ಹಬ್ಬಿರುವ ಮಬ್ಬಿನೊಳಗೊಬ್ಬನೇ ಮುದುಕ
ಕೋಲೂರಿ ನಡೆದಿದ್ದಾನೆ :
ಹಾದಿಯುದ್ದಕ್ಕೂ ಹಾಳುಬಿದ್ದಿರುವ ಹೂವಿನ ತೋಟ
ಇನ್ನೂ ಹೊಗೆಯಾಡುತ್ತಿರುವ ಬೆಂಕಿ,
ಕಾಲಿನ ಕೆಳಗೆ ರಕ್ತದ ಕೆಸರು,
ಕೋಟೆ ಬಿರುಕುಗಳಲ್ಲಿ ಯಾರದೋ ನಿಟ್ಟುಸಿರು,
ಗೆದ್ದಲಡರುತ್ತಿರುವ ಕಂಬಗಳ ಮುರುಕು ಮಹಲು,
ಹೊಸದಾಗಿ ರಿಪೇರಿ ಮಾಡಿರುವ ರಸ್ತೆಗಳ ಮೇಲೆ
ನಾಯಿಗಳ ಕಚ್ಚಾಟ.
ಈ ಎಲ್ಲದರ ನಡುವೆ, ಕೇಳುತ್ತಲಿದೆ
ಹಬ್ಬಿರುವ ಮಬ್ಬಿನೊಳಗೊಬ್ಬನೇ ಮುದುಕ
ಕೋಲೂರಿ ನಡೆಯುವ ಸದ್ದು.
*     *     *     *
ನಾವೂ ಇದ್ದೇವೆ –
ಮೂಲೆಯಲ್ಲಿ ಮಿಣ ಮಿಣ ಮೋಂಬತ್ತಿ ಮಬ್ಬಿನ ಸುತ್ತ
ಎಲೆ ತಿರುವಿ ಹಾಕುತ್ತ,
ಅವರಿವರ ಪಾಚಿಗಟ್ಟಿದ ಮಾತಿನ ಮೇಲೆ ಕಾಲೂರಿ ನಡೆಯುತ್ತ,
ಗದ್ದುಗೆಯ ಮೇಲೆ ವಿರಾಜಿಸುವ ಹದ್ದುಗಣ್ಣಿನ
ಮೃಗರಾಜನೆದುರು ಪಂಚತಂತ್ರ ಪ್ರತಿಭೆಯಲ್ಲಿ ಬಾಲವಲ್ಲಾಡಿ-
ಸುತ್ತಾ, ಗುಂಪಿನಲ್ಲಿ ಗೋವಿಂದವಾಗುತ್ತ,
ಬೇಯುವಲ್ಲೆಲ್ಲಾ ನುಗ್ಗಿ, ಕೈಗೆ ಸಿಕ್ಕಷ್ಟು ಲಪಟಾಯಿಸುತ್ತಾ
ಬೀದಿ ಧೂಳುಗಳ, ಗಲ್ಲಿಗಳ, ಕೊಳಕುಗಳ,
ಕಿರುಚುಗಳ, ಬಣ್ಣಗಳ, ಕಣ್ಣುಗಳ ನಡೂಮಧ್ಯೆ,
ನಾವೂ ಇದ್ದೇವೆ.

ಇದ್ದಕ್ಕಿದ್ದಂತೆ ಇದರೊಳಗೆ ಯಾರೋ
ಕೋಲು ಕುಟ್ಟುವ ಸದ್ದು ಕೇಳುತ್ತದೆ.
ಯಾರೋ ಸಣ್ಣಗೆ ಕಣ್‌ತೆರೆದು ನಮ್ಮೊಳಗನ್ನೆಲ್ಲಾ
ಟಾರ್ಚ್ ಹಾಕಿ ಝಗ್ಗೆಂದು ಬಯಲಿಗೆಳೆದಂತೆ
ಭಯವಾಗುತ್ತದೆ.
ಎಲ್ಲಿ ಲೆಕ್ಕದ ಬುಕ್ಕು ಎಂದು ತನಿಖೆ ಮಾಡುವ ಹಾಗೆ
ತೋರುತ್ತದೆ.
ನಾವು, ಅಂಗಾತ ಬಿದ್ದ ಜಿರಲೆಗಳು ಚಡಪಡಿಸಿ, ಹೇಗೊ ಎದ್ದು
ಬಿಚ್ಚಿಟ್ಟ ಬಟ್ಟೆಗಳಿಗಾಗಿ ತಡವರಿಸುತ್ತ
ಕೈಗೆ ಸಿಕ್ಕಿದ ಚಿಂದಿಯಲ್ಲೇ ಮೈಮುಚ್ಚಿ
ಮೂಲೆಗೆ ಸರಿದು, ಮುದುರಿ ನಿಲ್ಲುತ್ತೇವೆ.
ಸದ್ಯ, ಈ ಕಾಡುವ ನೆರಳು ತೊಲಗಿದರೆ ಸಾಕಪ್ಪ,
ಎಂದು ಹಾರೈಸುತ್ತೇವೆ.
ಇದರಿಂದ ತಪ್ಪಿಸಿಕೊಂಡು, ಉಸಿರಾಡಲೆಂದು ಆ ಅವನನ್ನು
ಹಾಡಿ ಹೊಗಳುತ್ತೇವೆ.
ಮೆಲ್ಲಗೆ, ಸದ್ದು ಕರಗಿದ ಮೇಲೆ ನಡುಗುತ್ತಾ
ನಾವೂ ಜಪಿಸುತ್ತೇವೆ ರಾಮ ನಾಮ !
*     *     *     *
ಬಂದ ಟಕ ಟಕ ಸದ್ದು ಬಂದ ಹಾಗೇ ಕರಗಿ ಹೋಗುತ್ತದೆ.
ಆ ಅವನ ಹೆಸರಿನ ಮೇಲೆ ನಿರ್ಮಿಸಿದ ಪ್ರತಿಮೆಗಳ, ಫಲಕಗಳ,
ಬೀದಿಗಳ, ಭವನಗಳ ನಡುವೆ ನಿಟ್ಟುಸಿರು ಹಾಯುತ್ತದೆ.
ಮುಂದೆಲ್ಲೋ, ಯಾವ್ಯಾವ ಕತ್ತಲು ಕವಿದ ಭೂಗೋಲಗಳ
ಮೇಲೆ ಈ ನೆರಳಿನ ಬೆಳಕು ಬೀಳುತ್ತದೆ.
ನಟ್ಟ ನಡುರಾತ್ರಿ ಬೆಂಕಿಗಣ್ಣನು ಬಿಟ್ಟು ದಢ ದಢ ನುಗ್ಗಿದ ರೈಲು
ಭೋರೆನ್ನುತ್ತ ಮೊರೆಮೊರೆದು ಕಡೆಗೆ ಕತ್ತಲಲ್ಲೇ ಕರಗಿ
ಹೋದಂತೆ ಸದ್ದು ನಿಲ್ಲುತ್ತದೆ.
ಇದು ತೊಲಗಿತಲ್ಲಾ ಎಂಬ ಸಮಾಧಾನದಲ್ಲಿ,
ಮತ್ತೆ ಮೋಂಬತ್ತಿ ಹತ್ತಿ, ನಿಲ್ಲಿಸಿದ ಆಟ ಮುಂದುವರಿಯುತ್ತದೆ.