ಗಾಂಧೀಜಿ ಮತ್ತು ಇತರ ಪ್ರಮುಖರ ದಸ್ತಗಿರಿಯ ಸುದ್ದಿ ಬೆಳಗಾವುದರ ಒಳಗೆ ಇಡೀ ಬೊಂಬಾಯಿನಲ್ಲಿ ಮಿಂಚಿನಂತೆ ಹರಡಿತು. ಕಾನೂನುಭಂಗ ಆರಂಭವಾಗುವ ಮುಂಚೆಯೇ ಸರ್ಕಾರ ಇಂಥ ಕಾರ್ಯಾಚರಣೆ ಮಾಡಿದ್ದು ಜನರಿಗೆ ಬಹಳ ಕೋಪವುಂಟುಮಾಡಿತು. ಸರ್ಕಾರಿ ಕಟ್ಟಡಗಳಿಗೂ, ಪೊಲೀಸ್ ಸ್ಟೇಷನ್ನುಗಳಿಗೂ ಬೆಂಕಿ ಹಾಕಿದರು. ಬೀದಿಯ ಮರಗಳನ್ನೆಲ್ಲಾ ಕಡಿದು, ಕಾರುಗಳ ಮತ್ತು ವಾಹನಗಳ ಸಂಚಾರಕ್ಕೆ ಅಡ್ಡಿ ಮಾಡಿದರು. ಕೂಡಲೇ ಪೊಲೀಸರೂ ಸೈನ್ಯದ ಪಡೆಗಳೂ ಜನಗಳ ಮೇಲೆ ಬಿದ್ದು ಗುಂಡು. ಹಾರಿಸಿದರು. ಬೀದಿಯ ಜನಗಳಿಗೂ ಸರ್ಕಾರದ ಪಡೆಯವರಿಗೂ ಯುದ್ಧವೇ ಆರಂಭವಾಯಿತು. ಇದೇ ರೀತಿ ಪೂನಾ, ಅಹಮದಾಬಾದ್ ಮುಂತಾದ ನಗರಗಳಲ್ಲಿಯೂ ಜನರು ರೊಚ್ಚಿಗೆದ್ದು, ಪೊಲೀಸಿನವರಿಗೂ ಅವರಿಗೂ ಕದನಗಳಾದವು. ಡೆಲ್ಲಿ, ಲಕ್ನೋ, ಕಾನ್‌ಪುರ, ಪಾಟ್ನಾ, ಕಲ್ಕತ್ತಾ, ಮದರಾಸ್, ನಾಗಪುರ, ಅಲಹಾಬಾದ್ ಮುಂತಾದ ಕಡೆಗಳಲ್ಲೆಲ್ಲಾ ಗಲಭೆಗಳಾಗಿ ಪೊಲಿಸರು ಮಿಷಿನ್‌ಗನ್ನಿನಿಂದ ಜನರ ಮೇಲೆ ಗುಂಡು ಹಾರಿಸಿದರು. ಬಿಹಾರ್, ಮಧ್ಯ ಪ್ರಾಂತ ಮತ್ತು ಸಂಯುಕ್ತ ಪ್ರಾಂತಗಳಲ್ಲಿ ಬಹಳ ಗಲಭೆಗಳಾದವು. ಪೊಲೀಸರು ಗುಂಡು ಹಾರಿಸಿ ಅನೇಕರನ್ನು ಕೊಂದರು. ಹರತಾಳಗಳು, ಮೆರವಣಿಗೆಗಳು, ಸಭೆಗಳು ಬೇಕಾದ ಹಾಗೆ ನಡೆದು, ಒಳಗಿನ ಟೌನ್ ಮತ್ತು ಹಳ್ಳಿಗಳಲ್ಲಿಯೂ ಈ ಜ್ವಾಲೆ ಹರಡಿತು. ವಿದ್ಯಾರ್ಥಿಗಳೂ, ವಿದ್ಯಾರ್ಥಿನಿಯರೂ, ಸ್ಕೂಲು ಕಾಲೇಜುಗಳನ್ನು ಬಿಟ್ಟು, ಈ ಗಲಭೆಗಳಲ್ಲಿ ಭಾಗವಹಿಸಿದರು. ಕೆಲವು ಪ್ರದೇಶಗಳಲ್ಲಿ ರೈಲ್ವೆ ಲೈನುಗಳನ್ನು ಕಿತ್ತು ಹಾಕಿದರು. ಟೆಲಿಗ್ರಾಫ್ ಮತ್ತು ಟೆಲಿಫೋನ್ ವೈರುಗಳನ್ನು ಕತ್ತರಿಸಿದರು. ಗಿರಿಣಿಗಳಲ್ಲಿ ಮುಷ್ಕರಗಳಾದವು. ನಾಲ್ಕು ತಿಂಗಳ ಕಾಲ ಅಹಮದಾಬಾದ್, ಬೊಂಬಾಯಿ, ಕಾನ್‌ಪುರ ಮುಂತಾದ ಊರುಗಳಲ್ಲಿ ಗಿರಣಿಗಳ ಬಾಗಿಲನ್ನು ಮುಚ್ಚಿಬಿಟ್ಟರು. ಮುಖಂಡರ ದಸ್ತಗಿರಿಗಳಾದ ಕೆಲವು ದಿವಸಗಳವರೆಗೂ ಇದೇ ರೀತಿ ಗಲಭೆ ನಡೆಯುತ್ತಿತ್ತು. ಸರ್ಕಾರ ಕಾಂಗ್ರೆಸಿನವರು ಎಂದು ತಿಳಿದವರನ್ನೆಲ್ಲಾ ಜೈಲಿಗೆ ಹಾಕಿತು.

ಕೆಲವು ದಿವಸಗಳಲ್ಲಿಯೇ ೨,೦೦೦ಜನರು ಗುಂಡಿನ ಏಟಿನಿಂದ ಸತ್ತರು. ೬,೦೦೦ ಜನರಿಗೆ ಗಾಯವಾಯಿತು. ಒಂದೂವರೆ ಲಕ್ಷ ಜನ ಕಾರಾಗೃಹ ಸೇರಿದರು. ೫೬ ಕೊಲೆಗಳಾದವು. ೧೫ ಲಕ್ಷ ರೂಪಾಯಿ ಪುಂಡುಗಂದಾಯ ವಸೂಲಾಯಿತು. ಕಾಂಗ್ರೆಸ್ ಜನರು “ಮಾಡು ಅಥವಾ ಮಡಿ” ಎಂಬ ಸೂತ್ರವನ್ನು ಅನುಸರಿಸಿ, ಅಹಿಂಸೆಯಿಂದ ಮುಂದರಿಯುತ್ತಿದ್ದರು.

ಗಾಂಧೀಜಿಯ ಮತ್ತು ಇತರರ ದಸ್ತಗಿರಿಯಾದ ಮರು ದಿವಸವೇ ಸೆಕ್ರೆಟರಿ ಆಫ್ ಸ್ಟೇಟ್ ಅಮೆರಿಯವರು ಟೆಲಿಗಾಪ್ ತಂತಿ ಕತ್ತರಿಸುವುದು, ಟೆಲಿಫೋನ್ ತಂತಿ ಕತ್ತರಿಸುವುದು, ಟೆಲಿಫೋನ್ ತಂತಿ ಕತ್ತರಿಸುವುದು, ಸರ್ಕಾರಿ ಆಸ್ತಿಗಳಿಗೆ ಬೆಂಕಿ ಹಾಕುವುದು, ಇವೇ ಮುಂತಾದವು ಕಾಂಗ್ರೆಸಿನ ಕಾರ್ಯಕ್ರಮವಾಗಿತ್ತೆಂದು ಹೇಳಿದರು. ಈ ಹೇಳಿಕೆಯೇ ಎಲ್ಲ ಅನರ್ಥಗಳಿಗೂ ಕಾರಣವಾಯಿತು. ಗಾಂಧೀಜಿ ವೈಸರಾಯರನ್ನು ನೋಡಿದ ಮೇಲೆ, ಫಲಿತಾಂಶವನ್ನು ತಿಳಿದು, ಚಳುವಳಿಯನ್ನು ಆರಂಭಿಸುವುದಾಗಿ ಹೇಳಿದ್ದರು. ಆದ್ದರಿಂದ ಗಾಂಧೀಜಿ ಯಾವ ಕಾರ್ಯಕ್ರಮವನ್ನೂ ಸೂಚಿಸಿರಲಿಲ್ಲ. ಗಾಂಧೀಜಿಯ ಕೆಲವು ಅನುಯಾಯಿಗಳು ಅಮೆರಿಯವರ ಭಾಷಣವನ್ನು ಕೇಳಿ, ಅಹಿಂಸೆಯ ಕಾರ್ಯಕ್ರಮವೆಂಬ ತಂತಿ ಮೊದಲಾದವುಗಳನ್ನು ಕಡಿದು ಹಾಕಿದರು. ಆದರೆ ೧೯೪೪ರಲ್ಲಿ ಗಾಂಧೀಜಿ ಬಿಡುಗಡೆಯಾದ ಮೇಲೆ ರಹಸ್ಯವಾಗಿ ಮಾಡುವ ಮತ್ತು ಸರ್ಕಾರಕ್ಕೆ ಮುಂಚೆಯೇ ತಿಳಿಸದ ಯಾವ ಕಾನೂನು ಭಂಗವೂ ಅಹಿಂಸೆಯದೆಂದು  ಹೇಳಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಆದ್ದರಿಂದ ಅವರು ದಸ್ತಗಿರಿಯಲ್ಲಿ ಇದ್ದಾಗ ನಡೆದ ಯಾವ ಕಾರ್ಯವೇ ಆಗಲಿ ಗಾಂಧೀಜಿ ಹೇಳಿ ಮಾಡಿದ್ದಲ್ಲ. ಇದು ಸ್ಪಷ್ಟ, ಜನರನ್ನು ಅದುಮಲು ಸರ್ಕಾರ ಉಪಯೋಗಿಸಿದ ಸಿಂಹ ಶಕ್ತಿಯು ಅವರದೇ; ಅದಕ್ಕೆ ಕಾಂಗ್ರೆಸು ಜವಾಬ್ದಾರಿಯಲ್ಲ ಎಂದು ಗಾಂಧೀಜಿ ಸ್ಪಷ್ಟಪಡಿಸಿದರು. ಸೆಪ್ಟಂಬರಿನಲ್ಲಿ ಚರ್ಚಿಲರು ಕಾಮನ್ಸ್ ಸಭೆಯಲ್ಲಿ ಭಾಷಣ ಮಾಡುತ್ತಾ, “ನಾನು ಯಾವವರೆಗೆ ಫ್ರೈಮ್ ಮಿನಿಸ್ಟರ್‌ರಾಗಿರುತ್ತೇನೋ, ಆವರೆವಿಗೆ ಇಂಡಿಯಾದಲ್ಲಿರುವ ಬ್ರಿಟಿಷ್ ಸಾಮ್ರಾಜ್ಯ ಶಕ್ತಿಯನ್ನು ಕರಗಿಸುವುದಿಲ್ಲ” ಎಂದು, ಬ್ರಿಟಿಷರ ಬಿಗಿ ಮುಷ್ಟಿಯನ್ನು ತೋರಿಸಿದರು. ಇದಾದ ಮೇಲೆಯೂ ಅದಕ್ಕೆ ಮುಂಚೆಯೂ, ಇಂಡಿಯಾ ಸರ್ಕಾರ ದಬ್ಬಾಳಿಕೆಯನ್ನು ಮಿತಿಮೀರಿ ನಡೆಸಿತು.

ಮುಂಬೈನಲ್ಲಿ ದಸ್ತಗಿರಿಯಾದ ಮೇಲೆ ಗಾಂಧೀಜಿ ಮತ್ತು ಅವರ ಪರಿವಾರವನ್ನು ಪೂನಾದ ಆಗಾ ಖಾನ್ ಅರಮನೆಯಲ್ಲಿಟ್ಟರು.

ನೆಹರು, ಆಜಾದ್, ಪಟೇಲ್ ಮುಂತಾದ ವರ್ಕಿಂಗ್ ಕಮಿಟಿ ಸದಸ್ಯರನ್ನು ಅಹಮದ್ ನಗರದ ಕೋಟಿಯಲ್ಲಿಟ್ಟರು.

ಸರ್ಕಾರ ಜನರೊಡನೆ ಬಹಳ ಕ್ರೌರ್ಯದಿಂದ ವರ್ತಿಸಿತು. “ಜನರು ಓಡಿ ಹೋಗುತ್ತಿದ್ದರೂ, ಪೊಲೀಸರು ಅವರನ್ನು ಹಿಂಬಾಲಿಸಿ, ಅವರ ಮೇಲೆ ಪುನಃ ಪುನಃ ಗುಂಡು ಹಾರಿಸಿದರು. ದಾರಿಯ ಪಕ್ಕದಲ್ಲಿದ್ದವರ ಮೇಲೆಲ್ಲಾ ಗುಂಡು ಹಾರಿಸಿದರು” ಎಂದು ಸ್ಪೆಷಲ್ ಮ್ಯಾಜಿಸ್ಟ್ರೇಟ್‌ರೊಬ್ಬರು ವಿವರಿಸಿದ್ದಾರೆ.

ಬಿಮಾರ್ ಎಂಬ ಹಳ್ಳಿ (ಮಧ್ಯ ಪ್ರಾಂತ್ಯ) ಪೊಲೀಸರೂ, ಮಿಲಿಟರಿಯವರೂ ಹೆಂಗಸರನ್ನು ಹಿಂಸಿಸಿರು. ಪ್ರೊಫೆಸರ್ ಬನ್ ಸಾಲಿಯವರು ಚಿಮಾರಿನ ಅಕೃತ್ಯಗಳನ್ನು ವಿಚಾರಣೆ ನಡೆಸಬೇಕೆಂದು ಆಮರಣಾಂತ ಉಪವಾಸ ಕೈಗೊಂಡರು. ಆಮೇಲೆ, ಸರ್ಕಾರ ವಿಚಾರಣೆ ಮಾಡಿತು.

ಬಂಗಾಳಾದಲ್ಲಿ ಮಿಡ್ನಾಪುರ, ಢಾಕಾ ಮುಂತಾದ ಕಡೆ ಪೊಲೀಸ್‌ರ ಮತ್ತು ಮಿಲಿಟರಿಯವರ ದಾಂಧಲೆ ಬಹಳವಾಗಿತ್ತು, ಮುಖ್ಯ ಮಂತ್ರಿ ಫಜಲುಲ್ ಹಕ್ ವಿಚಾರಣೆ, ನಡೆಸುವುದಾಗಿ ತಿಳಿಸಿದರು.

ಅಮೆರಿಯವರು ಆಗಸ್ಟ್‌೯ ರಲ್ಲಿ ಇಂಡಿಯಾ ಬಗ್ಗೆ ಮಾಡಿದ ಬ್ರಾಡ್‌ಕಾಸ್ಟ್ ಭಾಷಣದಲ್ಲಿ “ಕಾಂಗ್ರೆಸಿನೊಡನೆ ಸಂಧಾನಗಳು ವಿಫಲವಾದವು. “ಕಾಂಗ್ರೆಸಿನವರು ಇಂಡಿಯಾ ಸರ್ಕಾರವನ್ನು ಯಾರಿಗೂ ಜವಾಬ್ದಾರಿಯಿಲ್ಲದ ಕೆಲವು ಭಾರತೀಯ ರಾಜಕೀಯ ಮನುಷ್ಯರಿಗೆ  ವಹಿಸಬೇಕೆಂದು ಕೇಳಿದರು. ಇದು ಡೆಮಾಕ್ರಸಿಯನ್ನು ನಿರಾಕರಿಸಿದ ಹಾಗೆ. ೯೫ ಲಕ್ಷ ಭಾರತೀಯ ಮುಸ್ಲಿಮರೂ, ಇತರ ವರ್ಗದವರೂ ಇದನ್ನು ಒಪ್ಪುತ್ತಿರಲಿಲ್ಲ. ಬ್ರಿಟಿಷ್ ಸರ್ಕಾರ ಮಾಡಿದ ಸೂಕ್ತಸಲಹೆಗಳನ್ನು ಕಾಂಗ್ರೆಸು ತಿರಸ್ಕರಿಸಿದುದೇ ಇಂಡಿಯಾದ ಅಸಮಾಧಾನಕ್ಕೆ ಕಾರಣ. ಕಾಂಗ್ರೆಸು ತನ್ನ ಖ್ಯಾತಿಯನ್ನು ಬೆಳೆಸಿಕೊಳ್ಳಲು ಯತ್ನಿಸಿದೆ, ಗಾಂಧೀಜಿ ಸರ್ಕಾರದೊಡನೆ ನೇರವಾಗಿ ಹೊಡೆದಾಡಿ, ತಮಗೂ ಕಾಂಗ್ರೆಸಿಗೂ ಕೀರ್ತಿ ಸಂಪಾದಿಸಿಕೊಳ್ಳಲು ಯತ್ನಿಸಿದ್ದಾರೆ” ಎಂದು ಹೇಳಿದರು.

ಚೀಣಾ ಪತ್ರಿಕೆಗಳು ಭಾರತಕ್ಕೆ ಸಹಾನುಭೂತಿ ತೋರಿಸಿದವು ಅಮೆರಿಕಾ ಸರ್ಕಾರ ಭಾರತದಲ್ಲಿದ್ದ ಅಮೆರಿಕನ್ ಸೇನಾನಾಯಕರಿಗೆ ಇಂಡಿಯಾದ ಎಲ್ಲ ವ್ಯವಹಾರಗಳಿಂದಲೂ ದೂರವಾಗಿರಬೇಕೆಂದು ತಿಳಿಸಿತು.

ಗಾಂಧೀಜಿ ಆಗಾ ಖಾನ್ ಅರಮನೆ ಸೇರಿದ ಒಂದು ವಾರದ ಒಳಗೇ ಅವರ ಕಾರ್ಯದರ್ಶಿ ಮಹದೇವ್ ದೇಸಾಯರು, ಕಾರಾಗೃಹದೊಳಗೇ, ಹೃದಯವೇದನೆಯಿಂದ ಮೃತರಾದರು. ಬೊಂಬಾಯಿ ಸರ್ಕಾರ ಒಂದು ಪ್ರಕಟಣೆ ಹೊರಡಿಸಿ, ಆದಷ್ಟು ವೈದ್ಯ ಸಹಾಯ ಅವರಿಗೆ ಕೊಡಲಾಯಿತು, ಆದರೆ ಅವರು ಮೈಗೆ ಸರಿಯಿಲ್ಲ ಎಂದು ಹೇಳಿದ ೨೦ ನಿಮಿಷಗಳೊಳಗೆ ಮೃತರಾದರು” ಎಂದು ತಿಳಿಸಿತು. ದೇಸಾಯರಿಗೆ ಇನ್ನೂ ೫೨ ವಯಸ್ಸು. ೧೯೧೭ರಿಂದ ಅವರು ಗಾಂಧೀಜಿಗೆ ಅನವರತ ಸೇವೆ ಸಲ್ಲಿಸಿದರು. ಗಾಂಧೀಜಿ ಹೇಳಿದರು: “ಮಹದೇವ್ ನನಗೆ ಕೆಲವು ಸಾರಿ ತಂದೆಯಂತಿದ್ದರು, ಇನ್ನು ಕೆಲವು ಸಾರಿ ಮಗನಂತಿದ್ದರು. ನನ್ನ ದೇಹದ ಒಂದು ಮುಖ್ಯ ಭಾಗವೇ ಕಳಚಿ ಹೋಗದಂತಾಗಿದೆ. ಅವರ ಕಳೇಬರವನ್ನು ಆಗಾ ಖಾನ್ ಅರಮನೆಯಲ್ಲಿಯೇ ದಹನ ಮಾಡಲಾಯಿತು. ಅವರಿಗೆ ಅಲ್ಲಿಯೇ ಒಂದು ಸಮಾಧಿಯನ್ನು ಕಟ್ಟಲಾಗಿದೆ.

ದೇಶದಲ್ಲೆಲ್ಲಾ ಅಶಾಂತಿ ಹೆಚ್ಚುತ್ತಲೇ ಬಂದಿತು. ಮ್ಯಾಂಚೆಸ್ಟರ್ ಗಾರ್ಡಿಯನ್ ಎಂಬ ಬ್ರಿಟಿಷ್ ಪತ್ರಿಕೆ ಬರೆಯಿತು; “ಇಂಡಿಯಾ ಕೇಳುವುದೇನು? ಕೇಂದ್ರದಲ್ಲಿ ಪ್ರತಿನಿಧಿ ಸರ್ಕಾರ. ಇದಾದರೆ ಯುದ್ಧಕ್ಕೆ ಸಹಕಾರ ಕೊಡುವುದಾಗಿ ಹೇಳಿದೆ. ಇದನ್ನು ಇಂಗ್ಲೆಂಡು ಮಾಡಿಕೊಡುವುದು ಕಷ್ಟವೇ?”

ಸೆಪ್ಟಂಬರ್ ೧೦ನೇ ತಾರೀಖು ಭಾರತ ಪ್ರಮುಖರೆಲ್ಲಾ ಒಂದು ಸಂಯುಕ್ತ ಹೇಳಿಕೆಯನ್ನು ಬ್ರಿಟನ್ನಿನ ಪ್ರಧಾನ ಮಂತ್ರಿಗಳಿಗೆ ಕಳುಹಿಸಿ, ಭಾರತ ಸಮಸ್ಯೆಯನ್ನು ಕೂಡಲೆ ಇತ್ಯರ್ಥಗೊಳಿಸಬೇಕೆಂದು ಕೇಳಿದರು. ಇದಕ್ಕೆ ಸರ್ ರಾಧಾಕೃಷ್ಣನ್, ಶ್ಯಾಮಪ್ರಸಾದ್ ಮುಖರ್ಜಿ, ಎನ್.ಸಿ.ಚಟರ್ಜಿ, ಫಜಲುಲ್ ಹಕ್, ಅಲ್ಲಾ ಬಕ್ಸ್, ಕೆ.ಕೆ.ಹಬೀಬ್ ಮುಂತಾದವರೆಲ್ಲರೂ ರುಜು ಮಾಡಿದ್ದರು.

ಚರ್ಚಿಲರು ಸೆ.೧೦ರಲ್ಲಿ ಕಾಮನ್ಸ್ ಸಭೆಯಲ್ಲಿ ಭಾಷಣ ಮಾಡುತ್ತಾ, “ಕಾಂಗ್ರೆಸು ಇಂಡಿಯಾದ ಪ್ರತಿನಿಧಿ ಸಂಸ್ಥೆಯಲ್ಲ; ೯೦ ಮಿಲಿಯನ್ ಮುಸ್ಲಿಮರು ಕಾಂಗ್ರೆಸಿಗೆ ವಿರೋಧವಾಗಿದ್ದಾರೆ. ಕಾಂಗ್ರೆಸು ಹಿಂದೂಗಳ ಪ್ರತಿನಿಧಿಯೂ ಅಲ್ಲ. ಹಿಂದೂ ಮಹಾಸಭಾ ಹಿಂದೂಗಳನ್ನು ಪ್ರತಿನಿಧಿಸುತ್ತದೆ. ಕಾಂಗ್ರೆಸು ಈಗ ಬಹುಮಟ್ಟಿಗೆ ಅಹಿಂಸೆಯ ನೀತಿಯನ್ನು ತ್ಯಜಿಸಿದೆ. ಗಾಂಧೀ ಮುಂತಾದವರನ್ನು ಬಂಧೀಸಿದ್ದರೂ, ಅವರನ್ನು ಸುಖದಲ್ಲಿಟ್ಟಿದೆ. ಈಗ ಇಂಡಿಯಾದಲ್ಲಿ ನಡೆಯುತ್ತಿರುವ ಗಲಭೆಗಳಿಗೆ ಕಾಂಗ್ರೆಸೇ ಕಾರಣ, ಸರ್ಕಾರವು ಶಾಂತಿಯನ್ನು ಸ್ಥಾಪಿಸಲು ಯತ್ನಿಸುತ್ತಿದೆ. ಕ್ರಿಪ್ಸರ ಸಲಹೆಗಳನ್ನು ನಿರಾಕರಿಸಿದರು. ಇನ್ನೇನು ಮಾಡಲು ಸ್ಥಾಪಿಸಲು ಯತ್ನಿಸುತ್ತಿದೆ. ಕ್ರಿಪ್ಸರ ಸಲಹೆಗಳನ್ನು ನಿರಾಕರಿಸಿದರು. ಇನ್ನೇನು ಮಾಡಲು ಸಾಧ್ಯ? ಇಂಡಿಯಾ ಸರ್ಕಾರ ಗಲಭೆಯನ್ನು ಅಡಗಿಸಲು ಅವಶ್ಯಕವಾದ ಎಲ್ಲ ಕಾರ್ಯಗಳನ್ನೂ ಕೈಕೊಳ್ಳುವುದು” ಎಂದರು. ಈ ಭಾಷಣ ಸಪ್ರು ಮತ್ತು ಜಯಕರ್‌ರಿಗೆ ಬಹಳ ಅಸಂತುಷ್ಟಿ ಉಂಟು ಮಾಡಿತು. ಅವರು ಚರ್ಚಿಲರ ಭಾಷಣವನ್ನು ತುಂಡು ತುಂಡಾಗಿ ಖಂಡಿಸಿದರು. “ಚರ್ಚಿಲ್ ಹೇಳುತ್ತಾರೆ, ಕಾಂಗ್ರೆಸ್ ಪ್ರತಿನಿಧಿ ಸಂಸ್ಥೆಯಲ್ಲ ಎಂದು, ಕ್ರಿಪ್ಸರೇ ನಮಗೆ ಹೇಳಲಿಲ್ಲವೇ? ಕಾಂಗ್ರೆಸು ಮತ್ತು ಮುಸ್ಲಿಂ ಲೀಗು ಇವೆರಡೇ ಭಾರತದ ಪ್ರತಿನಿಧಿ ಸಂಸ್ಥೆಗಳು ಎಂಬುದಾಗಿ? ಇವೆರಡೂ ಕ್ರಿಪ್ಸ್ ಸಲಹೆಗಳನ್ನು ತಿರಸ್ಕರಿಸಲಿಲ್ಲವೇ? ಈಗಲೂ ಕೇಂದ್ರದಲ್ಲಿ ಜವಾಬ್ದಾರಿ ಸರ್ಕಾರವನ್ನು ಸ್ಥಾಪಿಸಿದರೆ ಇಂಡಿಯಾದಲ್ಲಿ ಪರಿಸ್ಥಿತಿ ಉತ್ತಮವಾಗುವುದರಲ್ಲಿ ಸಂದೇಹವಿಲ್ಲ” ಎಂದು ವಿವರಿಸಿ, ಇಂಗ್ಲೆಂಡ್ ಪ್ರಧಾನ ಮಂತ್ರಿಗೆ ಕೇಬಲ್ ಕಳುಹಿಸಿದರು. ಸಿಂಧ್ ಮುಖ್ಯಮಂತ್ರಿ ಅಲ್ಲಾ ಬಕ್ಸ್ ತಮ್ಮ ಖಾನ್ ಬಹದೂರ್ ಮತ್ತು ಜಿ.ಬಿ.ಇ. ಬಿರುದುಗಳನ್ನು ತ್ಯಜಿಸಿದರು. ಕೂಡಲೆ ಅಲ್ಲಿನ ಗೌವರ್ನರು ಅವರನ್ನು ಮುಖ್ಯ ಮಂತ್ರಿ ಪದವಿಯಿಂದ ಡಿಸ್‌ಮಿಸ್ ಮಾಡಿದರು.

ರಾಜಗೋಪಾಲಾಚಾರಿಯವರು ಬಂಧನದಲ್ಲಿದ್ದ ಗಾಂಧೀಜಿಯವರೊಡನೆ ಮಾತನಾಡಲು ನವೆಂಬರ್ ೧೨ರಲ್ಲಿ ವೈಸರಾಯರ ಅನುಮತಿಯನ್ನು ಕೇಳಿದರು. ಅನಮತಿ ದೊರೆಯಲಿಲ್ಲ.

ನವೆಂಬರ್ ೨೦ರಲ್ಲಿ ಡಾ. ಶ್ಯಾಮಪ್ರಸಾದ ಮುಖರ್ಜಿಯವರು ಬಂಗಾಳಾದಲ್ಲಿ ಮಂತ್ರಿ ಪದವಿಗೆ ರಾಜಿನಾಮೆ ನೀಡಿದರು. ಇಷ್ಟರಲ್ಲಿ ಇಂಡಿಯಾಕ್ಕೆ ಜಪಾನಿನ ಭೀತಿ ಜಾಸ್ತಿಯಾಯಿತು. ಡಿಸೆಂಬರ್ ೭ನೇ ತಾರೀಖು ಜಪಾನಿನ ಏರೊಪ್ಲೇನುಗಳು ಚಿಟಗಾಂಗ್ ರೇವು ಪಟ್ಟಣದ ಮೇಲೆ ಧಾಳಿ ಮಾಡಿದವು. ಡಿಸೆಂಬರ್ ೧೧ರಲ್ಲಿ ಇನ್ನೊಂದು ಧಾಳಿ ನಡೆಯಿತು. ಡಿಸೆಂಬರ್ ೨೮ರಂದು ಜಪಾನ್ ಕಲ್ಕತ್ತಾ ಮೇಲೆ ಧಾಳಿ ನಡೆಸಿತು.

ಇಂಡಿಯಾದಲ್ಲಿ ನಡೆಯುತ್ತಿದ್ದ ವಿದ್ಯಮಾನಗಳು ಅಮೆರಿಕಾದ ಅಧ್ಯಕ್ಷ ರೂಸ್‌ವೆಲ್ಟರಿಗೂ ತಿಳಿದು, ಅವರು ಇಂಡಿಯಾದಲ್ಲಿ ಎಲ್ಲವನ್ನೂ ತಿಳಿದುಕೊಂಡು ಬರಲು ವಿಲಿಯಂ ಫಿಲಿಪ್ಸ್ ಎಂಬವರನ್ನು ಇಂಡಿಯಾಕ್ಕೆ ಕಳುಹಿಸಿದರು. ಫಿಲಿಫ್ಸರು ಕರಾಚಿಯಲ್ಲಿ ಜನವರಿ ೧೯೪೩ರಲ್ಲಿ ಬಂದಿಳಿದರು. ಇವರು ದೇಶದಲ್ಲೆಲ್ಲಾ ಸಂಚರಿಸಿ ಪ್ರಮುಖ ಮುಖಂಡರನ್ನೆಲ್ಲಾ ಕಂಡು, ಮಾತನಾಡಿದರು. ಸರ್ಕಾರಿ ಅಧಿಕಾರಿಗಳೊಡನೆಯೂ ಸಂಭಾಷಣೆ ನಡೆಸಿದರು. ಜೈಲಿನಲ್ಲಿದ್ದ ಗಾಂಧೀಜಿ ಮತ್ತು ಇತರ ಕಾಂಗ್ರೆಸ್ ಮುಖಂಡರೊಡನೆ ಮಾತನಾಡಬೇಕೆಂಬ ಅಪೇಕ್ಷೆಯಿತ್ತು. ಇಂಡಿಯಾ ಸರ್ಕಾರ ಅನುಮತಿ ಈಯಲಿಲ್ಲ. ೧೯೪೩ ಜನವರಿ ೧೫ರಲ್ಲಿ ಟರ್ಕಿಷ್ ಪ್ರೆಸ್ ಡೆಲಿಗೇಷನ್ ಒಂದು ಇಂಡಿಯಾದಲ್ಲೆಲ್ಲಾ ಸುತ್ತಿತ್ತು. ಇವರಿಗೆ ಪ್ರಮುಖರನ್ನು ಭೇಟಿ ಮಾಡಲು ಸ್ವಾತಂತ್ರ್ಯವಿರಲಿಲ್ಲ. ಸರ್ಕಾರದ ಅತಿಥಿಯಾಗಿ ಬಂದಿದ್ದರಿಂದ, ನಿರ್ಬಂಧ.

೧೯೪೩ನೇ ಫೆಬ್ರವರಿಯಲ್ಲಿ ಇಂಡಿಯಾ ಸರ್ಕಾರ ಒಂದು ಪ್ರಕಟಣೆ ಹೊರಡಿಸಿ, ಗಾಂಧೀಜಿ ಕಾರಾಗೃಹದಲ್ಲಿಯೇ ೨೧ ದಿವಸದ ಉಪವಾಸ ಕೈಕೊಂಡಿದ್ದಾರೆ ಎಂದು ತಿಳಿಸಿತು. ಇದೇ ಪ್ರಕಟಣೆಯಲ್ಲಿ ಗಾಂಧೀಜಿಗೂ ಸರ್ಕಾರಕ್ಕೂ ೧೯೪೨ನೇ ಆಗಸ್ಟಿನಿಂದಲೂ ಪತ್ರವ್ಯವಹಾರ ನಡೆಯಿತೆಂದು ತಿಳಿಸಲಾಯಿತು. ಗಾಂಧೀಜಿ ಉಪವಾಸ ಕೈಕೊಳ್ಳುವವರೆಗೂ ಈ ವ್ಯವಹಾರದ ವಿಷಯ ತಿಳಿದಿರಲಿಲ್ಲ. ಎರಡು ಮೂರು ದಿನಗಳ ಒಳಗೆ, ಗಾಂಧೀಜಿಗೂ ವೈಸರಾಯರಿಗೂ, ಗಾಂಧೀಜಿ ಮತ್ತು ಇಂಡಿಯಾ ಸರ್ಕಾರದ ಅಡಿಷನಲ್ ಸೆಕ್ರೆಟರಿ ಟಾಟನ್ ಹ್ಯಾಂರವರಿಗೂ ನಡೆದ ಪತ್ರವ್ಯವಹಾರವನ್ನು ಹೊರಗೆಡವಲಾಯಿತು. ಈ ಉಪವಾಸದ ವಿಷಯ ಭಾರತದ ಆದ್ಯಂತವೂ ದುಃಖವನ್ನೂ ಕಳವಳವನ್ನೂ ಉಂಟು ಮಾಡಿತು. ಇದು ಗಾಂಧೀಜಿಯ ಐದನೆಯ ಮಹೋಪ್ರವಾಸ.

ಆಗಾ ಖಾನ್ ಅರಮನೆಯಲ್ಲಿ ಸೇರಸಿದ ಕೆಲವು ದಿವಸಗಳಲ್ಲಿಯೇ ಗಾಂಧೀಜಿ ಪ್ರಕೃತ ಪರಿಸ್ಥಿತಿಯ ಬಗೆಗೆ ಆಲೋಚನೆ ಮಾಡ ತೊಡಗಿದರು. ಮೊದಲು ಕೆಲವು ದಿವಸ ಅವರಿಗೆ ಯಾವ  ವೃತ್ತಪ್ರತಿಕೆಗಳನ್ನೂ ಕೊಡಲಾಗುತ್ತಿರಲಿಲ್ಲ. ಆಮೇಲೆ ಅವರಿಗೆ ದಿನಪತ್ರಿಕೆಗಳನ್ನು ಅಧಿಕಾರಿಗಳು ಕೊಟ್ಟರು. ವರ್ಕಿಂಗ್ ಕಮಿಟಿಯ ಇತರ ಸದಸ್ಯರುಗಳಿಗೂ ಆಮೇಲೆ ಪತ್ರಿಕೆಗಳನ್ನು ಕೊಡಲಾಯಿತು. ಗಾಂಧೀಜಿ ಪತ್ರಿಕೆಗಳಲ್ಲಿ ಬರುತ್ತಿದ್ದ ಸುದ್ದಿಗಳನ್ನು ಓದಿ, ಬಹಳ ಪರಿತಾಪ ಪಟ್ಟರು. ಸರ್ಕಾರ ಅವಸರಪಟ್ಟು ತಮ್ಮನ್ನೂ ಇತರ ಮುಖಂಡರನ್ನೂ ದಸ್ತಗಿರಿ ಮಾಡಿದ್ದೇ ಈ ಗಲಭೆಗಳಿಗೆ ಕಾರಣ; ತಾವು ವೈಸರಾಯರನ್ನು ಭೇಟಿಮಾಡಿ, ಏನೂ ಆಗದಿದ್ದರೆ, ಕಾನೂನು ಭಂಗಚಳುವಳಿಯನ್ನು ಶಾಂತವಾಗಿ, ದೇಶದಲ್ಲಿ ಗಲಭೆಗಳಾಗದಂತೆ, ನಡೆಸಬಹುದಾಗಿತ್ತು; ಅದಕ್ಕೆ ಅವಕಾಶವಾಗಲಿಲ್ಲ; ಪ್ರಕ್ಷುಬ್ಧರಾದ ಜನರ ಮೇಲೆ ಸಿಂಹದ ಕ್ರೌರ್ಯವನ್ನು ಸರ್ಕಾರ ತೋರಿಸಿ, ಅವರಿಗೆ ಬಹಳ ಘಾಸಿಯಾಗುವಂತೆ ಮಾಡಿದುದು ಬಹಳ ಅನ್ಯಾಯ ಎಂದು ಅವರ ಮತವಾಗಿತ್ತು.

ತಮ್ಮ ಮನಸ್ಸಿನಲ್ಲಿದ್ದುದನ್ನು ವೈಸರಾಯರಿಗೆ ತಿಳಿಸಬೇಕೆಂದು ೧೯೪೨ನೇ ಆಗಸ್ಟಿನಲ್ಲಿ ಗಾಂಧೀಜಿ ತಮ್ಮ ಪ್ರಥಮ ಪತ್ರವನ್ನು ವೈಸರಾಯರಿಗೆ ಪರ್ಸನಲ್ ಲೆಟರ್ ಬರೆದರು. ಅದರ ಸಾರಾಂಶ ಇದು: “ ಸರ್ಕಾರ ಅವಸರ ಪಟ್ಟು ಈ ಶೋಚನೀಯ ಸ್ಥಿತಿಯನ್ನು ತಂದಿತು. ನಾನು ಸಾಮೂಹಿಕ ಕಾರ್ಯವನ್ನು ಆರಂಭಿಸುವ ಮುಂಚೆ, ನಿಮ್ಮನ್ನು ಭೇಟಿ ಮಾಡಿ, ಎಲ್ಲವನ್ನೂ ತಿಳಿಸುತ್ತಿದ್ದೆ. ಆಮೇಲೆ, ಅವಶ್ಯವಿದ್ದಿದ್ದರೆ, ಸಾಮೂಹಿಕ ಕಾನೂನುಭಂಗ ಆರಂಭಮಾಡುತ್ತಿದ್ದೆ.  ನನಗೆ ನೀವು ಭೇಟಿಯನ್ನು ಕೊಟ್ಟಿದ್ದರೆ, ನಿಮ್ಮಲ್ಲಿ ನಂಬಿಕೆ ಬರುವ ಹಾಗೆ ನಾನು ವಿಷಯಗಳನ್ನು ತಿಳಿಸಿ, ನಿಮ್ಮನ್ನು ಮನಗಾಣಿಸಲು ಯತ್ನಿಸುತ್ತಿದ್ದೆ. ಸರ್ಕಾರ ತತ್‌ಕ್ಷಣವೇ ಅವಸರಪಟ್ಟು, ಮುಂದರಿದುದಕ್ಕೆ ಕಾಂಗ್ರೆಸಿನ ವಿಷಯದಲ್ಲಿ ಈ ರೀತಿ ಆಲೋಚನೆ ಬಂದಿರಬೇಕು; ಕಾಂಗ್ರೆಸು ಕ್ರಮಕ್ರಮವಾಗಿ ಚಳುವಳಿಯನ್ನು ಮುಂದರಿಸಿ, ದೇಶದಲ್ಲಿ ಶಾಂತಿಯನ್ನು ಭಂಗ ಪಡಿಸದೆ, ಎಲ್ಲಿ ಜಯಹೊಂದುವುದೋ; ಆಗ ಇತರ ದೇಶಗಳಿಗೂ ಕಾಂಗ್ರೆಸಿನ ಸತ್ಯ ಮಾರ್ಗದ ಬಗ್ಗೆ ಎಲ್ಲಿ ನಂಬಿಕೆ ಉಂಟಾಗುವುದೋ.

“ಈ ಹೆದರಿಕೆಯಿಂದ ಸರ್ಕಾರ ಅವಸರಪಟ್ಟು, ದಬ್ಬಾಳಿಕೆಯನ್ನು ಆರಂಭಿಸಿದ ಹಾಗೆ ಕಾಣುತ್ತದೆ. ಶುಕ್ರವಾರ ಮತ್ತು ಶನಿವಾರ ಪತ್ರಿಕೆಗಳಲ್ಲಿ ಆಲ್‌ಇಂಡಿಯಾ ಕಾಂಗ್ರೆಸ್ ಕಮಿಟಿಯಲ್ಲಿ ನಾನು ಮಾಡಿದ ಭಾಷಣ ಪ್ರಕಟಗೊತ್ತಾಗುತ್ತಿತ್ತು, ನಾನು ಅವಸರದಲ್ಲಿ ಕೆಲಸ ಮಾಡುವವನಲ್ಲ ಎಂದು. ಅಷ್ಟರೊಳಗೇ ಕಾಂಗ್ರೆಸನ್ನು ತೃಪ್ತಿಪಡಿಸಲು ಅವಶ್ಯಕವಾದ ಕಾರ್ಯಕ್ರಮಗಳನ್ನು ಕೈಕೊಳ್ಳಲು ಅವಕಾಶವಿತ್ತು. ಇದು ನಾನು ಆಗಸ್ಟ್ ೧೪ರಲ್ಲಿ ವೈಸರಯರಿಗೆ ಬರೆದದ್ದು, ಇದು ಬ್ರಿಟಿಷ್ ಪ್ರೆಸ್ಸಿಗೆ ಗೊತ್ತಾಗಿದೆ”.

ಭಾರತೀಯ ಪ್ರೆಸ್ಸಿಗೆ ಗೊತ್ತಿಲ್ಲ, ಬ್ರಿಟಿಷ್ ಪತ್ರಿಕೆಗಳು ಟೀಕೆ ಮಾಡಿ ಬರೆದಿವೆ. ಗಾಂಧೀಜಿ ಅವಸರದಲ್ಲಿರಲಿಲ್ಲ. ಸರ್ಕಾರದ ಶಾಂತಿ ಸಲಹೆಗಳನ್ನು ನೀರಿಕ್ಷಿಸುತ್ತಿದ್ದರು ಎಂಬುದಾಗಿ ಬ್ರಿಟಿಷ್ ಪತ್ರಿಕೆಗಳು ಟೀಕಿಸಿವೆ. ಗಾಂಧೀಜಿ ಕಾಂಗ್ರೆಸಿನ ಮೇಲೆ ಸರ್ಕಾರ ಮಾಡಿದ ಆಪಾದನೆಗಳಿಗೆಲ್ಲಾ ಉತ್ತರವಿತ್ತರು. “ಕಾಂಗ್ರೆಸಿಗೆ ಅಧಿಕಾರ ಕೊಡಲು ಇಷ್ಟವಿಲ್ಲದಿದ್ದರೆ ಮುಸ್ಲಿಂ ಲೀಗಿಗೆ ಅಧಿಕಾರ ಕೊಡಲು ಇಷ್ಟವಿಲ್ಲದಿದ್ದರೆ ಮುಸ್ಲಿಂ ಲೀಗಿಗೆ ಅಧಿಖಾರ ಕೊಡಬಹುದಾಗಿತ್ತು. ಅದು ನ್ಯಾಷನಲ್ ಸರ್ಕಾರ ರಚಿಸಿದ್ದರೆ, ಕಾಂಗ್ರೆಸು ಅದು ಹೇಳಿದಂತೆ ನಡೆಯುತ್ತಿತ್ತು. ಈ ಕೆಲಸವನ್ನು ಸರ್ಕಾರವೇಕೆ ಮಾಡಲಿಲ್ಲ? ಮುಖ್ಯವಾಗಿ, ಬ್ರಿಟಿಷ್ ಸರ್ಕಾರಕ್ಕೆ ತನ್ನ ಅಧಿಕಾರವನ್ನು ಬಿಟ್ಟುಕೊಡಲು ಇಷ್ಟವಿಲ್ಲ. ನಾನೂ ಜವಹರಲಾಲರೂ, ನನಗಿಂತ ಹೆಚ್ಚಾಗಿ ಜವಹರಲಾಲರು, ನಾಜಿಸಿಮ್ ಮತ್ತು ಫ್ಯಾಸಿಜಂಅನ್ನು ತೀಕ್ಷಣವಾಗಿ ವಿರೋಧಿಸುತ್ತೇವೆ ಮತ್ತು ಪ್ರಜಾ ಪ್ರಭುತ್ವ ಶಕ್ತಿಗೆ ಜಯವನ್ನು ಕೋರುತ್ತೇವೆ. ತನ್ನ ದಮನ ನೀತಿಯಿಂದ ಹಿಮ್ಮೆಟ್ಟಿ ಬ್ರಿಟನ್ನು ಸ್ನೇಹದ ಮತ್ತು ಸಲಹೆಯ ಮಾರ್ಗವನ್ನು ಅನುಸರಿಸಬೇಕು” ಎಂದು ತಮ್ಮ ಪತ್ರದಲ್ಲಿ ಕೋರಿದರು.

ಗಾಂಧೀಜಿ ಆಗಸ್ಟ್ ೧೪ರಲ್ಲಿ ಬರೆದ ಪತ್ರಕ್ಕೆ ಆಗಸ್ಟ್೨೨ರಲ್ಲಿ ವೈಸರಾಯರು ಉತ್ತರವಿತ್ತು, “ನೀವು ಸರ್ಕಾರದ ಬಗ್ಗೆ ಮಾಡಿದ ಟೀಕೆಗಳನ್ನು ಒಪ್ಪಲಾಗುವುದಿಲ್ಲ ಮತ್ತು ಸರ್ಕಾರ ಕೈಕೊಂಡ ಕಾರ್ಯಕ್ರಮಗಳನ್ನು ಹಿಂದಕ್ಕೆ ತೆಗೆದುಕೊಳ್ಳಲಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

ಪುನಃ ಗಾಂಧೀಜಿ ಡಿಸೆಂಬರ್ ೩೧ರಲ್ಲಿ ವೈಸರಾಯರಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿ, “ನಿಮ್ಮ ವಿಶ್ವಾಸವನ್ನು ನಾನು ಕಳೆದುಕೊಂಡಿರುವ ಹಾಗಿದೆ. ನೀವು ನನ್ನನ್ನು ದಸ್ತಗಿರಿ ಮಾಡಿದ್ದು, ಆಮೇಲಿನ ಸರ್ಕಾರದ ಪ್ರಕಟಣೆ, ರಾಜಾಜಿಗೆ ನಿಮ್ಮ ಉತ್ತರ, ಅಮೆರಿಯವರು ನನ್ನನ್ನು ಟೀಕಿಸಿದ ರೀತಿ, ಇವೇ ಮೊದಲಾದವುಗಳು ನಿಮ್ಮ ವಿಶ್ವಾಸವನ್ನು ನಾನು ಕಳೆದುಕೊಂಡಿದ್ದೇನೆಂಬುದನ್ನು ತಿಳಿಸುತ್ತವೆ. ಹೊರಗೆ ನಡೆಯುತ್ತಿರುವ ಅತ್ಯಾಚಾರಗಳನ್ನು ನಾನು ಖಂಡಿಸಬೇಕೆಂದು ಹೇಳುತ್ತೀರಿ. ಪತ್ರಿಕೆಗಳಲ್ಲಿ ಬಂದಿರುವ ವಿಕೃತವರದಿಗಳ ಮೇಲೆ ನಾನು ಹೇಗೆ ಖಂಡಿಸಲಿ? ನಾನು ಮಾಡಿರುವ ತಪ್ಪುಗಳನ್ನು ನನಗೆ ತಿಳಿಸಿ, “ನಾನು ತಿದ್ದಿ ಕೊಳ್ಳುತ್ತೇನೆ. ನೀವೇ ಯಾರನ್ನಾದರೂ ಕಳುಹಿಸಿ, ನನ್ನೊಡನೆ ಅವರು ಚರ್ಚಿಸಲಿ. ಅವರು ನನ್ನ ತಪ್ಪನ್ನು ತೋರಿಸಲಿ. ಈಗಾಗಲೇ ಆರು ತಿಂಗಳಾಯಿತು. ನಿರಪರಾಧಿಗಳಾದ ಮನುಷ್ಯರನ್ನು ಸರ್ಕಾರ ದಂಡಿಸುವ ರೀತಿ ಬಹಳ ದಾರುಣವಾಗಿದೆ. ಇಂಥ ಸಮಯಗಳಲ್ಲಿ ನಾನು ನನ್ನನ್ನು ದಂಡಿಸಿಕೊಳ್ಳಬೇಕಾಗುತ್ತದೆ. ಬೇರೆ ದಾರಿಯಿಲ್ಲದೆ ಉಪವಾಸ ಮಾಡಬೇಕಾಗುತ್ತದೆ. ಬೇಗನೆ ಉತ್ತರ ಕಳುಹಿಸಿ” ಎಂದರು.

ವೈಸರಾಯರು ೧೯೪೩ನೇ ಜನವರಿ ೧೩ರಲ್ಲಿ ಗಾಂಧೀಜಿಗೆ ಉತ್ತರ ಪತ್ರ ಬರೆದರು: “ಈಚಿನ ತಿಂಗಳುಗಳಲ್ಲಿ ನನ್ನ ಮನಸ್ಸು ಬಹಳ ದುಃಖಪಟ್ಟಿದೆ. ಹೊರಗೆ ಇಷ್ಟೆಲ್ಲಾ ಹಿಂಸೆ ತಾಂಡವವಾಡುತ್ತಿದ್ದರೂ, ನೀವಾಗಲೀ ವರ್ಕಿಂಗ್ ಹೊರಗೆ ಇಷ್ಟೆಲ್ಲಾ ಹಿಂಸೆ ತಾಂಡವವಾಡುತ್ತಿದ್ದರೂ, ನೀವಾಗಲೀ ವರ್ಕಿಂಗ್ ಕಮಿಟಿಯಾಗಲೀ ಒಂದು ಚೂರೂ ಅವನ್ನು ಖಂಡಿಸಿಲ್ಲ. ಪತ್ರಿಕೆಗಳಲ್ಲಿ ಬಂದ ಸಮಾಚಾರಗಳು ಸತ್ಯವಾದವು. ನಿಮ್ಮ ಕಾಗದದಿಂದ ನನಗೆ ಒಂದು ಅರ್ಥವಾಗುತ್ತದೆ. ನೀವು ಈಗ ನಿಮ್ಮ ಹೆಜ್ಜೆಯನ್ನು ಹಿಂತೆಗೆದುಕೊಂಡು, ಕಳೆದ ಬೇಸೆಗೆಯಲ್ಲಿ ನೀವು ಜಾರಿಗೆ ತಂದ ನೀತಿಯನ್ನು ವಾಪಸ್ಸು ತೆಗೆದುಕೊಳ್ಳಲು ಇಷ್ಟಪಡುವಿರೆಂದು ನಾನು ತಿಳಿಯಲೆ? ಇದು ನಿಮ್ಮ ಉದ್ದೇಶವಾದರೆ ನಾನು ಆಲೋಚನೆ ಮಾಡುತ್ತೇನೆ. ನನ್ನ ಈ ವಿಚಾರಸರಣಿ ಸರಿಯಾದರೆ ನೀವು ಯಾವ ಸಲಹೆ ಮಾಡುತ್ತೀರೆಂಬುದನ್ನು ನನಗೆ ತಿಳಿಸಿ. ಬೇಗ ತಿಳಿಸಿ.”

ಗಾಂಧೀಜಿ ಜನವರಿ ೧೯ರಲ್ಲಿ ವೈಸರಾಯರಿಗೆ ಬರೆದರು; “ನೀವು ನನ್ನ ಕಾಗದವನ್ನು ಅರ್ಥಮಾಡಿಕೊಂಡಿರುವ ರೀತಿ ಸರಿಯಲ್ಲ. ನಾನು ಉಪವಾಸ ಮಾಡಬೇಕೆಂದಿದ್ದೇನೆ. ನಮ್ಮ ಪತ್ರವ್ಯವಹಾರದಿಂದ ಯಾವ ಫಲವೂ ದೊರೆಯದಿದ್ದರೆ ನನಗೆ ಉಪವಾಸವೇ ದಾರಿ. ನಾನು ನಿಮಗೆ ಸಲಹೆ ಕೊಡಬೇಕೆಂದು ಕೇಳಿದ್ದೀರಿ. ನನ್ನನ್ನು ವರ್ಕಿಂಗ್ ಕಮಿಟಿಯವರೊಡನೆ ಸೇರಿಸಿದರೆ, ನಾವು ಆಲೋಚನೆ ಮಾಡಿ, ಯಾವುದಾದರೂ ಸಲಹೆಕೊಡಲು ಸಾಧ್ಯ. ನಾನು ಅಹಿಂಸೆಯಲ್ಲಿ ವಿಶ್ವಾಸವುಳ್ಳವನು. ಕಾಂಗ್ರೆಸ್ ಕೆಲಸಗಾರರು ಹಿಂಸಾ ಕಾರ್ಯವನ್ನು ಮಾಡಿದಾಗಲೆಲ್ಲಾ ನಾನು ಅವರನ್ನು ಖಂಡಿಸಿದ್ದೇನೆ. ಮತ್ತು ನಾನು ಪ್ರಾಯಶ್ಚಿತ್ತಮಾಡಿಕೊಂಡಿದ್ದೇನೆ. ಸರ್ಕಾರ ಹಿಂದೆ ತಪ್ಪೆಂದು ತಿಳಿದ ಸಂಗತಿಗಳನ್ನು ಸರಿಮಾಡಿಕೊಂಡ ನಿದರ್ಶನಗಳಿವೆ; (೧)ಪಂಜಾಬಿನಲ್ಲಿ ಅತ್ಯಾಚಾರ ನಡೆಸಿದ. ಜನರಲ್ ಡಯರ್‌ನಿಗೆ ಶಿಕ್ಷೆಯಾದುದು; (೨) ಕಾನ್‌ಪುರದಲ್ಲಿ ಒಂದು ಮಸೀದಿಯ ಮೂಲೆಯನ್ನು ಪುನಃ ಮಸೀದಿಯವರಿಗೆ ಕೊಟ್ಟುವುದು; (೩) ಎರಡಾಗಿ ಮಾಡಿದ ಬಂಗಾಳವನ್ನು ಒಂದುಗೂಡಿಸಿದುದು. ಆದ್ದರಿಂದ ಸರ್ಕಾರ ದಬ್ಬಾಳಿಕೆ ನೀತಿಯನ್ನು ಹಿಂತೆಗೆದುಕೊಳ್ಳಲಿ ಎಂಬುದೇ ನನ್ನ ಕೋರಿಕೆ”.

ಹೀಗೆಯೇ ಇನ್ನೂ ಕೆಲವು ಪತ್ರವ್ಯವಹಾರಗಳು ನಡೆದವು. ಗಾಂಧೀಜಿಯ ಉಪವಾಸ ನಿರ್ಣಯವನ್ನು ವೈಸರಾಯರು ಒಪ್ಪಲಿಲ್ಲ. ಅದನ್ನು ‘black mail’ ಎಂಬುದಾಗಿ ಕರೆದರು.

ಗಾಂಧೀಜಿಯವರು ತಮ್ಮ ಆರೋಗ್ಯದ ಈಗಿನ ಸ್ಥಿತಿಯಲ್ಲಿ ಉಪವಾಸ ಮಾಡಬಾರದೆಂದು ವೈಸರಾಯರು ತಿಳಿಸಿದರು. ಆದರೆ ಗಾಂಧೀಜಿ ತಮ್ಮ ನಿರ್ಧಾರದಿಂದ ಚಲಿತರಾಗಲಿಲ್ಲ. ಫೆಬ್ರವರಿ ೯ರಿಂದ ೨೧ದಿವಸ ಉಪವಾಸ ಮಾಡುವುದಾಗಿ ತಿಳಿಸಿದರು. “ಈಗ ಅವರಿಗೆ ಬರೀ ನೀರನ್ನು ಕುಡಿದರೆ ಆಗುವುದಿಲ್ಲ. ನಿಂಬೆಹಣ್ಣಿನ ರಸವನ್ನು ನೀರಿಗೆ ಕುಡಿಯುವುದಾಗಿ ವೈದ್ಯರು ಹೇಳಿದ್ದಾರೆ. ನಾವು ಈ ಉಪವಾಸದ ಅವಧಿಯವರಿಗೆ ಅವರನ್ನು ಖುಲಾಸೆ ಮಾಡುತ್ತೇವೆ. ಮ್ತು ಅವರ ಸಹಾಯಕ್ಕೆ ಬೇಕಾದವರನ್ನೂ ಬಿಡುಗಡೆ ಮಾಡುತ್ತೇವೆ. ಈ ಉಪವಾಸದ ಪರಿಣಾಮಕ್ಕೆ ಅವರೇ ಜವಾಬ್ದಾರರು; ಸರ್ಕಾರ ಜವಾಬ್ದಾರಿಯಲ್ಲ “ಎಂದು” ಸರ್ಕಾರ ತಿಳಿಸಿತು.

ಗಾಂಧೀಜಿ ಸರ್ಕಾರಕ್ಕೆ ಉತ್ತಮ ಬರೆಯುತ್ತಾ, “ನನ್ನನ್ನು ಉಪವಾಸಕ್ಕೋಸ್ಕರ ಹಂಗಾಮಿಯಾಗಿ ಬಿಡುವ ಹಾಗಿದ್ದರೆ ನನಗೆ ಆ ಬಿಡುಗಡೆ ಇಷ್ಟವಿಲ್ಲ. ನಾನು ಸರ್ಕಾರದ ಬಂದಿಯಾಗಿಯೇ ಉಪವಾಸ ಕೈಕೊಳ್ಳುತ್ತೇನೆ. ಸರ್ಕಾರಕ್ಕೆ ತೊಡಕುಂಟುಮಾಡುವುದು ನನ್ನ ಇಷ್ಟವಲ್ಲ. ಈ ಉಪವಾಸವನ್ನು ನಾನು ಸ್ವತಂತ್ರ ಮನುಷ್ಯನಾಗಿ ಮಾಡಲು ಇಷ್ಟಪಡುವುದಿಲ್ಲ. ನಾನು ಸ್ವತಂತ್ರವಾದರೆ, ಮುಂದೆ ಏನು ಮಾಡಬೇಕೋ ಅದನ್ನು ಯೊಚಿಸಿ ಮಾಡುತ್ತೇನೆ. ಉಪವಾಸಕ್ಕಾಗಿ ನನಗೆ ಬಿಡುಗಡೆ ಬೇಕಿಲ್ಲ” ಎಂದು ತಿಳಿಸಿದರು.

ಫೆಬ್ರವರಿ ೯ರಲ್ಲಿ ಸರ್ಕಾರ ಉತ್ತರವಿತ್ತು, “ನಿಮ್ಮ ಉಪವಾಸದ ತೀರ್ಮಾನಕ್ಕೆ ಸರ್ಕಾರ ಬಹಳ ವ್ಯಸನ ಪಡುತ್ತದೆ. ಉಪವಾಸ ಕಾಲದಲ್ಲಿ ನಿಮಗೆ ಬೇಕಾದ ವೈದ್ಯರುಗಳನ್ನು ಹೊಂದಬಹುದು ಮತ್ತು ಸರ್ಕಾರದ ಅಪ್ಪಣೆ ಪಡೆದು ನಿಮ್ಮ ಆಪ್ತರನ್ನೂ, ಮಿತ್ರರನ್ನೂ ನೀವು ಕರೆಸಿಕೊಳ್ಳಬಹುದು. ಡಾಕ್ಟರುಗಳು ಆರೋಗ್ಯದ ಬಗ್ಗೆ ಬುಲೆಟಿನ್‌ಗಳನ್ನು ಹೊರಡಿಸಬಹುದು” ಎಂದು ಹೇಳಿತು.

ವಿಧಿಯಿಲ್ಲದೆ, ಗಾಂಧೀಜಿ ಫೆಬ್ರವರಿ ೧೦ನೇ ತಾರೀಖು ಉಪವಾಸ ಆರಂಭಿಸಿದರು. ಅವರ ಮಿತ್ರರೂ ಅವರ ಬಂಧುಗಳೂ ಅವರನ್ನು ನೋಡಿಕೊಳ್ಳಲು ಬಂದರು.

ಡಾ.ಬಿ.ಸಿ. ರಾಯ್, ಡಾ.ಗಿಲ್ಡರ್, ಬೊಂಬಾಯಿ ಸರ್ಜನ್ – ಜನರಲ್ ಕ್ಯಾಂಡಿ ಇವರುಗಳು ಗಾಂಧೀಜಿಯವರನ್ನು ನೋಡಿಕೊಳ್ಳುತ್ತಿದ್ದರು ಮತ್ತು ಪ್ರತಿದಿನವೂ ಗಾಂಧೀಜಿಯ ಆರೋಗ್ಯದ ಬಗ್ಗೆ ಬುಲೆಟಿನ್ ಹೊರಡಿಸುತ್ತಿದ್ದರು.

ಈ ಉಪವಾಸವನ್ನು ಗಾಂಧೀಜಿ ಆರಂಭ ಮಾಡಿದರೆಂದು ತಿಳಿದ ಕೂಡಲೆ ದೇಶದಲ್ಲಿ ಹಾಹಾಕಾರ ಉಂಟಾಯಿತು. ಗಾಂಧೀಜಿಯನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಹೊರಗಿದ್ದ ಎಲ್ಲಾ ಪಾರ್ಟಿಗಳ ಮುಖಂಡರೂ ಸಭೆ ಸೇರಿ ಸರ್ಕಾರಕ್ಕೆ ಪಾರ್ಥನೆ ಕಳುಹಿಸಿದರು. ಇಂಗ್ಲೆಂಡಿನ ಮ್ಯಾಂಚೆಷ್ಟರ್ ಗಾರ್ಡಿಯನ್ ಪತ್ರಿಕೆ “ಸರ್ಕಾರ ಇದು ನಮ್ಮ ಜವಾಬ್ದಾರಿಯಲ್ಲವೆಂದು ಅಲ್ಲಗೆಳೆಯಬಹುದು, ಆದರೆ ಭಾರತದಲ್ಲಿ ಈ ಪ್ರಕರಣ ಬಹಳ ದುಃಖವುಂಟು ಮಾಡುತ್ತದೆ.” ಎಂದು ಬರೆಯಿತು. ಕೇಂದ್ರ ಶಾಸನ ಸಭೆಯೂ ಬಂಗಾಳ ಶಾಸನ ಸಭೆಯೂ ಗಾಂಧೀಜಿಯನ್ನು ತತ್‌ಕ್ಷಣ ಖುಲಾಸೆ ಮಾಡಬೇಕೆಂದು ಸರ್ಕಾರಕ್ಕೆ ಆಗ್ರಹಪೂರ್ವಕವಾಗಿ ತಿಳಿಸಿದವು. ಕೌನ್ಸಿಲ್ ಆಫ್ ಸ್ಟೇಟಿನಲ್ಲಿ ಸಭಿಕರು ಸಭಾತ್ಯಾಗ ಮಾಡಿದರು. ಕಲ್ಕತ್ತಾದಲ್ಲಿ ಭಾರೀ ಸಾರ್ವಜನಿಕ ಸಭೆ ನಡೆದು, ಗಾಂಧೀಜಿಯನ್ನು ಖುಲಾಸೆ ಮಾಡಲೇಬೆಂದು ಕೇಂದ್ರ ಸರ್ಕಾರಕ್ಕೆ ತಂತಿ ಕಳುಹಿಸಲಾಯಿತು. ದಕ್ಷಿಣ ಆಫ್ರಿಕಾ, ಅಮೆರಿಕಾ, ಇಂಗ್ಲೆಂಡ್ ಈ ದೇಶಗಳಿಂದ ವೈಸರಾಯರಿಗೂ ಬ್ರಿಟಿಷ್ ಮಂತ್ರಿಗಳಿಗೂ ಗಾಂಧೀಜಿಯನ್ನು ಬಿಡುಗಡೆ ಮಾಡಬೇಕೆಂದು ಮನವಿಗಳು ಹೊರಟವು. ಲಂಡನ್ ಟೈಮ್ಸ್ ಪತ್ರಿಕೆ ಕೂಡ “ಇಂಡಿಯಾದ ಪರಿಸ್ಥಿತಿ ಚೆನ್ನಾಗಿಲ್ಲ. ಇಂಗ್ಲೆಂಡು ಹಿಂದೆ ತಪ್ಪು ಮಾಡಿದ್ದರೂ ಚಿಂತೆಯಿಲ್ಲ. ಆಗ ಶಾಂತಿಯ ಮಾತುಕತೆಗಳಿಗೆ ಅವಕಾಶವಿದೆ” ಎಂದು ಬರೆಯಿತು. ಚಿಕಾಗೋದ “ಸನ್” ಎಂಬ ಪತ್ರಿಕೆ ಗಾಂಧೀಜಿಯನ್ನು ಬೇಷರತ್ ಖುಲಾಸೆ ಮಾಡಬೇಕೆಂದು ಬರೆಯಿತು. ಲಾಯಿಡ್ ಜಾರ್ಜ್ ಮತ್ತು ಆರ್ಚಿಬಿಷೆಪ್ ಆಪ್ ಕ್ಯಾಂಟರ‍್ಬರಿ ತಮ್ಮ ಖೇದವನ್ನು ಸೂಚಿಸಿದರು. ಡೆಲ್ಲಿಯ ಮುಖಂಡರ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಸಿ. ರಾಜಗೋಪಾಲಾಚಾರಿಯವರೂ ಸರ್ಕಾರಕ್ಕೆ ಬರೆದು, “ಯಾವ ರಾಜಕೀಯ ಸಬೂಬೂ ಇರಬಾರದು, ಗಾಂಧೀಜಿಯನ್ನು ಕೂಡಲೇ ಖುಲಾಸೆ ಮಾಡಬೇಕು” ಎಂದು ತಿಳಿಸಿದರು. ಸರ್ಕಾರ ಗಾಂಧೀಜಿಯ ಜೀವವನ್ನೂ ಲೆಕ್ಕಿಸದೆ ಅವರನ್ನು ಖುಲಾಸೆ ಮಾಡದುದನ್ನು ಕಂಡು ವೈಸರಾಯರ ಕೌನ್ಸಿಲಿನ ಮೂವರು ಸದಸ್ಯರು ಎಚ್. ಪಿ.ಮೋದಿ, ಎನ್.ಆರ್. ಸರ್ಕಾರ್ ಮತ್ತು ಎಂ.ಎಸ್.ಆಣೆ ರಾಜೀನಾಮೆಯಿತ್ತರು. ಡೆಲ್ಲಿಯಲ್ಲಿ ೮೦೦ ಮುಖಂಡರು, ಎಲ್ಲಾ ಜಾತಿಯವರು, ಗಾಂಧೀಜಿಯ ಖುಲಾಸೆಗಾಗಿ ವೈಸ್‌ರಾಯರಿಗೆ ನಿರ್ಣಯ ಕಳುಹಿಸಿದರು. ೧೭,೦೦೦ ಜನರ ರುಜುವುಳ್ಳ ಒಂದು ಅರ್ಜಿಯನ್ನು ವೈಸ್‌ರಾಯರಿಗೆ ಕಳುಹಿಸಲಾಯಿತು.