ಗಾಡಗೆ ಮಹಾರಾಜ್ಮಹಾರಾಷ್ಟ್ರದ ಸಂತರು. ಬೀದಿಗಳನ್ನು ಗುಡಿಸುವುದು, ಸೌದೆ ಒಡೆಯುವುದು – ಯಾವುದೂ ತಮ್ಮ ಗೌರವಕ್ಕೆ ಕುಂದೆಂದು ಭಾವಿಸಲಿಲ್ಲ. ಮೂಡನಂಬಿಕೆಗಳ ವಿರುದ್ಧ ಹೋರಾಡಿದರು. ಜನರ ಸೇವೆಯಲ್ಲಿ ದೇವರ ಸೇವೆಯನ್ನು ಕಂಡರು.

ಗಾಡಗೆ ಮಹಾರಾಜ್

ಭಾರತ ಬಹಳ ದೀರ್ಘವಾದ ಮತ್ತು ಹಿರಿಯ ಪರಂಪರೆಯುಳ್ಳ ರಾಷ್ಟ್ರ. ನಮ್ಮ ನಾಡಿನಲ್ಲಿ ಅನೇಕ ಮಂದಿ ವೀರಾಗ್ರಣಿಗಳು, ಸಾಧುಸಂತರು, ಮಹಾಪುರುಷರು ಜನ್ಮವೆತ್ತಿ ನಮ್ಮ ಸಂಸ್ಕೃತಿಯನ್ನು ಬೆಳೆಸಿದ್ದಾರೆ. ಹಾಗೆಯೇ ಜನತೆಯ ನಡುವೆ ತಾವೂ ಒಂದಾಗಿ ಬದುಕಿ ಬಾಳಿ ಸಮಾಜದಲ್ಲಿದ್ದ ಅನೇಕ ಕೆಟ್ಟ ಪದ್ಧತಿಗಳನ್ನೂ ಅಂಧಶ್ರದ್ಧೆಗಳನ್ನೂ ಅವರು ದೂರಮಾಡಿದ್ದಾರೆ. ಅಂಥ ಸತ್ಪುರುಷರಲ್ಲಿ ಮಹಾರಾಷ್ಟ್ರದ ಶ್ರೀ ಸದ್ಗುರು ಗಾಡಗೆ ಮಹಾರಾಜ್ ಸಹ ಒಬ್ಬರು. ಮಹಾರಾಷ್ಟ್ರದಲ್ಲಿ ಸಂತರನ್ನು ಮಹಾರಾಜ್, ಬಾಬಾ, ಬುವಾ ಎಂಬುದಾಗಿ ಕರೆಯುತ್ತಾರೆ.

ಗಾಡಗೆ ಮಹಾರಾಜ್‌ರವರು ದೀನದಲಿತರ, ದುರ್ಬಲರ ಸಲುವಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟವರು. ಶಿಕ್ಷಣ, ಶುಚಿತ್ವ ಮತ್ತು ಸ್ವಾವಲಂಬನೆಯ ಮಂತ್ರವನ್ನು ಸಮಾಜಕ್ಕೆ ಉಪದೇಶ ಮಾಡಿದ ಅವರು ಮಾನವಸೇವೆಯೆ ಭಗವಂತನ ಸೇವೆ ಎಂದು ದೃಢವಾಗಿ ನಂಬಿದ್ದವರು. ಕೆಲಸದಲ್ಲಿ ನಿಷ್ಠೆಯುಳ್ಳ ಮನೋಭಾವ, ಸತತ ದುಡಿಮೆ, ನನ್ನದೇನೂ ಇಲ್ಲ ಎಲ್ಲ ಜನರದ್ದೇ ಎಂಬ ನಿಸ್ಸಂಗಭಾವನೆ, ದೀನದಲಿತರ ಬಗ್ಗೆ ಅನುಕಂಪ, ಪ್ರಾಣಿದಯೆ ಇವೆಲ್ಲವನ್ನೂ ತಮ್ಮ ಸರಳವಾದ ಬದುಕಿನಲ್ಲಿ ಗಾಡಗೆ ಬಾಬಾ ಅಳವಡಿಸಿ ಕೊಂಡಿದ್ದರು.

ಜನನ, ಬಾಲ್ಯ

ಗಾಡಗೆ ಬಾಬಾ ೧೮೭೬ರ ಫೆಬ್ರವರಿ ೨೩ರಂದು ವಿದರ್ಭದ ದರ್ಯಾಪುರ ತಾಲ್ಲೂಕಿನ ಶೇಣಗಾಂವಿ ಎಂಬ ಸ್ಥಳದಲ್ಲಿ ಅಗಸರ ಕುಟುಂಬವೊಂದರಲ್ಲಿ ಹುಟ್ಟಿದರು. ಡೇಬೂ ಎಂಬುದು ಬಾಬಾರವರ ಹುಟ್ಟು ಹೆಸರು. ಡೇಬೂವಿನ ತಂದೆ ಝಿಂಗರಾಜಿ ಮತ್ತು ತಾಯಿ ಸಖೂಬಾಯಿ. ತಂದೆ ದೈವ ಚಿಂತನೆಯಲ್ಲಿ ನಿರತರಾದವರು. ಅವರು ೧೮೮೪ ರಲ್ಲಿ ಮೃತಿಹೊಂದಿದರು. ಅನಂತರ ತಾಯಿ ಸಖೂಬಾಯಿ ಮಗನನ್ನು ಕರೆದುಕೊಂಡು ತವರುಮನೆಗೆ ಬಂದಳು. ದನಗಳನ್ನು ಮೇಯಿಸುವ ಕೆಲಸ ಡೇಬೂವಿನ ಪಾಲಿಗೆ ಬಂತು.

ಡೇಬೂ ಪ್ರತಿನಿತ್ಯ ತನ್ನ ಗೆಳೆಯರೊಂದಿಗೆ ಬಳಿಯಲ್ಲೇ ಇದ್ದ ಕಾಡಿಗೆ ದನಕರುಗಳನ್ನು ಹೊಡೆದುಕೊಂಡುಹೋಗಿ ಮೇಯಿಸಿಕೊಂಡು ಬರುತ್ತಿದ್ದ. ಅವುಗಳೊಡನೆ ದಿನವೆಲ್ಲ ಅಲೆದಾಡುವುದು, ತಿನ್ನುವುದು, ಕುಡಿಯುವುದು, ಆಟವಾಡುವುದು ಇವೇ ಅವನ ನಿತ್ಯಕ್ರಮವಾಗಿತ್ತು. ಒಮ್ಮೆ ಹೀಗೆಯೆ ದನಕರುಗಳನ್ನು ಮೇಯಿಸುತ್ತಿರುವಾಗ ಅಲ್ಲಿಯೆ ಹುಣಿಸೆತೋಪೊಂದರಲ್ಲಿದ್ದ ಈಶ್ವರನ ದೇವಸ್ಥಾನ ಅವನ  ಕಣ್ಣಿಗೆ ಬಿತ್ತು. ಡೇಬೂ ಪಕ್ಕದಲ್ಲಿಯೇ ಹರಿಯುತ್ತಿದ್ದ ಪೂರ್ಣಾನದಿಯ ನೀರನ್ನು ಬೊಗಸೆಯಲ್ಲಿ ಹಿಡಿದು ತಂದು ಈಶ್ವರನಿಗೆ ಸ್ನಾನ ಮಾಡಿಸಿದ. ಕಾಡು ಹೂವುಗಳನ್ನು ಕಿತ್ತು ತಂದು ಪೂಜೆ ಮಾಡಿದ. ಅವನ ಮನಸ್ಸಿಗೆ ಈಶ್ವರನ ಸನ್ನಿಧಿ ತುಂಬಾ ಹಿಡಿಸಿತು. ಅನಂತರ ಒಳ್ಳೆಯ ಧ್ವನಿಯಲ್ಲಿ ಭಜನೆ ಮಾಡಲಾರಂಭಿಸಿದ. ಈಶ್ವರನ ಕೃಪೆ ಬಾಲಕ ಡೇಬೂವಿನ ಮೇಲೆ ಆಗಲೇ ಬಿದ್ದಿತ್ತು.

ಡೇಬೂ ತನ್ನಂತೆಯೇ ದನ ಕಾಯುತ್ತಿದ್ದ ಬೇರೆ ಹುಡುಗರೊಡನೆ ತುಂಬಾ ಸ್ನೇಹದಿಂದ ನಡೆದುಕೊಳ್ಳುತ್ತಿದ. ಅವರನ್ನು ಸೇರಿಸಿಕೊಂಡು ಅವನು ಒಂದು ಭಜನಮಂಡಳಿಯನ್ನು ಸ್ಥಾಪಿಸಿದ. ಅವನ ಜೊತೆಗಾರರಲ್ಲಿ ಬೇರೆ ಬೇರೆ ಜಾತಿಯವರಿದ್ದರು. ಮೇಲಿನ ಜಾತಿಯವರು, ಕೆಳಗಿನ ಜಾತಿಯವರು ಎಂಬ ಭೇದವನ್ನು ಡೇಬೂ ಚಿಕ್ಕಂದಿನಿಂದಲೇ ಇಟ್ಟುಕೊಂಡಿರಲಿಲ್ಲ. ‘ನಾವೆಲ್ಲರೂ ಅಣ್ಣತಮ್ಮಂದಿರು’ ಎಂದು ಈಶ್ವರನ ದೇವಾಲಯದ ಅಂಗಳದಲ್ಲಿ ಎಲ್ಲರೂ ಹಾಡುತ್ತಾ ಕುಣಿಯುತ್ತಿದ್ದರು.

ಡೇಬೂ ದೃಢಕಾಯನಾಗಿದ್ದ ಹುಡುಗನಾಗಿದ್ದ. ಸಾಹಸ ಪ್ರವೃತ್ತಿಯುಳ್ಳವನಾಗಿದ್ದ. ಪೂರ್ಣಾನದಿಯಲ್ಲಿ ಪ್ರವಾಹ ತುಂಬಿ ಹರಿಯುತ್ತಿರುವಾಗ ಈಜಿ ಇನ್ನೊಂದು ದಡ ಸೇರುತ್ತಿದ್ದ. ತನ್ನ ಸೋದರಮಾವನ ಹೊಲದಲ್ಲಿ ಬೆಳಗಿನ ಹೊತ್ತು ಕೆಲಸಮಾಡುತ್ತಿದ್ದ. ರಾತ್ರಿಯಲ್ಲಿ ಕೋಲು ಹಿಡಿದು ಕಾವಲು ಕಾಯುತ್ತಿದ್ದ. ‘ಡೇಬೂ ಅಂದರೆ ಕೆಲಸದಲ್ಲಿ ಮುಂದೆ’ ಎಂದು ಎಲ್ಲರೂ ಅನ್ನುತ್ತಿದ್ದರು. ‘ಸೋಮಾರಿತನ’  ಅನ್ನುವ ಪದವೇ ಅವನಿಗೆ ಗೊತ್ತಿರಲಿಲ್ಲ.

ಮಾವನಿಗೆ ಸಾಲದ ಹೊರೆ

ಕುಂತಾಬಾಯಿ ಎಂಬಾಕೆಯೊಡನೆ ಡೇಬೂವಿನ ಮದುವೆಯಾಯಿತು. ಅದರಿಂದಾಗಿ ಅವನ ಸೋದರಮಾವ ಸಾಲಕ್ಕೊಳಗಾಗಬೇಕಾಯಿತು. ಕೊಟ್ಟಿಗೆಯಲ್ಲಿದ್ದ ಎರಡು ಹೋರಿಕರುಗಳನ್ನು ಮಾರಿ ಸಾಲ ತೀರಿಸಬೇಕೆಂಬ ಮಾತು ಬಂತು. ಅವನ್ನು ಮಾರಿಬಿಟ್ಟರೆ ಮನೆಯಲ್ಲಿ ಉಳಿಯುವುದು ಒಂದು ಮುದಿ ಎತ್ತಷ್ಟೆ. ಅದನ್ನೂ ಕಟುಕರ ಕೈಲಿಟ್ಟು ಕೈ ತೊಳೆದುಕೊಳ್ಳುವ ಪರಿಸ್ಥಿತಿಯಿತ್ತು. ಈ ಮಾತು ಡೇಬೂವಿನ ಕಿವಿಗೆ ಬಿದ್ದಾಗ ಅವನಿಗೆ ತುಂಬಾ ದುಃಖವಾಯಿತು. ಪ್ರಾಣಿಗಳ ವಿಷಯದಲ್ಲಿ ಅವನ ಮನಸ್ಸು ಯಾವಾಗಲೂ ದಯೆಯಿಂದ ಕೂಡಿತ್ತು. ಡೇಬೂ ಅಂದ ‘‘ಬೇಕಾದರೆ ನನ್ನನ್ನೇ ಪೇಟೆಯಲ್ಲಿ ಮಾರಿಬಿಡಿ.’’

ಡೇಬೂವಿನ ಸೋದರಮಾವ ಸಾಲದ ಹೊರೆಯನ್ನು ತೀರಿಸಲು ಬಡ್ಡಿ ಸಮೇತ ೧,೭೦೦ ರೂಪಾಯಿ ಕೊಡಬೇಕಾಯಿತು. ತನ್ನ ಎಲ್ಲ ಜಮೀನನ್ನು ಅವನು ಮೂರು ವರ್ಷಗಳವರೆಗೆ ಗೇಣಿಗೆ ಬಿಟ್ಟುಕೊಟ್ಟ. ಈ ಸಮಾಚಾರ ಕಿವಿಯ ಮೇಲೆ ಬೀಳುತ್ತಲೇ ಡೇಬೂವಿಗೆ ಕಠಾರಿಯಿಂದ ಎದೆಯಲ್ಲಿ ತಿವಿದಂತಾಯಿತು. ಅಂದಿನಿಂದ ಹಬ್ಬಹರಿ ದಿನಗಳಲ್ಲಿ ಸಿಹಿ ತಿನ್ನುವುದನ್ನೇ ಅವನು ಬಿಟ್ಟುಬಿಟ್ಟ. ಯಾರಾದರೂ ಆ ಮಾತನ್ನೆತ್ತಿದರೆ ಡೇಬೂ ಹೇಳುತ್ತಿದ್ದ, ‘‘ಸಾಲಮಾಡಿ ಹಬ್ಬದಲ್ಲಿ ಸಿಹಿತಿಂದರೆ ವಿಷ ತಿಂದಂತೆ.’’

ಸಾಲದ ಹೊರೆ ಹೆಚ್ಚಾಗಿ ಸೋದರಮಾವ ಅದಕ್ಕೆ ಬಲಿಯಾದ. ಇದರಿಂದ ಡೇಬೂವಿಗೆ ಸಹಿಸಲಾರದಷ್ಟು ದುಃಖವಾಯಿತು. ಸಾಲದಿಂದ ಹೇಗೆ ಬಿಡುಗಡೆ ಹೊಂದುವುದು, ಜಮೀನನ್ನು ಹೇಗೆ ಬಿಡಿಸಿಕೊಳ್ಳುವುದು ಎಂಬ ಬಗ್ಗೆ ಚಿಂತೆಗೊಳಗಾದ. ಡೇಬೂ ಕಷ್ಟಪಟ್ಟು ಸೋದರಮಾವನ ಜಮೀನನ್ನು ಬಿಡಿಸಿಕೊಂಡು ಸಾಗುವಳಿ ಮಾಡಲಾರಂಭಿಸಿದ.

ಒಮ್ಮೆ ಪೂರ್ಣಾನದಿಯಲ್ಲಿ  ಸ್ನಾನ ಮಾಡಲು ಇಳಿದ. ಡೇಬೂ ಪಂಚೆಯನ್ನು ಮೇಲೆತ್ತಿ ಸೊಂಟಕ್ಕೆ ಸಿಕ್ಕಿಸಿಕೊಂಡ. ಪಂಚೆಯ ಅಂಚಿನಲ್ಲಿ ಕಟ್ಟಿಟ್ಟಿದ್ದ ರೂಪಾಯಿ ನಾಣ್ಯ ನೀರಿಗೆ ಬಿದ್ದು ಹೋಯಿತು. ಆಗ ರೂಪಾಯಿ ನಾಣ್ಯಕ್ಕೆ ತುಂಬಾ ಬೆಲೆ. ಎಷ್ಟು ಕಷ್ಟಪಟ್ಟು ಹುಡುಕಿದರೂ ನೀರಿನಲ್ಲಿ ಅದು ಸಿಗಲೇ ಇಲ್ಲ. ಹೋಗಿದ್ದು ಹೊರಟೇಹೋಯಿತು. ಮನುಷ್ಯನೂ ಹೀಗೆಯೇ ಎಂದು ಡೇಬೂವಿಗೆ ಮಂದಟ್ಟಾಯಿತು. ಮನುಷ್ಯ ಅಂದರೆ ದೇವರ ಕೈಯಲ್ಲಿರುವ ಆಟದ ಬೊಂಬೆಯಂತೆ. ಕೈಯಲ್ಲಿ ಇರುವವರೆಗೂ ಆಟ, ಅನಂತರ ಕೈತಪ್ಪಿತೆಂದರೆ ಅದು ಎಲ್ಲಿಗೆ ಹೋಗುವುದೆಂದೇ ತಿಳಿಯುವುದಿಲ್ಲ ಎನ್ನಿಸಿತು.

ಸಂತ ಕೃಪೆ

ಒಮ್ಮೆ ಮಾರ್ಗಶಿರ ಮಾಸದಲ್ಲಿ ಜೋಳದ ಬೆಳೆ ಹುಲುಸಾಗಿ ಬಂದಿತ್ತು. ಡೇಬೂ ಹೊಲವನ್ನು ಕಾಯುತ್ತಿದ್ದ. ನೆತ್ತಿಯ ಮೇಲೆ ಸೂರ್ಯ ಬಂದಿದ್ದ. ಡೇಬೂವಿನ ಎದುರಿಗೆ ತೇಜಸ್ವಿಯಾದ ಒಬ್ಬ ವ್ಯಕ್ತಿ ಬಂದ. ಅವನ ಮುಖದ ಹೊಳಪನ್ನು ಕಂಡು ಚಕಿತನಾದ ಡೇಬೂ ಕೇಳಿದ ‘‘ತಾವು ಯಾರು? ತಮಗೇನು ಬೇಕು?’’ ಆ ವ್ಯಕ್ತಿ ‘‘ನೀನೇನು ನನಗೆ ಕೊಡಬಲ್ಲೆ? ನನ್ನ ಬಳಿ ಎಲ್ಲವೂ ಉಂಟು’’ ಎಂದ. ಈತ ಬಹಳ ವಿಚಿತ್ರ ಮನುಷ್ಯ ಎಂದು ಡೇಬೂವಿಗೆ ಅನಿಸಿತು. ಅವನನ್ನು ಜೊತೆಯಲ್ಲಿ ಕರೆದುಕೊಂಡು ಆ ವ್ಯಕ್ತಿ ಪೂರ್ಣಾನದಿಯ ದಡದಲ್ಲಿದ್ದ ಈಶ್ವರನ ದೇವಸ್ಥಾನಕ್ಕೆ ಬಂದ. ಅಲ್ಲಿ ಇಡೀ ದಿನ ಅವರಿಬ್ಬರೂ ಒಟ್ಟಿಗೆ ಇದ್ದರು. ಅವರ ನಡುವೆ ಏನು ಮಾತುಕತೆ ನಡೆಯಿತೊ ಯಾರು ಬಲ್ಲರು? ಒಟ್ಟಿನಲ್ಲಿ ಈಶ್ವರನ ದೇವಾಲಯದಲ್ಲಿ ಡೇಬೂಗೆ ಸಂನ್ಯಾಸಿಯ ಆಶೀರ್ವಾದ ದೊರೆಯಿತು. ಅಂದಿನಿಂದ ಡೇಬೂವಿನ ಬದುಕಿನಲ್ಲಿ ಬದಲಾವಣೆ ಕಂಡುಬಂತು. ಸಂತನ ಕೃಪೆ ದೊರಕಿದ ಮೇಲೆ ಯಾವುದಕ್ಕೆ ಏನು ತಾನೆ ಕಡಿಮೆ?

ನಮ್ಮಲ್ಲಿ ಹರಿಕಥೆ ಮಾಡುವ ದಾಸರು ಇರುವಂತೆ ಮಹಾರಾಷ್ಟ್ರದಲ್ಲಿ ಕೀರ್ತನಕಾರರಿರುತ್ತಾರೆ. ಅವರ ಉಪದೇಶ, ಕಥೆಗಳಿಂದ ಕೂಡಿರುವ ಕೀರ್ತನ-ಸಭೆ ತುಂಬಾ ಚೆನ್ನಾಗಿರುತ್ತದೆ. ಡೇಬೂವಿನ ಹಳ್ಳಿಗೆ ಬಂದಿದ್ದ ಒಬ್ಬ ಕೀರ್ತನಕಾರರು ‘‘ಒಳ್ಳೆಯ ಕೆಲಸ ಮಾಡು ಎಂದು ದೇವರು ನಮಗೆ ಈ ಶರೀರವನ್ನು ಕೊಟ್ಟಿದ್ದಾನೆ. ದೇಹವನ್ನು ದುರುಪಯೋಗ ಪಡಿಸಬಾರದು. ಒಂದಲ್ಲ ಒಂದು ದಿನ ಅದು ಸಾಯುವಂತಹದು’’ ಎಂದು ಉಪದೇಶ ನೀಡಿದರು. ಈ ಮಾತು ಡೇಬೂವಿನ ಮೇಲೆ ತುಂಬಾ ಪ್ರಭಾವ ಬೀರಿತು. ಬೆಳಗಾಗುತ್ತಿದ್ದಂತೆಯೆ ಡೇಬೂ ಹರಕಲು ಬಟ್ಟೆಯನ್ನು ಮೈಮೇಲೆ ಧರಿಸಿದ. ಅಂಗಳದಲ್ಲಿ ಬಿದ್ದಿದ್ದ ಒಂದು ಗಾಡಗೆಯನ್ನು ಕೈಯಲ್ಲಿ ಹಿಡಿದು ಮನೆಯಲ್ಲಿ ಎಷ್ಟೇ ಅಡಚಣೆ ಮಾಡಿದರೂ ಮನೆ ಬಿಟ್ಟು ಹೊರಟುಬಿಟ್ಟ. ಹೊಸ ವಿಚಾರಗಳು ಅವನ ತಲೆಯಲ್ಲಿ ಮೊಳಗುತ್ತಿದ್ದವು.

ಸಂಸಾರದ ಬಂಧನವನ್ನು ತ್ಯಜಿಸಿ ಎಷ್ಟು ದೂರ ಹೋದರೂ ಹಸಿವು, ನಿದ್ದೆ, ನೀರಡಿಕೆಗಳು ಡೇಬೂವಿನ ಬೆನ್ನು ಬಿಡಲಿಲ್ಲ. ಇವನ್ನು ಹೇಗೆ ದೂರಮಾಡುವುದು ಎಂದು ಅವನಿಗೆ ಚಿಂತೆಯಾಯಿತು. ಶರೀರ ಎಷ್ಟು ಅಗತ್ಯ ಎಂದು ಚೆನ್ನಾಗಿ ಮನದಟ್ಟಾಯಿತು. ಶರೀರವಿದ್ದರೆ ತಾನೇ ಒಳ್ಳೆಯ ಕೆಲಸಗಳನ್ನು ಮಾಡಲು ಸಾಧ್ಯ? ಶರೀರ ಅಂದರೆ ದೇವರಿಂದ ಬಾಡಿಗೆಗೆ ಪಡೆದ ಕುದುರೆ. ಕೆಲಸ ಮುಗಿದ ಮೇಲೆ ಅವನೇ ಅದನ್ನು ವಾಪಸ್ಸು ತೆಗೆದುಕೊಂಡು ಬಿಡುತ್ತಾನೆ ಎಂದು ಡೇಬೂ ಸಮಾಧಾನ ಮಾಡಿಕೊಂಡ.

ಗಾಡಗೆ ಬಾಬಾ

ಗಾಡಗೆ ಅಂದರೆ ಒಂದು ರೀತಿಯ ಮಣ್ಣಿನ ಪಾತ್ರೆ ಮತ್ತು ಗೋಧಡೆ ಅಂದರೆ ಒಂದು ವಿಧದ ಹಾಸು ಬಟ್ಟೆ. ಕೈಯಲ್ಲಿ ಗೋಧಡೆ ಮತ್ತು ಗಾಡಗೆಯನ್ನು ಹಿಡಿದಿರುತ್ತಿದ್ದುದರಿಂದ ಡೇಬೂವನ್ನು ಜನರು ಗಾಡಗೆ ಬಾಬಾ ಅಥವಾ ಗೋಧಡೆ ಬಾಬಾ ಎಂದು ಕರೆಯಲಾರಂಭಿಸಿದರು. ಗಾಡಗೆ ಬಾಬಾ ಒಂದೆಡೆ ನೆಲೆನಿಲ್ಲದೆ ಯಾವಾಗಲೂ ಸುತ್ತಾಡುತ್ತಿದ್ದರು. ಯಾವ ಕೆಲಸ ಕೈಗೆ ಸಿಕ್ಕರೂ ಮಾಡುತ್ತಿದ್ದರು. ಕೆಲವು ವೇಳೆ ಕುಂಬಾರನ ಮಣ್ಣು ತುಳಿಯುತ್ತಿದ್ದರು, ಸೌದೆ ಸೀಳುತ್ತಿದ್ದರು, ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿದ ಮೇಲೆ ರೊಟ್ಟಿ ಬೇಡುತ್ತಿದ್ದರು. ರೊಟ್ಟಿ ಸಿಕ್ಕಾಗ ದೂರಹೋಗಿ ಮರದ ನೆರಳಿನಲ್ಲಿ ಕುಳಿತು ತಿನ್ನುತ್ತಿದ್ದರು. ಹೊಲದಲ್ಲಿ ಕೆಲಸ ಮಾಡುತ್ತಾ ಸುಶ್ರಾವ್ಯವಾಗಿ ಸಂತ ತುಕಾರಾಮನ ಅಭಂಗಗಳನ್ನು ಹಾಡುತ್ತಿದ್ದರು. (ಅಭಂಗಗಳೆಂದರೆ ನಮ್ಮ ಕೀರ್ತನೆಗಳಂತೆ). ಕೂಲಿಕೆಲಸದವರೆಲ್ಲರೂ ಆಶ್ಚರ್ಯದಿಂದ ನೋಡುತ್ತಿದ್ದರು.

ಒಮ್ಮೆ ಒಬ್ಬ ಕೇಳಿದ ‘‘ಏನಪ್ಪ, ನಿನ್ನ ಹೆಸರೇನು? ಎಲ್ಲಿಂದ ಬಂದೆ? ಎಲ್ಲಿಗೆ ಹೋಗುತ್ತಿದ್ದೀಯೆ?’’

ಗಾಡಗೆ ಬಾಬಾ ಹೇಳಿದರು ‘‘ನನ್ನ ಹೆಸರು ನನಗೇ ಗೊತ್ತಿಲ್ಲ. ಎಲ್ಲಿಂದ ಬಂದೆ, ಎಲ್ಲಿಗೆ ಹೋಗುತ್ತಿದ್ದೇನೆ, ಒಂದೂ ಗೊತ್ತಿಲ್ಲ. ನನಗೆ ಅಮ್ಮ ಅಪ್ಪ ಯಾರೂ ಇಲ್ಲ. ಆಕಾಶದಿಂದ ಬಿದ್ದೆ, ಭೂಮಿ ಆಸರೆ ಕೊಟ್ಟಳು.’’

ಎಡೆಬಿಡದ ದುಡಿಮೆ

ಕಾಮ, ಕ್ರೋಧ, ಲೋಭ, ಮೋಹಗಳನ್ನು ಗೆದ್ದು ಗಾಡಗೆ ಬಾಬಾ ಅಸಾಮಾನ್ಯವಾದ ದಾರಿಯಲ್ಲಿ ಮುನ್ನಡೆದಿದ್ದರು. ಹಳ್ಳಿಯಿಂದ ಹಳ್ಳಿಗೆ ಸುತ್ತುತ್ತಿದ್ದರು. ಹಳ್ಳಿಗೆ ಹೋದೊಡನೆ ಅಲ್ಲಿ ಪೊರಕೆ ಕೇಳುತ್ತಿದ್ದರು. ಅವರ ಬೆಳೆದ ಗಡ್ಡ, ಮೈಮೇಲೆ ಹರಕು ಬಟ್ಟೆ, ಕಾಲಿಗೆ ಸುತ್ತಿದ್ದ ಚಿಂದಿ ಬಟ್ಟೆ, ತಲೆಗೆ ಕಟ್ಟಿಕೊಂಡಿದ್ದ ಹರಳಿನ ಎಲೆ ಇಂಥ ವೇಷವನ್ನು ನೋಡಿ ಪೊರಕೆಯನ್ನು ಕೊಡಲು ಜನ ಹಿಂಜರಿಯುತ್ತಿದ್ದರು. ಈ ಮನುಷ್ಯನಿಗೆ ಪೊರಕೆ ಕೊಟ್ಟರೆ ಎಲ್ಲಿ ಹೊತ್ತುಕೊಂಡು ಓಡಿಹೋಗುತ್ತಾನೆಯೊ ಎಂಬ ಭಯ. ಪೊರಕೆ ಸಿಗದಿದ್ದರೆ ಬಾಬಾ ತಾವೇ ಪೊರಕೆ ಮಾಡಿಕೊಂಡು ದೇವಸ್ಥಾನದ ಅಂಗಳವನ್ನು ಗುಡಿಸುತ್ತಿದ್ದರು. ಅನಂತರ ಹಳ್ಳಿಯ ಬೀದಿಗಳನ್ನೆಲ್ಲ ಗುಡಿಸಿ ಶುಚಿ ಮಾಡುತ್ತಿದ್ದರು. ರಾತ್ರಿ ದೇವಸ್ಥಾನದಲ್ಲಿ ಒಳ್ಳೆಯ ಸ್ವರದಲ್ಲಿ ಅಭಂಗಗಳನ್ನು ಹಾಡುತ್ತಿದ್ದರು. ಜನರೊಡನೆ ಸಂಪರ್ಕ ಹೆಚ್ಚುತ್ತಿದ್ದಂತೆ, ತಾವು ಇನ್ನು ಇಂಥ ಬಂಧನದಲ್ಲಿ ಸಿಲುಕಬಾರದೆಂದು ಬೆಳಗಾಗುವುದರಲ್ಲಿ ಆ ಹಳ್ಳಿಯನ್ನು ಬಿಟ್ಟು ಮುಂದೆ ಹೊರಟುಬಿಡುತ್ತಿದ್ದರು. ಅವರ ಬದುಕು ಗಂಗಾನದಿಯಷ್ಟು ಶುಚಿಯಾಗಿಯೂ ಉಪಯುಕ್ತವಾಗಿಯೂ ಇತ್ತು.

ಒಂದು ಬಾರಿ ಯಾರೋ ಬಾಬಾ ಅವರನ್ನು ಕೇಳಿದರು ‘‘ಸ್ವಾಮಿ, ತಮ್ಮ ಜಾತಿ ಯಾವುದು?’’ ಬಾಬಾ ತಕ್ಷಣ ಉತ್ತರ ಕೊಡಲಿಲ್ಲ. ಕತ್ತು ಬಗ್ಗಿಸಿದರು. ಸ್ವಲ್ಪ ಹೊತ್ತಿನ ಮೇಲೆ ಅಂದರು. ‘‘ನನ್ನದು ಮನುಷ್ಯ ಜಾತಿ.’’ ನಾವೆಲ್ಲರೂ ದೇವರ ಮಕ್ಕಳು ಎಂದು ಗಾಡಗೆ ಬಾಬಾ ಅವರ ದೃಢ ವಿಶ್ವಾಸ.

ಇನ್ನೊಂದು ಸಾರಿ ಬಾಬಾ ಒಂದು ಹೊಲದ ಬಳಿ ಹೋಗುತ್ತಿರುವಾಗ, ಹೊಲ ಉಳುತ್ತಿದ್ದ ರೈತ ದಣಿದ ಹಾಗೆ ಕಂಡುಬಂದಿತು. ‘‘ಏನಪ್ಪಾ, ತುಂಬ ದಣಿದಂತಿದೆ. ಸ್ವಲ್ಪ ನೇಗಿಲನ್ನು ನನ್ನ ಕೈಗೆ ಕೊಡು’’ ಎಂದರು ಬಾಬಾ. ಅವರು ಎತ್ತುಗಳ ಬೆನ್ನನ್ನು ಸವರುತ್ತಿದ್ದಂತೆಯೇ ಅವುಗಳಿಗೆ ಸುಖಸ್ಪರ್ಶವಾದಂತಾಗಿ ಗಾಳಿಯಂತೆ ಓಡತೊಡಗಿದವು. ರೈತ ಅಚ್ಚರಿಗೊಂಡ. ನಂತರ ಕೇಳಿದ ‘‘ಏನಪ್ಪಾ, ನಿನಗೆ ಎಷ್ಟು ಕೂಲಿ ಕೊಡಬೇಕು?’’ ‘‘ನನ್ನ ಸಂಬಳ ತಿಂಗಳಿಗೆ ಹತ್ತು ಲಕ್ಷ ರೂಪಾಯಿ’’ ಅನ್ನುತ್ತಾ ಬಾಬಾ ಮುಂದೆ ನಡೆದರು. ಈ ರೀತಿ ಬಾಬಾ ಯಾವ ಅಪೇಕ್ಷೆಯೂ ಇಲ್ಲದೆ ಕೆಲಸ ಮಾಡುತ್ತಿದ್ದರು.

ಶುಚಿ ಮುಖ್ಯ

ಗಾಡಗೆ ಬಾಬಾ ಮನೆ ಬಿಟ್ಟು ಬರಬೇಕಾದರೆ ಮನೆಯಲ್ಲಿದ್ದ ಹಿರಿಯರು ಬಂಧುಗಳು ತುಂಬಾ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಬಾಬಾ ಐಹಿಕ ವಿಷಯಗಳ ಬಲೆಗೆ ಬಿದ್ದಿರಲಿಲ್ಲ. ಅನಂತರ ಒಮ್ಮೆ ಋಣಮೋಚನ ಎಂಬಲ್ಲಿ ತಾಯಿಯೊಡನೆ ಮತ್ತೆ ಬಾಬಾರವರ ಭೇಟಿಯಾಯಿತು. ಅವರ ತಾಯಿ ಎಷ್ಟೇ ಬಲವಂತಮಾಡಿದರೂ ಪುಸಲಾಯಿಸಿದರೂ ಬಾಬಾ ಮನಸ್ಸು ಬದಲಾಯಿಸಲಿಲ್ಲ. ‘‘ಮನೆಯಿಂದ ಹೊರಗಿರುವ ಲಕ್ಷಾಂತರ ಜನರಿಗೆ ಅನೇಕ ವಿಧದಲ್ಲಿ ಸೇವೆ ಮಾಡಬೇಕೆಂಬುದೇ ನನ್ನ ಇಷ್ಟ. ನಾನು ಇಷ್ಟು ದಿನ ಚಿಕ್ಕ ಮನೆಯಲ್ಲಿದ್ದೆ. ಇನ್ನು ಮುಂದೆ ದೊಡ್ಡ ಮನೆಯಲ್ಲಿರುತ್ತೇನೆ’’ ಎಂದು ಸ್ಪಷ್ಟವಾಗಿ ಹೇಳಿಬಿಟ್ಟರು. ದೇವಸ್ಥಾನಕ್ಕೆ ಹೋಗಿ ದೇವರ ತಲೆಯ ಮೇಲೆ ಹೂವು ಹಾಕುವುದಕ್ಕಿಂತಲೂ ಮನುಷ್ಯರು ಓಡಾಡುವ ರಸ್ತೆಯನ್ನು ಶುಚಿಯಾಗಿಡುವುದು ಉತ್ತಮವಾದ ಕೆಲಸ ಎಂದು ಬಾಬಾ ಹೇಳುತ್ತಿದ್ದರು.

ಗಾಡಗೆ ಬಾಬಾ ಬರಿಗಾಲಿನಲ್ಲೇ ಇಡೀ ಮಹಾರಾಷ್ಟ್ರ ವನ್ನೆಲ್ಲ ಸುತ್ತುಹಾಕಿದರು. ಎಲ್ಲಿ ಹೋದರೂ ಮೊದಲು ಪೊರಕೆಯನ್ನು ತೆಗೆದುಕೊಂಡು ರಸ್ತೆಗಳನ್ನೆಲ್ಲ ಗುಡಿಸುತ್ತಿದ್ದರು. ಯಾರಾದರೂ ರೊಟ್ಟಿ ತೆಗೆದುಕೊಂಡು ಬಂದರೆಂದರೆ ಬಾಬಾ ಅಲ್ಲಿ ಇರುತ್ತಲೇ ಇರಲಿಲ್ಲ. ತುಂಬಾ ಬಲವಂತಮಾಡಿ ಯಾರಾದರೂ ರೊಟ್ಟಿ ಕೊಟ್ಟರೆ ದೂರ ಹೋಗಿ ಮರದ ನೆರಳಿನಲ್ಲಿ ಕುಳಿತು ತಿನ್ನುತ್ತಿದ್ದರು. ಮಹಾರಾಷ್ಟ್ರದಲ್ಲೆಲ್ಲ ಮೊಟ್ಟಮೊದಲಿಗೆ ಸಾರ್ವಜನಿಕ ಸ್ವಚ್ಛತೆಯ ಚಳವಳಿಯನ್ನು ನಡೆಸಿದ ಶ್ರೇಯಸ್ಸು ಗಾಡಗೆ ಬಾಬಾರವರಿಗೆ ಸಲ್ಲಬೇಕು.

ಋಣಮೋಚನದಲ್ಲಿ ಪೂರ್ಣಾ ನದಿಯ ಸ್ನಾನಘಟ್ಟ ತುಂಬಾ ಶಿಥಿಲವಾಗಿ ಅಪಾಯಕರವಾಗಿತ್ತು. ಆ ದಡದ ಮೇಲೆಯೇ ಈಶ್ವರನ ದೇವಸ್ಥಾನವಿತ್ತು. ಘಟ್ಟ ಯಾವಾಗಲೂ ಕೆಸರಿನಿಂದ ತುಂಬಿರುತ್ತಿತ್ತು. ಬಾಬಾ ತಮ್ಮ ಕೈಯಲ್ಲಿ ಗುದ್ದಲಿ ಹಿಡಿದು ಅಗೆಯಲಾರಂಭಿಸಿದರು. ಜನ ಸುಮ್ಮನೆ ನೋಡುತ್ತಿದ್ದರಷ್ಟೆ. ಕಡೆಯಲ್ಲಿ ಸ್ನಾನಘಟ್ಟ ಸರಿಯಾದ ರೂಪಕ್ಕೆ ಬರುವಷ್ಟರಲ್ಲಿ ಇನ್ನಿಬ್ಬರು ಗುದ್ದಲಿ ಹಿಡಿದು ಮುಂದೆಬಂದರು. ಅನಂತರ ಉಳಿದವರೂ ಕೈಹಾಕಿದರು. ಜ್ಯೋತಿಯಿಂದ ಜ್ಯೋತಿ ಬೆಳಗುವಂತೆ ಬಾಬಾರವರ ಕೆಲಸವೇ ಜನರನ್ನು ಕ್ರಮೇಣ ದಾರಿಗೆ ತರುತ್ತಿತ್ತು. ಅವರು ಯಾವಾಗಲೂ ಸುಮ್ಮನೆ ಉಪದೇಶ ಕೊಡುತ್ತಿರಲಿಲ್ಲ. ಮೊದಲು ಮಾಡುತ್ತಿದ್ದರು, ಅನಂತರ ಹೇಳುತ್ತಿದ್ದರು.

ಸರಳವಾದ ಬದುಕು

ಗಾಡಗೆ ಬಾಬಾ ಬಿಸಿಲು, ಮಳೆ, ಚಳಿ ಯಾವುದಕ್ಕೂ ಲೆಕ್ಕಿಸದೆ ಎಲ್ಲೆಡೆಯಲ್ಲೂ ಓಡಾಡುತ್ತಾ ಜನರ ನಿಕಟ ಸಂಪರ್ಕವನ್ನು ಪಡೆದುಕೊಳ್ಳುತ್ತಿದ್ದರು. ಒಂದು ಸಾರಿ ಜಡಿಮಳೆಯಲ್ಲಿ ಪೂರ್ತಿ ತೊಯ್ದು ಹೋಗಿ ಮರದ ಕೆಳಗೆ ನಿಂತಾಗ ಮರದಕೊಂಬೆ ಬಿದ್ದು ಸ್ವಲ್ಪದರಲ್ಲಿ ಬಾಬಾ ಉಳಿದುಕೊಂಡರು. ಹೀಗೆ ಎಡೆಬಿಡದೆ ಹನ್ನೆರಡು ವರ್ಷಗಳ ಕಾಲ ಅವರು ಒಂದು ರೀತಿಯ ಅಜ್ಞಾತವಾಸವನ್ನು ಅನುಭವಿಸುತ್ತಾ ಕಾಮಕ್ರೋಧಾದಿಗಳನ್ನು ಗೆಲ್ಲುತ್ತಾ ಹೋಗುತ್ತಿದ್ದರು.

ಬಾಬಾ ಅವರಿಗೆ ಆಡಂಬರ ಅಂದರೆ ಸರಿಹೋಗು ತ್ತಿರಲಿಲ್ಲ. ಅವರ ಹಿರಿಯ ಮಗಳಾದ ಕಲಾವತಿಯ ಮದುವೆ ನಡೆದದ್ದು ವಿಚಿತ್ರವಾಗಿ. ಬಾಬಾ ಎಲ್ಲಿಯೋ ಇದ್ದವರು ಆ ವೇಳೆಗೆ ಬಂದರು. ವಧೂವರರಿಗೆ ರೊಟ್ಟಿ ಪಲ್ಯದ ಊಟ ಹಾಕಿಸಿದರು. ಬಳುವಳಿಯಾಗಿ ಬಂದಿದ್ದ ಹಣವನ್ನೆಲ್ಲವನ್ನೂ ಕೊಟ್ಟು ಎತ್ತುಗಳಿಗೆ ಹಿಂಡಿ-ಹತ್ತಿಬೀಜಗಳನ್ನು ತರಿಸಿ ಔತಣ ಮಾಡಿಸಿದರು. ಮೊದಲು ಪ್ರಾಣಿಗಳ ವಿಷಯದಲ್ಲಿ ದಯೆಯಿರಬೇಕು ಎಂಬುದು ಬಾಬಾ ಅವರ ನಿಲುವಾಗಿತ್ತು.

ಹಾಗೆಯೇ ಬಾಬಾ ಅವರ ಕಿರಿಯ ಮಗ ಗೋವಿಂದನ ಮದುವೆ ಸಹ ವಿಚಿತ್ರವಾಗಿತ್ತು. ಮದುವೆಗೆ ಬಂದವರೆಲ್ಲ ಸೇರಿ ಸುತ್ತಮುತ್ತಲ ಪ್ರದೇಶವನ್ನೆಲ್ಲ ಗುಡಿಸಿ ಶುಚಿಗೊಳಿಸಿದರು. ವಧೂವರರು ಹಳೆಯ ಬಟ್ಟೆಗಳನ್ನು ಉಟ್ಟು ಸಿದ್ಧರಾದರು. ಬಾಬಾ ಯಾವುದೇ ಬಳುವಳಿಯನ್ನು ಕೊಡಲೂ ಇಲ್ಲ, ತೆಗೆದುಕೊಳ್ಳಲೂ ಇಲ್ಲ. ಏಳೂವರೆ ರೂಪಾಯಿಯಲ್ಲಿಯೇ ಸಮಾರಂಭ ನಡೆದು ಹೋಯಿತು. ಮದುವೆ ಮನೆಯ ಹೊರಗೆ ಬೇಕಾದಷ್ಟು ಜನ ಹಸಿದವರು, ಭಿಕ್ಷುಕರು ಕುಳಿತಿದ್ದರು. ಬಾಬಾ ಲಾಡು ಮೊದಲಾದ ಭಕ್ಷ ಗಳನ್ನೆಲ್ಲ ಹೊರಗೆ ಕುಳಿತಿದ್ದ ಅವರಿಗೆ ಬಡಿಸಿಬಿಟ್ಟರು.

ಇದೇ ರೀತಿಯಲ್ಲಿ ಬಾಬಾ ಯಾವ ಸಮಾರಂಭಕ್ಕೆ ಹೋದರೂ ತಾವು ಮೊದಲು ಎಲ್ಲರಿಗೂ ಬಲವಂತ ಮಾಡಿ ಲಾಡು ಬಡಿಸುತ್ತಿದ್ದರು. ಎಲ್ಲರೂ ತೃಪ್ತಿಯಿಂದ ಊಟ ಮಾಡಿದ ಮೇಲೆ ತಾವು ಅಂಗಳವನ್ನು ಸ್ವಚ್ಛಗೊಳಿಸಿ ಗಾಡಗೆಯಲ್ಲಿ ಒಂದಿಷ್ಟು ರೊಟ್ಟಿಪಲ್ಯವನ್ನು ತೆಗೆದುಕೊಂಡು ಹೋಗಿ ಮರದ ಕೆಳಗೆ ಕುಳಿತು ತಿನ್ನುತ್ತಿದ್ದರು. ಶುಚಿ ಮತ್ತು ಸರಳತೆಗೆ ಅವರು ತುಂಬಾ ಮಹತ್ವ ಕೊಡುತ್ತಿದ್ದರು. ಸರಿಯಾಗಿ ಕೆಲಸ ಮಾಡದೆ ತಿಂದರೆ ಗೌರವವಿರುವುದಿಲ್ಲ, ಪುಕ್ಕಟೆಯಾಗಂತೂ ತಿನ್ನಲೂಬಾರದು, ಬೇರೆಯವರಿಗೆ ತಿನ್ನಲು ಬಿಡಲೂ ಬಾರದು ಎಂದು ಗಾಡಗೆ ಬಾಬಾ ಹೇಳುತ್ತಿದ್ದರು.

ವಿನಯ

ಗಾಡಗೆ ಬಾಬಾ ಬರಿಗಾಲಿನಲ್ಲಿಯೆ ಓಡಾಡುತ್ತಿದ್ದರು. ಕೆಲವು ವೇಳೆ ರೈಲಿನಲ್ಲಿಯೂ ಪ್ರಯಾಣ ಮಾಡುತ್ತಿದ್ದರು. ಇಂಥ ಕಡೆಗೇ ಹೋಗಬೇಕು ಎಂಬ ಆಲೋಚನೆ ಇರುತ್ತಿರಲಿಲ್ಲ. ಟಿಕೆಟ್ ಕೊಳ್ಳುತ್ತಿರಲಿಲ್ಲ. ಹಾಗಾಗಿ ಎಷ್ಟೋ ವೇಳೆ ಟಿಕೆಟ್ ತಪಾಸಣೆ ಮಾಡುವವರಿಂದ ಬೂಟಿನ ಒದೆತ ತಿನ್ನಬೇಕಾಗುತ್ತಿತ್ತು. ಪ್ಲಾಟ್ ಫಾರ್ಮಿನ ಮೇಲೆ ತಳ್ಳಿಸಿಕೊಳ್ಳಬೇಕಾಗುತ್ತಿತ್ತು. ಅವರು ಇಳಿದದ್ದೇ ನಿಲ್ದಾಣ. ಅದೇ ಕರ್ಮಭೂಮಿ. ಎಲ್ಲವನ್ನೂ ಸೈರಿಸಿಕೊಂಡು ಬಾಬಾ ಚಿನ್ನಕ್ಕೆ ಪುಟವಿಟ್ಟಂತೆ ಮನಸ್ಸಿನ ಸಮತೋಲವನ್ನು ಕಾಯ್ದುಕೊಳ್ಳುತ್ತಿದ್ದರು.

ಒಮ್ಮೆ ರೊಟ್ಟಿ ಬೇಡಲು ಹೋದಾಗ ಒಬ್ಬ ಮನೆಯಾತ ‘‘ಸೌದೆ ಕಡಿಯುವ ಕೆಲಸ ಮಾಡು, ಅನಂತರ ರೊಟ್ಟಿ ಕೊಡುತ್ತೇನೆ’’ ಅಂದ. ರಾಶಿರಾಶಿ ಸೌದೆ ಕಡಿದುಹಾಕಿದರು ಬಾಬಾ. ಮನೆಯಾತ ರೊಟ್ಟಿ ತರುವಷ್ಟರಲ್ಲಿ ಬಾಬಾ ಅಲ್ಲಿ ಇರಲೇ ಇಲ್ಲ.

ಒಂದು ಬಾರಿ ಗಾಡಗೆ ಬಾಬಾರ ಜಾತಿಗೆ ಸೇರಿದ ಒಬ್ಬಾತ ಅವರ ವಿಚಾರವಾಗಿ ತುಂಬಾ ಹೊಗಳುತ್ತ ‘‘ಅವರು ಅಂದರೆ ನಮ್ಮ ಜಾತಿಗೇ ಮುತ್ತಿನಂತಿದ್ದಾರೆ’’ ಅಂದನಂತೆ. ಈ ಮಾತು ಬಾಬಾರವರ ಕಿವಿಗೆ ಬಿದ್ದಾಗ ಅವರು ಹೇಳಿದರು, ‘‘ನನ್ನ ಬಳಿ ಇರುವುದು ಈ ಪುಕ್ಕಟೆ ಗಾಡಗೆಯೊಂದೇ. ಮುತ್ತಿನಷ್ಟಿರುವ ನೀರಿನ ಹನಿಯನ್ನಾದರೂ ಬಾಯಾರಿದವರಿಗೆ ಕೊಡಲು ಸಾಧ್ಯವಾದರೆ ಎಷ್ಟೋ ಮೇಲು.’’

ದೇವರು ಎಲ್ಲಿದ್ದಾನೆ?
ಅವನನ್ನು ಪೂಜಿಸುವುದು ಹೇಗೆ?

ದೇವರು ಒಬ್ಬನೇ, ಅವನು ಎಲ್ಲೆಲ್ಲಿಯೂ ಇದ್ದಾನೆ ಎಂದು ಬಾಬಾ ಜನರಿಗೆ ಹೇಳುತ್ತಿದ್ದರು. ಜನರ ಬದುಕನ್ನು ಹತ್ತಿರದಿಂದ ನೋಡುತ್ತಿದ್ದ ಅವರು ತಾವು ಕಂಡ, ಕೇಳಿದ ಉದಾಹರಣೆಗಳನ್ನು ಕೊಟ್ಟು ಸರಿಯಾದ ವಿಚಾರಗಳನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದರು. ದೇವರು (ವಿಠ್ಠಲ) ಕೇವಲ ಪಂಢರಪುರದಲ್ಲಿಯೆ ವಾಸಿಸುವುದಿಲ್ಲ. ಅಲ್ಲಿರುವಂತೆಯೆ ನಿಮ್ಮ ಹಳ್ಳಿಯಲ್ಲೂ ನೀರಿದೆ, ಶಿಲೆಯಿಂದ ಕಟ್ಟಿದ ದೇವಾಲಯಗಳಿವೆ, ಕಲ್ಲಿನ ದೇವರ ವಿಗ್ರಹಗಳಿವೆ. ಕಲ್ಲು, ನೀರು ಎಲ್ಲೆಡೆಯಲ್ಲಿಯೂ ಕಂಡುಬರುವಂತೆ ದೇವರು ಎಲ್ಲ ಕಡೆಗಳಲ್ಲೂ ಇರುತ್ತಾನೆ. ಆದ್ದರಿಂದ ದೇವರ ಯಾತ್ರೆಗೆಂದು ಅನಾವಶ್ಯಕವಾಗಿ ಹಣ ವೆಚ್ಚ ಮಾಡಬೇಕಾಗಿಲ್ಲ, ಅದೇ ಹಣವನ್ನು ಜನರ ಹಿತಕ್ಕಾಗಿ ವಿನಿಯೋಗಿಸಿ ಎಂದು ಬೋಧಿಸುತ್ತಿದ್ದರು.

ಸುತ್ತಲೂ ನೆರೆದಿದ್ದ ಜನರಿಗೆ ತಿಳಿಯುವ ಹಾಗೆ ಬಾಬಾ ದೃಷ್ಟಾಂತಗಳನ್ನು ಕೊಟ್ಟು ಹೇಳುತ್ತಿದ್ದರೆಂಬುದಕ್ಕೆ ಒಂದು ಉದಾಹರಣೆ ಕೊಡಬಹುದು. ಒಂದು ಬಾರಿ ಬಾಬಾ ಜನರನ್ನು ಪ್ರಶ್ನೆಮಾಡಿದರು, ‘‘ದೇವರು ಭೂಮಿಯ ಮೇಲೆ ಎಲ್ಲಿದ್ದಾನೆ, ಹೇಗಿದ್ದಾನೆ?’’ ಅನಂತರ ಅವರೇ ಉತ್ತರ ಕೊಡುತ್ತಾ ‘‘ದೇವರು ಗಾಳಿಯಂತೆ ಇದ್ದಾನೆ. ಗಾಳಿ ನಿನ್ನೆ ರಾತ್ರಿ ಮುಂಬಯಿ ರೈಲ್ವೆನಿಲ್ದಾಣದಲ್ಲಿತ್ತು ಎಂದು ನಾವು ಯಾರೂ ಹೇಳುವುದಿಲ್ಲ. ಅಥವಾ ಕೆಂಪುಬಣ್ಣದ ಗಾಳಿ ಸತಾರ ಸ್ಟೇಷನ್ನಿನ ಬಳಿ ಬೀಸುತ್ತಿತ್ತು ಎಂದೂ ಹೇಳುವುದಿಲ್ಲ. ಗಾಳಿಯಂತೆಯೇ ದೇವರು ಎಲ್ಲೆಲ್ಲಿಯೂ ಇದ್ದಾನೆ. ಮನೆಯಲ್ಲಿ, ರಸ್ತೆಯಲ್ಲಿ, ಈಕಡೆ, ಆಕಡೆ ಎಲ್ಲಿಯೂ ಅವನು ಇಲ್ಲ ಎನ್ನುವಂತಿಲ್ಲ.’

ಮನುಷ್ಯ ದಿನವೆಲ್ಲ ಕೆಲಸಮಾಡುತ್ತಾನೆ. ಒಂದು ಕ್ಷಣವಾದರೂ ಅವನು ದೇವರನ್ನು ಸ್ಮರಿಸಬೇಕು. ದೇವರ ಭಜನೆ ಯಾವ ಮನೆಯಲ್ಲಿ ನಡೆಯುತ್ತದೆಯೊ, ಆ ಮನೆಯ ಬಾಗಿಲಲ್ಲಿ ಕುಳಿತು ದೇವರೇ ರಕ್ಷಣೆ ಮಾಡುತ್ತಾನೆ. ಅದಕ್ಕೆ ಬದಲಾಗಿ ಸುಮ್ಮನೆ ಹರಟೆ ಹೊಡೆಯುತ್ತಾ ಇನ್ನೊಬ್ಬರನ್ನು ದೂಷಿಸುತ್ತಿದ್ದರೆ ಅಂಥ ಮನೆಯ ಬಾಗಿಲಿನಲ್ಲಿ ಯಮರಾಜನೇ ಕುಳಿತಿರುತ್ತಾನೆ ಎಂದು ಗಾಡಗೆ ಬಾಬಾ ಎಚ್ಚರಿಕೆ ನೀಡುತ್ತಿದ್ದರು. ತೀರ್ಥಕ್ಷೇತ್ರಗಳಲ್ಲಿರುವುದು ಕೇವಲ ನೀರು-ಕಲ್ಲುಬಂಡೆ ಮಾತ್ರ. ದೇವರು ನಿಜವಾಗಿ ನೆಲೆಸಿರುವುದು ಸಜ್ಜನರಲ್ಲಿ ಮಾತ್ರ ಎಂಬುದಾಗಿ ಗಾಡಗೆ ಬಾಬಾ ಹೇಳುತ್ತಿದ್ದರು. ದಾರಿಯಲ್ಲಿ ಸಿಗುತ್ತಿದ್ದ ಮುದುಕರಿಗೆ, ಕೈಲಾಗದವರಿಗೆ, ಆಸರೆಯಿಲ್ಲದವರಿಗೆ ಅವರು ತುಂಬಾ ಸಹಾಯ ಮಾಡುತ್ತಿದ್ದರು. ಪಾಂಡುರಂಗನೇ ಹೀಗೆ ಬೇರೆ ಬೇರೆ ರೂಪದಲ್ಲಿದ್ದಾನೆ ಎಂದು ಹೇಳುತ್ತಿದ್ದರು. ಅವರ ಸೇವೆ ಮಾಡುವುದೇ ಪಾಂಡುರಂಗನ ಪರಮಸೇವೆ ಎಂದು ಬಾಬಾ ಭಾವಿಸಿದ್ದರು.

ದೇವರು ಯಾವುದಕ್ಕೂ ಸೀಮಿತವಲ್ಲ, ಇಡೀ ಪ್ರಪಂಚವನ್ನೇ ಆವರಿಸಿದ್ದಾನೆ. ಅದಕ್ಕೂ ಮಿಗಿಲಾಗಿ ನಮ್ಮ ನಿಮ್ಮ ಅಂತಃಕರಣಗಳಲ್ಲಿ ಅಡಗಿ ಕುಳಿತಿದ್ದಾನೆ. ನಮ್ಮ ದೇಹವೆ ದೇವರ ಮಂದಿರ. ಈ ಮಂದಿರದಲ್ಲಿರುವ ಆತ್ಮವೇ ಪರಮಾತ್ಮ ಎಂದು ಬಾಬಾ ಒಮ್ಮೆ ಹೇಳಿದ್ದುಂಟು.

ಮೂಢನಂಬಿಕೆಯ ವಿರುದ್ಧ ಸೆಣಸಾಟ

ಗಾಡಗೆ ಬಾಬಾ ತಮ್ಮ ಸುತ್ತಾಟಗಳಲ್ಲಿ ಜನರ ಜೀವನ ವಿಧಾನವನ್ನು ತುಂಬ ಮನಸ್ಸಿಟ್ಟು ಗಮನಿಸುತ್ತಿದ್ದರು. ಜನ ಮೂಢರಾಗಿದ್ದುದರಿಂದಲೂ ಅಜ್ಞಾನಿಗಳಾಗಿದ್ದುದರಿಂದಲೂ ಹೆಚ್ಚು ಶೋಷಣೆಗೆ ಒಳಗಾಗುತ್ತಿದ್ದರು. ಇದನ್ನು ಕಂಡು ಬಾಬಾ ಅವರಿಗೆ ಬಹಳ ದುಃಖವಾಗುತ್ತಿತ್ತು. ಮಗು ಹುಟ್ಟಲಿ ಎಂದು ಹರಕೆ ಕಟ್ಟಿಕೊಳ್ಳುವುದು, ಮಗುವಿಗೆ ಕಾಯಿಲೆಯಾದರೆ ಅದಕ್ಕೆ ಕುರಿ ಆಡುಗಳನ್ನು ಬಲಿಕೊಡುವುದು ಇಂಥ ಮೂಢನಂಬಿಕೆಗಳನ್ನು ಕಂಡರೆ ಅವರಿಗೆ ಆಗುತ್ತಿರಲಿಲ್ಲ. ಇವೆಲ್ಲ ರೋಗಕ್ಕೆ ತುತ್ತಾದ ಸಮಾಜದ ಲಕ್ಷಣಗಳು ಎಂದು ಅವರು ಭಾವಿಸಿದ್ದರು.

ಒಮ್ಮೆ ಬಾಬಾರವರ ಕೀರ್ತನ ಸಭೆ ಆಕರ್ಷಕವಾಗಿ ನಡೆಯುತ್ತಿದ್ದಾಗ ಅವರು ಕೇಳಿದರು, ‘‘ಮಕ್ಕಳು ಬೇಕೆಂದು ದೇವರಿಗೆ ಆಡನ್ನು ಬಲಿಕೊಟ್ಟು ನೀವೇ ಅದನ್ನು ತಿನ್ನುವುದಿಲ್ಲವೆ?’’ ಎಲ್ಲರೂ ಅಂದರು, ‘‘ಹೌದು ತಿನ್ನುತ್ತೇವೆ’’.  ಬಾಬಾ ತುಂಬಾ ದುಃಖದಿಂದ ಹೇಳಿದರು, ‘‘ದೇವರ ಮನೆಯಲ್ಲಿ ಒಂದು ಜೀವವನ್ನು ಬಯಸಿ ಇನ್ನೊಂದು ಜೀವವನ್ನು ಕೊಲ್ಲುವುದು ಯಾವ ನ್ಯಾಯ? ಯಾವ ದೇವರು ಈ ಭೂಮಿಯನ್ನು ಸೃಷ್ಟಿಮಾಡಿದ್ದಾನೊ ಅವನಿಗೆ ಕುರಿಕೋಳಿಗಳನ್ನು ಬಲಿಕೊಡುವುದು ಏಕೆ? ದೇವರೇನು ಲಂಚ ತಿನ್ನುತ್ತಾನೆಯೆ?’  ಪ್ರತಿಯೊಂದು ಜೀವಿಯೂ ಪರಮಾತ್ಮನ ಒಂದು ಸುಂದರ ರೂಪ ಅಂದುಕೊಂಡಿದ್ದ ಗಾಡಗೆ ಬಾಬಾ ಎಲ್ಲರಿಗೂ ಅಹಿಂಸೆಯನ್ನು ಬೋಧಿಸುತ್ತಿದ್ದರು.

ಸಾಮಾನ್ಯವಾಗಿ ಹಳ್ಳಿಗಳಲ್ಲಿ ದೇವರ ಹೆಸರಿನಲ್ಲಿ ಕಪಟ ಮೋಸಗಳು ನಡೆಯುವುದನ್ನು ಬಾಬಾ ಗಮನಿಸಿದ್ದರು. ಮೋಸಗಾರರು ಎತ್ತಿನ ಕೋಡಿಗೆ ಸಿಂಗಾರ ಮಾಡಿ ನಂದಿ ಬಂತು ಎನ್ನುತ್ತಿದ್ದರು, ಧಾನ್ಯ ಬಟ್ಟೆಗಳನ್ನು ವಸೂಲು ಮಾಡಿಕೊಂಡು ಹೋಗುತ್ತಿದ್ದರು. ಮಾರಮ್ಮ ಬಂತು ಎಂದು ಹೇಳಿ ಖಣ, ತೆಂಗಿನಕಾಯಿಗಳನ್ನು ವಸೂಲು ಮಾಡಿಕೊಂಡು ಹೋಗುತ್ತಿದ್ದರು. ಯಾವುಯಾವುದೋ ದೇವರು ಬಂತೆಂದು ಹೇಳಿ ಕುರಿ ಕೋಳಿಗಳನ್ನು ಬಲಿಕೊಡುತ್ತಿದ್ದರು. ದೇವರ ಹೆಸರಿನಲ್ಲಿ ನಡೆಯುತ್ತಿದ್ದ ಈ ಅನ್ಯಾಯ, ಸುಲಿಗೆಗಳನ್ನು ಬಾಬಾ ತೀವ್ರವಾಗಿ ಖಂಡಿಸುತ್ತಿದ್ದರು. ದುಡ್ಡಿದ್ದವರು ಸಹ ದೇವರ ವ್ರತಗಳನ್ನು ಮಾಡುತ್ತೇವೆ ಎಂದು ದುಂದು ಮಾಡುವುದು ಅವರಿಗೆ ಸರಿಬೀಳುತ್ತಿರಲಿಲ್ಲ.

ನಿಜವಾದ ಯಜ್ಞ

ಗಾಡಗೆ ಬಾಬಾ ಯಾವಾಗಲೂ ತಮಗೆ ಯಾವ ಶಿಷ್ಯರೂ ಇಲ್ಲ, ತಾವು ಯಾರ ಗುರುವೂ ಅಲ್ಲ ಎಂದು ಸ್ಪಷ್ಟವಾಗಿ ಹೇಳಿಬಿಡುತ್ತಿದ್ದರು. ಎಲ್ಲರಿಗೂ ಗುರು ಅಂದರೆ ಸಂತ ತುಕಾರಾಮರೊಬ್ಬರೇ ಅನ್ನುತ್ತಿದ್ದರು. ಅವರು ಶಿಷ್ಯವೃಂದ, ಮಠ, ಪೀಠ ಯಾವುದನ್ನೂ ಬಯಸುತ್ತಿರಲಿಲ್ಲ. ಆದರೂ ಬಾಬಾರವರು ತಮ್ಮ ಗುರುವೆಂದು ಭಾವಿಸಿದ್ದ ಕೆಲವರು ಒಮ್ಮೆ ಯಾತ್ರೆ ಮುಗಿಸಿಕೊಂಡು ಬಂದು ‘ಶತಚಂಡಿ’ ಎಂಬ ಯಜ್ಞಮಾಡಲು ತೀರ್ಮಾನಿಸಿದರು. ಅದರ ಅಂಗವಾಗಿ ಬಾಬಾರವರ ಕೀರ್ತನಸಭೆ ಸಹ ನಡೆಯುತ್ತದೆಂದು ಪ್ರಕಟಿಸಿಬಿಟ್ಟರು.

ಆ ಪ್ರಕಾರ ಬಾಬಾರವರಿಗೆ ತಿಳಿಸಲು ಹೋದಾಗ ಅವರು ಸ್ವಲ್ಪ ದನಿ ಏರಿಸಿ ಕೇಳಿದರು. ‘‘ಯಾರನ್ನು ಕೇಳಿ ಪ್ರಕಟಣೆ ಮಾಡಿದಿರಿ?’’ ಶಿಷ್ಯರಲ್ಲೊಬ್ಬ ಅಂದ ‘‘ಬಾಬಾ, ತಾವು ಸ್ವಪ್ನದಲ್ಲಿ ಬಂದು ಈ ಯಜ್ಞ ಮಾಡಬೇಕೆಂದು ಆಜ್ಞೆಮಾಡಿದ್ದೀರಿ. ಅದರಂತೆಯೇ ನಾವು ನಡೆದುಕೊಳ್ಳುತ್ತಿದ್ದೇವೆ.’’ ಬಾಬಾ ಅಂದರು ‘‘ಯಜ್ಞ, ಸಾಕ್ಷಾತ್ಕಾರ, ಚಮತ್ಕಾರಗಳನ್ನು ನಂಬಬೇಡಿ. ಇವೆಲ್ಲ ಹುರುಳಿಲ್ಲದ ವಿಚಾರಗಳು. ಅದಕ್ಕೆ ಬದಲಾಗಿ ಹಸಿದವರಿಗೆ ಎರಡು ತುತ್ತು ಅನ್ನ ಹಾಕಿ. ಅದಕ್ಕಿಂತಲೂ ಬೇರೆ ಯಜ್ಞವಿಲ್ಲ’’

ಪ್ರಾಣಿದಯೆ

ಹಸು ಮತ್ತು ಎತ್ತು ರೈತನ ಪಾಲಿಗೆ ಜೀವಂತವಾದ ದೇವತೆಗಳಿದ್ದಂತೆ. ಅವನ ಸುಖಕ್ಕಾಗಿ ಅವು ಹಗಲಿರುಳೂ ಎಡೆಬಿಡದೆ ದುಡಿಯುತ್ತವೆ. ಆದರೆ ಅವು ಮುದಿಯಾದಾಗ ಅವನ್ನು ಕಟುಕರ ಕೈಲಿಟ್ಟುಬಿಡುತ್ತಾರೆ. ಅಂಥವರು ಚಂಡಾಲರಿಗೆ ಸಮ ಎನ್ನುತ್ತಿದ್ದರು ಬಾಬಾ. ಇಂಥ ಕಟುಕರ ಕೈಯಿಂದ ಪ್ರಾಣಿಗಳನ್ನು ಉಳಿಸುವುದು ಹೇಗೆ ಎಂಬ ವಿಚಾರ ಅವರನ್ನು ಕೊರೆಯುತ್ತಿತ್ತು.

ಒಂದು ಬಾರಿ ನಾನಾಸಾಹೇಬ ಎಂಬ ಒಬ್ಬ ವ್ಯಕ್ತಿ ಬಾಬಾರವರನ್ನು ಭೇಟಿ ಮಾಡಿ ಅವರಿಗೆ ಸಹಾಯ ಮಾಡುವ ಸಲುವಾಗಿ ಐವತ್ತಾರು ಎಕರೆ ಭೂಮಿಯನ್ನು ದಾನ ಮಾಡಿದ. ಸ್ವಲ್ಪ ದಿನಗಳಲ್ಲೇ ಬಾಬಾ ಅಲ್ಲಿ ಒಂದು ಗೋರಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಪ್ರಾಣಿಗಳ ಬಗ್ಗೆ ದಯೆಯಿಡಬೇಕಾದ್ದು ಧರ್ಮ ಎಂದು ಅವರು ಉಪದೇಶ ಮಾಡುತ್ತಿದ್ದರು.

ಸಮಾಜದಲ್ಲಿ ಜನರೇ ದೇವತೆಗಳನ್ನು ಸೃಷ್ಟಿ ಮಾಡಿ ಅವಕ್ಕೆ ಹರಕೆ ಕಟ್ಟಿಕೊಳ್ಳುವುದರ ಬಗ್ಗೆ ಬಾಬಾ ತುಂಬಾ ಯೋಚನೆಗೀಡಾಗಿದ್ದರು. ಮಗು ಹುಟ್ಟದಿದ್ದರೆ ಆಡು ಕಡಿ, ಕೋರ್ಟು ಕಚೇರಿಗಳಲ್ಲಿ ಕೆಲಸವಾಗಬೇಕಾದರೆ ಕೋಳಿ ಕತ್ತರಿಸು, ಮಳೆ ಬರದಿದ್ದರೆ ಕೋಣವನ್ನು ಬಲಿಕೊಡು ಹೀಗೆ ಪ್ರಾಣಿಹತ್ಯೆ ಸಮಾಜದಲ್ಲಿ ಎಲ್ಲೆಲ್ಲೂ ತಾಂಡವವಾಡುತ್ತಿತ್ತು. ಒಂದು ಜೀವವನ್ನು ಬಲಿಕೊಟ್ಟು ಅದರಿಂದ ಒಳ್ಳೆಯ ಫಲವನ್ನು ಬಯಸಿದರೆ ಹೇಗೆ ಸಾಧ್ಯ? ಗೊಬ್ಬಳಿ ಮರದಿಂದ ಮಾವಿನ ಹಣ್ಣನ್ನು ಪಡೆಯುವುದು ಸಾಧ್ಯವೆ ಎಂದು ಬಾಬಾ ಜನರನ್ನು ತಿದ್ದಲು ಪ್ರಯತ್ನಿಸುತ್ತಿದ್ದರು.

ಜನಸೇವೆಯೇ ಜನಾರ್ದನನ ಸೇವೆ

ಗಾಡಗೆ ಬಾಬಾ ತಮ್ಮ ಇಡೀ ಬದುಕನ್ನೇ ಜನರ ಸೇವೆಗಾಗಿ ಮುಡಿಪಿಟ್ಟಿದ್ದರು. ಜನರಿಗೆ ಅನುಕೂಲವಾಗು ವಂತೆ ಪಂಢರಪುರ, ನಾಸಿಕ್, ಆಳಂದಿ, ದೇಹೂ, ತ್ರ ಂಬಕೇಶ್ವರ, ಪುಣೆ ಮುಂತಾದ ಸ್ಥಳಗಳಲ್ಲಿ ಧರ್ಮ ಛತ್ರ ಗಳನ್ನೂ ಗೋರಕ್ಷಣ ಸಂಸ್ಥೆಗಳನ್ನೂ ಕಟ್ಟಿಸಿದರು. ಇಂಥ ಕೆಲಸಗಳಿಗಾಗಿ ಬಾಬಾರವರು ಒಟ್ಟು ಸುಮಾರು

ಇಪ್ಪತ್ತೆ ದು ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ ವಿನಿಯೋಗ ಮಾಡಿದರೆಂದು ಒಂದು ಅಂದಾಜು. ಅವರ ಕೆಲಸ ಕಾರ್ಯಗಳಿಗಾಗಿ ಹಣವೂ ಒದಗಿಬರುತ್ತಿತ್ತು.

ಪಂಢರಪುರದಲ್ಲಿ ಒಂದು ಧರ್ಮಛತ್ರವನ್ನು ಕಟ್ಟಿಸುತ್ತಿದ್ದಾಗಿನ ಮಾತು. ಬಾಬಾರವರು ಕೆಲಸದಲ್ಲಿ ತೊಡಗಿದ್ದಾಗ ಕಾವಿಬಟ್ಟೆ ಧರಿಸಿದ್ದ ಒಬ್ಬ ಸಂನ್ಯಾಸಿ ಅಲ್ಲಿಗೆ ಬಂದ. ‘‘ಸ್ವಾಮಿ, ತಮ್ಮ ಅಪ್ಪಣೆ ಏನು?’’ ಎಂದು ಬಾಬಾ ಕೇಳಿದರು. ಸಂನ್ಯಾಸಿ ಹೇಳಿದ, ‘‘ಹರಿಜನ ಯಾತ್ರಿಕರಿಗಾಗಿ ತಾವು ಒಂದು ಧರ್ಮಛತ್ರವನ್ನು ಕಟ್ಟಿಸುತ್ತಿದ್ದೀರಲ್ಲವೆ? ಇದು ತುಂಬಾ ಒಳ್ಳೆಯ ಕೆಲಸ. ಇದಕ್ಕಾಗಿ ತಮಗೆ ಏನಾದರೂ ಸಹಾಯ ಮಾಡಬೇಕೆಂದು ನನ್ನ ಇಷ್ಟ’’. ಸಂನ್ಯಾಸಿಯ ಈ ಮಾತನ್ನು ಕೇಳಿ ‘‘ಈತ ಏನು ಸಹಾಯ ಮಾಡಿಯಾರು? ನೂರಿನ್ನೂರು ರೂಪಾಯಿ ಕೊಡಬಲ್ಲರು ಅಷ್ಟೆ’’ ಎಂದು ಬಾಬಾ ಯೋಚಿಸಿದರು. ಸಂನ್ಯಾಸಿ ಇಪ್ಪತ್ತೆ ದು ಸಾವಿರ ರೂಪಾಯಿಗಳ ಚೆಕ್ಕನ್ನು ಬಾಬಾರವರ ಕೈಯಲ್ಲಿಟ್ಟ. ಆ ಸಂನ್ಯಾಸಿಯ ಹೆಸರು ಸ್ವಾಮಿ ಅಖಂಡಾನಂದ. ಸತ್ಕಾರ್ಯಕ್ಕಾಗಿ ದುಡ್ಡು ಹೀಗೆಯೇ ಒದಗುತ್ತದೆ ಎಂದು ಬಾಬಾ ಅವರಿಗೆ ಸಮಾಧಾನವಾಯಿತು.

ಆದರೆ ಅಗತ್ಯವಿಲ್ಲದಿದ್ದಾಗ ಮಾತ್ರ ಗಾಡಗೆ ಬಾಬಾ ದುಡ್ಡನ್ನು ಮುಟ್ಟುತ್ತಿರಲಿಲ್ಲ. ಒಂದು ಬಾರಿ ಅಕೋಲಾ ಜಿಲ್ಲೆಯ ಮಂಚನಪುರ ಎಂಬಲ್ಲಿ ವಿಠೋಬಾ ಪಾಟೀಲ್ ಎಂಬ ಶ್ರೀಮಂತ ಗೃಹಸ್ಥ ಬಾಬಾರವರ ಕೀರ್ತನವನ್ನು ಕೇಳಿ  ಸಂತೋಷಪಟ್ಟ. ಅವರಿಗೆಂದು ತನ್ನ ಸೇವಕನ ಕೈಯಲ್ಲಿ ದುಡ್ಡಿನ ಚೀಲವನ್ನು ಕಳಿಸಿದ. ಆದರೆ ಆಗ ದುಡ್ಡು ಬೇಕಾಗಿರಲಿಲ್ಲ. ಬಾಬಾ ಅದನ್ನು ಹಾಗೆಯೆ ಹಿಂದಿರುಗಿಸಿಬಿಟ್ಟರು. ಬೇಡದಿದ್ದಾಗ ಮುತ್ತುರತ್ನಗಳು ಸಿಗುತ್ತವೆ, ಬೇಕಾದಾಗ ಭಿಕ್ಷೆಯೂ ಹುಟ್ಟುವುದಿಲ್ಲ, ದೇವರ ಸೃಷ್ಟಿಯಲ್ಲಿ ಎಂಥ ವಿಚಿತ್ರ ಎಂದು ಬಾಬಾ ಮನಸ್ಸಿನಲ್ಲಿಯೇ ಯೋಚಿಸಿದರು.

ಪಂಢರಪುರದಲ್ಲಿ

ಗಾಡಗೆ ಬಾಬಾ ಸುತ್ತಾಡುತ್ತಾ ಒಂದು ಬಾರಿ ಪಂಢರಪುರಕ್ಕೆ ಬಂದರು. ಪಾಂಡುರಂಗನ ದರ್ಶನ ಮಾಡಬೇಕಾದರೆ ಅರ್ಚಕರ ಮಧ್ಯಸ್ಥಿಕೆ ಏಕೆ ಎಂದು ಅವರಿಗೆ ಅನಿಸಿತು. ಪಾಂಡುರಂಗ ಪಂಢರಪುರದಲ್ಲಿಯೆ ಏನು ಇರುವುದು? ಊರಿನ ಹೊರಗಿರುವ ರೋಗಿಗಳು, ಹಸಿದವರು, ದುರ್ಬಲರೇ ಮುಂತಾದವರು ಪಾಂಡುರಂಗನ ಬೇರೆ ಬೇರೆ ರೂಪ ಎಂದು ಅವರು ಮನಗಂಡರು.

ಪಂಢರಪುರ ಮಹಾರಾಷ್ಟ್ರದಲ್ಲೆಲ್ಲ ಹೆಸರುವಾಸಿಯಾದ ಒಂದು ಯಾತ್ರಾಸ್ಥಳ. ಆಷಾಢ ಕಾರ್ತಿಕಗಳಲ್ಲಿ ಯಾತ್ರಿಕರು ವಿಠ್ಠಲನ ದರ್ಶನಕ್ಕಾಗಿ ಅಪಾರ ಸಂಖ್ಯೆಯಲ್ಲಿ ಬರುತ್ತಾರೆ. ಎಲ್ಲರಿಗೂ ವಸತಿ ಸೌಕರ್ಯ ಸಿಗದೆ ತುಂಬಾ ಕಷ್ಟವಾಗುತ್ತಿತ್ತು. ಹರಿಜನ ಯಾತ್ರಿಕರ ಸ್ಥಿತಿಯಂತೂ ನಾಯಿಗಿಂತ ಕಡೆಯಾಗಿತ್ತು. ಆದ್ದರಿಂದ ಬಾಬಾ ಅವರಿಗಾಗಿಯೆ ಅಲ್ಲಿ ಚೋಖಾಮೇಳಾ ಎಂಬ ಛತ್ರವೊಂದನ್ನು ಕಟ್ಟಿಸಿದರು. ಹರಿಜನರ ಸೇವೆಯೇ ಹರಿಸೇವೆ ಎಂದು ಗಾಡಗೆ ಬಾಬಾ ನಂಬಿದ್ದರು.

ಹಳ್ಳಿಗಳಲ್ಲಿಯೂ ಅಸ್ಪ ಶ್ಯರ ಬದುಕು ತುಂಬಾ ಕೀಳಾಗಿತ್ತು. ಸಾರ್ವಜನಿಕ ಬಾವಿಗಳನ್ನು ಅವರು ಬಳಸುವಂತಿರಲಿಲ್ಲ. ಮೇಲಿನ ಜಾತಿಯವರು ಅವರನ್ನು ಮುಟ್ಟುತ್ತಿರಲಿಲ್ಲ. ಸಭೆ ಸಮಾರಂಭಗಳಲ್ಲಿ ಅವರನ್ನು ಪ್ರಾಣಿಗಳಂತೆ ನಡೆಸಿಕೊಳ್ಳುತ್ತಿದ್ದರು. ಇದನ್ನೆಲ್ಲ ನೋಡಿ ಬೇಸತ್ತಿದ್ದ ಬಾಬಾ ಒಮ್ಮೆ ಒಬ್ಬ ಮೇಲಿನ ಜಾತಿಯವನನ್ನು ಕೇಳಿದರು, ‘‘ಏನಪ್ಪಾ ಶ್ರೀಧರ ಪಂತ, ನಿನಗೆ ಎಷ್ಟು ಹಲ್ಲುಗಳಿವೆ?’’ ‘‘ಮೂವತ್ತೆರಡು’’ ಶ್ರೀಧರಪಂತ ಉತ್ತರವಿತ್ತ. ‘‘ನಲವತ್ತೆರಡು ಏಕಿಲ್ಲ?’’ ಬಾಬಾ ಆಶ್ಚರ್ಯದಿಂದ ಕೇಳಿದರು. ಹಾಗೆಯೆ ಅಲ್ಲಿಯೆ ಇದ್ದ ಒಬ್ಬ ಅಸ್ಪ ಶ್ಯನನ್ನು ತೋರಿಸುತ್ತಾ ‘‘ಅವನಿಗೆ ಎಷ್ಟು ಹಲ್ಲುಗಳಿವೆ?’’ ಎಂದು ಪ್ರಶ್ನೆಮಾಡಿದರು. ಶ್ರೀಧರಪಂತ ಹೇಳಿದ ‘‘ಮೂವತ್ತೆರಡೇ’’, ಆಗ ಬಾಬಾ ಅಂದರು ‘‘ಅದು ಹೇಗೆ ಸಾಧ್ಯ? ನೀವಿಬ್ಬರೂ ಒಂದೇ ರೀತಿ ಅಂದ ಹಾಗಾಯಿತಲ್ಲ. ಎರಡೇ ಕಾಲುಗಳು, ಎರಡೇ ಕೈಗಳು, ಎರಡೇ ಕಣ್ಣುಗಳು, ಒಂದೇ ತಲೆ, ತಲೆಯ ಮೇಲೆ ಒಂದೇ ಆಕಾಶ, ಆಕಾಶದಲ್ಲಿ ಹೊಳೆಯುತ್ತಿರುವ ಸೂರ್ಯ ಎಲ್ಲರಿಗೂ ಒಬ್ಬನೇ. ನಿನಗೆ ಮಾತ್ರ ಬೇರೆ ಒಬ್ಬ ಸೂರ್ಯ ಬೆಳಕು ಕೊಡುತ್ತಾನೆಯೆ?’’ಎಲ್ಲರೂ ದೇವರ ಮಕ್ಕಳು ಅಂದಮೇಲೆ ಅಸ್ಪ ಶ್ಯತೆ, ಜಾತಿಭೇದ ಏಕೆ?

ಎಲ್ಲಾ ಜನರಿಗಾಗಿ

ಗಾಡಗೆ ಬಾಬಾ ಪಂಢರಪುರದಲ್ಲಿ ಮರಾಠಾ ಧರ್ಮ ಛತ್ರವನ್ನು ಕಟ್ಟಿಸುತ್ತಿದ್ದರು. ಮುಖ್ಯಮಂತ್ರಿಗಳಾಗಿದ್ದ ಬಾಲಗಂಗಾಧರ ಖೇರ್ ಸಂಜೆಯ ವೇಳೆಯಲ್ಲಿ ತಮ್ಮ ಸ್ನೇಹಿತರೊಂದಿಗೆ ಅದೇ ದಾರಿಯಲ್ಲಿ ಗಾಳಿಸವಾರಿ ಹೊರಟಿದ್ದರು. ಜನ ಬಾಬಾರವರಿಗೆ ಅಡ್ಡ ಬೀಳುತ್ತಿದ್ದುದನ್ನು ನೋಡಿ ಅವರು ‘‘ಧರ್ಮದ ಹೆಸರಿನಲ್ಲಿ ಜನರನ್ನು ಏಕೆ ಮೋಸಗೊಳಿಸುತ್ತೀರಿ ಬಾಬಾ?’’ ಎಂದು ಟೀಕಿಸಿದರು. ಬಾಬಾ ಅಂದರು ‘‘ತಾವು ದೊಡ್ಡವರು, ನಾನು ಎಷ್ಟರವನು? ತುಂಬಾ ಸಾಮಾನ್ಯ ಮನುಷ್ಯ.’’ ಧರ್ಮಛತ್ರವನ್ನು ಕಟ್ಟಿದ ಅನಂತರ ಆ ವಿಚಾರ ಖೇರ್ ಅವರಿಗೆ ತಲಪಿದಾಗ ಖೇರ್ ಅವರಿಗೆ ಬಾಬಾರವರ ಬಗ್ಗೆ ಗೌರವ ಮೂಡಿತು. ಅವರು ಬಾಬಾರವರನ್ನು ಕ್ಷಮಾಪಣೆ ಕೇಳಿದರು.

ಫೈಜಪುರ ಎಂಬಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯುತ್ತಿತ್ತು. ಗಾಡಗೆ ಬಾಬಾ ಅಲ್ಲಿಗೆ ಹೋದಾಗ ಅವರ ಚಿಂದಿಬಟ್ಟೆ ನೋಡಿ ಸ್ವಯಂ ಸೇವಕರು ಒಳಗೆ ಬಿಡಲಿಲ್ಲ. ಅವರು ಹೊರಗೆ ನಿಲ್ಲಬೇಕಾಯಿತು. ಆಗ ಅಲ್ಲಿಗೆ ಆಗಮಿಸಿದ ಖೇರ್ ಅವರು ‘‘ಈತ ಒಬ್ಬ ಮಹಾಪುರುಷ’’ ಎಂದು ಹೇಳಿ ಎಲ್ಲರಿಗೂ ಆಶ್ಚರ್ಯವನ್ನು ಉಂಟು ಮಾಡಿದರು. ಅನಂತರ ಬಾಬಾ ಅವರಿಗೆ ಒಳಗೆ ಹೋಗಲು ಅವಕಾಶ ಸಿಕ್ಕಿತು.

‘ಗಾಡಗೆ ಮಹಾರಾಜ್ ಮಿಷನ್’ ಎಂಬ ಹೆಸರಿನ ಅಡಿಯಲ್ಲಿ ಅನೇಕ ಸಂಸ್ಥೆಗಳು ಹುಟ್ಟಿಕೊಂಡವು. ಅವುಗಳಿಗೆ ಸಂಬಂಧಪಟ್ಟ ಕಾಗದ ಪತ್ರಗಳ ಮೇಲೆ ಬಾಬಾ ‘‘ಸ್ವತಃ ಗಾಡಗೆ ಬಾಬಾ, ಅವರ ಮಕ್ಕಳು ವಂಶಸ್ಥರು, ಜಾತಿಯವರು ಇವರು ಯಾರಿಗೂ ಈ ಸಂಸ್ಥೆಗಳ ಮೇಲೆ ನೂಲೆಳೆಯಷ್ಟು ಹಕ್ಕಿರುವುದಿಲ್ಲ. ಈ ಆಸ್ತಿಪಾಸ್ತಿಗಳೆಲ್ಲವೂ ಜನರಿಗೆ ಸೇರಿದ್ದು’’ ಎಂದು ಬರೆದಿಟ್ಟರು. ಅಲ್ಲದೆ ಎಲ್ಲವನ್ನೂ ವಿಶ್ವಸ್ತ ಮಂಡಳಿಗಳಿಗೆ ವಹಿಸಿ ತಾವು ಮಾತ್ರ ದೂರ ಉಳಿದರು.

ದಾದಾಸಾಹೇಬ ಠಾಕರೆ ಎಂಬ ಐತಿಹಾಸಿಕ ಲೇಖಕ ಬಾಬಾರವರ ಬಗ್ಗೆ ಚರಿತ್ರೆ ಬರೆಯಬೇಕೆಂದು ಬಯಸಿ ಅವರ ಅನುಮತಿ ಕೇಳಿದ. ಬಾಬಾ ಅಂದರು ‘‘ನನ್ನ ಚರಿತ್ರೆ ಏಕೆ ಬರೆಯಬೇಕು? ನಾನೇನೂ ದೊಡ್ಡವನಲ್ಲವಲ್ಲ! ಈ ಸಂಸ್ಥೆಗಳೆಲ್ಲ ಜನರಿಂದ ಹುಟ್ಟಿದವು. ಆದ್ದರಿಂದ ಜನರ ಮತ್ತು ಸಂಸ್ಥೆಗಳ ಬಗ್ಗೆ ಮಾತ್ರ ನೀವು ಚರಿತ್ರೆ ಬರೆಯಬಹುದು’’. ಗಾಡಗೆ ಬಾಬಾ ಎಂದೂ ಕೀರ್ತಿ ಅಥವಾ ಶಹಭಾಸಗಿರಿ ಬಯಸಿದವರಲ್ಲ.

ಬಾಬಾರ ಆಸ್ತಿ

ಬಾಬಾರವರು ಯಾವ ಶಿಷ್ಯರನ್ನು ಬಯಸದಿದ್ದರೂ, ಕ್ರಮೇಣ ಅವರ ಅನುಯಾಯಿಗಳ ಒಂದು ತಂಡವೇ ಅಸ್ತಿತ್ವಕ್ಕೆ ಬಂತು. ಜನರಿಗೆ ಅವರು ಅನೇಕ ರೀತಿಗಳಲ್ಲಿ ಸಹಾಯ ಮಾಡಲಾರಂಭಿಸಿದರು. ಅವರಲ್ಲಿ ಕುಶಾಬಾ ತನಪುರೆ ಮಹಾರಾಜ್ ಎಂಬುವವರು ಹಸಿದಿದ್ದ ಸಾವಿರಾರು ಜನರಿಗೆ ಅನ್ನ ಹಾಕಿದರು. ಕೈಕಾಡಿ ಮಹಾರಾಜ್ ಎಂಬ ಇನ್ನೊಬ್ಬರು ಗೋರಕ್ಷಣೆ ಮಾಡಿದರು. ಜಮೀನಿನಲ್ಲಿ ನಾವು ಬಿತ್ತಿದ್ದು ವರ್ಷಕ್ಕೆ ಆಗುವಷ್ಟು ಕಾಳು ಕೊಡುತ್ತದೆ. ಆದರೆ ಬಾಬಾ ಬಿತ್ತಿದ್ದು ನೂರಾರು ವರ್ಷ ಜನಗಳಿಗೆ ಮಾರ್ಗದರ್ಶನ ನೀಡುವಂತಿದೆ.

ವಾರ್ಧಾಕ್ಕೆ ಬಂದಿದ್ದಾಗ ಒಂದು ಬಾರಿ ಗಾಂಧೀಜಿ ಗಾಡಗೆ ಬಾಬಾರವರನ್ನು ಕೇಳಿದರು. ‘‘ಏನು ಬಾಬಾ ಅವರೆ, ನಿಮ್ಮ ಆಸ್ತಿ ಎಷ್ಟಿದೆ?’’ ‘‘ನನ್ನದೇನೂ ಆಸ್ತಿಯಿಲ್ಲವಲ್ಲ!’’ ಬಾಬಾ ಉತ್ತರಿಸಿದರು. ‘‘ಆದರೆ ನಿಮಗೆ ಸಾಕಷ್ಟು ಆಸ್ತಿ ಇದೆಯೆಂದು ಕೇಳಿದ್ದೇನೆ,’’ ಗಾಂಧೀಜಿ ಮತ್ತೆ ಕೇಳಿದರು. ಅದಕ್ಕೆ ಬಾಬಾ ಮರುನುಡಿದರು, ‘‘ನನ್ನದೆಂಬುದೇನೂ ಆಸ್ತಿ ಇಲ್ಲ. ಎಲ್ಲಾ ಜನಗಳದ್ದು. ನನ್ನದೇನಾದರೂ ಆಸ್ತಿ ಇದೆಯೆಂದರೆ ಈ ಗಾಡಗೆ, ಕೋಲು ಮತ್ತು ಹಾಸುಬಟ್ಟೆ ಅಷ್ಟೆ. ನಾನು ಸತ್ತ ಮೇಲೆ ಅವೂ ಜನರಿಗೆ ಸೇರುತ್ತವೆ.’’

ಬಾಬಾರವರಿಗೆ ಕೆಟ್ಟ ಚಟಗಳು ಹಿಡಿಸುತ್ತಿರಲಿಲ್ಲ. ಜನರಲ್ಲಿ ಧೂಮಪಾನ ಮಾಡುವುದು, ಎಲ್ಲೆಂದರಲ್ಲಿ ಮಲಗುವುದು ತಿನ್ನುವುದು ಇಂಥ ಕೆಟ್ಟ ಚಟಗಳು ಹೋಗುವವರೆಗೂ ಸಮಾಜದ ಏಳಿಗೆ ಸಾಧ್ಯವಿಲ್ಲ ಎಂದು ಅವರು ಆಗಾಗ್ಗೆ ಹೇಳುತ್ತಿದ್ದರು.

ಕಲಿಕೆಯೇ ದೇವರು

ಕರ್ಮವೀರ ಭಾವೂರಾವ್ ಎಂಬುವವರು ಮಹಾರಾಷ್ಟ್ರದ ಜನತೆಗೆಲ್ಲ ಜ್ಞಾನದೀಕ್ಷೆ ನೀಡಿದರು. ಬಹಳ ಕಷ್ಟಪಟ್ಟು ಜನರು ಶಿಕ್ಷಣವನ್ನು ಪಡೆಯುವಂತೆ ಪ್ರೇರೇಪಿಸಿದರು. ಭಾವೂರಾವ್ ಅವರ ಕೆಲಸದ ಬಗ್ಗೆ ಗಾಡಗೆ ಬಾಬಾ ತುಂಬಾ ಗೌರವ ವ್ಯಕ್ತಪಡಿಸುತ್ತಿದ್ದರು. ‘‘ನಮಗೆ ಅನ್ನ ಹೇಗೆ ಬೇಕೋ, ಹಾಗೆಯೆ ಭಾವೂರಾವ್‌ರವರಂಥ ಅನೇಕ ಕರ್ಮವೀರರಾದ ವ್ಯಕ್ತಿಗಳ ಆವಶ್ಯಕತೆಯಿದೆ. ಯಾತ್ರಿಕರಿಗಾಗಿ ನಾನು ಕೆಲವೆಡೆಯಲ್ಲಿ ಧರ್ಮಛತ್ರ ಕಟ್ಟಿಸಿದೆ. ಆದರೆ ಭಾವೂರಾವ್ ಜನರಿಗೆ ವಿದ್ಯಾಭ್ಯಾಸ ಕಲಿಸಲು ಹಳ್ಳಿಹಳ್ಳಿಯಲ್ಲೂ ಶಾಲೆಗಳನ್ನು ಕಟ್ಟಿಸಿದ್ದಾರೆ. ಇಂಥ ಕರ್ಮವೀರರ ಶಿಕ್ಷಣ ಕಾರ್ಯದಲ್ಲಿ ಸಹಾಯಮಾಡಿ. ಈ ಕೆಲಸಕ್ಕೆ ಸಹಾಯ ಮಾಡುವುದು ದೇವರ ಪೂಜೆಗೆ ಸಮ’’ ಎಂದು ಬಾಬಾ ಹೇಳುತ್ತಿದ್ದರು.

ಬಾಬಾರವರಿಂದ ಪ್ರೇರಣೆ ಪಡೆದು ಬಂಡೋ ಗೋಪಾಲ ಮುಕಾದಂ ಎಂಬಾತ ಭಾವೂರಾವ್ ನಡೆಸುತ್ತಿದ್ದ ಶಿಕ್ಷಣ ಪ್ರಸಾರ ಕಾರ್ಯದಲ್ಲಿ ಸಹಾಯ ಮಾಡಿದ. ರೈತ ಶಿಕ್ಷಣ ಸಂಸ್ಥೆಗೆಂದು ಹತ್ತು ಎಕರೆ ಜಮೀನು ದೊರೆಯಿತು. ಕುಸೂರು ಎಂಬಲ್ಲಿ ‘ಗಾಡಗೆ ಮಹಾರಾಜ್ ಹೈಸ್ಕೂಲ್’ ಹಾಗೂ ಕರಾಡ ಎಂಬಲ್ಲಿ ‘ಗಾಡಗೆ ಮಹಾರಾಜ್ ಮಹಾವಿದ್ಯಾಲಯ’ ಸಂಸ್ಥೆಗಳು ಪ್ರಾರಂಭವಾದವು.

ಗಾಡಗೆ ಬಾಬಾ ಸಮಯಕ್ಕೆ ತುಂಬಾ ಪ್ರಾಮುಖ್ಯ ಕೊಡುತ್ತಿದ್ದರು. ಕೆಲಸಮಾಡದೆ ಒಂದು ಕ್ಷಣ ಸಹ ಕಳೆಯಬಾರದು, ಏಕೆಂದರೆ ಕಳೆದು ಹೋದ ಕ್ಷಣ ಮತ್ತೆ ಬರುವುದಿಲ್ಲ ಎಂದು ಅವರು ಜನರಿಗೆ ತಿಳಿಯಹೇಳುತ್ತಿದ್ದರು. ಚೆನ್ನಾಗಿ ಓದುವವರನ್ನು, ಬರೆಯುವವರನ್ನು ಕಂಡರೆ ಅವರಿಗೆ ತುಂಬಾ ಅಕ್ಕರೆಯಿದ್ದಿತು. ಶಿಕ್ಷಣವಿಲ್ಲದೆ ಏಳಿಗೆ ಹೊಂದಲು ಬೇರೆ ಮಾರ್ಗವಿಲ್ಲ. ಶಿಕ್ಷಣವಿಲ್ಲದ ಮನುಷ್ಯ ಪ್ರಾಣಿಯಂತೆ ಎಂದು ಅವರ ಅಭಿಪ್ರಾಯವಾಗಿತ್ತು ಒಬ್ಬ ಗಂಡಸು ವಿದ್ಯೆ ಕಲಿತರೆ ಒಬ್ಬ ಏಳಿಗೆ ಹೊಂದಿದಂತೆ, ಆದರೆ ಒಬ್ಬ ಹೆಣ್ಣು ಮಗಳು ವಿದ್ಯೆ ಕಲಿತರೆ ಒಂದು ಇಡೀ ಕುಟುಂಬ ಏಳಿಗೆ ಹೊಂದಿದಂತೆ ಎನ್ನುತ್ತಿದ್ದ ಗಾಡಗೆ ಬಾಬಾ ಸ್ತ್ರೀ ಶಿಕ್ಷಣಕ್ಕೆ ತುಂಬಾ ಉತ್ತೇಜನ ಕೊಡುತ್ತಿದ್ದರು.

ಮುಂಬಯಿಯಲ್ಲಿ ಗಾಡಗೆ ಬಾಬಾರವರ ಕಡೆಯ ಕೀರ್ತನಸಭೆ ನಡೆದಿತ್ತು. ಬಾಬಾ ಜನರನ್ನು ಉದ್ದೇಶಿಸಿ ಅಂದರು ‘‘ದೇವರು ಎಲ್ಲಿದ್ದಾನೆ? ಪ್ರಪಂಚದಲ್ಲಿಯೇ ಇದ್ದಾನೆ. ಆದ್ದರಿಂದ ಪ್ರಪಂಚದಲ್ಲಿರುವ ಜನರ ಸೇವೆ ಮಾಡಿ. ಬಡವರನ್ನು ಕರುಣೆಯಿಂದ ನೋಡಿ.’’  ‘‘ಗೋಪಾಲ ಗೋಪಾಲಾ ದೇವಕೀ ನಂದನ ಗೋಪಾಲ’’ ಎಂಬುದು ಕಡೆಯಲ್ಲಿ ಬಾಬಾರವರಿಗೆ ತುಂಬಾ ಇಷ್ಟವಾದ ಸಾಲಾಗಿತ್ತು.

ಬದುಕಿನುದ್ದಕ್ಕೂ ಜನಸೇವೆಯೆ ಜನಾರ್ದನನ ಸೇವೆಯೆಂದು ಬಾಳಿದ ಗಾಡಗೆ ಬಾಬಾ ೧೯೫೬ ರ ಡಿಸೆಂಬರ್ ೨೦ ರಂದು ಸ್ವರ್ಗಸ್ಥರಾದರು. ಆದರೆ ಅವರು ಹಾಕಿಕೊಟ್ಟ ಆದರ್ಶಗಳು, ಮಾಡಿತೋರಿಸಿದ ಕೆಲಸಗಳು, ನೀಡಿದ ಉಪದೇಶಗಳು ಚಿರಕಾಲ ಉಳಿದಿರುತ್ತವೆ.

ಗಾಡಗೆ ಮಹಾರಾಜ್ ಅವರ ನೂರನೆಯ ಹುಟ್ಟುಹಬ್ಬ ಈಚೆಗೆ ವಿಜೃಂಭಣೆಯಿಂದ ನೆರವೇರಿತು. ‘‘ಶ್ರೀ ಸದ್ಗುರು ಗಾಡಗೆ ಮಹಾರಾಜ್ ಪ್ರತಿಷ್ಠಾನ’’ ಸ್ಥಾಪನೆಗೊಂಡು ಅದರ ಆಶ್ರಯದಲ್ಲಿ ಉತ್ತಮ ಕೆಲಸಗಳು ನಡೆಯಲಾರಂಭಿಸಿವೆ. ಮಹಾರಾಷ್ಟ್ರದ ಜನತೆಗೆ ಗಾಡಗೆ ಬಾಬಾರವರ ಬಗ್ಗೆ ತುಂಬಾ ಗೌರವ, ಭಕ್ತಿ ಮತ್ತು ಶ್ರದ್ಧೆ ಉಂಟು.