೧೯೪೮ನೇ ಜನವರಿ ೩೦ನೇ ತಾರೀಖು ಶನಿವಾರ ಬೆಳಿಗ್ಗೆ ಎದ್ದ ಕೂಡಲೇ ಗಾಂಧೀಜಿ ತಮ್ಮ ಸೇವಕ ವಿಶ್ವನ್‌ಗೆ ಹೇಳಿದರು: “ನನ್ನ ಎಲ್ಲ ಮುಖ್ಯವಾದ ಪತ್ರಗಳನ್ನೂ ತೆಗೆದು ಕೊಂಡು ಬಾ. ಅದಕ್ಕೆಲ್ಲಾ ನಾನು ಇಂದೇ ಉತ್ತರ ಬರೆಯಬೇಕು. ನಾನು ನಾಳೆ ಇರುವೆನೋ ಇಲ್ಲವೋ”.

ಆವೊತ್ತು ಬೆಳಿಗ್ಗೆ ನಿಶ್ಚಕ್ತಿಯಿದ್ದುದರಿಂದ ವಾಕಿಂಗ್ ಹೋಗಲಿಲ್ಲ. ತಮ್ಮ ಕೊಠಡಿಯಲ್ಲಿಯೇ ಲವಂಗದ ಪುಡಿಯನ್ನು ಬೆಲ್ಲಕ್ಕೆ ಸೇರಿಸಿ, ಉಂಡೆ ಮಾಡಿಕೊಂಡು ಬಾಯಲ್ಲಿ ಇಟ್ಟುಕೊಂಡು, ನೀರು ನುಂಗುತ್ತಿದ್ದರು. ಅವರ ಮೊಮ್ಮಗಳು ಮನು ಈ ಉಂಡೆಗಳನ್ನು ಮಾಡಿಕೊಡುತ್ತಿದ್ದರು. ರಾತ್ರಿಗಾಗಿ ಅವನ್ನು ತಯಾರು ಮಾಡುತ್ತಿದ್ದಾಗ ಗಾಂಧೀಜಿ ಹೇಳಿದರು: “ರಾತ್ರಿಗೆ ನೋಡಿ ಕೊಳ್ಳೋಣಮ್ಮ. ರಾತ್ರಿಗೆ ಮುಚೆ ಏನಾಗುವುದೋ? ರಾತ್ರಿ ನಾನು ಇರುತ್ತೇನೆಯೋ ಇಲ್ಲವೋ?”

ಗಾಂಧೀಜಿಯ ಮೈತೂಕವನ್ನು ನೋಡಿದರು. ಅದು ೧೦೯ ಪೌಂಡ್ ಇತ್ತು. ಗಾಂಧೀಜಿ ಬಂಗಾಳಿ ಅಭ್ಯಾಸವನ್ನು ಬರೆದರು. ಮಧ್ಯಾಹ್ನ ಸ್ವಲ್ಪ ವಿಶ್ರಾಂತಿಯಾದ ಮೇಲೆ ಯಾರೋ ಪತ್ರಿಕಾ ಪ್ರತಿನಿಧಿಗಳು ಬಂದು, “ನೀವು ಸೇವಾಗ್ರಮಕ್ಕೆ ಫೆಬ್ರವರಿ ೧ನೇ ತಾರೀಖು ಹೋಗುವಿರೆಂದು ಪತ್ರಿಕೆಗಳು ತಿಳಿಸಿವೆ, ಅದುನಿಜವೇ?” ಎಂದು ಕೇಳಿದರು. ಗಾಂಧೀಜಿ ಪತ್ರಿಕೆಯನ್ನು ಓದಿ “ಗಾಂಧೀಜಿ ೧ನೇ ತಾರೀಖು ವಾರ್ಧಾಕ್ಕೆ ಹೋಗುವರು ಎಂದು ಬರೆದಿದೆ. ಆದರೆ ಅದು ಯಾವ ಗಾಂಧೀಜಿಯೊ ನನಗೆ ಗೊತ್ತಿಲ್ಲ” ಎಂದು ಉತ್ತರವಿತ್ತರು.

ಸಂಜೆ ೪ಕ್ಕೆ ಭೇಟಿಗಳು ಮುಗಿದವು. ವಲ್ಲಭಭಾಯಿಯವರಡೊನೆ ಗಾಂಧೀಜಿ ಒಂದು ಗಂಟೆ ಮಾತನಾಡಿದರು. ಮಾತನಾಡುತ್ತಲೇ ಚರಖಾದಲ್ಲಿ ನೂಲುತ್ತಲೂ ಇದ್ದರು. ನೆಹರು ಮತ್ತು ಪಟೇಲ್ ಇವರಿಗ್ಗಿದ್ದ ವೈಮನಸ್ಯವನ್ನು ಕುರಿತು ಮಾತನಾಡಿ “ನನಗೆ ತೋರುತ್ತೇ, ನೀವಿಬ್ಬರೂ ಕ್ಯಾಬಿನೆಟ್ಟನಲ್ಲಿರಬೇಕು. ನೆಹರುರವರಡೊನೆ ಪ್ರಾರ್ಥನೆಯಾದ ಮೇಲೆ ಮಾತನಾಡುತ್ತೇನೆ. ಬೇಕಾದರೆ ಸೇವಾಗ್ರಾಮಕ್ಕೆ ಹೋಗುವುದನ್ನು ಮುಂದೆ ಹಾಕುತ್ತೇನೆ” ಎಂದರು. ಇಬ್ಬರೂ ಒಟ್ಟಿಗೆ ಕೆಲಸ ಮಾಡುವುದು ಅವಶ್ಯಕ ಎಂದು ಗಾಂಧೀಜಿ ವಲ್ಲಭಭಾಯಿವರಿಗೆ ಪದೇ ಪದೇ ಹೇಳುತ್ತಿದ್ದರು.

ಸಾಯಂಕಾಲ ೪.೧೫ ಗಂಟೆಯಾಯಿತು. ಆಭಾ ಗಾಂಧೀಜಿಗೆ ಸಾಯಂಕಕಾಲದ ಊಟವನ್ನು ತಂದರು. ಊಟವಾಯಿತು. ಸರದಾರರು ಇನ್ನೂ ಅಲ್ಲಿಯೇ ಇದ್ದರು. ಗಡಿಯಾರದ ಮುಳ್ಳುಗಳು ಉರುಳುತ್ತಿದ್ದುವು. ಪ್ರಾರ್ಥನೆಗೆ ಹೊತ್ತಾಗುವುದಲ್ಲಾ ಎಂಬ ಕಾತುರ ಆಭಾಗೆ, ಗಾಂಧೀಜಿ ಎಂದೂ ಕಾಲ ಮೀರಿದವರಲ್ಲ. ವಿಧಿಯಿಲ್ಲದೆ ಅಭಾ ಗಾಂಧೀಜಿ ಕೂಡಲೇ  ಪ್ರಾರ್ಥನಾ ಸ್ಥಾನದ ಕಡೆ ಹೊರಟರು. ಒಂದು ಕೈ ಅಭಾ ಹೆಗಲಿನ ಮೇಲೂ, ಇನ್ನೊಂದು ಕೈಯನ್ನು ಮನುರ ಹೆಗಲ ಮೇಲೂ ಹಾಖಿಕೊಂಡು ಹೊರಟರು. ಮಧ್ಯೆ ಕೆಲವು ಹಾಸ್ಯ ಚಟಿಕೆಗಳೂ ಆದವು. ಅವರು ಪ್ರಾರ್ಥನಾ ಪ್ರದೇಶದ ವೇದಿಕೆಯ ಮೆಟ್ಟಲುಗಳನ್ನು ಹತ್ತುತ್ತಿದ್ದಾಗ “ನಾನು ಕಾಲ ಮೀರಿದ್ದೇನೆ. ಹತ್ತು ನಿಮಿಷಗಳು ತಡವಾಗಿದೆ. ನನಗೆ ಕಾಲಮೀರುವುದು ಸಹನೆಯಿಲ್ಲ. ಸರಿಯಾಗಿ ೫ ಗಂಟೆಗೆ ಟಾಕೋ ಟಾಕಾಗಿ ಪ್ರಾರ್ಥನಾ ಸ್ಥಾನದಲ್ಲಿರಬೇಕು” ಎಂದುಕೊಂಡರು.

ಮಾತುಗಳು ಹಠಾತ್ತನೆ ನಿಂತು ಹೋಯಿತು. ಪ್ರಾರ್ಥನೆಯ ವೇದಿಕೆ ಮುಟ್ಟಿದ ಕೂಡಲೆ ಎಲ್ಲಾ ಹರಟೆಗಳೂ ನಿಂತು ಹೋಗಬೇಕು ಎಂಬ ನಿಬಂಧನೆಯಿದ್ದದ್ದರಿಂದ, ಜನರ ಗುಂಪು ದಾರಿ ಬಿಟ್ಟಿತು. ಗಾಂಧೀಜಿ ತಮ್ಮ ಎರಡು ಕೈಗಳನ್ನು ಅಭಾ ಮತ್ತು, ಮನುರವರ ತೋಳುಗಳಿಂದ ತೆಗೆದು ಜನ ಸಮುದಾಯಕ್ಕೆ ಕೈ ಮುಗಿಯುತ್ತಿದ್ದಾಗ ಬಲದ ಕಡೆಯಿಂದ ಯಾರೋ ಒಬ್ಬ ಗುಂಪಿನಿಂದ ನುಗ್ಗಿ ಕೊಂಡು ಹತ್ತಿರಕ್ಕೆ ಬಂದರು.

“ನೀವು ಇಂದು ತಡಮಾಡಿದ್ದೀರಿ” ಎಂದು ಗಾಂಧೀಜಿಯನ್ನು ಪ್ರಶ್ನಿಸಿದರು.

“ಹೌದು” ಎಂದು ಗಾಂಧೀಜಿ ಉತ್ತರವಿತ್ತರು.

ಇನ್ನು ಮುಂದೆ ಮಾತನಾಡುವ ಮುಂಚೆಯೇ ಹತ್ಯೆ ನಡೆಯಿತು. ಮನು ಅವನನ್ನು ಹಿಂದಕ್ಕೆ ತಡೆಯಲು,  ಅವನ ಕೈ ಹಿಡಿದುಕೊಂಡರು. ಅವನು ಕೈಯನ್ನು ಒದರಿ, ಬಿಡಿಸಿಕೊಂಡು ಮುಂದಕ್ಕೆ ಬಂದು ಕೈ ಜೋಡಿಸಿಕೊಂಡು ನಿಂತಿರುವ ಗಾಂಧೀಜಿಯ ಮುಂದೆ ಬಗ್ಗೆ ಪಾಯಿಂಟ್ ಬ್ಲಾಂಕಾಗಿ (ಬಹಳ ಹತ್ತಿರದಿಂದ) ರಿವಾಲ್ವರಿನಿಂದ ಮೂರು ಗುಂಡುಗಳನ್ನು ಹೊಡೆದನು. ಒಂದು ಗುಂಡು ಹೊಕ್ಕಳಿನ ಬಲಗಡೆ ಎರಡೂವರೆ ಅಂಗುಲ ಮೇಲೆ ಬಿದ್ದು, ಒಳಗೆ ಹೋಯಿತು. ಎರಡನೇ ಗುಂಡು ಎದೆಯ ಬಲ ಭಾಗದ ತೊಟ್ಟಿನ ಮೇಲೆ ಬಿತ್ತು. ಇವೆರಡು ಗುಂಡುಗಳೂ ಬೆನ್ನು ಕಡೆಯಿಂದ ಹೊರಗೆ ಬಂದವು. ಮೂರನೇದು ಶ್ವಾಸಕೋಶದಲ್ಲಿ ಸಿಕ್ಕಿಕೊಂಡಿತು. ಮೊದಲನೇ ಗುಂಡು ಬೀಳುತ್ತಲೇ ನಡಿಗೆಯಲ್ಲಿದ್ದ ಗಾಂಧೀಜಿಯ ಕಾಲು ಕೆಳಗೆ ಬಂದಿತು. ಎರಡು ಮತ್ತು ಮೂರನೆಯ ಗುಂಡುಗಳು ಪ್ರವೇಶಿಸದಾಗ್ಯೂ, ಅವರು ನಿಂತೇ ಇದ್ದರು. ಆಮೇಲೆ ಕೆಳಗೆ ಕುಸಿದರು. ಅವರ ಕಡೆಯ ಮಾತುಗಳು “ರಾಮ, ರಾಮ” ಎಂಬುದಾಗಿ. ಮುಖವೆಲ್ಲಾ ಬೂದಿ ಬಿಳುಪಾಯಿತು. ಅವರ ಬಟ್ಟೆಯ ಮೇಲೆ ಹರಡುತ್ತಿದ್ದ ರಕ್ತದ ಕಲೆ ಕಂಡುಬಂದಿತು. ನಮಸ್ಕಾರಕ್ಕಾಗಿ ಮೇಲಕ್ಕೆತ್ತಿದ್ದ ಕೈಗಳು ಕ್ರಮೇಣ ಕೆಳಗೆ ಬಂದವು. ಒಂದು ಕೈ ಅಭಾರ ಹೆಗಲ ಮೇಲೆ ಬಂತು. ತೆಳುವಾದ ಗಾಂಧೀಜಿಯ ದೇಹ ಕೆಳಕ್ಕೆ ಬಿದ್ದಿತು. ಆಗತಾನೇ ಏನು ಸಂಭವಿಸಿತೆಂಬುದನ್ನು ಬಾಲಕಿಯರು ಅರಿತರು.

ಗಾಂಧೀಜಿ ಗುಂಡು ಹೊಡೆಯುತ್ತಲೇ ಹಿಂದಕ್ಕೆ ಬಿದ್ದರು. ಅವರ ಮೂಗಿಂದ ಕನ್ನಡಕಗಳು ನೇತಾಡುತ್ತಿದ್ದವು. ಅವರ ಚಪ್ಪಲಿಗಳು ಕಳಚಿ ಬಿದ್ದವು. ಅವರ ನಾಭಿಯಿಂದಲೂ ಎದೆಯಿಂದಲೂ ರಕ್ತ ಹೊರಗೆ ಜೋರಾಗಿ ಚಿಮ್ಮಿ ಬರುತ್ತಿತ್ತು. ಗಾಂಧೀಜಿಯ ಕೈ ಮನುವಿನ ಹೆಗಲಿನಿಂದ ಜಾರಿದವು. ಅವರನ್ನು ಬಿರ್ಲಾ ಭವನದ ಒಳಕ್ಕೆ ತೆಗೆದುಕೊಂಡು ಹೋಗುತ್ತಿದ್ದಾಗ, ಅವರಿಗೆ ಪ್ರಜ್ಞೆ ತಪ್ಪಿತು. ಬೇಕಾದಷ್ಟು ಚಿಕಿತ್ಸೆ ನಡೆಸಲಾಯಿತು. ಅರ್ಧ ಗಂಟೆಯ ಒಳಗೆ ಗಾಂಧೀಜಿ ಇಲ್ಲವಾದರು; ಅವರ ಆತ್ಮ ಪರಮಾತ್ಮನಲ್ಲಿ ಸೇರಿತು. ಪ್ರಾರ್ಥನಾ ಸ್ಥಳದಲ್ಲಿ ಕುಳಿತಿದ್ದ ಜನರಿಗೆ ಸಿಡಿಲು ಬಡಿದಂತಾಯಿತು. ಹೊರಗಿನಿಂದ ಜನರ ಗುಂಪು ಬಂದು ಸೇರುತ್ತಲೇ ಇತ್ತು. ಗಾಂಧೀಜಿ ಮೃತಿ ಹೊಂದಿದರು ಎಂದು ತಿಳಿದ ಮೇಲೆ, ಜನರಕೋಶ ಹೇಳತೀರದು. ಹಾ, ಹಾ, ಹಾ, ಎಂಬ ಕೂಗು ಮುಗಿಲು ಮುಟ್ಟಿತು. ಸಾವಿರಾರು ಜನ ಕಾಂಪೌಂಡಿನಲ್ಲಿ ಗಟ್ಟಿಯಾಗಿ ಆಳುತ್ತಾ ಎದೆ ಬಡಿದುಕೊಳ್ಳುತ್ತಾ ನಿಂತರು. ಸುದ್ದಿ ಊರಿನಲ್ಲೆಲ್ಲಾ ಕಾಡ್ಗಿಚ್ಚಿನಂತೆ ಹರಡಿತು. ದೇಶದೇಶಕ್ಕೆ ಮುಟ್ಟಿತು. ಹಿಮಾಲಯದಿಂದ ರಾಮೇಶ್ವರದವರಿಗೂ ಜನ ಸಮುದಾಯ ಕಣ್ಣೀರಿನ ಹೊಳೆಯನ್ನು ಸುರಿಸಿತು. ಆಗಬಾರದ್ದು ಆಗಿ ಹೋಯಿತು. ಗಾಂಧೀಜಿಗೆ ಮರಣ ಸಂಭವಿಸುತ್ತದೆಯೆಂದು ಸಾಮಾನ್ಯ ಜನ ತಿಳಿದಿರಲಿಲ್ಲ. ಅಹಿಂಸಾ ಮೂರ್ತಿಗೂ ಇಂತಹ ಮರಣವೇ ಎಂದು ಜನರು ಗೋಳಿಟ್ಟರು.

ಹಂತಕ ನಾಥುರಾಮ್ ಗೋಡ್ಸೆ. ಅವನನ್ನು ಬಿರ್ಲಾ ಭವನದ ತೋಟದ ಮಾಲಿ ರಘು ಎಂಬುವನು ಹಿಡಿದು, ಇತರರ ಸಹಾಯದಿಂದ ಅವನನ್ನು ಓಡಿ ಹೋಗದಂತೆ ತಡೆದು ನಿಲ್ಲಿಸಿದನು. ಅವನನ್ನು ಪೊಲೀಸರ ವಶ ಮಾಡಲಾಯಿತು.

ಗಾಂಧೀಜಿಯನ್ನು ಕೊಂದವನಾರು ಎಂಬುದು ಬಹುಜನಕ್ಕೆ ರಾತ್ರಿತನಕ ಗೊತ್ತಾಗಲಿಲ್ಲ. ಅವನು ಮುಸ್ಲಿಮನಲ್ಲ ಎಂದು ತಿಳಿದಾಗ ಜನರು ಸರಾಗವಾಗಿ ಉಸಿರುಬಿಟ್ಟರು. ಒಬ್ಬ ಹಿಂದೂ ಯುವಕ ಎಂದು ತಿಳಿದು ಬಂದ ಮೇಲೆ ಜನರು ಬಹಳ ಖೇದಪಟ್ಟರು.

ಗಾಂಧೀಜಿಯ ಮರಣದ ಸುದ್ದಿ ತಿಳಿದಕೂಡಲೆ, ಮುಖಂಡರು ಒಬ್ಬೊಬ್ಬರಾಗಿ ಬಿರ್ಲಾಭವನಕ್ಕೆ ಧಾವಿಸಿದರು. ಮೊದಲು ಬಂದವರು ಪಟೇಲ್ ಅವರು ಗಾಂಧೀಜಿಯ ಕಳೇಬರದ ಪಕ್ಕದಲ್ಲಿ ಕುಳಿತು, ನಾಡಿಹಿಡಿದು ನೋಡಿದರು.

ಡಾ|| ಭಾರ್ಗವ ಹೇಳಿದರು “ಮೃತಿ ಹೊಂದಿ ಹತ್ತು ನಿಮಿಷವಾಯಿತು” ಎಂದು. ಅಭಾ ಮತ್ತು ಮನು ಬಿಕ್ಕಿ ಬಿಕ್ಕಿ ಅತ್ತರು; ಆಮೇಲೆ ರಾಮರ್ಧುನ್ ಹೇಳಿದರು. ರಾಮನಾಮನನ್ನು ಗಟ್ಟಿಯಾಗಿ ಹೇಳತೊಡಗಿದರು. ಇಷ್ಟರಲ್ಲಿ ನೆಹರು ಬಂದರು. ಅವರು ಬಂದಕೂಡಲೆ ಗಾಂಧೀಜಿಯ ದೇಹವನ್ನೂ ಬಟ್ಟೆಯನ್ನೂ ಮುಟ್ಟಿ ಮುಟ್ಟಿ ಬಿಕ್ಕಿ ಬಿಕ್ಕಿ ಅಳತೊಡಗಿದರು. ಪಟೇಲರು ನೆಹರುವನ್ನು ಸಮಾಧಾನ ಪಡಿಸುತ್ತಿದ್ದರು. ದೇವದಾಸ್ ಗಾಂಧೀ ಬಂದು, ತಮ್ಮ ತಂದೆಯ ತೋಲನ್ನು ಮುಟ್ಟಿ, ಆಳ ತೊಡಗಿದರು. ಆಮೇಲೆ ಬಂದವರು ಆಜಾದ್, ಜಯರಾಮ್‌ದಾಸ್ ದೌಲತ್ ರಾಮ್, ರಾಜಕುಮಾರಿ ಅಮೃತ ಕೌರ್, ಲಾರ್ಡ್ ಮೌಂಟ್‌ಬೇಟನ್ ಗೌರ್ನರ್ – ಜನರಲ್‌ರು ಆಗತಾನೇ ಮದರಾಸಿನಿಂದ ವಿಮಾನದಲ್ಲಿ ಬಂದಿದ್ದರು.

ಮೌಂಟ್‌ಬೇಟನರು ಕಣ್ಣೀರು ಸುರಿಸುತ್ತಾ ನೆಹರು ಮತ್ತು ಪಟೇಲರನ್ನು ಹತ್ತಿರಕ್ಕೆ ಕರೆದು, “ನೀವಿಬ್ಬರೂ ಇನ್ನು ಸಹೋದರರಾಗಬೇಕು. ವೈಮನಸ್ಯಗಳನ್ನು ಬಿಟ್ಟು ಬಿಡಬೇಕು. ಗಾಂಧೀಜಿ ನನಗೆ ಹೇಳಿದ್ದರು. ನಿಮ್ಮಿಬ್ಬರನ್ನೂ ಸೇರಿಸಬೇಕೆಂದು.  ಈಗ ನೀವಿಬ್ಬರೂ ಸಹೃದಯರಾಗಿರಿ” ಎಂದರು. ನೆಹರು ಮತ್ತು ಪಟೇಲರು ಒಬ್ಬರನೊಬ್ಬರು ತಬ್ಬಿಕೊಂಡರು.

ಇನ್ನು ಮುಂದಿನ ಏರ್ಪಾಡುಗಳನ್ನು ಮೌಂಟ್‌ಬೇಟನ್ನರು ಮಾಡಿದರು. ಗಾಂಧೀಜಿಯ ದೇಹವನ್ನು ದಹನ ಮಾಡಬೇಕೆಂದು ತೀರ್ಮಾನ ಮಾಡಲಾಯಿತು.

ರಾತ್ರಿ ನೆಹರು ಆಲ್ ಇಂಡಿಯಾ ರೇರಿಯೋದಲ್ಲಿ ಭಾಷಣ ಮಾಡುತ್ತ, “ನಮಗೆಲ್ಲಾ ಬೆಳಕಾಗಿದ್ದ ಗಾಂಧೀಜಿ ಇನ್ನು ಇಲ್ಲವಾದರು. ಆ ಬೆಳಕು ಈಗ ನಂದಿರುವ ಹಾಗೆ ಕಂಡರೂ, ಅದು ನಂದಿ ಹೋಗುವ ಬೆಳಕಲ್ಲ. ಎಲ್ಲಾ ಕಾಲಕ್ಕೂ ಇರುವ ಬೆಳಕು” ಎಂದರು.

ಗಾಂಧೀಜಿಯ ಕಳೇಬರಕ್ಕೆ ಸ್ನಾನಮಾಡಿಸಿ, ಒರೆಸಿ, ಶ್ರೀಗಂಧವನ್ನು ಬಳಿದು, ಪುಷ್ಪಗಳಿಂದ ಅಲಂಕರಿಸಿ ಮಚ್ಚಿನ ಮೇಲೆ (ಬಾಲ್ಕನಿಯಲ್ಲಿ) ಎತ್ತರದಲ್ಲಿಟ್ಟು ಪ್ರದರ್ಶಿಸಲಾಯಿತು. ಲಕ್ಷೋಪಲಕ್ಷ ಜನ ದರ್ಶನ ಮಾಡಿ, ರಾಮ ರಾಮ ಎಂದರು. ಬೆಳಿಗ್ಗೆ ೧೧ – ೭೦ಗಂಟೆಗೆ ಸ್ಮಶಾನ ಯಾತ್ರೆ. ರಾಜ ವೈಭವದಿಂದ ಆರಂಭವಾಗಿ ಸೂರ್ಯಾಸ್ತಮಯಕ್ಕೆ ಯಮುನಾ ತೀರವನ್ನು ಮುಟ್ಟಿತು. ಗಂಧದ ಸೌದೆಯ ರಾಶಿಯ ಮೇಲೆ ಗಾಂಧೀಜಿಯ ಭೌತಿಕ ದೇಹವನ್ನಿಟ್ಟು, ಅದಕ್ಕೆ ಸಕಲ ರಾಜಮರ್ಯಾದೆಯನ್ನೂ ತೋರಿಸಲಾಯಿತು.

ಮೌಂಟ್‌ಬೇಟನ್‌, ನೆಹರು, ಪಟೇಲ್, ಆಜಾದ್, ಮುಂತಾದ ಸಹಸ್ರಾರು ಮುಖಂಡರ ಸಮ್ಮುಖದಲ್ಲಿ, ಲಕ್ಷ ಗಟ್ಟಲೆ ಜನರು ರಾಮಧುನ್ ಮಾಡುತ್ತಿದ್ದಾಗ, ಗಾಂಧೀಜಿಯ ಕಿರಿಯ ಪುತ್ರ ದೇವದಾಸ್ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಕೂಡಲೇ ಅಗ್ನಿದೇವ ಭುಗ್ಗೆಂದು ಮೇಲಕ್ಕೆದ್ದು ರಕ್ತಕಾಂತಿಯಿಂದ ದೇಹವನ್ನು ಭಸ್ಮ ಮಾಡಿದನು. ಈ ಕೆಂಪು ಪಶ್ಚಿಮ ದಿಕ್ಕಿನ ಸೂರ್ಯನ ಕೆಂಪಿನೊಡನೆ ಸೇರಿ, ರಂಜಿಸಿತು. “ಮಹಾತ್ಮಾ ಗಾಂಧೀಜಿ ಅಮರ್ ಹೋ, ಬಾಪು ಅಮರ್ ಹೋಗಯೆ” ಎಂದು ಜನ ಸ್ತೋಮ ಕೂಗಿತು. ಒಂದು ಸಲವಲ್ಲ, ಅನಂತ ಸಾರಿ.

ಆನಂದ ಟಿ. ಹಿಂಗೋರಾನಿ ಗಾಂಧೀಜಿಯೊಡನೆ ಸಾವಿನ ಬಗ್ಗೆ ಮಾತನಾಡಿದ ಕೆಲವು ಅಂಶಗಳನ್ನು ಇಲ್ಲಿ ಕೊಟ್ಟಿದೆ:

ಗಾಂಧೀಜಿ: ನಾನು ಉಪವಾಸದಿಂದ ಸತ್ತಿದ್ದರೆ ಜನ ಅದನ್ನು ಯಾವ ರೀತಿಯಾಗಿ ಪರಿಗಣಿಸುತ್ತಿದ್ದರೋ?

ಆನಂದ: – ಅದೊಂದು ಮಹಿಮಾಯುತವಾದ ಮರಣವಾಗುತ್ತಿತ್ತು, ಬಾಪು

ಬಾಪು: – ಛೆ. ಅದನ್ನು ಮಹಿಮೆಯ ಮರಣವೆಂದು ನೀವು ಪರಿಗಣಿಸುತ್ತೀರಾ? ನಾನು ಹಾಗೆ ಪರಿಗಣಿಸುವುದಿಲ್ಲ. ಅದರಲ್ಲಿ ಮಹಿಮೆಯೇನಿದೆ? ನಿಮಗೆ ಗೊತ್ತೇ? ನನ್ನ ಜಾತಕದಲ್ಲಿ ಬರೆದಿದೆ, ನಾನು ವೀರ ಮರಣವನ್ನು ಹೊಂದುತ್ತೇನೆಂದು.

ಆನಂದ: – ಆದರೆ, ಬಾಪು ಉಪವಾಸದಿಂದ ಸಾಯುವುದೂ ವೀರ ಮರಣವೇ ಅಲ್ಲವೇ? ಸ್ವಲ್ಪ ಸ್ವಲ್ಪವಾಗಿ, ಅಂಗುಲ ಅಂಗುಲವಾಗಿ ಸಾಯುವುದು ಸುಲಭವಲ್ಲ, ಅದಕ್ಕೆ ಅತ್ಯಂತ ಉನ್ನತ ಧೈರ್ಯ ಬೇಕು.

ಬಾಪು: – ಇಲ್ಲ. ನಾನು ಹಾಗೆಂದು ಪರಿಗಣಿಸುವುದಿಲ್ಲ. ನನಗೆ ಮರಣ ಬರಬೇಕಾದರೆ, ನನ್ನನ್ನು ಗಲ್ಲಿಗೇರಿಸಬೇಕು; ಇಲ್ಲವೇ ನನ್ನನ್ನು ಯಾರಾದರೂ ಗುಂಡಿನಿಂದ ಹೊಡೆಯಬೇಕು. ನಿಜವಾಗಿಯೂ ಅದು ವೀರ ಮರಣ. ಉಪವಾಸ ಮಾಡಿ ಹಾಸಿಗೆಯಲ್ಲಿ ಸಾಯುವುದು ಎಂದಿಗೂ ವೀರಮರಣವಲ್ಲ.

ಗಾಂಧೀಜಿಗೆ ಅವರು ಕೋರಿದ ರೀತಿಯಲ್ಲಿಯೇ ಮರಣ ಸಂಭವಿಸಿತು.

ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸಭೆ ಸೇರಿ ಗಾಂಧೀಜಿಗೆ ಅಂತಿಮ ಗೌರವ ಸಲ್ಲಿಸಿತು. ಎರಡು ನಿರ್ಣಯಗಳು ಅಂಗೀಕೃತವಾದವು:

(೧) ಮೊದಲನೆಯದು: – ಮಹಾತ್ಮಾ ಗಾಂಧೀಯವರನ್ನು ಗುಂಡಿನಿಂದ ಕೊಂದ ಬಗ್ಗೆ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಅತ್ಯಂತ ದುಃಖವನ್ನಲ್ಲದೆ, ಅವರು ಗುಂಡಿನಿಂದ ಹತರಾದ ಬಗ್ಗೆ ಅತ್ಯಂತ ನಾಚಿಕೆಯನ್ನು ವ್ಯಕ್ತಪಡಿಸುತ್ತದೆ.

(೨) ಎರಡನೆಯದು: – ಒಂದು ರಾಷ್ಟ್ರೀಯ ಸ್ಮಾರಕ ನಿಧಿಯನ್ನು ಶೇಖರಿಸಬೇಕೆಂದು ತೀರ್ಮಾನಿಸುತ್ತದೆ. ಗಾಂಧೀಜಿಯವರ ಕೊಲೆ ಯಾವನೋ ಹುಚ್ಚನ ಕ್ಷಣ ಸ್ಪೂರ್ತಿಯಿಂದ, ಹಠಾತ್ತಾಗಿ, ನಡೆದ ಒಂದು ಪ್ರತ್ಯೇಕ ಕ್ರಿಯೆಯಲ್ಲ, ಅದಕ್ಕೆ ಒಂದು ಹಿನ್ನೆಲೆಯುಂಟು, ಪೂರ್ವಸಿದ್ಧತೆಯುಂಟು. ಅದು ಈ ದೇಶದಲ್ಲಿ ಅನೇಕ ವರ್ಷಗಳಿಂದಲೂ ಪ್ರಚಾರಿತವಾಗಿದ್ದ ಕೋಮುವಾರು ವಿಷದ ಫಲ, ಈಚಿನ ವರ್ಷಗಳಲ್ಲಿ ಈ ಕೋಮುವಾರು ವಿಷ ಇಡೀ ದೇಶದಲ್ಲಿ ವ್ಯಾಪಿಸಿ, ಯಾರಿಗೆ ಅದು ಅಂಟುತ್ತಿರಲಿಲ್ಲವೋ ಅವರಿಗೂ ಈಗ ಅಂಟಿದೆ. ದೇಶದ ವಿಭಜನೆ ಮತ್ತು ಅದಕ್ಕೆ ಪೂರ್ವಭಾವಿಯಾಗಿಯೂ ಅನಂತರವೂ ಸಂಭವಿಸಿದ ಶೋಕಾಂತ ಘಟನೆಗಳು ಜನರ ಮನಸ್ಸನ್ನು ಇನ್ನೂ ಕಲಕಿವೆ ಮತ್ತು ರೋಷಾವೇಶಗಳನ್ನು ಎಬ್ಬಿಸಿವೆ.

ಗಾಂಧೀಜಿಯ ಕೊಲೆಯಾದ ಮೇಲೆ ದೇಶದ ಪರಿಸ್ಥಿತಿ ಬಹಳ ಬದಲಾವಣೆಯಾಯಿತು. ಮುಖಂಡರಿಗೆ ಹಿತಚಿಂತಕರೂ ಮಾರ್ಗದರ್ಶಕರೂ ಇಲ್ಲದ ಹಾಗಾಯಿತು. ಆದಾಗ್ಯೂ, ಗಾಂಧೀಜಿ ಕೆಲವು ತತ್ವಗಳನ್ನು ದೇಶದ ಮುಂದಿಟ್ಟಿದ್ದರು. ಆದಾವುವೆಂದರೆ: ಸತ್ಯ ಅಹಿಂಸೆ. ನಮ್ಮ ಸಮಾಜವನ್ನು ಸತ್ಯ ಮತ್ತು ಅಹಿಂಸೆಯ ಬುನಾದಿಯ ಮೇಲೆ ಕಟ್ಟಬೇಕೆಂದು ಅವರು ಪುನಃ ಪುನಃ ತಿಳಿಸಿದ್ದರು. ಆದ್ದರಿಂದ ನಮ್ಮ ಸಮಾಜ ಸೇವಕರು ಈ ದಾರಿಯಲ್ಲಿ ನಡೆಯಬೇಕೆಂಬುದು ವಿಧಾಯಕವಾದ ವಿಷಯ. ಗಾಂಧೀಜಿ ಕಾಂಗ್ರೆಸ್ಸನ್ನು ವಜಾಮಾಡಿ, ಲೋಕ ಸೇವಕ ಸಂಘವೆಂಬ ಸಂಸ್ಥೆಯನ್ನು ರಚಿಸಿ, ಅದರ ಆಶ್ರಯದಲ್ಲಿ ದೇಶ ಮತ್ತು ಸಮಾಜ ಸೇವೆ ಮಾಡಬೇಕೆಂದು “ಹರಿಜನ”ದಲ್ಲಿ ತಮ್ಮ ಅಂತಿಮ ಲೇಖನವನ್ನು ಬರೆದಿದ್ದರು. ಅದರ ನಿಯಮಗಳು ಇವು:

(೧) ಲೋಕ ಸೇವಕ ಸಂಘದ ಪ್ರತಿಯೊಬ್ಬ ಕೆಲಸಗಾರನೂ ಸತತ ಖಾದಿಧಾರಿಯಾಗಿರಬೇಕು. ಈ ಖಾದಿ ಅವನೇ ನೂತ ನೂಲಿನಿಂದ ನೇಯ್ದದ್ದಾಗಿರಬೇಕು, ಅಥವಾ ಅವನು ಹಾಕುವ ಖಾದಿ ಆಲ್ ಇಂಡಿಯಾ ಸ್ಪಿನ್ನರ್ಸ್ ಅಸೋಸಿಯೇಷನ್ನಿನಿಂದ ಸರ್ಟಿಫೈ ಆಗಿರಬೇಕು. ಆ ಕೆಲಸಗಾರನು ಮದ್ಯಪಾನಿಯಾಗಿರಕೂಡದು. ಅವನು ಹಿಂದುವಾದರೆ, ಅಸ್ಪ್ರೃಶ್ಯತೆಯನ್ನು ಸ್ವಂತವಾಗಿಯೂ ಸಂಸಾರದಲ್ಲಿಯೂ ತ್ಯಜಿಸಿದವನಾಗಿರಬೇಕು. ಕೋಮುಗಳ ಪರಸ್ಪರ ಐಕಮತ್ಯದಲ್ಲಿ ವಿಶ್ವಾಸವುಳ್ಳವನಾಗಿರಬೇಕು. ಎಲ್ಲ ಮತಗಳಿಗೂ ಸಮಾನವಾದ ಗೌರವವನ್ನು ಕೊಡಬೇಕು. ಅವರು ಯಾವ ಜನಾಂಗವೇ ಆಗಿರಲಿ, ಮತವೇ ಆಗಿರಲಿ, ಲಿಂಗವೇ ಆಗಿರಲಿ, ಅವರಿಗೆ ಸಮಾನವಾದ ಅಂತಸ್ತು ಕೊಡಬೇಕು.

(೨) ತನ್ನ ಸರಹದ್ದಿನಲ್ಲಿರುವ ಪ್ರತಿಯೊಬ್ಬ ಹಳ್ಳಿಗನೊಡನೆಯೂ ವೈಯಕ್ತಿಕ ಸಂಪರ್ಕ ಹೊಂದಿರಬೇಕು.

(೩) ಹಳ್ಳಿಯ ಜನರ ಮಧ್ಯದಿಂದಲೇ ಕೆಲಸಗಾರರನ್ನು ಆರಿಸಿ, ಅವರಿಗೆ ತರಬೇತಿ ಕೊಡಬೇಕು.

(೪) ತಾನು ದಿನದಿನವೂ ಮಾಡುವ ಕೆಲಸದ ದಾಖಲೆಯನ್ನಿಡಬೇಕು.

(೫) ಪ್ರತಿಯೊಂದು ಹಳ್ಳಿಯೂ ತನ್ನ ವ್ಯವಸಾಯ ಮತ್ತು ಕೈ ಕಸುಬಿನಿಂದ ಸ್ವಯಂ ಪೂರ್ಣವೂ ಸ್ವಯಂ ತೃಪ್ತವೂ ಆಗುವಂತೆ, ಹಳ್ಳಿಗಳನ್ನು ವ್ಯವಸ್ಥೆ ಗೊಳಿಸಬೇಕು.

(೬) ಹಳ್ಳಿಯ ಜನರಿಗೆ, ನೈರ್ಮಲ್ಯ, ಆರೋಗ್ಯ ಇವುಗಳ ಬಗ್ಗೆ ಶಿಕ್ಷಣ ಕೊಡಬೇಕು; ಮತ್ತು ಅದರಲ್ಲಿ ಅನಾರೋಗ್ಯವೂ ಖಾಯಿಲೆಗಳೂ ಹರಡದಂತೆ ನೋಡಿಕೊಳ್ಳಬೇಕು.

(೭) ಹಳ್ಳಿಯವರಿಗೆ ನಯಿತಾಲೀಂ ರೀತಿಯಲ್ಲಿ, ಹಿಂದೂಸ್ತಾನೀ ತಾಲೀಂ ಸಂಘ ತೋರಿಸಿ ಕೊಟ್ಟಿರುವ ರೀತಿಯಲ್ಲಿ, ಹುಟ್ಟಿನಿಂದ ಮರಣದವರೆಗೆ ಅವರು ಏನೇನನ್ನು ಕಲಿಯಬೇಕೆಂಬುದನ್ನು ವ್ಯವಸ್ಥೆಗೊಳಿಸಬೇಕು.

(೮) ವಿಧಾಯಕ ಮತದಾರರ ಪಟ್ಟಿಯಲ್ಲಿ ತಪ್ಪಿಹೋಗಿರುವವರ ಹೆಸರುಗಳನ್ನು ಸೇರಿಸುವಂತೆ ಮಾಡಬೇಕು.

(೯) ಓಟು ಮಾಡಲು ಹಕ್ಕನ್ನು ಸಂಪಾದಿಸಿಕೊಳ್ಳುವಂತೆ ಹಳ್ಳಿಗರನ್ನು ಪ್ರೋತ್ಸಾಹಿಸಬೇಕು.

(೧೦) ಈ ಮೇಲಿನ ಅಂಶಗಳನ್ನೂ, ಮುಂದೆ ಕೊಡಲಾಗುವ ಅಂಶಗಳನ್ನೂ ನಿರ್ಧರಿಸಲು ಸಂಘದ ನಿಯಮಗಳಿಗೆ ಅನುಸಾರವಾಗಿ ಕರ್ತವ್ಯ ನಿರ್ವಹಿಸಲು ಪ್ರತಿಯೊಬ್ಬ ಕೆಲಸಗಾರನೂ ತಕ್ಕ ಅರ್ಹತೆಯನ್ನೂ ತರಪೇತಿಯನ್ನೂ ಪಡೆಯಬೇಕು.

(೧೧) ಲೋಕ ಸೇವಕ ಸಂಘ ಈ ಕೆಳಗಿನ ಸ್ವಯಮಾಡಳಿತ ಸಂಸ್ಥೆಗಳನ್ನು ಅಫಿಲಿಯೇಟ್ ಮಾಡಿಕೊಳ್ಳತಕ್ಕದ್ದು:

(೧) ಆಲ್ ಇಂಡಿಯಾ ಸ್ಪಿನ್ನರ್ಸ್ ಅಂಡ್ ವಿಲೇಜ್ ಇಂಡಸ್ಟ್ರೀಸ್ ಸೋಸಿಯೇಷನ್‌.

(೨) ಆಲ್ ಇಂಡಿಯಾ ವಿಲೇಜ್ ಇಂಡಸ್ಟ್ರೀಸ್ ಅಸೋಸಿಯೇಷನ್.

(೩) ಹಿಂದೂಸ್ತಾನೀ ತಾಲೀಂ ಸಂಘ,

(೪) ಹರಿಜನ ಸೇವಕ ಸಂಘ, ಮತ್ತು

(೫) ಗೋಸೇವಾ ಸಂಘ.

ಸಂಘ ಅದರ ಖರ್ಚಿಗೆ ಬೇಕಾದ ಹಣವನ್ನು ಹಳ್ಳಿಯವರಿಂದಲೂ ಮತ್ತು ಇತರರಿಂದಲೂ ವಸೂಲು ಮಾಡತಕ್ಕದ್ದು ಬಡವನ ಕಾಲಾಣೆಯನ್ನು ಮುಖ್ಯವಾಗಿ ವಸೂಲು ಮಾಡಬೇಕು.

ಆದರೆ, ಯಾರೂ ಲೋಕ ಸೇವಕ ಸಂಘವನ್ನು ಸ್ಥಾಪಿಸಲಿಲ್ಲ, ಕಾಂಗ್ರೆಸು ಹಿಂದಿನಂತೆಯೇ ಮುಂದುವರಿಯಿತು. ಅದು ಕ್ರಮೇಣ ಚುನಾವಣೆಗೆ ಉಮೇದುವಾರರನ್ನು ಆರಿಸುವ ಸಂಸ್ಥೆಯಾಯಿತು. ಅದರ ಕಾಲ ಮತ್ತು ಶಕ್ತಿಯೆಲ್ಲಾ ರಾಜಕೀಯಕ್ಕಾಗಿಯೇ ವಿನಿಯೋಗವಾಯಿತು. ಕಾಂಗ್ರೆಸಿನ ಅಂಗರಚನೆಗಳಲ್ಲಿ ಕೆಲವು ಬದಲಾವಣೆಗಳಾದಾಗ್ಯೂ ಅದು ಗಾಂಧೀಜಿಯ ರಚನಾತ್ಮಕ ಕಾರ್ಯಸಂಸ್ಥೆಯಾಗಿ ಉಳಿಯಲಿಲ್ಲ.

ಗಾಂಧೀಜಿಯ ಮರಣಾನಂತರ, ಸರ್ವೋದಯ ಸಂಸ್ಥೆಗಳು ಉದಯವಾದವು; ಸರ್ವೋದಯ ಸಮ್ಮೇಳನಗಳು ನಡೆದವು.

ವಿನೋಬಾಜಿ ಭೂದಾನ ಯಜ್ಞ ಚಳುವಳಿಯನ್ನು ಆರಂಭಿಸಿ ದೇಶದಲ್ಲಿ ನವ ಚೈತನ್ಯವುಂಟುಮಾಡಿದರು. ಶ್ರೀ ಜಯಪ್ರಕಾಶ್ ನಾರಾಯಣರವರೂ ಇನ್ನೂ ಇತರರೂ ಈ ಉದ್ಯಮದಲ್ಲಿ ತೊಡಗಿದ್ದಾರೆ.

ಗಾಂಧೀಜಿಯ ಮರಣಾನಂತರ, ಗಾಂಧೀ ಸ್ಮಾರಕ ನಿಧಿ ಎಂಬ ನಿಧಿಯನ್ನು ಶೇಖರಿಸಲಾಯಿತು. ಸುಮಾರು ೧೩.೫ ಕೋಟಿ ರೂಪಾಯಿಗಳು ವಸೂಲಾದವು. ಅದನ್ನು ಗಾಂಧೀಜಿಯ ರಚನಾತ್ಮಕ ಕಾರ್ಯಗಳಿಗೆ ಉಪಯೋಗಿಸಲು ನಿರ್ಧಾರವಾಯಿತು. ಗಾಂಧೀಜಿಯ ಉಪದೇಶಗಳನ್ನೊಳಗೊಂಡ ಗ್ರಂಥಗಳನ್ನು ಇಂಗ್ಲಿಷಿನಲ್ಲಿಯೂ ದೇಶಭಾಷೆಯಗಳಲ್ಲಿಯೂ ಪ್ರಕಟಿಸಲಾಗುತ್ತಿದೆ.

ಗಾಂಧೀಜಿಯ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಎಲೆಲ್ಲೂ ಸಭೆಗಳೂ, ಗೋಷ್ಠಿಗಳೂ, ಸಮ್ಮೇಳನಗಳೂ ನಡೆದವು.

ಗಾಂಧೀಜಿ ಮರಣ ಹೊಂದಿದಾಗ್ಯೂ, ಅವರು ಹಾಕಿಕೊಟ್ಟ ಅಹಿಂಸಾ ಪೂರ್ಣ ಹೋರಾಟದ ಮಾರ್ಗ ಜಗತ್ತಿನಲ್ಲಿ ಒಂದು ಹೊಸ ದಾರಿಯನ್ನು ತೋರಿದೆ. ಅನ್ಯಾಯಗಳನ್ನೂ ಅಧರ್ಮಗಳನ್ನೂ ತಮ್ಮ ಮೇಲೆ ಹೊರಿಸಲ್ಪಟ್ಟಾಗ, ಅವನ್ನು ಸಹಿಸಿಕೊಂಡು ಜನ ಸುಮ್ಮನೆ ಕೂಡಬೇಕಾಗಿಲ್ಲ. ಅದಕ್ಕೆ ವಿರುದ್ಧವಾಗಿ ಹೊರಾಡಲು ಅಹಿಂಸಾ ದೂರ್ಗ ಉಪಲಬ್ಧವಾಗಿದೆ. ಆ ಹೋರಾಟವನ್ನು ವೈಯಕ್ತಿಕವಾಗಿಯೂ, ಸಾಮೂಹಿಕವಾಗಿಯೂ ಹೇಗೆ ನಟಿಸಬಹುದೆಂಬುದನ್ನು ಗಾಂಧೀಜಿ ತಿಳಿಸಿದ್ದಾರೆ. ಇದನ್ನು ನಡೆಸಲು ನಿರ್ಭತೆ ಇರಬೇಕು. ಏನೇ ಕಷ್ಟ ಬರಲಿ, ಅದನ್ನು ಸಹಿಸುತ್ತೇನೆ ಎಂಬ ಧೈರ್ಯ ಬೇಕು. ಅಹಿಂಸೆ ಹೇಡಿಗಳ ಅಸ್ತ್ರವಲ್ಲ. ಗಾಂಧೀಜಿ ಇಂಡಿಯಾಕ್ಕೆ ಬಂದು ಅಹಿಂಸಾಮಯ ಅಸಹಕಾರವನ್ನು ಆರಂಭಿಸುವಾಗಲೇ ಭಾರತೀಯ ಜನ ಸಮುದಾಯದಲ್ಲಿ ಸರ್ಕಾರದ ವಿಷಯದಲ್ಲಿ ಇದ್ದ ಹೆದರಿಕೆಯನ್ನು ಹೋಗಲಾಡಿಸಿದರು. ಬ್ರಿಟಿಷ್ ಸರ್ಕಾರ ಹೆದರಿಗೆಯಿದ್ದಿದ್ದರೆ ಅಹಿಂಸಾಮಯ ಸಹಕಾರ ನಡೆಯುತ್ತಲೇ ಇರಲಿಲ್ಲ. ಕ್ವಿಟ್ ಇಂಡಿಯಾ ಚಳುವಳಿಯಂತೂ, ಭಾರತೀಯರ ನಿರ್ಭೀತಿಯ ಒಂದು ದೊಡ್ಡ ಉದಾಹರಣೆ. ಆದುದರಿಂದ ಸತ್ಯಾಗ್ರಹಿ ನಿರ್ಭಯತೆಯನ್ನು ಅಭ್ಯಾಸ ಮಾಡಬೇಕು. ಸಬರ್ಮತಿಯ ಆಶ್ರಮದಲ್ಲಿ ಸತ್ಯತೆಯನ್ನೂ ಕಲ್ಪಿಸುತ್ತಿದ್ದರು. ಸತ್ಯವಾಗಿದ್ದರೆ, ಮನಸ್ಸಿನಲ್ಲಿ ಅತಿಶಯವಾದ ಧೈರ್ಯವುಂಟಾಗಿ, ಮನುಷ್ಯನು ತನ್ನ ಕಾರ್ಯದಲ್ಲಿ ಮುಂದುವರಿಯುತ್ತಾನೆ. ಆದ್ದರಿಂದ ಸತ್ಯ ಮತ್ತು ಅಹಿಂಸೆಯ ಜೊತೆಗೆ ನಿರ್ಭಯತೆಯೂ ಸೇರಿರಬೇಕು. ಈ ಗುಣಗಳು ಏಕಾಏಕಿ ಬರುವುದಿಲ್ಲ; ಸಾಧನೆ ಬೇಕು.