೧೯೩೫ನೇ ಏಪ್ರಿಲ್ ೧ನೇ ತಾರೀಖು ಹೋರ್ – ವಿಲ್ಲಿಂಗ್‌ಡನ್ ಸುಧಾರಣೆಗಳು ಜಾರಿಗೆ ಬಂದವು. ಇವುಗಳಿಂದ ಕಾಂಗ್ರೆಸ್‌ಗೇನೂ ಉತ್ಸಾಹ ಉಂಟಾಗಲಿಲ್ಲ. ಪ್ರಾಂತಗಳಲ್ಲಿ ಚುನಾಯಿತ ಮಂತ್ರಿಗಳಿಗೆ ಅಧಿಕಾರವಿತ್ತು. ಈ ಅಧಿಕಾರ ಗೌರ್ನರರ ವಿಶೇಷ ಅಧಿಕಾರದಿಂದ ಕುಂಠಿತವಾಗಿತ್ತು. ಕೆಲವು ವಿಶೇಷ ಸಂದರ್ಭಗಳಲ್ಲಿ ಗೌರ್ನರು ರಾಜ್ಯದ ಮಂತ್ರಿಮಂಡಲದ ತೀರ್ಮಾನಗಳನ್ನು ಬದಲಾಯಿಸಬಹುದಾಗಿತ್ತು. ಇದನ್ನು ಗಾಂಧೀಜಿ ಬಹುಬೇಗ ಕಂಡುಹಿಡಿದರು.

ಕೇಂದ್ರದ ಫೆಡರಲ್ ಸರ್ಕಾರದ ಸ್ಥಾಪನೆ ಕೂಡಲೆ ಆಗುವ ಹಾಗಿರಲಿಲ್ಲ. ಅದಕ್ಕೆ ದೇಶೀಯ ರಾಜರ ಪ್ರತಿನಿಧಿಗಳು ಬರಬೇಕಾಗಿತ್ತು. ದೇಶೀಯ ರಾಜರು ಫೆಡರೇಷನ್ ಜಾರಿಗೆ ಅವರಿಗಿರುವ ಅಧಿಕಾರಗಳು ಎಲ್ಲಿ ಕುಂಠಿತವಾಗುತ್ತವೋ ಎಂದು ಹೆದರಿದ್ದರು.

ದೇಶೀಯ ರಾಜ್ಯ ಪ್ರಜೆಗಳು ಜವಾಬ್ದಾರಿ ಸರ್ಕಾರಕ್ಕಾಗಿಯೂ, ಮಾನವ ಮೂಲಭೂತ ಹಕ್ಕುಗಳಿಗಾಗಿಯೂ ಹೊಡೆದಾಡುತ್ತಿದ್ದರು. ದೇಶೀಯ ರಾಜ್ಯಗಳ ಒಳಗೂ ಹೊರಗೂ ಸಮ್ಮೇಳನಗಳನ್ನು ನಡೆಸುತ್ತಿದ್ದರು. ಈ ಹೊಸ ಸುಧಾರಣೆಗಳಿಂದ ರಾಜರುಗಳೇ ಪ್ರಿನ್ಸಸ್ ಛೇಂಬರ್ ಎಂಬ ಸಂಸ್ಥೆಯನ್ನು ಸ್ಥಾಪಿಸಿಕೊಳ್ಳಲು ಅಧಿಕಾರವಿತ್ತು. ಇಂಥ ಸಂಸ್ಥೆಯನ್ನು ಅವರು ಸ್ಥಾಪಿಸಿದರು. ಇನ್ನು ಮುಂದೆ ವೈಸರಾಯರು ದೇಶೀಯ ರಾಜರುಗಳಿಗೆ ಮಾತ್ರ ವೈಸರಾಯರು. ಬ್ರಿಟಿಷ್ ಇಂಡಿಯಾಕ್ಕೆ ಅವರು ಗವರ್ನರ್ – ಜನರಲ್. ವೈಸರಾಯರ ಕೈಕೆಳಗೆ ಪೊಲಿಟಿಕಲ್ ಡಿಪಾರ್ಟ್‌ಮೆಂಟ್ ಕೆಲಸ ಮಾಡಿ, ದೇಶೀಯ ರಾಜರುಗಳ ಮೇಲೆ ಹತೋಟಿಯಿಟ್ಟುಕೊಂಡಿತ್ತು. ಗೌರ್ನರ್ – ಜನರಲ್ ಕೌನ್ಸಿಲಿನಲ್ಲಿ ಬ್ರಿಟಿಷ್ ಇಂಡಿಯಾದ ಪ್ರತಿನಿಧಿಗಳು ಮಾತ್ರ ಇರುತ್ತಿದ್ದರು.

ಹೊಸ ಕಾನೂನು ಜಾರಿಗೆ ಬಂದ ಮೇಲೆ ಫೆಡರಲ್ ಕೋರ್ಟ್‌ಸ್ಥಾಪನೆಯಾಯಿತು. ರಿಸರ್ವ ಬ್ಯಾಂಕೂ ಸ್ಥಾಪನೆಯಾಯಿತು.

ಇತರ ರಾಜಕೀಯ ಪಾರ್ಟಿಗಳು ನೂತನ ಸುಧಾರಣೆಗಳನ್ನು ಆಧಾರಿಸಿ, ಹೊಸ ಶಾಸನಸಭೆಗಳ ಚುನಾವಣೆಯಲ್ಲಿ ಭಾಗವಹಿಸಲು ಸಿದ್ಧವಾದವು. ಕಾಂಗ್ರೆಸು ಕೂಡ ಹೊಸ ಚುನಾವಣೆಗಳಲ್ಲಿ ಭಾಗವಹಿಸಲು ಸಿದ್ಧವಾಯಿತು. ಹಿಂದೆ ಕೌನ್ಸಿಲ್ ಪ್ರವೇಶಕ್ಕೆ ವಿರುದ್ಧರಾಗಿದ್ದ ಸಿ. ರಾಜಗೋಪಾಲಾಚಾರಿ ಮುಂತಾದವರು ಶಾಸನ ಸಭೆಗಳನ್ನು ಕಾಂಗ್ರೆಸ್ ಪಾರ್ಟಿ ಪ್ರವೇಶಿಸಬೇಕೆಂದುವಾದಿಸಿದರು. ಈಗ ಪ್ರತಿನಿಧಿಗಳನ್ನು ಚುನಾಯಿಸುವ ಅಧಿಕಾರ ವಿಸ್ತಾರವಾಗಿತ್ತು. ಸುಮಾರು ಒಂಭತ್ತು ಕೋಟಿ ಜನ ಓಟುದಾರರಿದ್ದರು. ಅವರನ್ನು ಉಪೇಕ್ಷಿಸುವುದು ಒಳ್ಳೆಯದಲ್ಲ; ಅವರ ಸಹಕಾರ ಪಡೆದು, ಕಾಂಗ್ರೆಸ್ ಚುನಾವಣೆಗಳಲ್ಲಿ ಭಾಗವಹಿಸಿ, ಪ್ರಾಂತಗಳಲ್ಲಿ ಮೆಜಾರಿಟಿ ಸಂಪಾದಿಸಬೇಕೆಂದು ರಾಜಾಜಿ ವಾದಿಸಿದರು.

ಹಿಂದೂಗಳು ಮತ್ತು ಮುಸ್ಲಿಮರು ಐಕಮತ್ಯದಿಂದ ಕೆಲಸ ಮಾಡಬೇಕೆಂಬ ಆಸೆಯಿತ್ತು. ಆದರೆ ಮುಸ್ಲಿಂ ಲೀಗು ಇದಕ್ಕೆ ವಿರುದ್ಧವಾಗಿ, ಪಾರ್ಟಿಯನ್ನು ಕಟ್ಟಿತು. ಕಾಂಗ್ರೆಸು ಶಾಸನಸಭೆಗಳನ್ನು ಪ್ರವೇಶಿಸಿ, ಪ್ರತಿಯೊಂದು ಹೆಜ್ಜೆಯಲ್ಲೂ ಕೇಂದ್ರ ಸರ್ಕಾರವನ್ನು ತಡೆಗಟ್ಟಬೇಕೆಂಬ ಯೋಚನೆಯಿತ್ತು.

ಕಾಂಗ್ರೆಸ್ ಪಾರ್ಲಿಮೆಂಟರಿ ಬೋರ್ಡಿಗೆ ಸರ್‌ದಾರ್ ವಲ್ಲಭಭಾಯಿ ಅಧ್ಯಕ್ಷರು. ಇವರು ಪ್ರತಿಯೊಂದು ಪ್ರಾಂತದಿಂದಲೂ ಕಾಂಗ್ರೆಸ್ ಹುರಿಯಾಳುಗಳನ್ನು ಆರಿಸಿ, ಚುನಾವಣೆಗೆ ನಿಲ್ಲಿಸಿದರು. ಜವಹರಲಾಲ್ ನೆಹರೂ ೧೯೩೬ರಲ್ಲಿ ಬಹಳ ಹುರುಪಿನಿಂದ ಇಂಡಿಯಾದಲ್ಲೆಲ್ಲಾ ಸಂಚರಿಸಿ, ಓಟರು ಕಾಂಗ್ರೆಸಿಗೇ ಓಟು ಕೊಡಬೇಕೆಂದು ಪ್ರಚಾರ ಮಾಡಿದರು. ಚುನಾವಣೆ ನಡೆಯಿತು. ಕಾಂಗ್ರೆಸು ಮದರಾಸ್, ಬೊಂಬಾಯಿ, ಮಧ್ಯ ಪ್ರಾಂತ, ಬಿಹಾರ್, ಸಂಯುಕ್ತ ಪ್ರಾಂತ ಇವುಗಳಲ್ಲಿ ಮೆಜಾರಿಟಿ ಪಡೆಯಿತು. ಸಿಂಧ್, ಅಸ್ಸಾಮ್, ಬಂಗಾಳ, ಪಂಜಾಬ್ ಮತ್ತು ಸರಹದ್ದು ಪ್ರಾಂತಗಳಲ್ಲಿ ಕಾಂಗ್ರೆಸ್ ಪಾರ್ಟಿಗೆ ಮೆಜಾರಿಟಿ ದೊರೆಯಿಲಿಲ್ಲ.

ಮೆಜಾರಿಟಿ ದೊರೆತ ಆರು ಪ್ರಾಂತಗಳಲ್ಲಿ ಏನು ಮಾಡಬೇಕು ಎಂಬ ಜಿಜ್ಞಾಸೆ ಬಂದಿತು. ಗಾಂಧೀಜಿ ಅಧಿಕಾರ ಸ್ವೀಕಾರ ಮಾಡಿ ಮಂತ್ರಿಮಂಡಲ ರಚಿಸಬೇಕು ಮತ್ತು ಜನೋಪಯುಕ್ತವಾದ ಕೆಲಸಗಳನ್ನು ಮಾಡಬೇಕು ಎಂದು ಸಲಹೆ ಕೊಟ್ಟರು. ಆದರೆ ಅಧಿಕಾರ ಸ್ವೀಕರಿಸಲು ಒಂದು ಆತಂಕವಿತ್ತು. ಅದು ಯಾವುದೆಂದರೆ, ಗೌರ್ನರ್‌ರ ವಿಶೇಷಾಧಿಕಾರ. ಇದರ ವಿಷಯದಲ್ಲಿಯೂ ಗಾಂಧೀಜಿ ವೈಸ್‌ರಾಯ್‌ರೊಡನೆ ವಾದಿಸಿ, ಗೌರ್ನರು ತಮ್ಮ ವಿಶೇಷಾಧಿಕಾರವನ್ನು ಉಪಯೋಗಿಸುವುದಿಲ್ಲ ಎಂಬ ವಾಗ್ಧಾನ ತೆಗೆದುಕೊಂಡರು. ಇದರಿಂದ ಮಂತ್ರಿಮಂಡಲಗಳನ್ನು ರಚಿಸಲು ಕಾಂಗ್ರೆಸಿಗೆ ಸುಲಭವಾಯಿತು. ಮದರಾಸಿನಲ್ಲಿ ಸಿ. ರಾಜಗೋಪಾಲಾಚಾರಿ ಮುಖ್ಯ ಮಂತ್ರಿಯಾದರು. ಬೊಂಬಾಯಿ ಪ್ರಾಂತ್ಯಕ್ಕೆ ಬಿ.ಜಿ.ಖೇರ್ ಮುಖ್ಯಮಂತ್ರಿಯಾದರು.  ಇತರ ೪ ಪ್ರಾಂತ್ಯಗಳಲ್ಲಿಯೂ ಕಾಂಗ್ರೆಸಿಗರೇ ಮುಖ್ಯ ಮಂತ್ರಿಗಳಾದರು. ಸರಹದ್ದಿನ ಪ್ರಾಂತ ಮತ್ತು ಅಸ್ಸಾಂನಲ್ಲಿ ಕಾಂಗ್ರೆಸಿನ ಮುಖ್ಯ ಮಂತ್ರಿಯಲ್ಲದಿದ್ದರೂ, ಈ ಎರಡು ಪ್ರಾಂತಗಳೂ ಕಾಂಗ್ರೆಸಿನ ಪ್ರಭಾವಕ್ಕೆ ಒಳಗಾಗಿದ್ದವು. ಪಂಜಾಬ್, ಸಿಂಧ್, ಮತ್ತು ಬಂಗಾಳದಲ್ಲಿ ಮುಸ್ಲಿಂ ಮುಖ್ಯಮಂತ್ರಿಗಳಿದ್ದರೂ, ಅವರಾರೂ ಮುಸ್ಲಿಂ ಲೀಗಿಗೆ ಸೇರಿದವರಲ್ಲ. ಅದ್ದರಿಂದ ಜಿನ್ಹಾರ ಮುಸ್ಲಿಂ ಲೀಗಿಗೆ ಬಹಳ ಕೋಪ ಬಂದಿತು. ಅವರು ಕಾಂಗ್ರೆಸಿಗೆ ವಿರುದ್ಧವಾಗಿ ಪ್ರಚಾರ ಮಾಡುತ್ತ ಬಂದರು. ಕಾಂಗ್ರೆಸ್ ಸಂಸ್ಥೆ ಹಿಂದೂ ಸಂಸ್ಥೆ; ಅದೂ ಹಿಂದೂಗಳ ಪ್ರತಿನಿಧಿ; ಅದು ರಾಷ್ಟ್ರೀಯ ಸಂಸ್ಥೆಯಲ್ಲ; ಮುಸ್ಲಿಮರಿಗೆ ಮುಸ್ಲಿಂ ಮಂಡಲಗಳಿರುವ ಪ್ರಾಂತಗಳಲ್ಲಿ ಮುಸ್ಲಿಮರಿಗೆ ಬಹಳ ಹಿಂಸೆಯಾಗುತ್ತದೆ ಎಂದು ಅಪಪ್ರಚಾರ ಮಾಡಿದರು. ಮುಸ್ಲಿಂ ಲೀಗಿನ ಸಮ್ಮತಿ ಇಲ್ಲದೆ ಕೇಂದ್ರದಲ್ಲಿ ಜವಾಬ್ದಾರಿ ಕೊಡಕೂಡದು, ಫೆಡರಲ್ ಭಾಗವನ್ನು ಸ್ಥಾಪಿಸಕೂಡದು ಎಂದು ಸರ್ಕಾರಕ್ಕೆ ನಿರ್ಣಯ ಕಳುಹಿಸಿದರು. ಗಾಂಧೀಜಿ ಜವಹರ್‌ಲಾಲ್ ನೆಹರು, ರಾಜೇನ್ ಬಾಬು ಇವರು ಜಿನ್ಹಾರನ್ನು ಕಂಡು ರಾಜಕೀಯದಲ್ಲಿ ಹಿಂದೂ – ಮುಸ್ಲಿಂ ಒಗ್ಗಟ್ಟಿಗೆ ಪ್ರಯತ್ನ ಮಾಡಿದರು; ಸಫಲವಾಗಲಿಲ್ಲ.

ಕಾಂಗ್ರೆಸಿನವರು ಮಂತ್ರಿಮಂಡಲಗಳ ಮೂಲಕ ಜನಸೇವೆಯನ್ನು ಮಾಡಿದರು. ಮೊಟ್ಟ ಮೊದಲನೆಯದಾಗಿ, ಮದ್ಯ ತಯಾರಿಕೆ ಮತ್ತು ವ್ಯಾಪಾರವನ್ನು ವಿರೋಧಿಸಿದರು. ವಿದ್ಯಾಭ್ಯಾಸದಲ್ಲಿ ಸುಧಾರಣೆ ತಂದರು. ಅನೇಕ ಕಡೆ ಮೂಲಶಿಕ್ಷಣವನ್ನು ಜಾರಿಗೆ ತಂದರು. ಗ್ರಾಮ ಕೈಗಾರಿಕೆಗಳನ್ನೂ ಸ್ಥಳೀಯ ಕೈಗಾರಿಕೆಗಳನ್ನೂ ಅಭಿವೃದ್ಧಿಗೊಳಿಸಿದರು. ಜಮೀನದಾರಿ ಪದ್ಧತಿಯನ್ನು ತಪ್ಪಿಸಿ, ರೈತರಿಗೆ ಅನುಕೂಲ ಮಾಡಲು ಪ್ರಯತ್ನಿಸಿದರು. ಗಾಂಧೀಝಿಯ ರಚನಾತ್ಮಕ ಕಾರ್ಯಕ್ರಮವನ್ನು ಜಾರಿಗೆ ತರಲು ಯತ್ನಿಸಿದರು. ಕಾಂಗ್ರೆಸ್ ಮಂತ್ರಿಗಳು ಪ್ರಾರಂಭದಲ್ಲಿ ತಿಂಗಳಿಗೆ ೫೦೦ ರೂಪಾಯಿ ಸಂಬಳವನ್ನು ತೆಗೆದುಕೊಂಡರು. ಒಟ್ಟಿನಲ್ಲಿ, ಬಹಳ ದೇಶಭಕ್ತಿಯಿಂದ ಕೆಲಸ ಮಾಡಿದರು. ಪ್ರಾಂತಗಳಲ್ಲಿ ಸರ್ಕಾರ ಬಹಳ ಮಟ್ಟಿಗೆ ಜನಪ್ರಿಯವಾಗುತ್ತ ಬಂದಿತು.

ಪಕ್ಕದ ದೇಶೀಯ ಸಂಸ್ಥಾನಗಳಲ್ಲೂ ಪ್ರಜಾ ಮುಖಂಡರು ಜವಾಬ್ದಾರಿ ಸರ್ಕಾರ ಸ್ಥಾಪನೆಗಾಗಿ ಚಳುವಳಲಿ ನಡೆಸಲು ಆರಂಭಿಸಿದರು.

ಕಾಂಗ್ರೆಸ್ ಸಂಸ್ಥೆ ವರ್ಕಿಂಗ್ ಕಮಿಟಿ, ಆಲ್‌ಇಂಡಿಯಾ ಕಾಂಗ್ರೆಸ್ ಕಮಿಟಿಗಳ ಮೂಲಕ ದೇಶದ ಸಮ್ಯೆಯನ್ನು ಆಗಾಗ ಪರಿಶೀಲಿಸುತ್ತಿತ್ತು. ವಾರ್ಷಿಕ ಮಹಾಧೀವೇಶನಗಳನ್ನೂ ನಡೆಸುತ್ತಿತ್ತು. ೧೯೩೫ – ೩೬ರಲ್ಲಿ ಜವಹರಲಾಲರು ಅಧ್ಯಕ್ಷರಾಗಿದ್ದರು.

ಜವಹರಲಾಲ್ ನೆಹರೂ ಈಗ ತಮ್ಮ ಅಭಿಪ್ರಾಯಗಳಲ್ಲಿ ಬಹಳ ಬದಲಾವಣೆ ಹೊಂದಿದ್ದರು. ಗಾಂಧೀಜಿಯವರನ್ನೇ ಹಿಂಬಾಲಿಸುತ್ತಿದ್ದಾಗ್ಯೂ, ತಮ್ಮ ಸ್ವಂತ ಅಭಿಪ್ರಾಯಗಳನ್ನು ತಿಳಿಸುತ್ತಿದ್ದರು, ಗಾಂಧೀಜಿಯ ಕಠಿಣವಾದ ಜೀವನ ನಿಯಮಗಳು ನೆಹರೂವಿಗೆ ಸರಿಬೀಳುತ್ತಿರಲಿಲ್ಲ. ಹರಿಜನರಿಗೋಸ್ಕರ ಗಾಂಧೀಜಿ ಉಪವಾಸಾದಿಗಳನ್ನು ಮಾಡುವುದನ್ನು ಅವರು ಒಪ್ಪಲಿಲ್ಲ. ಕಾಂಗ್ರೆಸು ರಾಜಕೀಯ ಸಂಸ್ಥೆ; ಇದರಲ್ಲಿ ರಾಜಕೀಯ ವಿಷಯಗಳಿಗೇ ಪ್ರಾಧಾನ್ಯತೆ ಇರಬೇಕು; ರಚನಾತ್ಮಕ ಕಾರ್ಯಗಳಿಗೆ ಅಷ್ಟು ಪ್ರಧಾನ್ಯತೆ ಇರಬಾರದು ಎಂಬುದು ನೆಹರು ಮತ. ಕಾಂಗ್ರೆಸಿನ ಮನೋಭಾವ ಕ್ರಾಂತಿಕಾರಕವಾಗಿರಬೇಕು; ಸುಧಾರಣೆಗಳ ಮಂದ ಸ್ವಭಾವವಿರಬಾರದು ಎಂಬುದು ಅವರ ಅಭಿಪ್ರಾಯ. ಹೀಗಿದ್ದಾಗ್ಯೂ ನೆಹರು ಚುನಾವಣೆ ಸಮಯದಲ್ಲಿ ದೇಶದಲ್ಲೆಲ್ಲಾ ಪ್ರಚಾರ ಮಾಡಿ ಕಾಂಗ್ರೆಸಿಗೆ ಜಯ ಗಳಿಸಿದರು. ದುರದೃಷ್ಟದಿಂದ ೧೯೩೫ನೇ ಇಸವಿಯಲ್ಲಿ ಅವರ ಪತ್ನಿ ಕಮಲಾ ನೆಹರು ಅಸ್ವಸ್ಥತೆಯಿಂದ ಕಾಲವಾದರು. ಇದನ್ನು ಮನಸ್ಸಿಗೆ ಹೆಚ್ಚಾಗಿ ತೆಗೆದುಕೊಳ್ಳದೆ, ಕಾಂಗ್ರೆಸ್ ಕೆಲಗಳಲ್ಲಿ ನೆಹರು ಧುಮುಕಿದ್ದರು. ಇದೇ ಸಮಯದಲ್ಲಿ ನೆಹರೂರವರ ಆತ್ಮಕಥೆ ಪ್ರಕಟವಾಯಿತು. ಆದರಿಂದಲೂ ನೆಹರೂರವರ ಕೀರ್ತಿ ಹೆಚ್ಚಿತು. ನೆಹರು ಇಂಗ್ಲೆಂಡ್, ಸ್ಪೇನ್ ಮುಂತಾದ ದೇಶಗಳಲ್ಲಿ ಸಂಚಾರ ಮಾಡಿ, ಹೆಚ್ಚು ಹೆಚ್ಚು ವಿಷಯಗಳನ್ನು ಗ್ರಹಿಸಿದರು.

ಸೋಷಲಿಸ್ಟ್ ಪಾರ್ಟಿಯೂ ಕ್ರಮೇಣ ಅಭಿವೃದ್ಧಿಗೆ ಬಂದಿತು. ಜಯ ಪ್ರಕಾಶ ನಾರಾಯಣ, ಆಚಾರ್ಯ ನರೇಂದ್ರ ದೇವ್, ಅಶೋಕ ಮೆಹತ ರಾಮ ಮನೋಹರ್ ಲೋಹಿಯಾ ಮುಂತಾದವರು ಸೋಷಲಿಸ್ಟ್ ಪಾರ್ಟಿಯಾಧಾರ ಸ್ಥಂಭಗಳಾಗಿದ್ದರು. ಸುಭಾಷ್ ಚಂದ್ರ ಬೋಸರು ೧೯೩೮ ಮತ್ತು ೧೯೩೯ರಲ್ಲಿ ಕಾಂಗ್ರೆಸ್ ಮಹಾಧೀವೇಶನದ ಅಧ್ಯಕ್ಷರಾದರು. ಆದರೆ ಅವರಿಗೆ ಕಾಂಗ್ರೆಸಿನ ಹಳೇ ಮುಖಂಡರ ಬೆಂಬಲ ದೊರೆಯದೆ, ಅವರು ಕಾಂಗ್ರೆಸಿಗೆ ರಾಜೀನಾಮೆ ಕೊಟ್ಟು ಫಾರ್‌ವರ್ಡ್ ಬ್ಲಾಕ್ ಎಂಬ ಹೊಸ ಪಾರ್ಟಿಯನ್ನು ಆರಂಭಿಸಿದರು. ಸುಭಾಷ್ ಬೋಸರು ಗಾಂಧೀಜಿಯ ಶಿಷ್ಯತ್ವವನ್ನು ಒಪ್ಪಿ ಕೊಂಡವರಲ್ಲ. ಗಾಂಧೀಜಿ ರಾಜಕೀಯದಲ್ಲಿ ಬಹಳ ತಪ್ಪುಗಳನ್ನು ಮಾಡಿದ್ದಾರೆ; ಅವರು ರಾಜಕೀಯಕ್ಕೆ ಅರ್ಹರಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು. ಅಹಿಂಸಾ ರಾಜಕೀಯದಲ್ಲಿ ಅವರಿಗೆ ವಿಶ್ವಾಸವಿರಲಿಲ್ಲ.

೧೯೩೯ರ ಆದಿ ಭಾಗದಲ್ಲಿ ಗಾಂಧೀಜಿ ರಾಜಕೋಟೆ ಪ್ರಕರಣದಲ್ಲಿ ಉಪವಾಸ ಮಾಡಿದರು. ಕಾರಣ, ರಾಜಕೋಟೆ ದಿವಾನರಾದ ವೀರವಾಲಾ ಎಂಬುವರು ರಾಜಕೀಯ ಸುಧಾರಣೆಗಳನ್ನು ಕೊಡುತ್ತೇವೆಂದು ಹೇಳಿ, ಮಾತಿಗೆ ತಪ್ಪಿದರು ಎಂಬುದೇ, ವೈಸರಾಯರು ಫೆಡರಲ್ ಕೋರ್ಟ್ ಚೀಫ್ ಜಸ್ಟಿಸರಿಗೆ ಈ ವಿಷಯವನ್ನು ಪಂಚಾಯಿತಿಗೆ ಹಾಕುವುದಾಗಿ ತಿಳಿಸಿದ ಮೇಲೆ, ಗಾಂಧೀಜಿ ಉಪವಾಸ ನಿಲ್ಲಿಸಿದರು. ಚೀಫ್ ಜಸ್ಟಿಸರು ಗಾಂಧೀಜಿಯ ಕಡೆಗೇ ತೀರ್ಪಿತ್ತರು. ಕಡೆಗೆ ಗಾಂಧೀಜಿಯ ಮನಸ್ಸಿನಲ್ಲಿ ಏನಾಯಿತೋ ಏನೋ ತಾವು ವೀರವಾಲಾರ ವಿರೋಧವಾಗಿ ಉಪವಾಸ ಮಾಡಿ ಬಲೋದ್ಬಂದಿ ಮಾಡಿದ್ದು ಸರಿಯಲ್ಲವೆಂದು ಪಶ್ಚಾತ್ತಾಪಪಟ್ಟರು.

ಕಾಂಗ್ರೆಸ್ ಸಂಸ್ಥೆ ದೇಶೀಯ ಸಂಸ್ಥಾನಗಳ ವಿದ್ಯಮಾನಗಳಲ್ಲಿ ಪ್ರವೇಶ ಮಾಡುತ್ತಿರಲಿಲ್ಲ. ಆದರೆ ಅಲ್ಲಿನ ಮುಖಂಡರು ವಿಮೋಚನೆಗಾಗಿ ಕಾಂಗ್ರೆಸಿನ ಸಹಾಯ ಕೋರಿದರು. ಮೈಸೂರಿನಲ್ಲಿ ೧೯೩೭ರಲ್ಲಿ ಆರಂಭವಾದ ಚಳುವಳಿಗಾರರಿಗೆ ಬೆಂಬಲ ದೊರೆಯಿತು. ಗಾಂಧೀಜಿ ಇದು ಸರಿಯಲ್ಲ ಎಂದು ಮೊದಲು ಹೇಳುತ್ತಿದ್ದರು. ಅನಂತರ ಕಾಂಗ್ರೆಸ್ ಸಂಸ್ಥೆ ನೇರವಾಗಿ ಸಂಸ್ಥಾನಗಳಲ್ಲಿ ಪ್ರವೇಶಿಸಿ, ಚಳುವಳಿ ನಡೆಸಲು ಸಾಧ್ಯವಿಲ್ಲ; ಆದರೆ ಸಂಸ್ಥಾನ ಪ್ರಜೆಗಳು ತಾವೇ ಸಂಸ್ಥೆಗಳನ್ನು ರಚಿಸಿಕೊಂಡು ಚಳುವಳಿ ನಡೆಸಲು; ಬ್ರಿಟಿಷ್ ಇಂಡಿಯಾ ಕಾಂಗ್ರೆಸ್ ಮುಖಂಡರು ವೈಯಕ್ತಿವಾಗಿ ಸಹಾಯ ಮಾಡಲಿ ಎಂದು ತಿಳಿಸಿದರು. ಇಂಡಿಯಾವೆಲ್ಲಾ ಒಂದೇ; ರಾಜರು ಪ್ರಜೆಗಳ ಇಂಗಿತವನ್ನರಿತು ಸುಧಾರಣೆಗಳನ್ನು ಕೊಡಬೇಕು ಎಂದು ಸೂಚಿಸಿದರು. ಬ್ರಿಟಿಷ್ ಇಂಡಿಯಾ ಸ್ವತಂತ್ರವಾದರೆ ದೇಶೀ ಪ್ರಜೆಗಳೂ ಸ್ವತಂತ್ರರಾಗಲೇಬೇಕು ಎಂದರು.

ದೇಶೀಯ ರಾಜರು ಕಾಲ ಬದಲಾಗುತ್ತಿದ್ದುದನ್ನು ತಿಳಿದು, ತಮ್ಮ ಸಭೆಗಳನ್ನು ಮಾಡಿಕೊಂಡು, ಪರ್ಯಾಲೋಚನೆ ಮಾಡತೊಡಗಿದರು. ಬ್ರಿಟಿಷ್ ಸರ್ಕಾರದೊಡನೆ ತಾವು ಮಾಡಿಕೊಂಡಿದ್ದ ಕೌಲು ಕರಾರುಗಳ ವಿಷಯವನ್ನೂ ಪರ್ಯಾಲೋಚಿಸಿದರು.

೧೯೩೯ನೇ ಸೆಪ್ಟೆಂಬರಿನಲ್ಲಿ ಯೂರೋಪಿನಲ್ಲಿ ಎರಡನೇ ಘೋರ ಯುದ್ಧ ಆರಂಭವಾಯಿತು. ಜರ್ಮನಿಯಲ್ಲಿ ಹಿಟ್ಲರನು ಪ್ರಾಬಲ್ಯಕ್ಕೆ ಬಂದ ವಿಷಯವನ್ನು ಇಲ್ಲಿ ಪ್ರಸ್ತಾಪಿಸಬೇಕಾಗಿಲ್ಲ. ಇಷ್ಟು ಹೇಳಬಹುದು. ಮೊದಲನೇ ಯುದ್ಧ ಮುಗಿದ ಮೇಲೆ ಜರ್ಮನಿಯನ್ನು ಅದುಮಲು ಮಿತ್ರ ರಾಷ್ಟ್ರಗಳು ಪ್ರಯತ್ನಿಸಿದವು. ಅದರ ಪ್ರತಿಕ್ರಿಯೆಯಾಗಿ ಹಿಟ್ಲರನು ಎದ್ದು, ಇಡೀ ಯುರೋಪನ್ನೇ ಆಕ್ರಮಿಸಲು ತೊಡಗಿದನು. ಕಡೆಗೆ ಅಮೆರಿಕಾ ಯುದ್ಧವನ್ನು ಪ್ರವೇಶಿಸಿ, ಯುದ್ಧ ಇಡೀ ಪ್ರಪಂಚವನ್ನೇ ವ್ಯಾಪಿಸಿ, ಜಪಾನ್ ಕೂಡ ಬ್ರಿಟಿಷರ ವಿರುದ್ಧ ಕೈ ಎತ್ತಿತ್ತು. ಈ ಯುದ್ಧ ೧೯೪೫ರಲ್ಲಿ ಕೊನೆಗೊಂಡಿತು. ಅಷ್ಟರಲ್ಲಿ ಪ್ರಪಂಚವೇ ಬದಲಾವಣೆ ಹೊಂದಿತು.

೧೯೩೯ರಲ್ಲಿ ಎರಡನೇ ಘೋರ ಯುದ್ಧ ಪ್ರಾರಂಭವಾದ ಮೇಲೆ ಅದು ಮುಗಿಯುವವರಿಗೆ ಇಂಡಿಯಾದಲ್ಲಿ ಅನೇಕ ಐತಿಹಾಸಿಕ ಘಟನೆಗಳು ನಡೆದವು.

“ಇಂಡಿಯಾ ಸರ್ಕಾರ ಬ್ರಿಟಿಷ್ ಸರ್ಕಾರಕ್ಕೆ ಅಧೀನವಾದ್ದರಿಂದ, ಇಂಡಿಯಾ ಯುದ್ಧಕ್ಕೆ ಸೇರಿದೆ. ಭಾರತೀಯರು ಬ್ರಿಟಿಷರಿಗೆ ಜಯವಾಗಲು ಎಲ್ಲಾ ಧನ, ಜನ, ಸಹಾಯ ಮಾಡಬೇಕು” ಎಂದು ಸರ್ಕಾರ ತಿಳಿಸಿತು. ಹಿಂದಿನ ಯುದ್ಧದ ಕಾಲದಲ್ಲಿ ಭಾರತ ಈಗಿನಷ್ಟು ಪ್ರಬುದ್ಧವಾಗಿರಲಿಲ್ಲ. ಆದ್ದರಿಂದ ಆಗ ಸುಮ್ಮನಿತ್ತು. ಈಗ ಕಾಂಗ್ರೆಸ್ ಚಳುವಳಿಯ ಪ್ರಭಾವದಿಂದ ಇಂಡಿಯಾ ಸುಮ್ಮನಿರಲು ಸಾಧ್ಯವಿಲ್ಲ. ಇಂಡಿಯಾವನ್ನು ಅದರ ಅನುಮತಿಯಿಲ್ಲದೆ ಯುದ್ಧಕ್ಕೆ ಎಳೆದ ಪ್ರಶ್ನೆ ಉದ್ಭವಿಸಿತು.

ಕಾಂಗ್ರೆಸು ಪೂರ್ಣ ಸ್ವರಾಜ್ಯ ಹೊಂದಿದ್ದರೆ ಈ ಯುದ್ಧದಲ್ಲಿ ಭಾಗಿಯಾಗುತ್ತಿತ್ತೆ ಎಂಬ ಪ್ರಶ್ನೆ ಸಹಜವಾಗಿ ಎದ್ದಿತು. ಉಳಿದ ಪಾರ್ಟಿಗಳ ನೀತಿ ಏನೇ ಇರಲಿ, ಕಾಂಗ್ರೆಸಿನ ನೀತಿ ಮುಖ್ಯ. ಈಗ ಇದು ಪ್ರಾಂತ್ಯಗಳಲ್ಲಿ ಅಧಿಕಾರ ವಹಿಸಿದೆ. ಕೇಂದ್ರದಲ್ಲಿ ಅಧಿಕಾರ ಪರಕೀಯ ಸರ್ಕಾರದ ಕೈಯಲ್ಲೇ ಇದೆ. ವೈಸರಾಯರು ಒಂದು ಪ್ರಕಟಣೆ ಹೊರಡಿಸಿ, “ಯುದ್ಧ ಮುಗಿಯುವವರಿಗೂ ರಾಜಕೀಯ ಅಭಿವೃದ್ಧಿಗೆ ಅವಕಾಶವಿಲ್ಲ; ಆದ್ದರಿಂದ ಈಗ ಇರುವ ಹಾಗೆಯೇ ಕಾಂಗ್ರೆಸು ಪ್ರಾಂತಗಳಲ್ಲಿ ತನ್ನ ಅಧಿಕಾರವನ್ನು ಮುಂದವರಿಸಿಕೊಂಡು ಹೋಗುವುದು” ಎಂದರು. ರಾಜಗೋಪಾಲಾಚಾರಿ ಇದ್ದ ಅಧಿಕಾರವನ್ನು ಬಿಟ್ಟುಕೊಡಬಾರದು, ಈ ಸಮಯದಲ್ಲಿಯೇ ಬ್ರಿಟಿಷ್ ಸರ್ಕಾರದ ಮೇಲೆ ಒತ್ತಾಯ ತಂದು ಹೆಚ್ಚು ಅಧಿಕಾರ ಸಂಪಾದಿಸಬೇಕು ಎಂದರು. ಆದರೆ ಗಾಂಧೀಜಿಯವರ ಅಭಿಪ್ರಾಯವೇನು? ಅವರದು ಈ ಯುದ್ಧ ಸಮಯದಲ್ಲಿ ನಾವು ಬ್ರಿಟಿಷ್ ಸರ್ಕಾರಕ್ಕೆ ಷರತ್ತುಗಳನ್ನು ಹಾಕಬಾರದು; ಇತರರ ಕಷ್ಟದಿಂದ ನಾವು ಲಾಭ ಪಡೆಯಬಾರದು ಎಂಬ ಉನ್ನತ ನೀತಿ. ಗಾಂಧೀಜಿ ವೈಸರಾಯರನ್ನು ಕಂಡು ಮಾತನಾಡಿದರು.

ಇಂಗ್ಲೆಂಡಿಗೆ ತಮ್ಮ ಸಹಾನುಭೂತಿಯನ್ನು ವ್ಯಕ್ತಪಡಿಸಿದರು. ಕೇವಲ ಮಾನವೀಯ ದೃಷ್ಟಿಯಿಂದ ತಾವು ಲಂಡನ್ನಿನ ಮತ್ತು ವೆಸ್ಟ್‌ಮಿನ್‌ಸ್ಟರ್ ಅಬೇ ಎಂಬ ದೇವ ಮಂದಿರದ ನಾಶವನ್ನು ಸೈರಿಸುವುದಿಲ್ಲವೆಂದು ತಿಳಿಸಿದರು. ವೈಸರಾಯರಿಗೆ ಸಂತೋಷವಾಯಿತು. ಗಾಂಧೀಜಿಯವರಿಂದ ಇನ್ನಾವ ಮಾತು ಬಂದೀತೆಂದು ಹರ್ಷಿತರಾದರು. ಅವರು ಪ್ರತಿಕಾ ವರದಿಗಾರರಿಗೆ ಈ ಮಾತನ್ನು ಹೇಳಿದರು; “ನಾನು ಈಗ ಇಂಡಿಯಾದ ಬಿಡುಗಡೆಯ ವಿಷಯವನ್ನು ಯೋಚಿಸುತ್ತಿಲ್ಲ. ಅದು ಬಂದೇ ಬರುವುದು. ಇಂಗ್ಲೆಂಡು ಮತ್ತು ಫ್ರಾನ್ಸ್ ನಾಶವಾದರೆ ಇನ್ನೇನು ಉಳಿದೀತು?” ಗಾಂಧೀಜಿಯ ಈ ಅಭಿಪ್ರಾಯ ಇಂಗ್ಲೆಂಡು ಫ್ರಾನ್ಸ್ ಮುಂತಾದ ದೇಶಗಳಿಗೆ ಬಹಳ ಸಂತೋಷ ಉಂಟು ಮಾಡಿತು. ಇಂಡಿಯಾದ ಇತರ ರಾಜಕೀಯ ಪಂಗಡಗಳಿಗೂ ಸಂತೋಷ ಉಂಟುಮಾಡಿತು. ಆದರೆ ಕಾಂಗ್ರೆಸ್ ವರ್ಕಿಂಗ್ ಕಮಿಟಿ ತನ್ನ ಅಭಿಪ್ರಾಯವನ್ನು ಪ್ರಕಟಿಸಿತು: ಈಯುದ್ಧ ಕಾಲದಲ್ಲಿ ಇಂಡಿಯಾವೇನೊ ಬ್ರಿಟನ್ನಿಗೆ ಸಹಾಯ ಮಾಡುವುದು, ಆದರೆ ಒಂದು ಷರತ್ತು. ಅದೇನೆಂದರೆ, ಬ್ರಿಟನ್ನು ಇಂಡಿಯಾದ ವಿಷಯದಲ್ಲಿ ತನ್ನ ನೀತಿಯನ್ನು ಸ್ಪಷ್ಟಪಡಿಸಬೇಕು. ಏನೆಂದರೆ ಬ್ರಿಟನ್ನು ಇಂಡಿಯಾದ ಸ್ವಾತಂತ್ರ್ಯವನ್ನು ಒಪ್ಪುತ್ತದೆ ಎಂದು ವರ್ಕಿಂಗ್ ಕಮಿಟಿ ಇನ್ನೂ ಪ್ರಕಟಿಸಿದ್ದೇನೆಂದರೆ, ಎಲ್ಲಾ ದೇಶಗಳಲ್ಲಿಯೂ ನಿಜವಾದ ಪ್ರಜಾಪ್ರಭುತ್ವ ಸ್ಥಾಪನೆಯಾಗಲಿ; ಸಾಮ್ರಾಜ್ಯ ರಾಷ್ಟ್ರಗಳು ಅಧೀನ ರಾಷ್ಟ್ರಗಳ ಮೇಲೆ ಆಧಿಪತ್ಯ ನಡೆಸುವುದು ನಿಲ್ಲಲಿ.

ಗಾಂಧೀಜಿ ಇಂಗ್ಲಿಷ್ ರಾಜನೀತಿಜ್ಞರಿಗೆ ಒಂದು ಪ್ರಾರ್ಥನೆ ಮಾಡಿದರು. “ಬ್ರಿಟಿಷ್  ರಾಜನೀತಿಜ್ಞರು ತಮ್ಮ ಹಳೆಯ ಸಾಮ್ರಾಜ್ಯವಾದವನ್ನು ತ್ಯಜಿಸಿ ತಮ್ಮ ಅಧೀನದಲ್ಲಿರುವ ರಾಷ್ಟ್ರಗಳಿಗೆ ಹೊಸ ಬೆಳಕನ್ನು ಕೊಡಲಿ.”

ವಾರ್ಧಾದಲ್ಲಿ ಆಲ್ – ಇಂಡಿಯಾ ಕಾಂಗ್ರೆಸ್ ಕಮಿಟಿ ಸಭೆ ನಡೆದು, “ಭಾರತೀಯರ ಅನುಮತಿಯಿಲ್ಲದೆ ಇಂಡಿಯಾ ಯುದ್ಧಕ್ಕೆ ಸೇರಿದ್ದಾಗಿ ಘೋಷಿಸಿದ್ದು ವಿಷಾದಕರ. ಇಂಗ್ಲೆಂಡು ಯುದ್ಧದ ಉದ್ದೇಶಗಳನ್ನು ಘೋಷಿಸುವುದರಲ್ಲಿ ಭಾರತ ಒಂದು ಸ್ವತಂತ್ರ ದೇಶವೆಂದು ಹೇಳಬೇಕು ಮತ್ತು ಈಗ ಇಂಡಿಯಾಕ್ಕೆ ಅದೇ ಸ್ಟೇಟಸ್ ಎಂದು ಭಾವಿಸಿ, ಆದಷ್ಟು ಎಲ್ಲಾ ಕಾರ್ಯಗಳನ್ನು ನಡೆಸಬೇಕು. ಭಾರತೀಯರ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಮೇಲೆ ನಿಂತಿದೆ. ಎಲ್ಲಾ ಅಲ್ಪ ಸಂಖ್ಯಾತರಿಗೂ ಪೂರ್ಣ ರಕ್ಷಣೆ ಇದೆ” ಎಂದು ನಿರ್ಣಯ ಮಾಡಿತು.

ವೈಸರಾಯರು ಇಂಡಿಯಾದ ಬೇರೆ ಬೇರೆ ಪಾರ್ಟಿಗಳ ೫೩ಜನರನ್ನು ಭೇಟಿ ಮಾಡಿ, “ಬ್ರಿಟಿಷ್ ಸರ್ಕಾರದ ಯುದ್ಧದ ಗುರಿ, ಇನ್ನು ಮೇಲೆ ಯುದ್ಧ ನಡೆಯ ದಂತಹ ಅಂತರರಾಷ್ಟ್ರೀಯ ಸ್ಥಿತಿಯನ್ನು ಸ್ಥಾಪಿಸುವುದಾಗಿದೆ. ಸೆಕ್ರೆಟರಿ ಆಫ್ ಸ್ಟ್ರೇಟ್‌ರವರು ತಿಳಿಸಿರುವಂತೆ, ಇಂಡಿಯಾದ ಅಭಿವೃದ್ಧಿಯ ಗುರಿ ಡೊಮಿನಿಯನ್‌ಸ್ಟೇಟಸ್” ಎಂದು ತಿಳಿಸಿದರು.

ಗಾಂಧೀಜಿಗೆ ಈ ಹೇಳಿಕೆ ತೃಪ್ತಿಕರವೆಂದು ತೋರಲಿಲ್ಲ; ನಿರಾಶಾದಾಯಕವೆಂದು ಭಾವಿಸಿದರು. ವರ್ಕಿಂಗ್ ಕಮಿಟಿ ಸಭೆ ಸೇರಿತು, ಎಲ್ಲ ವಿಷಯಗಳನ್ನೂ ಪರಿಶೀಲಿಸಿ, ಪ್ರಾಂತಗಳಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಮಂತ್ರಿಮಂಡಲಗಳು ರಾಜೀನಾಮೆ ಕೊಡಬೇಕೆಂದು ಸೂಚಿಸಿತು. ಅಧಿಕಾರ ಸ್ವೀಕಾರ ಮಾಡಿದ ಕಾಲದಿಂದಲೂ ಬಹಳ ಒಳ್ಳೇ ಕೆಲಸ ಮಾಡುತ್ತಿದ್ದ ಕಾಂಗ್ರೆಸ್ ಮಂತ್ರಿಗಳು ೧೯೩೯ನೇ ನವೆಂಬರ್ ಆದಿಭಾಗದಲ್ಲಿ ರಾಜೀನಾಮೆಯಿತ್ತರು. ಆ ಪ್ರಾಂತ್ಯಗಳ ಅಧಿಕಾರಗಳನ್ನು ಆಯಾಯ ಗೌರ್ನರು ವಹಿಸಿಕೊಂಡರು.

ಜಿನ್ಹಾರವರ ಅಧ್ಯಕ್ಷತೆಯಲ್ಲಿ ಮುಸ್ಲಿಂ ಲೀಗು ಸಭೆ ಸೇರಿ ಕಾಂಗ್ರೆಸ್ ಮಂತ್ರಿಮಂಡಲಗಳು ರಾಜೀನಾಮೆ ಮಾಡಿದ ದಿವಸವನ್ನು ಮುಸ್ಲಿಮರ ‘ಡೆಲಿವರೆನ್ಸ್ ಡೆ’ ಎಂದರೆ ವಿಮೋಚನಾ ದಿವಸ ಎಂದು ಘೋಷಿಸಿತು. ಇಷ್ಟೇ ಅಲ್ಲದೆ, ಕಾಂಗ್ರೆಸ್ ಮಂತ್ರಿ ಮಂಡಲ ಅಧಿಕಾರದಲ್ಲಿದ್ದಾಗ ಅಲ್ಪ ಸಂಖ್ಯಾತರಾದ ಮುಸ್ಲಿಮರಿಗೆ ಬಹಳ ಹಿಂಸೆ ಕೊಟ್ಟರು ಎಂದು ಬೊಬ್ಬೆ ಎಬ್ಬಿಸಿತು. ೧೯೪೦ರಲ್ಲಿ ಲಾಹೋರ್‌ನಲ್ಲಿ  ಮುಸ್ಲಿಂ ಲೀಗು ಸಭೆ ಸೇರಿ “ಮುಸ್ಲಿಂ ಲೀಗಿನ ಗುರಿ ಪಾಕೀಸ್ಥಾನ ಸ್ಥಾಪನೆ. ಮುಸ್ಲಿಂ ಮೆಜಾರಿಟಿಯಿರುವ ಪ್ರಾಂತಗಳನ್ನೆಲ್ಲಾ ಒಟ್ಟುಗೂಡಿಸಿ ಪಾಕೀಸ್ಥಾನವೆಂಬ ರಾಜ್ಯವನ್ನು ಸ್ಥಾಪಿಸುವುದೇ ಮುಸ್ಲಿಮರ ಗುರಿ. ತಾವು ಸ್ವತಂತ್ರ ಭಾರತದ ಪ್ರಜೆಗಳಾಗಿರುವುದಿಲ್ಲ” ಎಂದು ಘೋಷಿಸಿತು. ಇದರಿಂದ ಇಂಡಿಯಾದ ರಾಜಕೀಯವೇ ಬಹಳ ಬದಲಾವಣೆಯಾಯಿತು. ಮುಸ್ಲಿಂ ಲೀಗಿನ ಪಾಕೀಸ್ಥಾನದ ಕೂಗು ಬ್ರಿಟಿಷ್‌ರಿಂದ ಪ್ರೇರಣೆಯಾಯಿತು ಎಂದು ಹೇಳಲಾಗಿದೆ. ಅದೇ ನಿಜವೇನೋ ಎಂಬಂತೆ, ಬ್ರಿಟಿಷ್ ಸರ್ಕಾರ ಮುಸ್ಲಿಂ ಲೀಗಿನ ಕೂಗನ್ನು ಪ್ರಧಾನವಾಗಿಟ್ಟುಕೊಂಡು, ಕಾಂಗ್ರೆಸಿನ ಪೂರ್ಣ ಸ್ವರಾಜ್ಯದ ಕರೆಗೆ ಅಡ್ಡಿ ಹಾಕುತ್ತ ಬಂದಿತು.

೧೯೪೦ರಲ್ಲಿ ವೈಸರಾಯರು ಪುನಃ ಈಗಿನ ರಾಜ್ಯಾಂಗ ಕಟ್ಟಡದ ಒಳಗೇ ಕಾಂಗ್ರೆಸಿನ ಸಹಕಾರವನ್ನು ಕೋರಲು ಬಯಸಿದರು. ಅದು ಸಾಧ್ಯವಾಗಲಿಲ್ಲ.

ಈ ಮಹತ್ವ ಕಾಲದಲ್ಲಿ ಮೌಲಾನಾ ಅಬುಲ್ ಕಲಾಂ ಆಜಾದ್ ಕಾಂಗ್ರೆಸ್ ಅಧ್ಯಕ್ಷರು. ೧೯೪೦ರಲ್ಲಿ ನಡೆದ ರಾಮಘರ್ ಕಾಂಗ್ರೆಸಿನಲ್ಲಿ ಇವರು ಅಧ್ಯಕ್ಷರಾದರು. ಇವರೇ ಅನೇಕ ಕಾರಣಗಳಿಂದ ೧೯೪೬ರವರೆಗೂ ಅಧ್ಯಕ್ಷರಾಗಿದ್ದರು. ಅದುವರೆಗೂ ಬೇರೆ ಕಾಂಗ್ರೆಸ್ ಮಹಾಧಿವೇಶನಗಳು ನಡೆಯಲೇ ಇಲ್ಲ. ಕಾಂಗ್ರೆಸ್‌ವರ್ಕಿಂಗ್ ಸಮಿತಿಯಲ್ಲಿ ಕೆಲವರು ಗಾಂಧೀಜಿಯಂತೆ ಪೂರ್ಣ ಅಹಿಂಸೆಗೆ ಬೆಂಬಲವೀಯುವವರು. ಗಾಂಧೀಜಿಯ ಈಗಿನ ಅಭಿಪ್ರಾಯ ಅಹಿಂಸೆಯೇ ಮುಖ್ಯ. ಕಾಂಗ್ರೆಸು ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ಸಂಪಾದಿಸಲು ಗುರಿ ಹೊಂದಿದೆ. ಆದ್ದರಿಂದ ಹಿಂಸೆಯಿಂದ ಕೂಡಿದ ಯಾವ ಯುದ್ಧ ಪ್ರಯತ್ನಗಳಿಗೂ ಸಹಾಯವೀಯಬಾರದು”. ಆದರೆ ಕಾಂಗ್ರೆಸಿನಲ್ಲಿನ ಕೆಲವರು “ ಎಲ್ಲಾ ಕಾಲಕ್ಕೂ ಕಾಂಗ್ರೆಸು ಅಹಿಂಸೆಯ ನೀತಿಯನ್ನು ಅನುಸರಿಲಾಗುವುದಿಲ್ಲ. ನಾವು ಸ್ವತಂತ್ರರಾಗಲಿದ್ದೇವೆ. ನಾವು ರಾಜ್ಯವನ್ನು ನಡೆಸಬೇಕಾಗುವುದು. ಆಗ ಪೊಲೀಸೂ ಸೈನ್ಯವೂ ನಮಗೆ ಬೇಕಾಗುತ್ತದೆ. ಆದ್ದರಿಂದ ನಾವು ಯಾವಾಗಲೂ ಅಹಿಂಸೆಗೆ ಅಂಟಿಕೊಂಡಿರುವುದು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದರು. ಸಿ.ರಾಜಗೋಪಾಲಾಚಾರಿಯವರು ಈ ಅಭಿಪ್ರಾಯ ಹೊಂದಿದ್ದರು. ಆದರೂ ಅವರು ಗಾಂಧೀಜಿಯನ್ನೇ ಹಿಂಬಾಲಿಸುತ್ತಿದ್ದರು. ಈಗ ಅಹಿಂಸೆಯ ಬಗ್ಗೆ ಕಾಂಗ್ರೆಸು ವ್ಯವಹಾರಯುತವಾದ ನೀತಿಯನ್ನು ಅನುಸರಿಸಬೇಕೆಂಬುದು ಅವರ ಅಭಿಪ್ರಾಯ. ೧೯೪೦ನೇ ಜೂನ್ ನಲ್ಲಿ ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ಸಭೆ ನಡೆದು, “ಕಾಂಗ್ರೆಸು ಗಾಂಧೀಜಿಯ ಅಹಿಂಸೆಯ ನೀತಿಯನ್ನು ಪೂರ್ತಿಯಾಗಿ ಒಪ್ಪಲಾಗುವದಿಲ್ಲ. ಭಾರತದಲ್ಲಿ ಪೂರ್ಣ ಸ್ವರಾಜ್ಯವನ್ನು ಸಾಧಿಸಲು ಅಹಿಂಸೆ ಬಿಟ್ಟು ಬೇರೆ ಮಾರ್ಗವನ್ನು ಕಾಂಗ್ರೆಸು ಅನುಸರಿಸುವುದಿಲ್ಲ. ಆದರೆ ಪ್ರಪಂಚದಲ್ಲಿಯೇ ವಿಷಮ ಸನ್ನಿವೇಶ ಉಂಟಾಗಿದೆ. ಹೊರಗಿನವರು ದೇಶವನ್ನು ಆಕ್ರಮಿಸಿದರೇನು ಮಾಡುವುದು ಮತ್ತು ಒಳಗಡೆ ಗಲಭೆಗಳು ನಡೆದರೇನು ಮಾಡುವುದು? ನಾವು ಆಗ ಅಹಿಂಸೆಯನ್ನು ತೊರೆದು ಶಸ್ತ್ರವನ್ನು ಉಪಯೋಗಿಸಬೇಕಾಗುತ್ತದೆ. ಆದರೆ ಗಾಂಧೀಜಿ ಇಂತಹ ಸಮಯದಲ್ಲೂ ಅಹಿಂಸೆಯಿಂದಲೇ ಇರಬೇಕು ಎಂಬ ಅಭಿಪ್ರಾಯ ಹೊಂದಿದ್ದಾರೆ. ಈ ವಿಷಯದಲ್ಲಿ ಕಾಂಗ್ರೆಸಿಗೂ ಗಾಂಧೀಜಿಗೂ ಭಿನ್ನಾಭಿಪ್ರಾಯವಿದೆ. ಇನ್ನು ಮುಂದೆ ಕಾಂಗ್ರೆಸು ಮಾಡುವ ಕೆಲಸಗಳಿಗೆ ಗಾಂಧೀಜಿ ಜವಾಬ್ದಾರರಾಗುವುದಿಲ್ಲ. ಅವರನ್ನು ಈ ಜವಾಬ್ದಾರಿಯಿಂದ ಬಿಡುಗಡೆ ಮಾಡಲಾಗುವುದು” ಎಂದು ತೀರ್ಮಾನಿಸಿತು. ಸದ್ಯಕ್ಕೆ ಕಾಂಗ್ರೆಸೂ ಗಾಂಧೀಜಿಯೂ ಬೇರೆಬೇರೆಯಾದಂತಾಯಿತು. ಆದರೆ ಈ ಪ್ರತ್ಯೇಕ ಮಾರ್ಗ ಬಹುಕಾಲ ನಡೆಯಲಿಲ್ಲ.

೧೯೪೦ನೇ ಜೂನ್ ೨೯ರಲ್ಲಿ ಗಾಂಧೀಜಿಗೂ ವೈಸರಾಯಿಗೂ ಭೇಟಿ ನಡೆಯಿತು. ವೈಸರಾಯರು ತಾವು ಮುಂದೆ ಮಾಡಬೇಕೆಂದಿರುವ ಕೆಲವು ಸುಧಾರಣಾ ಕಾರ್ಯಗಳನ್ನು ಗಾಂಧೀಜಿಗೆ ತಿಳಿಸಿ, ಅವರ ಪ್ರತಿಕ್ರಿಯೆ ಏನು ಎಂದು ಕೇಳಿದರು. ಗಾಂಧೀಜಿ ತಾವು ಕೊಟ್ಟ ಉತ್ತರದ ಬಗ್ಗೆ ಜುಲೈ ೬ನೇ ಹರಿಜನ ಪತ್ರಿಕೆಯಲ್ಲಿ “ಭಾರತದ ಮೊದಲನೇ ಮತ್ತು ತುರ್ತಾದ ಗುರಿ ಮತ್ತು ಅಹಿಂಸಾಮಾರ್ಗ ಇವಕ್ಕೆ ಬದ್ಧವಾಗಿದ್ದರೆ, ವಿಸ್ತೃತ ವೈಸ್‌ರಾಯ್ ಕೌನ್ಸಿಲನ್ನು ಸೇರಲಾರದು. ಶಸ್ತ್ರಗಳ ಉಪಯೋಗವನ್ನು ಮಾಡಬಹುದೆಂದು ಭಾವಿಸುವವರು ಕ್ರಮೇಣ ಬ್ರಿಟಿಷ್ ಬಾವುಟದ ಕೆಳಗೆ ಕೆಲಸ ಮಾಡಬೇಕಾಗುತ್ತದೆ. ಆದ್ದರಿಂದ ಶಸ್ತ್ರಮಾರ್ಗವನ್ನು ಕಾಂಗ್ರೆಸು ತೊರೆಯಬೇಕು. ಕಾಂಗ್ರೆಸು ವಿಸ್ತೃತ ಕೌನ್ಸಿಲನ್ನು ಪ್ರವೇಶಿಸಿದರೆ ಪರಿಣಾಮ ಕಾಂಗ್ರೆಸು ಬ್ರಿಟನ್ನಿನ ರಕ್ಷಣಾ ಮಾರ್ಗದಲ್ಲಿ ತೊಡಗಬೇಕಾಗುತ್ತದೆ” ಎಂದು ಬರೆದರು. ಕಾಂಗ್ರೆಸ್ ವರ್ಕಿಂಗ್ ಕಮಿಟಿಸಭೆ ಜುಲೈ ೭ರಲ್ಲಿ ದೆಹಲಿಯಲ್ಲಿ ನಡೆಯಿತು. ಅದು “ಬ್ರಿಟನು ಕೂಡಲೆ ಇಂಡಿಯಾಕ್ಕೆ ಪೂರ್ಣ ಸ್ವಾತಂತ್ರ್ಯ ಕೊಡಲಾಗುವುದೆಂದು ಘೋಷಣೆ ಮಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಸರ್ಕಾರವನ್ನು ಸ್ಥಾಪಿಸಬೇಕು. ಇದನ್ನು ಮಾಡಿದರೆ ಕಾಂಗ್ರೆಸು ತನ್ನ ಪೂರ್ಣ ಬೆಂಬಲವನ್ನು ದೇಶಸಂರಕ್ಷಣಾ ಕಾರ್ಯಕ್ಕೆ ಕೊಡುವುದು” ಎಂದು ತಿಳಿಸಿತು.

ಈ ನಿರ್ಣಯವನ್ನು ಬ್ರಿಟನು ಒಪ್ಪಿ ನಡೆದಿದ್ದರೆ, ಅದರ ಯುದ್ಧ ಕಾರ್ಯಕ್ಕೆ ಕಾಂಗ್ರೆಸಿನ ಬೆಂಬಲ ಸಿಕ್ಕುವ ಸಾಧ್ಯತೆ ಇತ್ತು. ಈ ನಿರ್ಣಯದಲ್ಲಿ ಕಾಂಗ್ರೆಸು ಬಹುದೂರ ರಾಜಿಯ ಕಡೆ ಹೋಗಿತ್ತು. ಆದರೆ ಸರ್ಕಾರ ಈ ನಿರ್ಣಯವನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ತದ್ವಿರುದ್ಧ ೧೯೪೦ನೇ ಆಗಸ್ಟ್ ೭ರಲ್ಲಿ ಒಂದು ಹೇಳಿಕೆ ಕೊಟ್ಟು ಬ್ರಿಟಿಷ್ ಸರ್ಕಾರದ ಸಲಹೆಗಳನ್ನು ತಿಳಿಸಿತು:

೧) ಕೆಲವು ಪ್ರತಿನಿಧಿ ಸದಸ್ಯರನ್ನು ವೈಸರಾಯರ ಎಗ್ಸಿಕ್ಯುಟಿವ್ ಕೌನ್ಸಿಲಿಗೆ ಸೇರಿಸಿಕೊಳ್ಳುವುದು.

೨) ವಾರ್ ಅಡ್ವೈಸರಿ ಕೌನ್ಸಿಲಿನ ಸ್ಥಾಪನೆ. ಇದರಲ್ಲಿ ಪಾರ್ಟಿ ಮುಖಂಡರೂ, ದೇಶೀಯ ಸಂಸ್ಥಾನಗಳ ಪ್ರತಿನಿಧಿಗಳೂ ಇರುವರು. ಇವರು ಕಾಲಕಾಲಕ್ಕೆ ಸೇರಿ ಯುದ್ಧದ ಬಗ್ಗೆ ಸಲಹೆಯನ್ನು ಕೊಡುವುದು.

೩) ಇಂಡಿಯಾದ ಮುಂದಿನ ರಾಜ್ಯಾಂಗ ರಚನೆಯನ್ನು ಭಾರತೀಯರೇ ರಚಿಸಿಕೊಳ್ಳುವ ಅಂಶದಲ್ಲಿ ಬ್ರಿಟಿಷ್ ಸರ್ಕಾರದ ಸಹಾನುಭೂತಿ ಇದೆ. ಆದರೆ ಅದು ಬ್ರಿಟನು ಪ್ರಬಲ ಯುದ್ಧದ ಮಧ್ಯದಲ್ಲಿರುವಾಗ ಸಾಧ್ಯವಿಲ್ಲ. ಯುದ್ಧ ಮುಗಿದ ಕೂಡಲೆ, ಪ್ರತಿನಿಧಿಗಳಿಂದ ಕೂಡಿದ ರಾಜ್ಯಾಂಗ ರಚನಾಸಭೆಯ ನಿರ್ಮಿಸಲಾಗುವುದು. ಈಗ, ಯುದ್ಧದ ಮಧ್ಯದಲ್ಲಿ, ಯಾವುದೋ ಒಂದು ರೀತಿಯ ಸರ್ಕಾರಕ್ಕೆ ಒಪ್ಪಿಸಲಾಗುವುದಿಲ್ಲ. ಎಷ್ಟೋ ಕಮ್ಯುನಿಟಿಗಳನ್ನು ಸರ್ಕಾರದ ಆಡಳಿತಕ್ಕೆ ಬಲಾತ್ಕಾರವಾಗಿ ಅಧೀನ ಮಾಡಬೇಕಾಗುತ್ತ ಆದ್ದರಿಂದ ಯುದ್ಧ ಮುಗಿಯುವವರೆಗೂ ಎಲ್ಲಾ ಕೋಮುಗಳೂ, ಹಿತಗಳ ಸಹಕಾರ ನೀಡಬೆಕೆಂದು ಕೋರಲಾಗಿದೆ.

ವೈಸರಾಯರ ಹೇಳಿಕೆ ಈ ಸಹಜವಾಗಿಯೇ ಕಾಂಗ್ರೆಸ್ ಕಮಿಟಿಗೆ ಒಪ್ಪಿಗೆಯಾಗಲಿಲ್ಲ. ಸರ್ಕಾರದ ಬಗ್ಗೆ ವಿರೋಧಭಾವವನ್ನು ಹೆಚ್ಚಿಸಿತು.

ಗಾಂಧೀಜಿಗೂ ಈ ಹೇಳಿಕೆ ಬಹಳ ದುಃಖ ಉಂಟು ಮಾಡಿತು. ಕಾಂಗ್ರೆಸಿಗೂ, ಸರ್ಕಾರಕ್ಕೂ ಇರುವ ಅಂತರವನ್ನು ಇನ್ನೂ ಹೆಚ್ಚಿಸಿತು ಎಂದು ಗಾಂಧೀಜಿ ಅಭಿಪ್ರಾಯಪಟ್ಟರು. ವಾರ್ಧಾದಲ್ಲಿ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಕಲೆತು. ವೈಸರಾಯರ ಆಹ್ವಾನವನ್ನು ತಿರಸ್ಕರಿಸಿದ್ದಲ್ಲದೆ, ಮೈನಾಗಳ ಸಮಸ್ಯೆಯನ್ನು ಪರ್ವತದಷ್ಟು ದೊಡ್ಡದು ಮಾಡಿದ್ದಕ್ಕೆ ಬ್ರಿಟಿಷ್ ಸರ್ಕಾರವನ್ನು ಖಂಡಿಸಿತು.

ಸೆಪ್ಟಂಬರ್ ೧೭ರಲ್ಲಿ ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ಕಲೆತು ವರ್ಕಿಂಗ್ ಕಮಿಟಿ ತೀರ್ಮಾನವನ್ನು ಒಪ್ಪಿ, “ಗಾಂಧೀಜಿಯವರು ಕಾಂಗ್ರೆಸ್‌ನಿಂದ ಈಗ ಬೇರೆಯಾಗಿರುವದಕ್ಕೆ ಕಾರಣವಿಲ್ಲ. ಈಗ ಮುಂದೆ ಯಾವ ಕಾರ್ಯಕ್ರಮವನ್ನು ಅನುಸರಿಸಬೇಕೆಂಬುದನ್ನು ಗಾಂಧೀಜಿಯವರೇ ತಿಳಿಸಿ ಅವರೇ ನಾಯಕತ್ವ ವಹಿಸಬೇಕು” ಎಂದು ತೀರ್ಮಾನ ಮಾಡಿತು.

ಗಾಂಧೀಜಿ ಯೋಚನೆ ಮಾಡಿ, ಸದ್ಯಕ್ಕೆ ವೈಯಕ್ತಿಕ ಕಾನೂನು ಭಂಗಮಾಡಿ ಜಾರಿಗೆ ತರಬೇಕೆಂದು ಸಲಹೆ ಮಾಡಿದರು. ಕಾನೂನುಭಂಗ ಮಾಡಲು ಮುಂದೆ ಬರುವವರನ್ನು ತಾವೇ ಆರಿಸುವುದಾಗಿಯೂ ತಿಳಿಸಿದರು. ಭಾರತವನ್ನು ಯುದ್ಧಕ್ಕೆ ಎಳೆದುದಕ್ಕಾಗಿ ಗಂಡಸರೂ, ಹೆಂಗಸರೂ ವ್ಯಕ್ತಶಃ ವಿರೋಧವನ್ನು ವ್ಯಕ್ತಪಡಿಸಬೇಕೆಂದು ಸೂಚಿಸಿದರು. ಯುದ್ಧ ಸಹಾಯಕ್ಕೆ ತಾವು ವಿರೋಧಿಗಳೆಂದು ಕಾನೂನುಭಂಗ ಮಾಡತಕ್ಕದ್ದು; ಸರ್ಕಾರಕ್ಕೆ ತಾವು ಕಾನೂನುಭಂಗ ಮಾಡುವುದಾಗಿ ಮೊದಲು ತಿಳಿಸಿ, ಆಮೇಲೆ ಕಾನೂನುಭಂಗ ಮಾಡಿ ದಸ್ತಗಿರಿಗೆ ಒಳಗಾಗಬೇಕು; ಜೈಲಿನ ನಿಯಮಗಳನ್ನು ಪಾಲಿಸಬೇಕು; ಜೈಲಿನಿಂದ ಬಿಡುಗಡೆಯಾದ ಮೇಲೂ ಪುನಃ ಕಾನೂನುಭಂಗ ಮಾಡಬಹುದು ಎಂದು ಗಾಂಧೀಜಿ ತಿಳಿಸಿದರು. ತಾವು ಮಾತ್ರ ಈಗ ಕಾನೂನುಭಂಗ ಮಾಡುವುದಿಲ್ಲವೆಂದೂ, ತಾವು ಈಗ ಹೊರಗಿದ್ದುಕೊಂಡು ಅದನ್ನು ಹತೋಟಿಯಲ್ಲಿಡುವುದಾಗಿಯೂ ತಿಳಿಸಿದರು. ವಿನೋಬಾಭಾವೆಯವರು ಪ್ರಥಮ ಸತ್ಯಾಗ್ರಹಿಯಾಗಿ ಮುಂದೆ ಬಂದರು. ಇವರ ದಸ್ತಗಿರಿಯಾಯಿತು. ಇದಕ್ಕೆ ಮುಂಚೆಯೇ, ಸೆಪ್ಟೆಂಬರ್ ೨೭ರಲ್ಲಿಯೇ, ಗಾಂಧೀಜಿ ವೈಸರಾಯರನ್ನು ಕಂಡು, ಯುದ್ಧಕ್ಕೆ ವಿರೋಧವಾಗಿರುವ ಕಾಂಗ್ರೆಸಿಗರನ್ನೇ ವೈಯಕ್ತಿಕ ಸತ್ಯಾಗ್ರಹ ಮಾಡಲು ಸಲಹೆ ಕೊಟ್ಟಿರುವುದಾಗಿ ತಿಳಿಸಿದರು. ನವೆಂಬರ್ ೧೧ರಲ್ಲಿ ಸತ್ಯಾಗ್ರಹಿಗಳಿಗೆ ತಾವು ಕೊಟ್ಟಿರುವ ಸಲಹೆಗಳನ್ನು ವೈಸರಾಯರಿಗೆ ತಿಳಿಸಿದರು.

ಮೌಲಾನಾ ಆಜಾದ್, ಪಟೇಲ್, ರಾಜೇಂದ್ರಬಾಬು, ರಾಜಗೋಪಾಲಾಚಾರಿ, ಎಸ್.ಸತ್ಯಮೂರ್ತಿ ಮುಂತಾದ ಪ್ರಮುಖರೆಲ್ಲಾ ಕಾರಾಗೃಹ ಸೇರಿದರು. ಇನ್ನೂ ಚಿಕ್ಕ ಕಾಂಗ್ರೆಸಿನವರೂ ಬಹು ಸಂಖ್ಯೆಯಲ್ಲಿ ಕಾರಾಗೃಹ ಸೇರಿದರು. ಈ ಸತ್ಯಾಗ್ರಹ ಇಂಡಿಯಾದಲ್ಲೆಲ್ಲಾ ಹಬ್ಬಿ, ಕೆಲವು ತಿಂಗಳುಗಳಲ್ಲಿಯೇ ೫೦,೦೦೦ಜನ ಕಾರಾಗೃಹ ಸೇರಿದರು. ಆರು ಲಕ್ಷ ರೂಪಾಯಿಗಳನ್ನು ಜುಲ್ಮಾನೆಯಾಗಿ ವಸೂಲು ಮಾಡಲಾಯಿತು.

ಗಾಂಧೀಜಿ ಈ ಮಧ್ಯೆ ೧೩ ಅಂಶಗಳ ರಚನಾತ್ಮಕ ಕಾರ್ಯವನ್ನು ಕಾನೂ ಭಂಗ ಮಾಡಿದವರು ನಡೆಸಬೇಕೆಂದು ಸಂದೇಶಕೊಟ್ಟರು. ಈಗಿನ ಸಂದರ್ಭದಲ್ಲಿ ಸಾಮೂಹಿಕ ಕಾನೂನುಭಂಗ ಅಪಾಯಕರ ಎಂದು ತಮ್ಮ ಹಿಂಬಾಲಕರಿಗೆ ಬೋಧಿಸಿದರು. ಯುದ್ಧವು ನಿಲ್ಲುವ ಚಿಹ್ನೆ ಕಾಣಲಿಲ್ಲ. ೧೯೪೧ರಲ್ಲಿ ಯುದ್ಧ ಇನ್ನೂ ಜೋರಾಯಿತು. ಹಿಟ್ಲರನು ಇದುವರೆಗೂ ತನಗೆ ಮಿತ್ರ ರಾಷ್ಟ್ರವಾಗಿದ್ದ ಸೋವಿಯಟ್ ರಷ್ಯಾ ಮೇಲೆ ಯುದ್ಧ ಪ್ರಾರಂಭಿಸಿದನು. ವೈಯಕ್ತಿಕ ಕಾನೂನುಭಂಗ ಮುಕ್ತಾಯವಾಗುತ್ತಾ ಬಂದಿತು. ಜೈಲಿಗೆ ಹೋಗುವವರೆಲ್ಲರೂ ಹೊರಟು ಹೋದರು, ಯಾವ ಶಾಂತಿಭಂಗವೂ ಆಗಲಿಲ್ಲ. ಸರ್ಕಾರ ಲಾಠಿ ಪ್ರಯೋಗ ಮುಂತಾದವುಗಳನ್ನು ವೈಯಕ್ತಿಕ ಸತ್ಯಾಗ್ರಹ ಸಮಯದಲ್ಲಿ ಉಪಯೋಗಿಸಲಿಲ್ಲ.

೧೯೪೧ನೇ ಆಖೈರಿನಲ್ಲಿ ಜಪಾನೂ ಯುದ್ಧವನ್ನು ಪ್ರವೇಶಿಸಿ, ಪೆಸಿಫಿಕ್ ಸಾಗರದಲ್ಲಿ ಅಮೆರಿಕಾದ ಪರ್ಲ್‌ಹಾರ್ಬರನ್ನು ಹಿಡಿಯಿತು. ಇದರಿಂದ ಅಮೆರಿಕಾವೂ ನೇರವಾಗಿ ಯುದ್ಧಕ್ಕೆ ಪ್ರವೇಶಿಸುವಂತಾಯಿತು. ಇಂಡಿಯಾದ ಬಾಗಿಲನ್ನೇ ಯುದ್ಧ ಪ್ರವೇಶಿಸಿದ ಹಾಗಾಯಿತು.

ಈ ಸ್ಥಿತಿಯಲ್ಲಿ ಬ್ರಿಟಿಷ್ ಸರ್ಕಾರವೂ ಇಂಡಿಯಾ ಸರ್ಕಾರವೂ ಭಾರತಿಯರ ಯುದ್ಧ ಸಹಕಾರವನ್ನು ಪೂರ್ವಕ್ಕಿಂತಲೂ ಹೆಚ್ಚಾಗಿ ಆಶಿಸಿದುದು ಸಹಜವಾಗಿಯೇ ಇದೆ.

ವೈಯಕ್ತಿಕ ಸತ್ಯಾಗ್ರಹದಲ್ಲಿ ಕಾಂಗ್ರೆಸ್ ವರ್ಕಿಂಗ್ ಕಮಿಟಿಯ ೧೧ಜನ, ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಯ ೨೨ ಸದಸ್ಯರು, ಪ್ರಾಂತ ಶಾಸನ ಸಭೆಗಳ ೪೦೦ ಸದಸ್ಯರು ಕಾರಾಗೃಹ ಸೇರಿದರು. ಇವರೆಲ್ಲರೂ ಕಾಂಗ್ರೆಸಿನ ತಿರುಳು, ನೂರಾರು ಜನ ಎರಡು ಸಲ ಸತ್ಯಾಗ್ರಹ ಮಾಡಿದರು. ಅವರಿಗೆ ೧೦,೦೦೦ ರೂಪಾಯಿ ಜುಲ್ಮಾನೆ ವಿಧಿಸಲಾಯಿತು.

೧೯೪೧ರ ಕೊನೆಯವರಿಗೂ ಈ ಸತ್ಯಾಗ್ರಹ ನಡೆಯುತ್ತಲೇ ಇತ್ತು. ಆದರೆ ಯುದ್ಧದ ಪರಿಸ್ಥಿತಿ ತೀವ್ರವಾದ್ದರಿಂದ, ಸರ್ಕಾರ ಪ್ರಮುಖರನ್ನೆಲ್ಲಾ ಖುಲಾಸೆಮಾಡಿತು.

ನೆಹರು, ಆಜಾದ್ ಮುಂತಾದವರೆಲ್ಲರೂ ಬಿಡುಗಡೆಯಾದರು. ಜವಹರ್‌ಲಾಲರೂ, ರಾಜಗೋಪಾಲಾಚಾರಿಯವರೂ ಸರ್ಕಾರಕ್ಕೆ ಕರೆ ಕೊಡುತ್ತಾ “ಇಂಡಿಯಾಕ್ಕೆ ಸ್ವಾತಂತ್ರ್ಯ ಕೊಡಬೇಕು, ಇದಾದರೆ ಕಾಂಗ್ರೆಸೂ ಯುದ್ಧ ಪ್ರಯತ್ನದಲ್ಲಿ ಪೂರ್ಣ ಸಹಕಾರ ಕೊಡುವುದು” ಎಂದರು. ಕಾಂಗ್ರೆಸ್ ಅಧ್ಯಕ್ಷ ಆಜಾದ್‌ರ ಅಭಿಪ್ರಾಯವೂ ಇದೇ ರೀತಿಯಾಗಿತ್ತು.

೧೯೪೧ನೇ ಡಿಸೆಂಬರ್ ೨೮ರಲ್ಲಿ ಬರ್ಡೋಲಿಯಲ್ಲಿ ವರ್ಕಿಂಗ್ ಕಮಿಟಿ ಸಭೆ ಸೇರಿದಾಗ ಸದಸ್ಯರಲ್ಲಿ ಭಿನ್ನಾಭಿಪ್ರಾಯಗಳು ಕಂಡುಬಂದವು. ಕೆಲವರು ಗಾಂಧೀಜಿಯ ಪೂರ್ಣ ಕಾರ್ಯಕ್ರಮವನ್ನು ಅವರ ಮುಖಂಡತ್ವದಲ್ಲಿಯೆ ನಡೆಸಬೇಕೆನ್ನುವವರು. ಎರಡನೆ ಪಂಗಡದ ಅಭಿಪ್ರಾಯ ಹೀಗಿತ್ತು. ಅಹಿಂಸೆಯ ತತ್ವದಲ್ಲಿ ವಿಶ್ವಾಸವಿಲ್ಲ; ಬ್ರಿಟಿಷರ ಕಷ್ಟದಲ್ಲಿ ಅವರಿಗೆ ತೊಂದರೆ ಕೊಡಬಾರದೆಂಬ ಮನೋಭಾವವೂ ಇಲ್ಲ; ಬ್ರಿಟಿಷರಿಗೆ ಕಷ್ಟ ಬಂದಾಗಲೇ ನಾವು ಸ್ವಾತಂತ್ರ್ಯದ ಬೇಡಿಕೆಯನ್ನು ಮುಂದೆ ಇಡಬೇಕು. ಮೂರನೆಯ ಪಂಗಡದವರು “ಜಪಾನರು ಇಂಡಿಯಾ ದೇಶವನ್ನು ಹಿಡಿಯಲು ಬಿಡಬಾರದು. ಕಾಂಗ್ರೆಸು ಈ ಸಮಯದಲ್ಲಿ ದೇಶದ ರಕ್ಷಣೆ ಮಾಡಬೇಕು” ಎಂದರು. ಅವರು ಯುದ್ಧದ ವಿಷಯದಲ್ಲಿ ಗಾಂಧೀಜಿಯ ಅಹಿಂಸಾಭಾವವನ್ನು ಹೊಂದಿರಲಿಲ್ಲ; ಅದನ್ನು ಭಾರತ ಸ್ವಾತಂತ್ರ್ಯ ಯುದ್ಧಕ್ಕಾಗಿಯೇ ವಿನಿಯೋಗಿಸಬೇಕು ಎನ್ನುವರು. ಮೂರನೇ ಅಭಿಪ್ರಾಯ ಹೊಂದಿದವರೇ ವರ್ಕಿಂಗ್ ಕಮಿಟಿಯಲ್ಲಿ ಮೆಜಾರಿಟಿಯಲ್ಲಿದ್ದರು. ಆದ್ದರಿಂದ ವರ್ಕಿಂಗ್ ಕಮಿಟಿ ತಾನು ೧೯೪೦ನೇ ಸೆಪ್ಟಂಬರ್ ೧೬ರಲ್ಲಿ ಬೊಂಬಾಯಿನಲ್ಲಿ ಮಾಡಿದ ತೀರ್ಮಾನಕ್ಕೆ ಬಂದ ಹಾಗಾಯಿತು. ಗಾಂಧೀಜಿ ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿದರು.

“ಬೊಂಬಾಯಿ ನಿರ್ಣಯದಂತೆ, ಬ್ರಿಟಿಷರೊಡನೆ ಯುದ್ಧ ಪ್ರಯತ್ನದಲ್ಲಿ ಸಹಕಾರ ಮನೋಭಾವವನ್ನು ಹೊಂದಬೇಕಾದರೆ, ಇಂಡಿಯಾದ ಸ್ವಾತಂತ್ರ್ಯದ ಖಾತರಿಬೇಕು. ನನ್ನ ಸ್ವಂತ ನಂಬಿಕೆ ಎಂದರೆ ಅಹಿಂಸೆಯೊಂದೇ ಭಾರತವನ್ನು ರಕ್ಷಿಸುವುದು, ಪ್ರಪಂಚವನ್ನು ಕೂಡ ಆತ್ಮನಾಶದಿಂದ ತಪ್ಪಿಸುವುದು. ಆದ್ದರಿಂದ ನಾನು ಈ ಮಾರ್ಗದಲ್ಲಿ ನಡೆಯಬೇಕು, ಇತರ ವ್ಯಕ್ತಿಗಳ ಅಥವಾ ಸಂಸ್ಥೆಗಳ ಸಹಾಯ ದೊರೆಯಲಿ ಅಥವಾ ದೊರೆಯದಿರಲಿ. ಆದ್ದರಿಂದ ನೀವು ನನ್ನನ್ನು ಕಾಂಗ್ರೆಸಿನ ಮೇಲಿನ ಜವಾಬ್ದಾರಿಯಿಂದ ತಪ್ಪಿಸಿರಿ”.

ಗಾಂಧೀಜಿಯ ಈ ಸ್ಪಷ್ಟ ನಿರೂಪಣೆ ಬೊಂಬಾಯಿ ನಿರ್ಣಯ ಸಮಯದಲ್ಲಿಯೂ ಈಗಲೂ ಆಯಿತು. ಅವರು ಕಾಂಗ್ರೆಸಿನ ಮೇಲಿನ ಜವಾಬ್ದಾರಿಯನ್ನು ವಹಿಸಲು ಒಪ್ಪಲಿಲ್ಲ. ಈ ಕಾರಣದಿಂದ ಪುನಃ ಹಿಂದೆ ಮಾಡಿದಂತೆ, ಕಾಂಗ್ರೆಸ್ ವರ್ಕಿಂಗ್ ಕಮಿಟಿಯು ಕಾಂಗ್ರೆಸಿನ ಮೇಲಿನ ಜವಾಬ್ದಾರಿ ಗಾಂಧೀಜಿಯವರಿಗಿಲ್ಲೆಂದು ತಿಳಿಸಿ, ಅವರಿಗೆ ತಮ್ಮ ಅಹಿಂಸಾ ತತ್ವವನ್ನು ನಿರ್ಬಾಧಕವಾಗಿ ನಡೆಸಲು ಬಿಟ್ಟಿತು.

ಅಖಿಲಭಾರತ ಕಾಂಗ್ರೆಸ್ ಸಮಿತಿ ಸಭೆ ೧೯೪೨ನೇ ಜನವರಿ ೧೫ರಲ್ಲಿ ನಡೆದು, ವರ್ಕಿಂಗ್ ಕಮಿಟಿಯ ಬರ್ಡೋಲಿ ನಿರ್ಣಯವನ್ನು ಅಧ್ಯಕ್ಷ ಆಜಾದರು ಸಭೆಯ ಮುಂದಿಟ್ಟು ಬೆಂಬಲವನ್ನು ಕೋರಿ, ಭಾಷಣ ಮಾಡಿದರು. ಸಭೆಗೆ ಬಂದಿದ್ದ ಗಾಂಧೀಜಿಯವರೆದ್ದು ಆ ನಿರ್ಣಯವನ್ನು ಒಪ್ಪಬೇಕೆಂದು ಸಭೆಯನ್ನು ಪ್ರಾರ್ಥಿಸಿದರು. “ಕಾಂಗ್ರೆಸಿನಲ್ಲಿ ಭಿನ್ನಾಭಿಪ್ರಾಯವಿರಬಹುದು, ಆದರೂ ಒಡಕಿರಬಾರದು. ಈ ನಿರ್ಣಯವನ್ನು ಸರ್ವಾನುಮತದಿಂದ ಒಪ್ಪಬೇಕು” ಎಂದು ಬೋಧಿಸಿದರು. ಇದು ಗಾಂಧೀಜಿಯ ವಿಶಾಲ ಮನೋಭಾವವನ್ನು ಸೂಚಿಸುತ್ತದೆ.

ಈ ಪ್ರಕಾರವಾಗಿ ವೈಯಕ್ತಿಕ ಸತ್ಯಾಗ್ರಹವೂ ಮುಕ್ತಾಯವಾಯಿತು. ೧೯೪೧ನೇ ಇಸವಿ ಫೆಬ್ರವರಿ ೨ನೇ ತಾರೀಖು ಹೊತ್ತಿಗೆ ಎಲ್ಲಾ ವೈಯಕ್ತಿಕ ಸತ್ಯಾಗ್ರಹಿಗಳೂ ಬಿಡುಗಡೆಯಾಗಿದ್ದರು.

ದೇಶದ ಒಳಗೆ ಪರಿಸ್ಥಿತಿ ಆಗ ಏನಾಗಿತ್ತು? ಸುಭಾಷ್ ಚಂದ್ರ ಬೋಸರಿಗೂ ಗಾಂಧೀಜಿಗೂ ಸರಿಹೋಗುತ್ತಿರಲಿಲ್ಲ. ಸುಭಾಷ್ ಚಂದ್ರಬೋಸರು ಕಾಂಗ್ರೆಸ್‌ನಿಂದ ಬೇರೆಯಾದ ಮೇಲೆ ಫಾರ‍್ವರ್ಡ್ ಬ್ಲಾಕನ್ನು ಕಟ್ಟಿ, ತನ್ಮೂಲಕ ಕಾರ್ಯ ನಡೆಸುತ್ತಿದ್ದರು. ಯುದ್ದೋದ್ಯಮಕ್ಕೆ ವಿರೋಧವಾದ ಕಾರ್ಯಾಚರಣೆಯನ್ನು ಬೋಸರು ಆರಂಭಿಸಿದರು. ಅವರನ್ನು ಖುಲಾಸೆ ಮಾಡಲಾಯಿತು. ಇದ್ದಕ್ಕಿದ್ದಂತೆ ಒಂದುಸುದ್ದಿ ಪ್ರಕಟವಾಯಿತು, ಅವರು ೧೯೪೧ನೇ ಜನವರಿ ೨೬ರಂದು ಇಂಡಿಯಾ ಬಿಟ್ಟರೆಂದು. ಒಂದು ವರ್ಷ ಕಾಲ ಅವರ ಸುದ್ದಿಯೇ ತಿಳಿಯಲಿಲ್ಲ. ೧೯೪೨ನೇ ಮಾರ್ಚ್‌‌ನಲ್ಲಿ ಬರ್ಲಿನ್ ಆಕಾಶವಾಣಿಯಿಂದ ಅವರು ಒಂದು ಭಾಷಣ ಮಾಡಿದರು. ಕಡೆಗೆ ಅವರ ಮಿತ್ರರು ಹೇಳುತ್ತಿದ್ದುದೇನೆಂದರೆ, ಸೈನ್ಯ ಕಟ್ಟಿ, ಜಪಾನಿನ ಸಹಾಯದಿಂದ ಭಾರತಕ್ಕೆ ಬಂದು ಈ ದೇಶವನ್ನು ಬ್ರಿಟಿಷರಿಂದ ಬಿಡುಗಡೆ ಮಾಡುವರು. ಈ ತರಹದ ವರ್ತಾಮಾನ ಇಂಡಿಯಾದಲ್ಲೆಲ್ಲಾ ಹರಡಿತು. ಅಂತೂ ಜಪಾನೀಯರು ೧೯೪೨ನೇ ಆದಿಭಾಗದಲ್ಲಿ ಮುಂದರಿಯುತ್ತಿದ್ದರು; ಬ್ರಿಟಿಷರಿಗೆ ಸೇರಿದ್ದ ಮಲಯ, ಸಿಂಗಪುರ, ಇಂಡೊನೇಷ್ಯ, ಬರ್ಮಾವನ್ನು ವಶಪಡಿಸಿಕೊಂಡರು. ಕಾಕಿನಾಡಾ ಬಳಿ ಜಪಾನೀಯರ ಒಂದು ಬಾಂಬೂ ಬಿದ್ದಿತು. ಆದ್ದರಿಂದ ಇನ್ನು ಕೆಲವು ತಿಂಗಳುಗಳಲ್ಲಿಯೇ ಇಂಡಿಯಾವನ್ನು ಎಲ್ಲಿ ಜಪಾನೀಯರು ಆಕ್ರಮಿಸಿಬಿಡುವರೋ ಎಂಬ ಭೀತಿ ಉಂಟಾಯಿತು. ಇದನ್ನೆಲ್ಲಾ ಗಾಂಧೀಜಿ ಮತ್ತು ಇತರ ಮುಖಂಡರು ಗಮನಿಸುತ್ತಿದ್ದರು.ಜವಹರಲಾಲ್, ರಾಜಗೋಪಾಲಾಚಾರಿ, ಅಬುಲ್‌ಕಲಾಂ ಆಜಾದ್ ಮುಂತಾದವರು ಜಪಾನಿನ ಆಕ್ರಮಣದ ಬಗ್ಗೆ ಆಲೋಚನೆ ಮಾಡುತ್ತಿದ್ದರು. ಕಾಂಗ್ರೆಸಿನ ಕೆಲವರಲ್ಲಿ ಬ್ರಿಟನ್ನಿನ ಬಲ  ಕುಗ್ಗಿದೆ, ಮಿತ್ರ ವರ್ಗಗಳಿಗೆ ಜಯವಾಗುವುದು ಅಷ್ಟು ಖಂಡಿತವಲ್ಲ ಎಂಬ ಆಲೋಚನೆ ಹೊರಟಿತು. ಕಾಂಗ್ರೆಸ್ ಮುಖಂಡರಲ್ಲಿಯೂ ಕೆಲವರು ಈ ಭಾವನೆ ಹೊಂದಿದ್ದರೆಂದು ಹೇಳಬಹುದು.

ಈ ಸಮಯದಲ್ಲಿ ಇಂಡಿಯಾ ಸರ್ಕರ ಭಾರತೀಯರ ಒತ್ತಾಸೆಯನ್ನು ಇನ್ನೂ ಹೆಚ್ಚಾಗಿ ಬಯಸಿತು. ಅಮೆರಿಕ ಸರ್ಕಾರ ಕೂಡ ಇಂಡಿಯಾದ ವಿಷಯದಲ್ಲಿ ಉದಾರ ನೀತಿಯನ್ನು ಅನುಸರಿಸಬೇಕೆಂದು ಕೋರಿತು. ಆದ್ದರಿಂದಲೇ ಸತ್ಯಾಗ್ರಹ ಕೈದಿಗಳನ್ನು ಬಿಡುಗಡೆ ಮಾಡಿದ್ದು ಮತ್ತು ೧೯೪೧ನೇ ಡಿಸೆಂಬರ್‌ನಲ್ಲಿ ವೈಸರಾಯರ ಮಂತ್ರಿ ಮಂಡಲವನ್ನು ವಿಸ್ತರಿಸಿ ಕೆಲವು ಖಾಸಗಿ ಜನರನ್ನು ಸೇರಿಸಿಕೊಂಡಿದ್ದು. ಸರ್ ಹೋಮಿ ಮೋದಿ, ಶ್ರೀ ಎಂ. ಎಸ್. ಆಣೆ, ಸರ್ ಅರ್ಡೇಶರ್ ದಲಾಲ್ ಇವರುಗಳೂ ಈಗ ವೈಸರಾಯರ ಮಂತ್ರಿ ಮಂಡಲದಲ್ಲಿದ್ದರು.

ಗಾಂಧೀಜಿ ಯುದ್ಧ ಪ್ರಾರಂಭವಾದ ಕೂಡಲೆ, ಹಿಟ್ಲರ‍್ಗೆ ಹಾಗೂ ಬ್ರಿಟನ್ನಿನ ಮುಖ್ಯ ಮಂತ್ರಿ ಮತ್ತು ಬ್ರಿಟಿಷ್ ಜನರಿಗೆ ಅಹಿಂಸೆಯ ಮಾರ್ಗವನ್ನು ಅನುಸರಿಸಬೇಕೆಂದೂ, ಶಸ್ತ್ರಮಾರ್ಗವನ್ನು ಬಿಡಬೇಕೆಂದೂ ಪತ್ರ ಮುಖೇನ ತಿಳಿಸಿದರು. ಅಮೆರಿಕಾದ ಪ್ರೆಸಿಡೆಂಟರಿಗೂ ಇದೇ ಅಭಿಪ್ರಾಯದ ಪತ್ರವನ್ನು ಬರೆದರು. ವೈಸ್‌ರಾಯರಿಗೂ ಭೇಟಿಯಲ್ಲಿ ಅಹಿಂಸೆಯ ಸಂದೇಶವನ್ನೇ ಕೊಟ್ಟರು. ವೈಸರಾಯರ ಮನಸ್ಸಿಗೆ ಇದು ಹಿಡಿಯಲಿಲ್ಲ.

ರಾಜಗೋಪಾಲಾಚಾರಿ, ಜವಹರಲಾಲ್ ಮತ್ತು ಆಜಾದ್ ಇವರು “ಜಪಾನಿನ ಮುನ್ನಡೆಯನ್ನು ಹೇಗಾದರೂ ತಡೆಯಬೇಕು; ಈ ವಿಷಯದಲ್ಲಿ ನಾವು ಬ್ರಿಟಿಷ್ ಸರ್ಕಾರದೊಡನೆ ಸೇರಬೇಕು. ಅವರಿಂದ ಪೂರ್ಣ ಸ್ವರಾಜ್ಯದ ಭರವಸೆ ತೆಗೆದುಕೊಂಡು ಯುದ್ಧ ಪ್ರಯತ್ನದಲ್ಲಿ ಭಾಗಿಯಾಗಬೇಕು” ಎಂಬ ಅಭಿಪ್ರಾಯ ಹೊಂದಿದ್ದರು.

ಜಿನ್ಹಾ ಮತ್ತು ಮುಸ್ಲಿಂ ಲೀಗಿನವರು ಇದೇ ಸಮಯವೆಂದು, ಪಾಕೀಸ್ಥಾನ ಬೇಕೆಂದು ಬೊಬ್ಬೆ ಹಾಕಿದರು. “ಪಾಕೀಸ್ಥಾನವನ್ನು ಒಪ್ಪಿಕೊಂಡು ಬಿಡಿ. ನಾವೂ ನೀವೂ ಒಟ್ಟಿಗೆ ಕಲೆತು, ಸ್ವಾತಂತ್ರ್ಯಕ್ಕೆ ಒತ್ತಾಯ ಮಾಡೋಣ” ಎಂದು ಜಿನ್ಹಾ ಹೇಳತೊಡಗಿದರು.

ರಾಜಗೋಪಾಲಾಚಾರಿಯವರಿಗೆ ಪಾಕಿಸ್ತಾನದ ವಿಷಯದಲ್ಲಿ ಕಾಂಗ್ರೆಸೂ ಮುಸ್ಲಿಂ ಲೀಗೂ ಒಡಂಬಡಿಕೆಗೆ ಬರುವುದು ಯುಕ್ತವೆಂದು ತೋರಿತು. ಅವರು ಹಾಗೆ ಪ್ರಕಟಿಸಿದರು. ಇದರಿಂದ ಅನೇಕ ಕಾಂಗ್ರೆಸಿಗರು ಅವರ ಮೇಲೆ ರೊಚ್ಚಿಗೆದ್ದರು. ಆದರೆ ವಾಸ್ತವದ ರಾಜಕೀಯ ಮಾರ್ಗವನ್ನು ಹಿಡಿಯುವುದರಲ್ಲಿ ರಾಜಾಜಿ ಅಗ್ರಗಣ್ಯರು. ಕಡೆಗೆ ಗಾಂಧೀಜಿ ಕೂಡ ಒಂದು ರೀತಿಯಾಗಿ ಇದೇ ಅಭಿಪ್ರಾಯಕ್ಕೆ ೧೯೪೪ರಲ್ಲಿ ಬಂದರು.

ಜೀಣಾದ ಮುಖಂಡ ಮಾರ್ಷಲ್ ಚಿಯಾಂಗ್ ಕೈ ಷೆಕ್ ಮತ್ತು ಅವರ ಪತ್ನಿ ಇಂಡಿಯಾಕ್ಕೆ ೧೯೪೨ನೇ ಫೆಬ್ರವರಿ ೯ಕ್ಕೆ ಬಂದರು. ಭಾರತದಲ್ಲಿ ಇವರಿಗೆ ಭಾರಿ ಸ್ವಾಗತ ದೊರೆಯಿತು. ಆಗ ಚೀಣಾ ಎಂದರೆ ಭಾರತೀಯರಿಗೆ ಅಭಿಮಾನ. ಜವಹರಲಾಲ್ ನೆಹರು, ಅಬುಲ್ ಕಲಾಂ ಆಜಾದ್ ಇವರು ಚೈನಾ ಮುಖಂಡರೊಡನೆ ಕಲೆತು ಮಾತನಾಡಿದರು. ಗಾಂಧೀಜಿ ಕೂಡ ಅವರನ್ನು ಕಲ್ಕತ್ತಾದಲ್ಲಿ ಸಂದರ್ಶಿಶಿ ಮಾತನಾಡಿದರು. ಚಿಯಾಂಗ್‌ಕೈ ಷೆಕ್ ದಂಪತಿಗಳು ಇಂಡಿಯಾವನ್ನು ಬಿಟ್ಟಾಗ, ಭಾರತದ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಸೂಚಿಸಿದರು. “ಭಾರತದಲ್ಲಿ ಎಲ್ಲೆಲ್ಲಿ ಕಂಡೂ ಯುದ್ಧದಲ್ಲಿ ಪ್ರಜಾಪ್ರಭುತ್ವ ಪಕ್ಷಕ್ಕೆ ಜಯವಾಗಬೇಕು ಎಂಬ ಆಶೆಯಿದೆ; ಭಾರತೀಯರನ್ನು ಬ್ರಿಟಿಷ್ ಸರ್ಕಾರ ಆದರಿಸಿ ಅವರಿಗೆ ನಿಜವಾದ ಅಧಿಕಾರವನ್ನು ಕೊಡಬೇಕು” ಎಂದು ಸೂಚಿಸಿದರು.

ಮಾರ್ಚ್ ೨೨ರಲ್ಲಿ ಬ್ರಿಟಿಷ್ ವಾರ್ ಕ್ಯಾಬಿನೆಟಿನ ಸದಸ್ಯ ಸರ್ ಸ್ಟಾಪರ್ಡ್ ಕ್ರಿಪ್ಸ್ ಭಾರತಕ್ಕೆ ಬ್ರಿಟಿಷ್ ಸರ್ಕಾರದ ಕೆಲವು ಮುಖ್ಯ ಸಲಹೆಗಳನ್ನು ತೆಗೆದುಕೊಂಡು ಬಂದರು. ಸರ್ ಸ್ಟಾಫರ್ಡ್ ಕ್ರಿಪ್ಸ್ ಎರಡು ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದು, ಜಿನ್ಹಾರೊಡನೆಯೂ ಮಾತನಾಡಿದ್ದರು. ಜವಹರಲಾಲ್ ಮುಂತಾದ ಕಾಂಗ್ರೆಸ್ ಮುಖಂಡರ ಪರಿಚಯ ಹೊಂದಿದ್ದರು. ಅವರು ಬಹಳ ಭಾರಿ ವಕೀಲರು. ಆದರೂ ರಾಜಕೀಯದಲ್ಲಿ ಅವರು ಸೋಷಲಿಷ್ಟರು, ಭಾರತದ ವಿಷಯದಲ್ಲಿ ಅವರು ಸೌಹಾರ್ದ ಉಳ್ಳವರು. ಅವರು ರಷ್ಯಾಕ್ಕೆ ರಾಯಭಾರಿಯಾಗಿ ಹೋಗಿದ್ದು, ಒಳ್ಳೆಯ ಕೆಲಸ ಮಾಡಿಕೊಂಡು ಬಂದಿದ್ದರು. ಆದ್ದರಿಂದ ಬ್ರಿಟಿಷ್ ಸರ್ಕಾರಕ್ಕೆ ಸ್ಟಾಫರ್ಡ್ ಬಹಳ ಸಮರ್ಥರು; ಗಾಂಧೀಜಿಯನ್ನೂ, ಕಾಂಗ್ರೆಸನ್ನೂ ಒಲಿಸಿ ಒಪ್ಪಂದ ಮಾಡಿಕೊಂಡು ಬರುವರು ಎಂಬ ನಂಬಿಕೆಯಿತ್ತು. ಆದ್ದರಿಂದಲೇ ಇಂಗ್ಲೆಂಡಿನ ಆಗಿನ ಮುಖ್ಯಮಂತ್ರಿ ಚರ್ಚಿಲರು ಸ್ಟಾಫರ್ಡರ ಬೆನ್ನು ತಟ್ಟಿ ಕಳುಹಿಸಿದ್ದರು.

ಕ್ರಿಪ್ಸ್ ಬಂದ ಒಂದು ವಾರ ಎಲ್ಲರೊಡನೆಯೂ ಸರಸ ಸಲ್ಲಾಪದಿಂದ ಮಾತನಾಡಿದರು. ಬ್ರಿಟಿಷ್ ಸಲಹೆಗಳೇನು ಎಂಬುದನ್ನು ತಿಳಿಸಲಿಲ್ಲ. ಆದರೆ ವೈಸ್‌ರಾಯರ ಎಗ್ಸೆಕ್ಯುಟಿವ್ ಕೌನ್ಸಿಲರಿಗೂ ವಾರ್ಧಾದಿಂದ ಕ್ರಿಪ್ಸರನ್ನು ನೋಡಲು ಬಂದ ಗಾಂಧೀಜಿಗೂ, ಜಿನ್ಹಾರವರಿಗೂ, ಪ್ರಮುಖ ರಾಜಕೀಯ ಮುಖಂಡರಿಗೂ ರಹಸ್ಯವಾಗಿ ಬ್ರಿಟಿಷ್ ಸರ್ಕಾರದ ಸಲಹೆಯನ್ನು ತಿಳಿಸಿದ್ದರು.

ಮಾರ್ಚ್ ೨೯ರಲ್ಲಿ ಪತ್ರಿಕಾ ಸಮ್ಮೇಳನ ಕರೆದು ಅದನ್ನು ಬಹಿರಂಗ ಪಡಿಸಿ, ವಿವರಣೆ ಕೊಟ್ಟರು. ಸಲಹೆಗಳೇನೆಂದರೆ: (೧) ಯುದ್ಧ ಮುಗಿದ ಕೂಡಲೆ ಬ್ರಿಟಿಷ್ ಇಂಡಿಯಾ ಪ್ರಾಂತಗಳಲ್ಲಿ ಚುನಾವಣೆಗಳು ನಡೆಯುವುವು; (೨) ಚುನಾವಣೆಯಾದ ಕೂಡಲೆ ಪ್ರಾಂತ ಶಾಸನ ಸಭೆಗಳ ಕೆಳಗಿನ ಮನೆಗಳು ಒಂದು ರಾಜ್ಯಾಂಗ ರಚನಾ ಸಭೆಯನ್ನು ಚುನಾಯಿಸುವುವು; (೩) ದೇಶೀಯ ಸಂಥಾನಗಳೂ ಅವುಗಳ ಪ್ರಜೆಗಳ ದಾಮಾಷಾ ಪ್ರಕಾರ ಈ ಸಭೆಗೆ ಸದಸ್ಯರನ್ನು ಆರಿಸಿ ಕಳುಹಿಸುವುವು; (೪) ಈ ರಾಜ್ಯಾಂಗ ಸಭೆ ಯೂನಿಯನ್ ಆಫ್ ಇಂಡಿಯದ ರಾಜ್ಯಾಂಗ ರಚನೆಯನ್ನು ನಿರ್ಮಿಸುವುದು; ಇತರ ಡೊಮಿನಿಯನ್‌ಗಳಂತೆಯೇ ಅಧಿಕಾರ ಮತ್ತು ದರ್ಜೆಯನ್ನು ಹೊಂದುವುದು; (೫) ಈ ರಾಜ್ಯಾಂಗ ರಚನೆಯನ್ನು ಬ್ರಿಟಿಷ್ ಸರ್ಕಾರ ಅಂಗೀಕರಿಸುವುದು; (೬) ಆದರೆ ಬ್ರಿಟಿಷ್ ಇಂಡಿಯಾದ ಯಾವುದಾದರೂ ಪ್ರಾಂತ ಈ ಹೊಸ ರಾಜ್ಯಾಂಗವನ್ನು ಒಪ್ಪದಿದ್ದರೆ ಅದು ತನ್ನ ಹಿಂದಿನ ರೂಪದಲ್ಲಿಯೇ ಇರಬಹುದು; ಅದು ಆಮೇಲೆ ಯೂನಿಯನ್ ರಾಜ್ಯಾಂಗ ಸೇರಲು ಅವಕಾಶ ಹೊಂದುವುದು; (೭) ಹೀಗೆ ಬೇರೆಯಾಗಿರಲು ಅಪೇಕ್ಷಿಸಿದ ಪ್ರಾಂತ ತನಗೆ ಬೇಕಾದ ರಾಜ್ಯಾಂಗವನ್ನು ರಚನೆ ಮಾಡಿಕೊಳ್ಳಲು ಅವಕಾಶ ಹೊಂದುವುದು; ಮತ್ತು ಅದನ್ನು ಬ್ರಿಟಿಷ್ ಸರ್ಕಾರ ಒಪ್ಪುವುದು; (೮) ಯೂನಿಯನ್ ರಾಜ್ಯಾಂಗ ರಚನೆಯ ಭಾಗಕ್ಕೂ ಮತ್ತು ಬ್ರಿಟಿಷ್ ಸರ್ಕಾರಕ್ಕೂ ಕೌಲು ಮತ್ತು ಕರಾರು ಆಗುವುದು: ಈ ಕೌಲಿನಲ್ಲಿ ಎಲ್ಲಾ ಅಂಶಗಳಲ್ಲಿಯೂ ಬ್ರಿಟಿಷ್ ಸರ್ಕಾರಕ್ಕಿದ್ದ ಜವಾಬ್ದಾರಿಯನ್ನು ಭಾರತೀಯ ಯೂನಿಯನ್ ಸರ್ಕಾರಕ್ಕೆ ಕೊಡಲಾಗುವುದು; (೯) ಇದೇ ಸಮಯದಲ್ಲಿ ದೇಶೀಯ ಸಂಸ್ಥಾನಗಳೊಡನೆಯೂ ಕೌಲು ಕರಾರುಗಳಾಗಬೇಕಾಗುತ್ತದೆ; (೧೦) ಆದರೆ ಯುದ್ಧ ಮುಗಿದು ಹೊಸ ರಾಜ್ಯಾಂಗ ರಚನೆಯಾಗುವವರೆಗಿನ ಮಧ್ಯಕಾಲದಲ್ಲಿ ಬ್ರಿಟಿಷ್ ಸರ್ಕಾರ ಭಾರತದ ರಕ್ಷಣೆ (ಸೈನ್ಯ) ಇಲಾಖೆಯ ಜವಾಬ್ದಾರಿಯನ್ನು ಮಾತ್ರ ವಹಿಸುವುದು.

ಈ ಹೊಸ ಯೋಜನೆಗೆ ಭಾರತದ ಎಲ್ಲಾ ಪಾರ್ಟಿಗಳ ಮತ್ತು ಪ್ರಜೆಗಳ ಸಹಕಾರವನ್ನು ಕ್ರಿಪ್ಸರು ಬೇಡಿದರು.

ಈ ಸಲಹೆಗಳನ್ನು ಪರಿಶೀಲಿಸಲು ಕಾಂಗ್ರೆಸ್ ವರ್ಕಿಂಗ್ ಕಮಿಟಿ ೧೯೪೨ನೇ ಮಾರ್ಚಿ ೨೯ರಿಂದ ಏಪ್ರಿಲ್ ೧೧ರವರಿಗೂ ಸಭೆ ನಡೆಸಿತು. ಮೊದಲನೇ ದಿನದಿಂದಲೇ ಈ ಸಲಹೆಗಳಿಗೆ ಗಾಂಧೀಜಿ ವಿರೋಧವಾಗಿದ್ದರು. ಗಾಂಧೀಜಿಗೆ ಈ ಸಲಹೆಗಳು ಒಪ್ಪಿಗೆಯಾಗದಿರಲು ಮುಖ್ಯಕಾರಣ, ಇಂಡಿಯಾದ ಸ್ವಾತಂತ್ರ್ಯದ ಸಮಸ್ಯೆ ಯುದ್ಧಾನಂತರ ನಡೆಯುವ ಕಾರುಬಾರು. ಇದು “ಪೋಸ್ಟ್ ಡೇಟಿಡ್ ಚೆಕ್”. ಈಗ ಏನೂ ಇಲ್ಲ. ಮುಂದೆ, ಯುದ್ಧಾನಂತರ, ಪ್ರಾರಂಭದಲ್ಲೇ ಭಾರತವನ್ನು ಒಡೆಯುವ ಅವಕಾಶ. ಅಲ್ಲದೆ ಬ್ರಿಟಿಷ್ ಸರ್ಕಾರ ದೇಶೀಯ ರಾಜರುಗಳೊಡನೆ ಪ್ರತ್ಯೇಕ ಕೌಲು ಕರಾರು ಮಾಡಿಕೊಳ್ಳುತ್ತದೆ. ಆದ್ದರಿಂದ ಗಾಂಧೀಜಿಗೆ ಯುದ್ಧಾನಂತರದ ಚಿತ್ರವು ಸಹ್ಯವಾಗಿರಲಿಲ್ಲ. ಯುದ್ಧ ಮುಗಿಯುವವರೆಗೆ ಕಾಂಗ್ರೆಸ್ಸನ್ನು ಆಕರ್ಷಿಸಿ, ಅದು ಯುದ್ಧದಲ್ಲಿ ಭಾಗಿಯಾಗುವಂತೆ ಮಾಡುವುದು ಇದರ ಉದ್ದೇಶ. ಇದೂ ಗಾಂಧೀಜಿಗೆ ಸರಿಬೀಳಲಿಲ್ಲ. ಅವರದು ಅಹಿಂಸೆಯ ದಾರಿ, ಕಾಂಗ್ರೆಸು ಈ ದಾರಿ ಬಿಟ್ಟು ಯುದ್ಧದಲ್ಲಿ ಭಾಗಿಯಾಗಲು ಹಿಂಸೆಯ ದಾರಿ ಹಿಡಿಯುವುದು ಸರಿಯಾಗಿ ಕಾಣಲಿಲ್ಲ. ಗಾಂಧೀಜಿ ಸಲಹೆಗಳು ಸ್ವೀಕಾರಾರ್ಹವಲ್ಲವೆಂದು ಕ್ರಿಪ್ಸರಿಗೂ, ವರ್ಕಿಂಗ್ ಕಮಿಟಿಗೂ ತಿಳಿಸಿ, ವಾರ್ಧಾಕ್ಕೆ ಹೊರಟುಹೋದರು.

ವರ್ಕಿಂಗ್ ಕಮಿಟಿ ಅಹಿಂಸೆಯ ವಿಷಯದಲ್ಲಿ ಗಾಂಧೀಜಿಗಿಂತ ಭಿನ್ನಾಭಿಪ್ರಾಯವನ್ನು ಹೊಂದಿದ್ದರಿಂದ “ಯುದ್ಧಾನಂತರದ ಸಲಹೆ ತೃಪ್ತಿಕರವಲ್ಲ, ಅದು ತ್ಯಾಜ್ಯ” ಎಂಬ ಅಭಿಪ್ರಾಯಕ್ಕೆ ಬಂದಿತು. ತಾತ್ಕಾಲಿಕ ಸರ್ಕಾರದ ವಿಷಯದಲ್ಲಿ ವೈಸ್‌ರಾಯರು ಕಾನ್‌ಸ್ಟಿಟ್ಯೂಷನಲ್ ಅಧಿಕಾರಿಯಂತೆ ಕೆಲಸ ಮಾಡಬೇಕು, ಕೌನ್ಸಿಲಿನ ಅಭಿಪ್ರಾಯದಂತೆ ನಡೆಯಬೇಕು ಮತ್ತು ಡಿಫೆನ್ಸ್ ಪೋರ್ಟ್‌ಫೋಲಿಯೋ ಕೂಡ ಕೌನ್ಸಿಲಿನ ಅಧಿಕಾರಕ್ಕೆ ಒಳಪಡಬೇಕು; ಹೀಗಾಗುವುದಾದರೆ, ಕ್ರಿಪ್ಸ್‌ರೊಡನೆ ಸಹಕರಿಸಬಹುದೆಂದು ತಿಳಿಸಿತು. ರಾಜಗೋಪಾಲಾಚಾರಿಯವರೊಬ್ಬರು ಮಾತ್ರ ಕ್ರಿಪ್ಸ್ ಸಲಹೆಗಳನ್ನು ಪೂರ್ತಿಯಾಗಿ ಒಪ್ಪಿಕೊಳ್ಳಬೇಕೆಂದು ಅಭಿಪ್ರಾಯ ಹೊಂದಿದ್ದರು. ಆದ್ದರಿಂದ ಅವರ ಅಭಿಪ್ರಾಯ ವರ್ಕಿಂಗ್ ಕಮಿಟಿಯ ಅಭಿಪ್ರಾಯಕ್ಕೆ ಭಿನ್ನವಾಗಿತ್ತು.

ಕ್ರಿಪ್ಸ್ ತಮ್ಮ ಸಲಹೆಗಳನ್ನು ಬೇರೆ ಬೇರೆಯಾಗಿ ಒಡೆಯಲು ಇಷ್ಟ ಪಡಲಿಲ್ಲ. ಒಪ್ಪಿದರೆ ಅದನ್ನು ಪೂರ್ತಿಯಾಗಿ ಒಪ್ಪಬೇಕು; ಮೊದಲನೆಯ ಭಾಗವನ್ನು ಒಪ್ಪುವುದಿಲ್ಲ, ಎರಡನೆಯದನ್ನು ಒಪ್ಪುತ್ತೇವೆ ಎಂದರೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇಂಡಿಯಾವನ್ನು ಭಿನ್ನ ಭಿನ್ನವಾಗಿ ಒಡೆಯುವ ಅವಕಾಶವಿರುವ ಸಲಹೆಯನ್ನು ಜವಹರಲಾಲರೂ ಒಪ್ಪಲಿಲ್ಲ. ಯುದ್ಧ ಕಾಲದಲ್ಲಿ ಸೈನ್ಯದ ಮೇಲಿನ ಯಾಜಮಾನ್ಯ ಬ್ರಿಟಿಷ್ ಸರ್ಕಾರಕ್ಕಿರಬೇಕೇ ಹೊರತು, ಅದನ್ನು ಭಾರತೀಯರಿಗೆ ಕಿಂಚಿತ್ತಾದರೂ ವಹಿಸುವ ಹಾಗಿಲ್ಲ ಎಂಬುದು ಬ್ರಿಟಿಷ್ ಸರ್ಕಾರದ ನಿರ್ಧಾರವಾಗಿತ್ತು.

೧೯೪೨ನೇ ಏಪ್ರಿಲ್ ೧೦ರಲ್ಲಿ ಕಾಂಗ್ರೆಸ್ ಅಧ್ಯಕ್ಷ ಮೌಲಾನ ಆಜಾದ್‌ರು ಕ್ರಿಪ್ಸ್‌ರಿಗೆ ಪತ್ರ ಬರೆದು, ಕಾಂಗ್ರೆಸು ಅವರ ಸಲಹೆಗಳನ್ನು ನಿರಾಕರಿಸಿದೆ ಎಂದು ತಿಳಿಸಿದರು. ಮುಸ್ಲಿಂ ಲೀಗ್ ವರ್ಕಿಂಗ್ ಕಮಿಟಿಯೂ ಕ್ರಿಪ್ಸ್‌ಸಲಹೆಗಳನ್ನು ತಿರಸ್ಕರಿಸಿತು. ರಾಜಗೋಪಾಲಾಚಾರಿ ಕ್ರಿಪ್ಸ್ ಸಲಹೆಗಳನ್ನು ವರ್ಕಿಂಗ್ ಕಮಿಟಿ ಒಪ್ಪದೆ ಇದ್ದುದಕ್ಕೆ ಬಹಳ ಮನನೊಂದರು. ಈಗಿನ ಪರಿಸ್ಥಿತಿಯಲ್ಲಿ, ಕೋಮುವಾರು ಪರಿಸ್ಥಿತಿ ಇಂಡಿಯಾದಲ್ಲಿ ಬಹಳ ವಿಷಮಿಸಿರುವಾಗ, ಮುಸ್ಲಿಂ ಲೀಗು ಪಾಕಿಸ್ತಾನ ಬೇಕೆಂದು ಬಹಳ ಗೊಂದಲ ಮಾಡುತ್ತಿರುವಾಗ, ಕಾಂಗ್ರೆಸು ಬಲವಾದ ಒಂದು ತೀರ್ಮಾನತೆಗೆದುಕೊಳ್ಳಬೇಕೆಂಬುದು ಅವರ ಅಭಿಪ್ರಾಯ. ಕಾಂಗ್ರೆಸ್ಸಿಗೂ ಲೀಗಿಗೂ ಇರುವ ಅಭಿಪ್ರಾಯ ಭಿನ್ನತೆಗಳಿಂದ ಭಾರತಕ್ಕೆ ಸ್ವಾತಂತ್ರ್ಯ ದೊರೆಯಲು ಅಡ್ಡಿ ಒದಗಿತ್ತೆಂದು ಅವರು ತಿಳಿಸಿದಿದ್ದರು. ಲೀಗಿನ ಬೇಡಿಕೆಗಳನ್ನು ಒಪ್ಪಿಕೊಂಡದ್ದೇ ಆದರೆ ಭಾರತ ಸ್ವಾತಂತ್ರ್ಯಕ್ಕಿರುವ ಅಡಚಣೆಗಳು ನಿವಾರಣೆಯಾಗುತ್ತವೆ ಎಂದು ಅವರು ಪ್ರಕಟವಾಗಿ ಹೇಳ ತೊಡಗಿದರು. ಅವರು ಮದರಾಸ್ ಶಾಸನ ಮಂಡಲ ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಅಭಿಪ್ರಾಯದ ನಿರ್ಣಯದ ಅಂಗೀಕರಾಕ್ಕೆ ಅವಕಾಶ ಕೊಟ್ಟರು. ಇದು ಕಾಂಗ್ರೆಸ್ ವರ್ಕಿಂಗ್ ಕಮಿಟಿ ನಿರ್ಣಯಕ್ಕೆ ತೀರ ವಿರೋಧವಾಗಿತ್ತು. ಅವರ ಮೇಲೆ ಆಕ್ಷೇಪಣೆ ಬಂದಿದ್ದರಿಂದ, ರಾಜಗೋಪಾಲಾಚಾರಿ ೧೯೪೨ನೇ ಏಪ್ರಿಲ್ ೩೦ರಂದು ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸದಸ್ಯತ್ವಕ್ಕೆ ರಾಜಿನಾಮೆಯಿತ್ತರು.

ಇನ್ನು ಮುಂದೆ ಅವರು ರಾಜಕೀಯದಲ್ಲಿ ಕಾಂಗ್ರೆಸಿಗಿಂತ ಭಿನ್ನ ನೀತಿಯನ್ನು ಅನುಸರಿಸಿದರು.

* * *