ಮೈನಿಂಗ್ ಲಾರಿಗಳ ಅಬ್ಬರ ಜೋರಾಗಿದ್ದ ಸಂದರ್ಭ, ಕೊಪ್ಪಳದಲ್ಲಿ ಡಿಸೈಲ್ ಕೊರತೆ ಎದುರಾಯಿತು. ಪೆಟ್ರೋಲ್ ಬಂಕ್ಗಳ ಎದುರು ಎರಡು ದಿನ ನಿಂತರೂ ಅಗತ್ಯ ಇಂಧನ ದೊರೆಯದ ಪರಿಸ್ಥಿತಿ ತಲೆದೋರಿತು. ಹದ ಮಳೆ ಸುರಿಯುತ್ತಿದ್ದ ಆ ದಿನಗಳಲ್ಲಿ ಬೇಸಾಯದ ಕೆಲಸವೂ ಜೋರಾಗಿತ್ತು. ಲಾರಿಗಳಿಗಷ್ಟೇ ಅಲ್ಲ ಟ್ರ್ಯಾಕ್ಟರ್ಗಳಿಗೆ ಉಳುಮೆಗೆ ಹೊರಡಲು ಡಿಸೈಲ್ ಬೇಕಿತ್ತು. ಡಿಸೈಲ್ ಇಲ್ಲದ ಕಾರಣಕ್ಕೆ ಅನೇಕ ರೈತರು ಹೊಲಕ್ಕೆ ಹೋಗಲಿಲ್ಲ, ಸಕಾಲಕ್ಕೆ ಉಳುಮೆ ಸಾಧ್ಯವಾಗಲಿಲ್ಲ!
ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರವಷ್ಟೇ ಅಲ್ಲ, ಇಂಧನ ಸರಬರಾಜು ವ್ಯವಸ್ಥೆಯಲ್ಲಿ ಚಿಕ್ಕಪುಟ್ಟ ಏರುಪೇರಾದರೂ ನಮ್ಮ ಕೃಷಿ ಕೆಲಸಗಳ ಮೇಲೆ ಪರಿಣಾಮ ಬೀರುತ್ತವೆ. ಈಗ ೧೫-೨೦ ವರ್ಷದ ಹಿಂದೆ ಇಂಧನ ಬೆಲೆ ಏರಿದರೆ ಲಾರಿ ಮಾಲಿಕರ ಮುಷ್ಕರ, ಬಸ್ ದರ ಏರಿಕೆ ನೋಡುತ್ತಿದ್ದೆವು. ರಾಜ್ಯದಲ್ಲಿ ಈಗ ಸುಮಾರು ೫೦ರಷ್ಟು ಬೇಸಾಯ ಟಿಲ್ಲರ್, ಟ್ರ್ಯಾಕ್ಟರ್ ಅವಲಂಬಿತವಾಗಿದೆ. ಅದರಲ್ಲಿಯೂ ಬಯಲುಸೀಮೆ ಪ್ರಾಂತ್ಯಗಳಲ್ಲಂತೂ ಶೇಕಡಾ ೬೫ರಷ್ಟು ಜನ ಎತ್ತು, ನೇಗಿಲು ಮರೆತು ಟ್ರ್ಯಾಕ್ಟರ್ ನಂಬಿದ್ದಾರೆ. ಹೀಗಾಗಿ ಅಲ್ಲಿನ ಯಾವುದೇ ಊರಿಗೆ ಹೋದರೂ ಪಾನ್ಬೀಡಾ ಅಂಗಡಿ, ಹೊಟೆಲ್ ಬಳಿಕ ರಾಸಾಯನಿಕ ಗೊಬ್ಬರ, ಟ್ರ್ಯಾಕ್ಟರ್ ಡೀಲರ್ ಕಾಣಿಸಿಕೊಳ್ಳುತ್ತಾರೆ ! ಇವತ್ತು ಮಲೆನಾಡಿನ ತುಂಡು ಹೊಲ, ಗುಡ್ಡಗಾಡು ಪ್ರದೇಶದ ಕೃಷಿ ಭೂಮಿಗಳಲ್ಲಿ ಮಾತ್ರ ಎತ್ತುಗಳ ಅವಲಂಬನೆ ಉಳಿದಿದೆ. ನಮ್ಮ ಕೃಷಿ ನೆಲಗಳೂ ಹೇಗೆ ಜಾಗತಿಕ ಸಂಬಂಧ ಹೊಂದಿವೆ ಎಂಬುದನ್ನು ಅನ್ನದ ನೆಲದ ಇಂಧನ ನೋಟದಲ್ಲಿ ಗಮನಿಸಬಹುದು.
ಜಾನುವಾರು ಸಾಕಣೆ ಇದ್ದಾಗ ನಮ್ಮ ಹಳ್ಳಿ ಅಡುಗೆಗೆ ಗೋಬರ್ ಅನಿಲ ಸ್ಥಾವರ ಸ್ಥಾಪನೆಗೊಂಡವು. ಹೊಗೆರಹಿತ ಅಡುಗೆ, ಕಾಡು ಉಳಿಸುವ ಅಸ್ತ್ರವಾಗಿ ಕಾಣಿಸಿದವು. ಈಗ ಸಹಾಯಧನ ನೀಡುವ ಸರಕಾರದ ಉತ್ತೇಜನವು ಅಷ್ಟಾಗಿ ಇಲ್ಲದ ಕಾರಣ ಕ್ರಿ.ಶ. ೧೯೮೫-೯೫ರ ಕಾಲದಲ್ಲಿ ಇದ್ದ ಆಸಕ್ತಿ ರೈತ ಸಮುದಾಯದಲ್ಲೂ ಉಳಿದಿಲ್ಲ. ಕರಾವಳಿ ಹಳ್ಳಿಗಳಲ್ಲಂತೂ ಅಡುಗೆ ಇಂಧನ ಎಂದರೆ ಬಹುತೇಕ ಜನಕ್ಕೆ ಎಲ್ಪಿಜಿ ಎನ್ನುವಂತಹ ಪರಿಸ್ಥಿತಿ ಇದೆ! ಸಾವಿರ ಜನಸಂಖ್ಯೆಯ ಹಳ್ಳಿಗೆ ಮೊಬೈಲ್ ಟವರ್ ಎದ್ದಂತೆ ಅಲ್ಲಿ ಗ್ಯಾಸ್ ಏಜನ್ಸಿಗಳು ಹುಟ್ಟಿವೆ. ಅಡುಗೆ ಮನೆ ಅಚ್ಚುಕಟ್ಟಾಗಿ ಉಳಿಯಲು ಗ್ರಾಮೀಣ ಮಹಿಳೆಯರ ಸುಲಭದ ಆಯ್ಕೆ ಇದೆಂಬ ಭಾವನೆ ಬೆಳೆಯುತ್ತಿದೆ. ಅನ್ನದ ಭೂಮಿಯಿಂದ ಅಡುಗೆ ಮನೆಯವರೆಗೆ ವ್ಯಾಪಕವಾಗಿ ಬಳಕೆಯಾಗುತ್ತಿರುವ ಈ ಇಂಧನಗಳಿಂದ ನಮ್ಮ ಹಳ್ಳಿಗಳ ಬೇರು ಅಲುಗಾಡುತ್ತಿದೆಯೇ? ಪರಾಮರ್ಶಿಸಬೇಕು.
ವಾರದ ಹಿಂದೆ ಮಳೆ ಆಗಷ್ಟೇ ಆರಂಭವಾಗಿತ್ತು, ಮಲೆನಾಡಿನ ರೈತನೊಬ್ಬ ಖುಷಿಯಲ್ಲಿ ಹೇಳುತ್ತಿದ್ದ ‘ಇನ್ನು ನಮ್ಮ ಕೊಳವೆಬಾವಿಗೆ ನೀರಾಯಿತು, ಕೃಷಿಗೆ ತೊಂದರೆಯಿಲ್ಲ!‘ ಜಲಾಶಯದಲ್ಲಿ ನೀರು ತುಂಬದಿದ್ದರೆ ವಿದ್ಯುತ್ ಇಲ್ಲ, ವಿದ್ಯುತ್ ಇಲ್ಲದಿದ್ದರೆ ಕೃಷಿಗೆ ನೀರು ಪಡೆಯುವದು ಅಸಾಧ್ಯವೆಂಬ ಸಣ್ಣ ಅರಿವು ಕೂಡಾ ಇಲ್ಲದವರಿದ್ದಾರೆ. ಸ್ವಿಚ್ ಹಾಕಿದರೆ ನೀರು ಬರುತ್ತದೆಂಬ ಕಲ್ಪನೆ ಇವರದು. ಸುರಿದ ಮಳೆ ನೀರನ್ನು ಭೂಮಿಗೆ ಇಂಗಿಸುವ ಕಾಯಕ ಮಾಡಿದರೆ ವಿದ್ಯುತ್, ಇಂಧನ ಬಳಕೆ ಕಡಿಮೆಯಾಗುತ್ತದೆಂಬ ಅರಿವು ಬೇಕು. ನಮ್ಮ ಗ್ರಾಮಾಂತರ ಪ್ರದೇಶಗಳಲ್ಲಿ ಬೆಳೆ, ಬದುಕು ಎಲ್ಲವೂ ದೂರ ದೂರದ ವಸ್ತುಗಳ ಬಗೆಗೆ ಹೆಚ್ಚು ಹೆಚ್ಚು ಅವಲಂಬಿತವಾದಷ್ಟು ಸಮಸ್ಯೆಗಳು ಕ್ಲಿಷ್ಟವಾಗುತ್ತವೆ. ನಮಗೆಂತಹ ಮಾದರಿ ರೂಪಿಸಿಕೊಳ್ಳಬೇಕು ಎಂಬುದನ್ನು ಮರೆತು ಯಾವುದೋ ಉತ್ಪನ್ನಗಳ ಹೊಸ ಮಾರುಕಟ್ಟೆಯಾಗಿ ಹಳ್ಳಿಗಳು ತೆರೆದುಕೊಳ್ಳುತ್ತಿರುವದು ಸರಿಯಲ್ಲ.
ಡಿಸೈಲ್ ಇಲ್ಲದೇ, ವಿದ್ಯುತ್ ಇಲ್ಲದೇ, ಯಂತ್ರವಿಲ್ಲದೇ ಬದುಕಲಾಗುವದಿಲ್ಲ ಎಂಬುದನ್ನು ಒಪ್ಪೋಣ. ಆದರೆ ನಮ್ಮ ಅವಲಂಬನೆಗೆ ಕಡಿವಾಣ, ಮಿತಿಗಳಿಲ್ಲದಿದ್ದರೆ ಮುಂದೆ ನಾವು ಕಷ್ಟ ಅನುಭವಿಸಬೇಕಾಗುತ್ತದೆ. ಮಹಾತ್ಮಗಾಂಧಿ ಆ ಕಾಲಕ್ಕೆ ಹೇಳಿದ ಸ್ವದೇಶಿ ತತ್ವಗಳಲ್ಲಿ ಕೃಷಿ ಬದುಕಿನಲ್ಲಿ ಎಷ್ಟನ್ನು ಅಳವಡಿಸಲು ಸಾಧ್ಯವಿದೆ? ಯೋಚಿಸಬೇಕು. ನಮ್ಮ ಅನ್ನ ನಾವು ಬೆಳೆದುಕೊಳ್ಳುತ್ತೇವೆ ಒಳ್ಳೆಯದು, ಹೆಮ್ಮೆಯಿದೆ. ಒಮ್ಮೆ ಹಿಂತಿರುಗಿ ನೋಡಿ ಡಿಸೈಲ್ ಇಲ್ಲದಿದ್ದರೆ ಆಹಾರ ಬೆಳೆಯುತ್ತೇವೆಯಾ ? ನಿಜ, ಬೆಳೆದುಕೊಳ್ಳುವ ಪ್ರಕ್ರಿಯೆಯಲ್ಲಿ ಎಷ್ಟನ್ನು ಕಳೆದುಕೊಳ್ಳುತ್ತೇವೆ! ಯೋಚಿಸಬೇಕು. ಈ ಕಾರಣಕ್ಕೆ ವಿದೇಶಗಳಿಂದ ಇಂಧನ ಪಡೆದು ಸಾಲಭಾರ ಹೆಚ್ಚಿಸುವ ಕಾಯಕ ಮಾಡುತ್ತಿದ್ದೇವೆ!. ನಾವು ಬಳಸುವ ಇಂಧನದ ಒಂದು ಪಾಲನ್ನು ನಮ್ಮ ಭೂಮಿಯಿಂದ ಉತ್ಪಾದಿಸಲು ಸಾಧ್ಯವೇ? ಗಮನಹರಿಸಬೇಕು. ಜೈವಿಕ ಇಂಧನ ನೀಡಬಲ್ಲ ಹಲವು ಸಸ್ಯಗಳಿವೆ. ಹೊಂಗೆ, ಇಪ್ಪೆ, ಬೇವು ಮುಂತಾದ ಸಸ್ಯಗಳನ್ನು ನಮ್ಮ ಹೊಲದ ಅಂಚುಗಳಲ್ಲಿ ಬೆಳೆಸಬೇಕು. ವರ್ಷಕ್ಕೆ ನಾವು ೧೦೦ಲೀಟರ್ ಡಿಸೈಲ್ ಬಳಸುತ್ತಿದ್ದರೆ ಕನಿಷ್ಟ ನಮ್ಮ ಹೊಲ, ನಮ್ಮ ಭೂಮಿಯಯಲ್ಲಿ ೧೦೦ ಹೊಂಗೆ ಮರವನ್ನಾದರೂ ಬೆಳೆಸುವ ಕೆಲಸ ಮಾಡಿದರೆ ಋಣ ಭಾರ ಕಡಿಮೆಯಾಗುತ್ತದೆ. ನಮ್ಮ ಕೈಯಲ್ಲಿ ಹಣವಿದೆ ಡಿಸೈಲ್ ಬಳಸುತ್ತೇವೆ ಟ್ರ್ಯಾಕ್ಟರ್ ಎಲ್ಪಿಜಿ ಬಳಸುತ್ತೇವೆ ಎಂಬ ಧರ್ಪ ನಮ್ಮದಾಗಬಾರದು. ನಾವು ಇಂಧನ ಭವಿಷ್ಯದ ಬಗೆಗೂ ಜವಾಬ್ದಾರರಾಗಬೇಕು. ಈ ಹಿನ್ನಲೆಯಲ್ಲಿ ನಮಗೆ ಅನುಕೂಲಕರ ಮಾದರಿ ಅಳವಡಿಸುವ ಯತ್ನ ಮಾಡಬೇಕು. ನಮ್ಮ ಅನುಕೂಲತೆ ಅಗತ್ಯಕ್ಕೆ ಎಲ್ಪಿಜಿ ಗ್ರಾಹಕರಾಗಿದ್ದೇವೆಂದ ಮಾತ್ರಕ್ಕೆ ಇದು ಶಾಶ್ವತವಾಗಿ ದೊರೆಯುತ್ತದೆಂಬ ಮೂರ್ಖತನ ಇರಬಾರದು. ನಮ್ಮ ಸುತ್ತಮುತ್ತ ಹೆಚ್ಚು ಹೆಚ್ಚು ಸಸ್ಯ ಬೆಳೆಸಿ ಜೈವಿಕ ಉತ್ಪಾದನೆ ಹೆಚ್ಚಿಸುವ ಕೆಲಸ ನಡೆಯಬೇಕು.
ಗಾಂಧಿ ಊರಿನ ನಾವು ಅನ್ನದಾತರು ಖುಷಿಪಡೋಣ, ಆದರೆ ನಾವು ಬೆಳೆಯುವ ಅನ್ನದಲ್ಲಿ ಡಿಸೈಲ್ ಕಮಟು ಹೆಚ್ಚಿಸದಿರೋಣ. ದೇಶದ ಆರೋಗ್ಯ ರಕ್ಷಿಸೋಣ.
Leave A Comment