ನನ್ನ ಕಿವಿಗೆ ಬಿದ್ದ ಹೆಸರಿನ ಗಾಂಧಿ, ನಾನು ಕಣ್ಣಾರೆ ಕಂಡ ಗಾಂಧಿ,  ಮತ್ತು ನನ್ನಲ್ಲಿ ಪೂಜ್ಯತೆ ಗೌರವಗಳನ್ನು ಹುಟ್ಟಿಸಿದ ಗಾಂಧಿ-ಒಬ್ಬರೇ, ಅವರು  ಮಹಾತ್ಮಾಗಾಂಧಿ. ಇವತ್ತು ಅವರ ನಂತರ ಅನೇಕ ಗಾಂಧಿಗಳ ಒಂದು ಸರಣಿಯೇ ಇದೆ. ಈಗಲೂ ನನಗೆ ನೆನಪಿದೆ. ಆಗ ನನ್ನ ವಯಸ್ಸು ಏಳು ಅಥವಾ ಎಂಟು ಎಂದು ತೋರುತ್ತದೆ. ನಾನು ನನ್ನ ಅಪ್ಪನ ಹೆಗಲಮೇಲೆ ಕೂತು, ದಾವಣಗೆರೆಯ ರೈಲ್ವೇ ಸ್ಟೇಷನ್ ಎದುರಿಗೆ ಭಾರೀ ಜನಸಂದಣಿಯ ನಡುವೆ, ಕೃಶವಾದ ಕಂದುಬಣ್ಣದ, ಬಕ್ಕತಲೆಯ ಅರೆಬೆತ್ತಲೆಯ ಮುದುಕರೊಬ್ಬರು, ಉದ್ದನೆಯ ಕೋಲೂರಿಕೊಂಡು, ಹಲ್ಲಿಲ್ಲದ ಬಾಯಿ ತೆರೆದು ನಗುತ್ತ, ಬರುತ್ತಿರುವಾಗ, ‘ಮಹಾತ್ಮಾಗಾಂಧೀಜೀಕಿ ಜೈ’ ‘ವಂದೇ ಮಾತರಂ’ ಎಂದು ಜನ ಜಯಘೋಷ ಮಾಡುತ್ತಿದ್ದುದನ್ನು ಕಂಡ ಕೇಳಿದ ನೆನಪು ನನಗಿನ್ನೂ ಇದೆ.

ನಾನು ರಾಮಗಿರಿ ಮಿಡಲ್ ಸ್ಕೂಲ್ ಎರಡನೆಯ ತರಗತಿಯ ವಿದ್ಯಾರ್ಥಿ. ನಮ್ಮ ತಂದೆ ಅದೇ ಸ್ಕೂಲಿನ ಹೆಡ್ ಮಾಸ್ಟರು. ಆಗ ಊರೂರುಗಳಿಗೆ ಖಾದಿಬಟ್ಟೆ ಗಾಂಧೀ ಟೋಪಿಯ ಕಾರ್ಯಕರ್ತರು ಮತ್ತು ಮುಖಂಡರು ಬಂದು ಸಭೆಸೇರಿಸಿ ಭಾಷಣ  ಮಾಡುತ್ತಿದ್ದರು. ನಮ್ಮ ಮನೆಗೂ ಆಗಾಗ ಒಬ್ಬರು ಗಾಂಧೀ ತುಂಡಿನಂಥವರು ಬರುತ್ತಿದ್ದರು. ಅರ್ಧ ತುಂಡು ಪಂಚೆ, ಬನಿಯನ್, ಮೇಲೊಂದು ಮಡಿಸಿ ಹೆಗಲಮೇಲೆ ಹಾಕಿಕೊಂಡ ಕಂಬಳಿ, ಬೋಳು ಮಂಡೆ, ಜಟ್ಟಿಯ ಮೈಕಟ್ಟು, ಕಾಲಲ್ಲಿ ದಪ್ಪನಾದ ಚಡಾವು, ಕೈಯಲ್ಲೊಂದು ದೊಣ್ಣೆ. ಬಿರುಗಾಳಿಯಂತೆ ಊರೂರು ತಿರುಗುವ ಮನುಷ್ಯ. ಹೆಸರು ಕೊಟ್ರೆ ನಂಜಪ್ಪ.  ಅವರು ಹೊಳಲ್ಕೆರೆಗೆ ಸಮೀಪದ ದೊಗ್ಗನಾಳು ಎಂಬ ಊರಿನವರು. ಅವರು ಒಮ್ಮೆ ರಾಮಗಿರಿಯಲ್ಲಿ ಸಭೆ ಸೇರಿಸಬೇಕಾಗಿತ್ತು. ಅವತ್ತಿನ ಸಂಜೆಯ ಸಭೆಗೆ ನಮ್ಮ ತಂದೆಯವರು ಒಂದೆರಡು ಕುರ್ಚಿ, ಎರಡುಮೂರು ಬೆಂಚುಗಳನ್ನು, ಮಿಡಲ್ ಸ್ಕೂಲಿನಿಂದ ಕೊಟ್ಟರು. ಸಭೆ ಸಂತೆ ಮೈದಾನದ ಬಯಲಿನಲ್ಲಿ. ಜನ ನಿಂತೋ ಕೂತೋ ಭಾಷಣ ಕೇಳುತಿದ್ದರು. ಮೈಕಿನ ಹೆಸರೇ ಕೇಳಬೇಡಿ. ಭಾಷಣ ಮಾಡುವವರ ಬಾಯೇ ಮೈಕು! ಅಷ್ಟೂ ಜನಕ್ಕೆ ಅವರು ಮಾತನಾಡಿದ್ದು ಕೇಳುತಿತ್ತು, ಅಥವಾ ಜನ ಕೇಳಿಸಿಕೊಳ್ಳುತ್ತಿದ್ದರು. ಬ್ರಿಟಿಷ್ ಸಾಮ್ರಾಜ್ಯದ ದಬ್ಬಾಳಿಕೆಯನ್ನು ಕಿತ್ತೊಗೆದು ಸ್ವರಾಜ್ಯವನ್ನು ಸಂಪಾದಿಸುವುದು ಹೇಗೆ ಎನ್ನುವುದೆ ವಿಷಯ. ಈ ‘ಮಹಾನ್ ಭಾರತದ ಅಷ್ಟೂಜನ ಒಂದುಕಡೆ ನಿಂತು  ಕ್ಯಾಕರಿಸಿ ಉಗುಳಿದರೆ ಸಾಕು, ಬ್ರಿಟಿಷರ ಇಡೀ ಇಂಗ್ಲೆಂಡ್ ಅದರೊಳಗೆ ಮುಳುಗಿ ಹೋಗುತ್ತದೆ: ಅಷ್ಟು ಚಿಕ್ಕದೇಶದ ಜನ ಇಡೀ ಭರತಖಂಡವನ್ನಾಳುತ್ತಾರೆಂದರೆ, ನಾವು ಆಳಿಸಿಕೊಳ್ಳುತ್ತೇವೆ ಎಂದರೆ, ಅದು ತೀರಾ ನಾಚಿಕೆಗೇಡಿನ ವಿಷಯ’. ಜನ ಹೋ ಎಂದು ಚಪ್ಪಾಳೆ ತಟ್ಟುತ್ತಿದ್ದರು. ನಡುನಡುವೆ ‘ಮಹಾತ್ಮಾಗಾಂಧೀಕಿ ಜೈ’ ‘ಬೋಲೋ ಭಾರತ್ ಮಾತಾಕಿ ಜೈ’ ‘ವಂದೇಮಾತರಂ’ -ಇತ್ಯಾದಿ.

ಇಂಥ ಒಂದು ಸಭೆ ನಡೆದ ಮೂರುನಾಲ್ಕುದಿನಕ್ಕೆ ಮಿಡಲ್ ಸ್ಕೂಲ್ ಹೆಡ್ಮಾಸ್ಟರಿಗೆ, ಚಿತ್ರದುರ್ಗದ ಜಿಲ್ಲಾಧಿಕಾರಿಗಳಿಂದ ಒಂದು ನೋಟೀಸ್ ಬಂತು. ‘ಸರ್ಕಾರಿ ನೌಕರರಾದ ನೀವು, ಸರ್ಕಾರದ ಶಾಲೆಯಿಂದ, ಸರ್ಕಾರದ ವಿರುದ್ಧ ಚಳುವಳಿ ನಡೆಯಿಸುವ ಮಂದಿಯ ಸಭೆಗೆ, ಕುರ್ಚಿ-ಬೆಂಚುಗಳನ್ನು ಒದಗಿಸಿದ ವಿಷಯ ನಮ್ಮಗಮನಕ್ಕೆ ಬಂದಿದೆ. ಇಂಥ ದೇಶ ದ್ರೋಹದ ಕೆಲಸ ಮಾಡಿದ ನಿಮ್ಮನ್ನು ಯಾಕೆ ಹೆಡ್‌ಮೇಷ್ಟರ ಕೆಲಸದಿಂದ ತೆಗೆಯಬಾರದು; ಸಮಜಾಯಿಷಿಕೊಡಿ’. ನಮ್ಮ ತಂದೆ ಭೂಮಿಗಿಳಿದು ಹೋದರು; ಇರುವುದೊಂದು ಕೆಲಸ ಹೋದರೆ ಹೆಂಡತಿ ಮಕ್ಕಳ ಗತಿಯೇನು? ನನ್ನ ವಯಸ್ಸಿನ ಹುಡುಗನಿಗೆ ಅವೆಲ್ಲ ಅರ್ಥವಾಗುವುದಾದರೂ ಹೇಗೆ? ಮನೆಯಲ್ಲಿ ಹೆಪ್ಪುಗಟ್ಟಿದ ದುಃಖ, ಯಾವುದೇ ಆಸ್ತಿ ಪಾಸ್ತಿ ಇರದ, ಸಣ್ಣ ಸರ್ಕಾರೀ ಉದ್ಯೋಗವಷ್ಟನ್ನೆ, ಅವಲಂಬಿಸಿದ ನನ್ನ ತಂದೆಯವರು ಆಮೇಲೆ ಏನು ಮಾಡಿದರೋ, ಏನು ಸಮಜಾಯಿಷಿ ಕೊಟ್ಟರೋ. ಆ ಕೂಡಲೇ ಅವರಿಗೆ ಬೇರೊಂದು ಊರಿಗೆ ವರ್ಗವಾದದ್ದಂತೂ ನಿಜ. ರಾತ್ರೋರಾತ್ರಿ ಎರಡು ಎತ್ತಿನ ಗಾಡಿ ಮಾಡಿಕೊಂಡು, ಮನೆಯೊಳಗಿನ ಸಾಮಾನು ಹೇರಿಕೊಂಡು, ಹೊಸದುರ್ಗ ತಾಲ್ಲೂಕಿನ ಊರೊಂದಕ್ಕೆ ಪ್ರಯಾಣ ಮಾಡಿದ್ದಂತೂ ನೆನಪಿದೆ. ಗಾಂಧಿಯ ಹೆಸರು ಹೇಳಿದ್ದಕ್ಕೆ ಅವರ ಪರವಾದ ಮಂದಿಗೊಂದಿಷ್ಟು ನೆರವಾದದ್ದಕ್ಕೆ, ಇಷ್ಟೊಂದು ತೊಂದರೆಯೆ? ಗಾಂಧಿ ಇಷ್ಟೊಂದು ಅಪಾಯದ ಮನುಷ್ಯನೆ!

ಆಮೇಲೆ ಕೆಲವು ವರ್ಷಗಳ ನಂತರ ತುಮಕೂರಿನ ಹೈಸ್ಕೂಲ್ ಕಾಲೇಜುಗಳಿಗೆ ಬಂದೆ. ಸಾವಿರದ ಒಂಬೈನೂರಾ ನಲವತ್ತೆರಡು, ನಲವತ್ಮೂರರ ಕಾಲ. ಸ್ವಾತಂತ್ರ  ಚಳುವಳಿಯ ಉತ್ಕರ್ಷದ ಕಾಲ. ಲಾಟೀಛಾರ್ಜು- ಗೋಲೀಬಾರು ದಿನದಿನದ ಸುದ್ದಿ. ಕಾಲೇಜಿನಲ್ಲಿ ಒಂದು ದಿನ ಮೊದಲನೆ ಪಿರಿಯಡ್ ಮುಗಿದು ಎರಡನೆ ಪಿರಿಯಡ್‌ಗೆ ಕಾದಿದ್ದೆವು. ಇನ್ನೇನು ಅಧ್ಯಾಪಕರು ಬಂದು ವೇದಿಕೆಯನ್ನು ಹತ್ತಬೇಕು. ವೇದಿಕೆಯ ಕೆಳಗೆ ಢಮಾರ್! ಯಾರೋ ಒಂದು ನಿರುಪದ್ರವಕಾರಿಯಾದ ನಾಡಬಾಂಬನ್ನು ಹುದುಗಿಸಿ ಇಟ್ಟಿದ್ದರಂತೆ. ಸದ್ಯ ಯಾರಿಗೂ ಏನೂ ಆಗಲಿಲ್ಲ. ಪೋಲೀಸ್ ವ್ಯಾನುಗಳು ಸದ್ದು ಮಾಡುತ್ತ ಧಾವಿಸಿ ಬಂದವು. ನಾವೆಲ್ಲ ಚಲ್ಲಾಪಿಲ್ಲಿ. ಆ ಗದ್ದಲದಲ್ಲಿ ಕೈಗೆ ಸಿಕ್ಕ ಒಂದಿಬ್ಬರು ಅಮಾಯಕ ವಿದ್ಯಾರ್ಥಿಗಳನ್ನು ಹಿಡಿದು ಪೋಲೀಸಿನವರು ಜೈಲಿಗೆ ಕರೆದುಕೊಂಡು ಹೋದರು. ಮರುದಿನದಿಂದ ಅನಿರ್ದಿಷ್ಟ ಕಾಲ ಕಾಲೇಜು ಬಂದ್. ಆಗ ನಾನಿದ್ದದ್ದು ತುಮಕೂರಿಗೆ ಮೂರುವರೆ ಮೈಲಿ ದೂರದ ಸಿದ್ಧಗಂಗೆಯ ಮಠದಲ್ಲಿ. ಕಾಲೇಜಿಗೆಂದು, ದಿನಾ ಮೂರುವರೆ ಮೈಲಿ ನಡೆದು ಬಂದು ಮತ್ತೆ ಸಂಜೆ ಮೂರುವರೆ ಮೈಲಿ ನಡೆದು ಮಠಕ್ಕೆ ಹೋಗಬೇಕಾದ ದೈನಂದಿನ ಪಾದಯಾತ್ರೆಯ ಪ್ರಯಾಸದಿಂದಾಗಿ, ಇನ್ನಿತರ ವಿದ್ಯಾರ್ಥಿಗಳಂತೆ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸಬಹುದಾದ ಅವಕಾಶವೆ ನನಗೆ ಕಡಿಮೆಯಿತ್ತು. ಆದರೂ, ಈ ಬಾಂಬ್ ಪ್ರಕರಣದಲ್ಲಿ, ಕೈಗೆ ಸಿಕ್ಕ, ಅಮಾಯಕರಾದ ನಮ್ಮ ಜತೆಯ ವಿದ್ಯಾರ್ಥಿಗಳಲ್ಲಿ ಕೆಲವರನ್ನು ಪೋಲೀಸಿನವರು ಜೈಲಿಗೆ ಒಯ್ದರೆಂಬುದು ನಮಗೆಲ್ಲ ತಲ್ಲಣದ ವಿಷಯವಾಗಿತ್ತು. ಇದನ್ನು ಪ್ರತಿಭಟಿಸಬೇಕೆಂದು ತುಮಕೂರಿನ ಕೆಲವು ನಾಯಕರು ಕರೆ ಕೊಟ್ಟಿದ್ದರಿಂದ, ಮರುದಿನ ಏರ್ಪಟ್ಟ ಪ್ರತಿಭಟನಾ ರ‍್ಯಾಲಿಯಲ್ಲಿ ನಾನೂ ಭಾಗವಹಿಸಿ ‘ಮಹಾತ್ಮಾಗಾಂಧೀ ಕಿ ಜೈ’ ಎಂದು ಕೂಗಿದೆ. ಯಥಾಪ್ರಕಾರ ಜಿಲ್ಲಾಧಿಕಾರಿಗಳ ಕಛೇರಿಯ ಬಳಿಗೆ ಮೆರವಣಿಗೆ ಬಂದಾಗ ಪೋಲೀಸರು ಲಾಠೀ ಛಾರ್ಜುಮಾಡಿ ಅದನ್ನು ಚದುರಿಸಿದರು. ನಾವೆಲ್ಲ ಹತ್ತೂಕಡೆ ಚಲ್ಲಾಪಿಲ್ಲಿಯಾದೆವು. ಮರುದಿನದ ಪತ್ರಿಕೆಯಲ್ಲಿ, ಬಂದ ವರದಿಯನ್ನೋದಿ, ಈ ಮೆರವಣಿಗೆಯಲ್ಲಿ ನಾನೂ ಭಾಗವಹಿಸಿದೆನೆಂಬ ಸುದ್ದಿಯನ್ನು ಯಾರ ಮೂಲಕವೋ ಖಚಿತ ಪಡಿಸಿಕೊಂಡ ನಮ್ಮ ತಂದೆಯವರು ಸಿದ್ಧಗಂಗೆಯ ಮಠಕ್ಕೆ ಬಂದು ‘ಈಗ ಹ್ಯಾಗೂ ಕಾಲೇಜು ಬಂದಾಗಿದೆ; ನೀನು ಇಲ್ಲಿರುವುದು ಬೇಡ. ಈ ಚಳುವಳಿ-ಗಿಳುವಳಿ ಸೇರಿ ಮತ್ತೆ ನನ್ನ ಕೆಲಸಕ್ಕೆ ಸಂಚಕಾರ ತಂದೀಯ: ಮನೆ ತುಂಬ ಮಕ್ಕಳೊಂದಿಗನಾದ ನಾನು ಹಾಗೇನಾದರೂ ಆದರೆ ಮಣ್ಣು ಹೊಯ್ದುಕೊಳ್ಳಲೆ?. ನಡಿ, ಊರಿಗೆ ಹೋಗೋಣ’ -ಎಂದು ಎಳೆದುಕೊಂಡು ಹೋದರು. ಆಮೇಲೆ ಬಹುಕಾಲ ಕಾಲೇಜು ಪ್ರಾರಂಭವಾದ ಹಾಗೆ ಕಾಣಲಿಲ್ಲ. ಹೀಗಾಗಿ ಇಡೀ ಆ ವರ್ಷ ನಾನು, ಕೊರಟಗೆರೆಗೆ ಸಮೀಪದ ರಾಂಪುರ ಎಂಬ ಊರಿನ ಮನೆಯಲ್ಲಿ ಸ್ಥಗಿತಗೊಳ್ಳಬೇಕಾಯಿತು. ಈ ಕಾಲದಲ್ಲೆ ನಾನು ಓದಿದ್ದು ಮಹಾತ್ಮಾ ಗಾಂಧಿಯವರ ಜಗತ್ ಪ್ರಸಿದ್ಧವಾದ ‘ಆತ್ಮಕಥನ’ವನ್ನು.

ಎಂಥ ಅದ್ಭುತ ಕಥನ ಅದು! ಮೇಲುನೋಟಕ್ಕೆ ಸಾಮಾನ್ಯನೆಂಬಂತೆ ಕಾಣುವ ಮನುಷ್ಯನೊಬ್ಬ, ಒಂದು ಯುಗ ನಿರ್ಮಾಪಕ ಮಹಾ ಸತ್ವವಾಗಿ ರೂಪುಗೊಂಡ ಕಥೆ. ಅವರ ಬದುಕು ನಿರಂತರವಾದ ಆತ್ಮಶೋಧನೆಯ ಹಾಗೂ ಸ್ವಾತ್ಮವಿಮರ್ಶೆಯ ಸಾಹಸಯಾತ್ರೆ. ಅಮೆರಿಕಾದ ಸುಪ್ರಸಿದ್ಧ ಪತ್ರಕರ್ತ ಹಾಗೂ ಲೇಖಕನಾದ ಲೂಯಿಫಿಷರ್ ಹೇಳುವಂತೆ ‘ಗಾಂಧಿಯವರ ಇಡೀಬದುಕು ತ್ರಿತ್ವಮುಖವಾದ ಒಂದು ಹೋರಾಟ.’ ಮೊದಲಿಗೆ ಅದು ಗಾಂಧಿಯವರು, ತಮ್ಮೊಂದಿಗೆ ತಾವೇ ನಡೆಯಿಸಿದ ಹೋರಾಟ: ತಮ್ಮನ್ನು ತಾವು ಹೆಜ್ಜೆ ಹೆಜ್ಜೆಗೂ ನಿಕಷಕ್ಕೆ ಒಡ್ಡಿಕೊಳ್ಳುತ್ತ, ತಮ್ಮೊಳಗು-ಹೊರಗುಗಳನ್ನು ಶುದ್ಧೀಕರಣ ಪ್ರಕ್ರಿಯೆಯ ಮೂಲಕ ತೊಳೆದುಕೊಳ್ಳುತ್ತ, ತಮ್ಮ ಅಂಕು-ಡೊಂಕುಗಳನ್ನು ಸಾರ್ವಜನಿಕವಾಗಿ ಬಿಚ್ಚಿಡುತ್ತ, ಒಂದು ಪಾರದರ್ಶಕವಾದ ಹಾಗೂ ಸತ್ವಯುತವಾದ ವ್ಯಕ್ತಿತ್ವವನ್ನು ರೂಪಿಸಿಕೊಂಡ ಮಜಲು ಇದು. ಎರಡನೆಯದು, ಗಾಂಧಿಯವರು ತಮ್ಮ ದೇಶದ ಜನತೆಯೊಂದಿಗೆ ನಡೆಯಿಸಿದ ಹೋರಾಟ: ಪರಕೀಯ ಪ್ರಭುತ್ವದಡಿಯಲ್ಲಿ ತಮ್ಮ ವ್ಯಕ್ತಿತ್ವವನ್ನೆ ಕಳೆದುಕೊಂಡು, ನಿಸ್ತೇಜರಾದ ಹಾಗೂ ಸ್ವಾತಂತ್ರ ದ ಬೆಲೆಯನ್ನರಿಯದ ಹಾಗೂ ಪ್ರತಿಭಟನೆಯ ಕೆಚ್ಚನ್ನೆ ಕಳೆದುಕೊಂಡ ಅಥವಾ ಪ್ರತಿಭಟಿಸುವುದು ಹೇಗೆಂದು ತಿಳಿಯದ ಜನ ಸಮೂಹವನ್ನು, ತಮ್ಮ ವ್ಯಕ್ತಿತ್ವ ಹಾಗೂ ನಡೆವಳಿಕೆಗಳಿಂದ ತಿಳಿಯ ಹೇಳುತ್ತ, ತಿದ್ದುತ್ತ, ತಮ್ಮ ಮಾರ್ಗದರ್ಶನವನ್ನು ಅವರು ಒಪ್ಪಿಕೊಳ್ಳುವಂಥ ಪರಿಸರವನ್ನು ನಿರ್ಮಾಣ ಮಾಡುತ್ತ, ಕ್ರಮಕ್ರಮೇಣ ಭಾರತೀಯ ಸ್ವಾತಂತ್ರ  ಚಳುವಳಿಗೆ ಸಜ್ಜುಗೊಳಿಸಿದ ಗಾಂಧಿಯವರ ನಿರಂತರ ಪ್ರಯತ್ನ, ಅವರು ಜನರೊಂದಿಗೆ ನಡೆಯಿಸಿದ ಒಂದು ಹೋರಾಟವೇ ಸರಿ. ಮೂರನೆಯದು, ತಾವೂ  ತಮ್ಮ ಜನವೂ ಒಟ್ಟಿಗೆ ಜತೆಗೂಡಿ ಬ್ರಿಟಿಷ್ ಸಾಮ್ರಾಜ್ಯಶಾಹಿಯೊಂದಿಗೆ ನಡೆಯಿಸಿದ ಹೋರಾಟ. ಈ ಹೋರಾಟದ ಸ್ವರೂಪವನ್ನೂ, ಬಹುಮುಖತೆಯನ್ನೂ, ಈ ಹೋರಾಟದ ಪರಿಣಾಮವನ್ನೂ ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ.

ಮತ್ತೆ ಕಾಲೇಜಿಗೆ, ಹೋಗಿ ಅರ್ಧಕ್ಕೆ ಬಿಟ್ಟ, ಜೂನಿಯರ್ ಇಂಟರ್ ಮೀಡಿಯೇಟ್ ಸೇರಿದೆ. ಸ್ವಾತಂತ್ರ  ಚಳುವಳಿ ಸುಪ್ತವಾಗಿತ್ತು. ಕಾಲೇಜು ಪ್ರಾರಂಭವಾದ ಕೂಡಲೆ ಮತ್ತೆ ಅಮರಿಕೊಂಡಿತು ನನಗೆ ಅರ್ಥವಾಗದ ಇಂಗ್ಲಿಷ್ ಮೀಡಿಯಂ. ಅದುವರೆಗೂ, ಪೆಮರಿಯಿಂದ ಹಿಡಿದು ಎಸ್.ಎಸ್.ಎಲ್.ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಸಲೀಸಾಗಿ ಓದಿಕೊಂಡು ಬಂದಿದ್ದ, ನನಗೆ, ಹಠಾತ್ತನೆ ಆದ ಭಾಷಾಬೋಧನೆಯ ಬದಲಾವಣೆಯಿಂದ ಕಕ್ಕಾವಿಕ್ಕಿಯಾಯಿತು. ನನ್ನಂಥ ಹಳ್ಳಿಗಾಡಿನ ಸಾಮಾನ್ಯ ಸ್ತರದಿಂದ ಬಂದ ಹುಡುಗನಿಗೆ ಅದೊಂದು ಕಲ್ಲು ಮುಳ್ಳಿನ ದಾರಿ. ಅಂತೂ ಇಂತೂ ಇಂಗ್ಲಿಷ್ ತಿಳಿಯದ ಕಾರಣದಿಂದ ಸಾಧಾರಣ ದರ್ಜೆಯಲ್ಲಿ ಪಾಸಾಗಿ, ಕನ್ನಡ ವಿಷಯದಲ್ಲಿ ಬಂದ ಅಧಿಕ ಅಂಕಗಳ ಕಾರಣದಿಂದ ಮೈಸೂರಿನ ಮಹಾರಾಜಾ ಕಾಲೀಜಿನ ಕನ್ನಡ ಎಂ.ಎ.ಗೆ ಸೀಟು ಸಿಕ್ಕಿ, ಮತ್ತೆ ತಾಯಿ ಮಡಿಲಿನ ನೆಮ್ಮದಿಯ ನೆಲೆಗೆ ಬಂದಂತಾಯಿತು. ಆದರೆ ಮುಂದೆ ಮೂರು ವರ್ಷಗಳ ಕಾಲದಲ್ಲಿ ಶ್ರೀ ಕುವೆಂಪು ಅವರು ಕನ್ನಡ ಮತ್ತು ಇಂಗ್ಲಿಷ್ ಈ ಎರಡರಲ್ಲಿಯೂ ರುಚಿ ಹುಟ್ಟಿಸಿದರು. ಯಾವುದೇ ಭಾಷೆಯನ್ನು ನಾವಾಗಿಯೇ ನಮ್ಮ ಅಗತ್ಯಕ್ಕೆ ತಕ್ಕಂತೆ ಓದಿಕೊಳ್ಳುವ ಸಂದರ್ಭವೆ ಬೇರೆ; ಬಲವಂತವಾಗಿ ಹೇರಿದಾಗ ಆಗುವ ವಾಕರಿಕೆಯೇ ಬೇರೆ. ಈಗಂತೂ, ಗಾಂಧಿಯವರ ಚಳುವಳಿ, ಬ್ರಿಟಿಷರನ್ನು ಈ ದೇಶದಿಂದ ಹೊರಕ್ಕೆ ಅಟ್ಟಿದ ಮೇಲೆ, ಬ್ರಿಟಿಷರೇನೋ ಹೋದರು; ಆದರೆ ಅವರ ಭಾಷೆ ಮಾತ್ರ ಇಲ್ಲೇ ಉಳಿಯಿತು. ಅಷ್ಟೇ ಅಲ್ಲ ಸರ್ವವ್ಯಾಪಿಯಾಯಿತು. ಮತ್ತೆ ನಮ್ಮಶಿಕ್ಷಣ ಇಂಗ್ಲಿಷ್‌ಮಯ. ‘ಅ ಆ ಇ ಈ ಮೊದಲು, ಎಬಿಸಿಡಿ ಆಮೇಲೆ’ ಅಲ್ಲ; ಪರಿಸ್ಥಿತಿ ತಿರುಗಾಮುರುಗ. ಮೊದಲಿಗಿಂತಲೂ ಇಂಗ್ಲಿಷಿನ ಮೋಹ ಗ್ರಾಮ ನಗರಗಳೆನ್ನದೆ ಎಲ್ಲಕಡೆ, ಈ ಹೊತ್ತಿನ ಅಗತ್ಯವೆಂಬಂತೆ ಬೇರೂರಿ ಬೆಳೆಯುತ್ತಿದೆ. ಈಗಂತೂ ಜಾಗತೀಕರಣದ ಹೆಸರಲ್ಲಿ, ಬಹುಬಗೆಯ ಹುನ್ನಾರಗಳಿಂದ ಇಂಗ್ಲಿಷ್ ನಮ್ಮ ಮೇಲೆ ಧಾಳಿ ಮಾಡುತ್ತಿದೆ. ದೇಶಭಾಷೆಗಳು, ದೇಶೀಯ ಸಂಸ್ಕೃತಿಗಳು ತತ್ತರಿಸುತ್ತಿವೆ. ‘ಆಳುವವರ ಭಾಷೆ ಆಳುವ ಭಾಷೆ’. ಈಗ ಆಳುವವರು ಯಾರು? ನಮ್ಮನ್ನು ಆಳುತ್ತಿರುವ ಭಾಷೆ ಯಾವುದು? ಇದಕ್ಕಾಗಿ ಗಾಂಧಿ ಸ್ವಾತಂತ್ರ ಚಳುವಳಿಯನ್ನು ಹೂಡಿದರೇನು?  ಈ ಪರಿಸ್ಥಿತಿಗೆ ಎದುರಾಗಿ, ಈ ಕುರಿತು ಗಾಂಧೀಯವರು ತಾಳಿದ್ದ ನಿಲುವೊಂದನ್ನು ಸ್ಪಷ್ಟಪಡಿಸುವ ಘಟನೆಯೊಂದನ್ನು ಇಟ್ಟು ನೊಡೋಣ:

ಅದು ೧೯೧೬ನೆ ಇಸವಿ. ಕಾಶಿಯಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಶಂಖುಸ್ಥಾಪನೆಯ ಸಂದರ್ಭ. ಆಗ ತಾನೇ ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ಇಪ್ಪತ್ತೈದು ವರ್ಷಗಳ ಕಾಲ, ಜನಾಂಗಭೇದ ವರ್ಣಭೇದಗಳ ವಿರುದ್ಧ ಹೋರಾಡಿ, ಜನನಾಯಕರಾಗಿ ಹೆಸರುಮಾಡಿ ಇಂಡಿಯಾಕ್ಕೆ ಬಂದಿದ್ದರು. ಫೆಬ್ರವರಿ ೨, ೧೯೧೬ರಂದು ಪಂಡಿತ ಮದನ ಮೋಹನ ಮಾಲವೀಯರ ನೇತೃತ್ವದಲ್ಲಿ ಅಂದಿನ ವೈಸ್‌ರಾಯ್ ಲಾರ್ಡ್ ಹಾರ್ಡಿಂಜ್ ಅವರಿಂದ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಅಸ್ತಿವಾರ ಹಾಕಿಸುವ ಕಾರ್ಯಕ್ರಮ ಏರ್ಪಟ್ಟಿತ್ತು. ಭಾರತದ ವಿವಿಧ ಪ್ರಾಂತ್ಯಗಳ ರಾಜಮಹಾರಾಜರೂ ಆಹ್ವಾನಿತರಾಗಿ ಬಂದು ಸೇರಿದ್ದರು. ಅಸ್ತಿವಾರ ಸಮಾರಂಭದ ನಂತರದ ನಾಲ್ಕೂ ದಿನ ಪ್ರಮುಖವ್ಯಕ್ತಿಗಳಿಂದ ಭಾಷಣಗಳನ್ನು ಏರ್ಪಡಿಸಲಾಗಿತ್ತು. ಈ ಭಾಷಣಕಾರರಲ್ಲಿ ಒಬ್ಬರನ್ನಾಗಿ ಗಾಂಧಿಯವರನ್ನು ಆಹ್ವಾನಿಸಲಾಗಿತ್ತು.

ಗಾಂಧಿಯವರ ಉಪನ್ಯಾಸ ಫೆಬ್ರವರಿ ನಾಲ್ಕರಂದು. ದರ್ಭಾಂಗದ ಮಹಾರಾಜರು ಸಭೆಯ ಅಧ್ಯಕ್ಷರು. ಮದನಮೋಹನ ಮಾಲವೀಯ, ಶ್ರೀಮತಿ ಆನಿಬೆಸೆಂಟ್ ಮೊದಲಾದ ಪ್ರತಿಷ್ಠಿತರು ಸಭೆಯಲ್ಲಿದ್ದರು. ಸಮಸ್ತ ವೇಷಭೂಷಣಗಳಿಂದ ಆಲಂಕೃತರಾದ ರಾಜ ಮಹಾರಾಜರೂ ಇದ್ದರು. ಗಾಂಧಿ ಮೊಳಕಾಲುದ್ದ ಪಂಚೆಯನ್ನುಟ್ಟು, ಕಾಥೆವಾಡಿ ಅಂಗಿ, ರುಮಾಲು ಧರಿಸಿದ್ದರು. ಗಾಂಧಿಯವರು ಎದ್ದು ನಿಂತು ತಮ್ಮ ಮಾತನ್ನು ಹೀಗೆ ಪ್ರಾರಂಭಿಸಿದರು: ‘ಈಗ ನಾನು ಹೇಳಬೇಕಾದದ್ದು ನಮ್ಮೆಲ್ಲರಿಗೂ ಭಾರೀ ಅವಮಾನಕರವಾದ, ನಾಚಿಕೆ ತರಿಸುವ ಒಂದು ಸಂಗತಿಯನ್ನು. ಅದೇನೆಂದರೆ, ಈ ಸಂಜೆ ಈ ಘನ ವಿದ್ಯಾಸಂಸ್ಥೆಯ ನೆರಳಿನಲ್ಲಿ, ಇಂಥ ಪವಿತ್ರವಾದ ನಗರದಲ್ಲಿ, ನಾನು ನನ್ನ ದೇಶದವರೇ ಆದ ಈ ನನ್ನ ಜನವನ್ನು ಕುರಿತು, ನನಗೇ ವಿದೇಶಿಯವಾದೊಂದು ಭಾಷೆಯಲ್ಲಿ ಮಾತನಾಡಬೇಕಾದ ಸಂದರ್ಭಬಂದಿದೆ. ಈ ಎರಡು ದಿನಗಳಲ್ಲಿ ಇಲ್ಲಿ ನಡೆದಿರುವ ಭಾಷಾ ಸರಣಿಯನ್ನು ಕೇಳಿಸಿಕೊಂಡವರ ಪರೀಕ್ಷೆಯಾಗಬೇಕು ಎಂದು, ಒಂದು ವೇಳೆ ನನ್ನನ್ನೆ ಪರೀಕ್ಷಕನನ್ನಾಗಿ ಯಾರಾದರೂ ನೇಮಕ ಮಾಡುವುದಾದರೆ, ಈ ಶ್ರೋತೃಗಳಲ್ಲಿ ಬಹುಮಂದಿ ಫೇಲಾಗುತ್ತಾರೆ ಎಂದು ನನಗೆ ಗೊತ್ತು. ಯಾಕೆ? ಯಾಕೆಂದರೆ ಈ ಭಾಷಣಗಳು ನೇರವಾಗಿ ಹೋಗಿ ಅವರ ಹೃದಯವನ್ನು ತಲುಪಿಲ್ಲ…. ಮುಂದೆ ಈ ವಿಶ್ವವಿದ್ಯಾಲಯಕ್ಕೆ ಬರುವ ವಿದ್ಯಾರ್ಥಿಗಳು ತಮ್ಮ ತಮ್ಮ ಪ್ರದೇಶಭಾಷೆಗಳಲ್ಲೇ ಇಲ್ಲಿ ಶಿಕ್ಷಣ ಪಡೆಯುವಂತಾಗಬೇಕು ಹಾಗೆ ಇಲ್ಲಿ ವ್ಯವಸ್ಥೆಯಾಗುತ್ತದೆ ಎಂದು ನಾನು ಹಾರೈಸುತ್ತೇನೆ. ನಮ್ಮ ಭಾಷೆ ಎನ್ನುವುದು ನಮ್ಮದೇ ಪ್ರತಿಬಿಂಬ. ಆದ್ದರಿಂದ ನಮ್ಮ ಭಾಷೆಗಳು ಬಡಭಾಷೆಗಳು, ಅವಕ್ಕೆ ಶ್ರೇಷ್ಠವಾದ ವಿಚಾರಗಳನ್ನು ಅಭಿವ್ಯಕ್ತಿಸುವ ಸಾಮರ್ಥ್ಯವಿಲ್ಲ ಎನ್ನುವುದಾದರೆ, ನಾವು ಈ ನೆಲದ ಮೇಲಿದ್ದೂ ಏನು ಪ್ರಯೋಜನ? ಇಂಗ್ಲಿಷ್ ಯಾವತ್ತಾದರೂ ಈ ರಾಷ್ಟ್ರದ ಭಾಷೆಯಾಗುತ್ತದೆ ಎಂದು ಕನಸು ಕಾಣುತ್ತೀರೇನು? ಅಂಥ ಒಂದು ವಿಕಲತೆಯನ್ನು ಈ ರಾಷ್ಟ್ರದ ಮೇಲೆ ಹೊರಿಸಬೇಕೇನು? ನಮ್ಮ ದೇಶದ ಪ್ರತಿಯೊಬ್ಬ ಬಾಲಕನೂ, ಆಗ ವಿದೇಶೀಯನಾದ ಪ್ರತಿಯೊಬ್ಬ ಇಂಗ್ಲಿಷ್ ಬಾಲಕನ ಜತೆಗೆ ಎಂಥ ಅಸಮಾನ ಸ್ಪರ್ಧೆಗೆ ನಿಲ್ಲ ಬೇಕಾಗುತ್ತದೆ ಎನ್ನುವುದನ್ನು ನೀವೆಲ್ಲಾ ಒಂದು ಕ್ಷಣ ಯೋಚಿಸಿ ನೋಡಿರಿ.”

೧೯೧೬ರಷ್ಟು ಹಿಂದೆ ಗಾಂಧಿ ಹೇಳಿದ ಈ ಮಾತುಗಳನ್ನು ಕುರಿತು ಯೋಚನೆ ಮಾಡಲು ನಮಗೆ ಒಂದು ಕ್ಷಣವೂ ಬಿಡುವಿಲ್ಲ! ಯಾಕೆಂದರೆ ನಾವು ಬಹಳ ಮುಂದೆ ಬಂದಿದ್ದೇವೆ. ತಮ್ಮದಲ್ಲದ ಇಂಗ್ಲಿಷ್ ಭಾಷೆಯಲ್ಲಿ ತಮ್ಮ ಜನದ ಎದುರು  ಮಾತನಾಡಬೇಕಾಗಿ ಬಂದದ್ದು ತಮಗೆ ಅವಮಾನಾಸ್ಪದ  ಹಾಗೂ ನಾಚಿಕೆಯ ವಿಷಯವಾಗಿದೆ ಎಂದ ಗಾಂಧಿಯವರ ಅಂದಿನ ನಿಲುವಿನೊಂದಿಗೆ, ಈ ದಿನದ ನಮ್ಮನ್ನು ಹೋಲಿಸಿಕೊಂಡು ನೋಡಿದರೆ, ನಮಗೆ ಅಂಥದೇನೂ ಅನ್ನಿಸುವುದಿಲ್ಲವಲ್ಲ!

ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಈ ಉಪನ್ಯಾಸದ ಸಮಯದಲ್ಲಿ ಗಾಂಧಿಯವರು, ನಮ್ಮದೇಶದ ರೈತರ ಬಡತನದ ಹಿನ್ನೆಲೆಯಲ್ಲಿ ಅಂದಿನ ಆಳರಸರ ಐಷಾರಾಮೀ ಬದುಕನ್ನು ಕುರಿತು, ತುಂಬ ದಿಟ್ಟತನದ ಮಾತುಗಳನ್ನಾಡಿದರು. ಬ್ರಿಟಿಷ್ ಮಹಾಸಾಮಾಜ್ಯದ ಚಕ್ರವರ್ತಿಗಳ ನೇರವಾದ ಪ್ರತಿನಿಧಿಗಳಾದ ವೈಸ್ ರಾಯ್ ಈ ಸಮಾರಂಭಕ್ಕೆ ಬಂದರೆಂಬ ಕಾರಣಕ್ಕೆ ಇಂಡಿಯಾದ ವಿವಿಧ ಪ್ರಾಂತ್ಯಗಳ ರಾಜ ಮಹಾರಾಜರು, ಝಗಮಗಿಸುವ ವಸ್ತ್ರಾಲಂಕಾರಗಳಿಂದ ಹಾಗೂ ಬಗೆಬಗೆಯ ಆಭರಣಗಳಿಂದ ಭೂಷಿತರಾಗಿ ಸಭೆಯಲ್ಲಿ ಉಪಸ್ಥಿತರಿದ್ದರು. ಗಾಂಧಿ ತಮ್ಮ ಉಪನ್ಯಾಸದ ಸಂದರ್ಭದಲ್ಲಿ ಹೇಳಿದರು: ‘ನಿನ್ನೆ ದಿನದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಘನತೆವೆತ್ತ ಮಹಾರಾಜರೊಬ್ಬರು ಈ ದೇಶದ ಬಡತನದ ಬಗ್ಗೆ ಮಾತನಾಡಿದರು; ಉಳಿದವರೂ ಅದನ್ನು ಪ್ರಸ್ತಾಪಿಸಿದರು. ಆದರೆ ಇಲ್ಲಿ ನಾನು ಕಂಡದ್ದೇನು? ಇಡೀ ಸಮಾರಂಭ ಅತ್ಯಂತ ಅದ್ಧೂರಿಯಿಂದ ನೆರವೇರಿತು! ಪ್ಯಾರಿಸ್ ನಗರದ ಅತ್ಯಂತ ಶ್ರೀಮಂತನಾದ, ಆಭರಣಗಳ ವ್ಯಾಪಾರಿಯೇನಾದರೂ ಒಂದು ವೇಳೆ ಇಲ್ಲಿಗೆ ಬಂದು ನೋಡಿದ್ದರೆ, ಅವನ ಕಣ್ಣುಗಳಿಗೆ ಖಂಡಿತ ಹಬ್ಬವನ್ನುಂಟುಮಾಡುವಂಥ ದೃಶ್ಯ  ಇದು.  ಸರ್ವಾಲಂಕಾರಭೂಷಿತರಾದ ಈ ರಾಜಮಾನ್ಯರ ಜತೆಯಲ್ಲಿ ನಮ್ಮ ದೇಶದ ಕೋಟ್ಯಂತರ ಮಂದಿ ಬಡಜನರನ್ನು ನಾನು ಹೋಲಿಸಿ ನೋಡುತ್ತೇನೆ. ಹಾಗೆ ಹೋಲಿಸಿದಾಗ ಈ ರಾಜಮಾನ್ಯರಿಗೆ ಹೇಳಬೇಕು ಎನಿಸುತ್ತದೆ, ನೀವು ತೊಟ್ಟಿರುವ ಈ ಒಡವೆ ವಸ್ತ್ರಗಳ ಹೊರೆಯನ್ನೆಲ್ಲ ಕಳಚಿ ನಿಮ್ಮ ದೇಶವಾಸಿಗಳ ಕಷ್ಟ ನಿವಾರಣೆಗಾಗಿ ಮುಡುಪಿಡದೆ ಹೋದರೆ ಈ ದೇಶಕ್ಕೆ ಮುಕ್ತಿಯಿಲ್ಲ. ನೀವು ಹೀಗೆ ಅಡಿಯಿಂದ ಮುಡಿಯವರೆಗೆ ಸರ್ವಾಲಂಕಾರಭೂಷಿತರಾಗಿ ಈ ಸಮಾರಂಭದಲ್ಲಿ ಕಾಣಿಸಿಕೊಳ್ಳಬೇಕೆಂದು ಇಂಗ್ಲೆಂಡಿನ ಚಕ್ರವರ್ತಿಗಳಾಗಲೀ, ವೈಸರಾಯರಾಗಲಿ ಬಹುಶಃ ನಿರೀಕ್ಷಿಸಿರಲಿಲ್ಲ ಮತ್ತು ನಿರೀಕ್ಷಿಸುವುದಿಲ್ಲ ಎಂಬುದನ್ನು ನಾನು ಖಂಡಿತ ಬಲ್ಲೆ?’

ನಮ್ಮದೇಶದ ಕೋಟ್ಯಂತರ ಬಡಜನರ ಬದುಕಿನೊಂದಿಗೆ, ಐಷಾರಾಮೀ ಜೀವನವನ್ನು ನಡೆಯಿಸುವ ಶ್ರೀಮಂತರ ವಿಲಾಸ ವೈಭವಗಳನ್ನು ಹೋಲಿಸಿ, ಈ ಸಂಪತ್ತಿನ ಅಸಮಾನ ವ್ಯವಸ್ಥೆಯನ್ನು ಕಂಡು ಗಾಂಧಿ ಪಟ್ಟ ಕಸಿವಿಸಿ ಅಷ್ಟಿಷ್ಟಲ್ಲ. ಆದರೆ ಈ ಹೊತ್ತು ಪರಿಸ್ಥಿತಿಯೇನೂ ಬದಲಾಗಿಲ್ಲ. ಈಗ ಹಿಂದಿನ ಆ ಅರಸರಿಲ್ಲ. ಆದರೆ ಹೊಸಬಗೆಯ ಅರಸರು ಗದ್ದುಗೆಯೇರಿದ್ದಾರೆ. ಈ ದಿನದ ರಾಜಕಾರಣಿಗಳು, ಮಂತ್ರಿ ಮಹೋದಯರು ಅಂದಿನ ಅರಸರಂತೆ ಸರ್ವಾಲಂಕಾರ ಭೂಷಿತರೂ ಅರಮನೆಗಳಲ್ಲಿ ವಾಸಿಸುವವರೂ ಅಲ್ಲದಿರಬಹುದು; ಆದರೆ ಅವರ ಸ್ಥಾನಮಾನ-ಅಧಿಕಾರ- ಅಂತಸ್ತುಗಳಿಗನುಗುಣವಾಗಿ ಅವರ ಕಾರು-ಬಾರುಗಳಿಗೆ ಖರ್ಚಾಗುವ ಸಾರ್ವಜನಿಕರ ಹಣದ ಪ್ರಮಾಣ ಅಷ್ಟಿಷ್ಟಲ್ಲ. ಇಂಥದನ್ನೆಲ್ಲ ಎತ್ತಿ ಹೇಳಲು ಅವತ್ತು ಗಾಂಧಿ ಇದ್ದರು; ಈವತ್ತು ಇಲ್ಲ.

ದೇಶದ ಹಣ-ಅದು ಯಾವುದೆ ರೂಪದ್ದೆ ಆಗಲಿ, ಅದನ್ನು ಸಾರ್ವಜನಿಕ ಸೇವೆಗೆ ತೊಡಗಿಸಿಕೊಂಡವರು ಅತ್ಯಂತ ಎಚ್ಚರಿಕೆಯಿಂದ ಬಳಸಬೇಕು ಎನ್ನುವ ವಿಚಾರದಲ್ಲಿ ಗಾಂಧಿಯವರು ಬಹು ಕಟ್ಟು ನಿಟ್ಟು. ಒಂದು ಸಲ ಹೀಗಾಯಿತು: ಗಾಂಧಿ ದಕ್ಷಿಣ ಆಫ್ರಿಕಾದಲ್ಲಿ ಅನೇಕ ವರ್ಷಗಳ ಕಾಲ ಸಾರ್ವಜನಿಕ ಸೇವೆಯಲ್ಲಿ, ಜನನಾಯಕರೆಂದು, ಹೆಸರುಗಳಿಸಿ ಇಂಡಿಯಾಕ್ಕೆ, ಹೊರಟುನಿಂತಾಗ, ಅಲ್ಲಿನ ಭಾರತೀಯರು ಗಾಂಧಿಯವರನ್ನು ಬೀಳ್ಕೊಡುವ ಮುನ್ನ ಅವರನ್ನು ಸನ್ಮಾನಿಸಿ ಅಮೂಲ್ಯವಾದ ಉಡುಗೊರೆಗಳನ್ನೂ ಕಾಣಿಕೆಗಳನ್ನು ಪ್ರೀತಿಯಿಂದ ಕೊಟ್ಟರು. ಆ ಕೊಡುಗೆಗಳಲ್ಲಿ ಚಿನ್ನಬೆಳ್ಳಿಯ ವಸ್ತುಗಳು ಮಾತ್ರವಲ್ಲ, ಬೆಲೆ ಬಾಳುವ ವಜ್ರದ ಒಡವೆಗಳೂ ಇದ್ದವು. ಜತೆಗೆ ಗಾಂಧಿಯವರ ಹೆಂಡತಿಗೂ ಪ್ರತ್ಯೇಕವಾದ ಒಡವೆ ವಸ್ತುಗಳನ್ನು ಕೊಡಲಾಯಿತು. ಈ ಬೀಳ್ಕೊಡುಗೆಯ ಸನ್ಮಾನದ ರಾತ್ರಿ ಗಾಂಧಿಯವರಿಗೆ ನಿದ್ರೆಯಿಲ್ಲ; ತಳಮಳ, ಅಶಾಂತವಾದ  ಚಡಪಡಿಕೆ. ತಮಗೆ ಸನ್ಮಾನರೂಪದಲ್ಲಿ ಸಂದ ಈ ಅಮೂಲ್ಯವಸ್ತುಗಳನ್ನು ಇಟ್ಟುಕೊಳ್ಳಬೇಕೆ, ಇಟ್ಟುಕೊಳ್ಳಬಾರದೆ. ಇದು ತಳಮಳದ ಕಾರಣ. ತಮ್ಮ ಬದುಕನ್ನು ಆದಷ್ಟು ಸರಳವನ್ನಾಗಿ ಮಾಡಿಕೊಳ್ಳಬೇಕೆಂದು ಸಂಕಲ್ಪಿಸಿದ ಹೊತ್ತಿನಲ್ಲೇ ಈ ಪ್ರಲೋಭನೆಗೆ ಬಲಿಯಾಗಬೇಕೆ? ಜನರಿಗೆ ಸರಳವಾಗಿ ಬದುಕಿರಿ ಎಂದು ಹೇಳುವ ನಾನೆ ಕೊಡುಗೆಯ ಹೆಸರಿನಲ್ಲಿ ಬಂದ ಒಡವೆ-ವಸ್ತುಗಳನ್ನು ಹೇಗೆ ಇರಿಸಿಕೊಳ್ಳಲಿ?  ಈ ತುಮುಲ ಕೊನೆಗೊಂಡು ನಿಶ್ಚಯವಾಗಿ ಗಟ್ಟಿಗೊಂಡಿತು. ಈ ಒಡವೆಗಳನ್ನೆಲ್ಲ ತಾವೇ ತೆಗೆದುಕೊಳ್ಳುವ ಬದಲು, ಅವನ್ನೆಲ್ಲ ಸೇರಿಸಿ, ಒಂದು ಟ್ರಸ್ಟ್ ಮಾಡಿ, ಆ ಹಣವು ಸಾರ್ವಜನಿಕ ಸೇವೆಗೆ ವಿನಿಯೋಗವಾಗುವಂತೆ ವ್ಯವಸ್ಥೆ ಮಾಡಬೇಕೆಂದು ಗಾಂಧಿ ತೀರ್ಮಾನಿಸಿದರು. ಇದು ತಮ್ಮ ನಿರ್ಧಾರವಾಯಿತು; ಆದರೆ ತಮ್ಮ ಹೆಂಡತಿ ಮಕ್ಕಳೂ ಒಪ್ಪಬೇಕಲ್ಲ? ಮಕ್ಕಳನ್ನೇನೋ ಗಾಂಧಿ ಸುಲಭವಾಗಿ ಒಪ್ಪಿಸಿದರು; ಆದರೆ ಪತ್ನಿ ಕಸ್ತೂರಿ ಬಾ, ಒಪ್ಪಲಿಲ್ಲ. ಆಕೆ ಹೇಳಿದಳು: ‘ಈ ವಡವೆ ವಸ್ತುಗಳೇನೋ ನಿಮಗೆ ಬೇಕಾಗದಿರಬಹುದು;  ನಿಮ್ಮ ಮಕ್ಕಳಿಗೂ ಬೇಕಾಗದಿರಬಹುದು. ಆದರೆ ನಾಳೆ ಮನೆಗೆ ಬರಲಿರುವ ನಮ್ಮ ಸೊಸೆಯಂದಿರಿಗಾಗಿ ಇವು ಬೇಕು. ನಾಳೆ ಏನಾಗುತ್ತೋ ಯಾರು ಬಲ್ಲರು? ಇಷ್ಟೊಂದು ಪ್ರೀತಿಯಿಂದ ಇಲ್ಲಿನ ಜನ ಕೊಟ್ಟಿರುವ ಕೊಡುಗೆಗಳನ್ನು, ನಾನು ಯಾರಿಗೂ ಕೊಡುವುದಿಲ್ಲ. ಇಷ್ಟರ ಮೇಲೆ ನನ್ನ ಪಾಲಿಗೆ ಬಂದ ವಡವೆಗಳ ಮೇಲೆ ನಿಮಗೇನು ಅಧಿಕಾರ?’ ಹೀಗೊಂದು ಸಣ್ಣ ಸಂಘರ್ಷವೇ ನಡೆಯಿತು ಗಂಡ ಹೆಂಡಿರ ನಡುವೆ. ಗಾಂಧಿ ಸುಮ್ಮನಾಗಲಿಲ್ಲ; ಪಟ್ಟು ಹಿಡಿದು ಮಡದಿಯ ಮನಸ್ಸನ್ನು ಒಲಿಸಿದರು. ಆ ಕೊಡುಗೆಗಳನ್ನೆಲ್ಲ ಟ್ರಸ್ಟ್ ಒಂದರ ವಶಕ್ಕೆ ಒಪ್ಪಿಸಿದರು. ಈ ಸಂದರ್ಭದಲ್ಲಿ ಗಾಂಧಿ ಹೇಳುತ್ತಾರೆ: ‘ಸಾರ‍್ವಜನಿಕ ಕೆಲಸಗಾರ, ಬೆಲೆಯುಳ್ಳ ಕೊಡುಗೆಗಳನ್ನು ಯಾವುದೆ ಕಾರಣಕ್ಕೂ ಸ್ವೀಕರಿಸ- ಬಾರದೆಂಬುದು ನನ್ನ ಸ್ಪಷ್ಟವಾದ ಅಭಿಪ್ರಾಯವಾಗಿದೆ.’ ಅಷ್ಟೆ ಅಲ್ಲ, ಒಂದು ವೇಳೆ ಸ್ವೀಕರಿಸಿದರೂ, ಅದನ್ನು ಸ್ವಂತಕ್ಕೆ ಬಳಸಿಕೊಳ್ಳುವುದು ಒಂದು ಮಹಾ ಅಪರಾಧವೇ ಆಗುತ್ತದೆ ಎನ್ನುವುದು ಗಾಂಧಿಯವರ ನಿಲುವಾಗಿದೆ. ಈ ಹೊತ್ತು ಯಾವುದು ಖಾಸಗಿ ಯಾವುದು ಸಾರ್ವಜನಿಕ ಎಂಬ  ಪ್ರಜ್ಞೆಯೇ ಇಲ್ಲದವರಂತೆ ನಾವು ಬದುಕುತಿದ್ದೇವೆ. ಎಲ್ಲಿ ಸಮಯ ಸಿಕ್ಕರೆ ಅಲ್ಲಿ ಮೇಯುವುದೇ ಅಭ್ಯಾಸವಾಗಿ ಬಿಟ್ಟಿದೆ. ಸ್ವಾತಂತ್ರೋತ್ತರ ಭಾರತದಲ್ಲಿ ಪಿಡುಗಿನಂತೆ ವ್ಯಾಪಕವಾಗಿರುವ ಭ್ರಷ್ಟಾಚಾರಕ್ಕೆ ಯಾವ ವಿವೇಚನೆಯೂ ಇಲ್ಲ, ವಿವೇಕವೂ ಇಲ್ಲ. ಗಾಂಧಿಯವರಿಗೆ ಗೊತ್ತಿತ್ತು ಅಧಿಕಾರವು ಜನರನ್ನು ಹೇಗೆ ಭ್ರಷ್ಟಗೊಳಿಸುತ್ತದೆ ಎನ್ನುವುದು. ಆದಕಾರಣವೇ ಭಾರತದ ಪ್ರಥಮ ಮಂತ್ರಿಮಂಡಲಕ್ಕೆ, ಆಗಸ್ಟ್ ೧೫, ೧೯೪೭ರಂದು ಹೇಳಿದರು ‘ಇವತ್ತಿನಿಂದ ನೀವು ಮುಳ್ಳಿನ ಕಿರೀಟವನ್ನು ತೊಟ್ಟುಕೊಂಡಿದ್ದೀರಿ. ಸತ್ಯ ಅಹಿಂಸೆಗಳನ್ನು ಬೆಳೆಸಿ ರೂಢಿಸಿಕೊಳ್ಳಲು ಪ್ರಯತ್ನಿಸಿರಿ. ಅಧಿಕಾರದ ಬಗ್ಗೆ ಎಚ್ಚರವಿರಲಿ; ಅಧಿಕಾರವು ಭ್ರಷ್ಠಗೊಳಿಸುತ್ತದೆ. ಅಧಿಕಾರವು ತರುವ ವೈಭವಗಳಲ್ಲಿ ಸೆರೆಯಾಗದಂತೆ ನೋಡಿಕೊಳ್ಳಿರಿ. ನೆನಪಿಡಿ ಭಾರತದ ಹಳ್ಳಿ ಹಳ್ಳಿಗಳಲ್ಲಿರುವ  ಬಡಜನರ ಸೇವೆಗೋಸ್ಕರ ನೀವು ಅಧಿಕಾರದಲ್ಲಿದ್ದೀರಿ. ದೇವರು ನಿಮ್ಮನ್ನು ಕಾಪಾಡಲಿ’. ಈ ದೇಶದ ಪ್ರತಿಯೊಂದು ಕಛೇರಿಗಳಲ್ಲಿ ಈ ಮೇಲಿನ ಮಾತುಗಳನ್ನು ಬರೆಯಿಸಿ ಚೌಕಟ್ಟನಲ್ಲಿ ತೂಗುಹಾಕಬೇಕು.

ಸ್ವಾತಂತ್ರ್ಯೋತ್ತರ ಭಾರತದಲ್ಲಿ, ಇತ್ತೀಚೆಗೆ ಸಂಭವಿಸಿದ ಬಾಬರೀಮಸೀದಿಯ ಧ್ವಂಸ ಈ ದೇಶದ ಚರಿತ್ರೆಯ ಪುಟಗಳಲ್ಲಿ ಅಳಿಸಲಾಗದ ಮಸಿಯಿಂದ ಬರೆಯಲಾದ ಒಂದು ಕಪ್ಪು ಘಟನೆ. ಈದೇಶದ ಬಹುಮುಖೀ ಸಂಸ್ಕೃತಿಯನ್ನು ಎತ್ತಿಹಿಡಿಯುತ್ತ ಬದುಕಿನುದ್ದಕ್ಕೂ ಕೋಮು ಸಾಮರಸ್ಯಕ್ಕಾಗಿ ಶ್ರಮಿಸಿದ ಗಾಂಧಿಯವರು ಒಂದುವೇಳೆ ಬದುಕಿದ್ದರೆ ಈ ಘಟನೆಗೆ ಹೇಗೆ ಪ್ರತಿಕ್ರಿಯಿಸುತ್ತಿದ್ದರು? ಈ ಪ್ರಶ್ನೆಗೆ ಉತ್ತರದ ಹಾಗಿದೆ, ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ, ಲಂಡನ್ನಿನ ವೆಸ್ಟ್‌ಮಿನಿಸ್ಟರ್ ಅಬೆ ಎಂಬ ಕಟ್ಟಡದ ಮೇಲೆ ನಾಜೀ ಪಡೆಗಳು ಧಾಳಿಮಾಡಿ ಅದರ ಸ್ವಲ್ಪ ಭಾಗವನ್ನು ನಾಶ ಪಡಿಸಿದಾಗ ಗಾಂಧಿ ತೋರಿದ ಪ್ರತಿಕ್ರಿಯೆ. ಈ ಸಂಗತಿಯನ್ನು ಲೋಹಿಯಾ ಒಂದೆಡೆ ದಾಖಲಿಸಿದ್ದಾರೆ: ಅದು ಭಾರತವು ಸ್ವರಾಜ್ಯವನ್ನು ಪಡೆದುಕೊಳ್ಳುವ ಸಲುವಾಗಿ ಬ್ರಿಟಿಷರೊಂದಿಗೆ ತೀವ್ರವಾಗಿ ಮಾತು ಕತೆಗಳಲ್ಲಿ ತೊಡಗಿದ ಹಾಗೂ ನಿರ್ಣಾಯಕವೋ ಎನ್ನುವ ಹಂತ. ಇದೇ ಕಾಲಕ್ಕೆ ಮಹಾಯುದ್ಧ ಆರಂಭವಾಗಿ ನಾಜೀ ವೈಮಾನಿಕ ದಳಗಳು ಇಂಗ್ಲೆಂಡಿನ ಮೇಲೆ ದಾಳಿ ಮಾಡತೊಡಗಿದವು. ಆಗ ಲಂಡನ್ನಿನ ವೆಸ್ಟ್‌ಮಿನಿಸ್ಟರ್ ಅಬೆಯ ಒಂದಷ್ಟು ಭಾಗ ದಾಳಿಗೀಡಾಗಿ ಧ್ವಂಸವಾಯಿತು. ವೆಸ್ಟ್‌ಮಿನಿಸ್ಟರ್ ಅಬೆ ಬ್ರಿಟಿಷ್ ಚರಿತ್ರೆ ಹಾಗೂ ಬ್ರಿಟಿಷ್ ಶಿಲ್ಪಕಲೆಯ ಒಂದು ಮಹಾಸ್ಮಾರಕ. ಇಂಥ ಕಟ್ಟಡ ಹಾಳಾಯಿತೆಂಬ ವಾರ್ತೆಯನ್ನೋದಿ ಗಾಂಧಿಯವರು ಅತ್ಯಂತ ತಳಮಳದಿಂದ ನಾಜಿಗಳ ಈ ಕೃತ್ಯವನ್ನು ಖಂಡಿಸಿ ಆಲ್ ಇಂಡಿಯ ರೇಡಿಯೋ ಮೂಲಕ ತಮ್ಮ ಹೇಳಿಕೆಯನ್ನು ಕೊಟ್ಟರು. ರಾಮ ಮನೋಹರ ಲೋಹಿಯಾ ಅವರೂ ಗಾಂಧಿಯವರ ಈ ಮಾತನ್ನು ಕೇಳಿಸಿಕೊಂಡರು. ಅಷ್ಟೇ ಅಲ್ಲ, ಅವರಿಗೆ ವಿಪರೀತ ಕೋಪ ಬಂದಿತು ಗಾಂಧಿಯವರ ಮೇಲೆ. ಬ್ರಿಟಿಷರ ಮೇಲೆ ಸ್ವರಾಜ್ಯಕ್ಕಾಗಿ ಒತ್ತಾಯಪೂರ್ವವಾದ ಮಾತುಕತೆಗಳು ನಡೆದಿರುವಾಗ ಯುದ್ಧದಂಥ ಸಂದಿಗ್ಧ ಪರಿಸ್ಥಿತಿಯೊಳಗೆ ಸಿಕ್ಕಿಕೊಂಡ ಇಂಗ್ಲೆಂಡ್ ಭಾರತದ ಒತ್ತಡಕ್ಕೆ ಮಣಿಯುವ ಸಾಧ್ಯತೆಗಳಿರುವಾಗ, ಇನ್ನಷ್ಟು ಬಿಗಿಯಾದ ನಿಲುವನ್ನು ತಾಳುವ ಬದಲು ಅಥವಾ ತೆಪ್ಪಗಿರುವ ಬದಲು ವೆಸ್ಟ್‌ಮಿನಿಸ್ಟರ್ ಅಬೆ ಕಟ್ಟಡಕ್ಕಾದ ಹಾನಿಯನ್ನು ಕುರಿತು ಗಾಂಧಿಯವರು ಮಾತನಾಡುವ ಮೂಲಕ ಬ್ರಿಟಿಷರನ್ನು ಓಲೈಸುತ್ತ, ಸಹಾನುಭೂತಿ ತೋರಿಸುತ್ತ, ಈ ಹೊತ್ತಿನ ಸ್ವರಾಜ್ಯ ಸಂಪಾದನೆಯ ಒತ್ತಡವನ್ನು ಸಡಿಲಗೊಳಿಸುತ್ತಿದ್ದಾರೆ, ಎನ್ನಿಸಿತು ಲೋಹಿಯ ಅವರಿಗೆ. ಕೂಡಲೆ, ಲೋಹಿಯ ತಮ್ಮ ಅಸಮಾಧಾನವನ್ನು ಸೂಚಿಸಿ ಗಾಂಧಿಯವರಿಗೊಂದು ಪತ್ರಬರೆದರು. ಇದಕ್ಕೆ ಉತ್ತರವಾಗಿ ಗಾಂಧಿಯವರು ತಮ್ಮ ‘ಹರಿಜನ’ ಪತ್ರಿಕೆಯಲ್ಲಿ ಹೀಗೆ ಬರೆದರು: ‘ವೆಸ್ಟ್ ಮಿನಿಸ್ಟರ್ ಅಬೆ ಇರಲಿ, ರಷ್ಯಾದ ಕ್ರೆಮ್ಲಿನ್ ಆಗಿರಲಿ, ಅಥವಾ ಅಮೆರಿಕಾದ ಜೆಫರ್‌ಸನ್ ಸ್ಮಾರಕವಾಗಿರಲಿ ಯಾವುದರ ವಿನಾಶವೂ ನನಗೆ ಅಪಾರವಾದ ದುಃಖವನ್ನು ಉಂಟುಮಾಡುತ್ತದೆ.’

ಇದು ಗಾಂಧಿಯವರ ಚಿಂತನಾಕ್ರಮ. ಕುವೆಂಪು ಹೇಳುವ ‘ಅನಿಕೇತನ ಪ್ರಜ್ಞೆ’ಗೆ ಗಾಂಧಿ ಒಂದು ಜೀವಂತ ನಿದರ್ಶನ. ಗಾಂಧೀಜಿ ಪ್ರತಿಪಾದಿಸಿದ ‘ಸರ್ವೋದಯ’ ಯಾವುದೇ, ಕಾಲ ಮತ್ತು ದೇಶವಷ್ಟಕ್ಕೆ ಸೀಮಿತವಾದದಲ್ಲ. ಅದು ಎಲ್ಲರ ಅಥವಾ ಮನುಕುಲದ ಶ್ರೇಯಸ್ಸನ್ನು ಕುರಿತದ್ದು. ಇಂಡಿಯಾದವರಾದ ನಮ್ಮ ಪಾಲಿಗೆ, ಗಾಂಧೀಜಿ ಸ್ವಾತಂತ್ರ ವನ್ನು ತಂದುಕೊಟ್ಟ ಮಹಾವ್ಯಕ್ತಿಯಾಗಿ ಗೌರವಾರ್ಹರಾಗಿರಬಹುದು. ಆದರೆ ಗಾಂಧಿಯವರಿಗೆ ಭಾರತದ ಸ್ವಾತಂತ್ರ  ಕೇಂದ್ರ ಕಾಳಜಿಯಾಗಿತ್ತೆಂಬುದು ನಿಜವಾದರೂ, ಅದೊಂದೆ ಮುಖ್ಯವಾಗಿರಲಿಲ್ಲ. ಅವರು ಹೇಳುತ್ತಾರೆ. ‘ನನ್ನ ಆಕಾಂಕ್ಷೆ ನನ್ನ ದೇಶವು ಸ್ವತಂತ್ರವಾಗಬೇಕು ಎನ್ನುವುದಷ್ಟೆ ಅಲ್ಲ, ಅದನ್ನೂ ಮೀರಿದ್ದು. ಅದೆಂದರೆ ಭಾರತದ ಬಿಡುಗಡೆಯೊಂದಿಗೆ, ಜಗತ್ತಿನಲ್ಲಿ ಯಾವ ಜನಾಂಗಗಳು ಪಶ್ಚಿಮದ ಆಕ್ರಮಣಕ್ಕೆ ಹಾಗೂ ಶೋಷಣೆಗೆ ಒಳಗಾಗಿವೆಯೋ, ಅವೆಲ್ಲವುಗಳೂ ಬಿಡುಗಡೆ ಗೊಳ್ಳಬೇಕೆಂಬುದು ನನ್ನ ಅಪೇಕ್ಷೆಯಾಗಿದೆ.’

೧೯೨೮ರಷ್ಟು ಹಿಂದೆಯೆ ಅಭಿವ್ಯಕ್ತವಾದ ಗಾಂಧಿಯವರ ಈ ಆಶಯಗಳು, ಮುಂದೆ ಎರಡು ದಶಕಗಳ ಅನಂತರದ ಕಾಲಮಾನಗಳಲ್ಲಿ ತಕ್ಕಮಟ್ಟಿಗೆ ಕಾರ್ಯಗತವಾದವೆಂಬುದು ನಿಜವಾದರೂ, ಈಗ ಮತ್ತೆ ಜಗತ್ತಿನಲ್ಲಿ ಹಾಗೆ ಬಿಡುಗಡೆಗೊಂಡ ಎಷ್ಟೋ ದೇಶಗಳು ಭಾರತವನ್ನು ಒಳಗೊಂಡಂತೆ- ಪಶ್ಚಿಮದ ನವ ವಸಾಹತುಶಾಹಿಯ ಹಿಡಿತಕ್ಕೆ ಹೇಗೆ ಒಳಗಾಗುತ್ತಿವೆ ಎಂಬುದನ್ನು ನಾವು ಅಸಹಾಯಕರಾಗಿ ನೋಡುತ್ತಿದ್ದೇವೆ. ಈ ಹೊಸ ಪಾರತಂತ್ರ ದಿಂದ ನಾವು ಬಿಡುಗಡೆಯಾಗುವುದು ಹೇಗೆ?

ಯಾವುದೂ ಸಣ್ಣದಲ್ಲ : ೨೦೦೪