೧೯೪೬ ನೇ ಮೇ ೧೬ನೇ ತಾರೀಖಿನಲ್ಲಿ ಕ್ಯಾಬಿನೆಟ್ ಮಿಷನ್ನೂ ವೈಸ್‌ರಾಯರೂ ಒಂದು ಹೇಳಿಕೆ ಹೊರಡಿಸಿದರು. ಒಂದು ಹೇಳಿಕೆ ಹೊರಡಿಸುತ್ತಾರೆಂದು ಗಾಂಧೀಜಿಗೆ ಗೊತ್ತಿತ್ತು. ಅವರು ಸಲಹೆ ಮಾಡಿದರು, “ಈ ಹೇಳಿಕೆ ಒಂದು ತೀರ್ಪಿನಂತೆ ಇರುವುದು ಬೇಡ. ಭಾರತೀಯ ಪಾರ್ಟಿಗಳಿಗೆ ಒಂದುಸಲಹೆ ಇರುವಂತೆ”. ಹೇಳಿಕೆ ಇದೇ ರೀತಿಯಲ್ಲಿತ್ತು ಮತ್ತು ಗಾಂಧೀಜಿಗೆ ತೃಪ್ತಿಯುಂಟು ಮಾಡಿತು. ಕ್ಯಾಬಿನೆಟ್ ಮಿಷನ್ನಿನ ಪ್ರಕಟಿತ ಸಲಹೆಗಳು ಈ ರೀತಿಯಾಗಿದ್ದವು:

“ಮುಂದೆ ಬರಲಿರುವ ಇಂಡಿಯಾದ ರಾಜ್ಯಾಂಗರಚನೆ ಈ ಕೆಳಗಿನ ರೀತಿಯದಾಗಿರಬಹುದು: ಇದಕ್ಕೆ ಮೂರು ಮಜಲುಗಳು. ಮೊದಲನೆಯ ಮಜಲು ಯೂನಿಯನ್ ಆಫ್ ಇಂಡಿಯಾ. ಇದು ಬ್ರಿಟಿಷ್ ಇಂಡಿಯಾವನ್ನೂ ದೇಶೀಯಾ ಸಂಸ್ಥಾನಗಳನ್ನೂ ಒಳಗೊಂಡಿರುತ್ತದೆ. ಯೂನಿಯನ್ನು ಪರದೇಶ ವಿಚಾರಗಳ ಮೇಲೆ ಅಧಿಕಾರ ಹೊಂದಿರುತ್ತದೆ; ಇವುಗಳ ನಿರ್ವಹಣೆಗೆ ಬೇಕಾದ ಖರ್ಚಿಗಾಗಿ ಕಂದಾಯವನ್ನು ಹಾಕುವ ಅಧಿಕಾರವನ್ನೂ ಹೊಂದಿರುತ್ತದೆ. ಈ ಯೂನಿಯನ್ನಿಗೆ ಶಾಸನ ಸಭೆ ಮತ್ತು ಎಕ್ಸಿಕ್ಯುಟಿವ್ ಇರುತ್ತದೆ. ಶಾಸನ ಸಭೆಯಲ್ಲಿ ಯಾವುದಾದರೂ ದೊಡ್ಡ ಕೋಮುವಾರು ಸಮಸ್ಯೆಯನ್ನು ಎತ್ತಬಹುದು. ಇದನ್ನು ಎತ್ತಬೇಕಾದರೆ. ಎರಡು ಪ್ರಮುಖ ಕೋಮುಗಳ ಪ್ರತ್ಯೇಕ ಮೆಜಾರಿಟಿಯ ಸದಸ್ಯರ ಬೆಂಬಲ ಇರಬೇಕು. ಎಲ್ಲಕ್ಕಿಂತಲೂ ಕೆಳಗಿನ ಮಜಲು ಪ್ರಾಂತ್ಯಗಳದು. ಇವುಗಳಿಗೆ ಕೇಂದ್ರಕ್ಕೆ ಇಲ್ಲದ ಎಲ್ಲಾ ಶೇಷಾಧಿಕಾರಗಳೂ ಇರುತ್ತವೆ. ಪ್ರಾಂತಗಳಿಗೆ ಗುಂಪುಗಳು ಕಟ್ಟಿಕೊಳ್ಳುವ ಸ್ವಾತಂತ್ರ್ಯವಿದೆ. ಈ ಗುಂಪಿನಲ್ಲಿ ಗುಂಪಾಗುವ ಪ್ರಾಂತಗಳ ಶಾಸನ ಮಂಡಲಿಗಳು ಸೇರಿರಬೇಕು. ಈ ಗುಂಪುಗಳು ಮಧ್ಯದ ಮಜಲಾಗಿರುತ್ತವೆ. ಯಾವ ಯಾವ ಪ್ರಾಂತ ನಿರ್ಧರಿಸುತ್ತದೆ. ಈ ರೀತಿಯ ರಾಜ್ಯಾಂಗವನ್ನು ರಚಿಸಲು ಮತ್ತು ಶಿಫಾರಸು ಮಾಡಲು ಒಂದು ಕನ್‌ಸ್ಟಿಟ್ಯೂಯೆಂಟ್ ಅಸೆಂಬ್ಲಿಯನ್ನು ನಿರ್ಮಿಸಬೇಕಾಗುತ್ತದೆ. ಈ ರಾಜ್ಯಾಂಗ ಸಭೆಯನ್ನು ಪ್ರಾಂತ ಶಾಸನ ಸಭೆಗಳ ಸದಸ್ಯರು ನಿರ್ಮಿಸುತ್ತಾರೆ. ಪ್ರತಿಯೊಂದು ಪ್ರಾಂತಕ್ಕೂ, ಜನಸಂಖ್ಯೆಯ ದಾಮಾಷಾ ಮೇರೆ, ಇಂತಿಷ್ಟು ಸಂಖ್ಯೆ ಸದಸ್ಯರನ್ನು ಚುನಾಯಿಸಬೇಕೆಂದು ನಿಧರಿಸಲಾಗುತ್ತದೆ. ಓಟಿಂಗು ಕಮ್ಯುನಿಟಿ ಪ್ರಕಾರವಾಗಿಯೂ ಮತ್ತು ಜನರಲ್ ಆಗಿಯೂ ಇರುತ್ತದೆ. ದೇಶೀಯ ಸಂಸ್ಥಾನಗಳಿಗೆ ಆಯಾಯಾ ಸಂಸ್ಥಾನದ ಪ್ರಜೆಗಳ ದಾಮಾಷಾ ಮೇರೆ ಪ್ರತಿನಿಧಿಗಳನ್ನು ಕಳುಹಿಸಬೇಕೆಂದು ತಿಳಿಸಲಾಗುವುದು. ರಾಜ್ಯಾಂಗ ರಚನಾ ಸಭೆಯ ಪ್ರಾರಂಭ ಸಭೆಯಲ್ಲಿ ಎಲ್ಲಾ ಪ್ರತಿನಿಧಿಗಳೂ ಇರುವರು. ಪ್ರಾರಂಭ ಸಭೆಯಾದ ಮೇಲೆ ಪ್ರತಿನಿಧಿಗಳು ಮೂರು ವಿಭಾಗವಾಗುವರು. “ಎ” ಸೆಕ್ಷನ್ನಿನಲ್ಲಿ ಮದ್ರಾಸ್, ಬೊಂಬಾಯಿ, ಯುನೈಟೆಡ್ ಪ್ರಾವಿನ್ಸಸ್, ಬಿಹಾರ್ ಮತ್ತು ಒರಿಸ್ಸಾ ಇರುವುವು. “ಬಿ” ಸೆಕ್ಷನ್ನಿನಲ್ಲಿ ಪಂಜಾಬ್, ನಾರ್ತ್‌ವೆಸ್ಟ್ ಫ್ರಾಂಟಿಯರ್ ಪ್ರಾವಿನ್ಸ್ ಮತ್ತು ಸಿಂಧ್ ಇರುವುವು. “ಸಿ” ಸೆಕ್ಷನ್ನಿನಲ್ಲಿ ಬಂಗಾಳ ಮತ್ತು ಅಸ್ಸಾಂ ಇರುವುವು.

“ಈ ಸೆಕ್ಷನ್ನುಗಳು ತಮ್ಮ ಸೆಕ್ಷನ್ನಿನಲ್ಲಿರುವ ಪ್ರಾಂತಗಳ ರಾಜ್ಯಾಂಗ ರಚನೆಯನ್ನು ನಿರ್ಮಿಸಿಕೊಳ್ಳುವುವು ಮತ್ತು ತಾವು ಗ್ರೂಪು ಆಗಬೇಕೆಂದು ನಿರ್ಧರಿಸಿದರೆ, ಯಾವ ಆಡಳಿತ ವಿಷಯಗಳು ಸಮಾನವಾಗಿರಬೇಕು ಎಂದು ನಿರ್ಧರಿಸುವುವು. ಕಡೆಗೆ, ರಾಜ್ಯಾಂಗ ರಚನಾ ಸಭೆಯ ಎಲ್ಲ ಸಸ್ಯರೂ ಪುನಃ ಸೇರಿ,  ಯೂನಿಯನ್ನಿನ ಅಂಗ ರಚನೆ ಹೇಗಿರಬೇಕು ಎಂಬುದನ್ನು ನಿರ್ಧರಿಸುವರು.”

ಈ ಶಿಫಾರಸುಗಳನ್ನಲ್ಲದೆ, ಕ್ಯಾಬಿನೆಟ್ ಮಿಷನ್ನು ಇನ್ನೂ ಕೆಲವು ಶಿಫಾರಸುಗಳನ್ನು ಮಾಡಿತು: ೧ ಹಿಂದೂ ಮತ್ತು ಮುಸ್ಲಿಂ ಕಮ್ಯೂನಿಟಿಗಳ ಒಪ್ಪಿಗೆಯಿಲ್ಲದೆ, ಈ ರಾಜ್ಯಾಂಗ ಸಭೆ ರಾಜ್ಯಾಂಗ ರಚನೆಯಲ್ಲಿ ಯಾವ ಬದಲಾವಣೆಯನ್ನಾಗಲೀ ಅಥವಗಾ ಕೋಮುವಾರು ಸಮಸ್ಯೆಯ ಪರಿಶೀಲನೆಯನ್ನಾಗಲೀ ಒಪ್ಪಕೂಡದು; ೨ ಈ ರಾಜ್ಯಾಂಗ ರಚನೆ ಜಾರಿಗೆ ಬಂದ ಮೇಲೆ, ಯಾವ ಪ್ರಾಂತವೇ ಆಗಲಿ ತನ್ನ ಶಾಸನ ಸಭೆಯ ಒಪ್ಪಿಗೆಯಿಂದ, ಎಂದರೆ ಓಟಿನಿಂದ, ಗ್ರೂಪಿನಿಂದ ಹೊರಗೆ ಬರಬಹುದು; ೩ ಬ್ರಿಟಿಷ್ ಇಂಡಿಯಾಕ್ಕೆ ಪೂರ್ಣ ಸ್ವಾತಂತ್ರ್ಯ ಬಂದ ಮೇಲೆ ದೇಶೀಯ ಸಂಸ್ಥಾನಗಳ ಮೇಲೆ ಪ್ಯಾರಮೌಂಟ್ಸಿಯನ್ನು ಬ್ರಿಟಿಷ್ ರಾಜರು ಹೊಂದಿರುವುದಿಲ್ಲ; ಮತ್ತು ಆ ಅಧಿಕಾರವನ್ನು ಹೊಸ ಸರ್ಕಾರಕ್ಕೂ ಕೊಡಲಾಗುವುದಿಲ್ಲ; ೪ ರಾಜ್ಯಾಂಗ ರಚನಾಸಭೆಗೆ ಸಲಹೆ ಕೊಡಲು ಒಂದು ಅಡ್ವೈಸರಿ ಕಮಿಟಿಯನ್ನು ರಚಿಸತಕ್ಕದ್ದು; ಈ ಸಮಿತಿ ಈ ಕೆಳಗಿನ ವಿಷಯಗಳ ಮೇಲೆ ಪರಿಶೀಲನೆ ನಡೆಸಿ ರಾಜ್ಯಾಂಗ ರಚನಾ ಸಭೆಗೆ ಶಿಫಾರಸು ಮಾಡತಕ್ಕದ್ದು: ನಾಗರಿಕ ಹಕ್ಕುಗಳು ಮತ್ತು ಮೈನಾರಿಟಿ ಹಕ್ಕುಗಳು, ಟ್ರೈಬಲ್ ಮತ್ತು ಎಕ್ಸ್‌ಕ್ಲೂಡೆಡ್ ಪ್ರದೇಶಗಳು.

ಕ್ಯಾಬಿನೆಟ್ ಮಿಷನ್ನಿನವರು ತಮ್ಮ ಸಲಹೆಗಳನ್ನು ತಿಳಿಸಿದ ಮೇಲೆ, ಅದನ್ನು ಒಪ್ಪಬೇಕೆಂದು ಪ್ರಜೆಗಳಿಗೆಲ್ಲಾ ಪ್ರಾರ್ಥನೆ ಮಾಡಿದರು.

ಈ ಹೇಳಿಕೆಗೆ ಗಾಂಧೀಜಿಯ ಪ್ರಥಮ ಮನೋಭಾವ ಸ್ನೇಹ ಪೂರ್ವಕ ವಾಗಿಯೂ, ಅನುಕೂಲವಾಗಿಯೂ ಇತ್ತು. “ಮಿಷನ್ನಿನವರು ಹೊರಗೆಡುವಿರುವ ಹೇಳಿಕೆ ಅಭಿನಂದನೀಯವಾಗಿದೆ; ಈ ಹೇಳಿಕೆ ಬ್ರಿಟಿಷರಿಂದ ಹಾರ್ದಿಕವಾಗಿ ಬಂದಿದ್ದರೆ, ಅವರು ಶೀಘ್ರದಲ್ಲಿಯೇ ಇಂಡಿಯಾವನ್ನು ಬಿಟ್ಟು ಹೋಗಬೇಕು” ಎಂದು ಪ್ರಾರ್ಥನಾ ಸಭೆಯಲ್ಲಿ ಗಾಂಧೀಜಿ ಭಾಷಣ ಮಾಡುತ್ತಾ ತಿಳಿಸಿದರು. ಕ್ಯಾಬಿನೆಟ್ ಮಿಷನ್ನಿನವರು ಹೇಳಿರುವಂತೆ ಆಚರಿಸುವರೆಂದು ನಂಬಿರುವುದಾಗಿಯೂ ಹೇಳಿದರು.

ಜಿನ್ಹಾರವರು ಪಾಕಿಸ್ತಾನವನ್ನು ಕೊಡುವ ಸಲಹೆಯನ್ನು ಕ್ಯಾಬಿನೆಟ್ ಮಿಷನ್ ಮನ್ನಿಸದೆ ಇರುವುದಕ್ಕಾಗಿ ಅದನ್ನು ದೂಷಿಸಿದರು. ಆದರೆ ೫ನೇ ತಾರೀಖು ನಡೆದ ಮುಸ್ಲಿಂ ಲೀಗಿನ ಸಭೆಯಲ್ಲಿ ಈ ಸಲಹೆಗಳನ್ನು ಸ್ವೀಕರಿಸಿ, ರಾಜ್ಯಾಂಗ ರಚನಾ ಸಭೆಯಲ್ಲಿ ಭಾಗವಹಿಸಬೇಕೆಂದು ಕೋರಿದರು.

ಗಾಂಧೀಜಿ “ಹರಿಜನ”ದ ಮೇ ೨೬ನೇ ಮತ್ತು ಜೂನ್ ೨ನೇ ಸಂಚಿಕೆಗಳಲ್ಲಿ ಕ್ಯಾಬಿನೆಟ್ ಮಿಷನ್ನಿನ ಸಲಹೆಯ ಮೇಲೆ ಟೀಕೆ ಮಾಡಿ ಬರೆದರು. ಮೇ, ೨೬ರಲ್ಲಿ ಹೀಗೆ ಟೀಕಿಸಿದರು: “ಸದ್ಯದ ಪರಿಸ್ಥಿತಿಯಲ್ಲಿ ಅತ್ಯುತ್ತಮ ಹೇಳಿಕೆಯೆಂದು ಹೇಳಬೇಕಾಗುತ್ತದೆ. ಭಾರತದ ದೃಷ್ಟಿಯಿಂದಲೂ ಅದು ಒಳ್ಳೆಯದೆಂದು ಹೇಳಬಹುದು. ಆದರೆ ಬ್ರಿಟಿಷರ ಅತ್ಯುತ್ತಮ ಹೇಳಿಕೆ ಇಂಡಿಯಾಕ್ಕೆ ತೊಂದರೆಯುಂಟು ಮಾಡುವಂತಾಗಬಹುದು. ಕ್ಯಾಬಿನೆಟ್ ಮಿಷನ್ನಿನ ಹೇಳಿಕೆಯಲ್ಲಿ ಯಾವ ಯಾವ ಬಲಾತ್ಕಾರವೂ ಇಲ್ಲ. ಅದೊಂದು ಪ್ರಾರ್ಥನೆ. ಪ್ರಾಂತ ಅಸೆಂಬ್ಲಿಗಳು ಡೆಲಿಗೇಟುಗಳನ್ನು ಚುನಾಯಿಸಬಹುದು ಅಥವಾ ಚುನಾಯಿಸದೆ ಇರಬಹುದು. ಡೆಲಿಗೇಟುಗಳು ಚುನಾಯಿತರಾದ ಮೇಲೆ ಕನ್‌ಸ್ಟಿಟ್ಯೂಯೆಂಟ್ ಅಸೆಂಬ್ಲಿ ಸೇರಿದ ಮೇಲೆ ಕ್ಯಾಬಿನೆಟ್ ಮಿಷನ್ ತಿಳಿಸರುವುದಕ್ಕಿಂತ ಬೇರೆ ಮಾರ್ಗವನ್ನು ಅನುಸರಿಸಬಹುದು. ಆದ್ದರಿಂದ ಯಾವುದಾದರೂ ವಿಷಯಕ್ಕೆ ಒಬ್ಬ ಮನುಷ್ಯನಾಗಲಿ, ಪಾರ್ಟಿಯಾಗಲಿ ಬದ್ಧವಾಗಬೇಕಾದರೆ, ಪರಿಸ್ಥಿತಿಯ ಅವಶ್ಯಕತೆ ಅವಲಂಬಿಸುತ್ತದೆ.

“ಇದೇನೋ ಸರಿ. ಆದರೆ ಯೂನಿಟ್‌ಗಳ ವಿಷಯವೇನು? ಪಂಜಾಬನ್ನೇ ತಮ್ಮ ಮಾತೃಭೂಮಿಯಾಗಿರುವ ಸಿಖ್ಖರು ತಮ್ಮ ಇಷ್ಟಕ್ಕೆ ವಿರೋಧವಾಗಿ ಸಿಂಧ್, ಬೆಲೂಚಿಸ್ತಾನ ಮತ್ತು ಸರಹದ್ ಪ್ರಾಂತಗಳ “ಬಿ” ಗುಂಪನ್ನು ಸೇರಬೇಕೆ? ಮುಸ್ಲಿಮೇತರ ಪ್ರಾಂತವಾದರೂ ಅಸ್ಸಾಮ್ “ಸಿ” ಗ್ರೂಪನ್ನು ಸೇರಬೇಕೇ? ಕ್ಯಾಬಿನೆಟ್ಟಿನ ಹೇಳಿಕೆ ಅವರವರ ಇಚ್ಛೆಯ ಮೇಲೆ ಅವಲಂಬಿಸಿರುವುದರಿಂದ ಪ್ರತಿಯೊಂದು ಯೂನಿಟ್ಟಿನ ಸ್ವಾತಂತ್ರ್ಯಕ್ಕೂ ಭಂಗಬರಬಾರದು. ಒಂದು ಸೆಕ್ಷನ್ನಿನ ಯಾವುದೇ ಯೂನಿಟ್ಟಾಗಲಿ ಆ ಸೆಕ್ಷನ್ನನ್ನು ಸೇರಲು ಸ್ವಾತಂತ್ರ್ಯ ಹೊಂದಿದೆ. ಅದನ್ನು ಬಿಡುವುದಕ್ಕೂ ಸ್ವಾತಂತ್ರ್ಯ ವಿರಬೇಕೆಂಬುದು ಇನ್ನೂ ಹೆಚ್ಚಿನ ರಕ್ಷಣೆಯನ್ನು ಕೊಡುತ್ತದೆ.”

ಜೂನ್ ೨ರಲ್ಲಿ ಕ್ಯಾಬಿನೆಟ್ ಮಿಷನ್ನಿನ ಮುಖ್ಯ ಕೊರತೆಗಳು ಎಂಬ ಶೀರ್ಷಿಕೆಯ ಲೇಖನದಲ್ಲಿ ಗಾಂಧೀಜಿ ಹೀಗೆ ಬರೆದರು: “ದೀಘಾವಧಿಯ ರಚನೆಯ ಹೇಳಿಕೆಯನ್ನು ಕೊಡುವ ಮುಂಚೆಯೇ ಕೇಂದ್ರದಲ್ಲಿ ಪ್ರಜಾನುರಾಗ ಪ್ರಜಾ ಸರ್ಕಾರ ಏರ್ಪಡಬೇಕಾಗಿತ್ತು. ಎರಡನೆಯ ವಿಷಯ, ಪ್ಯಾರಮೌಂಟ್ಸಿಯ ಸಮಸ್ಯೆಯನ್ನು ಬಗೆಹರಿಸದೆ ಬಿಡಲಾಗಿದೆ. ಇಂಡಿಯಾದಲ್ಲಿ ಬ್ರಿಟಿಷ್ ಆಳ್ವಿಕೆ ಕೊನೆಗೊಂಡರೆ ಅದೇ ಕೊನೆಗಾಣುತ್ತದೆಎಂದು ಹೇಳುವುದು ಸಾಲದು. ಮಧ್ಯವರ್ತಿ ಕಾಲದ ಸರ್ಕಾರ ಸ್ಥಾಪನೆಯ ಸಮಯದಲ್ಲಿಯೇ ಪ್ಯಾರಮೌಂಟ್ಸಿ ಕೊನೆಗಾಣದಿದ್ದರೆ, ಪ್ಯಾರಮೌಂಟ್ಸಿಯನ್ನು ಮಧ್ಯವರ್ತಿ ಸರ್ಕಾರ ದೇಶೀಯ ಸಂಸ್ಥಾನ ಪ್ರಜೆಗಳ ಹಿತದಲ್ಲಿ ನಡೆಸಬೇಕು. ಮಧ್ಯವರ್ತಿ ಕಾಲದಲ್ಲಿ ಬ್ರಿಟಿಷ್ ಸೈನ್ಯವನ್ನು ಇಂಡಿಯಾದಲ್ಲಿ ಏಕೆ ಇಡಬೇಕು? ಈ ಸೈನ್ಯ ಇಲ್ಲಿದ್ದರೆ ಅದು ಕನ್‌ಸ್ಟಿಟ್ಯುಯೆಂಟ್ ಅಸೆಂಬ್ಲಿಯ ಉತ್ಸಾಹವನ್ನು ತಗ್ಗಿಸುತ್ತದೆ. ಈ ಸೈನ್ಯ ಸ್ವಾತಂತ್ರ್ಯ ಸಂಪಾದಿಸಿದ ಮೇಲೆ ಬೇಕಿಲ್ಲ. ಪರಕೀಯ ಸೈನ್ಯದಿಂದ ಬಾಳಬೇಕಾದ ಸ್ವಾತಂತ್ರ್ಯ ಸ್ವಾತಂತ್ರ್ಯವೇ ಅಲ್ಲ”.

ಗಾಂಧೀಜಿ ನಿರೀಕ್ಷಿಸಿದಂತೆಯೇ, ಸಿಖ್ಖರಿಗೆ ಕ್ಯಾಬಿನೆಟ್ ಮಿಷನ್ನಿನ ಸಲಹೆ ಅಸಮಾಧಾನ ಉಂಟುಮಾಡಿತು: ಪಂಜಾಬಿನಲ್ಲಿರುವ ತಮ್ಮ ಮಾತೃಭೂಮಿ “ಸಿ” ಗ್ರೂಪಿನ ಮುಸ್ಲಿಂ ಮೆಜಾರಿಟಿ ಆಡಳಿತಕ್ಕೆ ಒಳಪಡಬೇಕಾಗುವುದು; ಪಾಕೀಸ್ಥಾನ ಸ್ಥಾಪನೆಯಿಲ್ಲದಿದ್ದರೂ, ತಾವು ಮುಸ್ಲಿಂ ಮೆಜಾರಿಟಿಗೆ ಬಗ್ಗೆ ಬೇಕಾಗುವುದು; ಆದ್ದರಿಂದ ಆ ಗ್ರೂಪಿಂಗ್ ಅವರಿಗೆ ಬೇಕಿಲ್ಲ; ಪಂಜಾಬ್ ಆ ಗ್ರೂಪಿನಲ್ಲಿರುವುದು ಬೇಡ.

ಅಂಬೇಡ್ಕರ್ ಮುಖಂಡತ್ವದಲ್ಲಿ ಅಸ್ಪ್ರೃಶ್ಯರೂ ಆಕ್ಷೇಪಣೆ ತೆಗೆದರು.

ಆಂಗ್ಲೋ – ಇಂಡಿಯನ್ನರೂ ಅಸಮಾಧಾನ ಪಟ್ಟುಕೊಂಡರು. ಯೂರೋಪಿಯನರ ವಿಷಯ? ಗಾಂಧೀಜಿ ಎಂದರು: ಅವರು ಈ ದೇಶದಲ್ಲಿ ನೆಲೆಸುವುದಿಲ್ಲವಾದ್ದರಿಂದ ಅವರಿಗೆ ಕನ್‌ಸ್ಟಿಟ್ಯುಯೆಂಟ್ ಅಸೆಂಬ್ಲಿಯಲ್ಲಿ ಓಟಿರಕೂಡದು. ಇದಕ್ಕಾಗಿ ವಕೀಲರ ಅಭಿಪ್ರಾಯಗಳನ್ನು ತಿಳಿಸಿದರು. ಕಡೆಗೆ, ಕ್ಯಾಬಿನೆಟ್ ಮಿಷನ್ನಿನ ಮತ್ತು ವೈಸರಾಯರ ಕೋರಿಕೆಯಂತೆ, ಯೂರೋಪಿಯನ್ನರು ಓಟು ಮಾಡುವುದಿಲ್ಲವೆಂದು ತಿಳಿಸಿದರು. ಕಾಂಗ್ರೆಸಿನ ಕೋರಿಕೆಯಂತೆ ಯೂರೋಪಿಯನ್ನರ ಓಟನ್ನು ತೆಗೆದು ಹಾಕಿದ್ದಕ್ಕೆ ಜಿನ್ಹಾರಿಗೆ ಅಸಮಾಧಾನವಾಯಿತು. ಏಕೆಂದರೆ, ಅವರ ಓಟುಮುಸ್ಲಿಂ ಲೀಗಿಗೆ ಪ್ರಯೋಜನಕಾರಿಯಾಗಿತ್ತು.

ದೇಶೀಯ ರಾಜರು ಕೂಡ ಛೇಂಬರ್ ಆಫ್ ಪ್ರಿನ್ಸಸ್ ಸಂಸ್ಥೆಯ ಸ್ಟೀರಿಂಗ್ ಕಮಿಟಿಯ ಸಭೆಯನ್ನು ಕರೆದು, ಕ್ಯಾಬಿನೆಟ್ ಮಿಷನ್ನಿನ ಸಲಹೆಗಳನ್ನು ಒಪ್ಪಬೇಕೆಂದು ತೀರ್ಮಾನಿಸಿದರು. ಒಂದು ನೆಗೋಷಿಯೇಟಿಂಗ್ ಕಮಿಟಿಯನ್ನುನೇಮಿಸಿ ತನ್ಮೂಲಕ ಕನ್‌ಸ್ಟಿಟ್ಯುಯೆಂಟ್ ಅಸೆಂಬ್ಲಿಗೆ ತಮ್ಮ ಪ್ರತಿನಿಧಿಗಳನ್ನು ಕಳುಹಿಸುವ ವಿಧಾನವನ್ನು ತೀರ್ಮಾನಿಸಬೇಕೆಂದು ಸಲಹೆ ಮಾಡಿದರು.

ಕಾಂಗ್ರೆಸೂ, ಮುಸ್ಲಿಂ ಲೀಗೂ, ಇತರ ಪಾರ್ಟಿಯವರೂ ಒಪ್ಪಿರುವರು ಎಂದು ಸಂತೋಷದಿಂದಿರುವ ಕಾಲದಲ್ಲಿ, ಕ್ಯಾಬಿನೆಟ್ ಮಿಷನ್ನು ಮೇ ೧೬ನೇ ತಾರೀಖಿನಲ್ಲಿಯೇ ಇನ್ನೊಂದು ಮಹತ್ವದ ವಿಷಯವನ್ನು ತಿಳಿಸಿತು. ಅದೇನೆಂದರೆ: ಮಧ್ಯಕಾಲದ ಸರ್ಕಾರವನ್ನು ರಚಿಸಲು ವೈಸರಾಯರು ಈಗಾಗಲೇ ಪ್ರಯತ್ನ ನಡೆಸುತ್ತಿದ್ದಾರೆ. ಈ ಸರ್ಕಾರ ಅಥವಾ ಮಂತ್ರಿಮಂಡಲದಲ್ಲಿ ಎಲ್ಲ ಇಲಾಖೆಗಳೂ ಭಾರತೀಯರ ಕೈಯಲ್ಲಿಯೇ ಇರುವುವು. ಯುದ್ಧದ ಅಥವಾ ರಕ್ಷಣೆಯ ಇಲಾಖೆಯನ್ನು ಕಮ್ಯಾಂಡರ್ – ಇನ್ – ಚೀಫ್ ಇಲ್ಲಿಯವರೆಗೆ ವಹಿಸುತ್ತಿದ್ದರು; ಇನ್ನು ಮುಂದೆ ಅವರು ಅದರಲ್ಲಿರುವುದಿಲ್ಲ; ಭಾರತೀಯರೇ ಇರುವರು. ವೈಸರಾಯರು ಆಗಲೇ ತಿಳಿಸಿದ್ದಾರೆ. ಈಗಲೇ ಡೊಮಿನಿಯನ್‌ಸರ್ಕಾರವೆಂದು ಅದನ್ನು ಕರೆಯಲಾಗುವುದಿಲ್ಲ; ವೈಸರಾಯರು ಸರ್ಕಾರದ ತೀರ್ಮಾನಗಳಲ್ಲಿ ಕೈ ಹಾಕುವುದಿಲ್ಲ; ಈ ಕೌನ್ಸಿಲಿನಲ್ಲಿ ಲಾರ್ಡ್ ವೇವಲರು ಹಿಂದೆಯೇ ತಿಳಿಸಿದಂತೆ, ಐದು ಕಾಂಗ್ರೆಸಿನವರು, ಐದು ಮುಸ್ಲಿಂ ಲೀಗಿನವರು. ಇಬ್ಬರು ಇತರ ಮೈನಾರಿಟಿಗಳ ಪ್ರತಿನಿಧಿಗಳು ಇರುವರು; ಒಂದು ಬದಲಾವಣೆ; ಉಳಿದ ಇಬ್ಬರಲ್ಲಿ ಒಬ್ಬರನ್ನು ಕಾಂಗ್ರೆಸು ಆರಿಸುವುದು; ಕೋಮುವಾರು ವಿಷಯಗಳಲ್ಲಿ ತಕರಾರು ಬಂದರೆ, ಅದನ್ನು ಆಯಾಯಾ ಕೋಮಿನವರೇ ತಮ್ಮ ಬಹುಮತದಿಂದ ತೀರ್ಮಾನಿಸತಕ್ಕದ್ದು. ಕಾಂಗ್ರೆಸು ಎಗ್ಸಿಕ್ಯುಟಿವ್ ಕೌನ್ಸಿಲಿನ ರಚನೆಗೂ ಕೋಮುವಾರು ವಿಷಯದಲ್ಲಿ ಸೂಚಿಸಿರುವ ಸಂಪ್ರದಾಯಕ್ಕೂ ವಿರೋಧವಾಗಿತ್ತು.

ಕಾಲ ತಳ್ಳಿಕೊಂಡು ಬಂದಿತು. ದೀರ್ಘಕಾಲದ ಸಲಹೆಗಳ ಬಗ್ಗೆಯೂ ಮಧ್ಯ ಕಾಲ ಸರ್ಕಾರದ ರಚನೆಯ ಬಗ್ಗೆಯೂ ಯಾವ ಸ್ಥಿರ ತೀರ್ಮಾನವೂ ಬರಲಿಲ್ಲ. ಸ್ವಲ್ಪ ಕಾಲ ವಿರಾಮ ತೆಗೆದುಕೊಂಡು, ಗಾಂಧೀಜಿ ಸಮೇತ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸದಸ್ಯರು ಮಸ್ಸೂರಿಗೆ ತೆರಳಿದರು. ರಾಜ ಗೋಪಾಲಾಚಾರಿಯವರು ಮದರಾಸಿನಿಂದ ಬಂದರು.

ಜಿನ್ಹಾ ತಮ್ಮ ಆಖೈರು ತೀರ್ಮಾನ ತಿಳಿಸಲು ಲೀಗ್ ವರ್ಕಿಂಗ್ ಕಮಿಟಿ ಸೇರಲು ೧೫ ದಿವಸದ ನೋಟೀಸನ್ನು ಕೊಟ್ಟರು. ತಮ್ಮ ಕೆಲಸವನ್ನು ಬೇಗ ಮುಗಿಸಬೇಕೆಂದು ಕ್ಯಾಬಿನೆಟ್ ಮಿಷನ್‌ಮತ್ತು ವೈಸರಾಯರು ಜೂನ್ ೧೬ನೇ ತಾರೀಖು ಒಂದು ಹೇಳಿಕೆ ಕೊಟ್ಟರು: “ಇನ್ನೂ ಮುಂದೆ ಮಧ್ಯಕಾಲದ ಸರ್ಕಾರದ ಬಗ್ಗೆ ಯಾವ ಪಾರ್ಟಿಯೊಡನೆಯೂ ಚರ್ಚೆ ನಡೆಸುವುದಿಲ್ಲ; ನಾವು ಆರಿಸಿದ ೧೪ ಜನರಿಗೆ ಮಧ್ಯಕಾಲದ ಸರ್ಕಾರದಲ್ಲಿರಲು ಆಹ್ವಾನ ಕಳಿಸುತ್ತೇವೆ; ಈ ಹೆಸರುಗಳ ಪೈಕಿ ಆರು ಕಾಂಗ್ರೆಸ್ ಪಾರ್ಟಿಯ ಹಿಂದುಗಳಿರುವರು, ಒಂದು ಷೆಡ್ಯೂಲ್ಡ್ ಕ್ಲಾಸಿನವರದು, ಐದು ಮುಸ್ಲಿಂಲೀಗ್ ಸದಸ್ಯರದು, ಇನ್ನು ಮೂರು ಅಲ್ಪ ಸಂಖ್ಯಾತ ಕೋಮಿನವರಿಗೆ: ಒಂದು ಸಿಖರಿಗೆ, ಒಂದು ಭಾರತೀಯ ಕ್ರಿಶ್ಚಿಯನ್ನರಿಗೆ, ಮತ್ತೊಂದು ಪಾರ್ಸಿಗಳಿಗೆ. ಇದಲ್ಲದೆ ಇನ್ನೂ ಕೆಲವು ಕಲಮುಗಳನ್ನು ಸೇರಿಸಿದೆ: ೧ ಈ ಹೆಸರುಗಳ ಪೈಕಿ ಯಾರಿಗಾದರೂ ಖಾಸಗಿ ಕಾರಣಗಳಿಗಾಗಿ ಮಂತ್ರಿ ಮಂಡಲ ಸೇರಲು ಅನಾನುಕೂಲವಾದರೆ, ವೈಸರಾಯರು ಸಲಹೆ ಕೇಳಿ ಬೇರೊಬ್ಬರನ್ನು ತೆಗೆದುಕೊಳ್ಳಬಹುದು; ೨ ಮಧ್ಯಕಾಲದ ಸರ್ಕಾರದ ರಚನೆ ಇನ್ನಾವ ಕೋಮುವಾರು ಸಮಸ್ಯೆಗಳ ಪರಿಹಾರಕ್ಕೂ ಸಂಪ್ರದಾಯವಾಗುವುದಿಲ್ಲ; ಇದು ಈಗಿನ ಕಾಲಕ್ಕೆ ಮಾತ್ರ ಆದಷ್ಟು ಒಳ್ಳೇ ಸರ್ಕಾರ ದೊರೆಯಲೆಂದು ಮಾಡಿರುವ ವ್ಯವಸ್ಥೆ; ೪ ಈ ರೀತಿ ರಚಿತವಾಗುವ ಮಧ್ಯ ಕಾಲ ಸರ್ಕಾರಕ್ಕೆ ಸೇರಲು ಉಭಯ ಕೋಮುಗಳಾಗಲಿ, ಅಥವಾ ಒಂದು ಕೋಮಾಗಲಿ ಒಪ್ಪದಿದ್ದರೆ ಕೂಡ ವೈಸರಾಯರು ಆ ಕೆಲಸವನ್ನು ಮುಂದರಿಸುವರು; ಮೇ ೧೬ರ ಕ್ಯಾಬಿನೆಟ್ ಮಿಷನ್ನಿನ ಸಲಹೆಗಳನ್ನು ಒಪ್ಪುವ ಪಾರ್ಟಿಯವರು ಮಾತ್ರ ಮಧ್ಯಕಾಲದ ಸರ್ಕಾರದ ಇರಲು ಅರ್ಹರು”.

ಕ್ಯಾಬಿನೆಟ್ ಮಿಷನ್ನಿನ ಈ ಹೇಳಿಕೆಯ ಮೇಲೆ ಯಾವ ರಾಜಕೀಯ ಪಾರ್ಟಿಯೂ ಯಾವ ಹೇಳಿಕೆಯನ್ನೂ ಕೂಡಲೆ ಕೊಡಲಿಲ್ಲ ಮತ್ತು ಮಧ್ಯಕಾಲ ಸರ್ಕಾರದ ರಚನೆಗಾಗಿ ಕೊಟ್ಟ ಆಹ್ವಾನವನ್ನೂ ಸ್ವೀಕರಿಸಲಿಲ್ಲ.

ಜಿನ್ಹಾ ಕ್ಯಾಬಿನೆಟ್ ಮಿಷನ್ನಿನ ಸಲಹೆಗೆ ತಮ್ಮ ಉತ್ತರವನ್ನು ಕಾಂಗ್ರೆಸ್ ಹೇಳಿಕೆ ಬಂದ ಮೇಲೆ ತಿಳಿಸುವುದಾಗಿ ಪ್ರಕಟಿಸಿದರು. ಕಾಂಗ್ರೆಸ್ ವರ್ಕಿಂಗ್ ಕಮಿಟಿಯೂ ಗಾಂಧೀಜಿಯೂ ಪ್ರತಿದಿನವೂ ಪರಿಶೀಲನೆ ನಡೆಸುತ್ತಿದ್ದರು. ಈ ಮಧ್ಯೆ ಒಂದು ದಿನ ಕಾಂಗ್ರೆಸು ಎರಡು ಹೇಳಿಕೆಗಳನ್ನೂ ಒಪ್ಪಿತು ಎಂಬ ಸುದ್ದಿ ಹರಡಿತು. ಹೀಗೆ ಕೆಲವು ಪತ್ರಿಕೆಗಳಲ್ಲಿಯೂ ಪ್ರಕಟವಾಯಿತು. ಇದರ ಮೇಲೆ ಪ್ರಾಂತ ವರ್ಗಗಳು ಪ್ರಾಂತ ಶಾಸನ ಸಭೆಗಳ ಸದಸ್ಯರುಗಳಿಗೆ ಕನ್‌‌ಸ್ಟಿಟ್ಯುಯೆಂಟ್ ಅಸೆಂಬ್ಲಿಗೆ ತಮ್ಮ ಡೆಲಿಗೇಟುಗಳನ್ನು ಚುನಾಯಿಸಬೇಕೆಂದು ಆದೇಶ ಕಳುಹಿಸಿದರು. ಗಾಂಧೀಜಿ ಹೊರತಾಗಿ ಇನ್ನಾರೂ ಇದಕ್ಕೆ ಆಕ್ಷೇಪಣೆ ಎತ್ತಲಿಲ್ಲ.

ಆದರೆ ಪುನಃ ಆಶೆಗಳು ಭಗ್ನವಾದವು. ಆಶಾಭಂಗಕ್ಕೆ ಕಾರಣವೇನೆಂದರೆ, ಮಧ್ಯಕಾಲ ಸರ್ಕಾರದಲ್ಲಿ ಕಾಂಗ್ರೆಸಿಗಾಗಿ ಕೊಟ್ಟ ಸ್ಥಾನಗಳಲ್ಲಿ ಒಬ್ಬ ಹಿಂದುವಿಗೆ ಬದಲಾಗಿ ಒಬ್ಬ ಮುಸ್ಲಿಮನಿರಬೇಕು; ಅವನು ಮುಸ್ಲಿಂ ಲೀಗಿನ ಮುಸ್ಲಿಮನಲ್ಲ; ಕಾಂಗ್ರೆಸ್ ಮುಸ್ಲಿಂ.

ಕಾಂಗ್ರೆಸು ಈ ಸಲಹೆ ಮಾಡಲು ಕಾರಣ, ಗಾಂಧೀಜಿ ಎಷ್ಟೋ ಸಾರಿ ಹೇಳಿರುವಂತೆ, ಕಾಂಗ್ರೆಸು ಹಿಂದೂಗಳ ಪ್ರತಿನಿಧಿ ಮಾತ್ರವೇ ಅಲ್ಲ, ಅದು ಮುಸ್ಲಿಮರ ಪ್ರತಿನಿಧಿಯೂ ಹೌದು. ಕಾಂಗ್ರೆಸಿಗೆ ಈಗ ಮುಸ್ಲಿಮರೇ (ಆಜಾದ್) ಅಧ್ಯಕ್ಷರು, ಕಾಂಗ್ರೆಸ್ ಈ ಅಂಶವನ್ನು ಈಗ ಒತ್ತಾಯ ಮಾಡದೆ ಇರಬಹುದಾಗಿತ್ತು, ಆದರೆ ಪತ್ರಿಕೆಗಳಲ್ಲಿ ಬರುತ್ತಿದ್ದ ದ್ವೇಷಪೂರಿತ ಲೇಖನಗಳ ಮತ್ತು ಜಿನ್ಹಾರವರ ಕಾಂಗ್ರೆಸಿನ ಸರ್ವ ಪ್ರಾತಿನಿಧ್ಯವನ್ನು ಒಪ್ಪುವುದಿಲ್ಲವೆಂದು ಮಾಡಿದ ಹೇಳಿಕೆಯ ದೃಷ್ಟಿಯಿಂದ ಕಾಂಗ್ರೆಸು ತನಗೆ ಕೊಟ್ಟಿರುವ ಸ್ಥಾನಗಳಲ್ಲಿ, ಒಬ್ಬ ನಾಷಲಿಸ್ಟ್ ಮುಸ್ಲಿಂ ಇರಬೇಕೆಂದು ಒತ್ತಾಯ ಪಡಿಸಿತು.

ಏತನ್ಮಧ್ಯೆ, ಕ್ಯಾಬಿನೆಟ್ ಮಿಷನ್ನಿನ ಹೇಳಿಕೆಯ ಒಂದು ಕಲಮಿನ ಬಗ್ಗೆ ಕಾಂಗ್ರೆಸ್ ವರ್ಕಿಂಗ್ ಕಮಿಟಿಗೂ ಗಾಂಧೀಜಿಗೂ ಭಿನ್ನಾಭಿಪ್ರಾಯ ಉಂಟಾಯಿತು. ಅದು ೧೯ನೇ ಕಲಮು. ಕ್ಯಾಬಿನೆಟ್ ಮಿಷನ್ನಿನವರ ಅರ್ಥ ಗಾಂಧೀಜಿಗೆ ತೃಪ್ತಿಕರವಾಗಲಿಲ್ಲ. ಅವರ ಅಭಿಪ್ರಾಯ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಅವಸರದಲ್ಲಿ ಅವರ ಸಲಹೆಗಳನ್ನು ಒಪ್ಪಬಾರದೆಂಬುದಾಗಿತ್ತು. ಈ ವಿಷಯದ ಮೇಲೆ ಕಮಿಟಿಯಲ್ಲಿ ದಿನವೂ ಚರ್ಚೆಯಾಗುತ್ತಿತ್ತು.

ಕ್ಯಾಬಿನೆಟ್ ಮಿಷನ್ನು ಕಾಂಗ್ರೆಸ್ ವರ್ಕಿಂಗ್ ಕಮಿಟಿ ತೀರ್ಮಾನವನ್ನು ಜೂನ್ ತಿಂಗಳು ೨೫ ನೇ ತಾರೀಖಿನೊಳಗೆ ಕಳುಹಿಸಬೇಕೆಂದು ಕೇಳಿತು. ಅದರಂತೆ ಕಾಂಗ್ರೆಸ್ ವರ್ಕಿಂಗ್ ಕಮಿಟಿ ತನ್ನ ತೀರ್ಮಾನವನ್ನು ಜೂನ್‌೨೫ನೇ ತಾರೀಖು ಕ್ಯಾಬಿನೆಟ್ ಮಿಷನ್ನಿಗೆ ಕಳುಹಿಸಿತು. ಅಧ್ಯಕ್ಷ ಮೌಲಾನಾ ಆಜಾದರು ಅದನ್ನು ಕ್ಯಾಬಿನೆಟ್ ಮಿಷನ್ನಿಗೆ ಕಳುಹಿಸಿದರು: “ಮೇ ೧೬ನೇ ತಾರೀಖೂ ಕ್ಯಾಬಿನೆಟ್ ಮಿಷನ್ ಮಾಡಿದ ಸಲಹೆಗಳಲ್ಲಿನ ಕೊರತೆಗಳೇನು ಎಂಬುದನ್ನು ಆಗಲೇ ತಿಳಿಸಲಾಗಿದೆ. ಆ ಹೇಳಿಕೆಯ ಕೆಲವು ಕಲಮುಗಳಿಗೆ ನಾವು ಮಾಡುವ ಅರ್ಥವೇನು ಎಂಬುದನ್ನು ತಿಳಿಸಲಾಗಿದೆ. ನಮ್ಮ ಅರ್ಥಗಳೊಡನೆ ಕ್ಯಾಬಿನೆಟ್ ಮಿಷನ್ನಿನ ಸಲಹೆಗಳನ್ನು ನಾವು ಒಪ್ಪುತ್ತೇವೆ ಮತ್ತು ನಮ್ಮ ಗುರಿಗಾಗಿ ಕೆಲಸ ಮಾಡಲು ಸಿದ್ಧರಾಗಿದ್ದೇವೆ. ಆದರೆ ನಾವು ಒಂದು ಅಂಶವನ್ನು ಸ್ಪಷ್ಟಪಡಿಸಬೇಕು. ಕನ್‌ಸ್ಟಿಟ್ಯುಯೆಂಟ್ ಅಸೆಂಬ್ಲಿ ಚೆನ್ನಾಗಿ ಕೆಲಸ ಮಾಡಬೇಕಾದರೆ ತೃಪ್ತಿಕರವಾದ ನಡುಗಾಲ ಸರ್ಕಾರ ಸ್ಥಾಪನೆಯಾಗಬೇಕು.”

ಕಾಂಗ್ರೆಸ್ ವರ್ಕಿಂಗ್ ಕಮಿಟಿಯ ಕಾಗದ ಮುಟ್ಟಿದ ಮೇಲೆ, ಮಿಷನ್ನೂ ವೈಸರಾಯರೂ ಸ್ಥಿತಿಯನ್ನು ಪರಿಶೀಲಿಸಿದರು: ಕಾಂಗ್ರೆಸು ಮೇ ೧೬ನೇ ತಾರೀಖಿನ ಹೇಳಿಕೆಯನ್ನು ಕೆಲವು ವಿಶೇಷಣಗಳೊಡನೆ ಸ್ವೀಕರಿಸಿದೆ; ಜೂನ್ ೧೬ನೇ ತಾರೀಖಿನ ಹೇಳಿಕೆಯನ್ನು ಸ್ವೀಕರಿಸಲಿಲ್ಲ ಎಂಬಂತಾಯಿತು. ಇಂಟರಿಂ ಸರ್ಕಾರದ ರಚನೆಯ ಕಲಮನ್ನು ಕಾಂಗ್ರೆಸು ಒಪ್ಪಿಲ್ಲ; ಈಗ ಕಾಂಗ್ರೆಸೂ, ಮುಸ್ಲಿಂ ಲೀಗೂ ಮೇ ೧ನೇ ತಾರೀಖಿನ ಹೇಳಿಕೆಯನ್ನು ಒಪ್ಪಿರುವುದು; ನಡುಗಾಲದ ಸರ್ಕಾರವನ್ನು ವೈಸರಾಯರು ಆಲೋಚಿಸಿ ಹೊಸದಾಗಿ ಸೂಚಿಸುವ ತತ್ವದ  ಮೇಲೆ ಒಪ್ಪುವರು ಎಂದ ಹಾಗಾಯಿತು; ಅನೇಕ ಕಾರಣಗಳಿಂದ ಹಂಗಾಮಿ ಕೇಂದ್ರ ಸರ್ಕಾರದ ಏರ್ಪಾಡನ್ನು ಮುಂದೆ ಆಲೋಚಿಸಬಹುದು; ಅದನ್ನು ಈಗಲೇ, ಕೂಡಲೇ, ತೆಗೆದುಕೊಳ್ಳಬೇಕಾಗಿಲ್ಲ;, ಈಗ ಸದ್ಯಕ್ಕೆ ಒಂದು ಕೇರ್‌ಟೇಕರ್ ಸರ್ಕಾರ ಕೇಂದ್ರದಲ್ಲಿ ಸ್ಥಾಪಿತವಾಗಬಹುದು; ಮುಂದೆ ಸ್ವಲ್ಪ ಕಾಲವಾದ ಮೇಲೆ, ವೈಸರಾಯರು ಪ್ರತಿನಿಧಿ ನಡುಗಾಲ ಕೇಂದ್ರ ಸರ್ಕಾರವನ್ನು ಏರ್ಪಡಿಸಬಹುದು.

ಜಿನ್ಹಾರಿಗೆ ಕ್ಯಾಬಿನೆಟ್ ಮಿಷನ್ನಿನ ಮತ್ತು ವೈಸರಾಯರ ತೀರ್ಮಾನಗಳನ್ನೆಲ್ಲಾ ತಿಳಿಸಲಾಯಿತು. ಅವರಿಗೆ ಇವು ಸರಿಬೀಳಲಿಲ್ಲ. ಕ್ಯಾಬಿನೆಟ್ ಮಿಷನ್ನಿನವರೂ ವೈಸರಾಯರೂ ಮಾತಿಗೆ ತಪ್ಪಿದರೆಂದು ಪ್ರಚಾರ ಮಾಡಿದರು. ಮುಸ್ಲಿಂ ಲೀಗ್ ವರ್ಕಿಂಗ್ ಕಮಿಟಿ, ಜೂನ್ ೧೬ನೇ ತಾರೀಖು ಕ್ಯಾಬಿನೆಟ್ ಮಿಷನ್ನು ಕೊಟ್ಟ ಸಲಹೆಯಂತೆ, ಮುಸ್ಲಿಂ ಲೀಗು ನಡುಗಾಲದ ಸರ್ಕಾರದ ನೇಮಕಕ್ಕೆ ಒಪ್ಪಿರುವುದಾಗಿಯೂ, ಅದನ್ನು ಕೂಡಲೇ ಸ್ಥಾಪಿಸಬೇಕೆಂದೂ ನಿರ್ಣಯ ಮಾಡಿತು.

ಜೂನ್ ೨೯ರಲ್ಲಿ ಕ್ಯಾಬಿನೆಟ್ ಮಿಷನ್ನು ಇಂಗ್ಲೆಂಡಿಗೆ ಹಿಂತಿರುಗಲು ಇಂಡಿಯಾವನ್ನು ಬಿಟ್ಟಿತು. ಅದರ ಕೆಲಸ ಪೂರ್ತಿಯಾಗಿ ಆಗದಿದ್ದರೂ, ಕನ್‌ಸ್ಟಿಟ್ಯುಯೆಂಟ್ ಅಸೆಂಬ್ಲಿಯ ವಿಷಯದಲ್ಲಿಯೂ ದೀರ್ಘಾವಧಿ ಯೋಜನೆಯ ವಿಷಯದಲ್ಲಿಯೂ ಕಾಂಗ್ರೆಸು ಮತ್ತು ಮುಸ್ಲಿಂ ಲೀಗು ಒಪ್ಪಿದ ಹಾಗಾಯಿತು. ನಡುಗಾಲದ ಸರ್ಕಾರ ಮಾತ್ರ ಸ್ಥಾಪನೆಯಾಗಲಿಲ್ಲ. ಗಾಂಧೀಜಿ ಮತ್ತು ಇತರ ಮುಖಂಡರು ಕ್ಯಾಬಿನೆಟ್ ಮಿಷನ್ನಿನ ಸದುದ್ದೇಶಗಳ ಬಗ್ಗೆ ಸದ್ಭಾವನೆಯನ್ನು ಹೊಂದಿದ್ದರು. ಕಾಂಗ್ರೆಸಿನ ಕೇಳಿಕೆಗಳ ಬಗ್ಗೆ ಬಹಳ ರಿಯಾಯಿತಿ ತೋರಿಸಿದರೆಂದು ಜಿನ್ಹಾರಿಗೆ ಅಸಮಾಧಾನವಾಯಿತು.

ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ಜುಲೈ ೬ನೇ ತಾರೀಖು ಬೊಂಬಾಯಿನಲ್ಲಿ ಸಭೆ ಸೇರಿ, ಕ್ಯಾಬಿನೆಟ್ ಮಿಷನ್ನಿನ ಬಗ್ಗೆ ವರ್ಕಿಂಗ್ ಕಮಿಟಿ ಮಾಡಿದ ತೀರ್ಮಾನವನ್ನು ಪರಿಶೀಲಿಸಿತು. ಗಾಂಧೀಜಿ ಈ ಸಭೆಯಲ್ಲಿ ಹಾಜರಿದ್ದು, ಭಾಷಣಮಾಡಿ, ವರ್ಕಿಂಗ್ ಕಮಿಟಿ ತೀರ್ಮಾನವನ್ನು ಸಭೆ ಒಪ್ಪಬೇಕೆಂದು ಪ್ರಾರ್ಥಿಸಿದರು. ಕ್ಯಾಬಿನೆಟ್ ಮಿಷನ್ನಿನ ಸಲಹೆಗಳಲ್ಲಿ ಕೆಲವು ದೋಷಗಳಿರಬಹುದು, ಅವುಗಳನ್ನು ತಿದ್ದಿ ಸರಿಮಾಡಿಕೊಳ್ಳಲು ಕಾಂಗ್ರೆಸಿಗೆ ಶಕ್ತಿಯಿದೆ ಎಂದು ಗಾಂಧೀಜಿ ತಿಳಿಸಿದರು. ಈಗ ತೀರ್ಮಾನ ಮಾಡುವುದು ಕನ್‌ಸ್ಟಿಟ್ಯುಯೆಂಟ್ ಅಸೆಂಬ್ಲಿಯನ್ನು ಪ್ರವೇಶಿಸುವುದಕ್ಕೆ ಮಾತ್ರ. ಅದು ಸಾರ್ವಭೌಮ ಅಧಿಕಾರವನ್ನು ಹೊಂದಿದೆ. ಅಲ್ಲಿ ನಾವು ಎಲ್ಲವನ್ನೂ ಸರಿಮಾಡಿಕೊಳ್ಳಬಹುದು ಎಂದು ಇತರ ಮುಖಂಡರು ತಿಳಿಸಿದರು. ಸಭೆ ವರ್ಕಿಂಗ್ ಕಮಿಟಿ ನಿರ್ಣಯವನ್ನು ಭಾರಿ ಬಹುಮತದಿಂದ ಒಪ್ಪಿತು. ಪರವಾಗಿ ೨೦೪ ಓಟುಗಳೂ, ವಿರೋಧವಾಗಿ ೨೧ ಓಟುಗಳೂ ಬಂದವು.

೧೯೩೯ರಿಂದ ಇದುವರೆಗೂ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅಬುಲ್ ಕಲಾಮ್ ಆಜಾದ್ ನಿವೃತ್ತರಾಗಿ ಜವಹರಲಾಲ್ ನೆಹರು ಅಧ್ಯಕ್ಷತೆ ವಹಿಸಿದರು. ಬೊಂಬಾಯಿನಲ್ಲಿ ಜುಲೈ ೧೦ರಲ್ಲಿ ಪಡೆದ ಪ್ರತಿಕಾ ಪ್ರತಿನಿಧಿಗಳ ಒಂದು ಗೋಷ್ಠಿಯಲ್ಲಿ, ಕಾಂಗ್ರೆಸ್ ಅಧ್ಯಕ್ಷ ಜವಹರಲಾಲ್ ನೆಹರು ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಯ ನಿರ್ಣಯದ ಅರ್ಥವನ್ನು ವಿವರಿಸುತ್ತಾ, “ಯಾವ ಒಡಂಬಡಿಕೆಗಳಿಂದಲೂ, ಯಾವ ರೀತಿಯಲ್ಲಿಯೂ, ನಿರ್ಬಂಧ ಪಡದೆ, ಎಲ್ಲ ಸನ್ನಿವೇಶಗಳನ್ನೂ ಅವು ಉದ್ಭವವಾದಂತೆ ಎದುರಿಸಲು ಸಂಪೂರ್ಣ ಸ್ವಾತಂತ್ರ್ಯವುಳ್ಳಂತೆ, ಕಾಂಗ್ರೆಸು ರಾಜ್ಯಾಂಗ ರಚನಾ ಸಭೆಯನ್ನು ಪ್ರವೇಶಿಸುತ್ತದೆ” ಎಂದು ಹೇಳಿದರು.

ಪ್ರಶ್ನೆ: – ಕ್ಯಾಬಿನೆಟ್ ಆಯೋಗದ ಯೋಜನೆಯನ್ನು ಮಾರ್ಪಡಿಸಬಹುದು ಎಂಬುದು ನಿಮ್ಮ ಅರ್ಥವೇ?

ಉತ್ತರ: – ರಾಜ್ಯಾಂಗ ರಚನಾ ಸಭೆಯಲ್ಲಿ ಭಾಗವಹಿಸಲು ಮಾತ್ರ ಕಾಂಗ್ರೆಸ್ ಒಪ್ಪಿಕೊಂಡಿದೆ. ಕ್ಯಾಬಿನೆಟ್ ಆಯೋಗದ ಯೋಜನೆಯನ್ನು ತನ್ನ ಇಷ್ಟಕ್ಕೆ ಸೂಕ್ತವಾಗಿ ಬದಲಾಯಿಸಲು, ಹೆಚ್ಚು ಕಡಿಮೆ ಮಾಡಲು, ಕಾಂಗ್ರೆಸ್ ಸ್ವತಂತ್ರವಾಗಿದೆ.

ನೆಹರು ಕೊಟ್ಟ ಈ ಹೇಳಿಕೆ ಮುಸ್ಲಿಂ ಲೀಗ್ ಮೇಲೆ ವಿರೋಧ ಪತ್ರಿಕ್ರಿಯೆ ಉಂಟುಮಾಡಿತು. ರಾಜ್ಯಾಂಗ ರಚನಾಸಭೆಯಲ್ಲಿ ತನ್ನ ಮೆಜಾರಿಟಿ ಬೆಂಬಲದಿಂದ ಕ್ಯಾಬಿನೆಟ್ ಮಿಷನ್ನಿನ ಸಲಹೆಗಳನ್ನು ಬದಲಾಯಿಸಬಹುದು; ಅಲ್ಪ ಸಂಖ್ಯೆಯಲ್ಲಿರುವ ಮುಸ್ಲಿಂರಿಗೆ ಇದರಿಂದ ಬಾಧಕವಾಗಬಹುದು ಎಂದು ಅರ್ಥ ಮಾಡಿಕೊಂಡರು ಜಿನ್ಹಾ ಮತ್ತು ಮುಸ್ಲಿಂ ಲೀಗ್.

ಕಾಂಗ್ರೆಸ್ ವರ್ಕಿಂಗ್ ಕಮಿಟಿ ಪುನಃ ಸಭೆ ಸೇರಿ, ಮುಸ್ಲಿಂ ಲೀಗ್ ಮತ್ತು ಜಿನ್ಹಾ ಕಾಂಗ್ರೆಸ್ ನಿರ್ಣಯಕ್ಕೆ ತಪ್ಪು ಅರ್ಥ ಮಾಡಿದ್ದಾರೆ ಎಂದು ವಿವರಣೆಯನ್ನು ಕೊಟ್ಟಿತು. ಆದಾಗ್ಯೂ ಮುಸ್ಲಿಂ ಲೀಗು ಜುಲೈ ೨೭ರಲ್ಲಿ ಬೊಂಬಾಯಿನಲ್ಲಿ ಸಭೆ ಸೇರಿ, ಕ್ಯಾಬಿನೆಟ್ ಮಿಷನ್ನಿನ ಯೋಜನೆಯನ್ನು ನಿರಾಕರಿಸುವ ನಿರ್ಣಯ ಮಾಡಿತು. ಪಾಕೀಸ್ಥಾನವೇ ತನ್ನಗುರಿ; ಅದರ ಸಾಧನೆಗಾಗಿ ನೇರವಾದ ಕಾರ್ಯಕ್ರಮವನ್ನು ಹಿಡಿಯತಕ್ಕದ್ದೆಂದೂ ತೀರ್ಮಾನಿಸಿತು.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಪುನಃ ಸಭೆ ಸೇರಿ ಕ್ಯಾಬಿನೆಟ್ ಮಿಷನ್ನಿನ ಯೋಜನೆಯ ಬಗ್ಗೆ ತನ್ನ ಅಭಿಪ್ರಾಯವನ್ನು ಸ್ಪಷ್ಟಪಡಿಸಿತು. ದೀರ್ಘಾವಧಿ ಯೋಜನೆಯನ್ನೂ ನಡುಗಾಲದ ಸರ್ಕಾರವನ್ನು ಕುರಿತ ಸೂಚನೆಯನ್ನೂ ಅನಾಮತ್ತಾಗಿ ಒಪ್ಪಿದೆ ಎಂದು ತಿಳಿಸಿತು.

ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ಸಭೆ ಮುಗಿದ ಅನಂತರ ಗಾಂಧೀಜಿ ಪಂಚಗನಿ ಎಂಬ ಪರ್ವತ ಪ್ರದೇಶಕ್ಕೆ ಬಂದರು. ತಮ್ಮ ಆರೋಗ್ಯವನ್ನು ಸುಧಾರಿಸಿ ಕೊಳ್ಳುವುದಕ್ಕಾಗಿ ಅವರು ಎರಡು ತಿಂಗಳು ಕಾಲ ಅಲ್ಲಿ ಇದ್ದರು. ಆಮೇಲೆ, ಆಗಸ್ಟ್ ಎರಡನೇ ವಾರ, ಸೇವಾಗ್ರಾಮಕ್ಕೆ ಹಿಂತಿರುಗಿದರು.

ವೈಸರಾಯ ವೇವೆಲ್‌ರಿಗೆ ಲಂಡನ್ನಿಂದ ಕಾಂಗ್ರೆಸ್ಸನ್ನು ಕರೆದು ನಡುಗಾಲ ಸರ್ಕಾರ ರಚಿಸಬೇಕೆಂಬುದಾಗಿ ಆದೇಶ ಬಂತು. ಇದರ ಪ್ರಕಾರ, ಆಗಸ್ಟ್ ೧೨ನೇ ತಾರೀಖು ವೇವೆಲ್‌ರು ಕಾಂಗ್ರೆಸ್ ಅಧ್ಯಕ್ಷ ಜವಾಹರ್‌ಲಾಲ್ ನೆಹರುವಿಗೆ ನಡುಗಾಲ ಸರ್ಕಾರ ರಚಿಸಲು ಕರೆ ಕಳುಹಿಸಿದರು.

ಇದಕ್ಕೆ ಮುಂಚೆ ಕೆಲವು ಘಟನೆಗಳು ನಡೆದವು. ಕನ್‌ಸ್ಟಿಟ್ಯುಯೆಂಟ್ ಅಸೆಂಬ್ಲಿಗೆ ಚುನಾವಣೆಗಳು ನಡೆದವು. ಸಿಖ್‌ರು ಈ ಚುನಾವಣೆಗಳನ್ನು ಬಹಿಷ್ಕರಿಸಿದರು. ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗು ಆದಷ್ಟು ಸಮರ್ಥರಾದ ಜನರನ್ನು ಕನ್‌ಸ್ಟಿಟ್ಯುಯೆಂಟ್ ಅಸೆಂಬ್ಲಿಗೆ ಸೇರಿಸಲು ಪ್ರಯತ್ನಪಟ್ಟರು. ಇದರ ಫಲವಾಗಿ, ಮುಸ್ಲಿಂ ಲೀಗಿನ ೭೩ ಜನರೂ, ಕಾಂಗ್ರೆಸಿನ ೨೦೫ ಜನರೂ ಈ ಸಭೆಯಲ್ಲಿದ್ದರು. ಆಂಗ್ಲೋ – ಇಂಡಿಯನ್ ಅಸೋಸಿಯೇಷನ್ನಿನ ಅಧ್ಯಕ್ಷರೂ ಹಿಂದೂ ಮಹಾಸಭೆಯ ಅಧ್ಯಕ್ಷರೂ, ಆಲ್ ಇಂಡಿಯಾ ಡಿಫ್ರೆಸ್ಡ್ ಲೀಗಿನ ಅಧ್ಯಕ್ಷರೂ, ಕೆಲವು ಸದಸ್ಯರೂ ಇದ್ದರು. ಕಾಂಗ್ರೆಸೇತರ ಅಸ್ಸಾಮ್‌ನಲ್ಲಿ ಕಾಂಗ್ರೆಸ್ ಪಾರ್ಟಿ ತನ್ನ ಸದಸ್ಯರನ್ನು ಆರಿಸುವಾಗ ಅವರು ಇತರ ಯಾವ ಪ್ರಾಂತದೊಡನೆಯೂ ಸೇರಕೂಡದೆಂದ. ಕಟ್ಟು ಮಾಡಿತು. ಸಿಖ್‌ರು ಪುನರಾಲೋಚಿಸಿ ಕನ್‌ಸ್ಟಿಟ್ಯುಯೆಂಟ್ ಅಸೆಂಬ್ಲಿಗೆ ಸೇರಬೇಕೆಂದು ನಿಶ್ಚಯಿಸಿ, ವಿಶೇಷ ಚುನಾವಣೆ ನಡೆಸಿ, ಪ್ರತಿನಿಧಿಗಳನ್ನು ಆರಿಸಿದರು.

ಲಾರ್ಡ್ ವೇವೆಲರು ಇಂಟರಿಂ ಸರ್ಕಾರ ರಚಿಸುವ ಬಗ್ಗೆ ಜುಲೈ ೨೨ ರಲ್ಲಿ, ಜಿನ್ಹಾರವರಿಗೆ ಜೂನ್ ೧೬ರಲ್ಲಿ ಕ್ಯಾಬಿನೆಟ್ ಮಿಷನ್ನು ಸೂಚಿಸಿದ ಸಂಖ್ಯಾ ದಾಮಾಷಾ ಪ್ರಕಾರ ಸದಸ್ಯರಿರಬೇಕೆಂದು ಪತ್ರ ಬರೆದರು. ಅವರು ಇನ್ನೂ ಎರಡು ಕಲಮುಗಳನ್ನು ಹಾಕಿದರು: (೧) ಒಂದು ಪಾರ್ಟಿ ಇನ್ನೊಂದು ಪಾರ್ಟಿಯ ನಾಮಿನಿಗಳನ್ನು ಬೇಡವೆನ್ನಲು ಅಧಿಕಾರವಿರುವುದಿಲ್ಲ; ಮತ್ತು (೨) ಕೋಮುವಾರು ಸಮಸ್ಯೆಗಳನ್ನು ನಿರ್ಣಯಿಸಲು ಎರಡೂ ಕಮ್ಯೂನಿಟಿಗಳ ಮೆಜಾರಿಟಿ ಇರತಕ್ಕದ್ದು ಎಂಬ ಸಂಪ್ರದಾಯವನ್ನು ಹಾಕಿಕೊಳ್ಳತಕ್ಕದ್ದು. ಜುಲೈ ೩೦ರಂದು ಜಿನ್ಹಾ ತಾವು ಸಹಕಾರ ನೀರುವುದಿಲ್ಲವೆಂದು ಪತ್ರ ಬರೆದರು.

ಈ ಸಂಗತಿಯನ್ನು ಲಾರ್ಡ್ ವೇವೆಲರು ಬ್ರಿಟಿಷ್ ಸರ್ಕಾರಕ್ಕೆ ತಿಳಿಸಿದರು. ಆಗಸ್ಟ್ ೬ನೇ ತಾರೀಖು ಬ್ರಿಟಿಷ್ ಸರ್ಕಾರದಿಂದ ಉತ್ತರ ಬಂದಿತು. ಆಗಸ್ಟ್ ೧೦ರಲ್ಲಿ “ಆಗಲಿ” ಎಂದು ನೆಹರು ಉತ್ತರ ವಿತ್ತರು. ಕಾಂಗ್ರೆಸ್ ಅಧ್ಯಕ್ಷ ನೆಹರು ಹಂಗಾಮಿ ಸರ್ಕಾರ ರಚಿಸುವರೆಂದು ವೈಸರಾಯ್ ಪ್ರಕಟಿಸಿದರು. ದೇಶದಲ್ಲೆಲ್ಲಾ ಬಹಳ ಉತ್ಸಾಹ ಉಂಟಾಯಿತು. ನೆಹರು ಬೊಂಬಾಯಿಗೆ ಹೋಗಿ ಜಿನ್ಹಾರನ್ನು ಸಂದರ್ಶಿಸಿ ಮುಸ್ಲಿಂ ಲೀಗಿನ ಸದಸ್ಯರನ್ನು ಹಂಗಾಮಿ ಸರ್ಕಾರಕ್ಕೆ ಕಳುಹಿಸಬೇಕೆಂದು ಕೇಳಿದರು. ಆದರೆ ಜಿನ್ಹಾ ಈ ಹಂಗಾಮಿ ಸರ್ಕಾರದ ರಚನೆಯ ಭಾವನೆಯೇ ತಪ್ಪೆಂದು ಹೇಳಿ, ಮುಸ್ಲಿಂ ಲೀಗ್ ಸದಸ್ಯರನ್ನು ಕಳುಹಿಸುವುದಿಲ್ಲವೆಂದು ತಿಳಿಸಿದರು.

ನೆಹರು ತಮ್ಮ ಪಟ್ಟಿಯನ್ನು ವೈಸರಾಯರಿಗೆ ಕೊಟ್ಟರು. ಇದರಲ್ಲಿ ಏಳು ಕಾಂಗ್ರೆಸ್ ಪ್ರತಿನಿಧಿಗಳು, ಇದರಲ್ಲಿ ಷೆಡ್ಯೂಲ್ಡ್, ಕ್ಯಾಸ್ಟಿನ ಒಂದು ಪ್ರತಿನಿಧಿ. ಒಬ್ಬ ಇಂಡಿಯನ್ ಕ್ರಿಶ್ಚಿಯನ್, ಒಬ್ಬ ಸಿಖ್, ಒಬ್ಬ ಪಾರ್ಸಿ ಮತ್ತು ಇಬ್ಬರುಲೀಗೇತರ ಮುಸ್ಲಿಮರು. ವೈಸರಾಯರು ಈ ಪಟ್ಟಿಯನ್ನು ಅನುಮೋದಿಸಿದರು. ಮತ್ತು ರೇಡಿಯೋ ಭಾಷಣ ಮಾಡಿ, “ಈಗಲೂ ಮುಸ್ಲಿಂಲೀಗು ತನ್ನ ಪ್ರತಿನಿಧಿಗಳನ್ನು ಕಳುಹಿಸಬಹುದು. ಎಲ್ಲಾ ಒಟ್ಟು ೧೪ ಆಗುತ್ತದೆ. ಪುನಃ ಸರ್ಕಾರವನ್ನು ರಚಿಸಬಹುದು” ಎಂದು ತಿಳಿಸಿದರು. ವೈಸರಾಯರಿಗೆ ಮುಸ್ಲಿಂ ಲೀಗಿನ ಮೇಲೆ ಅಭಿಮಾನ, ಅವರನ್ನು ಹೇಗಾದರೂ ಇಂಟರಿಂ ಸರ್ಕಾರಕ್ಕೆ ಸೇರಿಸಬೇಕೆಂದು ಪ್ರಯತ್ನಿಸುತ್ತಲೇ ಇದ್ದರು. ಅವರೊಡನೆ ವ್ಯವಹಾರ ನಡೆಸುತ್ತಲೇ ಇದ್ದರು.

೧೯೪೬ನೇ ಆಗಸ್ಟ್ ೧೬ರಲ್ಲಿ ಕಾಂಗ್ರೆಸು ನಡುಗಾಲ ಸರ್ಕಾರವನ್ನು ರಚಿಸಿತು. ಅದೇ ದಿನ ಮುಸ್ಲಿಂ ಲೀಗ್ ಸಭೆ ಸೇರಿ ಕಾಂಗ್ರೆಸನ್ನು ವಿರೋಧಿಸಬೇಕೆಂದೂ, ಡೈರೆಕ್ಟ್ ಆಕ್ಷನ್ (ನೇರವಾದ ವಿರೋಧಿ ಕಾರ್ಯ) ಆರಂಭಿಸಬೇಕೆಂದೂ ನಿರ್ಣಯ ಮಾಡಿತು. ಬಂಗಾಳದಲ್ಲಿ ಮುಸ್ಲಿಂ ಸರ್ಕಾರವಿತ್ತು. ಅಲ್ಲಿ ಆಗಸ್ಟ್ ೧೬ರಂದು ಎಲ್ಲೆಲ್ಲೂ ಮುಸ್ಲಿಂ ಲೀಗ್ ಸ್ವಯಂ ಸೇವಕರ ದಾಂಧಲೆ ನಡೆಯಿತು. ಕಲ್ಕತ್ತಾದಲ್ಲಿ ಹಿಂದೆ ಎಂದೂ ಇಲ್ಲದಷ್ಟು ಹಿಂದುಗಳ ಕೊಲೆ, ಆಸ್ತಿಪಾಸ್ತಿಗಳ ನಾಶ ಆರಂಭವಾಯಿತು.

ಕಡೆಗೆ ೧೯೪೬ನೇ ಸೆಪ್ಟೆಂಬರ್ ೨ನೇ ತಾರೀಖು ಹೊಸ ಸರ್ಕಾರ ಅಧಿಕಾರ ವಹಿಸಿತು. ಇದು ಭಾರತ ಇತಿಹಾಸದಲ್ಲಿ ಒಂದು ಮುಖ್ಯ ಘಟನೆ. ಭಾರತೀಯರೇ ಇರುವ ವೈಸರಾಯ್ ಕೌನ್ಸಿಲು ಸ್ಥಾಪನೆಯಾಯಿತು. ದೇಶದಲ್ಲೆಲ್ಲಾ ಇದು ಸಂತೋಷವುಂಟುಮಾಡಿತು. ನೆಹರು ಭಾರತದ ಮೊದಲನೇ ಪ್ರೈಂ ಮಿನಿಸ್ಟರ್ ಆದರು. ಅಮೆರಿಕಾದಲ್ಲಿಯೂ ಇದು ಸಂತೋಷವುಂಟು ಮಾಡಿತು. ನೆಹರೂ ಸೆಪ್ಟೆಂಬರ್ ೭ರಲ್ಲಿ ಮಾಡಿದ ಬ್ರಾಡ್‌ಕಾಸ್ಟ್ ಭಾಷಣದಲ್ಲಿ ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಭಾರತ ಇನ್ನು ಮುಂದೆ ಸ್ವತಂತ್ರ ರಾಷ್ಟ್ರದಂತೆ ವರ್ತಿಸುವುದೆಂದು ತಿಳಿಸಿದರು.

ಈ ಅಧಿಕಾರ ಸ್ವೀಕಾರ ಇತರ ರಾಜಕೀಯ ಪಾರ್ಟಿಗಳಿಗೆ ಸಂತೋಷವುಂಟು ಮಾಡಲಿಲ್ಲ. ಅಂಬೇಡ್ಕರ್ ಷೆಡ್ಯೂಲ್ಡ್ ಕ್ಯಾಸ್ಟಿನ ಪ್ರಾತಿನಿಧ್ಯದ ಬಗ್ಗೆ ಅಸಂತೋಷ ಸೂಚಿಸಿದರು. ಆಂಗ್ಲೋ – ಇಂಡಿಯನ್ನರು ತಮ್ಮ ಪ್ರತಿನಿಧಿಯನ್ನು ಮಂತ್ರಿ ಮಂಡಲದಲ್ಲಿ ಸೇರಿಸದೆ ಇರುವುದಕ್ಕಾಗಿ ಆಕ್ಷೇಪಣೆ ಮಾಡಿದರು. ಕಾಂಗ್ರೆಸ್ ಸೋಷಲಿಸ್ಟರು ಬ್ರಿಟನ್ನಿನೊಡನೆ ಇಂಡಿಯಾದ ಸಂಬಂಧವನ್ನು ಆಕ್ಷೇಪಿಸಿದರು.

* * *