ಬಳ್ಳಾರಿಯ ಯಜಮಾನರು 

ಯಜಮಾನ ಶಾಂತರುದ್ರಪ್ಪ ಬಳ್ಳಾರಿಯ ಚರಿತ್ರೆಯಲ್ಲಿ ಮರೆಯಲಾರದ ಹೆಸರು. ‘ಯಜಮಾನ’ ಎನ್ನುವ ಹೆಸರಲ್ಲೇ ಆಳುವ ಪ್ರಭುತ್ವದ ಸಂಕೇತವನ್ನು ಹೊಂದಿದ ಶಾಂತರುದ್ರಪ್ಪ, ಅದೇ ಆಳುವ ವರ್ಗದ ಬಗ್ಗೆ ಸದಾ ಕಿಡಿಕಾರುವ ವೈರುದ್ಧದ ವ್ಯಕ್ತಿತ್ವವನ್ನು ಹೊಂದಿದವರು. ಸದಾ ಗಾಂಧಿ ಟೋಪಿಯನ್ನು ಹಾಕಿ, ಖಾದಿ ಬಟ್ಟೆ ತೊಟ್ಟು, ಗಾಳಿಗೆ ಹಾರುವಂತಹ ಸಣಕಲು ದೇಹವನ್ನು ಹೊಂದಿದ್ದ  ಶಾಂತರುದ್ರಪ್ಪ ಗಾಂಧಿ ಪ್ರಣೀತ ನೈತಿಕತೆಯ ಕಟ್ಟಾ ಅನುಯಾಯಿಗಳಾಗಿದ್ದರು. ಸದಾ ಹಣೆಗೆ ವಿಭೂತಿಯನ್ನು ಧರಿಸಿ ಲಿಂಗಾಯತ ಧರ್ಮದ ವಕ್ತಾರರಂತೆಯೂ ಕಾಣುತ್ತಿದ್ದರು.

ಯಜಮಾನರ ಬದುಕಲ್ಲಿ ಗಾಂಧಿ ಬದುಕಿನ ಕೆಲವು ಲಕ್ಷಣಗಳು ಕಾಣುತ್ತಿದ್ದವು. ಶಾಂತರುದ್ರಪ್ಪ ಸಮಾಜವಾದದ ತತ್ವ ಪ್ರಣಾಳಿಕೆಯ ಮೂಲಕ ಹೋರಾಟದ ಮನಸ್ಥಿತಿಯನ್ನು ಬೆಳೆಸಿಕೊಂಡವರಲ್ಲ. ಹಾಗಾಗಿ ನಾವು ಯಜಮಾನರನ್ನು ಸಮಾಜವಾದಿ ಎಂಬ ಚೌಕಟ್ಟಿನಲ್ಲಿ ಗಟ್ಟಿಯಾಗಿ ಕೂರಿಸುವುದೂ ಕಷ್ಟವೆ. ಬದಲಾಗಿ ಗಾಂಧಿ ಕಂಡ ಕನಸು ಸ್ವಾತಂತ್ರ್ಯಾನಂತರ ಭಾರತದಲ್ಲಿ ನನಸಾಗದಿರುವುದರಿಂದ ವಿಚಲಿತರಾಗುತ್ತಿದ್ದರು, ಅಂತೆಯೇ ಗಾಂಧಿ ತತ್ವದ ವಿರುದ್ಧದ ನಡೆ ಇರುವ ಸಂಗತಿಗಳನ್ನು ಮತ್ತು ಅಂತಹ ವ್ಯಕ್ತಿಗಳನ್ನು ತೀವ್ರವಾಗಿ ವಿರೋಧಿಸುತ್ತಿದ್ದರು ಕೂಡ. ತಮ್ಮ ಜೀವಿತಾವಧಿಯ ಬಹುಭಾಗವನ್ನು ಅವರು ಸಂಡೂರು ರಾಜರ ವಿರುದ್ಧ ಸೆಣಸಾಡಿದರು. ಅವರ ಇನ್ನಿತರ ಸಂಗತಿಗಳ ಬಗ್ಗೆ ಮಾಹಿತಿಯ ಕೊರತೆ ಇದೆ. ಹಾಗಾಗಿ ಸಂಡೂರು ರಾಜ ಮನೆತನದ ವಿರುದ್ಧ ಹೋರಾಡಿದ ಚಿತ್ರಣಗಳ ಮೂಲಕ ಯಜಮಾನರ ವ್ಯಕ್ತಿತ್ವವನ್ನು ಗ್ರಹಿಸಲು ಈ ಲೇಖನದಲ್ಲಿ ಪ್ರಯತ್ನಿಸಲಾಗಿದೆ.

ಪ್ರಜಾಪರಿಷತ್ತಿನ ಸ್ಥಾಪನೆ

ಭಾರತದ ಒಕ್ಕೂಟದಲ್ಲಿ ಸೊಂಡೂರು ಸಂಸ್ಥಾನವನ್ನು ವಿಲೀನಗೊಳಿಸಲು ೧೯೪೮ರಲ್ಲಿ ಪ್ರಜಾಪರಿಷತ್ತು ಸ್ಥಾಪನೆಯಾಯಿತು. ಯಜಮಾನ ಶಾಂತರುದ್ರಪ್ಪನವರ ನಾಯಕತ್ವದಲ್ಲಿ ರಚನೆಯಾದ ಈ ಪ್ರಜಾಪರಿಷತ್ತಿನಲ್ಲಿ ಸ್ಥಳೀಯರು ಇದ್ದರು. ಮೈಸೂರು ರಾಜ್ಯಕ್ಕೆ ಸೊಂಡೂರನ್ನು ಸೇರಿಸುವುದು ಇದರ ಗುರಿ. ಅಂದಿನ ಕೇಂದ್ರ ಸರರ್ಕಾರದ ಗೃಹಮಂತ್ರಿ ಸರದಾರ ವಲ್ಲಭಭಾಯಿ ಪಟೇಲರು ಭಾರತದ ೫೬೭ ಸಂಸ್ಥಾನಿಕರಿಗೂ ನೋಟೀಸು ಕೊಟ್ಟರು. ಕೇಂದ್ರ ಸರಕಾರದಲ್ಲಿ ವಿಲೀನಗೊಳ್ಳಬೇಕು ಇಲ್ಲವಾದಲ್ಲಿ ಸರಕಾರಿ ಪೊಲೀಸ್ ಪಡೆಯಿಂದ ವಶಪಡಿಸಿಕೊಳ್ಳಲಾಗುವುದು ಎಂದು ಅದರಲ್ಲಿತ್ತು.  ಈ ನೋಟೀಸಿನ ಪರವಾಗಿ ಪ್ರಜಾ ಪರಿಷತ್ತಿನ ಅಧಿವೇಶನ ನಡೆಸಲು ತಯಾರಿ ಮಾಡಿದರು. ಆಗಲೂ ಕಾಂಗ್ರೆಸ್ ಕಾರ್ಯಕರ್ತರಿಗೂ, ಬಳ್ಳಾರಿಯ ಸೊಂಡೂರು ವಿಮೋಚನ ಸಮರ ಸಮಿತಿಯವರಿಗೂ ಮಹಾರಾಜರು ರಜಾಕಾರರ ಬೆದರಿಕೆ ಹಾಕಿದರು. ಆದರೂ ಯತ್ನಟ್ಟಿಯಲ್ಲಿ ಪರಿಷತ್ತಿನ ಮೊದಲ ಅಧಿವೇಶನ ನಡೆಯಿತು.

ರಾಜ್ಯದ ವಿವಿಧ ಭಾಗಗಳಿಂದ ಹೋರಾಟಗಾರರು  ಈ ಅಧಿವೇಶನಕ್ಕೆ ಬಂದಿದ್ದರು. ಕೊಲ್ಲಾಪುರದ ರತ್ನಪ್ಪ ಕಂಬಾರ, ತಲ್ಲೂರು ರಾಮನಗೌಡ, ಶಾಂತಿನಾಥ ಇಂಗಳೆ, ಮಹದೇವಪ್ಪ ಪಟ್ಟಣ, ಶಾಂತರುದ್ರಪ್ಪ ಮುಂತಾದವರು ಭಾಗವಹಿಸಿದ್ದರು. ಸೊಂಡೂರು ಸಂಸ್ಥಾನವು ಭಾರತದಲ್ಲಿ ವಿಲೀನವಾಗಬೇಕು ಎಂಬುದು ನಿರ್ಣಯವಾಯಿತು.  ಈ ಬೆಳವಣಿಗೆಯ ನಡುವೆಯೇ ಸರ್ದಾರ್ ವಲ್ಲಭಭಾಯಿ ಪಟೇಲರ ಕಠಿಣ ನೀತಿಗನುಗುಣವಾಗಿ ಸಂಸ್ಥಾನವು ಏಪ್ರಿಲ್ ೧.೧೯೪೯ರಂದು ಭಾರತದ ಗಣರಾಜ್ಯದಲ್ಲಿ ವಿಲೀನವಾಯಿತು. ಇದಕ್ಕೆ ಶ್ರಮಿಸಿದ ಇತರ ಹೋರಾಟಗಾರರೆಂದರೆ ಅಂಗಡಿ ಶರಭಯ್ಯ, ಉಳ್ಳಾಗಡ್ಡಿ ಕರಿಯಪ್ಪ, ಬಾವಿಕಟ್ಟೆ ಮರಿಬಸಪ್ಪ, ಕೃಷ್ಣನಗರದ ಎಲಿಗಾರ ತಿಮ್ಮಪ್ಪ, ಭುಜಂಗನಗರದ ಗುರುಶಾಂತಯ್ಯ, ಅರಳುಕಲ್ ಕುಮಾರಪ್ಪ, ನಾಗಲಾಪುರದ ಸಿದ್ಧರಾಮಯ್ಯ, ಕಾಲೆ ಸುಬ್ಬಣ್ಣ, ಬೋಜ ಅಡಿವೆಪ್ಪ, ಗಿರಿಮಲ್ಲಪ್ಪ ಮುಂತಾದವರು. ಇವರೆಲ್ಲಾ ಮಹಾರಾಜರ ಸೊಂಡೂರು ’ಸ್ಟೇಟ್ ಸೆಲ್’ನಲ್ಲಿ ಶಿಕ್ಷೆ ಅನುಭವಿಸಿದ್ದರು. ಜೈಲಿನಲ್ಲಿಯೇ ಅರಮನೆಯಿಂದ ಸರಬರಾಜಾಗುತ್ತಿದ್ದ ಆಹಾರವನ್ನು ಸೇವಿಸದೆ ಪ್ರತಿಭಟಿಸಿದ್ದರು. ಊರಿನ ಜನ ತರುತ್ತಿದ್ದ ಬುತ್ತಿಯನ್ನು ಊಟ ಮಾಡುತ್ತಿದ್ದರು.

ಸೊಂಡೂರು ವಿಮೋಚನಾ ಸಮರ ಸಮಿತಿ

ಸೊಂಡೂರಿನಲ್ಲಿ ಘೋರ್ಪಡೆಯವರ ರಾಜ ಮನೆತನದ ವಿರುದ್ಧ ಪ್ರತಿಭಟನೆಯ ಬೀಜ ಬಿತ್ತಿದ್ದು ಯಜಮಾನ ಶಾಂತರುದ್ರಪ್ಪ. ಇವರು ಬಳ್ಳಾರಿಯವರು. ವಿಠಲ ಪ್ರೆಸ್ ನಡೆಸಿಕೊಂಡು ’ಯಜಮಾನ್ ಅಂಡ್ ಬ್ರದರ್ಸ್’ ಎನ್ನುವ ಪುಸ್ತಕದಂಗಡಿ ಇಟ್ಟುಕೊಂಡು ಇದ್ದವರು. ಬಳ್ಳಾರಿಗೆ ಆಂಧ್ರದ ರೈತ ಹೋರಾಟಗಳ ಪ್ರಭಾವವಿತ್ತು. ತೆಲಂಗಾಣ ಹೋರಾಟವು ಇಲ್ಲಿಯ ಬಹುತೇಕರನ್ನು ಪ್ರಭಾವಿಸಿತು. ಯಜಮಾನರೂ ಇದರಿಂದ ಪ್ರಭಾವಿತರಾದರು. ಬಳ್ಳಾರಿಯು ಹಲವು ಸಂಘರ್ಷ ಪ್ರತಿಭಟನೆಯ ತವರಿನಂತಿತ್ತು. ರಂಜಾನ್‌ಸಾಬ್, ಮಹಾಬಳೇಶ್ವರಪ್ಪ ಇಂತಹವರ ಗೆಳೆತನ ಯಜಮಾನರನ್ನು ಹೋರಾಟಗಾರರನ್ನಾಗಿ ಪ್ರಭಾವಿಸಿತು. ಇವರು ಕನ್ನಡ ಪುಸ್ತಕಗಳನ್ನು ತಲೆಮೇಲೆ ಹೊತ್ತು ಮಾರಾಟ ಮಾಡಿದ ಪುಸ್ತಕ ಪ್ರೇಮಿಯೂ ಹೌದು. ೪೦ರ ದಶಕದಲ್ಲಿಯೇ ’ಸೊಂಡೂರು ವಿಮೋಚನಾ ಸಮರ ಸಮಿತಿ’ಯನ್ನು ಹುಟ್ಟು ಹಾಕಿದರು. ಇದರ ಮೂಲಕ ಸೊಂಡೂರು ರಾಜರನ್ನು ವಿರೋದಿsಸಿ ಪ್ರತಿಭಟನೆಗಳನ್ನು ಪ್ರಾರಂಭಿಸಿದರು.

ಸೊಂಡೂರಿನ ಯಶವಂತರಾವ್ ಘೋರ್ಪಡೆ ಮೂಲವಂಶಜರಲ್ಲ, ಇವರು ಕುಮಾರಸ್ವಾಮಿಯ ದೇವಸ್ಥಾನದ ಮೂಲ ಟ್ರಸ್ಟಿ ರಾಜವಂಶ ಅಲ್ಲ ಎನ್ನುವುದೇ ಇವರ ಹೋರಾಟದ ಪ್ರಮುಖ ಧ್ಯೇಯಗಳಾಗಿದ್ದವು. ಕುಮಾರಸ್ವಾಮಿಯ ಪ್ರತಿ ಜಾತ್ರೆಗೂ ದರ್ಶನ ಕರ ವಿರೋಧಿ ಪ್ರತಿಭಟನೆ ಮಾಡುತ್ತಾ ಬಂದರು. ಮೂಲತಃ ಗಾಂಧೀವಾದಿಗಳಾದ ಇವರು ಹೋರಾಟವೆಂದರೆ ಕೋರ್ಟು, ಕಚೇರಿ, ಅರ್ಜಿಗಳ ಮೂಲಕ ಇತ್ಯರ್ಥ ಆಗಬೇಕು ಎಂದು ನಂಬಿದವರು. ಕರ್ನಾಟಕ ಏಕೀಕರಣದಲ್ಲಿಯೂ, ಬಳ್ಳಾರಿಯಲ್ಲಿ ಕನ್ನಡಪರ ಚಳವಳಿಯಲ್ಲಿಯೂ ಇವರದು ಮುಂಚೂಣಿ ನಾಯಕತ್ವ. ೧೯೭೩ರ ಸಂಡೂರು ಭೂ ಹೋರಾಟದಲ್ಲಿ ಚಳವಳಿಯುದ್ದಕ್ಕೂ ಇದ್ದರು.  ಈವರೆಗಿನ ಅವರ ಒಂಟಿತನದ ಹೋರಾಟಕ್ಕೆ ಒಂದು ಸಾಮೂಹಿಕ ಧ್ವನಿ ಬಂದಿತ್ತು.  ಈ ರೈತ ಹೋರಾಟ ಆಗುವುದಕ್ಕೆ ಈ ಭಾಗದಲ್ಲಿ ಅವರು ಹುಟ್ಟು ಹಾಕಿದ ಹೋರಾಟದ ಪರಂಪರೆಯೂ ಕಾರಣವಾಯಿತು

೧೯೬೬ರ ಸತ್ಯಾಗ್ರಹ

ಯಶವಂತರಾವ್ ಘೋರ್ಪಡೆಯವರ ಆಡಳಿತ ಮತ್ತು ಸಂಪತ್ತಿನ ದುರುಪಯೋಗವನ್ನು ವಿರೋಧಿಸಲು ಯಜಮಾನರು ೧೯೬೬ರ ಸತ್ಯಾಗ್ರಹಕ್ಕೆ ಅಣಿಗೊಳಿಸಿದರು. ನವೆಂಬರ್ ೨೮.೧೯೬೬ರಂದು ನಡೆಯಲಿರುವ ಕುಮಾರಸ್ವಾಮಿ ಮಹಾಯಾತ್ರೆಯ ದಿನದಂದು ಸತ್ಯಾಗ್ರಹ ನಡೆಸಲು ನಿರ್ಧಾರವಾಯಿತು. ಸೊಂಡೂರು ವಿಮೋಚನಾ ಸಮರ ಸಮಿತಿಯ ಅಧ್ಯಕ್ಷರಾದ ಶಾಂತರುದ್ರಪ್ಪ ಕರಪತ್ರ ಹೊರಡಿಸಿದರು.  ಈ ಸತ್ಯಾಗ್ರಹಕ್ಕೆ ಮೂರು ಮುಖ್ಯ ಕಾರಣಗಳಿದ್ದವು. ಒಂದು: ಸರ್ಕಾರದಿಂದ ವಾರ್ಷಿಕ ೩೬ ಸಾವಿರ ಪಡೆದರೂ ಮೊದಲಿನಿಂದ ನಡೆಯುತ್ತಿದ್ದ ಅನ್ನ ಸತ್ರವನ್ನು ಮುಚ್ಚಲಾಗಿದೆ. ಎರಡು: ಕುಮಾರಸ್ವಾಮಿ ದೇವಸ್ಥಾನ ಸಾರ್ವಜನಿಕವಾದದ್ದು ಇದನ್ನು ರಾಜರು ತಮ್ಮ ಧರ್ಮದರ್ಶಿತ್ವಕ್ಕೆ ವಶಪಡಿಸಿಕೊಂಡು ದೇವಸ್ಥಾನದ ಹಣ ಆಸ್ತಿಯನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಮೂರು: ಸಾರ್ವಜನಿಕ ಝಂಡಾ ಹಾರಿಸುವ ಪದ್ಧತಿಯನ್ನು ರಾಜರೇ ನೆರವೇರಿಸುತ್ತಿದ್ದಾರೆ. ಒಟ್ಟಾರೆ ಸತ್ಯಾಗ್ರಹದ ಉದ್ದೇಶ ಕುಮಾರಸ್ವಾಮಿ ದೇವಸ್ಥಾನದ ಹಕ್ಕಿಗಾಗಿ ವಿಮೋಚನಾ ಹೋರಾಟವಾಗಿತ್ತು.

ಈ ಸತ್ಯಾಗ್ರಹದ ಮುನ್ನವೇ ಸಾಕಷ್ಟು ಪ್ರಚಾರ, ಕರಪತ್ರ ಹಂಚಿಕೆ, ಪತ್ರಿಕಾ ಪ್ರಕಟಣೆ ನಡೆಯಿತು. ತೆಲುಗು ಭಾಷೆಯಲ್ಲಿ ಪ್ರಕಟವಾದ ಕರಪತ್ರಗಳನ್ನು ಆಂಧ್ರದ ಕುಮಾರಸ್ವಾಮಿ ಭಕ್ತರಿಗೆ ಹಂಚಲಾಯಿತು. ’ಆಂದ್ರಪ್ರಭ’ ತೆಲುಗು ಪತ್ರಿಕೆಯಲ್ಲಿಯೂ ಸತ್ಯಾಗ್ರಹದ ಸುದ್ದಿಯಾಯಿತು. ಮೊದಲ ಬಾರಿಗೆ ಶಾಂತರುದ್ರಪ್ಪನವರು ವೈಯಕ್ತಿಕ ಹೋರಾಟದ ಸೀಮಿತತೆಯನ್ನು ಮೀರಿ ಸಾಮೂಹಿಕ ಹೋರಾಟಕ್ಕೆ ಕರೆ ನೀಡಿದರು. ಇಷ್ಟೆಲ್ಲಾ ಆದರೂ ಈ ಸತ್ಯಾಗ್ರಹ ನಡೆದ ಬಗೆಗೆ ಯಾವುದೇ ಮಾಹಿತಿಯಿಲ್ಲ. ಲಕ್ಷೀಪುರದ ನಾಗಪ್ಪ ’ಸತ್ಯಾಗ್ರಹ ಆಗೋದಿಕ್ಕಿಂತ ಮುಂಚೆನೇ ಯಜಮಾನರನ್ನು ಬಂದಿsಸಲಾಯ್ತು. ಹಾಗಾಗಿ ನಡೀಲಿಲ್ಲ’ ಎಂದು ಹೇಳುತ್ತಾರೆ. ಯಜಮಾನರ ಬಹುತೇಕ ಚಳವಳಿಗಳ ಮುಕ್ತಾಯ ಪೊಲೀಸರ ಬಂಧನವೇ ಆಗಿತ್ತು. ಮಹಾರಾಜರಿಗೂ ಇದು ಸುಲಭದ ವಿಧಾನ. ಸ್ವಾತಂತ್ರ್ಯ ಹೋರಾಟದ ಮಾದರಿಗಳಲ್ಲಿ ಚಳವಳಿ ಮಾಡುತ್ತಿದ್ದ ಯಜಮಾನರು ಅಹಿಂಸಾಮಾರ್ಗದಲ್ಲಿ ಬಲವಾದ ವಿಶ್ವಾಸವಿರಿಸಿದ್ದರು. ಈ ಮಂದಗಾಮಿತ್ವದಿಂದಾಗಿಯೇ ಯುವಕರು ಯಜಮಾನರೊಂದಿಗೆ ಹೆಚ್ಚಾಗಿ ಕೈ ಜೋಡಿಸಲಿಲ್ಲ.

ಸಿದ ಮಾನವ ಹುಸಿ ನುಡಿದು ಹದಗೆಡಿಸಿದ…!

ಶಾಂತರುದ್ರಪ್ಪನವರು ಬದುಕಿನ ಬಹುಭಾಗವನ್ನು ಸೊಂಡೂರಿನ ರಾಜಮನೆತನದ ವಿರುದ್ಧ ಹೋರಾಡುವುದರಲ್ಲೆ ಕಳೆದರು. ಅವರ ಹೋರಾಟದ ತೀವ್ರತೆಯನ್ನು ಸೊಂಡೂರು ಸಂಸ್ಥಾನದ ವಿರುದ್ಧವಾಗಿ ಹೊರಡಿಸುತ್ತಿದ್ದ ಕರಪತ್ರಗಳಲ್ಲಿ ಕಾಣಬಹುದಾಗಿತ್ತು. ಇದಕ್ಕಿಂತ ಮುಖ್ಯವಾಗಿ ಅವರೇ ಬರೆದ ಕಾದಂಬರಿ ’ಹಸಿದ ಮಾನವ ಹುಸಿ ನುಡಿದು ಹದಗೆಡಿಸಿದ ಸೊಂಡೂರ ನಾಡು’ ಅಥವಾ ’ಸೊಂಡೂರಿನ ಮಾಜಿ ರಾಜ ಹಾಗೂ ಯುವರಾಜರ ಭಯಂಕರ ಒಳಸಂಚು’ ಎಂಬ ಪತ್ತೇದಾರಿ ಕಾದಂಬರಿಯಲ್ಲಿ ಯಜಮಾನರ ಧಾರ್ಷ್ಟ್ಯ ನೇರವಂತಿಕೆಯನ್ನು ಗುರುತಿಸಬಹುದು. ಯಜಮಾನರೇ ಇದನ್ನೊಂದು ಕಾದಂಬರಿ ಎಂದಿದ್ದಾರೆ. ಆದರೆ ಕ್ರೈಮ್ ಪತ್ರಿಕೆಯ ರೋಚಕ ವರದಿಯಂತೆ ಇದೆ. ಇದು ಬಳ್ಳಾರಿ ಜಿಲ್ಲೆಯ ಚರಿತ್ರೆಯಲ್ಲಿ ಗಮನಿಸಬೇಕಾದ ಪಠ್ಯ. ಈ ಕಾದಂಬರಿ ರಾಜ್ಯಪತ್ರಗಾರ ಇಲಾಖೆಯು ಸಂಗ್ರಹಿಸಿದ ಯಜಮಾನ ಶಾಂತರುದ್ರಪ್ಪನವರ ವೈಯಕ್ತಿಕ ಸಂಗ್ರಹದಲ್ಲಿ ದೊರೆತಿದೆ.

ಒಂದು ಕಾಲದ ವಾಸ್ತವವನ್ನು ಸಾಮಾಜಿಕ ಕಳಕಳಿ ಇರುವವರು ಗ್ರಹಿಸುವಿಕೆಯ ಸ್ವರೂಪವನ್ನು ತಳಿಯಲು, ಆಳುವ ದೊರೆಯ ಎದುರು ಆತನ ತಪ್ಪುಗಳನ್ನು ಹೇಳಲಿಕ್ಕಾಗದೆ, ಹೇಳಿದರೂ ಅವುಗಳನ್ನು ತಿದ್ದಲಿಕ್ಕಾಗದ ಅಸಹಾಯಕ ಸ್ಥಿತಿ ಇರುವಾಗ ಒಂದು ಭಾಷೆ ಪಡೆಯುವ ಸ್ವರೂಪವನ್ನು ಅರಿಯಲು, ಸ್ವಾಂತಂತ್ರ್ಯ ಬಂದ ನಂತರದಲ್ಲಿ ನೈತಿಕತೆಯೇ ಬದುಕು ಎಂದುಕೊಂಡ ಜನರು ಮತ್ತು ನೈತಿಕತೆಯನ್ನು ಗಾಳಿಗೆ ತೂರುತ್ತಿದ್ದ ಶಕ್ತಿ ರಾಜಕಾರಣ, ಈ ಎರಡರ ನಡುವಿನ ಮುಖಾಮುಖಿ ಹೇಗಿತ್ತು ಎಂದು ತಿಳಿಯಲು ಈ ಕಾದಂಬರಿ ನೆರವಾಗುತ್ತದೆ. ಈ ಬರಹಕ್ಕೆ ವೈಯಕ್ತಿಕ ದ್ವೇಷದ ನೆಲೆಯೂ ಇದೆ. ಇಲ್ಲಿನ ಬರಹ ಸಿಟ್ಟು ಆಕ್ರೋಶ ಅಸಹಾಯಕ ಸ್ಥಿತಿಯಿಂದ ರಚನೆಯಾಗಿದೆ. ಹಾಗಾಗಿ ಏಕವಚನದಲ್ಲಿ ಸಂಬೋಧನೆ ಇದೆ. ಬರಹದಲ್ಲಿ ಎದ್ದು ಕಾಣುವುದು ಮುಸುಗುಡುವ ನೈತಿಕತೆ ಮತ್ತು ಗಾಂಧೀವಾದ. ಆಕ್ರೋಶವನ್ನು ವ್ಯಕ್ತಪಡಿಸುತ್ತಲೂ ಒಂದು ಭಾಷೆಗೆ ಗಡುಸುತನ ಬರುತ್ತದೆ. ವ್ಯಂಗ್ಯ ಕುಹಕ ಆಶ್ಚರ್ಯ ಚಿನ್ಹೆ, ವಿಡಂಬನೆ ಇವುಗಳು ಭಾಷೆಯ ಏರು ಇಳಿವಿನ ಸಾಧನಗಳಾಗುತ್ತವೆ. ವ್ಯಕ್ತವಾಗುವ ಸಿಟ್ಟಿಗೆ ಹೊಸ ರೂಪಕಗಳು ಬಳಕೆಯಾಗುತ್ತವೆ. ಆಗ ಬರೆಹಕ್ಕೆ ಕಾವ್ಯದ ಸ್ವರೂಪವೂ ಸಾಧ್ಯವಾಗುತ್ತದೆ. ಆ ಬಗೆಯ ಎಲ್ಲ ಲಕ್ಷಣಗಳೂ ಈ ಕಾದಂಬರಿಯಲ್ಲಿ ಕಾಣುತ್ತವೆ.

’ಎಂ.ಎಲ್.ಎ ಆದೊಡನೆ ಈತನ ತಲೆಯ ಮೇಲೆ ಎರಡು ಹದನಾದ ಕೋಡುಗಳು ಚಿಗುರಿದವು, ಜನರನ್ನು ಅಧಿಕಾರಿಗಳನ್ನು ಹಿರಿದು ಗಾಯಗೊಳಿಸಲಿಕ್ಕೆ’ ಎನ್ನುವಲ್ಲಿ ಪ್ರಬಲವಾದದ್ದನ್ನೇ ತಣ್ಣಗೆ ಹೇಳುವ ದಾಟಿಯಿದೆ. ’ಕಳ್ಳನ ಜೀವ ಹುಳ್ಳಗೆ’ ’ನಾಯಿ ಹೊಡೆಯುವ ಕೋಲಿಗಿಂತಲೂ ಕಡೆ’, ’ಹೊಟ್ಟೆಯ ಸಿಟ್ಟು ರಟ್ಟೆಗಿಲ್ಲ’, ’ಗರತಿಯಾಗಿದ್ದಲ್ಲಿ ಸೂಳೆಯ ಓಣಿಯಲ್ಲಿ ಮನೆ ಮಾಡು’, ’ಬೆಂಕಿ ಇದ್ದರೆ ತಾನೆ ಹೊಗೆಯಾಡುವುದು’ ಈ ಬಗೆಯ ಜನಪದ ನುಡಿಗಟ್ಟುಗಳನ್ನು ಬಳಸಿಕೊಳ್ಳುವ ಮೂಲಕ ಹೇಳಬೇಕೆಂದದ್ದನ್ನು ಜನಭಾಷೆಯಲ್ಲಿ ಜನಪರವಾಗಿಸುವ ತುಡಿತವಿದೆ. ಭಾಷೆಯ ಓಘ ತೀವ್ರವಾಗಿದೆ. ಜನಸಾಮಾನ್ಯರ ಭಾಷೆಯಲ್ಲಿ ರಾಜರನ್ನು ನಿಂದಿಸುವುದೆಂದರೆ ಅವಮಾನವೇ ಸರಿ. ರಾಜ ವೈಭವವನ್ನು ವರ್ಣಿಸಲು ಹಳೆಗನ್ನಡ ಕಾವ್ಯಗಳಲ್ಲಿ ಶಾಸ್ತ್ರೀಯ ಭಾಷೆಯೊಂದು ದುಡಿದಿದೆ. ಅದೇ ರಾಜರನ್ನು ದೂಷಿಸುವಾಗ ಜನಪದ ಭಾಷೆಯ ನುಡಿಗಟ್ಟುಗಳ ಗಡುಸುತನ ಬಳಕೆಯಾಗಿದೆ. ಇದು ಭಾಷೆ ಬಳಕೆಯ ರಾಜಕಾರಣವೂ ಹೌದು.

ಬರಹದ ಧೋರಣೆ ಸಿಟ್ಟಿನ ಸ್ಫೋಟಗೊಳ್ಳುವಿಕೆ. ಬೀಸು ಹೇಳಿಕೆಗಳಿಲ್ಲದೆ ಖಚಿತಮಾಹಿತಿ ಗಳ ಮೂಲಕ ಅಧಿಕೃತವಾಗಿ ವಿಮರ್ಶಿಸುವ ಗುಣವಿದೆ. ಯಜಮಾನರಿಗೆ ’ಕಾದಂಬರಿ’ ಎಂದು ಬರೆಯುವುದರ ಹಿಂದಿನ ತುಡಿತವೇನಾಗಿರಬಹುದು? ’ಪತ್ತೇದಾರಿ’ಕೆಯಲ್ಲಿ ಅಪರಾಧವನ್ನು ಗುರುತಿಸುವ ಮತ್ತು ಅದಕ್ಕೆ ಹೊಡೆಯುವ ನೇರವಂತಿಕೆ ಇದೆ. ’ಹಸಿದ ಮಾನವ ಹುಸಿನುಡಿದು ಹದಗೆಡಿಸಿದ ಸೊಂಡೂರು ನಾಡು’ ಅಥವಾ ಮಾಜಿ ಮಹಾರಾಜ ಹಾಗೂ ಯುವರಾಜರ ಭಯಂಕರ ಒಳಸಂಚು ಎನ್ನುವ ಕಾದಂಬರಿಯ ಶೀರ್ಷಿಕೆಯಲ್ಲಿಯೇ ರೋಚಕತೆ ಇದೆ. ಅಧಿಕಾರ ವಿಕೇಂದ್ರಿಕರಣಕ್ಕೆ ಗ್ರಾಮ ಪಂಚಾಯಿತಿಗಳು ಆದರೂ ಭೂ ಒಡೆಯರು, ಉಳ್ಳವರ ಹಸ್ತಕ್ಷೇಪದಿಂದ ಅದರ ದುರುಪಯೋಗ ಹೇಗೆ ನಡೆಯುತ್ತಿತ್ತು ಎನ್ನುವುದನ್ನು ಯಜಮಾನರು ಸೂಕ್ಷ್ಮವಾಗಿ ಗ್ರಹಿಸಿದ್ದಾರೆ. ಇಲ್ಲಿ ಪ್ರಜಾಪ್ರಭುತ್ವ ಸರ್ಕಾರದ ದುರ್ಬಲತೆಯನ್ನು ಒತ್ತಿ ಹೇಳಲಾಗಿದೆ. ಇಂಗ್ಲಿಷರ ಆಡಳಿತದಿಂದ ಹೊರಬಂದ ಜನರು ಮುಕ್ತವಾದ ಸ್ವತಂತ್ರ ಬದುಕನ್ನು ಕನಸು ಕಂಡಿದ್ದರು. ಆದರೆ ಆ ಮುಕ್ತತೆ ಇಲ್ಲದೆ ಇಂಗ್ಲಿಷರ ಜಾಗದಲ್ಲಿ ಮತ್ತೊಬ್ಬರು ಬಂದು ಕೂತಂತೆ ’ಪ್ರಜಾಪ್ರಭುತ್ವ’ ಸರ್ಕಾರ ಜನತೆಗೆ ಕಾಣಿಸಿತು. ಹಾಗಾಗಿಯೇ ಇಂಗ್ಲಿಷರೊಂದಿಗಿನ ದೇಶಿಯರ ಸಂಘರ್ಷದಂತೆಯೇ ದೇಶಿಯರೊಂದಿಗಿನ ಜನರ ಸಂಘರ್ಷಕ್ಕೆ ಯಜಮಾನರು ಜನನಾಯಕರಂತೆ ಕಾದಂಬರಿಯನ್ನು ನಿರೂಪಿಸಿದ್ದಾರೆ. ಇಂತಹ ಹಲವು ಕಾರಣಕ್ಕಾಗಿ ಈ ಬರಹವು ಮುಖ್ಯವಾಗಿದೆ.

ಒಕ್ಕಲೆಬ್ಬಿಸುವಿಕೆಗೆ ಪ್ರತಿರೋಧ

ಐವತ್ತರ ದಶಕದ ಸೊಂಡೂರಿನಲ್ಲಿ ಮಹಾರಾಜರ ಅಧಿಕಾರದ ಮಿತಿಗಳ ಬಗೆಗೆ ಆಲೋಚಿ ಸುತ್ತಿದ್ದ ಸಮುದಾಯವೆಂದರೆ ಬ್ರಾಹ್ಮಣರದು. ದೊರೆಗಳಿಗೂ ಈ ಅರಿವಿತ್ತು. ಇವರು ಯಾವುದೇ ಸಮಯದಲ್ಲಿ ದೊರೆಯ ವಿರುದ್ಧ ಜನರನ್ನು ತಯಾರಿ ಮಾಡುವ ಸಾಧ್ಯತೆಯಿತ್ತು. ಹೀಗಾಗಿ ಬುದ್ಧಿವಂತರಾದ ಬ್ರಾಹ್ಮಣರನ್ನು ಮೊದಲು ಆರ್ಥಿಕವಾಗಿ ದುರ್ಬಲಗೊಳಿಸ ಬೇಕಿತ್ತು. ಇದಕ್ಕಾಗಿ ಕೆಲವು ಯೋಜನೆಗಳು ರೂಪುಗೊಂಡವು. ಬ್ರಾಹ್ಮಣರಿಗೆ ದೇವಸ್ಥಾನಗಳ ಪೂಜೆಯ ಕಾರಣಕ್ಕಾಗಿ ದತ್ತಿ ಭೂಮಿಗಳಿದ್ದವು. ಈ ಭೂಮಿ ಅವರನ್ನು ಪ್ರಬಲರನ್ನಾಗಿಸುವ ಶಕ್ತಿಯಾಗಿತ್ತು. ಇದರಿಂದಾಗಿಯೇ ೧೯೫೩ರಲ್ಲಿ ಬ್ರಾಹ್ಮಣರನ್ನು ಒಳಗೊಂಡಂತೆ ಕುಮಾರ ಸ್ವಾಮಿ ದೇವಸ್ಥಾನದ ಭೂಮಿಯ ಗೇಣಿದಾರರನ್ನು ಬಲತ್ಕಾರವಾಗಿ ಒಕ್ಕಲೆಬ್ಬಿಸಲಾಯಿತು. ಈ ಬಗೆಯ ಹಠಾತ್ ದಾಳಿಗೆ ತತ್ತರಿಸಿದ ಜನರು ಅನ್ಯಾಯದ ವಿರುದ್ಧ ಪ್ರತಿಭಟಿಸಿದರು. ಆಗ ಬಳ್ಳಾರಿಯ ಲೋಕಸಭಾ ಸದಸ್ಯರಾಗಿದ್ದ ಶಿವಮೂರ್ತಿ ಸ್ವಾಮಿಯವರು ಇದಕ್ಕೆ ಸ್ಪಂದಿಸಿದರು. ಭಾರತ ಸರಕಾರದ ಗೃಹಖಾತೆಗೆ ಪತ್ರ ಬರೆದು ಸರಕಾರದ ಗಮನ ಸೆಳೆದರು. ಯಜಮಾನ ಶಾಂತರುದ್ರಪ್ಪನವರು ’ಇದ್ದ ಹಲವಾರು ಬ್ರಾಹ್ಮಣರ ಕುಟುಂಬಗಳಲ್ಲಿಯೇ ತನಗೆ ಅವರಿಂದ ಏನಾದರೂ ಮುಂದೆ ತೊಂದರೆಯಾಗಬಹುದೆಂದು ಸಂಶಯದಿಂದ ಅಂತವರ ಬಲ ಕಡಿಮೆ ಮಾಡಲು ಮೊದಲು ಸಭ್ಯರೂ ’ಅಂಜುಬುರುಕರು’ ರಾಜನ ವಿರುದ್ಧ ಪ್ರತಿ ನುಡಿಯದವರ ಆಸ್ತಿಗಳನ್ನು ಕತ್ತರಿಸಿದರು. ನಂತರದಲ್ಲಿ ಕ್ರಮೇಣ ಬಲಿಷ್ಟರೆನಿಸಿಕೊಂಡ ಬ್ರಾಹ್ಮಣರ ಚಂಡಿಕೆ, ಜನಿವಾರಕ್ಕೆ ಕತ್ತರಿ ಪ್ರಯೋಗ ಪ್ರಾರಂಭಿಸಿದರು. ದೇವರ ಪೂಜಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಬ್ರಾಹ್ಮಣ ಪೂಜಾರಿಗಳ ಇನಾಮು ಜಮೀನುಗಳನ್ನು ಸೊಂಡೂರು ಸಂಸ್ಥಾನದ ಹೆಸರಿಗೆ ಸೇರಿಸಿಕೊಂಡು ಅವರಿಗೆ ಪೂಜೆಯ ಪರಿಹಾರಾರ್ಥವಾಗಿ ಕೂಲಿ ಕೊಡಲು ಆರಂಭಿಸಿದರು. ಬರುಬರುತ್ತಾ ಅವರ ಸಂಬಳವನ್ನು ನಿಲ್ಲಿಸಿದರು’ ಎಂದು ಬರೆಯುತ್ತಾರೆ.

ಬಿ.ಡಿ.ಜತ್ತಿಯವರ ಭೇಟಿ ಸಂದರ್ಭದ ಪ್ರತಿಭಟನೆ

ಬಿ.ಡಿ.ಜತ್ತಿಯವರು ೧೯೫೮ರ ಹೊತ್ತಿನಲ್ಲಿ ಮೈಸೂರಿನ ಮುಖ್ಯಮಂತ್ರಿಗಳಾಗಿದ್ದರು. ಸೆಪ್ಟೆಂಬರ್ ೨೨ರಂದು ಸೊಂಡೂರಿಗೆ ಭೇಟಿ ನೀಡಿದರು. ಸಾಮಾನ್ಯ ಜನರು ಮುಖ್ಯಮಂತ್ರಿಯನ್ನು ಕಣ್ಣೆದುರಿಗೆ ನೋಡುತ್ತೇವೆ ಎಂದು ಸಂಭ್ರಮಿಸಿದರು. ಬಳ್ಳಾರಿಯ ಸೊಂಡೂರು ವಿಮೋಚನ ಸಮರ ಸಮಿತಿಯವರು ಈ ಸಂದರ್ಭಕ್ಕಾಗಿ ಯೋಜನೆಯೊಂದನ್ನು ರೂಪಿಸಿದರು. ಮಹಾರಾಜರ ದುರಾಡಳಿತದ ಕೆಲವು ಅಂಶಗಳನ್ನು ಪಟ್ಟಿಮಾಡಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲು ತಯಾರಿ ಆಯಿತು. ಪಕ್ಷದ ದೃಷ್ಟಿಯಲ್ಲಿ ಎಲಿಗಾರ ತಿಮ್ಮಪ್ಪ ಕಾಂಗ್ರೆಸ್ ನಲ್ಲಿದ್ದರೂ, ತನ್ನ ಸ್ಥಳೀಯ ಹಿತಾಸಕ್ತಿಯಿಂದ ಇದಕ್ಕೆ ಬೆಂಬಲಿಸಿದರು. ಈ ಯೋಜನೆ ತಿಳಿದ ದೊರೆಗಳು ಬಳ್ಳಾರಿಯ ಜಿಲ್ಲಾಧಿಕಾರಿ ಮತ್ತು ಡಿ.ಎಸ್.ಪಿ.ಯವರಿಗೆ ಒಂದು ಎಚ್ಚರಿಕೆ ನೀಡಿದರು. ಯಜಮಾನ ಶಾಂತರುದ್ರಪ್ಪನವರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ಬಂದರೆ ಶಾಂತಿಭಂಗವಾಗುವ ಕಾರಣದಿಂದ ಬಂಧಿಸಬೇಕೆಂದು ತಿಳಿಸಲಾಯಿತು. ಯೋಜನೆಯಂತೆ ಜತ್ತಿಯವರು ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುವ ಹೊತ್ತಿಗೆ ಯಜಮಾನ ಶಾಂತರುದ್ರಪ್ಪ ಮತ್ತು ಎಲಿಗಾರ ತಿಮ್ಮಪ್ಪ ಮನವಿ ಸಲ್ಲಿಸಲು ವೇದಿಕೆ ಕಡೆ ಧಾವಿಸಿದರು. ಕೂಡಲೇ ಪೊಲೀಸರು ಇವರನ್ನು ಬಂಧಿಸಿದರು. ಜತ್ತಿಯವರು ಈ ಬಂಧನವನ್ನು ನೋಡಿದರು. ಆದರೆ ಯಾಕೆ ಬಂಧಿಸುತ್ತಿದ್ದಾರೆ, ಏನು ವಿಷಯ ಎನ್ನುವ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.

ಆ ಹೊತ್ತಿಗೆ ರಾಜವಂಶದ ಜನವಿರೋಧಿ ಅಂಶಗಳನ್ನೆಲ್ಲಾ ಗುರುತಿಸಿ ಅವುಗಳ ಬಗ್ಗೆ ಜನರಿಗೆ ತಿಳಿ ಹೇಳುವವರಲ್ಲಿ ಎಲಿಗಾರ ತಿಮ್ಮಪ್ಪ ಪ್ರಮುಖರಾಗಿದ್ದರು. ಯಜಮಾನ ಶಾಂತರುದ್ರಪ್ಪನವರು ಬಳ್ಳಾರಿ ಭಾಗದಿಂದಲೇ ಹೋರಾಟ ಮಾಡುತ್ತಿದ್ದರಾದರೂ ಅವರ ಅಂತಿಮ ಗುರಿ ಕುಮಾರಸ್ವಾಮಿಯನ್ನು ಅರಸರ ಕೈವಶದಿಂದ ಬಿಡಿಸುವುದಾಗಿತ್ತು. ಅಷ್ಟಾಗಿ ಯಜಮಾನರಿಗೆ ಸ್ಥಳೀಯರ ಬಲವೆಂದರೆ ತಿಮ್ಮಪ್ಪ.

ರಾಜಧನ ವಂಚನೆಯ ಪ್ರತಿರೋಧ

ಭಾರತದ ಒಕ್ಕೂಟದಲ್ಲಿ ಸೇರಿದ ಸಂಸ್ಥಾನಗಳ ವಾರಸುದಾರರಿಗೆ ರಾಜಧನ ಕೊಡುವುದಾಗಿ ಒಪ್ಪಂದವಾಗಿತ್ತು. ಸಂಸ್ಥಾನದ ಆದಾಯಕ್ಕೆ ತಕ್ಕಷ್ಟು ’ಪ್ರಿವಿ ಪರ್ಸ್’ ಕೊಡುವ ನಿರ್ಣಯ ವಿತ್ತು. ಇದರ ನಿರ್ಧಾರಕ್ಕೆ ಕೆಲವು ನಿಯಮಾವಳಿಗಳಿದ್ದವು. ಯಾವುದೇ ರಾಜ್ಯದ ವಾರ್ಷಿಕ ಸರಾಸರಿ ವರಮಾನದ ಪ್ರಥಮ ಒಂದು ಲಕ್ಷದಲ್ಲಿ ಶೇಕಡ ೧೫ರಷ್ಟು ’ನಂತರದ ನಾಲ್ಕು ಲಕ್ಷದಲ್ಲಿ ಶೇ ೧೦%ರಷ್ಟು ಐದು ಲಕ್ಷಕ್ಕೂ ಹೆಚ್ಚಿನ ವರಮಾನದಲ್ಲಿ ಶೇ ೭ರಷ್ಟು’ ಒಟ್ಟು ಹತ್ತುಲಕ್ಷಕ್ಕೆ ಮೀರದಂತೆ ರಾಜಧನ ನೀಡುವುದಾಗಿ ಸರ್ಕಾರ ತೀರ್ಮಾನಿಸಿತು. ಸೊಂಡೂರು ಸಂಸ್ಥಾನದ ವಾರ್ಷಿಕ ಆದಾಯ ಎರಡು ಲಕ್ಷವಿತ್ತು. ಈ ಆದಾಯಕ್ಕೆ ೨೫ ಸಾವಿರ ರಾಜಧನ ಸಿಗಬೇಕು. ಆದರೆ ಯಶವಂತರಾವ್ ಘೋರ್ಪಡೆಯವರು ಪಡೆಯುತ್ತಿದ್ದ ರಾಜಧನ ೯೦ ಸಾವಿರ. ಆಗ ಯಜಮಾನ್ ಶಾಂತರುದ್ರಪ್ಪನವರು ’ಮಹಾರಾಜರು ಸರ್ಕಾರವನ್ನು ವಂಚಿಸುತ್ತಿ ದ್ದಾರೆ’ ಎಂದು ಕರಪತ್ರ ಹಂಚಿದರು. ಕೋ.ಚೆನ್ನಬಸಪ್ಪನವರ ’ರೈತ ಪತ್ರಿಕೆ’ ಒಳಗೊಂಡಂತೆ ಹಲವು ಪತ್ರಿಕೆಗಳು ಈ ವಂಚನೆಯ ವಾಸ್ತವವನ್ನು ವರದಿ ಮಾಡಿದವು.

ಇದರ ಒಟ್ಟು ಸಾರ ಹೀಗಿದೆ: ೯೦ ಸಾವಿರ ರೂ.ಗಳ ರಾಜಧನ ಪಡೆಯಬೇಕಿದ್ದರೆ ವರ್ಷ ಸೊಂಡೂರು ವಾರ್ಷಿಕ ಸರಾಸರಿ ವರಮಾನ ೧೦ ಲಕ್ಷ ರೂ. ಇರಬೇಕು. ಒಂದು ವೇಳೆ ಹತ್ತು ಲಕ್ಷ ರೂ.ಗಳ ವರಮಾನವಿತ್ತು ಎಂದುಕೊಳ್ಳೋಣ. ಆಗ ೧೫೮ ಚದುರ ಮೈಲು ಭೂಮಿಗೆ ೧೦ ಲಕ್ಷರೂ. ವರಮಾನ ಬರಬೇಕಾದರೆ ಚದುರ ಮೈಲು ಭೂಮಿಗೆ ೬,೩೨೯ ರೂ.ಗಳ ವರಮಾನವಿರಬೇಕಾಗುತ್ತೆ. ಒಂದು ಚದುರ ಮೈಲು ಭೂಮಿಯಿಂದ ಇಷ್ಟು ವರಮಾನ ಬರಬೇಕಾದರೆ ಇಲ್ಲಿ ಬರಿ ಬಂಗಾರವನ್ನೇ ಬಿತ್ತಿ ಬೆಳೆಯುತ್ತಿರಬೇಕು. ಪ್ರಜೆಗಳ ಲೆಕ್ಕಚಾರದಲ್ಲಿ ಅದನ್ನು ಹೀಗೂ ನೋಡಬಹುದು. ೧೦ ಲಕ್ಷ ಕೊಡುತ್ತಿದ್ದವರು ಸೊಂಡೂರಿನ ೧೫,೦೦೦ ಪ್ರಜೆಗಳು. ಜನಸಂಖ್ಯೆಯಲ್ಲಿ ಒಬ್ಬೊಬ್ಬರು ೬,೬೬೬ ರೂನಷ್ಟು ಕಂದಾಯ ಕೊಡಬೇಕು. ವಾಸ್ತವದಲ್ಲಿ ಇದು ನಂಬಲರ್ಹವಲ್ಲದ ಸಂಗತಿ. ಆದರೆ ಈ ಮಾಹಿತಿಯನ್ನು ನೀಡಿಯೇ ಯಜಮಾನರು ಕರಪತ್ರ ಹಂಚಿದರು.

ಮಾರ್ಚ್ ೩.೧೯೭೩ರಂದು ಸೊಂಡೂರು ಸತ್ಯಾಗ್ರಹದ ಪೂರ್ವಭಾವಿಯಾಗಿ ಬೆಂಗಳೂರಿನಲ್ಲಿ ಸೋಷಲಿಸ್ಟ್ ಪಕ್ಷದ ಕಾರ್ಯಕರ್ತರು ಸೊಂಡೂರಿನ ರೈತರು ಮೆರವಣಿಗೆ ಮಾಡಿದರು. ಈ ಮೆರವಣಿಗೆಯ ಅಜೆಂಡಾ ಅಂದು ಕಾಗೋಡು ಇಂದು ಸೊಂಡೂರು ಎಂಬುದಾಗಿತ್ತು. ಈ ಮೆರವಣಿಗೆಯಲ್ಲಿ ಕೆ.ಜಿ.ಮಹೇಶ್ವರಪ್ಪ, ಜೆ.ಎಚ್.ಪಟೇಲ್, ಎಂ.ಪಿ. ಪ್ರಕಾಶ್, ಯಜಮಾನ ಶಾಂತರುದ್ರಪ್ಪ, ಎಲಿಗಾರ ತಿಮ್ಮಪ್ಪ, ಎಸ್.ಎಸ್.ಕುಮುಟ, ಕಾಗೋಡು ತಿಮ್ಮಪ್ಪ ಮುಂತಾದ ಪ್ರಮುಖರನ್ನೊಳಗೊಂಡಂತೆ ನೂರಕ್ಕೂ ಹೆಚ್ಚು ಸಮಾಜವಾದಿ ಪಕ್ಷ ಕಾರ್ಯಕರ್ತರೂ, ಸೊಂಡೂರಿನ ರೈತರು ಅತ್ಯಂತ ಉತ್ಸುಕತೆಯಿಂದ ಭಾಗವಹಿಸಿದ್ದರು. ಬೆಂಗಳೂರಿನಲ್ಲಿ ಮೊದಲ ಬಾರಿಗೆ ಸೊಂಡೂರು ರೈತರ ಶೋಷಣೆಯ ಮುಕ್ತಿಗಾಗಿ ನಡೆಸಿದ ಮೆರವಣಿಗೆ ಇದಾಗಿತ್ತು.

ಯಜಮಾನರು ಮತ್ತು ವಿಠ್ಠಲ ಪ್ರೆಸ್

ಯಜಮಾನ ಶಾಂತರುದ್ರಪ್ಪ ಅವರು ಬಳ್ಳಾರಿಯಲ್ಲಿ ಸ್ವಂತದ ವಿಠ್ಠಲ ಪ್ರೆಸ್ ಹೊಂದಿದ್ದರು. ಈ ಪ್ರೆಸ್‌ನ್ನು ಅವರು ಹೆಚ್ಚು ಬಳಸಿದ್ದು ಕರಪತ್ರ ಪ್ರಕಟಿಸಲು. ಅವರು ಸೊಂಡೂರು ರಾಜಮನೆತನದ ವಿರುದ್ಧ ಹೊರಡಿಸುತ್ತಿದ್ದ ಎಲ್ಲಾ ಕರಪತ್ರಗಳು, ಕಿರು ಪುಸ್ತಕಗಳು ಇದೇ ವಿಠ್ಠಲ ಪ್ರೆಸ್‌ನಿಂದ ಪ್ರಕಟವಾಗುತ್ತಿದ್ದವು. ಯಜಮಾನರು ಈ ಪ್ರೆಸ್ ನ್ನು ತಮ್ಮ ಹೋರಾಟ ಚಳವಳಿಗೆ ಒಂದು ಶಕ್ತಿಯ ಸ್ಥಾನದಂತೆ ಬಳಸುತ್ತಿದ್ದರು. ಹಾಗಾಗಿ ಯಜಮಾನರ ಬಗ್ಗೆ ಮಾತನಾಡುವಾಗಲೆಲ್ಲಾ ವಿಠ್ಠಲ್ ಪ್ರೆಸ್ ಒಂದು ಪಾತ್ರದಂತೆ ಕಾಣುತ್ತದೆ. ಅಥವಾ ಯಜಮಾನರಿಗೆ ಅದು ಶಕ್ತಿಸಂಚಲದ ಕೇಂದ್ರವೂ ಆಗಿತ್ತು.  ಶಾಂತರುದ್ರಪ್ಪ ಅವರು ಕೇಂದ್ರದ ಮಂತ್ರಿಗಳಿಂದ ಹಿಡಿದು ರಾಜ್ಯದ ಮಂತ್ರಿಗಳಿಗೂ, ನ್ಯಾಯಾಧೀಶರುಗಳಿಗೂ ನೇರವಾಗಿ ಪತ್ರ ಬರೆಯುತ್ತಿದ್ದರು. ಆಗಿನ ಕಾಲದಲ್ಲಿಯೇ ಎಲ್ಲಾ ಪತ್ರಗಳನ್ನೂ ಇಂಗ್ಲೀಷಿನಲ್ಲಿ ಅಚ್ಚು ಹಾಕಿಸಿ ಅವುಗಳನ್ನು ಮುದ್ರಿಸಿ ಕಳಿಸುತ್ತಿದ್ದರು. ಹೀಗೆ ವಿಠ್ಠಲ್ ಪ್ರೆಸ್ ಯಜಮಾನರ ಹೋರಾಟದ ಸಂಗಾತಿಯೂ ಆಗಿತ್ತು.

ಶಾಂತರುದ್ರಪ್ಪ ಅವರ ಬಗ್ಗೆ ತಿಳಿದವರು ಅವರು ಊರೂರು ಅಲೆದು ಪುಸ್ತಕ ಮಾರುತ್ತಿದ್ದರು ಎಂತಲೂ ಹೇಳುತ್ತಾರೆ. ಹಾಗೆ ಮಾರುವ ಬಹುಪಾಲು ಪುಸ್ತಕಗಳು ವಿಠ್ಠಲ್ ಪ್ರೆಸ್ ನಿಂದಲೇ ಪ್ರಕಟವಾಗುತ್ತಿದ್ದವು. ಈಗಲೂ ಬಳ್ಳಾರಿಯ ಅನಂತಪುರ ರಸ್ತೆಯಲ್ಲಿ ಯಜಮಾನ ಅಂಡ್ ಬ್ರದರ್ಸ್ ಎನ್ನುವ ಪುಸ್ತಕದ ಅಂಗಡಿ ಇದೆ. ಈಗ  ಶಾಂತರುದ್ರಪ್ಪ ಅವರ ತಮ್ಮನ ಮಕ್ಕಳು ನಡೆಸಿಕೊಂಡು ಹೋಗುತ್ತಾರೆ. ಕಾರಣ ಹೋರಾಟದ ಹುಚ್ಚಲ್ಲಿ ಯಜಮಾನರು ಮದುವೆಯಾಗುವುದನ್ನು ಮರೆತರು. ತಮ್ಮನ ಮಕ್ಕಳನ್ನು ತಮ್ಮ ಮಕ್ಕಳು ಎಂದು ಭಾವಿಸಿ ಸಾಕಿ ಸಲಹಿದರು.

ಹೀಗೆ ಶಾಂತರುದ್ರಪ್ಪ ಅವರು ಕರ್ನಾಟಕದ ಚರಿತ್ರೆಯಲ್ಲಿಯೂ ನೆನಪಿಟ್ಟುಕೊಳ್ಳಬಹುದಾದ ಒಂದು ವ್ಯಕ್ತಿತ್ವ. ಆದರೆ ಅವರ ಬಗ್ಗೆ ಈವರೆಗೂ ಯಾವುದೇ ಅಧ್ಯಯನಗಳು ನಡೆದಂತಿಲ್ಲ. ಅವರ ವ್ಯಕ್ತಿ ಚಿತ್ರದ ಇನ್ನಷ್ಟು ಮಾಹಿತಿಗಳನ್ನು ಶೋಧಿಸುವ ಅಗತ್ಯವಿದೆ. ಈ ಲೇಖನದಲ್ಲಿ ಯಜಮಾನರ ವ್ಯಕ್ತಿತ್ವದ ಒಂದು ಹೋರಾಟದ ಮುಖವನ್ನು ಕಾಣಿಸಲು ಪ್ರಯತ್ನಿಸಲಾಗಿದೆ.