ಸರ್ ತೇಜ್ ಬಹದ್ದೂರ್ ಸಪ್ರು, ಎಂ.ಆರ್. ಜಯಕರ್, ಪಂಡಿತ ಕುಂಜ್ರು, ಎನ್.ಎಂ.ಜೋಷಿ ಮುಂತಾದ ಮುಖಂಡರು ಗಾಂಧೀಜಿಯನ್ನು ಕೂಡಲೆ ಖುಲಾಸೆ ಮಾಡಬೇಕೆಂದು ಇಂಗ್ಲೆಂಡಿನ ಪ್ರಧಾನಿ ಚರ್ಚಿಲರಿಗೂ, ಸೆಕ್ರೆಟರಿ ಅಮೆರಿಯವರಿಗೂ ಕೇಬಲ್ ಕಳುಹಿಸಿದರು. ಈ ಕೇಬಲ್‌ನ ಒಂದು ಕಾಪಿಯನ್ನು ಪ್ರೆಸಿಡೆಂಟ್ ರೂಸ್‌ವೆಲ್ಟ್‌ರ ಖಾಸಗಿ ಕಾರ್ಯದರ್ಶಿ ವಿಲಿಯಂ ಫಿಲಿಪ್ಸ್‌ರಿಗೂ ಕೊಟ್ಟರು. ವೈಸರಾಯರಿಗೆ ಕೊಟ್ಟ ತಂತಿಗೆ ಸಪ್ರುರವರಿಗೆ ಉತ್ತರ ಬಂದಿತು: “ಉಪವಾಸದ ಜವಾಬ್ದಾರಿ ಸರ್ಕಾರದ್ದಲ್ಲ, ಗಾಂಧೀಜಿಯವರದು. ಉಪವಾಸ ನಿಲ್ಲಿಸುವ ಜವಾಬ್ದಾರಿ ಗಾಂಧೀಜಿಯವರದೇ, ಸರ್ಕಾರದ್ದಲ್ಲ.”

ಸಪ್ರೂ ಇಂಗ್ಲೆಂಡಿನ ಪ್ರಧಾನಿಯವರಿಗೂ ಪಾರ್ಲಿಮೆಂಟಿನ ಪಾರ್ಟಿಮುಖಂಡರಿಗೂ ತಂತಿ ಕಳುಹಿಸಿದರು. ಈ ಕೇಬಲ್‌ಗೆ ಉತ್ತರವಾಗಿ ಪ್ರಧಾನಿ ಚರ್ಚಿಲ್ ಹೇಳಿದರು: “ಗಾಂಧೀಝಿಯವರದೇ ಜವಾಬ್ದಾರಿ. ಅವರೇ ನಿರ್ಧರಿಸಲಿ.”

ಈ ಉತ್ತರ ಇಂಡಿಯಾದಲ್ಲಿ ಬಹಳ ಆಶಾಭಂಗ ಉಂಟುಮಾಡಿತು. ಇಂಡಿಯಾದಲ್ಲಿ ಎಲ್ಲೆಲ್ಲಿಯೂ ಮಹಾತ್ಮರ ಶ್ರೇಯಸ್ಸಿಗಾಗಿ ಪ್ರಾರ್ಥನೆಗಳು ನಡೆದವು.

ಗಾಂಧೀಜಿಯ ಉಪವಾಸ ಮುಂದುವರಿಯಿತು. ಮಧ್ಯೆ ಸ್ವಲ್ಪ ಉತ್ಕಟ ಸ್ಥಿತಿ ಬಂದಿತ್ತು. ಗಾಂಧೀಜಿ ಅದನ್ನು ದಾಟಿದರು. ಡಾಕ್ಟರು ಯಾವಾಗಲೂ ಅವರ ಬಳಿಯೇ ಇದ್ದರು. ದೈವಬಲದಿಂದ ಗಾಂಧೀಜಿ ೩೧ ದಿವಸದ ಉಪವಾಸವನ್ನು ೧೯೪೩ನೇ ಮಾರ್ಚಿ ೩ನೇ ತಾರೀಖು ಬುಧುವಾರ ಮುಕ್ತಾಯಗೊಳಿಸಿದರು. ಪಾರಣೆ ಮಾಡುವಾಗ ಗಾಂಧೀಜಿ ಧ್ಯಾನಾಸಕ್ತರಾಗಿದ್ದರು. ಮಂಚದ ಮೇಲೆಯೇ ಮಲಗಿದ್ದರೂ, ಬಳಿಯಿದ್ದವರು “ವೈಷ್ಣವ ಜನತೋ” ವನ್ನು ಹಾಕಿದರು. ಟಾಗೋರರ ಎರಡು ಕೃತಿಗಳನ್ನೂ ಹಾಡಿದರು. “ಲೀಡ್ ಕೈಂಡ್ಲೀ ಲೈಟ್” ಎಂಬ ಇಂಗ್ಲಿಷ್ ಗೀತವನ್ನೂ, ಗೀತಾ ಮತ್ತ ಕೊರಾನಿನಿಂದ ಭಾಗಗಳನ್ನೂ ಓದಿದರು. ಕನೂ ಗಾಂಧೀ ತಲಸೀದಾಸ ರಾಮಾಯಣದ ಕೆಲವು ಪದ್ಯಗಳನ್ನು ಪಕ್ಕವಾದ್ಯ ಸಮೇತ ಹಾಡಿದರು. ಮಿರಾಬೆನ್ ಬೈಬಲನಿಂದ ಕೆಲವು ಸ್ತೋತ್ರಗಳನ್ನು ಪಠಿಸಿದರು.

ಪ್ರಾರ್ಥನೆಯಾದ ಮೇಲೆ, ಐದು ನಿಮಿಷ ಮೌನವಾಯಿತು. ಗಾಂಧೀಜಿ ಕಣ್ಣು ಮುಚ್ಚಿಕೊಂಡು ದೇವರನ್ನು ಪ್ರಾರ್ಥಿಸುತ್ತಿದ್ದರು. ಕಸ್ತೂರಿ ಬಾ ಗಾಂಧೀ ಆರು ಔನ್ಸು ಕಿತ್ತಲೆ ಹಣ್ಣಿನ ರಸವನ್ನು ಗಾಂಧೀಜಿಯ ಕೈಗೆಕೊಟ್ಟರು. ಅದನ್ನು ಸೇವಿಸಲು ಗಾಂಧೀಜಿ ೭೦ ನಿಮಿಷ ತೆಗೆದುಕೊಂಡರು.

ಗಾಂಧೀಜಿ ಡಾಕ್ಟರುಗಳನ್ನೂ ತಮ್ಮ ಸೇವೆಯಲ್ಲಿದ್ದವರನ್ನೂ ಕೃತಜ್ಞತೆಯಿಂದ ವಂದಿಸಿದರು. ಗಾಂಧೀಜಿ ಹೇಳಿದರು: “ಡಾಕ್ಟರುಗಳು ಬಹಳ ಮುತುವರ್ಜಿ ವಹಿಸಿದ್ದರು. ದೇವರ ಕೃಪೆಯೂ ನನ್ನ ಮೇಲೆ ಬಹಳವಾಗಿತ್ತು.”

ಗಾಂಧೀಜಿಯ ಉಪವಾಸ ಮುಗಿದದ್ದು ದೇಶದಲ್ಲಿ ಎಲ್ಲರಿಗೂ ಸಂತೋಷ ಉಂಟುಮಾಡಿತು. ಸರ್ಕಾರಕ್ಕೂ ಹಾಯಾಗಿರಬೇಕು. ಗಾಂಧೀಜಿ ಉಪವಾಸ ಮುಗಿಸಿದ ಮೇಲೆ, ಹೊರಗಿದ್ದ ಎಲ್ಲ ಮುಖಂಡರೂ ರಾಜಕೀಯ ಬಿಕ್ಕಟ್ಟನ್ನು ಪರಿಹರಿಸಲು ಯತ್ನಿಸಿದರು. ಆದರೆ ಸರ್ಕಾರ ಬಹಳ ಬಿಗಿಯಾಗಿದ್ದುದರಿಂದ, ಪರಿಸ್ಥಿತಿಯಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ರೂಸ್‌ವೆಲ್ಟರ ಖಾಸಗಿ ಕಾರ್ಯದರ್ಶಿ ಜೈಲಿನಲ್ಲಿದ್ದ ಗಾಂಧೀಜಿಯನ್ನು ನೋಡಲಪೇಕ್ಷಿಸಿದರು, ಆದರೆ ಸರ್ಕಾರದ ಪರವಾನಗಿ ದೊರೆಯಲಿಲ್ಲ.

ಗಾಂಧೀಜಿ ಜೈಲಿನಿಂದ ಜಿನ್ಹಾರಿಗೆ ಒಂದು ಪತ್ರ ಬರೆದು, ಅವರನ್ನು ನೋಡಿ ಮಾತನಾಡಬೇಕೆಂದು ಅಪೇಕ್ಷಿಸಿದರು, ಸರ್ಕಾರ ಆ ಪತ್ರವನ್ನು ಜಿನ್ಹಾರಿಗೆ ತಲಪಿಸಲಿಲ್ಲ.

೧೯೪೩ರ ಪ್ರಥಮಾರ್ಧದಲ್ಲಿ ಕಾರಾಗ್ರಹದಲ್ಲಿದ್ದವರ ಸಂಖ್ಯೆ ೪೦,೦೦೦ಕ್ಕೆ ಹತ್ತಿರ ಹತ್ತಿರವಿತ್ತು. ಅಹಮದ್‌ನಗರ ಕೋಟೆಯಲ್ಲಿ ಬಂದನದಲ್ಲಿದ್ದ ಮೌಲಾನಾ ಅಬುಲ್ ಕಲಾಂ ಆಜಾದರು ತಮ್ಮ ಆತ್ಮಕತೆಯಲ್ಲಿ ಗಾಂಧೀಜಿಯವರ ಈ ಉಪವಾಸದ ಬಗ್ಗೆ ಬರೆಯುತ್ತಾ ಹೇಳುತ್ತಾರೆ: “ಈ ವಯಸ್ಸಿನಲ್ಲಿ ಆಗಿನ ಅವರ ಆರೋಗ್ಯಸ್ಥಿತಿಯಲ್ಲಿ, ೨೧ ದಿವಸಗಳ ಉಪವಾಸವನ್ನು ಅವರು ತಾಳಲಾರರೆಂದು ಸರ್ಕಾರ ಯೋಚಿಸಿತು. ಈ ಉಪವಾಸವನ್ನು ಅವರು ತಾಳಲಾರರೆಂದು ಸರ್ಕಾರ ಯೋಚಿಸಿತು. ಈ ಉಪವಾಸದಿಂದ ಅವರು ಬದುಕಿಕೊಳ್ಳಲಾರರೆಂದು ನಿಶ್ಚಯಿಸಿ, ಅವರ ದಹನ ಸಂಸ್ಕಾರಕ್ಕಾಗಿ ಶ್ರೀಗಂಧದ ಸೌದೆಯನ್ನು ತಂದಿದ್ದರು. ಅವರ ಅಂತ್ಯಕ್ರಿಯೆಗಳನ್ನು ಅವರನ್ನಿಟ್ಟಿದ್ದ ಆಗಾಖಾನ್‌ಅರಮನೆಯಲ್ಲಿ ನೆರವೇರಿಸಿ ಬೂದಿಯನ್ನು ಅವರ ಮಕ್ಕಳಿಗೆ ಕೊಡುವುದು ಎಂಬುದು ಅವರ ಪ್ರತಿಕ್ರಿಯೆ.” ವಾಸ್ತವವಾಗಿ ಗಾಂಧೀಜಿಗೆ ಆಗ ೭೦ ವಯಸ್ಸಾಗಿತ್ತು. ಆರೋಗ್ಯವೂ ಚೆನ್ನಾಗಿರಲಿಲ್ಲ. ಈ ಕಾರಣದಿಂದ ಏರ್ಪಡಿಸಿದ್ದಿರಬಹುದು.

ಲಾರ್ಡ್ ಲಿನ್‌ಲಿತ್ ಗೋರವರ ವೈಸ್‌ರಾಯ್ ಅಧಿಕಾರಾವಧಿ ೧೯೪೩ನೇ ಉತ್ತರಾರ್ಧದಲ್ಲಿ ಮುಕ್ತಾಯವಾಯಿತು. ಅವರ ಅನಂತರ ಲಾರ್ಡ್ ವೇವೆಲರು ಇಂಡಿಯಾದ ವೈಸರಾಯಾಗಿ ಬಂದರು.

ಲಾರ್ಡ್ ಲಿನ್‌ಲಿತ್ ಗೋರವರಿಗೆ, ಅವರು ಈ ದೇಶವನ್ನು ಬಿಡುವ ಮುನ್ನ ಸೆಪ್ಟಂಬರ್ ೨೭ರಲ್ಲಿ, ಗಾಂಧೀಜಿ ಒಂದು ಪತ್ರ ಬರೆದರು. “ಎಲ್ಲಾ ವೈಸರಾಯರುಗಳಿಗಿಂತಲೂ ನಿಮ್ಮ ವಿಷಯದಲ್ಲಿ ನನಗೆ ಬಹಳ ದುಃಖವುಂಟಾಗಿದೆ. ಒಂದು ಸಮಯದಲ್ಲಿ ನೀವು ನನ್ನಲ್ಲಿ ಅತ್ಯಂತ ವಿಶ್ವಾಸವಿಟ್ಟಿದ್ದಿರಿ. ಆದರೆ ಈಚೆಗೆ ನಿಮ್ಮ ಕೆಳಗಿನ ಅಧಿಕಾರಿಗಳು ನಿಮಗೆ ಹೇಳಿದ ಅಸತ್ಯಗಳನ್ನು ನಂಬಿ, ನನ್ನಲ್ಲಿ ಅಪನಂಬಿಕೆ ಪಟ್ಟಿರಿ. ಯಾವತ್ತಾದರೂ ನೀವು ನಿಮ್ಮ ತಪ್ಪುಗಳಿಗಾಗಿ ಪಶ್ಚಾತ್ತಾಪ ಪಡುವಿರಿ ಎಂದು ನಂಬಿದ್ದೇನೆ” ಎಂದು ತಿಳಿಸಿದರು. ಲಾರ್ಡ್ ಲಿನ್‌ಲಿತ್ ಗೋರವರು ಇದಕ್ಕೆ ಅಕ್ಟೋಬರ್‌ನಲ್ಲಿ ಉತ್ತರ ಬರೆದು, ಗಾಂಧೀಜಿಯವರ ಭಾವನೆಗಳು ತಪ್ಪು ಎಂದು ತಿಳಿಸಿದರು.

ಲಾರ್ಡ್ ವೇವಲರು ವೈಸ್‌ರಾಯ್‌ರಾಗಿ ಬಂದ ಕೂಡಲೆ, ಬಂಗಾಳದಲ್ಲಿ ಉಂಟಾಗಿದ್ದ ಘೋರವಾದ ಕ್ಷಾಮದಲ್ಲಿ ಬ್ರಿಟಿಷ್ ಸೈನ್ಯದ ಜನರನ್ನು ನೇಮಿಸಿ, ಆಹಾರವನ್ನು ಹಂಚಿಸಿದರು. ಈ ಕ್ಷಾಮದಲ್ಲಿ ೧೫ ಲಕ್ಷ ಜನ ಸತ್ತರು. ಪ್ರಾಮುಖ್ಯವಾಗಿ ಕಲ್ಕತ್ತಾದಲ್ಲಿ ಈ ಕ್ಷಾಮದ ಉಲ್ಬಣತೆ ಜಾಸ್ತಿಯಾಗಿತ್ತು. ಮಳೆಯಿಲ್ಲದುದೆ, ಬೆಳೆಯಿಲ್ಲದುದೇ, ಕ್ಷಾಮಕ್ಕೆ ಕಾರಣವಾದರೂ ಕೇಂದ್ರ ಸರ್ಕಾರ ಮತ್ತು ಪ್ರಾಂತ ಸರ್ಕಾರಗಳ ಅಸಮರ್ಥತೆಯೇ ಇಷ್ಟು ಘೋರಸ್ಥಿತಿಗೆ ಕಾರಣ. ಮುಂಚೆಗೆ ಮುಂಚೆಯೇ ಆಲೋಚಿಸಿ ಮುಂಜಾಗ್ರತೆಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕಾಗಿತ್ತು.

ಲಾರ್ಡ್ ವೇವಲರು ತಮ್ಮ ಪ್ರಥಮ ಭಾಷಣವನ್ನು ೧೯೪೪ ನೇ ಫೆಬ್ರವರಿ ೧೭ರಲ್ಲಿ ಮಾಡಿದರು. ಅದರಲ್ಲಿ ಅವರು ತಿಳಿಸಿದ್ದೇನೆಂದರೆ: “ಇಂಡಿಯಾದ ಬಾಗಿಲುಗಳಿಂದ ಶತ್ರುಗಳನ್ನು ಓಡಿಸಬೇಕು. ಆಹಾರ ಸರಬರಾಜು ಸ್ಥಿರವಾಗಿಯೂ ಇರುವಂತೆ ಮಾಡಬೇಕು. ದೇಶದ ಆರ್ಥಿಕ ಮತ್ತು ರಾಜಕೀಯ ಅಭಿವೃದ್ಧಿ ಮುಂದರಿಯಬೇಕು. ಇಂಡಿಯಾದ ಬಗ್ಗೆ ಇಂಗ್ಲೆಂಡಿನ ಗುರಿ ಸ್ಪಷ್ಟವಾಗಿದೆ. ಕಾಮನ್‌ವೆಲ್ತ್‌ನಲ್ಲಿ ಇಂಡಿಯಾ ತನ್ನ ಸ್ವಾತಂತ್ರ್ಯವನ್ನು ಅನುಭವಿಸುತ್ತಾ ಸುಭಿಕ್ಷವನ್ನೂ, ಐಕಮತ್ಯವನ್ನೂ, ಸುಖಶಾಂತಿಯನ್ನೂ ಹೊಂದಿರಬೇಕೆಂಬುದೇ ಆಗಿದೆ. ಕ್ರಿಪ್ಸ್‌ರವರು ನೀಡಿರುವ ಸಲಹೆಗಳು ಇದ್ದೇ ಇವೆ. ನೀವು ಭೂಗೋಳವನ್ನು ಬದಲಾಯಿಸಲಾರಿರಿ. ರಕ್ಷಣೆಯ ಮತ್ತು ಹೊರದೇಶ ವ್ಯವಹಾರದ ವಿಷಯಕ್ಕೆ ಮತ್ತು ಇನ್ನು ಕೆಲವು ಹೊರಗಿನ ವಿಷಯಗಳಿಗೆ ಇಂಡಿಯಾ ಒಂದು ಯೂನಿಟ್ಟು (ರಾಷ್ಟ್ರ). ಹಿಂದೂಗಳ ಮತ್ತು ಮುಸ್ಲಿಮರ ಪರಸ್ಪರ ಸ್ನೇಹ, ಇತರ ಮೈನಾರಿಟಿಗಳ ವಿಷಯದಲ್ಲಿಯೂ ಮೈತ್ರಿ, ಮತ್ತು ದೇಶೀಯ ಸಂಸ್ಥಾನಗಳ ಕೂಡ ಸರಿಯಾದ ಸಂಬಂಧ – ಇವೇ ಮುಂತಾದ ವಿಷಯಗಳನ್ನು ಭಾರತೀಯರೇ ನಿರ್ಧರಿಸಬೇಕು.”

ಕೇಂದ್ರ ಶಾಸನ ಸಭೆಯಲ್ಲಿ ಫೆಬ್ರವರಿ ೨೭ರಲ್ಲಿ ಖಾಸಗಿ ಸದಸ್ಯರು ಒಟ್ಟಿಗೆ ಕಲೆತು ಸರ್ಕಾರದ ಮಸೂದೆಗಳನ್ನು ವಿರೋಧಿಸುತ್ತಿದ್ದರು. ಬುಲಾಭಾಯಿ ದೇಸಾಯಿ ಕಾಂಗ್ರೆಸ್ ಪರವಾಗಿಯೂ ಲಿಯಾಕತ್ ಅಲೀಖಾನ್ ಮುಸ್ಲಿಂ ಲೀಗ್ ಪರವಾಗಿಯೂ ಕೇಂದ್ರ ಶಾಸನ ಸಭೆಯಲ್ಲಿ ಐಕಮತ್ಯವಾಗಿ ವರ್ತಿಸಿ ಸರ್ಕಾರದ ಬಡ್ಜೆಟ್ಟನ್ನು ವಿರೋಧಿಸಿದರು.

೧೯೪೪ನೇ ಫೆಬ್ರವರಿ ೨೨ರಲ್ಲಿ ಆಗಾಖಾನ್ ಅರಮನೆಯಲ್ಲಿ, ಬಂಧನದಲ್ಲಿದ್ದಾಗಲೇ ಕಸ್ತೂರಿಬಾ ಮೃತರಾದರು. ಅವರನ್ನು ಅಲ್ಲಿಯೇ, ಮಹದೇವ್ ದೇಸಾಯಿಯನ್ನು ದಹನಮಾಡಿದ ಸ್ಥಳದ ಪಕ್ಕದಲ್ಲಿಯೇ, ದಹನ ಮಾಡಲಾಯಿತು. ನೂರಾರು ಬಂಧುಮಿತ್ರರು ಪಕ್ಕದಲ್ಲಿದ್ದರು. ಕಸ್ತೂರಿಬಾರವರ ಖಾಯಿಲೆಯ ಬಗ್ಗೆ ಗಾಂಧೀಜಿಗೂ ಸರ್ಕಾರಕ್ಕೂ ಮಾರ್ಚಿ ೧೨ರಿಂದಲೇ ಪತ್ರ ವ್ಯವಹಾರ ನಡೆಯುತ್ತಿತ್ತು. ಡಾ. ದಿನ್‌ಷಾ ಮೆಹತಾರನ್ನೂ, ಆಯುರ್ವೇದ ವೈದ್ಯರನ್ನೂ ಕಸ್ತೂರಿಬಾ ಅಪೇಕ್ಷಿಸುತ್ತಾರೆಂದು ಗಾಂಧೀಜಿ ಜೈಲಿನ ಅಧಿಕಾರಿಗಳಿಗೆ ತಿಳಿಸಿದ್ದರು. “ಅವರಿಗೆ ಬ್ರಾಂಕೈಟಿಸ್ ಮತ್ತು ಇತರ ಖಾಯಿಲೆಗಳಿವೆ. ತನ್ನ ಸ್ವಂತ ವೈದ್ಯರನ್ನು ಕಸ್ತೂರಿಬಾ ಅಪೇಕ್ಷಿಸುತ್ತಾರೆ; ಅವರಿಗೆ ಕೊಟ್ಟಿರುವ ಸಹಾಯ ಸಾಲದು. ಅವರ ಖಾಯಿಲೆ ಹೆಚ್ಚುತ್ತಿದೆ,” ಎಂದು ತಿಳಿಸುತ್ತಲೇ ಇದ್ದರು. ದೊಡ್ಡ ಮಗ ಹರಿಲಾಲನನ್ನು ನೋಡಬೇಕೆಂದು ಕಸ್ತೂರಿಬಾಗೆ ಆಶೆ. ಅವನು ಪೂನಾದಲ್ಲಿಯೇ ಇದ್ದ. ಅವನನ್ನು ಬಿಡಲಿಲ್ಲ. ಇಂಡಿಯಾ ಸರ್ಕಾರಕ್ಕೆ ೧೯೪೪ನೇ ಜನವರಿ ೩೧ರಲ್ಲಿ ಒಂದು ತುರ್ತುಕಾಗದವನ್ನು ಬರೆದರು. ಕಸ್ತೂರಿ ಬಾ ರವರ ಸ್ಥಿತಿ ದಿನದಿನಕ್ಕೂ ಕೆಡುತ್ತಿದೆ ಎಂದು ಸುಶೀಲ ನಾಯರ್ ಮತ್ತು ಡಾ. ಗಿಲ್ಡರ್ ಜೈಲ್ ಅಧಿಕಾರಿಗಳಿಗೆ ತಿಳಿಸಿದರು. ಫೆಬ್ರವರಿ ೩ರವರೆಗೂ ಯಾವ ಆಯುರ್ವೇದ ಪಂಡಿತರೂ ಬರಲಿಲ್ಲ. ಕಸ್ತೂರಿಬಾ ಪುನಃ ಪುನಃ ಕೇಳಿದರು: ಡಾ. ದಿನ್‌ಷಾ ಮತ್ತು ವೈದ್ಯರಾಜಶರ್ಮಾ (ಲಾಹೋರಿನವರು) ಇವರಿಬ್ಬರನ್ನೂ ಬೇಗ ಕರೆಸಿದರೆ ಅನುಕೂಲ. “ತಡವೇತಕ್ಕೆ ಆಗುತ್ತಿದೆಯೋ ತಿಳಿಯದು. ರೋಗಿ ಖಾಯಿಲೆಯೊಡನೆ ಬಹಳ ಹೋರಾಡುತ್ತಿದ್ದಾರೆ. ಕಸ್ತೂರಿಬಾರ ಶಕ್ತಿ ದಿನದಿನಕ್ಕೂ ಕುಂದುತ್ತಿದೆ” ಎಂದೂ ಗಾಂಧೀಜಿ ಬರೆದರು.

ಕಡೆಗೆ ಆಯುರ್ವೇದ ವೈದ್ಯರು ಬಂದರು. ಅವರೂ ಚಿಕಿತ್ಸೆ ನಡೆಸಿದರು. ಆದರೆ ಅವರ ಚಿಕಿತ್ಸೆ ತಡವಾಗಿ ಒದಗಿತು. ಅದು ಪರಿಣಾಮ ಉಂಟು ಮಾಡಲಿಲ್ಲ. ಡಾ.ಗಿಲ್ಡರ್ ಮತ್ತು ಡಾ. ಸುಶೀಲಾ ನಾಯರ್ ಚಿಕಿತ್ಸೆ ನಡೆಸಿದರು. ದೈವವಿಧಿ ಬೇರೆ ಇದ್ದ ಕಾರಣ ಕಸ್ತೂರಿಬಾ ಗಾಂಧೀಜಿಯ ತೊಡೆಯ ಮೇಲೆಯೇ ಫೆ೨೨ರಲ್ಲಿ ಕಾಲವಾದರು. ಅದು ಮಹಾಶಿವರಾತ್ರಿಯ ದಿನ. ಅವರ ಪುತ್ರ ದೇವ್‌ದಾಸ್ ಗಾಂಧೀಜಿಯವರು ಚಿತೆಯನ್ನು ಹತ್ತಿಸಿದರು. ಅವರ ಅಸ್ಥಿತಿಯನ್ನು ಪ್ರಯಾಗದಲ್ಲಿ ಗಂಗೆಗೆ ಅರ್ಪಿಸಲಾಯಿತು.

ವೈಸರಾಯ್ ಲಾರ್ಡ್ ವೇವಲ್ ಗಾಂಧೀಜಿಗೆ ಕಸ್ತೂರಿಬಾ ರವರ ಮರಣದ ಬಗ್ಗೆ ಸಹಾನುಭೂತಿ ಸೂಚಿಸಿ, ಫೆಬ್ರವರಿ ೨೫ರಲ್ಲಿ ಕಾಗದ ಬರೆದರು. ಗಾಂಧೀಜಿ ಉತ್ತರ ಬರೆಯುತ್ತಾ, “ನನ್ನ ಪತ್ನಿಯ ಮರಣದ ಬಗ್ಗೆ ನಾನು ಭಾವಿಸಿದ್ದಕ್ಕಿಂತಲೂ ಹೆಚ್ಚು ದುಃಖಿತನಾಗಿದ್ದೇನೆ. ನಾವು ಸಾಮಾನ್ಯ ದಂಪತಿಗಳಲ್ಲ. ೧೯೦೬ರಿಂದ ಪರಸ್ಪರ ಒಪ್ಪಿಗೆಯಿಂದ ಬ್ರಹ್ಮಚರ್ಯವನ್ನು ಅವಲಂಬಿಸಿದೆವು. ಆಗಿನಿಂದಲೂ ನಮ್ಮ ಪರಸ್ಪರ ಒಪ್ಪಿಗೆಯಿಂದ ಬ್ರಹ್ಮಚರ್ಯವನ್ನು ಅವಲಂಬಿಸಿದೆವು. ಆಗಿನಿಂದಲೂ ನಮ್ಮ ಪರಸ್ಪರ ಪ್ರೀತಿ ಇನ್ನೂ ಹೆಚ್ಚಾಯಿತು. ಆಗಿನಿಂದಲೂ ಅವರು ನನ್ನ ನಿಜವಾದ “Better half” ಆದರು. ಆಕೆಯದು ಬಹಳ ಗಟ್ಟಿ ಮನಸ್ಸು, ಇದನ್ನು ನಾನು ಮೊಂಡುತನವೆಂದು ನನ್ನ ಚಿಕ್ಕವಯಸ್ಸಿನಲ್ಲಿ ತಿಳಿದುಕೊಂಡಿದ್ದೆ. ಆದರೆ ಆಕೆಯ ಈ ಗಟ್ಟಿ ಮನಸ್ಸೇ ನಾನು ಕೈಕೊಂಡ ಸತ್ಯಾಗ್ರಹಗಳಲ್ಲಿ ಜಯಶಾಲಿಯಾಗಲು ಅವಕಾಶವುಂಟು ಮಾಡಿತು. ದಕ್ಷಿಣ ಆಫ್ರಿಕಾದಲ್ಲಿ ನಡೆಸಿದ ಸತ್ಯಾಗ್ರಹದಲ್ಲಿ ಅವರೂ ಪ್ರಧಾನ ಪಾತ್ರವಹಿಸಿದರು. ಅವರು ಅನೇಕ ಸಾರಿ ಕಾರಾಗೃಹವಾಸವನ್ನು ಅನುಭವಿಸಿದ್ದಾರೆ. ಈ ಸಾರಿ ನನ್ನ ಮತ್ತು ಒಡನಾಡಿಗಳ ಬಂಧನ ಮತ್ತು ಅವರ ಬಂಧನ ಅವರ ಮನಸ್ಸಿಗೆ ಬಹಳ ಬೇಜಾರುಂಟು ಮಾಡಿತು. ನನ್ನ ದಸ್ತಗಿರಿಗೆ. ಆಕೆ ಪೂರ್ಣವಾಗಿ ಸಿದ್ಧರಾಗಿರಲಿಲ್ಲ.

“ನಾನೂ ಆಕೆಗೆ ಹೇಳಿದ್ದೆ, ಸರ್ಕಾರ ನನ್ನ ಅಹಿಂಸೆಯನ್ನು ತಿಳಿದಿದೆ. ನಾನೇ ದಸ್ತಗಿರಿಗೆ ಅನುವಾದರೆ ಸರ್ಕಾರ ದಸ್ತಗಿರಿ ಮಾಡುವುದು, ಇಲ್ಲದಿದ್ದರೆ ಇಲ್ಲ ಎಂಬ ಭರವಸೆಯನ್ನು ನಾನು ಆಕೆಗೆ ಕೊಟ್ಟಿ‌ದ್ದೆ. ಆದ್ದರಿಂದ ನನ್ನ ದಸ್ತಗಿರಿ ಆಖೆಗೆ ಷಾಕ್ ತಗಲಿದಂತಾಯಿತು. ಅವರಿಗೆ ಕೂಡಲೆ ಭೇದಿ ಆರಂಭವಾಯಿತು. ಡಾ. ಸುಶೀಲಾ ನಾಯರ್ ಕೈಲಾದ ಚಿಕಿತ್ಸೆಯನ್ನು ಮಾಡಿದರು. ಅದು ನಿಂತಿತು. ನಾನೂ ಅವರಿಗೆ ಸಮಾಧಾನ ಹೇಳಿದೆ. ಆಮೇಲೆ ಬೇರೆ ಬೇನೆ ಬಂದಿತು. ಅವರು ಶಾಶ್ವತವಾಗಿ ನನ್ನನ್ನು ಅಗಲಿದರು” ಎಂದರು.

ಇತರ ವಿಷಯಗಳಿಗೆ ಗಾಂಧೀಜಿ ನೂತನ ವೈಸರಾಯರ ಭಾಷಣವನ್ನು ಪ್ರಸ್ತಾಪಿಸಿ “ನೀವು ಪ್ರಕಟಿಸಿರುವ ಅಭಿಪ್ರಾಯಗಳನ್ನು ಹೊಂದಿರುವುದು ನನಗೆ ಆಶ್ಚರ್ಯವನ್ನುಂಟುಮಾಡಿದೆ. ನೀವು ಪುನರಾಲೋಚನೆ ಮಾಡಿದರೆ, ಸತ್ಯ ವಿದಿತವಾಗುತ್ತದೆ” ಎಂದು ಬರೆದರು.

ವೈಸರಾಯರು ಉತ್ತರ ಬರದು, “ನಾನು ಇಂಡಿಯಾದ ಮಿತ್ರ. ಇಂಡಿಯಾದ ಅಭಿವೃದ್ಧಿಗಾಗಿ ನಾನು ನನ್ನ ಕೈಲಾದ್ದನ್ನು ಮಾಡುತ್ತೇನೆ” ಎಂದು ತಿಳಿಸಿದರು.

ಕಸ್ತೂರಿಬಾರ ಮರಣ ಇಂಡಿಯಾದ ಆದ್ಯಂತ ಅತ್ಯಂತ ದುಃಖವುಂಟು ಮಾಡಿತು. ಗಾಂಧೀಜಿಯವರಿಗೆ ನಾನಾ ಕಡೆಗಳಿಂದ ಅನುತಾಪ ಸೂಚನೆಗಳು ಬಂದವು. ಒಂದು ಭಾರಿ ಸಭೆ ನಡೆದು ಕಸ್ತೂರಿಬಾರ ಸ್ಮರಣೆಗಾಗಿ ಸೇವಾ ಸಂಸ್ಥೆಗಳನ್ನು ನಿರ್ಮಿಸಬೇಕೆಂದೂ, ಅದಕ್ಕಾಗಿ ಕಸ್ತೂರಿಬಾ ನಿಧಿಯೆಂದು ಒಂದು ನಿಧಿಯನ್ನು ಎತ್ತಬೇಕೆಂದೂ, ಅದಕ್ಕಾಗಿ ಕಸ್ತೂರಿಬಾ ನಿಧಿಯೆಂದು ಒಂದು ನಿಧಿಯನ್ನು ಎತ್ತಬೇಕೆಂದೂ, ಅದಕ್ಕಾಗಿ ಕಸ್ತೂರಿಬಾ ನಿಧಿಯೆಂದು ಒಂದು ನಿಧಿಯನ್ನು ಎತ್ತಬೇಕೆಂದೂ ತೀರ್ಮಾನಿಸಲಾಯಿತು. ಥಕ್ಕರ್ ಬಾಪಾ ಈ ನಿಧಿಯ ವಿನಿಯೋಗ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡಿದರು.

ಕಸ್ತೂರಿಬಾ ಗತಿಸಿದ ಮೇಲೆ, ಜೈಲಿನಲ್ಲಿ ಮಹಾತ್ಮಗಾಂಧೀಯವರ ಆರೋಗ್ಯ ಬಹಳ ಕೆಟ್ಟಿತು. ಮಲೇರಿಯಾದಿಂದ ಅವರಿಗೆ ದಿನವೂ ಜ್ವರ ಬರುತ್ತಿತ್ತು. ಅವರ ಶಕ್ತಿ ಕುಂದುತ್ತಾ ಬಂದಿತು. ಜೈಲ್ ಅಧಿಕಾರಿಗಳು ಸರ್ಕಾರಕ್ಕೆ ತಿಳಿಸಿದರು. ಗಾಂಧೀಜಿಯವರ ಆರೋಗ್ಯ ದಿನದಿನಕ್ಕೂ ಕ್ಷೀಣಿಸುತ್ತಿದೆ, ಅವರನ್ನು ಮುಂದೆ ಜೈಲಿನಲ್ಲಿಡುವುದು ಅಪಾಯಕರ ಎಂದು ಬಗೆದರು. ಗಾಂಧೀಜಿಯ ಕ್ಷೀಣ ಆರೋಗ್ಯದ ಬಗ್ಗೆ ಡಾಕ್ಟರುಗಳಿಂದ ಬಂದ ವರದಿಯನ್ನು ಇಂಡಿಯಾ ಸರ್ಕಾರ ಪರಿಶೀಲಿಸಿ, ಬ್ರಿಟಿಷ್ ಸರ್ಕಾರದ ಅನುಮತಿ ಪಡೆದು, ಗಾಂಧೀಜಿಯನ್ನು ಮೇನಲ್ಲಿ ಆಗಾಖಾನ್ ಅರಮನೆಯ ಬಂಧೀಖಾನೆಯಿಂದ ಬಿಡುಗಡೆ ಮಾಡಿತು. ಈ ಬಿಡುಗಡೆ ಆಕಸ್ಮಿಕವಾಗಿತ್ತು. ಇವರು ಕಾರಾಗೃಹದಲ್ಲಿ ಈ ಸಾರಿ ಒಟ್ಟು ಇದ್ದದ್ದು ಒಂದು ವರ್ಷ ಮತ್ತು ಒಂಭತ್ತು ತಿಂಗಳು. ಇವರ ಬಿಡುಗಡೆ ದೇಶದಲ್ಲೆಲ್ಲಾ ತೃಪ್ತಿಯುಂಟು ಮಾಡಿತೆಂಬುದರಲ್ಲಿ ಸಂದೇಹವಿಲ್ಲ. ಆದರೆ ಗಾಂಧೀಜಿಯ ಕಾಯಿಲೆ ಭಾರತಕ್ಕೆ ಬಹಳ ವ್ಯಾಕುಲತೆ ಉಂಟುಮಾಡಿತು.

ಗಾಂಧೀಜಿಯ ಈ ಸಾರಿಯ ಬಂಧನ ಅವರು ನಿರೀಕ್ಷಿಸಿದ್ದಲ್ಲ. ಹಿಂದೆ ೧೯೨೧ರಲ್ಲೂ, ೧೯೩೦ರಲ್ಲೂ ಲಿಬರಲ್ ಸರ್ಕಾರ ಇಂಗ್ಲೆಂಡಿನಲ್ಲಿತ್ತು. ೧೯೩೦ರಲ್ಲಿ ಲೇಬರ್ ಸರ್ಕಾರವಿತ್ತು. ಈ ಸಾರಿ, ೧೯೪೨ರಲ್ಲಿ, ಇಂಗ್ಲೆಂಡಿನಲ್ಲಿದ್ದುದು ಕನ್‌ಸರ್ವೆಟಿ ಸರ್ಕಾರ. ಭಾರತ ಸ್ವಾತಂತ್ರ್ಯಕ್ಕೆ ಅತ್ಯಂತ ವಿರೋಧಿ ಸರ್ಕಾರ. ೧೯೨೧ರಲ್ಲಿ ಲಾಯಿಡ್ ಜಾರ್ಜ್ ಪ್ರಧಾನ ಮಂತ್ರಿ; ೧೯೩೦ರಲ್ಲಿ ರ್ಯಾಂಸೆ ಮೆಕ್‌ಡೊನಾಲ್ಡ್ ಮುಖ್ಯಮಂತ್ರಿ ; ಈಗ ಚರ್ಚಿಲ್ ಮುಖ್ಯಮಂತ್ರಿ. ಗಾಂಧೀಜಿ ಎಂದರೆ ಚರ್ಚಿಲರು ಹಲ್ಲು ಹಲ್ಲು ಕಡಿಯುತ್ತಿದ್ದರು. ಅಷ್ಟು ತಿರಸ್ಕಾರ, ಅಷ್ಟು ಕೋಪ. ಅದಲ್ಲದೆ ಈ ಸಾರಿ ನಿರ್ಣಯ (ಇಂಡಿಯಾ ಬಿಟ್ಟು ಹೊರಡಿ) ಜಪಾನಿಯರು ಇಂಡಿಯಾದ ಬಾಗಿಲಿನಲ್ಲಿದ್ದಾಗ, ಗಾಂಧೀಜಿ ಮಾಡುವುದೇ ಎಂಬ ಕೋಪ. ಇಂಗ್ಲೆಂಡು ಜೀವ – ಮರಣಸಂಗ್ರಾಮದಲ್ಲಿ ತೊಡಗಿತ್ತು. ಆದ್ದರಿಂದಲೇ ಗಾಂಧೀಜಿಗೆ ಚಳುವಳಿ ಆರಂಭಿಸಲು ಅವಕಾಶ ಕೊಡದೆ ಅವರನ್ನು ದಸ್ತಗಿರಿ ಮಾಡಿದರು. ಇದುಕ್ರೋಧದ ಕಾರ್ಯ. ಗಾಂಧೀಜಿ ತಿಳಿದಿದ್ದರು. ವೈಸರಾಯರು ಭೇಟಿಗೆ ಅವಕಾಶಕೊಟ್ಟರೆ ಆಗ ಅವರಿಗೆ ಎಲ್ಲವನ್ನೂ ತಿಳಿಸಿದರೆ, ಬಹುಶಃ ಸಂಧಿಗೆ ಬರಬಹುದು. ಈಗ ಭಾರತದ ಸಹಾಯ ಅವರಿಗೆ ಅತ್ಯಂತ ಅವಶ್ಯಕವಿದೆ. ಆದಕಾರಣ ಬ್ರಿಟಿಷ್ ಮತ್ತು ಇಂಡಿಯಾ ಸರ್ಕಾರ ರಾಜಿ ಮಾಡಿಕೊಳ್ಳಬಹುದು. ಆಜಾದ್, ಜವಹರಲಾಲ್ ನೆಹರು ಈಗ “ಕ್ವಿಟ್ ಇಂಡಿಯಾ” ಚಳುವಳಿ ಸಾಧ್ಯವಿಲ್ಲ ಎಂದು ವಾದಿಸಿದ ಹಾಗೆ ಕಾಣುತ್ತದೆ. ಇದು ಬರೀವಾದ. ಗಾಂಧೀಜಿ ಚಳುವಳಿಯನ್ನು ಆರಂಭಿಸುವ ತೀರ್ಮಾನ ಮಾಡಿದ ಮೇಲೆ, ಎಲ್ಲ ಮುಖಂಡರೂ ಇದನ್ನು ಒಪ್ಪಿದರು.

ಗಾಂಧೀಜಿಯ ನಿರೀಕ್ಷಣೆ ಈ ಸಾರಿ ಫಲಿಸಲಿಲ್ಲ. ದಸ್ತಗಿರಿಯಾದ ಮೇಲೆ, ಸರ್ಕಾರ ರೊಚ್ಚಿಗೆದ್ದ ಜನರ ಮೇಲೆ ನಡೆಸಿದ ದಬ್ಬಾಳಿಕೆ ಮಹ್ಮಾತರ ಮನಸ್ಸಿನ ನೆಮ್ಮದಿಗೆ ಭಂಗ ಮಾಡಿತು; ಅವರು ಉಪವಾಸವನ್ನು ಮಾಡಿದರು.ಅವರ ದೇಹಸ್ಥಿತಿಯೂ ಕೆಟ್ಟಿತು. ಮಹದೇವ ದೇಸಾಯಿ ಮತ್ತು ಕಸ್ತೂರಿಬಾ ಅವರ ಮರಣವೂ ಅವರಿಗೆ ಬಹಳ ದುಃಖ ಉಂಟುಮಾಡಿತು. ಇದಕ್ಕೆ ಮಲೇರಿಯಾ ಜ್ವರವೂ ಸೇರಿಕೊಂಡು, ಅವರ ದೇಹವನ್ನು ಬಹಳ ಕುಗ್ಗಿಸಿತು. ಈ ಯೂರೋಪಿನ ಯುದ್ಧ ಸ್ಥಿತಿಯೂ ಮಿತ್ರವರ್ಗದವರಿಗೆ ವಿಜಯವನ್ನು ಸೂಚಿಸುತ್ತಿತ್ತು.

ಗಾಂಧೀಜಿಯ ಬಿಡುಗಡೆಯಾದ ಕೂಡಲೆ, ಪಂಡಿತ ಮಾಳವೀಯ ತಮ್ಮ ಸಂತೋಷದ ತಂತಿಯನ್ನು ಗಾಂಧೀಜಿಗೆ ಕಳುಹಿಸಿದರು. ರಾಜಾಜಿಯವರ ತಂತಿಯೂ ಬಂದಿತು. ಗಾಂಧೀಜಿ ಐದು ದಿವಸ ಪೂನಾದಲ್ಲಿ ವಿಶ್ರಾಂತಿ ಹೊಂದಿದ ಮೇಲೆ, ಅವರನ್ನು ಬೊಂಬಾಯಿನ ಜುಹುವಿಗೆ ಒಯ್ಯಲಾಯಿತು. ಇಲ್ಲಿ ಗಾಂಧೀಜಿಯ ಪರಿವಾರ ಮತ್ತು ಕೆಲವು ದಿವಸಗಳ ಹಿಂದೆಯೇ ಅನಾರೋಗ್ಯದ ಕಾರಣ ಬಿಡುಗಡೆ ಹೊಂದಿದ್ದ ಸರೋಜಿನಿ ನಾಯಿಡು ಇದ್ದರು. ಗಾಂಧೀಜಿಯನ್ನು ನೋಡಲು ಸಾಮಾನ್ಯವಾಗಿ ಯಾರನ್ನೂ ಬಿಡುತ್ತಿರಲಿಲ್ಲ. ಗಾಂಧೀಜಿಗೆ ಮಲೇರಿಯಾ ಅಲ್ಲದೆ, ಅವರ ಹೊಟ್ಟೆಯಲ್ಲಿ “ಹುಕ್‌ವರ್ಮ್  ಇತ್ತು. ಡಾ.ಬಿ.ಸಿ. ರಾಯ್ ಮುಂತಾದವರು ಬಂದು ಅದರ ಚಿಕಿತ್ಸೆಯನ್ನೂ ಮಾಡಿದರು.

ಗಾಂಧೀಜಿಗೆ ಅನೇಕ ಮುಖಂಡರು ಕುಶಲ ಪತ್ರಗಳನ್ನು ಬರೆದರು. ಗಾಂಧೀಜಿ ಬಹಳ ದಿನ ವಿಶ್ರಾಂತಿಯಲ್ಲಿ ಕಳೆಯಲಿಲ್ಲ. ಪುನಃ ಕೆಲಸಕ್ಕೆ ಆರಂಭಿಸಿದರು. ೭೫ನೇ ಹುಟ್ಟುಹಬ್ಬಕ್ಕೆ ಗಾಂಧೀಜಿಗೆ ಅನೇಕಾನೇಕ ಅಭಿವಂದನೆಗಳು ಬಂದವು. “ನನ್ನನ್ನೇಕೆ ಇಟ್ಟಿದ್ದಾನೆ, ದೇವರು?” ಎಂದು ಗಾಂಧೀಜಿ ತಮ್ಮನ್ನು ತಾವೇ ಪ್ರಶ್ನಿಸಿಕೊಂಡು, “ನನ್ನಿಂದ ಇನ್ನೂ ಕೆಲವು ಕೆಲಸಗಳನ್ನು ಮಾಡಿಸಬೇಕೆಂಬ ಅಭಿಪ್ರಾಯ ಅವನಿಗಿರಬಹುದು. ಕಾಯಕವೇ ಕೈಲಾಸ ಎಂಬುದು ನನ್ನ ನೀತಿ. ನಾನು ಕೆಲಸ ಮಾಡಿಕೊಂಡೇ ಇರುತ್ತೇನೆ” ಎಂದು ಉತ್ತರಿಸಿಕೊಂಡು ತಮ್ಮ ಕೆಲಸಗಳನ್ನು ಆರಂಭಿಸಿದರು. ಜನರಲ್ಲಿ ಮತ್ತು ತಮ್ಮ ಆಕ್ಷೇಪಕರ ಮನಸ್ಸಿನಲ್ಲಿನ ತಪ್ಪು ಅಭಿಪ್ರಾಯ ಹೋಗಲೆಂದು ೧೯೪೨ರಲ್ಲಿ ತಾವು ಕೈಕೊಂಡ ಕಾರ್ಯಗಳನ್ನು ಸಮರ್ಥಿಸತೊಡಗಿದರು. ಪುನಃ ವೈಸರಾಯರೊಡನೆ ಸಂಬಂಧ ಕಲ್ಪಿಸಿಕೊಂಡು, ಇಂಡಿಯಾ ಮತ್ತು ಬ್ರಿಟನಿನ ಸಂಬಂಧದ ಬಗ್ಗೆ ಹೊಸ ದಾರಿಯನ್ನು ಸೂಚಿಸಿದರು. ಪಾಕಿಸ್ಥಾನದ  ಬಗ್ಗೆ ಒಂದು ಒಪ್ಪಂದಕ್ಕೆ ಬರಲುಹೊಸ ಪ್ರಯತ್ನ ಮಾಡಿದರು. ಇವೆರಡು ವಿಷಯಗಳಲ್ಲಿಯೂ ರಾಜಗೋಪಾಲಾಚಾರಿಯವರ ಪರಿಣಾಮಕಾರಿ ಬೆಂಬಲವನ್ನು ಹೊಂದಿದರು. ರಾಜಗೋಪಾಲಾಚಾರಿ ಕ್ರಿಪ್ಸ್ ಬಂದು ಹೋದಮೇಲೆ ಕಾಂಗ್ರೆಸಿನ ಸಂಬಂಧ ತೊರೆದು, ತಮಗೆ ತೋರಿದ ದಾರಿಯಲ್ಲಿ ಹೋಗುತ್ತಿದ್ದರು. ಅವರ ಅಭಿಪ್ರಾಯ ಪಾಕಿಸ್ತಾನ ಬಗ್ಗೆ ಜಿನ್ಹಾರೊಡನೆ ಒಪ್ಪಂದ ಮಾಡಿಕೊಂಡು ಐಕಮತ್ಯದಿಂದ ಬ್ರಿಟಿಷರೊಡನೆ ಸಲಹೆ ನಡೆಸುವುದು. ಇದು ಇತರ ಕಾಂಗ್ರೆಸಿಗರಿಗೆ ಹಿಡಿಸಲಿಲ್ಲ. ೧೯೪೩ರಲ್ಲಿ ರಾಜಾಜಿ ಜೈಲಿನಲ್ಲಿ ಗಾಂಧೀಜಿಯನ್ನು ಕಂಡು ತಮ್ಮ ನೀತಿಗೆ ಬೆಂಬಲ ಪಡೆದು, ಜನ್ಹಾರೊಡನೆ ಮಾಡಿದ ಮಾತುಕತೆಗಳು ಫಲಿತಾಂಶಕ್ಕೆ ಬರಲಿಲ್ಲ. ತಾವು ಜೈಲಿನಿಂದ ಹೊರಗೆ ಬಂದ ಮೇಲೆ ರಾಜಾಜಿ ಸಲಹೆ ಪಡೆದು ಗಾಂಧೀಜಿ ಜಿನ್ಹಾರನ್ನು ನೋಡಿ ಮಾತನಾಡಲು ಅಪೇಕ್ಷಿಸಿದರು.

ಗಾಂಧೀಜಿ ಜುಲೈ ೨೭ರಲ್ಲಿ ವೈಸರಾಯರಿಗೆ ಒಂದು ಪತ್ರ ಬರೆದರು. ಈಗ ವೈಸ್‌ರಾಯ್ ಲಾರ್ಡ್ ವೇವಲ್. ಇವರು ಹಿಂದೆ ಇಂಡಿಯಾದ ಸೈನ್ಯಾಧಿಪತಿಗಳಾಗಿದ್ದರು. ಈ ಪತ್ರದಲ್ಲಿ ಗಾಂಧೀಜಿ ತಿಳಿಸಿದ್ದೇನೆಂದರೆ: “ಈಗ, ಬದಲಾಗಿರುವ ಪರಿಸ್ಥಿತಿಯಲ್ಲಿ, ಆಗಸ್ಟ್ ೧೯೪೨ರ ರೀತಿಯ ಸಾಮೂಹಿಕ ಕಾನೂನುಭಂಗವನ್ನು ಆಚರಿಸಲಾಗುವುದಿಲ್ಲ. ಮತ್ತು ಯುದ್ಧ ಪ್ರಯತ್ನದಲ್ಲಿ ಪೂರ್ಣ ಸಹಕಾರವೀಯಬೇಕೆಂಬ ಸಲಹೆಯನ್ನು ಕಾಂಗ್ರೆಸ್ ವರ್ಕಿಂಗ್ ಕಮಿಟಿಗೆ ಕೊಡಲು ಸಿದ್ಧನಾಗಿರುವೆನು. ಆದರೆ ಒಂದು ಷರತ್ತು, ಬ್ರಿಟಿಷ್‌ಸರ್ಕಾರ ಭಾರತದ ಸ್ವಾತಂತ್ರ್ಯವನ್ನು ತುರ್ತಾಗಿ ಘೋಷಿಸಬೇಕು ಮತ್ತು ಕೇಂದ್ರ ಶಾಸನ ಸಭೆಗೆ ಜವಾಬ್ದಾರಿಯಾಗಿರುವ ರಾಷ್ಟ್ರೀಯ ಸರ್ಕಾರವನ್ನು ಸ್ಥಾಪಿಸಬೇಕು. ಯುದ್ಧ ನಡೆಯುವವರೆಗೂ ಇಂಡಿಯಾದಲ್ಲಿ ಸೈನ್ಯವಿರಬಹುದು, ಆದರೆ ಅದಕ್ಕೆ ತಗಲುವ ಖರ್ಚನ್ನು ಬ್ರಿಟನ್ನೇ ವಹಿಸಬೇಕು. ಇಂಡಿಯಾದ ಮೇಲೆ ಅದರ ಖಚಿನ ಭಾರವನ್ನು ಹಾಕಕೂಡದು.”

ವೈಸರಾಯರು ೧೯೪೪ನೇ ಆಗಸ್ಟ್ ೧೫ರಲ್ಲಿ ಬರೆದ ಪತ್ರದಲ್ಲಿ ಗಾಂಧೀಜಿಯ ಸಲಹೆಯಂತೆ ನಡೆಯಲಾಗುವುದಿಲ್ಲವೆಂದು ತಿಳಿಸಿದರು.

ಗಾಂಧೀಜಿಗೂ ಜಿನ್ಹಾರಿಗೂ ಮಾತುಕತೆಗಳು ಬೊಂಬಾಯಿನಲ್ಲಿ ೧೯೪೪ನೇ ಸೆಪ್ಟೆಂಬರ್‌ನಲ್ಲಿ ನಡೆದವು. ಇವುಗಳ ಫಲಿತಾಂಶವೇನು ಎಂದು ಇಂಡಿಯಾವೆಲ್ಲಾ ಕಾದು ನೋಡುತ್ತಿತ್ತು. ಪ್ರಾರಂಭದಿಂದಲೇ ಗಾಂಧೀಜಿಗೂ ಜಿನ್ಹಾರಿಗೂ ಅಭಿಪ್ರಾಯಭಿನ್ನತೆ ಕಂಡುಬಂದಿತು. ಗಾಂಧೀಜಿ ಇಂಡಿಯಾದ ಐಕಮತ್ಯದಲ್ಲಿ ನಂಬಿಕೆಯುಳ್ಳವರು. ಜಿನ್ಹಾ ಮುಸ್ಲಿಮರೇ ಒಂದು ಜನಾಂಗ (ನೇಷನ್) ಹಿಂದೂಗಲೇ ಒಂದು (ನೇಷನ್) ಜನಾಂಗ; ಎರಡು ಭಿನ್ನ ನೇಷನ್‌ಗಳು ಈ ದೇಶದಲ್ಲಿವೆ ಎಂದು ವಾದಿಸಿದರು. ಗಾಂಧೀಜಿ ಎಂದರು; “ಮುಸ್ಲಿಮರು ಬೇರೆ ಜನಾಂಗ ಹೇಗಾದಾರು? ಅವರು ಇಲ್ಲಿಯೇ ಹುಟ್ಟಿದವರು, ಬೆಳೆದವರು. ಅವರ ಪೂರ್ವಿಕರು ಹಿಂದುಗಳಾಗಿದ್ದವರು. ಮುಸ್ಲಿಮರಾಗಿ ಪರಿವರ್ತಿತರಾಗಿರಬಹುದು. ಇದರಿಂದ ಅವರನ್ನು ಬೇರೆ ಜನಾಂಗವೆಂದು ಪರಿಗಣಿಸಲಾದೀತೆ?”

ಜಿನ್ಹಾ “ಅದು ಹೇಗಾದೀತು? ಮುಸ್ಲಿಮರೇ ಬೇರೆ ಜನಾಂಗ. ಮುಸ್ಲಿಂಲೀಗೇ ಮುಸ್ಲಿಮರನ್ನು ಪ್ರತಿನಿಧಿಸುವ ಸಂಸ್ಥೆ. ಕಾಂಗ್ರೆಸು ಹಿಂದೂಗಳ ಪ್ರತಿನಿಧಿ ಸಂಸ್ಥೆ. ಕಾಂಗ್ರೆಸಿನಲ್ಲಿರುವ ಮುಸ್ಲಿಮರು (ಬ್ಲಾಕ್ – ಲೆಗ್‌ಗಳು) ಮುಸ್ಲಿಂ ದ್ರೋಹಿಗಳು. ಗಾಂಧೀಜಿಯವರು ವಿಶ್ವಾಸಿಗಳಾದ ಮುಸ್ಲಿಮರನ್ನು ತಮ್ಮ ಮತಕ್ಕೆ ಮೋಸವೆಸಗಲು ಆಕರ್ಷಿಸುತ್ತಿದ್ದಾರೆ (ತಪ್ಪುದಾರಿಗೆ ಎಳೆಯುತ್ತಿದ್ದಾರೆ)” ಎಂದು ಆಪಾದಿಸಿದರು.

ರಾಜಗೋಪಾಲಾಚಾರಿ ಗಾಂಧೀಜಿಗೆ ಸೂಚಿಸಿದ ಸಲಹೆ ಈ ರೀತಿಯಿತ್ತು. “ಯುದ್ಧಾನಂತರ, ಮುಸ್ಲಿಂ ಜನಸಂಖ್ಯೆ ಅಧಿಕವಿರುವ ಇಂಡಿಯಾದ ಉತ್ತರ – ಪಶ್ಚಿಮ ಭಾಗ ಮತ್ತು ಪೂರ್ವ ಭಾಗಗಳನ್ನು ಪ್ರತ್ಯೇಕವಾಗಿ ಗುರ್ತಿಸಲು ಒಂದು ಕಮಿಷನನ್ನು ನೇಮಿಸತಕ್ಕದ್ದು, ಹೀಗೆ ಗುರ್ತು ಮಾಡಲ್ಪಟ್ಟ ಪ್ರದೇಶಗಳಲ್ಲಿ ಎಲ್ಲಾ ನಿವಾಸಿಗಳ ಪ್ಲೆಬಿಸ್ಟೈಟನ್ನು ತೆಗೆದುಕೊಳ್ಳತಕ್ಕದ್ದು. ವಯಸ್ಕರ ಮತದಾನ ಪದ್ಧತಿಯನ್ನೋ ಅಥವಾ ಅನುಕೂಲವಾದ ಇನ್ನಾವ ಮತದಾನ ಪದ್ಧತಿಯನ್ನೋ ಅನುಸರಿಸತಕ್ಕದ್ದು.

“ಬಹುಮತ ಪ್ರತ್ಯೇಕ ರಾಷ್ಟ್ರ ಸರ್ಕಾರ ಏರ್ಪಡಬೇಕು ಎಂದರೆ, ಹಾಗೇಯೇ ಮಾಡತಕ್ಕದ್ದು. ಆದರೆ ಸರಹದ್ದಿನಲ್ಲಿರುವ ಜಿಲ್ಲೆಗಳು ತಾವು ಆರಿಸಿಕೊಂಡ ರಾಜ್ಯಭಾಗಕ್ಕೆ ಸೇರತಕ್ಕದ್ದು. ಒಂದು ಹಂಗಾಮಿ ಇಂಟರಿಂ ಸರ್ಕಾರ ರಚಿಸಲು (ಮಧ್ಯಕಾಲದಲ್ಲಿ) ಮುಸ್ಲಿಂಲೀಗು ಕಾಂಗ್ರೆಸಿನೊಡನೆ ಸಹಕರಿಸಬೇಕು. ಬ್ರಿಟಿಷ್ ಸರ್ಕಾರ ತನ್ನ ಎಲ್ಲಾ ಅಧಿಕಾರಗಳನ್ನೂ ಜವಾಬ್ದಾರಿಗಳನ್ನೂ ಭಾರತಕ್ಕೆ ವಹಿಸಿಕೊಡುವ ವಾಗ್ದಾನ ಮಾಡಬೇಕು. ಒಂದು ವೇಳೆ ರಾಜ್ಯಗಳು ಬೇರೆಬೇರೆಯಾಗಲು ನಿರ್ಧರಿಸಿದರೆ ದೇಶದ ರಕ್ಷಣೆ (ಸೈನ್ಯ), ವ್ಯಾಪಾರ, ರಸ್ತೆಸಾರಿಗೆಗಳು ಮತ್ತು ಇತರ ಅವಶ್ಯ ವಿಷಯಗಳ ಬಗ್ಗೆ ಒಂದು ಪರಸ್ಪರ ಒಪ್ಪಂದ ಮಾಡಿಕೊಳ್ಳತಕ್ಕದ್ದು”.

ಈ ಸಲಹೆಯಂತೆ, ಮುಸ್ಲಿಂ ಲೀಗಿಗೆ ಪಾಕಿಸ್ಥಾನ ದೊರೆಯುವ ಹಾಗಾಯಿತು. ಅದೂ ಇಂಡಿಯಾಕ್ಕೆ ಪೂರ್ಣ ಜವಾಬ್ದಾರಿಯನ್ನು ಬ್ರಿಟಿಷ್ ಸರ್ಕಾರ ವಹಿಸುವ ನಿರ್ಧರ ಮಾಡಿದ ಮೇಲೆ. ಈ ಸಲಹೆಗಳನ್ನು ರಾಜಾಜಿ ಗಾಂಧೀಜಿಯ ಒಪ್ಪಿಗೆ ಪಡೆದು ಮಾಡಿದರು; ಎಂದರೆ, ಗಾಂಧೀಜಿ ಒಂದು ರೀತಿಯಾಗಿ ಪಾಕಿಸ್ಥಾನಕ್ಕೆ ಒಪ್ಪಿದ ಹಾಗಾಯಿತು, ಗಾಂಧೀಜಿ ಈ ಸಲಹೆಗಳನ್ನೇ ಮುಸ್ಲಿಂ ಲೀಗೂ ಕಾಂಗ್ರೆಸೂ ಒಪ್ಪಬೇಕೆಂದಿದ್ದು. ಜಿನ್ಹಾರ ಆಕ್ಷೇಪಣೆ ಏನೆಂದರೆ (೧) ಬ್ರಿಟಿಷರು ಈ ದೇಶ ಬಿಟ್ಟ ಮೇಲೆ ರಾಜ್ಯಾಂಗ ರಚನೆ ಮಾಡುವುದೆಂದರೆ, ಮುಸ್ಲಿಮರನ್ನು ಯಾವ ರಕ್ಷಣೆಯೂ ಇಲ್ಲದೆ ಹಿಂದೂ ಮೆಜಾರಟಿಯ ಅಧೀನಕ್ಕೆ ಬಿಟ್ಟ ಹಾಗಾಗುತ್ತದೆ, ಇದು ಸರಿಯಲ್ಲ; (೨) ಹಂಗಾಮಿ ಸರ್ಕಾರದ ರಚನೆಯಲ್ಲಿ ಮುಸ್ಲಿಂ ಲೀಗಿಗೆ ಮಂತ್ರಿ ಮಂಡಲದಲ್ಲಿ ಕಾಂಗ್ರೆಸಿನಷ್ಟೇ ಸ್ಥಾನಗಳು ಇರತಕ್ಕದ್ದು; (೩) ಪ್ರಾಂತಗಳನ್ನಲ್ಲ, ಒಟ್ಟು ಪ್ರದೇಶವನ್ನು ಪಾಕಿಸ್ಥಾನವೆಂದು ಪರಿಗಣಿಸತಕ್ಕದ್ದು; (೪) ಜನಸಂಖ್ಯೆಯ ಪ್ಲೆಬಿಸೈಟನ್ನು ತೆಗೆದುಕೊಳ್ಳತಕ್ಕದ್ದು.

ಗಾಂಧೀಜಿಗೂ ಜಿನ್ಹಾಗೂ ನಡೆದ ಸಂಧಾನ ಬಿದ್ದು ಹೋದುದು ಬಹುಜನಕ್ಕೆ ದುಃಖ ಉಂಟುಮಾಡಿತು. ಆದರೆ ಕೆಲವು ಜನರು ಸಂತೋಷಪಟ್ಟರು. ಸರ್ ತೇಜ್ ಬಹದೂರ್ ಸಪ್ರು ಮತ್ತು ಇತರ ಲಿಬರಲ್‌ಗಳು ಇಡೀ ದೇಶಕ್ಕೆ ಒಂದು ರಾಜ್ಯಾಂಗ ನಿರ್ಮಿಸಿದರು. ಅದು ಫೆಡರಲ್ ರೂಪದ್ದು. ಇದಕ್ಕೆ ರಾಜರುಗಳು ಸೇರಬಹುದು ಅಥವಾ ಸೇರದಿರಬಹುದು. ಇದರಲ್ಲಿ ಕೋಮುವಾರು ಓಟಿಲ್ಲ. ಮುಸ್ಲಿಮರು ಸಂಯುಕ್ತ ಚುನಾವಣಾ ಕ್ಷೇತ್ರಗಳಿಗೆ ಒಪ್ಪಿದರೆ, ಯೂನಿಯನ್ ಶಾಸನ ಸಭೆಯಲ್ಲಿ ಹಿಂದೂಗಳಿಗೂ ಮುಸ್ಲಿಮರಿಗೂ ಸಮಸಮ ಸದಸ್ಯತ್ವವಿರತಕ್ಕದ್ದು, ಯುದ್ಧ ಮುಗಿಯುವವರೆಗೆ ಇಂಗ್ಲೆಂಡ್ ಭಾರತವನ್ನು ಒಂದು ಡೊಮಿನಿಯನ್ ಹಾಗೆ ಕಾಣತಕ್ಕದ್ದು. ಈಗಿನ ರಾಜ್ಯಾಂಗ ರಚನೆಯ ಪ್ರಕಾರ ಮಾಡಲಾಗಿದ್ದ ೯೩ನೇ ಕಲಮು ಘೋಷಣೆಯನ್ನು ರದ್ದು ಮಾಡತಕ್ಕದ್ದು. ಪ್ರಾಂತ್ಯಗಳಲ್ಲಿ ಕೊಯಲಿಷನ್ ಮಂತ್ರಿ ಮಂಡಲಗಳು ಅಧಿಕಾರ ವಹಿಸತಕ್ಕದ್ದು, ಕೇಂದ್ರದಲ್ಲಿ ವೈಸರಾಯರ ಎಗ್ಸ್‌ಕ್ಯುಟಿವ್ ಕೌನ್ಸಿಲಿಗೆ ಬದಲಾಗಿ ರಾಷ್ಟ್ರೀಯ ಸರ್ಕಾರ ರಚನೆಯಾಗತಕ್ಕದ್ದು.

ಸಪ್ರು ಮತ್ತು ಅವರ ಮಿತ್ರರ ಸಲಹೆಗಳನ್ನು ಮುಸ್ಲಿಂ ಲೀಗ್, ಹಿಂದೂ ಮಹಾಸಭೆ, ಡಿಪ್ರೆಸ್ಡ್ ಕ್ಲಾಸ್ ಲೀಗ್ ಇವುಗಳೆಲ್ಲಾ ತಿರಸ್ಕರಿಸಿದವು. ಆದರೂ ಈ ರಾಜ್ಯಾಂಗ ರಚನೆ ಮುಂದೆ ಸಹಾಯಕ್ಕೆ ಬಂತು.

ಕಾಂಗ್ರೆಸಿಗೂ ಮುಸ್ಲಿಂ ಲೀಗಿಗೂ ಐಕಮತ್ಯ ತರಲು ಕೇಂದ್ರ ಅಸೆಂಬ್ಲಿ ಸದಸ್ಯರಲ್ಲಿ ಒಂದು ಪ್ರಯತ್ನ ನಡೆಯಿತು. ೧೯೪೫ನೇ ಜನವರಿಯಲ್ಲಿ ಬುಲಾಭಾಯಿ ದೇಸಾಯಿಯವರಿಗೂ ಲಿಯಾಕತ್ ಅಲೀ ಖಾನರಿಗೂ ಮಾತುಕತೆ ನಡೆಯಿತು.

ಕಾಂಗ್ರೆಸಿಗೂ ಮುಸ್ಲಿಂ ಲೀಗಿಗೂ ಒಂದು ಒಪ್ಪಂದವಾಗಿ ಕೇಂದ್ರದಲ್ಲಿ ಒಂದು ಇಂಟರಿಂ (ಮಧ್ಯಕಾಲ) ಸರ್ಕಾರ ರಚಿಸತಕ್ಕದ್ದು ಎಂದಾಯಿತು. ಈ ಕೆಳಗಿನ ಷರತ್ತುಗಳನ್ನು ಉಭಯ ಪಾರ್ಟಿಯವರು ಒಪ್ಪಿದರು; (೧) ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಮತ್ತು ಲೀಗು ಸಮಸಮ ಸಂಖ್ಯೆಯ ಸದಸ್ಯರನ್ನು ನಾಮಿನೇಟ್ ಮಾಡತಕ್ಕದ್ದು; (೨) ಷೆಡ್ಯೂಲ್ ಕ್ಯಾಸ್ಟ್ ಮತ್ತು ಸಿಖ್ಖರ ಪ್ರತಿನಿಧಿಗಳನ್ನು ಸೇರಿಸಿಕೊಳ್ಳತಕ್ಕದ್ದು; (೩) ಕಮ್ಯಾಂಡರ್ – ಇನ್ – ಚೀಫ್‌ರೂ ಈ ಕೌನ್ಸಿಲಿನಲ್ಲಿ ಇರತಕ್ಕದ್ದು; ಈ ಕೌನ್ಸಿಲು ಈಗಿನ ರಾಜ್ಯಾಂಗದ ಚೌಕಟ್ಟಿನಲ್ಲಿಯೇ ಕೆಲಸ ಮಾಡತಕ್ಕದ್ದು; ಗೌರ್ನರ್ – ಜನರಲ್ ತಮ್ಮ ಕಾದಿಡಲ್ಪಟ್ಟ ಅಧಿಕಾರವನ್ನು ಉಪಯೋಗಿಸಕೂಡದು; ವೈಸರಾಯರು ಶಾಸನ ಸಭೆಯ ತೀರ್ಮಾನಗಳಿಗೆ ಬದ್ಧರಾಗಿರತಕ್ಕದ್ದು; ಈ ಸರ್ಕಾರ ಅಧಿಖಾರ ವಹಿಸಿದ ಕೂಡಲೆ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸದ್ಯಸರನ್ನು ಖುಲಾಸೆ ಮಾಡತಕ್ಕದ್ದು; ಉಭಯ ಪಾರ್ಟಿಯವರೂ ಈ ಒಪ್ಪಂದಕ್ಕೆ ರುಜು ಮಾಡಿ ಇಟ್ಟುಕೊಂಡಿದ್ದರು, ಕಾಂಗ್ರೆಸಾಗಲೀ ಮುಸ್ಲಿಂ ಲೀಗಾಗಲಿ ಇದಕ್ಕೆ ಬದ್ಧವಾಗಲಿಲ್ಲ.

ಬುಲಾಭಾಯಿಯವರು ಇದನ್ನು ಗಾಂಧೀಜಿಗೆ ತಿಳಿಸಿದ್ದರು. ಗಾಂಧೀಜಿ “ಇದು ಬುಲಾಭಾಯಿಯವರ ಸ್ವಂತ ಜವಾಬ್ದಾರಿಯದು. ಮತ್ತು ವರ್ಕಿಂಗ್ ಕಮಿಟಿ ಒಪ್ಪಿಗೆಯಿಲ್ಲದೆ ಇದು ಜಾರಿಗೆ ಯೋಗ್ಯವಲ್ಲ” ಎಂದು ತಿಳಿಸಿದ್ದರು. ವರ್ಕಿಂಗ್ ಕಮಿಟಿಯ ಸದಸ್ಯರು ಬಿಡುಗಡೆಯಾದಮೇಲೆ, ಅವರು ಬುಲಾಭಾಯಿಯವರಿಗೆ ಈ ರೀತಿಯ ಒಪ್ಪಂದಕ್ಕೆ ಬರಲುಯಾವ ಅಧಿಕಾರವೂ ಇಲ್ಲ ಎಂದು, ಅವರ ನಡತೆಯನ್ನು ಟೀಕಿಸಿ, ಮುಂದೆ ನಡೆದ ಚುನಾವಣೆಯಲ್ಲಿ ಅವರನ್ನು ಒಬ್ಬ ಉಮೇದುವಾರರಾಗಿ ಕೂಡ ಆರಿಸಲಿಲ್ಲ. ಇದರಿಂದ ಬುಲಾಭಾಯಿಯವರಿಗೆ ಬಹಳ ದುಃಖವಾಯಿತು.

* * *