೧೯೩೦ನೇ ಜನವರಿಯಲ್ಲಿ ಹೊಸ ಸೂರ್ಯ ಉದಯಿಸಿದನು. ಅವನು ಡೊಮಿನಿಯನ್ ಸ್ಟೇಟಸ್ಸಿನ ಸೂರ್ಯನಲ್ಲ; ಸಂಪೂರ್ಣ ಸ್ವಾತಂತ್ರ್ಯದ ಸೂರ್ಯ. ಗಾಂಧೀಜಿ ಎರಡನೇ ಅಹಿಂಸಾ ಸಮರದ ಸಿದ್ಧತೆಯನ್ನು ಮಾಡತೊಡಗಿದರು. ಇದೇ ಉಪ್ಪಿನ ಸತ್ಯಾಗ್ರಹ.

ಲಾಹೋರ್ ಕಾಂಗ್ರೆಸ್ ಮಹಾಧೀವೇಶನ ದೇಶಕ್ಕೆ ಹೊಸ ಕರೆ ಕೊಟ್ಟಿತು; “ಪೂರ್ಣ ಸ್ವರಾಜ್ಯ ನಮ್ಮ ಗುರಿ. ಅದು ಬ್ರಿಟಿಷ್ ಸರ್ಕಾರವನ್ನು ಬೇಡಿದ್ದರಿಂದ ನಮಗೆ ದೊರೆಯುವುದಿಲ್ಲ. ಬಲ ಪ್ರದರ್ಶನ ಮಾಡಿ, ಸಶಸ್ತ್ರ ಯುದ್ಧ ಹೂಡಿ, ದೊರಕಿಸಿಕೊಳ್ಳಲು ನಮಗೆ ಸಾಧ್ಯವಿಲ್ಲ. ಆದ್ದರಿಂದ ಅಹಿಂಸೆಯನ್ನೇ ನಮ್ಮ ಶಸ್ತ್ರವೆಂದು ನಂಬಿ, ೧೦ ವರ್ಷಗಳ ಹಿಂದೆ ಹೂಡಿದಂತೆ ಅಸಹಕಾರ ಸಂಗ್ರಾಮವನ್ನು ಈಗ ಹೂಡಬೇಕು. ಈ ಹತ್ತು ವರ್ಷದಲ್ಲಿ ದೇಶ ಅಹಿಂಸೆಯ ಪಾಠವನ್ನು ಚೆನ್ನಾಗಿ ಕಲಿತಿದೆ. ಅದರ ಆಚಾರ್ಯರೂ ಈಗ ಭಾರತವನ್ನು ಇನ್ನೂ ಚೆನ್ನಾಗಿ ಅರ್ಥಮಾಡಿ ಕೊಂಡಿದ್ದಾರೆ. ಆದ್ದರಿಂದ ಈ ಸಾರಿ ಕಾನೂನು ಭಂಗ ಕಾರ್ಯ ಯಶಸ್ವಿಯಾಗಿ ನಡೆಯುವುದು”

ಈ ಸಲದ ಕಾನೂನು ಭಂಗದ ಚಳುವಳಿಯಲ್ಲಿ ಮಹಿಳೆಯರು ಹೆಚ್ಚು ಹೆಚ್ಚು ಪಾತ್ರ ವಹಿಸಬೇಕೆಂದು ಕಾಂಗ್ರೆಸು ಕರೆ ಇತ್ತಿತು. ದೊಡ್ಡ ದೊಡ್ಡ ನಗರಗಳಲ್ಲಿ ತಂಡ ತಂಡವಾಗಿ ನಾಗರಿಕ ಮಹಿಳೆಯರು ಚಳುವಳಿಯಲ್ಲಿ ಭಾಗಿಯಾದರು.

ಲಾಹೋರ್ ಕಾಂಗ್ರೆಸ್ ಅಧಿವೇಶನವಾದ ಮೇಲೆ ಜನವರಿ ೨೬ರನ್ನು ಭಾರತ ಸ್ವಾತಂತ್ರ್ಯ ದಿನ ಎಂಬುದಾಗಿ ಘೋಷಿಸಲಾಯಿತು. ಆದಿನ ಪ್ರಾತಃಕಾಲ ರಾಷ್ಟ್ರೀಯ ಧ್ವಜವನ್ನು ನೆಟ್ಟು, ಅದಕ್ಕೆ ವಂದಿಸಿ, ಸ್ವಯಂ ಸೇವಕರು ಮತ್ತು ಇತರರು ಪೂರ್ಣ ಸ್ವರಾಜ್ಯ ಪ್ರತಿಜ್ಞೆಯನ್ನು ತೆಗೆದುಕೊಳ್ಳುಬೇಕೆಂದು ನಿರ್ಧರಿಸಲಾಯಿತು. ೧೯೫೦ರವರೆಗೂ ಇದನ್ನು ಹಾಗೆಯೇ ಆಚರಿಸಲಾಯಿತು. ಈಗ ಅದನ್ನು ರಿಪಬ್ಲಿಕ್ ಡೇ ಅಥವಾ ಗಣರಾಜ್ಯ ದಿನ ಎಂಬುದಾಗಿ ಆಚರಿಸಲಾಗುತ್ತಿದೆ. ೧೯೩೦ನೇ ಜನವರಿಯಲ್ಲಿ ಇದನ್ನು ದೇಶದಲ್ಲೆಲ್ಲಾ ಬಹಳ ಉತ್ಸಾಹದಿಂದ ಆಚರಿಸಲಾಯಿತು.

ಸ್ವಾತಂತ್ರ್ಯ ದಿನದ ಪ್ರತಿಜ್ಞೆಯ ಕೆಲವು ವಚನಗಳಿವು: – ಇತರ ಜನಾಂಗದವರೂ ಇರುವಂತೆ ಭಾರತ ಜನಾಂಗದ ಜನರು ತಮ್ಮ ಬೆಳವಣಿಗೆಯನ್ನು ಸಾಧಿಸುವ ಸ್ವಾತಂತ್ರ್ಯ ಹೊಂದಿದ್ದಾರೆ.  ಈ ಸ್ವಾತಂತ್ರ್ಯವನ್ನು ಯಾರೂ ಕಸಿದುಕೊಳ್ಳುವ ಹಾಗಿಲ್ಲ. ಆದರೆ ಬ್ರಿಟಿಷ್ ಸರ್ಕಾರ ಭಾರತೀಯರ ಈ ಆಜನ್ಮ ಸಿದ್ಧ ಹಕ್ಕನ್ನು ಕಸಿದು ಕೊಂಡಿರುವುದಲ್ಲದೆ, ಜನತೆಯನ್ನು ಎಲ್ಲ ರೀತಿಯಲ್ಲಿಯೂ ಶೋಷಿಸಲು ತೊಡಗಿದೆ. ಇಂಡಿಯಾವನ್ನು ಆರ್ಥಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಹಾಳು ಮಾಡಿದೆ. ಆದ್ದರಿಂದ ನಮ್ಮ ದೃಢ ವಿಶ್ವಾಸವೇನೆಂದರೆ, ಭಾರತ ಬ್ರಿಟಿಷ್ ಸಂಬಂಧವನ್ನು ಕಡಿದು ಹಾಕಿ ಪೂರ್ಣ ಸ್ವರಾಜ್ಯವನ್ನು ಸ್ಥಾಪಿಸಲೇ ಬೇಕು… ನಮ್ಮ ವಿನಾಶಕ್ಕೆ ಕಾರಣವಾದ ಬ್ರಿಟಿಷ್ ಸರ್ಕಾರಕ್ಕೆ ನಾವು ಇನ್ನು ಮುಂದೆ ಕಾಂಗ್ರೆಸು ಕಾಲಕಾಲಕ್ಕೆ ಹೊರಡಿಸುವ ಕಾರ್ಯ ಸೂಚನೆಗಳನ್ನು ಪಾಲಿಸುತ್ತೇವೆ.

೧೯೩೦ನೇ ಜನವರಿ ೨೬ನೇ ತಾರೀಖಿನಲ್ಲಿ ಕಾಂಗ್ರೆಸಿನವರೆಲ್ಲರೂ ಪ್ರತಿಜ್ಞೆಯನ್ನು ಕೈಕೊಂಡು ಮುಂದಿನ ಕೆಲಸಕ್ಕೆ ಸಿದ್ಧರಾದರು. ಕಾನೂನುಭಂಗ ಚಳವಳಿಯಲ್ಲಿ ಯಶಸ್ಸು ದೊರೆಯಬೇಕಾದರೆ, ಅಹಿಂಸೆ ಅವಶ್ಯಕ; ಅಹಿಂಸೆಯನ್ನು ವೃದ್ಧಿಗೊಳಿಸಿಕೊಳ್ಳಲು ರಚನಾತ್ಮಕ ಕಾರ್ಯದಲ್ಲಿ ನಿರತರಾಗಬೇಕು; ಕರೆ ಬಂದಾಗ ಕಾನೂನು ಭಂಗ ಮಾಡಲು ಕಾಂಗ್ರೆಸಿಗರು ಸಿದ್ಧರಾಗಿರಬೇಕು ಎಂದು ಗಾಂಧೀಜಿ ಸೂಚಿಸಿದರು.

ಗಾಂಧೀಜಿ ಕ್ರಮಕ್ರಮವಾಗಿ ದೇಶವನ್ನು ಕಾನೂನು ಭಂಗಕ್ಕೆ ಸಿದ್ಧಗೊಳಿಸುತ್ತ ಬಂದರು. ಮಿತವಾದಿಗಳಿಗೆ ಗಾಂಧೀಜಿಯ ನೀತಿ ಸರಿ ಬೀಳಲಿಲ್ಲ. ಈ ನೀತಿಯಿಂದ ಸರ್ಕಾರ ಬಿರುಸಾಗುತ್ತದೆ ಎಂದು ಅವರು ಭಾವಿಸಿದರು. ಸರ್ಕಾರವೂ ಕಾಂಗ್ರೆಸಿನ ನೀತಿಯನ್ನು ಸಹಿಸಲಿಲ್ಲ.

ಈ ಮಧ್ಯೆ, ಜನವರಿ ೨೫ರಲ್ಲಿ, ಕೇಂದ್ರ ಅಸೆಂಬ್ಲಿಯಲ್ಲಿ ಮಾಡಿದ ಭಾಷಣದಲ್ಲಿ ವೈಸರಾಯರು “ರೌಂಡ್ ಟೇಬಲ್ ಸಮ್ಮೇಳನದ ಉದ್ದೇಶ ಅಭಿಪ್ರಾಯಗಳನ್ನು ಬ್ರಿಟನ್ನು ತಿಳಿದು ಕೊಳ್ಳುವುದಕ್ಕಾಗಿ. ಮುಂದಿನ ರಾಜ್ಯಾಂಗ ರಚನೆಯ ಅಧಿಕಾರ ಬ್ರಿಟಿಷ್ ಪಾರ್ಲಿಮೆಂಟಿಗೆ ಸೇರಿದೆಯೇ ಹೊರತು, ರೌಂಡ್ ಟೇಬಲ್ ಸಮ್ಮೇಳನಕ್ಕೆ ಸೇರಿಲ್ಲ” ಎಂದು ಸ್ಪಷ್ಟ ಪಡಿಸಿದರು. ರೌಂಡ್ ಟೇಬಲ್ ಸಮ್ಮೇಳನದ ಕಾರ್ಯ ಸಲಹೆ ಕೊಡುವುದು ಮಾತ್ರ ಎಂಬುದನ್ನು ಸ್ಥಿರೀಕರಿಸಿದರು.

ಗಾಂಧೀಜಿ ಈ ಭಾಷಣದ ಬಗ್ಗೆ “ಯಂಗ್ ಇಂಡಿಯಾ” ದಲ್ಲಿ ಬರೆಯುತ್ತಾ ವೈಸರಾಯರ  ಸ್ಪಷ್ಟೋಕ್ತಿಗೆ ವಂದಿಸಿದರು. “ಭಾರತಕ್ಕೆ ಡೊಮಿನಿಯನ್ ಸ್ಟೇಟಸ್ ಕೊಡುವ ವಿಷಯದಲ್ಲಿ ಅನಂದ ಕಾಲದವರೆಗೂ ಕಾಯಲು ವೈಸರಾಯರು ಸಿದ್ದ. ಇಂಡಿಯಾದ ಪ್ರತಿಯೊಬ್ಬ ಕೋಟ್ಯಾಧೀಶನೂ ತನ್ನ ಐಶ್ವರ್ಯವನ್ನು ಕಳೆದುಕೊಂಡು ದಿನಕ್ಕೆ ೭ ಪೈಸೆ ಸಂಪಾದಿಸುವ ಮಜೂರಿದಾರನ ಸ್ಥಿತಿಗೆ ಬರುವವರೆಗೂ ಕಾಯುವುದಕ್ಕೆ ಅವರು ಸಿದ್ಧ. ಕಾಂಗ್ರೆಸಿಗೆ ಇವತ್ತು ಅಧಿಕಾರವಿದ್ದರೆ ಪ್ರತಿಯೊಬ್ಬ ರೈತನನ್ನೂ ಹೊಟ್ಟೆತುಂಬ ಅನ್ನ, ಮೈತುಂಬ ಬಟ್ಟೆಯನ್ನು ಕಾರಣವಲ್ಲ, ಈಗಿನ ರಾಜ್ಯಸ್ಥಿತಿ ಕಾರಣ ಎಂದು ತಿಳಿಯಲಾರಂಭಿಸಿದರೆ, ಅವನು ತನ್ನ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳಲು ಸರ್ವ ವಿಧವಾದ ಕ್ರಾಂತಿಗೂ ಸಿದ್ಧನಾಗುವನು. ಕಾನೂನಿನ ಮಾರ್ಗವಾವುದು, ಕಾನೂನಿನ ಮಾರ್ಗವಲ್ಲದ್ದು ಯಾವುದು, ಹಿಂಸೆ ಯಾವುದು, ಅಹಿಂಸೆ ಯಾವುದು ರೈತನಿಗೆ ಸರಿಯಾದ ಮಾರ್ಗದರ್ಶನ ಮಾಡಲು” ಎಂದು ತಿಳಿಸಿದರು.

ಗಾಂಧೀಜಿ ವೈಸರಾಯರಿಗೆ ಪತ್ರ ಬರೆದು ದೇಶದ ಸ್ಥಿತಿ ಉತ್ತಮಗೊಳ್ಳಬೇಕಾದರೆ ತುರ್ತಾಗಿ ಸರ್ಕಾರ ಈ ಕೆಳಗಿನ ಸುಧಾರಣೆಗಳನ್ನು ಜಾರಿಗೆ ತರಬೇಕೆಂದು ತಿಳಿಸಿದರು:

(೧) ಪೂರ್ತಿ ಮದ್ಯಪಾನ ನಿರೋಧ.

(೨) ರೂಪಾಯಿನ ಬೆಲೆಯನ್ನು ೧ ಷಿಲಿಂಗ್ ೪ ಪೆನ್ನಿಗೆ ಇಳಿಸತಕ್ಕದ್ದು.

(೩) ಭೂಕಂದಾಯವನ್ನು ಈಗಿನ ದರದಿಂದ ಶೇಕಡಾ ೫೦ ರಷ್ಟು ಇಳಿಸತಕ್ಕದ್ದು ಮತ್ತು ಅದನ್ನು ಶಾಸನ ಸಭೆಗಳ ಹತೋಟಿಗೆ ಬಿಡತಕ್ಕದ್ದು.

(೪) ಉಪ್ಪಿನ ಕಂದಾಯವನ್ನು ವಜಾ ಮಾಡತಕ್ಕದ್ದು.

(೫) ಸೈನ್ಯದ ಖರ್ಚುನ್ನು ಸದ್ಯಕ್ಕೆ ಮೊದಲು ಶೇಕಡಾ ೫೦ರಷ್ಟಕ್ಕೆ ಇಳಿಸತಕ್ಕದ್ದು.

(೬) ಅತ್ಯಂತ ಮೇಲಿನ ಸರ್ಕಾರಿ ಅಧಿಕಾರಿಗಳ ಸಂಬಳವನ್ನು ಈಗಿನ ಕಡಿಮೆ ಆದಾಯಕ್ಕೆ ಅನುಗುಣವಾಗಿ ಅರ್ಧಕ್ಕೆ ಇಳಿಸತಕ್ಕದ್ದು.

(೭) ಪರದೇಶಿ ಬಟ್ಟೆಯ ಮೇಲೆ ರಕ್ಷಣಾ ಸುಂಕವನ್ನು ಹಾಕತಕ್ಕದ್ದು.

(೮) ಸಮುದ್ರ ತೀರದಲ್ಲಿ ನಡೆಯುವ ವ್ಯಾಪಾರ ವಹಿವಾಟುಗಳೆಲ್ಲಾ ದೇಶೀಯರ ಕೈಯಲ್ಲೇ ಇರತಕ್ಕದ್ದು.

(೯) ಎಲ್ಲಾ ರಾಜಕೀಯ ಕೈದಿಗಳನ್ನೂ (ಕೊಲೆ ಅಥವಾ ಕೊಲೆಯ ಪ್ರಯತ್ನ ಮಾಡಿದವರನ್ನು ವಿನಾಯಿಸಿ) ಖುಲಾಸೆ ಮಾಡತಕ್ಕದ್ದು. ಎಲ್ಲಾ ರಾಜಕೀಯ ಅಪರಾಧದ ಮೊಕದ್ದಮೆಗಳನ್ನೂ ವಾಪಸ್ಸು ತೆಗೆದುಕೊಳ್ಳತಕ್ಕದ್ದು. ಐ.ಪಿ.ಸಿ. ೧೨೪ – ಎ ಕಲಮನ್ನು ರದ್ದು ಗೊಳಿಸತಕ್ಕದ್ದು. ೧೮೧೮ರ ಮೂರನೇ ರೆಗ್ಯುಲೇಷನನ್ನುರದ್ದುಗೊಳಿಸತಕ್ಕದ್ದು. ಅಖಿಲ ಭಾರತದಿಂದ ಹೊರಗಿರುವ ದೇಶಭಕ್ತರು ಸ್ವದೇಶಕ್ಕೆ ಹಿಂತಿರುಗುವಂತೆ ಅನುಮತಿ ನೀಡತಕ್ಕದ್ದು.

(೧೦) ಸಿ.ಐ.ಡಿ.ಯನ್ನು ವಜಾ ಮಾಡತಕ್ಕದ್ದು ಅಥವಾ ಅದನ್ನು ಪ್ರಜೆಗಳ ನಿಯಂತ್ರಣದಲ್ಲಿ ಇಡತಕ್ಕದ್ದು.

(೧೧) ಪ್ರಜಾ ನಿಯಂತ್ರಣದಲ್ಲಿ, ಆತ್ಮರಕ್ಷಣೆಗಾಗಿ, ಬಂದೂಕ ಮುಂತಾದವುಗಳಿಗೆ ಲೈಸೆನ್ಸು ಕೊಡತಕ್ಕದ್ದು.

ಇವು ಜನತೆಯ ತುರ್ತಾದ ಅವಶ್ಯಕತೆಗಳು ಇವುಗಳಲ್ಲಿ ಎಲ್ಲವೂ ಸೇರಿದೆಯೆಂದಲ್ಲ. ಇವುಗಳನ್ನು ವೈಸರಾಯರು ಸದ್ಯಕ್ಕೆ ನಡೆಸಿಕೊಡಲಿ ಇವನ್ನು ಕೂಡಲೆ ನಡೆಸಿ ಕೊಟ್ಟರೆ ಕಾನೂನು ಭಂಗದ ಮಾತೇ ಇರುವುದಿಲ್ಲ; ಸಂಪೂರ್ಣ ವಾಕ್ ಸ್ವಾತಂತ್ರ್ಯವಿರುವ ಯಾವ ಸಮ್ಮೇಳನದಲ್ಲಾಗಲಿ ಕಾಂಗ್ರೆಸು ಭಾಗಿಯಾಗಲು ಸಿದ್ಧವಾಗಿದೆ ಎಂದೂ ತಿಳಿಸಿದರು. ಇದೇ ಕೋರಿಕೆಗಳನ್ನೊಳಗೊಂಡ ಒಂದು ಪತ್ರವನ್ನು ಇಂಗ್ಲೆಂಡಿನ ಪ್ರಧಾನ ಮಂತ್ರಿ ಮೆಕ್ ಡೊನಾಲ್ಡರಿಗೂ ಕಳುಹಿಸಿದರು.

ಗಾಂಧೀಜಿ ಎಲ್ಲ ಸಿದ್ಧತೆಗಳನ್ನು ಮಾಡಿಯೇ ಕಾನೂನು ಭಂಗವನ್ನು ಆರಂಭಿಸುವುದಾಗಿ ಮನಸ್ಸು ಮಾಡಿದರು. ಸರ್ಕಾರಕ್ಕೂ ಅವಕಾಶ ಕೊಡಬೇಕೆಂದು ಕೆಲವು ದಿವಸ ಕಾದು ನೋಡಿದರು. ಅವರು ಭಾಷಣ ಮಾಡಿದ ಕಡೆಗಳಲ್ಲೆಲ್ಲ ಅಹಿಂಸೆಯನ್ನು ಒತ್ತಾಯ ಪಡಿಸಿದರು. ನಮಗೆ ಸ್ವರಾಜ್ಯ ಬರುವುದು ಅಹಿಂಸೆಯಿಂದಲೇ ಹೊರತು, ಹಿಂಸೆಯಿಂದಲ್ಲ ಎಂದು ಸಾರಿದರು. ದೇಶ ಕಾನೂನು ಭಂಗಕ್ಕೆ ಸಿದ್ಧವಾಗಿತ್ತು. ಅದಕ್ಕೆ ಹಿಂದಿನ ಹತ್ತು ವರ್ಷದ ಅನುಭವವೂ ಇತ್ತು. ಆಗ ಮುಸ್ಲಿಮರು ಒಟ್ಟಾಗಿ ಕಾಂಗ್ರೆಸ್ ಚಳುವಳಿಯಲ್ಲಿ ಸೇರಿದ್ದರು. ಈಗ ಅವರು ಒಟ್ಟಾಗಿ ಸೇರಿರಲಿಲ್ಲ. ಕಾಂಗ್ರೆಸಿಗೆ ಸೇರಿದ ಮುಸ್ಲಿಮರು ಬಹಳವಿದ್ದರು. ಮುಖಂಡರಾದ ಡಾ. ಅನ್‌ಸಾರಿ, ಅಬುಲ್ ಕಲಾಂ ಆಜಾದ್ ಮುಂತಾದವರು ಗಾಂಧೀಜಿಯ ಅನುಯಾಯಿಗಳಾಗಿಯೇ ಇದ್ದರು. ವರ್ತಕ ಸಮದಾಯದವರಿಗೆ ಸರ್ಕಾರದ ನೀತಿಯಿಂದ ಬಹಳ ಕಷ್ಟವಾಗಿತ್ತು. ರೈತರ ಸ್ಥಿತಿಯೂ ಬಹಳ ಕೆಟ್ಟಿತ್ತು. ಅವರೂ ಸರ್ಕಾರದ ಮೇಲೆ ಅಸಮಾಧಾನ ಹೊಂದಿದ್ದರು. ಶಾಸನ ಸಭೆಗಳಲ್ಲಿ ಕೆಲಸ ಮಾಡುತ್ತಿದ್ದ ಕಾಂಗ್ರೆಸಿಗರಿಗೆ ತಮ್ಮ ಚಟುವಟಿಕೆಗಳಿಂದ ಸ್ವಾತಂತ್ರ್ಯ ಒಂದು ಹೆಜ್ಜೆಯೂ ಮುಂದೆ ಹೋಗಲಿಲ್ಲ ಎಂಬುದು ತಿಳಿಯಿತು. ಅವರೂ ರಾಜೀನಾಮೆಗೆ ಸಿದ್ಧರಾಗಿದ್ದರು. ಈಗ ಇದ್ದುದು ಸ್ವರಾಜ್ಯದ ಬೇಡಿಕೆಯೊಂದೇ, ಭಾರತೀಯರ ಕಣ್ಣೊರೆಸಲು ಬ್ರಿಟಿಷ್ ಸರ್ಕಾರ ರೌಂಡ್ ಟೇಬಲ್ ಸಮ್ಮೇಳನದ ಯೋಜನೆಯನ್ನು ಸಿದ್ಧಗೊಳಿಸಿತ್ತು. ಬ್ರಿಟಿಷ್ ಸರ್ಕಾರ ಭಾರತವನ್ನು ಸ್ವತಂತ್ರಗೊಳಿಸುವ ಉದ್ದೇಶ ಹೊಂದಿರಲಿಲ್ಲ. ಆದ್ದರಿಂದ ಕಾನೂನು ಭಂಗವನ್ನು ಆರಂಭಿಸುವ ಮುನ್ನ ಸರ್ಕಾರದ ಮುಂದೆ ಗಾಂಧೀಜಿ ೧೧ ಅಂಶಗಳನ್ನು ಇಟ್ಟರು. ಇವುಗಳಲ್ಲಿ ಯಾವುದನ್ನಾದರೂ ಈಡೇರಿಸಿದ್ದರೆ ಗಾಂಧೀಜಿ ಕಾನೂಭಂಗ ಆರಂಭಿಸುತ್ತಿದ್ದರೋ ಇಲ್ಲವೋ?

ಸಬರ್ಮತಿಯಲ್ಲಿ ೧೯೩೦ನೇ ಫೆಬ್ರವರಿ ೧೪ರಲ್ಲಿ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸಭೆ ನಡೆದು, ಗಾಂಧೀಜಿಗೆ ಸತ್ಯಾಗ್ರಹ ನಡೆಸಲು ಅನುಮತಿ ಕೊಟ್ಟಿತು. ಶಾಸನ ಸಭೆಗಳಲ್ಲಿರುವ ಕಾಂಗ್ರೆಸ್ ಸದಸ್ಯರೆಲ್ಲಾ ರಾಜೀನಾಮೆಕೊಡಬೇಕೆಂದು ಒತ್ತಾಯ ಪಡಿಸಲಾಯಿತು. ಸಾಮುದಾಯಿಕ ಕಾನೂನು ಭಂಗ ಚಳುವಳಿಯ ಕಾಲದಲ್ಲಿ ಸರ್ಕಾರಕ್ಕೆ ಯಾವ ವಿಧವಾದ ಸಹಕಾರವನ್ನೂ ಕೊಡದೆ ವಕೀಲರೂ, ವಿದ್ಯಾರ್ಥಿಗಳೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಬೇಕೆಂದು ಕೇಳಲಾಯಿತು.

ಗಾಂಧೀಜಿ ಯಾವ ರೀತಿಯಾಗಿ ಕಾನೂನು ಭಂಗಮಾಡಬೇಕೆಂಬುದನ್ನು ತಮ್ಮ ಸಹೋದ್ಯೋಗಿಗಳೊಡನೆ ಚರ್ಚಿಸಿದರು. ಕಡೆಗೆ ಉಪ್ಪಿನ ಸತ್ಯಾಗ್ರಹವನ್ನು ಆರಂಭಿಸಬೇಕೆಂದು ನಿರ್ಣಯಿಸಲಾಯಿತು. ಉಪ್ಪನ್ನು ಸರ್ಕಾರವಲ್ಲದೆ ಬೇರೆ ಯಾರೂ ತಯಾರಿಸಕೂಡದೆಂಬ ಕಾನೂನಿತ್ತು. ಸರ್ಕಾರವಲ್ಲದೆ ಸಮುದ್ರ ತೀರದಲ್ಲಿ ಉಪ್ಪನ್ನು ಖಾಸಗಿಯಾಗಿ ಯಾರಾದರೂ ತಯಾರಿಸಿದರೆ ಅದು ಅಪರಾಧವಾಗುತ್ತಿತ್ತು. ಆದ್ದರಿಂದ ಉಪ್ಪನ್ನು ತಯಾರಿಸುವುದು, ಸಮುದ್ರ ತೀರದಲ್ಲಿ ಗುಡ್ಡೆಯಾಗಿ ಬಿದ್ದಿರುವ ಉಪ್ಪನ್ನು ತೆಗೆದುಕೊಂಡು ಹೋಗುವುದು, ಉಪ್ಪಿನ ಮಳಿಗೆಗಳನ್ನು ಮುತ್ತಿಗೆಹಾಕಿ ಉಪ್ಪನ್ನು ತೆಗೆದುಕೊಂಡು ಹೋಗುವುದು ಇವೇ ಮುಂತಾದ ಕಾರ್ಯಕ್ರಮಗಳಿಂದ ಉಪ್ಪಿನ ಸತ್ಯಾಗ್ರಹವನ್ನು ಗುಂಪು ಗುಂಪಾಗಿ ಆಚರಿಸುವುದು ಎಂದು ನಿರ್ಣಯವಾಯಿತು. ಇದೇ ಸಾಮೂಹಿಕವಾದ ಸತ್ಯಾಗ್ರಹ. ಹೀಗೆ ಮಾಡುವುದರಿಂದ ಪೊಲೀಸರಿಂದಲೂ, ಸರ್ಕಾರದಿಂದಲೂ ತೊಂದರೆಯಾದರೆ ಅದನ್ನು ಶಾಂತಿಯಿಂದ ಅನುಭವಿಸಬೇಕು; ಪೊಲೀಸರ ಮೇಲೆ ಕೈ ಮಾಡಬಾರದು; ಅವರು ಚಾಟಿಯಿಂದ ಹೊಡೆಯಲಿ, ಗುಂಡಿನಿಂದ ಹೊಡೆಯಲಿ, ಸತ್ಯಾಗ್ರಹಿಗಳು ಶಾಂತವಾಗಿ ಅದನ್ನು ಅನುಭವಿಸಬೇಕೇ ಹೊರತು ಪ್ರತಿಕ್ರಿಯೆ ಮಾಡಕೂಡದು ಎಂದು ಗಾಂಧೀಜಿ ಬೋಧಿಸಿದರು. ಈ ಸಾರಿ ನಾವು ಗುರಿಮುಟ್ಟುವವರೆಗೂ ಸಮರವನ್ನು ಶಾಂತಿಯಾಗಿ ನಡೆಸಬೇಕೆಂದು ಗಾಂಧೀಜಿ ಒತ್ತಿ ತಿಳಿಸಿದರು.

ಕೆಲವು ಹಿಂಬಾಲಕರು ಗಾಂಧೀಜಿಯನ್ನು ಸತ್ಯಾಗ್ರಹದ ಯೋಜನೆಯ ಹೆಜ್ಜೆಗಳೇನು ಎಂದು ಕೇಳಿದರು. “ಸೇನಾನಾಯಕರನ್ನು ನಿಮ್ಮ ಮುಂದಿನ ಯೊಜನೆಯೇನು ಎಂದು ಯಾರೂ ಕೇಳುವುದಿಲ್ಲ. ಆದರೆ ನಮ್ಮ ಯೋಜನೆಯಲ್ಲಿ ಯಾವ ರಹಸ್ಯವೂ ಇಲ್ಲ. ಪ್ರತಿಯೊಬ್ಬ ಸತ್ಯಾಗ್ರಹಿಯೂ ಅಹಿಂಸೆಯನ್ನು ತ್ಯಜಿಸದೆ ತನ್ನ ಯೋಜನೆಯನ್ನು ತಾನೇ ಆಲೋಚಿಸಲಿ” ಎಂದರು. ಗಾಂಧೀಜಿ ಮತ್ತು ತಿಳಿಸಿದರು: “ವಲ್ಲಭಭಾಯಿಯವರೂ ನನ್ನೊಡನೆ ಸೇರುವುದಿಲ್ಲ. ಅವರು ತಮ್ಮ ಕಾರ್ಯವನ್ನು ತಾವೇ ಯೋಚಿಸಿಕೊಳ್ಳುವರು. ಹೀಗೆಯೇ ಇತರ ಮುಖಂಡರೂ ಸಹ”. ತಮ್ಮ ಸ್ವಂತ ಕಾರ್ಯಕ್ರಮವನ್ನು ವಿವರಿಸಿದರು. ತಮ್ಮ ತಮ್ಮ ಆಶ್ರಮದ ಆರಿಸಿದ ಶಿಷ್ಯರೊಡನೆ ಪಾದಚಾರಿಗಳಾಗಿ ದಂಡಿ ಹತ್ತಿರದ ಸಮುದ್ರದತೀರಕ್ಕೆ ಹೋಗಿ ಉಪ್ಪಿನ ಕಾಯಿದೆಯನ್ನು ಅಲ್ಲಿ ಮುರಿಯುವುದಾಗಿ ಹೇಳಿದರು. ಇತರರಾರೂ ಇದಕ್ಕೆ ಮುಂದೆ ಉಪ್ಪಿನ ಕಾಯಿದೆ ಮುರಿಯಬಾರದೆಂದೂ, ತಮ್ಮ ದಸ್ತಗಿರಿಯಾದ ಮೇಲೆ ದೇಶದಲ್ಲೆಲ್ಲಾ ಉಪ್ಪಿನ ಕಾನೂನನ್ನು ಸತ್ಯಾಗ್ರಹಿಗಳು ಮುರಿಯಬೇಕೆಂದೂ ಹೇಳಿದರು.

ಅಹಿಂಸೆಯ ಮಹಿಮೆ ಎಂತಹುದೆಂದು ತಿಳಿಸಲು ಗಾಂಧೀಜಿ ಅಮೆರಿಕಾದ ಇತಿಹಾಸದಿಂದ ಒಂದು ಉದಾಹರಣೆಯನ್ನು ಕೊಟ್ಟರು. ಅದು ಅಮೆರಿಕದ ಥಿಯೊಡೋರ್ ಪಾರ್ಕರ್ ಎಂಬ ಒಬ್ಬ ದೊಡ್ಡ ಅಮೆರಿಕನ್ ಆಸ್ತಿಕನ ಕಥೆ. ಅವನು ಅಮೆರಿಕದ ಗುಲಾಮರ ಬಿಡುಗಡೆಯ ಕಾರ್ಯದಿಂದ ಜಗತ್ಪ್ರಖ್ಯಾತನಾದನು. ಆ ಕಾಲದ ಥಿಯೊಲಾಜಿಯನ್ನರು ಪಾರ್ಕರನ್ನು ಒಂದು ದೊಡ್ಡ ಸಾರ್ವಜನಿಕ ಚರ್ಚೆಗೆ ಕರೆದರು. ಅವನ ಮಿತ್ರರು ಅವನನ್ನು ಮೀಟಿಂಗಿಗೆ ಹೋಗಬೇಡ ಎಂದು ಹೇಳಿ, ಅವನು ಇದ್ದ ಜಾಗದಲ್ಲಿ ಅವನನ್ನು ಕೂಡಿ ಬೀಗ ಹಾಕಿದರು. ಅವನ ಶತ್ರುಗಳು ಆ ಜಾಗಕ್ಕೆ ಬಂದು ಅವನು ಹೊರಗೆ ಬರದಿದ್ದರೆ ಹೇಡಿ ಎಂದು, ಅವನನ್ನು ಕೊಲ್ಲುವುದಾಗಿ ಅರ್ಭಟಿಸಿದರು. ಪಾರ್ಕರ್ ಹೊರಗೆ ಬಂದು ವೇದಿಕೆಯನ್ನೇರಿ “ ಬನ್ನಿ. ಬನ್ನಿ. ನಿಮ್ಮಿಂದ ಸಾಧ್ಯವಾದರೆ ನನ್ನನ್ನು ಕೊಲ್ಲಿ” ಎಂದು ಆರ್ಭಟಿಸಿದನು. “ಪಾರ್ಕರನ ರಕ್ತವನ್ನು ಚೆಲ್ಲಿದರೆ, ಆ ರಕ್ತದಿಂದ ಸಾವಿರ ಪಾರ್ಕರು ಉದ್ಭವಿಸುವರು; ಮತ್ತು ಗುಲಾಮರನ್ನು ಅವರ ಗುಲಾಮಗಿರಿಯಿಂದ ತಪ್ಪಿಸುವರು” ಎಂದು ಕೂಗಿವನು. ಅವನನ್ನು ಕೊಲ್ಲಬೇಕೆಂದು ಬಂದವರು ಪಾರ್ಶ್ವವಾಯು ಹಿಡಿದವರಂತೆ ಸ್ತಬ್ಧರಾದರು. ಸಭೆ ಚದುರಿ ಹೋಯಿತು. ಇಂತಹ ಉದಾಹರಣೆಗಳಿಂದ ಗಾಂಧೀಜಿ ತಮ್ಮ ಹಿಂಬಾಲಕರಲ್ಲಿ ಧೈರ್ಯ ತುಂಬಿದರು.

ಗಾಂಧೀಜಿ ಸತ್ಯಾಗ್ರಹ ಆರಂಭಿಸುವ ಮುನ್ನ, ೧೯೩೦ನೇ ಮಾರ್ಚಿ ೨ನೇ ತಾರೀಖು, ವೈಸರಾಯರಿಗೆ ಒಂದು ದೀರ್ಘವಾದ ಪತ್ರ ಕಳುಹಿಸಿದರು. ಇದನ್ನು ಆಶ್ರಮವಾಸಿಯಾದ ರೆಜಿನಾಲ್ಡ್ ರೆನಾಲ್ಡ್ಸ್ ಎಂಬ ಒಬ್ಬ ಆಂಗ್ಲ ಯುವಕನು ವೈಸರಾಯರಿಗೆ ಖುದ್ದಾಗಿ ತಲುಪಿಸಿದನು. “ಭಾರತದಲ್ಲಿರುವ ಯಾವೊಬ್ಬ ಆಂಗ್ಲೇಯನಿಗೂ ಯಾವ ಅಪಾಯವೂ ಆಗಬಾರದೆಂಬುದು ನನ್ನ ಉದ್ದೇಶ. ನಮ್ಮ ಸಮರ ಯಶಸ್ವಿಯಾದರೆ ಭಾರತೀಯರಿಗೂ, ಆಂಗ್ಲೇಯರಿಗೂ ಸಹಜವಾದ ಸ್ನೇಹಭಾವ ಉಂಟಾಗುವುದು” ಎಂದು ಗಾಂಧೀಜಿ ಆ ಪತ್ರದಲ್ಲಿ ಭರವಸೆಯಿತ್ತಿದ್ದರು. “ನನ್ನ ಪತ್ರ ನಿಮ್ಮ ಮನಸ್ಸಿನ ಮೇಲೆ ಸತ್ ಪರಿಣಾಮ ಉಂಟುಮಾಡದಿದ್ದರೆ, ಮಾರ್ಚ್ ೧೧ರಲ್ಲಿ ನನ್ನ ಹತ್ತಿರದ ಹಿಂಬಾಲಕರೊಡನೆ ಉಪ್ಪಿನ ಕಾನೂನನ್ನು ಉಲ್ಲಂಘಿಸಲು ನಾನು ನನ್ನ ಆಶ್ರಮದಿಂದ ಪಾದಚಾರಿಯಾಗಿ ಹೊರಡುತ್ತೇನೆ. ನೀವು ನನ್ನನ್ನು ದಸ್ತಗಿರಿ ಮಾಡಿದರೆ, ಸಾವಿರ ಸಾವಿರಗಟ್ಟಲೆ ಭಾರತೀಯರು ಮುಂದೆ ಬಂದು ಉಪ್ಪಿನ ಕಾನೂನನ್ನು ಮುರಿಯುವರು ಮತ್ತು ಎಲ್ಲಾ ಶಿಕ್ಷೆಗಳಿಗೂ ಗುರಿಯಾಗಿ ನಿಲ್ಲುವರು” ಎಂಬ ಅಂಶವನ್ನು ಆ ಪತ್ರದಲ್ಲಿ ಸ್ಪಷ್ಟಪಡಿಸಿದ್ದರು.

ವೈಸರಾಯರು ಅತೃಪ್ತಿಕರವಾದ ಉತ್ತರವಿತ್ತರು. “ಕಾನೂನುಭಂಗ ಮಾಡಿದರೆ ದೇಶದಲ್ಲಿ ಶಾಂತಿಭಂಗ ಉಂಟಾಗುವುದು” ಎಂಬುದಾಗಿ ಅವರು ತಿಳಿಸಿದರು. ಗಾಂಧೀಜಿ ಹೇಳಿದರು; “ನಾನು ಸೊಂಟವನ್ನು ಬಗ್ಗಿಸಿ ವೈಸರಾಯರನ್ನು ರೊಟ್ಟಿ ಕೊಡಿ ಎಂದು ಕೇಳಿದರೆ, ಅವರು ಕಲ್ಲು ಕೊಟ್ಟರು. ಆದ್ದರಿಂದ ನಾನು ವಿಧಿಯಿಲ್ಲದೆ ಸತ್ಯಾಗ್ರಹ ಆರಂಭಿಸಲೇ ಬೇಕಾಗಿದೆ. ನನಗೂ ನನ್ನ  ಸಹ ನಾಗರಿಕರಿಗೂ ಈಗ ಇರುವುದು ಒಂದೇ ಒಂದು ಮಾರ್ಗ. ಅದು ಕಾನೂನು ಭಂಗವಲ್ಲದೆ ಬೇರೆಯಲ್ಲ.”

ಮಾರ್ಚ್ ೧೧ರಲ್ಲಿ ಆರಂಭವಾಗಲಿದ್ದ ಸತ್ಯಾಗ್ರಹಕ್ಕೆ ಗಾಂಧೀಜಿ ಸಿದ್ಧರಾದರು. ೧೧ನೇ ತಾರೀಖು ಬೆಳಿಗ್ಗೆ ಪ್ರಾರ್ಥನೆಯ ನಂತರ ಗಾಂಧೀಜಿ ಆಶ್ರಮದಿಂದ ತಮ್ಮ ಹಿಂಬಾಲಕರೊಡನೆ ಪಾದಚಾರಿಯಾಗಿ ಹೊರಟರು. “ಇನ್ನು ನಾವು ಸಬರಮತಿ ಆಶ್ರಮಕ್ಕೆ ಹಿಂತಿರುಗುವುದಿಲ್ಲ. ಇದೇ ನಮ್ಮ ಆಶ್ರಮದ ಕಡೆಯ ದರ್ಶನ” ಎಂದರು.

ಜಲಾಲ್‌ಪುರ ಜಿಲ್ಲೆಯ ದಂಡಿ ಎಂಬಲ್ಲಿಗೆ ಹೋಗಿ ಉಪ್ಪಿನ ಕಾಯಿದೆ. ಭಂಗ ಮಾಡುವುದೇ ಇವರ ಗುರಿ. ಈ ದಂಡಿಯಾತ್ರೆಯ ವಿವರ ಬಹಳ ಹೃದಯಂಗಮವಾಗಿದೆ.

ಗಾಂಧೀಜಿ ಸಬರ್ಮತಿಯನ್ನು ದಂಡಿಯಾತ್ರೆಗಾಗಿ ಬಿಡುವ ಮುಂಚೆಯೇ, ಮಾರ್ಚಿ ೧ನೇ ತಾರೀಖಿನ ದಿನವೇ, ಸರ್ಕಾರ ವಲ್ಲಭಭಾಯಿ ಪಟೇಲರನ್ನು ದಸ್ತಗಿರಿಮಾಡಿ ಅವರಿಗೆ ಮೂರು ತಿಂಗಳು ಶಿಕ್ಷೆ ವಿಧಿಸಿತು. ಈ ಸುದ್ಧಿ ಮುಟ್ಟುತ್ತಲೇ ಅಹಮದಾಬಾದಿನ ನಾಗರಿಕರು ಮಹಾಸಭೆ ಸೇರಿದರು. ಗಾಂಧೀಜಿ ಆ ಸಭೆಯಲ್ಲಿ ಸತ್ಯಾಗ್ರಹ ಪ್ರತಿಜ್ಞೆ ಮಾಡುವಂತೆ ಬೋಧಿಸಿದರು. ನೆರೆದಿದ್ದ ೭೫,೦೦೦ ಜನರು “ಆಗಲಿ” ಎಂದು ಉತ್ತರವಿತ್ತರು. ಗಾಂಧೀಜಿ ಸಭಿಕರನ್ನು ಕುರಿತು “ನೀವು ಭಯಪಡಬೇಡಿ, ಶಾಂತವಾಗಿ ಸತ್ಯಾಗ್ರಹ ಮಾಡಿ ಬಂದುದನ್ನೆಲ್ಲಾ ಅನುಭವಿಸಿ” ಎಂದು ಹೇಳಿದರು. ಹೀಗೆ ದಂಡಿ ಯಾತ್ರೆಯ ಮುಂಚೆಯೇ ಅಹಮದಾಬಾದಿನ ಮತ್ತು ಗುಜರಾತಿನ ಜನ ಸಿದ್ಧರಾದರು. ದಂಡಿ ಸಬರ್ಮತಿಗೆ ೨೪೧ ಮೈಲಿ ದೂರದಲ್ಲಿದೆ. ಗಾಂಧೀಜಿ ಹೋದ ದಾರಿಯಲ್ಲಿ ಎಷ್ಟೋ ಹಳ್ಳಿಗಳಿವೆ. ಆ ಹಳ್ಳಿಗಳ ಜನರೆಲ್ಲಾ ತಮ್ಮ ಊರು ಮುಂದೆ ತಳಿರು ತೋರಣಗಳನ್ನು ಕಟ್ಟಿ, ಗಾಂಧೀಜಿಗೆ ಸ್ವಾಗತ ನೀಡಿ ಸತ್ಕರಿಸಿದರು.

ಪಂಡಿತ ಮೋತಿಲಾಲರಿಗೆ ಪ್ರಾರಂಭದಲ್ಲಿ ಈ ಉಪ್ಪಿನ ಸತ್ಯಾಗ್ರಹದ ವಿಷಯದಲ್ಲಿ ಅಷ್ಟುನಂಬಿಕೆ ಇರಲಿಲ್ಲ. ಗಾಂಧೀಜಿ ಯಾತ್ರೆ ಆರಂಭಿಸಿದ ಮೇಲೆ ಜನರ ಉತ್ಸಾಹವನ್ನು ಕಂಡು ಆಶ್ಚರ್ಯ ಪಟ್ಟರು. ಗಾಂಧೀಜಿಯ ಈ ಯಾತ್ರೆಯನ್ನು ಶ್ರೀರಾಮಚಂದ್ರ ವನವಾಸಕ್ಕಾಗಿ ಅಯೋಧ್ಯೆಯನ್ನು ಬಿಟ್ಟು ಹೊರಟುದಕ್ಕೆ ಹೋಲಿಸಿದರು. ಗಾಂಧೀಜಿ ಏಪ್ರಿಲ್ ೫ರಲ್ಲಿ ದಂಡಿಯನ್ನು ತಲಪಿದರು. ಈ ಯಾತ್ರೆ ಒಟ್ಟು ೨೪ ದಿನ ನಡೆಯಿತು. ಗಾಂಧೀಜಿಯವರೊಡನೆ ಭಾರತೀಯ ಪತ್ರಿಕಾ ಪ್ರತಿನಿಧಿಗಳೂ ಇಂಗ್ಲೆಂಡ್ ಮತ್ತು ಅಮೆರಿಕಾ ಪತ್ರಿಕಾ ಪ್ರತಿನಿಧಿಗಳೂ ಪಾದಯಾತ್ರೆ ಮಾಡಿದರು. ಅವರಿಗೆ ವರದಿ ಮಾಡಲು ಬೇಕಾದಷ್ಟು ಸಮಾಚಾರ ಸಿಗುತ್ತಿತ್ತು.

ಏತನ್ಮಧ್ಯೆ ದೇಶದಲ್ಲಿ ಗಾಂಧೀಜಿಯ ಯಾತ್ರೆಯ ಪ್ರತಿದಿನದ  ಸುದ್ದಿ ದೇಶದಲ್ಲೆಲ್ಲಾ ಹರಡಿ ಜನರಲ್ಲಿ ಧೈರ್ಯೋತ್ಸಾಹವನ್ನು ತುಂಬಿತು. ಈ ಸಾರಿಯ ಚಳುವಳಿಯಲ್ಲಿ ಮಹಿಳೆಯರೂ ಬಹಳವಾಗಿ ಸೇರಿದರು. ಎಲ್ಲರ ಮುಖದಲ್ಲಿಯೂ ಕಳೆ, ಎಲ್ಲರ ಮುಖದಲ್ಲಿಯೂ ತೇಜಸ್ಸು, ಎಲ್ಲೆಲ್ಲಿಂದಲೂ ಕಾಂಗ್ರೆಸ್ ಮುಖಂಡರ ದಸ್ತಗಿರಿಯ ಸುದ್ದಿ ಬರುತ್ತಿತ್ತು. ಗುಜರಾತಿನಲ್ಲಿ ೩೦೦ ಗ್ರಾಮಗಳ ಪಟೇಲರು ರಾಜೀನಾಮೆಯಿತ್ತರು.

ಗಾಂಧೀಜಿ ಏಪ್ರಿಲ್ ೬ನೇ ತಾರೀಖು ಪ್ರಾತಃಕಾಲ ಸಮುದ್ರ ಸ್ನಾನ ಮಾಡಿ ಸಮುದ್ರ ತೀರದಲ್ಲಿ ಗುಡ್ಡಗುಡ್ಡೆಯಾಗಿ ಹಾಕಿದ್ದ ಉಪ್ಪನ್ನು ಹಿಡಿಹಿಡಿಯಾಗಿ ತೆಗೆದುಕೊಂಡರು. ಇದೇ ಸತ್ಯಾಗ್ರಹ. ಅವರ ಹಿಂಬಾಲಕರೂ ಹಾಗೆಯೇ ಮಾಡಿದರು. ಗಾಂಧೀಜಿ ಉಪ್ಪಿನ ಕಾನೂನನ್ನು ಮುರಿದರು. ಅನೇಕರು ಸಮುದ್ರದ ನೀರನ್ನು ಕಾಯಿಸಿ, ಉಪ್ಪು ತಯಾರು ಮಾಡಿದರು. ಪೊಲೀಸರು ಕಾನೂನು ಭಂಗ ಮಾಡುತ್ತಿದ್ದವರನ್ನು ಚದುರಿಸಿ, ಅವರ ಮೇಲೆ ಲಾಠಿ ಪ್ರಹಾರ ಮಾಡಿದರು. ೧೯೨೦ – ೧೯೨೧ರ ಚಳುವಳಿಯಲ್ಲಿ ಪೊಲೀಸರು ಲಾಠಿ ಉಪಯೋಗಿಸಲಿಲ್ಲ. ಸುಮ್ಮನೆ ದಸ್ತಗಿರಿ ಮಾಡಿ ಜೈಲಿನಲ್ಲಿಡುತ್ತಿದ್ದರು. ಇದರಿಂದ ಜನರಿಗೆ ಭಯ ಉಂಟಾಗುವುದಿಲ್ಲವೆಂದು ತಿಳಿದು ಈ ಸಾರಿ ಲಾಠಿಯನ್ನು ಉಪಯೋಗಿಸಿ, ಗುಂಡು ಹಾರಿಸಿ, ಭಯೋತ್ಪಾದನೆ ಮಾಡಿದರು.

ಕಾಂಗ್ರೆಸ್ ಅಧ್ಯಕ್ಷ ಜವಹರಲಾಲರನ್ನು ಸರ್ಕಾರ ದಸ್ತಗಿರಿ ಮಾಡಿತು. ಗಾಂಧೀಜಿ ಕಾಂಗ್ರೆಸ್ ಅಧ್ಯಕ್ಷತೆಯನ್ನು ವಹಿಸಿದರು. ಶಾಸನ ಸಭೆಗಳಿಂದ ಹೆಚ್ಚು ಹೆಚ್ಚಾಗಿ ಸಭಿಕರು ರಾಜೀನಾಮೆ ಕೊಡತೊಡಗಿದರು. ಸರ್ಕಾರ ಒಂದಾಗುತ್ತಲೊಂದು ಹೊಸ ಆರ್ಡಿನೆನ್ಸುಗಳನ್ನು ಹೊರಡಿಸಿ ಕ್ರೂರವಾದ ದಮನ ನೀತಿಯನ್ನು ಅನುಸರಿಸಿತು.

ಗಾಂಧೀಜಿ ಸರ್ಕಾರದ ಉಗ್ರನೀತಿಗೆ ಪ್ರತಿಯಾಗಿ ಇನ್ನೂ ಉಗ್ರವಾದ ಸತ್ಯಾಗ್ರಹ ಕಾರ್ಯಗಳನ್ನು ಜಾರಿಗೆ ತರಬೇಕೆಂದು ಆಲೋಚಿಸಿ ವೈಸರಾಯರಿಗೆ ಪತ್ರ ಬರೆದು, ದಾರ್ಶನಾದ ಎರಡು ಉಪ್ಪಿನ ಕೋಠಿಗಳಿಗೆ ತಾವು ಮತ್ತು ತಮ್ಮ ಸಹಚರರು ಮುತ್ತಿಗೆ ಹಾಕುವುದಾಗಿ ತಿಳಿಸಿದರು.

ಮೇ ೪ನೇ ತಾರೀಖು ಅರ್ಧ ರಾತ್ರಿಯಲ್ಲಿ ಗಾಂಧೀಜಿಯ ದಸ್ತಗಿರಿ ಯಾಯಿತು. ಈ ದಸ್ತಗಿರಿಯ ವಿವರ ಆಶ್ಚರ್ಯ ಜನಕವಾಗಿದೆ. ಪೊಲೀಸರು ಎಷ್ಟು ಜಾಗರೂಕತೆಯಿಂದ ಮಹಾತ್ಮರನ್ನು ದಸ್ತಗಿರಿ ಮಾಡಿದರು ಎಂಬುದನ್ನು ತಿಳಿಸುತ್ತದೆ. ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್, ಡಿಸ್ಟ್ರಿಕ್ಟ್ ಪೊಲೀಸ್ ಸೂಪರಿಂಟೆಂಡೆಂಟ್, ಡೆಪ್ಯುಟಿ ಪೊಲೀಸ್ ಸೂಪರಿಂಟೆಂಡೆಂಟ್ ಮತ್ತು ೩೦ ಸಶಸ್ತ್ರ ಪೊಲೀಸರು ಜಲಾಲ್ ಪುರದಿಂದ ಕರಾಡಿಗೆ ರಾತ್ರಿ ೧೨ – ೪೫ಕ್ಕೆ ಬಂದರು. ಒಂದು ಟಾರ್ಜ್‌ಲೈಟನ್ನು ತೆಗೆದುಕೊಂಡು ನೇವಾಗಿ ಗಾಂಧೀಜಿಯ ಮಂಚದ ಬಳಿ ಬಂದರು. ಟಾರ್ಜ್‌ಲೈಟನ್ನು ಗಾಂಧೀಜಿಯ ಮೇಲೆ ಬಿಟ್ಟು. “ನೀವೂ, ಮೊಹನ್‌ದಾಸ್ ಕರಮ್‌ಚಂದ್ ಗಾಂಧೀ?” ಎಂದು ಕೇಳಿದರು. ಗಾಂಧೀಜಿ ಪೊಲೀಸರನ್ನು ಕೇಳಿದರು: “ನನ್ನನ್ನು ದಸ್ತಗಿರಿಮಾಡಲು ಬಂದಿರುವಿರಾ?” ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟರು ಉತ್ತರವಿತ್ತರು: “ನಿಮ್ಮನ್ನು ದಸ್ತಗಿರಿ ಮಾಡಬೇಕೆಂದು ವಾರಂಟಿದೆ. ಗಾಂಧೀಜಿ ಕೇಳಿದರು: “ನಾನು ಹಲ್ಲುತಿಕ್ಕಿಕೊಂಡು, ಮುಖ ತೊಳೆದುಕೊಳ್ಳಲೇ?” “ಆಕ್ಷೇಪಣೆಯಿಲ್ಲ” ಎಂದು ಪೊಲೀಸ್ ಸೂಪರಿಂಟೆಂಡೆಂಟ್‌ರು ಹೇಳಿದರು. ಗಾಂಧೀಜಿ ಹಲ್ಲು ತೊಳೆದುಕೊಳ್ಳುತ್ತಿದಾಗ ಸ್ವಯಂ ಸೇವಕರು ಅಲ್ಲಿ ಸೇರಿದರು. ಗಾಂಧೀಜಿ ದಸ್ತಗಿರಿಗೆ ಅಣಿಮಾಡಿ ಕೊಂಡರು. ವೈಸರಾಯರಿಗೆ ಬರೆದ್ದಿದ್ದ ಒಂದು ಪತ್ರವನ್ನೂ ಇತರ ಕಾಗದಗಳನ್ನೂ ಒಬ್ಬ ಸ್ವಯಂಸೇವಕನ ಕೈಗೆ ಕೊಟ್ಟು, ತಾವು ಎರಡು ಬ್ಯಾಗುಗಳನ್ನು ಒಂದು ತಕಲಿಯನ್ನೂ ತೆಗೆದುಕೊಂಡರು. ಗಾಂಧೀಜಿ ಪೊಲೀಸರ ಮೋಟಾರ‍್ಲಾರಿಯಲ್ಲಿ ಕೊಡುವ ಮುನ್ನ, ಸ್ವಯಂ ಸೇವಕರು ಅವರನ್ನು ಬೀಳ್ಕೊಟ್ಟರು. ಅವರನ್ನು ಬೊಂಬಾಯಿ ಹತ್ತಿರವಿರುವ ಬೋರಿವ್ಲಿವರಿಗೆ ರೈಲಿನಲ್ಲಿ ಒಯ್ಯಲಾಯಿತು. ಅನಂತರ ಕಾರಿನಲ್ಲಿ ಎರವಾಡಾಕ್ಕೆ ಕರೆದುಕೊಂಡು ಹೋಗಲಾಯಿತು. ಸರ್ಕಾರದ ಅನುಮತಿ ಪಡೆದು, ಅಫ್‌ಮಾಡ್ ಬಾರ್ಟ್‌ಲೆಟ್ ಮತ್ತು ನೆಗ್ಗಿ ಪಾರ್‌ಸನ್ ಎಂಬ ಇಬ್ಬರು ವಿದೇಶಿ ಪತ್ರಿಕೋದ್ಯೋಗಿಗಳು ಬೋರಿವ್ಲಿ ಸ್ಟೇಷನ್ ಹತ್ತಿರ ಗಾಂಧೀಜಿಯ ದರ್ಶನಕ್ಕಾಗಿ ಕಾದುಕೊಂಡಿದ್ದರು. ಇವರು ಗಾಂಧೀಜಿಯನ್ನು ಒಬ್ಬ ಸಂತನೆಂದೂ ಪ್ರವಾದಿಯೆಂದೂ ಭಾವಿಸಿ, ವಿವರಿಸಿದ್ದಾರೆ. ೩೦ ಕೋಟಿ ಜನಗಳಿಂದ ಪೂಜ್ಯನಾಗಬೇಕಾದರೆ ಈತನು ಮಹಿಮಾಯುತನೇ ಇರಬೇಕು ಎಂದು ಅವರು ಹೊಗಳಿದ್ದಾರೆ.

ಗಾಂಧೀಜಿ ದಸ್ತಗಿರಿಯಾದ ಕೂಡಲೇ ಕಸ್ತೂರಿಬಾರವರೂ ಸರೋಜನಿ ನಾಯಿಡೂರವರೂ ದೇಶಕ್ಕೆ ಸಂದೇಶವಿತ್ತು “ಪುರುಷರೂ, ಸ್ತ್ರೀಯರೂ ಶಾಂತಿಯುತವಾದ ಸತ್ಯಾಗ್ರಹವನ್ನು ನಡೆಸಬೇಕು, ಉದ್ರೇಕಗೊಳ್ಳಬಾರದು ಎಂದು ತಿಳಿಸಿದರು.

ಗಾಂಧೀಜಿಯ ದಸ್ತಗಿರಿಯಾದ ಕೂಡಲೇ ಅಬ್ಬಾಸ್ ತಯಾಬ್ಜಿಯವರ ದಸ್ತಗಿರಿಯಾಯಿತು. ಇಷ್ಟರಲ್ಲಿ ದೇಶದಲ್ಲೆಲ್ಲಾ ಸರ್ಕಾರ ಉಗ್ರಕಾರ್ಯಕ್ರಮಗಳನ್ನು ಕೈಗೊಂಡಿತು. ಕಲ್ಕತ್ತಾದಲ್ಲಿ ಸೇನ್‌ಗುಪ್ತಾರ ದಸ್ತಗಿರಿ ಯಾಯಿತು. ಏಪ್ರಿಲ್ ೨೩ರಲ್ಲಿ ಸರ್ಕಾರ ೧೯೧೦ರ (ಹಳೆಯ) ಪ್ರೆಸ್ ಕಾನೂನನ್ನು ಪುನಃ ಜಾರಿಗೆ ತಂದಿತು. ಗಾಂಧೀಜಿಯ “ಯಂಗ್ ಇಂಡಿಯಾ” “ನವಜೀವನ” ಪತ್ರಿಕೆಗಳನ್ನು ಸರ್ಕಾರ ನಿಲ್ಲಿಸಬಿಡಬೇಕು ಎಂದು ಅಪ್ಪಣೆ ಮಾಡಿತು. ಆ ಪತ್ರಿಕೆಗಳು ನಿಂತುಹೋದವು. ಬೊಂಬಾಯಿನ “ಫ್ರೀ ಪ್ರೆಸ್” ಪತ್ರಿಕೆಯ ಮೇಲೆ  ಕ್ರೂರಕ್ರಮ ಸರ್ಕಾರ ಕೈಕೊಂಡಿತು. ಬಂಗಾಳದಲ್ಲಿ ಆರ್ಡಿನೆನ್ಸುಗಳು ಜಾರಿಗೆ ಬಂದವು. ಕಲ್ಕತ್ತಾ, ಬೊಂಬಾಯಿ, ಮದರಾಸ್, ಸರಹದ್ ಪ್ರಾಂತ, ಕರಾಚಿ ಮುಂತಾದ ಕಡೆಗಳಲ್ಲೆಲ್ಲಾ ಭಾರಿ ಸಭೆಗಳು, ಮೆರವಣಿಗೆಗಳು, ಉಪ್ಪಿನ ಕಾನೂನಿನ ಬಂಗಗಳು ನಡೆದು, ದೇಶದಲ್ಲೆಲ್ಲಾ ಚಳುವಳಿ ಬಹಳ ದೊಡ್ಡ ಬಿರುಗಾಳಿಯಂತೆ ವ್ಯಾಪಿಸಿತು. ಪೊಲೀಸರು ಲಾಠಿ ಪ್ರಹಾರ, ಜುಲ್ಮಾನೆ, ಆಸ್ತಿಗಳ ಜಫ್ತಿ ಇವೇ ಮುಂತಾದ ಕ್ರಮಗಳಿಂದ ಜನರನ್ನು ಹೆದರಿಸಲು ಆರಂಭಿಸಿದರು. ಜನ ಈ ಸಾರಿ ಹೆದರಲಿಲ್ಲ.

೧೯೩೦ನೇ ಮಾರ್ಚಿ ೨೧ರಲ್ಲಿ  ಸೇರಿದ್ದ ಅಖಿಲ ಭಾರತ ಕಾಂಗ್ರೆಸ್ ಕಮಿಟಿ ಸಭೆ ಏಪ್ರಿಲ್ ೬ರಿಂದಲೇ ದೇಶದಲ್ಲಿ ಕಾನೂನು ಭಂಗವನ್ನು ಘೋಷಿಸಿತ್ತು. ಗಾಂಧೀಜಿಯ ದಸ್ತಗಿರಿಯಾದ ಮೇಲೆ ಈಚಲು ಮರಗಳನ್ನು ಕಡಿಯುವುದು, ಪರದೇಶಿ ಬಟ್ಟೆಗಳ ಅಂಗಡಿಗಳ ಮುಂದೆ ಮತ್ತು ಮದ್ಯದ ಅಂಗಡಿಗಳ ಮುಂದೆ ಪಿಕೆಟ್ ಮಾಡುವುದು ಮುಂತಾದ ಕಾರ್ಯಕ್ರಮಗಳನ್ನು ಕಾಂಗ್ರೆಸಿಗರು ಆರಂಭಿಸಿದರು. ಎಲ್ಲೆಲ್ಲೂ ಮುಖಂಡರುಗಳು ದಸ್ತಗಿರಿಯಾದರು. ಮಣಿಲಾಲ್ ಕುಠಾರಿ ಬಜಾಜ್, ಗಂಗಾಧರರಾವ್ ದೇಶಪಾಂಡೆ, ಜಮುನಾಲಾಲ್, ದೇವ್‌ದಾಸ್ ಗಾಂಧಿ, ದರ್ಬಾರ್ ಗೋಪಾಲ್‌ದಾಸ್, ಕೆ.ಎಂ.ಮುನ್ಷಿ, ಮನುಭಾಯಿ, ಚೋಯಿತ್‌ರಾಂ, ಜಮ್ನಾದಾಸ್, ಡಿ.ವಿ.ಗೋಖಲೆ, ಸ್ವಾಮಿ ಆನಂದ್, ದ್ವಾರಕಾದಾಸ್, ಭೋಪಾಲ್‌ಕರ್, ಕಮಲಾದೇವಿ ಚಟ್ಟೋಪಾಧ್ಯಾಯ, ಗಣೇಶ್ ಚಂದ್ರ ಬ್ಯಾನರ್ಜಿ, ಪ್ರಪುಲ್ಲಘೋಷ್, ಪ್ರೇಮನಾಥ ಬ್ಯಾನರ್ಜಿ ಡಬ್ಯ್ಲು. ಎನ್.ನಿಯೋಗಿ, ಪಿ.ಎನ್. ಧಾರ್, ಬಿ.ಕೆ.ಭಟ್ಟಾಚಾರ್ಯ, ಕೆ.ನಾಗೇಶ್ವರರಾವ್, ಟಿ.ಪ್ರಕಾಶಂ, ದುರ್ಗಾಬಾಯಿ, ಸಿ.ರಾಜಗೋಪಾಲಾಚಾರಿ, ರುಕ್ಮಿಣಿ ಲಕ್ಷ್ಮಿಪತಿ, ಪಟ್ಟಾಭಿ ಸೀತಾ ರಾಮಯ್ಯ, ಕೊಂಡಾ ವೆಂಕಟಪ್ಪಯ್ಯ, ಮೋಹನ್‌ಲಾಲ್ ಸಕ್ಸೇನಾ, ಶ್ರೀಪ್ರಕಾಶ, ಮೌಲ್ವಿ ಅಹಮದ್ ಜಮಾನ್‌ಖಾನ್ ಮುಂತಾದವರ ದಸ್ತಗಿರಿಗಳೆಲ್ಲಾ ಗಾಂಧೀಜಿಯ ದಸ್ತಗಿರಿಗೆ ಮುಂಚೆಯೇ ಆದವು.

ಗಾಂಧೀಜಿ ದಸ್ತಗಿರಿಯಾದ ಮೇಲೆ, ಸತ್ಯಾಗ್ರಹ ಚಳುವಳಿ ಬಹಳ ಉಗ್ರರೂಪವನ್ನು ತಾಳಿತು. ದೊಡ್ಡ ದೊಡ್ಡ ನಗರಗಳಲ್ಲೆಲ್ಲಾ ಹರತಾಳಗಳೂ, ಪಿಕ್‌ಟಿಂಗುಗಳೂ ಜೋರಾಗಿ ನಡೆದವು. ಉಪ್ಪಿನ ಸತ್ಯಾಗ್ರಹದ ಜೊತೆಗೆ ಈಚಲುಗಿಡಗಳನ್ನು ಕಡಿದು ಹಾಕುವ ಚಳುವಳಿಯೂ ನಡೆಯಿತು. ಸತ್ಯಾಗ್ರಹ ಶಾಂತವಾಗಿ ನಡೆದರೂ ಇತರ ಸಾಮಾನ್ಯ ಜನರಗುಂಪು ಅನೇಕ ಕಡೆ ಗಲಾಟೆ ಮಾಡಿದರು. ಪೊಲೀಸರ ಲಾಠಿ ಪ್ರಹಾರ, ಗುಂಡಿನೇಟು ಮುಂತಾದವುಗಳಿಂದ ಅನೇಕರು ಸತ್ತರು, ಲೆಕ್ಕವಿಲ್ಲದಷ್ಟು ಜನರಿಗೆ ಗಾಯವಾಯಿತು.

ಗಾಂಧೀಜಿಯ ದಸ್ತಗಿರಿಯಾದ ಮೇಲೆ ಅಲಹಾಬಾದಿನಲ್ಲಿ ವರ್ಕಿಂಗ್ ಕಮಿಟಿ ಸಭೆ ನಡೆದು, ಸತ್ಯಾಗ್ರಹವನ್ನು ಇನ್ನೂ ಜೋರಾಗಿ ನಡೆಸಬೇಕೆಂದು ತೀರ್ಮಾನಿಸಿತು.

ಗಾಂಧೀಜಿ ದಾರ್ಶನಾ ಉಪ್ಪಿನ ಕೋಠಿಯನ್ನು ಮುತ್ತಿಗೆ ಹಾಕಬೇಕೆಂದು ಕಾರ್ಯಕ್ರಮ ಹಾಕಿಕೊಂಡಿದ್ದರು. ಆದರೆ ಅಷ್ಟರೊಳಗೆ ಅವರ ದಸ್ತಗಿರಿಯಾಯಿತು. ಗಾಂಧೀಜಿಯವರ ಮಗ ಮಣಿಲಾಲ್ ಗಾಂಧೀಯವರ ಮುಖಂಡತ್ವದಲ್ಲಿ ೨,೫೦೦ ಜನ ಸ್ವಯಂಸೇವಕರು ದಾರ್ಶನಾ ಕೋಠಿಯ ಸತ್ಯಾಗ್ರಹವನ್ನು ನಡೆಸಿದರು. ಸರೋಜಿನಿ ನಾಯಿಡು ಮೇಲ್ಚಿಚಾರಣೆ ನೋಡಿಕೊಂಡರು.

ಪ್ರಾರ್ಥನೆಯಾದ ನಂತರ ಸರೋಜಿನಿ ನಾಯಿಡು ಸ್ವಯಂ ಸೇವಕರಿಗೆ ಸ್ಫೂರ್ತಿದಾಯಕ ಉಪದೇಶ ಮಾಡಿದರು: “ಗಾಂಧೀಜಿಯ ಮಾತುಗಳನ್ನು ನೆನಪಿನಲ್ಲಿ ಇಡಿರಿ. ನಮ್ಮನ್ನು ಪೊಲೀಸರು ಹೊಡೆಯುವರು, ನಾವು ಎದುರು ಬೀಳಬಾರದು, ಏಟುಗಳನ್ನು ತಪ್ಪಿಸಿಕೊಳ್ಳಲು ಕೈಯನ್ನೂ ಎತ್ತಬಾರದು “

ಕೋಠಿಯ ಸುತ್ತಲೂ ಬಾರ್ಬ್‌ಡ್ ವೈರಿನ ಬೇಲಿಯಿತ್ತು. ಒಂದು ಕಂದಕವನ್ನೂ ತೋಡಲಾಗಿತ್ತು. ಮೊದಲನೆಯ ಸಾರಿ ಒಂದು ಸ್ವಯಂ ಸೇವಕರ ತಂಡ ನುಗ್ಗಿದಾಗ ಪೊಲೀಸರು ಅವರಿಗೆ “ಚದುರಿ” ಎಂದು ಆಜ್ಞಾಪಿಸಿದರು. ಸ್ವಯಂಸೇವಕರು ಮೌನವಾಗಿ ಮುಂದಕ್ಕೆ ಹೋದರು. ಕೂಡಲೆ ಪೊಲೀಸರು ಅವರ ಮೇಲೆ ನುಗ್ಗಿ ಲಾಠಿ ಪ್ರಹಾರದ ಮಳೆ ಕರೆದರು. ಒಬ್ಬ ಸ್ವಯಂ ಸೇವಕನಾದರೂ ಏಟನ್ನು ತಪ್ಪಿಸಿಕೊಳ್ಳಲು ಕೈಯೆತ್ತಲಿಲ್ಲ. ನೆಲದ ಮೇಲೆ ಏಟು ತಿಂದವರೆಲ್ಲರೂ ದೊಪ್ಪೆಂದು ಬಿದ್ದರು. ನೋವಿನಿಂದ ನರಳಿದರು. ತಲೆ ಒಡೆದು, ತೋಳುಗಳು ಫ್ಯ್ರಾಕ್ಟರ್ ಆಗಿ, ಭೂಮಿಯೆಲ್ಲಾ ರಕ್ತದಿಂದ ತೊಯ್ದಿತು.

ಕೂಡಲೇ ಸ್ವಯಂ ಸೇವಕರ ಎರಡನೇ ಗುಂಪು ಮುಂದೆ ನುಗ್ಗಿತು. ಯಾವ ಅಳುಕೂ ಇರಲಿಲ್ಲ. ಇವರನ್ನೂ ಪೊಲೀಸರು ತಲೆಯ ಮೇಲೆ ಹೊಡೆದು, ನೆಲಕ್ಕೆ ಉರುಳಿಲಸಿದರು. ಈಗ ಬೇರೆ ಒಂದು ಕ್ರಮವನ್ನು ಸ್ವಯಂ ಸೇವಕರು ಅನುಸರಿಸಿದರು. ೨೫ ಸ್ವಯಂ ಸೇವಕರು ಮುಂದೆ ನುಗ್ಗಿ ಕುಳಿತು ಕೊಂಡುಬಿಟ್ಟರು. ಅವರು ಕುಳಿತದ್ದನ್ನು ಕಂಡು ಪೊಲೀಸರು ಸಿಟ್ಟಿಗೆದ್ದು, ಅವರ ತಲೆ ಮೇಲೆ ಹೊಡೆದರು. ಅವರ ಹೊಕ್ಕಳ ಮೇಲೆಯೂ, ಅಪಾಯ ಸ್ಥಳದ ಮೇಲೆಯೂ ಒದ್ದರು. ಕೆಲವರನ್ನು ಎಳೆದು ಕಂದಕದಲ್ಲಿ ಹಾಕಿದರು. ಆದರೆ ಸ್ವಯಂಸೇವಕರು ಪುನಃ ಪುನಃ ನುಗ್ಗಿ ಪೊಲೀಸರ ಲಾಠಿ ಏಟಿಗೆ ಸಿಕ್ಕಿ, ನೆಲದ ಮೇಲೆ ಉರುಳಿದರು. ಸ್ಟ್ರೆಚರ್ ಬೇರರುಗಳು ಅವರನ್ನು ಹೊರಕ್ಕೆ ತೆಗೆದುಕೊಂಡು ಹೋದರು. ೩೦೦ ಜನ ಸ್ವಯಂ ಸೇವಕರ ರಕ್ತಸ್ರಾವಿತ ದೇಹಗಳನ್ನು ಸ್ಟ್ರೆಚರ್‌ಬೇರರುಗಳು ಹೊರಗೆ ತಂದು ಆಸ್ಪತ್ರೆಗೆ ಸೇರಿಸದರು. ಇಬ್ಬರು ಅಲ್ಲೇ ಸತ್ತರು. ದಾರ್ಶನಾ ಮುತ್ತಿಗೆಯಲ್ಲಿ ೨,೪೦೦ ಜನ ಸ್ವಯಂಸೇವಕರು ಭಾಗಿಯಾಗಿದ್ದರು.

ವೈಸರಾಯರು ರೌಂಡ್ ಟೇಬಲ್ ಸಮ್ಮೇಳನಕ್ಕೆ ಸಿದ್ಧತೆ ಪಡಿಸಲು ೧೯೩೦ನೇ ನವೆಂಬರ್ ೧೨ರಲ್ಲಿ ಲಂಡನ್ನಿಗೆ ಹೋದರು. ಗಾಂಧೀಜಿಯವರಿಲ್ಲದೆಯೇ, ಕಾಂಗ್ರೆಸ್ ಪ್ರತಿನಿಧಿಗಳಿಲ್ಲದೆಯೇ, ರೌಂಡ್ ಟೇಬಲ್ ಸಮ್ಮೇಳನ ನಡೆಯಿತು. ಮುಂದೆ ಕೊಡಲಾಗುವ ರಾಜಕೀಯ ಸುಧಾರಣೆಗಳ ರೂಪರೇಖೆಗಳು ಕಂಡವು. ಬ್ರಿಟಿಷ್ ಮುಖ್ಯಮಂತ್ರಿ ಮುಂದಿನ ರೌಂಡ್ ಟೇಬಲ್ ಸಮ್ಮೇಳನದಲ್ಲಾದರೂ ಕಾಂಗ್ರೆಸ್ ಪ್ರತಿನಿಧಿಗಳು ಭಾಗವಹಿಸಲೆಂದು ಆಶಿಸಿ, ಮೊದಲನೇ ಸಮ್ಮೇಳನವನ್ನು ಮುಗಿಸಿದರು.

ವೈಸರಾಯರು ೧೯೩೧ನೇ ಜನವರಿ ೨೬ ರಲ್ಲಿ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸದಸ್ಯರನ್ನು ಖುಲಾಸೆ ಮಾಡಿ, ಭಾರತದಲ್ಲಿ ಶಾಂತಿ ಸ್ಥಾಪನೆಯಾಗಲಿ ಎಂದು ಹಾರೈಸಿದರು. ಗಾಂಧೀಜಿ ಪರಿಸ್ಥಿತಿಯನ್ನು ತೆರೆದ ಮನಸ್ಸಿನಿಂದ ಪರಿಶೀಲಿಸುವುದಾಗಿ ತಿಳಿಸಿದರು. ಪಿಕೆಟಿಂಗ್, ಉಪ್ಪಿನ ತಯಾರಿಕೆ ಇವುಗಳನ್ನು ನಿರ್ಬಂಧಿಸಕೊಡದೆಂದು ತಿಳಿಸಿದರು. ಎಲ್ಲಾ ಆರ್ಡಿನೆನ್ಸುಗಳನ್ನೂ ಸರ್ಕಾರ ಹಿಂತೆಗೆದುಕೊಳ್ಳಬೇಕೆಂದು ಕೋರಿದರು.

ಅಲಹಾಬಾದಿನಲ್ಲಿ ಮೋತಿಲಾಲ್ ನೆಹರು ಕಾಯಿಲೆಯಿಂದ ನರಳುತ್ತಿದ್ದರು. ಗಾಂಧೀಜಿ ಕೂಡಲೆ ಅಲ್ಲಿಗೆ ಪ್ರಯಾಣ ಮಾಡಿದರು. ವರ್ಕಿಂಗ್ ಕಮಿಟಿ ಸಭೆ ಅಲ್ಲಿ ನಡೆಯಿತು. ಆ ಸಭೆಯಲ್ಲಿ ನಡೆದುದನ್ನು ಕೂಡಲೆ ಪ್ರಕಟಿಸಲಿಲ್ಲ. ಡಾ. ಸಪ್ರು, ಎಂ.ಆರ್. ಜಯಕರ್, ರೈಟ್ ಆನರಬಲ್ ಶ್ರೀನಿವಾಸ ಶಾಸ್ತ್ರೀ ಇವರುಗಳು ಲಂಡನ್ನಿನಿಂದ ಬರುವವರೆಗೆ ಕಾಯಲಾಯಿತು. ಆದರೆ ವರ್ಕಿಂಗ್ ಕಮಿಟಿ ತೀರ್ಮಾನಿಸುವವರೆಗೂ ಕಾನೂನು ಭಂಗದ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗಬೇಕೆಂದೂ, ಸರ್ಕಾರ ತನ್ನ ದಬ್ಬಾಳಿಕೆಯನ್ನು ನಿಲ್ಲಿಸಿದ ಹೊರತು ಪರಿಸ್ಥಿತಿ ಉತ್ತಮವಾಗುವುದಿಲ್ಲವೆಂದೂ ತಿಳಿಸಲಾಯಿತು.

ಇಷ್ಟರಲ್ಲಿ ಪಂಡಿತ ಮೋತಿಲಾಲ್ ನೆಹರು ಕಾಲವಾದರು. ಮೋತಿಲಾಲ್ ನೆಹರುವರಿಗೆ ಅಂತ್ಯ ಕಾಲದಲ್ಲಿಯೂ ಸ್ವರಾಜ್ಯದ ಚಿಂತೆಯೇ ಇತ್ತು. ಮೋತಿಲಾಲರ ಮರಣದ ಬಗ್ಗೆ ಗಾಂಧೀಜಿ “ನಾನು ಈಗ ಗಂಡ ಕಳೆದು ಕೊಂಡ ವಿಧವೆಯಂತೆ ಆಗಿದ್ದೇನೆ. ನಮಗೆ ಬಹಳ ದೊಡ್ಡ ನಷ್ಟವುಂಟಾಯಿತು” ಎಂದು ತಮ್ಮ ಶೋಕವನ್ನು ಸೂಚಿಸಿದರು.

ಈ ಸತ್ಯಾಗ್ರಹದಲ್ಲಿ ೭೫,೦೦೦ ಜನ ಕಾರಾಗೃಹ ಸೇರಿದ್ದರು. ಇಂಗ್ಲೆಂಡಿನಿಂದ ವಾಪಸ್ಸು ಬಂದ ಲಿಬರಲ್ ಮುಖಂಡರು ಗಾಂಧೀಜಿ ಮತ್ತು ವೈಸರಾಯ್ ಪರಸ್ಪರ ಕಲೆತು ಮಾತನಾಡಬೇಕೆಂದು ಸೂಚಿಸಿದರು. ಗಾಂಧೀಜಿ ರಫಿ ಅಹಮದ್ ಕಿಡ್ವಾಯ್‌ರ ಮೂಲಕ ವೈಸರಾಯರಿಗೆ ಒಂದು ಪತ್ರ ಕಳುಹಿಸಿ, ಭೇಟಿ ಕೊಡಬೇಕೆಂದು ಕೇಳಿದರು. ಭೇಟಿಯ ಉದ್ದೇಶ ದೇಶದ ಪರಿಸ್ಥಿತಿಯನ್ನು ಕುರಿತು ಮಾತನಾಡುವುದು. ವೈಸರಾಯರು ಭೇಟಿಗೆ ಅನುಮತಿಯಿತ್ತರು. ಇದು ಫೆಬ್ರವರೊ ೧೬ರಲ್ಲಿ ನಡೆಯಿತು. ವೈಸರಾಯರು ಲಿಬರಲ್ ಮುಖಂಡರಾದ ಶಾಸ್ತ್ರಿ, ಸಪ್ರು, ಜಯಕರ್ ಇವರುಗಳ ಸಲಹೆಯನ್ನೂ ತೆಗೆದುಕೊಂಡರು. ಗಾಂಧೀಜಿ ವರ್ಕಿಂಗ್ ಕಮಿಟಿ ಸದಸ್ಯರನ್ನೂ ಇತರ ಮಿತ್ರರನ್ನೂ ದೆಹಲಿಗೆ ಕರೆಸಿಕೊಂಡರು. ಗಾಂಧೀಜಿ ಶಾಂತಿಯ ಮಾತುಗಳು ನಡೆಯುವ ಮುನ್ನ ಆರು ಷರತ್ತುಗಳನ್ನು ವೈಸರಾಯರಿಗೆ ಹಾಕಿದರು;

(೧) ರಾಜಕೀಯ ಕೈದಿಗಳನ್ನೆಲ್ಲಾ ಖುಲಾಸೆ ಮಾಡುವುದು.

(೨) ದಬ್ಬಾಳಿಕೆಯನ್ನು ನಿಲ್ಲಿಸುವುದು.

(೩) ಜಫ್ತಿಯಾದ ಆಸ್ತಿಪಾಸ್ತಿಗಳನ್ನೆಲ್ಲಾ ವಾಪಸ್ಸು ಕೊಡುವುದು.

(೪) ರಾಜಕೀಯ ಕಾರಣಗಳಿಗಾಗಿ ಶಿಕ್ಷೆಗೆ ಗುರಿಯಾದ ಸರ್ಕಾರದ ನೌಕರರನ್ನೆಲ್ಲಾ ಪುನಃ ಕೆಲಸಕ್ಕೆ ಸೇರಿಸಿಕೊಳ್ಳುವುದು.

(೫) ಉಪ್ಪನ್ನು ತಯಾರಿಸುವುದಕ್ಕೂ ಮದ್ಯದ ಅಂಗಡಿಗಳ ಹಾಗೂ ಪರದೇಶೀ ಅಂಗಡಿಗಳ ಮುಂದೆ ಪಿಕೆಟ್ ಮಾಡುವುದಕ್ಕೂ ಸ್ವಾತಂತ್ರ್ಯವಿರುವುದು.

(೬) ಪೊಲೀಸ್ ಅತ್ಯಾಚಾರಗಳನ್ನೆಲ್ಲಾ ವಿಚಾರಣೆಗೆ ಗುರಿಪಡಿಸುವುದು.

ಫೆಬ್ರವರಿ ೧೭ನೇ ತಾರೀಖಿನಿಂದ ಗಾಂಧಿ ವೈಸರಾಯ್ ಮಾತುಕತೆಗಳು ಆರಂಭವಾದುವು; ಆ ಹೊತ್ತು ಮತ್ತು ಇನ್ನೆರಡು ದಿನಗಳೂ ನಡೆದವು. ಆ ಮೇಲೆ ಒಂದು ವಾರ ನಿಲ್ಲಿಸಲಾಯಿತು. ಮೂರು ದಿವಸದ ಮಾತುಕತೆ ಗಳನ್ನು ವೈಸರಾಯರು ಲಂಡನ್ನಿಗೆ ಕೇಬಲ್ ಮಾಡಿ ಬ್ರಿಟಿಷ್ ಸರ್ಕಾರದ ಅಭಿಪ್ರಾಯಗಳನ್ನು ತಿಳಿದುಕೊಳ್ಳಲು ಸಮಯ ಬೇಕಾಯಿತು. ಪುನಃ ೨೭ – ೨೮ನೇ ತಾರೀಖುಗಳಲ್ಲಿ ಭೇಟಿ ನಡೆದುವು. ಈ ಮಾತುಕತೆಗಳು ನಿಂತು ಹೋಗುವುವೋ ಏನೋ ಎಂಬ ಕಳವಳ ಮಧ್ಯೆ ಉಂಟಾಯಿತು. ಗಾಂಧೀಜಿಯವರು ವೈಸರಾಯರನ್ನು ಪುನಃ ಮಾರ್ಚ್ ೧ರಲ್ಲಿ ಭೇಟಿ ಮಾಡಿದರು. ಕೆಲವು ತೊಡಕುಗಳು ಬಂದವು. ಬ್ರಿಟಿಷ್ ಕನ್‌ಸರ್ವೆಟಿವ್ ಪಾರ್ಟಿ ಮುಖಂಡ ಚರ್ಚಿಲ್ ಈ ಭೇಟಿಯನ್ನು ಆಕ್ಷೇಪಿಸಿ, “ರಾಜದ್ರೋಹಿಯಾದ ಗಾಂಧಿಯವರೊಡನೆ ಸಂವಿಧಾನವೇನು? ಈ ಅರ್ಧ – ಬೆತ್ತಲೆ ರಾಜದ್ರೋಹಿ ವಕೀಲರಿಗೆ ವೈಸರಾಯ್ ಭವನದ ಮೆಟ್ಟಲುಗಳನ್ನು ಹತ್ತಿ, ವೈಸರಾಯರೊಡನೆ ಸಂಧಾನ ನಡೆಸಲು ಅವಕಾಶ ಕೊಡುವುದೆಂದರೇನು?” ಎಂದು ಉದ್ಗಾರ ತೆಗೆದರು.

ಆದರೆ ವೈಸರಾಯ್ ಲಾರ್ಡ್ ಅವಿರ್ನ್‌ಗಾಂಧೀಜಿಯ ವಿಷಯದಲ್ಲಿ ಅತ್ಯಂತ ಗೌರವದಿಂದ ವರ್ತಿಸಿ, ಮಾತುಕತೆಗಳನ್ನು ಮುಂದರಿಸಿದರು. ಪೊಲೀಸ್ ಅತ್ಯಾಚಾರದ ಬಗ್ಗೆ ಟ್ರಿಬ್ಯೂನಲ್‌ನ ಪ್ರಶ್ನೆ ಬಲವಾಯಿತು. ಸಫ್ರು, ಜಯಕರ್, ಶಾಸ್ತ್ರಿ, ಇವರುಗಳು ಮಧ್ಯಸ್ಥಿಕೆ ವಹಿಸಿ, ಪೊಲೀಸ್ ಅತ್ಯಾಚಾರಗಳ ಬಗ್ಗೆ ವಿಚಾರಣೆಗೆ ವೈಸರಾಯರನ್ನು ಒಪ್ಪಿಸಿದರು.

ಗಾಂಧೀಜಿ ೨೨ನೇ ತಾರೀಖು ಅರ್ಧ ರಾತ್ರಿ ವೈಸರಾಯರನ್ನು ನೋಡಿದರು. ಪರಿಸ್ಥಿತಿ ಉತ್ತಮವಾಗಿತ್ತು. ಪುನಃ ಪುನಃ ಗಾಂಧೀ  – ವೈಸರಾಯ್‌ ಮಾತುಕತೆಗಳು ಮುಂದರಿದವು. ರೌಂಡ್ ಟೇಬಲ್ ಸಮ್ಮೇಳನ ಚರ್ಚಿಸುವ ವಿಷಯಗಳನ್ನು ಪುನಃ ಚರ್ಚಿಸಲು ಅವಕಾಶವಿರಬೇಕೆಂಬುದನ್ನು ವೈಸರಾಯರು ಒಪ್ಪಿಕೊಂಡರು. ಮಾರ್ಚ್ ೫ನೇ ತಾರೀಖು ಗಾಂಧೀಜಿ ಮತ್ತು ವೈಸರಾಯರು ಒಂದು ಒಪ್ಪಂದಕ್ಕೆ ಬಂದರು.

ಆ ಹೊತ್ತು ಇಬ್ಬರೂ ವೈಸರಾಯ್ ಭವನದಲ್ಲಿ ಒಪ್ಪಂದಕ್ಕೆ ರುಜುಹಾಕಿದರು. ಗಾಂಧೀ – ಅರ್ವಿನ್ ಒಪ್ಪಂದದ ಸುದ್ದಿ ದೇಶದಲ್ಲೆಲ್ಲಾ ಹರಡಿ, ಬಹಳ ಸಂತೋಷವುಂಟುಮಾಡಿತು. ಕಾಂಗ್ರೆಸ್ ವರ್ಕಿಂಗ್ ಕಮಿಟಿ ಮಾರ್ಚಿ ೫ರಲ್ಲಿ ಕಲ್ಕತ್ತಾದಲ್ಲಿ ಕಲೆತು, ಗಾಂಧೀ – ಅವಿರ್ನ ಒಪ್ಪಂದವನ್ನು ಅಂಗೀಕರಿಸಿತು, ಮತ್ತು ಇಡೀ ದೇಶ ಈ ಒಪ್ಪಂದದಂತೆ ನಡೆಯಬೇಕೆಂದು ಸಂದೇಶ ಹೊರಡಿಸಿತು. ಕೆಲವು ಉಗ್ರಗಾಮಿಗಳಿಗೆ ಈ ಒಪ್ಪಂದ ತೃಪ್ತಿ ಉಂಟುಮಾಡಲಿಲ್ಲ. ಇಂತಹವರಿಗೆ ಗಾಂಧೀಜಿ ಹೇಳಿದರು; “ಮುಂದೆ ನಡೆಯುವ ಕರಾಚಿ ಕಾಂಗ್ರೆಸ್ ಮಹಾಧೀವೇಶನದಲ್ಲಿ ಈ ಒಪ್ಪಂದವನ್ನು ಚರ್ಚಿಸಿ ನಿಮಗೆ ತೃಪ್ತಿಯಿಲ್ಲದಿದ್ದರೆ ಈಗಿನ ವರ್ಕಿಂಗ್ ಕಮಿಟಿಯ ಮೇಲೆ ಅವಿಶ್ವಾಸ ನಿರ್ಣಯ ಪಾಸುಮಾಡಿ, ನೀವು ಅಧಿಕಾರಕ್ಕೆ ಬಂದು, ಹೇಗೆ ನಡೆಯಬೇಕೋ ಹಾಗೆ ನಡೆಯಿರಿ”.

ಇದೇ ಸಮಯದಲ್ಲಿ ಕ್ರಾಂತಿಕಾರ ಭಗತ್ ಸಿಂಗ್ ಮತ್ತು ಸುಖದೇವರನ್ನು ಗಲ್ಲಿಗೆ ಹಾಕಿದ್ದು ದೇಶದಲ್ಲಿ ಅಸಮಾಧಾನವುಂಟುಮಾಡಿತು. ಗಾಂಧೀಜಿ ವೈಸರಾಯಿಗೆ “ಅವರನ್ನು ಈಗ ಗಲ್ಲಿಗೆ ಹಾಕುವುದು ಬೇಡ” ಎಂಬುದಾಗಿ ಹೇಳಿದರು. ಆದರೆ ಗಾಂಧೀಜಿಯ ಮಾತನ್ನು ವೈಸರಾಯರು ಕೇಳಲಿಲ್ಲ.

ಗಾಂಧೀಜಿ ದೇಶದಲ್ಲೆಲ್ಲಾ ಸಂಚರಿಸಿ ಈ ಒಪ್ಪಂದದ ವಿಷಯವನ್ನು ಪ್ರಚಾರ ಮಾಡಿದರು. ಅಹಮದಾಬಾದಿನಲ್ಲಿ ಇವರಿಗೆ ಭಾರೀ ಮರ್ಯಾದೆ ನಡೆಯಿತು. ಗಾಂಧೀಜಿ ಬರ್ಡೋಲಿಗೂ ಹೋಗಿ ಅಲ್ಲಿ ಕಾನೂನು ಭಂಗದಲ್ಲಿ ಭಾಗವಹಿಸಿದ್ದ ರೈತರನ್ನೆಲ್ಲಾ ಅಭಿನಂದಿಸಿದರು. ಗಾಂಧೀಜಿಗೆ ಬೊಂಬಾಯಿನಲ್ಲಿ ಬಾರೀ ಸ್ವಾಗತ ನಡೆಯಿತು. ಕೆಲವು ಉಗ್ರಗಾಮಿಗಳಾದ ಶ್ರಮಜೀವಿಗಳು ಕೆಂಪು ಬಾವುಟವನ್ನು ಪ್ರದರ್ಶಿಸಿದರು. ಗಾಂಧೀಜಿ ತಾವೂ ಎಂದು ಶ್ರಮಜೀವಿಗಳ ಹಿತವನ್ನು ಬಿಟ್ಟು ಕೊಟ್ಟಿಲ್ಲ ಎಂಬ ಉತ್ತರವಿತ್ತರು.

ಗಾಂಧೀಜಿ “ನವಜೀವನ” ಮತ್ತು “ಯಂಗ್ ಇಂಡಿಯಾ” ಪತ್ರಿಕೆಗಳನ್ನು ಪುನಃ ಪ್ರಕಟಿಸಲಾರಂಭಿಸಿದರು. ಈ ಎರಡನೇ ಸತ್ಯಾಗ್ರಹದಲ್ಲಿ ಜೈಲಿಗೆ ಹೋದವರು ಒಂದು ಲಕ್ಷ. ಇದರಲ್ಲಿ ೧೨,೦೦೦ ಮುಸ್ಲಿಮರಿದ್ದರು.

* * *