ಗಾಂಧೀಜಿ ಬರಡೋಲಿ ತಾಲ್ಲೂಕಿನಲ್ಲಿ ರೈತರು ಕಂದಾಯ ಕೊಡದ ಕಾನೂನು ಭಂಗ ಚಳುವಳಿಯನ್ನು ನಡೆಸಬೇಕೆಂದಿದ್ದರು. ಆ ತಾಲ್ಲೂಕಿನಲ್ಲೆಲ್ಲಾ ಸಂಚರಿಸಿ “ಅಹಿಂಸೆ  ಪ್ರಾಮುಖ್ಯವಾದುದು; ಸರ್ಕಾರಕ್ಕೆ ಹಿಂಸೆಯ ಪ್ರತೀಕಾರ ಕೊಡಕೂಡದು; ಸರ್ಕಾರ ಕೊಡುವ ಶಿಕ್ಷೆಯನ್ನು ಶಾಂತಿಯಿಂದ ಅನುಭವಿಸಬೇಕು” ಎಂದು ರೈತರಿಗೆ ತಿಳಿಸುತ್ತ ಬಂದರು. ಫೆಬ್ರವರಿ ಮೊದಲನೇ ವಾರದಲ್ಲಿ ಕಾನೂನುಭಂಗ ಆರಂಭಿಸುವುದಾಗಿ ವೈಸರಾಯರಿಗೆ ಮೊದಲನೆ ತಾರೀಖು ಪತ್ರ ಕಳುಹಿಸಿದರು. ಇಡೀ ದೇಶ ಕಾತುರತೆಯಿಂದ ಕಾದು ನೋಡುತ್ತಿತ್ತು.

ಫೆಬ್ರವರಿ ೩ನೇ ತಾರೀಖು ಬರಡೋಲಿಯಲ್ಲಿ ಕಂದಾಯ ಸತ್ಯಾಗ್ರಹ ನಡೆಯುವುದೆಂಬುದಾಗಿ ಗಾಂಧೀಜಿ ಘೋಷಿಸಿದರು. ಇನ್ನೇನು ಕಾನೂನು ಭಂಗವನ್ನು ಆರಂಭಿಸಬೇಕು ಎಂದಿದ್ದಾಗ ಸಿಡಿಲು ಬಡಿದಂತಹ ಒಂದು ವಾರ್ತೆ ಗಾಂಧೀಜಿಗೆ ತಿಳಿಯಿತು. ಅದೇ ಫೆಬ್ರವರಿ ೫ರಲ್ಲಿ ಉತ್ತರ ಗೋರಖಪುರದ ಹತ್ತಿರ ಚೌರಿಚಾರ ಎಂಬಲ್ಲಿ ೨೧ ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನೂ ಒಬ್ಬ ಸಬ್‌ಇನ್‌ಸ್ಪೆಕ್ಟರನ್ನೂ ಒಳಗೊಂಡಿದ್ದ ಪೊಲೀಸ್ ಸ್ಟೇಷನ್ನಿಗೆ ಬೆಂಕಿ ಹೊತ್ತಿಸಿದರು; ಒಳಗೆ ಸೇರಿಕೊಂಡಿದ್ದವರೆಲ್ಲರೂ ಬೂದಿಯಾದರು ಎಂಬುದೇ ವಾರ್ತೆ.

ಈ ಸಮಾಚಾರ ಗಾಂಧೀಜಿಗೆ “ದೇವರು ಕೊಟ್ಟ ಸೂಚನೆ” ಎಂದು ತೋರಿತು. ದೇಶದಲ್ಲಿ ಸಾಕಷ್ಟು ಅಹಿಂಸೆಯಿಲ್ಲ; ಈ ಸ್ಥಿತಿಯಲ್ಲಿ ಸಾಮೂಹಿಕ ಕಾನೂನುಭಂಗ ಬಹಳ ಅಪಾಯಕರ ಎಂದು ತೋರಿತು. ಕೂಡಲೆ ಇನ್ನೊಂದು ಆಲೋಚನೆ ತೋರಿತು. “ಹೀಗೆ ಆಲೋಚಿಸುವುದು ಹೇಡಿತನವಲ್ಲವೆ?” ಗಾಂಧೀಜಿ ಚೆನ್ನಾಗಿ ಆಲೋಚಿಸಿದರು. “ನಾನು ನಿಜವಾಗಿಯೂ ಸತ್ಯ ಮತ್ತು ಅಹಿಂಸೆಯ ದಾರಿಯಲ್ಲಿದ್ದರೆ, ಈಗ ನಾನು ಆರಂಭಿಸಬೇಕೆಂದಿರುವ ಕಾನೂನು ಭಂಗ ಕಾರ್ಯವನ್ನು ನಿಲ್ಲಿಸಬೇಕು” ಎಂದು ತೋರಿತು.

ಚೆನ್ನಾಗಿ ಆಲೋಚನೆ ಮಾಡಿ ಗಾಂಧೀಜಿ “ಇದು ನನಗೆ ಮೂರನೇ ಎಚ್ಚರಿಕೆ. ಮೊದಲನೇದು ಬೊಂಬಾಯಿನದು, ಎರಡನೇದು ಮದರಾಸಿನದು. ಇದೋ ಈಗ ಮೂರನೇ ಎಚ್ಚರಿಕೆ ಬಂದಿದೆ. ನಾನು ಇದನ್ನು ನಿರ್ಲಕ್ಷಿಸಬಾರದು” ಎಂದು ಮನಸ್ಸು ಗಟ್ಟಿಮಾಡಿಕೊಂಡು, ಬರಡೋಲಿ ಕಂದಾಯ ಕಾನೂನು ಭಂಗ ಕಾರ್ಯವನ್ನು ನಿಲ್ಲಿಸಿದರು.

ಹೀಗೆ ಹಠಾತ್ತನೆ ಗಾಂಧೀಜಿ ಕಾನೂನು ಭಂಗದಿಂದ ಹಿಮ್ಮೆಟ್ಟಿದ್ದನ್ನು ತಿಳಿದು ಜನ ಆಶ್ಚರ್ಯಪಟ್ಟರು, ಖೇದಪಟ್ಟರು. ಕಬ್ಬೀನ ಕಾದಿದ್ದಾಗ ಏಟನ್ನು ಹಾಕದೆ, ಅದನ್ನು ತಣ್ಣಗಾಗಿ ಹೋಗಲು ಬಿಟ್ಟಿರಲ್ಲಾ ಎಂಬ ಖೇದ. ಜೈಲಿನಲ್ಲಿದ್ದ ಮೋತಿಲಾಳ್ ನೆಹರು, ದೇಶಬಂಧು ಸಿ.ಆರ್.ದಾಸ್ ಮುಂತಾದವರು ಇದನ್ನು ಒಪ್ಪಲಿಲ್ಲ. ಯುವಕರಾದ ಕಾರಾಗೃಹವಾಸಿ ಜವಹರ್‌ಲಾಲ್ ನೆಹರುವಿಗೂ ಆಶ್ಚರ್ಯವಾಯಿತು. ವೆಲ್ಲೂರು ಜೈಲಿನಲ್ಲಿದ್ದ ರಾಜಗೋಪಾಲಾಚಾರಿಯವರಿಗೂ ಅರ್ಥವಾಗಲಿಲ್ಲ. ಏನೇ ಆಗಲಿ ಗಾಂಧೀಜಿಯವರದು ದೃಢ ನಿಶ್ಚಯ. “ಇದು ನನ್ನ ಜವಾಬ್ದಾರಿ, ದೇಶದಲ್ಲಿ ಹಿಂಸಾ ಭಾವನೆ ಇನ್ನೂ ತುಂಬಿರುವಾಗ. ಕಾನೂನು ಭಂಗ ಕಾರ್ಯವನ್ನು ನಾನು ಹೇಗೆ ಜಾರಿಗೆ ತರುವುದು? ದೇಶದಲ್ಲಿ ಇನ್ನೂ ಅನರ್ಥವಾದೀತು” ಎಂಬುದು ಅವರ ಮನಸ್ಸಿಗೆ ದೃಢವಾಯಿತು.

ಫೆಬ್ರವರಿ ೧೨ರಲ್ಲಿ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸಭೆ ಬರಡೋಲಿಯಲ್ಲಿ ಸೇರಿತು. ಕಾಂಗ್ರೆಸಿನವರು ಯಾರೂ ದಸ್ತಗಿರಿಯಾಗುವ ಕೆಲಸಗಳನ್ನು ಮಾಡಕೊಡದೆಂದೂ, ಶಾಂತವಾಗಿ ರಚನಾತ್ಮಕ ಕಾರ್ಯದಲ್ಲಿ ತೊಡಗಬೇಕೆಂದೂ ನಿರ್ಣಯವಾಯಿತು. ರಚನಾತ್ಮಕ ಕಾರ್ಯವೆಂದರೆ ಚರಖಾದಲ್ಲಿ ನೂಲುವುದು, ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರನ್ನು ಸೇರಿಸುವುದು, ಪಾನ ನಿರೋಧ ಕಾರ್ಯಕ್ರಮವನ್ನು ನಡೆಸುವುದು, ಪಂಚಾಯಿತಿಗಳನ್ನು ಸ್ಥಾಪಿಸುವುದು.

ಅದೇ ಫೆಬ್ರವರಿ ೨೪-೨೫ರಲ್ಲಿ ದೆಹಲಿಯಲ್ಲಿ ಆಲ್ ಇಂಡಿಯಾ ಕಾಂಗ್ರೆಸ್ ಸಮಿತಿ ಸಭೆ ಸೇರಿತು. ಅದರಲ್ಲಿ ಸಾಮೂಹಿಕ ಕಾನೂನು ಭಂಗವನ್ನು ವಾಪಸ್ಸು ತೆಗೆದುಕೊಳ್ಳಲಾಯಿತು. ವೈಯಕ್ತಿಕ ಕಾನೂನು ಭಂಗವನ್ನು ಮಾಡಬಹುದೆಂದೂ ತೀರ್ಮಾನಿಸಲಾಯಿತು. ಎ.ಐ.ಸಿ.ಸಿ ಕಾನೂನುಭಂಗ ಕಾರ್ಯಕ್ರಮದಲ್ಲಿ ತನ್ನ ವಿಶ್ವಾಸವನ್ನು ವ್ಯಕ್ತಪಡಿಸಿತು; ಆದರೆ ಕಾಂಗ್ರೆಸಿಗರು ರಚನಾತ್ಮಕ ಕಾರ್ಯಕ್ರಮದಲ್ಲಿ ಪರಿಪೂರ್ಣರಾದರೆ ಅಗತ್ಯವಾಗಿ ಬೇಕಾದ ಅಹಿಂಸೆ ದೇಶದಲ್ಲಿ ಸ್ಥಾಪನೆಯಾಗಬಹುದೆಂಬ ಭರವಸೆಯನ್ನು ವ್ಯಕ್ತಪಡಿಸಿತು. ಪಂಡಿತ ಮೋತಿಲಾಲ್ ಉದ್ದವಾದ ಪತ್ರ ಬರೆದು, ಎಲ್ಲೋ ಒಂದು ಕಡೆ ಗಲಾಟೆಯಾದರೆ, ಇಡೀ ದೇಶವನ್ನು ಶಿಕ್ಷಿಸುವುದೇ ಎಂದು ಮುಂತಾಗಿ ಪ್ರಶ್ನಿಸಿದರು. ಗಾಂಧೀಜಿ ಇದನ್ನು ಸ್ನೇಹಿತರ ಸಭೆಯಲ್ಲಿ ಓದಿದರು. ಎ.ಐ.ಸಿ.ಸಿ. ಸಭೆಯಲ್ಲಿ ಬಂಗಾಳ ಮತ್ತು ಮಹಾರಾಷ್ಟ್ರ ಪ್ರತಿನಿಧಿಗಳು ಗಾಂಧೀಜಿಯನ್ನು ಸಿಕ್ಕಾಪಟ್ಟೆ ಟೀಕಿಸಿದರು. ಡಾ.ಮೂಂಜೆಯವರು ಗಾಂಧೀಜಿಯವರ ಮೇಲೆ ಅವಿಶ್ವಾಸ ನಿರ್ಣಯ ತಂದರು. ಕೆಲವು ಸದಸ್ಯರು ಇದಕ್ಕೆ ಬೆಂಬಲವಿತ್ತರು. ಗಾಂಧೀಜಿಯವರು ಅದರ ವಿರೋಧವಾಗಿ ಯಾರೂ ಮಾತನಾಡಕೂಡದೆಂದು ಸೂಚಿಸಿದರು. ಓಟಿಗೆ ಹಾಕಿದಾಗ, ಅವಿಶ್ವಾಸ ನಿರ್ಣಯದ ಪರ ಮಾತನಾಡಿದವರು ಮಾತ್ರ ಓಟು ಮಾಡಿದರು. ಡಾ. ಮೂಂಜೆಯ ಅವಿಶ್ವಾಸ ನಿರ್ಣಯ ಬಿದ್ದು ಹೋಯಿತು. ಗಾಂಧೀಜಿ ಸುಮ್ಮನಿದ್ದರು. ಅಧಿವೇಶನ ಮುಗಿಯಿತು.

ಇದೇ ಸರಿಯಾದ ಮುಹೂರ್ತವೆಂದು ಸರ್ಕಾರ ಮಾರ್ಚ್ ೧೩ರಲ್ಲಿ ಗಾಂಧೀಜಿಯವನ್ನು ದಸ್ತಗಿರಿ ಮಾಡಿತು. ಮಾರ್ಚಿ ೧೮ ರಲ್ಲಿ ವಿಚಾರಣೆ ಆರಂಭವಾಯಿತು. “ಯಂಗ್ ಇಂಡಿಯಾ” ದಲ್ಲಿ ಪ್ರಕಟವಾಗಿದ್ದ ಮೂರು ಲೇಖನಗಳ ಮೇಲೆ ಈ ಮೊಕದ್ದಮೆ ನಡೆಯಿತು. “ಯಂಗ್ ಇಂಡಿಯಾ” ಮುದ್ರಕ ರಾದ ಶಂಕರ್‌ಲಾಲ್ ಬ್ಯಾಂಕರ್‌ರ ಮೇಲೆಯೂ ಮೊಕದ್ದಮೆ ಹಾಕಲಾಯಿತು. ಗಾಂಧೀಜಿ ಹೇಳಿಕೆ ಕೊಟ್ಟರು. ಜಡ್ಜರು ಗಾಂಧೀಜಿಯವರಿಗೆ ಆರು ವರ್ಷದ ಕಾರಾಗೃಹವಾಸದ ಶಿಕ್ಷೆಯನ್ನು ಕೊಡುತ್ತಾ ಹೀಗೆ ಹೇಳಿದರು. “ಲಕ್ಷೋಪಲಕ್ಷ ಭಾರತೀಯರ ದೃಷ್ಟಿಯಲ್ಲಿ ನೀವು ದೊಡ್ಡ ದೇಶಾಭಿಮಾನಿಗಳು ಮತ್ತು ದೊಡ್ಡ ಮುಖಂಡರು. ರಾಜಕೀಯದಲ್ಲಿ ನಿಮಗಿಂತ ಭಿನ್ನ ದೃಷ್ಟಿಯಿರುವವರು ಕೂಡ ನಿಮ್ಮನ್ನು ಉನ್ನತ ಆದರ್ಶ ಪುರುಷರೆಂದೂ, ಘನತೆಯಿಂದ ಕೂಡಿದ ಸ್ವಂತ ಜೀವನವನ್ನು ನಡೆಸುವವರೆಂದೂ ತಿಳಿದಿದ್ದಾರೆ. ಆದರೆ ಯಾವ ಸರ್ಕಾರವೂ ನಿಮ್ಮನ್ನು ಸ್ವತಂತ್ರ ಸ್ಥಿತಿಯಲ್ಲಿಡುವುದು ಅಸಾಧ್ಯವಾಗುವಂತೆ ನೀವು ಮಾಡಿದ್ದೀರಿ. ನಿಮ್ಮ ಹಿಂದೆ ತಿಲಕರ ಮೊಕದ್ದಮೆ ಯಲ್ಲಿ ಮಾಡಿದಂತೆ ನಿಮಗೂ ಆರು ವರ್ಷದ ಶಿಕ್ಷೆ ಕೊಡುತ್ತೇನೆ.”

ಈ ಮೊಕದ್ದಮೆ, ಗಾಂಧೀಜಿಯವರ ಹೇಳಿಕೆ, ಜಡ್ಜರ ತೀರ್ಪು ಇವೆಲ್ಲಾ ಇತಿಹಾಸ ಪ್ರಸಿದ್ಧವಾಗಿವೆ. ಗಾಂಧೀಜಿ ತಮ್ಮಂತೆ ಇತರ ಭಾರತೀಯರೂ ಸರ್ಕಾರ ಅನ್ಯಾಯದ ದಾರಿಯಲ್ಲಿ ನಡೆಯುತ್ತಿದೆ ಎಂದು ತಿಳಿಸಬೇಕೆಂದು ತೋರಿಸಿದ ದಾರಿ ಇತಿಹಾಸದಲ್ಲಿ ಉಲ್ಲೇಖಾರ್ಹವಾದುದು.

ಗಾಂಧೀಜಿ “ಯಂಗ್ ಇಂಡಿಯಾ” ಪತ್ರಿಕೆಯಲ್ಲಿ ಆಗಲೇ ತಿಳಿಸಿದ್ದರು; ತಮ್ಮ ದಸ್ತಗಿರಿಯಾದರೆ ಹರತಾಳ ಮಾಡಕೂಡದು, ಸಭೆಗಳಾಗಕೂಡದು, ಜನರು ಶಾಂತವಾಗಿ ರಚನಾತ್ಮಕ ಕಾರ್ಯದಲ್ಲಿ ನಿರತರಾಗಬೇಕು, ರಚನಾತ್ಮಕ ಕಾರ್ಯ ಭಾರತವನ್ನು ಸ್ವರಾಜ್ಯದ ಸಮೀಪಕ್ಕೆ ಒಯ್ಯುವುದು.

ತತ್‌ಕ್ಷಣವೇ ಒಂದು ರೀತಿಯಾದ ಮೊಬ್ಬು ದೇಶದಲ್ಲಿ ಉಂಟಾಯಿತು. ಜೈಲಿನ ಒಳಗಿದ್ದ ಗಾಂಧೀಜಿಯವರನ್ನು ದೇಶ ಜ್ಞಾಪಿಸಿಕೊಳ್ಳುತ್ತಿತ್ತು. ಅವರಿಗೆ ಶಿಕ್ಷೆಯಾದ ೧೮ನೇ ತಾರೀಖನ್ನು ಪ್ರತಿ ತಿಂಗಳೂ ಪ್ರಾರ್ಥನೆ, ರಚನಾತ್ಮಕ ಕಾರ್ಯ ಇವುಗಳಲ್ಲಿ ಭಾರತದ ಆದ್ಯಂತ ಜನ ಕಳೆಯುತ್ತಿದ್ದರು. ಗಾಂಧೀಜಿಯ ವಿಚಾರಣೆಯ ವಿವರ ಭಾರತದೇಶದಲ್ಲೂ ಇತರ ದೇಶಗಳಲ್ಲು ಹರಡಿದಂತೆಲ್ಲಾ, ಗಾಂಧೀಜಿ ಏಸುಕ್ರಿಸ್ತನಿಗೆ ಸಮಾನ ಎಂಬುದಾಗಿ ಜನ ಆಡತೊಡಗಿದರು. ಇಂಗ್ಲೆಂಡಿನ ಮತ್ತು ಅಮೆರಿಕಾದ ಪತ್ರಿಕೆಗಳು ಗಾಂಧೀಜಿಯನ್ನು ಕೊಂಡಾಡಿದ್ದೂ ಕೊಂಡಾಡಿದ್ದೇ.

ಗಾಂಧೀಜಿಯನ್ನು ಕಾರಾಗೃಹದಲ್ಲಿ ಇಟ್ಟಿದ್ದರಿಂದ ಇಂಡಿಯಾ ಸರ್ಕಾರದ ಮತ್ತು ಬ್ರಿಟಿಷ್ ಸರ್ಕಾರದ ಘನತೆ ಕಡಿಮೆಯಾಯಿತು.

ಗಾಂಧೀಜಿ ಕಾರಾಗೃಹದಲ್ಲಿದ್ದಾಗ, ದೇಶದ ಪರಿಸ್ಥಿತಿಯಲ್ಲಿ ಕೆಲವು ಬದಲಾವಣೆಗಳಾದವು. ರಚನಾತ್ಮಕ ಕಾರ್ಯದಲ್ಲಿ ವಿಶ್ವಾಸವಿಟ್ಟವರೆಲ್ಲರೂ ಅದನ್ನು ನಡೆಸಿಕೊಂಡು ಬರುತ್ತಿದ್ದರು. ಕ್ರಮಕ್ರಮವಾಗಿ ಸಿ.ಆರ್. ದಾಸ್., ಪಂಡಿತ ಮೋತಿಲಾಲ್ ನೆಹರು, ಲಜಪತರಾಯ, ಸಿ. ರಾಜಗೋಪಾಲಾಚಾರಿ ಮುಂತಾದವರ ಬಿಡುಗಡೆಯಾಯಿತು. ಸಿ.ಆರ್.ದಾಸ್ ಮುಂತಾದವರಿಗೆ ಶಾಸನಸಭೆಗಳ ಹಂಬಲ ಇನ್ನೂ ಬಿಟ್ಟಿರಲಿಲ್ಲ. ಶಾಸನಸಭೆಗಳನ್ನು ಪ್ರವೇಶಿಸಿ, ಸರ್ಕಾರದ ಮಸೂದೆಗಳನ್ನೆಲ್ಲಾ ವಿರೋಧಿಸುವುದು, ಬಡ್ಜೆಟ್ಟನ್ನು ತಳ್ಳಿ ಹಾಕುವುದು, ವಾಕ್ ಔಟ್ ಮಾಡುವುದು, ದಾಂಧಲೆ ಎಬ್ಬಿಸುವುದು, ಇವೇ ಮುಂತಾದ ಕಾರ್ಯಗಳಲ್ಲಿ ಬಹಳ ಇಷ್ಟ. ಇದರಿಂದ ಸರ್ಕಾರಕ್ಕೂ ಬೇಜರಾಗುತ್ತದೆ. ಶಾಸನಗೃಹಗಳನ್ನು ಪ್ರವೇಶಿಸಿ ಹೊಸ ಹೋರಾಟವನ್ನು ಹೂಡಬೇಕು ಎಂಬುದು ಅವರ ಅಭಿಪ್ರಾಯ. ಆದರೆ ಸಿ.ರಾಜಗೋಪಾಲಾಚಾರಿ ಮತ್ತು ಅವರ ಮಿತ್ರರಿಗೆ ಗಾಂಧೀಜಿ ಜೈಲಿನಲ್ಲಿರುವಾಗ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕೇ ಹೊರತು, ಅವರು ನಿಷೇಧಿಸಿದ್ದ ಶಾಸನ ಸಭೆಗಳ ಕಾರ್ಯಕ್ರಮವನ್ನು ಆರಂಭಿಸುವುದು ಯುಕ್ತವಲ್ಲ ಎಂಬ ಅಭಿಪ್ರಾಯ. ೧೯೨೨ನೇ ಜೂನ್ ತಿಂಗಳಿನಲ್ಲಿ ಲಕ್ನೋದಲ್ಲಿ ಕಾಂಗ್ರೆಸ್ ಸಭೆ ಸೇರಿತು. ಈ ಸಭೆಯಲ್ಲಿ ಒಂದು ನಿರ್ಣಯ ಪಾಸಾಯಿತು. ದೇಶದಲ್ಲಿ ಕಾನೂನುಭಂಗವನ್ನು ಜಾರಿಗೆ ತರುವ ಸ್ಥಿತಿಯಿದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಿ ಮುಂದೇನು ಕಾರ್ಯ ನಡೆಸಬೇಕೆಂಬ ಬಗ್ಗೆ ಸಮಿತಿಯೊಂದನ್ನು ನೇಮಿಸಲಾಯಿತು. ಹಕೀಂ ಅಜ್ಮಲ್ ಖಾನರು ಈ ಸಮಿತಿಗೆ ಅಧ್ಯಕ್ಷರು. ಈ ಸಮಿತಿ ದೇಶವನ್ನೆಲ್ಲಾ ಸಂಚರಿಸಿ ಎರಡು ಅಭಿಪ್ರಾಯಗಳಿಗೆ ಬಂದಿತು. ಈಗ ದೇಶದಲ್ಲಿ ಸಾಮುದಾಯಕ ಕಾನೂನು ಭಂಗವನ್ನು ಆಚರಿಸಲು ಸಾಧ್ಯವಿಲ್ಲ ಎಂಬ ಬಗ್ಗೆ ಸರ್ವರ ಅಭಿಪ್ರಾಯವೂ ಒಂದೇ. ಆದರೆ ಮುಂದೇನು ಕಾರ್ಯ ಎಂಬುದರ ಬಗ್ಗೆ ಹಕೀಂ ಅಜ್ಮಲ್ ಖಾನ್, ಪಂಡಿತ ಮೋತಿಲಾಲ್ ನೆಹರು, ವಿಠ್ಠಲಭಾಯಿ ಪಟೇಲ್ ಇವರಗಳು ಶಾಸನ ಸಭೆಗಳ ಪ್ರವೇಶಕ್ಕೆ ಇದ್ದ ವಿರೋಧವನ್ನು ತೆಗೆದು ಹಾಕಬೇಕೆಂದು ಅಭಿಪ್ರಾಯ ಪಟ್ಟರು. ಆದರೆ ಡಾ. ಅನ್ಸಾರಿ, ರಾಜಗೋಪಾಲಾಚಾರಿ, ಕಸ್ತೂರಿ ರಂಗ ಅಯಂಗಾರ್ ಇವರು ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಯಾವ ಬದಲಾವಣೆಯೂ ಕೂಡದು ಎಂದರು. ದೇಶದಲ್ಲಿ ಉಭಯ ಪಕ್ಷದವರೂ ಕಾಂಗ್ರೆಸಿನವರನ್ನು ತಮ್ಮ ತಮ್ಮ ಕಡೆಗೆ ತಿರುಗಿಸಲು ಪ್ರಯತ್ನಿಸಿದರು.

೧೯೨೨ನೇ ಡಿಸೆಂಬರ್‌ನಲ್ಲಿ ಗಯಾದಲ್ಲಿ ಕಾಂಗ್ರೆಸ್ ಮಹಾಧಿವೇಶನ ನಡೆಯಿತು. ಇಲ್ಲಿ ಉಭಯ ಪಕ್ಷದವರೂ ಹೋರಾಡಿದರು. ರಾಜಗೋಪಾಲಾಚಾರಿಯವರ ಪಕ್ಷಕ್ಕೆ ಬಹುಮತ ದೊರೆಯಿತು. ಕಾಂಗ್ರೆಸ್ ಅಧ್ಯಕ್ಷ ಸಿ. ಆರ್. ದಾಸರು ರಾಜೀನಾಮೆಯಿತ್ತರು. ಡಾ. ಅನ್ಸಾರಿ ಎರಡು ಪಕ್ಷಗಳಿಗೂ ಒಪ್ಪಂದವಾಗಲು ಯತ್ನಿಸಿದರು. ೧೯೨೩ನೇ ಫೆಬ್ರವರಿ ೨೭ ರಲ್ಲಿ ಅಲಹಾಬಾದಿನಲ್ಲಿ ಎ.ಐ.ಸಿ.ಸಿ. ಸಭೆ ನಡೆಯಿತು. ೧೯೨೩ನೇ ಏಪ್ರಿಲ್ ಅಖೈರಿನವರೆಗೆ ಕೌನ್ಸಿಲ್ ಪ್ರವೇಶದ ಪಕ್ಷದವರು ತಮ್ಮ ಪ್ರಚಾರವನ್ನು ನಿಲ್ಲಿಸಬೇಕೆಂದೂ ಅನಂತರ ಯಾವ ರೀತಿಯಾಗಿ ತೋರುವುದೋ ಹಾಗೆ ಉಭಯ ಪಕ್ಷದವರು ನಡೆಯಬಹುದೆಂದೂ ತೀರ್ಮಾನವಾಯಿತು.

ಇಷ್ಟರಲ್ಲಿ ಮೌಲಾನಾ ಅಬುಲ್ ಕಲಾಂ ಆಜಾದ್ ಮತ್ತು ಜವಹರ ಲಾಲ್ ನೆಹರೂ ಜೈಲಿನಿಂದ ಖುಲಾಸೆಯಾದರು. ೧೯೨೩ ನೇ ಸೆಪ್ಟೆಂಬರ್ ನಲ್ಲಿ ದೆಹಲಿಯಲ್ಲಿ ನಡೆದ ವಿಶೇಷ ಕಾಂಗ್ರೆಸ್ ಅಧಿವೇಶನದಲ್ಲಿ ಕೌನ್ಸಿಲ್ ಪ್ರವೇಶ ಕಾರ್ಯಕ್ರಮಕ್ಕೆ ಅನುಮತಿ ದೊರೆಯಿತು. ಆ ಕಾರ್ಯದಲ್ಲಿ ಇಷ್ಟವುಳ್ಳವರು ಅದರಲ್ಲಿ ತೊಡಗಬಹುದೆಂದು ಅವಕಾಶವಾಯಿತು. ಮೌಲಾನಾ ಮಹಮದ್ ಅಲಿಯವರು ತಮಗೆ ಗಾಂಧೀಜಿಯಿಂದ ವೈರ್‌ಲೆಸ್ ಸಂದೇಶ ಬಂದಿದೆ ಎಂದೂ, ಅವರು ಕೌನ್ಸಿಲ್ ಪ್ರವೇಶ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟಿದ್ದಾರೆಂದೂ ತಿಳಿಸಿದರು. ಕೌನ್ಸಿಲ್ ಪ್ರವೇಶವಾದಿಗಳು ಸ್ವರಾಜಿಸ್ಟ್ ಪಾರ್ಟಿ ಎಂಬ ಪಕ್ಷವನ್ನು ನಿರ್ಮಿಸಿಕೊಂಡು, ತಮ್ಮ ಹಸ್ತಪತ್ರಿಕೆ ಹೊರಡಿಸಿದರು.

೧೯೨೩ನೇ ಕಾಂಗ್ರೆಸ್ ಮಹಾಧೀವೇಶನ ಕಾಕಿನಾಡಾದಲ್ಲಿ ನಡೆಯಿತು. ಮೌಲಾನಾ ಮಹಮದ್ ಅಲಿ ಅಧ್ಯಕ್ಷರು. ಕೌನ್ಸಿಲಿನಲ್ಲಿ ಅಡ್ಡಿ ಆತಂಕಗಳ ನ್ನುಂಟುಮಾಡುವುದೂ ಅಸಹಕಾರದ ಒಂದು ಮಾರ್ಗವೆಂದು ಪ್ರತಿನಿಧಿಗಳು ತೀರ್ಮಾನಿಸಿದರು.

ಸಿ.ಆರ್.ದಾಸ್, ಮೋತಿಲಾಲ್, ಪಟೇಲ್, ಸತ್ಯಮೂರ್ತಿ, ಟಿ.ಪ್ರಕಾಶಂ, ಕಾಳೇಶ್ವರರಾವ್ ಮುಂತಾದವರು ಸ್ವರಾಜಿಸ್ಟ್ ಪಕ್ಷದ  ಪ್ರಚಾರವನ್ನು ಚೆನ್ನಾಗಿ ಮಾಡಿದರು. ೧೯೨೩ನೇ ಅಖೈರಿನಲ್ಲಾದ ಚುಣಾವಣೆಯನ್ನು ಬಹುಸಂಖ್ಯೆಯಲ್ಲಿ ಗೆದ್ದರು. ಕೇಂದ್ರ ಶಾಸನ ಸಭೆಯನ್ನು ಮೋತಿನೆಹರು ಮತ್ತು ವಿಠ್ಠಲಾಲ್ ಭಾಯಿ ಪಟೇಲರು ಪ್ರವೇಶಿಸಿದರು. ಸಿ.ಆರ್.ದಾಸರು ಬಂಗಾಳ ಶಾಸನ ಸಭೆಯನ್ನು ಮತ್ತು ಸತ್ಯಮೂರ್ತಿಯವರು ಮದ್ರಾಸ್ ಶಾಸನಸಭೆಯನ್ನು ಪ್ರವೇಶಿಸಿದರು. ಪತ್ರಿಕೆಗಳಲ್ಲಿ ಸ್ವರಾಜ್ಯ ಪಕ್ಷದ ಹೋರಾಟಗಳ ಸುದ್ದಿ ಹೇರಳವಾಗಿ ಪ್ರಕಟವಾಗುತ್ತಿತ್ತು.

ಗಾಂಧೀಜಿ ೧೯೨೨ನೇ ಮತ್ತು ೧೯೨೩ನೇ ಇಸವಿಗಳನ್ನು ಯೆರವಾಡಾ ಜೈಲಿನಲ್ಲಿ ಕಳೆದರು. ಇಲ್ಲಿ ನೇಯುವುದರಲ್ಲಿ ಮತ್ತು ಪುಸ್ತಕಗಳನ್ನು ಓದುವುದರಲ್ಲಿ ನಿರತರಾಗಿದ್ದರು. ೧೯೨೩ನೇ ಅಖೈರಿನಲ್ಲಿ ಇವರಿಗೆ ಕಾಯಿಲೆಯಾಯಿತು. ೧೯೨೪ನೇ ಜನವರಿ ೧೨ರಲ್ಲಿ ಈ ಕಾಯಿಲೆಯನ್ನು ಅಪೆಂಡಿಸೈಟಿಸ್ ಎಂದು ಗುರ್ತಿಸಲಾಯಿತು. ಇವರನ್ನು ಪೂನಾದ ಸಸೂನ್ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಸರ್ಜನ್ ಕರ್ನಲ್ ಮೋಡಕ್ ಯಶಸ್ವಿಯಾಗಿ ಆಪರೇಷನ್‌ಮಾಡಿದರು. ಆ ಸಮಯದಲ್ಲಿ ರೈಟ್ ಆನರಬಲ್ ವಿ.ಎಸ್.ಶ್ರೀನಿವಾಸ ಶಾಸ್ತ್ರಿಗಳು ಹತ್ತಿರವಿದ್ದರು. ಇವರು ಗಾಂಧೀಜಿಯ ಆಗಿನ ಧೈರ್ಯಸ್ಥೆರ್ಯಗಳನ್ನು ಕೊಂಡಾದಿದ್ದಾರೆ. ಆಪರೇಷನ್‌ಆದ ಮೇಲೆ ಫೆಬ್ರವರಿ ೫ನೇ ತಾರೀಖು ಗಾಂಧೀಜಿಯನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು. ಅವರು ಬೊಂಬಾಯಿನ ಜುಹೂವಿನಲ್ಲಿ ಎರಡು ತಿಂಗಳು ಕಾಲ ವಿಶ್ರಾಂತಿ ತೆಗೆದುಕೊಂಡು ಕಾಯಿಲೆಯಿಂದ ಸುಧಾರಿಸಿಕೊಂಡರು.

ಸ್ವರಾಜ್ಯ ಪಕ್ಷದ ಮುಖಂಡರು ತಮ್ಮ ಪಕ್ಷಕ್ಕೆ ಗಾಂಧೀಜಿಯ ಆಶೀರ್ವಾದ ಪಡೆಯಲು ಅವರ ಹತ್ತಿರ ಮಾತನಾಡಿದರು. ಕಡೆಗೆ ಗಾಂಧೀಜಿ ಕಾಂಗ್ರೆಸಿನೊಳಗೆ ಇದ್ದುಕೊಂಡು ಶಾಸನ ಸಭೆಗಳಲ್ಲಿ ಕೆಲಸ ಮಾಡಲು ಅವರಿಗೆ ಅವಕಾಶವಿತ್ತರು.

ಬೆಳಗಾವಿಯಲ್ಲಿ ೧೯೨೪ನೇ ಡಿಸೆಂಬರ್‌ನಲ್ಲಿ ನಡೆದ ಕಾಂಗ್ರೆಸ್‌ಮಹಾಧಿವೇಶನಕ್ಕೆ ಗಾಂಧೀಜಿಯವರೇ ಅಧ್ಯಕ್ಷರಾಗಿದ್ದರು. ಸಿ.ಆರ್.ದಾಸ್, ಮೋತಿಲಾಲ್ ನೆಹರು, ವಿಠಲ್‌ಭಾಯಿ ಪಟೇಲ್ ಮುಂತಾದ ಸ್ವರಾಜ್ ಪಾರ್ಟಿ ಮುಖಂಡರೆಲ್ಲಾ ಬಂದಿದ್ದರು. ಗಾಂಧೀಜಿ ತಮ್ಮ ಭಾಷಣದಲ್ಲಿ ಸ್ವರಾಜ್ಯ ಪಾರ್ಟಿಗೆ ಸೇರಿದವರು ರಚನಾತ್ಮಕ ಕಾರ್ಯಗಳಿಗೆ ಒತ್ತಾಸೆಕೊಡಬೇಕೆಂದು ಉಳಿದವರು ಹೆಚ್ಚು ಶ್ರದ್ಧೆಯಿಂದ ಕೈನೂಲು ಮತ್ತು ಖಾದಿಗೆ ಬೆಂಬಲಿಗರಾಗಿರಬೇಕೆಂದು ಕೋರಿದರು. ಈ ಅಧಿವೇಶನದಲ್ಲಿ ೪ ಆಣೆ ಬದಲಾಗಿ, ನೂತನ ನೂಲನ್ನು ಕಾಂಗ್ರೆಸ್ ಸದಸ್ಯ ಚಂದಾವಾಗಿ ಕೊಡಬಹುದೆಂದು ತೀರ್ಮಾನವಾಯಿತು.

೧೯೨೪ನೇ ಸೆಪ್ಟೆಂಬರ್‌ನಲ್ಲಿ ಹಿಂದೂ – ಮಹಮ್ಮದೀಯ ಐಕ್ಯಮತ್ಯಕ್ಕಾಗಿ ಡೆಲ್ಲಿಯಲ್ಲಿ ಡಾ. ಅನ್ಸಾರಿಯವರ ಮನೆಯಲ್ಲಿ ಗಾಂಧೀಜಿ ೨೧ ದಿವಸಗಳ ಉಪವಾಸ ಮಾಡಿದರು. ದೇಶದಲ್ಲಿ ಅಲ್ಲಲ್ಲಿ ಸಂಭವಿಸುತ್ತಿದ್ದ ಹಿಂದೂ – ಮುಸ್ಲಿ ಗಲಭೆಗಳು ಸ್ವಲ್ಪ ಮಟ್ಟಿಗೆ ನಿಂತವು. ಎಲ್ಲಾ ಪಾರ್ಟಿಗಳ ಒಂದು ಸಮ್ಮೇಳನ ನಡೆದು ಹಿಂದೂ – ಮಹಮ್ಮದೀಯ ಐಕ್ಯಮತ್ಯವನ್ನು ಕಾಪಾಡುವ ನಿರ್ಧಾರವನ್ನು ಮಾಡಲಾಯಿತು.

ಸ್ವರಾಜಿಸ್ಟ್ ಪಾರ್ಟಿ ಮುಂದೆ ಯಾವ ಆಡಚಣೆಯೂ ಇಲ್ಲದೆ ಕೆಲಸ ಮಾಡಿತು.

ಬಂಗಾಳ ಶಾಸನ ಸಭೆಯಲ್ಲಿ ಸಿ.ಆರ್. ದಾಸರು ಕಾಂಗ್ರೆಸ್ ಪಾರ್ಟಿ ಮುಖಂಡರಾಗಿ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡಿದರು. ಶಾಸನ ಸಭೆಗಳಲ್ಲಿ ಕಾಂಗ್ರೆಸಿನ ಪ್ರತಿಭಟನೆ ಬ್ರಿಟಿಷ್ ಸರ್ಕಾರದ ಮೇಲೆ ಪರಿಣಾಮ ಉಂಟು ಮಾಡುವುದೆಂಬುದು ಸಿ.ಆರ್.ದಾಸರ ಅಭಿಪ್ರಾಯ.

ಬಂಗಾಳದಲ್ಲಿ ಮುಸ್ಲಿಮರಿಗೂ ಹಿಂದೂಗಳಿಗೂ ಸಿ.ಆರ್.ದಾಸರು ಐಕಮತ್ಯ ಉಂಟುಮಾಡಿದರು.

ಕೇಂದ್ರ ಶಾಸನ ಸಭೆಯಲ್ಲಿ ಮೋತಿಲಾಲ್ ನೆಹರು ಮತ್ತು ಅವರ ಸ್ವರಾಜಿಸ್ಟ್ ಮಿತ್ರರು ಸರ್ಕಾರವನ್ನು ತಡೆಯಿಲ್ಲದೆ ಎದುರಿಸುತ್ತ ಬಂದರು. ದುರ್ದೈವದಿಂದ ೧೯೨೫ಮೇನಲ್ಲಿ  ಸಿ.ಆರ್. ದಾಸರು ಅಕಾಲ ಮರಣಕ್ಕೆ ತುತ್ತಾದರು. ದಾಸರ ಮರಣಾನಂತರ ಗಾಂಧೀಜಿ ಸ್ವರಾಜ್ಯ ಪಾರ್ಟಿಗೆ ಬಹಳ ಬೆಂಬಲವಿತ್ತರು. ೧೯೨೫ನೇ ಡಿಸೆಂಬರ್‌ನಲ್ಲಿ ನಡೆದ ಕಾಂಗ್ರೆಸ್ ಮಹಾಧಿವೇಶನಕ್ಕೆ ಶ್ರೀಮತಿ ಸರೋಜಿನಿ ನಾಯಿಡು ಅಧ್ಯಕ್ಷರಾಗಿದ್ದರು. ಕಾಂಗ್ರೆಸ್ ಮುಖಂಡರಿಗೆ ಹೆಚ್ಚು ಹೆಚ್ಚು ನಂಬಿಕೆ ಶಾಸನ ಸಭಾ ಕಾರ್ಯಗಳಲ್ಲಿ ಉಂಟಾಯಿತು. ಗಾಂಧೀಜಿಯವರ ಅಭಿಪ್ರಾಯಗಳಿಗೆ ಅವರು ಅಷ್ಟು ಮಾನ್ಯತೆ ಕೊಡಲಿಲ್ಲ. ಅಹಿಂಸೆಯ ವಿಷಯದಲ್ಲಿಯೂ ಇತರ ಮುಖಂಡರು ಗಾಂಧೀಜಿಯಷ್ಟು ನಿಷ್ಠರಾಗಿರಲಿಲ್ಲ.

ಗೋಪಿನಾಥ್ ಷಾ ಎಂಬ ಒಬ್ಬ ಕ್ರಾಂತಿ ವೀರ ಅರ್ನಸ್ಟ್ ಡೇ ಎಂಬವನನ್ನು ಕೊಲೆಮಾಡಿ, ಗಲ್ಲಿಗೆ ಗುರಿಯಾದನು. ಬಂಗಾಳದಲ್ಲಿ ನಡೆದ ಒಂದು ರಾಜಕೀಯ ಸಮ್ಮೇಳನದಲ್ಲಿ ಗೋಪೀನಾಥ ಷಾ ನ ದೇಶಾಭಿಮಾನವನ್ನೂ ಸ್ವಾರ್ಥತ್ಯಾಗವನ್ನೂ ಕೊಂಡಾಡಲಾಯಿತು. ಅಹಮದಾಬಾದಿನಲ್ಲಿ ನಡೆದ ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ಸಭೆಯಲ್ಲಿ ಗೋಪೀನಾಥ್ ಷಾನ ದೇಶಾಭಿಮಾನವನ್ನು ಪ್ರಶಂಸೆ ಮಾಡಿದಾಗ್ಯೂ, ಅವನು ಮಾಡಿದಂತಹ ರಾಜಕೀಯ ಕೊಲೆಯನ್ನು ಬಲವಾಗಿ ಖಂಡಿಸಲಾಯಿತು. “ಇಂತಹ ಕೃತ್ಯಗಳು ಸ್ವರಾಜ್ಯ ಸ್ಥಾಪನೆಗೆ ಅಡ್ಡಿ ತರುತ್ತವೆ ಮತ್ತು ಕಾನೂನು ಭಂಗದ ಸಿದ್ಧತೆಗೆ ವಿಘ್ನ ತರುತ್ತವೆ” ಎಂಬ ನಿರ್ಣಯವನ್ನು ತರಲಾಯಿತು. ಇದಕ್ಕೆ ಸಭೆಯಲ್ಲಿ ಬಹಳ ವಿರೋಧ ಬಂದಿತು. ದಾಸರಿಗೆ ಈ ನಿರ್ಣಯ ಇಷ್ಟವಿರಲಿಲ್ಲ. ತಾವು ಅಹಿಂಸೆಗೆ ಪ್ರಾಧಾನ್ಯತೆ ಕೊಡುವುದಿಲ್ಲವೆಂದು ಅವರು ಸ್ವಷ್ಟ ಪಡಿಸಿದರು. ಓಟಿಗೆ ಹಾಕಿದಾಗ ತಮಗೆ ಬಹಳ ಬೇಕಾದವರು ಕೂಡ ಈ ನಿರ್ಣಯವನ್ನು ವಿರೋಧಿಸಿದ್ದು ಗಾಂಧೀಜಿಗೆ ಕಂಡು ಬಂದಿತು. ಅವರನ್ನು ಹಿಂಬಾಲಿಸುತ್ತಿದ್ದ ಕೆಲವು ದೊಡ್ಡ ಮನುಷ್ಯರಿಗೆ ಅಹಿಂಸೆಯಲ್ಲಿ ನಿಷ್ಠೆ ಇಲ್ಲದಿದ್ದುದನ್ನು ಕಂಡುಕೊಂಡರು, ಅವರಿಗೆ ಬಹಳ ನಿರಾಶೆಯಾಯಿತು. ಅಹಿಂಸೆಗೆ ಅಷ್ಟು ಬೆಂಬಲವಿಲ್ಲದ್ದಕ್ಕಾಗಿ ಬಹಿರಂಗ ಸಭೆಯಲ್ಲಿ ನಿರಾಶೆಯಾಯಿತು. ಅಹಿಂಸೆಗೆ ಅಷ್ಟು ಬೆಂಬಲವಿಲ್ಲದ್ದಕ್ಕಾಗಿ ಬಹಿರಂಗ ಸಭೆಯಲ್ಲಿ ಬಹಳ ಶೋಕಿಸಿದರು. ಕಡೆಗೆ ಯಾವುದೋ ವಿಧವಾಗಿ ರಾಜಿಯಾಯಿತು. ಆದರೆ ಗಾಂಧೀಜಿ ಹೆಚ್ಚು ಸಮಾಧಾನವಾಗಲಿಲ್ಲ.

ಇನ್ನು ಮುಂದೆ ಗಾಂಧೀಜಿ ಹೆಚ್ಚು ಹೆಚ್ಚಾಗಿ ರಚನಾತ್ಮಕ ಕಾರ್ಯದ ಕಡೆ ತಿರುಗಿದರು. ಸ್ವರಾಜಿಸ್ಟರು ತಮ್ಮ ದಾರಿಯಲ್ಲಿ ನಡೆಯುತ್ತಿದ್ದರು. ಕೆಲವು ಪ್ರಾಂತಗಳಲ್ಲಿ ಮಂತ್ರಿ ಮಂಡಲದಲ್ಲಿ ಭಾಗವಹಿಸುವಷ್ಟು ಬಹುಮತವಿದ್ದಾಗ್ಯೂ, ಮೋತಿಲಾಲ ನೆಹರು ಅದನ್ನು ನಿಷೇಧಿಸಿದರು. ಈ ವಿಷಯದಲ್ಲಿ ಬೊಂಬಾಯಿ ಮತ್ತು ಮಧ್ಯಪ್ರಾಂತ್ಯದ ಸ್ವರಾಜಿಸ್ಟ್ ಗುಂಪಿನಿಂದ ಬೇರೆಯಾಗಿ ರೆಸ್‌ಪಾನ್ಸಿವ್ ಕೋ – ಆಪರೇಷನ್ ಪಾರ್ಟಿ ಎಂಬ ಬೇರೆ ಪಾರ್ಟಿಯನ್ನು ಕಟ್ಟಿದರು. ಲಾಲಾ ಲಜಪತರಾಯ್, ಪಂಡಿತ ಮಾಲವೀಯ ಇವರು ರೆಸ್‌ಪಾನ್ಸಿವ್ ಕೋ – ಆಪರೇಷನ್ ಪಾರ್ಟಿಗೆ ಸೇರಿದರು.

೧೯೨೬ನೇ ಏಪ್ರಿಲ್‌ನಲ್ಲಿ ಲಾರ್ಡ್ ರೀಡಿಂಗರು ನಿವೃತ್ತರಾದರು. ಲಾರ್ಡ್ ಅರ್ವಿನ್ ಅದೇ ದಿವಸ ವೈಸರಾಯ್ ಪದವಿಯನ್ನು ವಹಿಸಿದರು.

೧೯೨೬ರಿಂದ ೧೯೨೭ರ ಕೊನೆವರಿಗೆ ದೇಶ ಯಥಾಸ್ಥಿತಿಯಾಗಿ ಮುಂದರಿಯಿತು. ಅನಂತರ ಬ್ರಿಟಿಷ್ ಸರ್ಕಾರದವರು ರಾಜಕೀಯ ವ್ಯವಸ್ಥೆ ಮುಂದೆ ಯಾವ ರೀತಿಯಾಗಿ ಇರಬೇಕು ಎಂಬುದನ್ನು ಪರಿಶೀಲಿಸಲು ಇಂಡಿಯಾಕ್ಕೆ ಕಳುಹಿಸಿದರು. ಸೈಮನ್‌ರವರೇ ಈ ಕಮಿಷನ್ನಿಗೆ ಅಧ್ಯಕ್ಷರು. ಭಾರತೀಯರಾರೂ ಅದರಲ್ಲಿ ಸದಸ್ಯರಾಗಿರಲಿಲ್ಲ. ಈ ಕಮಿಷನ್ನು ೧೯೨೮ನೇ ಫೆಬ್ರವರಿ ೩ರಲ್ಲಿ ಭಾರತಕ್ಕೆ ಬಂದಿತು. ಭಾರತೀಯರು ಬಹಿಷ್ಕಾರ ಹಾಕಿದರು: ಈ ಸಮಿತಿಯ ಮುಂದೆ ಸಾಕ್ಷ್ಯಕೊಡಲು ನಿರಾಕರಿಸಿದರು. ಕೆಲವು ಮತವಾದಿಗಳು ಮತ್ತು ಅಲ್ಪಸಂಖ್ಯಾತರು ಮಾತ್ರ ಈ ಸಮಿತಿಯ ಮುಂದೆ ಸಾಕ್ಷ್ಯವಿತ್ತರು. ಸಮಿತಿ ದೇಶದಲ್ಲೆಲ್ಲಾ ಸಂಚರಿಸಿತು. ಎಲ್ಲೆಲ್ಲೂ ಅದಕ್ಕೆ ಬಹಿಷ್ಕಾರ. ಹರತಾಳ ಮಾಡುವ ಜನರನ್ನು ಪೊಲೀಸರು ಲಾಠಿಯಿಂದ ಹೊಡೆದರು. ಲಾಹೋರಿನ ಪ್ರದರ್ಶನದಲ್ಲಿ ಲಾಲಾ ಲಜಪತರಾಯರು ಸೇರಿಕೊಂಡಿದ್ದರು. ಅವರ ಎದೆಯ ಮೇಲೆ ಪೊಲೀಸಿನವರು ಲಾಠಿ ಪ್ರಹಾರ ಮಾಡಿದರು. ಗಾಯಗಳು ತೀವ್ರವಾಗಿ, ಲಾಲಾಜಿ ಮೃತರಾದರು. `Simon, go back’ ಎಂಬುದೇ ಕಮಿಟಿಗೆ ಎಲ್ಲೆಲ್ಲೂ ದೊರೆತ ಸ್ವಾಗತ, ಸೈಮನ್ ಕಮಿಷನ್ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಇಂಗ್ಲೆಂಡಿಗೆ ೧೯೨೯ನೇ ಏಪ್ರಿಲ್ ೧೪ರಲ್ಲಿ ಹಿಂತಿರುಗಿತು. ಅನಂತರ ಒಂದು ವರದಿಯನ್ನು ತಯಾರಿಸಿತು.

ಲಾರ್ಡ್ ಬರ್ಕನ್‌ಹೆಡ್ ಎಂಬ ಸೆಕ್ರೆಟರಿ ಆಫ್ ಸ್ಟೇಟ್ ಭಾರತೀಯರಿಗೆ ಒಂದು ಸವಾಲು ಹಾಕಿದರು: ಭಾರತೀಯರೇ ಒಂದು ರಾಜ್ಯಂಗ ರಚನೆಯನ್ನು ರಚಿಸಿ ಮುಂದಿಡಲಿ ಎಂಬುದಾಗಿ. ಈ ಸವಾಲಿಗೆ ಉತ್ತರವಾಗಿ ಸರ್ ತೇಜ್ ಬಹದೂರ್‌ಸಪ್ರು ಮುಂತಾದ ಕೆಲವರು ಮೋತಿಲಾಲ್ ನೆಹರುವರ ಅಧ್ಯಕ್ಷತೆಯಲ್ಲಿ ಕೆಲಸ ಮಾಡಿ ನೆಹರು ವರದಿ ಎಂಬ ರಾಜ್ಯಾಂಗ ವ್ಯವಸ್ಥೆಯನ್ನು ೧೯೨೮ರಲ್ಲಿ ಸಿದ್ಧಗೊಳಿಸಿದರು. ಈ ವರದಿಯಲ್ಲಿ ಡೊಮೆನಿಯನ್ ಸ್ಟೇಟಸ್ ಗುರಿ ಇಟ್ಟುಕೊಳ್ಳಲಾಗಿತ್ತು. ಲಕ್ನೋದಲ್ಲಿ ೧೯೨೮ನೇ ಆಗಸ್ಟಿನಲ್ಲಿ ಒಂದು ಅಖಿಲ ಪಾರ್ಟಿಗಳ ಸಮ್ಮೇಳನದಲ್ಲಿ ಇವರ ರಾಜ್ಯಾಂಗ ವರದಿಯನ್ನು ಇಡಲಾಯಿತು. ಸಂಯುಕ್ತ ಚುನಾವಣಾ ಪದ್ಧತಿ ಇರಬೇಕೆಂದು ವಾದಿಸಿದ್ದನ್ನು ಮುಸ್ಲಿಂ ನಾಯಕರು ಒಪ್ಪಲಿಲ್ಲ. ಜಿನ್ಹಾ, ಆಗಾಖಾನ್, ಷೌಕತ್ ಅಲಿ (ಮಹಮದ್‌ಅಲಿ ದಿವಂಗತರಾಗಿದ್ದರು.) ನೆಹರು ವರದಿಯನ್ನು ಒಪ್ಪಲಿಲ್ಲ.

ಮೋತಿಲಾಲ್ ನೆಹರು ಅಧ್ಯಕ್ಷತೆ ವಹಿಸಿದ್ದ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದ ಮುಂದೆ, ೧೯೨೮ನೇ ಡಿಸೆಂಬರ್‌ನಲ್ಲಿ, ನೆಹರು ವರದಿಯನ್ನು ಮಂಡಿಸಲಾಯಿತು., ಜವಹರಲಾಲ್ ನೆಹರು, ಸುಭಾಷ್ ಚಂದ್ರಬೋಸ್ ಮುಂತಾದವರು ಡೊಮೆನಿಯನ್ ಸ್ಟೇಟಸ್ ಗುರಿಯನ್ನು ವಿರೋಧಿಸಿ ತುರ್ತಾಗಿ ಸಂಪೂರ್ಣ ಸ್ವಾತಂತ್ರ್ಯವನ್ನು ಸ್ಥಾಪಿಸಬೇಕೆಂದು ವಾದಿಸಿದರು. ಕಲ್ಕತ್ತಾದ ೫೦,೦೦೦ ಶ್ರಮಜೀವಿಗಳೂ ಕಾಂಗ್ರೆಸ್ ಅಧಿವೇಶನಕ್ಕೆ ಬಂದು ಸಂಪೂರ್ಣ ಸ್ವಾತಂತ್ರ್ಯವನ್ನೇ ಸ್ಥಾಪಿಸಬೇಕೆಂದು ಕೋರಿದರು.

ಕಾಂಗ್ರೆಸು ಬ್ರಿಟಿಷ್ ಸರ್ಕಾರಕ್ಕೆ “೧೯೨೯ನೇ ಡಿಸೆಂಬರ್‌ನೊಳಗೆ ಬ್ರಿಟಿಷ್ ಸರ್ಕಾರ ಭಾರತದಲ್ಲಿ ಡೊಮೆನಿಯನ್ ಸ್ಟೇಟಸ್ ಸ್ಥಾಪಿಸದಿದ್ದರೆ, ೧೯೩೦ನೇ ಜನವರಿಯಿಂದ ಕಾಂಗ್ರೆಸು ಪೂರ್ಣ ಸ್ವರಾಜ್ಯಕ್ಕಾಗಿ ಕೆಲಸ ಮಾಡುತ್ತದೆ” ಎಂದು ತಗಾದೆ ಕಳುಹಿಸಿತು. ಅಹಿಂಸಾಯುತ್ತ ಅಸಹಕಾರವನ್ನು ಜಾರಿಗೆ ತಂದು, ರೈತರು ಕಂದಾಯ ಕೊಡದ ಚಳುವಳಿಯನ್ನು ಆರಂಭಿಸುವರು ಎಂದೂ ತಿಳಿಸಲಾಯಿತು. ಹೀಗೆ ೧೯೨೮ರಲ್ಲಿ ನಡೆದ ಕಾಂಗ್ರೆಸ್ ಮಹಾಧಿವೇಶನದಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಒಂದು ವರ್ಷದ ಅಲ್ಟಿಮೇಟಂ ಕೊಡಲಾಯಿತು. ಇದಕ್ಕೆ ಜನಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್ ಇವರಿಬ್ಬರೇ ಮುಖ್ಯ ಕಾರಣ.

ಜನಹರಲಾಲ್ ನೆಹರು ಪಂಡಿತ ಮೋತಿಲಾಲರ ಮಗ. ಇವರಿಗೆ ಚಿಕ್ಕಂದಿನಲ್ಲಿ ಇಂಗ್ಲೆಂಡಿನಲ್ಲಿಯೇ ವಿದ್ಯಾಭ್ಯಾಸ ನಡೆಯಿತು. ಇವರು ಕೇಂಬ್ರಿಡ್ಜ್‌ನಲ್ಲಿ ಟ್ರೈಪೋಸ್ ಪಡೆದರು. ಇವರ ತಂದೆಗೆ ಇವರು ಐ.ಸಿ.ಎಸ್.ಕಾಸ್ ಮಾಡುವುದು ಇಷ್ಟವಿರಲಿಲ್ಲ. ತಮ್ಮ ಒಬ್ಬನೇ ಮಗ ತಮ್ಮ ಬಳಿಯೇ ಅಲಹಾಬಾದಿನಲ್ಲಿರಬೇಕೆಂದು ಇವರ ಆಪೇಕ್ಷೆ. ತಂದೆಯ ಆಪೇಕ್ಷೆಯಂತೆ ಬಾರ್ – ಎಟ್ ಲಾ ಪರೀಕ್ಷೆ ಪಾಸು ಮಾಡಿದರು. ಇಂಡಿಯಾಕ್ಕೆ ಹಿಂತಿರುಗಿ ವಕೀಲಿ ವೃತ್ತಿಯನ್ನು ಆರಂಭಿಸಿದರು. ಇವರು ಇಂಗ್ಲೆಂಡಿನಲ್ಲಿದ್ದಾಗಲೇ ಐರ್‌ಲೆಂಡಿನ ಜನರು ಸ್ವಾತಂತ್ರ್ಯಕ್ಕಾಗಿ ಹೋರಾಡುವುದನ್ನೂ, ಯೂರೋಪಿನ ನಾನಾ ದೇಶಗಳಲ್ಲಿ ಕ್ರಾಂತಿ ಸಂಭವಿಸಿ ಜನರಲ್ಲಿ ಸ್ವಾತಂತ್ರ್ಯ ಭಾವನೆ ಕೆಲಸ ಮಾಡುವುದನ್ನೂ, ಇಂಗ್ಲೆಂಡಿನಲ್ಲಿಯೇ ಭಾರತದ ಯುವಕರು ಭಾರತದ ಸ್ವಾತಂತ್ರ್ಯಕ್ಕಾಗಿ ಕೆಲಸ ಮಾಡುವುದನ್ನೂ ನೋಡಿದ್ದರು. ಆದ್ದರಿಂದ ಇಂಡಿಯಾ ದೇಶಕ್ಕೆ ಹಿಂತಿರುಗುವ ಮುಂಚೆಯೇ, ಇವರಿಗೆ ಭಾರತವನ್ನು ಸ್ವಾತಂತ್ರ್ಯಗೊಳಿಸಬೇಕೆಂಬ ಉತ್ಸಾಹ ತುಂಬಿತ್ತು. ಭಾರತಕ್ಕೆ ಬಂದ ಕೂಡಲೇ ಇಲ್ಲಿನ ರಾಜಕೀಯ ಪರಿಸ್ಥಿತಿಯನ್ನೆಲ್ಲಾ ಪರಿಶೀಲಿಸಿ ಗಾಂಧೀಜಿಯ ಶಿಷ್ಯರಾಗಿ ರಾಜಕೀಯಕ್ಕೆ ಧುಮುಕಿದರು. ಆಗ ಇವರಿಗೆ ಇನ್ನೂ ೩೦ ವರ್ಷ, ತಮ್ಮ ಮಗ ಜವಹರಲಾಲರು ಗಾಂಧೀ ಗುಂಪಿಗೆ ಸೇರಿದ ಮೇಲೆ ಪಂಡಿತ ಮೋತಿಲಾಲ್ ನೆಹರವರೂ ಅಸಹಕಾರ ಸಂಗ್ರಾಮವನ್ನು ಸೇರಿದರು.

೧೯೨೦-೨೧ರಲ್ಲಿ ಮೋತಿಲಾಲರನ್ನೂ, ಜವಹರಲಾಲರನ್ನೂ ಅಸಹಕಾರ ಚಳುವಳಿ ಸಂದರ್ಭದಲ್ಲಿ ಸರ್ಕಾರ ಬಂಧಿಸಿತು. ಗಾಂಧೀಜಿ ಚೌರಿ ಚಾರ ಪ್ರಕರಣದ ಕಾರಣ ಕಾನೂನುಭಂಗ ವಾಪಸ್ಸು ತೆಗೆದುಕೊಂಡದ್ದು ಜವಹರಲಾಲರಿಗೆ ಸರಿ ಬೀಳಲಿಲ್ಲ. ಜೈಲಿನಿಂದ ಹಿಂತಿರುಗಿದ ಮೇಲೆ ಕೆಲವು ವರ್ಷಗಳ ಕಾಲ ಜವಹರಲಾಲ್  ಯೂರೋಪ್ ಮತ್ತು ಇಂಗ್ಲೆಂಡಿನಲ್ಲಿ ಸಂಚರಿಸಿದರು. ಸೋವಿಯಟ್ ರಷ್ಯಾದ ೧೦ನೇ ವಾರ್ಷಿಕೋತ್ಸವ ಸಮಯದಲ್ಲಿ ಅಲ್ಲಿಗೆ ಹೋಗಿ, ರಷ್ಯಾದಲ್ಲಿ ಕಮ್ಯುನಿಸ್ಟ್ ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ತಿಳಿದು ಬಂದರು. ಇವರಿಗೆ ಗಾಂಧೀಜಿಯ ಆಶ್ರಮ ಅಭಿಪ್ರಾಯಗಳು ಸರಿಬೀಳಲಿಲ್ಲ, ಆದರೂ ಗಾಂಧೀಜಿಯ ಮುಖಂಡತ್ವದಲ್ಲಿಯೇ ಕೆಲಸ ಮಾಡಿದರು. ಇವರಿಗೆ ರಾಜಕೀಯವನ್ನೂ ಧರ್ಮಭಾವನೆಯನ್ನೂ ಒಟ್ಟಿಗೆ ಸೇರಿಸುವುದು ಇಷ್ಟವಿರಲಿಲ್ಲ. ಗಾಂಧೀಜಿಯವರ ಅಹಿಂಸಾ ಭಾವನೆಯನ್ನು ಸದ್ಯದ ರಾಜಕೀಯಕ್ಕೆ ಸರಿಯಾಗಿರಬಹುದೆಂದು ಒಪ್ಪಿದರು. ಎಲ್ಲ ಕಾಲಕ್ಕೂ ಎಲ್ಲ ಸನ್ನಿವೇಶಗಳಿಗೂ ಅಹಿಂಸೆಯನ್ನೇ ಉಪಯೋಗಿಸುವುದರಲ್ಲಿ ಇವರಿಗೆ ನಂಬಿಕೆಯಿರಲಿಲ್ಲ. ೧೯೨೭ನೇ ಮದ್ರಾಸ್ ಕಾಂಗ್ರೆಸ್ ಮಹಾಧಿವೇಶನದಲ್ಲಿ ಇವರು ತಮ್ಮದೇ ಆದ ಕೆಲವು ನಿರ್ಣಯಗಳನ್ನು ಅಧಿವೇಶನದ ಮುಂದೆ ಇಟ್ಟು ಪಾಸು ಮಾಡಿಸಿಕೊಂಡರು. ಇಂಡಿಯ ಯುದ್ಧ ನೀತಿಗಳಲ್ಲಿ ಭಾಗಿಯಾಗಬಾರದೆಂಬುದು ಅಂಥ ಒಂದು ನಿರ್ಣಯ.

ಸುಭಾಷ್ ಚಂದ್ರ ಬೋಸರು ೧೯೨೧ರಲ್ಲಿ ಲಂಡನ್ನಿನ ಐ.ಸಿ.ಎಸ್.ನಲ್ಲಿ ರ‍್ಯಾಂಕು ಪಡೆದು, ಕೆಲಸಕ್ಕೆ ನೇಮಕವಾಗುವುದರಲ್ಲಿದ್ದರು. ಆದರೆ ಇಂಡಿಯಾದಲ್ಲಿ ಅಸಹಕಾರ ಸಂಗ್ರಾಮ ಪ್ರಾರಂಭವಾದುದನ್ನು ತಿಳಿದು, ಐ.ಸಿ.ಎಸ್. ಸಂಬಂಧವಾದ ಯಾವ ಹುದ್ದೆಯನ್ನೂ ಸ್ವೀಕರಿಸಿದೆ, ಇಂಡಿಯಾಕ್ಕೆ ಹಿಂತಿರುಗಿ, ಬೊಂಬಾಯಿನಲ್ಲಿ ಗಾಂಧೀಜಿಯನ್ನು ಕಂಡರು. ಅವರೊಡನೆ ಮಾತನಾಡಿದರು. ಗಾಂಧೀಜಿ ಕೊಟ್ಟ ಉತ್ತರಗಳು ಅವರಿಗೆ ತೃಪ್ತಿಯಾಗಲಿಲ್ಲ. ಗಾಂಧೀಜಿ ವ್ಯಕ್ತಿತ್ವದ ಬಗ್ಗೆಯೂ ಇವರ ಮನಸ್ಸಿಗೆ ಸಮಾಧಾನವಾಗಲಿಲ್ಲ. ಗಾಂಧೀಜಿ ಹೇಳಿದಂತೆ ಬಂಗಾಳದ ಸಿ.ಆರ್.ದಾಸರ ಬಳಿಗೆ ಬಂದರು. ದಾಸರು ಇವರನ್ನು ತಬ್ಬಿಕೊಂಡು ಆದರಿಸಿದರು. ಸುಭಾಸ್ ಬೋಸರ ಮನಸ್ಸಿಗೆ ದಾಸ್‌ರವರು ಹಿಡಿಸಿದರು. ಬಂಗಾಳದಲ್ಲಿಯೇ ಅವರ ಅನುಯಾಯಿಗಳಾಗಿ ಕೆಲಸ ಮಾಡಿದರು. ೧೯೨೫ರಲ್ಲಿ ದಾಸರ ಮರಣದ ನಂತರ ಇವರು ಬಂಗಾಳದಲ್ಲಿ ಉಗ್ರ ಪಂಥಕ್ಕೆ ಸೇರಿ ಕೆಲಸ ಮಾಡುತ್ತಿದ್ದರು. ಗಾಂಧೀಜಿಯ ಮೊದಲನೇ ಕಾನೂನುಭಂಗ ೧೯೨೨ನೇ ಆದಿಭಾಗದಲ್ಲಿ ನಿಂತುಹೋದಾಗಿನಿಂದ ಭಾರತದಲ್ಲಿ ಯಾವ ಭಾರಿ ಸತ್ಯಾಗ್ರಹವೂ ನಡೆಯಲಿಲ್ಲ. ೧೯೨೩ರಿಂದ ಆರಂಭವಾದ ಕೌನ್ಸಿಲ್ ಪ್ರವೇಶ ಪಾರ್ಟಿ ಸುಮಾರು ೬ – ೭ ವರ್ಷಗಳ ಕಾಲ ಶಾಸನ ಸಭೆಗಳಲ್ಲಿ ಕೆಲಸ ಮಾಡಿತು. ಬರೀ ಆಟಾಟೋಪವೇ ಹೊರತು. ಸ್ವಾತಂತ್ರ್ಯದ ಕಡೆ ಒಂದು ಹೆಜ್ಜೆಯೂ ಮುಂದುವರಿಯಲಿಲ್ಲ.

೧೯೨೯ರಲ್ಲಿ ದೇಶದಲ್ಲಿ ಒಂದು ಹೊಸ ವಾತಾವರಣ ಉಂಟಾಯಿತು. ಗಾಂಧೀಜಿ ಹಿಂದಿನಂತೆ ದೇಶದಲ್ಲೆಲ್ಲಾ ಪ್ರಚಂಡ ಸಂಚಾರ ಮಾಡಿದರು. “ಖಾದಿ ಮತ್ತು ಕೈನೂಲು ಕೈಗಾರಿಕೆಯನ್ನು ಪೂರ್ಣಗೊಳಿಸಿರಿ. ಕಾನೂನು ಭಂಗವೇ ಬೇಕಾಗಿಲ್ಲ. ನಾವು ಸ್ವಾತಂತ್ರ್ಯದ ಸಮೀಪದಲ್ಲಿದ್ದೇವೆ. ಓಜಸ್ಸಿನಿಂದಲೂ ತೇಜಸ್ಸಿನಿಂದಲೂ ಕೆಲಸ ಮಾಡಿ” ಎಂದು ಜನತೆಗೆ ಬೋಧಿಸುತ್ತ ಬಂದರು. ಕಲ್ಕತ್ತಾದಲ್ಲಿ ಒಂದು ಭಾರೀ ಜನ ಸಮುದಾಯದ ಮುಂದೆ ಪರದೇಶಿ ಬಟ್ಟೆಯ ಗುಡ್ಡಕ್ಕೆ ಬೆಂಕಿ ಹೊತ್ತಿಸಿದರು. ಪೊಲೀಸರು ಪ್ರವೇಶಿಸಿ ಅನೇಕರ ಮೇಲೆ ಮೊಕದ್ದಮೆ ಹಾಕಿದರು. ಗಾಂಧೀಜಿಯ ಮೇಲೆಯೂ ಹಾಕಿದರು. ಗಾಂಧೀಜಿಗೆ ಕೋರ್ಟಿನಲ್ಲಿ “ನಾವು ಶಾಂತರಾಗಿಯೇ ಇದ್ದೇವೆ. ಇದೆಲ್ಲಾ ಪೊಲೀಸರ ಗಡಿಬಿಡಿ, ಆದ್ದರಿಂದ ಪೊಲೀಸರೇ ತಪ್ಪಿತಸ್ಥರು. ಅವರಿಗೆ ಶಿಕ್ಷೆಯನ್ನು ಕೊಡಿ” ಎಂದರು. ಮ್ಯಾಜಿಸ್ಟ್ರೇಟ್‌ರು ಗಾಂಧೀಜಿಗೆ ಜುಲ್ಮಾನೆ ಹಾಕಿದರು. ಯಾರೋ ಜುಲ್ಮಾನೆ ಪಾವತಿ ಮಾಡಿದರು. ಗಾಂಧೀಜಿ ಕೋರ್ಟಿನಲ್ಲಿ “ನನ್ನದೆಂಬುದು ಒಂದು ಕಾಸೂ ನನ್ನಲ್ಲಿಲ್ಲ. ಯಾರೋ ಜುಲ್ಮಾನೆ ಕೊಟ್ಟಿದ್ದರೆ ಅದು ತಪ್ಪು. ಬಂಗಾಳಾ ಕಾಂಗ್ರೆಸ್ ಈ ಜುಲ್ಮಾನೆ ಕೊಟ್ಟಿರಲಾರದು”.

೧೯೨೮ರಲ್ಲಿ ಬರಡೋಲಿಯಲ್ಲಿ ಒಂದು ಘಟನೆ ನಡೆಯಿತು. ಸರ್ಕಾರ ಆಗ್ಗಾಗ್ಗೆ ಕಂದಾಯ ಪುನರ್ವಿಮರ್ಶೆ ಮಾಡುವಂತೆ, ಬರಡೋಲಿ ತಾಲೂಕಿನಲ್ಲಿಯೂ ಪುನವಿಮರ್ಶೆ ಮಾಡಿ ಶೇಕಡ ೨೨ರಷ್ಟು ಹೆಚ್ಚಿಸಿತು. ಇದು ರೈತರಿಗೆ ಬಹಳ ಹೆಚ್ಚೆಂದು ಕಂಡು ಬಂದಿತು. ಅವರು ವಲ್ಲಭಭಾಯಿ ಪಟೇಲರ ಹತ್ತಿರ “ಬಂದು ನಮಗೆ ಸಹಾಯ ಮಾಡಿ, ಕಂದಾಯದ ದರವನ್ನು ಕಡಿಮೆ ಮಾಡಿಸಿ” ಎಂದು ಪ್ರಾರ್ಥಿಸಿದರು. ವಲ್ಲಭಭಾಯಿಯವರು ಗಾಂಧೀಜಿಯ ಆಶೀರ್ವಾದ ಪಡೆದು, ಸಾಮೂಹಿಕವಾಗಿ ಕಂದಾಯ ಕೊಡುವುದಿಲ್ಲ ಎಂಬ ರೈತರ ಸತ್ಯಾಗ್ರಹವನ್ನಾರಂಭಿಸಿದರು. ಸರ್ಕಾರದವರು ಅತ್ಯಂತ ತೀವ್ರವಾದ ದಮನ ನೀತಿಯನ್ನು ಅನುಸರಿಸಿದರು. ರೈತರ ಭೂಮಿಯನ್ನು ಜಫ್ತಿ ಮಾಡಿ ಹರಾಜಿಗೆ ಹಾಕಿದರು. ಎಮ್ಮೆಗಳನ್ನು ಹಿಡಿದುಕೊಂಡು ಹೋದರು. ಅನೇಕ ರೈತರನ್ನು ದೀರ್ಘಕಾಲದವರಿಗೆ ಕಾರಾಗೃಹದಲ್ಲಿಟ್ಟರು. ಆದಾಗ್ಯೂ ಈ ಸತ್ಯಾಗ್ರಹದಲ್ಲಿ ಸ್ವಲ್ಪವೂ ಹಿಂಸೆ ಪ್ರದರ್ಶನವಾಗಲಿಲ್ಲ. ಸರ್ಕಾರ ರೈತರ ಮೇಲೆ ತಪ್ಪು ಹಾಕುವ ಉದ್ದೇಶದಿಂದ ಒಂದು ವಿಚಾರಣೆ ಸಮಿತಿಯನ್ನು ನೇಂಇಸಿತು. ಅದು ಸರ್ಕಾರದ ಪರ ತೀರ್ಪುಕೊಡದೆ, ರೈತರ ಪರ ಕೊಟ್ಟಿತು. ಸರ್ಕಾರ ಕಂದಾಯವನ್ನು ಶೇಕಡ ೨೨ರಷ್ಟಕ್ಕೆ ಏರಿಸದೆ ಶೇಕಾಡ ೫ರಷ್ಟಕ್ಕೆ ಮಾತ್ರ ಏರಿಸಿತು. ಜೈಲಿನಲ್ಲಿದ್ದ ರೈತರನ್ನೆಲ್ಲಾ ಖುಲಾಸೆ ಮಾಡಿತು. ಜಫ್ತಿಯಾಗಿದ್ದ ಜಮೀನನ್ನೆಲ್ಲಾ ಅವುಗಳ ಮಾಲೀಕರಿಗೆ ಹಿಂತಿರುಗಿಸಿತು. ಈ ಸತ್ಯಾಗ್ರಹದ ವಿಜಯದಿಂದ ಭಾರತದಿಂದ ವಲಭಭಾಯಿ ಪಟೇಲರ ಕೀರ್ತಿ ವ್ಯಾಪಿಸಿತು. ಅವರನ್ನು ಸರದಾರ ಎಂಬುದಾಗಿ ಜನ ಕರೆಯಲಾರಂಭಿಸಿದರು.

೧೯೨೯ರಲ್ಲಿ ಕಾಂಗ್ರೆಸು ಪೂರ್ಣ ಸರಾಜ್ಯದ ಕಡೆ ಅಡಿ ಇಡುತ್ತಿರುವಾಗ್ಗೆ, ಶ್ರಮಜೀವಿಗಳೇ ಕಾಂಗ್ರೆಸ್ಸಿಗೆ ಬೆಂಬಲ ಎಂದು ಭಾವಿಸಿ ಶ್ರಮಜೀವಿಗಳನ್ನು ಸರ್ಕಾರ ಬಗ್ಗು ಬಡಿಯಲಾರಂಭಿಸಿತು. ೧೯೨೯ನೇ ಮಾರ್ಚಿನಲ್ಲಿ ಸರ್ಕಾರ ೨೬ ಶ್ರಮಜೀವಿ ಮುಖಂಡರ ಮೇಲೆ ಮೊಕದ್ದಮೆ ಹಾಕಿತು. ಮೀರತ್ತಿನಲ್ಲಿ ಈ ಮೊಕದ್ದಮೆ ನಡೆಯಿತು. ಆಪಾದಿತರಲ್ಲಿ ಅರ್ಧ ಜನ ಕಮ್ಯುನಿಸ್ಟರು. ಆಪಾದಿತರೆಲ್ಲಾ ಅತ್ಯಂತ ಸಮರ್ಥರಾದ ಮುಂದಾಳುಗಳು. ಮೊಕದ್ದಮೆ ನಾಲ್ಕು ವರ್ಷ ನಡೆಯಿತು. ಅವರ ಮೇಲೆ ಹಾಕಿದ್ದು ಬ್ರಿಟಿಷ್ ರಾಜರ ಮೇಲೆ ಬಂಡಾಯದ ಆಪಾದನೆ. ಈ ಮೊಕದ್ದಮೆಯಾದ ಮೇಲೆ ಸರ್ಕಾರ ವಿರೋಧ ಚಳುವಳಿಯನ್ನು ಅದುಮಲು ಸಾರ್ವಜನಿಕ ಸುರಕ್ಷತೆ ಕಾನೂನನ್ನು ಆರ್ಡಿನೆನ್ಸಿನಿಂದ ಜಾರಿಗೆ ತಂದಿತು.

ಇಂಗ್ಲೆಂಡಿನಲ್ಲಿ ೧೯೨೯ನೇ ಮೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆದು ಪಾರ್ಲಿಮೆಂಟಿನಲ್ಲಿ ಲೇಬರ್ ಪಾರ್ಟಿ ಅಧಿಕಾರಕ್ಕೆ ಬಂದಿತು. ರಾಮ್ಸೆ ಮ್ಯಾಕ್‌ಡೊನಾಲ್ಡ್‌ರವರು ಇಂಗ್ಲೆಂಡಿನ ಪ್ರಧಾನ ಮಂತ್ರಿಯಾದರು. ಇವರು ಚುನಾವಣೆಗೆ ಮುಂಚೆ ಮಾಡಿದ ಭಾಷಣದಲ್ಲಿ “ಇನ್ನು ಕೆಲವು ತಿಂಗಳುಗಳಲ್ಲಿಯೇ ಇಂಡಿಯಾಕ್ಕೆ ಡೊಮಿನಿಯನ್ ಸ್ಟೇಟಸ್ಸು ಬರುವುದು” ಎಂದು ಘೋಷಿಸಿದ್ದರು.

ಪ್ರಧಾನ ಮಂತ್ರಿಯಾದ ಮೇಲೆ ತಾವು ಹೇಳಿದ ಮಾತುಗಳನ್ನು ಅವರು ನಡೆಸಿಕೊಡುವರು ಎಂಬ ಆಶೆ ಭಾರತದಲ್ಲಿ ಉಂಟಾಯಿತು. ವೈಸರಾಯ್‌ಲಾರ್ಡ ಅರ್ವಿನ್‌ರನ್ನು ಇಂಗ್ಲೆಂಡಿಗೆ ಕರೆಸಿಕೊಂಡು ಮಾಕ್‌ಡೊನಾಲ್ಡ್‌ರು ಮಾತುಕತೆ ನಡೆಸಿದರು. ವೈಸರಾಯರು ಇಂಡಿಯಾಕ್ಕೆ ಹಿಂತಿರುಗಿದ ಮೇಲೆ ೧೯೨೯ನೇ ಅಕ್ಟೋಬರ್ ಕಡೆಯಲ್ಲಿ (ದೀಪಾವಳಿ ಹಬ್ಬದ ದಿನ) ಈ ಘೋಷಣೆ ಮಾಡಿದರು: “ಬ್ರಿಟಿಷ್ ಸರ್ಕಾರ ೧೯೧೭ನೇ ಆಗಸ್ಟ್‌ರಲ್ಲಿ ಕೊಟ್ಟ ಹೇಳಿಕೆಯಲ್ಲಿಯೇ ಇಂಡಿಯಾದ ರಾಜಕೀಯ ಗುರಿ ಡೊಮಿನಿಯನ್ ಸ್ಟೇಟಸ್ ಎಂದು ಸ್ಪಷ್ಟವಾಗಿದೆ ಎಂಬುದು ಬ್ರಿಟಿಷ್ ಸರ್ಕಾರದ ಭಾವನೆ ಶೀಘ್ರದಲ್ಲೇ ಇಂಗ್ಲೆಂಡಿನಲ್ಲಿ ಒಂದು ರೌಂಡ್ ಟೇಬಲ್ ಸಮ್ಮೇಳನವನ್ನು ಸೇರಿಸಲಾಗುವುದು. ಇದರಲ್ಲಿ ಬ್ರಿಟಿಷ್ ಇಂಡಿಯಾದ ಪ್ರತಿನಿಧಿಗಳೊ, ದೇಶಿಯ ರಾಜರುಗಳ ಪ್ರತಿನಿಧಿಗಳೂ, ಬ್ರಿಟಿಷ್ ಸರ್ಕಾರದ ಪ್ರತಿನಿಧಿಗಳೂ ಒಟ್ಟಾಗಿ ಚರ್ಚೆ ನಡೆಸಿ, ಮುಂದಿನ ಸುಧಾರಣೆ ವಿಷಯದಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಸಲಹೆ ಮಾಡುವರು.”

ಭಾರತೀಯ ಮುಖಂಡರು (ಗಾಂಧೀಜಿಯೂ ಸೇರಿ) ಅವಸರವಾಗಿ ದೆಹಲಿಯಲ್ಲಿ ಸಭೆ ಸೇರಿ, ವೈಸರಾಯರಿಗೂ ಬ್ರಿಟಿಷ್ ಸರ್ಕಾರಕ್ಕೂ ವಂದನೆ ಸಲ್ಲಿಸಿದರು. ಬರುವ ಸಮ್ಮೇಳನ ಯಶಸ್ವಿಯಾಗಬೇಕಾದರೆ ರಾಜಕೀಯ ಕೈದಿಗಳನ್ನು ಖುಲಾಸೆ ಮಾಡಬೇಕು ಮತ್ತು ಕಾಂಗ್ರೆಸಿಗೆ ವಿಶೇಷ ಪ್ರಾತಿನಿಧ್ಯ ದೊರೆಯಬೇಕು ಎಂದು ವೈಸರಾಯರಿಗೆ ತಿಳಿಸಿದರು. ಈ ಸಮ್ಮೇಳನ ಭಾರತದ ಡೆಮಿನಿಯನ್ ಸ್ಟೇಟಸ್ಸನ್ನು ಕಾರ್ಯಗತ ಮಾಡಲು ಸಂಬಂಧಿಸಿದ ಅಂಗರಚನೆಯನ್ನೂ ಪರಿಶೀಲಿಸುವುದೆಂದು ತಾವು ಆಶಿಸಿರುವುದಾಗಿ ಭಾರತೀಯ ಮುಖಂಡರು ವೈಸರಾಯರಿಗೆ ತಿಳಿಸಿದರು.

ಲಂಡನ್ನಿನಲ್ಲಿ ನಡೆದ ಪಾರ್ಲಿಮೆಂಟಿನ ಚರ್ಚೆಯಲ್ಲಿ ಸೆಕ್ರೆಟರಿ ಆಫ್ ಸ್ಟೇಟರಿಗೆ ಕನ್‌ಸರ್ವೆಟಿವ್ ಪಾರ್ಟಿಯವರಿಗೆ ಸಮಾಧಾನ ಹೇಳುವುದರಲ್ಲಿ ಸಾಕುಸಾಕಾಯಿತು. ಗಾಂಧೀಜಿ ತಾವು ಬ್ರಿಟಿಷ್ ಸರ್ಕಾರದೊಡನೆ ಸಹಕರಿಸಲು ಬಹಳ ಆತುರವಾಗಿರುವ ಹಾಗೆ ತಿಳಿಸಿದರು. ಯುವಕ ಮುಖಂಡರಾದ ಜವಹರಲಾಲ್ ನೆಹರು ಮತ್ತು ಸುಭಾಷ್ ಚಂದ್ರಬೋಸರು ಹಿರಿಯ ಮುಖಂಡರ ನೀತಿಗೆ ಬೇಸತ್ತು, ವರ್ಕಿಂಗ್ ಕಮಿಟಿಗೆ ರಾಜೀನಾಮೆಯಿತ್ತರು.

ಗಾಂಧೀಜಿ ‘ಪುನಃ ವೈಸರಾಯರನ್ನು ಕಂಡು ಎಲ್ಲವನ್ನೂ ಸ್ಟಷ್ಟಪಡಿಸಿಕೊಳ್ಳೋಣ’ ಎಂದು ಇತರ ಮುಖಂಡರಿಗೆ ತಿಳಿಸಿದರು ಅದರಂತೆ ೧೯೨೯ನೇ ಡಿಸೆಂಬರ್ ೨೩ರಲ್ಲಿ ಮೋತಿಲಾಲ್ ನೆಹರು, ಸರ್ ತೇಜ್ ಬಹದ್ದೂರ್ ಸಪ್ರೂ, ಜಿನ್ಹಾ, ವಲ್ಲಭಭಾಯಿ ಪಟೇಲ್ ಮತ್ತು ಗಾಂಧೀಜಿ ವೈಸರಾಯರನ್ನು ಭೇಟಿಮಾಡಿ ಚರ್ಚಿಸಿದರು. ಮಾತುಕತೆಗಳು ಸ್ನೇಹವಾಗಿ ನಡೆದುವು. ಗಾಂಧೀಜಿ ವೈಸರಾಯರನ್ನು ನೇರವಾಗಿ ಈ ರೌಂಡ್ ಟೇಬಲ್ ಸಮ್ಮೇಳನ ಇಂಡಿಯಾಕ್ಕೆ ಡೊಮಿನಿಯನ್ ಸ್ಟೇಟಸ್ಸನ್ನು ಕೊಡುವುದರ ಆಧಾರದ ಮೇಲೆ ನಡೆಯುವುದೇ ಎಂದು ಪ್ರಶ್ನಿಸಿದರು. ಲಾಡ್ ಅವಿರ್ನ್ ಆ ಭರವಸೆಯನ್ನು ಕೊಡಲಾರೆ ಎಂದು ಉತ್ತರವಿತ್ತರು. ನಕಾರದ ಉತ್ತರ ಬಂದಿದ್ದರಿಂದ ವೈಸರಾಯರೊಡನೆ ಮಾತುಕತೆ ನಿಂತುಹೋಯಿತು.

ಈ ಉತ್ತರ ಬಂದಮೇಲೆ ಕಾಂಗ್ರೆಸಿಗೆ ಉಳಿದುದು ಒಂದೇ ದಾರಿ. ಇನ್ನೊಂದು ಭಾರಿ ಸಂಗ್ರಾಮ ನಡೆಸುವುದು ಅನಿವಾರ್ಯವಾಯಿತು. ಈ ಸನ್ನೀವೇಶದಲ್ಲಿ, ೧೯೨೯ನೇ ಡಿಸೆಂಬರ್‌ನಲ್ಲಿ, ಕಾಂಗ್ರೆಸ್ ಮಹಾಧೀವೇಶನ ಲಾಹೋರ್‌ನಲ್ಲಿ ನಡೆಯಿತು. ಯುವಕರ ಮುಖಂಡ ಜವಹರಲಾಲ್ ನೆಹರು ಅಧ್ಯಕ್ಷರು. “ಡೊಮಿನಿಯನ್ ಸ್ಟೇಟಸ್ಸನ್ನು ಭಾರತ ಈಗ ಸ್ವೀಕರಿಸುವುದಿಲ್ಲ. ಇನ್ನು ಮುಂದೆ ಭಾರತದ ಗುರಿ ಸಂಪೂರ್ಣ ಸ್ವಾತಂತ್ರ್ಯ ಅಥವಾ ಪೂರ್ಣ ಸ್ವರಾಜ್ಯ” ಎಂದು ಕಾಂಗ್ರೆಸ್ ಮಹಾವೇದಿಕೆಯಿಂದ ಅಧ್ಯಕ್ಷರು ಘೋಷಿಸಿದರು. ಕಾಂಗ್ರೆಸು ಮುಂದೆ ನಡೆಯುವ ರೌಂಡ್ ಟೇಬಲ್ ಸಮ್ಮೇಳನದಲ್ಲಿ ಭಾಗವಹಿಸುವುದಿಲ್ಲ ಎಂದು ನಿರ್ಣಯ ಮಾಡಲಾಯಿತು. ಶಾಸನ ಸಭೆಗಳಲ್ಲಿರುವ ಕಾಂಗ್ರೆಸ್ ಸದಸ್ಯರೆಲ್ಲರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡಬೇಕೆಂದು ಆಹ್ವಾನಿಸಲಾಯಿತು. ಅಖಿಲ ಭಾರತ ಕಾಂಗ್ರೆಸ್ ಕಮಿಟಿ ತನಗೆ ಉಚಿತವೆಂದು ತೋರದ ಕಾಲದಲ್ಲಿ ಕಾನೂನು ಭಂಗ ಚಳುವಳಿಯನ್ನು ಆರಂಭಿಸಬೇಕೆಂದೂ ಅದರಲ್ಲಿ ಕಂದಾಯ ಕೊಡದ ಚಳುವಳಿ ಸೇರಿರಬೇಕೆಂದೂ ಕಾಂಗ್ರೆಸ್ ಅಧಿವೇಶನದಲ್ಲಿ ನಿರ್ಣಯವಾಯಿತು. ೧೯೨೯ನೇ ಜನವರಿ ಅರ್ಧರಾತ್ರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರು ಸ್ವತಂತ್ರ ಭಾರತದ ಚಿಹ್ನೆಯಾದ ತ್ರಿವರ್ಣ ಧ್ವಜವನ್ನು ಏರಿಸಿದರು.

ಒಂದು ಯುಗ ಹೋಯಿತು; ಮತ್ತೊಂದು ಯುಗ ಬಂದಿತು.

* * *