“ನಮ್ಮ ನಿನ್ನೆಯ ಕಾರ್ಯಕಲಾಪಗಳ ಅಧ್ಯಕ್ಷರಾಗಿದ್ದ ಮಹಾರಾಜರು ಭಾರತದೇಶದ ದಾರಿದ್ರ್ಯವನ್ನು ಕುರಿತು ಮಾತನಾಡಿದರು. ಇತರ ಭಾಷಣಕಾರರೂ ಅದನ್ನು ಒತ್ತಿ ಹೇಳಿದರು. ಆದರೆ ವೈಸರಾಯರು ನಡೆಸಿಕೊಟ್ಟ ಈ ಉತ್ಸವದಲ್ಲಿ, ಈ ವಿಶಾಲವಾದ ಸಭಾಂಗಣದಲ್ಲಿ, ನಾವು ನೋಡಿದ್ದೇನು? ನಿಜವಾಗಿ, ಇದು ಒಂದು ಆಡಂಬರದ ಪ್ರದರ್ಶನ; ಇದು ಪ್ಯಾರಿಸ್ಸಿನಿಂದ ಬರುವ ಬಹು ದೊಡ್ಡ ರತ್ನಪಡಿ ವ್ಯಾಪಾರಿಯ ಕಣ್ಣಿಗೆ ವೈಭವದ ಹಬ್ಬ. ಈ ರತ್ನಾಭರಣ ಖಚಿತರಾದ ಧನಿಕ ರಾಜಮಹಾರಾಜರನ್ನು ನಾನು ನಮ್ಮ ದೇಶದ ಲಕ್ಷಾವಧಿ ಬಡವರೊಂದಿಗೆ ಹೋಲಿಸಿ ನೋಡುತ್ತೇನೆ. ಈ ರಾಜ ಮಹಾರಾಜರಿಗೆ ಹೀಗೆ ಹೇಳಬೇಕೆನಿಸುತ್ತದೆ: ನೀವು ನಿಮ್ಮ ಈ ರತ್ನಾ ಭರಣಗಳನ್ನೆಲ್ಲಾ ತೆಗೆದು, ಅವನ್ನೆಲ್ಲಾ ಒಂದು ನಿಧಿಯಾಗಿ ಮಾಡಿ, ಈ ದೇಶದ ಧರ್ಮದರ್ಶಿಗಳಾಗಿ ಅವನು ಇಟ್ಟುಕೊಂಡ ಹೊರತು, ಈ ದೇಶಕ್ಕೆ ಮುಕ್ತಿ ಇಲ್ಲ.”

ಈ ಸಿಂಹವಾಣಿಯನ್ನು ಕೇಳಿ ಮಹಾಸಭೆಯಲ್ಲಿ ಕೋಲಾಹಲವೆದ್ದಿತು. ವೇದಿಕೆಯ ಮೇಲೆ ಮಂಡಿಸಿದ್ದ ಶ್ರೀಮಂತರಿಗೆ ಕಿರಿಕಿರಿಯಾಯಿತು; ಆದರೆ ನೆರೆದಿದ್ದ ಮಹಾಜನಸ್ತೋಮ ಹರ್ಷಧ್ವನಿ ಮಾಡಿತು. ಸಿಂಹಗರ್ಜನೆ ಮುಂದುವರಿಯಿತು: “ಚಕ್ರವರ್ತಿಗೆ ನಮ್ಮ ರಾಜಭಕ್ತಿಯನ್ನು ತೋರಿಸಬೇಕಾದರೆ, ನಮ್ಮ ಭಂಡಾರವನ್ನೆಲ್ಲಾ ಬಿಚ್ಚಿ, ಅದರಲ್ಲಿರುವ ರತ್ನಗಳಿಂದ ನಮ್ಮನ್ನು ಅಲಂಕರಿಸಿಕೊಂಡು, ಅವರ ಮುಂದೆ ಹೋಗುವುದು ಅವಶ್ಯಕವೆಂಬುದು ಚಕ್ರವರ್ತಿಗಳ ಅಥವ ಲಾರ್ಡ್ ಹಾರ್ಡಿಂಜರ ಅಭಿಪ್ರಾಯವಲ್ಲ. ಚಕ್ರವರ್ತಿಯವರು ಇದಾವುದನ್ನೂ ತಾವು ನಿರೀಕ್ಷಿಸುವುದಿಲ್ಲವೆಂದು, ನಾನು ನನ್ನ ಪ್ರಾಣವನ್ನು ಮುಡುಪಿಟ್ಟಾದರೂ, ಅವರಿಂದ ಒಂದು ಸಂದೇಶವನ್ನು ತರುತ್ತೇನೆ.”

ಈ ಅಸಾಧಾರಣ ಭಾಷಣ ಮಾಡಿದವರು ಗಾಂಧೀಜಿ. ಇದೇ ನಾನು ಕೇಳಿದ ಅವರ ಮೊದಲ ಭಾಷಣ. ಈ ಭಾಷಣವಾದದ್ದು ೧೯೧೬ನೇ ಫೆಬ್ರವರಿ ೪ರಲ್ಲಿ; ಬೆನಾರೆಸ್ ಹಿಂದೂ ವಿಶ್ವವಿದ್ಯಾಲಯದ ಪ್ರಾರಂಭೋತ್ಸವ ಸಂದರ್ಭದಲ್ಲಿ. ಆ ಸಮಾರಂಭಕ್ಕೆ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಪಂಡಿತ ಮದನ ಮೋಹನ ಮಾಳಿವೀಯರು ದೇಶದ ನಾನಾ ಕಡೆಗಳಿಂದ ಪ್ರಖ್ಯಾತ ಪುರುಷರನ್ನು ಕರೆಸಿದ್ದರು, ಅವರಲ್ಲಿ ಕೆಲವರು ಭಾಷಣ ಮಾಡಿದರು. ಆ ಭಾಷಣಗಳು ಸೆಂಟ್ರಲ್ ಹಿಂದೂ ಕಾಲೇಜಿನ ಕೇಂದ್ರ ಅಂಗಳದಲ್ಲಿ ನಡೆದುವು. ಕೆಲವು ಬೆಳಿಗ್ಗೆ, ಕೆಲವು ಸಾಯಂಕಾಲ.

ಆ ಸಂದರ್ಭದಲ್ಲಿ ಗಾಂಧೀಜಿ ಮಾಡಿದ ಭಾಷಣದ ಕೆಲವಂಶಗಳು ನನಗೆ ಇನ್ನೂ ಜ್ಞಾಪಕದಲ್ಲಿವೆ; ಇದರಿಂದ ದೇಶಭಾಷೆಯಾದ ಹಿಂದಿಯಲ್ಲಿಯೇ ವಿದ್ಯಾಭ್ಯಾಸ ನಡೆಯಬೇಕು; ಇದರಿಂದ ವಿದ್ಯಾರ್ಥಿಗಳ ಕಾಲವೂ ಶಕ್ತಿಯೂ ಉಳಿತಾಯವಾಗುವುದು. ಸ್ವರಾಜ್ಯ ಭಾಷಣಗಳಿಂದ ಪಡೆಯಲಾಗುವುದಿಲ್ಲ; ಕೃತಿಯಿಂದಲೇ ಅದು ಸಾಧ್ಯ. ನಾನು ಇಂದು ವಿಶ್ವನಾಥನ ಗುಡಿಗೆ ಹೋಗಿದ್ದೆ; ಅದರ ಸುತ್ತಲೂ ಬಹಳ ಕೊಳಕು; ಅದು ನಮ್ಮ ಘನತೆಗೆ ಕುಂದಕ; ನಮ್ಮ ನಗರಗಳು ಬಹಳ ಕೊಳಕಾಗಿವೆ. ನಾನು ಮೂರನೆ ತರಗತಿ ರೈಲು ಗಾಡಿಯಲ್ಲೇ ಪ್ರಯಾಣ ಮಾಡುತ್ತೇನೆ. ಕಾಶಿ ಈಗ ಗೂಢಚಾರರಿಂದ ತುಂಬಿದೆ. ಏತಕ್ಕೆ? ವೈಸರಾಯರ ರಕ್ಷಣೆಗೆ. ವೈಸರಾಯರಿಗೆ ನಮ್ಮ ಜನರಲ್ಲಿ ಅಷ್ಟು ಅಪನಂಬಿಕೆ. ಸಾವಿನಂಥ ಜೀವನಕ್ಕಿಂತಲೂ ಲಾರ್ಡ್ ಹಾರ್ಡಿಂಜರು ಸಾಯುವುದೇ ಮೇಲಲ್ಲವೆ?

ಈ ಉತ್ಸವದ ಅಂಗವಾಗಿ ಆ ಬೆಳಿಗ್ಗೆ ಸರ್. ಜೆ.ಸಿ. ಬೋಸ್ ಮತ್ತು ಡಾ. ಪಿ.ಸಿ.ರಾಯ್ ಅವರ ಭಾಷಣ ನಡೆಯಿತು. ಸಭಾಂಗಣದಲ್ಲಿ ಜನಕ್ಕಿಕಿರಿದು ತುಂಬಿದ್ದರು. ಈ ಭಾಷಣ ನಡೆಯುತ್ತಿದ್ದಾಗ ಹಿಂದಿನ ಬಾಗಿಲಿಂದ ಗಾಂಧೀಜಿ ಬಂದು, ಹಿಂದುಗಡೆ ಒಂದು ಬೆಂಚಿನ ಮೇಲೆ ಕುಳಿತುಕೊಂಡರು. ಆಗ ಅವರು ಮಹಾತ್ಮರಾಗಿರಲಿಲ್ಲ. ಕಾಥೇವಾಡಿನ ಸಾಮಾನ್ಯ ಉಡುಪಿನಲ್ಲಿ ಬಂದಿದ್ದರು. ಮೈಗೆ ಒಂದು ಸಾದಾ ಅಂಗಿ, ತಲೆಗೆ ಓರೆಕೋರೆ ರುಮಾಲು, ಕಾಲಿನಲ್ಲಿ ಜೋಡಿಲ್ಲ, ಕೈನಲ್ಲಿ ಒಂದುಹಳೆಯ ಕೊಡೆ. ಗುರು ಗೋಖಲೆ ಮರಣ ಹೊಂದಿ ಇನ್ನೂ ಒಂದು ವರ್ಷ ಮುಗಿದಿರಲಿಲ್ಲವಾದ್ದರಿಂದ, ಗಾಂಧೀಜಿ ಜೋಡು ಹಾಕಿಕೊಳ್ಳುತ್ತಿರಲಿಲ್ಲ. ಆಸಾಮಿ ಕುಳ್ಳು. ಅವರು ಬಂದು ಕುಳಿತದ್ದು ಯಾರಿಗೂ ಗಮನಕ್ಕೆ ಬರಲಿಲ್ಲ.

ಸ್ವಲ್ಪ ಹೊತ್ತಾದ ಮೇಲೆ ಯಾರೋ ಗುರುತು ಕಂಡವರು “ಮಿ. ಗಾಂಧೀ, ಮಿ. ಗಾಂಧೀ” ಎಂದು ಗುರುತಿಸಿದರು. ಆಮೇಲೆ ಅವರನ್ನು ವೇದಿಕೆಯ ಮೇಲೆ ಕುಳ್ಳಿರಿಸಲಾಯಿತು. ಮಾಳವೀಯರು “ಗಾಂಧೀ, ಗಾಂಧೀ” ಎಂದು ಸಭಿಕರಿಗೆ ಪರಿಚಯ ಮಾಡಿಕೊಟ್ಟರು; ಸಾಯಂಕಾಲ ಅದೇ ಸ್ಥಳದಲ್ಲಿ ಅವರ ಭಾಷಣವಾಗುತ್ತದೆ ಎಂದೂ ತಿಳಿಸಿದರು.”

ಆ ಸಾಯಂಕಾಲ ಸಭೆ ಪ್ರಾರಂಭವಾಗುವುದಕ್ಕೆ ಬಹಳ ಮುಂಚೆಯೇ ವಿದ್ಯಾರ್ಥಿಗಳು ಸಭಾಂಗಣದಲ್ಲಿ ತುಂಬಿದ್ದರು. ಗಾಂಧಿ ಎಂದರೆ ಅವರಿಗೆ ಬಹಳ ಕುತೂಹಲ. ಪತ್ರಿಕೆಗಳಲ್ಲಿ ಅವರ ಹೆಸರನ್ನು ಓದಿದ್ದರು; ಅವರ ಬಗ್ಗೆ ಭಾಷಣಗಳನ್ನು ಕೇಳಿದ್ದರು. ಮಾಳವೀಯರೇ ಅವರನ್ನು ಕರ್ಮವೀರ ಗಾಂಧಿ ಎಂದು ಸಂಬೋಧಿಸಿದರು. ದಕ್ಷಿಣ ಆಫ್ರಿಕಾದಲ್ಲಿ ಅವರು ನಡೆಸಿದ ಸತ್ಯಾಗ್ರಹ ಮತ್ತು ಅದರ ಯಶಸ್ಸು ಅಲ್ಲಿ ಸೇರಿದ ಸಭಿಕರೆಲ್ಲರಿಗೂ ತಿಳಿದಿತ್ತು.

ಆ ಸಾಯಂಕಾಲ ಭಾಷಣ ಮಾಡಿದ ಆನಿ ಬೆಸೆಂಟ್ ಬಹಳ ಪ್ರಖ್ಯಾತವಾತ್ಮಿ. ನಯಾಗರ ಜಲಪಾತದಂತೆ ಅವರ ಮಾತುಗಳು ಧುಮುಕುತ್ತಿದ್ದವು. ಅವರ ಭಾಷಣ ಮುಗಿಯುವುದಕ್ಕೆ ಸ್ವಲ್ಪ ಮುಂಚೆ ಗಾಂಧೀಜಿ ಬಂದರು. ಜನರ ಗಮನವೆಲ್ಲಾ ಗಾಂಧೀಜಿಯ ಕಡೆ ಹೋಯಿತು. ಬೆಸಂಟರಿಗೆ ಬೇಸರವಾಯಿತು. ಬೇಸರವನ್ನು ಅವರು ತಮ್ಮ ಭಾಷಣದಲ್ಲಿ ತೋರಿಸಿದರು. ವಿದ್ಯಾರ್ಥಿಗಳು ರೇಗಿ, ನಾನಾ ಪ್ರಕಾರವಾಗಿ ಕೂಗಿದರು. ಬೆಸೆಂಟರು ಹೇಗೋ ಭಾಷಣವನ್ನು ಮುಗಿಸಿ, ಕುಳಿತುಕೊಂಡರು.

ಗಾಂಧೀಜಿ ಭಾಷಣ ಮಾಡಲು ಎದ್ದರು. ಎಲ್ಲೆಲ್ಲಿಯೂ ನಿಶ್ಯಬ್ದ; ಕೆಳಗೆ ಗುಂಡು ಸೂಜಿ ಬಿದ್ದರೆ, ಅದು ಕೇಳುವಷ್ಟು ಜನರ ಮೌನ. “ಭಾರತೀಯರೆದುರಿಗೆ ಭಾರತೀಯರ ಭಾಷೆಯಲ್ಲದ ಇಂಗ್ಲಿಷಿನಲ್ಲಿ ಭಾಷಣ ಮಾಡಲು ನನಗೆ ಸಂಕೋಚವಾಗುತ್ತದೆ” ಎಂದು ಆರಂಭಿಸಿದರು.

ಈ ಮಾತನ್ನು ಕೇಳಿಯೇ ಸಭಿಕರನೇಕರಿಗೆ ಬಹಳ ಸಂತೋಷವಾಗಿ, ಅವರು ಚಪ್ಪಾಳೆ ತಟ್ಟಿದರು. ಗಾಂಧೀಜಿ ತಮ್ಮ ಭಾಷಣದಲ್ಲಿ ಆಗಿನ ಕಾಲದ ಮುಖಂಡರಿಗೆ ಅಪ್ರಿಯವಾದ ಕೆಲವು ಸತ್ಯಗಳನ್ನು ನುಡಿದರು. ವೇದಿಕೆಯ ಮೇಲಿದ್ದ ಆನಿ ಬೆಸಂಟರು ಗಾಂಧೀಜಿಯನ್ನು ಕುರಿತು “ಭಾಷಣವನ್ನು ನಿಲ್ಲಿಸಿ, ನಿಲ್ಲಿಸಿ” ಎಂದು ಕೂಗಿದರು. ಸಭೆಯಲ್ಲಿ ಗೊಂದಲವಾಯಿತು. ವಿದ್ಯಾರ್ಥಿಗಳು “ಭಾಷಣವನ್ನು ಮುಂದುವರಿಸಿ” ಎಂದು ಕೂಗಿದರು. ಗಾಂಧೀಜಿ “ಗಲಾಟೆ ಮಾಡಬೇಡಿ. ಬೆಸಂಟರು ನನ್ನನ್ನು ಭಾಷಣ ನಿಲ್ಲಿಸು ಎಂದು ಹೇಳುತ್ತಾರೆ. ನನ್ನ ದೇಶಾಭಿಮಾನ ಬೆಸಂಟರದಕ್ಕಿಂತ ಏನೂ ಕಡಿಮೆಯದಲ್ಲ. ಈ ಸಭೆಯ ಅಧ್ಯಕ್ಷರು ಭಾಷಣ ನಿಲ್ಲಿಸು ಎಂದು ಹೇಳಿದರೆ ನಾನು ಅದನ್ನು ನಿಲ್ಲಿಸುತ್ತೇನೆ” ಎಂದರು. ಅಧ್ಯಕ್ಷರಾಗಿದ್ದ ದರ್ಭಾಂಗ ಮಹಾರಾಜರು ಈ ಮಧ್ಯೆ ಸಭೆ ಬಿಟ್ಟು ಹೊರಟು ಹೋದರು. ಅವರ ಸುತ್ತಲೂ ಕುಳಿತಿದ್ದ ಮಹಾರಾಜರುಗಳೂ ಹೊರಟು ಹೋದರು. ಅಧ್ಯಕ್ಷರೇ ಹೊರಟು ಹೋದರೆ, ಇನ್ನು ಸಭೆ ನಡೆಯುವುದೆಲ್ಲಿ? ಗಾಂಧೀಜಿ “ಅನಿ ಬೆಸೆಂಟರು ಮಧ್ಯೆ ಪ್ರವೇಶಿಸದೆ ಇದ್ದಿದ್ದರೆ ಸಭೆ ಚೆನ್ನಾಗಿ ನಡೆದು ನನ್ನ ಅಭಿಪ್ರಾಯವನ್ನು ಸಭೆಗೆ ತಿಳಿಸುತ್ತಿದ್ದೆ” ಎಂದರು. ಆ ಭಾಷಣ ಅತ್ಯಂತ ಪ್ರಭಾವಶಾಲಿಯಾಗಿತ್ತು. ಅದರ ಕೆಲವು ವಾಕ್ಯಗಳು ಜನರ ಮನಸ್ಸಿನಲ್ಲಿ  ಬಹಳ ಕಾಲ ಉಳಿದಿದ್ದವು.

ಆ ಭಾಷಣವನ್ನು ಕೇಳಿದವರಿಗೆ ಗಾಂಧೀಜಿ ಸಾಮಾನ್ಯರಲ್ಲ, ಅಸಾಧಾರಣ ಪುರುಷ, ಅವರಿಗೂ ಭಾರತದ ಇತರ ಮುಖಂಡರಿಗೂ ಬಹಳ ವ್ಯತ್ಯಾಸವಿದೆ ಎಂದು ಮನದಟ್ಟಾಯಿತು.

ಗಾಂಧೀಜಿಯನ್ನು ಅನಂತರ ಎಷ್ಟೋ ಸಾರಿ ನೋಡಿದ್ದೇನೆ. ಅವರ ಭಾಷಣಗಳನ್ನು ಎಷ್ಟೋ ಸಾರಿ ಕೇಳಿದ್ದೇನೆ. ಅವರು ಅಹಿಂಸಾತ್ಮಕ ಅಸಹಕಾರ ಚಳುವಳಿಯನ್ನು ಆರಂಭಿಸಿದಮೇಲೆ ಬೆನಾರೆಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಹಣ ತೆಗೆದುಕೊಳ್ಳುವ ಕಾಲೇಜುಗಳನ್ನು ಬಿಟ್ಟು, ಸ್ವತಂತ್ರವಾದ ವಿಶ್ವವಿದ್ಯಾಲಯಗಳನ್ನು ಸೇರಿ ಅಥವಾ ಅಸಹಕಾರ ಚಳುವಳಿಯಲ್ಲಿ ಭಾಗಿಯಾಗಿರಿ ಎಂದು ಕರೆಕೊಟ್ಟರು. ಆ ಸಭೆಗೆ ಅಸಹಕಾರ ಕಾರ್ಯಕ್ರಮಕ್ಕೆ ವಿರುದ್ಧವಾಗಿದ್ದ ಮಾಳವೀಯರೇ ಅಧ್ಯಕ್ಷರಾಗಿದ್ದರು. ಅವರು ವಿದ್ಯಾರ್ಥಿಗಳು ವಿದ್ಯೆಯನ್ನು ಮುಂದರಿಸಬೇಕೆಂದೂ, ಅಸಹಕಾರ ಚಳುವಳಿಯನ್ನು ಸೇರಬಾರದೆಂದೂ ಹೇಳಿದರು. ಕಡೆಯಲ್ಲಿ ಗಾಂಧೀಜಿ ಬಿನ್ನವಿಸಿದರು: “ವಿದ್ಯಾರ್ಥಿಗಳೇ, ಈ ಸಮಸ್ಯೆಯನ್ನು ಗಾಢವಾಗಿ ಆಲೋಚಿಸಿರಿ. ನೀವು ಯಾರು ಹೇಳುವಂತೆ ನಡೆಯುವುದೂ ಬೇಡ. ನನ್ನ ಹೇಳಿಕೆಯಂತೆ ನಡೆಯುವುದೂ ಬೇಡ. ನಿಮಗೆ ಇನ್ನೂ ವಿಚಾರಶಕ್ತಿ ಇಲ್ಲದಿದ್ದರೆ ಪಂಡಿತ ಮಾಳವೀಯರು ಹೇಳುವಂತೆ, ನಿಮ್ಮ ವಿದ್ಯೆಯನ್ನು ಮುಂದರಿಸಿರಿ. ಅಥವಾ ನನ್ನ ಮಾತು ಸರಿ ಎಂದು ನಿಮಗೆ ಚೆನ್ನಾಗಿ ವಿಚಾರ ಮಾಡಿದ ಮೇಲೆ ಮನದಟ್ಟಾದರೆ, ಆಗ ಕಾಲೇಜನ್ನು ಬಿಟ್ಟು ಬನ್ನಿ.” ಹೀಗೆ ಸಮಸ್ಯೆಯನ್ನು ವಿದ್ಯಾರ್ಥಿಗಳ ವಿಚಾರಣೆಗೇ ಅವರು ಬಿಟ್ಟರು. ತಾವು ಹೇಳಿದಂತೆ ನಡೆಯಬೇಕೆಂದು ಅವರು ಒತ್ತಾಯಪಡಿಸಲಿಲ್ಲ.

ಹೀಗೆ ವಿಚಾರ ಮಾಡಿದವರಲ್ಲಿ ನಾನೂ ಒಬ್ಬ. ನಾನು ಆಗ ಎಂ.ಎಸ್.ಸಿ. ಫೈನಲ್ ಕ್ಲಾಸಿನಲ್ಲಿದ್ದೆ. ನಾನು ಮುಂದೆ ಮಾರ್ಚ್‌ನಲ್ಲಿ ಪರೀಕ್ಷೆಗೆ ಕೂಡ ಬೇಕಾಗಿತ್ತು. ನನ್ನ ಮಿತ್ರರನೇಕರು ಪರೀಕ್ಷೆ ಮುಗಿದ ಮೇಲೆ ಅಸಹಕಾರ ಸಂಗ್ರಾಮವನ್ನು ಸೇರು ಎಂದು ನನಗೆ ಹೇಳಿದರು. ಆದರೆ ಸಂಗ್ರಾಮ ಒಂದು ವರ್ಷವಾದ್ದರಿಂದ ಆ ಒಂದು ವರ್ಷ ನನ್ನ ವ್ಯಾಸಂಗವನ್ನು ಬಿಟ್ಟು ಅಸಹಕಾರ ಸಂಗ್ರಾಮವನ್ನು ಸೇರದಿದ್ದರೆ ತ್ಯಾಗ ಮಾಡಿದಂತಾಗುವುದೇ ಎಂದು ಆಲೋಚಿಸಿ, ಅಸಹಕಾರ ಸಂಗ್ರಾಮವನ್ನು ಸೇರಲು ನಿರ್ಧರಿಸಿದೆ.

ಗಾಂಧೀಜಿಯನ್ನು ಭೇಟಿ ಮಾಡಿ ನನ್ನ ನಿರ್ಧಾರವನ್ನು ತಿಳಿಸಿದೆ. “ಸರ್ಕಾರಕ್ಕೆ ಸಂಬಂಧಿಸದೆ ಇರುವ ಯಾವ ನ್ಯಾಷನಲ್ ಕಾಲೇಜೂ ಇಲ್ಲವೇ, ನಿನ್ನ ಪರೀಕ್ಷೆ ಮುಗಿಸಲು?” ಎಂದು ಕೇಳಿದರು. “ಯಾವ ಕಾಲೇಜೂ ಇಲ್ಲ” ಎಂದು ನಾನು ತಿಳಿಸಿದ ಮೇಲೆ, “ಕರ್ನಾಟಕ ಒಂದು ಪ್ರತ್ಯೇಕ ಪ್ರಾಂತ. ಅಲ್ಲಿ ಹೋಗಿ ನೀನು ಕೆಲಸ ಮಾಡು” ಎಂದು ಆಶೀರ್ವದಿಸಿದರು. ದೇಶಪಾಂಡೆ ಗಂಗಾಧರರಾಯರಿಗೆ ಅವರ ಕಾರ್ಯದರ್ಶಿ ಮಹದೇವ್ ದೇಸಾಯರಿಂದ ಕಾಗದ ಬರೆಸಿ, ನನ್ನನ್ನು ಬೆಳಗಾವಿಗೆ ಹೋಗಲು ಹೇಳಿದರು. ನಾನು ಹಾಗೆಯೇ ಮಾಡಿದೆ.

ಗಾಂಧೀಜಿ ಸ್ವರಾಜ್ಯ ಸಂಪಾದಿಸಲು ಅಹಿಂಸಾ ಚಳುವಳಿಯನ್ನು ನಡೆಸಿದುದೇ ಅವರ ವಿಷಯದಲ್ಲಿ ನನಗೆಭಕ್ತಿ ಹಾಗೂ ಗೌರವ ಉಂಟಾಗಲು ಕಾರಣವಾಯಿತು. ಅವರು ಕೇವಲ ಮಹಾತ್ಮರಾಗಿದ್ದು, ರಾಜಕೀಯದಲ್ಲಿ ಪ್ರವೇಶ ಮಾಡದೆ ಇದ್ದಿದ್ದರೆ, ನಾನು ಅವರನ್ನು ಹಿಂಬಾಲಿಸುತ್ತಿದ್ದೆನೋ, ಇಲ್ಲವೋ, ನಾನು ಅನೇಕ ಆಧ್ಯಾತ್ಮಿಕ ಗರುಗಳನ್ನು ನೋಡಿದ್ದೇನೆ. ಅವರ ವಿಷಯದಲ್ಲಿ ನನ್ನ ಗೌರವೇ ಬೇರೆ ತರಹ. ಆದರೆ ಗಾಂಧೀಜಿ ಸ್ವರಾಜ್ಯ ಸಂಗ್ರಾಮದಲ್ಲಿ ತಮ್ಮ ತಪಸ್ಸನ್ನೂ, ಶಕ್ತಿಯನ್ನೂ ಪ್ರಯೋಗಿಸಿದ್ದರಿಂದ ಅವರ ವಿಷಯದಲ್ಲಿ ನನಗಿದ್ದ ಪೂಜ್ಯಭಾವನೆ ಆನ್ಯಾದೃಶ. ಅದನ್ನು ಮಾತಿನಲ್ಲಿ ವಿವರಿಸಲು ಸಾಧ್ಯವಿಲ್ಲ. ೧೯೨೦ರಿಂದ ೧೯೪೮ರವರಿಗೂ, ಅವರ ಮರಣದವರಿಗೂ, ನಾನು ಅವರನ್ನು ಅಸಾಧಾರಣ ಧರ್ಮಪುರುಷ ಎಂದು ಭಾವಿಸಿದ್ದೆ; ಈಗಲೂ ಅದೇ ನನ್ನ ಭಾವನೆ.

೧೯೨೧-೨೨ರಲ್ಲಿ ಗಾಂಧೀಜಿಯವರ ಮಾತು, ಭಾಷಣ, ಲೇಖನ ಬಹಳ ಉಗ್ರವಾಗಿದ್ದವು. ಇದಕ್ಕೆ ಕಾರಣ: ಪಂಜಾಬಿನ ಅಮೃತಸರ ಮುಂತಾದ ಕಡೆಗಳಲ್ಲಿ ಇಂಡಿಯಾ ಸರ್ಕಾರ ನಡೆಸಿದ ಅಮಾನುಷ ಅತ್ಯಾಚಾರಗಳು. ಅಮೃತಸರದಲ್ಲಿ ಶಾಂತರಾಗಿದ್ದ ಜನರ ಮೇಲೆ ಜನರಲ್ ಡೈಯರ್ ಗುಂಡು ಹಾರಿಸಿ ಒಂದು ಕ್ಷಣದಲ್ಲಿ ಸಾವಿರಾರು ಜನರನ್ನು ಕೊಂದುಹಾಕಿದನು. ಇಂಥವನನ್ನು ಬ್ರಿಟಿಷ್ ಸರ್ಕಾರ ಕೂಡಲೆ ಕೆಲಸದಿಂದ ವಜಾಮಾಡಿ, ಅವನಿಗೆ ಉಗ್ರ ಶಿಕ್ಷೆ ಕೊಡಬೇಕಾಗಿತ್ತು; ಅದಕ್ಕೆ ಬದಲಾಗಿಅವನ ಶೌರ್ಯವನ್ನು ಮೆಚ್ಚಿ ಬ್ರಿಟಿಷ್ ಮುಖಂಡರು ಅವನಿಗೆ ಒಂದು ಚಿನ್ನದ ಕತ್ತಿಯನ್ನು ಇನಾಮಾಗಿ ಕೊಟ್ಟರು. ಪಂಜಾಬಿನ ಗೌರ್ನರ್ ಮೈಕೆಲ್ ಓಡ್ವಯರ್ ಪಂಜಾಬಿನಲ್ಲಿ ಮಾರ್ಷಲ್ ಲಾ ಜಾರಿಗೆ ತಂದನು. ಜನರನ್ನು ಬೀದಿಯಲ್ಲಿ ತೆವಳಿಸುವುದು, ಅವರಿಗೆ ಚಾಟಿ ಹೊಡೆಯುವುದು, ಮುಂತಾದ ಕ್ರೂರ ಕೃತ್ಯಗಳನ್ನು ನಡೆಸಿದನು. ಈ ಕ್ರೂರ ಕೃತ್ಯಗಳಿಗಾಗಿ ಬ್ರಿಟಿಷ್ ಸರ್ಕಾರ ಪಶ್ಚಾತ್ತಾಪ ಪಡದೆ, ಆ ಗೌರ್ನರನ್ನು ಪ್ರಶಂಸೆ ಮಾಡಿತು. ಪಂಜಾಬಿನ ಕ್ರೂರ ಘಟನೆಗಳು ಭಾರತೀಯ ಮುಖಂಡರಿಗೆಲ್ಲಾ ದುಃಖವುಂಟುಮಾಡಿದುವು. ಗಾಂಧೀಜಿಗಂತೂ ಸಹಿಸಲಾರದಷ್ಟು ಸಂಕಟವಾಯಿತು.

ಸಂಕಟಪಟ್ಟು ಏನು ಪ್ರಯೋಜನ? ಪ್ರತಿಭಟನಾ ಕಾರ್ಯವನ್ನು ಕೈ ಕೊಳ್ಳಬೇಕು, ಈ ಸರ್ಕಾರವನ್ನು ಕೊನೆಗಾಣಿಸಿ, ಸ್ವರಾಜ್ಯವನ್ನು ಸ್ಥಾಪಿಸಬೇಕು ಎಂದು ಗಾಂಧೀಜಿಗೂ, ಇತರ ರಾಜಕೀಯ ಮುಖಂಡರಿಗೂ ಅರಿವಾಯಿತು.

ಇದನ್ನು ಮಾಡುವುದು ಹೇಗೆ? ಒಂದು ರೀತಿಯಾಗಿ ೧೮೮೫ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸ್ಥಾಪನೆಯಾದಗಿನಿಂದಲೂ ಮುಖಂಡರು ಬ್ರಿಟಿಷ್ ಆಡಳಿತದ ಕುಂದು ಕೊರತೆಗಳನ್ನು ನಿರ್ಣಯಗಳ ಮೂಲಕ ಬ್ರಿಟಿಷ್ ಸರ್ಕಾರದ ಗಮನಕ್ಕೆ ತರುತ್ತಿದ್ದರು. ನಿರ್ಣಯಗಳಿಂದ ಸರಕಾರ ಬಗ್ಗುವುದೇ? ಲೋಕಮಾನ್ಯ ತಿಲಕರು ಜನರನ್ನು ಹುರಿದುಂಬಿಸಿ ಧೈರ್ಯೋತ್ಸಾಹಗಳಿಂದ ಕೆಲಸ ಮಾಡಬೇಕೆಂದು ಅವರಿಗೆ ಬೋಧಿಸುತ್ತಿದ್ದರು. “ಸ್ವರಾಜ್ಯ ನಮ್ಮ ಜನ್ಮಸಿದ್ದ ಹಕ್ಕು, ಅದನ್ನು ಅದನ್ನು ನಾನು ಪಡೆಯಲೇಬೇಕು” ಎಂದು ತಿಲಕರು ಉಗ್ರವಾಗಿ ವಾದಿಸುತ್ತಿದ್ದರು. ಜನತೆಯಲ್ಲಿ ದೇಶಾಭಿಮಾನವನ್ನು ಜಾಗೃತಿಗೊಳಿಸಲು ಗಣೇಶ ಚತುರ್ಥಿ ಮತ್ತು ಶಿವಾಜಿ ಜಯಂತಿ ಉತ್ಸವಗಳನ್ನು ಸಾರ್ವಜನಿಕವಾಗಿ ಪೂನಾದಲ್ಲಿ ಆಚರಣೆಗೆ ತಂದರು. ಸರ್ಕಾರ ಇವರ ಮೇಲೆ ರಾಜದ್ರೋಹದ ಮೊಕದ್ದಮೆಗಳನ್ನು ಹಾಕಿ, ಇವರಿಗೆ ಕಾರಾಗೃಹ ಶಿಕ್ಷೆಯನ್ನು ವಿಧಿಸಿತು.

ಇಷ್ಟರಲ್ಲಿ, ೧೯೦೫ರಲ್ಲಿ, ಬಂಗಾಳ ಜನರ ಇಚ್ಛೆಗೆ ವಿರುದ್ಧವಾಗಿ ಬಂಗಾಳ ಪ್ರಾಂತವನ್ನು ಸರ್ಕಾರ ಇಬ್ಬಾಗ ಮಾಡಿತು. ಬಂಗಾಳಿಗಳು ಬಹಳ ಪ್ರಕ್ಷುಬ್ಧರಾದರು. ಸುರೇಂದ್ರನಾಥ ಬ್ಯಾನರ್ಜಿ, ಅರವಿಂದ ಘೋಷ್ ಮುಂತಾದವರು ಸರ್ಕಾರದ ವಿರುದ್ಧ ದೊಡ್ಡ ಚಳುವಳಿಯನ್ನು ಆರಂಭಿಸಿದರು. ಲಾಲಾ ಲಜಪತರಾಯ್, ಬಿಪಿನ್‌ಚಂದ್ರಪಾಲ್, ಬಾಲ ಗಂಗಾಧರ ತಿಲಕ್ ಈ ಚಳುವಳಿಯ ಮೂಲಕ ಜನರನ್ನು ಸರ್ಕಾರಕ್ಕೆ ವಿರುದ್ಧವಾಗಿ ಎತ್ತಿಕಟ್ಟಿದರು. ಇದಕ್ಕೆ ವಂಗಭಂಗ ಚಳುವಳಿ ಎಂಬ ಹೆಸರಾಯಿತು. “ವಂದೇಮಾತರಂ” ಎಂದು ಘೋಷಣೆ ಮಾಡಿದವರನ್ನೆಲ್ಲಾ ಸರ್ಕಾರ ಜೈಲಿಗೆ ಹಾಕುತ್ತಿದ್ದುದರಿಂದ ಇದಕ್ಕೆ “ವಂದೇಮಾತರಂ” ಚಳುವಳಿ ಎಂದೂ ಹೆಸರಾಯಿತು. ಈ ಚಳುವಳಿ ಇಂಡಿಯಾವನ್ನೆಲ್ಲಾ ಆಕ್ರಮಿಸಿ ೧೯೦೬ ರಿಂದ ೧೯೦೮ ರವರೆಗೆ ಬಹಳ ಜೋರಿನಿಂದ ನಡೆಯಿತು. ಕ್ರಾಂತಿಕಾರರು ಬ್ರಿಟಿಷ್ ಅಧಿಕಾರಿಗಳ ಮೇಲೆ ಬಾಂಬ್ ಎಸೆದು ಕೆಲವರನ್ನು ಕೊಂದರು. ಇದರಿಂದ ಬ್ರಿಟಿಷ್ ಸರ್ಕಾರ ಬಹಳ ಕ್ರೊಧಗೊಂಡಿತು. ಅನೇಕ ಮುಖಂಡರನ್ನು ಕಠಿಣವಾದ ಶಿಕ್ಷೆಗೆ ಗುರಿ ಮಾಡಿತು. ಬಾಲ ಗಂಗಾಧರ ತಿಲಕರನ್ನು ಬರ್ಮಾದೇಶದ ಮಾಂಡಲೆಯಲ್ಲಿ ೬ವರ್ಷಕಾಲ ಕಾರಾಗೃಹದಲ್ಲಿಟ್ಟಿತ್ತು. ಲಜಪತರಾಯರನ್ನು ಗಡೀಫಾರು ಮಾಡಿತು. ಅರವಿಂದ ಘೋಷರ ಮೇಲೆ ರಾಜದ್ರೋಹದ ಮೊಕದ್ದಮೆ ಹಾಕಿತು. ಅನೇಕ ಕ್ರಾಂತಿಕಾರರನ್ನು ಗಲ್ಲಿಗೆ ಹಾಕಿತು. ಭಾಯಿ ಪರಮಾನಂದ, ಸಾವರ್ಕರ್ ಸಹೋದರರು, ಇನ್ನೂ ಇತರರನ್ನು ಅಂಡಮಾನಿಗೆ ಗಡೀಫಾರು ಮಾಡಿತು.

ಇದೇ ಸಮಯದಲ್ಲಿ ಕಾಂಗ್ರೆಸ್  ಸಂಸ್ಥೆ ಒಡೆದು ಎರಡು ಭಾಗವಾಗಿ ಉಗ್ರವಾದಿಗಳೆಲ್ಲಾ ಕಾಂಗ್ರೆಸ್ ಹೊರಗೆ ಬಂದರು. ಕಾಂಗ್ರೆಸು ಮಂದಗಾಮಿಗಳ ಕೈಗೆ ಸಿಕ್ಕಿತು, ಇವರು ಸೌಮ್ಯ ಮಾರ್ಗದಿಂದ ಕಾನೂನನ್ನು ಮುರಿಯದೆ ಚಳವಳಿ ನಡೆಸಬೇಕೆನ್ನುವರು. ಇವರು ಸಭೆಗಳನ್ನು ಮಾಡುವುದು, ಸರ್ಕಾರಕ್ಕೆ ಅಹವಾಲು ಮಾಡುವುದು ಇವೇ ಮುಂತಾದ ಕೆಲಸಗಳಲ್ಲಿ ನಿರತರಾಗಿದ್ದವರು. ಸರ್ಕಾರಕ್ಕೆ ಕೋಪವುಂಟುಮಾಡುವ ಯಾವ ಕೆಲಸಗಳಲ್ಲೂ ಇವರು ತೊಡಗುತ್ತಿರಲಿಲ್ಲ. ಗೋಪಾಲಕೃಷ್ಣ ಗೋಖಲೆ, ಸರ್ ಫಿರೋಜ್ ಷಾ ಮೆಹತ, ಶ್ರೀನಿವಾಸ ಶಾಸ್ತ್ರಿ ಮುಂತಾದವರು ಈ ಗುಂಪಿಗೆ ಸೇರಿದವರು.

ಪರಿಸ್ಥಿತಿ ಹೀಗೆಯೇ ಇರಲು ೧೯೧೪ರಲ್ಲಿ ಲೋಕಮಾನ್ಯ ತಿಲಕರು ಬಿಡುಗಡೆಯಾದರು. ಅವರು ಪುನಃ ರಾಜಕೀಯ ಕೆಲಸಗಳನ್ನು ಆರಂಭಿಸಿದರು. ಇದೇ ಸಮಯದಲ್ಲಿ ಪ್ರಪಂಚದ ಸ್ಥಿತಿ ಬದಲಾವಣೆಯಾಯಿತು. ಯೂರೋಪಿನಲ್ಲಿ ಒಂದು ಕಡೆ ಇಂಗ್ಲೆಂಡ್ ಮತ್ತು ಫ್ರಾನ್ಸ್, ಇನ್ನೊಂದು ಕಡೆ ಜರ್ಮನಿ, ಆಸ್ಟ್ರೀಯಾ, ಟರ್ಕಿ ಮುಂತಾದ ದೇಶಗಳು ಇವುಗಳಿಗೆ ಘೋರ ಯುದ್ಧ ಪ್ರಾರಂಭವಾಯಿತು. ಇಂಡಿಯ ಇಂಗ್ಲೆಂಡಿನ ಅಧೀನ ರಾಷ್ಟ್ರವಾಗಿದ್ದರಿಂದ ಆ ದೇಶಕ್ಕೆ ಬಹಳ ಜನ ಮತ್ತು ಧನ ಸಹಾಯ ಮಾಡಬೇಕಾಯಿತು. ಇಂಡಿಯಾದಲ್ಲಿದ್ದ ದೇಶೀಯ ರಾಜರು ಹೇರಳವಾಗಿ ಜನ ಮತ್ತು ಧನ ಸಹಾಯ ಮಾಡಿದರು. ಈ ಯುದ್ಧ ೧೯೧೮ನೇ ನವೆಂಬರ್‌ನಲ್ಲಿ ಮುಗಿಯಿತು.

ಏತನ್ಮಧ್ಯೆ ಇಂಡಿಯಾದಲ್ಲಿ ವಂಗಭಂಗ ಚಳುವಳಿಯ ಬಿಸಿ ಕಡಿಮೆಯಾಗಿ, ರಾಜಕೀಯ ವಾತಾವರಣ ತಣ್ಣಗಾಯಿತು. ಕ್ರಾಂತಿಕಾರರು ಮಾತ್ರ ವಿರಮಿಸದೆ, ಅಲ್ಲಲ್ಲಿ ತಮ್ಮ ತಮ್ಮ ಕಾರ್ಯಕ್ರಮವಗಳನ್ನು ನಡೆಸುತ್ತಿದ್ದರು. ಸರ್ಕಾರ ಅವರ ಮೇಲೆ ಕ್ರೂರವಾದ ದಬ್ಬಾಳಿಕೆ ನಡೆಸುತ್ತಿತ್ತು. ಗೋಖಲೆ ಮತ್ತು ಫಿರೋಜ್ ಷಾ ಮೆಹತ ೧೯೧೫ರಲ್ಲಿ ಮೃತರಾದರು. ೧೯೧೫ರಲ್ಲಿ ಎನ್. ಸುಬ್ಬರಾವ್ ಎಂಬ ಮುಖಂಡರು ಉಗ್ರವಾದಿಗಳಿಗೂ ಮುಂದೆ ಗ್ರಾಮಿಗಳಿಗೂ ಮೈತ್ರಿ ತಂದು, ಕಾಂಗ್ರೆಸ್ಸಿನಲ್ಲಿ ಐಕಮತ್ಯ ಏರ್ಪಡಬೇಕೆಂದು ಪ್ರಯತ್ನಿಸಿದರು. ಗೋಖಲೆಯವರೂ ಇದಕ್ಕಾಗಿ ಪ್ರಯತ್ನಿಸಿದರು. ಫಿರೋಜ್ ಷಾ ಮೆಹತ ಮಾತ್ರ ಪ್ರಯತ್ನ ಯಶಸ್ವಿಯಾಗಲು ಆಸ್ಪದ ಕೊಡುತ್ತಿರಲಿಲ್ಲ. ಇವರು ೧೯೧೫ರ ಉತ್ತರಾರ್ಧದಲ್ಲಿ ಮೃತರಾದ ಮೇಲೆ ೧೯೧೬ರಲ್ಲಿ ಕಾಂಗ್ರೆಸಿನಲ್ಲಿ ಮಂದಗಾಮಿಗಳಿಗೂ ಉಗ್ರವಾದಿಗಳಿಗೂ ಮೈತ್ರಿಯಾಗಿ, ಡಿಸಂಬರ್‌ನಲ್ಲಿ ಲಕ್ನೋದಲ್ಲಿ ಕಾಂಗ್ರೆಸ್ ಮಹಾಧಿವೇಶನ ಬಹಳ ಉತ್ಸಾಹದಿಂದ ನಡೆಯಿತು. ಲೋಕಮಾನ್ಯ ತಿಲಕರೂ, ಆಗ ತಾನೇ ದಕ್ಷಿಣ ಆಪ್ರಿಕಾದಿಂದ ಹಿಂತಿರುಗಿದ್ದ ಗಾಂಧೀಜಯವರೂ ಭಾಗವಹಿಸಿದ್ದರು.

ಇದೇ ಸಮಯದಲ್ಲಿ ಆನಿ ಬೆಸಂಟ್ ಹೋಂ ರೂಲ್ ಲೀಗ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕವೂ “ನ್ಯೂ ಇಂಡಿಯಾ ಮತ್ತು ಕಾರ್ಮವೆಲ್ತ್‌” ಎಂಬ ಪತ್ರಿಕೆಗಳ ಮೂಲಕವೂ ಭಾರತೀಯರಿಗೆ ಸ್ವರಾಜ್ಯ ದೊರೆಯಬೇಕೆಂದು ದೊಡ್ಡ ಆಂದೋಳನವನ್ನು ನಡೆಸಿದರು. ಇವರು ತಮ್ಮ ಪ್ರಭಾವ ಶಾಲಿಯಾಗದ ಭಾಷಣಗಳಿಂದ ಭಾರತೀಯರನ್ನು ಸ್ವರಾಜ್ಯ ಸಂಪಾದನೆಯ ಕಾರ್ಯಗಳಿಗೆ ಹುರಿದುಂಬಿಸಿದರು. ಇವರು ಭಾರತೀಯ ಯುವಕರಿಗೆ “ಇಂಡಿಯಾವು ಏನು ಮಾಡಬಲ್ಲದು ಎಂಬುದನ್ನು ತಿಳಿಯಬೇಕಾದರೆ ಇಂಡಿಯಾ ಹಿಂದೆ ಏನು ಮಾಡಿತು ಎಂಬುದನ್ನು ತಿಳಿಯಬೇಕು” ಎಂದು ತಮ್ಮ ಭಾಷಣಗಳಲ್ಲಿ ಹೇಳಿ, ಭಾರತದ ಹಿಂದಿನ ಹಿರಿಮೆಯನ್ನು ವಿವರಿಸುತ್ತಿದ್ದರು. ಇವರು ೧೯೧೭ರಲ್ಲಿ ಕಲ್ಕತ್ತಾದಲ್ಲಿ ನಡೆದ ಕಾಂಗ್ರೆಸ್ ಮಹಾಧಿವೇಶವನಕ್ಕೆ ಅಧ್ಯಕ್ಷರಾಗಿದ್ದರು. ಈ ಅಧಿವೇಶನದಲ್ಲಿ ಲೋಕಮಾನ್ಯ ತಿಲಕ್, ಪಂಡಿತ ಮದನ ಮೋಹನ ಮಾಳವೀಯ, ರೈಟ್ ಆನರಬಲ್ ಶ್ರೀನಿವಾಸ ಶಾಸ್ತ್ರಿ, ಗಾಂಧೀಜಿ, ಸಿ.ಆರ್. ದಾಸ್ ಮುಂತಾದವರೆಲ್ಲರೂ ಇದ್ದರು. ಮುಲಿಂ ನಾಯಕರೂ ಇದ್ದರು. ನಡವಳಿಕೆಗಳು ಐಕಮತ್ಯದಿಂದಲೇ ನಡೆದವು.

೧೯೧೮ನೇ ನವೆಂಬರ್‌ನಲ್ಲಿ ಮೊದಲನೇ ಘೋರ ಯುದ್ಧ ಮುಗಿಯಿತು. ಇಂಗ್ಲೆಂಡು ಜರ್ಮನ್ ಚಕ್ರವರ್ತಿ ಕೈಸರನನ್ನು ಮುಟ್ಟಹಾಕಿದೆ ಎಂದು ಸಂತೋಷದಿಂದಿತ್ತು. ಈ ಯುದ್ಧಾಂತ್ಯದಲ್ಲಿ ಯುರೋಪಿನ ಭೂಪಟವೇ ಬದಲಾಯಿಸಿತು. ಜರ್ಮನಿ ಸೋಲಿನಿಂದ ಸಂಕಟಕ್ಕೆ ಈಡಾಯಿತು. ಬಹಳ ಹಳೇ ಆಸ್ಟ್ರೀಯನ್ ಚಕ್ರಾಧಿಪತ್ಯ ಒಡೆದು ಹೋಯಿತು. ರಷ್ಯನ್‌ಸಾಮ್ರಾಜ್ಯ ಮುಳುಗಿ ಹೋಗಿ, ಕ್ರಾಂತಿಯುಂಟಾಗಿ, ಲೆನಿನ್ನನ ಅಧ್ಯಕ್ಷತೆಯಲ್ಲಿ ಕಮ್ಯೂನಿಸ್ಟ್ ರಾಜ್ಯ ಆರಂಭವಾಯಿತು. ಟರ್ಕಿಯ ಆಟೋರ್ಮಾ ಚಕ್ರಾಧಿಪತ್ಯ ಮುಳುಗಿ, ಅದರ ಅಧೀನದಲ್ಲಿದ್ದ ಮುಸ್ಲಿಂ ಯಾತ್ರಾಸ್ಥಾನಗಳು ಅದರ ಕೈ ತಪ್ಪಿದವು. ಯುದ್ಧಾರಂಭದಲ್ಲಿ ಬ್ರಿಟಿಷ್ ಮುಖ್ಯ ಮಂತ್ರಿ ಟರ್ಕಿರಾಜ್ಯ ಭಂಗವಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ಕೊಟ್ಟಿದ್ದು ಯುದ್ಧಾಂತ್ಯದಲ್ಲಿ ಉಳಿಸಿಕೊಳ್ಳಲಾಗಲಿಲ್ಲ. ಇದರಿಂದಲೇ ಭಾರತದ ಮುಸ್ಲಿಮರು ಬ್ರಿಟಿಷ್ ಸರ್ಕಾರಕ್ಕೂ, ಇಂಡಿಯಾಕ್ಕೂ ವಿರೋಧವಾಗಿ ಖಿಲಾಫತ್ ಚಳುವಳಿಯನ್ನು ಭಾರತದಲ್ಲಿ ಆರಂಭಿಸಲು ಕಾರಣವಾಯಿತು.

ಯುದ್ಧದ ಪರಿಣಾಮವಾಗಿ ಇಂಡಿಯಾದಲ್ಲಿ ಏನಾಯಿತು? ೧೯೧೭ನೇ ಕಾಂಗ್ರೆಸ್ ಮಹಾಧಿವೇಶನದಿಂದ ರಾಜಕೀಯ ಚುರುಕಾಯಿತು. ಯುದ್ಧಾ ನಂತರ ಭಾರತದ ರಾಜ್ಯಾಧಿಕಾರದಲ್ಲಿ ಒಂದು ಬಲವಾದ ಮುಂದಿನ ಹೆಜ್ಜೆ ಇಡಲು ಅವಕಾಶವಾಗುವುದೆಂದು ಭಾರತೀಯರು ನ್ಯಾಯವಾಗಿ ಆಶಿಸಿದರು. ಯುದ್ಧಾಂತ್ಯದಲ್ಲಿ ಅಮೆರಿಕಾದ ಅಧ್ಯಕ್ಷರು ಪ್ರತಿಯೊಂದು ರಾಜ್ಯವೂ ಸ್ವಯಂ ನಿರ್ಣಯ (self – determination) ಅಧಿಕಾರವನ್ನು ಪಡೆಯಬೇಕೆಂದು ಘೋಷಣೆ ಮಾಡಿದರು. ಇದರ ಪರಿಣಾಮವಾಗಿಯೂ ಭಾರತಕ್ಕೆ ಸ್ವಯಂ ನಿರ್ಣಯ ಎಂದರೆ ತನ್ನ ಭವಿಷ್ಯವನ್ನು ತಾನೇ ನಿರ್ಣಯಿಸಿ ರೂಪಿಸುವ ಅಥವ ಸ್ವರಾಜ್ಯ ಸಂಪಾದಿಸುವ ಅಧಿಕಾರದ ಸುಮುಹೂರ್ತ ಒದಗಿದೆ ಎಂದು ಅನೇಕ ಆಶಾವಾದಿ ಭಾರತೀರು ಭಾವಿಸಿದರು.

ಹಿಂದಿನಿಂದಲೂ ಕಾಂಗ್ರೆಸು ಸ್ವರಾಜ್ಯದ ಅಧಿಕಾರವನ್ನು ಬ್ರಿಟಿಷ್ ಸರ್ಕಾರದಿಂದ ಕೇಳುತ್ತಲೇ ಇತ್ತು. ೧೯೦೬ ನೇ ಕಾಂಗ್ರೆಸ್ ಮಹಾಧಿವೇಶನದಲ್ಲಿಯೇ ಅದರ ಅಧ್ಯಕ್ಷ ದಾದಾಭಾಯಿ ನವರೋಜಿ ಭಾರತಕ್ಕೆ ಸ್ವರಾಜ್ಯ ಕೊಡಬೇಕು ಎಂದು ಬ್ರಿಟಿಷ್ ಸರಕಾರವನ್ನು ಕೇಳಿದರು. ಆಮೇಲೆ ಕಾಂಗ್ರೆಸ್ಸಿನ ಪ್ರತಿ ಅಧಿವೇಶನದಲ್ಲಿಯೂ ನಿರ್ಣಯ ಪಾಸಾಗುತ್ತಿತ್ತು.  ಗೋಖಲೆಯವರು ೧೯೧೫ರಲ್ಲಿ  ಆಗಾಖಾನರೊಡನೆ ಸೇರಿ ಹಿಂದೂಗಳಿಗೂ ಮಹಮ್ಮದೀಯರಿಗೂ ಒಪ್ಪಿಗೆಯಾಗುವ ಒಂದು ಸ್ವರಾಜ್ಯರಚನೆಯನ್ನು ಮುಂದಿಟ್ಟರು. ೧೯೧೭ – ೧೮ರಲ್ಲಿ ಇಂಗ್ಲೆಂಡ್ ಸರ್ಕಾರದ ಭಾರತ ಮಂತ್ರಿ ಇ.ಎಸ್.ಮಾಂಟೆಗೂ ಭಾರತವನ್ನೆಲ್ಲಾ ಸಂಚರಿಸಿ, ದೇಶನಾಯಕರನ್ನು ಭೇಟಿ ಮಾಡಿ, ಇಂಡಿಯಾಕ್ಕೆ ಸ್ವಯಂ ನಿರ್ಣಯದ ಹಕ್ಕನ್ನು ಕೊಡಬೇಕೆಂದು ಮನಸ್ಸು ಮಾಡಿಕೊಂಡರು. ಆಗಿನ ವೈಸರಾಯ್ ಲಾರ್ಡ್‌ಮಿಂಟೋರವರೊಡನೆಯೂ ಮಾತನಾಡಿ ಒಂದು ವರದಿಯನ್ನು ತಯಾರಿಸಿದರು. ಮಾಂಟಿಗೂ ಛೆಲ್ಸ್ಮ್ ಫರ್ಡ್‌ವರದಿ ೧೯೧೮ನೇ ಜುಲೈನಲ್ಲಿ ಪ್ರಕಟವಾಯಿತು. ಕಾಂಗ್ರೆಸಿನ ಒಂದು ಪಂಗಡ ಅದನ್ನು ಸ್ವಾಗತಿಸಿ, ಕೆಲಸ ಮಾಡಬೇಕು ಎಂಬ ತೀರ್ಮಾನಕ್ಕೆ ಬಂದಿತು. ಇವರು ಮಂದಗಾಮಿಗಳು, ಶ್ರೀನಿವಾಸ ಶಾಸ್ತ್ರಿ, ಸಿ.ವೈ.ಚಿಂತಾಮಣಿ, ಸುರೇಂದ್ರನಾಥ ಬ್ಯಾನರ್ಜಿ ಮುಂತಾದವರು. ಎರಡನೆಯ ಗುಂಪು ಲೋಕಮಾನ್ಯ ತಿಲಕರದು.

ಇವರು ರಾಜಕೀಯ ಸುಧಾರಣೆಗಳು ಅತೃಪ್ತಿಕರವಾದಾಗ್ಯೂ, ಅವನ್ನು ಸ್ವೀಕರಿಸಿ, ಇನ್ನೂ ಹೆಚ್ಚನ್ನು ಸಂಪಾದಿಸಬೇಕು, ಎಂದರು ಸಹಕಾರಕ್ಕೆ ಸಹಕಾರ; ಅಸಹಕಾರಕ್ಕೆ ಅಸಹಕಾರ ಇದು ಈ ಪಕ್ಷದ ನಿಲುವು.

ಗಾಂಧೀಜಿಯ ಅಭಿಪ್ರಾಯ ಸುಧಾರಣೆ ವರದಿಯನ್ನು ತಿರಸ್ಕರಿಸದೆ ಸಹಾನುಭೂತಿಯಿಂದ  ಅದನ್ನು ಪರಿಶೀಲಿಸಬೇಕು ಎಂಬುದಾಗಿತ್ತು. ಏಕೆಂದರೆ, ಗಾಂಧೀಜಿ ಬ್ರಿಟನ್ನಿಗೆ ಯುದ್ಧದಲ್ಲಿ ಜಯವಾಗಬೇಕೆಂದು ಕೋರಿ ಯುದ್ಧಕ್ಕೆ ಸೈನಿಕರನ್ನು ಶೇಖರಿಸುವ ಕೆಲಸದಲ್ಲಿ ತೊಡಗಿದ್ದರು. ಇವರು ಆಗ ಬ್ರಿಟಿಷರೊಡನೆ ಸಹಕಾರ ಮನೋಭಾವ ಹೊಂದಿದ್ದರು. ಅದಕ್ಕಾಗಿ ತಮ್ಮ ಆರೋಗ್ಯವನ್ನು ಕಳೆದುಕೊಳ್ಳುವ ಮಟ್ಟಿಗೆ ಸೈನಿಕರನ್ನು ಸೇರಿಸುವ ಕಾರ್ಯದಲ್ಲಿ ತೊಡಗಿದ್ದರು. ಈ ಕಾರ್ಯದ ಆಯಾಸದಿಂದ ಇವರಿಗೆ ಭೇದಿಯೆತ್ತಿ ಮರಣೋನ್ಮುಖರಾಗಿದ್ದರು. ವಲ್ಲಭಭಾಯಿ ಪಟೇಲರು ಮತ್ತು ಕಸ್ತೂರಿಬಾಯಿಯವರು ಬಹಳ ಕಷ್ಟಪಟ್ಟು ಇವರನ್ನು ಉಳಿಸಿದರು.

ಆಗಿನಿಂದಲೇ ಗಾಂಧೀಜಿ ಆಡಿನ ಹಾಲನ್ನು ಕುಡಿಯಲಾರಂಭಿಸಿದರು. ಕಾರಣ, ಹಸುವನ್ನು ಹಿಂಸಿಸಿ, ಕರುವಿಗೆ ಇಲ್ಲದಂತೆ ಹಾಲನ್ನು ಬಲತ್ಕಾರವಾಗಿ ಕರೆಯುತ್ತಾರೆ ಎಂಬುದು. ಕಾಯಿಲೆಯಲ್ಲಿ ಹಾಲು ಕುಡಿಯಬೇಕೆಂದು ವೈದ್ಯರು ಒತ್ತಾಯ ಮಾಡಲು, ಕಸ್ತೂರಿ ಬಾಯಿಯವರು “ಹಸುವಿನ ಹಾಲು ಬೇಡ, ಆಡಿನ ಹಾಲನ್ನಾದರೂ ಕುಡಿಯಿರಿ” ಎಂದು ಗಾಂಧೀಜಿಯನ್ನು ಕೇಳಿ ಕೊಂಡರು. ‘ಆಗಲಿ’ ಎಂದು ಹೇಳಿ, ಅಂದಿನಿಂದ ಆಡಿನ ಹಾಲನ್ನು ಗಾಂಧೀಜಿ ಸೇವಿಸಲಾರಂಭಿಸಿದರು.

ಮಂದಗಾಮಿಗಳು ತಾವೇ ಬೇರೆ ಸಮ್ಮೇಳನ ನಡೆಸಿ, ಮಾಂಟೆಗೂ ವರದಿಯನ್ನು ಸ್ವಾಗತಿಸಿ, ಮುಂದೆ ಸರ್ಕಾರದೊಡನೆ ಸಹಕರಿಸುವುದಾಗಿ ನಿರ್ಣಯ ಮಾಡಿದರು.

ಕಾಂಗ್ರೆಸು ೧೯೧೮ನೇ ಆಗಸ್ಟ್ ೨೯ರಲ್ಲಿ ಮುಂಬಯಿಯಲ್ಲಿ ಸೈಯದ್ ಹಸನ್ ಇಮಾಮರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ಸೇರಿ ಕಾಮನ್‌ವೆಲ್ತ್‌ನೊಳಗೇ ಭಾರತಕ್ಕೆ ಸಂಪೂರ್ಣ ಸ್ವಾಧೀಕಾರ ದೊರೆಯಬೇಕೆಂದು ನಿರ್ಣಯ ಮಾಡಿತು. ಮಂದಗಾಮಿಗಳು ಈ ಅಧಿವೇಶನದಲ್ಲಿರಲಿಲ್ಲ. ಈ ಅಧಿವೇಶನದಲ್ಲಿರಲಿಲ್ಲ. ಈ ಅಧಿವೇಶನದಲ್ಲಿ ಮಾಂಟೆಗೂ ಶಿಫಾರಸುಗಳು ನಿರಾಶಾದಾಯಕವಾದುವೆಂದೂ ಅತೃಪ್ತಿಕರವಾದುದೆಂದೂ ನಿರ್ಣಯವಾಯಿತು. (These reforms are inadequate, disappointing and unsatisfactory.)

ಕೆಲವು ಸದಸ್ಯರು ಇನ್ನೂ ಮುಂದೆ ಹೋಗಿ, ಈ ಶಿಫಾರಸುಗಳು ಸಾವು ಎಂದೂ ಅಭಿಪ್ರಾಯಪಟ್ಟರು. ಅಧಿವೇಶನದಲ್ಲಿ ಪಂಡಿತ ಮಾಳವೀಯ, ಲೋಕಮಾನ್ಯ ತಿಲಕ್, ಫಜಲುಲ್ ಹಕ್, ಎಂ.ಆರ್. ಜಯಕರ್, ಅನಿ ಬೆಸೆಂಟ್ ಮುಂತಾದವರು ಭಾಗವಹಿಸಿ, ಉದ್ದಾಮ ಭಾಷಣಗಳನ್ನು ಮಾಡಿದರು.

ಈ ಅಧಿವೇಶನವಾದ ಮೇಲೆ, ಲೋಕಮಾನ್ಯ ತಿಲಕರು ಕೆಲವು ಮಿತ್ರರೊಡನೆ ಇಂಗ್ಲೆಂಡಿಗೆ ಹೋಗಿ, ಇಂಡಿಯಾದ ಬಗ್ಗೆ ಬಹಳ ಪ್ರಚಾರ ಮಾಡಿದರು. ಇವರು ಇಂಗ್ಲೆಂಡಿಗೆ ಪ್ರಯಾಣ ಮಾಡುತ್ತಿದ್ದಾಗಲೇ ಭಾರತದಲ್ಲಿ ಕಾಂಗ್ರೆಸಿನವರು ಇವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆರಿಸಿದರು. ಆದರೆ ೧೯೧೮ನೇ ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಮಹಾಧಿವೇಶನದಲ್ಲಿ ಇವರು ಭಾಗವಹಿಸಲಾಗಲಿಲ್ಲ. ಇಂಗ್ಲೆಂಡಿನಲ್ಲಿ ಇವರ ವ್ಯವಹಾರಗಳು ಇನ್ನೂ ಮುಗಿದಿರಲಿಲ್ಲ. ಆದ್ದರಿಂದ ಪಂಡಿತ ಮಾಳವೀಯರು ಅಧ್ಯಕ್ಷರಾಗಿ, ಅಧಿವೇಶನ ಮಾಂಟೆಗೂ ಸುಧಾರಣೆಗಳ ಬಗ್ಗೆ ತನ್ನ ಅತೃಪ್ತಿ ಅಸಮಾಧಾನಗಳನ್ನು ಇನ್ನೂ ಸ್ವಷ್ಟವಾಗಿ ತಿಳಿಸಿತು. ಗಾಂಧೀಜಿ ಅನಾರೋಗ್ಯದ ಕಾರಣ ಈ ಅಧಿವೇಶನದಲ್ಲಿ ಹಾಜರಿರಲಿಲ್ಲ. ೧೯೧೮ನೇ ಇಸವಿ ಈ ರೀತಿ ಯಾಗಿ ಅಸ್ತವಾಯಿತು.

೧೯೧೯ನೇ ಇಸವಿ ಭಾರತೀಯ ಸ್ವಾತಂತ್ರ್ಯ ಇತಿಹಾಸದಲ್ಲಿ ಅತಿ ಪ್ರಧಾನವಾದುದು. ಗಾಂಧೀಜಿ ನೇರವಾಗಿ ಕಾಂಗ್ರೆಸ್ ಕಾರ್ಯಗಳಲ್ಲಿ ಈ ವರ್ಷದಿಂದ ಭಾಗವಹಿಸಿದರು.

ಈ ವರ್ಷ ಕೆಲವು ಅಲ್ಲೋಲ ಕಲ್ಲೋಲ ಸಂಗತಿಗಳು ಭಾರತದಲ್ಲಿ ನಡೆದವು. ಕ್ರಾಂತಿಕಾರರು ತಮ್ಮದೇ ಆದ ಮಾರ್ಗದಲ್ಲಿ ನಡೆಯುತ್ತಿದ್ದರು. ಆಗಾಗ್ಗೆ ಆಂಗ್ಲ ಅಧಿಕಾರಗಳ ಮೇಲೆ ಬಾಂಬು ಎಸೆಯುವುದು ಮುಂತಾದ ಹಿಂಸಾಕೃತ್ಯಗಳಲ್ಲಿ ತೊಡಗುತ್ತಿದ್ದರು. ಇವರೆಲ್ಲಾ ಒಂದು ಕಡೆಯೇ ಇರಲಿಲ್ಲ; ಇವರು ಭಾರತದ ನಾನಾ ಭಾಗಗಳಲ್ಲಿ ಇರುತ್ತಿದ್ದರು. ಆದರೆ ಬಂಗಾಳದಲ್ಲಿ ಜಾಸ್ತಿ. ರಾಜದ್ರೋಹದ ವಿಷಯಗಳನ್ನು ಪರಿಶೀಲಿಸಿ ವರದಿಯನ್ನು ಕೊಡಲು ಇಂಡಿಯಾ ಸರ್ಕಾರ ರೌಲೆಟ್‌ರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ನೇಮಿಸಿತು. ಸಮಿತಿಯಲ್ಲಿ ಕೆಲವು ಭಾರತೀಯ ಹೈಕೋರ್ಟ್‌ಜಡ್ಜಿಗಳೂ ಸದಸ್ಯರಾಗಿದ್ದರು. ಈ ಸಮಿತಿ ತನ್ನ ಕಾರ್ಯವನ್ನು ಪೂರೈಸಿ, ಮಾಂಟೆಗೂ ಸುಧಾರಣೆಗಳು ಪ್ರಕಟವಾದ ಒಂದು ವಾರದೊಳಗೆ ತನ್ನ ವರದಿಯನ್ನು ಪ್ರಕಟಿಸಿತು. ಈ ವರದಿಯಲ್ಲಿ ಲೋಕಮಾನ್ಯ ತಿಲಕರನ್ನು ಬಹಳ ಹೀನಾಯವಾಗಿ ಚಿತ್ರಿಸಲಾಗಿತ್ತು. ಈ ವರದಿಯ ಶಿಫಾರಸಿನ ಪ್ರಕಾರ ಆಗಬೇಕಾದ ಕಾನೂನು ಅತಿಕ್ರೂರ ಕ್ರಾಂತಿಕಾರರೆಂದು ಗುಮಾನಿಗೆ ಒಳಗಾದವರನ್ನು ದಸ್ತಗಿರಿ ಮಾಡಿ, ಬಹಿರಂಗ ವಿಚಾರಣೆಯಿಲ್ಲದೆಯೇ ಕಾರಾಗೃಹದಲ್ಲಿ ಇಡಬೇಕೆಂದು ಸೂಚಿಸುವುದಾಗಿತ್ತು. ಇದು ಮಾನವ ಮೂಲಭೂತ ಹಕ್ಕುಗಳಿಗೆ ಭಂಗ ತರುವಂತಹುದೆಂದು ಇದನ್ನು ಕಾಂಗ್ರೆಸ್ ಮಹಾಧಿವೇಶನ ೧೯೨೮ನೇ ಡಿಸೆಂಬರಿನಲ್ಲಿ ಖಂಡಿಸಿ, ಈ ಕಾನೂನನ್ನು ಜಾರಿಗೆ ತರಕೂಡದೆಂದು ನಿರ್ಣಯ ಮಾಡಿತು.

ಮಸೂದೆಯನ್ನು ಪ್ರತಿಭಟಿಸಿ ಪಂಡಿತ ಮಾಳವೀಯವರು ಆಗಿನ ಇಂಪೀರಿಯಲ್ ಲೆಜಿಸ್ಲೆಟಿವ್ ಕೌನ್ಸಿಲಿನಲ್ಲಿ ಒಂಭತ್ತು ಗಂಟೆ ಭಾಷಣ ಮಾಡಿದರು. ಶ್ರೀನಿವಾಸ ಶಾಸ್ತ್ರೀಗಳು ಸರ್ಕಾರಕ್ಕೆ ಎಚ್ಚರಿಕೆಯಿತ್ತರು; “ಈ ಕಾನೂನನ್ನು ಜಾರಿಗೆ ತಂದರೆ ಭಾರತದ ಪ್ರಜೆಗಳು ದಂಗೆಯೇಳುವ ಅವಕಾಶವಿದೆ; ಈ ಕಾನೂನನ್ನು ಮಾಡಬೇಡಿ” ಎಂದು ವೈಸರಾಯರನ್ನು ಬಹುವಾಗಿ ಕೇಳಿಕೊಂಡರು. ಮಸೂದೆಯನ್ನು ವಿರೋಧಿಸಿ ಇಂಡಿಯಾದ ಸರ್ಕಾರದ ಎಕ್ಸೆಕ್ಯೂಟಿವ್ ಕೌನ್ಸಿಲಿನಲ್ಲಿ ಭಾರತೀಯ ಸದಸ್ಯರಾಗಿದ್ದ ಸರ್ ಶಂಕರನ್‌ನಾಯರ್ ತಮ್ಮ ಹುದ್ದೆಗೆ ರಾಜಿನಾಮೆಯಿತ್ತರು. ಮಾಂಟಿಗೂ ಛಲ್ಮ್ಸ್‌ಫರ್ಡ್‌ ಸುಧಾರಣೆಗಳು ಜಾರಿಯಾಗುವ ಕಾಲದಲ್ಲಿಯೇ ಕ್ರೂರ ರೌಲೆಟ್ ಕಾನೂನು ಜಾರಿಗೆ ಬಂದದ್ದನ್ನು ನೋಡಿ ಭಾರತೀಯರು ವಿಸ್ಮಯರಾದುದಲ್ಲದೆ ಬ್ರಿಟಿಷ್ ಸರ್ಕಾರವನ್ನು ನಂಬತಕ್ಕದ್ದಲ್ಲ ಎಂಬ ಅಭಿಪ್ರಾಯಕ್ಕೆ ಬರುವ ಹಾಗಾಯಿತು.

ಇದುವರೆಗೂ ದೇಶದ ವ್ಯವಹಾರಗಳಲ್ಲಿ ಹೆಚ್ಚಾಗಿ ಪ್ರವೇಶಿಸದೆ ಇದ್ದ ಗಾಂಧೀಜಿ ಈಗ, ರೌಲೆಟ್ ಮಸೂದೆ ಪಾಸಾದ ಮೇಲೆ, ರಾಜಕೀಯ ವ್ಯವಹಾರದಲ್ಲಿ ನೇರವಾಗಿ ಭಾಗವಹಿಸಿದರು. ಇವರು ದಕ್ಷಿಣ ಆಫ್ರಿಕಾದಲ್ಲಿ ಅಲ್ಲಿ ನೆಲೆಸಿದ್ದ ಭಾರತೀಯರ ಕುಂದು ಕೊರತೆಗಳನ್ನು ಪರಿಹರಿಸಲು ಸತ್ಯಾಗ್ರಹ ನಡೆಸಿ ದಿಗ್ವಿಜಯ ಪಡೆದಿದ್ದರು. ಗೋಪಾಲಕೃಷ್ಣ ಗೋಖಲೆಯವರು ದಕ್ಷಿಣ ಆಫ್ರಿಕಾಕ್ಕೆ ಹೋಗಿ ಇವರಿಗೆ ಬಹಳ ಬೆಂಬಲವಿತ್ತಿದ್ದರು. ಇವರ ಗುಣಾತಿಶಯಗಳನ್ನು ಬಹಳವಾಗಿ ಕೊಂಡಾಡಿದ್ದರು.

ಗಾಂಧೀಜಿ ಭಾರತಕ್ಕೆ ಹಿಂತಿರುಗಿದ ಮೇಲೆ ತಮ್ಮ ರಾಜಕೀಯ ಗುರುಗೋಖಲೆಯವರನ್ನು ಸಂದರ್ಶಿಸಿ ಮುಂದೇನು ಮಾಡಬೇಕೆಂಬ ಬಗ್ಗೆ ಸಲಹೆ ಕೇಳಿದರು. ಗೋಖಲೆ ಗಾಂಧೀಜಿಯವರಿಗೆ “ಅಯ್ಯಾ, ನೀನು ಈ ದೇಶಕ್ಕೆ ಇನ್ನೂ ಹೊಸಬ. ಇಲ್ಲಿಯ ರಾಜಕೀಯ ಮತ್ತು ಜನರು ನಿನಗೆ ಇನ್ನೂ ಚೆನ್ನಾಗಿ ಪರಿಚಯವಿಲ್ಲ. ಆದ್ದರಿಂದ ಒಂದು ವರ್ಷಕಾಲ ದೇಶದ ಎಲ್ಲಾ ಭಾಗಗಳಲ್ಲೂ ಸಂಚರಿಸಿ, ಮುಖಂಡರೊಡನೆಯೂ, ವಿದ್ಯಾರ್ಥಿಗಳೊಡನೆಯೂ ಸಾಮಾನ್ಯ ಜನರೊಡನೆಯೂ ಬೆರೆತು ಸಂಭಾಷಣೆಯನ್ನು ನಡೆಸು. ನೀನು ಯಾವ ಅಭಿಪ್ರಾಯವನ್ನೂ ಒಂದು ವರ್ಷ ಪ್ರಕಟಿಸಬೇಡ. ಭಾಷಣಗಳನ್ನೂ ಮಾಡಬೇಡ. ಒಂದು ವರ್ಷವಾದ ಮೇಲೆ ನೀನು ನನ್ನೊಡನೆ ಸೇರಿ ಕೆಲಸ ಮಾಡುವಿಯಂತೆ” ಎಂದು ಹೇಳಿದರು. ಹಾಗೆಯೇ ಗಾಂಧೀಜಿ ಒಂದು ವರ್ಷ ದೇಶಭ್ರಮಣ ಮಾಡಿದರು. ಇವರ ಪ್ರಯಣಾ ರೈಲಿನ ಮೂರನೆ ತರಗತಿಯಲ್ಲೆ. ಇವರ ಆಹಾರ ಕಡಲೇಕಾಯಿ (ಸೇಂಗಾ) ಮತ್ತು ಹಣ್ಣು, ಇವರ ಕೈಯಲ್ಲಿ ಒಂದು ಕೈಚೀಲ, ಅದರಲ್ಲಿ ಇವರ ಬಟ್ಟೆಬರೆ ಮತ್ತು ಭಗವದ್ಗೀತೆ, ಇನ್ನೊಂದು ಕೈಯಲ್ಲಿ ಒಂದು ಹೂಜಿ ಮತ್ತು ಗ್ಲಾಸು. ಸಾಮಾನ್ಯ ಕಾಥೆವಾಡೀ ಉಡುಪು, ಧೋತ್ರ, ಅಂಗಿ, ಸೊಟ್ಟ ರುಮಾಲು, ಮೇಲೊಂದು ಉತ್ತರೀಯ. ರೈಲು ಪ್ರಯಾಣ ಅತಿ ಕಷ್ಟವಾಗಿತ್ತು; ಆಗ ಇವರ ಗುರುತು ಬಹಳ ಜನಕ್ಕಿರಲಿಲ್ಲ; ಆಗ ಇವರು ಇನ್ನೂ ಮಹಾತ್ಮರಾಗಿರಲಿಲ್ಲ.

ಗಾಂಧೀಜಿ ತಮ್ಮ ದೇಶಪರ್ಯಟನೆಯಲ್ಲಿ ಶಾಂತಿನಿಕೇತನದಲ್ಲಿದ್ದಾಗ ಪೂನಾದಿಂದ ಗೋಖಲೆ ನಿಧನರಾದರೆಂದು ಅವರಿಗೆ ತಂತೀ ಬಂದಿತು. ಕೂಡಲೆ ಪೂನಾಕ್ಕೆ ಪ್ರಯಾಣ ಮಾಡಿದರು. ನೆಟ್ಟಿಗೆ ಗೋಖಲೆ ಸ್ಥಾಪಿಸಿದ್ದ “ಸವೆಂಟ್ಸ್‌ಆಫ್ ಇಂಟಿಯಾ” ಸೊಸೈಟಿಗೆ ಬಂದು ತಮ್ಮ ಗುರುವಿಗೆ ಅಶ್ರುತರ್ಪಣ ಮಾಡಿದರು. ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಗೆ ಸೇರಲು ತಮ್ಮ ಅಪೇಕ್ಷೆಯನ್ನು ಸೂಚಿಸಿದ ಅದರ ನೂತನ ಅಧ್ಯಕ್ಷರಿಗೆ ಕಾಗದಕೊಟ್ಟರು. ಸೊಸೈಟಿಯ ಕೆಲವು ಸದಸ್ಯರುಗಳಲ್ಲಿ ಗಾಂಧೀಜಿಯನ್ನು ಸೇರಿಸಿಕೊಳ್ಳುವ ಬಗ್ಗೆ ಭಿನ್ನಾಭಿಪ್ರಾಯ ಬಂದುದರಿಂದ, ಆ ಅಪೇಕ್ಷೆಯನ್ನು ಗಾಂಧೀಜಿ ಬಿಟ್ಟು ಬಿಟ್ಟರು. ಪುನಃ, ಗೋಖಲೆಯವರು ಅಪೇಕ್ಷಿಸಿದ್ದಂತೆ, ದೇಶಸಂಚಾರ ಆರಂಭಿಸಿದರು. ದಕ್ಷಿಣ ಭಾರತಕ್ಕೂ ಬಂದಿದ್ದರು. ಆ ಸಮಯದಲ್ಲಿಯೇ ಬೆಂಗಳೂರಿಗೆ ಬಂದಿದರು; ಡಿ.ವಿ. ಗುಂಡಪ್ಪನವರು ಗಾಂಧೀಜಿಯವರ ಅಮೃತ ಹಸ್ತದಿಂದ ಗೋಖಲೆಯವರ ಭಾವಚಿತ್ರವನ್ನು ಅನಾವರಣ ಮಾಡಿಸಿದರು.

ಗಾಂಧೀಜಿ ದೇಶ ಸಂಚಾರ ಮುಗಿಸಿ, ಅಹಮದಾಬಾದಿನಲ್ಲಿ ಸತ್ಯಾಗ್ರಹಾಶ್ರಮವನ್ನು ಸ್ಥಾಪಿ, ಅಲ್ಲಿ ನೆಲೆಸಿದರು. ಈ ಆಶ್ರಮ ಮೊದಲು, ೧೯೧೫ನೇ ಮೇ ೨೫ರಲ್ಲಿ, ಅಹಮದಾಬಾದಿನ ಕೋಚ್‌ರಾವ್ ಪ್ರದೇಶದಲ್ಲಿ ಸ್ಥಾಪಿತವಾಯಿತು. ಕೆಲವು ಕಾಲವಾದ ಮೇಲೆ ಸಬರ್ಮತಿ ನದಿತೀರದಲ್ಲಿ, ಜೈಲಿನ ಬಳಿ, ಈ ಆಶ್ರಮವನ್ನು ಸ್ಥಿರವಾಗಿ ಸ್ಥಾಪಿಸಲಾಯಿತು. ಈ ಆಶ್ರಮವನ್ನು ಕಾಕಾ ಕಾಲೇಲ್‌ಕರ್, ವಿನೋಬಾ, ಮಹದೇವ್ ದೇಸಾಯ್ ಮುಂತಾದವರು ಆಗ ಸೇರಿದರು. ಈ ಆಶ್ರಮವಾಸಿಗಳು ಸತ್ಯ, ಅಹಿಂಸೆ, ಬ್ರಹ್ಮಚರ್ಯ, ಅಸ್ತೆಯ, ಅಪರಿಗ್ರಹ, ವಿನಯ, ಸ್ವದೇಶಿ, ಸರ್ವಧರ್ಮ ಸಮಾನತೆ ಮುಂತಾದ ವ್ರತಗಳನ್ನು ನಿಷ್ಠೆಯಿಂದ ನಡೆಸಬೇಕು ಎಂಬ ನಿಯಮವಿತ್ತು. ದಕ್ಷಿಣಾ ಆಫ್ರಿಕಾದ ಫೋನಿಕ್ಸ್ ಆಶ್ರಮದ ಮಾದರಿಯಲ್ಲಿಯೇ ಇದನ್ನು ನಡೆಸಲಾಗುತ್ತಿತ್ತು. ಇಲ್ಲಿ ಕೈರಾಟೆಯಲ್ಲಿ ನೂಲುವುದು, ಹತ್ತಿಯನ್ನು ಹಿಂಜಿ ನೂಲು ತೆಗೆಯಲು ಅನುಕೂಲವಾಗುವಂತೆ, ಹತ್ತಿಯ ಸುರುಳಿಗಳನ್ನು ಮಾಡುವುದು, ಕೈಮಗ್ಗದಲ್ಲಿ ಬಟ್ಟೆ ನೆಯ್ಯುವುದು ಮುಂತಾದ ಕೈ ಕೆಲಸಗಳನ್ನುಕಲಿಸುತ್ತಿದ್ದರು. ಆಶ್ರಮವಾಸಿಗಳು ತಮ್ಮ ಕಕ್ಕಸುಗಳನ್ನು (ಫ್ಲಷ್‌ಅಲ್ಲ) ತಾವೇ ಶುಚಿಗೊಳಿಸಬೇಕು. ಸಮಯ ಬಂದರೆ ಇತರರ ಕಕ್ಕಸ್ಸುಗಳನ್ನೂ ನಿರ್ಮಲಗೊಳಿಸಬೇಕು, ಇದಲ್ಲದೆ ಗಾಂಧೀಜಿಯವರು ಪ್ರಾತಃಕಾಲ ೪.೩೦ಗಂಟೆಗೆ ಮತ್ತು ಸಾಯಂಕಾಲ ೫.೩೦ ಗಂಟೆಗೆ ಬಹಿರಂಗ ಪ್ರಾರ್ಥನೆಗಳನ್ನು ನಡೆಸುತ್ತಿದ್ದರು. ಈ ಪ್ರಾರ್ಥನೆಗಳಲ್ಲಿ ಭಗವದ್ಗೀತೆ ಉಪನಿಷತ್ತು ಸೇರಿದ್ದವು. ಸ್ವಲ್ಪಕಾಲ ಭಜನೆಯೂ ಆಗುತ್ತಿತ್ತು. ಕಡೆಗೆ ಗಾಂಧೀಜಿ ಕೆಲವು ಹಿತೋಕ್ತಿಗಳನ್ನು ಹೇಳುತ್ತಿದ್ದರು. ಈ ಆಶ್ರಮದಲ್ಲಿದ್ದಾಗ ಗಾಂಧೀಜಿ ಸ್ವತಃ ಗೋಧಿಯನ್ನು ಬೀಸಿದರು, ಕುಟ್ಟಿದರು, ಅಡಿಗೆ ಮಾಡಿದರು, ಕಕ್ಕಸ್ಸನ್ನು ತೊಳೆದರು, ರೋಗಿಗಳ ಚಿಕಿತ್ಸೆ ಮಾಡಿದರು.

ಈ ಆಶ್ರಮದಿಂದಲೇ ಗಾಂಧೀಜಿ ದೇಶಸೇವಾ ಕಾರ್ಯಗಳನ್ನು ನಡೆಸುತ್ತಿದ್ದರು. “ಯಂಗ್ ಇಂಡಿಯಾ” ಎಂಬ ಆಂಗ್ಲ ವಾರಪತ್ರಿಕೆಯನ್ನೂ, “ನಮ್ಮ ಜೀವನ” ಎಂಬ ಗುಜರಾತಿ ವಾರಪತ್ರಿಕೆಯನ್ನೂ ನಡೆಸುತ್ತಿದ್ದರು. ಈ ಆಶ್ರಮದಲ್ಲಿಯೇ ಗಾಂಧೀಜಿ ಸತ್ಯ ಮತ್ತು ಅಹಿಂಸೆಯ ಪ್ರಯೋಗಗಳನ್ನು ನಡೆಸಿದರು. ಅನೇಕ ವಿದೇಶೀಯರು ಈ ಆಶ್ರಮಕ್ಕೆ ಬಂದು, ಅಲ್ಲಿ ಕೆಲವು ದಿವಸಗಳಿದ್ದು, ಅದರಲ್ಲಿ ನಡೆಯುತ್ತಿದ್ದ ಸತ್ಯ ಮತ್ತು ಅಹಿಂಸೆಯ ಪ್ರಯೋಗಗಳನ್ನು ಕಂಡು ಬೆರಗಾದರು.

ಗಾಂಧೀಜಿ ಈ ಆಶ್ರಮದಲ್ಲಿದ್ದಾಗ ಹೊರಗಿನಿಂದ ಕರೆಗಳು ಬರುತ್ತಿದ್ದವು. ೧೯೧೬ರಲ್ಲಿ ಬಿಹಾರಿನ ಚಂಪಾರಣ್ಯ ಪ್ರದೇಶದಲ್ಲಿ ಇಂಡಿಗೊ ಪ್ಲಾಂಟರುಗಳಿಗೂ ಅಲ್ಲಿ ಕೆಲಸ ಮಾಡುತ್ತಿದ್ದ ಶ್ರಮಜೀವಿಗಳಿಗೂ ವೈಮನಸ್ಯ ಉಂಟಾಯಿತು. ಯುರೋಪಿಯನರಾದ ಪ್ಲಾಂಟರುಗಳು ಅಲ್ಲಿನ ಕೆಲಸಗಾರರಿಗೆ ಬಹಳ ಹಿಂಸೆಕೊಡುತ್ತಿದ್ದರು. ಅಲ್ಲಿನ ಕೆಲಸಗಾರರಿಂದ ಗಾಂಧೀಜಿ ಕರೆ ಬಂದಿತು. ಅವರು ಅಲ್ಲಿಗೆ ಹೋದರು. ಕೂಡಲೆ ಅಲ್ಲಿನ ಕಮಿಷನರು ಗಾಂಧೀಜಿಗೆ ಆ ಜಿಲ್ಲೆಯನ್ನು ಬಿಟ್ಟು ಹೊರಟು ಹೋಗಬೇಕೆಂದು ಆಜ್ಞೆ ಮಾಡಿದರು. ಇದಕ್ಕೆ ಗಾಂಧೀಜಿ ಅಲ್ಲಿನ ರೈತರಿಗೂ ಕೆಲಸಗಾರರಿಗೂ ಉಂಟಾಗಿರುವ ಕಷ್ಟಗಳನ್ನು ವಿಚಾರಿಸಿ, ಅವುಗಳ ಪರಿಹಾರ ಮಾಡಿದ ಮೇಲೆ ತಾವು ಹಿಂತಿರುಗುವುದಾಗಿ ಕಮಿಷನರಿಗೆ ಉತ್ತರ ಕಳುಹಿಸಿದರು. ಮುಂದಿನ ದಿವಸ ಗಾಂಧೀಜಿಯ ಮೇಲೆ ಮೊಕದ್ದಮೆ ಯಾಗಿ ಮ್ಯಾಜಿಸ್ಟೇಟ್ ಮುಂದೆ ವಿಚಾರಣೆ ನಡೆಯಿತು. ಗಾಂಧೀಜಿ ತಾವು ಕೊಟ್ಟ ಹೇಳಿಕೆಯಲ್ಲಿ ತಾವು ಆ ಆಜ್ಟೆಯನ್ನು ಉಲ್ಲಂಘಿಸಿದುದು ನಿಜವೆಂದೂ, ತಾವು ತಪ್ಪು ಮಾಡಿರುವುದಾಗಿಯೂ ತಿಳಿಸಿದರು. ತಾವು ಅಲ್ಲಿಗೆ ಬಂದಿರುವುದು ಒಳ್ಳೆಯ ಉದ್ದೇಶದಿಂದ ಎಂದೂ, ರೈತರಿಗೆ ಆಗಿರುವ ಕಷ್ಟವನ್ನು ವಿಚಾರಣೆ ಮಾಡಿ, ಅದಕ್ಕೆ ಪರಿಹಾರವನ್ನು ಹುಡುಕುವುದು ತಮ್ಮ ಕರ್ತವ್ಯವೆಂದೂ ತಿಳಿಸಿದರು. ಈ ಹೇಳಿಕೆಯನ್ನು ನೋಡಿ ಮ್ಯಾಜಿಸ್ಟ್ರೇಟರಿಗೆ ದಿಗ್ಭ್ರಮೆಯಾಯಿತು. ಏನೂ ಮಾಡಲು ತೋಚದೆ, ತೀರ್ಪನ್ನು ಮುಂದಕ್ಕೆ ಹಾಕಿದರು. ಅಷ್ಟರಲ್ಲಿ ಆ ಪ್ರಾಂತದ ಲೆಫ್ಟಿನೆಂಟ್ ಗವರ್ನರ್‌ರಿಂದ ಗಾಂಧೀಜಿಯನ್ನು ಬಿಡುಗಡೆ ಮಾಡಬೇಕೆಂದು ಕಲೆಕ್ಟರಿಗೆ ಅಪ್ಪಣೆ ಬಂದಿತು.

ಗಾಂಧೀಜಿ ಚಂಪಾರಣ್ಯದಲ್ಲಿ ವಿಚಾರಣೆಗೆ ಆರಂಭಿಸಿದರು. ರಾಜೇಂದ್ರ ಪ್ರಸಾದ್, ಕೃಪಲಾನಿ, ಮತ್ತು ಮಹದೇವ್ ದೇಸಾಯಿ ಗಾಂಧೀಜಿಯ ಸಹಾಯಕ್ಕೆ ಬಂದರು. ಇಪ್ಪತ್ತು ಸಾವಿರ ರೈತರಿಂದ ಸಾಕ್ಷ್ಯ ತೆಗೆದುಕೊಂಡರು. ಎಲ್ಲ ಸಾಕ್ಷ್ಯಗಳನ್ನೂ ಕ್ರೋಢಿಕರಿಸಿ ಗವರ್ನರು ವಿಚಾರಣೆಗೆ ಒಂದು ಕಮಿಟಿಯನ್ನು ನೇಮಿಸಬೇಕೆಂದು ಕೇಳಿದರು. ಗವರ್ನರು ಇದಕ್ಕೆ ಒಪ್ಪಿದರು. ಈ ಕಮಿಟಿಯಲ್ಲಿ ಗಾಂಧೀಜಿಯವರೂ ಇದ್ದರು. ಇದರ ವಿಚಾರಣೆಯ ಪರಿಣಾಮವಾಗಿ ರೈತರಿಗೆ ಪ್ಲಾಂಟರುಗಳಿಂದ ಪರಿಹಾರ ದೊರೆಯಿತು. ರೈತರ ಇಷ್ಟಕ್ಕೆ ವಿರುದ್ಧವಾಗಿ ಅಲ್ಲಿಯ ಜಮೀನುಗಳಲ್ಲಿ ಇಂಡಿಗೋ ಬೆಳೆಯಕೂಡದೆಂಬ ಆಜ್ಞೆಯನ್ನೂ ಸರ್ಕಾರ ಹೊರಡಿಸಿತು. ಪ್ಲಾಂಟರುಗಳು ಇನ್ನು ಅಲ್ಲಿ ಇದ್ದುಕೊಂಡು ಹಿಂದಿನಂತೆ ರೈತರನ್ನು ಕೋಳ್ಳೆ ಹೊಡೆಯುವುದು ಸಾಧ್ಯವಿಲ್ಲವೆಂದು ತಿಳಿದು, ಆ ಜಾಗವನ್ನು ಬಿಟ್ಟು ಹೊರಟು ಹೋದರು. ಗಾಂಧೀಜಿಯವರ ಪ್ರಥಮ ವೈಯಕ್ತಿಕ ಸತ್ಯಾಗ್ರಹದಿಂದ ಸರ್ಕಾರ ಹೆಸರಿಕೊಂಡು ಗಾಂಧೀಜಿಗೆ ಅವರ ಇಷ್ಟದಂತೆ ರೈತರಿಗೆ ಪರಿಹಾರ ಮಾಡಲು ಅವಕಾಶವಾಯಿತು. ಗಾಂಧೀಜಿಯವರ ಚಂಪಾರಣ್ಯ ವಿಜಯದ ವಾರ್ತೆ ಇಡೀ ದೇಶದಲ್ಲಿ ಹರಡಿ, ಜನ ಸಂತೋಷಪಟ್ಟರು.

ಗಾಂಧೀಜಿಯವರ ಎರಡನೇ ಸತ್ಯಾಗ್ರಹ ಪ್ರಯೋಗ ೧೯೧೮ರಲ್ಲಿ ಗುಜರಾತಿನ ಖೈರಾ ಜಿಲ್ಲೆಯಲ್ಲಿ ನಡೆಯಿತು. ಇಲ್ಲಿ ರೈತರಿಗೆ ಬೆಳೆಯಾಗದಿದ್ದರೂ ಸರ್ಕಾರ ಬಲಾತ್ಕಾರದಿಂದ ಕಂದಾಯ ವಸೂಲು ಮಾಡಲು ಮೊದಲಿಟ್ಟಿತು.ರೈತರು ಗಾಂಧೀಜಿಯವರ ಸಹಾಯ ಕೇಳಿದರು. ವಲ್ಲಭಭಾಯ್ ಪಟೇಲರೂ ಗಾಂಧೀಜಿಯ ಸಹಾಯಕ್ಕೆ ಬಂದರು. ರೈತರಿಗೆ “ಕಂದಾಯ ಕೊಡಬೇಡಿ; ಬಂದ ಕಷ್ಟವನ್ನು ಎದುರಿಸಿ’ ಎಂದು ಗಾಂಧೀಜಿ ಬುದ್ಧಿವಾದ ಹೇಳಿದರು. ಜಮೀನಿನಲ್ಲಿ ಬೆಳೆದಿದ್ದ ಬೆಳೆಯನ್ನು ರೈತರು ಮುಟ್ಟಕೊಡದೆಂದು ಸರ್ಕಾರ ಆಜ್ಞೆ ಮಾಡಿತ್ತು. ಆದರೆ ಕೆಲವರು ಧೈರ್ಯ ಮಾಡಿ ಬೆಳೆಯನ್ನು ಕುಯ್ದರು. ಸರ್ಕಾರ ಅವರ ವಿಚಾರಣೆ ನಡೆಯಿಸಿ ಅವರನ್ನು ಜೈಲಿಗೆ ಹಾಕಿತು. ಈ ರೈತರ ಮಿತ್ರರು ಮತ್ತು ಬಂಧು ಬಳಗದವರು ಶಿಕ್ಷೆಯಾದ ರೈತರನ್ನೆಲ್ಲಾ ಗೌರವಿಸಿ, ಸತ್ಕರಿಸಿ, ಜೈಲಿನವರೆಗೆ ಹೋಗಿ, ಅವರನ್ನು ಅಲ್ಲಿ ಬೀಳ್ಕೊಟ್ಟರು. ಖೈರಾ ರೈತರು ಸರ್ಕಾರದ ಬೆದರಿಕೆಗೆ ಹೆದರಲಿಲ್ಲ.

ಸರ್ಕಾರ ಉಪ್ಪರಿಗೆಯಿಂದ ಕೆಳಗಿಳಿದು, ಬಡ ರೈತರೊಡನೆ ರಾಜಿ ಮಾಡಿಕೊಂಡು, ಅವರ ಕಂದಾಯವನ್ನೆಲ್ಲಾ ಮಾಫಿ ಮಾಡಿತು. ಧನಿಕರಾದ ರೈತರು ಮಾತ್ರ ಕಂದಾಯ ಕೊಡಬಹುದೆಂದು ಗಾಂಧೀಜಿ ತಿಳಿಸಿದರು. ಖೈರಾ ಸತ್ಯಾಗ್ರಹದ ವಿಜಯವೂ ಗಾಂಧೀಜಿಯ ಕೀರ್ತಿಯನ್ನು ಹೆಚ್ಚಿಸಿತು.

ಅಹಮದಾಬಾದಿನಲ್ಲಿಯೇ ೧೯೧೮ರಲ್ಲಿ ಸತ್ಯಾಗ್ರಹ ಪ್ರಯೋಗದ ಅವಕಾಶ ದೊರೆಯಿತು. ಇಲ್ಲಿನ ಒಂದು ಬಟ್ಟೆ ಗಿರಣಿಯಲ್ಲಿ ಮಾಲಿಕರಿಗೂ ಕೆಲಸಗಾರರಿಗೂ ವೈಮನಸ್ಯ ಉಂಟಾಯಿತು. ವೈಮನಸ್ಯದ ಕಾರಣ ಮಜೂರಿಯದು. ಗಿರಣಿ ಕೆಲಸಗಾರರು ಮಜೂರಿಯನ್ನು ಹೆಚ್ಚಿಸಬೇಕೆಂದು ಕೇಳಿಕೊಂಡರು. ಕೆಲಸಗಾರರ ಪರವಾಗಿ ಅನಸೂಯ ಬಹಿನ್ ಸಾರಾಭಾಯಿ ಎಂಬ ಶ್ರೀಮಂತ ಮಹಿಳೆ ಕೆಲಸ ಮಾಡುತ್ತಿದ್ದರು. ಇವರು ಗಾಂಧೀಜಿಯ ಸಹಾಯ ಕೇಳಿದರು. ಗಾಂಧೀಜಿ ಮಧ್ಯಸ್ತಗಾರರಾಗಿ ಎಲ್ಲ ಸಂಗತಿಗಳನ್ನೂ ಪರಿಶೀಲಿಸಿ, ಗಿರಣಿ ಮಾಲಿಕರು ಶೇಕಡ ೩೫ರಷ್ಟು ಮಜೂರಿಯನ್ನು ಹೆಚ್ಚಿಸಬೇಕೆಂದು ತೀರ್ಪಿತ್ತರು. ಕೂಲಿಗಾರರು ಇನ್ನೂ ಹೆಚ್ಚು ಅಪೇಕ್ಷಿಸಿದರು.ಗಿರಣಿ ಮಾಲೀಕರು ಶೇಕಡ ೨೦ಕ್ಕಿಂತ ಜಾಸ್ತಿ ಕೊಡಲು ಆಗುವುದಿಲ್ಲವೆಂದು ೧೯೧೮ನೇ ಫೆಬ್ರವರಿ ೨೨ರಿಂದ ಲಾಕ್ ಔಟ್ ಮಾಡಿದರು. ಗಾಂಧೀಜಿ ಕೆಲಸಗಾರರನ್ನೆಲ್ಲಾ ಒಂದು ಮರದ ಕೆಳಗೆ ಕರೆದು ಕೂಡಿಸಿ, ತಮ್ಮ ಕೋರಿಕೆ ಈಡೇರುವವರಿಗೆ ಶಾಂತರಾಗಬೇಕೆಂದೂ ಕೆಲಸಕ್ಕೆ ಹೋಗಬಾರದೆಂದೂ ಅವರಿಗೆ ಬೋಧಿಸಿದರು. ೧೫ದಿನ ಕೆಲಸಗಾರರು ಶಾಂತವಾಗಿಯೇ ಇದ್ದರು. ಹಸಿದ ಹೊಟ್ಟೆ ಕೇಳುತ್ತದೆಯೇ? ಕೆಲವು ಕೆಲಸಗಾರರು ಒಳಗೊಳಗೆ ಗೊಣಗಿಕೊಳ್ಳಲು ಆರಂಭಿಸಿದರು. “ಗಾಂಧೀಜಿ ನಮ್ಮಿಂದ ಪ್ರತಿಜ್ಞೆ ತೆಗೆದುಕೊಂಡರು. ನಮ್ಮ ಮಕ್ಕಳಿಗೆ ಆಹಾರ ಕೊಡುವವರಾರು?” ಎಂದು ಕೇಳಲಾರಂಭಿಸಿದರು. ಗಾಂಧೀಜಿ “ನಿಮ್ಮ ಕೂಡ ನಾನೂ ಕಷ್ಟಪಡುತ್ತೇನೆ. ನಮ್ಮ ಕೋರಿಕೆ ಈಡೇರುವವರಿಗೆ ನಾನೂ ನಿರಶನ ವ್ರತ ತೆಗೆದುಕೊಳ್ಳುತ್ತೇನೆ” ಎಂದು ಹೇಳಿ ಉಪವಾಸವನ್ನಾರಂಭಿಸಿದರು. ಕೆಲಸಗಾರರಿಗೆ ಜ್ಞಾನೋದಯವಾಯಿತು. ಗಾಂಧೀಜಿ ಬಳಿ ಬಂದು “ನೀವು ಉಪವಾಸ ಮಾಡಬೇಡಿ” ಎಂದು ಕೇಳಿಕೊಂಡರು. ಆದರೆ ಗಾಂಧೀಜಿ ಒಪ್ಪಲಿಲ್ಲ. ಅವರ ಉಪವಾಸ ನಾಲ್ಕು ದಿನ ನಡೆಯಿತು. ಮಾಲಿಕರು ಇಳಿದರು: ಗಾಂಧೀಜಿ ಸೂಚಿಸಿದ್ದಂತೆ ಶೇಕಡಾ ೩೫ರಷ್ಟು ಮಜೂರಿ ಏರಿಸಿದರು. ಗಾಂಧೀಜಿ ಉಪವಾಸ ನಿಲ್ಲಿಸಿದರು. ಪರಿಸ್ಥಿತಿ ಶಾಂತವಾಯಿತು.