ ಅಮರಾವತಿಯ ರಂಗಭೂಮಿಯ ಮೇಲೆ ತಮ್ಮ ಕೀರ್ತಿಪತಾಕೆಯನ್ನು ಹಾರಿಸಿದಾಗ ಬಾಲಗಂಧರ್ವರ ಕಣ್ಣು ಆಕಡೆ ಆಕರ್ಷಿತವಾಯಿತು. ಆದರೆ ರಾಮಭಾವೂ ಅವರ ಹೆಚ್ಚಿನ ವೈಶಿಷ್ಟ್ಯವೆಂದರೆ ಅವರು ಬಾಲಗಂಧರ್ವರಂತೆ ಸ್ತ್ರೀಪಾತ್ರಗಳನ್ನಷ್ಟೇ ಮಾಡುತ್ತಿರಲಿಲ್ಲ. ಪುರುಷಪಾತ್ರಗಳನ್ನೂ ವಹಿಸಿ ರಂಗಸಂಗೀತದಲ್ಲಿ ಶ್ರೋತೃಗಳಿಗೆ ಹೆಚ್ಚಿನ ವೈವಿಧ್ಯತೆಯ ಸವಿಯನ್ನು ನೀಡಿದರು. ಅಮರಾವತಿಯಲ್ಲಿ ಬಾಲಗಂಧರ್ವ ನಾಟಕ ಮಂಡಳಿ ಹಾಗೂ ನೂತನ ಸಂಗೀತ ನಾಟಕ ಮಂಡಳಿ ಮುಕ್ಕಾಮ್‌ ಮಾಡಿದ್ದವು. ಬಾಲಗಂಧರ್ವರ ಕಂಪನಿ ದ್ರೌಪದಿ ವಸ್ತ್ರಾಪಹರಣದ ಕಥೆಯನ್ನು ನಿರೂಪಿಸುವ ದ್ರೌಪದಿ ನಾಟಕವನ್ನು ಪ್ರಯೋಗಿಸುತ್ತಿದ್ದರೆ ರಾಮಭಾವೂ ಅವರು ಆತ್ಮತೇಜ ಎಂಬ ಶೀರ್ಷಿಕೆಯಲ್ಲಿ ಅದೇ ಕಥಾನಕವುಳ್ಳ ನಾಟಕದಲ್ಲಿ ದ್ರೌಪದಿಯ ಪಾತ್ರವನ್ನು ಅಭಿನಯಿಸುತ್ತಿದ್ದರು. ಜನರು ಬಾಲಗಂಧರ್ವರ ನಾಟಕಕ್ಕೆ ಅವರ ಸ್ತ್ರೀಪಾತ್ರ ಮತ್ತು ರಂಗಗೀತಗಳ ಆಕರ್ಷಣೆಗಾಗಿ ಹೋಗುತ್ತಿದ್ದರು. ಆದರೆ ಕಿರಾಣಾ ಘರಾಣೆಯ ಶಾಸ್ತ್ರೀಯ ಸಂಗೀತದ ಗಟ್ಟಿಮುಟ್ಟಾದ ತಳಹದಿಯ ಮೇಲೆ ರಚಿತವಾದ ರಾಮಭಾವೂ ಅವರ ಹಾಡುಗಾರಿಕೆಯನ್ನು ಕಿವಿ ತುಂಬ ಕೇಳಲೆಂದು ರಸಿಕ ಪ್ರೇಕ್ಷಕನಿರಲಿ, ಸ್ವತಃ ಬಾಲಗಂಧರ್ವರೆ ರಾಮಭಾವೂ ನಾಟಕಕ್ಕೆ ಬರುತ್ತಿದ್ದರಂತೆ.

ಮಹಾರಾಷ್ಟ್ರದ ರಸಿಕರು ಬಾಲಗಂಧರ್ವರ ಅಭಿನಯ ಮತ್ತು ಗಾಯನಗಳನ್ನು ಮೆಚ್ಚಿದಂತೆ ರಾಮಭಾವವೂ ಅವರ ಹಾಡುಗಾರಿಕೆಯ ಹಿರಿಮೆಗೆ ತಲೆದೂಗಿದರು. “ಹೇತರ ಸವಾಯಿ ಗಂರ್ದೌ ಅಹೇತ” (ಇವರು ಮಾತ್ರ ಸವಾಯಿ ಗಂಧರ್ವರು) ಎಂದು ರಾಮಭಾವೂ ಬಗ್ಗೆ ಉದ್ಗಾರ ತೆಗೆದರಂತೆ. ಜನತೆಯ ಈ ಮೆಚ್ಚುಗೆಯನ್ನು ಪತ್ರಿಕೆಗಳು ಎತ್ತಿಹಿಡಿದವು. ರಾಮಭಾವೂ ಕುಂದಗೋಳಕರ್ ಅವರಿಗೆ ಸವಾಯಿ (ಹೆಚ್ಚಿನ) ಗಂಧರ್ವ ಎಂಬ ಈ ರೀತಿಯ ಬಿರುದು ಮುಂದೆ ನಾಗಪೂರದಲ್ಲಿ ದಾದಸಾಹೇಬ ಖಾಪರಡೆ ಅವರಿಂದ ಸಾರ್ವಜನಿಕ ಸತ್ಕಾರದಲ್ಲಿ ಸಲ್ಲಿಸಲ್ಪಟ್ಟಿತು.

ಮುಂದೆ ಸವಾಯಿ ಗಂಧರ್ವರು ಶಂಕರರಾವ್‌ ಸರನಾಯಕರ ಯಶವಂತ ನಾಟಕ ಮಂಡಲಿ ಸೇರಿದರು. ಈ ಕಂಪನಿಯ ನಾಟಕಗಳಲ್ಲಿ ಸವಾಯ ಇ ಗಂಧರ್ವರು ಕಾಣಿಸಿಕೊಳ್ಳುತ್ತಿದ್ದ ‘ಸಂತ ಸಖೂ’, ‘ಆತ್ಮತೇಜ’, ‘ಸೌಭದ್ರ’, ‘ಮಾನಾಪಮಾನ’, ‘ತಾರಾ’, ‘ಪ್ರಭಾವತಿ’ ಮೊದಲಾದ ನಾಟಕಗಳಲ್ಲಿಯ ಸ್ತ್ರೀಪಾತ್ರ, ‘ಸಔಭದ್ರ’ ಮತ್ತು ‘ಮಾನಾಪಮಾನ’ಗಳಲ್ಲಿ ಪುರುಷ ಪಾತ್ರವನ್ನೂ ನಟಿಸಿ ರಂಗಭೂಮಿ-ಪ್ರೇಕ್ಷಾಗೃಹಗಳನ್ನು ಸೂರೆಗೊಂಡು ಬಿಡುತ್ತಿದ್ದರು. ಮಾಣಾಪಮಾನದಲ್ಲಿಯ ಧೈರ್ಯಧರನಾಗಿ ಹಾಡುತ್ತಿದ್ದ ಕಿತಿ ಕಿತಿ ಸಾಂಗು ತುಲಾ ಮತ್ತು ಜೋಗಿಯಾ ರಾಗದ ವದ ಜಾವು ಕುಣಾಲಾ ಶರಣ ಎಂಬ ‘ಒನ್ಸಮೋರ್’ ಗೀತಗಳು ರಸಿಕರನ್ನು ನಲಿದಾಡಿಸಿ ಬಿಡುತ್ತಿದ್ದವು. ಇದರಿಂದಾಗಿ ಕಂಪನಿಯ ಗಲ್ಲಾ ಹಾಗೂ ಸವಾಯಿ ಗಂಧರ್ವರ ಕೀರ್ತಿ ಎರಡೂ ವಾಢಾಯಿಸಿದವು.

ಆದರೆ ಮುಂದೆ ಇಂತಹ ಶ್ರೇಷ್ಠ ನಟ-ಗಾಯಕರು ದುರ್ದಿನಗಳ ಗ್ರಹಣಕ್ಕೆ ತುತ್ತಾಗಬೇಕಾಯಿತು. ಕಂಠ ಬಿದ್ದು ಹಾಡುಗಾರಿಕೆಯು ಮಧ್ಯದಲ್ಲಿ ತತ್ತರಿಸಬೇಕಾಯಿತು. ೧೯೪೨ರಲ್ಲಂತೂ ಪಾರ್ಶ್ವವಾಯು ಬಾಧೆಗೆ ತುತ್ತಾಗಿ ಹಾಸಿಗೆ ಹಿಡಿದರು. ಆ ಹೊತ್ತಿನಲ್ಲಿ ಇವರ ಪಟ್ಟದ ಶಿಷ್ಯೆ ಗಂಗೂಬಾಯಿ ಅವರು ಹುಬ್ಬಳ್ಳಿಯ ತಮ್ಮ ಮನೆಯಲ್ಲಿರಿಸಿಕೊಂಡು ಗುರುವಿನ ಸೇವಾ ಶುಶ್ರೂಷೆ ಮಾಡಿದರು.

೧೯೪೬ರಲ್ಲಿ ಶಿಷ್ಯರ ಒತ್ತಾಯಕ್ಕೆ ಮಣಿದು ತಮ್ಮ ಷಷ್ಠ್ಯಬ್ದಿಪೂರ್ತಿಗೆ ಒಪ್ಪಬೇಕಾಯಿತು. ಮಗಳು ಅಳಿಯ ಇವರನ್ನು ಶ್ರೇಷ್ಠವೈದ್ಯರ ಚಿಕಿತ್ಸೆಗೆ ಒಳಪಡಿಸಲು ಪುಣೆಗೆ ಕರೆದುಕೊಂಡು ಹೋದರು. ಆದರೆ ದುರ್ದೈವ. ಮುಂದೆ ಈ ಕಿರಾಣಾ ಸಂಗೀತಸಿಂಹ, ನಖಗಳನ್ನು ಕಳೆದುಕೊಂಡು ಬಹುದಿನ ಬದುಕಿರಲಿಲ್ಲ. ೧೨ನೆಯ ಸೆಪ್ಟೆಂಬರ್ ಲ೧೯೫೨ರಂದು ದೈವಾಧೀನರಾದರು. ಅಂದು ಭಾದ್ರಪದ ಪಕ್ಷಮಾಸದ ಅವಿಧವಾ ನವಮಿ! ಮರುವರ್ಷದಿಂದ ಕುಂದಗೋಳದಲ್ಲಿ ಪ್ರತಿ ಅವಿಧವಾ ನವಮಿಯಂದು ಗುರುಗಳ ಸ್ಮರಣಾರ್ಥ ಗಂಗೂಬಾಯಿ ಪ್ರಮುಖರಾದ ಶಿಷ್ಯರಿಂದ ಸಂಗೀತ ಸಮಾರಾಧನೆ ಆಚರಿಸಲ್ಪಡುತ್ತ ಬಂತು.

ಅಂದು ಇದ್ದುದು ಮೂರು, ಐದು ನಿಮಿಷಗಳ ಗಾನತಟ್ಟೆಗಳು. ಲಾಂಗ್‌ ಪ್ಲೇ, ಕ್ಯಾಸೆಟ್‌, ವೀಡಿಯೊ, ಸಿ.ಡಿ.ಗಳ ಸೊಲ್ಲೇ ಇರಲಿಲ್ಲ. ಸವಾಯಿ ಗಂಧರ್ವರ ೨೦ ಗಾನತಟ್ಟೆಗಳನ್ನು ಎಚ್.ಎಂ.ವಿ. ಹೊರತಂದಿತು. ಮೂರು/ಐದು ನಿಮಿಷಗಳ ಅಲ್ಪಾವಧಿಯ ಸೀಮಿತಿಯಲ್ಲೆ ಸವಾಯಿ ಗಂಧರ್ವರು ಹತ್ತು ಹಲವು ರಾಗಗಳನ್ನು ಸಾರವತ್ತಾಗಿ ಹಾಡಿದ್ದಾರೆ.

ಸವಾಯಿ ಗಂಧರ್ವರದು ಭವ್ಯ ಶಿಷ್ಯ ಪರಂಪರೆ, ಹಿಂದುಸ್ತಾನಿ ಸಂಗೀತದ ದಿಗ್ಗಜರಾದ ಮಾಸ್ತರ ಕೃಷ್ಣಾ, ಗಂಗೂಬಾಯಿ, ಹಾನಗಲ್ಲ, ಫಿರೋಜ ದಸ್ತೂರ, ಬಸವರಾಜ ರಾಜಗುರು, ಭೀಮಸೇನ ಜೋಶಿ, ವಿ.ವಿ. ಕಾಗಲಕರ, ಕನ್ನಡ ರಂಗನಟರಾದ ನೀಲಕಂಠ ಗಾಡಗೋಳಿ, ವೆಂಕಟರಾವ್‌ ರಾಮದುರ್ಗ, ಕೃಷ್ಣಾಬಾಯಿ ರಾಮದುರ್ಗ ಸವಾಯಿ ಗಂಧರ್ವರ ಶಿಷ್ಯರು. ಫಕೀರಪ್ಪ ಕುಂದಗೋಳ ಹಾಗೂ ಹಳ್ಳೆಪ್ಪನವರ ಕೂಡ ಸವಾಯಿ ಗಂಧರ್ವರ ಶಿಷ್ಯರು.