ಕೇಂದ್ರದಲ್ಲಿ ನಡುಗಾಲ ಸರ್ಕಾರವನ್ನೇನೋ ಕಾಂಗ್ರೆಸ್ ವಹಿಸಿಕೊಂಡಿತು. ಆದರೆ ಕೆಲವು ಪ್ರಾಂತಗಳಲ್ಲಿ ಹಿಂದೂ – ಮುಸ್ಲಿಂ ವೈಷಮ್ಯ ಸ್ಥಿತಿ ಭಯಂಕರ ರೂಪವನ್ನು ತಾಳಿತು. ಕಲ್ಕತ್ತಾದಲ್ಲಿ ಆಗಸ್ಟ್ ೧೬ರಲ್ಲಿ ಆರಂಭವಾದ ಹತ್ಯಾಕಾಂಡ ಅನೇಕ ದಿವಸಗಳು ನಡೆದು, ೫,೦೦೦ ಜನರು ಸತ್ತರು, ೧೫,೦೦೦ ಜನರು ಗಾಯಗೊಂಡರು. ಇನ್ನೂ ಜಾಸ್ತಿಯೇ ಇರಬಹುದು. ಅದನ್ನು ನಿಲ್ಲಿಸಲು ಸಾಧ್ಯವೇ ಆಗಲಿಲ್ಲ. ವೈಸರಾಯರು ಹೇಳಿದರು “ಇದು ಪ್ರಾಂತಕ್ಕೆ ಸಂಬಂಧಿಸಿದ ವಿಷಯ, ನಾವು ಕೈ ಹಾಕುವುದಿಲ್ಲ” ಎಂದು. ಈ ನೀತಿಯಿಂದ ಬಂಗಾಳದ ಹತ್ಯಾಕಾಂಡಕ್ಕೆ ತಡೆಯಿಲ್ಲದಂತಾಯಿತು. ಅಲ್ಲಿ ಇದ್ದದ್ದು ಮುಸ್ಲಿಂ ಮುಖ್ಯ ಮಂತ್ರಿಗಳ ಸರ್ಕಾರ. ಐದು ವಾರಗಳ ಮೇಲೆ, ಸೆಪ್ಟಂಬರ್ ೨೨ರಲ್ಲಿ, ಸಮಾಧಾನ ಸ್ಥಿತಿ ಬಂದಂತಾಯಿತು.

ಆದರೆ ಹತ್ಯೆಗೆ ಪುನಃ ಆರಂಭವಾಯಿತು ೪೦ ಸಾವುಗಳೂ, ೧೪೦ – ೧೫೦ ಜನರಿಗೆ ಗಾಯಗಳೂ ಆದವು. ಕಠಾರಿಯ ತಿವಿತ, ಲಾಠಿ ಏಟುಗಳು ಕಲ್ಕತ್ತಾದಲ್ಲಿ ಎಲ್ಲೆಲ್ಲೂ ಆಗುತ್ತಿದ್ದವು.

ಬೊಂಬಾಯಿನಲ್ಲಿ ಸೆಪ್ಟಂಬರ್ ೧ರಲ್ಲಿ ಮುಸ್ಲಿಮರು ಗಲಾಟೆಗೆ ಆರಂಭಿಸಿದರು. ಮುಸ್ಲಿಮರು ತಮ್ಮ ಅಂಗಡಿಗಳ ಮೇಲೆ ಕರೀ ಬಾವುಟವನ್ನು ಏರಿಸಿದರು. ೧೪ನೇ ಸೆಪ್ಟಬಂರ್ ವರೆಗೂ ಹೀಗೆಯೇ ಇದ್ದು, ಆಮೇಲೆ ಹತ್ಯೆಗಳಿಗೆ ಆರಂಭವಾಯಿತು. ಒಟ್ಟು ಪ್ರಾಂತದಲ್ಲಿ ೨೮೦ ಜನರು ಸತ್ತರು ಮತ್ತು ೮೦೦ ಜನರಿಗೆ ಗಾಯವಾಯಿತು.

ಪಂಜಾಬಿನಲ್ಲಿ ಆಗಸ್ಟ್‌ನ ಉತ್ತರಾರ್ಧದಲ್ಲಿ ಗಲಾಟೆಗಳು ಉಪಕ್ರಮವಾಗಿ, ಅನೇಕ ಹತ್ಯೆಗಳಾದವು. ಬಂಗಾಳದಲ್ಲಿ ಒಳಪ್ರದೇಶಗಳಿಗೂ ಗಲಭೆ ಹರಡಿ ಢಾಕಾದಲ್ಲಿ ಅಕ್ಟೋಬರ್ ವರೆಗೂ ಗಲಾಟೆ ನಡೆಯುತ್ತಿತ್ತು. ಆಮೇಲೆ ನವಾಖಾಲಿ, ಚಿಟಿಗಾಂಗ್ ಮತ್ತು ಹೌರಾ ಪ್ರದೇಶಗಳಿಗೆ ಗಲಭೆ ವ್ಯಾಪಿಸಿತು. ಸತ್ತವರ ಮತ್ತು ಗಾಯಹೊಂದಿದವರ ಸಂಖ್ಯೆ ಏರುತ್ತ ಬಂದಿತು.

ಹಿಂದೂಗಳು ಕಲ್ಕತ್ತಾದಿಂದಲೂ, ಪೂರ್ವ ಬಂಗಾಳದಿಂದಲೂ ಭೀತಿ ಗ್ರಸ್ತರಾಗಿ ಬಿಹಾರಿಗೆ ಓಡಿಬಂದರು. ಮುಸ್ಲಿಮರ ಅತ್ಯಾಚಾರದ ಕಥೆ ಬಿಹಾರಿನಲ್ಲಿ ಹರಡಿ ಅಲ್ಲಿನ ಹಿಂದೂಗಳು ಅಲ್ಲಿನ ಮುಸ್ಲಿಮರ ಮೇಲೆ ಸೇಡು ತೀರಿಸಿಕೊಳ್ಳಲಾರಂಭಿಸಿದರು. ಬಂಗಾಳದಲ್ಲಿಯೂ ಬಿಹಾರಿನಲ್ಲಿಯೂ ಲೆಕ್ಕವಿಲ್ಲದಷ್ಟು ಹತ್ಯೆಗಳು ನಡೆದವು. ಒಂದು ಕೋಮಿನವರು ಇನ್ನೊಂದು ಕೋಮಿನ ಮೇಲೆ ತಪ್ಪು  ಹಾಕುತ್ತಿದ್ದರು.

ಈ ಸನ್ನಿವೇಶದಲ್ಲಿ ವೈಸರಾಯರು ಮುಸ್ಲಿಂ ಲೀಗನ್ನು ನಡುಗಾಲ ಸರ್ಕಾರಕ್ಕೆ ಸೇರಿಸಲು ಪ್ರೇರೇಪಣೆ ಮಾಡುತ್ತಲೇ ಇದ್ದರು. ಕಡೆಗೆ ಜಿನ್ಹಾ ಮುಸ್ಲಿಂ ಲೀಗ್ ಪ್ರತಿನಿಧಿಗಳನ್ನು ನಡುಗಾಲ ಸರ್ಕಾರದಲ್ಲಿ ಸೇರಿಸಲು ಒಪ್ಪಿಕೊಂಡರು. ಲಿಯಾಕತ್ ಆಲೀ ಖಾನ್, ಅಬ್ದುಲ್ ರಬ್ ನಿಷ್ಟರ್, ಐ.ಐ. ಚುಂಡ್ರೀಗರ್, ಘಸ್ನಾಫರ್ ಆಲೀ ಖಾನ್ ಮತ್ತು ಅಂಬೇಡ್ಕರ್ ಪಾರ್ಟಿಯ ಜೋಗೇಂದ್ರ ನಾಥ ಮಂಡಲ್ ನಡುಗಾಲ ಸರ್ಕಾರ ಸೇರಲು ಜಿನ್ಹಾ ಆರಿಸಿದರು. ಅಕ್ಟೋಬರ್ ೨೬ರಲ್ಲಿ ಮುಸ್ಲಿಂ ಲೀಗ್ ಪಾರ್ಟಿಯವರು ಪ್ರಮಾಣ ಸ್ವೀಕರಿಸಿದರು. ಇವನ್ನು ಸೇರಿಸಿದ್ದರಿಂದ ಒಳ್ಳೇದೇನೂ ಆಗಲಿಲ್ಲ. ಲಿಯಾಕತ್ ಅಲೀ ಖಾನ್ ಪತ್ರಿಕಾ ಪ್ರತಿನಿಧಿಗಳೊಡನೆ ನಡೆದ ಭೇಟಿಯಲ್ಲಿ, ತಾವು ಸಂಯುಕ್ತ ಅಥವಾ ಸಾಮೂಹಿಕ ಜವಾಬ್ದಾರಿಯ ತತ್ವವನ್ನು ಕ್ಯಾಬಿನೆಟ್‌ನಲ್ಲಿ ಒಪ್ಪುವುದಿಲ್ಲವೆಂದೂ, ಮುಸ್ಲಿಂ ಲೀಗು ರಾಜ್ಯಾಂಗ ರಚನಾ ಸಭೆಯಲ್ಲಿ ಸೇರುವುದಿಲ್ಲವೆಂದೂ ತಿಳಿಸಿದರು.

ದೇಶದಲ್ಲಿ ನಡೆಯುತ್ತಿದ್ದ ಹತ್ಯಾಕಾಂಡ ಮಹಾತ್ಮರ ಮನಸ್ಸನ್ನು ಕಲಕಿತು. ಅವರು “ಹರಿಜನ” ದಲ್ಲಿ ಈ ಹತ್ಯಾಕಾಂಡಗಳನ್ನು ನಿಲ್ಲಿಸುವಂತೆ ಪ್ರಾರ್ಥಿಸಿದರು. ಸ್ತ್ರೀಯರು ತಮ್ಮ ಆತ್ಮರಕ್ಷಣೆಗಾಗಿ ಶಸ್ತ್ರವನ್ನು ಉಪಯೋಗಿಸಬಹುದೆಂದೂ, ಇಲ್ಲದಿದ್ದರೆ ಆತ್ಮಹತ್ಯವನ್ನಾದರೂ ಮಾಡಿಕೊಂಡು ತಮ್ಮ ಮಾನವನ್ನು ರಕ್ಷಿಸಿಕೊಳ್ಳಬೇಕೆಂದೂ ಬರೆದರು. ಅನ್ಯಾಯಕ್ಕೆ ಗುರಿಯಾದ ಹೆಂಗಸರನ್ನು ಹಿಂದೂಗಳು ಜಾತಿ ಬಾಹಿರರನ್ನಾಗಿ ಮಾಡಕೂಡದೆಂದೂ ಬರೆದರು. ಮುಸ್ಲಿಮರನ್ನೂ ಪ್ರಾರ್ಥಿಸಿ, ಹತ್ಯೆ ನಡೆಸುವುದನ್ನೂ ಸ್ತ್ರೀಯರ ಹಿಂಸೆ ಮಾಡುವುದನ್ನೂ ಕೊರಾನು ನಿಷೇಧಿಸಿದೆ ಎಂದು ಬರೆದರು.

ಗಾಂಧೀಜಿ ಕಲ್ಕತ್ತಾದಲ್ಲಿ ಬಂದು, ಅಲ್ಲಿ ಜನರನ್ನು ಸಮಾಧಾನ ಗೊಳಿಸುವುದರಲ್ಲಿ ತೊಡಗಿದರು. ತಮ್ಮ ಪ್ರಾರ್ಥನಾ ಸಭೆಗಳಲ್ಲಿ ಜನರಿಗೆ ಧೈರ್ಯವನ್ನು ಬೋಧೀಸಿದರು. ಅವರು ಕಲ್ಕತ್ತಾದಲ್ಲಿದ್ದಾಗ ಬಿಹಾರಿನಲ್ಲಿ ಹಿಂದೂಗಳು ಮುಸ್ಲಿಮರ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆಂಬ ಸಮಾಚಾರ ಕಿವಿ ಮುಟ್ಟಿತು. ಗಾಂಧೀಜಿ ಬಿಹಾರಿಗಳಿಗೆ ಬರೆಯುತ್ತಾ, ಈ ಕೊಲೆ ನಿಲ್ಲಿಸದಿದ್ದರೆ ತಾವು ಅಲ್ಲಿ ಬಂದು ಉಪವಾಸ ಮಾಡಬೇಕಾಗುವುದೆಂದು ಎಚ್ಚರಿಸಿದರು.

ಸರ್ಕಾರ ಬಾಂಬು ಮುಂತಾದ್ದನ್ನು ಉಪಯೋಗಿಸಿ, ಹತ್ಯಾಕಾಂಡವನ್ನು ನಿಲ್ಲಿಸುವ ಮಾರ್ಗವನ್ನು ಗಾಂಧೀಜಿ ಒಪ್ಪಲಿಲ್ಲ. “ಕಾಂಗ್ರೆಸು ಇದನ್ನು ಮಾಡಬಾರದು. ಕಾಂಗ್ರೆಸಿನ ಮಾತನ್ನು ಜನ ಕೇಳದಿದ್ದರೆ ಕಾಂಗ್ರೆಸ್ ಸರ್ಕಾರ ರಾಜೀನಾಮೆ ಕೊಡಬೇಕು” ಎಂದು ಬರೆದರು. ಅಧಿಕಾರದಲ್ಲಿದ್ದ ಕಾಂಗ್ರೆಸಿಗರಿಗೆ ಗಾಂಧೀಜಿಯ ಬುದ್ಧಿವಾದ ಸರಿಬೀಳಲಿಲ್ಲ. ಅದು ಅಹಿಂಸೆಯ ಪರಮಾವಧಿ ಎಂದುಕೊಂಡರು. ತಾವು ಅಷ್ಟು ಅಹಿಂಸೆಗೆ ಸಿದ್ಧರಾಗಿಲ್ಲವೆಂದು ಸುಮ್ಮನಿದ್ದರು. ಮಂತ್ರಿಗಳು ಗಲಭೆಯಾದ ಪ್ರದೇಶಗಳಲ್ಲೆಲ್ಲಾ ಸಂಚರಿಸಿ, ಜನರಲ್ಲಿ ಸಮಾಧಾನ ಉಂಟುಮಾಡಲು ಯತ್ನಿಸಿದರು.

೧೯೪೬-೪೭ರ ಛಳಿಗಾಲದಲ್ಲಿ ಗಾಂಧೀಜಿ ಪೂರ್ವ ಬಂಗಾಳದಲ್ಲಿ ಸಂಚರಿಸಿ ಜನರಲ್ಲಿ ಸಮಾಧಾನ ತರಲು ಯತ್ನಿಸಿದರು. ಪಾದಚಾರಿಗಳಾಗಿ ಊರಿಂದ ಊರಿಗೆ ಹೋಗಿ, ಪ್ರಾರ್ಥನಾ ಸಭೆಗಳನ್ನು ನಡೆಸಿ, ಭೀತರಾದ ಜನರಲ್ಲಿ ಧೈರ್ಯ ತರಲು ಯತ್ನಿಸಿದರು. ರಸ್ತೆಗಳು ಸರಿಯಾಗಿಲ್ಲ, ಸೇತುವೆಗಳಿಲ್ಲ; ಆದಾಗ್ಯೂ ಜನ ಸಹಾಯದಿಂದ ಗಾಂಧೀಜಿ ತಮ್ಮ ಶಾಂತಿ ಸ್ಥಾಪನಾ ಕಾರ್ಯವನ್ನು ಮುಂದರಿಸುತ್ತ ಹೋದರು. ರಾಮನಾಮವನ್ನು ಭಜಿಸುವವರಿಗೆ ಭಗವಂತ ಎಲ್ಲಾ ಶಕ್ತಿಯನ್ನೂ ಕೊಡುವನು ಎಂದು ಬೋಧಿಸಿದರು. ರಾಮನಾಮ ಸಂಕೀರ್ಥನೆಯಲ್ಲಿ ಗಾಂಧೀಜಿಗೆ ದೃಢವಾದ ಭಕ್ತಿಯಿತ್ತು. “ದೇವರ ಹೆಸರುಗಳು ಅನಂತವಾಗಿವೆ. ಅವನನ್ನು ಈಶ್ವರನೆಂದು ಕರೆಯಿರಿ, ಅಲ್ಲಾ ಎಂದು ಕರೆಯಿರಿ, ಗಾಡ್ ಎಂದು ಕರೆಯಿರಿ; ಎಲ್ಲಾ ಒಬ್ಬನೇ ದೇವರ ಹೆಸರುಗಳು. ಅವನು ಒಬ್ಬನೇ, ಅವನಿಗೆ ಎರಡನೆಯದಿಲ್ಲ, ಅವನೊಬ್ಬನೇ ಮಹಾನ್. ಅವನಿಗೆ ಕಾಲವಿಲ್ಲ, ಆಕಾರವಿಲ್ಲ, ಪಾಪವಿಲ್ಲ; ಅಂಥವನೇ ನನ್ನ ರಾಮ. ಅವನೊಬ್ಬನೇ ನನ್ನ ಸ್ವಾಮಿ, ಯಜಮಾನ” ಎಂದು ಬೋಧಿಸಿದರು. ಅದೇ ಸಂದರ್ಭದಲ್ಲಿ “ಈಶ್ವರ ಅಲ್ಲಾ ತೇರೇನಾಮ್, ಸಬ್‌ಕೋ ಸನ್ಮತಿ ವೇ ಭಗವಾನ್” ಎಂಬ ಪ್ರಾರ್ಥನೆಯ ಭಾಗ ಉದಯವಾದುದು. “ದೇವರೇ, ಎಲ್ಲರಿಗೂ ಒಳ್ಳೆಯ ಬುದ್ಧಿಯನ್ನು ಕೊಡು” ಎಂಬುದೇ ಅದರ ತಾತ್ಪರ್ಯ.

ಕೇಂದ್ರದಲ್ಲಿ ಮುಸ್ಲಿಮರು ನಡುಗಾಲ ಸರ್ಕಾರವನ್ನು ಸೇರಿದಾಗ್ಯೂ, ಮುಸ್ಲಿಮರ ಅತ್ಯಾಚಾರಗಳು ನಿಲ್ಲಲಿಲ್ಲ; ಮತ್ತು ಕಾಂಗ್ರೆಸ್ ಸದಸ್ಯರಿಗೆ ಮುಸ್ಲಿಂ ಲೀಗಿನವರ ಸೇರುವಿಕೆಯಿಂದ ಬಹಳ ಕಿರುಕುಳವೇ ಆಯಿತು. ಡಿಸೆಂಬರ್ ೯ರಲ್ಲಿ ಸೇರುವುದರಲ್ಲಿದ್ದ ರಾಜ್ಯಾಂಗ ರಚನಾ ಸಭೆಯಲ್ಲಿ ಮುಸ್ಲಿಂ ಲೀಗಿನ ಸದಸ್ಯರು ಭಾಗವಹಿಸುವ ಚಿಹ್ನೆಗಳು ಕಾಣಲಿಲ್ಲ. ಕ್ಯಾಬಿನೆಟ್ ಮಿಷನ್ನಿನ ಹೇಳಿಕೆಯ ಕೆಲವು ಅಂಶಗಳ ಅರ್ಥದ ಬಗ್ಗೆ ಮುಸ್ಲಿಂ ಲೀಗ್ ಕೆಲವು ತಕರಾರುಗಳನ್ನು ತೆಗೆದಿದ್ದರು. ಕಾಂಗ್ರೆಸಿನದೂ ತಕರಾರು ಇತ್ತು. ಗಾಂಧೀಜಿ ಹೇಳಿದರು “ಫೆಡರಲ್ ಕೋರ್ಟಿನಲ್ಲಿ ಇತ್ಯರ್ಥ ಪಡಿಸೋಣ” ಎಂದು. ಅದನ್ನು ವೈಸರಾಯರು ಒಪ್ಪಲಿಲ್ಲ. ಆದ್ದರಿಂದ ಈ ತಕರಾರುಗಳನ್ನು ಇತ್ಯರ್ಥಗೊಳಿಸಲು, ಬ್ರಿಟಿಷ್ ಪ್ರಧಾನ ಮಂತ್ರಿಗಳ ಆಹ್ವಾನದ ಮೇಲೆ, ನೆಹರು, ಜಿನ್ಹಾ, ಲಿಯಾಕತ್ ಅಲೀ ಖಾನ್, ಬಲದೇವ ಸಿಂಗ್ ಲಂಡನ್ನಿಗೆ ಹೋದರು. ವಿಷಯ ಚರ್ಚೆಯಾಯಿತು. ಬ್ರಿಟಿಷ್ ಮುಖ್ಯಮಂತ್ರಿ ವ್ಯಾಜ್ಯವನ್ನು ಫೈಸಲ್ ಮಾಡಲು ಯತ್ನಿಸಿದರು. ಎರಡು ಪಾರ್ಟಿಗಳೂ ತಮ್ಮ ತಮ್ಮ ಅರ್ಥಕ್ಕೆ ಬದ್ಧರಾದರು. ಕ್ಯಾಬಿನೆಟ್ ಮಿಷನ್‌ನವರು ತಮ್ಮ ಅರ್ಥವನ್ನು ವಿಶದೀಕರಿಸಿದರು. ಅದನ್ನು ಉಭಯ ಪಾರ್ಟಿಗಳು ಒಪ್ಪಬೇಕೆಂದರು. “ಉಭಯ ಪಾರ್ಟಿಗಳು ಒಪ್ಪದೆ ಕನ್‌ಸ್ಟಿಟ್ಯುಯೆಂಟ್ ಅಸೆಂಬ್ಲಿ ಜಯಪ್ರದವಾಗಿ ನಡೆಯವುದಿಲ್ಲ. ಒಂದು ವೇಳೆ ಭಾರತ ಪ್ರಜಾಸಮುದಾಯದ ಒಂದು ದೊಡ್ಡ ಭಾಗ ಕನ್‌ಸ್ಟಿಟ್ಯುಯೆಂಟ್ ಅಸೆಂಬ್ಲಿಯರಲ್ಲಿರದೆ ಆ ಸಭೆ ಒಂದು ಇಷ್ಟಪಡದ ಜನಸಮುದಾಯದ ಮೇಲೆ ತನ್ನ ತೀರ್ಮಾನವನ್ನು ಒತ್ತಾಯವಾಗಿ ಹೇರಲಾಗುವುದಿಲ್ಲ” ಎಂದು ತಿಳಿಸಿದರು.

ಗಾಂಧೀಜಿ ಅಸ್ಸಾಂ ಬಗ್ಗೆ ತಮ್ಮ ಅಭಿಪ್ರಾಯವನ್ನೇ ಒತ್ತಾಯ ಪಡಿಸಿದರು: “ ಅಸ್ಸಾಂ ಬಂಗಾಳದ ಜೊತೆಗೆ ಸೇರದಿರಲು ಸ್ವಾತಂತ್ರ್ಯ ಹೊಂದಿದೆ. ಅದು ಯಾವ ಪ್ರಾಂತದೊಡನೆಯೂ ಸೇರದಿರಲು ಅಧಿಕಾರ ಹೊಂದಿದೆ. ಈ ಸ್ವಾತಂತ್ರ್ಯವಿಲ್ಲದಿದ್ದರೆ ಅಸ್ಸಾಂ ಕನ್‌ಸ್ಟಿಟ್ಯುಯೆಂಟ್ ಅಸೆಂಬ್ಲಿಯಿಂದ ಹೊರಗೆ ಬರಬಹುದು”. ಸಿಖ್ಖರಿಗೂ ಇದೇ ರೀತಿ ಸಲಹೆಯನ್ನು ಗಾಂಧೀಜಿ ಮಾಡಿದರು.

ಡಿಸೆಂಬರ್ ೯ರಲ್ಲಿ ರಾಜ್ಯಾಂಗ ರಚನಾ ಸಭೆ ಸೇರಿತು. ಮುಸ್ಲಿಂ ಲೀಗ್ ಭಾಗವಹಿಸಲಿಲ್ಲ. ಅವರ ಕುರ್ಚಿಗಳೆಲ್ಲಾ ಖಾಲಿಯಾಗಿದ್ದವು. ಕಾಂಗ್ರೆಸ್ ಮುಖಂಡರು ಪರಿಸ್ಥಿತಿಯನ್ನು ಆಲೋಚಿಸಿದರು. ಮುಂದೆ ಮುಸ್ಲಿಂ ಲೀಗ್ ಸದಸ್ಯರು ಬರಲು ಅವಕಾಶವಿತ್ತು. ಈ ಅಧಿವೇಶನ ಬಹಳ ಕೆಲಸ ಮಾಡಲಿಲ್ಲ. ಸಭಾಧ್ಯಕ್ಷರನ್ನು ಆರಿಸಲಾಯಿತು. ಮೈನಾರಿಟಿ ಕಮಿಟಿಗಳನ್ನು ರಚಿಸಲಾಯಿತು. ಆದರೆ ಮುಸ್ಲಿಂ ಲೀಗ್ ಸದಸ್ಯರಿಗಾಗಿ ಜಾಗಗಳನ್ನು ಖಾಲಿ ಇಡಲಾಯಿತು. ಸ್ವಾತಂತ್ರ್ಯ ಘೋಷಣೆಯ ನಿರ್ಣಯವನ್ನು ಸೂಚಿಸಲಾಯಿತು. ಅದರ ಮೇಲೆ ಕೆಲವು ಭಾಷಣಗಳಾದವು. ಅದನ್ನು ಓಟಿಗೆ ಹಾಕದೆ ಮತ್ತು ಸೆಕ್ಷನ್ನುಗಳಾಗಿ ವಿಭಾಗವಾಗಬೇಕೆಂಬ ಸಲಹೆಯನ್ನು ತರದೆ, ಸಭೆಯನ್ನು ಮುಂದಕ್ಕೆ ಹಾಕಲಾಯಿತು.

೧೯೪೬ ಉರುಳಿತು; ೧೯೪೭ರ ಉದಯವಾಯಿತು. ೧೯೪೬ರ ಮುಖ್ಯ ಸಂಗತಿಗಳು ಎರಡು: (೧) ಕ್ಯಾಬಿನೆಟ್ ಮಿಷನ್ನಿನ ಸಲಹೆಗಳ ಸಂಗತಿ ಮತ್ತು ನಡುಗಾಲ ಸರ್ಕಾರದ ಸ್ಥಾಪನೆ; (೨) ಮುಸ್ಲಿಂ ಲೀಗಿನ ಡೈರೆಕ್ಟ್ ಆಕ್ಷನ್‌ನ ದುಷ್ಪರಿಣಾಮ. ಮುಸ್ಲಿಂ ಲೀಗಿನ ಕೃತ್ಯದಿಂದ ದೇಶದಲ್ಲೆಲ್ಲಾ ಹತ್ಯಾಕಾಂಡಗಳು ನಡೆದುದು ಅತ್ಯಂತ ವಿಷಾದಕರ ವೈಸರಾಯ್ ಲಾರ್ಡ್ ವೇವಲರು ಬ್ರಿಟಿಷ್ ಸರ್ಕಾರಕ್ಕೆ ಬರೆದರು: “ಇಂಡಿಯಾದ ಪರಿಸ್ಥಿತಿ ಈಗ ಬಹಳ ಕೆಟ್ಟಿದೆ. ಭಾರತೀಯರಿಗೆ ಸ್ವರಾಜ್ಯ ಕೊಡುವ ವಿಷಯವನ್ನು ಒಂದೆರಡು ವರ್ಷ ಮುಂದೆ ಹಾಕೋಣ.” ತಾವೇ ಇಂಗ್ಲೆಂಡಿಗೆ ಹೋಗಿ ಪ್ರಧಾನ ಮಂತ್ರಿಗಳೊಡನೆ ಚರ್ಚಿಸಿದರು. ಪ್ರಧಾನ ಮಂತ್ರಿಗಳ ಅಭಿಪ್ರಾಯದಲ್ಲಿ ಇಂಡಿಯಾಕ್ಕೆ ಸ್ವರಾಜ್ಯ ಕೊಡುವುದನ್ನು ಈಗಲೇ ನಡೆಸಬೇಕು; ಅದನ್ನು ಮುಂದಕ್ಕೆ ಹಾಕುವ ಹಾಗಿಲ್ಲ; ಒಂದು ಗೊತ್ತಾದ ತಾರೀಖನ್ನು ಗೊತ್ತು ಮಾಡಿ, ಅಷ್ಟ೨ರಲ್ಲಿ ಭಾರತವನ್ನು ಬ್ರಿಟನ್ನು ಬಿಟ್ಟು ಬಿಡಬೇಕು. ಈ ಕಾರ್ಯವನ್ನು ವೈಸರಾಯರು ನಡೆಸಬೇಕೆಂದು ಹೇಳಿದರು. ಇಂಡಿಯಾವನ್ನು ೧೯೪೮ನೇ ಜೂನ್‌ರ ಒಳಗೆ ಬ್ರಿಟಿಷರು ಬಿಡುವುದಾಗಿ ಇಂಗ್ಲೆಂಡಿನ ಮುಖ್ಯಮಂತ್ರಿ ಆಟ್ಲಿಯವರು ಫೆಬ್ರವರಿ ೧೭ರಲ್ಲಿ ಘೋಷಿಸಿದರು.

ವೈಸರಾಯ್ ಲಾರ್ಡ್ ವೇವಲ್‌ರಿಗೆ ಇದು ಇಷ್ಟವಾದ ಸಂಗತಿಯಾಗಿರಲಿಲ್ಲ. ಕಾಂಗ್ರೆಸೂ ಲೀಗೂ ಉಭಯರೂ ಸೇರಿ ಒಪ್ಪಂದ ಮಾಡಿಕೊಂಡರೆ, ಬ್ರಿಟಿಷರು ಈ ದೇಶವನ್ನು ಬಿಡುವುದು ಸುಲಭ; ಈಗ ಇರುವ ನಡುಗಾಲ ಸರ್ಕಾರದಲ್ಲಿ ತಿಕ್ಕಾಟವಿದೆ, ಇದಕ್ಕೆ ಅಧಿಕಾರವನ್ನು ಒಪ್ಪಿಸಿಕೊಟ್ಟು ಹೋಗುವುದು ಹೇಗೆ? ಮುಸ್ಲಿಂ ಲೀಗಿನವರು ಪಂಜಾಬ್, ಸಿಂಧ್, ಬಂಗಾಳಾ ಇವುಗಳಲ್ಲಿದ್ದ ಮುಸ್ಲಿಂ ಲೀಗೇತರ ಸರ್ಕಾರಗಳನ್ನು ಹೇಗಾದರೂ ಮುರಿಯಲು ಪ್ರಯತ್ನಿಸುತ್ತಿದ್ದರು ಹೀಗೆ ಮಾಡಿದರೆ, ಮುಸ್ಲಿಂ ಲೀಗಿಗೆ ಪ್ರತ್ಯೇಕ ಪಾಕಿಸ್ಥಾನವನ್ನು ಕೇಳಲು ಅನುಕೂಲ. ಅಸ್ಸಾಂನಲ್ಲಿ ಲೀಗಿನ ಪ್ರಯತ್ನ ನಡೆಯಲಿಲ್ಲ. ಆದ್ದರಿಂದ ಪಂಜಾಬ್ ಸರ್ಕಾರವನ್ನು ಮೊದಲು ಮುರಿಯಬೇಕೆಂದು ಲೀಗು ಪ್ರಯತ್ನಿಸಿತು. ಪಂಜಾಬಿನ ಮುಸ್ಲಿಂ ಲೀಗ್ ಸಂಸ್ಥೆ ಬಹಳ ಗಲಾಟೆ ಮಾಡಲು ಆರಂಭಿಸಿತು. ಹಾಗೆಯೇ ಮುಸ್ಲಿಂ ಮೆಜಾರಿಟಿ ಇರುವ ಸಿಂಧ್ ಬಂಗಾಳಾದಲ್ಲೂ ಮುಸ್ಲಿಂ ಲೀಗ್ ಶಾಖೆ ಗಲಭೆಯನ್ನೆಬ್ಬಿಸಲು ಪ್ರಯತ್ನಿಸಿತು.

ಈ ಬಿಕ್ಕಟ್ಟು ಪರಿಹಾರವಾಗುವುದು ಹೇಗೆ ಎಂದು ಕಾಂಗ್ರೆಸ್ ಮುಖಂಡರು ಆಲೋಚನೆ ಮಾಡತೊಡಗಿದರು. ಸಪ್ರು ಜಯಕರ್ ಇನ್ನೂ ಅನೇಕ ಕಾಂಗ್ರೆಸೇತರರು ಕಲೆತು ಒಂದು ರಾಜ್ಯಾಂಗ ರಚನೆಯನ್ನು ಸಿದ್ಧಗೊಳಿಸಿದರು. ಇದರಲ್ಲಿ ಡೆಮೋಕ್ರಸಿ ತತ್ವದಂತೆ ಎಲ್ಲರಿಗೂ ಒಂದೊಂದೇ ಓಟು ಏರ್ಪಟ್ಟಿತು. ಕೋಮುವಾರು ಬೇಧಗಳಿರಲಿಲ್ಲ. ಇದು ಒಂದು ಯೂನಿಟರಿ ಸರ್ಕಾರವನ್ನು ಇಬ್ಬಾಗ ಭಾರತಕ್ಕೆ ತರುವ ಏರ್ಪಾಡು.

ಗಾಂಧೀಜಿ ತಮ್ಮ ಅಭಿಪ್ರಾಯವನ್ನು ಸೂಚಿಸುತ್ತಾ “ಬ್ರಿಟಿಷರು ಇಂಡಿಯಾ ಬಿಟ್ಟು ಹೋಗುವುದು ಖಂಡಿತ. ಅವರು ನಮ್ಮ ಮೇಲೆ ಯಾವ ರಾಜ್ಯಾಂಗ ರಚನೆಯನ್ನೂ ಹೇರುವುದಿಲ್ಲ. ನಾವೇ ಅದನ್ನು ಮಾಡಿಕೊಳ್ಳಬೇಕು. ಐಕಮತ್ಯದಿಂದ ಮಾಡಿಕೊಳ್ಳಬೇಕು” ಎಂದರು. ಯಾರೋ ಕೇಳಿದರು “ಬಂಗಾಳ ಇಬ್ಭಾಗವಾಗುವುದನ್ನು ನೀವು ಒಪ್ಪುವಿರಾ?” ಎಂದು.

“ನಾನೇನೋ ಮೊದಲಿನಿಂದ ಅದಕ್ಕೆ ವಿರೋಧವಾಗಿದ್ದೇನೆ. ಸಹೋದರರು ಒಬ್ಬರಿಗೊಬ್ಬರು ಹೊಡೆದಾಡಿ, ಬೇರೆಯಾಗುವುದು ಅಸಾಮಾನ್ಯವಲ್ಲ. ಹಿಂದೂಗಳು ಪ್ರತಿಯೊಬ್ಬರನ್ನೂ ಬಲಾತ್ಕಾರವಾಗಿ ಐಕಮತ್ಯದಲ್ಲಿಡಲು ಮಾಡುವ ಪ್ರಯತ್ನವನ್ನು ನಾನು ಒಪ್ಪುವುದಿಲ್ಲ. ಆದ್ದರಿಂದ ಬಲಾತ್ಕಾರದಿಂದ ಬೇರೆಯಾಗುವುದನ್ನಾಗಲೀ ನಾನು ಒಪ್ಪುವುದಿಲ್ಲ. ಹಿಂದೂಗಳೂ, ಮುಸ್ಲಿಮರೂ ಶಾಂತಿಯಿಂದ, ಸ್ನೇಹದಿಂದ ಒಟ್ಟಿಗೆ ಇರಲು ನಿರ್ಧರಿಸಬೇಕು. ಇದಕ್ಕಿಂತ ಬೇರೆ ದಾರಿಯೆಂದರೆ ಅಂತರ್ಯುದ್ಧ. ಇದರಿಂದ ಒಬ್ಬರನ್ನೊಬ್ಬರು ಹೊಡೆದು, ದೇಶ ಒಡೆದು ಹೋಗುವುದು” ಎಂದು ಗಾಂಧೀಜಿ ಮಾರ್ಚ್ ೨೩ರ “ಹರಿಜನ” ದಲ್ಲಿ ಬರೆದರು.

೧೯೪೭ನೇ ಮಾರ್ಚ್‌ನಲ್ಲಿ ಗಾಂಧೀಜಿ ಬಿಹಾರಿಗೆ ಬಂದು, ಹಳ್ಳಿಗಳಲ್ಲಿ ಓಡಾಡ ತೊಡಗಿದರು. ಹಿಂದೂ ಹಳ್ಳಿಯವರಿಗೆ ಲೂಟಿ ಮಾಡಿದ ಮುಸ್ಲಿಂ ಆಸ್ತಿ ಪಾಸ್ತಿಗಳನ್ನೆಲ್ಲಾ ಹಿಂತಿರುಗಿ ಕೊಡಬೇಕೆಂದು ಉಪದೇಶಿಸಿದರು.

ಕೆಲವು ದಿವಸಗಳಾದ ಮೇಲೆ ಲಾರ್ಡ್ ವೇವಲರು ವೈಸ್‌ರಾಯ್ ಪದವಿಗೆ ರಾಜೀನಾಮೆ ಕೊಟ್ಟರು. ಲಾರ್ಡ್ ಮೌಂಟ್ ಬೇಟನ್ ವೈಸರಾಯ್ ಪದವಿಯನ್ನು ಅಲಂಕರಿಸಿದರು. ತಮ್ಮ ಪ್ರಪ್ರಥಮ ಹೇಳಿಕೆಯಲ್ಲಿ ಹೊಸ ವೈಸರಾಯರು ತಿಳಿಸಿದರು: “ನಾನು ಬಂದಿರುವುದು ಇಲ್ಲಿನ ಬ್ರಿಟಿಷ್ ಸರ್ಕಾರವನ್ನು ಮುಕ್ತಿಗೊಳಿಸಲು, ನಾನೇ ಕಡೆಯ ವೈಸ್‌ರಾಯ್.”

ಗಾಂಧೀಜಿ ಈ ಹೇಳಿಕೆಯನ್ನು ಗಮನಿಸಿ, “ಈ ಹೇಳಿಕೆ ಉದ್ದೇಶ ಪೂರ್ವಕ ವಾದದ್ದು, ಬೇಷರತ್ತಾದದ್ದು, ಮತ್ತು ಸಂದೇಹಕ್ಕೆ ಅವಕಾಶವಿಲ್ಲದ್ದು ಎಂದು ವಿವರಿಸಿದರು. ಗಾಂಧೀಜಿ ಬಿಹಾರ್ ಮತ್ತು ಪಂಜಾಬಿನಲ್ಲಿ ನಡೆಯುತ್ತಿದ್ದ ಹಿಂಸಾಕೃತ್ಯಗಳು ಶಮನವಾಗಬೇಕು; ಇಲ್ಲವಾದರೆ ಹೊಸ ವೈಸರಾಯರ ಕೆಲಸ ಬಹಳ ಕಷ್ಟವಾದೀತೆಂದು ಎಚ್ಚರಿಕೆ ಕೊಟ್ಟರು.

ಲಾರ್ಡ್ ವೇವಲರು ತಮ್ಮ ಮಾತನ್ನು ಬ್ರಿಟಿಷ್ ಮುಖ್ಯಮಂತ್ರಿ ಲಕ್ಷಿಸದೆ ಇದ್ದುದರಿಂದ, ರಾಜೀನಾಮೆ ಕೊಡಬೇಕಾಯಿತು. ಲಾರ್ಡ್ ವೇವೆಲ್ ಇಂಡಿಯಾ ಬಿಟ್ಟ ಹಿಂದಿನ ದಿನ (ಮಾರ್ಚ್ ೨೩ನೇ ತಾರೀಖು) ಅವರು ತಮ್ಮ ಕ್ಯಾಬಿನೆಟ್ ಅಧಿವೇಶನದ ಅಗ್ರಾಸನವನ್ನು ವಹಿಸಿದ್ದರು. ಅಧಿವೇಶನದ ಕೆಲಸ ಮುಗಿದ ಮೇಲೆ, ಒಂದು ಸಂಕ್ಷೇಪವಾದ ಹೇಳಿಕೆಯನ್ನು ಕೊಟ್ಟರು. “ಬಹು ಕಷ್ಟವಾದ ಉತ್ಕಟವಾದ ಸಮಯದಲ್ಲಿ ನಾನು ವೈಸ್‌ರಾಯ್ ಆದೆ. ನನ್ನ ಶಕ್ತಿಯನ್ನೆಲ್ಲಾ ವಿನಿಯೋಗಿಸಿ ನನ್ನ ಹೊಣೆಗಾರಿಕೆಯನ್ನು ನಿರ್ವಹಿಸಲು ಯತ್ನಿಸಿದೆ. ಆದರೆ ಒಂದಾನೊಂದು ಸನ್ನಿವೇಶ ಬೆಳೆದು, ನಾನು ರಾಜೀನಾಮೆ ಕೊಡಬೇಕಾಯಿತು.”

ಪಂಜಾಬಿನಲ್ಲಿ ನಡೆಯುತ್ತಿದ್ದ ಮುಸ್ಲಿಂ ಅತ್ಯಾಚಾರಗಳನ್ನು ಕಂಡು ಕಾಂಗ್ರೆಸ್ ವರ್ಕಿಂಗ್ ಕಮಿಟಿ ಪಂಜಾಬನ್ನು ಇಬ್ಭಾಗ ಮಾಡಲು ನಿರ್ಧರಿಸಿತು. ಈ ನಿರ್ಧಾರಕ್ಕೆ ಮುಂಚೆ ಗಾಂಧೀಜಿಯ ಅಭಿಪ್ರಾಯವನ್ನು ತೆಗೆದುಕೊಂಡಿರಲಿಲ್ಲ. ಗಾಂಧೀಜಿಗೆ ಈ ಇಬ್ಭಾಗದ ನಿರ್ಣಯ ಅಸಮಾಧಾನ ಉಂಟು ಮಾಡಿತು. ಕಾಂಗ್ರೆಸ್ ವರ್ಕಿಂಗ್ ಕಮಿಟಿಗೂ, ಗಾಂಧೀಜಿಗೂ ಭಿನ್ನಾಭಿಪ್ರಾಯಗಳು ಬೆಳೆಯ ತೊಡಗಿದವು. ಕಾಂಗ್ರೆಸು ಹೇಗಾದರೂ ಮಾಡಿ ಈ ಸಾರಿ ಸ್ವರಾಜ್ಯಾಧಿಕಾರವನ್ನು ಪಡೆಯಬೇಕೆಂದು ನಿಶ್ಚೈಸಿತು. ಇಂಟರಿಂ ಸರ್ಕಾರದ ತನ್ನ ಅನುಭವದಿಂದ ಮುಸ್ಲಿಂ ಲೀಗಿನೊಡನೆ ಕೆಲಸ ಮಾಡಲು ಸಾಧ್ಯವಿಲ್ಲವೆಂದು ಅದಕ್ಕೆ ತಿಳಿಯಿತು. ನಿಮಿಷ ನಿಮಿಷಕ್ಕೂ ಲೀಗಿನವರಿಂದ ಕಿರುಕುಳಗಳು, ಗಾಂಧೀಜಿಗೆ ಇದನ್ನು ತಿಳಿಸಿದಾಗ, ಅವರು ಕಾಂಗ್ರೆಸ್ ಮುಖಂಡರಿಗೆ “ನೀವು ಇಂಟರಿಂ ಸರ್ಕಾರಕ್ಕೆ ರಾಜೀನಾಮೆ ಕೊಟ್ಟು ಹೊರಗೆ ಬನ್ನಿ” ಎಂದರು. ಇದು ವ್ಯವಹಾರ ಯೋಗ್ಯವಲ್ಲವೆಂದು ಕಾಂಗ್ರೆಸ್ ಮುಖಂಡರು ತೀರ್ಮಾನಿಸಿ, ಇಂಗ್ಲೆಂಡು ಈ ದೇಶ ಬಿಟ್ಟು ಹೋಗುವಾಗ್ಯೆ ತಾವು ಅಧಿಕಾರವನ್ನು ಬಿಡುವುದು ಯೋಗ್ಯವಲ್ಲವೆಂದು ಭಾವಿಸಿ, ಮುಂದಿನ ಹೆಜ್ಜೆಗಾಗಿ ಕಾಯುತ್ತಿದ್ದರು.

ವಲ್ಲಭಭಾಯಿ ಪಟೇಲರು ಸುಸ್ತಾಗಿ ಹೋಗಿದ್ದರು. ಅವರದು ಹೋಂ ಪೋರ್ಟ್‌‌ಫೋಲಿಯೊ ಲಿಯಾಕತ್ ಅಲೀ ಖಾನರು ಹಣಕಾಸಿನ ಸಚಿವರು. ಅವರು ಉಪ್ಪಿನ ತೆರಿಗೆ ತೆಗೆದು ಹಾಕಿದರೆಂದು ಗಾಂಧೀಜಿಗೆ  ಸಂತೋಷ. ಆದರೆ ಸೂಪರ್ ಟ್ಯಾಕ್ಸ್ ಮುಂತಾದವುಗಳನ್ನು ಹಾಕಿದ್ದರಿಂದ ಕೈಗಾರಿಕೆಗಾರರೂ, ವ್ಯಾಪಾರಗಾರರೂ ನರಳುತ್ತಿದ್ದರು. ಯಾವುದಾದರೂ ಅಧಿಕಾರಿಯನ್ನು ವರ್ಗಾಯಿಸುವ ಆರ್ಡರು ಮಾಡಿದರೆ, ಸಿವಿಲಿಯನ್ ಆಫೀಸರು ಅದನ್ನು ನಡೆಸುತ್ತಿರಲಿಲ್ಲ. ಇವೇ ಮುಂತಾದ ಕಿರುಕುಳಗಳಿಂದ ಒಳಾಡಳಿತ ಸಚಿವರಿಗೆ ಬಹಳ ತೊಂದರೆ ಆಯಿತು.

ಹೊಸ ವೈಸ್‌ರಾಯರು ದೆಹಲಿಗೆ ೧೯೪೭ನೇ ಮಾರ್ಚ್ ೨೨ಕ್ಕೆ ಬಂದರು; ೨೪ನೇ ತಾರೀಖು ಅಧಿಕಾರವನ್ನು ಸ್ವೀಕರಿಸಿದರು. ಅವರು ತಮ್ಮಭಾಷಣದಲ್ಲಿ “ನನ್ನ ಕಾರ್ಯ ಎಷ್ಟು ಕಷ್ಟ ಎಂಬುದನ್ನು ನಾನು ಬಲ್ಲೆ. ನನಗೆ ಮನಸ್ಸಿನಲ್ಲಿ ಯಾವ ಭ್ರಮೆಯೂ ಇಲ್ಲ” ಎಂದು ತಿಳಿಸಿದರು. ಅವರು ದೆಹಲಿಯಲ್ಲಿ ಯಾರ‍್ಯಾರು, ಏನೇನು, ಯಾವುದು ಹೇಗೆ, ಎಂಬುದನ್ನೆಲ್ಲಾ ಬೇಗ ಅರಿತು ಕೊಳ್ಳಲು ಪ್ರಾರಂಭಿಸಿದರು. ಮುಂದೆ ತಾವು ಹೇಗೆ ಪ್ರವರ್ತಿಸಬೇಕೆಂಬುದನ್ನೂ, ಯಾರು – ಯಾರೊಡನೆ ತಾವು ಮಾತುಕತೆ ನಡೆಸಬೇಕೆಂಬುದನ್ನೂ ಆಲೋಚಿಸಿದರು. ಗಾಂಧೀಜಿ, ಜಿನ್ಹಾ,ನೆಹರು, ಪಟೇಲ್, ಲಿಯಾಕತ್ ಅಲಿ ಖಾನ್ ಇವರು ಸಾಮಾನ್ಯ ಮನುಷ್ಯರಲ್ಲ. ಅವರೊಡನೆ ಹೇಗೆ ವ್ಯವಹರಿಸಬೇಕೆಂಬುದನ್ನೂ ಆಲೋಚಿಸಿದರು. ಅವರೆಲ್ಲರೂ ಪರಿಪಕ್ವರಾದ ಮನುಷ್ಯರು, ಮಧ್ಯವಯಸ್ಸನ್ನು ಮೀರಿದವರು, ಅವರಡೊನೆ ಸಂಬಂಧ ಅಲ್ಪ ಕಾಲದಲ್ಲ, ದೀರ್ಘ ಕಾಲದ್ದು; ಅವರೆಲ್ಲರೂ ಚಳುವಳಿ ನಡೆಸುವುದರಲ್ಲಿ ದಕ್ಷರು; ಮತ್ತು ಇಂಡಿಯಾಕ್ಕೆ ಪೂರ್ಣ ಸ್ವಾತಂತ್ರ್ಯ ದೊರೆಯಬೇಕೆಂಬುದರಲ್ಲಿ ಅವರೆಲ್ಲರೂ ತನ್ಮಯರಾಗಿದ್ದವರು. ಅವರೆಲ್ಲರೂ ದಕ್ಷರಾದ ಲಾಯರುಗಳು, ಇಂಗ್ಲಿಷ್ ಕನ್‌ಸ್ಟಿಟ್ಯುಷನಲ್ ಲಾವನ್ನು ಚೆನ್ನಾಗಿ ಅಧ್ಯಯನ ಮಾಡಿದ್ದವರು.

ನೆಹರುವಿನ ವಿದ್ಯೆ, ಭಾಷಣ ಮತ್ತು ಲೇಖನ ಸಾಮರ್ಥ್ಯ ಬ್ರಿಟಿಷ್ ರಾಜನೀತಿಜ್ಞರಿಗೆ ಇದ್ದದ್ದಕ್ಕಿಂತಲೂ ಕಡಿಮೆಯಾಗಿರಲಿಲ್ಲ. ಅವರೆಲ್ಲರೂ ಇಂಗ್ಲಿಷ್ ಭಾಷೆಯಲ್ಲಿ ಪರಿಣತರು. ಕೆಲವರು ಬ್ರಿಟಿಷ್ ರಾಜನೀತಿಜ್ಞರಿಗಿಂತ ಇಂಗ್ಲಿಷ್ ಭಾಷೆ ಇವರದು ಪರಿಶುದ್ಧವಾಗಿತ್ತು ಮತ್ತು ಓಜಸ್ವಿಯಾಗಿತ್ತು. ಈ ಮುಖಂಡರು ತಮ್ಮ ಜೀವಮಾನವನ್ನೆಲ್ಲಾ ದೇಶದ ಸ್ವಾತಂತ್ರ್ಯ ಸಮರದಲ್ಲಿ ಕಳೆದವರು. ಗಾಂಧೀಜಿ ತಮ್ಮ ಅಭಿಪ್ರಾಯಗಳನ್ನು “ಹರಿಜನ” ದಲ್ಲಿ ತಿಳಿಸುತ್ತಿದ್ದರು.

ಕ್ಯಾಬಿನೆಟ್ ಮಿಷನ್ನಿನ ಮೂರು ಅಂತಸ್ತಿನ ಯೋಜನೆ ಕಾರ್ಯಗತ ವಾಗಲು ಅನೇಕ ಕಷ್ಟಗಳೊದಗಿದವು. ರಾಜ್ಯಾಂಗ ರಚನೆ ಸಭೆಯ ಪ್ರಥಮ ಅಧಿವೇಶನದಲ್ಲಿಯೇ ಮುಸ್ಲಿಂ ಲೀಗ್ ಸದಸ್ಯರು ಸೇರಿದ ಮೇಲೆ ನಡುಗಾಲ ಸರ್ಕಾರ ದಿಕ್ಕೆಟ್ಟಿತು. ಎತ್ತು ಏರಿಗೆ, ಕೋಣ ನೀರಿಗೆ ಎಂಬಂತಿತ್ತು. ಒಂದು ಪಾರ್ಟಿ ಹೌದು ಎಂದರೆ, ಇನ್ನೊಂದು ಪಾರ್ಟಿ ಇಲ್ಲ ಎನ್ನುತ್ತಿತ್ತು. ಒಳಾಡಳಿತ ಸಚಿವ ವಲ್ಲಭಭಾಯಿ ಬಹಳ ಕಷ್ಟಕ್ಕೆ ಸಿಕ್ಕಿಕೊಂಡಿದ್ದರು. ಮೌಂಟ್ ಬೇಟನ್ನರು ಶೀಘ್ರದಲ್ಲೇ ಅಧಿಕಾರ ವಹಿಸಿ, ಸ್ವಾತಂತ್ರ್ಯ ದಿನಗಳು ಬಹಳಬೇಗ ಬರುವಂತೆ ಮಾಡದಿದ್ದರೆ, ಕಾಂಗ್ರೆಸು ನಡುಗಾಲ ಸರ್ಕಾರ ಬಿಟ್ಟುಬಿಡುತ್ತಿದ್ದರೋ ಏನೋ? ಮುಸ್ಲಿಂ ಲೀಗು ಕ್ಯಾಬಿನೆಟ್ ಮಿಷನ್ನಿನ ಯೋಜನೆಯ ಬಗ್ಗೆ ಸ್ಥಿರವಾದ ಮನೋಭಾವವನ್ನು ಪ್ರದರ್ಶಿಸಲೇ ಇಲ್ಲ.

ಈ ಸ್ಥಿತಿಯಲ್ಲಿ ಮೌಂಟ್‌ಬೇಟನರು ವಿಶೇಷಾಧಿಕಾರ ಪಡೆದುಕೊಂಡು ವೈಸ್‌ರಾಯಾಗಿ ಬಂದರು.

ವೇವಲರನ್ನು ಕಂಡು ಇವರು ಮಾತನಾಡಿದರು. “ನಾವು ಇಂಡಿಯಾವನ್ನು ಆದಷ್ಟು ಬೇಗ ಬಿಡಬೇಕು. ನಮ್ಮ ಇಂಗ್ಲಿಷ್ ಜನರನ್ನೆಲ್ಲಾ ಇಂಗ್ಲೆಂಡಿಗೆ ಕಳಹಿಸಿ, ನಮ್ಮ ಸೈನ್ಯವನ್ನು ಕ್ರಮವಾಗಿ ವಾಪಸು ತೆಗೆದುಕೊಳ್ಳಬೇಕು. ಬೇರೆ ದಾರಿಯೇ ಇಲ್ಲ” ಎಂದು ವೇವಲ್ಲರು ಹೇಳಿದ ಹಾಗೆ ಕಾಣುತ್ತದೆ. ಆದುದರಿಂದ ತುರ್ತಾಗಿ ಬ್ರಿಟಿಷ್ ಆಳ್ವಿಕೆಯನ್ನು ಇಂಡಿಯಾದಲ್ಲಿ ಕೊನೆಗಾಣಿಸಬೇಕು ಎಂಬ ನಿರ್ಧಾರದಿಂದಲೇ ಮೌಂಟ್‌ಬೇಟನ್‌ರು ಇಂಡಿಯಾಕ್ಕೆ ವೈಸ್‌ರಾಯಾಗಿ ಬಂದರು. ಇವರು ಇಂಗ್ಲೆಂಡಿನ ಮುಖ್ಯಮಂತ್ರಿಯವರಿಂದ ಪ್ಲೆನಿಪೊಟೆಂಷಿಯರಿ (ಆಖೈರ್) ಅಧಿಕಾರವನ್ನೂ ಪಡೆದುಕೊಂಡು ಬಂದರು.

ಇವರ ಅಭಿಪ್ರಾಯದಲ್ಲಿ, ಗಾಂಧೀಜಿಗಿಂತಲೂ ನೆಹರು ಮತ್ತು ಪಟೇಲ್ ಅಧಿಕಾರಯುತವಾಗಿ ಕೆಲಸ ಮಾಡುವವರು. ಗಾಂಧೀಜಿ ತಮ್ಮ ಸಲಹೆಗಳನ್ನು ಕಾಂಗ್ರೆಸಿಗೆ ಕೊಟ್ಟರೂ, ಅದರಂತೆಯೇ ನಡೆಯಬೇಕೆಂದು ನಿರ್ಬಂಧಿಸುತ್ತಿರಲಿಲ್ಲ. ಆಖೈರು ತೀರ್ಮಾನ ಕಾಂಗ್ರೆಸಿನದೇ. ಗಾಂಧೀಜಿಗೂ ಕಾಂಗ್ರೆಸಿಗೂ ಭಿನ್ನಾಭಿಪ್ರಾಯಗಳಿದ್ದಾಗ್ಯೂ, ಕಾಂಗ್ರೆಸು ಮಹಾತ್ಮರನ್ನ ಗೌರವಿಸುತ್ತಲೇ ಇತ್ತು. ಅವರನ್ನು ತನ್ನ ಮೀಟಿಂಗಿಗೆ ಕರೆಯುತ್ತಲೇ ಇತ್ತು. ಅಹಿಂಸೆಯ ವಿಷಯದಲ್ಲಿ ದೊಡ್ಡ ಭಿನ್ನಾಭಿಪ್ರಾಯವೇ ಇತ್ತು. ಜಿನ್ಹಾರಿಗೇ ಸರ್ವಾಧಿಕಾರವನ್ನು ಬ್ರಿಟಿಷರು ವಹಿಸಿ ಹೋದರೂ ಭಾದಕವಿಲ್ಲ ಎಂಬುದು ಗಾಂಧೀಜಿಯ ಅಭಿಪ್ರಾಯ. ಕಾಂಗ್ರೆಸಿಗೆ ಕೊಟ್ಟರೂ ಸರಿಯೆ. ಮೊದಲು ಇಂಡಿಯಾವನ್ನು ಬಿಟ್ಟು ಬ್ರಿಟಿಷರು ಹೊರಟು ಹೋದರೆ ಭಾರತೀಯರು ಒಬ್ಬರಿಗೊಬ್ಬರು ಒಪ್ಪಂದ ಮಾಡಿಕೊಳ್ಳುವರು; ಅದು ಭಾರತೀಯರೇ ಮಾಡಿದ ಹಾಗಾಗುತ್ತದೆ. ಇಂಗ್ಲಿಷರು ಅದಾವುದಕ್ಕೂ ಕೈ ಹಾಕದೆ ಮೊದಲು ಹೊರಟು ಹೋಗಲಿ ಎಂಬುದು ಗಾಂಧೀಜಿಯ ಅಭಿಪ್ರಾಯ. ಆದರೆ ಕಾಂಗ್ರೆಸ್ ಕಮಿಟಿಯವರದು ಬೇರೆ: ಮುಸ್ಲಿಂ ಲೀಗಿನವರು ಯಾವ ದಾರಿಗೂ ಬರುವುದಿಲ್ಲ; ಇಂಡಿಯಾದಲ್ಲಿ ಸಮಸ್ಯೆ ಬಗೆಹರಿಯದೆ ಇಂಗ್ಲಿಷರು ಭಾರತವನ್ನು ಬಿಡುವುದಿಲ್ಲ; ಏನೂ ಆಗದಿದ್ದರೆ ಬ್ರಿಟಿಷ್‌ರು ಇನ್ನೂ ಅನೇಕ ಕಾಲ ಭಾರತದಲ್ಲೇ ಇರಬಹುದು; ನಮ್ಮ ನಮ್ಮ ಒಡಕಿನ ಕಾರಣ ನಮಗೆ ಸ್ವರಾಜ್ಯ ದೊರೆಯುವುದಿಲ್ಲ. ಅಲ್ಲದೆ ಮುಸ್ಲಿಂ ಲೀಗಿನವರು ನಡೆಸುತ್ತಿದ್ದ ಹತ್ಯಾ ಕಾಂಡಗಳು ಸಹಿಸಲಸಾಧ್ಯವಾಗಿದ್ದವು. ಇಂಟರಿಂ ಸರ್ಕಾರದಲ್ಲಿ ಲೀಗ್ ಸದಸ್ಯರು ಕೊಡುತ್ತಿದ್ದ ಕಿರುಕುಳವೂ ಅಸಹನೀಯವಾಗಿತ್ತು. ಏನಾದರೂ ಈ ಬಿಕ್ಕಟ್ಟಿನಿಂದ ಹೊರಗೆ ಬರಬೇಕು ಎಂದು ಕಾಂಗ್ರೆಸಿನವರು ಆತುರರಾಗಿದ್ದರು. ಗಾಂಧೀಜಿಗೆ ಇಷ್ಟು ಆತುರ ಇರಲಿಲ್ಲ. ಅವರಿಗೆ ಮಾರ್ಗ ಮುಖ್ಯ. ಗುರಿ ತನಗೆ ತಾನೇ ಬರುತ್ತದೆ, ಎಂಬುದು ಅವರ ಮನೋಗತ.

೧೯೪೭ನೇ ಏಪ್ರಿಲ್‌ನಲ್ಲಿ ಡೆಲ್ಲಿಯಲ್ಲಿ ಏಷಿಯನ್ ಸಮ್ಮೇಳನ ನಡೆಯಿತು. ಗಾಂಧೀಜಿ ಈ ಸಮ್ಮೇಳನಕ್ಕೆ ಬಂದರು. ಈ ಸಮ್ಮೇಳನ ಪಶ್ಚಿಮ ದೇಶಗಳಿಗೆ ಸತ್ಯ ಮತ್ತು ಪ್ರೀತಿಯ ಸಂದೇಶವನ್ನು ಕಳುಹಿಸಬೇಕೆಂದು ತಮ್ಮ ಭಾಷಣದಲ್ಲಿ ಹೇಳಿದರು.

ಈ ಸಮ್ಮೇಳನವಾದ ಮೇಲೆ, ಗಾಂಧೀಜಿ ಊರೂರು ಸುತ್ತಿ, ಸ್ನೇಹ ಮತ್ತು ಶಾಂತಿಯ ಸಂದೇಶವನ್ನು ಬೀರತೊಡಗಿದರು. ಗಾಂಧೀಜಿ ಮತ್ತು ಜಿನ್ಹಾ ಇಬ್ಬರೂ ಕಲೆತು ದೇಶದಲ್ಲಿ ಶಾಂತಿಗಾಗಿ ಒಂದು ಸಂದೇಶ ಕಳುಹಿಸಿದರು. ಆ ಸಂದೇಶ ಹೀಗಿತ್ತು: “ರಾಜಕೀಯ ಗುರಿಗಳನ್ನು ಸಾಧಿಸಲು ಯಾವ ಕಾಲದಲ್ಲಿಯೂ ಬಲಾತ್ಕಾರವನ್ನು ಉಪಯೋಗಿಸ ಕೂಡದು. ಭಾರತದ ಎಲ್ಲ ಜನರೂ, ಯಾವ ಕೋಮುಗಳಿಗೆ ಸೇರಿರಲಿ, ಅಥವಾ ಧರ್ಮ ಪಂಥಕ್ಕೆ ಸೇರಿರಲಿ. ಹಿಂಸಾ ಮಾರ್ಗವನ್ನು ತ್ಯಜಿಸಬೇಕು. ಅವ್ಯವಸ್ಥೆಯನ್ನುಂಟು ಮಾಡಬಾರದು. ಮಾತಿನಲ್ಲಾಗಲಿ, ಬರಹದಲ್ಲಾಗಲಿ ಜನರಿಗೆ ಉದ್ರೇಕ ಉಂಟುಮಾಡಬಾರದು.”

ಗಾಂಧೀಜಿ ದೇಶದ ಭವಿಷ್ಯವನ್ನು ಕುರಿತು ತೀವ್ರವಾಗಿ ಆಲೋಚನೆಮಾಡುತ್ತಿದ್ದರು. ಅವರ ಕಿವಿಗೆ ನಾನಾ ಸಮಾಚಾರಗಳು ಬೀಳುತ್ತಿದ್ದವು. ಅವರು ಮಾಡುತ್ತಿದ್ದ ಆಲೋಚನೆಗಳು ದೇಶದಲ್ಲಿ ನಡೆಯುತ್ತಿದ್ದುದಕ್ಕಿಂತಲೂ ಬೇರೆ ಯಾಗಿರುತ್ತಿದ್ದವು. ಇಂಡಿಯಾವನ್ನು ವಿಭಾಗ ಮಾಡುವರೆಂಬ ಸುದ್ದಿ ಅವರ ಕಿವಿಯನ್ನು ಮುಟ್ಟಿತ್ತು. ಇಂಡಿಯಾದ ವಿಭಾಗದೊಂದಿಗೆ ಬಂಗಾಳ ಮತ್ತು ಪಂಜಾಬಿನ ವಿಭಾಗವೂ ಆಗುವುದೆಂದೂ ಅವರಿಗೆ ತಿಳಿಯಿತು. ಕಾಂಗ್ರೆಸ್ ಮುಖಂಡರು ಈ ವಿಭಜನೆಗಳಿಗೆ ಒಪ್ಪಿದ್ದಾರೆಂದೂ ವದಂತಿ ಹೊರಟಿತ್ತು. ಇನ್ನು ಪಾಕಿಸ್ಥಾನ ಖಂಡಿತವೆಂದು ಗಾಂಧೀಜಿಯ ಮನಸ್ಸಿಗೆ ಹೊಳೆಯಿತು. ಅವರಿಗೆ ಬಹಳ ದುಃಖವಾಯಿತು. ಕೆಲವು ದಿವಸಗಳ ಹಿಂದೆ ಜಿನ್ಹಾ ಪಂಜಾಬ್ ಮತ್ತು ಬಂಗಾಳ ಇವುಗಳ ವಿಭಜನೆಗೆ ಅಡ್ಡಿಯಾಗಿದ್ದರು. ಅವರಿಗೆ ಆ ಪ್ರಾಂತಗಳನ್ನು ಒಡೆಯುವುದು ಇಷ್ಟವಿರಲಿಲ್ಲ. ಆ ಪ್ರಾಂತಗಳನ್ನು ಪೂರ್ತಿಯಾಗಿಯೇ ಪಾಕೀಸ್ಥಾನಕ್ಕೆ ಸೇರಿಸಿಕೊಳ್ಳುವ ಅಭಿಪ್ರಾಯ ಹೊಂದಿದರು. ಆದರೆ ಇಂಡಿಯವನ್ನು ಒಡೆಯಬಹುದು. ಬಂಗಾಳ ಮತ್ತು ಪಂಜಾಬನ್ನು ಏಕೆ ಒಡೆಯಬಾರದು ಎಂಬ ಪ್ರಶ್ನೆಗೆ ಜಿನ್ಹಾರಿಂದ ಉತ್ತರ ದೊರೆಯಲಿಲ್ಲ. ಗಾಂಧೀಜಿಗೆ ಈ ಪ್ರಾಂತಗಳನ್ನೂ ಒಡೆಯಬಾರದು, ಇಂಡಿಯಾವನ್ನು ಒಡೆಯಬಾರದು ಎಂಬು ಅಭಿಪ್ರಾಯ ಇತ್ತು.

ಜಿನ್ಹಾರಿಗೆ ಚೆನ್ನಾಗಿ ಮನವರಿಕೆಯಾಗಿತ್ತು, ಕ್ಯಾಬಿನೆಟ್ ಮಿಷನ್ನಿನ ಸಲಹೆಗಳು ಇನ್ನು ಮುಂದೆ ಕಾರ್ಯಗತವಾಗಲಾರವು ಎಂದು. ಕಾಂಗ್ರೆಸ್ ಮುಖಂಡರಿಗೆ ಆ ಸಲಹೆಗಳನ್ನು ಮೌಂಟ್ ಬೇಟನ್ನರು ಮುಂದುವರಿಸಬಹುದೆಂಬ ಒಂದು ಆಶೆಯಿತ್ತು. ಅವರಿಗಂತೂ ಇಂಟರಿಂ ಸರ್ಕಾರದಲ್ಲಿ ಮುಸ್ಲಿಂ ಲೀಗ್ ಪ್ರತಿನಿಧಿಗಳೊಡನೆ ಹೋರಾಡುವುದು ಕಷ್ಟವಾಗಿದ್ದುದ್ದರಿಂದ ಹೇಗಾದರೂ ಅವರನ್ನು ಇಂಟರಿಂ ಸರ್ಕಾರದಿಂದ ಬಿಡಿಸಬೇಕು ಎಂಬ ಆತುರತೆಯಿತ್ತು. ಮುಸ್ಲಿಂ ಲೀಗ್ ರಾಜ್ಯಾಂಗ ರಚನಾ ಸಭೆಯಲ್ಲಿ ಸೇರುವುದಿಲ್ಲವೆಂದು ಸ್ಪಷ್ಟವಾಗಿ ಹೇಳದೆ ಇದ್ದರೂ, ಆ ಸಭೆಯಲ್ಲಿ ಸೇರಿ ಮುಂದೆ ಕೆಲಸ ಮಾಡುವ ಭರವಸೆ ಇರಲಿಲ್ಲ. ಕಾಂಗ್ರೆಸ್ ಮಾತ್ರ ರಾಜ್ಯಾಂಗ ರಚನಾ ಸಭೆಯನ್ನು ಸೇರಿ, ಅಂಗರಚನಾ ಕಾರ್ಯವನ್ನು ನಡೆಸುವ ಉಮೇದನ್ನು ಇಟ್ಟುಕೊಂಡಿತ್ತು. ಹೀಗೆ ಪರಸ್ಪರ ಭಿನ್ನ ಸನ್ನಿವೇಶಗಳು.

ಮೌಂಟ್‌ಬೇಟನ್ನರು ಈ ಬಿಕ್ಕಟ್ಟನ್ನು ಎದುರಿಸಿ ಕೆಲಸ ಮಾಡಬೇಕಾಗಿತ್ತು. ಅವರು ತಮ್ಮ ಕೆಲಸವನ್ನು ಆರಂಭಿಸಿದರು. ಮೊಟ್ಟಮೊದಲನೆಯದಾಗಿ ಇಂಡಿಯಾದ ನಾನಾ ಪಾರ್ಟಿಗಳ ಮತ್ತು ಸಂಘಗಳ ಮುಖಂಡರನ್ನು ಕರೆಯಿಸಿ, ಮಾತನಾಡಿದರು. ಅವರು ಹೇಳಿದುದರ ಸಾರಾಂಶವನ್ನೆಲ್ಲಾ ಬರೆಯಿಸಿ ಇಟ್ಟುಕೊಂಡರು. ಮೊದಲನೆ ಆರು ವಾರಗಳಲ್ಲಿ ಸುಮಾರು ೧೫೦ ಜನರನ್ನು ಭೇಟಿ ಮಾಡಿದರು. ಅವರು ಯಾವ ಯಾವ ಕೆಲಸ ಮಾಡುತ್ತಿದ್ದರು; ಅವರ ರಾಜಕೀಯ, ಸಾಮಾಜಿಕ, ಆರ್ಥಿಕ ಅಭಿಪ್ರಾಯಗಳೇನು? ಎಂಬುದನ್ನು ವಿಶದವಾಗಿ ಹೇಳಬೇಕೆಂದು ವೈಸರಾಯರು ಕೋರಿದರು.

ಹೀಗೆಯೇ ಗಾಂಧೀಜಿ, ಜಿನ್ಹಾ, ನೆಹರು, ಪಟೇಲ್, ರಾಜೇನ್‌ಬಾಬು, ಆಜಾದ್ ಮುಂತಾದವರನ್ನೆಲ್ಲಾ ಕರೆಸಿ ವೈಸರಾಯರು ಮಾತನಾಡಿದರು. ವೈಸರಾಯರು ಮಾತ್ರ ತಮ್ಮ ಯಾವ ಅಭಿಪ್ರಾಯವನ್ನೂ ತಿಳಿಸಲಿಲ್ಲ.

ನೆಹರುರವರೊಡನೆಯೂ, ಪಟೇಲರೊಡನೆಯೂ ಅನೇಕ ಸಾರಿ ಮಾತನಾಡಿ ಅವರ ಮನಸ್ಸು ಯಾವ ಕಡೆ ಓಡುತ್ತಿದೆ ಎಂಬುದನ್ನು ವೈಸರಾಯರು ಗ್ರಹಿಸಿದರು. ಇವರಿಬ್ಬರೂ ದೊಡ್ಡ ಪ್ರಮುಖರು, ಇವರಲ್ಲಿ ಪರಸ್ಪರ ಭಿನ್ನಾಭಿಪ್ರಾಯವಿದೆ: ಆದರೂ ಮುಖ್ಯ ವಿಷಯಗಳಲ್ಲಿ ಏಕಾಭಿಪ್ರಾಯಕ್ಕೆ ಬರುವುದು ಸಾಧ್ಯ ಎಂಬುದನ್ನು ತಿಳಿದುಕೊಂಡರು. ಆದ್ದರಿಂದ ಇವರಿಬ್ಬರನ್ನೂ ಒಲಿಸಿಕೊಂಡರೆ, ತಾವು ಸಮಸ್ಯೆಯನ್ನು ಬೇಗ ಪರಿಹರಿಸಬಹುದು ಎಂದು ಭಾವಿಸಿದರು.

ಮಾರ್ಚ್ ೩೦ರಲ್ಲಿ ವೈಸರಾಯರೊಡನೆ ಗಾಂಧೀಜಿ ಪ್ರಥಮ ಭೇಟಿ ನಡೆಸಿದರು. ಗಾಂಧೀಜಿಯವರು ತಮ್ಮ ದಕ್ಷಿಣ ಆಫ್ರಿಕಾದ ಸತ್ಯಾಗ್ರಹ, ಭಾರತಕ್ಕೆ ಬಂದ ಮೇಲೆ ರಾಜಕೀಯಕ್ಕೆ ಪ್ರವೇಶಿಸಿ ಪ್ರಾರಂಭದಲ್ಲಿ ಸರ್ಕಾರಕ್ಕೆ ಸಹಕಾರಿಗಳಾಗಿದ್ದರು, ಯಾವ ಕಾರಣದಿಂದ ಅಸಹಕಾರಿಗಳಾಗಬೇಕಾಯಿತು ಸತ್ಯ ಮತ್ತು ಅಹಿಂಸೆಯಲ್ಲಿ ತಮ್ಮ ದೃಢ ನಂಬಿಕೆ, ಇವೇ ಮುಂತಾದ್ದನ್ನು ತಿಳಿಸಿ, ಪ್ರಕೃತ ರಾಜಕೀಯಕ್ಕೆ ಬಂದರು. ಭೇಟಿ ಎರಡು ದಿನ ನಡೆಯಿತು. ಈಗಿನ ಸ್ಥಿತಿಯ ಬಗ್ಗೆ ತಾವು ವಿಭಜನೆಗೆ ವಿರೋಧಿಗಳೆಂದೂ, ಬ್ರಿಟಿಷರು ಜಿನ್ಹಾರವರನ್ನು ಕರೆದು ಅವರಿಗೆ ಎಲ್ಲಾ ಅಧಿಕಾರಗಳನ್ನೂ ಬಿಟ್ಟುಕೊಟ್ಟು ಹೊರಟಹೋಗಬಹುದೆಂದೂ. ತಾವು ಇದಾದ ನಂತರ ಜಿನ್ಹಾರವರೊಡನೆ ಕಲೆತು ಏನು ಅವಶ್ಯಕವೋ ಅದನ್ನು ಮಾಡುವುದಾಗಿಯೂ ಗಾಂಧೀಜಿ ತಿಳಿಸಿದರು. ಏನೇ ಆಗಲಿ ಬ್ರಿಟಿಷರು ಭಾರತವನ್ನು ಇಬ್ಭಾಗ ಮಾಡುವ ಕೆಲಸಕ್ಕೆ ಕೈಹಾಕಕೂಡದೆಂದು ತಿಳಿಸಿದರು. ಜವಹರಲಾಲ್ ನೆಹರೂರವರು ಈ ವಿಷಯದಲ್ಲಿ ಭಿನ್ನಾಭಿಪ್ರಾಯವುಳ್ಳವರಾಗಿರುತ್ತಾರೆಂದೂ ತಿಳಿಸಿದರು.

ತಾವು ತಿಳಿಸಿದ ಸಲಹೆ ವೈಸರಾಯರಿಗೆ ಅನುಕೂಲವೆಂದು ಕಂಡರೆ ಪುನಃ ತಾವು ವೈಸರಾಯರೊಡನೆ ಮಾತನಾಡುವುದಾಗಿಯೂ ತಿಳಿಸಿದರು. ಆಮೇಲೆ ಕೆಲವು ಪತ್ರವ್ಯವಹಾರಗಳು ವೈಸರಾಯರಿಗೂ ಗಾಂಧೀಜಿಗೂ ನಡೆದವು.

ಜಿನ್ಹಾ ಪಾಕೀಸ್ಥಾನ ಬೇಕೆಂದು ಹಟ ಮಾಡುತ್ತಿದ್ದುದು ನೆಹರುವಿಗೂ ಪಟೇಲರಿಗೂ ಬಹಳ ತಲೆನೋವು ಉಂಟುಮಾಡಿತು. ಇವರಿಬ್ಬರಿಗೂ, ಗಾಂಧೀಜಿಗಿದ್ದಂತೆಯೇ ಇಂಡಿಯಾದ ಐಕ್ಯತೆಯನ್ನು ಒಡೆಯಬಾರದು ಎಂಬ ಭಾವನೆ ಬಲವಾಗಿತು. ಆದರೆ ವಸ್ತುಸ್ಥಿತಿ ವಿರೋಧವಾಗಿರುವುದನ್ನು ನೆಹರು ಕಂಡರು. ೧೯೪೭ನೇ ಏಪ್ರಿಲ್ ೧೪ರಲ್ಲಿ ಮಾಡಿದ ಭಾಷಣದಲ್ಲಿ ನೆಹರು ಈ ರೀತಿಯಾಗಿ ನುಡಿದರು: “ನಮ್ಮ ಜನಾಂಗದ ಒಂದು ಭಾಗ ನಮ್ಮ ಕೂಡ ಒಟ್ಟಿಗೆ ನಡೆಯಲು ಇಷ್ಟಪಡುತ್ತಿಲ್ಲ; ಈಗ ಕಡೆಯದಾಗಿ ನಾವು ನಿರ್ಧಾರ ತೆಗೆದುಕೊಳ್ಳುವಕಾಲ ಬಂದಿದೆ. ಒಟ್ಟಾದ ಸಂಯುಕ್ತ ಭಾರತವೋ ಅಥವಾ ಭಾಗವಾದ ಭಾರತವೋ ಎಂಬುದನ್ನು ನಾವು ಈಗ ತೀರ್ಮಾನ ಮಾಡಬೇಕಾಗಿದೆ. ಇದನ್ನು ಕೂಡಲೆ ತೀರ್ಮಾನ ಮಾಡಬೇಕು. ಬ್ರಿಟಿಷನ್ನು ಇಂಡಿಯಾವನ್ನು ೧೯೪೮ರಲ್ಲಿ ಬಿಟ್ಟು ಹೊರಡುವುದಾಗಿ ತಿಳಿಸಿದೆ. ಪಂಜಾಬ್ ಮತ್ತು ಬಂಗಾಳದ ಭಾಗಗಳು ತಾವು ಬೇರೆಯಾಗುವುದಾಗಿ ನಿರ್ಧರಿಸಿದರೆ ಯಾರು ಏನೂ ಮಾಡುವ ಹಾಗಿಲ್ಲ. ಹೀಗೆ ಉದ್ಭವಿಸಿರುವ ಸಮಸ್ಯೆಗಳಿಗೆ ಮುಖಂಡರು ಕೂಡಲೇ ಪರಿಹಾರವನ್ನಾಲೋಚಿಸಬೇಕು.”

ನೆಹರು ತಮ್ಮೊಳಗೇ ಆಲೋಚಿಸಿ ಭಾರತವನ್ನು ಒಡೆಯಬೇಕಾಗುತ್ತದೆಯೇನೋ ಎಂಬ ತೀರ್ಮಾನಕ್ಕೆ ಬರುತ್ತಿದ್ದರು. ಮೌಂಟ್ ಬೇಟನ್ನರು ಭಾರತದಲ್ಲಿ ಉದ್ಭವಿಸಿರುವ ಸಮಸ್ಯೆಗಳನ್ನೆಲ್ಲಾ ತಮ್ಮೊಳಗೇ ಆಲೋಚನೆ ಮಾಡಿಕೊಂಡು, ಭಾರತವನ್ನು ಇಬ್ಭಾಗ ಮಾಡದೆ ಸಮಸ್ಯೆ ಬಗೆ ಹರಿಯಲಾರದು ಎಂಬುದನ್ನು ದೃಢಪಡಿಸಿಕೊಂಡರು. ಆದರೆ ತಮ್ಮ ಈ ಆಲೋಚನೆಗೆ ಭಾರತದ ಮುಖಂಡರ ಬೆಂಬಲನ್ನು ಪಡೆದುಕೊಳ್ಳಲು ಕೂಡಲೇ ಪ್ರಯತ್ನಿಸಿದರು. ವಲ್ಲಭಭಾಯಿ ಮತ್ತು ನೆಹರು ಅವರೊಡನೆ ಅನೇಕ ಸಾರಿ ಸಮಾಲೋಚನೆ ನಡೆಸಿದರು. ಇದ್ದ ಸಂಗತಿಗಳನ್ನೆಲ್ಲಾ ಅವರಿಗೆ ತಿಳಿಸಿದರು: “ಈ ಸಮಯ ಬಿಟ್ಟರೆ ಅವರಿಗೆ ಎಂದೂ ಸ್ವಾತಂತ್ರ್ಯ ಸಿಗಲಾರದು; ಇಂಗ್ಲೆಂಡಿನ ಎಲ್ಲಾ ಪಾರ್ಟಿಗಳೂ ಇಂಡಿಯಾಕ್ಕೆ ಸ್ವಾತಂತ್ರ್ಯ ಕೊಡಲು ಸಿದ್ಧವಾಗಿವೆ: ಇಂಟರಿಂ ಸರ್ಕಾರ ಒಗ್ಗಟ್ಟಿನಿಂದ ನಡೆಯುತ್ತಿಲ್ಲ; ಪಾಕೀಸ್ಥಾನಕ್ಕಾಗಿ ಲೀಗು ಹಟ ಮಾಡುತ್ತಿದೆ; ಅದರಡೊನೆ ಎಷ್ಟು ಹೆಣಗಾಡಿದರೂ ಅಷ್ಟೆ; ಬ್ರಿಟಿಷರು ಈ ದೇಶ ಬಿಡುವಾಗ ಬಲವಾದ ಸರ್ಕಾರಕ್ಕೆ ಈ ದೇಶವನ್ನು ಬಿಟ್ಟು ಹೋಗಬೇಕಾಗುತ್ತದೆ; ಕಾಂಗ್ರೆಸ್‌ಗೆ ಬಿಟ್ಟು ಹೋಗಲು ಜಿನ್ಹಾ ಮತ್ತು ಮುಸ್ಲಿಂ ಲೀಗ್ ಒಪ್ಪುವುದಿಲ್ಲ; ಇಂಡಿಯಾದಲ್ಲಿ ಈಗ ನಡೆಯುತ್ತಿರುವ ಹತ್ಯಾಕಾಂಡ ಇನ್ನೂ ಹೆಚ್ಚುವುದು: ಜಿನ್ಹಾ ಮತ್ತು ಮುಸ್ಲಿಂ ಲೀಗಿಗೇ ಅಧಿಕಾರ ಬಿಟ್ಟು ಹೋಗಲು ಆಗುವುದಿಲ್ಲ. ಆದ್ದರಿಂದ ಭಾರತವನ್ನು ವಿಭಜನೆ ಮಾಡದೆ ಬೇರೆ ದಾರಿಯೇ ಇಲ್ಲ.” ಈಗಲೇ ಈ ವಿಭಜನೆ ಮಾಡಿ, ಆದಷ್ಟು ಬೇಗ ಬ್ರಿಟನ್ನು ಇಂಡಿಯವನ್ನು ಬಿಡಲು ನಿರ್ಧರಿಸಿದೆ ಎಂದು ತಿಳಿಸಿದರು. ಆಜಾದ್‌ರಿಗೆ ಇನ್ನೆರಡು ವರ್ಷಕಾಲ ಮುಂದೆ ಹಾಕಬೇಕು ಎಂಬ ಅಪೇಕ್ಷೆ, ಆದರೆ ಮೌಂಟ್ ಬೇಟನ್ ಅದಕ್ಕೆ ಒಪ್ಪಲಿಲ್ಲ. ಪಟೇಲರಿಗೂ ನೆಹರುವಿಗೂ ವಿಭಜನೆ ಬಿಟ್ಟು ಬೇರೆ ದಾರಿಯೇ ಕಾಣಲಿಲ್ಲ. ಭಾರತ ಇಬ್ಭಾಗವಾಗುವುದು ಇಬ್ಬರಿಗೂ ಸಂಕಟದ ವಿಷಯ. ಗಾಂಧೀಜಿಯಂತೂ ಅದಕ್ಕೆ ಒಪ್ಪುವುದೇ ಇಲ್ಲ. ಏನು ಮಾಡುವುದೋ ಗೊತ್ತಾಗಲಿಲ್ಲ. ಅಳೆದೂ ಸುರಿದೂ ಮಾಡಿದ್ದಾಯಿತು.

೧೯೪೭ನೇ ಮೇ ತಿಂಗಳಿನ ಆದಿಯಲ್ಲಿ ಮೌಂಟ್ ಬೇಟನ್‌ರು ತಮ್ಮ ಭಿಜನೆಯ ಅಭಿಪ್ರಾಯವನ್ನು ಕಾಂಗ್ರೆಸ್ ಮುಖಂಡರ ಮುಂದೆಯೂ ಮುಸ್ಲಿಂಲೀಗ್ ಮುಖಂಡರ ಮುಂದೆಯೂ ಸಿಖ್ ಮುಖಂಡರ ಮುಂದೆಯೂ ಇಟ್ಟರು.

ಮೌಂಟ್‌ಬೇಟನ್‌ರು ಪಂಜಾಬ್ ಮತ್ತು ಬಂಗಾಳದ ಗೌರ್ನರುಗಳನ್ನು ಕರೆಸಿ, ಸಲಹೆ ನಡೆಸಿದರು. ಜಿನ್ಹಾ ಪಂಜಾಬ್ ಮತ್ತು ಬಂಗಾಳ ಎರಡು ಪ್ರಾಂತಗಳನ್ನೂ ಅನಾಮತ್ತಾಗಿ ಪಾಕೀಸ್ಥಾನಕ್ಕೆ ಸೇರಿಸಬೇಕೆಂದು ಕೇಳಿದರು. ವೈಸರಾಯರು “ಇದು ಹೇಗೆ ಸಾಧ್ಯ? ಅವನ್ನು ಎರಡು ಭಾಗವಾಗಿ ಒಡೆಯ ಬೇಕು. ಮುಸ್ಲಿಂ ಮೆಜಾರಿಟಿ ಪ್ರದೇಶಗಳನ್ನು ಪಾಕೀಸ್ಥಾನಕ್ಕೂ, ಮುಸ್ಲಿಮೇತರ ಮೆಜಾರಿಟಿ ಇರುವ ಭಾಗಗಳನ್ನು ಹಿಂದೂಸ್ಥಾನಕ್ಕೂ ಸೇರಿಸಬೇಕಾಗುತ್ತದೆ” ಎಂದು ಹೇಳಿದರು.

ಜಿನ್ಹಾ ಪ್ರಾರಂಭದಲ್ಲಿ ಇದಕ್ಕೆ ಒಪ್ಪಲಿಲ್ಲ, ವೈಸರಾಯರು ಕೇಳಿದರು: “ನೀವು ಹೇಳುವುದು ಯಾವ ನ್ಯಾಯ? ಇಂಡಿಯಾದಲ್ಲಿ ಹಿಂದೂಗಳು ಮೇಜಾರಟಿಯಲ್ಲಿದ್ದಾರೆ, ಅದಕ್ಕಾಗಿ ಇಂಡಿಯಾವನ್ನು ಎರಡು ಭಾಗವಾಗಿ ಒಡೆಯಬೇಕು ಅನ್ನುತ್ತೀರಿ. ಪಂಜಾಬ್‌ನಲ್ಲಿಯೂ, ಬಂಗಾಳದಲ್ಲಿಯೂ ಮುಸ್ಲಿಮೇತರ ಪ್ರಜೆಗಳಿದ್ದಾರೆ. ಅವರನ್ನು ಮುಸ್ಲಿಂ ಮೆಜಾರಿಟಿ ಅಧೀನದಲ್ಲಿಡುವುದು ಯಾವ ನ್ಯಾಯ?

ಕಡೆಗೆ ಜಿನ್ಹಾ ಪಂಜಾಬ್ ಮತ್ತು ಬಂಗಾಳದ ವಿಭಜನೆಗೆ ಒಪ್ಪಿಕೊಂಡರು. ಹೀಗೆ ವೈಸರಾಯರು ಮುಸ್ಲಿಂ ಲೀಗ್ ಮತ್ತು ಜಿನ್ಹಾರನ್ನು ಒಪ್ಪಿಸಿದರು. ಇನ್ನು ಸಿಖ್ಖರು ಒಪ್ಪಬೇಕು. ಬಲದೇವ್ ಸಿಂಗರೊಡನೆ ಮಾತನಾಡಿ, ಪಂಜಾಬನ್ನು ಎರಡು ಭಾಗ ಮಾಡುವುದರಿಂದ ಸಿಖ್ಖರ ರಕ್ಷಣೆಯೂ ಆಗುವುದು ಎಂದು ಒಪ್ಪಿಸಿದರು. ಭಾರತ ವಿಭಜನೆಯ ಬಗ್ಗೆ ತಾವು ಬರೆದಿರುವ ಗ್ರಂಥದಲ್ಲಿ ಅಬುಲ್ ಕಲಾಂ ಆಜಾದ್ ಹೀಗೆ ತಿಳಿಸುತ್ತಾರೆ: “ಲಾರ್ಡ್ ಮೌಂಟ್ ಬೇಟನ್ನರ ಯೋಜನೆಗೆ ಭಾರತದಲ್ಲಿ ಮೊದಲು ಬಲಿಬಿದ್ದ ಮನುಷ್ಯರು ಸರದಾರ್ ಪಟೇಲರೆಂಬ ಸಂಗತಿಯನ್ನು ಬರೆದಿಡಬೇಕು.

“ಸರ್‌ದಾರ್ ಪಟೇಲರೂ, ಜವಹರಲಾಲರೂ ವಿಭಜನೆಯ ಅನುಮೋದಕರಾಗಿದ್ದ ಈ ಸಮಯದಲ್ಲಿ ನನ್ನ ಒಂದೇ ಭರವಸೆಯ ಸ್ಥಾನ ಗಾಂಧೀಜಿ. ಅವರು ಮಾರ್ಚ್ ೩೧ರಲ್ಲಿ ಪಾಟ್ನಾದಿಂದ ಬಂದರು. ಒಡನೆಯೇ ನಾನು ಅವರನ್ನು ಕಾಣಲು ಹೋದೆ. ಅವರು ಮೊಟ್ಟಮೊದಲು ಆಡಿದ ಮಾತು. ‘ವಿಭಜನೆ ಈಗ ಒಂದು ಬೆದರಿಕೆಯಾಗಿ ಬಿಟ್ಟಿದೆ; ವಲ್ಲಭಭಾಯಿ ಮತ್ತು ಜವಹರಲಾಲ್ ಸೋತ ಹಾಗೆ ಕಾಣುತ್ತದೆ. ನೀವೂ ಬದಲಾಯಿಸಿದ್ದೀರಾ?’ ನಾನು ಉತ್ತರ ಕೊಟ್ಟೆ; ‘ವಿಭಜನೆಗೆ ನಾನು ಹಿಂದೆಯೂ ವಿರೋಧಿಯೇ, ಇಂದಿಗೂ ವಿರೋಧಿಯೇ… ನೀವು ವಿಭಜನೆಗೆ ವಿರೋಧವಾಗಿ ನಿಂತರೆ, ನಾವು ಪರಿಸ್ಥಿತಿಯನ್ನು ಇನ್ನೂ ಉಳಿಸಬಹುದು. ನೀವು ಅದನ್ನು ಒಪ್ಪಿಕೊಂಡ ಪಕ್ಷದಲ್ಲಿ ಇಂಡಿಯಾ ನಷ್ಟವಾದಂತೆಯೇ.’

“ಗಾಂಧೀಜಿ ಹೇಳಿದರು: ‘ನೀವು ಕೇಳುವುದು ಎಂಥ ಪ್ರಶ್ನೆ? ವಿಭಜನೆಯನ್ನೊಪ್ಪಿಕೊಳ್ಳುತ್ತೇನೆಂದು ಕಾಂಗ್ರೆಸ್ ಇಷ್ಟಪಡುವುದಾದರೆ, ಅದು ನನ್ನ ಶವದಮೇಲೆ ನಡೆಯಬೇಕು. ನಾನು ಬದುಕಿರುವವರೆಗೂ ಭಾರತದ ವಿಭಜನೆಗೆಂದೂ ಒಪ್ಪುವುದಿಲ್ಲ. ನನಗೆ ಶಕ್ಯವಾದರೆ ಕಾಂಗ್ರೆಸ್ಸು ಅದನ್ನೊಪ್ಪಿಕೊಳ್ಳಲು ನಾನು ಬಿಡುವುದಿಲ್ಲ”.

“ಅದೇ ದಿನ ಇನ್ನು ಸ್ವಲ್ಪ ಹೊತ್ತಾದ ಮೇಲೆ, ಗಾಂಧೀಜಿ ಮೌಂಟ್ ಬೇಟನ್‌ರನ್ನು ಕಂಡರು ಮಾರನೆಯ ದಿನ ಪುನಃ, ಏಪ್ರಿಲ್ ೨ರಂದು, ನೋಡಿದರು. ಮೌಂಟ್‌ಬೇಟನ್ನರನ್ನು ಮೊದಲು ಸಲ ಅವರು ಕಂಡು ಹಿಂತಿರುಗಿದ ಸ್ವಲ್ಪ ಸಮಯದಲ್ಲಿ ಅವರನ್ನು ಕಾಣಲು ಸರ್‌ದಾರ್ ಪಟೇಲರು ಬಂದರು. ಎರಡು ಘಂಟೆಗಳಿಗೆ ಮೀರಿ ಗಾಂಧೀಜಿ ಅವರೊಡನೆ ರಹಸ್ಯವಾಗಿ ಮಾತಾಡಿದರು. ಈ ಸಂಭಾಷಣೆಯಲ್ಲಿ ಏನು ನಡೆಯಿತೋ ಗೊತ್ತಿಲ್ಲ. ನಾನು ಪುನಃ ಗಾಂಧೀಜಿಯನ್ನು ಕಂಡಾಗ, ನನಗೆ ನನ್ನ ಬಾಳಿನಲ್ಲೇ ಅತ್ಯಂತ ದೊಡ್ಡದಾದ ಧಕ್ಕೆ ಬಡಿಯಿತು. ಅವರು ಬದಲಾಯಿಸಿದ್ದರೆಂದು ನಾನು ಕಂಡೆ. ಇನ್ನೂ ಅವರು ವಿಭಜನೆಗೆ ಬಹಿರಂಗವಾಗಿ ಮೊದಲಿನಷ್ಟು ರಭಸವಾಗಿ ಮಾತನಾಡಲಿಲ್ಲ. ಇದಕ್ಕಿಂತಲೂ ಹೆಚ್ಚಾಗಿ ನನಗೆ ಆಶ್ಚರ್ಯವನ್ನುಂಟುಮಾಡಿದ, ನನ್ನ ಮನಸ್ಸನ್ನು ಬಡಿದ, ಸಂಗತಿ ಎಂದರೆ, ಈವರಾಗಲೇ ಸರದಾರ್ ಪಟೇಲರು ಬಳಸಿದ್ದ ವಾದಗಳನ್ನು ಗಾಂಧೀಜಿ ಪುನಶ್ಚರಣೆ ಮಾಡತೊಡಗಿದರು. ಎರಡು ಘಂಟೆಗಳಿಗೆ ಮೇಲ್ಪಟ್ಟು ನಾನು ಅವರ ಮನಸ್ಸನ್ನು ತಿರುಗಿಸಲು ಯತ್ನಿಸಿದೆ. ಅವರ ಮನಸ್ಸಿಗೆ ತಟ್ಟಲಿಲ್ಲ.

“ವಿಷಣ್ಣನಾಗಿ ನಾನು ಕಡೆಗೆ ಹೇಳಿದೆ: ಈ ಅಭಿಪರಾಯಗಳನ್ನು ನೀವೂ ಈಗ ಸ್ವೀಕರಿಸಿರುವುದಾದರೆ ಭಾರತವನ್ನು ವಿನಾಶದಿಂದ ಕಾಪಾಡುವ ಯಾವ ಭರವಸೆಯನ್ನೂ ನಾನು ಕಾಣೆ.

“ನಾನಾಡಿದ ಮಾತುಗಳಿಗೆ ಗಾಂಧೀಜಿ ಉತ್ತರ ಕೊಡಲಿಲ್ಲ. ಗಾಂಧೀಜಿ ವಿಭಜನೆಗೆ ಒಪ್ಪಿದರೆಂದು ಹೇಳಲಾಗುವುದಿಲ್ಲ. ಅವರು ಅದನ್ನು ವಿರೋಧಿಸಲಿಲ್ಲ. ವರ್ಕಿಂಗ್ ಕಮಿಟಿಯೊಡನೆ ಗಾಂಧೀಜಿ ಬಹಳ ವಾದಿಸಿದರು. ತಾವು ವೈಸ್‌ರಾಯರಿಗೆ ಹೇಳಿದಂತೆ, ಜಿನ್ಹಾರಿಗೆ ಸರ್ಕಾರವನ್ನು ಒಪ್ಪಿಸಿ ಬ್ರಿಟಿಷರು ಹೊರಟು ಹೋಗಲಿ, ಆಮೇಲೆ ಜಿನ್ಹಾರೊಡನೆ ನಾವು ವಾದಿಸೋಣ, ಎಂದು ಹೇಳಿದರು. ಏನಾದರೂ ಇಂಡಿಯಾವನ್ನು ಬ್ರಿಟಿಷರು ಒಡೆದು ಹೋಗುವುದು ಬೇಡ ಎಂದರು. ಸರಹದ್ದಿನ ಗಾಂಧಿಯವರೂ ಇದೇ ಅಭಿಪರಾಯವನ್ನು ಪ್ರತಿ ಪಾದಿಸಿದರು. ಪಂಜಾಬ್ ಮತ್ತು ಬಂಗಾಳವನ್ನು ಒಡಿಯಿರಿ ಎಂದು ಕಾಂಗ್ರೆಸು ಬ್ರಿಟಿಷರಿಗೆ ಸಲಹೆ ಕೊಡುವುದು ಹುಚ್ಚುತನ; ಇಡೀ ವಿಭಜನೆಯ ಅಭಿಪ್ರಾಯವೇ ನನಗೆ ಸರಿಯಿಲ್ಲ ಎಂದು ಗಾಂಧೀಜಿ ಪುನಃ ಪುನಃ ವರ್ಕಿಂಗ್ ಕಮಿಟಿಯಲ್ಲಿ ಹೇಳಿದರು. ವಿಭಜನೆ ನಮ್ಮ  ಯಾವ ಸಮಸ್ಯೆಗಳನ್ನೂ ಪರಿಸಹರಿಸಲಾರದು; ಈಗ ಇರುವುದಕ್ಕಿಂತ ಹೆಚ್ಚು ಕಷ್ಟಗಳನ್ನು ಅದು ತರುತ್ತದೆ; ಅದು ಬೇಡ. ಬೇಡ, ಬೇಡ, ಎಂದುವರ್ಕಿಂಗ್ ಕಮಿಟಿಗೆ ತಿಳಿಸಿದರು. ಆದರೆ  ವರ್ಕಿಂಗ್ ಕಮಿಟಿ ತನ್ನ ಅಭಿಪ್ರಾಯವನ್ನು ಬದಲಾಯಿಸಲಿಲ್ಲ. ಗಾಂಧೀಜಿ ತಮ್ಮ ಅಭಿಪ್ರಾಯವನ್ನು ಬದಲಾಯಿಸಲಿಲ್ಲ.”

ಗಾಂಧೀಜಿ ಮರುದಿನ ವೈಸರಾಯರಿಗೆ ಪತ್ರ ಬರೆದು, “ವರ್ಕಿಂಗ್‌ಕಮಿಟಿ ನನ್ನ ಸಲಹೆಗೆ ಒಪ್ಪಲಿಲ್ಲ. ನಾನೂ ವರ್ಕಿಂಗ್ ಕಮಿಟಿಯೂ ನಮ್ಮ ನಮ್ಮ ಅಭಿಪ್ರಾಯಗಳಿಗೇ ಅಂಟಿಕೊಂಡಿದ್ದೇವೆ. ಈಗ ನಮ್ಮ ದಾರಿಗಳು ಬೇರೆ ಬೇರೆಯಾಗಿವೆ” ಎಂದು ತಿಳಿಸಿದರು. ಮತ್ತೂ ತಿಳಿಸಿದರು: “ಇನ್ನು ಮೇಲೆ ನೀವು ನನ್ನ ವಿಷಯ ಆಲೋಚಿಸಬೇಕಾಗಿಲ್ಲ. ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸದಸ್ಯರು ರಾಷ್ಟ್ರದ ಅನುಭವಶಾಲೀ ಸತ್ಯಸಂಧ ಸೇವಕರು. ಅವರು ಕಾಂಗ್ರೆಸಿನ ಆಶಯವನ್ನು ಪೂರ್ಣವಾಗಿ ಪ್ರತಿಬಿಂಬಿಸುತ್ತಾರೆ. ನನ್ನ ಅಭಿಪ್ರಾಯ ನನ್ನದು ಅದು ಯಾರ ಅಭಿಪ್ರಾಯವನ್ನೂ ಪ್ರತಿನಿಧಿಸುವುದಿಲ್ಲ. ನನ್ನನ್ನು ನನಗೆ ಬಿಟ್ಟುಬಿಡಿ.”

ಗಾಂಧೀಜಿ ಏಪ್ರಿಲ್ ೧೨ನೇ ತಾರೀಖು ಪೂನಾಕ್ಕೆ ಹೊರಟರು. ಏತನ್ಮಧ್ಯೆ ವೈಸ್‌ರಾಯರು ಕೆಲಕಾಲ ಸಿಮ್ಲಾಕ್ಕೆ ಮಿತಪರಿವಾರದೊಡನೆ ಹೋದರು. ಅಲ್ಲಿ ಆಖೈರಾದ ತೀರ್ಮಾನವನ್ನು ತೆಗೆದುಕೊಂಡು, ಅದಕ್ಕೆ ಲಂಡನ್ನಿನಲ್ಲಿ ಬ್ರಿಟಿಷ್‌ಕ್ಯಾಬಿನೆಟ್ ಒಪ್ಪಿಗೆ ಪಡೆದು, ಇಂಡಿಯಾಕ್ಕೆ ಬಂದಕೂಡಲೆ ವಿಭಜನೆಯ ವಿಷಯವನ್ನು ಪೋಷಿಸಬೇಕೆಂದು ಯೋಚಿಸಿದರು. ತಮ್ಮ ಜತೆಯಲ್ಲಿ ನೆಹರುವನ್ನು ಕರೆದುಕೊಂಡು ಹೋದರು.