ಮೌಲಾನಾ ಆಜಾದರು ಮೇ ೧೪ರಲ್ಲಿ ವೈಸರಾಯರನ್ನು ಸಿಮ್ಲಾದಲ್ಲಿ ಕಂಡು ಮಾತನಾಡಿದರು. ಕ್ಯಾಬಿನೆಟ್ ಮಿಷನ್ನಿನ ಸಲಹೆಗಳನ್ನೇ ಜಾರಿಗೆ ತರಲು ಯತ್ನಿಸಬೇಕೆಂದೂ, ಏನೇ ಆಗಲಿ ಭಾರತವನ್ನು ವಿಭಜಿಸಕೂಡದೆಂದೂ, ಯಾವುದೂ ಸಾಧ್ಯವಿಲ್ಲದಿದ್ದರೆ ಈ ಸಮಸ್ಯೆಯ ಪರಿಹಾರವನ್ನು ಒಂದೆರಡು ವರ್ಷ ಮುಂದೆ ಹಾಕಬೇಕೆಂದೂ ಕೇಳಿಕೊಂಡರು.

ಸಿಮ್ಲಾದಲ್ಲಿ ವೈಸರಾಯರು ವಿ.ಪಿ. ಮೆನನ್‌ರ ಸಹಾಯದೊಡನೆ ಆಖೈರ್ ಡ್ರಾಫ್ಟನ್ನು ತಯಾರಿಸಿದರು ಆದರೆ ಅವರಿಗೆ ಒಂದು ಯೋಚನೆ ಬಂದಿತು. “ನಾನು ಮಾಡಿದ ಈ ಕರಡು ಡ್ರಾಫ್ಟನ್ನು ಭಾರತೀಯ ರಾಜನೀತಿಜ್ಞರು ಒಪ್ಪದಿದ್ದರೇನು ಮಾಡುವುದು? ಆಗ ಎಲ್ಲಾ ಕೆಟ್ಟುಹೋಗುವುದು” ಆದ್ದರಿಂದ ಮೊದಲು ಅದನ್ನು ನೆಹರುವಿಗೆ ರಾತ್ರಿ ಕಳುಹಿಸಿ, ಬೆಳಗಾದ ಮೇಲೆ ತಮ್ಮ ಅಭಿಪ್ರಾಯವನ್ನು ತಿಳಿಸಬೇಕೆಂದು ಕೋರಿದರು. ನೆಹರು ಆ ಡ್ರಾಪ್ಟನ್ನು ಚೆನ್ನಾಗಿ ಪರಿಶೀಲಿಸಿ, ವೈಸ್‌ರಾಯರಿಗೆ ಒಂದು ಸ್ವಂತ ಪತ್ರ ಬರೆದು ಕಳುಹಿಸಿದರು. ಆ ಪತ್ರದಲ್ಲಿ ಹೀಗೆ ತಿಳಿಸಿದರು. “ಕಾಂಗ್ರೆಸು ಈ ಸಲಹೆಗಳನ್ನು ತಿರಸ್ಕರಿಸುವುದಲ್ಲದೆ ಇಡೀ ದೇಶದಲ್ಲಿ ಉಗ್ರವಾದ ಪ್ರತಿಕ್ರಿಯೆ ಉಂಟಾಗುವುದು.”

ವೈಸರಾಯರಿಗೆ ನೆಹರೂರ ಈ ಮಾತುಗಳನ್ನು ಓದಿ. ಮದ್ದು ಸಿಡಿದಂತಾಯಿತು. ಈ ಸಲಹೆಗಳನ್ನು ಮೇ ೧೭ರಲ್ಲಿ ಎಲ್ಲಾ ಪಾರ್ಟಿಗಳ ಮುಂದೆ ಇಡಬೇಕೆಂದಿದ್ದರು. ವೈಸರಾಯರು ಪುನಃ ವಿ.ಪಿ. ಮೆನನ್‌ರೊಡನೆ ಆಲೋಚಿಸಿ, ನೆಹರೂರಿಗೆ ಒಪ್ಪಿಗೆಯಾಗುವ ರೀತಿಯಲ್ಲಿ ಅದನ್ನು ತಿದ್ದಿದರು. ಇದು ನೆಹರುಗೆ ತೃಪ್ತಿಯುಂಟುಮಾಡಿತು. ವೈಸರಾಯರು ಈ ಹೊಸ ಸಲಹೆಗಳೊಡನೆ ಲಂಡನ್ನಿಗೆ ಹೋಗಿ, ಇಂಗ್ಲೆಂಡಿನ ಮಂತ್ರಿಮಂಡಲದ ಒಪ್ಪಿಗೆ ಪಡೆದರು.

ದೆಹಲಿಗೆ ವೈಸರಾಯರು ಮೇ ೩೦ ಕ್ಕೆ ಹಿಂತಿರುಗಿದರು. ದೇಶೀಯ ರಾಜರುಗಳ ಪ್ರತಿನಿಧಿಗಳಾದ ಬಿಕಾನೀರ್ ಮಹಾರಾಜರು ಮತ್ತು ಭೋಪಾಲ್ ನವಾಬರೊಡನೆಯೂ ಮಾತನಾಡಿ, “ಪ್ಯಾರಮಭಂಟ್ಸಿಯನ್ನು ಮುಮದೆಬರುವ ಸರ್ಕಾರಗಳಿಗೆ ಕೊಡಲಾಗುವುದಿಲ್ಲ. ಬ್ರಿಟಿಷರು ಇಂಡಿಯಾ ಬಿಟ್ಟ ಇಂಡಿಯಾ ಬಿಟ್ಟ ದಿವಸವೇ ಅದು ಮಾಯವಾಗುವುದು. ರಾಜರು ಸ್ವತಂತ್ರರಾಗುವರು. ಅವರು ಇಂಡಿಯಾವನ್ನಾದರೂ ಅಥವಾ ಪಾಕಿಸ್ಥಾನವನ್ನಾದರೂ ಸೇರಬಹುದು” ಎಂದು ತಿಳಿಸಿದರು. ಬ್ರಿಟಿಷ್ ಇಂಡಿಯಾದ ಸಮಸ್ಯೆ ಇತ್ಯರ್ಥವಾದ ಮೇಲೆ, ತಾವು ದೇಶೀಯ ಸಂಸ್ಥಾನಗಳ ಕಡೆ ಗಮನವನ್ನುಕೊಡುವುದಾಗಿಯೂ ತಿಳಿಸಿದರು.

ಜೂನ್ ೨ನೇ ತಾರೀಖು ವೈಸರಾಯರು ಎಲ್ಲ ಮುಖಂಡರುಗಳ ಸಭೆಯನ್ನು ಕರೆದರು. ನೆಹರು, ಜಿನ್ಹಾ, ಪಟೇಲ್, ಲಿಯಾಕತ್ ಅಲೀ ಖಾನ್ ಮತ್ತು ಬಲದೇವ್ ಸಿಂಗ್ ಇವರುಗಳನ್ನು ಆಹ್ವಾನಿಸಿದರು. ಕಾಂಗ್ರೆಸ್ ಅಧ್ಯಕ್ಷ ಕೃಪ ಲಾನಿಯವರನ್ನೂ ಆಹ್ವಾನಿಸಿದರು. ಜಿನ್ಹಾರ ಅಪೇಕ್ಷೆಯಂತೆ ಅಬ್ದುಲ್ ರಬ್ ನಿಷ್ಟಾರ್‌ರನ್ನೂ ಆಹ್ವಾನಿಸಲಾಯಿತು. ಪ್ರಾರಂಭದಲ್ಲಿ ವೈಸರಾಯರೇ ಮಾತನಾಡಿ, ಭಾರತ ವಿಭಜನೆಯ ಯೋಜನೆಯ ಕಾಪಿಗಳನ್ನು ಎಲ್ಲ ಮುಖಂಡರ ಕೈಗೆ ಕೊಟ್ಟು, ಅವರುಗಳ ಪ್ರತಿಕ್ರಿಯೆಯನ್ನು ಆ ದಿನದ ಅರ್ಧರಾತ್ರಿಯೊಳಗೆ ತಮಗೆ ತಿಳಿಸಬೇಕೆಂದು ಪ್ರಾರ್ಥಿಸಿದರು.

ಕಾಂಗ್ರೆಸ್ ಪಾರ್ಟಿಯಿಂದ ಉತ್ತರ ಬಂದಿತು: “ನಾವು ಒಪ್ಪುತ್ತೇವೆ, ಆದರೆ ಮುಸ್ಲಿಂ ಲೀಗೂ ಒಪ್ಪಬೇಕು. ಹಾಗೆ ಒಪ್ಪಿದರೆ ನಮ್ಮ ಒಪ್ಪಿಗೆಯೂ ಇದೆ.”

ಜಿನ್ಹಾ ರಾತ್ರಿ ವೈಸ್‌ರಾಯರನ್ನು ನೋಡಿದರು. ತಾವೂ ಮುಸ್ಲಿಂ ಲೀಗ್ ವರ್ಕಿಂಗ್ ಕಮಿಟಿಯೂ ಆಲ್ ಇಂಡಿಯಾ ಮುಸ್ಲಿಂ ಲೀಗಿಗೆ ಯೋಜನೆಯನ್ನು ಒಪ್ಪಬಹುದು ಎಂದು ಶಿಫಾರಸು ಮಾಡುವೆವು ಎಂದರು. ಈಗ ಅದಕ್ಕಿಂತ ಹೆಚ್ಚಾಗಿ ಏನನ್ನೂ ಹೇಳಲೂ ಸಾಧ್ಯವಿಲ್ಲವೆಂದು ಜಿನ್ಹಾ ನುಡಿದರು. ಆಲ್ ಇಂಡಿಯಾ ಮುಸ್ಲಿಂ ಲೀಗ್ ಒಪ್ಪಿದರೇನೇ, ಅದು ನಿಜವಾದ ಒಪ್ಪಿಗೆಯೆಂದರು. ವೈಸ್‌ರಾಯರು “ಅಷ್ಟುಕಾಲ ತಡೆಯುವುದಕ್ಕಾಗುವುದಿಲ್ಲ. ಮುಸ್ಲಿಂ ಲೀಗ್ ಒಪ್ಪಿದರೆ ತಾವೂ ಒಪ್ಪುವುದಾಗಿ ಕಾಂಗ್ರೆಸ್ ತಿಳಿಸಿದೆ. ಒಂದು ವಾರ ತಡವಾದರೆ ಜಿನ್ಹಾ ಪಾಕೀಸ್ಥಾನವನ್ನು ಕಳೆದುಕೊಳ್ಳಬಹುದು ಎಂದು ಅವರಿಗೆ ಎಚ್ಚರಿಗೆ ಕೊಟ್ಟರು. ಆದರೆ ಇದಕ್ಕೂ ಜಿನ್ಹಾ ಬಗ್ಗಲಿಲ್ಲ.

ವೈಸ್‌ರಾಯರಿಗೆ ಜಿನ್ಹಾ ಹೇಳಿದರು: “ನಾನು ಬ್ರಿಟಿಷ್ ಮುಖ್ಯಮಂತ್ರಿಗೆ ಕೇಬಲ್ ಕಳುಹಿಸಲೆ, ಅವರು ನಾಳೆ ಯೋಜನೆಯನ್ನು ಬಹಿರಂಗಪಡಿಸಬಹುದು”. ಜಿನ್ಹಾ “ಆಗಲಿ” ಎಂದು ಉತ್ತರವಿತ್ತರು. ವೈಸರಾಯರು ಜಿನ್ಹಾರಿಗೆ “೩ನೇ ತಾರೀಖು ನಡೆಯುವ ಮೀಟಿಂಗಿನಲ್ಲಿ ಜಿನ್ನಾರಿಂದ ನನಗೆ ಬೇಕಾದ ಭರವಸೆಗಳು ಬಂದಿವೆ. ಎಂದು ಹೇಳುವುದಾಗಿಯೂ, ಆಗ ಅದಕ್ಕೆ ಜಿನ್ಹಾರವರು “ಹೌದು” ಎಂಬ ಅರ್ಥ ಬರುವ ಹಾಗೆ ತಲೆ ತೂಗಿದರೆ ಸಾಕು ಎಂದೂ ಹೇಳಿದರು.

ಮರು ದಿವಸ, ಜೂನ್ ೩ನೇ ತಾರೀಖು, ಬೆಳಿಗ್ಗೆ ವೈಸರಾಯರು ನೆಹರು, ಜಿನ್ಹಾ, ಪಟೇಲ್, ಲಿಯಾಕತ್ ಅಲೀ ಖಾನ್, ಕೃಪಲಾನಿ, ಅಬ್ದುಲ್ ರಬ್‌ನಿಷ್ಟಾರ್, ಬಲದೇವ್ ಸಿಂಗ್ ಇವರೊಡನೆ ಒಟ್ಟಿಗೆ ಕಲೆತು, ವಿಭಜನೆಯ ಯೋಜನೆಗೆ ಒಪ್ಪಿಗೆ ತೆಗೆದುಕೊಂಡರು. ವೈಸ್‌ರಾಯರು ಜಿನ್ಹಾರವರ ಕಡೆ ನೋಡಿ ಒಪ್ಪಿಗೆಯೇ ಎಂದು ಕೇಳಿದಾಗ ಅವರು ತಲೆದೂಗಿದರು. ಈ ರೀತಿಯಾಗಿ ವಿಭಜನೆಯ ಯೋಜನೆಗೆ ಮುಖಂಡರ ಒಪ್ಪಿಗೆಯಾಯಿತು.

ಇನ್ನು ಗಾಂಧೀಜಿಯನ್ನು ವೈಸರಾಯರು ಕರೆದು ಮಾತನಾಡುವುದು ಉಳಿಯಿತು. ಗಾಂಧೀಜಿ ಭಂಗೀ ಕಾಲೋನಿಯಲ್ಲಿ ನಡೆಯುತ್ತಿದ್ದ ಪ್ರಾರ್ಥನಾ ಸಭೆಗಳಲ್ಲಿ, ತಾವು ಭಾರತದ ವಿಭಜನೆಗೆ ತೀವ್ರ ವಿರೋಧಿಗಳೆಂದು ಮಾತನಾಡುತ್ತಿದ್ದರು. ಒಂದೊಂದು ಸಾರಿ, ಬ್ರಿಟಿಷ್ ಮಂತ್ರಿಮಂಡಲದ ಯೋಜನೆಯನ್ನು ಜಾರಿಗೆ ತರಬೇಕೆಂದೂ ಸೂಚಿಸುತ್ತಿದ್ದರು.

ಗಾಂಧೀಜಿಯನ್ನು ವೈಸರಾಯರು ತುರ್ತಾಗಿ ಬರಹೇಳಿದರು. ಆದಿನ ಸೋಮವಾರವಾದ್ದರಿಂದ ಅವರು ಮೌನ; ಆದರೂ ಗಾಂಧೀಜಿ ವೈಸರಾಯರನ್ನು ನೋಡಲುಹೋದರು. ವೈಸರಾಯರೇ ಎಲ್ಲ ಮಾತನಾಡಿದರು. ಮತ್ತು ಎಲ್ಲರೂ ಒಪ್ಪಿರುವ ವಿಭಜನೆಯ ಯೋಜನೆಯನ್ನು ಅವರು ಮುರಿಯಬಾರದೆಂದೂ ಸಹಕಾರವೀಯಬೇಕೆಂದೂ ಕೋರಿದರು.

ಗಾಂಧೀಜಿ ತಾವು ಒಂದು ಕವರಿನ ಮೇಲೆ ಬರೆದು ಕೊಟ್ಟ ಉತ್ತರದಲ್ಲಿ ಹೀಗೆ ಹೇಳಿದರು: “ನನ್ನ ಭಾಷಣಗಳಲ್ಲಿ ನಿಮಗೆ ವಿರುದ್ಧವಾಗಿ ಒಂದು ಮಾತನ್ನಾದರೂ ಆಡಿರುತ್ತೇನೆಯೇ? ಇಲ್ಲವಾದರೆ, ನಿಮ್ಮ ಎಚ್ಚರಿಕೆ ಅನಾವಶ್ಯಕ ನಾನು ನಿಮ್ಮೊಡನೆ ಒಂದೆರಡು ಮಾತುಗಳನ್ನಾಡಬೇಕಾಗಿದೆ. ಅದು ಇವೊತ್ತಲ್ಲ; ನಾವು ಪುನಃ ಭೇಟಿಯಾದಾಗ.”

ಜೂನ್ ೩ನೇ ತಾರೀಖಿನ ಪ್ರಕಟಣೆಗೆ ಎಲ್ಲವೂ ಸಿದ್ಧವಾಯಿತು. ಜೂನ್ ೩ನೇ ತಾರೀಖು ಸಾಯಂಕಾಲ ವೈಸ್‌ರಾಯರು ಭಾರತೀಯ ಜನರಿಗೆ ಬ್ರಾಡ್ ಕಾಸ್ಟ್ ಭಾಷಣ ಮಾಡಿ, ಇಂಡಿಯಾದ ವಿಭಜನೆಯ ಯೋಜನೆಯನ್ನು ಪ್ರಕಾಶಗೊಳಿಸಿದರು. ಅದೇ ಸಾಯಂಕಾಲ ಜವಾಹರ್‌ಲಾಲ್ ನೆಹರು, ಮಹಮ್ಮದಾಲಿ ಜಿನ್ಹಾ ಮತ್ತು ಬಲದೇವ್ ಸಿಂಗ್ ತಮ್ಮ ಪ್ರತ್ಯೇಕ ಬ್ರಾಡ್‌ಕಾಸ್ಟ್ ಭಾಷಣಗಳಲ್ಲಿ, ತಾವು ವಿಭಜನೆಯ ಅಂಶವನ್ನು ಒಪ್ಪಿರುವುದಾಗಿ ಭಾರತೀಯ ಪ್ರಜೆಗಳಿಗೆ ತಿಳಿಸಿದರು.

ಈ ಪ್ರಕಟಣೆಯಾದ ಮೇಲೆ ಗಾಂಧೀಜಿ ತಮ್ಮ ಪ್ರಾರ್ಥನೆಯ ಭಾಷಣದಲ್ಲಿ ಹೇಳಿದರು; ದೇವರು ಅವರನ್ನು ರಕ್ಷಿಸಲಿ. ಅವರಿಗೆ ಎಲ್ಲ ಬುದ್ಧಿಯನ್ನೂ ಕೊಡಲಿ. ಕ್ಯಾಬಿನೆಟ್ ಮಿಷನ್ ಪ್ಲಾನಿನಲ್ಲಿ ಸಂದೇಹಗಳೂ ಪರಸ್ಪರ ವಿರುದ್ಧ ಅಂಶಗಳೂ ಇಲ್ಲದಿದ್ದರೆ, ಅದು ಸ್ವೀಕಾರಕ್ಕೆ ಅರ್ಹವಾಗಿತ್ತು. ಅದರಿಂದ ಸರಿಯಾದ ಫಲ ಬರಲಿಲ್ಲ. ಕಡೆಗೆ ಅದನ್ನು ತ್ಯಜಿಸಬೇಕಾಯಿತು. ಇಂಡಿಯಾದ ವಿಭಜನೆ ದೇಶಕ್ಕೆ ಹಾನಿಕರ. ಆದರೂ ನಾವು ಭಗವಂತನಲ್ಲಿ ಭಕ್ತಿಯಿಟ್ಟು ಮುಂದಿನ ಹೆಜ್ಜೆ ಇಡೋಣ ಇನ್ನು ಮೇಲಾದರೂ ಎರಡು ಪಾರ್ಟಿಗಳೂ ಮಿತ್ರರಂತೆ ವರ್ತಿಸಿ, ಪರಸ್ಪರ ಶ್ರೇಯಸ್ಸಿಗೆ ಕಾರಣವಾಗಲಿ; ಪಂಡಿತ ನೆಹರುವನ್ನು ನಾನು ಅನಭಿಷಿಕ್ತ ರಾಜ ಎಂದು ಕರೆಯುತ್ತಿದ್ದೇನೆ. ನಮ್ಮ ನಿಜವಾದ ಅರಸರು ಶ್ರಮ ಪಡುತ್ತಿರುವ ಪ್ರಜೆಗಳು. ಆಳುವವರು ನಿಜವಾಗಿ ಅವರಿಗೆ ಜವಾಬ್ದಾರರು.”

ವೈಸರಾಯರು ೪ನೇ ತಾರೀಖು ಪುನಃ ಗಾಂಧೀಜಿಗೆ ಹೇಳಿ ಕಳುಹಿಸಿ, ವಿಭಜನೆಯ ನೀತಿಗೆ ಗಾಂಧೀಜಿಯ ಒಪ್ಪಿಗೆ ಪಡೆಯಲು ನಾನಾ ರೀತಿಯಾಗಿ ಯತ್ನಿಸಿದರು. ಗಾಂಧೀಜಿಗೆ ಸಾಯಂಕಾಲದ ಪ್ರಾರ್ಥನೆಗೆ ಹೊತ್ತಾದ್ದರಿಂದ, ಅವರು ಎದ್ದರು. ಆ ಸಾಯಂಕಾಲದ ಭಾಷಣದಲ್ಲಿ ಮಹಾತ್ಮರು “ಹೀಗೆಂದರು: “ವಿಭಜನೆಗಾಗಿ ಯಾರನ್ನೂ ಟೀಕಿಸಬಾರದು. ಪ್ರಜೆಗಳು ತಮ್ಮ ಒಳಗೆ ತಾವುನೋಡಿಕೊಳ್ಳಲಿ. ಬಹು ಜನ ಕಾಂಗ್ರೆಸಿಗರಿಗೆ ಜಗಳಂಟಿಗರೊಡನೆ ಜಗಳವಾಡುವುದು ಬೇಡವೆಂದು ತೋರಿತು. ಅದನ್ನೇ ಅರಿತು, ಕಾಂಗ್ರೆಸ್ ಮುಖಂಡರು ವಿಭಜನೆಗೆ ಒಪ್ಪಿಕೊಂಡರು. ವಿಭಜನೆ ಈಗ ಆಗಿಹೋದ ಕಾರ್ಯ ಈಗಲೂ ಪರಸ್ಪರ ದ್ವೇಷವನ್ನು ತ್ಯಜಿಸಿ ಕೆಲಸ ಮಾಡಿದರೆ, ಅದರಿಂದ ಒಳ್ಳೆಯದೇ ಆಗಬಹುದು.”

ಒಟ್ಟಿನಲ್ಲಿ, ಭಾರತದ ವಿಭಜನೆ ಮಹಾತ್ಮರಿಗೆ ಬಹಳ ದುಃಖವುಂಟು ಮಾಡಿತು. ಆದರೂ ತಾವೇ ಸಮಾಧಾನ ಮಾಡಿಕೊಂಡು, ಯಾವುದು ಈ ವಿಭಜನೆಗೆ ಕಾರಣವಾಯಿತೋ ಆ ಹಿಂದೂ – ಮುಸ್ಲಿಂ ಅನೈಕಮತ್ಯವನ್ನು ಪರಿಹರಿಸಲು ತಮ್ಮ ಉಳಿದ ಜೀವಮಾನವನ್ನೇ ವಿನಿಯೋಗಿಸಿದರು. ತಾವು ಮಾಡಿದ ಪ್ರತಿಯೊಂದು ಪ್ರಾರ್ಥನಾ ಸಭೆಯಲ್ಲಿಯೂ ಕುರಾನನ್ನು ಓದಿಸುವುದು, “ಈಶ್ವರ ಅಲ್ಲಾ ತೇರೇನಾಮ್, ಸಬ್‌ಕೋ ಸನ್ಮತಿ ದೇ ಭಗವಾನ್” ಎಂಬುದನ್ನು ಕೀರ್ತನೆ ಹಾಡಿಸುವುದು ನಡೆಯುತ್ತಿತ್ತು,

ತಮಗೆ ಇಷ್ಟವಿಲ್ಲದ್ದಿದ್ದರೆ ಗಾಂಧೀಜಿ ಏತಕ್ಕೆ ಸತ್ಯಾಗ್ರಹ ಮಾಡಲಿಲ್ಲ ಎಂದು ಅನೇಕರು ಪ್ರಶ್ನಿಸಿದರು. ಇಂಡಿಯಾದ ಅನುಮತಿಯಿಲ್ಲದೆ ಬ್ರಿಟಿಷ್ ಸರ್ಕಾರ ವಿಭಜನೆಯನ್ನು ಇಂಡಿಯಾದ ಮೇಲೆ ಹೇರಿದ್ದರೆ, ಅವರು ಇನ್ನೊಂದು ಸತ್ಯಾಗ್ರಹ ಮಾಡುತ್ತಿದ್ದರು. ಒಬ್ಬರೇ ಆದರೂ ಪ್ರತಿಭಟಿಸುತ್ತಿದ್ದರು. ಕಾಂಗ್ರೆಸ್ ವರ್ಕಿಂಗ್ ಕಮಿಟಿ ಈ ವಿಭಜನೆಯನ್ನು ಒಪ್ಪಿರುವಾಗ, ಅದರ ಮೇಲೆ ಸತ್ಯಾಗ್ರಹ ಮಾಡುವುದೇ? ತಾವೇ ಮುಂದೆ ತಂದ ಅಹಿಂಸೆಯ ಸಂಸ್ಥೆಯನ್ನು ಎದುರಿಸುವುದೆ? ಇದು ಹಿಂಸೆಯಾಗುವುದಿಲ್ಲವೆ? ಎಂದು ಗಾಂಧೀಜಿ ಆಲೋಚನೆ ಮಾಡಿದರು. ಕಾಂಗ್ರೆಸ್ನ್ನು ಪ್ರತಿಭಟಿಸಿ, ವಿಭಜನೆಗೆ ವಿರುದ್ಧ ಸತ್ಯಾಗ್ರಹ ಮಾಡಬಹುದಾಗಿತ್ತು. ಆದರೆ ಇದು ಸತ್ಯಾಗ್ರಹವಾಗುತ್ತಿರಲಿಲ್ಲ; ದುರಾಗ್ರಹವಾಗುತ್ತಿತ್ತು ಎಂದು ಗಾಂಧೀಜಿ ವಿಚಾರ ಮಾಡಿ, ಕಾಂಗ್ರೆಸಿಗೆ ವಿರುದ್ಧವಾಗಿ ಇನ್ನು ಮುಂದೆ ಒಂದು ಚಕಾರವನ್ನೂ ಎತ್ತಲಿಲ್ಲ. ಇದು ಗಾಂಧೀಜಿಯ ಘನತೆಯನ್ನೂ, ಉದಾತ್ತ ಹೃದಯವನ್ನೂ ತೋರಿಸುತ್ತದೆ. ಅವರ ಉಪದೇಶದ ಪಲ್ಲವಿ ಮುಂದೆ ಈ ರೀತಿಯಿತ್ತು. “ಭೌಗೋಳಿಕವಾಗಿ ಈಗ ಇಂಡಿಯಾ ಒಡೆದಿದೆ. ಆದರೆ ಅದರ ಹೃದಯ ಯಾವಾಗಲೂ ಒಂದೇ ಆಗಿರಲಿ. ನಾವು ಇಂಡಿಯಾ ಒಡೆದಿಲ್ಲವೆಂದೇ ನಮ್ಮಕಾಯಾ, ವಾಚಾ ಮನಸಾ ನಡೆಯೋಣ.”

ವೈಸರಾಯರು ಜೂನ್ ೩ನೇ ತಾರೀಖಿನ ಪ್ರಕಟಣೆಯಾದ ಮೇಲೆ, ಆಗಸ್ಟ್ ೧೫ರ ಒಳಗೆ ಹೊಸ ಸ್ಥಿತಿಯನ್ನು ಜಾರಿಗೆ ತರಬೇಕೆಂದು ಅವಶ್ಯಕವಾದ ಕಾರ್ಯಗಳನ್ನೆಲ್ಲಾ ಮಾಡತೊಗಿದರು. ಭಾರತದ ವಿಭಜನೆಯ ವಿವರ ಈ ರೀತಿಯಿತ್ತು. ಬಂಗಾಳ ಮತ್ತು ಪಂಜಾಬಿನ ವಿಭಜನೆ ಇದರಲ್ಲಿ ಸೇರಿತ್ತು ಅಸ್ಸಾಮಿನ ಸಿಲ್ಹೆಟ್ ಡಿಸ್ಟ್ರಿಕ್ಟಿನಲ್ಲಿ ರೆಫರೆಂಡಂ ತೆಗೆದುಕೊಂಡು, ಅದು ಅಸ್ಸಾಮಿನ ಭಾಗವಾಗಿರಬೇಕು ಎಂಬುದನ್ನು ತೀರ್ಮಾನಿಸಬೇಕೆಂದು ವಿಧಾಯಕ ಮಾಡಿತ್ತು. ಬ್ರಿಟನ್ನು ಹಿಂದೂಸ್ಥಾನಕ್ಕೂ, ಪಾಕೀಸ್ಥಾನಕ್ಕೂ ಅಧಿಕಾರ ರವಾನಿಸುವ ದಿನವನ್ನು ೧೯೪೮ನೇ ಜೂನ್‌ನಿಂದ ಹಿಂದಕ್ಕೆ ಹಾಕಬೇಕು. ಹೊಸ ರಾಜ್ಯಾಂಗ ಅಥವಾ ರಾಜ್ಯಾಂಗಗಳು ಸಿದ್ಧವಾಗುವವರಿಗೆ ಇಡೀ ರಾಜ್ಯಗಳು ಡೊಮಿನಿಯನ್ ಸ್ಟೇಟಸ್ ಅಧಿಕಾರ ಹೊಂದಿರತಕ್ಕದ್ದು, ಆಮೇಲೆ ಭಾರತ ಪ್ರಜೆಗಳು ಕಾಮನ್‌ವೆಲ್‌ನ ಒಳಗೆ ಇರುವುದೋ ಹೊರಕ್ಕೆ ಹೋಗುವುದೋ ತಮ್ಮ ಇಷ್ಟದಂತೆ ನಿರ್ಧರಿಸಬಹುದು.

ಈ ಏರ್ಪಾಡನ್ನು ಬ್ರಿಟಿಷ್ ಪಾರ್ಲಿಮೆಂಟೂ ಒಪ್ಪಿತು. ಇದು ಅತ್ಯುತ್ತಮವಾದ ಏರ್ಪಾಡಲ್ಲ. ಆದರೆ, ತೀವ್ರವಾದ ಕೋಮುವಾರು ಭಿನ್ನಾಭಿಪ್ರಾಯದ ಕಾರಣ, ಇದು ಉತ್ತಮವಾದ ಮಧ್ಯಮ ಮಾರ್ಗ. ಪಾರ್ಲಿಮೆಂಟಿನ ಉಭಯ ಸಭೆಗಳಲ್ಲಿಯೂ ಇಂಡಿಯನ್ ಇಂಡಿಪೆಂಡೆನ್ಸ್ ಆಕ್ಟ್‌ಪಾಸಾಯಿತು. ಈ ಆಕ್ಟಿನ ಪ್ರಕಾರ, ೧೯೪೭ನೇ ಆಗಸ್ಟ್ ೧೫ನೇ ತಾರೀಖಿನಿಂದ ಇಂಡಿಯಾದಲ್ಲಿ ಎರಡು ಡೊಮಿನಿಯನ್‌ಗಳು, ಇಂಡಿಯಾ ಮತ್ತು ಪಾಕೀಸ್ಥಾನ್ ಎಂಬ ಎರಡು ಡೊಮಿನಿಯನ್‌ಗಳು, ಆಸ್ತಿತ್ವಕ್ಕೆ ಬರುವುವು; ಇಂಡಿಯಾದ ಸೈನ್ಯವನ್ನು ಅಂದಿನಿಂದ ಇಬ್ಭಾಗ ಮಾಡಲಾಗುವುದು; ಮತ್ತು ಪಂಜಾಬ್ ಮತ್ತು ಬಂಗಾಳ ಎರಡು ಭಾಗವಾಗಿ ಸೀಳಲ್ಪಡುವುವು.

ಜೂನ್ ೪ನೇ ತಾರೀಖು ವೈಸರಾಯರು ಒಂದು ಪತ್ರಿಕಾ ಸಮ್ಮೇಳನವನ್ನು ಕರೆದು, ಇಂಡಿಯಾದ ವಿಭಜನೆಯ ಅಂಶಗಳನ್ನೆಲ್ಲಾ ವಿವರಿಸಿದರು. ಸುಮಾರು ೩೦೦ ಪ್ರತಿಕಾ ಪ್ರತಿನಿಧಿಗಳಿದ್ದರು. ಪ್ರಪಂಚದ ಎಲ್ಲಾ ಭಾಗದವರೂ ಇದ್ದರು. ಪತ್ರಿಕಾ ಪ್ರಪಂಚ ವಿಭಜನೆಯ ಯೋಜನೆಯ ಬಗ್ಗೆ ತೃಪ್ತಿ ಪ್ರದರ್ಶಿಸಿದ ಹಾಗಿತ್ತು.

ವೈಸರಾಯರು ಕೂಡಲೇ ಮುಖಂಡರ ವಿಭಜನೆಯ ಕೌನ್ಸಿಲನ್ನು ನೇಮಿಸಿದರು. ಈ ಕೌನ್ಸಿಲಿನಲ್ಲಿ ಎಚ್.ಎಂ.ಪಟೇಲರೂ ಮಹ್ಮಮದ್ ಅಲಿ ಚೌಧರಿಯವರೂ ಇದ್ದರು. ಎರಡು ಡೊಮಿನಿಯನ್‌ಗಳಿಗೂ ಮಧ್ಯೆ ಸರಹದ್ದಿನ ರೇಖೆಗಳನ್ನು ನಿರ್ಧರಿಸಲು ಲಾರ್ಡ್ ರ‍್ಯಾಡ್ ಕ್ಲಿಫರ್ ಕೈ ಕೆಳಗೆ ಸರಹದ್ದಿನ ಕಮಿಷನ್ನನ್ನು ನೇಮಿಸಲಾಯಿತು. ಇವರು ಬಹಳ ಬೇಗ ಕೆಲಸ ಮುಗಿಸಿ, ಸರಹದ್ದುಗಳನ್ನು ವಿಧಾಯಕ ಮಾಡಿದರು. ಇವರ ಶಿಫಾರಸುಗಳು ಎರಡು ಪಾರ್ಟಿಯವರಿಗೂ ತೃಪ್ತಿಕರವಾಗಿರಲಿಲ್ಲ. ಆದರೂ ವೈಸರಾಯರು ತಮ್ಮ ಕಾರ್ಯಗಳನ್ನು ಬೇಗ ಮುಗಿಸಲು ಉದ್ಯುಕ್ತರಾದರು. ಆಗಸ್ಟ್ ೧೪ನೇ ತಾರೀಖು ಪಾಕೀಸ್ಥಾನದ ಸ್ಥಾಪನೆಯಾಯಿತು.

ಮೌಂಟ್‌ಬೇಟನರು ಕರಾಚಿಯಲ್ಲಿ ನಡೆದ ಜಿನ್ನಾರ ಸಾರ್ವಜನಿಕ ಮೆರವಣಿಗೆಯಲ್ಲಿ ಭಾಗಿಯಾದರು. ಜಿನ್ಹಾರ ಮೇಲೆ ಯಾರೋ ಬಾಂಬ್ ಎಸೆಯುವರೆಂಬ ಭೀತ್ತಿಯಿತ್ತು. ಅಂಥದೇನೂ ನಡೆಯಲಿಲ್ಲ. ಎಲ್ಲಾ ಸುಗಮವಾಗಿ ಮುಕ್ತಾಯವಾಯಿತು. ಜಿನ್ಹಾ ಮೌಂಟ್‌ಬೇಟನರಿಗೆ ಕೃತಜ್ಞತೆ ಅರ್ಪಿಸಿದರು.

ಇಂಡಿಯಾದಲ್ಲಿ ೧೪ನೇ ತಾರೀಖು ಅರ್ಧರಾತ್ರಿಯಾದ ಕೂಡಲೇ ಸ್ವತಂತ್ರ ಭಾರತದ ಉದಯವಾಗಬೇಕೆಂದು ಮುಖಂಡರು ನಿರ್ಧರಿಸಿದರು. ೧೫ನೇ ತಾರೀಖು ಶುಭದಿನವಾದ್ದರಿಂದ, ವೈಸರಾಯರು ಎಲ್ಲಾ ಏರ್ಪಾಡುಗಳನ್ನೂ ತೃಪ್ತಿಕರವಾಗಿ ಮಾಡಿದರು. ಸ್ವತಂತ್ರ ಭಾರತ ಮೌಂಟ್ ಬೇಟನ್ನರನ್ನು ಗೌರ್ನರ್ ಜನರಲ್ ಆಗಿ ನೇಮಿಸಿತು.

ಜವಹರ್ ಲಾಲ್ ನೆಹರು ಪ್ರಧಾನ ಮಂತ್ರಿ ಆದರು. ೧೪ನೇ ತಾರೀಖು ಇಂಡಿಯಾದ ಕನ್‌ಸ್ಟಿಟ್ಯುಯೆಂಟ್ ಅಸೆಂಬ್ಲಿಯ ಅಧಿವೇಶನವನ್ನು ಕರೆಯಲಾಯಿತು. ಇದು ಲೆಜಿಸ್ಲೆಟಿವ್ ಅಸೆಂಬ್ಲಿಯಾಗಿ ಪರಿವರ್ತಿತವಾಯಿತು. ಇದರ ಪ್ರಧಾನ ಸಚಿವರಾಗಿ ಜವಹರ್‌ಲಾಲ್ ನೆಹರು ಅಧಿಕಾರ ಸ್ವೀಕರಿಸಿದರು. ಹೀಗೆ ಇಂಡಿಯಾದ ಸ್ವಾತಂತ್ರ್ಯ ಸ್ಥಾಪನೆಯಾಯಿತು.

ನೆಹರು ಅತ್ಯಂತ ಭಾವಪೂರಿತ ಭಾಷಣ ಮಾಡುತ್ತಾ, “ರಾತ್ರಿ ೧೨ ಗಂಟೆ ಬಾರಿಸುತ್ತಿರುವಾಗ, ಇಂಡಿಯಾ ಎಚ್ಚರ ಎದ್ದು ಸ್ವಾತಂತ್ರ್ಯ ಜೀವನವನ್ನಾರಂಭಿಸಿದೆ” ಎಂದರು. ಭಾಷಾಣಾಂತ್ಯದಲ್ಲಿ “ಜೈ ಹಿಂದ್” ಎಂದು ಜಯಕಾರ ಮಾಡಿದರು.

ಭಾರತ ಸ್ವಾತಂತ್ರ್ಯದ ಸ್ಥಾಪನೆಯ ದಿನ ಭಾರತದಲ್ಲಿ ಎಲ್ಲೆಲ್ಲೂ ಆನಂದ. ಊರೂರುಗಳಲ್ಲಿ ರಾತ್ರಿ ೧೨ಗಂಟೆಗೆ ಎಲ್ಲರೂ ಎಚ್ಚರವಾಗಿದ್ದರು. ಜಯಜಯಕಾರಗಳು ಮೊಳಗಿದವರು. ಲಂಡನ್ನಿನಲ್ಲಿಯೂ ಭಾರತ ಮಿತ್ರರು ಈ ಆನಂದದ ದಿನವನ್ನು ಉತ್ಸಾಹದಿಂದ ಆಚರಿಸಿದರು.

ಎಲ್ಲರೂ ಈ ಆನಂದಲ್ಲಿದ್ದಾಗ, ಈ ಸ್ವಾತಂತ್ರ್ಯಕ್ಕೆ ಕಾರಣರಾದ ಗಾಂಧೀಜಿ ಎಲ್ಲಿ? ಅವರು ದೆಹಲಿಯಲ್ಲಿ ಆನಂದಿಸುತ್ತಿದ್ದವರ ಮಧ್ಯೆ ಇರಲಿಲ್ಲ. ಅವರು ನವಖಾಲಿಗೆ ಹೊರಟಿದ್ದರು. ಸ್ವಾತಂತ್ರ್ಯ ಸ್ಥಾಪನೆ ಆಯಿತಲ್ಲ ಎಂಬ ಸಂತೋಷ ಗಾಂಧೀಜಿ ಹೃದಯದಲ್ಲಿ ಇರಲಿಲ್ಲ. ಎರಡು ಕೋಮುಗಳೂ ಇನ್ನೂ ಶಾಂತಿಯಿಂದ ನಡೆದುಕೊಳ್ಳುತ್ತಿಲ್ಲವಲ್ಲಾ ಎಂಬುದೇ ಅವರ ಮನಸ್ಸಿನ ಸಂಕಟ. ಸ್ವಾತಂತ್ರ್ಯ ಸ್ಥಾಪನೆಯಾದರೂ ದೇಶದಲ್ಲಿ ಶಾಂತಿ ಸ್ಥಾಪನೆ ಯಾಗಲಿಲ್ಲವಲ್ಲಾ ಎಂಬುದೇ ಅವರ ಕೊರಗು.

ಮೌಲಾನಾ ಅಬುಲ್ ಕಲಾಂ ಆಜಾದರು ತಮ್ಮ ಸ್ವಚರಿತ್ರೆಯಲ್ಲಿ ಬರೆಯುತ್ತಾ ಹೀಗೆ ಹೇಳಿದ್ದಾರೆ: “ಜನರ ಆನಂದ ಸುಮಾರು ಉನ್ಮಾದಕ್ಕೇರಿತು. ಆದರೆ ನಲವತ್ತೆಂಟು ಘಂಟೆ ಕೂಡ ಅದು ನಡೆಯಲಿಲ್ಲ. ಮಾರನೆಯ ದಿನವೇ ಕೋಮುವಾರು ಗಲಾಟೆಗಳ ಸುದ್ದಿ ಬಂದು, ರಾಜಧಾನಿ (ದೆಹಲಿ)ಯ ಮೇಲೆ ದೊಡ್ಡ ಕತ್ತಲೆ ಕವಿಯಿತು. ಕೊಲೆ, ಸಾವು ಹಿಂಸಾಕೃತ್ಯಗಳ ಸುದ್ದಿ ಅದು. ಪೂರ್ವ ಪಂಜಾಬಿನಲ್ಲಿ ಹಿಂದೂ ಕೊಲೆ, ಸಾವು ಹಿಂಸಾಕೃತ್ಯಗಳ ಸುದ್ದಿ ಅದು. ಪೂರ್ವ ಪಂಜಾಬಿನಲ್ಲಿ ಹಿಂದೂ ಸಿಖ್ ತಂಡಗಳವರು ಮುಸ್ಲಿಂ ಹಳ್ಳಿಗಳ ಮೇಲೆ ಬಿದ್ದರು. ಮನೆಗಳಿಗೆ ಬೆಂಕಿಯಿಡುತ್ತಿದ್ದರು; ನಿರಪರಾಧಿಗಳಾದ ಗಂಡಸರು, ಹೆಂಗಸರು ಮಕ್ಕಳನ್ನು ಕೊಲ್ಲುತ್ತಿದ್ದರು. ಅಂಥವೇ ಸುದ್ದಿಗಳು ಪಶ್ಚಿಮ ಪಂಜಾಬಿನಿಂದಲೂ ಬಂದವು. ಮುಸ್ಲಿಮರು ಅಲ್ಲಿ ಸಿಕ್ಕಾಪಟ್ಟೆ ಹಿಂದೂ ಸಿಖ್ ಕೋಮುಗಳಿಗೆ ಸೇರಿದ ಗಂಡಸರನ್ನೂ, ಹೆಂಗಸರನ್ನೂ, ಮಕ್ಕಳನ್ನೂ ಕೊಲ್ಲುತ್ತಿದ್ದರು. ಪೂರ್ವ ಪಶ್ಚಿಮ ಪಂಜಾಬೆಲ್ಲ ಸಾವುಗಳ ಸ್ಮಶಾನವಾಗಿತ್ತು. ಘಟನೆಗಳು ಒಂದಾದ ಮೇಲೊಂದು ಬೇಗನೆ ನಡೆದವು. ಪೂರ್ವ ಪಂಜಾಬಿನ ಮಂತ್ರಿಗಳು ಒಬ್ಬರಾದ ಮೇಲೊಬ್ಬರು ದೆಹಲಿಗೆ ಧಾವಿಸಿ ಬಂದರು. ಅವರ ಹಿಂದೆ ಸ್ಥಳದ ಕಾಂಗ್ರೆಸ್ ನಾಯಕರೂ ಸರ್ಕಾರದಿಂದ ಹೊರಗಿದ್ದವರೂ ಬಂದರು.”

ಈ ಸಂದರ್ಭದಲ್ಲಿ ಉಭಯ ಸರ್ಕಾರಗಳೂ ಸೈನ್ಯ ಸಹಾಯದಿಂದ ಪಂಜಾಬ್ ಗಲಭೆಗಳನ್ನು ನಿಲ್ಲಿಸಿದವು. ಆದರೆ, ಸತ್ತವರ ಸಂಖ್ಯೆ ೧,೦೦೦ಕ್ಕಿಂತಲೂ ಹೆಚ್ಚಾಗಿತ್ತು. ವಲಸೆಯಾಗಿ ಬಂದವರು ಲಕ್ಷೋಪಲಕ್ಷ. ದೆಹಲಿಯಲ್ಲಿ ಮೊದಲು ಯಾವ ಗಲಾಟೆಯೂ ಇರಲಿಲ್ಲ. ಕ್ರಮೇಣ ಇಲ್ಲಿಗೂ ಹಿಂದೂಮುಸ್ಲಿಂ ಗಲಭೆ ಆವರಿಸಿತು. ಲಾರ್ಡ್ ಮೌಂಟ್‌ಬೇಟನ್ನರು ಅವಸರದ ಸಮಿತಿಯೊಂದನ್ನು ಸ್ಥಾಪಿಸಿ, ಗಲಭೆ ನಿಲ್ಲಿಸಲು ಯತ್ನಿಸಿದರು.

ಬಂಗಾಳದಲ್ಲಿ ಉಂಟಾದ ಗಲಭೆಗಳನ್ನು ಗಾಂಧೀಜಿಯವರೊಬ್ಬರೇ ನಿಲ್ಲಿಸಿದರು. ಆಗಸ್ಟ್ ೧೫ಕ್ಕೆ ಮುಂಚೆಯೇ ಅವರು ಪೂರ್ವ ಪಾಕಿಸ್ಥಾನದ (ಪೂರ್ವ ಬಂಗಾಳ) ನವಖಾಲಿಗೆ ಹೊರಟಿದ್ದರು. ಮಾಜಿ ಬಂಗಾಳ ಮುಖ್ಯಮಂತ್ರಿ ಸುಹ್ರುವರ್ದಿ ಅವರನ್ನು ತಡೆದು ಕಲ್ಕತ್ತಾದಲ್ಲಿ ನಿಲ್ಲಿಸಿಕೊಂಡರು. ಗಾಂಧೀಜಿ ಸುಹ್ರುವರ್ದಿ ಇಬ್ಬರೂ. ಒಂದೇ ಮುಸ್ಲಿಂ ಮನೆಯಲ್ಲಿ ವಾಸ ಮಾಡಿದರು. ಅಲ್ಲಿಂದ ಗಾಂಧೀಜಿ ಹಿಂದೂ – ಮುಸ್ಲಿಂ ಭಾಯಿ – ಭಾಯಿ ಎಂಬ ಸಂದೇಶವನ್ನು ಊರೂರಲ್ಲೆಲ್ಲಾ ಹರಡಿದರು. ಗಲಭೆಯಾಗುತ್ತಿದ್ದುದು ನಿಂತು, ಹಿಂದೂ – ಮುಸ್ಲಿಮರು ಒಬ್ಬರನ್ನೊಬ್ಬರು ಭಾಯಿ – ಭಾಯಿಯಂತೆ ಆಲಿಂಗನ ಮಾಡತೊಡಗಿದರು. ಬೀದಿಗಳಲ್ಲಿ ಜನ ಸ್ವತಂತ್ರವಾಗಿ ಓಡಾಡತೊಡಗಿದರು. ಆಗಸ್ಟ್ ೧೮ರಲ್ಲಿ ಹಿಂದೂಗಳು ಮುಸ್ಲಿಮರ ಈದ್ ಹಬ್ಬದಲ್ಲಿ ಭಾಗಿಯಾದರು. ಆದರೆ ಈ ಸ್ನೇಹ ಬಹಳ ಕಾಲ ಉಳಿಯಲಿಲ್ಲ. ಪುನಃ ಗಲಭೆಗೆ ಉಪಕ್ರಮವಾಯಿತು. ಗಾಂಧೀಜಿ ಆಮರಣಾಂತ ಉಪವಾಸ ಪ್ರಾರಂಭಿಸಿದರು. ಕಲ್ಕತ್ತಾದ ಜನರು ಗಾಂಧೀಜಿಯನ್ನು ಕಂಡು, “ದಯವಿಟ್ಟು ನೀವು ಉಪವಾಸವನ್ನು ನಿಲ್ಲಿಸಿರಿ; ನಾವು ಗಲಭೆ ಮಾಡುವುದಿಲ್ಲ” ಎಂದರು. ಗಾಂಧೀಜಿ ಉಪವಾಸ ನಿಲ್ಲಿಸಿದರು. ಸೇಕಡಾ ೩೩ರಷ್ಟು ಮಾತ್ರ ಕಲ್ಕತ್ತಾದಲ್ಲಿ ಮುಸ್ಲಿಮರ ಜನಸಂಖ್ಯೆ. ಇತಃಪರ ಯಾವ ಗಲಾಟೆಯೂ ಆಗಲಿಲ್ಲ. ಮುಸ್ಲಿಮರು ಯಾವ ರಕ್ಷಣೆಯೂ ಇಲ್ಲದೆ ಕಲ್ಕತ್ತಾದಲ್ಲಿ ಸಂಚರಿಸುತ್ತಿದ್ದರು. ಇದು ಗಾಂಧೀಜಿಯ ಉಪವಾಸದ ಮಹಾಫಲ ಲಂಡನ್‌ಟೈಂಸ್ ಪತ್ರಿಕೆ ಕೂಡ ಅನೇಕ ಸೈನ್ಯಗಳು ಮಾಡಲಾರದ ಕೆಲಸವನ್ನು ಗಾಂಧೀ ಶಾಂತವಾಗಿ ನಿರ್ವಹಿಸಿದರು’ ಎಂದು ಪ್ರಶಂಸೆ ಮಾಡಿತು.

ಸೆಪ್ಟೆಂಬರ್ ಆಖೈರಿನವರಿಗೆ ಗಾಂಧೀಜಿ ದೆಹಲಿಯ ಭಂಗಿ ಕಾಲನಿಯಲ್ಲಿ ಇಳಿದುಕೊಂಡಿದ್ದರು. ಅಲ್ಲಿ ರೆಫ್ಯುಜಿಗಳು ತುಂಬಿದ್ದರಿಂದ, ಅವರು ಅನಮತರ ಬಿರ್ಲಾ ಭವನದಲ್ಲಿ ವಾಸ ಮಾಡಿದರು. ಆಗ ದೆಹಲಿಯಲ್ಲಿ ಎಲ್ಲೆಲ್ಲಿಯೂ ಹೊಡೆದಾಟ, ಕಲಹ; ಪಶ್ಚಿಮ ಪಂಜಾಬಿನಿಂದ ವಲಸೆಗಾಗಿ ಹಿಂದೂಗಳು ದೆಹಲಿಗೆ ಬರುತ್ತಿದ್ದರು. ಅವರಿಗೆ ನಿಲ್ಲಲು ಜಾಗವಿಲ್ಲ. ಪೂರ್ವ ಪಂಜಾಬಿನಿಂದಲೂ, ದೆಹಲಿಯಿಂದಲೂ ಮುಸ್ಲಿಂರು ಬಹು ಸಂಖ್ಯೆಯಲ್ಲಿ ಪಶ್ಚಿಮ ಪಂಜಾಬಿಗೆ ನುಗ್ಗುತ್ತಿದ್ದರು. ದೆಹಲಿ ಹಿಂದುಗಳ ಮತ್ತು ಮುಸ್ಲಿಮರ ಸಂಗಮ ಸ್ಥಾನವಾಗಿದ್ದುದರಿಂದ, ಅಲ್ಲಿ ಘರ್ಷಣೆಗಳು ಬಹಳವಾಗಿ ಆಗುತ್ತಿದ್ದವು.

ಗಾಂಧೀಜಿ ತಮ್ಮ ಪ್ರಥಮ ಪ್ರಾರ್ಥನಾ ಭಾಷಣದಲ್ಲಿ ಹಿಂದೂ – ಮುಸ್ಲಿಂ ಘರ್ಷಣೆ ಗಳ ಬಗ್ಗೆ ಬಹಳ ವಿಷಾದ ಸೂಚಿಸಿದರು. ಸ್ವಾತಂತ್ರ್ಯ ಸ್ಥಾಪನೆಯಾದರೂ ಇನ್ನೂ ಹೊಂದಾಣಿಕೆ ಬರಲಿಲ್ಲವಲ್ಲಾ ಎಂಬುದೇ ಅವರ ಶೋಕಕ್ಕೆ ಕಾರಣ. ಪೂರ್ವ ಮತ್ತು ಪಶ್ಚಿಮ ಪಂಜಾಬ್ ಎರಡು ಸರ್ಕಾರಗಳಿಗೂ ಗಾಂಧೀಜಿ ಮನವಿ ಕಳುಹಿಸಿದರು. “ನಮ್ಮ ನಿಮ್ಮ ಅಲ್ಪ ಸಂಖ್ಯಾತರನ್ನು ರಕ್ಷಿಸುವುದು ನಿಮ್ಮ ಕರ್ತವ್ಯ. ಅಲ್ಲಿನ ಹಿಂದೂಗಳೂ ಮುಸ್ಲಿಮರೂ ತಮ್ಮ ತಮ್ಮ ಸ್ಥಾನಗಳನ್ನು ಏನೇ ಆಗಲಿ ಬಿಡಬಾರದು. ಅವರು ತಮ್ಮ ರಕ್ಷಣೆ ಮಾಡಿ ಕೊಳ್ಳಬೇಕು”. ತಮ್ಮ ಸ್ವಂತದ ವಿಷಯವಾಗಿ ಮಾತನಾಡುತ್ತಾ, “ನನಗೆ ಯಾವ ರಕ್ಷಣೆಯೂ ಇಲ್ಲದೆ ಪಾಕಿಸ್ಥಾನದಲ್ಲಿ ಸಂಚರಿಸುವ ಆಶೆಯಿದೆ” ಎಂದು ಹೇಳಿದರು. ತಾವು ಅಲ್ಲಿ ಮುಸ್ಲಿಮರ ಮತ್ತು ಇತರರ ಮಿತ್ರನಾಗಿ ಹೋಗುವುದಾಗಿ ತಿಳಿಸಿದರು.

ಅಕ್ಟೋಬರ್ ೨ನೇ ತಾರೀಖು ಬಂದಿತು. ಇದು ಗಾಂಧೀಜಿಯ ೨೮ನೆಯ ಹಬ್ಬದ ದಿನ, ಎಂದಿನಂತೆ ಅಭಿನಂದನೆಗಳ ಸುರಿಮಳೆ. ಆದರೆ ಗಾಂಧೀಜಿಯ ಮನಸ್ಸಿಗೆ ಸಂತೋಷವಿಲ್ಲ. ಹಿಂದೆಲ್ಲಾ ೧೨೫ ವರ್ಷಗಳವರೆಗೆ ಬದುಕುವ ಆಶೆಯನ್ನು ವ್ಯಕ್ತಪಡಿಸುತ್ತಿದ್ದರು; ಈಗ ಅವರಿಗೆ ಬದುಕುವ ಆಶೆಯಿಲ್ಲ. “ಈ ನನ್ನ ಬದುಕು ದೇಶಕ್ಕೂ ಭಾರವಾಗಿರುವ ಹಾಗೆ ಕಾಣುತ್ತದೆ. ಈ ಮುದುಕ ಹಿಮಾಲಯಕ್ಕೆ ಹೋಗಲಿ, ಅಥವಾ ಕೊಡುವುದೂ ಬೇಡ, ಕೈಹಾಕುವುದೂ ಬೇಡ ಎಂಬ ಅಭಿಪ್ರಾಯವಿರುವ ಹಾಗೆ ಕಾಣುತ್ತದೆ. ನಾನೇನು ಮಾಡಲಿ? ನನ್ನ ಆತ್ಮಸಾಕ್ಷಿ ಹೇಳುತ್ತದೆ: ನಿನ್ನ ಚಿಕ್ಕಂದಿನಲ್ಲಿ ನೀನು ಹಿಂದೂ – ಮುಸ್ಲಿಂ ರ ಐಕಮತ್ಯವನ್ನು ಸಾಧಿಸುವ ಆಶೆಯನ್ನು ಹೊಂದಿದ್ದೆ; ಅದು ನಿನ್ನ ಕನಸಾಗಿತ್ತು. ಈಗ ಅದನ್ನು ನನಸಾಗಿ ಮಾಡು. ಆದ್ದರಿಂದ ಅದು ಇತರರಿಗೆ ಪ್ರಿಯವಾಗಿರಲಿ ಅಥವಾ ಪ್ರಿಯವಾಗದಿರಲಿ, ನನ್ನ ಕರ್ತವ್ಯವನ್ನು ನಾನು ಮಾಡುತ್ತಿರುತ್ತೇನೆ” ಎಂದು ಗಾಂಧೀಜಿ ತಮ್ಮ ಪ್ರಾರ್ಥನಾ ಭಾಷಣಗಳಲ್ಲಿ ತಿಳಿಸುತ್ತಿದ್ದರು.

ಗಾಂಧೀಜಿ ಇನ್ನೂ ಹೇಳುತ್ತಿದ್ದರು: “ನಾನು ಭ್ರಮೆಯಲ್ಲಿದ್ದೆ. ಇಂಡಿಯಾ ಬಹುಮಟ್ಟಿಗೆ ಅಹಿಂಸೆಯನ್ನು ತನ್ನದಾಗಿ ಮಾಡಿಕೊಂಡಿದೆ ಎಂಬುದಾಗಿ. ಅದೆಲ್ಲಾ ಸುಳ್ಳು. ನನಗೆ ಕಾಣುತ್ತಿದ್ದುದೆಲ್ಲಾ ಶುದ್ಧ ಅಹಿಂಸೆಯಲ್ಲ, ಅಹಿಂಸೆಯ ಹೊದಿಕೆ ಮಾತ್ರ.”

ದೆಹಲಿಯಲ್ಲಿ ನಡೆಯುತ್ತಿದ್ದ ಅತ್ಯಾಚಾರಗಳು ಅವರ ಮನಸ್ಸನ್ನು ಬಹಳ ಕಲಕಿದವು. ಇನ್ನೊಂದು ಉಪವಾಸವನ್ನು ಮಾಡುವುದಾಗಿ ಗಾಂಧೀಜಿ ಪ್ರಕಟಿಸಿದರು. ಇದು ಜನವರಿ ೧೨ನೇ ತಾರೀಖು. ಮಿಲಿಟರಿ ಮತ್ತು ಪೊಲೀಸ್ ಕಾರ್ಯಾಚರಣೆಗಳಿಂದ ಮೇಲೆ ಮೇಲೆ ಗಲಭೆಗಳು ನಿಂತಿದ್ದಾಗ್ಯೂ ಒಳಗಡೆ ದ್ವೇಷದ ಜ್ವಾಲೆ ಉರಿಯುತ್ತಲೇ ಇತ್ತು.

“ದ್ವೇಷವನ್ನು ಅಡಗಿಸಲು ಖಡ್ಗವನ್ನು ಉಪಯೋಗಿಸುವುದು ಸರಿಯಲ್ಲ. ಹಾಗಾದರೆ ನಾನು ಇನ್ನಾವ ಆಯುಧವನ್ನು ಉಪಯೋಗಿಸಲಿ? ನನ್ನ ಬಳಿ ಇರುವುದು ಅಹಿಂಸೆಯ ಆಯುಧ, ಅದು ಉಪವಾಸ. ನನ್ನ ಬಳಿ ದಿನವಹಿ ಅನೇಕ ಮುಸ್ಲಿಂ ಸ್ನೇಹಿತರು ಬರುತ್ತಿದ್ದಾರೆ. ನಮ್ಮ ಕರ್ತವ್ಯವೇನು ಎಂದು ಕೇಳುತ್ತಿದ್ದಾರೆ. ನಾನೇನು ಉತ್ತರ ಹೇಳಲಿ. ನನ್ನ ಕೈಯಲ್ಲಿ ಏನೂ ಆಗುತ್ತಿಲ್ಲವಲ್ಲಾ ಎಂದು ಮನಸ್ಸು ಕೊರೆಯುತ್ತಿತ್ತು. ಉಪವಾಸ ಕೈಕೊಂಡ ತತ್‌ಕ್ಷಣ ದುರ್ಬಲತೆ ಹೋಗುವುದೆಂದು ನನಗೆ ಅನ್ನಿಸಿತು. ಮೂರು ನಾಲ್ಕು ದಿವಸಗಳಿಂದ ನಾನು ದಾರಿಯನ್ನು ನನ್ನ ಮನಸ್ಸಿನಲ್ಲೇ ಹುಡುಕುತ್ತಿದ್ದೆ. ಕಡೆಗೆ ನನಗೆ ಪರಿಹಾರ ಹೊಳೆಯಿತು. ಇದಾದ ಮೇಲೆ ನನ್ನ ಮನಸ್ಸಿಗೆ ನೆಮ್ಮದಿಯಾಯಿತು. ಶುದ್ಧನಾದ ಮನುಷ್ಯ ತನ್ನ ಜೀವಕ್ಕಿಂತ ಹೆಚ್ಚಿನದೇನನ್ನು ತ್ಯಾಗ ಮಾಡಬಲ್ಲ? ಅದಕ್ಕಿಂತ ಹೆಚ್ಚಿನದೇನಿದೆ?”

ಗಾಂಧೀಜಿ ತೀರ್ಮಾನಕ್ಕೆ ಬಂದು, ಜನವರಿ ೧೩ನೇ ತಾರೀಖಿನಿಂದ ಉಪವಾಸವಾರಂಭಿಸಿದರು. ಈ ಸಮಾಚಾರ ತಿಳಿದ ಕೂಡಲೆ ದೆಹಲಿಯಲ್ಲಿದ್ದ ನೆಹರು, ಪಟೇಲ್, ಆಜಾದ್ ಮುಂತಾದವರು ಉಪವಾಸ ಮಾಡಬೇಡಿರೆಂದು ಕೇಳಿಕೊಂಡರು. ಗಾಂಧೀಜಿಯ ಮಗ ದೇವ್‌ದಾಸ್ ಗಾಂಧೀಜಿಯೂ ಉಪವಾಸಬೇಡವೆಂದು ತಂದೆಯನ್ನು ಪ್ರಾರ್ಥಿಸಿದರು. ದೂರ ದೂರ ಪ್ರದೇಶಗಳಿಂದ ಉಪವಾಸ ಬೇಡವೆಂದು ಗಾಂಧೀಜಿಯನ್ನು ಮುಖಂಡರು ಬೇಡಿಕೊಂಡರು.

ಈ ಮಧ್ಯೆ ಇಂಡಿಯಾ ಸರ್ಕಾರ ಪಾಕಿಸ್ಥಾನ ಸರ್ಕಾರಕ್ಕೆ ೫೫ ಕೋಟಿ ರೂಪಾಯಿಗಳನ್ನು ಕೊಡಬೇಕಾಗಿತ್ತು. ಅದು ಯಾವುದೆಂದರೆ, ಹಳೆ ಇಂಡಿಯಾ ವಿಭಜನೆಯಾದಾಗ ಖಜಾನೆಯಲ್ಲಿ ೩೭೫ ಕೋಟಿ ರೂಪಾಯಿಗಳಿದ್ದವು. ವಿಭಜನೆಯಾದ ದಿವಸವೇ ಪಾಕಿಸ್ತಾನಕ್ಕೆ ೨೦ ಕೋಟಿ ರೂಪಾಯಿಗಳನ್ನು ಕೊಡಲಾಯಿತು. ಬಾಕಿಯೆಲ್ಲಾ ಲೆಕ್ಕಮಾಡಿದ್ದರಲ್ಲಿ ೫೫ ಕೋಟಿ ರೂಪಾಯಿಗಳ ಬಾಕಿಯನ್ನು ಪಾಕಿಸ್ಥಾನಕ್ಕೆ ಕೊಡಬೇಕೆಂದು ತೀರ್ಮಾನವಾಗಿತ್ತು. ಆದರೆ ಪಾಕಿಸ್ಥಾನ ಕಾಶ್ಮೀರದ ಮೇಲೆ ಸೈನ್ಯ ಕಳುಹಿಸಿ, ಯುದ್ಧವಾರಂಭಿಸಿದ ಕಾರಣ, ಇಂಡಿಯಾ ಆ ಹಣವನ್ನು ಕೊಡದೇ ನಿಲ್ಲಿಸಿಕೊಂಡಿತು. ಕಾಶ್ಮೀರದ ಸಮಸ್ಯೆಯನ್ನು ಭದ್ರತಾ ಕಮಿಟಿಯ ತೀರ್ಮಾನಕ್ಕೆ ಹಾಕಿದ್ದರಿಂದ ಯುದ್ಧ ನಿಂತ ಹಾಗಾಯಿತು. ಆದರೂ ಆ ಹಣವನ್ನು ಪಾಕೀಸ್ಥಾನಕ್ಕೆ ಇನ್ನೂ ಕೊಟ್ಟಿರಲಿಲ್ಲ. ಗಾಂಧೀಜಿಯ ಉಪವಾಸಕ್ಕೆ ಇದೇನಾದರೂ ಕಾರಣವೋ ಎಂದು ಊಹಿಸಿ, ಇಂಡಿಯಾ ಸರ್ಕಾರ ಗಾಂಧೀಜಿಯ ಉಪವಾಸದ ಮೂರನೆಯ ದಿವಸ ಪಾಕಿಸ್ಥಾನಕ್ಕೆ ಹಣ ಪಾವತಿ ಮಾಡಸಿತು. ಇದರಿಂದ ಗಾಂಧೀಜಿಯ ಮನಸ್ಸಿಗೆ ಸ್ವಲ್ಪ ಸಮಾಧಾನವಾಯಿತು.

ಇಡೀ ಪ್ರಪಂಚದಲ್ಲಿಯೇ ಈ ಉಪವಾಸ ಪರಿಣಾಮ ಮಾಡಿತು. ವಿದೇಶಗಳಿಂದ ಉಪವಾಸ ನಿಲ್ಲಿಸಬೇಕೆಂದು ತಂತಿಗಳ ಸುರಿಮಳೆ. ದೆಹಲಿಯ ಜನರು ಗುಂಪು ಗುಂಪಾಗಿ ಬಂದು ಗಾಂಧೀಜಿಯನ್ನು ಬೇಡುತ್ತಿದ್ದರು. ಗಾಂಧೀಜಿಗೆ ಆಗ ೭೯ ವರ್ಷದ ಹತ್ತಿರ ಹತ್ತಿರ. ಈ ವಯಸ್ಸಿನಲ್ಲಿ ಅವರ ಉಪವಾಸವನ್ನು ದೇಹ ತಡೆಯಲಾರದು, ಏನಾಗುತ್ತೆಯೋ ಎಂಬ ಭೀತಿ ಜನಕ್ಕೆ ಉಂಟಾಯಿತು. ತಮ್ಮ ಶಕ್ತಿ ಕುಂದುತ್ತಿದ್ದರು ಗಾಂಧೀಜಿ ತಮ್ಮ ಬಹಿರಂಗ ಪ್ರಾರ್ಥನೆ ಸಭೆಗಳನ್ನು ಪ್ರತಿ ಸಂಧ್ಯಾಕಾಲ ನಡೆಸುತ್ತಿದ್ದರು; ಕೆಲವು ಮಾತುಗಳನ್ನೂ ಆಡುತ್ತಿದ್ದರು. ಆದರೂ ಅವರಿಗೆ ಬಹಳ ನಿಶ್ಯಕ್ತಿ. ದೆಹಲಿಯ ಮುಸ್ಲಿಂ ನಾಯಕರೂ, ಹಿಂದೂ ನಾಯಕರೂ ಒಟ್ಟಿಗೆ ಸಭೆಗಳನ್ನು ಸೇರಿಸಿ, ಇನ್ನು ಮುಂದೆ ತಾವು ಪರಸ್ಪರ ಸ್ನೇಹದಿಂದ ಇರುವುದಾಗಿ ಭರವಸೆ ನೀಡಿದರು. ಈ ಭರವಸೆ ಕೊಟ್ಟಾಗ್ಯೂ ಗಾಂಧೀಜಿ ಇನ್ನೂ ಒಂದು ದಿವಸ ಉಪವಾಸ ಮಾಡಿದರು. ಮರುದಿನ ಬೆಳಿಗ್ಗೆ, ಎಂದರೆ ೧೮ನೇ ತಾರೀಖೂ ಬೆಳಿಗ್ಗೆ ಹಿಂದೂ – ಮುಸ್ಲಿಂ ಶಾಂತಿ ಸಮಿತಿಯವರ ಸಮ್ಮುಖದಲ್ಲಿ ಉಪವಾಸವನ್ನು ಮುಕ್ತಾಯ ಮಾಡಿದರು.

ಮೌಲಾನಾ ಅಬುಲ್ ಕಲಾಂ ಆಜಾದರು ಉಪವಾಸ ಮುಕ್ತಾಯದ ದೃಶ್ಯವನ್ನು ಈ ರೀತಿಯಾಗಿ ವಿವರಿಸಿದ್ದಾರೆ: “ಮರುದಿನ ಬೆಳಿಗ್ಗೆ ೧೦ ಗಂಟೆಗೆ ಅವರ ಕೊಠಡಿಯಲ್ಲಿ ನಾವೆಲ್ಲ ಸೇರಿದವು. ಆ ವೇಳೆಗಾಗಲೇ ಜವಹರಲಾಲ್‌ಅಲ್ಲಿದ್ದರು. ಅಲ್ಲಿಗೆ ಬಂದ ಇತರರಲ್ಲಿ ಪಾಕಿಸ್ಥಾನದ ಹೈಕಮಿಷನರ್ ಇದ್ದರು. ಪಟೇಲರು ಬೊಂಬಾಯಿನಲ್ಲಿದ್ದುದರಿಂದ ಅವರನ್ನು ಬಿಟ್ಟು ಎಲ್ಲ ಮಂತ್ರಿಗಳೂ ಅಲ್ಲಿದ್ದರು. ಗಾಂಧೀಜಿ ಒಂದು ಸಂಜ್ಞೆ ಮಾಡಿದರು. ಪೌರರು ಮಾಡಿದ ಪ್ರತಿಜ್ಞೆಯನ್ನು ತಮಗೆ ಪುನಃ ತಿಳಿಸಬೇಕೆಂದರು. ದೆಹಲಿಯ ನಾಯಕರಲ್ಲಿ ಸುಮಾರ ೨೫ ಹಿಂದೂಗಳು, ಸಿಖ್ಖರು – ಎಲ್ಲ ಪಕ್ಷಗಳ ರಾಜಕೀಯ ಅಭಿಪ್ರಾಯವುಳ್ಳವರೂ ಒಬ್ಬರಾದ ಮೇಲೊಬ್ಬರು ಬಂದರು. ಗಾಂಧೀಜಿ ವಿಧಿಸಿದ ಷರತ್ತುಗಳನ್ನು ನೆರವೇರಿಸುವುದಾಗಿ ಶ್ರದ್ಧೆಯಿಂದ ಶಪಥ ಮಾಡಿದರು. ಆಮೇಲೊಂದು ಸಂಜ್ಞೆ ಮಾಡಲು, ಸ್ತ್ರೀಪುರುಷರು ರಾಮಧುನ್ ಹಾಡತೊಡಗಿದರು. ಅವರ ಮೊಮ್ಮಗಳು ಒಂದು ಗ್ಲಾಸ್ ಕಿತ್ತಲೆ ಹಣ್ಣಿನ ರಸವನ್ನು ತಂದಳು. ಗ್ಲಾಸನ್ನು ನನ್ನ ಕೈಗೆ ಕೊಡಬೇಕೆಂದು ಗಾಂಧೀಜಿ ಸಂಜ್ಞೆ ಮಾಡಿದರು. ಸಹಾನುಭೂತಿಯ ಉಪವಾಸ ಮಾಡಿದ್ದ “ಸ್ಟೇಟ್ಸಮನ್” ಪತ್ರಿಕೆಯ ಮಾಜಿ ಸಂಪಾದಕರಾಗಿದ್ದ ಅರ್ಥರ್‌ಮೂರ್ ರವರಿಗೆ ಹೇಳಿ ಕಳುಹಿಸಲಾಯಿತು, ಅವರೂ ಉಪವಾಸ ಮುಕ್ತಾಯ ಮಾಡಿದರು. ಇಡೀ ಭಾರತಕ್ಕೂ ಪ್ರಪಂಚಕ್ಕೂ ಗಾಂಧೀಜಿ ಉಪವಾಸ ನಿಲ್ಲಿಸಿದ್ದು, ಆನಂದವನ್ನುಂಟುಮಾಡಿತು.”

ಆದರೆ ಅವರಿಗೆ ಶಕ್ತಿ ಬರಲು ಬಹಳ ತಡವಾಯಿತು. ಜನವರಿ ೨೧ನೇ ಸಾಯಂಕಾಲ ಪ್ರಾರ್ಥನಾ ಸಭೆ ನಡೆಯುತ್ತಿದ್ದಾಗ, ಒಬ್ಬ ಯುವಕ ಬಿರ್ಲಾ ಭವನದ ಕಾಂಪೌಂಡಿನೊಳಕ್ಕೆ ಬಾಂಬು ಹಾಕಿದ. ಅದು ಯಾರಿಗೂ ಏನೂ ಘಾಸಿಮಾಡದೆ, ಸಿಡಿದು ಬಿದ್ದಿತು.

ಮಾರನೆ ದಿನ ಗಾಂಧೀಜಿ ಹಿಂದಿನ ದಿವಸದ ಬಾಂಬು ಎಸೆದ ಘಟನೆ ಬಗ್ಗೆ ಮಾತನಾಡುತ್ತಾ, “ಆಗ ನನಗೆ ಏನೆಂದೂ ತಿಳಿಯಲಿಲ್ಲ. ನನ್ನ ಮೇಲೆ ಬಾಂಬು ಎಸೆದ ಹುಡುಗ ನನ್ನನ್ನು ಹಿಂದೂ ಧರ್ಮದ ಶತ್ರು ಎಂದು ತಿಳಿದಿರಬೇಕು. ಹಿಂದೂ ಧರ್ಮವನ್ನು ಉಳಿಸುವ ದಾರಿ ಅದಲ್ಲ ಎಂದು ಅವನಿಗೆ ಯಾರಾದರೂ ತಿಳಿಸಲಿ” ಎಂದರು. ಆ ಹುಡುಗನನ್ನು ಹಿಂಸೆ ಮಾಡಬೇಡಿ ಎಂದು ಪೊಲೀಸ್ ಇನ್‌ಸ್ಪೆಕ್ಟರ್ – ಜನರಲ್‌ಗೆ ತಿಳಿಸಿದರು.

ಗಾಂಧೀಜಿ ಪ್ರಾರ್ಥನೆ ನಡೆಸುತ್ತಿದ್ದಾಗ, ಅವರು ಕೊರಾನನ್ನು ಓದಿಸಕೂಡದೆಂದು ಕೂಗು ಬರುತ್ತಿತ್ತು. ಕೂಗು ಬಂದ ದಿನ ಪ್ರಾರ್ಥನೆಯನ್ನೇ ನಿಲ್ಲಿಸುತ್ತಿದ್ದರು. ಉಳಿದ ದಿವಸ ಕೊರಾನನ್ನು ಓದಿಸಿ, ಪ್ರಾರ್ಥನೆ ನಡೆಸುತ್ತಿದ್ದರು.

ಗಾಂಧೀಜಿ ಮುಸಲ್ಮಾನರ ಪರವಾಗಿ ಬಹಳವಾಗಿ ಬಗ್ಗುತ್ತಿರುವರೆಂದು ಹಿಂದೂಗಳಲ್ಲಿ ಹಲವಾರು ಅಭಿಪ್ರಾಯ ಹೊಂದುತ್ತ ಬಂದರು. ಹಿಂದೂಗಳು ಮುಸ್ಲಿಮರಿಗೆ ಬೇಕಾದಷ್ಟು ಸೌಲಭ್ಯಗಳನ್ನು ಕೊಟ್ಟಾಯಿತು; ಇಂಡಿಯಾವನ್ನೇ ಒಡೆದು, ಪಾಕಿಸ್ಥಾನವನ್ನು ಕೊಟ್ಟದ್ದಾಯಿತು; ಇನ್ನು ಮುಸ್ಲಿಮರೇಕೆ ಗಲಭೆ ಮಾಡಬೇಕು? ಅವರು ಶಾಂತವಾಗಿರಬೇಕು, ಎಂಬುದು ಹಲವರ ವಾದವಾಯಿತು. ಮುಸ್ಲಿಮರು ಅಷ್ಟು ದಾಂಧಲೆ ನಡೆಸುತ್ತಿದ್ದರೂ, ಅವರಿಗೆ ೫೫ ಕೋಟಿ ರೂಪಾಯಿಗಳನ್ನು ಕೊಟ್ಟಿದ್ದು ಸರಿಯಲ್ಲ; ಗಾಂಧೀಜಿ ಉಪವಾಸ ಮಾಡಿದ್ದರಿಂದ ಕೊಡಬೇಕಾಯಿತು, ಎಂಬ ಇವೇ ಮೊದಲಾದ ಅಭಿಪ್ರಾಯಗಳನ್ನು ಕೆಲವು ಹಿಂದೂ ಯುವಕರು ಹೊಂದಿ, ಗಾಂಧೀಜಿಯನ್ನು ಕೊಲೆ ಮಾಡಬೇಕೆಂದು ಪಿತೂರಿ ನಡೆಸುತ್ತಿದ್ದರು. ಇದು ಸರ್ಕಾರಕ್ಕೆ ಗೊತ್ತಾಗಲಿಲ್ಲ. ಆದಾಗ್ಯೂ, ಗಾಂಧೀಜಿಯ ರಕ್ಷಣೆಗೋಸ್ಕರ ಪೊಲೀಸ್ ಕಾವಲನ್ನು ಇಡುವುದಾಗಿ ವಲ್ಲಭಭಾಯಿ ಪಟೇಲ್ ಗಾಂಧೀಜಿಗೆ ತಿಳಿಸಿದರು. ಗಾಂಧೀಜಿ “ನನಗೆ ಯಾವ ರಕ್ಷಣೆಯೂ ಬೇಡ; ಭಗವಂತನೇ ನನಗೆ ರಕ್ಷಣೆ” ಎಂದು ಹಟ ಮಾಡಿದರು. ಆದ್ದರಿಂದ ಸರ್ಕಾರ ಗಾಂಧೀಜಿಗೆ ಪ್ರಾರ್ಥನಾ ಸಮಯದಲ್ಲಿ ಯಾವ ರಕ್ಷಣೆಯನ್ನೂ ಮಾಡಲಿಲ್ಲ. ಕೆಲವರ ಅಭಿಪ್ರಾಯದಲ್ಲಿ ಗಾಂಧೀಜಿಗೆ ಪೊಲೀಸ್ ರಕ್ಷಣೆ ಕೊಡದಿದ್ದುದು ತಪ್ಪು ಎಂಬ ಭಾವನೆ. ಏನೇ ಆಗಲಿ, ಒಂದು ಬಾಬು ಆಸ್ಪೋಟನೆಯಾದ ಮೇಲೆ ಕೂಡ ಗಾಂಧೀಜಿಯ ಬಗ್ಗೆ ಯಾವ ರಕ್ಷಣಾ ಕ್ರಮವನ್ನೂ ಕೈಕೊಳ್ಳಲಿಲ್ಲ.

೧೯೪೮ನೇ ಜನವರಿ ೨೬ನೇ ತಾರೀಖು ಬಂದಿತು. ಗಾಂಧೀಜಿ ಪ್ರಾರ್ಥನಾ ಸಭೆಯಲ್ಲಿ ಭಾಷಣ ಮಾಡಿದರು: ಕಾಂಗ್ರೆಸೂ, ನಾನು ಸ್ವಪ್ನ ಕಂಡ ಸ್ವಾತಂತ್ರ್ಯ ಇದೇನೆ? ಈಗ ನಾವು ಮಾಡುವ ಹಬ್ಬ ಎಚ್ಚರಿಕೆಗಾಗಿ. ಇನ್ನೂ ನಾವು ಆ ಸ್ವಾತಂತ್ರ್ಯವನ್ನು ಹೊಂದಿಲ್ಲ. ಅದನ್ನು ಹೊಂದಲು ಇನ್ನೂ ಯತ್ನಿಸಬೇಕು. ನಮ್ಮ ಹಳ್ಳಿಯವರಿಗೆ ಅವರ ಪರಾವಲಂಬನ ಮತ್ತು ಪರಾಧೀನತೆ ತಪ್ಪುವವರೆಗೂ, ನಮಗೆ ಸ್ವಾತಂತ್ರ್ಯವೆಲ್ಲಿ? ಹಿಂಸೆ ಮಾಯವಾಗಬೇಕು. ಹೊದಿಕೆಯ ಹಿಂಸೆ ಕೂಡ ತಪ್ಪಬೇಕು. ಮುಷ್ಕರಗಳಿಂದ ದೇಶದ ಉತ್ಪತ್ತಿ ಸಾಧನೆಗೆ ಹಾನಿ. ಅವು ತಪ್ಪಬೇಕು. ನಾನೇ ಹಿಂದೆ ಮುಷ್ಕರಗಳನ್ನು ಹೂಡಿ ಎಂದು ಹೇಳಿದ್ದೇನೆ. ಆಗ ಬ್ರಿಟಿಷ್ ರಾಜ್ಯವಿತ್ತು ಮತ್ತು ಆಗ ಶ್ರಮಜೀವಿಗಳಿಗೆ ಈಗ ಇರುವ ಸೌಲಭ್ಯಗಳು ಇರಲಿಲ್ಲ. ಆಹಾರ ಪದಾರ್ಥಗಳ ಮೇಲೆ ನಿಯಂತ್ರಣವಿರಬಾರದು. ಲಂಚ ಮತ್ತು ಅನೀತಿಗಳು ಹೆಚ್ಚುತ್ತಿವೆ; ಇವನ್ನು ನಿಲ್ಲಿಸಬೇಕು.”

ಜನವರಿ ೨೮ರ ಪ್ರಾರ್ಥನಾ ಸಭೆಯಲ್ಲಿ ಗಾಂಧೀಜಿ ಹೇಳಿದರು: “ನಿಮ್ಮ ಸೇವೆ ಇನ್ನು ಸಾಕು, ನೀವು ಇನ್ನು ಹಿಮಾಲಯದಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ ಎಂದು ಕೆಲವರು ಬಂದು ಕೇಳಿದರು. ನಾನು ಯಾರ ಮಾತನ್ನೂ ಕೇಳಿ ಹಿಮಾಲಯಕ್ಕೆ ಹೋಗಬೇಕಾಗಿಲ್ಲ; ನಾನು ಸೇವೆ ಮಾಡುವ ಜನರೆಲ್ಲಾ ಹಿಮಾಲಕ್ಕೆ ಹೋದರೆ ನಾನೂ ಅವರ ಸೇವೆ ಮಾಡಲು ಅವರ ಹಿಂದೆ ಹೋಗುವೆನು ಎಂದು ಅವರಿಗೆ ಉತ್ತರ ಕೊಟ್ಟೆ”.

ಜನವರಿ ೨೯ನೇ ದಿನವೆಲ್ಲಾ ಗಾಂಧೀಜಿ ಏನೇನೋ ಕೆಲಸವಿತ್ತು. ಅವರಿಗೆ ಬಹಳ ಆಯಾಸವಾಗಿತ್ತು. ಆದಾಗ್ಯೂ ಕಾಂಗ್ರೆಸಿನ ಅಂಗರಚನೆ ಯನ್ನು ಬರೆದು ಮುಗಿಸಬೇಕಾಗಿತ್ತು. ಅದನ್ನು ಮುಗಿಸಿಯೇ ರಾತ್ರಿ ನಿದ್ರೆಗೆ ಹೋದರು. ದಿನಕ್ಕಿಂತ ತಡವಾಗಿ ಅವರು ಮಲಗಿಕೊಂಡರು. ಅವರಿಗೆ ಸ್ವಲ್ಪ ಕೆಮ್ಮುಇತ್ತು. ಕೆಮ್ಮಿದರು. ತಮ್ಮ ಜೊತೆಯಲ್ಲಿದ್ದವರಿಗೆ ಹೇಳಿದರು. “ನಾನು ಯಾವುದಾದರೂ ಖಾಯಿಲೆಯಿಂದ ಸತ್ತರೆ, ಜನಕ್ಕೆ ಹೇಳಿ ಗಾಂಧಿ ದೇವರ ಹತ್ತಿರದ ಮನುಷ್ಯನಾಗಿರಲಿಲ್ಲ ಎಂದು. ನನ್ನನ್ನು ಯಾರಾದರೂ ಬಾಂಬು ಹಾಕಿ ಕೊಂದಾಗ, ಆಗ ನಾನು ದೇವರ ಹೆಸರನ್ನು ಹೇಳಿಕೊಂಡು ಪ್ರಾಣ ಬಿಟ್ಟರೆ, ಅದು ನನ್ನ ಇಷ್ಟದ ಸಾವು, ದೇವರು ಮೆಚ್ಚುವ ಸಾವು”. ಗಾಂಧೀಜಿ ಏತಕ್ಕೆ ಹೀಗೆ ಮಾತನಾಡುತ್ತಿದ್ದಾರೆ ಎಂಬುದು ಆಗ ಪಕ್ಕದಲ್ಲಿದ್ದವರಿಗೆ ತಿಳಿಯಲಿಲ್ಲ.

* * *