ಗಾಂಧಾರಿಧೃತರಾಷ್ಟ್ರನ ಹೆಂಡತಿ, ಕೌರವರ ತಾಯಿ. ಕುರುಡನಾದ ಧೃತರಾಷ್ಟ್ರನನ್ನು ಮದುವೆಯಾದಳು, ಗಂಡನಿಗಿಲ್ಲದ ಭಾಗ್ಯ ತನಗೆ ಬೇಡ ಎಂದು ತಾನೂ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಬಾಳಿದಳು. ನೂರು ಜನ ಶೂರರ ತಾಯಿಯಾದರೂ ಅವರ ಅಧರ್ಮ, ಹಠಗಳಿಂದ ಆತಂಕ, ದುಃಖಗಳನ್ನೆ ಅನುಭವಿಸಿದಳು. ಅವರೆಲ್ಲ ತನ್ನ ಕಣ್ಣಮುಂದೆ ನಾಶವಾದದ್ದನ್ನು ನೋಡಿದಳು. ಕಡೆಯ ದಿನಗಳನ್ನು ತಪಸ್ಸಿನಲ್ಲಿ ಕಳೆದಳು. ಧರ್ಮನಿಷ್ಠಳು. ಮಹಾಭಾರತದಲ್ಲಿ ನಮ್ಮ ಮರುಕವನ್ನು ಮೆಚ್ಚಿಕೆಯನ್ನು ಪಡೆಯುವ ಮಹಿಳೆ.

ಗಾಂಧಾರಿ

ಮಹಾಭಾರತದಲ್ಲಿ ಬರುವ ತಾಯಂದಿರಲ್ಲಿ ಗಾಂಧಾರಿಯ ಹೆಸರು ಎದ್ದು ಕಾಣುತ್ತದೆ. ಆಕೆಯ ಗಂಡ ಧೃತರಾಷ್ಟ್ರ ರಾಜ. ಹುಟ್ಟು ಕುರುಡ. ಇದು ಮೊದಲೇ ಗೊತ್ತಿದ್ದರೂ ಈ ವರನು ಬೇಡವೆಂದು ಆಕ್ಷೇಪಿಸಿದೆ ಅವನನ್ನು ಮದುವೆಯಾದಳು. ಅವನಿಗೆ ಇಲ್ಲದ ಅನುಕೂಲತೆಯನ್ನು ತಾನು ಅನುಭವಿಸಬಾರದೆಂದು ಅವಳು ತನ್ನ ಕಣ್ಣುಗಳಿಗೆ ಪಟ್ಟಿಯನ್ನು ಕಟ್ಟಿಕೊಂಡೇ ಇದ್ದಳು. ಅಂತಹ ಪತಿವ್ರತೆ! ಧರ‍್ಮದಲ್ಲಿ ಶ್ರದ್ಧೆ ಇದ್ದವಳು. ಪತಿಯ ಜೊತೆಯಲ್ಲೇ ಇದ್ದು ಅವನಿಗೆ ಅನುಕೂಲೆಯಾಗಿಯೇ ನಡೆದಳು. ಮಕ್ಕಳ ಮೇಲಿನ ಮಮತೆ ಅವಳಿಗಿದ್ದಷ್ಟು ಯಾರಿಗೂ ಇರದು! ಹೊಟ್ಟೆ ಕಿಚ್ಚಿನಲ್ಲಿ ಅಬ್ಬಬ್ಬಾ! ಅವಳಿಗೆ ಅವಳೇ ಎಣೆ.

ಆಕೆ ಸುಬಲ ರಾಜನ ಮಗಳು. ಮೋಸಮಾಡುವ ರಾಜನೀತಿಯಲ್ಲಿ ಚತುರನಾದ ಶಕುನಿ ಅವಳ ಅಣ್ಣ. ನೂರೊಂದು ಮಕ್ಕಳ ತಾಯಿ. ಅವಳ ಸಾಧನೆ ಸಾಧಾರಣವೆ?

ತಂದೆಯ ಆಶ್ರಯದಲ್ಲಿ

ನಮ್ಮ ದೇಶದ ವಾಯವ್ಯದಲ್ಲಿ ಆಫ್ಘಾನಿಸ್ಥಾನವಿದೆ. ಹಿಂದೆ ಅದಕ್ಕೆ ‘ಗಾಂಧಾರದೇಶ’ ಎಂಬ ಹೆಸರಿತ್ತು. ಮಹಾಭಾರತದ ಕಾಲದಲ್ಲಿ ಅದು ಭಾರತದ ಆಶ್ರಯದಲ್ಲಿತ್ತು. ಅಲ್ಲಿಯ ರಾಜ ಸುಬಲ. ಅವನ ಗಂಡು ಮಕ್ಕಳಲ್ಲಿ ಹಿರಿಯವನು ಶಕುನಿ. ಹೆಣ್ಣುಮಕ್ಕಳಲ್ಲಿ ಹಿರಿಯವಳು ಗಾಂಧಾರಿ. ಆ ದೇಶದ ರಾಜಕುಮಾರಿ ಎಂಬ ಅರ್ಥ ಬರುವ ಹಾಗೆ ಆಕೆಗೆ ಆ ಹೆಸರನ್ನು ಇಟ್ಟಿದ್ದರು. ಅವಳು ಬಹು ಚೆಲುವಾಗಿದ್ದಳು. ಗುರುಹಿರಿಯರಿಗೆ ವಿಧೇಯಳು. ಭಕ್ತಿ, ನೀತಿ, ವಿನಯಗಳಿಂದ ನಡೆಯುತ್ತಿದ್ದಳು. ವಿದ್ಯಾವಂತೆಯೂ ಆಗಿದ್ದಳು. ಚಿಕ್ಕಂದಿನಲ್ಲೇ ದೊಡ್ಡ ದೊಡ್ಡ ಆಸೆಗಳನ್ನು ಇಟ್ಟುಕೊಂಡಿದ್ದಳು. ‘ತಾನು ಒಬ್ಬ ಮಹಾರಾಜನ ಪಟ್ಟದ ರಾಣಿಯಾಗಬೇಕು. ಹೊಕ್ಕ ಮನೆಯನ್ನು ಬೆಳೆಸಿ ಎರಡು ಕುಲಗಳಿಗೂ ಕೀರ್ತಿ ತರಬೇಕು. ನೂರು ಮಕ್ಕಳ ತಾಯಿಯಾಗಿ, ಬೇರೆ ಹೆಂಗಸರಿಗಿಂತ ಮೇಲೆನಿಸಬೇಕು’ ಎಂದು ಭಾವಿಸಿದ್ದಳು.

ಅದಕ್ಕಾಗಿಯೇ ಅವಳು ಶಿವನನ್ನು ಆರಾಧಿಸಿದಳು. ನಿತ್ಯವೂ ಭಕ್ತಿಯಿಂದ ಧ್ಯಾನ ಮಾಡಿದಳು, ಪೂಜೆ ಸಲ್ಲಿಸಿದಳು. ದೇವರು ಮೆಚ್ಚಿ ಕನಸಿನಲ್ಲಿ ಅವಳಿಗೆ ಕಾಣಿಸಿದನು. ‘ನಿನಗೆ ಏನು ಬೇಕು? ವರವನ್ನು ಕೇಳು’ ಎಂದ ಹಾಗಾಯಿತು. ಆಗ ಅವಳು ಭಾವಿಸಿದ್ದು ಇಷ್ಟೆ-‘ನಾನು ಮಹಾರಾಜನ ಮಡದಿಯಾಗಬೇಕು. ನೂರು ಗಂಡು ಮಕ್ಕಳನ್ನು ಪಡೆಯಬೇಕು’ ಎಂದು. ‘ಹಾಗೆಯೇ ಆಗಲಿ’ ಎಂದಂತಾಯಿತು. ಹೀಗೆ ಚಿಕ್ಕಂದಿನಲ್ಲೇ ದೇವರನ್ನು ಭಕ್ತಿಯಿಂದ ಒಲಿಸಿದ್ದಳು. ಬೆಳೆದು ದೊಡ್ಡವಳಾದಳು. ಆಕೆಯನ್ನು ಯಾರಿಗೆ ಕೊಟ್ಟು ಮದುವೆ ಮಾಡುವುದು ಎಂಬುದೇ ಸುಬಲರಾಜನಿಗೆ ಯೋಚನೆ.

ಹಸ್ತಿನಾವತಿಯಲ್ಲಿ

ಭಾರತದ ಇಂದಿನ ರಾಜಧಾನಿ ದೆಹಲಿ. ಹಿಂದೆ ಇದಕ್ಕಿದ್ದ ಹೆಸರು ಹಸ್ತಿನಾವತಿ. ಅಲ್ಲಿ ಅರಸನಾಗಿದ್ದ ಶಂತುನುವಿಗೆ ಗಂಗಾದೇವಿಯಲ್ಲಿ ಹುಟ್ಟಿದ ಭೀಷ್ಮನೆಂಬ ಮಗನಿದ್ದನು. ಅವನು ಮದುವೆಯಾಗುವುದಿಲ್ಲವೆಂದೂ ಅರಸನಾಗುವುದಿಲ್ಲವೆಂದೂ ಮೊದಲೇ ಪ್ರತಿಜ್ಞೆ ಮಾಡಿದ್ದನು. ಅವನ ಚಿಕ್ಕಮ್ಮ ಸತ್ಯವತಿ. ಅವಳಲ್ಲಿ ಹುಟ್ಟಿದ ಇಬ್ಬರಲ್ಲಿ ಚಿತ್ರಾಂಗದ ಮೊದಲೇ ಸತ್ತಿದ್ದನು. ಇನ್ನೊಬ್ಬನಾದ ವಿಚಿತ್ರವೀರ‍್ಯನಿಗೆ ಭೀಷ್ಮನು ಕಾಶೀರಾಜನ ಕುಮಾರಿಯರಾದ ಅಂಬಿಕೆ, ಅಂಬಾಲಿಕೆ ಎಂಬ ಇಬ್ಬರನ್ನೂ ತಂದು ಮದುವೆ ಮಾಡಿಸಿದ್ದನು. ವಿಚಿತ್ರ ವೀರ‍್ಯನು ರೋಗಕ್ಕೆ ಬಲಿಯಾಗಿ ಸತ್ತನು. ವೇದವ್ಯಾಸರ ವರದಿಂದ ಅಂಬಿಕೆಯಲ್ಲಿ ಧೃತರಾಷ್ಟ್ರನು ಹುಟ್ಟಿದನು. ಅಂಬಾಲಿಕೆಯಲ್ಲಿ ಪಾಂಡುವೂ ದಾಸಿಯೊಬ್ಬಳಲ್ಲಿ ವಿದುರನೂ ಹುಟ್ಟಿದರು. ಅವರಲ್ಲಿ ಧೃತರಾಷ್ಟ್ರ ಹುಟ್ಟುವಾಗಲೇ ಕುರುಡ.

ಭೀಷ್ಮನು ಈ ಕುಮಾರರಿಗೆ ಅವಶ್ಯವಾದ ವಿದ್ಯೆಗಳನ್ನೆಲ್ಲಾ ಕಲಿಸಿ, ಅವರನ್ನು ಬೆಳೆಸಿದನು. ಧೃತರಾಷ್ಟ್ರನು ಹೆಚ್ಚಿನ ಗರಡಿ ಸಾಧನೆ ಮಾಡಿ ದೇಹಬಲದಲ್ಲಿ ಎಲ್ಲರನ್ನೂ ಮೀರಿಸಿದನು; ಬಹಳ ಸುಂದರನೂ ಆದನು. ಅವನು ಕುರುಡನಾದುದರಿಂದ ಪಾಂಡುವೇ ರಾಜ್ಯವನ್ನು ಆಳತೊಡಗಿದನು. ಭೀಷ್ಮನು ಇವರಿಗೆ ಯೋಗ್ಯ ಕನ್ಯೆಯರನ್ನು ಮದುವೆ ಮಾಡಿಸಬೇಕೆಂದು ಯೋಚಿಸಿದನು.

ಗಾಂಧಾರಿಯ ಮದುವೆ

ಧೃತರಾಷ್ಟ್ರನಿಗೆ ಯೋಗ್ಯ ಕನ್ಯೆಯರನ್ನು ಹುಡುಕುವು ದಕ್ಕಾಗಿ ಭೀಷ್ಮನು ಹಲವು ಪ್ರತಿನಿಧಿಗಳನ್ನು ಬೇರೆ ಬೇರೆ ದೇಶಗಳಿಗೆ ಕಳುಹಿಸಿದನು. ಅವರಲ್ಲಿ ಗಾಂಧಾರ ದೇಶಕ್ಕೆ ಹೋದವರು ಆ ದೇಶದ ರಾಜಕುಮಾರಿ ಓರ್ವ ಯೋಗ್ಯ ಕನ್ಯೆಯೆಂದು ಭೀಷ್ಮನಿಗೆ ಬಂದು ತಿಳಿಸಿದರು. ಆಕೆ ಶಿವನನ್ನು ಮೆಚ್ಚಿಸಿ ತನಗೆ ನೂರು ಗಂಡು ಮಕ್ಕಳಾಗುವಂತೆ ವರ ಪಡೆದ ಸಂಗತಿಯನ್ನು ಹೇಳಿದರು. ಭೀಷ್ಮನಿಗೆ ಈ ಸಂಬಂಧ ಮೆಚ್ಚಿಕೆಯಾಯಿತು. ಅವನು ಮದುವೆಯ ಮಾತುಕತೆಗಾಗಿ ಮಾತಿನಲ್ಲಿ ಚತುರರಾದ ವಿದ್ವಾಂಸರನ್ನು ಗಾಂಧಾರಕ್ಕೆ ಕಳುಹಿಸಿದನು.

ಸುಬಲನು ಯೋಚನೆಗೆ ಈಡಾದನು. ‘‘ಕುರುವಂಶವು ಕೀರ್ತಿ, ಶೌರ‍್ಯ, ಸದ್ಗುಣಗಳಿಂದ ಹಿರಿದೆನಿಸಿ ಮೆರೆಯುತ್ತಿದೆ. ಆ ವಂಶದ ರಾಜ ಧೃತರಾಷ್ಟ್ರ. ಅವನ ರೂಪ, ಶಕ್ತಿ, ಗುಣ, ವಿದ್ಯೆ, ಜ್ಞಾನ ಇವು ಬೇರೆ ಯಾರಿಗುಂಟು? ಆದರೆ ಕುರುಡನು. ಕುರುಡನನ್ನು ಮದುವೆಯಾಗಲು ಮಗಳು ಒಪ್ಪುವಳೆ? ಬಂಧುಗಳು ಏನೆಂದಾರು?’’

ಈ ವಿಚಾರ ಗಾಂಧಾರಿಗೆ ತಿಳಿದಾಗ ಮೊದಲು ಸ್ವಲ್ಪ ಬೇಸರವೇ ಆಯಿತು. ಆದರೇನು? ‘‘ನಾನು ಜಗತ್ತಿನಲ್ಲೇ ಉತ್ತಮವೆನಿಸಿರುವ ವಂಶವನ್ನು ಸೇರುತ್ತೇನೆ. ಗಂಡ ಕುರುಡನಾದರೂ ಅವನ ಬುದ್ಧಿ, ನೀತಿ, ವರ್ತನೆಗಳು ಕುರುಡಲ್ಲ. ಅವನು ಅರಸನಾಗಿ ಆಳದಿದ್ದರೂ ಹಿರಿಯನಾದುದರಿಂದ ನನ್ನ ಮಕ್ಕಳಲ್ಲಿ ಹಿರಿಯನು ಅರಸನಾಗುತ್ತಾನೆ. ನೂರು ಮಕ್ಕಳನ್ನು ಪಡೆದು ಇತರರು ಹೊಟ್ಟೆಕಿಚ್ಚು ಪಡುವಂತೆ ನಾನು ಮೆರೆಯುತ್ತೇನೆ. ಈ ಮದುವೆಗೆ ನಾನು ಒಪ್ಪದಿದ್ದರೆ, ತಂದೆಯೂ ಒಪ್ಪಲಾರ, ನಿಜ. ಆಗ ಭೀಷ್ಮನು ಯುದ್ಧ ಮಾಡಿ ಗೆದ್ದು ನನ್ನನ್ನು ಒಯ್ದರೆ ಗಾಂಧಾರ ದೇಶಕ್ಕೇ ಅಪಮಾನ. ಈ ಅಪಮಾನಕ್ಕೆ ನಾನೇ ಕಾರಣಳಾಗುತ್ತೇನೆ. ವ್ಯಕ್ತಿಗಿಂತ ದೇಶ ದೊಡ್ಡದಲ್ಲವೆ?’’ ಹೀಗೆ ಯೋಚಿಸಿದ ಗಾಂಧಾರಿ ಧೃತರಾಷ್ಟ್ರನನ್ನು ಮದುವೆಯಾಗಲು ಒಪ್ಪಿದಳು.

ಪತಿಗೆ ಗೌರವದ ಸಂಕೇತ

ವಿವಾಹದ ವೇಳೆಗೆ ಗಾಂಧಾರಿಗೆ ಒಂದು ಯೋಗ್ಯವಾದ ಯೋಚನೆ ಹೊಳೆಯಿತು. ‘ಪತಿಯಂತೆ ಸತಿ ಇರಬೇಕು. ನನ್ನ ಗಂಡನಿಗೆ ಕಣ್ಣು ಕಾಣಿಸದು. ಹೀಗಿರುವಾಗ ನಾನು ಕಣ್ಣುಗಳನ್ನು ನೋಡುವುದಕ್ಕಾಗಿ ಉಪಯೋಗಿಸಬಾರದು’ ಎಂದುಕೊಂಡು, ಒಂದು ಬಟ್ಟೆಯನ್ನು ಪಟ್ಟಿಯಾಗಿ ಮಡಚಿ ಕಣ್ಣುಗಳಿಗೆ ಕಟ್ಟಿಕೊಂಡಳು. ಗಾಂಧಾರಿಯ ಪತಿಭಕ್ತಿಗೆ ಎಲ್ಲರೂ ತಲೆದೂಗಿದರು.

ಧೃತರಾಷ್ಟ್ರ ಗಾಂಧಾರಿಯರ ಮದುವೆ ಆದಮೇಲೆ ಪಾಂಡುವಿಗೆ ಕುಂತಿ, ಮಾದ್ರಿಯರೊಡನೆ ಮದುವೆ ನಡೆಯಿತು. ವಿದುರನಿಗೂ ಮದುವೆ ನೆರವೇರಿತು.

ವ್ಯಾಸರ ಆಶೀರ್ವಾದದಿಂದ ಗಾಂಧಾರಿಗೆ ಒಂದು ನೂರು ಜನ ಗಂಡುಮಕ್ಕಳೂ ಒಬ್ಬ ಹೆಣ್ಣು ಮಗಳೂ ಹುಟ್ಟಿದರು. ಗಂಡು ಮಕ್ಕಳಲ್ಲಿ ದೊಡ್ಡವನು ದುರ್ಯೋಧನ, ಅವನ ನಂತರ ದುಶ್ಶಾಸನ; ಮಗಳು ದುಶ್ಶಲೆ. ಪಾಂಡುವಿನ ಐವರು ಗಂಡುಮಕ್ಕಳು ಪಾಂಡವರು ಎಂದು ಪ್ರಸಿದ್ಧರಾದರು.

ದುರ್ಯೋಧನ ಹುಟ್ಟಿದಾಗ

ಗಾಂಧಾರಿಯ ಮೊದಲನೆಯ ಶಿಶು ಹುಟ್ಟಿದ ಕೂಡಲೇ ಅದು ಕತ್ತೆಯ ಸ್ವರದಿಂದ ಅತ್ತಿತು. ಇನ್ನೂ ಹಲವು ಅಪಶಕುನಗಳಾದವು. ಈ ಕೆಟ್ಟ ಶಕುನಗಳಿಂದ ಧೃತರಾಷ್ಟ್ರನಿಗೆ ಭಯವಾಯಿತು. ಅವನು ಶಕುನ ಬಲ್ಲವರನ್ನೂ ಜೋಯಿಸರನ್ನೂ ವಿದುರನನ್ನೂ ಕರೆಸಿದನು. ಅವರೆಲ್ಲಾ ಹೀಗೆಂದರು:

‘‘ಈ ಮಗು ಅವಲಕ್ಷಣವುಳ್ಳದ್ದು. ಇದರಿಂದ ಭರತವಂಶಕ್ಕೇ ಕೇಡು. ಇದನ್ನು ಒಯ್ದು ಮಣ್ಣೊಳಗೆ ಹಾಕಿಸು.’’

ವಿದುರ ಮುಂತಾದವರು ಹೀಗೆ ಹೇಳಿದಾಗ ಧೃತರಾಷ್ಟ್ರನು ‘ಈಗೇನು ಮಾಡಲಿ?’ ಎಂಬ ಯೋಚನೆಗೆ ಈಡಾದನು. ಮಕ್ಕಳ ಮೇಲೆ ಅತಿ ಮಮತೆಯುಳ್ಳ ಗಾಂಧಾರಿ ತನ್ನ ನೂರೊಂದು ಮಕ್ಕಳಲ್ಲಿ ಒಂದನ್ನು ಕೂಡ ಕಳೆದುಕೊಳ್ಳಲು ಸಿದ್ಧಳಾಗಲಿಲ್ಲ. ಎಷ್ಟಾದರೂ ಹೆತ್ತ ಕರುಳು!

ಹೊಟ್ಟೆಕಿಚ್ಚಿನಲ್ಲಿ ತಾಯಿಯಂತೆ ಮಗ

ಗಾಂಧಾರಿಯ ಅಪೇಕ್ಷೆ ತನ್ನ ಮಕ್ಕಳು ನೀತಿವಂತರಾಗಿ ಧರ‍್ಮನಿಷ್ಠರಾಗಿ ಬಾಳಬೇಕೆಂಬುದೇ. ಆದರೆ ಎಷ್ಟು ಯತ್ನಿಸಿದರೂ ಯಾವ ಸಂದರ್ಭದಲ್ಲಿಯೂ ದುರ‍್ಯೋಧನನನ್ನು ತಿದ್ದಲು ಅವಳಿಗೆ ಸಾಧ್ಯವಾಗಲಿಲ್ಲ. ಚಿಕ್ಕಂದಿನಿಂದಲೇ ಅವಳ ಮಕ್ಕಳೂ ಕುಂತೀ ಮಾದ್ರಿಯರ ಮಕ್ಕಳಾದ ಐವರು ಪಾಂಡವರೂ ಜಗಳವಾಡಿಕೊಂಡೇ ಇದ್ದರು. ಪಾಂಡುರಾಜನು ಹಿಂದೆಯೇ ಸತ್ತು ಹೋಗಿದ್ದನು. ರಾಜಪ್ರತಿನಿಧಿಯಾಗಿ ಭೀಷ್ಮನು ಆಳುತ್ತಿದ್ದನು. ಈ ಸಾಮ್ರಾಜ್ಯ ಮುಂದೆ ಪಾಂಡವರ ಕೈಗೆ ಹೋಗಬಹುದೆಂದು ದುರ‍್ಯೋಧನನಿಗೆ ಹೊಟ್ಟೆಕಿಚ್ಚು! ಆದುದರಿಂದ ಅವನು ಮಾವ ಶಕುನಿಯ ದುರ್ಬೋಧನೆಗೆ ಕಿವಿ ಕೊಟ್ಟನು. ಪಾಂಡವರನ್ನು ಕುಂತೀ ಸಮೇತ ವಾರಣಾವತಕ್ಕೆ ಕಳುಹಿಸಿ ಅರಗಿನ ಮನೆಯಲ್ಲಿ ಅವರನ್ನು ಸುಟ್ಟುಬಿಡಲು ಏರ್ಪಡಿಸಿದನು. ಆದರೆ ಪಾಂಡವರು ಅಲ್ಲಿಂದ ಪಾರಾದರು. ದ್ರೌಪದೀ ಸ್ವಯಂವರದ ವೇಳೆಗೆ ಅವರು ಬದುಕಿ ಉಳಿದಿರುವುದು ಗೊತ್ತಾಯಿತು. ಅನಂತರ ಪಾಂಡವರು ಇಂದ್ರಪ್ರಸ್ಥದಲ್ಲಿಯೂ ಕೌರವರು ಹಸ್ತಿನಾವತಿಯಲ್ಲಿಯೂ ರಾಜ್ಯವಾಳಿಕೊಂಡು ಇರುವಂತೆ ಭೀಷ್ಮ ಮುಂತಾದ ಹಿರಿಯರು ಏರ್ಪಾಡು ಮಾಡಿದರು.

ಗಜಗೌರೀ ವ್ರತ

ಹೀಗಿರಲು, ಒಮ್ಮೆ ವೇದವ್ಯಾಸರು ಹಸ್ತಿನಾಪುರಕ್ಕೆ ಬಂದರು. ಗಾಂಧಾರಿ ಅವರಿಗೆ ವಂದಿಸಿ, ತನಗೂ ತನ್ನ ಕುಟುಂಬದ ಎಲ್ಲರಿಗೂ ಒಳ್ಳೆಯದಾಗತಕ್ಕ ಯಾವುದಾದರೂ ಒಂದು ವ್ರತವನ್ನು ತಿಳಿಸಬೇಕೆಂದು ಕೇಳಿಕೊಂಡಳು. ಅದಕ್ಕೆ ಅವರು ಗಜಗೌರೀವ್ರತವನ್ನು (ಐರಾವತದ ನೋಂಪಿಯನ್ನು) ಉಪದೇಶಿಸಿದರು. ಈ ವ್ರತವನ್ನು ಆಚರಿಸಿದರೆ ಐಶ್ವರ‍್ಯ ಹೆಚ್ಚಾಗುವುದು,

ಮುತ್ತೆ ದೆತನ ಉಂಟಾಗುವುದು, ಮಕ್ಕಳಿಗೆ ಮೊಮ್ಮಕ್ಕಳಿಗೆಲ್ಲಾ ಕ್ಷೇಮವಾಗುವುದು, ರಾಜ್ಯದ ಅಧಿಕಾರ ಹೆಚ್ಚುಕಾಲ ಸ್ಥಿರವಾಗಿ ನಿಲ್ಲುವುದು-ಎಂದು ಗಾಂಧಾರಿಗೆ ತಿಳಿಯಿತು. ಆದುದರಿಂದ ಅವಳು ಈ ವ್ರತವನ್ನು ಕೈಗೊಂಡಳು. ಅದಕ್ಕಾಗಿ ತನ್ನ ಮಕ್ಕಳ ಕೈಯಿಂದಲೇ ಯೋಗ್ಯವಾದ ಮಣ್ಣನ್ನು ತರಿಸಿದಳು. ಅದರಿಂದ ಎತ್ತರವಾದ ಒಂದು ಆನೆಯನ್ನು ಮಾಡಿಸಿದಳು. ಅದಕ್ಕೆ ಬಣ್ಣ ಕೊಡಿಸಿದಾಗ ಜೀವಂತವಾಗಿರುವ ಆನೆಯಂತೆ ಅದು ಕಾಣಿಸಿತು.

ಗಾಂಧಾರಿಯ ಸಂಭ್ರಮ ಹೇಳತೀರದು! ಆಕೆ ಅರಮನೆಯ ಸ್ತ್ರೀಯರನ್ನೆಲ್ಲಾ ಬರಮಾಡಿಸಿದಳು. ಪಟ್ಟಣದ ಸ್ತ್ರೀಯರಿಗೆಲ್ಲಾ ಕರೆಹೋಯಿತು. ಅವರೂ ಬಂದರು. ಸಾವಿರಾರು ಪಲ್ಲಕ್ಕಿಗಳಲ್ಲಿ ಹೆಂಗಸರು ಬಗೆ ಬಗೆಯ ಬೆಡಗಿನ ಶೃಂಗಾರ ಮಾಡಿಕೊಂಡು ಬಂದಿಳಿದರು. ಗಾಂಧಾರಿ ಅವರನ್ನೆಲ್ಲ ಕೂಡಿಕೊಂಡು ಮಣ್ಣಿನ ಐರಾವತದ ಬಳಿಗೆ ಬಂದಳು. ಅದನ್ನು ವಿವಿಧ ಅರ್ಚನೆಗಳಿಂದ ಪೂಜಿಸಿದಳು. ಮುತ್ತೆ ದೆಯರಿಗೆಲ್ಲ ಬಾಗಿನಗಳನ್ನು ಕೊಟ್ಟಳು. ವಿವಿಧ ದಾನಧರ‍್ಮಗಳನ್ನು ಮಾಡಿ ಹೊಗಳಿಸಿಕೊಂಡಳು. ತನ್ನ ಐಶ್ವರ‍್ಯದ ಮದದಿಂದ ಹಾಗೂ ಕುಂತಿಯ ಮೇಲಿನ ಮತ್ಸರದಿಂದ ಅವಳನ್ನು ಕರೆಯಲೇ ಇಲ್ಲ; ಆಮಂತ್ರಣವನ್ನೂ ಕಳುಹಿಸಲೇ ಇಲ್ಲ.

ಕುಂತಿ ಈ ಸಮಾರಂಭಕ್ಕೆ ತನ್ನನ್ನು ಕರೆಯಬಹುದೆಂದು ಎದುರುನೋಡುತ್ತಿದ್ದಳು. ಕರೆ ಬಾರದುದರಿಂದ ನೊಂದಳು. ಆದರೆ, ಅರ್ಜುನನ ಮೂಲಕ ದೇವೇಂದ್ರನ ಐರಾವತವನ್ನೇ ಭೂಲೋಕಕ್ಕೆ ತರಿಸಿದಳು. ಗಾಂಧಾರಿಯ ಸಂಭ್ರಮವನ್ನು ಮೀರಿಸುವ ವೈಭವದಿಂದ ವ್ರತವನ್ನು ಆಚರಿಸಿದಳು. ಈ ಘಟನೆ ಮತ್ತಷ್ಟು ಹೊಟ್ಟೆ ಕಿಚ್ಚಿಗೆ ಕಾರಣವಾಯಿತು. ಪಾಂಡ ವರು ಇಂದ್ರಪ್ರಸ್ಥದಲ್ಲಿ ರಾಜಸೂಯ ಎಂಬ ಮಹಾಯಾಗವನ್ನು ಮಾಡಿ ತಮ್ಮ ಶೌರ‍್ಯ, ಕೀರ್ತಿ, ವೈಭವ ಗಳನ್ನು ಮೆರೆಸಿದರು. ಇದರಿಂದ ದುರ‍್ಯೋಧನನಿಗೆ ಪಾಂಡವರ ಮೇಲೆ ಒಳಗೊಳಗೆ ಹೊಟ್ಟೆಕಿಚ್ಚೂ, ದ್ವೇಷವೂ ಮಿತಿಮೀರಿತು. ಎಷ್ಟಾದರೂ ಗಾಂಧಾರಿಯ ಮಗನಲ್ಲವೆ?

ಮಗನಿಗೆ ನೀತಿ ಬೋಧೆ

ಕೌರವನು ಶಕುನಿಯ ದುರ್ಬೋಧನೆಯನ್ನು ಕೇಳಿ ಧರ‍್ಮರಾಯನನ್ನು ಜೂಜಾಟಕ್ಕೆ ಕರೆದನು. ಅದು ಕಪಟ ಜೂಜೆಂದು ಧರ‍್ಮರಾಯನಿಗೆ ಗೊತ್ತಿದ್ದಿಲ್ಲ. ಅದರಲ್ಲಿ ಧರ‍್ಮರಾಯನು ಸೋತು ವನವಾಸ ಅಜ್ಞಾತವಾಸಗಳನ್ನು ಕೈಕೊಳ್ಳಬೇಕಾಗಿ ಬಂತು. ತುಂಬಿದ ಸಭೆಯಲ್ಲಿ ದುಶ್ಶಾಸನನು ದ್ರೌಪದಿಗೆ ಅವಮಾನ ಮಾಡಿದನು. ಸಭೆಯಲ್ಲಿದ್ದ ಬೇರೆ ಯಾರೊಬ್ಬರೂ ಏನೂ ಹೇಳದೆ, ದುಶ್ಶಾಸನನನ್ನು ತಡೆಯಲು ಹಿಂಜರಿದಿರುವಾಗ ಗಾಂಧಾರಿ ಮಾಡುವುದೇನು? ಧೃತರಾಷ್ಟ್ರನೂ ಸುಮ್ಮನಿದ್ದ. ಈಕೆಯೂ ಮನಸ್ಸಿನಲ್ಲೇ ಕೊರಗಿದಳು. ದುರೋಧನ ದುಶ್ಶಾಸನರು ತನ್ನ ಮಾತನ್ನು ಕೇಳುವವರಲ್ಲವೆಂದು ಗೊತ್ತು. ಆದುದರಿಂದ ಸುಮ್ಮನಿದ್ದಳು. ಮುಂದೆ ಇನ್ನೊಂದು ಪ್ರಸಂಗ ಬಂತು.

ಪಾಂಡವರು ಜೂಜಾಟದ ನಿಯಮದಂತೆ ವನವಾಸ ಅಜ್ಞಾತವಾಸಗಳನ್ನು ಮುಗಿಸಿದರು. ಅವರಿಗೆ ನ್ಯಾಯವಾಗಿ ಸಲ್ಲಬೇಕಾದ ಅರ್ಧರಾಜ್ಯವನ್ನು ಇಲ್ಲವೇ ಐದು ಊರುಗಳನ್ನು ಸಂಧಾನದಿಂದ ಕೊಡಿಸುವುದಕ್ಕಾಗಿ ಶ್ರೀ ಕೃಷ್ಣನು ಹಸ್ತಿನಾವತಿಗೆ ಬಂದನು. ದುರ‍್ಯೋಧನನಿಗೆ ಆಗ ಒಂದು ಕೆಟ್ಟ ಯೋಚನೆ ಹೊಳೆಯಿತು. ಪಾಂಡವರ ಸೊಕ್ಕನ್ನು ಮುರಿಯುವುದಕ್ಕಾಗಿ ಕೃಷ್ಣನನ್ನು ಕಟ್ಟಿ ಹಾಕಲು ಅವನು ನಿಶ್ಚಯಿಸಿದನು. ಆಗ ಭೀಷ್ಮ, ದ್ರೋಣ ಮುಂತಾದ ಎಲ್ಲರೂ ಕೌರವನನ್ನು ಆಕ್ಷೇಪಿಸಿ, ಕೃಷ್ಣನ ಮೇಲೆ ಕೈಮಾಡಬಾರದು ಎಂದರು. ಧೃತರಾಷ್ಟ್ರನು ಸಹಿಸಲಾರದೆ ವಿದುರನೊಡನೆ ‘‘ಆ ದುರ‍್ಯೋಧನನನ್ನು ನನ್ನ ಹತ್ತಿರ ಬರಹೇಳು. ಅವನು ನನ್ನ ಮಗನೇ! ನಮ್ಮ ಭರತ ವಂಶಕ್ಕೇ ಮೃತ್ಯುವಾಗಿದ್ದಾನೇ! ಗಾಂಧಾರಿಯನ್ನು ಇತ್ತ ಬರಹೇಳು! ಮಗನ ಆಟವನ್ನು ಅವಳು ನೋಡಲಿ!’’ ಎಂದು ಹೇಳಿದನು. ಗಾಂಧಾರಿ ಹೆಚ್ಚು ದೂರವಿರಲಿಲ್ಲ. ಅವಳು ಬಂದಳು. ವ್ಯಥೆಯನ್ನೂ ಕೋಪವನ್ನೂ ಸಹಿಸಲಾರದೆ, ‘‘ಮಗನೇ, ನೀನು ರಾಕ್ಷಸರ ವೈರಿಯಾದ ಶ್ರೀ ಕೃಷ್ಣನನ್ನು ಬಂಧಿಸುವೆಯಾ? ನಿನ್ನನ್ನು ಹೆತ್ತ ನನಗೆ ನೀನೀಗ ಸಂತೋಷವನ್ನು ಕೊಟ್ಟೆ! ನಿನ್ನಿಂದ ನಮ್ಮೆಲ್ಲರ ಉದ್ಧಾರವಾಯಿತು!’’ ಎಂದು ಕಡು ಬೇಸರದಿಂದ ವ್ಯಂಗ್ಯವಾಗಿ ನುಡಿದಳು.

ಪಾಂಡವರಿಗೆ ರಾಜ್ಯವನ್ನು ಕೊಡುವ ವಿಚಾರ ಬಂದಾಗ ಗಾಂಧಾರಿ ಸ್ಪಷ್ಟವಾಗಿ ಹೇಳಿದಳು-‘‘ಇದೆಲ್ಲವೂ ಪಾಂಡುರಾಜನು ಆಳಿದ ರಾಜ್ಯ. ಅವನ ಮಕ್ಕಳಿಗೆ ಸಂಪೂರ್ಣ ರಾಜ್ಯವೇ ಸಲ್ಲಬೇಕಾದ್ದು ನ್ಯಾಯ. ಅರ್ಧ ರಾಜ್ಯವನ್ನು ಕೊಡಲೇಬೇಕು’’. ಹಟಮಾರಿಯಾದ ಮಗನಿಗೆ ಆಕೆ ಹೇಳಿದ ನೀತಿಯಿದು-‘‘ಪಾಂಡವರೊಡನೆ ದ್ವೇಷವಿಟ್ಟುಕೊಂಡು ಯುದ್ಧ ಮಾಡುವುದು ನಿನಗೆ ಯೋಗ್ಯವಲ್ಲ. ಈ ಯುದ್ಧದಿಂದ ಲೋಕವೇ ನಾಶವಾಗುವುದು. ನಿನಗೆ ಜಯವಾಗುವುದೆಂಬ ನಂಬಿಕೆಯಿಲ್ಲ. ಧರ‍್ಮವು ಪಾಂಡವರ ಕಡೆಯೇ ಇದೆ. ಧರ‍್ಮವಿದ್ದಲ್ಲೇ ಜಯವಿರುತ್ತದೆ. ಅವರಿಗೆ ಅರ್ಧರಾಜ್ಯವನ್ನು ಕೊಡು!’’

ಆದರೆ ಕೌರವನು ತನ್ನ ಹಟವನ್ನು ಬಿಡಲಿಲ್ಲ. ಅವನಿಗೆ ಇಡೀ ಸಾಮ್ರಾಜ್ಯದ ಅಧಿಕಾರ ತನಗೇ ಇರಬೇಕೆಂಬ ದುರಾಶೆ. ಈ ವಿಷಯದಲ್ಲಿ ತಂದೆತಾಯಿಗಳ ನೀತಿಬೋಧನೆಯನ್ನೂ ಕೇಳನು. ಅವರು ಇವನನ್ನು ತಿದ್ದಲಾರದೆ ಹೋದರು. ಇದರಿಂದ ಗಾಂಧಾರಿಗೆ ನಿತ್ಯವೂ ದುಃಖ. ನೂರು ಮಕ್ಕಳನ್ನು ಬಯಸಿ ಪಡೆದರೂ ಪ್ರಯೋಜನವೇನು? ಎಲ್ಲರೂ ಮೂರ್ಖರು, ದುಷ್ಟರು. ತನ್ನ ಗಂಡ ಕಣ್ಣುಕಾಣದವನು, ತಾನೂ ಪತಿಭಕ್ತಿಯಿಂದ ಕಣ್ಣಿಗೆ ಬಟ್ಟೆಕಟ್ಟಿ ಕುರುಡಿಯಂತಿದ್ದಾಳೆ. ತನ್ನೊಡನೆಯೇ ಹಸ್ತಿನಾವತಿಗೆ ಬಂದು ಸೇರಿದ ಮುಳ್ಳಿನಂತಿರುವ ಸಹೋದರನಾದ ಶಕುನಿಯಿಂದ ತನ್ನ ಮಕ್ಕಳಿಗೆ ಕೆಟ್ಟ ಬೋಧನೆಯೂ ದೊರೆಯುತ್ತದೆ. ಹೀಗಿದ್ದರೂ ಅಧರ‍್ಮ, ಅನ್ಯಾಯ ಎಂದರೆ ಅವಳಿಗೆ ಆಗುತ್ತಿದ್ದಿಲ್ಲ.

ಮಗನಿಗೆ ಆಶೀರ್ವಾದ

ದುರ‍್ಯೋಧನನಿಗೆ ತಂದೆತಾಯಿಗಳ ಮೇಲೆ ಗೌರವವಿತ್ತು. ತನ್ನ ಯೋಜನೆಗಳಿಗೆ, ಕಾರ‍್ಯಗಳಿಗೆ ಹೇಗಾದರೂ ಮಾಡಿ ಅವರಿಂದ ಒಪ್ಪಿಗೆ ಪಡೆಯುತ್ತಿದ್ದನು. ಅಂಗಲಾಚಿ ಬೇಡಿಯಾದರೂ ಆಶೀರ್ವಾದ ಪಡೆಯುತ್ತಿದ್ದನು. ಕುರುಕ್ಷೇತ್ರದಲ್ಲಿ ಕೌರವರಿಗೂ ಪಾಂಡವರಿಗೂ ಮಹಾ ಯುದ್ಧ  ಪ್ರಾರಂಭವಾಗುವುದರಲ್ಲಿತ್ತು. ಪ್ರತಿದಿನವೂ ಯುದ್ಧರಂಗಕ್ಕೆ ಹೊರಡುವ ಮೊದಲು ತಾಯಿ ಗಾಂಧಾರಿಯ ಪಾದಕ್ಕೆ ಬಿದ್ದು ‘‘ಅಮ್ಮಾ, ಯುದ್ಧದಲ್ಲಿ ನನಗೆ ಜಯವಾಗುವಂತೆ ಆಶೀರ್ವಾದ ಮಾಡು!’’ ಎನ್ನುತ್ತಿದ್ದನು. ತನ್ನ ಮಗ ಧರ‍್ಮಕ್ಕೆ ವಿರುದ್ಧವಾಗಿಯೇ ನಡೆಯುತ್ತಿರುವುದು ಅವಳಿಗೆ ಗೊತ್ತು. ಹೀಗಿರುವಾಗ ಅವನಿಗೆ ಜಯ ದೊರೆಯುವುದು ಹೇಗೆ? ಆದುದರಿಂದ ವಿವೇಕವುಳ್ಳ ಆಕೆ ‘ನಿನಗೆ ಜಯವಾಗಲಿ’ ಎನ್ನಲಾರಳು. ‘ಎಲ್ಲಿ  ಧರ‍್ಮವಿದೆಯೋ ಅಲ್ಲಿ ಜಯವಿದೆ’ ಎನ್ನುತ್ತಿದ್ದಳು. ತನ್ನ ಆಶೀರ್ವಾದವನ್ನು ಅರ್ಥ ಮಾಡಿಕೊಂಡಾದರೂ ದುರ‍್ಯೋಧನನು ಅಧರ್ಮವನ್ನು ಬಿಟ್ಟುಬಿಡಲಿ ಎಂಬುದೇ ಅವಳ ಉದ್ದೇಶವಾಗಿತ್ತು. ‘ನಿನಗೆ ಜಯವಾಗಲಿ’ ಎಂದು ಹೇಳಲು ಅವಳಿಗೆ ಬಾಯಿ ಬರಲಿಲ್ಲ. ‘ನೀನು ಧರ‍್ಮದ ಹಾದಿಯಲ್ಲಿ ಹೋಗು. ಆಗ ನಿನಗೆ ನಿಶ್ಚಯವಾಗಿ ಜಯ ದೊರಕುವುದು’ ಎಂಬ ಭಾವನೆಯನ್ನು ಇಟ್ಟುಕೊಂಡೇ ಆಕೆ ಹಾಗೆ ಆಶೀರ್ವಾದ ಮಾಡುತ್ತಿದ್ದಳು.

ಕೊನೆಯ ಬಾರಿಗೆ ಮಗನನ್ನು ಕಂಡಾಗ

ಮಹಾಯುದ್ಧದಲ್ಲಿ ತನ್ನ ತಮ್ಮಂದಿರು, ಮಕ್ಕಳು, ಹನ್ನೊಂದು ಅಕ್ಷೋಹಿಣಿ ಸೈನ್ಯ ಇವೆಲ್ಲ ನಾಶವಾದರೂ ಕೌರವನು ಯುದ್ಧದ ಯೋಚನೆಯನ್ನೇ ಮುಂದುವರಿಸಿದನು. ಕೌರವನ ಕಡೆಯಲ್ಲಿ ಉಳಿದ ಇತರರೆಂದರೆ ಕೃಪ, ಕೃತವರ‍್ಮ, ಅಶ್ವತ್ಥಾಮ- ಈ ಮೂವರು ವೀರರು ಮಾತ್ರ. ಯುದ್ಧಮಾಡುವುದನ್ನೇ ನಿಶ್ಚಯಿಸಿಕೊಂಡು ಕೌರವನೊಬ್ಬನೇ ಕುರುಕ್ಷೇತ್ರದಲ್ಲಿ ನಡೆದುಕೊಂಡು ಹೋಗುತ್ತಿದ್ದನು. ತನ್ನ ಹೆಗಲ ಮೇಲೆ ಗದೆಯನ್ನು ಇಟ್ಟುಕೊಂಡಿದ್ದನು.

ಧೃತರಾಷ್ಟ್ರ ಗಾಂಧಾರಿಯರಿಗೆ ದುರ‍್ಯೋಧನನದೇ ಚಿಂತೆ. ಬದುಕಿ ಉಳಿದರೆ ಇವನೊಬ್ಬನಾದರೂ ಉಳಿಯಲಿ ಎಂಬುದೇ ಆಸೆ. ಅವರ ಆಸೆಗೆ ಅನುಗುಣವಾಗಿ ಸಂಜಯನು ದುರ‍್ಯೋಧನನ ಜೊತೆಯಲ್ಲಿಯೇ ಇದ್ದು ಅವನು ಪಾಂಡವರೊಡನೆ ಸಂಧಿ ಮಾಡಿಕೊಳ್ಳುವಂತೆ ಪ್ರೇರೇಪಣೆ ಮಾಡುತ್ತಿದ್ದನು. ದುರ‍್ಯೋಧನನು ಯುದ್ಧ ಭೂಮಿಯಲ್ಲಿ ಇದ್ದಾನೆ ಎಂಬುದು ಅವನ ತಂದೆ ತಾಯಿಗಳಿಗೆ ಸೇವಕರ ಮೂಲಕ ತಿಳಿಯಿತು. ಅವರು ವ್ಯಥೆಪಡುತ್ತ ಮಗನ ಯೋಗಕ್ಷೇಮವನ್ನು ವಿಚಾರಿಸುವುದ ಕ್ಕಾಗಿಯೂ ಸಮಾಧಾನ ಪಡಿಸುವುದಕ್ಕಾಗಿಯೂ ಕೌರವನನ್ನು ಹುಡುಕುತ್ತಾ ಬಂದರು. ‘‘ಮಗನೇ, ನೀನೆಲ್ಲಿರುವೆಯೆಂಬುದು ನಮಗೆ ತಿಳಿಯದಾಯಿತಲ್ಲಾ’’ ಎಂದು ಗೋಳಿಡುವ ಸ್ವರವು ಸಂಜಯನಿಗೆ ಕೇಳಿಸಿತು. ‘‘ಅಗೋ ನಿನ್ನ ತಂದೆತಾಯಿಗಳು ನಿನ್ನನ್ನು ಹುಡುಕಿಕೊಂಡು ಬರುತ್ತಿದ್ದಾರೆ!’’ ಎಂದು ಸಂಜಯನು ತಿಳಿಸಿದ್ದೇ ತಡ, ಕೌರವನ ಹೃದಯವು ದುಃಖದಿಂದ ಕುದಿಯಿತು. ‘‘ಅಯ್ಯೋ ನನ್ನ ತಾಯಿ ಗಾಂಧಾರಿ ಬಂದು ನಿನ್ನ ತಮ್ಮ ದುಶ್ಶಾಸನ ಎಲ್ಲಿದ್ದಾನೆ? ಎಂದು ಕೇಳಿದರೆ ನಾನೇನು ಹೇಳಲಿ!’’ ಎನ್ನುತ್ತ ಮೂರ್ಛೆ ಹೋದನು. ಸಂಜಯನು ಉಪಚರಿಸುತ್ತಿದ್ದನು. ದುರ‍್ಯೋಧನ ನೆಲದಲ್ಲಿ ಬಿದ್ದಿರುವನೆಂದು ಸೇವಕರು ಹೇಳಿದರು. ಆಗ ಗಾಂಧಾರಿ ಕೇಳಿ, ದುರ‍್ಯೋಧನನು ಮಡಿದನೆಂದೇ ಭಾವಿಸಿದಳು.

‘‘ಮಗನೇ, ಚಂದ್ರವಂಶವೆಂಬ ಬಳ್ಳಿ ಹಬ್ಬಿ ಬೆಳೆಯಲು ನೀನೇ ಕಾರಣನಾದೆ. ನಿನ್ನನ್ನು ಭೀಮನು ನುಂಗಿದನೇ? ಮುದುಕರೂ ಕುರುಡರೂ ಆದ ನಮಗೆ ನೀನು ಊರು ಗೋಲಾಗಿದ್ದೆ. ನೀನಿದ್ದರೆ ಇತರರೆಲ್ಲ ಇದ್ದಹಾಗೆಯೇ. ಅಂತಹ ನಿನ್ನನ್ನು ಯಮನು ತಿಂದುಬಿಟ್ಟನೇ? ನಿತ್ಯವೂ ನೀನು ತಂದೆತಾಯಿಗಳ ಪಾದಕ್ಕೆ ನಮಿಸುತ್ತಿದ್ದೆ. ಆಶೀರ್ವಾದ ಪಡೆಯುತ್ತಿದ್ದೆ. ಈಗೇಕೆ ಸುಮ್ಮನಿರುವೆ? ನೀನು ಮಾತಾಡಿಸದಿದ್ದರೆ ನಮ್ಮನ್ನು ಬೇರೆ ಯಾರು ಮಾತಾಡಿಸುವವರು? ಮಗನೇ ಮಾತಾಡು’’ ಎಂದು ಗಾಂಧಾರಿ ಗೋಳಾಡಿದಳು. ಮಗನು ಮಡಿದನೆಂದೇ ಭಾವಿಸಿ ಧೃತರಾಷ್ಟ್ರನೂ ಅತ್ತನು. ಆಗ ಸಂಜಯನು ‘‘ಕೌರವನಿಗೆ ಜ್ಞಾನ ತಪ್ಪಿದೆ. ಈಗ ಚೇತರಿಸುವನು’’ ಎಂದು ಧೈರ‍್ಯ ಹೇಳಿದನು.

ಸ್ವಲ್ಪ ಹೊತ್ತಿನಲ್ಲೇ ಕೌರವನು ಎಚ್ಚೆತ್ತು ತಂದೆ ತಾಯಿಗಳಿಗೆ ವಂದಿಸಿದನು. ಸಂಧಿಗೆ ಒಪ್ಪುವಂತೆ ಧೃತರಾಷ್ಟ್ರನು ಮಗನಿಗೆ ಹೇಳಿದನು. ಗಾಂಧಾರಿ ಅದನ್ನೇ ಅನುಮೋದಿಸಿ ಹೀಗೆ ಹೇಳಿದಳು:

‘‘ಮಗನೇ, ಮುದುಕರೂ ಕಣ್ಣು ಕಾಣದವರೂ ಆದ ನಮ್ಮ ಮಾತಿನಂತೆ ನಡೆದುಕೋ. ತಂದೆಯ ಮಾತನ್ನು ಮೀರಬಾರದು. ಯುದ್ಧದ ಯೋಚನೆ ಇನ್ನು ಬೇಡ. ಶಿಬಿರಕ್ಕೆ ಹಿಂತಿರುಗು. ಸತ್ತವರು ಸತ್ತರು, ನೀನೊಬ್ಬನಾದರೂ ಉಳಿದರೆ ನಮಗೆ ಸಾಕು’’ ಹೀಗೆಂದು ಕಣ್ಣೀರು ಸುರಿಸಿದಳು. ಆಗ ಸಂಜಯನು ‘‘ನೀನು ಹೀಗೆ ಅತ್ತರೆ ದುರ‍್ಯೋಧನನನ್ನೂ ಧೃತರಾಷ್ಟ್ರನನ್ನೂ ಸಂತೈಸುವವರು ಯಾರು?’’ ಎಂದು ಗದರಿಸಿದನು. ಗಾಂಧಾರಿ ಕೊನೆಗಳಿಗೆಯಲ್ಲಿಯೂ ದುರ‍್ಯೋಧನನನ್ನು ತಿದ್ದಿ ಸರಿಪಡಿಸಲು ಅಸಮರ್ಥಳಾದಳು. ಆದುದರಿಂದ ಅವಳೂ ಧೃತರಾಷ್ಟ್ರನೂ ದುರ‍್ಯೋಧನನಿಗೆ ‘‘ಮಗನೇ, ನೀನು ಹೇಗಿದ್ದರೂ ನಮ್ಮ ಮಾತನ್ನು ಕೇಳುವುದಿಲ್ಲವಾದರೆ, ಅಜ್ಜನಾದ ಭೀಷ್ಮನನ್ನು ಕಂಡು, ಅವನು ಹೇಳಿದಂತೆ ಮಾಡು’’ ಎಂದರು. ಅದಕ್ಕೆ ಕೌರವನು ಒಪ್ಪಿದನು. ಧೃತರಾಷ್ಟ್ರ ಗಾಂಧಾರಿಯರು ಅರಮನೆಗೆ ಹಿಂತಿರುಗಿದರು.

ಗಾಂಧಾರಿಯ ದುಃಖ

ಕುರುಕ್ಷೇತ್ರದಲ್ಲಿ ಹದಿನೆಂಟು ದಿನಗಳ ಮಹಾಯುದ್ಧ ನಡೆಯಿತು. ಕೊನೆಯದು ಭೀಮನಿಗೂ ದುರ‍್ಯೋಧನನಿಗೂ ನಡೆದ ಗದಾಯುದ್ಧ. ಅದರಲ್ಲಿ ದುರ‍್ಯೋಧನನು ಮಡಿದನು. ಈ ಸುದ್ದಿ ಧೃತರಾಷ್ಟ್ರಗಾಂಧಾರಿಯರಿಗೆ ತಲುಪಿತು. ದುಃಖವನ್ನು ಸಹಿಸಲಾರದೆ ಧೃತರಾಷ್ಟ್ರನು ನೆಲದ ಮೇಲೆ ಹೊರಳಿ ಹೊರಳಿ ಗೋಳಾಡಿದನು. ಗಾಂಧಾರಿ ತನ್ನ ದುಃಖವನ್ನು ವಿವೇಕದಿಂದ ತಡೆಯಲು ಪ್ರಯತ್ನಿಸಿದಳು. ಆದರೂ ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ಕೌರವನ ಹೆಂಡತಿ ಭಾನುಮತಿ, ಇನ್ನಿತರ ಕೌರವರ ಮಡದಿಯರು, ದ್ರೋಣ ಶಲ್ಯ ಕರ್ಣರ ಪತ್ನಿಯರು, ಯುದ್ಧದಲ್ಲಿ ಮಡಿದ ವೀರರ ಹೆಂಡತಿಯರು ಸಾವಿರ ಸಾವಿರ ಸಂಖ್ಯೆಯಲ್ಲಿ ಬಂದರು. ಕಣ್ಣೀರಿನ ಹೊಳೆ ಹರಿಸುತ್ತ, ಹೊಟ್ಟೆ ಬಡಿದುಕೊಳ್ಳುತ್ತ, ತಲೆ ಕೆದರಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಾ ಧೃತರಾಷ್ಟ್ರನ ಅರಮನೆಗೆ ಬಂದರು. ಯಾರನ್ನು ಯಾರು ಸಂತಯಿಸುವವರು? ಎಲ್ಲರಿಗೂ ದುಃಖವೇ. ಧೃತರಾಷ್ಟ್ರ ಗಾಂಧಾರಿಯರು ಅವರನ್ನೆಲ್ಲ ಕೂಡಿಕೊಂಡು, ಮಕ್ಕಳೆಲ್ಲಾ ಮಡಿದು ಬಿದ್ದ ಯುದ್ಧರಂಗದ ಕಡೆಗೆ ಹೊರಟರು. ಎಲ್ಲರೂ ಬಂದು ಸಮೀಪದ ಉದ್ಯಾನದಲ್ಲಿ ಇಳಿದರು.

ಅವರೆಲ್ಲ ಯುದ್ಧಭೂಮಿಯ ಕಡೆಗೆ ಬಂದುದು ಧರ‍್ಮರಾಯನಿಗೆ ತಿಳಿಯಿತು. ಅವನೂ ಆ ಕಡೆಗೆ ಹೊರಟನು. ಅವನೊಡನೆ ಶ್ರೀಕೃಷ್ಣನೂ ಇದ್ದನು. ದ್ರೌಪದಿ ಸುಭದ್ರೆಯರು ತಮ್ಮ ಮಕ್ಕಳ ಮರಣಕ್ಕಾಗಿ ಶೋಕಪಡುತ್ತ, ಗೋಳಾಡುತ್ತ ಬಂದರು. ಅಭಿಮನ್ಯುವಿನ ಹೆಂಡತಿಯಾದ ಉತ್ತರೆ ಅಳುತ್ತಾ ಬಂದಳು. ಈ ಗೋಳಾಟವನ್ನೆಲ್ಲಾ ಕೇಳಿ ಗಾಂಧಾರಿಯ ದುಃಖವೂ ಕಟ್ಟೆಯೊಡೆಯಿತು.

‘‘ಅಯ್ಯೋ, ನಾನೇಕೆ ಮಕ್ಕಳನ್ನು ಹೆತ್ತೆನೋ! ವಿಧಿಗೆ ನನ್ನ ಮೇಲೆ ದಯೆಯಿಲ್ಲವಾಯಿತೇ! ನನ್ನ ಕುಲದ ಬೇರು ಕಡಿಯಿತಲ್ಲಾ! ನಾನು ಬಂಜೆಯಾಗಿದ್ದರೇ ಚೆನ್ನಾಗಿತ್ತಲ್ಲವೇ! ನಾನು ನೂರು ಮಕ್ಕಳ ತಾಯಿಯಲ್ಲ, ನೂರು ದುಃಖಗಳ ತಾಯಿ!’ ಎಂದು ಅತ್ತಳು.

ಅವಳನ್ನು ಸಂತೈಸಲು ಕೃಪ, ಅಶ್ವತ್ಥಾಮರು ಪ್ರಯತ್ನಿಸಿದರು. ‘‘ಅತ್ತು ಪ್ರಯೋಜನವಿಲ್ಲ. ಸತ್ತವರು ನಿನ್ನ ಅಳುವನ್ನು ಕೇಳಿ ಹಿಂದಕ್ಕೆ ಬರುವುದಿಲ್ಲ. ನಿನ್ನ ಮಕ್ಕಳಿಗೆಲ್ಲ ವೀರಸ್ವರ್ಗ ಸಿಕ್ಕಿದೆ. ಈ ಯುದ್ಧದಲ್ಲಿ ಪಾಂಡವರು ಗೆದ್ದರೆಂದು ತಿಳಿಯಬೇಡ. ಅವರ ಮಕ್ಕಳನ್ನು ನಾವು ಕೊಂದು ಮುಗಿಸಿದ್ದೇವೆ. ಪಾಂಡವರು ಗೆದ್ದಿದ್ದರೂ ಕೃಷ್ಣನ ಸಹಾಯದಿಂದಲ್ಲದೆ ಅವರ ಶೌರ‍್ಯದಿಂದಲ್ಲ. ನೀನು ಇನ್ನು ದುಃಖಿಸಬೇಡ’’ ಎಂದರು.

ಧೃತರಾಷ್ಟ್ರ ಗಾಂಧಾರಿಯರ ಮಹಾಕೋಪ

ಪಾಂಡವರು ಒಬ್ಬೊಬ್ಬರಾಗಿ ಬಂದು ಧೃತರಾಷ್ಟ್ರನಿಗೆ ವಂದಿಸಿದರು. ಆಗ ಸಂಜಯನು ‘‘ಇವನು ಧರ‍್ಮರಾಯ, ಇವನು ಭೀಮ’’ ಹೀಗೆ ಒಬ್ಬೊಬ್ಬರ ಪರಿಚಯ ಹೇಳುತ್ತಿದ್ದನು. ಭೀಮನನ್ನು ಧೃತರಾಷ್ಟ್ರನು ತನ್ನ ಪ್ರಬಲಶಕ್ತಿಯಿಂದ ಹಿಡಿದು ಪುಡಿಮಾಡುವನೆಂದು ಕೃಷ್ಣನು ಊಹಿಸಿದ್ದನು. ಆದುದರಿಂದ ಅವನು ವಿಶ್ವಕರ‍್ಮನ ನೆರವಿನಿಂದ ಒಡನೆಯೇ ಒಂದು ಉಕ್ಕಿನ ಭೀಮನ ಪ್ರತಿಮೆಯನ್ನು ಧೃತರಾಷ್ಟ್ರನ ಎದುರಿಗೆ ನಿಲ್ಲಿಸಿದ್ದನು. ‘ಇವನು ಭೀಮನು’ ಎಂಬ ಮಾತು ಕೇಳಿದೊಡನೆ ಹೃದಯ ದೊಳಗೆ ಮಹಾಕೋಪವನ್ನೂ ದ್ವೇಷವನ್ನೂ ಇಟ್ಟುಕೊಂಡು ಧೃತರಾಷ್ಟ್ರನು ಎರಡು ಕೈಗಳನ್ನೂ ಚಾಚಿ ‘ಬಾ ಮಗನೇ!’ ಎಂದು ಪ್ರೀತಿಯನ್ನು ಹೊರಗಿನಿಂದ ತೋರಿಸುತ್ತ ಅಪ್ಪಿದನು.

ಆ ಉಕ್ಕಿನ ಪ್ರತಿಮೆ ಪುಡಿಪುಡಿ! ಅದು ನಿಜವಾದ ಭೀಮನಲ್ಲ, ಕೃಷ್ಣನ  ಕೃತಕ ಎಂದು ತಿಳಿದಾಗ ಅವನಿಗೆ ಕೃಷ್ಣನ ಮೇಲೆ ಭಕ್ತಿ ಮೂಡಿತು. ಪಾಂಡವರ ಮೇಲಿನ ಕೋಪ-ದ್ವೇಷಗಳು ಇಲ್ಲವಾದವು, ನಿಜವಾದ ಪ್ರೀತಿ ಮೂಡಿತು. ಅವನು ಅವರಿಗೆಲ್ಲಾ ಆಶೀರ್ವಾದ ಮಾಡಿದನು.

ಧರ‍್ಮರಾಯನು ಗಾಂಧಾರಿಗೆ ವಂದಿಸಿ ಹೀಗೆ ಹೇಳಿದನು. ‘‘ತಾಯೇ! ನಿನ್ನ ಮಕ್ಕಳನ್ನೆಲ್ಲ ಯುದ್ಧದಲ್ಲಿ ಕೊಲ್ಲಿಸಿದ ಪಾಪಿ ನಾನು! ನಿನಗಿದೋ ವಂದಿಸುತ್ತೇನೆ. ನನ್ನನ್ನು ನೀನು ಶಪಿಸುವುದಾದರೂ ಅಡ್ಡಿಯಿಲ್ಲ. ನರಕಕ್ಕೆ ಹೋದೇನು! ನಿನ್ನ ಕೋಪ ಶಾಂತವಾಗಲಿ! ದ್ವೇಷ ಇಲ್ಲದಾಗಲಿ! ಬಂಧುಗಳನ್ನು ಕೊಂದ ಪಾಪ ನನಗೆ ಬಂದರೆ ಬರಲಿ! ನೀನು ಮಹಾ ಪತಿವ್ರತೆ. ನನ್ನ ತಾಯಿ! ನಿನ್ನ ಕೋಪವೆಂಬ ಬೆಂಕಿಯಿಂದ ನನ್ನನ್ನು ಸುಟ್ಟುಬಿಡು!’’ ಹೀಗೆಂದಾಗ ಆಕೆಯ ಮನಸ್ಸು ಮೃದುವಾದೀತೆಂದು ಧರ‍್ಮರಾಯನು ಭಾವಿಸಿದ್ದನು. ಆದರೆ ಪರಿಣಾಮ ಬೇರೆಯೇ.

ಗಾಂಧಾರಿಗೆ ತನ್ನ ಮಕ್ಕಳು ಮಡಿದ ದುಃಖ ಒಂದೆಡೆ. ಅವರನ್ನು ಕೊಲ್ಲಿಸಿದವನೆಂದು ಧರ‍್ಮರಾಯನ ಮೇಲಿನ ಸಿಟ್ಟು ಇನ್ನೊಂದೆಡೆ!

ಗಾಂಧಾರಿ ಈಗ ಧರ‍್ಮರಾಯನಿಗೆ ಶಾಪಕೊಡಲು ಬಾಯಿ ತೆರೆದಳು. ಆ ಕ್ಷಣವೇ ವೇದವ್ಯಾಸರು ಅವಳ ಎದುರಿಗೆ ಬಂದರು.

‘‘ಎಲೈ ಗಾಂಧಾರಿಯೇ, ನಿನಗೇಕೆ ಇವರ ಮೇಲೆ ಇಷ್ಟೊಂದು ಕೋಪ? ಅತ್ಯಾಚಾರ ಅನ್ಯಾಯಗಳನ್ನು ಮಾಡಿದವರು ನಿನ್ನ ಮಕ್ಕಳು! ಅವರು ಪಾಂಡವರನ್ನು ಅರಗಿನ ಮನೆಯಲ್ಲಿ ಸುಡಲು ಪ್ರಯತ್ನಿಸಿದರು, ದ್ರೌಪದಿಯ ಮಾನಭಂಗವನ್ನು ಮಾಡಿದರು, ಕಪಟದ ಜೂಜನ್ನಾಡಿ ಕಾಡಿಗೆ ಅಟ್ಟಿದರು- ಅದನ್ನೆಲ್ಲಾ ಅವರು ಎಣಿಸಿದ್ದಾರೆಯೇ? ದುರ್ಯೋಧನ ಅರ್ಧ ರಾಜ್ಯವನ್ನು ಕೇಳಲು ಬಂದ ಕೃಷ್ಣನನ್ನೂ ಅಲಕ್ಷ ಮಾಡಿ ಸಂಧಿಗೆ ಒಪ್ಪದೆ ಯುದ್ಧ ಮಾಡಿ ಅನ್ಯಾಯದ ಫಲದಿಂದ ಸತ್ತ. ಧರ‍್ಮರಾಯನಿಗೆ ಶಾಪ ಕೊಟ್ಟರೆ ಅದರಿಂದ ನಿನಗೆ ಇನ್ನೂ ಹಾನಿಯಾದೀತು: ಆದುದರಿಂದ ಕೋಪವನ್ನು ಬಿಟ್ಟು ಗಂಡನ ಸೇವೆ ಮಾಡಿಕೊಂಡು ಮುತ್ತೆ ದೆಯಾಗಿಯೇ ಕೊನೆತನಕ ಬಾಳು!’’ ಎಂದು ವೇದವ್ಯಾಸರು ಸಮಾಧಾನ ಹೇಳಿದರು. ಹೀಗೆ ಕೃತಕ ಭೀಮನನ್ನು ಪುಡಿಮಾಡಿ ಧೃತರಾಷ್ಟ್ರನ ಕೋಪ ಇಳಿಯಿತು. ವೇದವ್ಯಾಸರ ಬೋಧನೆಯನ್ನು ಕೇಳಿ ಗಾಂಧಾರಿಗೆ ಪಾಂಡವರ ಮೇಲಿನ ಸಿಟ್ಟು ತಗ್ಗಿತು.

ಪಾಂಡವರೆಲ್ಲರೂ ಗಾಂಧಾರಿಗೆ ವಂದಿಸಿದರು. ಆಗ ಆಕೆ ಹೀಗೆಂದಳು, ‘‘ಮಕ್ಕಳೆ, ಹೆದರಬೇಡಿ-ನನ್ನ ಮಕ್ಕಳು ಕೆಟ್ಟವರಾಗಿದ್ದರು. ಅವರು ತಮ್ಮನ್ನು ತಾವೇ ಕೊಂದುಕೊಂಡರು. ನೀವು ಇನ್ನು ನೀತಿಯಿಂದಲೂ ಧರ‍್ಮದಿಂದಲೂ ರಾಜ್ಯವನ್ನಾಳಿ! ಅಗಲಿದ ಬಂಧುಗಳಿಗೆಲ್ಲಾ ಕ್ರಿಯೆಗಳನ್ನು ಸರಿಯಾಗಿ ನೆರವೇರಿಸಿ!’’ ಅಷ್ಟರಲ್ಲಿ ದ್ರೌಪದಿ ಧಾರಾಕಾರವಾಗಿ ಕಣ್ಣೀರು ಸುರಿಸುತ್ತಾ, ಅಳುತ್ತ ಗಾಂಧಾರಿಯ ಪಾದಕ್ಕೆ ಎರಗಿದಳು. ಅವಳನ್ನು ಗಾಂಧಾರಿ ಹಿಡಿದೆತ್ತಿದಳು. ‘‘ದ್ರೌಪದಿ, ಅಳಬೇಡ, ಮಕ್ಕಳು ಮಡಿದುಹೋದ ದುಃಖ ನಿನಗೂ ಇದೆ, ನಿನ್ನತ್ತೆಯಾದ ನನಗೂ ಇದೆ. ಈ ವಿಷಯದಲ್ಲಿ ನಾವಿಬ್ಬರೂ ಸಮಾನ. ನೀನು ನನ್ನನ್ನು ನೋಡಿ ನಿನ್ನ ದುಃಖವನ್ನು ಸಹಿಸಿಕೋ’’ ಎಂದು ಅವಳನ್ನು ಸಂತೈಸಿದಳು.

ಕೃಷ್ಣನ ಮೇಲೆ ಕೋಪ

ಗಾಂಧಾರಿಯು ಎಷ್ಟು ಸಹಿಸಿಕೊಂಡರೂ ಮಕ್ಕಳ ಮರಣದ ದುಃಖ ಪುನಃ ಅವಳಲ್ಲಿ ಮೂಡಿ ಬಂತು. ಕಣ್ಣೀರು ಒಸರಿತು. ಅವಳು ಕೃಷ್ಣನನ್ನು ತನ್ನ ಬಳಿಗೆ ಕರೆದಳು. ಆಗ ಕೃಷ್ಣನು ‘‘ಅತ್ತೆಯೇ, ನೀನು ನನಗೆ ಏನು ಹೇಳಲಿರುವೆ?’’ ಎಂದು ಕೇಳಿದನು. ಆಗ ಅವಳ ದುಃಖವನ್ನು ಮೀರಿ ಸಿಟ್ಟು ಕೆರಳಿ ಮೇಲೆದ್ದಿತು. ಮೂಗಿನ ಉಸಿರಾಟ ಹೆಚ್ಚಾಗಿ ಬುಸುಗುಟ್ಟುವಂತೆ ಕಾಣಿಸಿತು. ಮೈಕಂಪಿಸಿತು.

‘‘ಎಲೋ ಕೃಷ್ಣಾ! ನೀನು ಮಾಡಿದ್ದೇನು? ಆ ಪಾಂಡವರ ಪಕ್ಷವನ್ನು ವಹಿಸಿ, ನನ್ನ ಮಕ್ಕಳನ್ನು ನಿರ್ದಯೆಯಿಂದ ಕೊಲ್ಲಿಸಿದೆಯಲ್ಲಾ! ನನ್ನ ಸೊಸೆಯರ ಮಂಗಲಸೂತ್ರ ಹರಿಯುವಂತೆ ಮಾಡಿದೆಯಲ್ಲಾ! ಅವರ ದುಃಖದ ಅವಸ್ಥೆಯನ್ನು ಕೇಳಿಕೊಂಡು ನಾನು ಹೇಗೆ ಸಹಿಸಲಿ! ನಿನಗಿಂತ ಕ್ರೂರರು ಯಾರಿದ್ದಾರೆ? ಕೌರವ ಕುಲಕ್ಕೆ ನೀನು ಬೆಂಕಿ ಹಚ್ಚಿದೆ! ಇದರ ಫಲವನ್ನು ನೀನು ಉಣ್ಣಬೇಕು. ಇಕೋ ಹಿಡಿ ನನ್ನ ಶಾಪವನ್ನು! ನಿನಗೆ ಕೊನೆಗೆ ನನ್ನ ಹಾಗೆಯೇ ಗತಿಯಿಲ್ಲದ ಪರಿಸ್ಥಿತಿ ಒದಗಲಿ! ನಿನ್ನ ಮಕ್ಕಳೂ ಬಂಧುಗಳೂ ಗುಂಪುಗುಂಪಾಗಿ ಮರಣಕ್ಕೆ ತುತ್ತಾಗಲಿ! ನಿನ್ನ ಹೆಂಡಿರು ಕಾಡುಪಾಲಾಗಲಿ! ಕುರುವಂಶದ ಸ್ತ್ರೀಯರು ಈಗ ಹೇಗೆ ಗೋಳಾಡುತ್ತ ಇದ್ದಾರೋ ಅದೇ ರೀತಿ ನಿನ್ನ ಯದುವಂಶದ ನಾರಿಯರೂ ಅಳುವಂತಾಗಲಿ!’’

ಆಗ ಕೃಷ್ಣನು ‘‘ಎಲೈ ಗಾಂಧಾರಿಯೇ, ನೀನೀಗ ಶಾಪಕೊಡದೇ ಇದ್ದರೂ ಮುಂದೆ ಹಾಗೆಯೇ ಆಗಲಿದೆ. ಯದುವಂಶ ಯಾವ ಶತ್ರುಗಳಿಂದಲೂ ನಾಶವಾಗದು. ಒಳಜಗಳಗಳಿಂದಲೇ ಅದು ನಾಶವಾಗುವುದು ದೈವದ ಇಚ್ಛೆಯಾಗಿದೆ. ನೀನು ಈಗ ಶಾಪಕೊಟ್ಟು ನಿನ್ನ ಪುಣ್ಯವನ್ನು ನಷ್ಟಮಾಡಿಕೊಂಡೆ. ನಿನ್ನ ಕೋಪದಿಂದ ನಿನಗೇ ನಷ್ಟ!’’ ಎಂದನು.

ಆಗ ಅಲ್ಲಿಗೆ ನಾರದನು ಬಂದನು. ಅವನು ಗಾಂಧಾರಿಯೊಡನೆ ‘‘ಎಲೈ ಧೃತರಾಷ್ಟ್ರನ ಅರಸಿಯೇ, ಲೋಕದಲ್ಲಿ ಹೆಂಗಸರು ಕೋಪಿಸಿಕೊಂಡು ಹೀಗೆ ಶಾಪಕೊಡಬಾರದು. ಯುದ್ಧದಲ್ಲಿ ಸತ್ತ ನಿನ್ನ ಮಕ್ಕಳಿಗೂ ಇತರರಿಗೂ ಇಷ್ಟರಲ್ಲೇ ಸದ್ಗತಿ ದೊರಕಿದೆ. ಅವರೆಲ್ಲ ದಿವ್ಯಲೋಕದಲ್ಲಿ ಸುಖವಾಗಿದ್ದಾರೆ. ನಿನಗೆ ಇಷ್ಟೊಂದು ಅಜ್ಞಾನವೇಕೆ? ಗುಣವಂತೆಯರಾದ ನಾರಿಯರು ನಿನ್ನ ಹಾಗೆ  ವರ್ತಿಸುವರೆ? ಈಗಲೇ ನಿನ್ನ ಕೋಪವನ್ನು ಪೂರ್ತಿಯಾಗಿ ಬಿಡು’’ ಎಂದು ಉಪದೇಶಿಸಿದನು. ಗಾಂಧಾರಿ ತಾನಿನ್ನು ಯಾರ ಮೇಲೂ ಕೋಪಗೊಳ್ಳುವುದಿಲ್ಲವೆಂದು ದೃಢ ಮಾಡಿಕೊಂಡಳು. ಆಮೇಲೆ ಧರ‍್ಮರಾಯನು ವೇದವ್ಯಾಸರು ಹೇಳಿದ ಪ್ರಕಾರ ಕುಲದ ಬಂಧುಗಳಿಗೆಲ್ಲ ವಿಧಿ ಪ್ರಕಾರ ಕ್ರಿಯೆಗಳನ್ನು ನೆರವೇರಿಸಿದನು.

ಪಾಂಡವರೊಡನೆ ವಾಸ

ಧರ‍್ಮರಾಯನು ಯುದ್ಧದಲ್ಲಿ ಬಂಧುಗಳನ್ನು ಕೊಂದ ಪಾಪದ ಪರಿಹಾರಕ್ಕಾಗಿ ಅಶ್ವಮೇಧಯಾಗವನ್ನು ಮಾಡಿದನು. ಧೃತರಾಷ್ಟ್ರಗಾಂಧಾರಿಯರು ಪಾಂಡವರನ್ನು ತಮ್ಮ ಮಕ್ಕಳಂತೆ ಪ್ರೀತಿಸುತ್ತಾ ಅವರೊಡನೆ ಇದ್ದರು. ಅವರು ಮಾಡುವ ಸೇವೆಯಿಂದ ಈ ವೃದ್ಧ ದಂಪತಿಗಳಿಗೆ ತಮ್ಮ ಮಕ್ಕಳ ಅಗಲಿಕೆ ದುಃಖವನ್ನು ಮರೆಯುವಂತಾಯಿತು. ಕುಂತೀ ದೇವಿ ಗಾಂಧಾರಿಯ ಒಟ್ಟಿಗಿದ್ದು ಅವಳಿಗೆ ಹಿತವಾಗಿ ನಡೆದುಕೊಳ್ಳುತ್ತಿದ್ದಳು. ದ್ರೌಪದಿ, ಸುಭದ್ರೆ, ಉಲೂಪಿ, ಚಿತ್ರಾಂಗದೆಯರು ಗಾಂಧಾರಿಯ ಕಾಲುಗಳನ್ನು ಒತ್ತುವುದು, ಕೈಹಿಡಿದು ನಡೆಸುವುದು ಮುಂತಾದ ಸೇವೆಗಳನ್ನು ಮಾಡುತ್ತಿದ್ದರು. ಧರ‍್ಮರಾಯನು ಅವರಿಗೆ ಸರಿಯಾಗಿ ಊಟ, ಬಟ್ಟೆ, ದಾನಧರ‍್ಮಕ್ಕಾಗಿ ಬೇಕಾಗುವ ಹಣ-ಮುಂತಾದುವನ್ನು ಒದಗಿಸಿ ಕೊಡುತ್ತಿದ್ದನು.

ಭೀಮನು ಮಾತ್ರ ಆಗಾಗ ಧೃತರಾಷ್ಟ್ರ ಗಾಂಧಾರಿಯರಿಗೆ ಕೇಳುವ ಹಾಗೆ ಅವರ ಮಕ್ಕಳ ಕೆಟ್ಟ ನಡತೆಯನ್ನು ನಿಂದಿಸುತ್ತ ತನ್ನ ಅಗ್ಗಳಿಕೆಯನ್ನು ಹೇಳಿಕೊಳ್ಳುತ್ತಿದ್ದನು. ‘‘ಕೆಡುಕರಾದ ನಿನ್ನ ನೂರ್ವರು ಮಕ್ಕಳನ್ನೂ ಹೆಗ್ಗಣವನ್ನು ಬಡಿಯುವಂತೆ ಬಡಿದು ಬಡಿದು ಕೊಂದೆನು. ನನ್ನನ್ನು ಕೆಣಕಿ ಬದುಕುವವರುಂಟೆ?’’ ಹೀಗೆ ಭೀಮನು ಚುಚ್ಚುಮಾತನ್ನು ಆಡುತ್ತಿದ್ದನು. ಈ ನಿಷ್ಠುರದ ಮಾತನ್ನು ಕೇಳಿಯೂ ಕೇಳದ ಹಾಗೆ ಧೃತರಾಷ್ಟ್ರ ಗಾಂಧಾರಿಯರು ವರ್ತಿಸುತ್ತಿದ್ದರು. ಸಿಟ್ಟಾಗರು. ಧರ‍್ಮರಾಯನಿಗೆ ಈ ಸಂಗತಿಯನ್ನು ಹೇಳಲಿಲ್ಲ. ಏನೋ ಕಾಲಗತಿ, ದುರದೃಷ್ಟ ಎಂದುಕೊಂಡು ಸಹಿಸುತ್ತಿದ್ದರು. ಹೀಗೆ ಹದಿನೈದು ವರ್ಷಗಳನ್ನು ಅವರು ಹಸ್ತಿನಾವತಿಯಲ್ಲಿ ಪಾಂಡವರೊಂದಿಗಿದ್ದು ಕಳೆದರು.

ಆಶ್ರಮವಾಸ

ಒಂದು ದಿನ ಧೃತರಾಷ್ಟ್ರನು ಧರ‍್ಮರಾಯನನ್ನು ಬಳಿಗೆ ಕರೆದನು. ‘‘ನಾನೂ ಗಾಂಧಾರಿಯೂ ತಪೋವನಕ್ಕೆ ಹೋಗುತ್ತೇವೆ. ಅಲ್ಲಿ ಗೆಡ್ಡೆಗೆಣಸು ಹಣ್ಣುಗಳನ್ನು ಮಾತ್ರ ತಿಂದುಕೊಂಡು ತಪಸ್ಸು ಮಾಡುತ್ತೇವೆ. ಮುಪ್ಪಿನಲ್ಲಿ ರಾಜ್ಯವನ್ನೆಲ್ಲ ತೊರೆದು ತಪಸ್ಸಿಗೆ ತೆರಳುವುದು ರಾಜರ ಧರ‍್ಮವೇ ಆಗಿದೆ. ಅಲ್ಲಿ ನಾವು ನಿಮಗೆಲ್ಲ ಶುಭವನ್ನು ಪ್ರಾರ್ಥಿಸುತ್ತ ಇರುವೆವು. ನೀನು ರಾಜನು. ನಮಗೆ ನಿನ್ನ ಅಪ್ಪಣೆ ಬೇಕು. ನಮ್ಮನ್ನು ಕಳುಹಿಸಿಕೊಡು’’ ಎಂದು ಹೇಳಿದನು. ಧರ‍್ಮರಾಯನಿಗೆ ಕಣ್ಣೀರುಬಂತು. ದುಃಖಿಸಿದನು. ಆಗ ಧೃತರಾಷ್ಟ್ರನೂ ಮರುಗಿದನು. ಗಾಂಧಾರಿ ಆಗ ಧೈರ‍್ಯಮಾಡಿ ಧರ‍್ಮರಾಯನೊಡನೆ ಹೀಗೆಂದಳು, ‘‘ನಿಮ್ಮ ಅಯ್ಯನಿಗೆ ವನವಾಸಕ್ಕೆ ಹೋಗಬೇಕೆಂಬ ಚಿಂತೆ ಕವಿದಿದೆ. ಅವನಿಗೆ ಊಟವೇ ಸೇರುವುದಿಲ್ಲ. ನಮ್ಮನ್ನು ಕಳುಹಿಸಿಕೊಡು.’’ ಹೇಗೆ ಕಳುಹಿಸಲಿ ಎಂದು ಧರ‍್ಮರಾಯನು ಚಿಂತಿಸುತ್ತಿರಲು, ಅಲ್ಲಿಗೆ ವೇದವ್ಯಾಸರು ಬಂದರು. ‘‘ರಾಜ ವಂಶದವರಿಗೆ ಸದ್ಗತಿ ದೊರೆಯುವ ಮರಣಕ್ಕೆ ಎರಡೇ ವಿಧಾನಗಳು- ಯುದ್ಧ ಅಥವಾ ತಪಸ್ಸು. ಇವೆರಡೂ ರಾಜರ ಧರ‍್ಮ. ಧೃತರಾಷ್ಟ್ರನಿಗೆ ಉಳಿದಿರುವುದು ತಪಸ್ಸು ಮಾತ್ರ. ಆದುದರಿಂದ ಈ ದಂಪತಿಗಳನ್ನು ಕಳುಹಿಸಿ ಕೊಡು’’ ಎಂದು ವೇದವ್ಯಾಸರು ಧರ‍್ಮರಾಯನಿಗೆ ತಿಳಿಸಿ ಬದರಿಕಾಶ್ರಮದ ಕಡೆಗೆ ತೆರಳಿದರು.  ಧೃತರಾಷ್ಟ್ರ ಗಾಂಧಾರಿಯರನ್ನು ತಪೋವನಕ್ಕೆ ಕಳುಹಿಸುವ ಸಿದ್ಧತೆ ಪ್ರಾರಂಭವಾಯಿತು.

ಅವರೊಡನೆ ಕುಂತಿಯೂ ಹೊರಡಲು ನಿಶ್ಚಯಿಸಿದಳು. ವಿದುರ, ಸಂಜಯರೂ ಜೊತೆಗೂಡಲು ನಿರ್ಧಾರ ಮಾಡಿದರು. ಇವರೆಲ್ಲ ವನವಾಸಕ್ಕೆ ಹೋಗುವ ಸುದ್ದಿ ಹರಡಿತು. ಕೇಳಿದವರಿಗೆಲ್ಲ ದುಃಖವಾಯಿತು. ಧರ‍್ಮರಾಯನಿಗೆ ದುಃಖ ಸಹಿಸುವುದೇ ಕಷ್ಟವಾಯಿತು. ಅಂತೂ ಧೃತರಾಷ್ಟ್ರ, ಗಾಂಧಾರಿ, ಕುಂತಿ, ವಿದುರ, ಸಂಜಯರು ಋತ್ವಿಜರ ಸಮೂಹದೊಡನೆ ಧರ‍್ಮರಾಯನ ವಿವಿಧ ಸತ್ಕಾರಗಳನ್ನು ಸ್ವೀಕರಿಸಿ, ಆಶೀರ್ವದಿಸಿ ಹೊರಟರು. ಹೋಗುವಾಗ, ಧೃತರಾಷ್ಟ್ರನಿಗೆ ಸಂಜಯನೂ ಗಾಂಧಾರಿಗೆ ಕುಂತಿಯೂ ದಾರಿತೋರಿಸುವವರಾದರು. ಅವರೆಲ್ಲ ಗಂಗಾತೀರಕ್ಕೆ ಬಂದರು. ಅಲ್ಲಿ ಒಂದು ದಿನ ಇದ್ದುಕೊಂಡು ಮರುದಿನ ನದಿಯನ್ನು ದಾಟಿ ಕುರುಕ್ಷೇತ್ರದ ಪುಣ್ಯಸ್ಥಳಕ್ಕೆ ಬಂದರು. ಅಲ್ಲಿ ಶತಯೂಪನೆಂಬ ಮುನಿಯ ಆಶ್ರಮವಿತ್ತು. ಅಲ್ಲಿಯೇ ಅವರು ಎಲೆ ಮನೆಯನ್ನು ಮಾಡಿ ವಾಸಮಾಡುತ್ತ ತಪಸ್ಸು ಮಾಡುತ್ತಿದ್ದರು.

ಸಂದರ್ಶನ

ಹೀಗಿರಲು ಧರ‍್ಮರಾಯನಿಗೆ ಅವರ ಕುರಿತಾಗಿ ಚಿಂತೆಯುಂಟಾಯಿತು. ಹೋಗಿ ನೋಡಲೇಬೇಕು ಎನಿಸಿತು. ಅವನು ತಮ್ಮಂದಿರನ್ನೂ ಪರಿವಾರವನ್ನೂ ಕೂಡಿಕೊಂಡು ಹೊರಟು ಅವರ ಆಶ್ರಮಕ್ಕೆ ಬಂದನು. ಒಂದು ತಿಂಗಳು ಅವರೊಡನೆ ಇದ್ದನು. ಧರ‍್ಮರಾಯನು ಅವರೊಂದಿಗೆ ತಪಸ್ಸು ಮಾಡಿಕೊಂಡು ಇರಲು ಇಚ್ಛಿಸಿದನು. ಧೃತರಾಷ್ಟ್ರನು ಅದಕ್ಕೆ ಒಪ್ಪಲಿಲ್ಲ. ಕುಂತಿಯೂ ಸಮ್ಮತಿಸಲಿಲ್ಲ. ಗಾಂಧಾರಿಗೂ ಧರ‍್ಮರಾಯನಿಗೂ ಒಂದು ಸಂವಾದವೇ ನಡೆಯಿತು. ಗಾಂಧಾರಿ ಹೇಳಿದಳು. ‘‘ಎಲೈ ಯುಧಿಷ್ಠಿರನೇ ಇನ್ನು ಕುರುವಂಶವನ್ನು ರಕ್ಷಿಸುವವನು ನೀನು. ನಿನ್ನ ದೊಡ್ಡಪ್ಪ ಹೇಳಿದ ಹಾಗೆ ಮಾಡು. ನೀನು ಇಲ್ಲಿ ನಿಂತರೆ ಪ್ರಜೆಗಳು ಅನಾಥರಾಗುವರು.’’ ಗಾಂಧಾರಿ ಹೀಗೆ ಹೇಳಿದಾಗ ಧರ‍್ಮರಾಯನು ತನ್ನ ಅಭಿಪ್ರಾಯವನ್ನು ಹೀಗೆ ತಿಳಿಸಿದನು. ‘‘ತಾಯೇ, ಅಭಿಮನ್ಯು ಮುಂತಾದ ಮಕ್ಕಳಿಲ್ಲದೆ, ಬಂಧು ಬಾಂಧವರಿಲ್ಲದೆ ನನಗೆ ರಾಜ್ಯಾಧಿಕಾರ ಯಾಕೆ? ನನ್ನಲ್ಲಿ ವೈರಾಗ್ಯ ಉಂಟಾಗಿದೆ. ನಾನು ಇಲ್ಲಿ ತಪಸ್ಸು ಮಾಡುತ್ತಾ ಇರುತ್ತೇನೆ.’’ ಈ ಮಾತನ್ನು ಕೇಳಿ ಸಹದೇವನು ‘‘ನಾನೂ ತಪಸ್ಸು ಮಾಡುತ್ತಾ ಇಲ್ಲಿ ಇವರ ಸೇವೆ ಮಾಡುತ್ತೇನೆ’’ ಎಂದನು. ಆಗ ಗಾಂಧಾರಿ ಹೇಳಿದ ಮಾತುಗಳಿವು-

‘‘ಮಕ್ಕಳೇ, ನೀವು ಚಿಂತಿಸದಿರಿ. ನೀವು ಹಿಂದೆ ವನವಾಸದಲ್ಲಿದ್ದು ಕಷ್ಟ ಅನುಭವಿಸಿದ್ದೇ ಸಾಕು. ಈಗ ರಾಜ್ಯವೇ ಬೇಡವೆಂದು ಹಟ ಮಾಡಬೇಡಿ. ನಿಮ್ಮ ಮಾತಿನಿಂದ ಈಗ ನಮ್ಮ ಮನಸ್ಸು ಕೆಡುವಂತಾಗಿದೆ. ನಮ್ಮ ತಪಸ್ಸಿಗೆ ತೊಂದರೆಯಾಗುತ್ತಿದೆ. ನಮ್ಮ ಮಾತಿನಂತೆ ನೀವೆಲ್ಲ ಹಸ್ತಿನಾವತಿಗೆ ಹೋಗಿ ರಾಜ್ಯವನ್ನಾಳಿ.’’ ಗಾಂಧಾರಿಯ ಮಾತಿಗೆ ಪಾಂಡವರು ಒಪ್ಪಿದರು. ಅವರಿಗೆಲ್ಲ ವಂದಿಸಿ, ಆಶೀರ್ವಾದ ಪಡೆದು ತೆರಳಿದರು. ಧರ‍್ಮರಾಯನು ಆಮೇಲೆ ಉತ್ತಮ ರೀತಿಯಲ್ಲಿ ದೇಶವನ್ನು ಆಳಿದನು.

ಮಹಾತ್ಯಾಗ

ಅವರೆಲ್ಲ ಆಶ್ರಮದಲ್ಲಿ ಇರುತ್ತಿರುವಾಗ ವಿದುರನು ದೇಹವನ್ನು ತ್ಯಜಿಸಿದ್ದನು. ಹೀಗಿರಲು ಒಂದು ದಿನ ಧೃತರಾಷ್ಟ್ರನು, ‘‘ನಾವು ಇಲ್ಲಿ ಇದ್ದರೆ, ಧರ‍್ಮರಾಯನು ಆಗಾಗ ನಮ್ಮನ್ನು ಕಾಣಲು ಬರುತ್ತಾನೆ. ಆದುದರಿಂದ ನಾವು ಬೇರೆ ಕಡೆಗೆ ಹೋಗೋಣ’’ ಎಂದನು. ಸರಿ, ಇವರೆಲ್ಲರೂ ಶತಯೂಪನ ಆಶ್ರಮದಿಂದ ಹೊರಟು ಗಂಗಾದ್ವಾರಕ್ಕೆ ಬಂದರು. ಅಲ್ಲಿ ತಪಸ್ಸು ಮಾಡತೊಡಗಿದರು. ಅವರ ತಪಸ್ಸು ಕಠಿಣತರವಾಗಿತ್ತು. ಧೃತರಾಷ್ಟ್ರನು ಬಾಯಲ್ಲಿ ಒಂದು ಹರಳು ಕಲ್ಲನ್ನು ಇಟ್ಟುಕೊಂಡು ಗಾಳಿಯನ್ನು ಮಾತ್ರ ಸೇವನೆಮಾಡುತ್ತ ತಪಸ್ಸು ಮಾಡತೊಡಗಿದನು. ಗಾಂಧಾರಿ ಇನ್ನಷ್ಟು ಒಂದೇ ಮನಸ್ಸಿನಿಂದ ಅವನಂತೆಯೇ ಆಹಾರವಿಲ್ಲದೆ ತಪಸ್ಸು ಮಾಡಿದಳು. ಕುಂತಿ ತಿಂಗಳಿಗೊಮ್ಮೆ ಫಲಾಹಾರ ಮಾಡಿಕೊಂಡು ತಪಸ್ಸಿನಲ್ಲಿ ಮಗ್ನಳಾದಳು. ಸಂಜಯನು ವಾರಕ್ಕೊಮ್ಮೆ ಹಣ್ಣು ತಿಂದು ತಪಸ್ಸು ಮಾಡಿದನು. ತಪಸ್ಸು ಮಾಡದೆ ಇರುವ ಹೊತ್ತಿನಲ್ಲಿ ಇವರು ಕಾಡಿನಲ್ಲಿ ಸಂಚಾರ ಮಾಡುತ್ತಿದ್ದರು. ಆಗ ಧೃತರಾಷ್ಟ್ರನಿಗೆ ಸಂಜಯನೂ ಗಾಂಧಾರಿಗೆ ಕುಂತಿಯೂ ಕಣ್ಣಿನಂತೆ ಇದ್ದರು. ಅವರನ್ನು ಬೇಕಾದ ಕಡೆಗೆ ನಡೆಸಿಕೊಂಡು ಹೋಗುತ್ತಿದ್ದರು.

ಒಂದು ದಿನ ಧೃತರಾಷ್ಟ್ರ, ಗಾಂಧಾರಿ, ಕುಂತಿ, ಸಂಜಯ- ಈ ನಾಲ್ವರೂ ಗಂಗಾದ್ವಾರ (ಹರಿದ್ವಾರ) ದಲ್ಲಿ ಸ್ನಾನ ಮಾಡಿದರು. ಆಶ್ರಮದ ಕಡೆಗೆ ನಿಧಾನವಾಗಿ ನಡೆದು ಬರುತ್ತಿದ್ದರು. ಇದ್ದಕ್ಕಿದ್ದಂತೆ ಜೋರಾಗಿ ಗಾಳಿ ಬೀಸಿತು. ಒಂದು ದೊಡ್ಡ ಕಾಡುಗಿಚ್ಚು ಎದ್ದಿತು. ಕಾಡಿನ ಪ್ರಾಣಿಗಳೆಲ್ಲಾ ದಿಕ್ಕುಪಾಲಾಗಿ ಓಡತೊಡಗಿದವು. ಆ ಕಾಡುಗಿಚ್ಚು ಇವರನ್ನು ಮುತ್ತಿತು. ಇವರು ಹಲವಾರು ದಿವಸಗಳಿಂದ ಉಪವಾಸ ಮಾಡಿ ಬಳಲಿದ್ದರು. ಓಡಿಹೋಗಿ ಬೆಂಕಿಯಿಂದ ತಪ್ಪಿಸಿಕೊಳ್ಳಲು ಅಸಾಧ್ಯವೆನಿಸಿತು. ಇವರಲ್ಲಿ ಸಂಜಯನಿಗೆ ಮಾತ್ರ ಓಡಿ ಹೋಗುವಷ್ಟು ಚೈತನ್ಯವಿತ್ತು. ಆದರೆ ಅವನು ತನ್ನ ಪ್ರಾಣ ಉಳಿಸಿಕೊಳ್ಳುವುದಕ್ಕಾಗಿ ಇವರನ್ನು ಬಿಟ್ಟು ಹೋಗಲು ಸಿದ್ಧನಾಗಿ ಇರಲಿಲ್ಲ. ಆದರೆ ಧೃತರಾಷ್ಟ್ರ ಗಾಂಧಾರಿಯರು ಸಂಜಯನನ್ನು ಬಹಳ ಒತ್ತಾಯ ಮಾಡಿ, ಅವನು ಪಾರಾಗುವಂತೆ ಮಾಡಿದರು. ಸಂಜಯನು ಬೆಂಕಿಯಿಂದ ತಪ್ಪಿಸಿಕೊಂಡು ಹಿಮಗಿರಿಯ ಕಡೆಗೆ ಹೋದನು. ಉಳಿದ ಮೂವರೂ ಧೈರ‍್ಯಕೆಡದೆ ಯೋಗಾಸನದಲ್ಲಿ ಕುಳಿತರು. ಆತ್ಮಧ್ಯಾನ ಮಾಡುತ್ತ ದೇಹವನ್ನು ಅಗ್ನಿಗೆ ಆಹುತಿಮಾಡಿ, ಹುತಾತ್ಮರಾಗಿ ಪುಣ್ಯಲೋಕವನ್ನು ಸೇರಿದರು.

ಹಿರಿಮೆ

ಗಾಂಧಾರಿ ಭಾರತೀಯ ಗೃಹಿಣಿಯ ಆದರ್ಶ ಗುಣಗಳಿಂದ ಬಾಳಿದಳು. ಹೊಟ್ಟೆಕಿಚ್ಚಿನವಳಾದರೂ ಅವಳಲ್ಲಿದ್ದ ಧರ‍್ಮನಿಷ್ಠೆ ಮೇಲೆದ್ದು ಕಾಣುತ್ತದೆ. ಅವಳಿಗೆ ಮಕ್ಕಳ ಮೇಲೆ ಮಮತೆ ಬಹಳ. ಅವರಿಗೆ ನೀತಿಯನ್ನು ಬೋಧಿಸುತ್ತಿದ್ದರೂ ತಿದ್ದಲಾರದೆ ಹೋದುದು ಅವಳ ದುರದೃಷ್ಟ. ಆಕೆಯ ಪಾತಿವ್ರತ್ಯ ಮೇಲು  ಮಟ್ಟದ್ದು. ಧೃತರಾಷ್ಟ್ರನ ಜೊತೆಯನ್ನು ಸಾಯುವವರೆಗೂ ಬಿಡಲಿಲ್ಲ. ಅವನು ಕುರುಡನೆಂದು ಅವನನ್ನು ಮದುವೆಯಾದ ದಿನದಿಂದ ತಾನೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ನೋಡುವ ಭಾಗ್ಯವನ್ನು ಬಿಟ್ಟುಕೊಟ್ಟಳು. ಅವಳಿಗೆ ಬಂದ ಕಷ್ಟಗಳು ಲೆಖ್ಖವಿಲ್ಲ. ಮಹಾರಾಜನ ತಾಯಿಯಾಗಿ ಅರಮನೆ ಯಲ್ಲಿದ್ದಳು, ನಿಜ. ಆದರೆ, ಧರ್ಮ ಯಾವುದು ಅಧರ್ಮ ಯಾವುದು ಎಂದು ತಿಳಿದಿದ್ದಳು. ಧರ್ಮನಿಷ್ಠಳಾಗಿದ್ದ ಅವಳು ತನ್ನ ಮಕ್ಕಳು ಕೆಟ್ಟ ಕೆಲಸಗಳನ್ನು ಮಾಡುವುದನ್ನು ನೋಡ ಬೇಕಾಯಿತು. ಅಷ್ಟು ಜನ ಮಕ್ಕಳು ಸತ್ತದ್ದನ್ನು ಕಾಣಬೇಕಾಯಿತು. ನೂರು ಜನ ಮಕ್ಕಳ ಸಾವು! ತನ್ನ ದುಷ್ಟರಾದ ಮಕ್ಕಳು ಅಳಿದ ನಂತರ ಪಾಂಡವರನ್ನು ಮಕ್ಕಳಂತೆ ಪ್ರೀತಿಸಿದಳು. ಅರಮನೆ ವಾಸ, ಸಂಚಾರ, ಆಶ್ರಮವಾಸ, ತಪಸ್ಸು, ಕೊನೆಗೆ ದೇಹತ್ಯಾಗ. ಈ ಎಲ್ಲ ವಿಷಯಗಳಲ್ಲಿಯೂ ಆಕೆ ಧೃತರಾಷ್ಟ್ರನ ಸಹಧರ್ಮಿಣಿ. ಇಂತಹ ಸಾಧ್ವೀಮಣಿ ನಮ್ಮ ಪುರಾಣಗಳಲ್ಲಾಗಲೀ ಇತಿಹಾಸದಲ್ಲಾಗಲೀ ಬೇರೆ ಯಾರೂ ಇಲ್ಲ. ಗಾಂಧಾರಿ ಒಬ್ಬಳೇ ಸರಿ.