ಈ ಮುನ್ನುಡಿ ಡಿ ಬರೆಯುವುದರಲ್ಲಿ ನನಗೆ ಅನೇಕ ಸಂತೋಷಗಳು ಸೇರಿವೆ. ಮುಖ್ಯವಾಗಿ ಮೂರು: (೧) ಗ್ರಂಥಕರ್ತರು ನನಗೆ ಪ್ರಿಯರೂ ಮಾನ್ಯರೂ ಆದ ಸ್ನೇಹಿತರು; (೨) ವಿಷಯವು ದೇಶಚರಿತ್ರೆಯ ಒಂದು ಮಹತ್ವದ ಪ್ರಕರಣ; (೩) ಗ್ರಂಥದ ಶೈಲಿಯು ಕನ್ನಡದ ನೈಜವನ್ನು ಪ್ರತಿಬಿಂಬಿಸಬಲ್ಲದ್ದು.

ರಾಮಯ್ಯನವರು ತಮ್ಮ ಜನತೆಗೆ ತಮ್ಮ ಕಡೆಯ ಕಾಣಿಕೆಯಾಗಿ ಇಂಥ ಸದ್ಗ್ರಂಥವನ್ನು ಕೊಟ್ಟದ್ದಾರೆಂಬುದು ನನಗೆ ಹೆಮ್ಮೆಯ ಸಂಗತಿ.

ರಾಮಯ್ಯನವರ ಸಾರ್ವಜನಿಕವನ್ನು ಮೊದಲಿನಿಂದ ಕಡೆಯವರೆಗೂ ಹತ್ತಿರವಿದ್ದು ಕಂಡವನು ನಾನು. ಎಷ್ಟೋ ಸನ್ನಿವೇಶಗಳಲ್ಲಿ ನಾವಿಬ್ಬರೂ ಸಹಚಾರಿಗಳಾಗಿದ್ದವರು. ಆ ನನ್ನ ಅನುಭವಗಳಿಂದ ಉನ್ನತವಾಗಿ ಬೆಳೆದದ್ದು ನನಗೆ ರಾಮಯ್ಯನವರ ವಿಷಯದಲ್ಲಿರುವ ಗೌರವ ಭಾವನೆ.

ರಾಮಯ್ಯನವರು ಮೊದಲು ತಮ್ಮ ಆದರ್ಶವನ್ನು ಗೊತ್ತುಮಾಡಿಕೊಂಡು ಆಮೇಲೆ ಕಾರ್ಯಕ್ಕೆ ಹೊರಟವರು; ಇದು ದೊಡ್ಡ ಸಂಗತಿ. ಅವರ ಜೀವನ ಗೊತ್ತಾದ ಗುರಿಯುಳ್ಳದ್ದು; ವೃಥಾ ಜೀವನವಲ್ಲ. ಅವರು ಎಂಥವರನ್ನು ತಮ್ಮ ಗುರುಗಳೆಂದು ಆರಿಸಿಕೊಂಡರೆಂಬುದೂ ಅವರ ಸ್ವಭಾವವನ್ನು ತೋರಿಸುತ್ತದೆ. ಆ ಗುರುಗಳು ಇಬ್ಬರು: ವೆಂಕಟಕೃಷ್ಣಯ್ಯನವರು ಮತ್ತು ಮಹಾತ್ಮ ಗಾಂಧೀಯವರು. ಒಬ್ಬರು ಸಮೀಪದವರು, ಸಣ್ಣ ಕ್ಷೇತ್ರದವರು; ಇನ್ನೊಬ್ಬರು ಕೊಂಚ ದೂರದವರು, ವಿಸ್ತಾರ ಕ್ಷೇತ್ರದವರು. ಆದರೆ ಆ ಇಬ್ಬರ ಸೂತ್ರಗಳು ಸಮಾನವಾದುವು: (೧) ಪ್ರಜಾ ವಾತ್ಸಲ್ಯ, (೨) ಅಸತ್ಯ – ಅನ್ಯಾಯಗಳ ವಿಷಯದಲ್ಲಿ ತೀವ್ರ ಅಸಹನೆ, (೩) ಒಂದು ತತ್ತ್ವಕ್ಕಾಗಿ ಬದುಕಬೇಕೆಂಬ ದೃಢ ಪ್ರತಿಜ್ಞೆ.

ಈ ಮೂರು ನೀತಿ ಸೂತ್ರಗಳು ರಾಮಯ್ಯನವರ ಜೀವನದ ಒಂದೊಂದು ಅಂಶವನ್ನೂ ಆಳುತ್ತಿದ್ದವೆಂದು ನಾನು ದೃಢವಾಗಿ ಹೇಳಬಲ್ಲೆ. ಅವರ ಮುಖ್ಯ ಲಕ್ಷಣವನ್ನು ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಅದು ಶೀಲವಂತಿಕೆ, ಶೀಲವೆಂಬುದು ಇಂಗ್ಲಿಷಿನಲ್ಲಿ character ಎಂದು ಹೇಳುವ ಗುಣ. ಯಾವ  ಮನುಷ್ಯನು ತನ್ನ ಜೀವಿತದ ಪ್ರತಿಯೊಂದು ಸಂದರ್ಭದಲ್ಲಿಯೂ ತಾನು ನಡೆದು ಕೊಳ್ಳಬೇಕಾದ ರೀತಿ ಎಂಥಾದ್ದೆಂಬುದನ್ನು ಮನಸ್ಸಿನಲ್ಲಿ ಗೊತ್ತುಮಾಡಿ ಕೊಂಡು, ಅದರಿಂದ ತಪ್ಪದಂತೆ, ಯಾವಾಗಲೂ ಎಂಥೆಂಥ ಕಷ್ಟ ಪರೀಕ್ಷೆಗಳಲ್ಲಿಯೂ ನಡೆದುಕೊಳ್ಳುತ್ತಾನೋ ಆತನು ಶೀಲವಂತ. character  ಅಥವಾ ಶೀಲ ಎಂದರೆ ಅಂಥಾ ನೀತಿದಾರ್ಢ್ಯ. ಇದು ರಾಮಯ್ಯನವರ ದೊಡ್ಡ ಗುಣ. ಯಾವುದೋ ಒಂದು ಲಾಭಕ್ಕಾಗಿ ಅಥವಾ ಅನುಕೂಲಕ್ಕಾಗಿ ಅಥವಾ ದಾಕ್ಷಿಣ್ಯಕ್ಕಾಗಿ ತಾವು ಹಿಡಿದ ವ್ರತವನ್ನು ಅವರು ಸಡಿಸಲಿಲ್ಲ.

ಒಂದು ಉದಾಹರಣೆ ನನಗೆ ಜ್ಞಾಪಕಕ್ಕೆ ಬರುತ್ತದೆ. ೧೯೨೬ – ೨೭ರಲ್ಲಿ ಮಿರ್ಜಾ ಸಾಹೇಬರು ದಿವಾನರಾಗಿದ್ದಾಗ, ರಾಮಯ್ಯನವರು ವೆಂಕಟಕೃಷ್ಣಯ್ಯನವರ ‘ಸಾಧ್ವಿ’ ಪತ್ರಿಕೆಯ ಉದ್ಯೋಗದಲ್ಲಿದ್ದಾಗ, ದಿವಾನರು ಚಿತ್ರದುರ್ಗ ಜಿಲ್ಲೆಯಲ್ಲಿ ಸಂಚಾರ ಮಾಡಿದರು. ಆಗ ಅವರ ಪರಿವಾರದಲ್ಲಿ ಎಂಟು – ಹತ್ತು ಮಂದಿ ಪತ್ರಿಕೋದ್ಯೋಗಿಗಳಿದ್ದರು. ಆ ಸಂಚಾರ ಮುಗಿದ ಬಳಿಕ ತಮ್ಮ ಸಂಚಾರವನ್ನು ಪತ್ರಿಕೋದ್ಯೋಗಿಗಳು ಚೆನ್ನಾಗಿ ವರದಿ ಮಾಡಿದರೆಂಬ ತಮ್ಮ ಸಂತೋಷದ ಗುರುತಾಗಿ ದಿವಾನರು ಪ್ರತಿಯೊಬ್ಬ ಪತ್ರಿಕೋದ್ಯೋಗಿಗೂ ಒಂದು ನೂರು ರೂಪಾಯಿಗಳಷ್ಟು ಪಾರಿತೋಷಕವನ್ನು ಕೊಟ್ಟರು. ರಾಮಯ್ಯನವರಿಗೂ ಹಾಗೆ ಬಹುಮಾನ ಬಂತು. ಆದರೆ ರಾಮಯ್ಯನವರು ಅದು ತಮ್ಮ ಕೈಗೆ ಬಂದಾಗ, ತಾವು ಅದನ್ನು ಸ್ವೀಕರಿಸುವುದು ಯುಕ್ತವೊ ಅಲ್ಲವೋ ಎಂದು ಸಂದೇಹದಲ್ಲಿರುವುದಾಗಿಯೂ, ತಮ್ಮ ಯಜಮಾನರಾದ ವೆಂಕಟಕೃಷ್ಣಯ್ಯನವರಲ್ಲಿ ಅದನ್ನು ಬಿನ್ನಯಿಸಿ, ಅವರ ಉಪದೇಶದಂತೆ ನಡೆಯುವುದಾಗಿಯೂ ಹೇಳಿದರು. ವೆಂಕಟಕೃಷ್ಣಯ್ಯನವರಿಗೆ ಈ ಮಾತನ್ನು ಹೇಳಿದಾಗ, ಅವರು ಸಂತೋಷಪಟ್ಟು, ‘ನೀವು ಏನು ಮಾಡುತ್ತೀ?’ ಎಂದು ರಾಮಯ್ಯನವರನ್ನೇ ಕೇಳಿದರು. ರಾಮಯ್ಯನವರು ‘ನಾನು ದಿವಾನರ ಹಿಂದೆ ಹೋದದ್ದು ನನ್ನ ಪತ್ರಿಕೆಯ ಕೆಲಸಕ್ಕಾಗಿ. ಪತ್ರಿಕೆ ಕೆಲಸ ಮಾಡಿದ್ದಕ್ಕೆ ಪ್ರತಿಫಲ ನಿಮ್ಮಿಂದ ನನಗೆ ಬರುತ್ತದೆ. ದಿವಾನರು ಕೊಟ್ಟ ಮೇಲ್ಸಂಪಾದನೆ ನನಗೆ ಅನಾವಶ್ಯಕವೆನಿಸುತ್ತದೆ. ಅಪ್ಪಣೆಯಾದರೆ ಈ ಹಣವನ್ನು ಹಿಂದಕ್ಕೆ ಕಳುಹಿಸುತ್ತೇನೆ.’ ಎಂದರು. ವೆಂಕಟಕೃಷ್ಣಯ್ಯನವರಿಗೆ ಇನ್ನೂ ಸಂತೋಷವಾಯಿತು. ರಾಮಯ್ಯನವರು ಹಣವನ್ನು ವಾಪಸು ಕಳುಹಿಸಿ, ದಿವಾನರ ಕ್ಷಮೆಬೇಡಿದರು. ಆ ಕಾಲದಲ್ಲಿ ರಾಮಯ್ಯನವರ ಸ್ಥಿತಿ ಹಣ ಬೇಡವೆನ್ನಿಸುವ ಹಾಗಿರಲಿಲ್ಲ. ಅವರು ತಮ್ಮ ವ್ರತವನ್ನು ಕಾಪಾಡಿ ಹಣ ಬೇಡವೆನ್ನಿಸುವ ಹಾಗಿರಲಿಲ್ಲ. ಅವರು ತಮ್ಮ ವ್ರತವನ್ನು ಕಾಪಾಡಿ ಕೊಂಡರು. ಇಂಥವರು ಈ ಗ್ರಂಥದ ಲೇಖಕರು.

ರಾಮಯ್ಯನವರು ಹೇಗೆ ಪರಿಶುದ್ಧರೋ ಹಾಗೆ ಉದಾರಿಗಳು. ಅವರ ಮನೆ ಒಂದು ಧರ್ಮಛತ್ರ. ಈ ಮಾತು ಹೇಳುವಾಗ ಅವರ ಧರ್ಮಪತ್ನಿ ಶ್ರೀಮತಿ ಜಯಲಕ್ಷ್ಮಮ್ಮನವರ ಹೆಸರನ್ನು ಹೇಳದಿದ್ದರೆ ನ್ಯಾಯ ತಪ್ಪಿದಂತೆ ಆಗುತ್ತದೆ. ಈ ದಂಪತಿಗಳು ಎಷ್ಟೋ ಮಂದಿಗೆ ಅನ್ನವಸ್ತ್ರಗಳ ರೂಪದಲ್ಲಿಯೂ, ದ್ರವ್ಯ ರೂಪದಲ್ಲಿಯೂ ಸಹಾಯ ಮಾಡಿದವರು. ಸ್ನೇಹಿತರು ಸೇರಿದ್ದಾಗ ರಾಮಯ್ಯನವರಿಗೆ ತುಂಬ ಸಂತೋಷ. ಎಲ್ಲರಲ್ಲಿಯೂ ಬೆರೆಯುತ್ತಿದ್ದರು. ಸರಸಿಗಳು. ರಾಮಯ್ಯನವರು ನನಗೆ ಎಷ್ಟೋ ವೇಳೆಗಳಲ್ಲಿ ಬೆಂಬಲವಾಗಿ ನಿಂತಿದ್ದರು. ಭಗವಂತನು ಅವರಿಗೆ ತ್ಯಾಗ ಶೀಲತೆಗಳನ್ನು ಕೊಟ್ಟಂತೆ ವಾತ್ಸಲ್ಯ ಕಾರುಣ್ಯಗಳನ್ನೂ ಅವರ ಹೃದಯದಲ್ಲಿ ತುಂಬಿದ್ದ.

ಮೈಸೂರಿನ  ಸಾರ್ವಜನಿಕಕ್ಕಾಗಿಯೂ ಸರ್ವಭಾರತದ ಸಾರ್ವಜನಿಕಕ್ಕಾಗಿಯೂ ರಾಮಯ್ಯನವರು ಸಲ್ಲಿಸಿದ ಸೇವೆ ಅಳತೆಗೆ ಮೀರಿದ್ದು. ಆ ಸೇವೆಯಲ್ಲಿ ಮುಖ್ಯ ಭಾಗ ‘ತಾಯಿನಾಡು’ ಪತ್ರಿಕೆಯನ್ನು ಕಟ್ಟಿ ಬೆಳೆಸಿದ್ದು. ಈ ಅವರ ಸಾಧನೆಯ ಚರಿತ್ರೆಯನ್ನು ನಾನು ಬಹುಮಟ್ಟಿಗೆ ನೋಡಿ ಬಲ್ಲೆ. ‘ತಾಯಿನಾಡು’ ಪತ್ರಿಕೆಗೆ ಪೂರ್ವದಲ್ಲಿ ಕನ್ನಡ ದಿನಪತ್ರಿಕೆ ಯಾವುದೂ ಇರಲಿಲ್ಲ. ಬಹುಹಿಂದೆ ಒಂದೆರಡು ಪ್ರಯತ್ನಗಳು ನಡೆದಿದ್ದವು. ಅವು ಲೆಖ್ಖಕ್ಕೆ ಬರತಕ್ಕವಲ್ಲ. ರಾಮಯ್ಯನವರಾದರೋ ಧೈರ್ಯ ಮಾಡಿ ಹೊರಟರು. ಆಗ ಅವರಿಗೆ ಇದ್ದ ಬಲ ಒಂದೇ. ಅದು ಆಗ ಚಿಕ್ಕ ಹುಡುಗರಾಗಿದ್ದ ತಮ್ಮಂದಿರ ಸಹಕಾರ. ಪುಟ್ಟ ಹುಡುಗರ ಸಹಾಯದಿಂದ ರಾಮಯ್ಯನವರು ಅಷ್ಟು ದೊಡ್ಡ ಕೆಲಸವನ್ನು ಸಾಧಿಸಿದ್ದು ಹೇಗೆ? ಅದು ಅವರ ಒಳಸತ್ತ್ವದ ವಿಕಾಸದಿಂದ. ಅವರ ಕ್ಯಾರೆಕ್ಟರಿನಿಂದ.

ಕ್ರಿಯಾಸಿದ್ಧಿಃ ಸತ್ತ್ವೇ ಭವತಿ
ಮಹತಾಮ್ ನೋಪಕರಣೇ

ಅವರ ಅಂತಃಸತ್ತ್ವವೇ ಅವರಿಗಿದ್ದ ಮೂಲಧನ. ಅವರ ಶೀಲದಾರ್ಢ್ಯವೇ ಅವರಿಗಿದ್ದ ಬಂಡವಾಳ.

ಹೀಗೆ ಎಷ್ಟೋ ಕಾರಣಗಳಿಂದ ರಾಮಯ್ಯನವರು ನನಗೆ ಪ್ರಿಯರೂ ಮಾನ್ಯರೂ ಆಗಿದ್ದವರು.

ಇನ್ನು ಗ್ರಂಥದ ವಿಷಯ. ಇಂಡಿಯಾ ದೇಶದ ಚರಿತ್ರೆಯಲ್ಲಿ ಈ ವಿಸ್ತಾರ ದೇಶವು ಏಕೈಕ ರಾಷ್ಟ್ರವಾಗಿ ಸ್ವತಂತ್ರವಾಗಬೇಕೆಂಬ ಉದ್ದೇಶವನ್ನು ಜನತೆ ಕೈಕೊಂಡಿದ್ದೇ ಒಂದು ಮಹಾಘಟನೆ. ಅದರಲ್ಲಿ ಮಹಾತ್ಮರಂಥ ತಪಸ್ವಿಗಳಾದ ಸತ್ಯಸಂಧರ ನಾಯಕತ್ವ ದೊರೆತದ್ದು ಅತಿ ಅಪೂರ್ವವಾದ ಮಹತ್ತಮ ಘಟನೆ. ಆ ಮಹಾಘಟನೆಯ ಇತಿಹಾಸವನ್ನು ರಾಮಯ್ಯನವರು ಇಲ್ಲಿ ಸಂಕ್ಷೇಪವಾಗಿ ರೂಪಗೊಳಿಸಿದ್ದಾರೆ. ಅದು ಎಂಥವರಿಗೂ ಮನಮುಟ್ಟುವಂಥ ಚಿತ್ರಾವಳಿ. ಆ ಚಿತ್ರಾವಳಿಯ ಕೇಂದ್ರಮೂರ್ತಿ ಮಹಾತ್ಮ ಗಾಂಧಿಯವರು. ಸ್ವಾತಂತ್ರ್ಯ ಸಂಪಾದನೆಯ ಮಹಾಸಮಾರಂಭದಲ್ಲಿ ಆ ಮಹಾಪುರುಷರು ಹೇಗೆ ಹೇಗೆ ನಡೆದುಕೊಂಡರು, ಅವರಿಗೆ ಯಾವ ಯಾವ ಕಷ್ಟಗಳು ಬಂದವು, ಎಂಥೆಂಥ ಪ್ರಶ್ನೆಗಳು ಅವರನ್ನು ಕಾಡಿಸಿದವು, ಅವರು ಆ ವಿಘ್ನಗಳನ್ನು ಎದುರಿಸುವುದರಲ್ಲಿ ಎಂಥ ವಿವೇಕವನ್ನು ತೋರಿಸಿದರು, ಎಂಥ ತಾಳ್ಮೆಯನ್ನು ತೋರಿಸಿದರು, ಹೇಗೆ ಕ್ಷಮಾಗುಣವನ್ನೂ ಶಾಂತಿಯನ್ನೂ ಅವಲಂಬಿಸಿದರು, ಮತ್ತು ಫಲ  ಕೈಗೆ ಬರುವ ವೇಳೆಗೆ ಎಲ್ಲಿಂದಲೋ ಬಂದ ಮಂಗನು ಆ ಫಲವನ್ನು ಹೇಗೆ ಹಾರಿಸಿಕೊಂಡು ಹೋಯಿತು, ಆಗ ನಡೆದ ಭಯಂಕರ ದೇಶಘಾತಕ ಸಮಯದಲ್ಲಿ ಅವರು ಹೇಗೆ ಭಗವಂತನ ಕಡೆ ಮುಖ ತಿರುಗಿಸಿ ಶರಣುಹೊಕ್ಕರು – ಈ ಹತ್ತಾರು ಮನೋವೇಧಕವಾದ ಚಿತ್ರ ಪರಂಪರೆಯೇ ಈ ಪುಸ್ತಕದ ವಸ್ತು. ಪುಸ್ತಕವನ್ನು ಓದುತ್ತಿದ್ದರೆ ಆ ಮಹಾ ಚರಿತ್ರೆಯ ವಿಸ್ತಾರ ಕ್ಷೇತ್ರವನ್ನು ಹಕ್ಕಿಯ ನೋಟದಿಂದ ನೋಡಿದಂತೆ ಅನುಭವವಾಗುತ್ತದೆ. ಇದು ಮಹೋಪಕಾರ. ಅದರಲ್ಲಿಯೂ ಇಂದು ಯುವಕರಾಗಿರುವವರಿಗೂ, ಮುಂದೆ ಹುಟ್ಟಿ ಬೆಳೆದು ದೇಶವನ್ನು ನಡೆಸಬೇಕಾಗಿರುವವರಿಗೂ ಈ ಜ್ಞಾಪಕವು ಮಹೋಪಕಾರ. ಅವರಿಗೆ ಎಂಥ ನೀತಿ ನಿಷ್ಠೆಯಿಂದ, ಎಂಥ ಮಹೋನ್ನತೆಯಿಂದ, ಎಂಥ ಉದಾರ ಬುದ್ಧಿಯಿಂದ, ಎಂಥ ನಿರ್ಮಲ ದೇಶಭಕ್ತಿಯಿಂದ ಅವರ ಪೂರ್ವಿಕರು ದುಡಿದರು, ಇಂದಿನ ಮತ್ತು ಮುಂದಿನಯುವಕರ ಪ್ರಯೋಜನಕ್ಕಾಗಿ ಹೇಗೆ ಅವರು ಪರಿಶ್ರಮಿಸಿದರು ಎಂಬುದು ಮನಸ್ಸಿಗೆ ಹೊಳೆಯದೆ ಇರದು.

ಇನ್ನು ಗ್ರಂಥದ ಶೈಲಿಯ ಮಾತು. ರಾಮಯ್ಯನವರ ಮಾತಿನ ಗುಣ ಅದರ ನೈಜತೆ. ಅವರ ಬರವಣಿಗೆಯಲ್ಲಿ ಕೃತಕತೆ ಕೊಂಚವೂ ಇಲ್ಲ. ಬರಿಯ ಶಬ್ದಾಡಂಬರಕ್ಕಾಗಿಯಾಗಲಿ, ಪಾಂಡಿತ್ಯ ಪ್ರದರ್ಶನಕ್ಕಾಗಿಯಾಗಲಿ ರಾಮಯ್ಯನವರು ಭಾಷೆಯನ್ನು ಉಪಯೋಗಿಸಿದವರಲ್ಲ. ಪ್ರೌಢಶೈಲಿ ಅವರಿಗೆ ಅಸಾಧ್ಯವಾಗಿರಲಿಲ್ಲ. ಅವರು ಸಂಸ್ಕೃತ ಬಲ್ಲವರು. ಕಾವ್ಯ ವ್ಯಾಕರಣಗಳನ್ನು ವ್ಯಾಸಂಗ ಮಾಡಿದ್ದವರು. ಆದರೂ ಕನ್ನಡದ ನೈಜವಾದ ಸೊಗಸನ್ನು ಕೆಡಿಸಬಾರದೆಂದು ತಿಳಿದಿದ್ದವರು. ತಮ್ಮ ಹೃದಯದಲ್ಲಿದ್ದ ವಿಷಯವನ್ನು ತಮ್ಮ ಜನಕ್ಕೆ ತಿಳಿಯಪಡಿಸಬೇಕು. ಜನಸಾಮಾನ್ಯದ ಭಾಷೆಯಲ್ಲಿ ಹೇಳಬೇಕು, ಆದಷ್ಟು ಸುಲಭವಾಗಿ ತಿಳಿಯಪಡಿಸಬೇಕು, ತಿಳಿಯಾದ, ನಯವಾದ ಮಾತುಗಳಿಂದ ತಿಳಿಯಪಡಿಸಬೇಕು – ಇದು ಮೊದಲಿನಿಂದಲೂ ಅವರ ತಾತ್ಪರ್ಯ. ‘ತಾಯಿನಾಡು’ ಪತ್ರಿಕೆಯ ಸಂಚಿಕೆ – ಸಂಚಿಕೆಯಲ್ಲಿಯೂ ಕಾಣಬರುತ್ತಿದ್ದುದು ಈ ತಿಳಿಗನ್ನಡದ ಅಭಿಮಾನ. ‘ತಾಯಿನಾಡು’ ಎಂಬ ಹೆಸರೇ ಅದನ್ನು ಸೂಚಿಸುತ್ತದೆ. ತಿಳಿಯೂ, ಸರಳವೂ, ಲಲಿತವೂ, ಗಂಭೀರವೂ ಆದ ಕನ್ನಡವನ್ನು ಓದಬೇಕೆಂದು ಅಪೇಕ್ಷೆಯಿರುವವರಿಗೆ ಈ ಗ್ರಂಥ ಮೆಚ್ಚಿಕೆ ಆದೀತೆಂದು ನಾನು ನಂಬಿಕೊಂಡಿದ್ದೇನೆ. ಕನ್ನಡಕ್ಕೆ ಸಹಜವಾದ ಸೊಗಸು ಆದೀತೆಂದು ನಾನು ನಂಬಿಕೊಂಡಿದ್ದೇನೆ. ಕನ್ನಡಕ್ಕೆ ಸಹಜವಾದ ಸೊಗಸು ಈಚೀನ ಕೆಲವು ಬರವಣಿಗೆಗಳಲ್ಲಿ ಅಪರೂಪವಾಗಿದೆ. ಒಳ್ಳೆಯ ಕನ್ನಡವು ಸುಸಂಸ್ಕೃತರ ಬಳಕೆಯಲ್ಲಿ ಹೇಗೆ ಬರುತ್ತದೆಂಬುದನ್ನು ಈ ಪುಸ್ತಕದಲ್ಲಿ ಕಾಣಬಹುದು.

ಈ ಗ್ರಂಥವನ್ನು ರಾಮಯ್ಯನವರು ಮಹಾತ್ಮ ಗಾಂಧೀಯವರ ಜನ್ಮ ಶತಾಬ್ಧಿ ವರ್ಷದಲ್ಲಿ ಬರೆದರು. ಆ ವರ್ಷವೇ ಪ್ರಕಟಿಸಬೇಕೆಂದು ಆಶೆಯುಳ್ಳವರಾಗಿದ್ದರು. ಆದರೆ ಅವರು ವ್ಯಾಧಿಗ್ರಸ್ತರಾದ್ದರಿಂದ ಆ ಕೆಲಸವನ್ನು ಆಗ ಮಾಡಲಾಗಲಿಲ್ಲ. ಇದನ್ನು ಅವರ ಕುಟುಂಬದವರು ಮಾಡಿ, ಯಾವ ಜನಕ್ಕಾಗಿ ರಾಮಯ್ಯನವರು ಯಾವಜ್ಜೀವವೂ ದುಡಿದರೋ ಆ ಜನಕ್ಕೆ ಅರ್ಪಿಸಿದ್ದಾರೆ. ಮಹಾಜನರು ಇದನ್ನು ಆದರಿಂದ ಅಂಗೀಕರಿಸಬೇಕೆಂದು ನಾನು ಹಾರೈಸುತ್ತೇನೆ.

ರಾಮಯ್ಯನವರು ಬರೆದ ಕರಡುಪ್ರತಿಯನ್ನು ಅವರ ತಂಗಿಯ ಮೊಮ್ಮಗಳು ಕುಮಾರಿ ಗಾಯತ್ರಿ ನಕಲು ಮಾಡಿದಳು. ಆ ನಕಲನ್ನು ನನಗಾಗಿ ಓದಿದಳು. ಇದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ.

ಈ ಎರಡು ಮಾತುಗಳನ್ನು ಬರೆಯಲು ನನಗೆ ಅವಕಾಶ ಕೊಟ್ಟಿದ್ದಕ್ಕಾಗಿ ತಂಗಿ ಶ್ರೀಮತಿ ಜಯಲಕ್ಷಮ್ಮನವರಿಗೆ ನಾನು ಕೃತಜ್ಞನಾಗಿದ್ದೇನೆ. ಭಗವಂತನು ಆಕೆಗೂ ಅವರ ಎಲ್ಲ ಚಿರಂಜೀವಿಗಳಿಗೂ ಶುಭ ಕೊಡಲಿ.

ಡಿ.ವಿ.ಜಿ.
ಬೆಂಗಳೂರು,
೨೬-೭-೨೯೭೧