ಗಾಂಧೀಜಿಯ ಕೀರ್ತಿ ಇನ್ನಷ್ಟು ಹೆಚ್ಚಿತು. ಗಾಂಧೀಜಿ ದೃಢಮನಸ್ಸಿನವರು. ಹಿಡಿದ ಕೆಲಸವನ್ನು ಮಧ್ಯೆ ಬಿಡುವವರಲ್ಲ. ಎಷ್ಟೇ ಕಷ್ಟವಾದರೂ ಅದನ್ನು ಸತ್ಯ ಮತ್ತು ಅಹಿಂಸೆಯಿಂದ ಸಾಧಿಸುವವರು ಎಂಬ ನಂಬಿಕೆ ದೇಶದಲ್ಲೆಲ್ಲಾ ಹರಡಿತು. ಸಂಕಟ ಬಂದರೆ ವೆಂಕಟರಮಣ ಎಂಬಂತೆ, ಎಲ್ಲಿಯಾರಿಗೆ ಕಷ್ಟ ಒದಗಿದರೂ ಅವರು ಗಾಂಧೀಜಿಗೆ ಬರೆಯುತ್ತಿದ್ದರು. ಇವರನ್ನು ನೋಡಬೇಕು, ಇವರ ಭಾಷಣ ಕೇಳಬೇಕು ಎಂಬ ಕುತೂಹಲ ದೇಶದ ಎಲ್ಲ ಕಡೆಗಳಲ್ಲೂ ಉಂಟಾಯಿತು.

ಗಾಂಧೀಜಿ ೧೯೧೯ರಲ್ಲಿ ಭಾರತೀಯ ರಾಜಕೀಯ ರಂಗವನ್ನು ಪ್ರವೇಶಿಸುವುದಕ್ಕೆ ರೌಲೆಟ್ ಯ್ಯಾಕ್ಟೇ ಕಾರಣ. ಗಾಂಧೀಜಿ ಪ್ರಾರಂಭದಲ್ಲೇ, ಈ ಕಾನೂನು ಆಗುವುದೆಂದು ತಿಳಿದಾಗಲೇ, ಈ ಕಾನೂನನ್ನು ರಚಿಸಬೇಡಿ; ಅದರ ಕೈಬಿಡಿ; ಇಲ್ಲದಿದ್ದರೆ ಭಾರತದಲ್ಲಿ ಅಲ್ಲೋಲ – ಕಲ್ಲೋಲ ಸ್ಥಿತಿಯುಂಟಾಗುವುದು ಎಂದು ಸರ್ಕಾರವನ್ನು ಎಚ್ಚರಿಸಿದರು. ರೌಲೆಟ್ ಸಮಿತಿ ವರದಿ ೧೯೧೯ನೇ ಫೆಬ್ರವರಿ ೬ರಲ್ಲಿ ಪ್ರಕಟವಾಯಿತು. ರೌಲೆಟ್ ಮಸೂದೆಗಳನ್ನು ಇಂಪೀರಿಯಲ್ ಲೆಜಿಸ್ಲೆಟಿವ್ ಕೌನ್ಸಿಲಿನಲ್ಲಿ ಹಾಜರ್ಪಡಿಸಿದರು. ಈ ಮಧ್ಯೆ ಈ ಮಸೂದೆಗಳ ಕಲಮುಗಳನ್ನೆಲ್ಲಾ ಚೆನ್ನಾಗಿ ಓದಿದ್ದ ಗಾಂಧೀಜಿ ಸರ್ಕಾರವನ್ನು ಪುನಃ ಎಚ್ಚರಿಸಿದರು. ಕಾನೂನಾದರೆ ತಾವು ಸತ್ಯಾಗ್ರಹ ಚಳುವಳಿಲಯನ್ನು ಆರಂಭಿಸುವುದಾಗಿ ಫೆಬ್ರವರಿ ೨೪ರಲ್ಲಿ ಕಾಗದ ಬರೆದರು. ಆ ದಿವಸವೇ ಸತ್ಯಾಗ್ರಹಾಶ್ರಮದಲ್ಲಿ ಒಂದು ಪುಟ್ಟ ಸಮ್ಮೇಳ ನಡೆಯಿತು. ಆ ಸಭೆಯಲ್ಲಿ ಗಾಂಧೀಜಿ ವಲ್ಲಭಭಾಯಿ ಪಟೇಲ್, ಸರೋಜನಿ ನಾಯಿಡು, ಬಿ.ಜಿ. ಹಾರ್ನಿಮನ್, ಉಮಾರ್ ಸೊಬಾನಿ, ಶಂಕರ್‌ಲಾಲ್ ಬ್ಯಾಂಕರ್, ಅನಸೂಯ ಬಹಿನ್ ಇದ್ದರು. ಇವರೆಲ್ಲರೂ ಸತ್ಯಾಗ್ರಹದ ಪ್ರತಿಜ್ಞೆಯನ್ನು ತೆಗೆದುಕೊಂಡರು. ಶೀಘ್ರದಲ್ಲಿಯೇ ಬೊಂಬಾಯಿನಲ್ಲಿ ಒಂದು ಸತ್ಯಾಗ್ರಹ ಸಭೆ ಸ್ಥಾಪನೆಯಾಯಿತು. ಸರೋಜಿನಿ ನಾಯಿಡು, ಹಾರ್ನಿಮನ್, ಜಮ್ನಾ ದಾಸ್ ದ್ವಾರಕಾದಾಸ್, ಶಂಕರಲಾಲ್ ಬ್ಯಾಂಕರ್‌, ವಲ್ಲಭಭಾಯಿ ಪಟೇಲ್ ಮುಂತಾದವರು ಪ್ರಾಥಮಿಕ ಸದಸ್ಯರಾದರು. ೧,೨೮೦ ಜನರು ಈ ಸಭೆಗೆ ಸೇರುವುದಾಗಿ ರುಜು ಮಾಡಿದರು ಮತ್ತು ಸರ್ಕಾರದಿಂದ ಪ್ರತಿಬಂಧಕವಾಗಿದ್ದ ಕೆಲವು ಗ್ರಂಥಗಳನ್ನು ಮಾರಿ ಸತ್ಯಾಗ್ರಹವನ್ನು ಆರಂಭಿಸುವುದಾಗಿ ತೀರ್ಮಾನಿಸಿದರು. ಆರಿಸಿದ ಪುಸ್ತಕಗಳಿವು: – ಗಾಂಧೀಜಿ ಬರೆದ “ದಿ ಹಿಂದ್ ಸ್ವರಾಜ್”, ಸರ್ವೋದಯ (ರಸ್ಕಿನ್ನಿನ ಆನ್‌ಟು ದಿಸ್ ಲಾಸ್ಟ್ – ಗುಜರಾತಿ ಭಾಷಾಂತರ) ಸತ್ಯಾಗ್ರಹಿಯ ಕಥೆ, ಪ್ಲೆಟೊವಿನ “ಸಾಕ್ರೆಟೀಸಿನ ವಿಚಾರಣೆ ಮತ್ತು ಮರಣ” ಎಂಬ ಗುಜರಾತಿ ಅನುವಾದ ಗ್ರಂಥ ಮತ್ತು “ಮುಸ್ತಫ ಕೆಮಾಲ್ ಪಾಷಾನ ಜೀವನ ಚರಿತ್ರೆ ಮತ್ತು ಭಾಷಣಗಳು.

ಫೆಬ್ರವರಿ ೨೮ ರಲ್ಲಿ ಬೊಂಬಾಯಿನಲ್ಲಿ ಬಹಿರಂಗ ಸಭೆ ನಡೆಸಿ, ಗಾಂಧೀಜಿ ಸತ್ಯಾಗ್ರಹದ ವಿಷಯವನ್ನು ಘೋಷಿಸಿದರು. ಈ ಮಧ್ಯೆ ರೌಲೆಟ್ ಮಸೂದೆಯ ಎರಡನೇ ಭಾಗವನ್ನು ಮುಟ್ಟದೆ, ಕ್ರಿಮಿನಲ್ ಲಾ ಅಮೆಂಡ್‌ಮೆಂಟ್ ಆಕ್ಟ್ ಎಂಬ ಹೆಸರಿನಿಂದ ಮೊದಲನೇ ಮಸೂದೆಯನ್ನು ಸರ್ಕಾರ ಪಾಸು ಮಾಡಿಸಿತು.

ತಮ್ಮ ಆರೋಗ್ಯ ಇನ್ನೂ ಕುದರದಿದ್ದರೂ, ಗಾಂಧೀಜಿ ಊರಿಂದ ಊರಿಗೆ ಪ್ರಯಾಣ ಮಾಡಿ, ರೌಲೆಟ್ ಆಕ್ಟಿಗೆ ವಿರುದ್ಧ ಸತ್ಯಾಗ್ರಹ ಮಾಡಬೇಕೆಂದು ಜನರಿಗೆ ಬೋಧಿಸಿದರು. ಮದ್ರಾಸಿಗೆ ಬರಬೇಕೆಂದು ಗಾಂಧೀಜಿಯವರಿಗೆ ಆಹ್ವಾನ ಬಂದಿತು. ಮಹದೇವ್ ದೇಸಾಯಿಯವರ ಕೂಡ ಮದ್ರಾಸಿಗೆ ಬಂದರು. ಇಲ್ಲಿ ಇವರಿಗೆ ಭವ್ಯಸ್ವಾಗತ ದೊರೆಯಿತು. ಆಗ ತಾನೇ ಸೇಲಮಿನಿಂದ ಮದ್ರಾಸಿಗೆ ಬಂದು ನೆಲಸಿದ್ದ ವಕೀಲ ಸಿ. ರಾಜಗೋಪಾಲಚಾರಿ ಯವರ ಮನೆಯಲ್ಲಿ ಇಳಿದುಕೊಂಡರು. “ಹಿಂದೂ” ಪತ್ರಿಕೆಯ ಸಂಪಾದಕರಾದ ಎಸ್. ಕಸ್ತೂರಿ ರಂಗಯ್ಯಂಗಾರ್ಯರು ಪ್ರಮುಖ ಪಾತ್ರವಹಿಸಿ ಕೆಲವು ಮುಖಂಡರನ್ನು ಕರೆಸಿ ಗಾಂಧೀಜಿಯವರೊಡನೆ ಚರ್ಚೆ ಮಾಡಿದರು. ಸರ್ಕಾರವನ್ನು ಪ್ರತಿಭಟಿಸಲು ಸತ್ಯಾಗ್ರವಲ್ಲದೆ ಇನ್ನೇನಾದರೂ ಮಾರ್ಗವಿದೆಯೇ ಎಂದು ಆಲೋಚಿಸಿದರು. ಯಾವ ಮಾರ್ಗವೂ ತೋಚಲಿಲ್ಲ. ಸೇಲಮಿನ ವಿಜಯರಾಘವಾಚಾರಿಯವರು ಸತ್ಯಾಗ್ರಹ ತತ್ವದ ಸಮಸ್ತ ಅಂಶಗಳನ್ನೂ ಒಳಗೊಂಡ ಒಂದು ಕೈಪಿಡಿಯನ್ನು ತಯಾರಿಸಬೇಕೆಂದು ಗಾಂದೀಜಿಯವರಿಗೆ ಸಲಹೆ ಮಾಡಿದರು. ಇದು ತಮ್ಮ ಶಕ್ತಿಗೆ ಆಗ ಮೀರಿದ ಕೆಲಸವೆಂದು ಗಾಂಧೀಜಿ ಉತ್ತರವಿತ್ತರು.

ಈ ಚರ್ಚೆ ನಡೆಯುತ್ತಿದ್ದಾಗ, ಇಂಡಿಯಾ ಸರ್ಕಾರ ರೌಲೆಟ್ ಮಸೂದೆಯ ಎರಡನೆಯ ಭಾಗವನ್ನು ಕಾನೂನನ್ನಾಗಿ ಮಾಡಿ, ೧೯೧೮ ನೇ ಮಾರ್ಚ್ ೧೮ರ ವಿಶೇಷ ಗೆಜಿಟಿನಲ್ಲಿ ಪ್ರಕಟಿಸಿತು.

ಆ ರಾತ್ರಿ ಗಾಂಧೀಜಿ ಏನು ಮಾಡಬೇಕು ಎಂಬ ಯೋಚನೆಯಲ್ಲಿಯೇ ಮಗ್ನರಾಗಿದ್ದಾಗ ಅವರಿಗೆ ನಿದ್ರೆ ಬಂದಿತು. ಮರುದಿನ ಮಾಮೂಲಾಗಿ ಎಳುವುದಕ್ಕೆ ಮುಂಚೆಯೇ ಅವರಿಗೆ ಎಚ್ಚರವಾಯಿತು. ಆದರೆ ಅವರು ಹಾಸಿಗೆಯಿಂದ ಏಳಲಿಲ್ಲ. ನಿದ್ರೆಯ ಮೊಬ್ಬಿನಲ್ಲಿದ್ದಾಗಲೇ ಅವರಿಗೆ ಒಂದು ಆಲೋಚನೆ ಹೊಳೆಯಿತು. ಹಾಸಿಗೆಯಿಂದ ಎದ್ದ ಮೇಲೆ, ಅದನ್ನು ರಾಜಗೋಪಾಲಾಚಾರಿಯವರಿಗೆ ತಿಳಿಸಿದರು. “ಈ ಆಲೋಚನೆ ನನಗೆ ಮುಂಜಾನೆ ಸ್ವಪ್ನದಲ್ಲುಂಟಾಯಿತು. ಇಡೀ ದೇಶಕ್ಕೆ ಒಂದು ದೊಡ್ಡ ಹರತಾಳವನ್ನಾಚರಿಸಿ ಎಂದು ನಾವು ಕರೆಯನ್ನು ಕೊಡಬೇಕು. ಸತ್ಯಾಗ್ರಹವೆಂದರೆ ಅದೊಂದು ಆತ್ಮಶುದ್ಧಿ ನಮ್ಮದು ಪವಿತ್ರವಾದ ಸಮರ. ನಾವು ಅದನ್ನು ಆರಂಭಿಸುವ ಮುನ್ನ ಒಂದು ಆತ್ಮಶುದ್ಧಿಯ ಕಾರ್ಯ ನಡೆಯಬೇಕು. ಭಾರತೀಯ ಜನವೆಲ್ಲ ಆ ಒಂದು ದಿನ ತಮ್ಮ ವ್ಯವಹಾರಗಳಿಂದ ವಿರಮಸಿ, ಅದನ್ನು ಉಪವಾಸದ ಮತ್ತು ಪ್ರಾರ್ಥನೆಯ ದಿನವನ್ನಾಗಿ ಆಚರಿಸಬೇಕು. ೨೪ ಗಂಟೆಗಿಂತ ಹೆಚ್ಚು ಉಪವಾಸ ಬೇಡ. ಬಹುಶಃ ಭಾರತ ದೇಶದ ಜನತೆಯೆಲ್ಲಾ ಇಂಥಾ ಹರತಾಳವನ್ನು ಆಚರಿಸುವುದು ಕಷ್ಷವಲ್ಲ”.

ಹಿಂದಿನ ದಿವಸ ಗಾಂಧೀಜಿ ಮದ್ರಾಸ್ ಸಮುದ್ರ ತೀರದಲ್ಲಿ ಒಂದು ಭಾರಿ ಸಭೆಯಲ್ಲಿ ಮಾತನಾಡಿದರು. ‘ಸತ್ಯಾಗ್ರಹ ಪ್ರತಿಜ್ಞೆಗೆ ರುಜು ಹಾಕುವವರು ಆ ಪ್ರತಿಜ್ಞೆಯ ಭಂಗ ಮಾಡಬಾರದು’ ಎಂದು ಎಚ್ಚರಿಸಿದರು. ಗಾಂಧೀಜಿ ಸತ್ಯಾಗ್ರಹದ ದಿನ ಯಾವ ರೀತಿಯಾಗಿ ಜನರು ನಡೆದುಕೊಳ್ಳಬೇಕು ಎಂಬುದರ ಬಗ್ಗೆ ದೀರ್ಘವಾಗಿ ಆಲೋಚಿಸಿ, ಆದರಿಂದ ಸರ್ಕಾರದ ಮೇಲೆ ಸರಿ ಯಾವ ಪರಿಣಾಮವಾಗಬೇಕೆಂಬ ಉದ್ದೇಶದಿಂದ, ಒಂದು ಒಕ್ಕಣೆಯನ್ನು ತಯಾರು ಮಾಡಿದರು. ಅದನ್ನು ರಾಜಗೋಪಾಲಾಚಾರಿಯವರಿಗೆ ತೋರಿಸಿ ಅವರಿಂದ ಒಪ್ಪಿಗೆ ಪಡೆದು, ಮಾರ್ಚಿ ೨೩ ರಂದು ಪ್ರಜೆಗಳಿಗೆ ಸಂದೇಶ ರೂಪದಲ್ಲಿ ಅದನ್ನು ಕೊಟ್ಟು, ಹರತಾಳದ ದಿನವನ್ನು ಪವಿತ್ರವಾಗಿ ಶುದ್ಧಮನಸ್ಸಿನಿಂದ ಆಚರಿಸಬೇಕು ಎಂದು ಅವರನ್ನು ಪ್ರಾರ್ಥಿಸಿದರು; ಆ ದಿನವನ್ನು ಉಪವಾಸದ ದಿನವನ್ನಾಗಿಯೂ, ಪ್ರಾರ್ಥನೆಯ ದಿನವನ್ನಾಗಿಯೂ ಭಾವಿಸಬೇಕು ಎಂದು ಅವರಿಗೆ ತಿಳಿಸಿದರು. ಗಾಂಧೀಜಿ “ಸತ್ಯಾಗ್ರಹ ಧಾರ್ಮಿಕ ಚಳುವಳಿ; ಅದು ಆತ್ಮ ಶುದ್ಧಿಯ ತಪಸ್ಸಿನ ಭಾವನೆಯಿಂದ ಕೂಡಿದ್ದು; ಸ್ವತಃ ಕಷ್ಟ ಪಟ್ಟು ತಮಗೆ ಆಗಿರುವ ಕೊರತೆಗಳನ್ನೂ ತೊಂದರೆಗಳನ್ನೂ ನಿವಾರಿಸಿಕೊಳ್ಳುವ ಉಪಾಯ. ರೌಲೆಟ್ ಆಕ್ಟಿನ ಎರಡನೆ ಮಸೂದೆಗೆ ವೈಸರಾಯರ ಅನುಮತಿ ದೊರೆತ ಮೇಲೆ ಬರುವ ಎರಡನೇ ಭಾನುವಾರವನ್ನು ನಾವು ಅಖಿಲಭಾರತ ಹರತಾಳ ದಿನವನ್ನಾಗಿ ಆಚರಿಸಬೇಕು” ಎಂದು ಆದೇಶವಿತ್ತರು.

ಮೊದಲು ಮಾರ್ಚ್ ೩೦ ಅಖಿಲಭಾರತ ಹರತಾಳ ದಿನವನ್ನಾಗಿ ನಿರ್ಧರಿಸಲಾಗಿತ್ತು. ಆ ಮೇಲೆ ಅದನ್ನು ಏಪ್ರಿಲ್ ೬ನೇ ತಾರೀಖಿಗೆ ಬದಲಾಯಿಸಲಾಯಿತು. ಆದರೆ ಮಾರ್ಚ್ ೩೦ ನೇ ತಾರೀಖಿನಲ್ಲೇ ದೆಹಲಿ ನಗರ ಅಖಿಲ ಭಾರತ ಹರತಾಳ ದಿನವನ್ನಾಚರಿಸಿತು. ಆ ದಿನ ಸ್ವಾಮಿ ಶ್ರದ್ಧಾನಂದರು. ಭಾರತ ಹರತಾಳ ದಿನವನ್ನಾಚರಿಸಿತು. ಆ ದಿನ ಸ್ವಾಮಿ  ಶ್ರದ್ಧಾನಂದರು ಪ್ರಖ್ಯಾತ ಜುಮ್ಮಾ ಮಸೀದಿಯಲ್ಲಿ ಸೇರಿದ್ದ ಭಾರಿ ಹಿಂದೂ – ಮುಸಲ್ಮಾನ್ ಸಭೆಯಲ್ಲಿ ಭಾಷಣ ಮಾಡಿದರು. ಪ್ರಚಂಡ ಮೆರವಣಿಗೆ ನಡೆಯಿತು. ಪೊಲೀಸರೂ, ಮಿಲಿಟರಿಯವರೂ ಮೆರವಣಿಗೆಯನ್ನು ಚದುರಿಸಲು ಗುಂಡು ಹಾರಿಸಿ, ಕೆಲವರನ್ನು ಕೊಂದರು. ಸ್ವಾಮಿ ಶ್ರದ್ಧಾನಂದರು ಚಾಂದ್‌ನಿ ಚೌಕ್ ಹತ್ತಿರ ಮೆರವಣಿಗೆಯ ಮುಂದೆ ನಡೆದುಕೊಂಡು ಇವರ ಮೇಲೆ ನುಗ್ಗಿದರು. ಶ್ರದ್ಧಾನಂದರು ಆ ಸೈನಿಕರಿಗೆ ತಮ್ಮ ಎದೆಯನ್ನು ತೆರೆದು ತೋರಿಸಿ “ಹೊಡೆಯಿರಿ” ಎಂದು ಕೂಗಿದರು. ಸೈನಿಕರು ಅಪ್ರತಿಭರಾದರು. ಈ ಸಂಗತಿ ಇಡೀ ದೇಶದಲ್ಲಿ ವಿದ್ಯುತ್ತಿನಂತೆ ಹರಡಿತು. ಜನರು ಚಕಿತರಾದರು. ವೀರ ಶ್ರದ್ಧಾನಂದರ ಬಗ್ಗೆ ಗಾಂಧೀಜಿ ಬಹಳ ಸಂತೋಷಪಟ್ಟು, ಅವರಿಗೆ ಅಭಿನಂದನಾ ಪತ್ರಕಳುಹಿಸಿದರು. ಈ ಘಟನೆಗಳಾದ ಮೇಲೆ ಗಾಂಧೀಜಿಗೆ ದೆಹಲಿಯಿಂದ ಕರೆಬಂತು. ಬೊಂಬಾಯಿನಲ್ಲಿ ೬ನೇ ಏಪ್ರಿಲ್ ದಿನಾಚರಣೆಯನ್ನು ಮುಗಿಸಿಕೊಂಡು ದೆಹಲಿಗೆ ಬರುವುದಾಗಿ ಉತ್ತರವಿತ್ತರು.

ಏಪ್ರಿಲ್ ೬ರಂದು ಬೆಳಿಗ್ಗೆ ಬೊಂಬಾಯಿನಲ್ಲಿ ಗಾಂಧೀಜಿ ಒಂದು ಭಾರಿ ಮೆರವಣಿಗೆಯೊಡನೆ ಚೌಪಾತಿಗೆ ಬಂದರು. ಅಲ್ಲಿ ಸಮುದ್ರದಲ್ಲಿ ಸ್ನಾನವಾದ ಅನಂತರ ಮೆರವಣಿಗೆಯಲ್ಲೇ ಹಿಂತಿರುಗಿದರು. ಈ ಮೆರವಣಿಗೆಯಲ್ಲಿ ಸಾವಿರಾರು ಸ್ತ್ರೀಯರೂ, ಮಕ್ಕಳೂ ಸೇರಿದ್ದರು. ಗಾಂಧೀಜಿ ಬೊಂಬಾಯಿನ ನಾನಾ ಪ್ರದೇಶಗಳಲ್ಲಿ ಭಾಷಣ ಮಾಡಿ ದೆಹಲಿಯಲ್ಲಿ ಆದೆ ಸಂಗತಿಗಳನ್ನು ತಿಳಿಸಿ, ಶ್ರದ್ಧಾನಂದರ ಧೈರ್ಯವನ್ನು ಕೊಂಡಾಡಿದರು. ಅದೇ ಸಾಯಂಕಾಲ ಸರ್ಕಾರ ನಿಷೇಧಿಸಿದ್ದ ಪುಸ್ತಕಗಳನ್ನು ಗಾಂಧೀಜಿ, ಸರೋಜಿನಿ ನಾಯಿಡು ಮತ್ತು ಇತರರು ಮಾರಿದರು. ಸತ್ಯಾಗ್ರಹಕ್ಕಾಗಿ ಮಾರಿದ ಪ್ರತಿಯೊಂದು ಪುಸ್ತಕದ ಮೇಲೂ ಮಾರುವ ಸತ್ಯಾಗ್ರಹಿಯ ಹೆಸರಿರಬೇಕು. ಪೊಲೀಸರು ಮಾರಿದ ಪುಸ್ತಕಗಳನ್ನು ಜಫ್ತಿ ಮಾಡಿ ಮಾರಿದವರನ್ನು ಶಿಕ್ಷೆಗೆ ಗುರಿಮಾಡಬಹುದು. ಆಗ ಈ ಹೆಸರುಗಳು ಅವರಿಗೆ ತಿಳಿದರೆ ಅವರನ್ನು ದಸ್ತಗಿರಿ ಮಾಡಿ ಶಿಕ್ಷೆಗೆ ಗುರಿಮಾಡುವಂತಿರಬೇಕು ಎಂಬುದು ಗಾಂಧೀಜಿಯ ಅಭಿಪ್ರಾಯವಾಗಿತ್ತು. ಬೊಂಬಾಯಿನಲ್ಲಿ ಹರತಾಳ ಯಾವ ದುರ್ಘಟನೆಯೂ ಇಲ್ಲದೆ ಶಾಂತವಾಗಿ ನಡೆದುಹೋಯಿತು.

ಮಾರ್ಚ್ ೩೦ನೇ ತಾರೀಖಿನಲ್ಲಿ ಅಮೃತಸರದಲ್ಲಿ ಹರತಾಳ ಶಾಂತವಾಗಿ ನಡೆಯಿತು. ಆದರೆ ಪಂಜಾಬಿನ ಲೆಫ್ಟಿನೆಂಟ್ ಗೌರ್ನರ್ ಸರ್ ಮೈಕೇಲ್ ಓಡ್ವಯರ್ ಕಾಂಗ್ರೆಸ್ ಬೆಳೆಯದಂತೆ ಸಸಿಯಲ್ಲಿಯೇ ಅದನ್ನು ಜಿಗುಟಿಬಿಡಬೇಕೆಂದು ಉಗ್ರಕ್ರಮಗಳನ್ನು ಕೈಗೊಂಡನು. ಏಪ್ರಿಲ್ ೯ನೇ ತಾರೀಖು ರಾಮನವಮಿ ಉತ್ಸವ. ಹಿಂದುಗಳು ಮುಸ್ಲಿಮರು ಸೇರಿ ಶಾಂತವಾಗಿ ಭಾರಿ ಮೆರವಣಿಗೆ ನಡೆಸಿದರು. ರಾಮನವಮಿ ಉತ್ಸವದ ಮೆರವಣಿಗೆಯಲ್ಲಿ ಮುಸ್ಲಿಮರು ಭಾಗಿಯಾದುದನ್ನು ನೋಡಿ ಸರ್ಕಾರಕ್ಕೆ ಅಸಹನೆಯುಂಟಾಯಿತು. ಮಾರನೇ ದಿನ ಡಾ. ಸತ್ಯಾಪಾಲ್ ಮತ್ತು ಡಾ. ಕಿಚ್ಲೂ ಅವರನ್ನು ಸರ್ಕಾರ ದಸ್ತಗಿರಿ ಮಾಡಿ ಎಲ್ಲಿಗೋ ಒಯ್ದಿತು. ೧೦ ನೇ ತಾರೀಖು ಮಧ್ಯಾಹ್ನ ಮುಖಂಡರು ದಸ್ತಗಿರಿಯಾದ ವಿಷಯ ಊರಿನಲ್ಲಿ ಮಿಂಚಿನಂತೆ ಹರಡಿತು.ಸಿಟ್ಟಿಗೆದ್ದ ಜನ ಡೆಪ್ಯೂಟಿ ಕಮಿಷನರ ಮನೆಗೆ ಮೆರವಣಿಗೆಯಲ್ಲಿ ಹೊರಟರು. ಆ ಮುಖಂಡರನ್ನು ಬಿಟ್ಟುಬಿಡಿ ಎಂದು ಕೇಳಿಕೊಳ್ಳಬೇಕೆಂದು ಇದ್ದರು. ರೈಲ್ವೆ ಲೆವೆಲ್‌ಕ್ರಾಸಿನ ಹತ್ತಿರ ಮೆರವಣಿಗೆಯನ್ನು ಪೊಲೀಸರು ತಡೆದು, ನಿರಾಯುಧರಾದ ಜನರ ಮೇಲೆ ಎರಡು ಸಾರಿ ಗುಂಡು ಹಾರಿಸಿ, ಅನೇಕರನ್ನು ಕೊಂದರು. ಮೆರವಣಿಗೆಯಲ್ಲಿದ್ದ ಜನ ಸಿಟ್ಟಿಗೆದ್ದು, ಕಚೇರಿಯಲ್ಲಿ ಕುಳಿತು, ಕೆಲಸ ಮಾಡುತ್ತಿದ್ದ ಐದಾರು ಇಂಗ್ಲಿಷಿನವರನ್ನು ಕೊಂದರು; ಬ್ಯಾಂಕ್ ಕಟ್ಟಡಗಳನ್ನು, ಟೌನ್ ಹಾಲ್ ಮತ್ತು ಇತರ ಸಾರ್ವಜನಿಕ ಕಟ್ಟಡಗಳನ್ನು ಸುಟ್ಟು ಹಾಕಿದರು; ಟೆಲಿಗ್ರಾಫ್ ತಂತಿಗಳನ್ನು ಕಡಿದು ಹಾಕಿದರು. ಇಷ್ಟರಲ್ಲಿ ಮಿಲಿಟರಿ ಬಂದು ಜನರನ್ನು ಚದುರಿಸಿ, ಶಾಂತಿಸ್ಥಾಪನೆ ಮಾಡಿತು. ಏಪ್ರಿಲ್ ೧೧ರಲ್ಲಿ ಒಂದು ಭಾರಿ ಸ್ಮಶಾನಯಾತ್ರೆ ಶಾಂತವಾಗಿ ನಡೆಯಿತು. ಅದೇ ಸಾಯಂಕಾಲ ಜನರಲ್ ಡಯರ್ ಅಮೃತಸರಕ್ಕೆ ಬಂದು, ತಾವೇ ಮೇಲ್ವಿಚಾರಣೆಯನ್ನು ವಹಿಸಿಕೊಂಡರು. ಮಾರನೆಯ ದಿನ ಅನೇಕ ದಸ್ತಗಿರಿಗಳಾದುವು. ಅಮೃತಸರದಲ್ಲಿ ಜನರಗುಂಪು ಸೇರಕೂಡದು ಮತ್ತು ಸಭೆಗಳಾಗಕೂಡದು ಎಂಬ ಆಜ್ಞೆಯನ್ನು ಸರ್ಕಾರ ಹೊರಡಿಸಿತು. ಇದು ಇಂಗ್ಲಿಷ್‌ಭಾಷೆಯಲ್ಲಿ ಇದ್ದುದರಿಂದ, ಊರಿನಲ್ಲಿ ಅನೇಕರಿಗೆ ಸಭೆಗಳನ್ನು ನಿಷೇಧಿಸಲಾಗಿದ್ದ ವಿಷಯ ಗೊತ್ತಾಗಲಿಲ್ಲ. ಆದ್ದರಿಂದ ೧೩ನೇ ತಾರೀಖು ಸಾಯಂಕಾಲ ಜಲಿಯನ್‌ವಾಲಾಬಾಗಿನಲ್ಲಿ ಸಾರ್ವಜನಿಕ ಸಭೆ ನಡೆಯುವುದೆಂದು ಜನರು ಪ್ರಕಟಿಸಿದರು. ಸಭೆಯನ್ನು ನಿಷೇಧಿಸಿದೆ ಎಂದು ವ್ಯವಸ್ಥಾಪಕರು ಯಾರೂ ತಿಳಿಸಲಿಲ್ಲ. ಅಲ್ಲಿ ಯಾವ ಸಭೆಯೂ ನಡೆಯಕೂಡದೆಂದು ಯಾವ ನೋಟೀಸನ್ನಾಗಲೀ ಜಲಿಯನ್ ವಾಲಾಬಾಗ್‌ನಲ್ಲಿ ಅಂಟಿಸಿರಲಿಲ್ಲ. ಅಲ್ಲಿ ಸಭೆ ಸೇರಿತು. ಸುಮಾರು ೬,೦೦೦ ಜನ ನೆರೆದಿದ್ದರು. ಜನರಲ್ ಡಯರ್ ಅದೇ ಸಮಯಕ್ಕೆ ಗುಂಡಿನ ಗಾಡಿಗಳೊಡನೆ ಬಂದರು. ಸಭೆ ಸೇರಿದ್ದ ಜನರಿಗೆ ಯಾವ ಎಚ್ಚರಿಗೆಯನ್ನೂ ಕೊಡದೆ ಡಯರ್ ತಂದಿದ್ದ ಮದ್ದು ಮುಗಿಯುವ ವರೆಗೂ ಗುಂಡು ಹಾರಿಸಿದರು. ಸಭೆಯಲ್ಲಿ ಕುಳಿತಿದ್ದ ಜನರಲ್ಲಿ ಯಾವ ಆಯುಧವೂ ಇರಲಿಲ್ಲ; ಅವರಿಗೆ ಯಾವ ರಕ್ಷಣೆಯೂ ಇರಲಿಲ್ಲ. ಎತ್ತರ ಪ್ರದೇಶದಿಂದ ಗುಂಡುಗಳು ಬರುತ್ತಿವೆ; ಜನರು ಹಾಹಾ ಎಂದು ಸಾಯುತ್ತಿದ್ದಾರೆ. ರಕ್ತದ ಕೋಡಿ ಹರಿಯುತ್ತಿದೆ. ಅದೊಂದು ತೋಟ. ಸುತ್ತಲೂ ಎತ್ತರದ ಗೋಡೆ, ಓಡಿಹೋಗೋಣ ಎಂದರೆ ಇರುವ ಒಂದೇ ದಾರಿಯಲ್ಲಿ ಸೈನ್ಯ ಸಾಲಾಗಿ ನಿಂತಿದೆ. ಬೋನಿನಲ್ಲಿ ಸಿಕ್ಕಿದ ಇಲಿಗಳಂತೆ ಜನ ತಳಮಳ ಪಟ್ಟರು. ಸೈನಿಕರ ಹತ್ತಿರ ಐವತ್ತು ರೈಫಲ್‌ಗಳಿದ್ದುವು. ಹತ್ತು ನಿಮಿಷ ಗುಂಡು ಹಾರಿಸಿದರು. ಜನರಲ್ ಡಯರ್ ತಾವು ಧನ್ಯರೆಂದು ತಿಳಿದುಕೊಂಡು ತಮ್ಮ ಸೈನಿಕರೊಡನೆ ಹಿಂತಿರುಗಿದರು. ಈ ರೀತಿಯಾಗಿ ಇತಿಹಾಸ ಪ್ರಸಿದ್ಧವಾದ ಜಲಿಯನ್ ವಾಲಾಬಾಗ್ ಕೊಲೆ ನಡೆದದ್ದು. ಇದು ೧೯೧೯ ನೇ ಏಪ್ರಿಲ್ ೧೩ನೇ ತಾರೀಖು ಸಾಯಂಕಾಲ ೪.೩೦ ಘಂಟೆ ಸುಮಾರಿಗೆ ನಡೆದದ್ದು. ಜನರ ಅಂದಾಜಿನ ಪ್ರಕಾರ, ೧,೩೦೦ ಜನ ಸತ್ತರು, ಸಾವಿರಾರು ಜನ ಗಾಯಗೊಂಡರು. ಸರ್ಕಾರದ ಲೆಕ್ಕದ ಪ್ರಕಾರ ೩೭೯ಜನ ಸತ್ತುರು, ೨೦೦ ಜನ ಗಾಯಗೊಂಡರು. ಮರು ದಿನ ಪ್ರಾತಃಕಾಲದೊಳಗಾಗಿ ಊರಲ್ಲೆಲ್ಲಾ ಈ ಸಮಾಚಾರ ಹರಡಿತು; ದೇಶದ ಇತರ ಭಾಗಗಳಿಗೂ ಏನೋ ಒಂದು ಗಾಳಿ ಸಮಾಚಾರದಂತೆ ಹಬ್ಬಿತು.

ಇಷ್ಟೇ ಅಲ್ಲ. ಅದೇ ದಿವಸ ಪಂಜಾಬ್ ಗೌರ್ನರ್ ಮಾರ್ಷಲ್ ಲಾ ಜಾರಿಗೆ ತರಲು ಅಪ್ಪಣೆ ಕೊಡಬೇಕೆಂದು ವೈಸರಾಯನ್ನು ಕೇಳಿಕೊಂಡರು, ಏಪ್ರಿಲ್ ೧೫ರಲ್ಲಿ ಅಪ್ಪಣೆ ಬಂದಿತು. ಕೂಡಲೇ ಪಂಜಾಬ್ ಪ್ರಾಂತ್ಯದಲ್ಲೆಲ್ಲಾ ಮಾರ್ಷಲ್ ಲಾ ಜಾರಿಗೆ ಬಂದಿತು. ಪಂಜಾಬಿನ ಯಾವ ಸುದ್ದಿಯೂ ಹೊರಗೆ ಹೋಗುವ ಹಾಗಿಲ್ಲ, ಪಂಜಾಬಿನಲ್ಲಿ ಏನಾಯಿತು ಏನಾಗುತ್ತಿದೆ ಎಂಬುದು ಹೊರಗಿನ ಜನಕ್ಕೆ ತಿಳಿಯುವ ಹಾಗಿಲ್ಲ. ಜೂನ್ ೧೧ರವರೆಗೆ ಮಾರ್ಷಲ್ ಲಾ ಜಾರಿಯಲ್ಲಿತ್ತು. ಆಗಸ್ಟ್ ೨೫ರಲ್ಲಿ ಅದು ಪೂರ್ತಿಯಾಗಿ ಹೋಯಿತು. ಹೀಗೆ ಸುಮಾರು ಒಂದೆರಡು ತಿಂಗಳ ಕಾಲ ಸರ್ಕಾರ ಪಂಜಾಬಿನಲ್ಲಿ ನಡೆಸಿದ ಅತ್ಯಾಚಾರಗಳು ಹೊರಗೆ ಯಾರಿಗೂ ಗೊತ್ತಾಗಲಿಲ್ಲ. ಕ್ರಮ ಕ್ರಮವಾಗಿ ಎಲ್ಲಾ ಹೊರಗೆ ಎಲ್ಲಾ ಹೊರಗೆ ಬಂದಿತು.

ಈ ಮಧ್ಯೆ ಗಾಂಧೀಜಿ ಎಲ್ಲಿದ್ದರು, ಏನು ಮಾಡುತ್ತಿದ್ದರು? ಏಪ್ರಿಲ್ ೭ನೇ ತಾರೀಖು ಗಾಂಧೀಜಿ ಮಹದೇವ್ ದೇಸಾಯರೊಡನೆ ಡೆಲ್ಲಿ ಮತ್ತು ಅಮೃತಸರಕ್ಕೆ ಹೋಗಬೇಕೆಂದು ಬೊಂಬಾಯಿನಿಂದ ಪ್ರಯಾಣ ಹೊರಟರು. ೮ನೇ ತಾರೀಖು ಮಥುರ ಮುಟ್ಟುವ ವೇಳೆಗೆ ತಮ್ಮನ್ನು ದಸ್ತಗಿರಿ ಮಾಡುತ್ತಾರೆಂದು ಗಾಂಧೀಜಿಯವರಿಗೆ ಗೊತ್ತಾಯಿತು. ಪಂಜಾಬಿನ ಪಾಲ್‌ವಾಲ್ ಎಂಬ ಊರನ್ನು ಸೇರುವ ಮುಂಚೆಯೇ ಗಾಂಧೀಜಿಯ ಕೈಗೆ ಒಂದು ಬರಹದ ಆರ್ಡರು ಬಂದಿತು. ಪಂಜಾಬಿನೊಳಕ್ಕೆ ಬರಕೂಡದು, ಬಂದರೆ ಗಲಾಟೆಯಾಗುತ್ತದೆ ಎಂದು ಬರೆದಿತ್ತು. ಪೊಲೀಸಿನವರು ಗಾಂಧೀಜಿಯವರಿಗೆ ‘ರೈಲಿನಿಂದ ಇಳಿಯಿರಿ’ ಎಂದು ಕೇಳಿದರು. ‘ಇಳಿಯುವುದಿಲ್ಲ’ ಎಂದು ಅವರು ಉತ್ತರವಿತ್ತರು. ‘ನಾನು ಪಂಜಾಬಿಗೆ ಹೋಗುವುದು ಅಲ್ಲಿ ಶಾಂತಿ ಭಂಗ ಮಾಡುವುದಕ್ಕಲ್ಲ; ಅಲ್ಲಿಗೆ ಹೋಗಬೇಕೆಂದು ನನಗೆ ಬಲವಾದ ಆಹ್ವಾನ ಬಂದಿದೆ. ಹಾಗೇನಾದರೂ ಗಲಾಟೆ ಇದ್ದರೆ ನಾನು ಶಾಂತಿ ಉಂಟುಮಾಡುತ್ತೇನೆ’ ಎಂದು ಸಮಾಧಾನ ಹೇಳಿದರು. ಏಪ್ರಿಲ್ ೧೦ನೇ ತಾರೀಖು ಪಾಲ್‌ವಾಲ್‌ನಲ್ಲಿ ಪೊಲೀಸರು ಗಾಂಧೀಜಿಯನ್ನು ರೈಲಿನಿಂದ ಇಳಿಸಿ, ತಮ್ಮ ಅಧೀನಕ್ಕೆ ತೆಗೆದುಕೊಂಡರು. ಸ್ವಲ್ಪ ಹೊತ್ತಾದ ಮೇಲೆ ದೆಹಲಿಯಿಂದ ಬರುತ್ತಿದ್ದ ಒಂದು ರೈಲಿನ ಮೂರನೇ ದರ್ಜೆಗಾಡಿಯಲ್ಲಿ ಕೂಡಿಸಿದರು, ಜೊತೆಯಲ್ಲಿ ಪೊಲೀಸಿನವರೂ ಇದ್ದರು. ರೈಲು ಮಥುರ ಮುಟ್ಟಿದ ಮೇಲೆ ಅವರನ್ನು ರೈಲಿನಿಂದ ಇಳಿಸಿ, ಪೊಲೀಸ್ ಬ್ಯಾರೆಕ್ಸ್‌ಗೆ ಕರೆದುಕೊಂಡು ಹೋದರು.

ಅದೇ ರಾತ್ರಿ ೪ ಗಂಟೆಯವರೆಗೆ ಗಾಂಧೀಜಿ ಅಲ್ಲೇ ನಿದ್ರೆ ಮಾಡಿದರು. ಪೊಲೀಸರು ಅವರನ್ನು ಎಬ್ಬಿಸಿ ಬೊಂಬಾಯಿಗೆ ಹೋಗುತ್ತಿದ್ದ ಒಂದು ಗೂಡ್ಸ್ ಟ್ರೈನ್‌ನಲ್ಲಿ ಕೂರಿಸಿದರು. ಸವಾಯ್ ಮಾಧೊಪೂರ್ ಎಂಬಲ್ಲಿ ಲಾಹೋರಿನಿಂದ ಮೈಲ್ ಟ್ರೈನ್‌ನಲ್ಲಿ ಬಂದಿದ್ದ ಬೌರಿಂಗ್ ಎಂಬ ಪೊಲೀಸ್ ಇನ್‌ಸ್ಪೆಕ್ಟರು ಗಾಂಧೀಜಿಯವರನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡರು. ಅವರನ್ನು ಬೊಂಬಾಯಿಗೆ ಹೋಗುವ ಒಂದು ರೈಲಿನ ಫಸ್ಟಕ್ಲಾಸ್‌ ಕಂಪಾರ್ಟ್‌‌ಮೆಂಟಿನಲ್ಲಿ ಕೂಡಿಸಿ, ‘ನೀವು ನೆಟ್ಟಗೆ ಬೊಂಬಾಯಿಗೆ ದಯ ಮಾಡಿಸಿ. ಪಂಜಾಬಿನ ಸರಹದ್ದನ್ನು ದಾಟಬೇಡಿ’ ಎಂದು ಪ್ರಾರ್ಥಿಸಿದರು. ‘ನಾನಾಗಿಯೇ ಬೊಂಬಾಯಿಗೆ ಹೋಗುವುದಿಲ್ಲ’ ಎಂದು ಗಾಂಧೀಜಿ ಉತ್ತರ ಹೇಳಿದರು. ರೈಲು ಸೂರತ್ತಿಗೆ ಬಂದಿತು. ಪಂಜಾಬಿನ ಪೊಲೀಸ್ ಇನ್ಸ್‌ಸ್ಪೆಕ್ಟರ್ ಸೂರತ್ತಿನ ಪೊಲೀಸ್ ಆಫೀಸರಿಗೆ ಗಾಂಧೀಜಿಯನ್ನು ವಶಪಡಿಸಿದರು. ‘ಈಗ ನೀವು ಸ್ವತಂತ್ರರಾಗಿದ್ದೀರಿ. ಬೊಂಬಾಯನ್ನು ೧೧ನೇ ತಾರೀಖು ತಲಪಬಹುದು’ ಎಂದು ಪೊಲೀಸ್ ಆಫೀಸರು ಹೇಳಿದರು.

ಈ ಮಧ್ಯೆ ಗಾಂಧೀಜಿ ಮಹದೇವ್ ದೇಸಾಯಿಗೆ ‘ನನಗೆ ಪಂಜಾಬಿಗೆ ಹೋಗಬಾರದೆಂದು ಅಪ್ಪಣೆ ಬಂದಿದೆ, ಪೊಲೀಸಿನವರು ನನ್ನನ್ನು ಆಗಲೇ ದಸ್ತುಗಿರಿ ಮಾಡಿದ್ದಾರೆ. ನೀವು ಕಾರ್ಯವನ್ನು ಮುಂದುವರಿಸಿ. ಸತ್ಯಾಗ್ರಹವನ್ನು ನಿಲ್ಲಿಸಬೇಡಿ’ ಎಂದು ಸಮಾಚಾರ ಕಳುಹಿಸಿದ್ದರು.

ಗಾಂಧೀಜಿಯ ದಸ್ತಗಿರಿಯ ಸಮಾಚಾರ ದೇಶದಲ್ಲೆಲ್ಲಾ ಮಿಂಚಿನಂತೆ ಹರಡಿತು. ಜನ ಸಿಟ್ಟಿಗೆದ್ದರು. ಗಾಂಧೀಜಿ ಬೊಂಬಾಯಿನಲ್ಲಿ ರೈಲು ಇಳಿಯುತ್ತಲೇ ಉಮರ್ ಸೊಬಾನಿ ಮತ್ತು ಅನಸೂಯ ಬಹಿನ್ ಅವರನ್ನು ಕಂಡು “ಪೈಥೋನಿಗೆ ತಕ್ಷಣ ಮೋಟಾರಿನಲ್ಲಿ ಹೊರಡಿ” ಎಂದರು. ಗಾಂಧೀಜಿಯನ್ನು ನೋಡುತ್ತಲೇ ನೆರೆದಿದ್ದ ಜನ ಆನಂದದಿಂದ ಮೈ ಮರೆತರು. ದೊಡ್ಡ ಮೆರವಣಿಗೆಯಲ್ಲಿ ವಂದೇಮಾತರಂ ಮತ್ತು ಅಲ್ಲಾ ಹೋ ಅಕ್ಬರ್ ಘೋಷಣೆಗಳ ಮಧ್ಯೆ ಕ್ರಾಫರ್ಡ್ ಮಾರ್ಕೆಟ್‌ಬಳಿಗೆ ಬಂದರು. ಫೋರ್ಟಿನ ಕಡೆಗೆ ಮೆರವಣಿಗೆ ನುಗ್ಗದಿರಲೆಂದು ಅಶ್ವಾರೂಢರಾದ ಪೊಲೀಸರು ಅದನ್ನು ತಡೆದರು. ಜನಗಳ ಗುಂಪು ಸೇರಲಾರಂಭಿಸಿತು. ಸವಾರ್ ಪೊಲೀಸರು ಜನಗಳ ಮೇಲೆ ಈಟಿಯಿಂದ ತಿವಿದು ತಡೆದರು. ಜನಗಳಿಗೂ ಪೊಲೀಸನವರಿಗೂ ಘರ್ಷಣೆಯಾಯಿತು. ಗಾಂಧೀಜಿ ಕುಳಿತಿದ್ದ ಕಾರನ್ನು ಪೊಲೀಸಿನವರು ಮುಂದಕ್ಕೆ ಬಿಟ್ಟರು. ಗಾಂಧೀಜಿ ಪೊಲೀಸ್  ಕಮಿಷನರನ್ನು ಕಂಡು, ಪೊಲೀಸರು ಜನಕ್ಕೆ ಹಿಂಸೆ ಮಾಡಿದ್ದನ್ನು ತಿಳಿಸಿದರು.

ಇನ್ನೊಬ್ಬ ಆಫೀಸರು ಬಂದು “ಅಹಮದಾಬಾದಿನಲ್ಲಿ ಏನಾಯಿತು? ಅಮೃತಸರದಲ್ಲಿ ಏನಾಯಿತು?  ನಿಮಗೆ ಗೊತ್ತೇ? ಜನ ಕೆಲವು ಕಡೆ ಟೆಲಿಗ್ರಾಫ್ ತಂತಿಗಳನ್ನು ಕಿತ್ತುಹಾಕಿದ್ದಾರೆ. ಇದೆಲ್ಲಾ ಸರಿಯೇ?” ಎಂದು ಗಾಂಧೀಜಿಯನ್ನು ಕೇಳಿದರು. ಕೂಡಲೇ ಗಾಂಧೀಜಿ ಏನೂ ಕೇಳದೆ ಚೌಪಾತಿಗೆ ಹೋಗಿ, ಅಲ್ಲಿ ಸಭೆ ಸೇರಿದ್ದ ಜನರಿಗೆ ‘ನೀವು ಹಿಂಸೆಯಲ್ಲಿ ತೊಡಗಬಾರದು; ಅಹಿಂಸೆಯಿಂದ ಇರಬೇಕು’ ಎಂಬುದಾಗಿ ಬೋಧೆ ಮಾಡಿದರು.

ಅಹಮದಾಬಾದಿನಲ್ಲಿ ಏಪ್ರಿಲ್ ೬ನೇ ತಾರೀಖು ಬಹಳ ಗಲಾಟೆಯಾಯಿತೆಂದು ಸಮಾಚಾರ ತಿಳಿಯಿತು. ಅನಸೂಯಾ ಬಹಿನ್‌ರ ದಸ್ತಗಿರಿಯಾಗಿ, ಜನರು ಪ್ರಕ್ಷುಬ್ಧರಾಗಿದ್ದರು. ಪೊಲೀಸರು ಶ್ರಮಜೀವಿಗಳ ಮೇಲೆ ಗುಂಡು ಹಾರಿಸಿದರು. ಮಿಲಿಟರಿ ಹಾವಳಿ ಬಹಳವಾಗಿದೆ ಎಂಬ ಸಮಾಚಾರ ಬಂದಿತು. ಏಪ್ರಿಲ್ ೧೩ರಲ್ಲಿ ಗಾಂಧೀಜಿ ಅಹಮದಾಬಾದಿಗೆ ಹೋಗಿ ಜನರೊಡನೆ ಬೆರೆತು ಅಹಿಂಸಾ ಮಾರ್ಗ ಇದಲ್ಲ ಎಂದು ಬೋಧಿಸಿ, ಒಂದು ದಿವಸದಲ್ಲಿ ಗಲಾಟೆಯನ್ನು ನಿಲ್ಲಿಸಿದರು. ಸರ್ಕಾರ ಗಾಂಧೀಜಿಯ ಪ್ರಭಾವವನ್ನು ನೋಡಿ ಬೆರಗಾಯಿತು.

ಇಷ್ಟರಲ್ಲೇ ಜನ ಗಾಂಧೀಜಿಯನ್ನು ಮಹಾತ್ಮ ಎಂದು ಕರೆಯಲಾರಂಭಿಸಿದರು. ಅವರ ಪಾದವನ್ನು ಮುಟ್ಟುವುದು ಮುಂತಾದ ರೀತಿಯಲ್ಲಿ ಗೌರವವನ್ನು ಸೂಚಿಸಿಲಾರಂಭಿಸಿದರು. ಆನಿ ಬೆಸಂಟರು ಗಾಂಧೀಜಿಯನ್ನು ಮಹಾತ್ಮ ಎಂದು ಕರೆದು, ತಮ್ಮ ಪತ್ರಿಕೆಯಲ್ಲಿ ಅವರನ್ನು ಕೊಂಡಾಡಿದರು. ಪಂಜಾಬಿನಲ್ಲಿ ಮತ್ತು ಇತರ ಕಡೆ ನಡೆದ ಹಿಂಸಾಕೃತ್ಯಗಳು ಗಾಂಧೀಜಿಯನ್ನು ಯೋಚನೆಗೆ ಗುರಿ ಮಾಡಿದವು. ಗಾಂಧೀಜಿ “ಇನ್ನೂ ನಮ್ಮ ಜನ ಅಹಿಂಸಾ ಮಾರ್ಗಕ್ಕೆ ಸಿದ್ಧರಾಗಿಲ್ಲ. ಅವರಿಗೆ ಅಹಿಂಸೆಯ ತರಬೇತಿ ಕೊಡಬೇಕು. ಅವರಿಗೆ ಅಹಿಂಸಾ ಪಾಠವನ್ನು ಹೇಳಿಕೊಡಲು ಕೆಲವು ಜನರನ್ನು ತಯಾರು ಮಾಡಬೇಕು. ಸದ್ಯಕ್ಕೆ ಈಗ ಆರಂಭಿಸಿರುವ ಕಾರ್ಯ ಕ್ರಮವನ್ನು ಹಂಗಾಮಿಯಾಗಿಯಾದರೂ ನಿಲ್ಲಿಸಬೇಕು” ಎಂದು ಆಲೋಚಿಸಿದರು. ಕವಿಶ್ರೇಷ್ಠ ರವೀಂದ್ರನಾಥ ಟಾಗೂರರು “ಅವಸರ ಪಡಬೇಡಿ. ಸ್ವಲ್ಪ ನಿಧಾನಿಸಿ” ಎಂದು ಗಾಂಧೀಜಿಗೆ ಪತ್ರ ಬರೆದರು. ಗಾಂಧೀಜಿ ಮನಸ್ಸಿಗೆ ಇದು ಸರಿ ಎಂದು ತೋರಿತು. ಅಹಮದಾಬಾದಿನಲ್ಲಿ ಮೂರು ದಿವಸದ ಪ್ರಾಯಶ್ಚಿತ್ತ ಉಪವಾಸ ಮಾಡಿ, ದೇವರ ಹೆಸರಿನಲ್ಲಿ ಏಪ್ರಿಲ್  ೧೮ನೇ ತಾರೀಖು ಕಾನೂನು ಭಂಗ ಕಾರ್ಯಕ್ರಮವನ್ನು ಹಂಗಾಮಿಯಾಗಿ ನಿಲ್ಲಿಸಿದರು.  ಒಂದು ಹೇಳಿಕೆ ಕೊಟ್ಟರು. “ನಿರಾಶೆಯಿಂದ ನಾನು ಇದನ್ನು ನಿಲ್ಲಿಸಿಲ್ಲ. ನಮ್ಮ ಜನರಲ್ಲಿ ನನಗೆ ನಂಬಿಕೆ ಇದೆ. ನಾನು ಕಾನೂನು ಭಂಗ ಮಾಡಬೇಕೆಂದು ಜನರಿಗೆ ಬೋಧಿಸಿದಾಗ ನಮ್ಮ ದೇಶದಲ್ಲಿ ಇಷ್ಟುದುಷ್ಟ ಶಕ್ತಿಗಳಿವೆ ಎಂದು ನನಗೆ ತಿಳಿದಿರಲಿಲ್ಲ. ನಾನು ಹಿಮಾಲಯದಷ್ಟು ದೊಡ್ಡ ತಪ್ಪು ಮಾಡಿದೆ. ರೌಲೆಟ್ ಕಾನೂನು ಬಗ್ಗೆ ನನ್ನ ಅಭಿಪ್ರಾಯ ಎಂದಿನಂತೆಯೇ ಇದೆ. ಸರ್ಕಾರ ನನ್ನನ್ನು ದಸ್ತಗಿರಿ ಮಾಡದೆ ಪಂಜಾಬಿಗೆ ಹೋಗಲು ಬಿಟ್ಟಿದ್ದರೆ ಈ ಅನರ್ಥವಾಗುತ್ತಿರಲಿಲ್ಲ. ಜನ ಸಮುದಾಯದಲ್ಲಿ ಬಹಳ ಜನ ಶಾಂತವಾಗಿಯೇ ಇದ್ದರು. ಆದರೆ ಪೊಲೀಸಿನವರ ದೌರ್ಜನ್ಯದಿಂದ ಜನ ಸಿಟ್ಟಿಗೆದ್ದರು. ಆದ್ದರಿಂದಲೇ ಈ ಗಲಾಟೆಗಳಾದವು. ಪಂಜಾಬಿನಲ್ಲಿ ನಡೆದ ವಿದ್ಯಮಾನಗಳಿಗೂ ಕಾನೂನು ಭಂಗಕ್ಕೂ ಯಾವ  ಸಂಬಂಧವೂ ಇಲ್ಲ. ಸದ್ಯಕ್ಕೆ ಜನರು ಕಾನೂನು ಭಂಗವನ್ನು ನಿಲ್ಲಿಸಿ ಶಾಂತಿಕಾರ್ಯಗಳಲ್ಲಿ ತೊಡಗಬೇಕು ಎಂದು ಪ್ರಾರ್ಥಿಸುತ್ತೇನೆ”. ಸದ್ಯಕ್ಕೆ ಕಾನೂನು ಭಂಗ ನಿಂತಿತು. ಪಂಜಾಬಿನ ಅತ್ಯಾಚಾರಗಳ ಮತ್ತು ಅಮೃತಸರದ ಕೊಲೆಯ ಬಗ್ಗೆ ಗಾಂಧೀಜಿಗಾದ ಸಂಕಟ ಹೇಳತೀರದು. ಇತರ ಕಾಂಗ್ರೆಸ್ ಮುಖಂಡರೂ ಬಹಳ ವ್ಯಸನ ಪಟ್ಟರು.

ರವೀಂದ್ರನಾಥ ಟಾಗೂರರು ಪಂಜಾಬಿನ ಅತ್ಯಾಚಾರದ ಸಂಗತಿಗಳನ್ನು ಕೇಳಿ ಮನನೊಂದು ಮೇ ೩೦ರಲ್ಲಿ ವೈಸರಾಯರಿಗೆ ಕಾಗದ ಬರೆದು ತಮ್ಮ ನೈಟ್ ಹುಡ್ ತ್ಯಾಗ ಮಾಡಿ, ಸರ್ಕಾರವನ್ನು ತೀವ್ರವಾಗಿ ಖಂಡಿಸಿದರು.

ಅಖಿಲ ಭಾರತ ಕಾಂಗ್ರೆಸ್ ಸಮಿತಿ ಏಪ್ರಿಲ್ ೨೦ರಲ್ಲಿ ಸಭೆಸೇರಿ ಗಾಂಧೀಜಿಯವರು ಪಂಜಾಬಿಗೆ ಹೋಗಿ ಎಲ್ಲಾ ಸಂಗತಿಗಳನ್ನೂ ತಿಳಿದು ಬರಬೇಕು ಎಂದು ಸಲಹೆ ಮಾಡಿತು. ಗಾಂಧೀಜಿ ವೈಸರಾಯರ ಅನುಮತಿಯನ್ನು ಕೇಳಿದರು; ಅನುಮತಿ ದೊರೆಯಲಿಲ್ಲ. ಆಗಿನ ಪರಿಸ್ಥಿತಿಯಲ್ಲಿ ಪಂಜಾಬಿಗೆ ಹೋಗುವುದು ಸರಿಯಲ್ಲ ಎಂದು ನಿಲ್ಲಿಸಿದರು.

ಅಖಿಲ ಭಾರತ ಕಾಂಗ್ರೆಸ್ ಸಮಿತಿ ಜೂನ್ ೮ರಲ್ಲಿ ಅಲಹಾಬಾದಿನಲ್ಲಿ ಕಲೆತು, ಪಂಜಾಬಿನ ಅತ್ಯಾಚಾರಗಳನ್ನು ವಿಮರ್ಶಿಸಲು ಒಂದು ವಿಚಾರಣೆಯಾಗಬೇಕು ಎಂದು ಸರ್ಕಾರಕ್ಕೆ ತಿಳಿಸಿತು. ವಿಚಾರಣೆಗಾಗಿ ಎಲ್ಲ ಕಾರ್ಯಗಳನ್ನೂ ಕೈಕೊಳ್ಳಲು ಒಂದು ಸಮಿತಿಯನ್ನು ನೇಮಿಸಿತು; ಮತ್ತು ಮಾರ್ಷಲ್‌ಲಾ ಕೋರ್ಟುಗಳು ಪಂಜಾಬಿನಲ್ಲಿ ವಿಧಿಸಿದ್ದ ಶಿಕ್ಷೆಗಳನ್ನೆಲ್ಲಾ ಜಾರಿಗೆ ತರದೆ ತಡೆದು ನಿಲ್ಲಿಸಬೇಕೆಂದು ಲಂಡನಿನಲ್ಲಿನ ಇಂಡಿಯಾದ ಮಂತ್ರಿಗೂ, ಇಂಗ್ಲೆಂಡಿನ ಮುಖ್ಯ ಮಂತ್ರಿಗೂ, ಲಾರ್ಡ್ ಸಿಂಹ ಅವರಿಗೂ ತಂತಿ ಕಳುಹಿಸಿತು. ಗಾಂಧೀಜಿ ಸರ್ಕಾರದ ಕೋರಿಕೆಯಂತೆಯೂ ಕೆಲವು ಮಿತ್ರರ ಹಿತೋಕ್ತಿಯಂತೆಯೂ ತಾವು ಪುನಃ ಕಾನೂನು ಭಂಗ ಚಳುವಳಿಯನ್ನು ಸದ್ಯಕ್ಕೆ ಪ್ರಾರಂಭಿಸುವುದಿಲ್ಲವೆಂದು ಜುಲೈ ೨೧ರಲ್ಲಿ ಸ್ವಷ್ಪವಾದ ಪ್ರಕಟನೆ ಹೊರಡಿಸಿದರು. ತಾವು ರೌಲೆಟ್ ಆಕ್ಟ್ ಬಗ್ಗೆ ಚಳುವಳಿಯನ್ನು ನಿಲ್ಲಿಸಿರುವುದಾಗಿಯೂ ಆದರೆ ಪಂಜಾಬಿನ ಅತ್ಯಾಚಾರಗಳ ಬಗ್ಗೆ ಸರ್ಕಾರ ವಿಚಾರಣೆ ನಡೆಸಬೇಕು ಮತ್ತು ಮಾರ್ಷಲ್ ಲಾ ಶಿಕ್ಷೆಗಳನ್ನು ಪುನರ್ವಿಮರ್ಶಿಸಬೇಕು ಎಂದೂ ತಿಳಿಸಿದರು.

ಕಾಂಗ್ರೆಸ್ ನಿರ್ಣಯದ ಪ್ರಕಾರ ಸ್ವಾಮಿ ಶ್ರದ್ಧಾನಂದ, ಮೋತಿಲಾಲ್ ನೆಹರು ಮತ್ತು ಪಂಡಿತ ಮಾಳವೀಯ ಇವರುಗಳು ಜುಲೈ ತಿಂಗಳಲ್ಲಿ ಪಂಜಾಬಿಗೆ ಹೋದರು ಮತ್ತು ಅಲ್ಲಿ ವಿಚಾರಣೆ ನಡೆಸಲು ಉಪ್ರಕ್ರಮಿಸಿದರು.

ಗಾಂಧೀಜಿಗೂ ೧೯೧೯ನೇ ಅಕ್ಟೋಬರ್ ೧೭ರಲ್ಲಿ ಪಂಜಾಬಿಗೆ ಹೋಗಲು ಅನುಮತಿ ದೊರೆಯಿತು. ಕೂಡಲೇ ಗಾಂಧೀಜಿ ಪಂಜಾಬಿಗೆ ಹೊರಟರು.

ಇಂಡಿಯಾ ಸರ್ಕಾರ ಎಂಟು ಸದಸ್ಯರನ್ನೊಳಗೊಂಡ ಸಮಿತಿಯನ್ನು ಪಂಜಾಬಿನ ಅತ್ಯಾಚಾರಗಳ ವಿಚಾರಣೆಗೆ ನೇಮಿಸಿತು. ಲಾರ್ಡ್ ಜಸ್ಟಿಸ್ ಹಂಟರ್ ಸಮಿತಿಯ ಅಧ್ಯಕ್ಷರು. ಸರ್ ಸುಲ್ತಾನ್ ಅಹ್ಮದ್, ಸರ್ ಚಿಮನ್‌ಲಾಲ್ ಸೆಟಲವಾಡ್ ಮತ್ತು ಪಂಡಿತ ಜಗತ್‌ನಾರಾಯಣ್ ಎಂಬುವರೂ ಈ ಸಮಿತಿಯಲ್ಲಿದ್ದರು. ಸರ್ಕಾರವೇ ಒಂದು ಪಾರ್ಟಿಯಾಗಿರುವುದರಿಂದ ಅದೇ ಒಂದು ಸಮಿತಿಯನ್ನು ನೇಮಿಸಿದ್ದು ತಪ್ಪೆಂದೂ ಒಂದು ಕಮಿಷನನ್ನು ನೇಮಿಸಬೇಕಾಗಿತ್ತೆಂದೂ ಪಂಡಿತ ಮಾಳವೀಯರು ವೈಸರಾಯರ ಶಾಸನ ಸಭೆಯಲ್ಲಿ ತಿಳಿಸಿದರು. ಇದೇ ಅಭಿಪ್ರಾಯವನ್ನು ಇತರ ಭಾರತೀಯ ಮುಖಂಡರೂ ಸೂಚಿಸಿದರು.

ಬೊಂಬಾಯಿನಲ್ಲಿ ಬಿ.ಜಿ. ಹಾರ್ನಿಮನ್‌ರ ಸಂಪಾದಕತ್ವದಲ್ಲಿ ಹೊರಡುತ್ತಿದ್ದ “ಬಾಂಬೆ ಕ್ರಾನಿಕಲ್” ಪತ್ರಿಕೆಯಲ್ಲಿ ಪಂಜಾಬ್ ಅತ್ಯಾಚಾರದ ವಿಷಯಗಳು ಪ್ರಕಟವಾಗಿ ಜನರಲ್ಲಿ ಕೋಲಾಹಲವುಂಟಾಗುತ್ತಿತ್ತು. ಸರ್ಕಾರ ಹಾರ್ನಿಮನ್‌ರನ್ನು ದಸ್ತಗಿರಿ ಮಾಡಿ, ಒಂದು ಹಡಗಿನಲ್ಲಿ ಕೂಡಿಸಿ ಇಂಗ್ಲೆಂಡಿಗೆ ರವಾನಿಸಿತು. ಗಾಂಧೀಜಿಯನ್ನು ಈ ಪತ್ರಿಕೆಯ ಸಂಪಾದಕತ್ವವನ್ನು ವಹಿಸಿ ಎಂದು ಕೇಳಿದರು. ಆದರೆ ಅಷ್ಟರಲ್ಲಿ ಸರ್ಕಾರ ಬಹಳ ಉಗ್ರಕ್ರಮವನ್ನು ಕೈಕೊಂಡಿದ್ದರಿಂದ ಆ ಪತ್ರಿಕೆ ನಿಂತು ಹೋಯಿತು. ಆದರೂ “ಯಾಂಗ್ ಇಂಡಿಯಾ” ಪತ್ರಿಕೆ ಪಂಜಾಬಿನ ವಿಷಯಗಳನ್ನು ತಿಳಿಸುತ್ತ ಬಂತು. ಗಾಂಧೀಜಿಯೇ ಇದರ ಸಂಪಾದಕರು.

ಪಂಜಾಬಿನಲ್ಲಿ ಗಾಂಧೀಜಿ ಹಳ್ಳಿಹಳ್ಳಿಗೆ ಹೋಗಿ, ವಿಚಾರಣೆ ನಡೆಸಿ, ಸಾಕ್ಷ್ಯವನ್ನು ಶೇಖರಿಸುತ್ತಿದ್ದರು. ಈ ಮಧ್ಯೆ ಕೆಲವು ಭಿನ್ನಾಭಿಪ್ರಾಯದಿಂದ ಕಾಂಗ್ರೆಸ್ ಸಬ್‌ಕಮಿಟಿ ಹಂಟರ್ ಕಮಿಟಿಯೊಡನೆ ಸಹಕಾರ ನಿರಾಕರಿಸಿತು. ಮತ್ತು ತಾನೇ ಒಂದು ವಿಚಾರಣಾ ಸಮಿತಿ ನೇಮಿಸಿತು. ಈ ಸಮಿತಿಯಲ್ಲಿ, ಗಾಂಧೀಜಿ, ಮೋತಿಲಾಲ್ ನೆಹರು, ಸಿ.ಆರ್. ದಾಸ್‌, ಫಜಲುಲ್ ಹಕ್ ಮತ್ತು ಅಬ್ಬಾಸ್ ತಯಲ್ಜಿಯವರು ಸದಸ್ಯರಾಗಿದ್ದರು. ಮೋತಿಲಾಲ್ ನೆಹರು ಅಧ್ಯಕ್ಷರಾಗಿದ್ದರು. ಅಮೃತಸರ್ ಕಾಂಗ್ರೆಸ್ಸಿಗೆ ಮೋತಿಲಾಲ್ ನೆಹರು ಅಧ್ಯಕ್ಷರಾಗಿ ಚುನಾಯಿತರಾದ್ದರಿಂದ ಎಂ.ಆರ್. ಜಯಕರ್‌ರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಕೆ. ಸಂತಾನಂ ಕಾರ್ಯದರ್ಶಿಯಾಗಿದ್ದರು. ಸಮಿತಿಯ ಕಾರ್ಯವನ್ನು ಯೋಜಿಸುವ ಕೆಲಸ ಗಾಂಧೀಜಿಯ ಮೇಲೆ ಬಿತ್ತು. ಈ ಸಮಿತಿಯ ವರದಿಯನ್ನು ಬರೆಯುವ ಕೆಲಸವನ್ನೂ ಗಾಂಧೀಜಿಯವರಿಗೇ ವಹಿಸಲಾಯಿತು.

ಗಾಂಧೀಜಿ ಹದಿನೈದು ದಿವಸ ಸಾಕ್ಷ್ಯಗಳನ್ನೆಲ್ಲಾ ಶೋಧಿಸಿ ವರದಿ ಪ್ರಕಟ ಮಾಡಿದರು. ಸಿ.ಆರ್.ದಾಸ್ ಮತ್ತು ಜಯಕರ್ ಇಬ್ಬರೂ ಈ ವರದಿಯ ವಾದಸರಣಿಯನ್ನು ಕೊಂಡಾಡಿ, ಗಾಂಧೀಜಿಯ ಸಾಮರ್ಥ್ಯದ ಬಗ್ಗೆ ವಿಸ್ಮಯವನ್ನು ಸೂಚಿಸಿದರು. ಈ ವರದಿ ಡಯರಿನ ಕ್ರಾರ್ಯವನ್ನು ಅಮಾನುಷವೆಂದು ಖಂಡಿಸಿತು; ಮಾರ್ಷಲ್ ಲಾ ಸಮಯದಲ್ಲಿ ಜನರನ್ನು ತೆವಳಿಸಿದ್ದನ್ನೂ, ಚಾವಟಿಯಿಂದ ಹೊಡೆದಿದ್ದನ್ನೂ ರಾಕ್ಷಸ ಕೃತ್ಯವೆಂದು ಬಣ್ಣಿಸಿತು. ಈ ವರದಿಯ ಪ್ರಕಾರ ಜಲಿಯನ್‌ವಾಲಾಬಾಗ್‌ನಲ್ಲಿ ೧,೦೦೦ಕ್ಕಿಂತ ಹೆಚ್ಚಾಗಿ ಜನ ಸತ್ತಿರಬಹುದು; ಗಾಯಹೊಂದಿದವರು ಇನ್ನೂ ಬಹಳ ಜಾಸ್ತಿ. ವರದಿ ಸರ್ವನುಮತವಾಗಿತ್ತು.

೧೯೨೦ನೇ ಮೇ ಅಂತ್ಯದಲ್ಲಿ ಸರ್ಕಾರದಿಂದ ನೇಮಿತವಾಗಿದ್ದ ಹಂಟರ್‌ಕಮಿಟಿ ತನ್ನ ವರದಿಯನ್ನು ಪ್ರಕಟಿಸಿತು. ಸರ್ಕಾರ ಅದನ್ನು ಅಂಗೀಕರಿಸಿತು.

ಹಂಟರ್ ಕಮಿಟಿ ಮುಂದೆ ಜನರಲ್ ಡಯರ್ ಕೊಟ್ಟ ಸಾಕ್ಷ್ಯದ ಸ್ವಲ್ಪ ಭಾಗವನ್ನು ಇಲ್ಲಿ ಕೊಟ್ಟಿದೆ:

ಹಂಟರ್ – ನೀವು ಗುಂಡು ಹಾರಿಸಿದುದರ ಉದ್ದೇಶ ಜನರನ್ನು ಚದುರಿಸುವುದಕ್ಕಾಗಿ ತಾನೇ?

ಡಯರ್ – ಇಲ್ಲ, ಸ್ವಾಮಿ, ಅವರು ಚದುರುವವರೆಗೂ ನಾನು ಗುಂಡು ಹಾರಿಸಿದೆ.

ಹಂಟರ್ – ನೀವು ಗುಂಡು ಹಾರಿಸಲು ಆರಂಭಿಸಿದೊಡನೆಯೇ ಜನ ಚದುರಲು ಆರಂಭಿಸಿತೇ?

ಡಯರ್ – ಕೂಡಲೇ.

ಹಂಟರ್ – ನೀವು ಗುಂಡು ಹಾರಿಸುತ್ತಲೇ ಇದ್ದಿರಾ?

ಡಯರ್ – ಹೌದು.

ಹಂಟರ್ – ಜನ ಚದುರುವ ಮನೋಭಾವ ತೋರಿಸಿದಾಗಲೂ ನೀವು ಏಕೆಗುಂಡು ಹಾರಿಸಿದಿರು?

ಡಯರ್ – ಅದು ಚದುರಿಹೋಗುವವರಿಗೂ ಗುಂಡು ಹಾರಿಸುವುದು ನನ್ನ ಕರ್ತವ್ಯವೆಂದು ಭಾವಿಸಿದ್ದೆ. ನಾನು ಸ್ವಲ್ಪವಾಗಿ ಗುಂಡು ಹಾರಿಸಿದ್ದರೆ, ಗುಂಡು ಹಾರಿಸುವುದೇ ತಪ್ಪಾಗುತ್ತಿತ್ತು.

ಇಂಥ ಉತ್ತರಗಳನ್ನು ಕೊಟ್ಟಾಗ್ಯೂ, ಹಂಟರ್ ಸಮಿತಿ ತನ್ನ ವರದಿಯಲ್ಲಿ ಡಯರ್ ಬಗ್ಗೆ ಈ ರೀತಿ ಹೇಳಿತು:

“ಅವನು ಪ್ರಾಮಾಣಿಕ. ಆದರೆ ತನ್ನ ಕರ್ತವ್ಯವನ್ನು ತಪ್ಪಾಗಿ ತಿಳಿದುಕೊಂಡ. ಅವನು ಸರಿಯಾದ ವಿವೇಚನೆ ಮಾಡದೆ ಗುಂಡು ಹಾರಿಸಿದ.”

(He committed a grave error of judgment which exceeded the reasonable requirements of the case. His conduct, however, was based upon an honest but mistaken conception of duty.)

ಬ್ರಿಟಿಷ್ ಸರ್ಕಾರ ಜನರಲ್ ಡಯರನನ್ನು ಅಧಿಕಾರದಿಂದ ವಜಾ ಮಾಡಿತು. ಆದರೆ ಅವನಿಗಾಗಲೀ ಇತರ ಅಧಿಕಾರಿಗಾಗಲೀ ಯಾವ ಶಿಕ್ಷೆಯೂ ಆಗಲಿಲ್ಲ. ಬ್ರಿಟಿಷ್ ಹೌಸ್ ಆಫ್ ಕಾಮನ್ಸ್ ಸಭೆಯು ಇವನ ಕೃತ್ಯವನ್ನು ಖಂಡಿಸಿತು. ಆದರೆ ಲಾರ್ಡ್ಸ್ ಸಭೆ ಇವನು ಮಾಡಿದ್ದು ಸರಿ ಎಂದು ಅಭಿಪ್ರಾಯಪಟ್ಟಿತು. ಇಷ್ಟೇ ಅಲ್ಲದೆ, ಇವನ ಅಭಿಮಾನಿಗಳು ಇಂಗ್ಲೆಂಡಿನಲ್ಲಿ ಇವನಿಗೆ ೨೦,೦೦೦ಪೌಂಡು ಬೆಲೆಬಾಳುವ ಒಂದು ಖಡ್ಗವನ್ನು ಬಹುಮಾನ ಮಾಡಿ, ಗೌರವಿಸಿದರು.

ಜನತೆಯಲ್ಲಿ ಧೈರ್ಯವನ್ನೂ ಕಾರ್ಯೋನ್ಮುಖತೆಯನ್ನೂ ನೆಲೆಗೊಳಿಸಲು ೧೦೯೨೦ನೇ ೬ನೇ ತಾರೀಖಿನಿಂದ ೧೩ನೇ ತಾರೀಖಿನವರೆಗೆ ರಾಷ್ಟ್ರೀಯವಾರ ಆಚರಿಸಬೇಕೆಂದು ಗಾಂಧೀಜಿ ದೇಶಕ್ಕೆ ಕರೆಯಿತ್ತರು. ಜನ ಗಾಂಧೀಜಿಯ ಆದೇಶಕ್ಕೆ ಮನ್ನಣೆಯಿತ್ತಿತು.

೧೯೧೯ನೇ ಡಿಸೆಂಬರ್‌ನಲ್ಲಿ ಪಂಡಿತ ಮೋತಿಲಾಲ್ ನೆಹರು ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯಿತು. ಪ್ರತಿನಿಧಿಗಳು ಬಹಳ ಉತ್ಸಾಹವಾಗಿದ್ದರು. ಅಮೃತಸರದ ಜಲಿಯನ್ ವಾಲಾಬಾಗ್ ಯಾತ್ರಾಸ್ಥಾನವಾಯಿತು. ಭಾರತದ ಹಿಂದೂ ಮುಸ್ಲಿಮ್ ರಕ್ತ ಇಲ್ಲಿ ಕೋಡಿಕೋಡಿಯಾಗಿ ಹರಿಯಿತು. ಇದೇ ಹಿಂದೂ ಮುಸ್ಲಿಮರ ಐಕಮತ್ಯದ ಕುರುಹು ಎಂದು ಜನ ಹೇಳಲಾರಂಭಿಸಿದರು. ಜಲಿಯನ್‌ವಾಲಾಬಾಗ್ ಉದ್ಯಾನವನ್ನು ಕಾಂಗ್ರೆಸು ಕೊಂಡುಕೊಂಡು ಅಲ್ಲಿ ಒಂದು ಶ್ರೇಷ್ಠವಾದ ಸ್ಮಾರಕವನ್ನು ರಚಿಸಬೇಕೆಂದು ಮುಖಂಡರು ತೀರ್ಮಾನಿಸಿದರು. ಲೋಕಮಾನ್ಯ ತಿಲಕರು ಈ ಅಧಿವೇಶನದಲ್ಲಿ ಭಾಗವಹಿಸಿದ್ದರು. ಗಾಂಧೀಜಿಯವರೂ ಇದ್ದರು.

ಈ ಅಧಿವೇಶನದ ಸಮಯಕ್ಕೆ ಸರಿಯಾಗಿ ಬ್ರಿಟಿಷ್ ಸರ್ಕಾರ ಮಾಂಟೆಗೂ ಛೆಮ್ಸ್‌ಫರ್ಡ್ ಸುಧಾರಣೆಗಳ ಅಂಶಗಳನ್ನು ಪ್ರಕಟಿಸಿದರು. ಅದಕ್ಕೆ ಚಕ್ರವರ್ತಿಗಳ ಮುದ್ರೆಯೂ ಬಿದ್ದು, ಅವರೇ ಒಂದು ಘೋಷಣೆಯನ್ನು ಹೊರಡಿಸಿದರು.

ಅಮೃತಸರದ ಬಗ್ಗೆ ಒಂದು ನಿರ್ಣಯ ಮಾಡಿ ಸತ್ಯಾಗ್ರಹ ವಾರದಲ್ಲಿ ಜನರು ನಡೆಸಿದ ಅತಿರೇಕಗಳನ್ನು ಖಂಡಿಸಲಾಯಿತು. ಕೆಲವರು ಇದನ್ನು ವಿರೋಧಿಸುವ ಮನೋಭಾವ ಹೊಂದಿದ್ದರು. ಆದರೆ ಗಾಂಧೀಜಿಗೋಸ್ಕರ ಸುಮ್ಮನಿದ್ದರು. ತಿಲಕರೂ ಈ ಪೈಕಿ ಒಬ್ಬರು. ರಾಜಕೀಯ ಸುಧಾರಣೆಗಳ ಬಗ್ಗೆ ದೇಶಬಂಧು ದಾಸರೂ ಲೋಕಮಾನ್ಯ ತಿಲಕರೂ ಒಂದೇ ಅಭಿಪ್ರಾಯ ಹೊಂದಿದ್ದರು.

“ಈ ಸುಧಾರಣೆಗಳು ಏನೇನೂ ಸಾಲವು, ಅತೃಪ್ತಿಕರ ಮತ್ತು ನಿರಾಶಕರ ಇವನ್ನು ಅಡ್ಡಿಪಡಿಸಬೇಕು ಮತ್ತು ತಿರಸ್ಕರಿಸಬೇಕು” ಎಂಬ ನಿರ್ಣಯ ತಂದರು. ಪಂಡಿತ ಮಾಳವೀಯರೂ ಗಾಂಧೀಜಿಯವರೂ ಇವಕ್ಕೆಸಹಕಾರ ವೀಯಬೇಕೆಂದೂ, ಎಷ್ಟರ ಮಟ್ಟಿಗೆ ಸರ್ಕಾರದ ಸಹಕಾರವೋ ಅಷ್ಟರಮಟ್ಟಿಗೆ ಪ್ರಜೆಗಳ ಸಹಕಾರ ಕೊಡಬೇಕೆಂದೂ ಅಭಿಪ್ರಾಯಪಟ್ಟರು. ಗಾಂಧೀಜಿಗೂ ತಿಲಕರಿಗೂ ಉಂಟಾಗಿದ್ದ ಭಿನ್ನಾಭಿಪ್ರಾಯವನ್ನು ಸರಿಮಾಡಿಸಲು ಇಬ್ಬರಿಗೂ ಒಪ್ಪಿಗೆಯಾದ ನಿರ್ಣಯವನ್ನು ಜಯರಾಮ್‌ದಾಸ್ ದೌಲತ್‌ರಾಮ್ ತಂದರು. ಎಲ್ಲರಿಗೂ ಒಪ್ಪಿಗೆಯಾಗಿ ಅದು ಸರ್ವಾನುಮತದಿಂದ ಪಾಸಾಯಿತು. ಕಾಂಗ್ರೆಸ್ ಸಂಸ್ಥೆಯ ರಚನೆಯನ್ನೂ ನವೀನ ಕಾಲಕ್ಕೆ ಅನುಗುಣವಾಗಿ ಇರುವಂತೆ ತಿದ್ದುಪಡಿಗಳನ್ನು ಸೂಚಿಸಲು ಗಾಂಧೀಜಿಯವರನ್ನು ಕೇಳಿಕೊಳ್ಳಲಾಯಿತು. ಇದೇ ಅಧಿವೇಶನದಲ್ಲಿ ಪ್ರಾಚೀನ ಕೈಗಾರಿಕೆಗಳಾದ ಕೈಯಿಂದ ನೂಲುವ ಮತ್ತು ಕೈಯಿಂದ ನೇಯುವ ಕೈಗಾರಿಕೆಯನ್ನು ಜಿರ್ಣೋದ್ಧಾರ ಮಾಡಬೇಕೆಂದು ತಿರ್ಮಾನಿಸಲಾಯಿತು.

ಈ ಅಧಿವೇಶನದ ಮತ್ತೊಂದು ವಿಶೇಷವೇನೆಂದರೆ, ಅಮೃತಸರದಲ್ಲಿಯೇ ಮುಸ್ಲಿಂ ಲೀಗ್, ಖಿಲಾಫತ್ ಮತ್ತು ಜಮೇಯತ್ – ಉಲ್ – ಉಲೇಮಾ ಸಂಸ್ಥೆಗಳ ಸಮ್ಮೇಳನಗಳು ಕಾಂಗ್ರೆಸ್ ಅಧಿವೇಶನದ ಕಾಲದಲ್ಲಿಯೇ ನಡೆದವು. ಮುಸ್ಲಿಂ ಲೀಗು ಹಕೀಂ ಅಜ್ಮಲ್ ಖಾನರ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಸಿ ಅಮೃತಸರ್ ಕೊಲೆಯನ್ನು ಖಂಡಿಸಿತು; ಯೂರೋಪ್ ಯುದ್ಧದ ಅನಂತರ ಟರ್ಕೀ ರಾಷ್ಟ್ರದ ಅಖಂಡತೆಯನ್ನು ತಪ್ಪಿಸಿ, ಖಂಡ ಖಂಡ ಮಾಡುವ ಯೂರೋಪಿನ ನೀತಿಯನ್ನೂ ಖಂಡಿಸಿತು; ಇಂಡಿಯಾ ರಾಜಕೀಯ ಸುಧಾರಣೆಗಳ ಬಗ್ಗೆ ಕಾಂಗ್ರೆಸ್ ಪಾಸು ಮಾಡಿದ ನಿರ್ಣಯವನ್ನೇ ಪಾಸು ಮಾಡಿತು. ಹೀಗೆ ಅಮೃತಸರದ ಕಾಂಗ್ರೆಸ್ ಅಧಿವೇಶನ ಬಹಳ ಯಶಸ್ವಿಯಾಗಿ ನಡೆಯಿತು. ಗಾಂಧೀಜಿ ಈ ಅಧಿವೇಶನದಲ್ಲಿ ಹೆಚ್ಚು ಭಾಗ ವಹಿಸದಿದ್ದರೂ, ಅವರನ್ನು ಕಂಡಾಗಲೆಲ್ಲಾ ಅಮೃತಸರದ ಜನ “ಮಹಾತ್ಮಾ ಗಾಂಧಿ ಕಿ ಜೈ” ಎಂಬ ಜಯಘೋಷವನ್ನು ಮಾಡುತ್ತಿದ್ದರು.

ಇನ್ನು ಮುಂದೆ ಗಾಂಧೀಯುಗ ಪ್ರಾರಂಭವಾಯಿತು.

* * *