೧೯೧೮ರಲ್ಲಿ ಯುದ್ಧ ಮುಗಿದರೂ, ಅದರ ಪರ್ಯವಸಾನ ಇಂಡಿಯಾದ ಮುಸ್ಲಿಮರಿಗೆ ಬಹಳ ದುಃಖ ಉಂಟುಮಾಡಿತು. ಖಿಲಾಫತ್ ಸಂಬಂಧದಲ್ಲಿ ಅವರಿಗೆ ಬಹಳ ಅನ್ಯಾಯವಾಯಿತು. ಭಾರತೀಯ ಮುಸ್ಲಿಮರು ಸಭೆಗಳನ್ನೂ, ಸಮ್ಮೇಲನಗಳನ್ನೂ ನಡೆಸಿ ತಮಗೆ ಬಹಳ ಅನ್ಯಾಯವಾಗಿದೆಯೆಂದು ಬ್ರಿಟಿಷ್ ಸರ್ಕಾರಕ್ಕೂ ಇಂಡಿಯಾ ಸರ್ಕಾರಕ್ಕೂ ತಿಳಿಸಿದರು. ಇದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಮುಸ್ಲಿಂ ಮುಖಂಡರು ಗಾಂಧೀಜಿಯ ಸಲಹೆಯನ್ನು ಕೇಳಿದರು.

ಗಾಂಧೀಜಿ ಅಹಮದಾಬಾದಿನಿಂದ ದೆಹಲಿಗೆ ಬಂದು ಮುಸ್ಲಿಂ ಮುಖಂಡರೊಡನೆ ಮಾತನಾಡಿದರು. ಈ ಸಂದರ್ಭದಲ್ಲಿಯೇ ಮೌಲಾನಾ ಅಬುಲ್‌ಕಲಾಂ ಆಜಾದರಿಗೂ ಗಾಂಧೀಜಿಯವರಿಗೂ ಪರಿಚಯವಾದುದು. ಆಜಾದ್ ಮುಸ್ಲಿಮರಲ್ಲಿ ಬಹಳ ಪ್ರಭಾವಶಾಲಿ ಮತ್ತು ದೊಡ್ಡ ವಿದ್ಯಾವಂತರು. ಅವರು ನಡೆಸುತ್ತಿದ್ದ “ಆಲ್ ಹಿಲಾಲ್” ಎಂಬ ಉರ್ದು ಪತ್ರಿಕೆ ಮುಸ್ಲಿಮ್ ಪ್ರಪಂಚದಲ್ಲಿ ಬಹಳ ವ್ಯಾಪಕವಾಗಿತ್ತು. ಇಂಥವರ ಸ್ನೇಹ ಮತ್ತು ಬೆಂಬಲ ಗಾಂಧೀಜಿಗೆ ದೊರೆತದ್ದು ಮುಂದಕ್ಕೆ ಬಹಳ ಅನುಕೂಲವಾಯಿತು. ಇವರು ಕಡೆಯವರಿಗೂ ಗಾಂಧೀಜಿಯ ಒಡನಾಡಿಯಾಗಿಯೇ ಉಳಿದರು.

ಗಾಂಧೀಜಿಯವರೊಡನೆ ಮೌಲಾನಾ ಮಹಮದ್ ಆಲಿ, ಮೌಲಾನಾ ಷೌಕತ್ ಅಲಿ (ಇವರಿಬ್ಬರೂ ಸಹೋದರರು; ಅಲಿ ಸಹೋದರರೆಂದು ಖ್ಯಾತಿ ಪಡೆದವರು) ಹಕೀಂ ಅಜ್ ಮಲ್ ಖಾನ್, ಮೌಲ್ವಿ ಅಬ್ದುಲ್ ಬಾರಿ ಮುಂತಾದವರೂ ಸಮಾಲೋಚನೆ ನಡೆಸಿದರು. ಗಾಂಧೀಜಿ ಎಲ್ಲರ ವಾದವನ್ನೂ ಪರಿಶೀಲಿಸಿ, “ಗೊಡ್ಡು ಬೆದರಿಕೆಗಳಿಗೆ ಸರ್ಕಾರ ಹೆದರುವುದಿಲ್ಲ. ತೀವ್ರವಾದ ಕಾರ್ಯಕ್ರಮವನ್ನು ಕೈಕೊಳ್ಳಬೇಕು. ಯೋಚಿಸಿ ಹೇಳಿ” ಎಂದು ಕೇಳಿದರು. ಎಷ್ಟೋ ಗಂಟೆಗಳು ಚರ್ಚೆಯಾದರೂ ಯಾರಿಗೂ ಏನೂ ತೋಚಲಿಲ್ಲ. ಆಗ ಗಾಂಧೀಜಿ “ಒಂದು ಉಪಸಮಿತಿ ರಚಿಸಿ, ಅದು ಮಾಡಿದ ತೀರ್ಮಾನವನ್ನು ಎಲ್ಲರೂ ಒಪ್ಪಿಕೊಳ್ಳಿ” ಎಂದು ಸಲಹೆ ಮಾಡಿದರು. ಹಕೀಂ ಅಜ್ಮಲ್ ಖಾನ್ ಮತ್ತು ಅಬುಲ್ ಕಲಾಂ ಆಜಾದ್ ಇಬ್ಬರೂ ಉಪಸಮಿತಿಯ ಸದಸ್ಯರಾದರು. ಗಾಂಧೀಜಿ ಅವರೊಡನೆ ಸೇರಿದರು. ರಹಸ್ಯವಾಗಿ ಮೂರು ಗಂಟೆ ಚರ್ಚೆ ನಡೆಯಿತು. ಗಾಂಧೀಜಿ ಅಸಹಕಾರದ ಸಲಹೆಯನ್ನು ಮುಂದಿಟ್ಟರು. ಅಬುಲ್ ಕಲಾಂ ಆಜಾದ್ ತಕ್ಷಣ ಒಪ್ಪಿದರು. ಮೌಲ್ವಿ ಅಬ್ದುಲ್ ಬಾರಿ ಸ್ವಲ್ಪ ನಿಧಾನ ಮಾಡಿದರು.

ಮೀರತ್‌ನಲ್ಲಿ ಒಂದು ಖಿಲಾಫತ್ ಸಮ್ಮೇಳನ ನಡೆಯಿತು. ಗಾಂಧೀಜಿ ಈ ಸಮ್ಮೇಳನದಲ್ಲಿ ಅಸಹಕಾರ ಕಾರ್ಯಕ್ರಮವನ್ನು ಬೋಧಿಸಿದರು. ಅಬುಲ್‌ಕಲಾಂ ಆಜಾದ್‌ರೂ ಸಮರ್ಥಿಸಿದರು. ಹಕೀಂ ಅಜ್ಮಲ್ ಖಾನರೂ ಬೆಂಬಲವಿತ್ತರು.

ಇಷ್ಟರಲ್ಲಿ ಇಂಗ್ಲೆಂಡಿನ ಪ್ರಧಾನ ಮಂತ್ರಿ ಲಾಯಿಡ್ ಜಾರ್ಜರು ಟರ್ಕಿಗೆ ಸೇರದೆ ಇರುವ ಬೇರೆ ಭೂಭಾಗಗಳ ಮೇಲೆ ಟರ್ಕಿಗೆ ಅಧಿಕಾರ ಕೊಡಲಾಗುವುದಿಲ್ಲವೆಂದು ಉತ್ತರವಿತ್ತರು. ಭಾರತದ ಮುಸ್ಲಿಮರಿಗೆ ಕೋಪವೇರಿತು. ೧೯ನೇ ಮಾರ್ಚ್‌ದಿನವನ್ನು ಅಖಿಲ ಭಾರತ ಮುಸ್ಲಿಂ ಶೋಕದಿನವನ್ನಾಗಿ ಆಚರಿಸಲಾಯಿತು. ಮಾರ್ಚ್ ೧೦ರಲ್ಲಿಯೇ ಖಿಲಾಫತ್ ಸಮಸ್ಯೆಯ ಪ್ರಾಧಾನ್ಯತೆಯನ್ನು ತಿಳಿಸಿ, ಹಿಂದೂಗಳೂ ಸೇರಿ ಭಾರತೀಯರೆಲ್ಲರೂ ಖಿಲಾಫತ್ ಚಳುವಳಿಗೆ ಬೆಂಬಲ ಕೊಡಬೇಕೆಂದು ಮುಖಂಡರು ಬಿನ್ನೈಸಿದರು.

ಇಷ್ಟರಲ್ಲಿ, ೧೯೨೦ನೇ ಮೇ ೧೪ರಲ್ಲಿ, ಕೌಲು ಪ್ರಕಟವಾಯಿತು. ಇದರ ಪ್ರಕಾರ, ಟರ್ಕಿಗೆ ಸೇರಿದ್ದ ಮುಸ್ಲಿಮರ ಪವಿತ್ರ ಪ್ರದೇಶಗಳನ್ನು ಹಜಾಜ್‌ದೊರೆಗೆ ವಹಿಸಲಾಯಿತು. ಇದಲ್ಲದೆ ಟರ್ಕಿಯ ಅಧೀನದಿಂದ ಆಮಿನ್‌ನಿಯ ಮುಂತಾದ ಪ್ರದೇಶಗಳನ್ನು ತಪ್ಪಿಸಲಾಯಿತು. ಇದರಿಂದ ಭಾರತೀಯ ಮುಸ್ಲಿಮರಿಗೆ ಇನ್ನೂ ಹೆಚ್ಚು ಕೋಪ ಉಂಟಾಯಿತು. ಅಲಹಾಬಾದ್ ಮತ್ತು ಬೊಂಬಾಯಿನಲ್ಲಿ ಸೇರಿದ ಭಾರಿ ಮುಸ್ಲಿಂ ಸಭೆಗಳು ಗಾಂಧೀಜಿಯ ಅಸಹಕಾರ ಕಾರ್ಯಕ್ರಮವನ್ನು ಒಪ್ಪಿ ನಿರ್ಣಯ ಮಾಡಿದವು.

ಇದೇ ಸಮಯದಲ್ಲಿ ಹಂಟರ್ ವರದಿಯೂ ಪ್ರಕಟವಾಯಿತು. ದೇಶಾಭಿಮಾನಿಗಳಿಗೆಲ್ಲಾ ಈ ವರದಿಯಿಂದ ಬಹಳ ಕ್ರೋಧವುಂಟಾಯಿತು. ಗಾಂಧೀಜಿ ಇದಕ್ಕೆ ಅಸಹಕಾರವೇ ತಕ್ಕ ಪ್ರತೀಕಾರವೆಂದು ಹೇಳಿದರು.

ಹಳೇ ಕಾಂಗ್ರೆಸ್ ಮುಂದಾಳುಗಳಲ್ಲಿ ಪ್ರಮುಖರಾದ ಹೋರಾಡಿದವರು. ಆಗ ಅವರಿಗೆ ೬೩ – ೬೪ವರ್ಷ ವಯಸ್ಸು. ಅವರುಹಿಂದೆ ಪ್ರಯತ್ನ ಪಟ್ಟುದೆಲ್ಲಾ ಆಗ ಫಲಕ್ಕೆ ಬರುತ್ತಿತ್ತು. ಭಾರತದಲ್ಲಿ ಹಿಂದೂ – ಮುಸ್ಲಿಮರು ಐಕ್ಯಮತ್ಯದಿಂದ ಪರಕೀಯ ಸರ್ಕಾರದ ಮೇಲೆ ಹೋರಾಡಲು ಸಿದ್ಧವಾಗಿದ್ದರು. ಗಾಂಧೀಜಿ ಅಸಹಕಾರವನ್ನು ಡಂಗುರ ಹೊಡೆದರು. ದೇಶವೆಲ್ಲಾ ತಿಲಕರು ಏನು ಮಾಡುವರು ಎಂದು ನಿರೀಕ್ಷಿಸುತ್ತಿತ್ತು. ಆದರೆ ಭಾರತದ ದುರ್ದೈವ, ಅವರು ಆಗ ಕಾಯಿಲೆ ಬಿದ್ದರು ಮತ್ತು ೧೯೨೦ ನೇ ಆಗಸ್ಟ್ ೧ ನೇ ತಾರೀಖು ಅರ್ಧರಾತ್ರಿಯಲ್ಲಿ ಇಹಲೋಕವನ್ನು ತ್ಯಜಿಸಿದರು. ಬೊಂಬಾಯಿಯಲ್ಲಿ ನಡೆದ ತಿಲಕ್ ಸ್ಮಶಾನಯಾತ್ರೆಯಲ್ಲಿ, ಮಳೆ ಬಹಳವಾಗಿದ್ದರೂ, ಲಕ್ಷಾಂತರ ಜನರು ಭಾಗಿಯಾಗಿ ತಿಲಕರ ಶವಕ್ಕೆ ತಮ್ಮ ಹೆಗಲನ್ನು ಕೊಟ್ಟರು. ಚೌಪಾತಿ ಮೈದಾನದಲ್ಲಿ ದಹನಕ್ರಿಯೆ ನಡೆಯಿತು.

ಕಾಂಗ್ರೆಸನ್ನು ಅಸಹಕಾರಕ್ಕೆ ಇನ್ನೂ ಒಪ್ಪಿಸಬೇಕಾಗಿತ್ತು. ೧೯೨೦ ನೇ ಮೇ ೩೦ ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಬನಾರಸ್‌ನಲ್ಲಿ ಸಭೆ ಸೇರಿತು. ಪಂಜಾಬ್ ಅತ್ಯಾಚಾರಗಳು ಮತ್ತು ರಾಜಕೀಯ ಸುಧಾರಣೆಗಳು ಪರಿಶೀಲನೆಗೆ ಬಂದವು. ಖಿಲಾಫತ್ ಸಮಸ್ಯೆಯನ್ನೂ ಗಾಂಧೀಜಿ ಪರಿಶೀಲನೆಗೆ ಸೇರಿಸಿದರು. ಈ ವಿಷಯಗಳು ಚರ್ಚೆಯಾದ ಮೇಲೆ ಗಾಂಧೀಜಿ ಅಸಹಕಾರ ಕಾರ್ಯಕ್ರಮವನ್ನು ಸೂಚಿಸಿದರು. ಸಮಿತಿ ಕೂಡಲೇ ತೀರ್ಮಾನ ತೆಗೆದುಕೊಳ್ಳದೆ, ಕಲ್ಕತ್ತಾದಲ್ಲಿ ಸೆಪ್ಟಂಬರಿನಲ್ಲಿ ವಿಶೇಷ ಕಾಂಗ್ರೆಸ್ ಅಧಿವೇಶನವನ್ನು ಸೇರಿಸಿ, ಈ ಪ್ರಶ್ನೆಯನ್ನು ಅಲ್ಲಿ ಪರಿಶೀಲಿಸಬೇಕೆಂದು ತೀರ್ಮಾನಿಸಿತು. ಕಾಶಿಯಲ್ಲಿ ಸೇರಿದ್ದ ಸಭೆಯಲ್ಲಿ ಲೋಕಮಾನ್ಯ ತಿಲಕರು ಭಾಗವಹಿಸಿರಲಿಲ್ಲ. ಅವರು ಖಿಲಾಫತ್ ಚಳುವಳಿಯನ್ನು ಮುಸ್ಲಿಮರೇ ನಡೆಸಬೇಕೆಂದೂ ಹಿಂದೂಗಳು ಬೇಕಾದರೆ ಸಹಾಯ ಮಾಡಬಹುದೆಂದೂ ಅಭಿಪ್ರಾಯ ಪಟ್ಟಿದ್ದಾರೆಂದು ಕೆಲವರು ಹೇಳುತ್ತಾರೆ. ಆದರೆ ಕಾಂಗ್ರೆಸಿನ ತೀರ್ಮಾನದಂತೆ ನಡೆಯುವುದಾಗಿ ಅವರು ಭರವಸೆ ಕೊಟ್ಟಿದ್ದರು.

ಭಾರತದ ರಾಜಕೀಯ ಚಳುವಳಿಯ ಯಾಜಮಾನ್ಯವನ್ನು ತಿಲಕರ ಅನಂತರ ಗಾಂಧೀಜಿ ಹೊತ್ತರು. ಆದರೆ ತಿಲಕರ ದಾರಿ ಬೇರೆ, ಗಾಂಧೀಜಿಯ ದಾರಿ ಬೇರೆ. ಗಾಂಧೀಜಿ ಹಿಂದೆಯೇ ಆಗಸ್ಟ್ ಒಂದನೇ ತಾರೀಖು ಅಸಹಕಾರ ಚಳುವಳಿ ಆರಂಭವಾಗಬೇಕೆಂದು ಗೊತ್ತು ಮಾಡಿದರು. ಇದಕ್ಕೆ ಮುಂಚೆಯೇ ವೈಸರಾಯರಿಗೆ ಒಂದು ಬಹಿರಂಗ ಪತ್ರ ಬರೆದು, ತಾವು ಸರ್ಕಾರದೊಡನೆ ಇಟ್ಟುಕೊಂಡಿದ್ದ ಸಹಕಾರ ಮಾರ್ಗವನ್ನು ತ್ಯಜಿಸಿ, ಈಗ ಅಸಹಕಾರ ಮಾರ್ಗವನ್ನು ಅನುಸರಿಸುವುದಾಗಿ ತಿಳಿಸಿದ್ದರು. “ಮುಸ್ಲಿಮರಿಗೆ ಖಿಲಾಫತ್ ಬಗ್ಗೆ ಆದ ಅನ್ಯಾಯ ಅತಿತೀವ್ರ; ಅವರು ಇಟ್ಟಿದ್ದ ಭಕ್ತಿ ಮತ್ತು ನಂಬಿಕೆಯನ್ನು ಸರ್ಕಾರ ಕಳೆದುಕೊಂಡಿದೆ. ಪಂಜಾಬಿನ ಅತ್ಯಾಚಾರಗಳ ಬಗ್ಗೆಯೂ ಜಲಿಯನ್ ವಾಲಾಬಾಗ್‌ಕೊಲೆಯ ಬಗ್ಗೆಯೂ ಸರ್ಕಾರ ಅನುಸರಿಸಿದ ನೀತಿ ಭಾರತದ ಪ್ರಜೆಗಳ ಹೃದಯವನ್ನು ಭೇದಿಸಿದೆ. ಸರ್ಕಾರದಲ್ಲಿ ಅವರಿಗೆ ಈಗ ಯಾವ ನಂಬಿಕೆಯೂ ಇಲ್ಲ. ಈಗ ಭಾರತೀಯರಿಗೆ ತಮಗೆ ಸರ್ಕಾರದಿಂದ ಆದ ಅನ್ಯಾಯವನ್ನು ಎದುರಿಸಲು ಅಸಹಕಾರ ಬಿಟ್ಟು ಬೇರೆ ಯಾವ ಮಾರ್ಗವೂ ಇಲ್ಲ. ಆದುದರಿಂದ ನಾನು ಪ್ರಜೆಗಳಿಗೆ ಆ ಮಾರ್ಗವನ್ನು ಸೂಚಿಸಿದ್ದೇನೆ. ವೈಸರಾಯರಾದ ತಾವು ಪ್ರಜೆಗಳ ಇಂಗಿತವನ್ನು ಅರಿತು, ಸೂಕ್ತ ಪರಿಹಾರವನ್ನು ಹುಡುಕಿ, ವ್ಯವಹರಿಸಬೇಕೆಂದು ಕೋರುತ್ತೇನೆ.” ಎಂದು ತಿಳಿಸಿದ್ದರು.

ಗಾಂಧೀಜಿ ಅಸಹಕಾರ ಮಾರ್ಗವನ್ನು ಮೆಟ್ಟಿಲು ಮೆಟ್ಟಲಾಗಿ ಜನರು ಅನುಸರಿಸಬೇಕೆಂದು ಹೇಳಿದರು. ಮೊಟ್ಟ ಮೊದಲನೆಯದಾಗಿ, ಅಸಹಕಾರ ಕಾರ್ಯಕ್ರಮ ಅಹಿಂಸಾ ಮಾರ್ಗದಲ್ಲಿಯೇ ನಡೆಯಬೇಕು; ಯಾರು ಯಾರಿಗೆ ಅಸಹಕಾರ ನ್ಯಾಯವೆಂದು ತೋರಿದೆಯೋ ಅವರು ವಿನಯದಿಂದ, ಅಹಿಂಸಾ ಭಾವನೆಯಿಂದ, ಕಾರ್ಯಗಳನ್ನು ಕೈಕೊಳ್ಳಬೇಕು; ಪ್ರೀತಿಯಿಂದ ನಾವು ಇತರರನ್ನು ಸತ್ಯದ ಮಾರ್ಗಕ್ಕೆ ತಿರುಗಿಸಬೇಕು ಎಂದು ಮುಂತಾಗಿ ಬೋಧಿಸಿದರು. ಅಸಹಕಾರದಲ್ಲಿ ನಾಲ್ಕು ಮಜಲುಗಳಿವೆ. ಅಸಹಕಾರ ಮಾಡುವವರು, ಮೊದಲನೆಯದು, ತಮ್ಮ ಬಿರುದುಗಳನ್ನು (ನೈಟ್ ಹುಡ್, ದಿವಾನ್ ಬಹದೂರ್, ರಾವ್ ಬಹದೂರ್ ಮುಂತಾದ ಬಿರುದುಗಳು) ತ್ಯಜಿಸಬೇಕು; ಎರಡನೆಯದು ಸರ್ಕಾರದ ಸಂಬಳ ಪಡೆದು ಕೆಲಸ ಮಾಡಬಾರದು (ಇದು ಸಿವಿಲ್ ಮತ್ತು ಜುಡಿಷಿಯಲ್ ಇಲಾಖೆಗಳಿಗೆ ಸಂಬಂಧಿಸಿದ್ದು); ಮೂರನೆಯದು, ಕಂದಾಯಗಳನ್ನು ಕೊಡದಿರುವುದು; ಕಡೆಯದು, ಪೊಲೀಸರನ್ನೂ, ಮಿಲಿಟರಿಯವರನ್ನೂ ಸರ್ಕಾರದ ಕೆಲಸ ಬಿಟ್ಟು ಹೊರಗೆ ಬನ್ನಿ ಎಂದು ಕರೆಯುವುದು.

ಅಸಹಕಾರ ಚಳುವಳಿಯ ಪೂರ್ಣ ಸ್ವರೂಪವನ್ನು ಗಾಂಧೀಜಿ ಚೆನ್ನಾಗಿ ಆಲೋಚನೆ ಮಾಡಿದ್ದರು. ಆದ್ದರಿಂದ ಥಟಕ್ಕನೆ ಅವರು ಚಳುವಳಿಯನ್ನು ಆರಂಭಿಸಲಿಲ್ಲ. ಜನರಲ್ಲಿ ಆಗ್ಗಾಗ್ಗೆ ಏಳುತ್ತಿದ್ದ ಸಂದೇಹಗಳನ್ನು ಪರಿಹರಿಸುತ್ತಿದ್ದರು. ಭಾರತದ ಆಗ್ಗಾಗ್ಗೆ ಏಳುತ್ತಿದ್ದ ಸಂದೇಹಗಳನ್ನು ಪರಿಹರಿಸುತ್ತಿದ್ದರು. ಭಾರತದ ಮಂದಪಕ್ಷದ ಸರ್ ನಾರಾಯಣ ಚಂದಾವರ್ಕರ್ ಮುಂತಾದವರು “ಅಸಹಕಾರ ಕಾರ್ಯಕ್ರಮವನ್ನಾರಂಭಿಸಿ, ದೇಶವನ್ನು ಆರಾಜಕತೆಗೆ ತಳ್ಳಬೇಡಿ; ಪಂಜಾಬಿನಲ್ಲಿ ಆದಂತೆ ಎಲ್ಲ ಕಡೆಯೂ ಆಗುವಂತೆ ಮಾಡಬೇಡಿ” ಎಂಬ ಎಚ್ಚರಿಕೆಯ ಪತ್ರಗಳನ್ನು ಗಾಂಧೀಜಿಗೆ ಬರೆದರು. ಇನ್ನು ಕೆಲವರು “ಅಸಹಕಾರ ಕಾರ್ಯಕ್ರಮವೇನೋ ಸರಿ. ಆದರೆ ಅದನ್ನು ಆಚರಣೆಯಲ್ಲಿ ತರಲು ಸಾಧ್ಯವೋ” ಎಂಬಿವೇ ಮುಂತಾದ ಪ್ರಶ್ನೆಗಳನ್ನು ಹಾಕಿ ಜಾರಿಕೊಳ್ಳಲಾರಂಭಿಸಿದರು. ಗಾಂಧೀಜಿಯವರು ಎಲ್ಲರಿಗೂ ಸೂಕ್ತವಾದ ಉತ್ತರ ಹೇಳುತ್ತಿದ್ದರು. ಆ ಕಾಲದಲ್ಲಿ ಗಾಂಧೀಜಿ ಮಾಡುತ್ತಿದ್ದ ಭಾಷಣಗಳು ಬಹಳ ಕಾವಿನಿಂದ ಕೂಡಿರುತ್ತಿದ್ದವು. ಸರ್ಕಾರವನ್ನು ದುಷ್ಟ ಸರ್ಕಾರ, ಸೈತಾನಿ ಸರ್ಕಾರ ಎಂದು ಕರೆಯುತ್ತಿದ್ದರು. ಈ ಸರ್ಕಾರವನ್ನು ಮಟ್ಟ ಹಾಕಬೇಕು ಎಂದು ಹೇಳುತ್ತಿದ್ದರು.

೧೯೨೦ನೇ ಆಗಸ್ಟ್ ಮೊದಲನೇ ತಾರೀಖು ಸೂರ್ಯೋದಯವಾಯಿತು. ಅಸಹಕಾರ ಸಂಗ್ರಾಮವೂ ಆರಂಭವಾಯಿತು. ಗಾಂಧೀಜಿ ತಮಗೆ ಕೊಡಲಾಗಿದ್ದ ಕೈಸರ್ – ಇ – ಹಿಂದ್ ಚಿನ್ನದ ಪದಕವನ್ನು ಪೈಸರಾಯರಿಗೆ ವಾಪಸ್ ಕಳುಹಿಸಿದರು, ವೈಸರಾಯರಿಗೆ ಒಂದು ಬಹಿರಂಗ ಪತ್ರ ಬರೆದು, “ಅಸಹಕಾರ ಕಾರ್ಯಕ್ರಮ ಅಹಿಂಸೆಯ ರೂಪದ್ದು, ಸರ್ಕಾರ ದಾರಿಗೆ ಬಂದರೆ ಅದನ್ನು ಹಿಂದಕ್ಕೆ ತೆಗೆದುಕೊಳ್ಳಬಹುದು. ಆದ್ದರಿಂದ, ಈಗಲೂ ಸರ್ಕಾರ ದೇಶದ ನಿಜವಾದ ಮುಂದಾಳುಗಳನ್ನು ಒಂದು ಸಮ್ಮೇಳನದಲ್ಲಿ ಸೇರಿಸಿ, ಭಾರತೀಯ ಮುಸ್ಲಿಮರ ಮನಸ್ಸಿಗೆ ನೆಮ್ಮದಿಯಾಗುವಂತೆಯೂ, ಪಂಜಾಬಿನ ಅತ್ಯಾಚಾರಗಳಿಂದ ಬಹಳ ನೊಂದ ಪ್ರಜೆಗಳಿಗೆ ಪರಿಹಾರ ನೀಡುವಂತೆಯೂ ಕಾರ್ಯಕ್ರಮ ತೆಗೆದುಕೊಳ್ಳಿ ಎಂದು ಕೋರುತ್ತೇನೆ” ಎಂದು ತಿಳಿಸಿದರು. ಇದು ಗಾಂಧಿ ಮಾರ್ಗ. ತಮ್ಮ ಎದುರಾಳಿಗೆ ತಾವು ಮಾಡಬೇಕೆಂದಿರುವ ಕೆಲಸದ ಮುನ್‌ಸೂಚನೆ ಕೊಡಬೇಕು ಮತ್ತು ಅವರ ಹೃದಯ ಪರಿವರ್ತನೆ ಮಾಡಲು ಪ್ರಯತ್ನಿಸಬೇಕು. ಕಾಂಗ್ರೆಸಿನ ವಿಶೇಷ ಅಧಿವೇಶನ ಕಲ್ಕತ್ತಾದಲ್ಲಿ ಸೆಪ್ಟಂಬರ್ ೨೦ರಲ್ಲಿ ನಡೆಯುವ ಮುಂಚೆ, ದೇಶದಲ್ಲೆಲ್ಲಾ ಸಂಚರಿಸಿ ಅಸಹಕಾರ ಕಾರ್ಯಕ್ರಮದ ರಹಸ್ಯವನ್ನು ಗಾಂಧೀಜಿ ಜನತೆಗೆ ಬೋಧಿಸಿದರು.

ವಿಶೇಷ ಅಧಿವೇಶನ ಕಲ್ಕತ್ತಾದಲ್ಲಿ ಆರಂಭವಾಯಿತು. ಲಾಲಾ ಲಜಪತ್ ರಾಯರು ಅಧ್ಯಕ್ಷರು. ಅವರು ಮಹಾಮುಖಂಡರು. ಪಂಜಾಬಿನವರು. ಪಂಜಾಬಿನ ಅತ್ಯಾಚಾರಗಳನ್ನು ಚೆನ್ನಾಗಿ ತಿಳಿದಿದ್ದವರು. ಅವರು ಹಿಂದೆಯೇ ಪಂಜಾಬಿನಲ್ಲಿ ಹೊಸ ಸುಧಾರಣೆಗಳ ಶಾಸನ ಸಭೆಗಳಿಗೆ ಯಾರೂ ಉಮೇದುವಾರರಾಗಿ ನಿಲ್ಲಕೂಡದೆಂದೂ, ಚುನಾವಣೆಗಳನ್ನು ಬಹಿಷ್ಕರಿಸಬೇಕೆಂದೂ ಸೂಚಿಸಿದ್ದವರು. ಅವರು ಅಮೆರಿಕಾದಲ್ಲಿ ಬಹಳ ವರ್ಷ ವಾಸಮಾಡಿ, ಆಗ ತಾನೆ ಭಾರತಕ್ಕೆ ಹಿಂತಿರುಗಿದ್ದವರು.

ಗಾಂಧೀಜಿ ತಮ್ಮ ಸಲಹೆಯನ್ನು ವಿಶೇಷ ಅಧೀವೇಶನದಲ್ಲಿಟ್ಟರು. ಅನೇಕ ಮುಖಂಡರು ಗಾಂಧೀಜಿಯ ನಿರ್ಣಯ ಪಾಸಾಗಬಾರದೆಂದು ಏನೇನೋ ಸಬೂಬು ಹೇಳಿದರು. ಗಾಂಧೀಜಿ ಎಲ್ಲಕ್ಕೂ ಉತ್ತರವನ್ನು ಹೇಳಿದರು. ಈ ಅಧಿವೇಶನಕ್ಕೆ ಬೊಂಬಾಯಿ ಮತ್ತು ಮದರಾಸಿನಿಂದ ಸ್ಪೆಷಲ್ ರೈಲುಗಳಲ್ಲಿ ಪ್ರತಿನಿಧಿಗಳು ಬಂದಿದ್ದರು. ಇವರಲ್ಲಿ ಮುಸ್ಲಿಮರು ಬೇಕಾದಷ್ಟು ಜನ ಇದ್ದರು. ವಿಷಯ ಸಮತಿ ಎಂಟು ಗಂಟೆಗಳ ಕಾಲ ತುಮುಲ ಚರ್ಚೆ ನಡೆಸಿತು. ನಲವತ್ತು ತಿದ್ದುಪಡಿಗಳನ್ನು ನಿರ್ಣಯಕ್ಕೆ ಸೂಚಿಸಲಾಗಿತ್ತು. ಮಹಾಮಹಾ ಮುಖಂಡರು ಭಾಷಣ ಮಾಡಿದರು. ಪಂಡಿತ ಮಾಳವೀಯ, ಸಿ.ಆರ್. ದಾಸ್, ಬೆಪಿನ್ ಚಂದ್ರಪಾಲ್, ಮಹಮ್ಮದಾಲಿ ಜಿನ್ಹಾ, ಆನಿ ಬೆಸೆಂಟ್ ಲಾಲಾ ಲಜಪತರಾಯರು ವಿದ್ಯಾರ್ಥಿಗಳಿಗೆ ಸ್ಕೂಲು ಕಾಲೇಜುಗಳಿಂದ ಹೊರಕ್ಕೆ ಬರುವಂತೆ ಕರೆಕೊಡಬಾರದೆಂದು ವಾದಿಸಿದರು. ಅಲ್ಲಿ ಸೇರಿದ್ದ ಅನೇಕ ಮುಖಂಡರಿಗೆ ಶಾಸನ ಸಭೆಗಳ ಬಹಿಷ್ಕಾರ ಬೇಡವಾಗಿತ್ತು. ಇದರಿಂದ ಅವರಿಗೆ ಕೆಲಸವೇ ಇಲ್ಲದೆ ರಾಜಕೀಯ ಅತ್ಮಹತ್ಯೆ ಮಾಡಿಕೊಂಡಂತಾಗುವುದು ಎಂದು ಅವರು ವಾದಿಸಿದರು. ಸಿ.ಆರ್. ದಾಸರು ಬಗ್ಗೆ ಬೆಪಿನ್ ಚಂದ್ರಪಾಲರ ತಿದ್ದುಪಡಿಯನ್ನು ಅನುಮೋದಿಸಿದರು. ಅದನ್ನು ವೋಟಿಗೆ ಹಾಕಲಾಯಿತು. ಅದು ೧೫೫ – ೧೬ ಓಟುಗಳಿಂದ ಬಿದ್ದು ಹೋಯಿತು. ಗಾಂಧೀಜಿಯ ನಿರ್ಣಯ ಪಂಡಿತ ಮೋತಿಲಾಲರ ತಿದ್ದುಪಡಿಯೊಡನೆ ಪಾಸಾಯಿತು. ಕಡೆಗೆ ಪೋಲ್ ತೆಗೆದುಕೊಂಡಾಗ ೧೪೮ – ೧೩೩ ಓಟು ಬಂದಿತು. ಗಾಂಧೀಜಿಗೆ ಬಹುಮತ ದೊರೆಯಿತೆಂದು ಕೂಡಲೇ ಸಭೆಯೊಳಗೂ ಹೊರಗೂ ಬಹಳ ಜಯಜಯಕಾರಗಳಾದವು.

ಮರು ದಿನ ಬಹಿರಂಗ ಅಧಿವೇಶನ ನಡೆಯಿತು. ಪ್ರಾರಂಭದಲ್ಲಿಯೇ ಸರ್ ಅಷುತೋಷ್ ಚೌಧರಿ ಅಸಹಕಾರ ನಿರ್ಣಯವನ್ನು ಈಗ ತೆಗೆದುಕೊಳ್ಳಕೂಡದೆಂದೂ, ಮುಂದಿನ ಅಧಿವೇಶನದಲ್ಲಿ ತೆಗೆದು ಕೊಳ್ಳಬೇಕೆಂದೂ ಅಡ್ಜರ್ನ್‌ಮೆಂಟ್ ಸೂಚನೆ ತಂದರು. ವಿ.ಪಿ. ಮಾಧವರಾಯರು ಅನುಮೋದಿಸಿದರು. ಓಟಿಗೆ ಹಾಕಿದಾಗ, ಬಹಳ ಹೆಚ್ಚಿನ ಬಹುಮತದಿಂದ ಇದು ಬಿದ್ದು ಹೋಯಿತು. ಅನಂತರ ಗಾಂಧೀಜಿಯವರೆದ್ದು ತಮ್ಮ ಅಸಹಕಾರ ನಿರ್ಣಯವನ್ನು ಸೂಚಿಸಿ, ಹೃದಯಂಗಮವಾದ ಭಾಷಣದ ಮಾಡಿದರು. ಬೆಪಿನ್ ಚಂದ್ರಪಾಲರು ಈ ನಿರ್ಣಯಕ್ಕೆ ಒಂದು ತಿದ್ದುಪಡಿಯನ್ನು ತಂದರು. ಅದರ ಅಭಿಪ್ರಾಯ ಈ ರೀತಿ ಇತ್ತು; “ನಮ್ಮ ಕೋರಿಕೆಗಳನ್ನೆಲ್ಲಾ ಬ್ರಿಟಿಷ್ ಸರ್ಕಾರ ಮುಂದೆ ನೇರವಾಗಿ ಇಡಲು ಒಂದು ನಿಯೋಗ ಇಂಗ್ಲೆಂಡಿಗೆ ಹೋಗಬೇಕು. ಅದು ಬರುವುದರೊಳಗೆ ಕಾಂಗ್ರೆಸು ರಾಷ್ಟ್ರೀಯ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಬೇಕು ಮತ್ತು ಆರ್‌ಬಿಟ್ರೀಷನ್ ಕೋರ್ಟುಗಳನ್ನು ಸ್ಥಾಪಿಸಬೇಕು. ಆದರೆ ಶಾಸನ ಸಭೆಗಳನ್ನು ಬಹಿಷ್ಕರಿಸಕೂಡದು”. ಸಿ.ಆರ್. ದಾಸರು ಇದನ್ನು ಅನುಮೋದಿಸಿ, ಗಾಂಧೀಜಿಗೆ ತಮ್ಮ ನಿರ್ಣಯವನ್ನು ಪುನರಾಲೋಚಿಸಬೇಕೆಂದು ಕೋರಿದರು. ಆನಿಬೆಸೆಂಟರು ನಿರ್ಣಯ ತಿದ್ದುಪಡಿ ಎರಡನ್ನೂ ವಿರೋಧಿಸಿದರು. ಮಾಳವೀಯ ಮತ್ತು ಜಿನ್ಹಾ ಶಾಸನ ಸಭೆಗಳ ಬಹಿಷ್ಕಾರವನ್ನು ಮಾತ್ರ ವಿರೋಧಿಸಿದರು. ಯಾಕೂಬ್ ಹಸನ್, ಜಿತೇಂದ್ರಲಾಲ್ ಬ್ಯಾನರ್ಜಿ, ಮೋತಿಲಾಲ್ ನೆಹರು, ರಾಮಭುಜದತ್ ಇವರುಗಳು ಗಾಂಧೀಜಿಯ ನಿರ್ಣಯಕ್ಕೆ ಪೂರ್ತಿ ಬೆಂಬಲಕೊಟ್ಟು ಮಾತನಾಡಿದರು. ಮರು ದಿನ ಪ್ರಾತಃಕಾಲ ಪ್ರಾಂತ್ಯ ಪ್ರಾಂತ್ಯವಾಗಿ ಓಟು ತೆಗೆದುಕೊಳ್ಳಲಾಯಿತು. ಹನ್ನೆರಡು ಪ್ರಾಂತ್ಯಗಳಲ್ಲಿ ಮಧ್ಯಪ್ರದೇಶ ಮತ್ತು ಬಿಹಾರ್ ಪ್ರತಿನಿಧಿಗಳು ಮಾತ್ರ ಗಾಂಧೀಜಿಯ ನಿರ್ಣಯಕ್ಕೆ ವಿರೋಧವಾಗಿ ಓಟು ಮಾಡಿದರು. ಒಟ್ಟು ೫,೮೧೪ ಪ್ರತಿನಿಧಿಗಳ ಪೈಕಿ ೨,೭೨೮ಜನ ಓಟಿನಲ್ಲಿ ಭಾಗವಹಿಸಿದರು. ಸರಿಯಾಗಿ ಎಣಿಕೆ ಮಾಡಿದ್ದರಲ್ಲಿ ೧,೮೫೫ ಓಟುಗಳು ಗಾಂಧೀಜಿಯ ಅಸಹಕಾರ ನಿರ್ಣಯಕ್ಕೆ ಅನುಕೂಲವಾಗಿಯೂ, ೮೭೯ ಓಟುಗಳು ವಿರುದ್ಧವಾಗಿಯೂ ಇದ್ದವು, ಅಂತೂ ಪ್ರಬಲ ವ್ಯಕ್ತಿಗಳ ವಿರೋಧವಿದ್ದರೂ ಗಾಂಧೀಜಿಯ ಅಸಹಕಾರ ನಿರ್ಣಯಕ್ಕೆ ಕಾಂಗ್ರೆಸಿನ ಅಂಗೀಕಾರ ಮುದ್ರೆ ಬಿದ್ದಿತು. ಪಂಡಿತ ಮಾಳೆವೀಯ ಮತ್ತು ಇತರ ಕೆಲವು ಮುಖಂಡರು ಹೊಸ ಸುಧಾರಣೆಗಳ ಉಪಯೋಗವನ್ನು ತ್ಯಜಿಸಲು ಹಿಂಜರಿದರು; ಆದರೆ ಕಾಂಗ್ರೆಸಿನ ನಿರ್ಣಯಕ್ಕೆ ವಿರೋಧವಾಗಿ ಆಚರಿಸಲು ಇಷ್ಟಪಡಲಿಲ್ಲ. ಆದ್ದರಿಂದ ಶಾಸನ ಸಭೆಗಳಿಗೆ ಉಮೇದುವಾರರಾಗಿ ನಿಂತಿದ್ದ ವಿಟ್ಠಲಭಾಯಿ ಪಟೇಲ್, ಸಿ.ಆರ್.ದಾಸ್, ಸಿ.ವಿಜಯರಾಘವಾಚಾರಿ, ಗಂಗಾಧರರಾವ್ ದೇಶಪಾಂಡೆ ಮತ್ತು ಇನ್ನೂ ಇತರರು ತಮ್ಮ ಉಮೇದುವಾರಿಕೆಯನ್ನು ವಾಪಸು ತೆಗೆದುಕೊಂಡರು. ಪ್ರಮುಖ ಕಾಂಗ್ರೆಸಿಗರು ತಮ್ಮ ಬಿರುದುಗಳನ್ನು ತ್ಯಜಿಸಿದರು.

ಅದೇ ವರ್ಷದ ಡಿಸೆಂಬರ್‌ನಲ್ಲಿ ಕಾಂಗರೆಸ್ ಮಹಾಧಿವೇಶನ ನಡೆಯಿತು. ಅದರೊಳಗೆ ಗಾಂಧೀಜಿ ಮತ್ತು ಅವರ ಹಿಂಬಾಲಕರು ಅಸಹಕಾರ ಕಾರ್ಯಕ್ರಮದ ಅಂಶಗಳನ್ನು ಜನತೆಗೆ ಬೋಧಿಸಲು ಊರಿಂದ ಊರಿಗೆ ಪ್ರಯಾಣ ಮಾಡಿದ್ದರು. ಅವರ ಜೊತೆಯಲ್ಲಿ ಅಬುಲ್ ಕಲಾ ಆಜಾದ್ ಮತ್ತು ಅಲಿ ಸಹೋದರರು ಪ್ರಚಾರ ಕಾರ್ಯ ನಡೆಸಿದ್ದರು. ಅಲಿಘರ್ ಮುಸ್ಲಿಂ ವಿಶ್ವ ವಿದ್ಯಾಲಯ ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯ ಇವುಗಳಿಗೆ ಹೋಗಿ, ವಿದ್ಯಾರ್ಥಿಗಳನ್ನು ಕಾಲೇಜು ಬಿಟ್ಟು ಅಸಹಕಾರ ಸಂಗ್ರಾಮದಲ್ಲಿ ಭಾಗವಹಿಸಬೇಕೆಂದು ಕೋರಿದರು. ಲಾಯರುಗಳು ತಮ್ಮ ವಕೀಲಿಯನ್ನು ತ್ಯಜಿಸಿ ಅಸಹಕಾರ ಕಾರ್ಯಕ್ಕೆ ಸೇರಬೇಕೆಂದೂ ಬೋಧಿಸಿದರು. ಸೆಪ್ಟಂಬರಿಂದ ಡಿಸೆಂಬರ್‌ನೊಳಗೆ ಇಡಿ ದೇಶ ಅಸಹಕಾರದ ಕೂಗಿನಿಂದ ತುಂಬಿತು. ಸಾವಿರಾರು ವಕೀಲರು ತಮ್ಮ ವಕೀಲಿಯನ್ನು ತ್ಯಜಿಸಿ, ದೇಶ ಸೇವೆಗೆ ಇಳಿದರು. ಸುಮಾರು ೨೦,೦೦೦ ವಿದ್ಯಾರ್ಥಿಗಳು ಕಾಲೇಜುಗಳನ್ನು ತ್ಯಜಿಸಿದರು ಎಲ್ಲೆಲ್ಲೂ “ಮಹಾತ್ಮ ಗಾಂಧೀ ಕಿ ಜೈ” ಎಂಬ ಉತ್ಸಾಹದ ಘೋಷಣೆ. ಬೀದಿಗಳಲೆಲ್ಲಾ ಮೆರವಣಿಗೆಗಳು ಆರಂಭವಾದವು. ನಾಗಪುರದ ಅಧಿವೇಶನದ ವೇಳೆಗೆ ಅಸಹಕಾರ ಕಾರ್ಯಕ್ರಮ ದೇಶವನ್ನೆಲ್ಲಾ ವ್ಯಾಪಿಸಿತ್ತು. ಈ ಅಧಿವೇಶನ ೧೯೨೦ನೇ ಡಿಸಂಬರ್ ಅಂತ್ಯದಲ್ಲಿ ನಡೆಯಿತು. ಪ್ರತಿನಿಧಿಗಳ ಹಾಜರಿ ಬಹಳ ಬಲವಾಗಿತ್ತು. ಸಾವಿರ ಪ್ರತಿನಿಧಿಗಳಿದ್ದರು. ಸ್ಪೆಷಲ್ ರೈಲುಗಳಲ್ಲಿ ಬಂಗಾಳಾದಿಂದ ಪ್ರತಿನಿಧಿಗಳು ಬಂದಿದ್ದರು. ಸಿ.ಆರ್. ದಾಸ್, ಬಿ.ಸಿ. ಪಾಲ್, ಲಜಪತರಾಯ್, ಮಾಳವೀಯ, ಜಿನ್ಹಾ, ವಿಜಯ ರಾಘವಾಚಾರಿ ಇವರೆಲ್ಲರೂ ವಿಷಯ ಸಮಿತಿಯಲ್ಲಿ ಅಸಹಕಾರ ಕಾರ್ಯಕ್ರಮದ ವಿರುದ್ಧ ಬಹಳ ಹೋರಾಡಿದರು. ಗಾಂಧೀಜಿ ಪುನಃ ತಮ್ಮ ವಾದವನ್ನು ಮುಂದಿಟ್ಟರು. ಸಿ.ಆರ್. ದಾಸರ ಹಿಂಬಾಲಕರೊಡನೆ ಬಹಳ ಹೋರಾಡಿದರು. ಬಹಳ ಚರ್ಚೆ ಆಯಿತು. ಆದರೂ ಗಾಂಧೀಜಿಗೆ ಜಯವಾಯಿತು.

ಬಹಿರಂಗ ಅಧಿವೇಶನದಲ್ಲಿ ಪ್ರತಿನಿಧಿಗಳ ಉತ್ಸಾಹ ಹೇಳತೀರದು. ಸಿ.ಆರ್.ದಾಸ್‌ರವರೇ ಅಸಹಕಾರ ನಿರ್ಣಯವನ್ನು ಸಣೆಯ ಮುಂದಿಟ್ಟು, ಪ್ರಭಾವಶಾಲಿಯಾದ ಭಾಷಣ ಮಾಡಿದರು. ಲಾಲಾ ಲಜಪತರಾಯರು ಅದನ್ನು ಅನುಮೋದಿಸಿದರು. ವಿಜಯರಾಘವಾಚಾರಿಯವರು ಖಿಲಾಫತ್ ಪಂಜಾಬ್ ಅತ್ಯಾಚಾರಗಳ ಜೊತೆಗೆ ಸ್ವರಾಜ್ಯದ ವಿಷಯವನ್ನು ಸೇರಿಸಬೇಕೆಂದು ಕೋರಿದರು. ಹಾಗೆಯೇ ಮಾಡಲಾಯಿತು. ಗಾಂಧೀಜಿ ಈ ನಿರ್ಣಯದ ಮೇಲೆ ಭಾಷಣ ಮಾಡಿ “ಪ್ರತಿನಿಧಿಗಳು ತಮ್ಮ ಭಿನ್ನತೆಗಳನ್ನೆಲ್ಲಾ ಮರೆತು ಬಿಡಬೇಕು. ಕಾಯಾ, ವಾಚಾ, ಮನಸಾ ಹಿಂಸೆಯನ್ನು ತೊರೆಯಬೇಕು. ಈಗ ನಾವುಅಂಗೀಕರಿಸುವ ನಿರ್ಣಯದಂತೆ ನಡೆದರೆ ನಮಗೆ ಸ್ವರಾಜ್ಯ ಬರಲು ಒಂದು ವರ್ಷವೂ ಬೇಕಿಲ್ಲ, ಒಂಬತ್ತು ತಿಂಗಳೇ ಸಾಕು” ಎಂದರು.

ಈ ಅಧಿವೇಶನದಲ್ಲಿ ಕಾಂಗ್ರೆಸಿನ ಗುರಿಯನ್ನು ಸ್ವಷ್ಟಪಡಿಸಲಾಯಿತು. ಸಂಘಟನೆಯಲ್ಲಿ “ಎಲ್ಲಾ ಶಾಂತಿ ಮತ್ತು ನ್ಯಾಯ ಸಮ್ಮತ ಸಾಧನೆಗಳಿಂದ ಸ್ವರಾಜ್ಯವನ್ನು ಸಂಪಾದಿಸುವುದೇ ಇಂಡಿಯನ್ ನ್ಯಾಷನಲ್ ಕಾಂಗ್ರೆಸಿನ ಗುರಿ” ಎಂದು ತಿದ್ದುಪಡಿ ಮಾಡಲಾಯಿತು. ಗಾಂಧೀಜಿ ಇದನ್ನು ವಿವರಿಸುತ್ತ ಸ್ವರಾಜ್ಯ ಬ್ರಿಟಿಷ್ ಸಾಮ್ರಾಜ್ಯದ ಒಳಗಾದರೂ ಇರಬಹುದು ಅಥವಾ ಹೊರಗಾದರೂ ಆಗಬಹುದು ಎಂದು ತಿಳಿಸಿದರು. ಇದರಿಂದ ಸಾಮ್ರಾಜ್ಯದ ಒಳಗೇನೆ ಎಂದು ಹಿಂದೆ ಇದ್ದ ನಿರ್ಬಂದ ಈಗ ತಪ್ಪಿತು.

ತಿಲಕ್ ಸ್ವರಾಜ್ಯ ನಿಧಿಗೆ ಒಂದು ಕೋಟಿರೂಪಾಯನ್ನು ಶೇಖರಿಸಬೇಕೆಂದು ನಿರ್ಣಯವಾಯಿತು. ಗಾಂಧೀಜಿ ಇದರ ಬಗ್ಗೆ ಒತ್ತಾಯವಾಗಿ ಭಾಷಣಮಾಡಿದರು.

ಈ ಅಧಿವೇಶನಕ್ಕೆ ಕರ್ನಲ್ ವೆಜ್‌ವುಡ್ ಮತ್ತು ಹಾಲ್‌ಫರ್ಡ್ ರೈಟ್ ಎಂಬ ಇಂಗ್ಲೆಂಡಿನ ರಾಜನೀತಿಜ್ಞರು ಬಂದಿದ್ದರು. ಅವರೂ ಅಧಿವೇಶನದಲ್ಲಿ ಭಾಷಣ ಮಾಡಿದರು. ಈ ಅಧಿವೇಶನವಾದ ಕೂಡಲೇ ಗಾಂಧೀಜಿ ಮತ್ತು ಇತರ ಮುಖಂಡರು ದೇಶದ ಎಲ್ಲಾ ಭಾಗಗಳಲ್ಲೂ ಹುರುಪಿನಿಂದ ಅಸಹಕಾರ ಕಾರ್ಯಕ್ರಮವನ್ನು ಪ್ರಚಾರಗೊಳಿಸಲು ಉದ್ಯುಕ್ತರಾದರು. ಅಸಹಕಾರ ಕ್ರಮದ ವಿವರ ಈ ರೀತಿಯಿತ್ತು:

(೧) ೧೬ ವರ್ಷಕ್ಕೆ ಮಾರಿದ ವಿದ್ಯಾರ್ಥಿಗಳು ಸರ್ಕಾರಿ ಅಥವಾ ಸರ್ಕಾರದ ಸಹಾಯ ಸ್ವೀಕರಿಸುವ ಸ್ಕೂಲು ಕಾಲೇಜುಗಳಿಂದ ಹೊರಗೆ ಬರಬೇಕು; ಅವನ್ನು ಬಹಿಷ್ಕರಿಸಬೇಕು; ದೇಶಸೇವಾ ಕಾರ್ಯಕ್ರಮದಲ್ಲಿ ಸೇರಬೇಕು.

(೨) ಲಾಯರುಗಳು ತಮ್ಮ ವೃತ್ತಿಯನ್ನು ತ್ಯಜಿಸಿ ಕೋರ್ಟುಗಳನ್ನು ಬಹಿಷ್ಕರಿಸಬೇಕು.

(೩) ವರ್ತಕರು ಪರದೇಶಿ ಸಾಮಾನುಗಳನ್ನು ಕೊಳ್ಳುವುದನ್ನೂ ಮಾರುವುದನ್ನೂ ನಿಲ್ಲಿಸಬೇಕು. ವಿಶೇಷತಃ ಪರದೇಶಿ ಬಟ್ಟೆಯನ್ನು ಬಹಿಷ್ಕರಿಸತಕ್ಕದ್ದು. ಕೈರಾಟೆಯಲ್ಲಿ ನೂಲುವುದನ್ನೂ ಕೈಮಗ್ಗದಲ್ಲಿ ನೇಯುವುದನ್ನೂ ಪ್ರೋತ್ಸಾಹಿಸಬೇಕು. ಜನತೆ ಖಾದಿಯನ್ನು ಕೊಂಡು ಧರಿಸತಕ್ಕದ್ದು. ಮುಖ್ಯವಾಗಿ ಕಾಂಗ್ರೆಸಿಗರು ಈ ಕಾರ್ಯದಲ್ಲಿ ಮುಂದಾಳಾಗಿರತಕ್ಕದ್ದು.

(೪) ಗಂಡಸರು ಮತ್ತು ಹೆಂಗಸರು ಪಟ್ಟಣಿಗರು ಮತ್ತು ಹಳ್ಳಿಯವರು ಎಲ್ಲರೂ ಸ್ವಾರ್ಥತ್ಯಾಗ ಮಾಡಿ, ಅಸಹಕಾರ ಕಾರ್ಯ ನಡೆಸತಕ್ಕದ್ದು.

(೫) ಪ್ರತಿಯೊಂದು ನಗರದಲ್ಲಿಯೂ ಹಳ್ಳಿಯಲ್ಲಿಯೂ ಅಸಹಕಾರ ಕಾರ್ಯಕ್ಕಾಗಿ ಸಮಿತಿಗಳನ್ನು ಸ್ಥಾಪಿಸತಕ್ಕದ್ದು.

(೬) ಆಲ್ ಇಂಡಿಯಾದ ನ್ಯಾಷನಲ್ ಸರ್ವಿಸ್ ಎಂಬ ಸ್ವಯಂ ಸೇವಕರ ತಂಡವನ್ನು ಸ್ಥಾಪಿತಕ್ಕದ್ದು.

(೭) ಅಸಹಕಾರ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಅಖಿಲಭಾರತ ತಿಲಕ್ ಸ್ವರಾಜ್ಯ ನಿಧಿಗೆ ಒಂದು ಕೋಟಿ ರೂಪಯನ್ನು ಕೂಡಿಸತಕ್ಕದ್ದು.

(೮) ಹೊಸ ಶಾಸನ ಸಭೆಗಳಿಗೆ ಚುನಾಯಿತರಾಗಿರುವ ಸದಸ್ಯರು ಕಾಂಗ್ರೆಸಿನ ನಿರ್ಣಯದ ಅನುಸಾರ ತಮ್ಮ ಸದಸ್ಯತ್ವಗಳಿಗೆ ರಾಜೀನಾಮೆ ಕೊಡತಕ್ಕದ್ದು.

(೯) ಪೊಲೀಸರೂ, ಸೈನಿಕರೂ, ಸರ್ಕಾರದ ಅಧಿಕಾರಿಗಳೂ ನೌಕರರೂ ಕಾಂಗ್ರೆಸಿನಿಂದ ಕರೆ ಬರುವವರೆಗೂ ರಾಜೀನಾಮೆ ಕೊಡಬೇಕಾಗಿಲ್ಲ.. ಆದರೆ ಇವರು ಜನತೆಯ ವಿಷಯದಲ್ಲಿ ಮರ್ಯಾದೆಯಿಂದಲೂ ಪ್ರೀತಿಯಿಂದಲೂ ವರ್ತಿಸತಕ್ಕದ್ದು.

(೧೦) ಅಸಹಕಾರ ಚಳುವಳಿ ಅಹಿಂಸಾಯುತವಾದುದು. ಆದ್ದರಿಂದ ಎಲ್ಲ ವಿಧವಾದ ಹಿಂಸೆಗಳೂ ನಿಲ್ಲಬೇಕು. ಪ್ರಜೆಗಳು ಬ್ರಾಹ್ಮಣ – ಬ್ರಾಹ್ಮಣೇತರ, ಹಿಂದೂ – ಮುಸ್ಲಿಂ ಸ್ಪೃಶ್ಯ – ಅಸ್ಪ್ರೃಶ್ಯ ಮುಂತಾದ ಭೇದಗಳನ್ನು ಬದಿಗಿಟ್ಟು ಅಸಹಕಾರ ಕಾರ್ಯಕ್ರಮಕ್ಕೆ ಬೆಂಬಲ ಕೊಡಬೇಕು. ಅಹಿಂಸೆ ಅತ್ಯಂತ ಅವಶ್ಯಕ.

ಈ ಕಾರ್ಯಕ್ರಮಗಳನ್ನು ಭಾರತೀಯ ಜನರು ನಡೆಸಿಕೊಟ್ಟರೆ ನಮಗೆ ಒಂದು ವರ್ಷದಲ್ಲಿ ಸ್ವರಾಜ್ಯ ಬರುವುದು ಖಂಡಿತ ಎಂದು ಗಾಂಧೀಜಿ ಹೇಳಿದರು.

ಗಾಂಧೀಜಿ ಅಸಹಕಾರ ಕಾರ್ಯಕ್ರಮದಲ್ಲಿ ಕಂದಾಯವನ್ನು ಕೊಡದಿರುವ ಅಂಶವನ್ನು ಮುಂದಿಡಲಿಲ್ಲ. ಸರಿಯಾದ ಪರಿಪಕ್ವಸ್ಥಿತಿ ಉಂಟಾದರೆ ಅದನ್ನು ಜಾರಿಗೆ ತರಲು ಯೋಚಿಸುವುದಾಗಿ ತಿಳಿಸಿದರು.

ಈ ಕಾರ್ಯಕ್ರಮಗಳು ಕ್ರಮಕ್ರಮವಾಗಿ ನಡೆಯಬೇಕೆಂದು ತಿಳಿಸಲಾಗಿತ್ತು. ಈ ಕಾರ್ಯಕ್ರಮಗಳ ಪೈಕಿ, ವಿದ್ಯಾರ್ಥಿಗಳ ಸ್ಕೂಲ್ ಕಾಲೇಜ್‌ಗಳ ಬಹಿಷ್ಕಾರ ಭರದಿಂದ ಸಾಗಿತು. ಎಲ್ಲೆಲ್ಲೂ ಬಾಲಕರು ಮತ್ತು ಯುವಕರು ಉತ್ಸಾಹದಿಂದ ಕೆಲಸ ಮಾಡಿದರು. ಲಾಯರುಗಳು ಕೂಡ ಹೆಚ್ಚು ಸಂಖ್ಯೆಯಲ್ಲಿ ವಕೀಲಿಯನ್ನು ಬಿಟ್ಟರು. ಪರದೇಶಿ ಬಟ್ಟೆಗಳ ಬಹಿಷ್ಕಾರ ಕಾರ್ಯಕ್ರಮ ಬಹಳ ವೇಗವಾಗಿ ನಡೆಯಿತು. ದೇಶದ ನಾನಾ ಭಾಗಗಳಲ್ಲಿ ರಾಷ್ಟ್ರೀಯ ವಿದ್ಯಾಶಾಲೆಗಳನ್ನು ಸ್ಥಾಪಿಸಿ, ಅವುಗಳಲ್ಲಿ ಬಾಲಕ ಬಾಲಕಿಯರ ಶಿಕ್ಷಣವನ್ನು ನಡೆಸಲಾಯಿತು. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಕಾಂಗ್ರೆಸ್ ಸಮಿತಿಗಳನ್ನೂ ಆಶ್ರಮಗಳನ್ನೂ ಸ್ಥಾಪಿಸಿ ಅಸಹಕಾರ ಕಾರ್ಯಕ್ರಮವನ್ನು ಮುಂದರಿಸಲಾಯಿತು. ಪರದೇಶಿ ಬಟ್ಟೆ ಗುಡ್ಡೆಗಳಿಗೆ ಬೆಂಕಿ ಹಾಕಲಾಯಿತು.

ಮಹಿಳೆಯರು ಕೂಡ ಬಹು ಸಂಖ್ಯೆಯಲ್ಲಿ ದೇಶಸೇವೆಗೆ ಬರುತ್ತಿದ್ದರು. ಹಿಂದೆ ಎಂದೂ ಇಲ್ಲದಷ್ಟು ಹಿಂದೂ – ಮುಸ್ಲಿಂ ಐಕಮತ್ಯ ಉಂಟಾಯಿತು; ಹಿಂದೂಗಳೂ ಮುಸ್ಲಿಮರೂ ತೋಳಿಗೆ ತೋಳು ಸೇರಿಸಿಕೊಂಡು ಕೆಲಸ ಮಾಡುತ್ತಿದ್ದರು.

ಗಾಂಧೀಜಿ ಕಾಂಗ್ರೆಸಿನ ಅಂಗ ರಚನೆಯನ್ನು ಬದಲಾಯಿಸಿ, ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಯ ಜೊತೆಗೆ ಒಂದು ಕಾಂಗ್ರೆಸ್ ವರ್ಕಿಂಗ್ ಕಮಿಟಿಯನ್ನು ಸ್ಥಾಪಿಸಿ, ಅದು ಆಗಾಗ್ಗೆ ಸೇರಿ ಕಾಂಗ್ರೆಸಿನ ಕಾರ್ಯಕ್ರಮಗಳನ್ನು ಪರ್ಯಾಲೋಚಿಸುವಂತೆ ಮಾಡಿದರು. ಅದರಲ್ಲಿ ಪ್ರತಿಯೊಂದು ಪ್ರದೇಶದ ಉದ್ದಾಮ ಮುಖಂಡರೂ ಇರುತ್ತಿದ್ದರು. ಇದಲ್ಲದೆ ಪ್ರಾಂತ ಕಾಂಗ್ರೆಸ್ ಕಮಿಟಿ, ಡಿಸ್ಟ್ರಿಕ್ಟ್ ಕಾಂಗ್ರೆಸ್ ಕಮಿಟಿ, ತಾಲ್ಲೂಕು ಕಾಂಗ್ರೆಸ್ ಕಮಿಟಿಗಳ ಸ್ಥಾಪನೆಗೆ ಅವಕಾಶ ವಿತ್ತರು. ದೇಶವನ್ನು ಭಾಷಾವಾರಾಗಿ ವಿಂಗಡಿಸಿ ೨೧ ಕಾಂಗ್ರೆಸ್ ಪ್ರಾಂತಗಳನ್ನು ನಿರ್ಮಿಸಿದರು. ಆಗಲೇ ಕರ್ಣಾಟಕವೂ ಒಂದು ಕಾಂಗ್ರೆಸ್ ಪ್ರಾಂತವಾಯಿತು. ಈ ರೀತಿಯಾಗಿ ಕಾಂಗ್ರೆಸಿನ ಅಸಹಕಾರ ಸಂದೇಶ ಭಾರತದ ಏಳು ಲಕ್ಷ ಹಳ್ಳಿಗಳಿಗೂ ಮುಟ್ಟುವಂತೆ ಮಾಡಿದರು.

ದೇಶದಲ್ಲಿ ನವ ಚೈತನ್ಯ ಆಗ ಒಂದು ದೊಡ್ಡ ಪ್ರವಾಹದಂತೆ ಹರಿಯುತ್ತಿತ್ತು, ಹಿಂದೆ ೫೦ – ೬೦ ವರ್ಷಗಳಲ್ಲಿ ಇಲ್ಲದೆ ಇದ್ದ ಐಕಮತ್ಯ, ಉತ್ಸಾಹ, ಕಾರ್ಯತತ್ಪರತೆ ದೇಶವನ್ನು ಆವರಿಸಿತು. ಒಂದು ಹೊಸ ಭಾರತವೇ ಸೃಷ್ಟಿ ಆದಂತಾಯಿತು. ಗಾಂಧೀಜಿ ಜನರಲ್ಲಿ ಪರಕೀಯ ಸರ್ಕಾರದ ಬಗ್ಗೆ ಇದ್ದ ಭೀತಿಯನ್ನು ತಪ್ಪಿಸಿದರು. ಪರಕೀಯ ಸರ್ಕಾರ ಹೋಗಲೇಬೇಕು; ಸ್ವರಾಜ್ಯ ಸ್ಥಾಪನೆಗಾಗಿ ಬಂದಿರುವ ದೂತ ಗಾಂಧೀಜಿ ಎಂಬ ಭಾವನೆ ಜನ ಸಾಮಾನ್ಯರಲ್ಲಿ ಹರಡಿತು. ಹೀಗೆ ರಾಜಕೀಯ ಭಾವನೆಯ ಜೊತೆಗೆ ಧರ್ಮ ಭಾವನೆಯೂ ಬೆಳೆಯಿತು.

ಸರ್ಕಾರ ಪ್ರಾರಂಭದಲ್ಲಿ ಉದಾಸೀನವಾಗಿತ್ತು. ಆಮೇಲೆ ಒಂದು ರೀತಿಯ ತಿರಸ್ಕಾರ ಭಾವನೆ ತೋರಿಸಿತು. ಚಳುವಳಿಗೆ ಕಾವು ಬಂದಿದ್ದನ್ನು ಕಂಡು ಪ್ರಾಂತ ಸರ್ಕಾರಗಳಿಗೆ ಆದೇಶ ಕಳುಹಿಸಿತು.

ಪೊಲೀಸರ ಮತ್ತು ಸೈನಿಕರ ರಾಜಭಕ್ತಿಗೆ ಭಂಗ ತರುವ ಕಾರ್ಯಗಳು ನಡೆದರೆ, ಅವುಗಳಿಗೆ ಕಾರಣವಾದ ಜನರ ಮೇಲೆ ಕಾರ್ಯಕ್ರಮ ತೆಗೆದುಕೊಂಡರೆ ಸಾಕು ಎಂದು ತಿಳಿಸಿತು.

ಗಾಂಧೀಜಿ ಭಾಷಣಗಳಲ್ಲಿ ಜನರಿಗೆ ಆತ್ಮಗೌರವ ಬೋಧಿಸುತ್ತಿದ್ದರು. ಅವರು ಹೇಳುತ್ತಿದ್ದರು; ನಾವು ಇಂಗ್ಲಿಷ್ ಜನರಿಗೆ ಸಮಾನರು ಎಂದು ತಿಳಿದು ಕೊಳ್ಳದೆ ಹೋದರೆ ನಮಗೆ ಸ್ವರಾಜ್ಯ ಬರುವುದಿಲ್ಲ. ನಮ್ಮ ಎಲ್ಲಾ ವಿಧವಾದ ಸೌಕರ್ಯಗಳಿಗೂ ಇಂಗ್ಲಿಷರೇ ಕಾರಣ ಎಂಬುದು ನಮ್ಮ ಭಾವನೆ. ನಮ್ಮ ನಿಸ್ಸಹಾಯಕತೆ ಬ್ರಿಟಿಷರಿಗೆ ಗೊತ್ತು. ಆದ್ದರಿಂದ ನಮಗೆ ಸ್ವರಾಜ್ಯ ಬರಬೇಕಾದರೆ ನಮ್ಮ ನಿಸ್ಸಹಾಯಕ ಸ್ಥಿತಿಯನ್ನು ಹೋಗಲಾಡಿಸಿ ಕೊಳ್ಳಬೇಕು. ಬ್ರಿಟಿಷರು ನಮ್ಮನ್ನು ಕೇವಲ ಬಲಪ್ರಯೋಗದಿಂದ ಆಳಲಾರರು. ಅವರ ಸಾಮ್ರಾಜ್ಯಕ್ಕೆ ನಮ್ಮ ಸಹಾಯ ಬೇಕು. ಆದ್ದರಿಂದ ಆ ಸಹಾಯವನ್ನು ನಾವು ನಿರಾಕರಿಸಿದರೆ, ನಮಗೆ ಸ್ವರಾಜ್ಯ ಸಿದ್ಧ. ನಾವು ಅವರಿಗೆ ಸಮಾನಸ್ಕಂದರಂತೆ ಧೈರ್ಯಶಾಲಿಗಳಾಗಿ ವರ್ತಿಸಿದರೆ ನಮಗೆ ನಮ್ಮ ಇಷ್ಟಾರ್ಥ ಸಿದ್ಧಿ ಒಂದು ವರ್ಷದೊಳಗೆ. ಯಾವ ರೀತಿಯಿಂದಲೂ ಅವರಿಗೆ ಬೆಂಬಲ ಕೊಡದೆ ನಾವು ಧೈರ್ಯವಾಗಿ ನಿಂತರೆ, ಅವರು ಇಲ್ಲಿ ಇರುವುದೇ ಇಲ್ಲ. ಈ ದೇಶವನ್ನು ತಾವಾಗಿ ಬಿಟ್ಟು ಹೋಗುತ್ತಾರೆ. ಅಹಿಂಸೆಯಿಂದ ನಾವು ಮುಂದರಿಯಬೇಕು. ಅಹಿಂಸೆಯೇ ನಮ್ಮ ಮದ್ದು. ನಮ್ಮ ಅಹಿಂಸೆಯ ಮುಂದೆ ಅವರು ಏನು ಮಾಡಲೂ ಸಾಧ್ಯವಿಲ್ಲ.

ಕಾಂಗ್ರೆಸ್ ಸದಸ್ಯರ ಸಂಖ್ಯೆ ಒಂದು ಕೋಟಿಗೆ ಏರಬೇಕೆಂದೂ, ಎಲ್ಲರೂ ಕೈರಾಟೆಯಲ್ಲಿ ನೂಲಬೇಕೆಂದೂ ಬೋಧಿಸಿದರು. ಅಸಹಕಾರ ಕಾರ್ಯ ಕ್ರಮಕ್ಕೂ ಕೈನೂಲುವುದಕ್ಕೂ ಏನು ಸಂಬಂಧವೆಂದು ಕೇಳಿದರೆ, “ನೂಲುವುದರಿಂದ ನಮ್ಮಲ್ಲಿ ಅಹಿಂಸೆ ವೃದ್ಧಿಯಾಗುವುದು, ಸ್ವಾವಲಂಬನ ಬುದ್ಧಿ ಹೆಚ್ಚುವುದು, ದೇಶದ ವಿಷಯದಲ್ಲಿ ನಮ್ಮ ಮನಸ್ಸು ಹೆಚ್ಚು ವಿಚಾರ ಮಾಡತೊಡಗುವುದು. ಇವೆಲ್ಲಾ ನಮ್ಮನ್ನು ಅಸಹಕಾರ ಕಾರ್ಯಕ್ಕೆ ತಯಾರು ಮಾಡುವುದು” ಎಂದು ಹೇಳುತ್ತಿದ್ದರು. ತಾವೂ ದಿನಕ್ಕೆ ಒಂದು ಗಂಟೆಯಾದರೂ ನೂಲುತ್ತಿದ್ದರು.

೧೯೨೧ನೇ ಆದಿಭಾಗದಲ್ಲಿ ಇಂಗ್ಲೆಂಡಿನ ರಾಜರ ಹತ್ತಿರ ಸಂಬಂಧಿಗಳಾದ ಡ್ಯೂಕ್ ಆಫ್ ಕನಾಟ್ ಭಾರತಕ್ಕೆ ಆಗಮಿಸಿ, ದೆಹಲಿಯಲ್ಲಿ ನೂತನ ಕೇಂದ್ರ ಶಾಸನ ಸಭೆಗಳ ಪ್ರಾರಂಭೋತ್ಸವವನ್ನು ನಡೆಸಿದರು. ಅವರು ತಮ್ಮ ಭಾಷಣದಲ್ಲಿ “ಮರೆಯಿರಿ” ಮತ್ತು “ಕ್ಷಮಿಸಿರಿ”ಪಲ್ಲವಿಯನ್ನು ಹಾಡಿದರು. ಕಾಂಗ್ರೆಸ್ ಇವರ ಗೌರವಾರ್ಥ ನಡೆದ ಸಮಾರಂಭಗಳನ್ನೆಲ್ಲಾ ಬಹಿಷ್ಕರಿಸಿತು.

ಜನತೆಯ ಉತ್ಸಾಹ ಮೇರೆ ಮೀರಿತ್ತು. ಅನೇಕ ದೊಡ್ಡ ಊರುಗಳಲ್ಲಿ ಶ್ರಮಜೀವಿಗಳು ಮುಷ್ಕರಗಳನ್ನು ಹೂಡಿದರು. ಅನೇಕ ಕಡೆ ಜನರು ಉದ್ರೇಕ ಭಾವವನ್ನು ತೋರಿಸಿದರು. ಗಾಂಧೀಜಿ ಜನರನ್ನು ಉದ್ರೇಕಗೊಳ್ಳಬೇಡಿ ಎಂದು ಬೇಡಿದರು. ಖಿಲಾಫತ್ ಕೆಲಸಗಾರರೂ, ಕಾಂಗ್ರೆಸ್ ಕೆಲಸಗಾರರೂ ಬೇರೆ ಬೇರೆಯಾಗಿ ಕೆಲಸ ಮಾಡುತ್ತಿದ್ದರು, ೧೯೨೧ನೇ ಜುಲೈ ೮ರಲ್ಲಿ ಕರಾಚಿಯಲ್ಲಿ ಒಂದು ಸಮ್ಮೇಳನ ನಡೆದು, ಅಲ್ಲಿ ಅಲಿ ಸಹೋದರರು ಬಹಳ ಧೈರ್ಯವಾಗಿ ಭಾಷಣ ಮಾಡಿದರು. ಅಲ್ಲಿ ಮಾಡಿದ ಒಂದು ನಿರ್ಣಯದಲ್ಲಿ ಪೊಲೀಸರೂ ಸೈನಿಕರೂ ಅಸಹಕಾರ ಮಾಡಿ, ತಮ್ಮ ಕೆಲಸ ಬಿಟ್ಟು ಹೊರಗೆ ಬರಬೇಕೆಂದು ಸೂಚಿಸಲಾಯಿತು. ಆಲಿ ಸಹೋದರರು ಮುಸ್ಲಿಂ ಪೊಲೀಸರನ್ನೂ ಸೈನಿಕರನ್ನೂ ಉದ್ದೇಶಿಸಿ, ಸರ್ಕಾರ ಖಿಲಾಫತ್ ಅನ್ಯಾಯ ಮಾಡಿರುವಾಗ ಅದನ್ನು ಸೇವಿಸುವುದು ಮುಸ್ಲಿಂ ಧರ್ಮಕ್ಕೆ ವಿರೋಧ ಎಂದು ಸಾರಿದರು.

ಇದೇ ಏಪ್ರಿಲ್‌ನಲ್ಲಿ ಲಾರ್ಡ್ ಛೆಮ್ಸ್‌ಫರ್ಡ್‌ನಿವೃತ್ತರಾಗಿ ಲಾರ್ಡ್ ರೀಡಿಂಗ್ ವೈಸರಾಯರಾಗಿ ಬಂದರು. ಕೆಲವು ದಿವಸಗಳೊಳಗೆ ಗಾಂಧೀಜಿಗೂ ಹೊಸ ವೈಸರಾಯರಿಗೂ ಭೆಟ್ಟಿಯಾಗಿ ಸಂಭಾಷಣೆ ನಡೆಯಿತು ಎಂಬುದನ್ನು “ಯಂಗ್ ಇಂಡಿಯಾ” ಪತ್ರಿಕೆಯಲ್ಲಿ ತಿಳಿಸಿದರು. “ಪರಸ್ಪರ ಪರಿಚಯವಾಯಿತು, ನಾವು ಒಬ್ಬರನ್ನೊಬ್ಬರು ಅರಿತುಕೊಂಡೆವು” ಎಂದರು ಇದರ ಫಲವಾಗಿ ಅಲಿ ಸಹೋದರರು ತಮ್ಮ ಭಾಷಣಗಳಲ್ಲಿ ಆಗಾಗ್ಗೆ ಮೇರೆಮೀರುವುದನ್ನು ತಾವು ಅರಿತಿದುದಾಗಿಯೂ, ಇನ್ನೂ ಮುಂದೆ ತಪ್ಪು ಅಭಿಪ್ರಾಯಗಳಿಗೆ ಅವಕಾಶ ಕೊಡದಂತೆ ನಡೆಯುವುದಾಗಿಯೂ ಭರವಸೆಯಿತ್ತರು. ಈ ಭರವಸೆ ಸರ್ಕಾರಕ್ಕೂ ಆಗಬಹುದು, ಕೂಡಲೆ ಅವರ ದಸ್ತಗಿರಿ ಮತ್ತು ಮೊಕದ್ದಮೆ ಆಗಲಿಲ್ಲ. ಆದರೇನು? ಅದೇ ಸೆಪ್ಟಂಬರ್‌ನಲ್ಲಿ ಬೊಂಬಾಯಿ ಸರ್ಕಾರ ಅವರನ್ನು ದಸ್ತಗಿರಿ ಮಾಡಿ ಶಿಕ್ಷೆಯನ್ನು ವಿಧಿಸಿತು.

ಈ ಮಧ್ಯೆ ಇಂಗ್ಲೆಂಡಿನ ರಾಜಕುಮಾರರು ಭಾರತಕ್ಕೆ ಬರುವ ಕಾರ್ಯಕ್ರಮ ಏರ್ಪಾಡಾಯಿತು. ಕಾಂಗ್ರೆಸು ಇವರ ಸ್ವಾಗತವನ್ನೂ, ಇವರನ್ನು ಸ್ವಾಗತಿಸಲು ಏರ್ಪಾಡು ಮಾಡಿದ ಸಮಾರಂಭಗಳನ್ನೂ ಬಹಿಷ್ಕರಿಸಬೇಕೆಂದು ನಿರ್ಣಯಿಸಿತು. ಇದರಂತೆ ಕಾಂಗ್ರೆಸ್ ಸ್ವಯಂಸೇವಕರೂ, ಮುಖಂಡರೂ, ರಾಜಕುಮಾರರ ಸ್ವಾಗತ ಮತ್ತು ಗೌರವ ಸಮಾರಂಭಗಳನ್ನು ಬಹಿಷ್ಕರಿಸುವ ಏರ್ಪಾಡನ್ನು ಮಾಡುತ್ತಿದ್ದರು.

೧೯೨೧ನೇ ನವೆಂಬರ್ ೧೭ರಲ್ಲಿ ರಾಜಕುಮಾರರು ಬೊಂಬಾಯಿನಲ್ಲಿ ಹಡಗಿನಿಂದ ಇಳಿದರು. ಬೊಂಬಾಯಿನಲ್ಲಿ ಆ ದಿನ ಕಾಂಗ್ರೆಸ್ ಭಾರಿ ಹರತಾಳವನ್ನೇರ್ಪಡಿಸಿತ್ತು. ಗಾಂಧೀಜಿ ಎಷ್ಟೋ ಸಾರಿ ಜನರನ್ನು ಅಹಿಂಸೆಯಿಂದಿರಬೇಕೆಂದು ಉಪದೇಶಿಸಿದ್ದರೂ, ಗಲಾಟೆಯಾಗಿ ದೊಂಬಿಯಾಯಿತು. ಕೆಲವು ಪಾರ್ಸಿಗಳು ಸ್ವಾಗತ ಸಮಾರಂಭಗಳಲ್ಲಿ ಭಾಗಿಯಾದರು. ಜನ ಅವರ ಮೇಲೆ ಕಲ್ಲೆಸೆಯಲು ಪೊಲೀಸರು ಪ್ರವೇಶಿಸಿದರು. ಪೊಲೀಸರ ಮೇಲೆಯೂ ಸಿಟ್ಟಿಗೆದ್ದ ಜನರು ಕಲ್ಲುಗಳನ್ನೂ, ಇಟ್ಟಿಗೆಗಳನ್ನೂ ಬೀರಿದರು. ಸ್ವಲ್ಪ ರಕ್ತಪಾತವೂ ಆಯಿತು. ಗಾಂಧೀಜಿಯೂ ಇತರ ನಾಯಕರೂ ಸ್ಥಳಕ್ಕೆ ಹೋಗಿ ಜನರನ್ನು ಸಮಾಧಾನ ಮಾಡಿದರು. ಆದರೂ ಗಾಂಧೀಜಿಯ ಮನಸ್ಸಿಗೆ ಬಹಳ ಪೆಟ್ಟಾಯಿತು. ಜನರಿಗೆ ಏನೇ ಆಗಲಿ ಅಹಿಂಸೆಯಿಂದಿರಬೇಕೆಂದು ಬೋಧಿಸಿದ್ದಾಗ್ಯೂ, ಹೀಗಾಯಿತಲ್ಲಾ ಎಂದು ಪಶ್ಚಾತ್ತಾಪ ಪಟ್ಟು, ಗಾಂಧೀಜಿ ಮೂರು ದಿವಸ ಉಪವಾಸ ಮಾಡಿದರು. ಇದರಿಂದ ಬೊಂಬಾಯಿನಲ್ಲಿ ಪರಿಸ್ಥಿತಿ ಶಾಂತವಾಯಿತು.

ದೇಶದ ಇತರ ಎಲ್ಲಾ ದೊಡ್ಡ ಊರುಗಳಲ್ಲಿಯೂ ೧೭ನೇ ನವೆಂಬರನ್ನು ದೊಡ್ಡ ಹರತಾಳದ ದಿನವನ್ನಾಗಿ ಆಚರಿಸಲಾಯಿತು. ಅಲ್ಲೆಲ್ಲೂ ಶಾಂತಿಭಂಗವಾಗಲಿಲ್ಲ. ಮಲಬಾರಿನಲ್ಲಿ ಮಾಪ್ಲಾ ಜನರು ಆಗಸ್ಟ್ ಮಧ್ಯಭಾಗದಲ್ಲಿ ದಂಗೆಯೆದ್ದರು. ನವೆಂಬರ್‌ವರೆಗೂ ಈ ದಂಗೆ ನಡೆಯುತ್ತಲೇ ಇತ್ತು.

ನವೆಂಬರ್ ೫ರಲ್ಲಿ ಸೇರಿದ್ದ ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ಸಭೆಯಲ್ಲಿ ಒಂದು ಮುಖ್ಯ ನಿರ್ಣಯ ಪಾಸಾಯಿತು. ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲಲ್ಲಿ ಜನ ಕಂದಾಯ ಕೊಡದೆ ಅಸಹಕಾರ ಚಳುವಳಿಯನ್ನು ತಮ್ಮ ಶಕ್ತಿಯಿದ್ದಷ್ಟು ಮಟ್ಟಿಗೆ ನಡೆಸಬಹುದೆಂಬುದೇ ಆ ನಿರ್ಣಯ. ಜನರು ಬಹಳ ಉತ್ಸಾಹದಿಂದ ಕೂಡಿದ್ದರು. ಆದರೆ, ನವೆಂಬರ್ ೧೭ರಲ್ಲಿ ಬೊಂಬಾಯಿನಲ್ಲಿ ನಡೆದ ಪ್ರಕರಣದ ಕಾರಣದಿಂದ, ಸದ್ಯಕ್ಕೆ ಕಾನೂನು ಭಂಗ ಬೇಡ ಎಂದು ಕಂದಾಯದ ಅಸಹಕಾರವನ್ನು ಮುಂದೆ ಹಾಕಿದರು.

ಇಷ್ಟರಲ್ಲಿ ದೇಶದ ಮಹಾ ಮುಖಂಡರ ದಸ್ತಗಿರಿಯಾಗಿತ್ತು. ಸಿ.ಆರ್. ದಾಸ್. ಮೋತಿಲಾಲ್ ನೆಹರು, ಲಜಪತರಾಯ್ ಅಬುಲ್ ಕಲಾಂ ಆಜಾದ್, ಯುವಕ ಮುಖಂಡರ ಪೈಕಿ ಜನಹರಲಾಲ್ ಮತ್ತು ಸುಭಾಸ್‌ಬೋಸ್ ಇವರೆಲ್ಲರ ದಸ್ತಗಿರಿ ಆಗಿತ್ತು. ಜೊತೆಗೆ ಸುಮಾರು ೩೦,೦೦೦ ಜನ ದಸ್ತಗಿರಿಯಾಗಿದ್ದರು.

ಇಂಗ್ಲಿಷ್ ರಾಜಕುಮಾರರಿಗೆ ಕಲ್ಕತ್ತಾದಲ್ಲಿಯಾದರೂ ಶಾಂತಿಯುತವಾದ ಭವ್ಯವಾದ ಸ್ವಾಗತ ದೊರೆಯಲಿ ಎಂಬ ಆಶೆಯಿಂದ ವೈಸರಾಯರು ಪಂಡಿತಮದನ ಮೋಹನ ಮಾಳವೀಯರ ಮೂಲಕ ಗಾಂಧೀಜಿಯ ಜೊತೆಗೂ, ಜೈಲಿನಲ್ಲಿದ್ದ ಸಿ.ಆರ್.ದಾಸ್, ಮೋತಿಲಾಲ್ ನೆಹರು ಮುಂತಾದವರ ಜೊತೆಗೂ ರಾಜಿಗಾಗಿ ಪ್ರಯತ್ನಿಸಿದರು.

ರಾಜಕುಮಾರರು ಡಿಸೆಂಬರ್ ಕ್ರಿಸ್‌ಮಸ್ ಹಬ್ಬದ ಸಮಯಕ್ಕೆ ಸರಿಯಾಗಿ ಕಲ್ಕತ್ತೆಗೆ ಆಗಮಿಸುವರು; ಅದಕ್ಕೆ ಮುಂಚೆಯೇ ಅಸಹಕಾರ ಚಳುವಳಿಯನ್ನು ವಾಪಸ್ಸು ತೆಗೆದುಕೊಂಡರೆ, ಸರ್ಕಾರ ಎಲ್ಲ ರಾಜಕೀಯ ಕೈದಿಗಳನ್ನೂ ಬಿಡುಗಡೆ ಮಾಡುವುದು; ಕೂಡಲೇ ಪ್ರಾಂತಿಕ ಜವಾಬ್ದಾರಿ ಸರ್ಕಾರವನ್ನು ಕಲ್ಕತ್ಕಾ ಜೈಲಿನಲ್ಲಿದ್ದ ಮುಖಂಡರಿಗೆ ತಿಳಿಸಲಾಯಿತು. ತಾವು ಒಪ್ಪುವುದಾಗಿ ಮುಖಂಡರು ಹೇಳಿದರು. ಗಾಂಧೀಜಿ ರಾಜಕೀಯ ಕೈದಿಗಳ ಖುಲಾಸೆಯೊಡನೆ ಆಲಿ ಸಹೋದರರ ಬಿಡುಗಡೆಯೂ ಆಗಲೇಬೇಕೆಂದು ತಿಳಿಸಿದರು. ವೈಸರಾಯರು ಆಲಿ ಸಹೋದರರನ್ನು ಖುಲಾಸೆ ಮಾಡಲು ಒಪ್ಪಲಿಲ್ಲ. ಗಾಂಧೀಜಿಯೂ ವೈಸರಾಯರ ಸಲಹೆಗೆ ಒಪ್ಪಲಿಲ್ಲ. ಕಲ್ಕತ್ತಾದಲ್ಲಿ ಸೆರೆಯಲ್ಲಿದ್ದ ಮುಖಂಡರಿಗೆಲ್ಲಾ ಗಾಂಧೀಜಿಯ ಮೇಲೆ ಅಸಮಾಧಾನವಾಯಿತು.

೧೯೨೧ನೇ ಡಿಸೆಂಬರ್ ಅಂತ್ಯದಲ್ಲಿ ಕಾಂಗ್ರೆಸ್ ಮಹಾಧಿವೇಶನ ಅಹಮದಾಬಾದಿನಲ್ಲಿ ನಡೆಯಿತು. ಈ ಅಧಿವೇಶನದಲ್ಲಿ ಕುರ್ಚಿ ಮೇಜುಗಳಿರಲಿಲ್ಲ. ಎಲ್ಲರೂ ಜಮಖಾನದ ಮೇಲೆಯೇ ಕೂತರು. ಇಂಗ್ಲಿಷು ಕಡಿಮೆ; ಬಹು ಮಟ್ಟಿಗೆ ಹಿಂದೂಸ್ತಾನಿಯಲ್ಲಿಯೇ ಭಾಷಣಗಳು ನಡೆದವು. ಸಿ.ಆರ್ ದಾಸರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ ಅವರು ಖಾರಾಗೃಹದಲ್ಲಿದ್ದರು. ಹಕೀಂ ಅಜ್ಮಲ್ ಖಾನರು ಅಧ್ಯಕ್ಷರಾಗಿದ್ದರು. ವಲ್ಲಭಭಾಯಿ ಪಟೇಲರು ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದರು. ಎರಡು ಲಕ್ಷ ರೂಪಾಯಿ ಮೇಲೆ ಖರ್ಚುಮಾಡಿ ಖಾಡಿ ಡೇರೆಗಳನ್ನು ಹಾಕಿದ್ದರು. ಸಿ.ಎಫ್. ಅಂಡ್ರೂಸರೂ ಈ ಅಧಿವೇಶನಕ್ಕೆ ಬಂದಿದ್ದರು. ಸಿ.ಆರ್. ದಾಸರ ಅಧ್ಯಕ್ಷ ಭಾಷಣವನ್ನು ಸರೋಜಿನಿ ನಾಯ್ಡು ಓದಿದರು. ಹಕೀಂ ಅಜ್ಮಲ್ ಖಾನರು ಅಧ್ಯಕ್ಷರಾಗಿದ್ದರು. ವಲ್ಲಭಭಾಯಿ ಪಟೇಲರು ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದರು. ಎರಡುಲಕ್ಷ ರೂಪಾಯಿ ಮೇಲೆ ಖರ್ಚು ಮಾಡಿ ಖಾದಿ ಡೇರೆಗಳನ್ನು ಹಾಕಿದ್ದರು. ಸಿ.ಎಫ್.ಆಂಡ್ರೂಸರೂ ಈ ಅಧಿವೇಶನಕ್ಕೆ ಬಂದಿದ್ದರು. ಸಿ.ಆರ್.ದಾಸರ ಅಧ್ಯಕ್ಷ ಭಾಷಣವನ್ನು ಸರೋಜಿನಿ ನಾಯ್ಡು ಓದಿದರು. ಹಕೀಂ ಅಜ್ಮಲ್ ಖಾನರು ಸಣ್ಣ ಭಾಷಣ ಮಾಡಿ, ಅಸಹಕಾರ ಕಾರ್ಯಕ್ರಮಕ್ಕೆ ಎಲ್ಲರ ಬೆಂಬಲವನ್ನೂ ಕೋರಿದರು. ಮೆಹ್ತಾ ಸಂಪೂರ್ಣ ಸ್ವಾತಂತ್ರ ಕಾಂಗ್ರೆಸಿನ ಗುರಿಯಾಗಬೇಕೆಂದು ನಿರ್ಣಯ ತಂದರು. ಗಾಂಧೀಜಿ ಇದನ್ನು ವಿರೋಧಿಸಿ “ದೇಶ ಈಗ ಹೋರಾಟದ ಕಡೆಯ ಹಂತದಲ್ಲಿದೆ. ನಾವು ಧೈರ್ಯದಿಂದ ನಮ್ಮ ಕರ್ತವ್ಯವನ್ನು ಮಾಡೋಣ” ಎಂದು ಬೋಧಿಸಿದರು.

೧೯೨೨ ನೇ ಜನವರಿ ಆರಂಭವಾಗುತ್ತಲೇ, ಕಾಂಗ್ರೆಸಿಗೆ ಸೇರಿದ ಅನೇಕ ಮಹನೀಯರು ಬೊಂಬಾಯಿನಲ್ಲಿ ಒಂದು ಸಮ್ಮೇಳನ ನಡೆಸಿದರು. ದೇಶದಲ್ಲಿ ಶಾಂತಿಸ್ಥಾಪನೆಯಾಗಬೇಕು; ವೈಸರಾಯರು ದಬ್ಬಾಳಿಕೆಯನ್ನು ನಿಲ್ಲಿಸಬೇಕು; ಎಲ್ಲಾ ರಾಜಕೀಯ ಕೈದಿಗಳನ್ನೂ, ಆಲಿ ಸಹೋದರರನ್ನೂ, ಅವರ ಮಿತ್ರರನ್ನೂ ಖುಲಾಸೆ ಮಾಡಬೇಕು ಖಿಲಾಫತ್ ಅನ್ಯಾಯವನ್ನು ಪರಿಹರಿಸಬೇಕು; ಪಂಜಾಬ್ ಅತ್ಯಾಚಾರಗಳ ಬಗ್ಗೆ ಪರಿಹಾರ ಕೊಡಬೇಕು; ಸ್ವರಾಜ್ಯ ಸ್ಥಾಪನೆಯ ವಿಚಾರವನ್ನು ಸರ್ಕಾರ ಪರಿಶೀಲಿಸಬೇಕು ಎಂಬ ಅಭಿಪ್ರಾಯಕ್ಕೆ ಬಂದರು. ಗಾಂಧೀಜಿಯನ್ನು ಜನವರಿ ೩೧ರವರಿಗೆ ಕಾನೂನುಭಂಗ ಕಾರ್ಯವನ್ನು ನಿಲ್ಲಿಸಬೇಕೆಂದೂ ಪ್ರಾರ್ಥಿಸಿದರು. ಈ ಸಮ್ಮೇಳನದಲ್ಲಿ ಮಾಳವೀಯ, ಜಯಕರ್, ಜಿನ್ಹಾ ಮೊದಲಾದವರು ಭಾಗವಹಿಸಿದ್ದರು. ಗಾಂಧೀಜಿಯೇ ವೈಸರಾಯರ ಮುಂದೆ ಇಡಬೇಕಾದ ನಿರ್ಣಯವನ್ನು ರೂಪಿಸಿದರು. ಈ ಸಮ್ಮೇಳನಕ್ಕೆ ಮೊದಲು ಸರ್ ಶಂಕರನ್‌ನಾಯರ್ ಅಧ್ಯಕ್ಷರಾಗಿದ್ದರು. ಅವರು ಗಾಂಧೀಜಿಯ ನಿರ್ಣಯದ ರೂಪವನ್ನು ಒಪ್ಪದೆ ಅಧ್ಯಕ್ಷ ಪದವಿಗೆ ರಾಜಿನಾಮೆಯಿತ್ತರು. ಆಮೇಲೆ ಸರ್. ಎಂ. ವಿಶ್ವೇಶ್ವರಯ್ಯ ಅಧ್ಯಕ್ಷರಾದರು. ನಿರ್ಣಯ ಪಾಸಾಯಿತು. ಅದನ್ನು ವೈಸರಾಯರಿಗೆ ತಲಪಿಸಲಾಯಿತು. ವೈಸರಾಯರು ಡಿಸೆಂಬರ್‌ನಲ್ಲಿ ತಾವು ಮಾಡಿದ ಸಲಹೆಗಳನ್ನು ಗಾಂಧೀಜಿ ಒಪ್ಪಲಿಲ್ಲವೆಂಬ ಕೋಪದಿಂದ ಶಾಂತಿ ಸಮ್ಮೇಳನದ ಮುಖಂಡರಿಗೆ ನಕಾರದ ಉತ್ತರವಿತ್ತರು.