ದೇಶದಲ್ಲಿ ಅಸಮಾಧಾನ ಹೆಚ್ಚುತ್ತಲೇ ಇತ್ತು. ವೈಸರಾಯರು ಗಾಂಧೀಜಿಯ ಸಲಹೆಯನ್ನು ಒಪ್ಪಲಿಲ್ಲ. ವರ್ಕಿಂಗ್ ಕಮಿಟಿಯ ಸದಸ್ಯರು ಇನ್ನೂ ಅಹಮದ್‌ನಗರ ಕೋಟಿಯಲ್ಲಿಯೇ ಬಂಧನದಲ್ಲಿದ್ದರು. ಅವರನ್ನು ಬಂಧಿಸಿ ೨೩/೪ ವರ್ಷವಾಗಿತ್ತು. ಯೂರೋಪಿನಲ್ಲಿ ಯುದ್ಧ ಮುಗಿಯುವ ಸೂಚನೆಗಳು ಕಂಡುಬಂದವು. ಬ್ರಿಟಿಷ್ ಸರ್ಕಾರಕ್ಕೆ ಅಪಜಯದ ಹೆದರಿಕೆ ಈಗ ಇರಲಿಲ್ಲ. ಈ ಸಮಯದಲ್ಲಿ ವೈಸ್‌ರಾಯ್ ಲಾರ್ಡ್ ವೇವಲ್ಲರು ಲಂಡನ್ನಿಗೆ ಹೋಗಿ, ಬ್ರಿಟಿಷ್ ಮಂತ್ರಿಮಂಡಲದ ಒಪ್ಪಿಗೆಯಂತೆ, ಹೊಸ ಸಲಹೆಗಳನ್ನು ತಂದರು. ಬಂಧನದಲ್ಲಿದ್ದ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸದಸ್ಯರನ್ನೆಲ್ಲಾ ೧೯೪೫ನೇ ಜೂನ್೧೪ರಲ್ಲಿ ಬಿಡುಗಡೆ ಮಾಡಿದರು. ಸಿಮ್ಲಾದಲ್ಲಿ ಒಂದು ಸಮ್ಮೇಳನ ನಡೆಸುವುದಾಗಿಯೂ, ಅದಕ್ಕೆ ಎಲ್ಲ ರಾಜಕೀಯ ಮುಖಂಡರೂ ಬರಬೇಕೆಂದೂ ಹೇಳಿದರು. ಗಾಂಧೀಜಿ ಮತ್ತು ವರ್ಕಿಂಗ್ ಕಮಿಟಿ ಸದಸ್ಯರಿಗೂ, ಜಿನ್ಹಾ ಮತ್ತು ಮುಸ್ಲಿಂ ಲೀಗ್ ಸದಸ್ಯರಿಗೂ, ಡಾ. ಅಂಬೇಡ್ಕರ್ ಮುಂತಾದವರಿಗೂ ಆಹ್ವಾನ ಹೋಯಿತು. ಪ್ರಾಂತಗಳ ಎಲ್ಲ ಹಿಂದಿನ ಮತ್ತು ಈಗಿನ ಮಂತ್ರಿಗಳಿಗೂ ಆಹ್ವಾನ ಹೋಯಿತು.

ಈ ಸಮ್ಮೇಳನ ಜೂನ್ ೨೫ರಿಂದ ಜುಲೈ ೧೪ರವರೆಗೂ ನಡೆಯಿತು. ಸಮ್ಮೇಳನದ ಮುಂದೆ ವೈಸರಾಯರು ಇಟ್ಟ ಸಲಹೆಗಳೇನೆಂದರೆ: ವೈಸರಾಯರ ಎಗ್ಸೆಕ್ಯುಟಿವ್ ಕೌನ್ಸಿಲಿನಲ್ಲಿ ವೈಸ್‌ರಾಯರು, ಕಮ್ಯಾಂಡರ್ – ಇನ್ – ಚೀಫರ ಹೊರತಾಗಿ ಯಾವ ಸರ್ಕಾರಿ ಅಧಿಕಾರಿಗಳೂ ಇರುವುದಿಲ್ಲ. ಭಾರತೀಯ ಕೌನ್ಸಿಲರುಗಳೆಲ್ಲಾ ತಮ್ಮ ತಮ್ಮ ಪಾರ್ಟಿಗಳ ಪ್ರತಿನಿಧಿಗಳು. ಹಿಂದೂ ಮತ್ತು ಮುಸ್ಲಿಂ ಸದಸ್ಯರ ಸಂಖ್ಯೆಗಳು ಸಮಸಮವಾಗಿರುವುವು. ವೈಸರಾಯರು ಸದಸ್ಯರನ್ನು ನೇಮಿಸುವರು. ಆದರೆ ಆಯಾಯಾ ಪಾರ್ಟಿಗಳಿಂದ ಕಳುಹಿಸಲಾದ ಸದಸ್ಯರನ್ನೇ ಆರಿಸಿಕೊಳ್ಳುವರು. ಇದಕ್ಕೆ ವೈಸ್‌ರಾಯ್ ಎಗ್ಸ್‌ಕ್ಯುಟಿವ್ ಕೌನ್ಸಿಲ್ ಎಂದು ಕರೆದಾಗ್ಯೂ ಅದು ಇಂಟರಿಂ ನ್ಯಾಷನಲ್ ಸರ್ಕಾರ ದಂತೆಯೇ ಇರುವುದು. ವೈಸರಾಯರು ನಡುವೆ ಕೈ ಹಾಕುವುದಿಲ್ಲ; ನಡುವೆ ಕೈ ಹಾಕಿದಾಗ್ಯೂ, ಅಲ್ಪ ಸಂಖ್ಯಾತರ ಹಿತರಕ್ಷಣೆಗಾಗಿ ಕೈ ಹಾಕುವರು.

ಗಾಂಧೀಜಿ, ವರ್ಕಿಂಗ್ ಕಮಿಟಿ ಸದಸ್ಯರು ಮತ್ತು ಅಧ್ಯಕ್ಷರು ಬಂದಿದ್ದರು. ಗಾಂಧೀಜಿ ಕಾಂಗ್ರೆಸಿನ ಸಲಹೆಗಾರರಾಗಿ ಮಾತ್ರ ಬಂದಿದ್ದರು. ಆಜಾದ್, ವಲ್ಲಭಭಾಯಿ ಜವಹರಲಾಲ್ ನೆಹರು ಮುಂತಾದವರೆಲ್ಲಾ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಎಲ್ಲ ಪಾರ್ಟಿಗಳೂ ವೈಸರಾಯ್‌ರ ಸಲಹೆಗಳನ್ನು ಒಪ್ಪಿದರೆಂಬಂತೆ ಮೊದಲುಕಂಡುಬಂದಿತು. ಗಾಂಧೀಜಿ ಮತ್ತು ಕಾಂಗ್ರೆಸ್ ವರ್ಕಿಂಗ್ ಕಮಿಟಿ ತಮ್ಮ ಪ್ರತಿನಿಧಿಗಳ ಹೆಸರನ್ನು ವೈಸರಾಯರಿಗೆ ಕಳುಹಿಸಿ ಒಂದು ಹೆಜ್ಜೆ ಮುಂದೆ ಬಂದ ಹಾಗಾಯಿತು. ಆದರೆ ಹಿಂದೆಯೇ ಒಂದು ಅಡಚಣೆ ಕಂಡುಬಂದಿತು. ಹಿಂದೂ – ಮುಸ್ಲಿಂ ಸಮಸಮತೆ ಎಂಬುದಕ್ಕೆ ಏನು ಅರ್ಥಮಾಡಬೇಕು? ಸಾಮಾನ್ಯವಾಗಿ ಹಿಂದೂಗಳಿಗೂ ಮುಸ್ಲಿಮರಿಗೂ ಸಮಸಮ ಎಂತಲೋ?

ಗಾಂಧೀಜಿ ಸ್ಪಷ್ಟ ಪಡಿಸಿದರು: “ಕಾಂಗ್ರೆಸು ಯಾವ ಒಂದು ಕೋಮಿನ ಪಾರ್ಟಿಯೂ ಅಲ್ಲ. ಅದು ಎಲ್ಲ ಕೋಮುಗಳನ್ನೂ ಒಳಗೊಂಡ ರಾಷ್ಟ್ರೀಯ ಪಾರ್ಟಿ. ಆಜಾದರು ಮುಸ್ಲಿಮರಾದರೂ, ಮುಸ್ಲಿಂ ಪ್ರತಿನಿಧಿಯಲ್ಲ, ಕಾಂಗ್ರೆಸ್‌(ರಾಷ್ಟ್ರೀಯ) ಪ್ರತಿನಿಧಿ. ಆದ್ದರಿಂದ, ತಾನು ಕೊಡುವ ಹೆಸರುಗಳಲ್ಲಿ ಕಾಂಗ್ರೆಸು ಒಬ್ಬ ಮುಸ್ಲಿಂ ಸದಸ್ಯರನ್ನಾದರೂ ಸೇರಿಸುತ್ತದೆ.”

ಜಿನ್ಹಾ ಅಂದರು; “ಮುಸ್ಲಿಂ ಲೀಗೇ ಎಲ್ಲಾ ಮುಸ್ಲಿಮರ ಪ್ರತಿನಿಧಿ. ಆದ್ದರಿಂದ ಮುಸ್ಲಿಂ ಸದಸ್ಯರನ್ನು ಲೀಗೇ ಕೊಡುವ ಅಧಿಕಾರ ಹೊಂದಿದೆ. ಕಾಂಗ್ರೆಸಿಗೆ ಒಬ್ಬ ಮುಸ್ಲಿಮರನ್ನು ಸೇರಿಸುವುದಕ್ಕೂ ಅಧಿಕಾರವಿಲ್ಲ. ಇತರ ಮೈನಾರಿಟಿಗಳೆಲ್ಲಾ ಕಾಂಗ್ರೆಸಿನೊಡನೆಯೇ ಓಟು ಮಾಡುತ್ತಾರೆ. ಆದ್ದರಿಂದ ಮುಸ್ಲಿಂ ಸದಸ್ಯರು, ಮುಸ್ಲಿಂ ಲೀಗ್ ಸದಸ್ಯರು, ಮೈನಾರಿಟಿಯಲ್ಲೇ ಇರುವರು”. ಈ ಭಿನ್ನಾಭಿಪ್ರಾಯವೇ ಪ್ರಬಲವಾಗಿ, ಸಮ್ಮೇಳನ ಮುರಿದು ಹೋಯಿತು. ವೈಸರಾಯರ ಪ್ರಯತ್ನ ಭಗ್ನವಾಯಿತು.

ಜೈಲಿನಿಂದ ಬಿಡುಗಡೆಯಾದ ಸರ್‌ದಾರ್ ವಲ್ಲಭಭಾಯಿಯರ ದೇಹಸ್ಥಿತಿ ಬಹಳ ಕೆಟ್ಟುಹೋಗಿತ್ತು. ಗಾಂಧೀಜಿ ಹೇಳಿದರು: “ನೀವು ನೇಚರ್ ಕ್ಯೂರ್ ಅಥವಾ ಪ್ರಕೃತಿ ಚಿಕಿತ್ಸೆಯನ್ನು ಆರಂಭಿಸಿ. ನಮ್ಮ ದೇಹಸ್ಥಿತಿ ಸುಧಾರಿಸುವುದು”. ಅದರಂತೆ ಪುನಾದ ಡಾ.ದಿನ್‌ಷಾ ಮೆಹತಾರವರ ಪ್ರಕೃತಿ ಚಿಕಿತ್ಸಾಲಯದಲ್ಲಿ ಅವರನ್ನಿಟ್ಟು ತಾವೂ ಅವರ ಜತೆಯಲ್ಲಿದ್ದರು. ಆಗಸ್ಟ್‌ತಿಂಗಳಿಂದ ಮೂರು ತಿಂಗಳಕಾಲ ಅಲ್ಲಿದ್ದರು. ಆನಂತರ ಸೇವಾಗ್ರಾಮಕ್ಕೆ ಹೋದರು. ಪೂನಾಬಳಿ ಇರುವ ಉರುಲಿಕಾಂಚನ್ ಎಂಬ ಊರಿನಲ್ಲಿ ಗ್ರಾಮಸ್ಥರಿಗೆ ಪ್ರಕೃತಿ ಚಿಕಿತ್ಸೆಯನ್ನು ನಡೆಸಿದರು. ಇಲ್ಲಿಯೇ ೧೯೪೬ನೇ ಮಾರ್ಚ್ ಅಖೈರ್ ವರೆಗೂ ಇದ್ದರು.

೧೯೪೫ನೇ ಏಪ್ರಿಲ್ ಆಖಯರ್ ಹೊತ್ತಿಗೆ ಯುದ್ಧದಲ್ಲಿ ಮಿತ್ರ ಪಕ್ಷದವರಿಗೆ ಜಯ ಸನ್ನಿಹಿತವಾಯಿತು. ಮೇ ೧ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಬಂತು. ಮೇ ೨ನೇ ತಾರೀಖಿನಲ್ಲಿ ಜರ್ಮನ್ ಸೈನ್ಯಗಳು ಇಟಲಿಯಲ್ಲಿ ಶರಣಾಗತವಾದವು. ಅದೇ ದಿವಸ ಸ್ಟಾಲಿನ್‌ರು ಬರ್ಲಿನ್ ನಗರವನ್ನು ಹಿಡಿದರು. ಮೇ ೭ನೇ ತಾರೀಖು ಜರ್ಮನಿ ಬೇಷರತ್ ಆಗಿ ಶರಣಾಗತವಾಯಿತು. ಇನ್ನು ಉಳಿದದ್ದು ಜಪಾನಿನ ಸೋಲು. ಆಗಸ್ಟ್ ತಿಂಗಳಲ್ಲಿ ಹಿರೋಷಿಮ ಮತ್ತು ನಾಗಸಾಕಿಯ ಮೇಲೆ ಅಮೆರಿಕಾ ಆಟಂ ಬಾಂಬು ಹಾಕಿದ ಮೇಲೆ, ಜಪಾನೂ ಶರಣಾಗತವಾಯಿತು. ಹೀಗೆ ಯುದ್ಧವು ಮಿತ್ರ ರಾಷ್ಟ್ರಗಳ ಜಯಭೇರಿಯಿಂದ ಪರ್ಯವಸಾನವಾಯಿತು.

ಇಂಗ್ಲೆಂಡಿನಲ್ಲಿ ೧೯೪೫ನೇ ಜುಲೈನಲ್ಲಿ ಯುದ್ಧಾನಂತರದ ಮಹಾಚುನಾವಣೆಗಳು ನಡೆದು, ಲೇಬರ್ ಪಾರ್ಟಿ ಅತ್ಯಧಿಕ ಸಂಖ್ಯೆಯಲ್ಲಿ ಜಯ ಹೊಂದಿತು. ಕನ್‌ಸರ್ವೆಟಿವ್ ಪಂಗಡ ಪದಭ್ರಷ್ಟತೆ ಹೊಂದಿತು. ಚರ್ಚಿಲರು ಪ್ರಧಾನ ಮಂತ್ರಿ ಪದವಿಯಿಂದ ನಿವೃತ್ತರಾದರು. ಲೇಬರ್ ಪಾರ್ಟಿಯ ಮೇಜರ್ ಆಟ್ಲಿ ಪ್ರಧಾನ ಸಚಿವರಾದರು. ಲಾರ್ಡ್ ಪೆಥಿಕ್ – ಲಾರೆನ್ಸ್ ಇಂಡಿಯಾ ಸೆಕ್ರೆಟರಿ ಆಫ್ ಸ್ಟೇಟರಾದರು. ಲೇಬರ್ ಪಂಡಗ ಅಧಿಕಾರಕ್ಕೆ ಬಂದದ್ದರಿಂದ ಭಾರತ ರಾಜಕೀಯದಲ್ಲಿ ಹೊಸ ಗಾಳಿ ಬೀಸಲಾರಂಭಿಸಿತು.

ಲಾರ್ಡ್ ಪೆಥಿಕ್ – ಲಾರೆನ್ಸ್‌ರು ಗಾಂಧೀಜಿಗೆ ೪೦ ವರ್ಷದ ಸ್ನೇಹಿತರು. ಅವರು ಅಧಿಕಾರಕ್ಕೆ ಬಂದ ಕೂಡಲೆ ಅವರನ್ನು ಅಭಿವಂದಿಸಿ “ನಿಮ್ಮ ಕಾಲದಲ್ಲಿಯೇ ಇಂಗ್ಲೆಂಡಿನ ಇಂಡಿಯಾ ಕಚೇರಿ ಆಳವಾಗಿ ಹೂಳಲ್ಪಡಲಿ” ಎಂದು ಬರೆದರು. ಪೆಥಿಕ್ – ಲಾರೆನ್ಸ್ ಗಾಂಧೀಜಿಗೆ ಉತ್ತರ ಬರೆಯುತ್ತಾ “ನಮ್ಮಿಬ್ಬರ ಮೈತ್ರಿಯಿಂದ ಇಂಡಿಯಾ ಮತ್ತು ಅದರ ಜನತೆಗೆ ಶಾಶ್ವತವಾದ ಕಲ್ಯಾಣವಾಗಲಿ” ಎಂದು ಆಶೀಸಿದರು.

ಆಗಸ್ಟ್ ಕಡೆಯ ವಾರದಲ್ಲಿ ಹೊಸ ಲೇಬರ್ ಸರ್ಕಾರ ವೈಸ್‌ರಾಯ್ ವೇವಲ್ಲರನ್ನು ಲಂಡನ್ನಿಗೆ ಬರಹೇಳಿ, ಇಂಡಿಯಾದ ರಾಜಕೀಯ ಪರಿಸ್ಥಿತಿಯನ್ನು ಆದ್ಯಂತವಾಗಿ ಪರಿಶೀಲಿಸಿತು. ಕೇಂದ್ರ ಮತ್ತು ಪ್ರಾಂತ ಶಾಸನ ಸಭೆಗಳಿಗೆ ಆದಷ್ಟು ಬೇಗ ಚುನಾವಣೆ ನಡೆಸಬೇಕೆಂದು ವೈಸರಾಯರಿಗೆ ಬ್ರಿಟಿಷ್ ಸರ್ಕಾರ ತಿಳಿಸಿತು. ಯೂರೋಪಿನಲ್ಲಿ ಯುದ್ಧವಾರಂಭವಾದಾಗಿನಿಂದ ಇಂಡಿಯಾದಲ್ಲಿ ಚುನಾವಣೆಗಳನ್ನು ನಡೆಸಿರಲಿಲ್ಲ. ವೈಸರಾಯರು ಇಂಡಿಯಾಕ್ಕೆ ಹಿಂತಿರುಗಿದ ಒಡನೆಯೇ, ಸೆಪ್ಟೆಂಬರ್ ೧೯ರಲ್ಲಿ ಲೇಬರ್ ಸರ್ಕಾರದ ಅಪ್ಪಣೆಯಂತೆ, ಒಂದು ಪ್ರಕಟಣೆ ಹೊರಡಿಸಿದರು: ಕೇಂದ್ರದಲ್ಲಿಯೂ ಪ್ರಾಂತಗಳಲ್ಲಿಯೂ ಚುನಾವಣೆ ಆದಷ್ಟು ಬೇಗ ನಡೆಬೇಕು; ಚುನಾವಣೆಯಾದ ಕೂಡಲೆ ಪ್ರಾಂತಗಳಲ್ಲಿ ಮಂತ್ರಿ ಮಂಡಲಗಳನ್ನು ರಚಿಸಬೇಕು; ರಾಜ್ಯಾಂಗ ರಚನಾ ಸಭೆಯನ್ನು ಆದಷ್ಟು ಬೇಗ ಸೇರಿಸಬೇಕು; ಮತ್ತು ಭಾರತದ ನಾನಾ ರಾಜಕೀಯ ಪಾರ್ಟಿಗಳನ್ನೊಳಗೊಂಡ ಕೇಂದ್ರ ಮಂತ್ರಿ ಮಂಡಲವನ್ನು ರಚಿಸಬೇಕು.

ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸೆಪ್ಟೆಂಬರ್ ೧೪ರಲ್ಲಿ ಪುನಾದಲ್ಲಿ ಕಲೆತು ಕೇಂದ್ರ ಮತ್ತು ಪ್ರಾಂತಗಳ ಚುನಾವಣೆಗಳಲ್ಲಿ ಭಾಗವಹಿಸತಕ್ಕದೆಂದು ಅಧ್ಯಕ್ಷ ಆಜಾದ್ ವೈಸರಾಯರಿಗೆ ತಂತಿ ಕಳುಹಿಸಿದರು. ಅದರಂತೆ ವೈಸರಾಯರು ಎಲ್ಲಾ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಿದರು. ಕೇಂದ್ರಕ್ಕೆ ಚುನಾವಣೆಗಳು ನಡೆದವು. ೧೯೪೬ರಲ್ಲಿ ಪ್ರಾಂತಗಳಲ್ಲೂ ಚುನಾವಣೆ ನಡೆಯಿತು. ಜವಹರಲಾಲ್ ನೆಹರು ಕಾಂಗ್ರೆಸಿಗೆ ಜಯವಾಗಲು ದೇಶವನ್ನೆಲ್ಲಾ ಸುತ್ತಿದರು. ಕಾಂಗ್ರೆಸಿಗೆ ಭಾರೀ ಜಯವಾಯಿತು. ಕೇಂದ್ರ ಅಸೆಂಬ್ಲಿಯ ೧೦೨ ಸ್ಥಾನಗಳಲ್ಲಿ ಕಾಂಗ್ರೆಸಿಗೆ ೫೭ ಸ್ಥಾನಗಳೂ, ಮುಸ್ಲಿಂ ಲೀಗಿಗೆ ೪೦ ಸ್ಥಾನಗಳೂ ದೊರೆತವು. ಪ್ರಾಂತ ಚುನಾವಣೆಗಳಲ್ಲಿಯೂ ಕಾಂಗ್ರೆಸಿಗೂ ಬಹು ಸ್ಥಾನಗಳು ದೊರೆತವು. ವಾಯುವ್ಯ ಸರಹದ್ ಪ್ರಾಂತದಲ್ಲಿ ಕಾಂಗ್ರೆಸು ಎಲ್ಲಾ ಜನರಲ್ ಸ್ಥಾನಗಳಲ್ಲಿ ಮತ್ತು ಮುಸ್ಲಿಮರಿಗಾಗಿ ಕಾದಿಡಲ್ಪಟ್ಟಿದ್ದ ಸ್ಥಾನಗಳನ್ನೂ ಬಹುಸ್ಥಾನಗಳನ್ನೂ ಪಡೆಯಿತು. ಪಂಜಾಬಿನಲ್ಲಿ ಮುಸ್ಲೀಂ ಲೀಗು ೭೯ ಸ್ಥಾನಗಳನ್ನು ಪಡೆದಾಗ್ಯೂ, ಅದಕ್ಕೆ ಬಹುಮತ ದೊರೆಯಲಿಲ್ಲ.

ಕಾಂಗ್ರೆಸು ಎಂಟು ಪ್ರಾಂತಗಳಲ್ಲಿ ಮಂತ್ರಿ ಮಂಡಲ ಸ್ಥಾಪಿಸಿತು. ಬಂಗಾಳ, ಪಂಜಾಬ್ ಮತ್ತು ಸಿಂಧ್‌ನಲ್ಲಿ ಕಾಂಗ್ರೆಸು ಅಲ್ಪ ಸಂಖ್ಯೆಯಲ್ಲಿತ್ತು. ಆದರೆ ಈ ಮೂರು ಪ್ರಾಂತಗಳಲ್ಲಿಯೂ ಮುಸ್ಲಿಂ ಲೀಗ್ ಮಂತ್ರಿಮಂಡಲ ಇರಲಿಲ್ಲ.

ಗಾಂಧೀಜಿ ಏತನ್ಮಧ್ಯೆ ಕಲ್ಕತ್ತಾಕ್ಕೆ ಪ್ರಯಾಣ ಮಾಡಿದರು. ಅಲ್ಲಿ ಬಂಗಾಳಾಗೌರ್ನರ್ ಕೇಸಿಯವರನ್ನು ಭೇಟಿ ಮಾಡಿದರು. ಶಾಂತಿನಿಕೇತನಕ್ಕೂ ಭೇಟಿ ಮಾಡಿ. ಅದರ ರಕ್ಷಣೆಗಾಗಿ ನಿಧಿ ಸಂಗ್ರಹ ಮಾಡಿದರು. ಮಿಡ್ನಾಪುರ ಜಿಲ್ಲೆಯಲ್ಲಿಯೂ ಸಂಚರಿಸಿದರು. ಅಲ್ಲಿಂದ ಹಿಂತಿರುಗಿದ ಮೇಲೆ, ಅಸ್ಸಾಂನಲ್ಲಿ ಏಳು ದಿನ ಸಂಚರಿಸಿದರು. ಅಲ್ಲಿಂದ ಮದ್ರಾಸಿಗೆ ಬಂದು, ದಕ್ಷಿಣ ಭಾರತ ಹಿಂದೂಸ್ತಾನಿ ಪ್ರಚಾರ ಸಂಸ್ಥೆಯ ರಜತೋತ್ಸವದಲ್ಲಿ ಅಧ್ಯಕ್ಷತೆ ವಹಿಸಿದರು. ಬಂಗಾಳ ಅಸ್ಸಾಂ ಮತ್ತು ದಕ್ಷಿಣ ಭಾರತದ ಸಂಚಾರದಲ್ಲಿ ಸಂಧ್ಯಾಕಾಲದ ಪ್ರಾರ್ಥನೆಯ ಸಮಯದಲ್ಲಿ ರಾಮಧುನ್ ಪ್ರಚಾರ ಮಾಡಿದರು. ರಾಮಧುನ್ ಎಂದರೆ ರಾಮನಾಮವನ್ನು ಭಜನೆ ಮಾಡುವಾಗ, ಕೈತಾಳ ಹೊಡೆಯುವುದು. ಜನರಲ್ಲಿ ಭಕ್ತಿಭಾವವನ್ನು ತುಂಬುವುದೇ ಇದರ ಉದ್ದೇಶ ರೈಲಿನಲ್ಲಿ ಸಂಚಾರ ಮಾಡುವಾಗ ಪ್ರತಿ ಸ್ಟೇಷನ್ನಿನಲ್ಲಿಯೂ ಕೈನೀಡಿ ಪುಡಿಕಾಸುಗಳನ್ನು ಹರಿಜನ ನಿಧಿಗಾಗಿ ವಸೂಲು ಮಾಡುತ್ತಿದ್ದರು. ಇದೇ ಕಾಲದಲ್ಲಿ ದಕ್ಷಿಣದಲ್ಲಿ ಮಧುರೆ, ಪಳನಿ ಮುಂತಾದ ಯಾತ್ರಾ ಪ್ರದೇಶಗಳನ್ನು ಭೇಟಿ ಮಾಡಿ, ಅಲ್ಲಿನ ದೇವಾಲಯಗಳಲ್ಲಿ ಹರಿಜನ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟರು.

ಮದ್ರಾಸಿನಲ್ಲಿದ್ದಾಗ, ಗಾಂಧೀಜಿ ೧೯೪೨ರಲ್ಲಿ ನಿಂತು ಹೋಗಿದ್ದ “ಹರಿಜನ” ಪತ್ರಿಕೆಯನ್ನು ಹೊರಡಿಸಲು ನಿರ್ಧರಿಸಿದರು.

ಗಾಂಧೀಜಿ ತಮ್ಮ ಸಂಚಾರವನ್ನೆಲ್ಲಾ ಮುಗಿಸಿಕೊಂಡು ಪುನಃ ಉರುಲಿ ಕಾಂಚನ್‌ಗೆ ಬಂದರು. ೧೯೪೬ನೇ ಮಾರ್ಚ್ ಮತ್ತು ಏಪ್ರಿಲಿನಲ್ಲಿ ಒಂದು ಪಾರ್ಲಿಮೆಂಟರಿ ಆಯೋಗ ಬ್ರಿಟಿಷ್ ಮಂತ್ರಿ ಮಂಡಲದ ಪ್ರೇರಣೆ ಯಂತೆ ಭಾರತವನ್ನೆಲ್ಲಾ ಸಂಚರಿಸಿ, ಇಲ್ಲಿನ ಪಾರ್ಟಿಗಳ ಮುಖಂಡರನ್ನೆಲ್ಲಾ ಭೇಟಿ ಮಾಡಿ, ಮಾತುಕತೆ ನಡೆಸಿತು. ಗಾಂಧೀಜಿಯನ್ನು ಮತ್ತು ಜಿನ್ಹಾರನ್ನು ಭೇಟಿ ಮಾಡಿ, ವಿಷಯಗಳನ್ನೆಲ್ಲಾ ತಿಳಿದುಕೊಂಡಿತು. ಇಂಡಿಯಾದಲ್ಲಿ ಎಲ್ಲೆಲ್ಲಿಯೂ ಬಹಳ ಕಹಿಭಾವನೆ ಉಂಟಾಗಿದೆ ಎಂಬುದು ಆಯೋಗಕ್ಕೆ ತಿಳಿಯಿತು. ಆಯೋಗ ಇಂಗ್ಲೆಂಡಿಗೆ ಹಿಂತಿರುಗಿ, ಎಲ್ಲವನ್ನೂ ಬ್ರಿಟಿಷ್‌ಮಂತ್ರಿ ಮಂಡಲಕ್ಕೆ ತಿಳಿಸಿತು. ಇಂಡಿಯಾದಲ್ಲಿ ಬರೀ ಮಾತು, ವಿಚಾರಣೆ, ಯಾವ ಕಾರ್ಯವೂ ನಡೆದಿಲ್ಲ ಎಂದು ವರದಿ ಮಾಡಿತು.

ಚುನಾವಣೆಯಾಗಿ ಪ್ರಾಂತಗಳಲ್ಲಿ ಮಂತ್ರಿಮಂಡಲಗಳೇನೋ ರಚಿತವಾದುವು. ಆದರೆ ದೇಶದಲ್ಲಿ ಅಸಮಾಧಾನ ಹೆಚ್ಚುತ್ತಲೇ ಬಂದಿತು. ಪ್ರತಿಯೊಂದು ಕೋಮೂ ತನ್ನ ತನ್ನ ಹಿತ ರಕ್ಷಣೆಯಲ್ಲಿ ತೊಡಗಿತು. ಜಿನ್ಹಾರ ಆಧಿಪತ್ಯದಲ್ಲಿ ಮುಸ್ಲಿಂ ಲೀಗು ಗಲಾಟೆ ಮಾಡುತ್ತಲೇ ಇತ್ತು. ಪಂಜಾಬಿನಲ್ಲಿ ಸಿಖ್ ಜನಾಂಗ ತನ್ನ ಭವಿಷ್ಯದ ಬಗ್ಗೆ ಸಾಮೂಹಿಕವಾಗಿ ಯೋಜನೆ ಮಾಡತೊಡಗಿತು. ಪಂಜಾಬು ಪಾಕಿಸ್ತಾನಕ್ಕೆ ಸೇರಿದರೆ ತಮ್ಮ ಗತಿಯೇನು ಎಂದು ಸಿಖ್ ಮುಖಂಡರು ಆಲೋಚನೆ ಮಾಡತೊಡಗಿದರು.

೧೯೪೬ನೇ ಫೆಬ್ರವರಿ ೧೯ರಲ್ಲಿ ಬ್ರಿಟಿಷ್ ಸರ್ಕಾರ ಒಂದು ಪ್ರಕಟಣೆ ಹೊರಡಿಸಿತು: “ಮೂರು ಕ್ಯಾಬಿನೆಟ್ ಮಂತ್ರಿಗಳ ಒಂದು ಆಯೋಗ ಇಂಡಿಯಾಕ್ಕೆ ಶೀಘ್ರದಲ್ಲಿಯೇ ಹೊರಡುವುದು. ಅದು ವೈಸರಾಯರೊಡನೆ ಕಲೆತು ಭಾರತ ರಾಜ್ಯಾಂಗ ರಚನೆಯನ್ನು ನಿರ್ಮಿಸುವ ವಿಷಯವಾಗಿ ಭಾರತದ ರಾಜಕೀಯ ಮುಖಂಡರೊಡನೆ ಚರ್ಚೆ ನಡೆಸುವುದು”.

ಇದೇ ವಿಷಯವನ್ನು ಅದೇ ದಿವಸ ಇಂಗ್ಲೆಂಡಿನ ಕಾಮನ್ಸ್ ಸಭೆಯಲ್ಲಿ ಪ್ರಧಾನ ಮಂತ್ರಿ ಆಟ್ಲಿ ಚರ್ಚಿಸುತ್ತಾ, ಈ ಕೆಳಗಿನ ವಾಕ್ಯಗಳನ್ನು ನುಡಿದರು; “ತನ್ನ ಭವಿಷ್ಯ ರಾಜ್ಯಾಂಗ ಏನಿರಬೇಕೆಂಬುದನ್ನು ಭಾರತವೇ ನಿರ್ಣಯಿಸಿ ಕೊಳ್ಳಬೇಕು. ಭಾರತದ ಪ್ರಜೆಗಳು ಬ್ರಿಟಿಷ್ ಕಾಮನ್‌ವೆಲ್ತ್‌ನಲ್ಲಿಯೇ ಇರಬಹುದು. ಇದ್ದರೆ ಅನೇಕ ಪ್ರಯೋಜನಗಳಿವೆ. ಹಾಗೆ ಇದ್ದರೆ ಅವರ ಸ್ವಂತ ಇಚ್ಛೆಯಿಂದಲೇ. ಹೊರಗಿನಿಂದ ಯಾವ ಬಲಾತ್ಕಾರವೂ ಇಲ್ಲ. ಅಥವಾ ಅದು ಕಾಮನ್‌ವೆಲ್ತ್‌ನ ಹೊರಗೇ ಇರಲು ಇಚ್ಛೆ ಪಟ್ಟರೆ ಅದಕ್ಕೆ ಹಾಗೆ ಇರಲು ಸ್ವಾತಂತ್ರ್ಯವಿದೆ. ಇಂಡಿಯಾ ಎಂದು ಹೇಳುವಾಗ, ಅದರ ನಾನಾ ಬುಡಕಟ್ಟಿನ ಜನರು, ಮತಗಳು ಮತ್ತು ಭಾಷೆಗಳನ್ನು ಮನಸ್ಸಿನಲ್ಲಿಟ್ಟು ಕೊಂಡಿದ್ದೇನೆ. ನಾವು ಅಲ್ಪ ಸಂಖ್ಯಾತರ ಹಿತಾ ಸಕ್ತಿಯಿಂದ ಕೂಡಿದ್ದೇವೆ. ಅವರು ಯಾವ ಹೆದರಿಕೆಯೂ ಇಲ್ಲದೆ, ಭಾರತದಲ್ಲಿ ಇರುವ ಹಾಗಿರಬೇಕು. ಆದರೆ ಯಾವ ಮೈನಾರಿಟಿಯೇ ಆಗಲಿ ಬಹುಮತ ಪ್ರಗತಿಯನ್ನು ತಡೆಯುವ ಶಕ್ತಿಯನ್ನು ಹೊಂದಿರುವ ಹಾಗಿಲ್ಲ. ದೇಶೀಯ ರಾಜರುಗಳು ಇಂಡಿಯಾದ ಪ್ರಗತಿಗೆ ಅಡಚಣೆಯಾಗಲಾರರು ಎಂದು ನಂಬಿದ್ದೇನೆ.”

ಪಾರ್ಲಿಮೆಂಟಿನ ಎಲ್ಲಾ ಪಾರ್ಟಿಯವರೂ ಪ್ರಧಾನ ಮಂತ್ರಿಗಳ ಸಲಹೆಗೆ ಬೆಂಬಲವಿತ್ತರು. ಇಂಗ್ಲೆಂಡಿನ ಪ್ರಧಾನ ಮಂತ್ರಿಗಳ ಈ ಪ್ರಕಟಣೆ ದೇಶದಲ್ಲಿ ಬಹಳ ಕುತೂಹಲ ಉಂಟು ಮಾಡಿತು.ಕೆಲವು ವಿಚಾರ ಶೀಲರು ‘ಇಂಥ ವಾಗ್ಧಾನಗಳನ್ನು ಎಷ್ಟೋ ಸಲ ಬ್ರಿಟನ್ನು ಮಾಡಿದೆ. ಆಮೇಲೆ ಅದನ್ನು ಮುರಿದೂ ಇದೆ’ ಎಂದು ಸಂದೇಹ ಪಡುತ್ತಿದ್ದರು. ಗಾಂಧೀಜಿ ಮಾತ್ರ ಬೇರೆ ಅಭಿಪ್ರಾಯ ಹೊಂದಿದ್ದರು. ಒಂದು ಪ್ರಾರ್ಥನಾ ಸಭೆಯಲ್ಲಿ ಗಾಂಧೀಜಿ ಅಂದರು: “ಬ್ರಿಟಿಷ್ ಆಯೋಗ ಶೀಘ್ರದಲ್ಲಿಯೇ ನಮ್ಮ ದೇಶಕ್ಕೆ ಬರುವುದು. ಮುಂಚೆಯೇ ಅವರಲ್ಲಿ ಅಪನಂಬಿಕೆ ತೋರಿಸುವುದು ಮನೋ ದೌರ್ಬಲ್ಯ. ಧೈರ್ಯಶಾಲಿಗಳಾದ ಜನರಂತೆ ನಾವು ಅವರು ತಮ್ಮ ಮಾತಿನಂತೆ ನಡೆಯುತ್ತಾರೆ ಎಂಬ ನಂಬಿಕೆಯಿಂದ ಅವರೊಡನೆ ವರ್ತಿಸಬೇಕು”.

ಬ್ರಿಟನ್ನಿನ ಮೂರು ಮಂತ್ರಿಗಳು ಇಂಡಿಯಾಕ್ಕೆ ಹೊರಟರು. ಅವರುಗಳು ಲಾರ್ಡ್ ಪೆಥಿಕ್ – ಲಾರೆನ್ಸ್, ಸರ್ ಸ್ವಾಫರ್ಡ್ ಕ್ರಿಪ್ಸ್ ಮತ್ತು ಆಲ್ ಬರ್ಟ್ ಅಲೆಗ್ಸಾಂಡರ್. ಫೆಥಿಕ್ – ಲಾರೆನ್ಸ್ ೧೯೨೬ – ೨೭ರಲ್ಲಿ ಇಂಡಿಯಾಕ್ಕೆ ಬಂದಿದ್ದು ಗೌಹತಿ ಕಾಂಗ್ರೆಸ್ ಮಹಾಧಿವೇಶನವನ್ನು ಸಂದರ್ಶಿಸಿದ್ದರು. ೧೯೩೧ರಲ್ಲಿ ರೌಂಡ್ ಟೇಬಲ್ ಸಮ್ಮೇಳನಕ್ಕೆ ಹೋಗಿದ್ದಾಗ, ಗಾಂಧೀಜಿಯವರು ಪೆಥಿಕ್ ಲಾರೆನ್ಸ್‌ರನ್ನು ಕಂಡಿದ್ದರು. ಪೆಥಿಕ್ – ಲಾರೆನ್ಸ್ ಇಂಡಿಯಾಕ್ಕೆ ಸ್ವರಾಜ್ಯ ದೊರೆಯಬೇಕೆಂಬ ಆಶಯವುಳ್ಳವರು. ಸರ್ ಸ್ವಾಫರ್ಡ್ ಕ್ರಿಪ್ಸರು ೧೯೪೨ರಲ್ಲಿ ಇಂಡಿಯಾಕ್ಕೆ ಬಂದು ಕ್ರಿಪ್ಸ್ ಸಲಹೆಗಳನ್ನು ತಂದವರು. ಅಲೆಗ್ಸಾಂಡರ್ ಮಾತ್ರ ಇಂಡಿಯಾಕ್ಕೆ ಹೊಸಬರು. ಆದರೂ, ಅವರು ಉದಾರ ಬುದ್ಧಿಯುಳ್ಳವರು.

ಕ್ಯಾಬಿನೆಟ್ ಮಿಷನ್ ೧೯೪೬ನೇ ಮಾರ್ಚ್ ೨೪ರಂದು ಹೊಸದೆಹಲಿಗೆ ಆಗಮಿಸಿತು. ತಡಮಾಡದೆ ಭಾರತದ ರಾಜಕೀಯ ಪ್ರಭೃತಿಗಳೊಡನೆ ಮಾತುಕತೆಯನ್ನು ಆರಂಭಿಸಿತು. ಆಯೋಗದವರು ಏಪ್ರಿಲ್ ಮೊದಲನೇ ತಾರೀಖಿನಿಂದ ಏಪ್ರಿಲ್‌೧೭ರವರಿಗೂ ಭಾರತದ ನಾನಾ ಪಾರ್ಟಿಗಳ ಅಭಿಪ್ರಾಯಗಳನ್ನು ತಿಳಿದುಕೊಂಡರು. ೧೮೨ ಬೈಠಕ್‌ಗಳಾದವು. ೪೭೨ಮುಖಂಡರುಗಳಿಗೆ ಭೇಟಿ ಕೊಟ್ಟು, ಅವರೊಡನೆ ಚರ್ಚಿಸಿ, ಅಭಿಪ್ರಾಯಗಳನ್ನು ಸಂಗ್ರಹಿಸಿದರು. ಆಮೇಲೆ ಒಂದು ವಾರ ಕಾಶ್ಮೀರಕ್ಕೆ ತೆರಳಿ ಅಲ್ಲಿ ವಿಶ್ರಾಂತಿ ಅನುಭವಿಸಿದರು. ಏಪ್ರಿಲ್ ೨೪ರಲ್ಲಿ ದೆಹಲಿಗೆ ವಾಪಾಸಾಗಿ, ತಮ್ಮ ಕೆಲಸಗಳನ್ನು ಮುಂದರಿಸಿದರು.

ಈ ಮಧ್ಯೆ, ಪೆಥಿಕ್ – ಲಾರೆನ್ಸ್‌ರು ಕಾಂಗ್ರೆಸ್ ಅಧ್ಯಕ್ಷರಿಗೂ ಮುಸ್ಲಿಂ ಲೀಗ್ ಅಧ್ಯಕ್ಷರಿಗೂ ಒಂದು ಪತ್ರ ಬರೆದು, ಉಭಯ ಪಾರ್ಟಿಗಗಳೂ ಕಲೆತು ಮಾತನಾಡಿ ಒಂದು ಒಪ್ಪಂದಕ್ಕೆ ಬರಬೇಕೆಂದು ತಿಳಿಸಿದರು. ಗಾಂಧೀಜಿ ಕ್ಯಾಬಿನೆಟ್ ಮಿಷನ್ನಿನ ಆಹ್ವಾನದ ಮೇಲೆ ಉರುಲಿಕಾಂಚನದಿಂದ ಸ್ಪೆಷಲ್ ರೈಲಿನಲ್ಲಿ ಡೆಲ್ಲಿಗೆ ಬಂದರು ಮತ್ತು ಭಂಗಿ ಕಾಲನಿಯಲ್ಲಿ ನಿವಾಸ ಮಾಡಿ ಕೊಂಡರು. ಇಷ್ಟರಲ್ಲಿ ಕಾಂಗ್ರೆಸ್ ಅಧ್ಯಕ್ಷ, ಡಾ. ಅಂಬೇಡ್ಕರ್, ದೇಶೀಯ ರಾಜರುಗಳ ಪರವಾಗಿ ಭೋಪಾಲಿನ ನವಾಬ್, ಶಾಸನ ಸಭೆಗಳ ವಿರೋಧ ಪಕ್ಷಗಳ ಮುಖಂಡರು, ಇವರಗಳ ಸಂಗಡ ಕ್ಯಾಬೆನೆಟ್ ಮಿಷನ್‌‌ನವರು ಮಾತನಾಡಿ ಮುಗಿಸಿದ್ದರು. ಏಪ್ರಿಲ್ ೨೮ರಲ್ಲಿ ಗಾಂಧೀಜಿ ಕ್ಯಾಬೆನೆಟ್ ಮಿಷನ್ನನ್ನು ಭೇಟಿ ಮಾಡಿದರು. ಅಫಿಷಿಯಲ್ ಮಾತುಕತೆಗಳಲ್ಲದೆ, ಖಾಸಗಿಯಾಗಿ ಕೂಡ ಗಾಂಧೀಜಿ ಅವರೊಡನೆ ಮಾತನಾಡಿದರು, ಗಾಂಧೀಜಿಯೊಡನೆ ಸಾಯಂಕಾಲ  ವಾಕಿಂಗ್ ಹೊರಡು ಲಾರ್ಡ್ ಪೆಥಿಕ್ – ಲಾರೆನ್ಸರು ಸಂಭಾಷಣೆ ನಡೆಸಿದರು.

ಇದುವರೆಗೂ ಮಾತನಾಡಿದ್ದರಲ್ಲಿ, ಕ್ಯಾಬಿನೆಟ್ ಮಿಷನ್ನಿನ ಸದಸ್ಯರಿಗೆ ತಿಳಿದು ಬಂದಿದ್ದೇನೆಂದರೆ:

“ಇಂಡಿಯಾವನ್ನು ಎರಡು ಬೇರೆ ರಾಜ್ಯಗಳನ್ನಾಗಿ ಮಾಡಲು ಕಾಂಗ್ರೆಸು ಇಷ್ಟ ಪಡಲಿಲ್ಲ. ಕೇಂದ್ರದಲ್ಲಿ ಸರ್ಕಾರ ಫೆಡರಲ್ ಸ್ವರೂಪದ್ದಾಗಿರಲು ಕಾಂಗ್ರೆಸ್ ಒಪ್ಪಿಕೊಂಡಿದೆ. ಪ್ರಾಂತಗಳಿಗೆ ಸ್ವಾಯತ್ತತೆ ವಿಶಾಲವಾಗಿರಬೇಕೆಂಬುದು ಅದರ ಅಭಿಪ್ರಾಯ. ಅದರ ಅಭಿಪ್ರಾಯದಲ್ಲಿ, ಫೆಡರಲ್ ಸರ್ಕಾರಕ್ಕೆ ಅತ್ಯಗತ್ಯವಾಗಿ ದೇಶ ಸಂರಕ್ಷಣೆ, ವಿದೇಶ ಸಂಬಂಧಗಳು ಮತ್ತು ಸಂಪರ್ಕ ಮಾರ್ಗಗಳು ಪೂರ್ಣ ಜವಾಬ್ದಾರಿ ಇರತಕ್ಕದ್ದು. ಈ ಆಡಳಿತ ವಿಷಯಗಳ ಮೇಲಿನ ಅಧಿಕಾರವನ್ನು ಪ್ರಾಂತ ಸರ್ಕಾರಗಳು ಫೆಡರಲ್ ಸರ್ಕಾರಕ್ಕೆ ಒಪ್ಪಿಸತಕ್ಕದ್ದು. ಉಳಿದ ಶೇಷ ಅಧಿಕಾರಗಳೆಲ್ಲಾ ಪ್ರಾಂತ ಸರ್ಕಾರಗಳಿಗೇ ಇರತಕ್ಕದ್ದು. ಕೆಲವು ಇಚ್ಛಿತ ವಿಷಯಗಳನ್ನು ಕೇಂದ್ರದ ಸಮಾನಾಧಿಕಾರಕ್ಕೆ ಬಿಡತಕ್ಕದ್ದು. ಇವೇ ಮೊದಲಾದ ರಾಜ್ಯಾಂಗ ವಿಷಯಗಳನ್ನು ಭಾರತ ರಾಜ್ಯಾಂಗ ರಚನಾ ಸಭೆಯೇ ನಿರ್ಧರಿಸತಕ್ಕದ್ದು.

“ಮುಸ್ಲಿಂ ಲೀಗಾದರೋ ತನಗೆ ಸ್ವತಂತ್ರ ರಾಜ್ಯಾಧೀಕಾರದ ಪಾಕಿಸ್ಥಾನ ಎಂಬ ಪ್ರತ್ಯೇಕ ಸ್ವತಂತ್ರ ರಾಜ್ಯಬೇಕು ಎನ್ನುತ್ತದೆ. ತತ್ವವನ್ನು ಪ್ರಥಮತಃ ಕ್ಯಾಬಿನೆಟ್ ಮಿಷನ್ ಒಪ್ಪಬೇಕು. ಎರಡು ರಾಜ್ಯಗಳಿಗೂ ಪ್ರತ್ಯೇಕ ರಾಜ್ಯಾಂಗ ರಚನಾ ಸಭೆಗಳಿರತಕ್ಕದ್ದು. ಸ್ವತಂತ್ರವಾದ ಮೇಲೆ ಪಾಕಿಸ್ಥಾನ ಮತ್ತು ಹಿಂದೂಸ್ಥಾನ ಈ ಎರಡು ರಾಜ್ಯಗಳಿಗೂ ಸೌಹಾರ್ದವೇಕಿರಬಾರದು? ಪರಸ್ಪರರಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಉಭಯ ರಾಜ್ಯಗಳೂ ಕೌಲು ಕರಾರುಗಳನ್ನು ಮಾಡಿಕೊಳ್ಳಬಹುದು. ಇದು ಮುಸ್ಲಿಂ ಲೀಗಿನ ಅಭಿಪ್ರಾಯ.”

ಗಾಂಧೀಜಿ ಪ್ರಾರಂಭದಲ್ಲಿಯೇ ಆಯೋಗಕ್ಕೆ ತಿಳಿಸಿದರು. ತಾವು ಹೇಳುವುದು ತಮ್ಮ ಸ್ವಂತ ಅಭಿಪ್ರಾಯ ಕಾಂಗ್ರೆಸ್ ಅಭಿಪ್ರಾಯವಲ್ಲ ಎಂದು. ಅವರು ಒಂದೊಂದಾಗಿ ತಮ್ಮ ಅಭಿಪ್ರಾಯ ತಿಳಿಸಿದರು: ೧ ಯಾವ ತಪ್ಪನ್ನೇ ಮಾಡಿರಲಿ, ರಾಜಕೀಯ ಕೈದಿಗಳನ್ನೆಲ್ಲಾ ಬಿಡುಗಡೆ ಮಾಡತಕ್ಕದ್ದು; ೨ ಉಪ್ಪಿನ ತೆರಿಗೆಯನ್ನು ವಜಾ ಮಾಡತಕ್ಕದ್ದು; ೩ ಇಂಡಿಯಾದಲ್ಲಿ ಎರಡು ಪ್ರತ್ಯೇಕ ರಾಷ್ಟ್ರಗಳಿವೆ ಎಂಬ ಜಿನ್ಹಾರ ಸಿದ್ಧಾಂತವನ್ನು ನಾನು ಒಪ್ಪುವುದಿಲ್ಲ. ಜಿನ್ಹಾ ಈ ಸಿದ್ಧಾಂತದ ಆಸರೆಯ ಮೇಲೆಯೇ ಪಾಕಿಸ್ಥಾನವೆಂಬ ಪ್ರತ್ಯೇಕ ರಾಜ್ಯವನ್ನು ನಿರ್ಮಿಸಬೇಕೆಂದು ಕೇಳುತ್ತಿರುವುದನ್ನು ನಾನು ಒಪ್ಪುವುದಿಲ್ಲ. ಆದರೆ ಎರಡು ಪ್ರತ್ಯೇಕ ಸಂಸ್ಕೃತಿಗಳಿವೆ. ಅವನ್ನು ಬೆಳೆಸಬೇಕು ಎಂಬುದನ್ನು ನಾನು ಒಪ್ಪುತ್ತೇನೆ. ಕ್ಯಾಬಿನೆಟ್ ಮಿಷನ್‌ನ್ನು ಈ ಸಮಸ್ಯೆಯನ್ನು ಮೊದಲು ಬಿಡಿಸಬೇಕು”.

ಗಾಂಧೀಜಿ ಮುಂದರಿದು ಹೇಳಿದರು: “ಹೊಸ ರಾಜ್ಯಾಂಗ ರಚನೆಯಾಗುವುದಕ್ಕೆ ಕಾಲ ಬೇಕೇ ಬೇಕು. ಈ ಮಧ್ಯ ಕಾಲದ ಸರ್ಕಾರವನ್ನು ರಚಿಸಲು ಸರ್ಕಾರ ಜಿನ್ಹಾರನ್ನು ಕರೆಯಲಿ. ಈಗ ಇರುವ ಸರ್ಕಾರದ ಜಾಗದಲ್ಲಿ ಆ ಹೊಸ ಸರ್ಕಾರ ಬರಲಿ. ಜಿನ್ಹಾ ತಮ್ಮ ಸಹೋದ್ಯೋಗಿಗಳನ್ನಾಗಿ ಬೇಕಾದವರನ್ನು ಆರಿಸಿಕೊಳ್ಳಲಿ. ಈ ಮಧ್ಯೆ ಸರ್ಕಾರ ಕೇಂದ್ರ ಶಾಸನ ಸಭೆಗೆ ಜವಾಬ್ದಾರಿಯಾಗಿರಬೇಕು. ಜಿನ್ಹಾ ಈ ರೀತಿಯ ಮಧ್ಯವರ್ತಿ ಸರ್ಕಾರವನ್ನು ರಚಿಸಲು ಒಪ್ಪದಿದ್ದರೆ, ಕಾಂಗ್ರೆಸನ್ನು ಈ ರೀತಿಯ ಮಧ್ಯವರ್ತಿ ಸರ್ಕಾರವನ್ನು ರಚಿಸುವಂತೆ ಕೇಳಬೇಕು”.

ಕ್ಯಾಬಿನೆಟ್ ಮಿಷನ್ನಿನವರು ಪ್ರಾರಂಭದ ಭೇಟಿಗಳೆಲ್ಲಾ ಮುಗಿದ ಮೇಲೆ ಒಂದು ವಾರ ಸಿಮ್ಲಾದಲ್ಲಿದ್ದರು. ಆ ಕಾಲದಲ್ಲಿ ತಮ್ಮ ತಮ್ಮಲ್ಲಿಯೇ ಚರ್ಚೆ ನಡೆಸಿದರು. ಕ್ಯಾಬಿನೆಟ್‌ಮಿಷನ್ನಿನವರು ತಮ್ಮ ಸಲಹೆಗಳು ಯಾವುವು ಎಂಬುದನ್ನು ತಿಳಿಸಿದರು.

೧ ಒಂದು ಯೂನಿಯನ್ ಸರ್ಕಾರ ದೇಶದ ರಕ್ಷಣೆ, ರಸ್ತೆ ಮತ್ತ ಸಾರಿಗೆ ಗಳು ಮತ್ತು ವಿದೇಶಗಳಿಗೆ ಸಂಬಂಧಪಟ್ಟ ವಿಷಯಗಳು ಇವುಗಳ ಮೇಲೆ ಅಧಿಕಾರ ಹೊಂದಿರುವುದು;

೨ ಪ್ರಾಂತಗಳಲ್ಲಿ ಎರಡು ಗುಂಪುಗಳನ್ನು ಮಾಡಲಾಗುವುದು. ಒಂದು ಹಿಂದೂಗಳೇ ಪ್ರಧಾನವಾಗಿರುವ ಪ್ರಾಂತಗಳದು. ಇನ್ನೊಂದು ಮುಸ್ಲಿಮರೇ ಪ್ರಧಾನವಾಗಿರುವ ಪ್ರಾಂತಗಳದು. ಆಯಾಯಾ ಗ್ರೂಪುಗಳು ಆಯಾಯಾ ಪಾಂತಗಳಿಗೆ ಸಮಾನವೆಂದು ನಿರ್ಧರಿಸುವ ವಿಷಯಗಳ ಮೇಲೆ ಅಧಿಕಾರ ಹೊಂದುವುವು;

೩ ಪ್ರಾಂತಗಳು ಉಳಿದ ಎಲ್ಲಾ ಶೇಷಾಧಿಕಾರಗಳನ್ನೂ ಹೊಂದುವುವು’

೪ ದೇಶೀಯ ಸಂಸ್ಥಾನಗಳು ಈ ಸೂಚಿಸಿರುವ ರಚನೆಯಲ್ಲಿ ತಮಗೆ ಯಾವುದು ಬೇಕೋ ಅದರಲ್ಲಿ ಪರಸ್ಪರ ಸಮಾಲೋಚನೆಯ ನಂತರ ಸೇರಿಕೊಳ್ಳುವುವು.

ಈ ಸಲಹೆಗಳನ್ನು ಪರಿಶೀಲಿಸಲು ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ತಂಡಗಳನ್ನು ಸಿಮ್ಲಾಕ್ಕೆ ಆಹ್ವಾನಿಸಲಾಯಿತು. ಈ ಆಹ್ವಾನವನ್ನು ಉಭಯ ಪಾರ್ಟಿಯವರೂ ಒಪ್ಪಿಕೊಂಡರು. ಚರ್ಚೆಗೆ ಒಪ್ಪಿದ ಮಾತ್ರಕ್ಕೆ ಆ ಸಲಹೆಗಳನ್ನು ಕಾಂಗ್ರೆಸ್ ತಂಡವಾಗಲಿ, ಮುಸ್ಲಿಂ ಲೀಗ್ ತಂಡವಾಗಲಿ ಒಪ್ಪಿದಂತೆ ತಿಳಿಯಕೂಡದು ಎಂದು ತಂಡದವರು ತಿಳಿಸಿದರು. ಈ ಪರಸ್ಪರ ಮಾತುಕತೆಗಳು ವೈಸ್‌ರಾಯರ ಭವನದಲ್ಲಿಯೇ ನಡೆದವು.

ಗಾಂಧೀಜಿ ಸಿಮ್ಲಾಕ್ಕೆ ಬಂದರು, ಆದರೆ ಪ್ರತಿನಿಧಿಗಳಾಗಿಯಲ್ಲ. ಆದಾಗ್ಯೂ ಕಾಂಗ್ರೆಸ್ ಪ್ರತಿನಿಧಿಗಳೊಡನೆ ಪ್ರತಿದಿನವೂ ಚರ್ಚೆ ನಡೆಸುತ್ತಿದ್ದರು ಮತ್ತು ಕ್ಯಾಬಿನೆಟ್ ಮಿಷನ್ನಿನವರಡೊನೆ ರಹಸ್ಯವಾಗಿ ಚರ್ಚಿಸುತ್ತಿದ್ದರು. ಈ ಮಾತುಕತೆಗಳು ತೃಪ್ತಿಕರವಾಗಿ ಮುಂದರಿಯುವ ಹಾಗೆ ಕಂಡು ಬಂದಿತು, ಎರಡು ಕಡೆಗೂ ಬಹಳ ಸ್ವಲ್ಪ ಅಂತರ ಇರುವಂತೆ ಕಂಡಿತು. ಗಾಂಧೀಜಿ ಮತ್ತು ಜಿನ್ಹಾ ಪರಸ್ಪರ ಕಲೆತು ಮಾತನಾಡಿ, ಆಖೈರ್ ತೀರ್ಮಾನಕ್ಕೆ ಬರಬೇಕೆಂದು ಸೂಚಿಸಲಾಯಿತು. ದುರ್ದೈವದಿಂದ ಏಕ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ. ಸಮ್ಮೇಳನ ಮುಂದಕ್ಕೆ ಹೋಯಿತು. ಆದರೂ ಉಭಯ ಪಾರ್ಟಿಗಳೂ ಮೈತ್ರಿಯಿಂದಲೇ ಇರಬೇಕೆಂದೂ, ಪುನಃ ಏಕಮತ ಬರಲು ಯತ್ನಿಸಬೇಕೆಂದೂ, ಸಿಮ್ಲಾ ಸಮ್ಮೇಳನದಲ್ಲಿ ನಡೆದ ಮಾತುಕತೆಗಳನ್ನು ಪ್ರಕಟಿಸಬಾರದೆಂದೂ, ಉಭಯ ಪಾರ್ಟಿಯ ಪತ್ರಿಕೆಗಳೂ ಸಮಾಧಾನ ಕರವಾದ ರೀತಿಯಲ್ಲಿ ಬರೆಯಬೇಕೆಂದೂ ನಿರ್ಧಾರವಾಯಿತು. ಕಾನ್‌ಫರೆನ್ಸ್ ನಡೆಯುತ್ತಿದ್ದಾಗಲೇ ಕೇಂದ್ರದಲ್ಲಿ ಮಧ್ಯವರ್ತಿ ಸರ್ಕಾರದ ರಚನೆಯ ಬಗ್ಗೆ ವೈಸ್‌ರಾಯರು ಉಭಯ ಪಾರ್ಟಿಗಳೊಡನೆ ಚರ್ಚೆ ನಡೆಸಿದರು.