ಕ್ರಿಪ್ಸರು ಇಂಗ್ಲೆಂಡಿಗೆ ಹಿಂತಿರುಗಿದ ಮೇಲೆ, ಪಾರ್ಲಿಮೆಂಟಿನಲ್ಲಿ ಇಂಡಿಯಾದ ವಿಷಯ ಚರ್ಚೆಯಾಗಿ, ಚರ್ಚಿಲರು ಭಾರತದ ಮೇಲೆ ಬಹಳ ಕೋಪಗೊಂಡರು. ಬ್ರಿಟನು ಪ್ರಾಮಾಣಿಕತೆಯಿಂದ ಕಳುಹಿಸಿದ್ದ ಸಲಹೆಗಳನ್ನು ಕಾಂಗ್ರೆಸು ನಿರಾಕರಿಸಿತಲ್ಲಾ ಎಂದು ಖೇದ ಪಟ್ಟರು. ತಾವು ಕೂಡಲೇ ಭಾರ ತಕ್ಕೆ ಸ್ವಾತಂತ್ರ್ಯ ಕೊಟ್ಟಿದ್ದರೆ, ಯುದ್ಧ ಪ್ರಯತ್ನಕ್ಕೆ ಭಾರತದ ಪೂರ್ಣ ಸಹಾಯ ದೊರೆಯುತ್ತಿತ್ತು ಎಂಬ ಯೋಚನೆ ಅವರಿಗೆ ಬರಲಿಲ್ಲ. ಭಾರತೀಯರಿಗಂತೂ ಒಂದು ಮಾತು ಖಾತರಿಯಾಯಿತು; ಬ್ರಿಟಿಷರು ತಾವಾಗಿಯೇ ಇಂಡಿಯಾವನ್ನು ಬಿಡುವವರಲ್ಲ; ಎಂಥ ಕಷ್ಟದಲ್ಲಿಯೂ ಅದನ್ನು ಬಿಗಿಹಿಡಿದಿರಬೇಕೆಂಬುದು ಅವರ ನೀತಿ; ಆದ್ದರಿಂದ ಇನ್ನೊಂದು ಬಲವಾದ ಚಳುವಳಿ ಇಲ್ಲದೆ  ಬ್ರಿಟಿಷರು ಇಂಡಿಯಾ ಬಿಡುವುದಿಲ್ಲ; ಜಪಾನಿಯರು ಇಂಡಿಯಾದ ಕಡೆ ಮುಂದುವರಿಯುತ್ತಿದ್ದಾರೆ; ಒಂದು ವೇಳೆ ಇಂಡಿಯಾದ ಮೇಲೆ ಅವರು ಬಂದರೆ. ಭಾರತೀಯರು ಸುಮ್ಮನೆ ಅಧೀನರಾಗಿ ಬಿಡುವುದೇ? ಬ್ರಿಟಿಷರು ಭಾರತದ ರಕ್ಷಣೆ ಮಾಡಲು ಸಮರ್ಥರಾಗುವರೆನ್ನಲ್ಲು ಯಾವ ನಂಬಿಕೆ? ಮಲಯಾ, ಸಿಂಗಪುರ ಬರ್ಮಾದ ಹಾಗೆ ಬ್ರಿಟಿಷರು ಕೈಬಿಟ್ಟರೆ, ಆಗ ಏನು ಮಾಡಬೇಕು? ಆದ್ದರಿಂದ ಈಗ ಭಾರತ ಸುಮ್ಮನಿರಬಾರದು; ಇಂಗ್ಲೆಂಡನ್ನು “ನೀವು ಈ ದೇಶ ಬಿಟ್ಟು ಹೊರಡಿ” ಎಂದು ಹೇಳಿ, ಒತ್ತಾಯ ಮಾಡಬೇಕು; ಬರಿ ಮಾತಿಗೆ ಅವರು ಬಿರುವರೇ? ಇಲ್ಲ, ಇಲ್ಲ, ದಂಗೆ ಏಳಬೇಕು; ದಂಗೆ ಏಳಲು ಶಾಸ್ತ್ರಾಸ್ತ್ರ ಎಲ್ಲಿದೆ? ಆದ್ದರಿಂದ ಅಹಿಂಸಾಯುತವಾದ ಕಾನೂನು ಭಂಗವೇ ದಾರಿ, ಬೇರೆಯಿಲ್ಲ. “ಬ್ರಿಟಿಷರೇ, ನೀವು ಈ ದೇಶ ಬಿಟ್ಟು ಹೊರಡಿ” ಎಂದು ಸ್ಪಷ್ಟವಾಗಿ ಹೇಳುವ ಕಾಲ ಈಗ ಬಂದಿದೆ ಎಂದು ಗಾಂಧೀಜಿಗೆ ತೋರಿತು. ಅದಕ್ಕಾಗಿ ದೇಶವನ್ನು ಸಿದ್ಧಗೊಳಿಡಲು ತಯಾರಾದರು. ಹರಿ ಜನ ಪತ್ರಿಕೆಯಲ್ಲಿ ಮೇ ತಿಂಗಳಿಂದ “ಕ್ವಿಟ್ ಇಂಡಿಯಾ” ಬಗ್ಗೆ ಲೇಖನ ಗಳನ್ನು ಬರೆಯುತ್ತ ಬಂದರು. ‘ಹರಿಜನ’ ಪತ್ರಿಕೆಯಲ್ಲಿ ಮೇ ೧೭ರಲ್ಲಿ ‘ಪ್ರತಿಯೊಬ್ಬ ಬ್ರಿಟನ್‌ನಿಗೆ’ ಎಂಬ ಶೀರ್ಷಿಕೆಯಲ್ಲಿ ಒಂದು ಲೇಖನ ಬರೆದರು.

“ನಾವು ಬ್ರಿಟಿಷರಿಗೆ ಮಾಡುವ ಪ್ರಾರ್ಥನೆಯಲ್ಲಿ, ಪ್ರತಿಯೊಬ್ಬ ಬ್ರಿಟನೂ ಒತ್ತಾಸೆಯಾಗಬೇಕು. ಈ ಕ್ಷಣವೇ ಬ್ರಿಟಿಷರು ಏಷ್ಯಾ ಮತ್ತು ಅಮೆರಿಕಾ ಫ್ಯಾಸಿಸ್ಟ್‌ಗಳ ನಾಶಕ್ಕೆ ಮತ್ತು ಪ್ರಚಂಡದ ಸುರಕ್ಷತೆಗೆ ಇದು ಅತ್ಯಂತ ಅವಶ್ಯಕ. ಇಂಡಿಯಾ ಕೂಡ ಯುದ್ಧದಲ್ಲಿ ಭಾಗಿಯಾಗಿದೆ ಎಂದು ಬ್ರಿಟಿಷರು ಅರ್ಥವಿಲ್ಲದೆ ಹೇಳುತ್ತಾರೆ. ಯುದ್ಧವನ್ನು ಘೋಷಿಸಿದಾಗ ಭಾರತೀಯರ ಸಲಹೆ ತೆಗೆದುಕೊಂಡರೇ? ಏಕೆ ಸಲಹೆ ಕೇಳಬೇಕು? ಇಂಡಿಯಾ ಇಂಡಿಯನರಿಗೆ ಸೇರಿದ್ದಲ್ಲ, ಬ್ರಿಟಿಷರಿಗೆ ಸೇರಿದ್ದು. ಎಂಬುದು ಅವರ ಭಾವನೆ ಇಂಡಿಯಾ ಬ್ರಿಟಿಷರ ಸ್ವಾಸ್ಥ್ಯ ಎಂದು ಹೇಳಲಾಗಿದೆ. ಇಂಡಿಯಾದ ಬಗ್ಗೆ ಬ್ರಿಟಿಷರು ತಮಗೆ ತೋರಿದ ಹಾಗೆ ಮಾಡುತ್ತಿದ್ದಾರೆ. ಬ್ರಿಟನು ಇಂಡಿಯಾವನ್ನು ಬಿಟ್ಟು ಹೊರಡಲಿ, ತತ್‌ಕ್ಷಣ ಬಿಟ್ಟು ಹೊರಡಲಿ”.

ಇನ್ನೂ ಮುಂದೆ ಅನೇಕ ಲೇಖನಗಳನ್ನು ಹರಿಜನದಲ್ಲಿ ಬರೆದರು. “ಈಗ ಇಂಡಿಯಾದಲ್ಲಿ ಸ್ವರಾಜ್ಯವಿದೆಯೇ? ಇಲ್ಲ. ಅರಾಜಕತೆಯೇ ನನ್ನ ಕಣ್ಣಿಗೆ ಕಾಣಿಸುತ್ತಿದೆ. ಇನ್ನು ಮುಂದೆ ಜಪಾನಿಗೆ ಇಂಗ್ಲೆಂಡು ಸೋತು, ಇಂಡಿಯಾದಲ್ಲಿ ಸಿಪಾಯಿಗಳು ಲೂಟಿಮಾಡಿದರೆ, ಅದು ಇನ್ನೂ ಹೆಚ್ಚಿನ ಅರಾಜಕತೆ ಆದ್ದರಿಂದ ಬ್ರಿಟಿಷರು ಈ ದೇಶ ಬಿಟ್ಟು ಹೋದರೆ ಈ ದೇಶದಲ್ಲಿ ಅರಾಜಕತೆಯುಂಟಾಗುತ್ತದೆ ಎಂದು ಹೆದರಬೇಕಾಗಿಲ್ಲ. ಅದು ಈಗ ಇರುವ ಅರಾಜಕತೆಗಿಂತ ಮೇಲು. ಏನೇ ಆಗಲಿ, ಬ್ರಿಟಿಷರು ಈ ದೇಶ ಬಿಟ್ಟು ತತ್‌ಕ್ಷಣ ಹೊರಡಬೇಕು” ಎಂದು ಗಾಂಧೀಜಿ ಒತ್ತಾಯವಾಗಿ ಬರೆಯುತ್ತ ಬಂದರು.

ಈ ರೀತಿಯಾಗಿ ಎರಡು – ಮೂರು ತಿಂಗಳು ಹರಿಜನದಲ್ಲಿ ಲೇಖನಗಳು ಬಂದವು. ದೇಶದಲ್ಲಿ ಕಾವು ಹೆಚ್ಚಾಯಿತು. ಕಾಂಗ್ರೆಸ್ ವರ್ಕಿಂಗ್ ಕಮಿಟಿಗೂ ಮುಂದೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಇಂಡಿಯಾದ ಬಾಗಿಲಿಗೇ ಯುದ್ಧ ಪ್ರವೇಶಿರುವಾಗ, ಇಂಡಿಯಾಕ್ಕೆ ನೆಮ್ಮದಿಯಿಲ್ಲವಾಯಿತು. ಪತ್ರಿಕೆಗಳಲ್ಲಿಯೂ ಜನರು ತಮ್ಮ ಅಶಾಂತಿಯನ್ನು ಸೂಚಿಸಿದರು. ಬ್ರಿಟಿಷರನ್ನು ಇಂಡಿಯಾವನ್ನು ಬಿಟ್ಟು ಹೊರಡಿ ಎಂದು ಹೇಳಿದರೆ, ಮುನ್ನುಗ್ಗುತ್ತಿರುವ ಜಪಾನೀಯರಿಗೆ ದಾರಿ ಮಾಡಿಕೊಟ್ಟಂತಾಗುವುದಿಲ್ಲವೇ? ಗಾಂಧೀಜಿ “ಹಾಗಾಗುವುದಿಲ್ಲ. ಬ್ರಿಟಿಷರೇ ಹಿಮ್ಮೆಟ್ಟಿದರೆ, ಜಪಾನಿಯರು ಇಂಡಿಯಾದ ಮೇಲೆ ಬರುವುದಿಲ್ಲ” ಎಂದು ಹೇಳಿದರು. ಹಾಗೆ ಬಂದರೆ ಅವರ ಮೇಲೂ ಸತ್ಯಾಗ್ರಹ ಮಾಡಿ ಹಿಮ್ಮೆಟ್ಟಿಸಬಹುದು ಎಂದರು. ಈಗಲೇ ನಮ್ಮ ದೇಶೀಯರಿಗೆ ಅವರಿಗಿರುವ ಅಸಹಾಯಕತೆಯನ್ನು ತಪ್ಪಿಸಿ, ತಮ್ಮ ಕಾಲಿನ ಮೇಲೆ ಅವರು ನಿಲ್ಲುವಂತೆ ಮಾಡಬೇಕು ಎಂಬುದು ಗಾಂಧೀಜಿಯ ಅಭಿಪ್ರಾಯ. ವರ್ಕಿಂಗ್ ಕಮಿಟಿಯ ಸದಸ್ಯರಲ್ಲಿ ಕೆಲವರು ಗಾಂಧೀಜಿಯನ್ನು ಪ್ರಶ್ನಿಸಿ ತಮ್ಮ ಸಂದೇಹಗಳನ್ನು ತಿಳಿಸಿದರು. ಗಾಂಧೀಜಿ ಅವರ ಸಂದೇಹಗಳನ್ನು ಪರಿಹರಿಸಿದರು.

ದೇಶದಲ್ಲಿ ಈಗ ಒಂದು ಅಸಹನೀಯವಾದ ಜಡತೆ, ನಿಷ್ಕ್ರಿಯ ಸ್ಥಿತಿ, ಉಂಟಾಗಿತ್ತು. ಎಲ್ಲರೂ ಕಾಂಗ್ರೆಸು ಏನು ಮಾಡುತ್ತದೆ ಎಂದು ನಿರೀಕ್ಷಿಸುತ್ತಿದ್ದರು. ಕ್ರಿಪ್ಸರು ಈ ದೇಶಕ್ಕೆ ಬಂದು ಏನೋ ಕೊಡುತ್ತಾರೆ ಎಂದು ಜನ ನಿರೀಕ್ಷಿಸಿದ್ದರು. ಅದು ವಿಫಲವಾದ್ದರಿಂದ ಜನರಿಗೆ ಬಹಳ ಬೇಜಾರು ಬಂದು ಬಿಟ್ಟಿತು. ಇದನ್ನು ಹಾಗೆಯೇ ಬಿಡಬಾರದು; ಜನರಿಗೆ ಒಂದು ಕಾರ್ಯಕ್ರಮವನ್ನು ವಿಧಿಸಬೇಕು ಎಂಬ ಅಂಶ ಗಾಂಧೀಜಿಗೂ ಗೊತ್ತಿತ್ತು, ಕಾಂಗ್ರೆಸ್ ವರ್ಕಿಂಗ್ ಕಮಿಟಿಯವರಿಗೂ ಗೊತ್ತಿತ್ತು.

ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸದಸ್ಯರು ಗಾಂಧೀಜಿಯಿಂದ “ಇಂಡಿಯಾ ಬಿಟ್ಟು ಹೋಗಿ” ಎಂಬ ಸೂತ್ರದ ವಿವರಗಳನ್ನೆಲ್ಲಾ ತಿಳಿದುಕೊಂಡರು; ಮತ್ತು ಮುಂದೆ ಚಳುವಳಿಯನ್ನು ಆರಂಭಿಸಿದರೆ, ಗಾಂಧೀಜಿಯೇ ನಾಯಕತ್ವ ವಹಿಸಬೇಕೆಂದು ಕೇಳಿಕೊಂಡರು.

೧೯೪೨ನೇ ಆಗಸ್ಟಿನಲ್ಲಿ ವೈಸರಾಯರು ತಮ್ಮ ಎಗ್ಜೆಕ್ಯುಟಿವ್ ಕೌನ್ಸಿಲಿಗೆ ಇನ್ನೂ ಕೆಲವು ಭಾರತೀಯರನ್ನು ಸೇರಿಸಿಕೊಂಡರು. ಅವರು ಯಾರು ಯಾರೆಂದರೆ, ಸರ್ ಸಿ.ಪಿ.ರಾಮಸ್ವಾಮಿ ಅಯ್ಯರ್ (ಇವರು ೧೫ ದಿನಗಳಲ್ಲಿ ರಾಜೀನಾಮೆಯಿತ್ತರು), ಡಾ. ಬಿ.ಆರ್.ಅಂಬೇಡ್ಕರ್, ಸರ್ ಜೋಗೇಂದ್ರ ಸಿಂಗ್, ಸರ್ ಜೆ.ಪಿ. ಶ್ರೀವಾಸ್ತ ಮತ್ತು ಖಾನ್ ಬಹಯದೂರ್ ಸರ್ ಉಸ್ಮಾನ್ ಮತ್ತು ಈ.ಸಿ. ಬೆಂಥಾಲ್ (ಇವರು ಯೂರೋಪಿಯನ್ ಪ್ರತಿನಿಧಿ). ಇದರಿಂದ ಯಾವ ಪುರುಷಾರ್ಥವೂ ಸಾಧನೆಯಾಗಲಿಲ್ಲ. ವೈಸರಾಯರು ಹಿಂದಿನಂತೆಯೇ ಇಂಗ್ಲೆಂಡಿನ ಸರ್ಕಾರಕ್ಕೆ ಜವಾಬ್ದಾರರು. ಅವರು ಈ ಹೊಸ ಕೌನ್ಸಿಲಿನ ನಿರ್ಣಯಗಳಿಗೆ ಬದ್ದರಲ್ಲ. ಈ ಕೌನ್ಸಿಲು ಬ್ರಿಟಿಷ್ ಸರ್ಕಾರದ ಅಡಿಯಾಳಾಗಿದ್ದು ಯಾವ ರೀತಿಯಲ್ಲಿಯೂ ರಾಷ್ಟ್ರೀಯ ಸರ್ಕಾರವಾಗಲಿಲ್ಲ. ಸರ್ ಸಪ್ರು ಮುಂತಾದ ಲಿಬರಲ್‌ಗಳು ಕೂಡ ಈ ನೇಮಕಗಳ ಬಗ್ಗೆ ತಮ್ಮ ಸಂತೋಷವನ್ನು ಸೂಚಿಸಲಿಲ್ಲ. ಅಸಮಾಧಾನವನ್ನೇ ಸೂಚಿಸಿದರು.

ಕಾಂಗ್ರೆಸ್ ವರ್ಕಿಂಗ್ ಕಮಿಟಿ ಜುಲೈ ೧೭ರಲ್ಲಿ ವಾರ್ಧಾದಲ್ಲಿ ಕಲೆತು “ಕ್ವಿಟ್ ಇಂಡಿಯಾ” ನಿರ್ಣಯದ ಪೀಠಿಕೆಯನ್ನು ಹಾಕಿತು. ಗಾಂಧೀಜಿ ತಮ್ಮ ಅಭಿಪ್ರಾಯವನ್ನು ಈ ಕಮಿಟಿಗೆ ತಿಳಿಸಿ, ತಾವು ರಚಿಸಿದ್ದ ನಿರ್ಣಯವನ್ನು ಮುಂದಿಟ್ಟರು. ಅದು ಅಂಗೀಕೃತವಾಯಿತು ಅದರ ಅಭಿಪ್ರಾಯ ಹೀಗಿತ್ತು:

“ಇಂಡಿಯಾದ ಕ್ಷೀಣಿಸುತ್ತಿರುವ ಸ್ಥಿತಿಯನ್ನು ತಡೆಗಟ್ಟುವುದಕ್ಕಾಗಿಯೂ, ಪರಕೀಯ ಆಡಳಿತದಿಂದ ದಿನದಿನವೂ ಭಾರತೀಯ ಜನಕ್ಕೆ ಉಂಟಾಗುತ್ತಿರುವ ಹೀನಾಯವನ್ನು ಹೋಗಲಾಡಿಸುವುದಕ್ಕಾಗಿಯೂ, ಪರಕೀಯ ಧಾಳಿಯಿಂದ ದೇಶವನ್ನು ರಕ್ಷಿಸಿಕೊಳ್ಳುವುದಕ್ಕಾಗಿಯೂ, ಭಾರತದ ಹಿತದಲ್ಲಿ ನಾಜೀತತ್ವವನ್ನು ಮತ್ತು ಫ್ಯಾಸಿಸ್ಟ್ ತತ್ವವನ್ನು ದಮನಮಾಡುವುದಕ್ಕಾಗಿಯೂ, ಯುದ್ಧ ಹೂಡಿ ಹೆಣಗಾಡುತ್ತಿರುವ ಮಿತ್ರ ರಾಷ್ಟ್ರಗಳ ಹಿತದೃಷ್ಟಿಯಿಂದಲೂ, ಭಾರತ ಕೂಡಲೇ ಸ್ವತಂತ್ರವಾಗುವುದು ಅತ್ಯಗತ್ಯ. ಯುದ್ಧವಾರಾಂಭವಾದಾಗಿನಿಂದಲೂ ಮಿತ್ರರಾಷ್ಟ್ರಗಳಿಗೆ ತೊಡಕಾಗಬಾರದೆಂದು ನಾವು ನಡೆದುಕೊಂಡಿದ್ದೇವೆ. ನಾವು ಹೂಡಿದ ವೈಯಕ್ತಿಕ ಸತ್ಯಾಗ್ರಹ ನಮ್ಮ ವಿರೋಧವನ್ನು ಸೂಚಿಸಿದರೂ, ಬ್ರಿಟಿಷ್ ಸರ್ಕಾರಕ್ಕೆ ತೊಡಕುಂಟುಮಾಡಲಿಲ್ಲ. ಇದನ್ನು ಬ್ರಿಟಿಷ್ ಸರ್ಕಾರ ಮನಗಂಡು, ಭಾರತಕ್ಕೆ ಪೂರ್ಣ ಸ್ವರಾಜ್ಯ ಕೊಡಬೇಕಾದ್ದು ಕರ್ತವ್ಯ. ಭಾರತ ಎಚ್ಚರಿಕೆಯಿಂದ ಯುದ್ಧವಾರಂಭದಿಂದ ನಡೆದುಕೊಂಡಿದೆ, ಇಂಗ್ಲೆಂಡಿನ ಕೈಕಟ್ಟಬಾರದೆಂದು ಕ್ರಿಪ್ಸ್ ಸಲಹೆಗಳು ಬ್ರಿಟಿಷ್ ಸರ್ಕಾರದ ಮನೋಭಾವವನ್ನು ಸ್ಪಷ್ಟಪಡಿಸುತ್ತದೆ; ಬ್ರಿಟಿಷ್ ಸರ್ಕಾರಕ್ಕೆ ಇಂಡಿಯಾದ ಮೇಲಿನ ತನ್ನ ಹಿಡಿತವನ್ನು ಸ್ವಲ್ಪವೂ ಸಡಿಸಲು ಇಷ್ಟವಿಲ್ಲ. ಕಾಂಗ್ರೆಸು ಕ್ರಿಪ್ಸ್‌ರೊಡನೆ ಬಹಳ ಮಾತುಕತೆ ನಡೆಸಿತ್ತು, ಕಿಂಚಿತ್ತಾದರೂ ಅದರ ಬೇಡಿಕೆ ಈಡೇರಲಿ ಎಂದು. ಏನೂ ಫಲವಾಗಲಿಲ್ಲ. ಇದರಿಂದ ಭಾರತದಲ್ಲಿ ಏನಾಗಿದೆ ಎಂದರೆ, ಬ್ರಿಟಿನ್ನಿನ ಮೇಲೆ ಕೋಪ ಮತ್ತು ಜಪಾನೀಯರು ಗೆಲ್ಲುತ್ತಿರುವುದರಲ್ಲಿ ಸಂತೋಷ. ಈ ರೀತಿಯಾದ ಮನೋಭಾವ ಜನರಲ್ಲಿ ಹೆಚ್ಚುವುದು ಸರಿಯಲ್ಲ. ಇದನ್ನು ತಡದೇ ತಡೆಯಬೇಕು. ಆದ್ದರಿಂದ ಕಾಂಗ್ರೆಸ್ ಕಮಿಟಿ ದೇಶದ ಮೇಲೆ ಮುನ್ನುಗ್ಗುವಿಕೆಯನ್ನು ಸರ್ವ ವಿಧದಿಂದಲೂ ಎದುರಿಸತಕ್ಕದ್ದು. ಸುಮ್ಮನೆ ತಲೆ ಬಗ್ಗಿಸುವುದೆಂದರೆ ಅದು ಭಾರತದ ಪರಮಾವಧಿ ಪರಾಧೀನತೆ. ಮಲಯಾ, ಸಿಂಗಪುರ, ಮತ್ತು ಬರ್ಮಾ ಇವುಗಳಿಗೆ ಬಂದ ಸ್ಥಿತಿ ಭಾರತಕ್ಕೆ ಎಂದೂ ಬರಬಾರದೆಂದು ಕಾಂಗ್ರೆಸು ನಿಶ್ಚಯಿಸಿದೆ. ಜಪಾನೀಯರೇ ಆಗಲಿ ಇನ್ನಾವ ರಾಜ್ಯದವರೇ ಆಗಲಿ ಭಾರತದ ಮೇಲೆ ಮುನ್ನುಗ್ಗಿ ಬರದಂತೆ ಅವರನ್ನು ಕಾಂಗ್ರೆಸು ಬಲವಾಗಿ ತಡೆಯುವುದು. ಬ್ರಿಟಿಷರ ವಿಷಯದಲ್ಲಿ ಭಾರತೀಯರ ಕೆಟ್ಟ ಭಾವನೆಯನ್ನು ಹೋಗಲಾಡಿಸಿ ಅದನ್ನು ಸ್ನೇಹಕ್ಕೆ ತಿರುಗಿಸಲು ಕಾಂಗ್ರೆಸು ಪ್ರಯತ್ನಿಸುವುದು. ಇಂಡಿಯಾ ಬ್ರಿಟಿಷರೂ ಇತರ ಮಿತ್ರ ರಾಷ್ಟ್ರಗಳೂ ಎಲ್ಲಾ ರಾಷ್ಟ್ರಗಳಿಗೂ ಸ್ವಾತಂತ್ರ್ಯವನ್ನುಕೊಡುವ ಪ್ರಯತ್ನದಲ್ಲಿ ಸಮಭಾಗಿಯಾಗುವುದು. ಇದಾಗಬೇಕಾದರೆ, ಇಂಡಿಯಾದಲ್ಲಿ ಸ್ವಾತಂತ್ರ್ಯದ ಗಾಳಿ ಬೀಸಬೇಕು.

“ಕಾಂಗ್ರೆಸು ಇಂಡಿಯಾದಲ್ಲಿರುವ ಕೋಮುವಾರು ಸಮಸ್ಯೆಯನ್ನು ಬಿಡಿಸಲು ಸತತವಾಗಿ ಪ್ರಯತ್ನಿಸುತ್ತಿದೆ. ಇದು ಫಲಿಸುತ್ತಿಲ್ಲ, ಕಾರಣ, ಪರಕೀಯರ ಸರ್ಕಾರ ತನ್ನ ಹಿತಕ್ಕೋಸ್ಕರ ಜನರಲ್ಲಿ ಭೇದವನ್ನು ತಂದು ಹಾಕೀ ಆಳಲು ಯತ್ನಿಸುತ್ತದೆ. ಆದ್ದರಿಂದ ಪರಕೀಯ ಆಡಳಿತ ಹೋದ ಮೇಲೆಯೇ ಜನರಿಗೆ ತಮ್ಮ ನಿಜಸ್ಥೀತಿ ಅರಿವಾಗಿ, ಕೋಮುವಾರು ಮುಂತಾದ ಐಕಮತ್ಯಗಳುಂಟಾಗುವುವು. ಪರಕೀಯ ಪ್ರಭಾವ ಮಾಯವಾದರೆ ಭಾರತದ ರಾಜರು ಜಹಗೀರ್‌ದಾರರು, ಜಮಿನ್‌ದಾರರು ಮತ್ತು ಐಶ್ವರ್ಯವಿರುವ ಎಲ್ಲಾ ಜನರು ರೈತರಿಗೂ ಶ್ರಮಜೀವಿಗಳಿಗೂ, ಬಡ ಕೈಗಾರಿಕೆದಾರರಿಗೂ ಸಹಾಯ ಮಾಡುವರು. ಅಧಿಕಾರ ಸಾಮಾನ್ಯ ಜನದ್ದು, ಅವರಿಗೆ ನಿಜವಾದ ಅಧಿಕಾರವಿರಬೇಕು.

“ಬ್ರಿಟಿಷರು ಇಂಡಿಯಾ ಬಿಟ್ಟು ಹೋದರೆ, ಇಂಡಿಯಾದ ಪ್ರಮುಖರು ಕೂಡಲೇ ಒಂದು ತಾತ್ಕಾಲಿಕ ಸರ್ಕಾರವನ್ನು ರಚಿಸಿ ರಾಜ್ಯದ ಆಗುಹೋಗುಗಳನ್ನು ನೋಡಿಕೊಳ್ಳುವರು ಮತ್ತು ರಾಜ್ಯಾಂಗ ರಚನಾ ಸಭೆಯನ್ನು ರಚಿಸಿಕೊಂಡು ತಮ್ಮ ರಾಜ್ಯದ ಸ್ವರೂಪವನ್ನು ನಿರ್ಧಸುವರು. ಸ್ವತಂತ್ರ ಇಂಡಿಯಾದ ಪ್ರತಿನಿಧಿಗಳೂ ಬ್ರಿಟನ್ನಿನ ಪ್ರತಿನಿಧಿಗಳೂ ಕಲೆತು, ತಮ್ಮ ವಿವಾದಗಳನ್ನು ಇತ್ಯರ್ಥಗೊಳಿಸುತ್ತಾರೆ ಮತ್ತು ಮಿತ್ರ ಮಂಡಲಿಗೆ ಶತ್ರುಗಳನ್ನು ಎದುರಿಸುವ ಮಾರ್ಗದ ಬಗ್ಗೆ ಪರಿಶೀಲಿಸುತ್ತಾರೆ.

“ಬ್ರಿಟಿಷರು ಈ ದೇಶವನ್ನು ಬಿಟ್ಟು ಹೋಗಬೇಕು ಎಂದು ಹೇಳುವಾಗ, ಮಿತ್ರ ರಾಷ್ಟ್ರಗಳ ಯುದ್ಧ ಪ್ರಯತ್ನಗಳಿಗೆ ಯಾವ ಅಡ್ಡಿಯನ್ನೂ ಉಂಟುಮಾಡುವುದಿಲ್ಲ. ಜಪಾನನ್ನು ಎದುರಿಸಲು, ಇಂಡಿಯಾದಲ್ಲಿ ಮಿತ್ರ ರಾಷ್ಟ್ರಗಳ ಸೈನ್ಯಗಳು ಇದ್ದುಕೊಂಡು ಕೆಲಸ ಮಾಡಲಿ. ಅವರ ಕೆಲಸಕ್ಕೆ ಸ್ವತಂತ್ರ ಭಾರತ ಯಾವ ಅಡ್ಡಿಯನ್ನೂ ತರುವುದಿಲ್ಲ. ಬ್ರಿಟಿಷರು ಈ ದೇಶ ಬಿಟ್ಟು ಹೋಗಲಿ ಎಂದರೆ ಎಲ್ಲ  ಬ್ರಿಟಿಷ್ ಜನರೂ ಈ ದೇಶ ಬಿಟ್ಟು ಹೋಗಬೇಕು ಎಂಬುದಲ್ಲ. ಯಾರ‍್ಯಾರು ಇಂಡಿಯಾವನ್ನೇ ತಮ್ಮ ದೇಶವೆಂದು ಭಾವಿಸಿಕೊಂಡು ತಮ್ಮ ಸ್ವಂತ ಉದ್ಯಮಗಳಲ್ಲಿ ತೊಡಗಿರುತ್ತಾರೋ, ಅಂಥ ಬ್ರಿಟಿಷರು ಇಲ್ಲೇ ಇರಲಿ.

“ಅಪಾಯಗಳು ದೇಶಕ್ಕೆ ಸಂಭವಿಸಬಹುದೆಂಬ ಹೆದರಿಕೆ ಕೆಲವರಿಗಿದೆ. ಆದರೆ ದೇಶ ಸ್ವತಂತ್ರವಾಗಲು ಪ್ರಯತ್ನಿಸುವಾಗ ಕೆಲವು ಅಪಾಯಗಳು ಬಂದರೂ, ಅವುಗಳನ್ನು ಧೈರ್ಯದಿಂದ ಮತ್ತು ಶಕ್ತಿಯಿಂದ ಎದುರಿಸಬೇಕು.

“ಕಾಂಗ್ರೆಸು ತನ್ನ ಈ ಪ್ರಯತ್ನದಲ್ಲಿ ಸಂಯುಕ್ತ ರಾಜ್ಯಸಂಸ್ಥೆಗೆ ಯಾವ ತೊಡಕೂ ಆಗದಂತೆ, ಅವಸರವಿಲ್ಲದೆ, ನಿಧಾನವಾಗಿ, ಪ್ರವರ್ತಿಸುತ್ತದೆ.

“ಈ ಎಲ್ಲ ಕಾರಣಗಳಿಂದ, ಕಾಂಗ್ರೆಸು ಬ್ರಿಟನ್ನನ್ನು ಪ್ರಾರ್ಥಿಸುವುದೇ ನೆಂದರೆ, ನೀವು ‘ಭಾರತವನ್ನು ಬಿಟ್ಟು ಹೊರಡಿ’ ಎಂಬ ಕೋರಿಕೆಯನ್ನು ನಡೆಸಿಕೊಡಿ. ಇದರಿಂದ ಭಾರತೀಯರಿಗೂ ಶ್ರೇಯಸ್ಸು, ಬ್ರಿಟನ್ನಿಗೂ ಶ್ರೇಯಸ್ಸು, ಸಂಯುಕ್ತ ರಾಷ್ಟ್ರಗಳು ಅಳಿಸುವ ರಾಷ್ಟ್ರಗಳ ಸ್ವಾತಂತ್ರ್ಯವೂ ಲಭಿಸುವುದು.

“ಈ ಪ್ರಾರ್ಥನೆಯನ್ನು ಬ್ರಿಟನ್ನು ಮನ್ನಿಸದೆ ಇದ್ದರೆ, ಕಾಂಗ್ರೆಸು ಈಗಿನ ದೇಶ ಭಯಂಕರ ಸ್ಥಿತಿಯನ್ನು ಮುಂದುವರಿಸಲು ಇಷ್ಟಪಡುವುದಿಲ್ಲ. ಪರದೇಶದ ಮುನ್ನುಗ್ಗುವಿಕೆಯನ್ನು ತಡೆಯಲು ಭಾರತಕ್ಕೆ ಇರುವ ಇಚ್ಛಾಶಕ್ತಿಯೂ ಇತರ ಶಕ್ತಿಗಳೂ ಈಗಾಗಲೇ ಕುಂದಿವೆ. ಅವು ಇನ್ನೂ ಕುಂದಲು ಅವಕಾಶ ಕೊಡುವುದಿಲ್ಲ. ೧೯೨೦ ರಿಂದಲೂ ದೇಶ ಸಂಪಾದಿಸಿರುವ ಅಹಿಂಸಾಬಲವನ್ನು ಈಗ ಪೂರ್ಣವಾಗಿ ಉಪಯೋಗಿಸಲಾಗುವುದು. ಗಾಂಧೀಜಿಯವರೇ ಈ ಅಹಿಂಸಾ ಶಕ್ತಿ ಪ್ರಯೋಗದ ಮುಖಂಡರಾಗುವುದು. ಈ ವಿಷಯವನ್ನು ಆಗಸ್ಟ್ ೭ರಲ್ಲಿ ಬೊಂಬಾಯಿನಲ್ಲಿ ಸೇರುವ ಆಲ್ ಇಂಡಿಯಾ ಕಮಿಟಿಯ ಮುಂದ ಒಪ್ಪಿಗೆಗೆ ಇಡಲಾಗುವುದು.”

ವರ್ಕಿಂಗ್ ಕಮಿಟಿಯ ಈ ಪ್ರಮುಖ ನಿರ್ಣಯ ಪ್ರಕಟವಾಯಿತು. ಅಮೆರಿಕದ ಪತ್ರಿಕಾ ಪ್ರತಿನಿಧಿಗಳು ಈ ನಿರ್ಣಯದಿಂದ ಅಮೆರಿಕದ ಸಹಾನುಭೂತಿ ಭಾರತಕ್ಕೆ ಇಲ್ಲವಾಗುವುದೆಂದು ತಿಳಿಸಿದರು; ಘೋರ ಯುದ್ಧದ ಮಧ್ಯದಲ್ಲಿ ಬ್ರಿಟಿಷರನ್ನು ಭಾರತವನ್ನು ಬಿಟ್ಟು ಹೊರಡಿ ಎಂದು ಹೇಳುವುದು ಅಪಾಯಕರ ಎಂದು ಭಾವಿಸಿದರು. ಗಾಂಧೀಜಿಯನ್ನು ‘ರಾಜಿಗೇನಾದರೂ ಅವಕಾಶವಿದೆಯೇ?’ ಎಂದು ಪ್ರಶ್ನಿಸಲಾಯಿತು. ಗಾಂಧೀಜಿ ಉತ್ತರವಿತ್ತರು: ‘ಬ್ರಿಟಿಷರು ಈ ದೇಶ ಬಿಟ್ಟು ಹೋಗಬೇಕೆಂಬ ವಿಷಯದಲ್ಲಿ ಯಾವ ರಾಜಿಗೂ ಅವಕಾಶವಿಲ್ಲ. ಈ ಒಂದು ಕೆಲಸವನ್ನು ಬ್ರಿಟಿಷ್ ಸರ್ಕಾರ ಮಾಡಲಿ; ಕೂಡಲೇ ಪ್ರಪಂಚದ ಚರಿತ್ರೆಯೇ ಬದಲಾಯಿಸಿಹೋಗುತ್ತದೆ. ಈ ಯುದ್ಧದಲ್ಲಿ ಮಿತ್ರ ರಾಷ್ಟ್ರಗಳಿಗೆ ವಿಜಯವೂ ಖಂಡಿತವಾಗುತ್ತದೆ’.

ಕಾಂಗ್ರೆಸ್ ಅಧ್ಯಕ್ಷ ಮೌಲಾನಾ ಆಜಾದ್‌ರು ಪತ್ರಿಕಾ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ಕೊಡುತ್ತಾ, ‘ನಾವು ಈಗ ಕೇಳುತ್ತಿರುವುದು ಭಾರತೀಯ ಸ್ವಾತಂತ್ರ್ಯ. ಈ ವಿಷಯದಲ್ಲಿ ಯಾವ ರಾಜಿಗೂ ಅವಕಾಶವಿಲ್ಲ. ಮಧ್ಯಕಾಲದಲ್ಲಿ ಹೇಗೆ ಎಂದರೆ, ಈ ವಿಷಯವನ್ನು ಆಗಲೇ ಸ್ಪಷ್ಟಪಡಿಸಿದೆ. ಏನಾದರೂ ಸಮಸ್ಯೆ ಇದ್ದರೆ ಅದನ್ನು ಪರಸ್ಪರ ಮಾತುಕತೆಯಿಂದ ಪರಿಹರಿಸಿಕೊಳ್ಳಬಹುದು’ ಎಂದರು.

ಗಾಂಧೀಜಿ “ಪ್ರತಿಯೊಬ್ಬ ಜಪಾನೀಯರಿಗೆ” ಎಂಬ ಒಂದು ಲೇಖನವನ್ನು ಪ್ರಕಟಿಸಿ, “ಬ್ರಿಟಿಷರನ್ನು ಬಿಟ್ಟು ಹೊರಡಿ ಎಂದರೆ, ಜಪಾಣಿಗೆ ಸ್ವಾಗತ ಎಂದು ತಿಳಿಯಬಾರದು. ಜಪಾನು ಭಾರತಕ್ಕೆ ಸ್ವಾತಂತ್ರ್ಯ ಬರಬೇಕು ಎಂದು ಆಶಿಸಿರುವುದಾಗಿ ಅನೇಕ ಸಾರಿ ಕೇಳಿದ್ದೇನೆ. ಇದು ನಿಜವಾದರೆ ಭಾರತ ಸ್ವತಂತ್ರವಾದರೆ, ನೀವು ಇಂಡಿಯಾದ ಮೇಲೆ ಬೀಳಕೂಡದು. ನಿಮಗೆ ಭಾರತದಲ್ಲಿ ಸ್ವಾಗತ ಸಿಗುವುದೆಂದು ನೀವು ಭಾವಿಸಿದರೆ, ನೀವು ತಪ್ಪು ಮಾಡುತ್ತೀರಿ. ಇಂಡಿಯಾ ಎಲ್ಲಾ ಮಿಲಿಟರಿಸ್ಟ್ ಮತ್ತು ಸಾಮ್ರಾಜ್ಯ ಆಶೋತ್ತರಗಳಿಗೂ ವಿರೋಧಿ. ಅದು ಬ್ರಿಟಿಷರಿಂದ ಬರಲಿ, ಅದು ಜರ್ಮನರಿಂದ ಬರಲಿ, ನಿಮ್ಮಿಂದ (ಜಪಾನಿಯರಿಂದ) ಬರಲಿ, ಅದನ್ನು ತಡೆಗಟ್ಟುತ್ತದೆ. ನಾವು ಬ್ರಿಟನ್ನನ್ನು ಇಂಡಿಯಾ ಬಿಟ್ಟು ಹೊರಡಿ ಎಂದು ಹೇಳುವಾಗ, ಅವರ ಮತ್ತು ಮಿತ್ರವರ್ಗದ ಸೈನ್ಯಕ್ಕೆ ಇಂಡಿಯಾದಲ್ಲಿರಲು ಅನುಮತಿ ನೀಡಿದ್ದೇವೆ. ನಮಗೆ ಹಾಗೂ ಮಿತ್ರವರ್ಗದವರಿಗೆ ಯಾವ ಅಪಾಯವೂ ಬರಕೂಡದೆಂಬ ಆಶೆಯಿದೆ. ಜಪಾನೀಯರು ಏನಾದರೂ ಇಂಡಿಯಾದಲ್ಲಿ ಕಾಲಿಡಲು ಪ್ರಯತ್ನಿಸಿದರೆ, ನಾವು ನಮ್ಮ ಶಕ್ತಿ ಮೀರಿ ನಿಮ್ಮನ್ನು ಎದುರಿಸುವೆವು” ಎಂದು ಎಚ್ಚರಿಕೆ ಕೊಟ್ಟರು.

ಪತ್ರಿಕಾ ಪ್ರತಿನಿಧಿಗಳಿಗೆ ಒಂದು ಅಂಶವನ್ನು ಸ್ಪಷ್ಟಪಡಿಸಿದರು; ಮಿತ್ರವರ್ಗದ ಸೈನ್ಯಗಳು ಇಂಡಿಯಾದಲ್ಲಿದ್ದುಕೊಂಡು ಶತ್ರುಗಳ ಮೇಲೆ ಕಾರ್ಯಾಚರಣೆ ಮಾಡಲಿ ಎಂದು ನಾವು ಹೇಳುವಾಗ ಜಪಾನಿಗೆ ಇಂಡಿಯಾದ ಒಳಕ್ಕೆ ಬರಲು ಅವಕಾಶವಿಲ್ಲ.

ಪ್ರಶ್ನೆ: ಒಂದು ವೇಳೆ ಜಪಾನೀಯರು ಒಳನುಗ್ಗಿದರೆ ನೀವೇನೋ ಅಸಹಕಾರ ಮಾಡುತ್ತೀರಿ. ಆದರೆ ಅವರು ನಿಮ್ಮನ್ನು ಗುಂಡಿನಿಂದ ಹೊಡೆದರೆ?

ಉತ್ತರ: ಅವರು ಗುಂಡಿನಿಂದ ಹೊಡೆಯಲಿ ಅಥವಾ ಏನೇ ಮಾಡಲಿ ನಾವು ಜಪಾನೀಯರೊಡನೆ ಸಹಕರಿಸುವುದಿಲ್ಲ.

ರಾಜೇಂದ್ರ ಪ್ರಸಾದರೂ ಇದೇ ಮಾತನ್ನು ಹೇಳಿದರು; ನಮಗೆ ಆಳರಸರ ಬದಲಾವಣೆ ಬೇಕಿಲ್ಲ. ಅವಶ್ಯವಿದ್ದರೆ ನಾವು ಗೌರವದಿಂದ ಸಾಯುತ್ತೇವೆ, ಯಾರಿಗೂ ನಾವು ತಲೆ ಬಗ್ಗಿಸುವುದಿಲ್ಲ.

ಜವಹರಲಾಲ್ ನೆಹರು ‘ನಾವು ಪ್ರಾಣವನ್ನಾದರೂ ಬಿಟ್ಟು, ನಮ್ಮ ದೇಶದ ಸ್ವಾತಂತ್ರ್ಯವನ್ನು ಕಾಪಾಡುತ್ತೇವೆ’ ಎಂದರು. ಮೌಲಾನಾ ಆಜಾದ್ ‘ಇಂಡಿಯಾ ಜಪಾನಿಯರಿಗೆ ಅಧೀನವಾಗುವುದೆಂಬುದಾಗಿ ಗುಲಾಮರು ಆಲೋಚಿಸುತ್ತಾರೆ, ಸ್ವತಂತ್ರ ಜನರಲ್ಲ’ ಎಂದರು. ಗಾಂಧೀಜಿ ಮುಸ್ಲಿಂ ಲೀಗಿಗೂ ಜಿನ್ಹಾರಿಗೂ ಪ್ರಾರ್ಥನೆ ಕಳುಹಿಸುತ್ತಾ, “ಈಗ ಹಿಂದುಸ್ಥಾನ ಇಲ್ಲ, ಇರುವುದು ಇಂಗ್ಲಿಷ್ ಸ್ಥಾನ. ನಾವೆಲ್ಲಾ ಸೇರಿ ಇಂಗ್ಲಿಷರನ್ನು ಹೊರ ಹೊರಡಿಸೋಣ. ಬೇಕಾದರೆ, ಹಿಂದೂಸ್ಥಾನ, ಪಾಕೀಸ್ಥಾನಗಳೆಂಬ ವಿಭಾಗಗಳನ್ನು ಮಾಡಿಕೊಳ್ಳೋಣ” ಎಂದು ಸ್ಪಷ್ಟಪಡಿಸಿದರು. ಆದರೆ ಜಿನ್ಹಾ ಅನುಕೂಲವಾದ ಉತ್ತರ ಕೊಡಲಿಲ್ಲ.

ಪತ್ರಿಕಾ ಪ್ರತಿನಿಧಿಗಳು ಗಾಂಧೀಜಿಯನ್ನು ಪ್ರಶ್ನಿಸಿದರು.

ಪ್ರಶ್ನೆ: ನಿಮ್ಮ ಚಳುವಳಿಯ ಸ್ವರೂಪವನ್ನು ತಿಳಿಸುವಿರಾ? ನೀವು ಉಪ್ಪಿನ ಕಾನೂನನ್ನು ಮುರಿಯುವಿರಾ? ಸರ್ಕಾರದ ನೌಕರರನ್ನೂ, ಶ್ರಮಜೀವಿಗಳನ್ನೂ ತಮ್ಮ ಕೆಲಸಬಿಟ್ಟು ಬರಬೇಕೆಂದು ಕೇಳುವಿರಾ?

ಉತ್ತರ: ನಾನು ಆಗಲೇ ತಿಳಿಸಿದ್ದೇನೆ. ಅಹಿಂಸಾಯುತವಾದ ಎಲ್ಲ ಕೆಲಸಗಳನ್ನೂ ತೆಗೆದುಕೊಳ್ಳುತ್ತೇವೆ. ನೀವು ಕೇಳುವುದೂ ಅದರಲ್ಲಿದೆ. ಸಾಮೂಹಿಕವಾದ ಕಾರ್ಯ ಎಲ್ಲ ಕಾನೂನು ಭಂಗ ಕಾರ್ಯಗಳನ್ನೂ ಒಂದೇ ಸಾರಿ ತೆಗೆದುಕೊಳ್ಳುವುದಲ್ಲ. ನಾನು ಕಾದು ನೋಡುತ್ತೇನೆ. ನನಗೆ ತತ್‌ಕ್ಷಣ ಅರಾಜಕತೆ ತರಬೇಕೆಂಬುದಿಲ್ಲ. ಜಪಾನಿನ ಆಕ್ರಮಣಕ್ಕೆ ಸಹಾಯ ಮಾಡಬೇಕೆಂಬುದಿಲ್ಲ. ಎಚ್ಚರಿಕೆಯಿಂದ ಮುಂದರಿಯುತ್ತೇನೆ. ಬ್ರಿಟನ್ನಿನ ಮೇಲೆ ಮತ್ತು ಮಿತ್ರವರ್ಗದ ಮೇಲೆ ಪರಿಣಾಮವುಂಟುಮಾಡಲು ಯತ್ನಿಸುತ್ತೇನೆ. ಮುಂದೆ ಏನಾದರೂ ತೊಂದರೆ ಆದರೆ, ಅವರೇ ಜವಾಬ್ದಾರರಾಗುತ್ತಾರೆ. ಎ.ಐ.ಸಿ.ಸಿ. ನಿರ್ಣಯ ಆದ ಮೇಲೆ ಸ್ವಲ್ಪ ಕಾಲ ಕಾದು ನೋಡುತ್ತೇನೆ. ವೈಸರಾಯರು ನನ್ನ ಮಿತ್ರರು ಅವರ ಮುಂದೆ ಎಲ್ಲವನ್ನೂ ಇಡುತ್ತೇನೆ.

ಪ್ರ: ನಿಮ್ಮನ್ನೂ ನಿಮ್ಮ ಸಹೋದ್ಯೋಗಿಗಳನ್ನೂ ಜೈಲಿಗೆ ಹಾಕಿದರೆ ಚಳುವಳಿ ಕುಸಿದು ಬೀಳುವುದೇ?

ಉ: ಇಲ್ಲವೆಂದು ನಾನು ಆಶಿಸುತ್ತೇನೆ. ಇನ್ನೂ ಬಲಗೊಳ್ಳುವುದು.

ಗಾಂಧೀಜಿ ದೇಶೀಯ ರಾಜರುಗಳಿಗೂ ಪ್ರಾರ್ಥನೆ ಮಾಡಿದರು: ಈ ಸಂಧಿಕಾಲದಲ್ಲಿ ನೀವು ಇಡೀ ದೇಶದೊಡನೆ ಕಲೆತು, ನಿಮ್ಮ ಬೆಂಬಲ ಕೊಡಿ. ಪ್ರಜೆಗಳಿಗೆ ಜವಾಬ್ದಾರಿ ಸರ್ಕಾರ ಕೊಟ್ಟು ಬಿಡಿ. ಇಂಡಿಯಾವೆಲ್ಲಾ ಒಂದು. ದೇಶೀಯ ಸಂಸ್ಥಾನಗಳನ್ನು ಬೇರೆ ಮಾಡಲಾಗುವುದಿಲ್ಲ.” ಗಾಂಧೀಜಿ ಈ ಮಹಾ ಸಮರದಲ್ಲಿ ಭಾಗವಹಿಸಬೇಕೆಂದು ಎಲ್ಲರನ್ನೂ ಪ್ರಾರ್ಥಿಸಿದರು. ಅಮೆರಿಕನ್ ಸ್ನೇಹಿತರಿಗೂ ಪತ್ರ ಬರೆದರು. “ಯಾರೂ ಅಸಮಾಧಾನ ಪಟ್ಟುಕೊಳ್ಳಬಾರದು” ಎಂದರು. ಭಾರತದ ಈ ಅಂತಿಮ ಹೋರಾಟದಲ್ಲಿ ಸಹಾನುಭೂತಿಯನ್ನು ಕೋರಿದರು. ಚೀಣಾ ದೇಶಕ್ಕೂ ಸಂದೇಶ ಕಳುಹಿಸಿದರು. ಬೊಂಬಾಯಿನಲ್ಲಿ ಆಗಸ್ಟ್ ೭ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಕಮಿಟಿ ಸಭೆ ನಡೆಯುವ ಮುನ್ನ ಯಾರ‍್ಯಾರಿಗೆ ಈ ಅಂತಿಮ ಸಮರದ ವಿಷಯವನ್ನು ತಿಳಿಸಬೇಕೋ ಅವರಿಗೆಲ್ಲಾ ತಿಳಿವಳಿಕೆ ಕೊಟ್ಟರು.

೧೯೪೨ನೇ ಆಗಸ್ಟ್ ೪ರಲ್ಲಿ ವರ್ಕಿಂಗ್ ಕಮಿಟಿ ಸಭೆ ನಡೆದು ೫ನೇ ತಾರೀಖು ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ಮುಂದೆ ಇಡುವ ನಿರ್ಣಯದ ಡ್ರಾಫ್ಟನ್ನು ತಯಾರಿಸಿತು. ಗಾಂಧೀಜಿಗೆ ಒಂದು ಆಶೆಯಿತ್ತು. ಈ ನಿರ್ಣಯ ಪಾಸಾದ ಕೂಡಲೆ, ವೈಸರಾಯರ ಭೇಟಿ ತೆಗೆದುಕೊಂಡು, ಎಲ್ಲ ಸಂಗತಿಗಳನ್ನೂ ವಿವರವಾಗಿ ಅವರಿಗೆ ತಿಳಿಸಿ, ವೈಸರಾಯರು ಎಲ್ಲ ಅಂಶಗಳನ್ನು ಬ್ರಿಟಿಷ್‌ಸರ್ಕಾರಕ್ಕೆ ತಿಳಿಸಿದ ಮೇಲೆ, ಇಂಡಿಯಾದ ಕೂಡ ಬ್ರಿಟಿಷ್ ಸರ್ಕಾರ ಒಪ್ಪಂದಕ್ಕೆ ಬರುವುದು ಎಂಬುದು ಅವರ ನಂಬಿಕೆ. ಬರ್ಮಾ, ಸಿಂಗಪುರ, ಮಲಯಾ ಇವುಗಳಂತೆ ಭಾರತವನ್ನು ಜಪಾನಿಯರ ಕೈಗೆ ಬೀಳುವ ಹಾಗೆ ಮಾಡಲು ಬ್ರಿಟಿಷ್ ಸರ್ಕಾರಕ್ಕೆ ಇಚ್ಛೆಯಿಲ್ಲ ಎಂಬುದು ಅವರ ತಿಳಿವಳಿಕೆ. ಆದರೆ ಅದುದು ಬೇರೆ ರೀತಿ. ಆಲ್ ಇಂಡಿಯಾ ಕಾಂಗ್ರೆಸ್ ಸಮಿತಿ ಆಗಸ್ಟ್ ೭ನೇ ತಾರೀಖು ಬೊಂಬಾಯಿನಲ್ಲಿ ಸಭೆ ಸೇರಿತು ಮತ್ತು ಕ್ವಿಟ್ ಇಂಡಿಯಾ ನಿರ್ಣಯವನ್ನು ಪಾಸು ಮಾಡಿತು. “ಹಿಂದೂಸ್ತಾನದ ಜನ್ಮಸಿದ್ಧವಾದ ಸ್ವಾತಂತ್ರ್ಯದ ಹಕ್ಕಿಗಾಗಿ ೨೧ವರ್ಷ ಶಾಂತಿಮಯ ಹೋರಾಟ ಮಾಡಿಗಳಿಸಿರುವ ಸರ್ವಶಕ್ತಿಯನ್ನೂ ದೇಶ ಸಾಮುದಾಯಿಕ ಅಹಿಂಸಾತ್ಮಕ ಹೋರಾಟವನ್ನು ಹೂಡಲು ಈಗ ಉಪಯೋಗಿಸಬೇಕು. ಇಂಥ ಹೊರಾಟದ ನೇತೃತ್ವ ಗಾಂಧೀಜಿಯವರ ಕೈಯಲ್ಲಿಯೇ ಇರಬೇಕು”, ಎಂಬುದು ಆ ನಿರ್ಣಯದ ಕಡೆಯ ಭಾಗ. ಗಾಂಧೀಜಿ ತಮ್ಮ ಭಾಷಣದಲ್ಲಿ ತಾವು ಗಡಿಬಿಡಿ ಮಾಡುವುದಿಲ್ಲ, ‘ವೈಸರಾಯರನ್ನು ಕಂಡು, ಮಾತುಕತೆ ನಡೆಸಲು ನಾನು ಯತ್ನಿಸುವೆನು’ ಎಂದು ತಿಳಿಸಿದರು. ಈಗ ಅಧಿಕಾರ ಬಂದರೆ ಅದು ಕಾಂಗ್ರೆಸಿಗೋಸ್ಕರವೇ ಅಲ್ಲ, ಇಡೀ ಭಾರತ ಜನಾಂಗಕ್ಕೇ ಸೇರಿದುದಾಗಿರುತ್ತದೆ ಎಂದೂ ಸ್ಪಷ್ಟ ಪಡಿಸಿದರು.

ಗಾಂಧೀಜಿ ಪತ್ರಿಕಾಕರ್ತರಿಗೆ ‘ನಿಮ್ಮ ಪತ್ರಿಕೆಗಳನ್ನು ಸದ್ಯಕ್ಕೆ ನಿಲ್ಲಿಸಿಬಿಡಿ’ ಎಂದು ಪ್ರಾರ್ಥಿಸಿದರು.

“ಇದು ಕಾಂಗ್ರೆಸಿಗೆ ‘ಮಾಡು ಅಥವಾ ಮಡಿ’ ಎಂಬ ಕಾಲ. ನಾನು ಈ ನಿರ್ಣಯವನ್ನು ಜಾರಿಗೆ ತರುವ ಮುನ್ನ ವೈಸರಾಯರನ್ನು ನೋಡುವೆನು” ಎಂದು ಭಾಷಣವನ್ನು ಮುಗಿಸಿದರು. ಸರ್ಕಾರದ ನೌಕರರು ಈಗಲೆ ರಾಜೀನಾಮೆ ಕೊಡಬೇಕಾಗಿಲ್ಲ. ಆದರೆ ತಾವು ಕಾಂಗ್ರೆಸಿನೊಡನೆ ಇದ್ದೇವೆ ಎಂದು ಸರ್ಕಾರಕ್ಕೆ ಬರೆಯಬೇಕು ಎಂದು ತಿಳಿಸಿದರು.

ಜವಹರಲಾಲರು ಮಾತನಾಡಿ ‘ಇದು ಯುದ್ಧಕ್ಕೆ ಆಹ್ವಾನ ಎಂದು ತಿಳಿಯಬಾರದು. ಈ ನಿರ್ಣಯದ ಉದ್ದೇಶವನ್ನು ಬ್ರಿಟಿಷ್ ಸರ್ಕಾರ ಒಪ್ಪಿ ನಡೆದರೆ ಪ್ರಪಂಚದ ಸ್ಥಿತಿಯೇ ಬದಲಾಗುವುದು’ ಎಂದರು. ಸರ್‌ದಾರ್ ಪಟೇಲರು ಮಾತನಾಡಿ ಈ ಸಮರ ಬಹಳ ಜಟಿಲವಾದುದು ಎಂದರು. ಆಜಾದರು ಮಾತನಾಡಿ, ಕ್ವಿಟ್ ಇಂಡಿಯಾ ಎಂದರೆ ಬ್ರಿಟಿಷ್ ಸರ್ಕಾರ ತನ್ನಧಿಕಾರವನ್ನು ಭಾರತಕ್ಕೆ ಕೊಟ್ಟು ಹೊರಡಲಿ ಎಂದು ವಿವರಿಸಿದರು.ಮುಸ್ಲಿಂ ಲೀಗು ಕಾಂಗ್ರೆಸಿನೊಡನೆ ಸಲಹೆಗೆ ಸಿದ್ಧವಾದರೆ ೨೪ ಗಂಟೆಯೊಳಗೆ ಕಾಂಗ್ರೆಸು ಎಲ್ಲ ಸಮಸ್ಯೆಗಳನ್ನೂ ಸುಲಭವಾಗಿ ಬಗೆಹರಿಸುವುದು ಎಂದೂ ತಿಳಿಸಿದರು.

ಈ ನಿರ್ಣಯದ ಕಾಪಿಗಳನ್ನು ಪ್ರೆಸಿಡೆಂಟ್ ರೂಸ್‌ವೆಲ್ಟರಿಗೂ, ಚೀಣಾವಿಗೂ, ಲಂಡನ್ನಿನಲ್ಲಿರುವ ರಷ್ಯದ ರಾಯಭಾರಿಗೂ ಕಳುಹಿಸುವುದಾಗಿ ಅಧ್ಯಕ್ಷ ಆಜಾದ್ ತಿಳಿಸಿದರು. ನಿರ್ಣಯವು ಜಯ ಜಯಕಾರದಿಂದ ಪಾಸಾಯಿತು. ಅಧಿವೇಶನ ಮುಗಿಯುವುದಕ್ಕೆ ರಾತ್ರಿ ೧೦ ಗಂಟೆಯಾಯಿತು.

ಅದೇ ರಾತ್ರಿ ಇಂಡಿಯಾ ಸರ್ಕಾರ ಈ ನಿರ್ಣಯ ಪಾಸಾದುದನ್ನು ತಿಳಿದು, ‘ಕಾಂಗ್ರೆಸು ಈ ನಿರ್ಣಯದಲ್ಲಿ ಕಾನೂನು ಭಂಗವನ್ನು ಆರಂಭಿಸುವುದಾಗಿ ಹೇಳದೆ ಇದ್ದರೂ, ಅದರ ಉದ್ದೇಶ ಸ್ಪಷ್ಟವಾಗಿದೆ. ಕಾಂಗ್ರೆಸಿನ ಅಪರಾಧ ಅದರ ಉದ್ದೇಶದಲ್ಲಿಯೇ ಇದೆ. ಕಾನೂನುಭಂಗ ಆರಂಭಿಸಲು ಸಿದ್ಧತೆಗಳೆಲ್ಲಾ ಆಗಿವೆ, ಎಂದು ನಿರ್ಣಯಿಸಿ, ತಾನೇ ಕಾರ್ಯವನ್ನು ಆರಂಭಿಸಿತು. ಆಗಸ್ಟ್ ೯ನೇ ತಾರೀಖು ಸೂರ್ಯೋದಕ್ಕೆ ಮುಂಚೆಯೇ ಗಾಂಧೀಜಿ, ಜವಹರಲಾಲ್ ನೆಹರು, ಅಬುಲ್ ಕಲಾಮ್ ಆಜಾದ್ ಮುಂತಾದ ವರ್ಕಿಂಗ್ ಕಮಿಟಿಯ ಸದಸ್ಯರನ್ನೂ ಎ.ಐ.ಸಿ.ಸಿ.ಯ ಪ್ರಮುಖ ಸದಸ್ಯರನ್ನೂ ದಸ್ತಗಿರಿ ಮಾಡಿತು. ಶ್ರೀಮತಿ ಕಸ್ತೂರಿಬಾ, ಪ್ಯಾರೇಲಾಲ್ ರವನ್ನೂ ದಸ್ತಗಿರಿ ಮಾಡಿತು’.

ಗಾಂಧೀಜಿ ದಸ್ತಗಿರಿಯಾದ ಬಗೆ ಇದು: ಗಾಂಧೀಜಿ ಎಂದಿನಂತೆ ಪ್ರಾರ್ಥನೆಗೆ ೯ನೇ ಮುಂಜಾನೆ ೪ಗಂಟೆಗೆ ಎದ್ದರು. ಪ್ರಾರ್ಥನೆಯಾದ ಮೇಲೆ ತಮ್ಮ ಮಾಮೂಲು ಕೆಲಸಗಳನ್ನು ಮಾಡಲು ತೊಡಗಿದರು. ಯಾರೋ ಹೇಳಿದರು; ಪೊಲೀಸ್ ಕಮಿಷನರು ಬಾಗಿಲಿನಲ್ಲಿದ್ದಾರೆ, ಮಹದೇವ್ ದೇಸಾಯರನ್ನು ನೋಡಬೇಕಂತೆ. ಗಾಂಧೀಜಿಯ ದಸ್ತಗಿರಿಗಾಗಿ ಅವರು ವಾರಂಟು ತಂದಿದ್ದರು. ವಾರಂಟು ಕಸ್ತೂರಿಬಾ, ಮಹದೇವ್ ದೇಸಾಯಿ, ಮೀರಾಬೆನ್ ಮತ್ತು ಪ್ಯಾರೆಲಾಲರಿಗೂ ಇತ್ತು. ಕಮಿಷನರು ಇತರರನ್ನು ಗಾಂಧೀಜಿಯ ಜೊತೆಯಲ್ಲಿಯೇ ದಸ್ತಗಿರಿ ಮಾಡಬೇಕೆಂದು ಇದೆ ಎಂದರು. ಗಾಂಧೀಜಿ ಬಿಟ್ಟು ಉಳಿದವರು ಆಗಲೇ ದಸ್ತಗಿರಿಯಾಗಲು ಇಷ್ಟಪಡಲಿಲ್ಲ, ಅರ್ಧ ಗಂಟೆ ಕೊಟ್ಟಿದೆ. ಅಷ್ಟರಲ್ಲಿ ಗಾಂಧೀಜಿ ಸಿದ್ಧವಾಗಬಹುದು ಎಂದು ಪೊಲೀಸ್ ಕಮಿಷನರು ಮಹದೇವ್ ದೇಸಾಯಿಗೆ ತಿಳಿಸಿದರು. ಗಾಂಧೀಜಿ ಎಂದಿನಂತೆ ಆಡಿನ ಹಾಲನ್ನೂ ಹಣ್ಣುಗಳ ರಸವನ್ನೂ ಕುಡಿದರು. “ವೈಷ್ಣವಜನತೋ” ಎಂಬ ಗೀತವನ್ನು ಬಿರ್ಲಾ ಮನೆಯವರೂ ಗಾಂಧಿ ಪರಿವಾರವೂ ಹಾಡಿದರು. (ಗಾಂಧೀಜಿ ಬಿರ್ಲಾ ಮನೆಯಲ್ಲಿ ಇಳಿದುಕೊಂಡಿದ್ದರು) ಸೇವಾಗ್ರಾಮ ಆಶ್ರಮದ ಒಬ್ಬ ಮುಸ್ಲಿಂ ಸದಸ್ಯರು ಕೊರಾನನ್ನೂ ಪಠಿಸಿದರು. ಗಾಂಧೀಜಿ ತಮ್ಮ ಮಾಮೂಲಿನ ಸಾಮಾನುಗಳೊಡನೆ ಕೈಚೀಲದಲ್ಲಿ ಭಗವದ್ಗೀತೆ, ಆಶ್ರಮಭಜನಾವಳಿ, ಕೊರಾನ್, ಒಂದು ಉರ್ದು ಪ್ರೈಮರ್, ನೂಲಲು ಧನುಶತಕಲಿಯನ್ನೂ ಹಾಕಿದರು. ಅವರು ಕಾರು ಹತ್ತುವ ಮುನ್ನ ಶ್ರೀಮತಿ ಬಿರ್ಲಾರವರು ಗಾಂಧೀಜಿಯ ಹಣೆಗೆ ಕುಂಕುಮ ಇಟ್ಟರು. ಮೊದಲನೇ ಕಾರಿನಲ್ಲಿ ಗಾಂಧೀಜಿ ಮತ್ತು ಮೊರಾರ್ಜಿ ಇದ್ದರು. ಎರಡನೇ ಕಾರಿನಲ್ಲಿ ಮಹದೇವ್ ದೇಸಾಯಿಯವರು ಪೊಲೀಸ್ ಸೂಪರಿಂಟೆಂಡೆಂಟರೂ ಇದ್ದರು.