ತಲೆಮಾರಿನಿಂದ ತಲೆಮಾರಿಗೆ ಪರಂಪರಾಗತವಾಗಿ ಹರಿದು ಬಂದಿರುವ ಸಾಂದ್ರವೂ ಬೋಧಪರವೂ ಆದ ಸೂಕ್ತಿಯೇ ಗಾದೆ (ಪ್ರಾವರ್ಬ್). ಕನ್ನಡದಲ್ಲಿ ಗಾದೆ ಪದಕ್ಕೆ ಸಂವಾದಿಯಾಗಿ ನಾಣ್ಣುಡಿ ಎಂಬ ಪದವೂ ಪ್ರಚಲಿತವಿದೆ. ಗಾದೆ ಸಂಸ್ಕೃತದ ಗಾಥಾ ಪದದಿಂದ ಬಂದಿದ್ದೆಂದು ಹೇಳುತ್ತಾರೆ. ಇದು ಗಾಥಾ ಪದದ ನೇರ ತದ್ಭವವೊ ಅಥವಾ ಪ್ರಾಕೃತದ ಗಾಹೆಯ ಮೂಲಕ ಬಂದುದೊ ಹೇಳಲು ಇಷ್ಟ. ಆದರೆ ಗಾಥಾ ಎಂಬುದು ಮೂಲದಲ್ಲಿ ಒಂದು ಛಂದಸ್ಸಿನ ಜಾತಿಯನ್ನು ಸೂಚಿಸುತ್ತದೆಯೆಂದು ಮಾತ್ರ ಹೇಳಬಹುದು. ಅಂತು “ನಾಣ್ಣುಡಿ”ಯನ್ನು ಮರೆಸುವಷ್ಟರಮಟ್ಟಿಗೆ “ಗಾದೆ” ಪ್ರಚಾರದಲ್ಲಿದೆ. ಗಾದೆಗೆ ಸಂವಾದಿಯಾಗಿ ಸಾಮತಿ, ಸೂಕ್ತಿ, ಸೂತ್ರ, ಉದ್ಧರಣೆ, ಲೋಕೋಕ್ತಿ, ಪ್ರಾಚೀನೋಕ್ತಿ ಇತ್ಯಾದಿಗಳು ಬಳಕೆಯಾಗಿದ್ದರೂ ಮೂಲಾರ್ಥದಲ್ಲಿ ಇವೆಲ್ಲವೂ ಒಂದೇ ಎನ್ನಲಾಗುವುದಿಲ್ಲ.
ಜನಪದ ಸಾಹಿತ್ಯದ ಉಳಿದೆಲ್ಲ ಪ್ರಕಾರಗಳಿಗಿಂತ ಗಾದೆ ವ್ಯಾಪಕವೂ ಜನ ಸಂಮುಖವೂ ಆಗಿದೆಯಲ್ಲದೆ, ಜನಸಾಮಾನ್ಯರ ಬದುಕು ಭಾಷೆಗಳಲ್ಲಿ ಹಾಸು ಹೊಕ್ಕಾಗಿದೆ. ಗ್ರಾಮೀಣ ಜನ ಮಾತನಾಡುವಾಗಲೆಲ್ಲ ಗಾದೆಗಳು ಪುಂಖಾನು ಪುಂಖವಾಗಿ ಬರುವುದನ್ನು ಕಾಣುತ್ತೇವೆ. ಅವಿಲ್ಲದೆ ಹೋದರೆ ಮಾತು ಸಪ್ಪೆಯಾಗುತ್ತದೆ. ಲಾದ್ದರಿಂದಲೆ ಸಮಯಕ್ಕೆ ಸರಿಯಾಗಿ ಗಾದೆ ಬಾರದೆ ಹೋದರೆ, ಹಿಂದಕ್ಕೆ ಏನೋ ಗಾದೆ ಹೇಳಿದ ಹಾಗಾಯ್ತು ಎಂದು ಹೇಳುವುದರ ಮೂಲಕ ಅದರ ಅವಶ್ಯಕತೆಯನ್ನು ಒತ್ತಿ ಹೇಳುತ್ತಾರೆ. ಗಾದೆ ಆಡುಮಾತಿನ ಜೀವಸತ್ತ್ವ ಎಂಬುದನ್ನು ಇದು ತೋರಿಸಿಕೊಡುತ್ತದೆ. ಊಟಕ್ಕೆ ಉಪ್ಪಿನಕಾಯಿಯಂತೆ ಗಾದೆ ಮಾತಿಗೆ ವ್ಯಂಜನಶಕ್ತಿಯನ್ನು ಒದಗಿಸುತ್ತದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಯೇ ಗಾದೆಯ ಸ್ವರೂಪವನ್ನು ತಿಳಿಸುತ್ತದೆ. ಇದು ಆಕಾರದಲ್ಲಿ ವಾಮನವಾಗಿ ಅರ್ಥದಲ್ಲಿ ತ್ರಿವಿಕ್ರಮವೆನಿಸಿದೆ.
ಗಾದೆ ಜನಜೀವನದ ವ್ಯಾಪಕ ಸತ್ತ್ವ,. ತತ್ತ್ವ; ನೂರು ಭಾವದ ನೂರು ವಿಷಯದ ನೂರು ಅಭಿವ್ಯಕ್ತಿ. ಇಲ್ಲಿ ವ್ಯಕ್ತಗೊಂಡಿರುವ ಅನುಭವಜಗತ್ತು ಅನ್ಯಾದ್ಯಶವಾದುದು. ಹಾಗೆ ನೋಡಿದಾಗ ಇವುಗಳ ಕರ್ತಾರರನ್ನು ಅಸಂಸ್ಕೃತರೆನ್ನುವುದು ದೂರದ ಮಾತಾಗಿಯೇ ಉಳಿಯುತ್ತದೆ. ಗ್ರಾಮಜೀವನಕ್ಕೆ ಕಾಲಿರಿಸಿದ ಕೂಡಲೆ ಇಂಥ ಗಾದೆಗಳ ಬಿಸಿ ತಾಗುತ್ತದೆ. ಕೆಲವು ಬೆಳದಿಂಗಳಿನಂತೆ ತಂಪಾದರೆ, ಮತ್ತೆ ಕೆಲವು ಬಿಸಿಲಿನಂತೆ ಮೈ ಸುಡುತ್ತವೆ; ಬೆಂಕಿಯ ಕಿಡಿಗಳಂತೆ ಕೆಲವಾದರೆ, ಇಬ್ಬನಿಯಂಥವು ಮತ್ತೆ ಕೆಲವು; ಕೆಲವು ಮುತ್ತಿಕ್ಕಿದರೆ, ಮತ್ತೆ ಕೆಲವು ಮುತ್ತಿಗೆ ಹಾಕುತ್ತವೆ. ಇನ್ನು ಕೆಲವಂತೂ ಸಿಡಿಲಪೊಟ್ಟಣಗಳೇ ಸರಿ. ಇವಕ್ಕೆ ಅಪಮೌಲ್ಯದ ಭಯವಿಲ್ಲ, ಕೊಳೆಕಟ್ಟಿ ಮಾಸಿಹೋಗುತ್ತವೆ ಎಂಬ ಶಂಕೆಯಿಲ್ಲ. ಇವು ನೀರಸ ಕವಿಸಮಯಗಳಲ್ಲ, ವಿಚಾರದ ವಿಸ್ಫುಲಿಂಗಗಳು; ಸೂಕ್ತ ಸಂದರ್ಭಗಳಲ್ಲಿ ತಾಳಿದ ಯೋಗ್ಯ ನಿರ್ಣಯಗಳು.
ಗಾದೆ ಹಲವಾರು ಮಾತುಗಳ ಘಟಕ. ಆದ್ದರಿಂದಲೇ ಅದು ಸಾವಿರ ಮಾತಿನ ಸರದಾರ. ಅದು ಹಲವರ ಜ್ಞಾನ. ಒಬ್ಬನ ವಿವೇಕ ವ್ಯಾಖ್ಯಾನವನ್ನು ಅಪೇಕ್ಷಿಸುವ ಹೇಳಿಕೆ. ರಾಷ್ಟ್ರೀಯ ಮಣ್ಣಿನಲ್ಲಿ ಬೆಳೆದ ಬೆಳೆ. ಜರ್ಮನ್ ಗಾದೆಗಳ ಸಂಗ್ರಹಕಾರ ಇಸೆಲಿಯನ್ನನ ಪ್ರಕಾರ, ಗಾದೆಗಳೆಂದರೆ ಜನಸಾಮಾನ್ಯರಲ್ಲಿ ಚಲಾವಣೆಯಲ್ಲಿರುವ, ಸಾರ್ವಜನಿಕ ಮುದ್ರೆ ಬಿದ್ದಿರುವ, ಪ್ರಚಲಿತವೂ ಸ್ವೀಕೃತ ಮೌಲ್ಯಭರಿತವೂ ಆಗಿರುವ ನಾಣ್ಯ. ಎಸ್. ಜಿ. ಚಾಂಪಿಯನ್ ಎಂಬ ವಿದ್ವಾಂಸ ತನ್ನ ಜಾನಾಂಗಿಕ ಗಾದೆಗಳು ಎಂಬ ಬೃಹತ್ ಸಂಕಲನಕ್ಕೆ ಪ್ರಸ್ತಾವನೆ ಬರೆಯುತ್ತ ಹೀಗೆ ಹೇಳಿದ್ದಾನೆ: ನನ್ನ ಅಭಿಪ್ರಾಯದಲ್ಲಿ ಗಾದೆಯೆಂದರೆ, ಜನರ ಬಳಕೆಯಲ್ಲಿದ್ದು, ಈಗಲೂ ಇರುವ, ಉಪದೇಶಾತ್ಮಕ ಅಥವಾ ಸಲಹೆಯನ್ನು ನೀಡುವ, ನಿಜವಾದ ಅರ್ಥವನ್ನು ಮರೆಸಿ ಅಲಂಕಾರಿಕವಾಗಿ ವ್ಯಕ್ತವಾಗಿರುವ, ರೂಪಕ ಅಥವಾ ಗೂಢಾರ್ಥದ್ಯೋತಕವಾಗಿ ಕಾಣಿಸಿಕೊಳ್ಳುವ ಜನಾಂಗವೊಂದರ ಸೂಕ್ತಿ. ಇನ್ನೊಬ್ಬ ವಿದ್ವಾಂಸ ಜೆ. ಎ. ಕೆಲ್ಸೊ ಗಾದೆಗಳಲ್ಲಿ ನಾಲ್ಕು ಗುಣಗಳನ್ನು ಹೆಸರಿಸುತ್ತಾನೆ: ಸಂಕ್ಷಿಪ್ತತೆ, ವಿವೇಕ ಪೂರ್ಣತೆ, ತೀಕ್ಷ್ಣತೆ ಮತ್ತು ಜನಪ್ರಿಯತೆ. ಇವುಗಳ ಒಂದೊಂದರ ವಿವರಣೆ ಅಗತ್ಯವೆನಿಸುತ್ತದೆ.
ಗಾದೆ ಅವಶ್ಯ ಪದಗಳ ಮಿತವ್ಯಯವೇ ಸರಿ. ಅಲ್ಲದೆ ಗಾದೆಯಲ್ಲಿ ೨೦ ಪದಗಳಿಗಿಂತ ಹೆಚ್ಚು ಇರಬಾರದೆಂದು ವಿದ್ವಾಂಸರು ಹೇಳುತ್ತಾರೆ. ಯಾವ ಭಾಷೆ ಅವ್ಯಯ ಮತ್ತು ಪ್ರತ್ಯಯಗಳಲ್ಲಿ ಸಂಪದ್ಯುಕ್ತವಾಗಿರುತ್ತದೊ ಅದು ಗಾದೆ ನಿರ್ಮಾಣಗೊಳ್ಳುವಾಗಲೆ ಹೆಚ್ಚು ವಿಷಯಗಳನ್ನು ತನ್ನಲ್ಲಿ ಅಡಕಮಾಡಿಕೊಳ್ಳುತ್ತದೆ ಎಂದೂ ಒಂದು ಅಭಿಪ್ರಾಯವಿದೆ. ಗಾದೆ ಸಂಕ್ಷಿಪ್ತವಾಗಿರಬೇಕೆಂಬುದನ್ನು ಈ ಎಲ್ಲ ಮಾತುಗಳು ಸಮರ್ಥಿಸುತ್ತವೆ. ಆದರೆ ಕೆಲವು ಗಾದೆಗಳು ಸಹಜವಾಗಿ, ನೀಡಿದಾಗಿರುವುದರಿಂದ, ಸಂಕ್ಷಿಪ್ತತೆಗೆ ಇವನ್ನು ಅಪವಾದಗಳಾಗಿ ಪರಿಗಣಿಸಬೇಕಾಗುತ್ತದೆ. ಈ ದೀರ್ಘ ಗಾದೆಗಳು ಶಕ್ತ ನಿರೂಪಣೆ, ಸೂಚ್ಯ ಭಾವುಕತೆ, ಪ್ರಾದೇಶಿಕತೆಗಳಿಗೆ ಹೆಸರಾಗಿದ್ದರೂ ಅನುಭವ ಸಾಂದ್ರತೆಯಲ್ಲಿ ಚಿಕ್ಕ ಗಾದೆಗಳ ಹಾಗೆ ವರ್ಚಸ್ವಿಯಾಗಲಾರವೆಂದು ತೋರುತ್ತದೆ.
ಗಾದೆಯ ಮತ್ತೊಂದು ಅಂಶ ವಿವೇಕಪೂರ್ಣತೆ. ಗಾದೆ ಜನಪ್ರಿಯವಾಗಬೇಕಾದರೆ ಬಹಳ ಕಾಲ ಬಾಳಿಕೆ ಬರಬೇಕಾದರೆ ಕಡೆಯ ಪಕ್ಷ ಅದು ವಿವೇಕಯುತವಾಗಿ ಇರಬೇಕಾಗುತ್ತದೆ. ಆದರೂ ಒಂದು ವಿಷಯ ಉಳಿಯುತ್ತದೆ. ವಿವೇಕಯುತವಾದ ಇಂಥ ಕೆಲವು ಸೂಕ್ತಿಗಳು ಮಾತ್ರ ಗಾದೆಗಳಾಗಿ ಉಳಿದವು ಆಗಲಾರವು. ಮುಂದೆ ಅವು ಕಳೆದುಹೋಗಬಹುದು ಅಥವಾ ಸಾಂದರ್ಭಿಕ ಉದ್ಧರಣೆಗಳಾಗಿ ಉಳಿಯಬಹುದು. ಇದಕ್ಕೆ ಕಾರಣ ಭಾಗಶಃ ಸಾಂದ್ರತೆ; ಇದರಿಂದಾಗಿಯೇ ಗಾದೆ ಸಾರ್ವಜನಿಕರ ಸ್ವೀಕಾರಾರ್ಹತೆಯನ್ನು ಪಡೆದುಕೊಂಡಿರುವುದು.
ಗಾದೆ ತೀವ್ರಾನುಭವದ ಪರಿಣಾಮಕಾರಿ ಅಭಿವ್ಯಕ್ತಿಯಾಗಿರುವುದೇ ಅದರ ತೀಕ್ಷಣತೆ. ಸೂಕ್ಷ್ಮಸಂವೇದನಾಶೀಲತೆಯೇ ಇದಕ್ಕೆ ಕಾರಣ. ಒಮ್ಮೆಗೇ ನಮ್ಮ ಹೃದಯವನ್ನು ಆಕ್ರಮಿಸುವ ಸಾಮರ್ಥ್ಯ ಅದರದು. ಯಾವುದೇ ವಿಷಯವನ್ನು ಮನಮುಟ್ಟವಂತೆ ಹೇಳುವ ಸ್ವಭಾವ ಅದರದು. ಗಾದೆಯ ಮತ್ತೊಂದು ಮಹತ್ತ್ವದ ಲಕ್ಷಣ ಜನಪ್ರಿಯತೆ. ನಿಜವಾದ ಅರ್ಥದಲ್ಲಿ ಅದು ಜನತೆಯದಾಗಿರಬೇಕೆಂಬುದೇ ಇದರ ತಾತ್ಪರ‍್ಯ. ಒಟ್ಟಿನಲ್ಲಿ ಗಾದೆಗಳು ಚಿಕ್ಕವು. ಪ್ರಸಕ್ತ ವಿಷಯಕ್ಕೆ ಮಾತ್ರ ಸಂಬಂಧಿಸಿದವು. ರಚನೆಯಲ್ಲಿ ಒಪ್ಪವಾದವು, ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರುವಂಥವು.
ಗಾದೆಗಳಿಗೆ ಕೆಲವು ನಿರ್ದಿಷ್ಟ ಶೈಲಿಯ ತಂತ್ರಗಳಿವೆ: ಛಂದೋಬದ್ಧತೆ, ಪ್ರಾಸಾನುಪ್ರಾಸ, ಯಮಕ, ಪುನರಾವೃತ್ತಿ, ನಾಟಕೀಯತೆ, ಅಲಂಕಾರ ಮುಮತಾದವು ಅವುಗಳಲ್ಲಿ ಕೆಲವು. ಇವುಗಳ ಯೋಜಿತ ಅಭಿವ್ಯಕ್ತಿಯೇ ಗಾದೆ. ಸುಲಭವಾಗಿ ನೆನಪರಿಸಿಕೊಳ್ಳುವುದಕ್ಕೆ ಇವು ನೆರವಾಗುತ್ತವೆ. ಇದಕ್ಕೆ ಯಾವುದೇ ಗಾದೆ ನಿದರ್ಶನವಾಗಬಲ್ಲುದು. ಇಂಥ ಗಾದೆಗಳಲ್ಲಿ ಅತ್ಯುಕ್ತಿ ಮತ್ತು ವಿರೋಧಾಭಾಸಗಳೆರಡೂ ದೊಡ್ಡ ಲಕ್ಷಣಗಳು. ಇಲ್ಲಿ ಅತ್ಯುಕ್ತಿಯೆಂದರೆ ಅತಿಶಯವಾದ ಮಾತೆಂದು ಅರ್ಥ ಮಾಡಿಕೊಳ್ಳಬೇಕು. ಧ್ವನಿ ಮಾರ್ಗವನ್ನು ಇದು ಸೂಚಿಸುತ್ತದೆ.
ಗಾದೆಯ ಒಂದು ವಿಶೇಷ ಲಕ್ಷಣ ಸಮತೋಲನ. ಇದು ಗಾದಯ ಸಹಜ ಗುಣವೆಂದು ತೋರುತ್ತದೆ. ಉದಾಹರಣೆಗೆ: ನಾಳೆ ನೋಡು ನಮ್ಮ ರಂಗನ ಮೋಟ, ತೆಗೆದು ನೋಡು ನಮ್ಮ ಅಮ್ಮಿಯ ಮುಸುಕ, ಆದಷ್ಟೇ ಆರಂಭ, ಹೂದಷ್ಟೇ ಮಳೆಗಾಲ-ಇತ್ಯಾದಿ. ಇಲ್ಲಿ ಎರಡು ಸಮಭಾಗಗಳು ಕಾಣಿಸಿಕೊಳ್ಳುತ್ತವೆ. ಪೂರ್ವೋತ್ತರ ಭಾಗಗಳೆರಡೂ ಛಂದಸ್ಸಿನಲ್ಲಿ, ಕಡೆಗೆ ಅಕ್ಷರಗಳ ಸಂಖ್ಯೆಯಲ್ಲಿ ಸಮನಾಗಿ ಬಂದಿವೆ. ಸಮತೋಲನ ಚಿಕ್ಕ ಗಾದೆಗಳಲ್ಲಿ ಕಾಣಬರುವಂತೆ, ತೀರ ದೀರ್ಘ ಗಾದೆಗಳಲ್ಲಿ ಕಾಣಬರದು. ಇಷ್ಟಕ್ಕೂ ಚಿಕ್ಕ ಗಾದೆಗಳೇ ಅತ್ಯುತ್ತಮ ಗಾದೆಗಳೆಂದು ಹೆಸರಾಗಿವೆ.
ಗಾದೆಗಳಲ್ಲಿ ಹಾಸ್ಯ ಮತ್ತು ವಿಡಂಬನೆಗಳೂ ಬರುತ್ತವೆ. ಇವೆರಡೂ ಕೆಲವೊಮ್ಮೆ ಒಂದಾಗಿಯೂ ಕೆಲವೊಮ್ಮೆ ಬೇರೆ ಬೇರೆಯಾಗಿಯೂ ಬರುತ್ತವೆ. ಉದಾಹರಣೆಗೆ: ಮೋಜು ಬಂದಾದೆ ಮೊಗ ಕ್ವಾರೆ ಅಂದ, ನನ್ಗೂ ಮೋಜು ಬಂದಾದೆ ಕದಿನ ಮೂಲ್ಗೆ ಬಿಸ್ಹಾಕಿ ಅಂದ್ಲು. ಯಾವುದೇ ಮರ್ಮವಿಲ್ಲದೆ ನಗಿಸಬಲ್ಲ ಗಾದೆ ಇದು. ಇಂಥ ಹಾಸ್ಯ ಚಿತ್ರಗಳಲ್ಲಿ ಸಂಭಾಷಣೆಯೊಂದು ವಿಶೇಷ. ಮತ್ತೊಂದು ಗಾದೆ; ದುಡುವಂತೆ ಧೂಪ ಹಾಕಿದ್ರೆ, ಗುಡಿಕಲ್ಲೆಲ್ಲ ದಡಾರ್ ಅಂದೊ-ಇಲ್ಲಿಯ ವಿಡಂಬನೆ ಅತ್ಯಂತ ಮೊನಚಾದುದು. ಕೆಲವೊಮ್ಮೆ ತಿಳಿಹಾಸ್ಯದಲ್ಲಿಯೇ ವಿಡಂಬನೆ ಮೈ ತಾಳಬಲ್ಲುದು. ಸಾಯ್ತಿನಿ ಸಾಯ್ತಿನಿ ಅಂತ, ಸಾವಿರ ಕೋಳಿ ತಿಂದನಂತೆ. ಸಮಾಜವನ್ನು ಪ್ರತಿಬಿಂಬಿಸುವುದರಲ್ಲಿ ಗಾದೆಗಳ ಪ್ರಾಮುಖ್ಯ ಇದೆ. ಜನಪದ ತನ್ನ ಸುತ್ತಮುತ್ತಲ ಸಾಮಗ್ರಿಯನ್ನು ದೃಷ್ಟಾಂತ ರೂಪಕಗಳನ್ನಾಗಿ ಮಾಡಿಕೊಳ್ಳುತ್ತದೆ. ಅನುಭವದ ಪ್ರಾಮಾಣಿಕತೆಗೆ ಕಾವ್ಯತೆಯ ಸೂಕ್ಷ್ಮದೃಷ್ಟಿಯನ್ನು ತೊಡಿಸುತ್ತದೆ.

ಸಾಮಾನ್ಯವಾಗಿ ಬಳಕೆಯಲ್ಲಿರುವ ಬಹುತೇಕ ಗಾದೆಗಳು ದೈನಂದಿನ ಜೀವನದಿಂದ ತೆಗೆದುಕೊಂಡ ಅಥವಾ ಪ್ರಕೃತಿ ಪರಿಶೀಲನದಿಂದ ಎತ್ತಿಕೊಂಡ ರೂಪಕಗಳು ಅಥವಾ ಅನುಭವದ ಘನೀಕರಣಗಳು. ಕೆಲವು ಗಾದೆಗಳು ಕೌಟುಂಬಿಕ ಕಸುಬುಗಳಿಗೆ ಸಂಬಂಧಿಸಿದ ಆಧಾರಗಳನ್ನು ಒದಗಿಸುತ್ತವೆ. ಸ್ವೀಕೃತ ನಂಬಿಕೆಯೊಂದು ಗಾದೆಯಾಗಿ ವ್ಯಕ್ತವಾಗಿರಬಹುದು. ಉದಾ: ಸೀಟಗಾಲಿ ಇದ್ದ ಮನೆ ಹಾಳು, ದಾಟಗಾಲ ಇದ್ದ ತೋಟ ಹಾಳು, ಗಾದೆಯೊಂದು ಒಗಟಾಗುವ ಸಾಧ್ಯತೆಯೂ ಉಂಟು. ಉದಾ: ಚಿಕ್ಕಕ್ಕನಿಗೆ ಪುಕ್ಕುದ್ದ. ಕೆಲವು ಗಾದೆಗಳು ಕಥೆಗಳ ಬಾಲಗಳಾಗಿರುತ್ತವೆ. ಉದಾ: ದಪ್ಪ ತರ ದಾ, ಆದಂಗಾಯ್ತು ಚೂ, ಅನ್ಯೋಕ್ತಿಯನ್ನು ಹೋಲುವಂಥ ಗಾದೆಗಳು ವಿರಳ.
ಕೆಲವು ಗಾದೆಗಳು ಪೌರಾಣಿಕ ವಿಷಯವನ್ನು ಆಧರಿಸಿ ರಚನೆಯಾಗಿರುತ್ತವೆ. ಉದಾಹರಣೆಗೆ, ಪಕ್ಷ ಪಾಂಡವರಲ್ಲಿ, ಊಟ ಕೌರವರಲ್ಲಿ; ಅಂತು ಇಂತು ಕುಂತಿಯ ಮಕ್ಕಳಿಗೆ ರಾಜ್ಯವಿಲ್ಲ-ಇತ್ಯಾದಿ. ಚಾರಿತ್ರಿಕ ಸಂದರ್ಭಗಳನ್ನು ಕುರಿತ ಗಾದೆಗಳೂ ಪ್ರಚಲಿತವಾಗಿವೆ. ಉದಾ: ಕೃಷ್ಣರಾಯ ಭೂಪ, ಮನೆಮನೆಗೆ ದೀಪ. ಕಾನೂನಿನ ಗಾದೆಗಳು ಕಾನೂನು ತತ್ತ್ವದ ಸಂಕ್ಷಿಪ್ತ ಹೇಳಿಕೆಗಳು. ವೈದ್ಯಕೀಯ ಗಾದೆಗಳು ಇನ್ನೊಂದು ಬಗೆಯವು. ಆರೋಗ್ಯವನ್ನು ಕುರಿತಾದ ಹಳೆಯ ನಿಯಮಗಳನ್ನು ಇವು ಹೇಳುತ್ತವೆ. ಹವಾಮಾನದ ಗಾದೆಗಳೂ ಸಾಂಪ್ರದಾಯಿಕವಾಗಿ ಬಂದಿವೆ. ಇವು ಋತುಮಾನಗಳ ವಿಷಯವನ್ನು ವ್ಯವಸಾಲಯ ವಿಷಯವನ್ನೂ ಕುರಿತು ಹೇಳುತ್ತವೆ. ಉದಾಹರಣೆಗೆ: ಅಶ್ವೀಜದಲ್ಲಿ ಹೊನ್ನು ಕರಗುವ ಬಿಸಿಲು, ಮಣ್ಣು ಕರಗುವ ಮಳೆ; ಅತ್ತದ ಮಳೆ ಎತ್ತಲಿಂದಾದರೂ ಬರುತ್ತದೆ; ರೋಹಿಣಿ ಮಳೆಯಲ್ಲಿ ಓಣಿಯೆಲ್ಲ ಜೋಳ, ಗೌರಿ ಹೊತ್ತಿಗೆ ಗಡಿಗೆ ಮುಳುಗಬೇಕು, ಇತ್ಯಾದಿ.
ಕೆಲವು ಸಾರಿ ಹೋಲಿಕೆಗಳೂ ಗಾದೆಗಳಾಗಬಹುದು. ಆದರೆ ಈ ಬಗೆಯ ಗಾದೆಗಳು ಕ್ರಮೇಣ ಜನಪ್ರಿಯತೆಯನ್ನು ಕಳೆದುಕೊಂಡು ಬಳಕೆಯಿಂದ ತಪ್ಪಿ ಹೋಗುವ ಸಾಧ್ಯತೆ ಇದೆ. ಸಂಪ್ರದಾಯದಲ್ಲಿ ಮತ್ತು ಸಾಹಿತ್ಯದಲ್ಲಿ ಕಂಡು ಬರುವ ಅನೇಕ ಮಾತುಗಾರಿಕೆಗಳು ಗಾದೆಗಳಿಗೆ ಸಂಬಂಧಿಸಿವೆ. ಕೆಲವೊಮ್ಮೆ ಗಾದೆಗಳು ಮೊದಲೇ ಇದ್ದ ಮಾದರಿಗಳ ಮೇಲೆ ರಚಿತವಾಗಿರುತ್ತವೆ. ಗಾದೆಯ ಇನ್ನೊಂದು ವರ್ಗ ಕ್ಷೀಷೆಗಳು ಅಥವಾ ಚರ್ವಿತಚರ್ವಣಗಳು. ಇವು ಪೂರ್ಣ ವಾಕ್ಯವಾಗಿರುವುದಕ್ಕಿಂತ ಹೆಚ್ಚಾಗಿ ವಾಕ್ಯಾಂಗಗಳಾಗಿರುತ್ತವೆ. ವಂಶಲಾಂಛನಗಳನ್ನು ಕುರಿತ ಗಾದೆಗಳು ಮತ್ತೊಂದು ಬಗೆಯವು. ಇವು ಜನರ ಮತ್ತು ಸ್ಥಳಗಳ ಗುಣವಿವರಣೆ ಮಾಡುವ ಹೆಸರುಗಳು, ನುಡಿಗಟ್ಟುಗಳು.
ಗಾದೆಗಳ ಒಂದು ವಿಶೇಷತೆಯೆಂದರೆ, ಅವು ಆಧ್ಯಾತ್ಮಿಕ ಭೂಮಿಕೆಗೆ ಪ್ರವೇಶಿಸದೆ ಇರುವುದು. ಧರ್ಮಬೋಧಕರ ಪ್ರವಚನಗಳಾಗಲಿ, ಉಪದೇಶಗಳಾಗಲಿ ಗಾದೆಗಳಾಗಿ ಪರಿವರ್ತಿತವಾಗುವುದಿಲ್ಲ. ಇವು ನೀತಿಯನ್ನೇನೊ ಹೇಳುತ್ತವೆ ನಿಜ; ಆದರೆ, ಧಾರ್ಮಿಕ ಸಿದ್ಧಾಂತಗಳನ್ನಾಗಲಿ, ವೇದಾಂತಪರ ವಿಚಾರಗಳನ್ನಾಗಲಿ ಒಳಗೊಂಡಿರುವುದಿಲ್ಲ. ಲಾದರೆ ಜನತೆ ಯಾವುದನ್ನು ಸತ್ಯವೆಂದು ಗೌರವಿಸಿದೆಯೊ ಅದಕ್ಕೆ ಸೂಚಿಯಾಗಿವೆ; ಲೋಕದಿಂದ ಪಡೆದುಕೊಂಡ ಅನುಭವದ ಒಟ್ಟು ಮೊತ್ತವಾಗಿವೆ.
ಈಗ ಗಾದೆಗಳ ಸಾಮ್ಯ ಮತ್ತು ಸಾರ್ವತ್ರಿಕತೆ. ಸಮಾನ ಗಾದೆಗಳು ಜಗತ್ತಿನ ಎಲ್ಲ ಭಾಷೆಗಳಲ್ಲಿಯೂ ಕಾಣಸಿಗುತ್ತವೆ. ಭಾಷೆ ಬೇರೆಯಾದರೂ ಭಾಷಿತ ಒಂದೇ. ಇದಕ್ಕೆ ಕಾರಣವನ್ನು ಹುಡುಕುತ್ತ ಕೆಲವರು, ಅವನ್ನು ಅಂತರರಾಷ್ಟ್ರೀಯ ಅಲೆಮಾರಿ ಎಂದು ಕರೆದರು. ಗಾದೆಗಳು ಪ್ರಯಾಣ ಮಾಡುತ್ತವೆ ಎಂಬುದು ಇದರ ಅರ್ಥ. ಗಾದೆಗಳ ದೇಶಾತೀತ ಆಷಾತೀತ ಲಕ್ಷಣಕ್ಕೆ ಈ ವಿವರಣೆ ಸಮಂಜಸವೆಂದು ತೋರಲಾರದು. ಮೂಲಭೂತವಾಗಿ ಮಾನವರೆಲ್ಲ ಒಂದೇ ರೀತಿ ಆಲೋಚಿಸುತ್ತಾರೆಂಬುದು ಇದಕ್ಕೆ ಕಾರಣವಿರಬೇಕೆಂದು ತೋರುತ್ತದೆ. ಮೂಲಪ್ರವೃತ್ತಿಗಳಾದ ಪ್ರೀತಿ, ಹಸಿವು, ಭಯಗಳು ಅಸಂಸ್ಕೃತ ಸುಸಂಸ್ಕೃತರೆನ್ನದೆ ಸಮಾನವಾಗಿರುವ ವಿಷಯಗಳು-ಈ ಪ್ರವೃತ್ತಿಗಳನ್ನು ನಾಗರಿಕತೆಗಳಾಗಲಿ, ವಾತಾವರಣಗಳಾಗಲಿ ನಿವಾರಿಸಲಾರವು. ಮಾರ್ಪಡಿಸಲಾರವು. ಆದ್ದರಿಂದ ಗಾದೆಯ ಜ್ಞಾನ ಜಗತ್ತಿನಲ್ಲೆಲ್ಲ ಒಂದೆಯೇ. ಭಿನ್ನತೆಯೇನಿದ್ದರೂ ಅದರ ಪ್ರಕಟಣೆಯಲ್ಲಿ. ಹೀಗೆ ಗಾದಯ ಸಾಮ್ಯತೆ ಮತ್ತು ಸಾರ್ವತ್ರಿಕತೆಗೆ ಸ್ವತಂತ್ರ ಮೂಲ ಸಿದ್ಧಾಂತವನ್ನು ಕಾರಣವಾಗಿಕೊಡಬಹುದು. ಇಷ್ಟಾದರೂ ಗಾದೆಗಳನ್ನು ಸ್ವೀಕರಣ ಮಾಡಿಕೊಂಡಿರುವ ಉದಾಹರಣೆಗಳನ್ನು ತೆಗೆದು ಹಾಕುವಂತಿಲ್ಲ. ದೇಶಗಳ ಆಕ್ರಮಣ, ಅಂತರ್ಜಾತಿ ವಿವಾಹ, ರಾಜಕೀಯ ಸಾಂಸ್ಕೃತಿಕ ಸಂಬಂಧ ಮೊದಲಾದವುಗಳಿಂದ ಗಾದೆ ದೇಶದಿಂದ ದೇಶಕ್ಕೆ ಹೋಗಿರಲು ಸಾಧ್ಯವಿದೆ.
ಗಾದೆಯ ಉಗಮವನ್ನು ಕುರಿತು ನಿರ್ದಿಷ್ಟವಾಗಿ ಹೇಳಲಾಗದು. ಇದು ಜನಪದ ಸಂಸ್ಕೃತಿಯಲ್ಲಿ ಹುಟ್ಟಿ ಬೆಳೆದುದು. ಸಮಾಜದಷ್ಟು ಹಳೆಯದು. ಒಂದು ಕಡೆ ಗಾದೆ ಯಾರೊಬ್ಬ ಜನ್ಮದಾತನೂ ಇಲ್ಲದೆ ಕ್ರಮೇಣ ಜನತೆಯ ನಡುವೆ. ಜನತೆಯದಾಗಿ ವಿಕಾಸವಾದುದಾಗಿರಬೇಕು. ಇನ್ನೊಂದು ಕಡೆ, ಸುತ್ತ ಮುತ್ತಲ ಜಗತ್ತಿನೊಡನೆ ಸಂಪರ್ಕ ಕಲ್ಪಸಿಕೊಳ್ಳುವಾಗ ಸಂದರ್ಭ ಸೂತ್ರವಾಗಿ ಬುದ್ಧಿವಂತನೊಬ್ಬನಿಂದ ಜಿಗಿದಿರಬೇಕು. ಹಲವರ ಅನ್ನಿಸಿಕೆ ಜ್ಞಾನಾನುಭವಗಳು ಒಬ್ಬನ ಸೃಷ್ಟಿವಿವೇಕದಲ್ಲಿ ಮೂಡಿ ಗಾದೆಯಾಯಿತು. ಆದರೆ ಸಂಪ್ರದಾಯ ಇದನ್ನು ಕೈಗೆತ್ತಿಕೊಳ್ಳುವ ತನಕ ಇದು ಕೇವಲ ವಸ್ತುಸ್ಥಿತಿಯೊಂದರ ಸೂತ್ರಮಯ ಹೇಳಿಕೆಯಾಗಿತ್ತು ಅಥವಾ ಬೋಧಪ್ರದ ದೃಷ್ಟಾಂತವಾಗಿತ್ತು ಸಂಪ್ರದಾಯ ಸ್ವೀಕರಿಸಿದಾಗ, ಅನುಕರಿಸಲಾಗದ ರೀತಿಯಲ್ಲಿ ಅದನ್ನು ಹೊಂದಿಸಿಕೊಂಡಿತು. ಮಾರ್ಪಡಿಸಿಕೊಂಡಿತು. ಆದ್ದರಿಂದ ಸೃಷ್ಟಿ ಮತ್ತು ಸ್ವೀಕಾರಗಳೆರಡೂ ಗಾದೆಯೊಂದು ರೂಪ ತಾಳುವುದಕ್ಕೆ ಅವಶ್ಯಾಂಶಗಳಾಗುತ್ತವೆ. ಈ ಕ್ರಿಯೆಯಲ್ಲಿ ಮೂಲ ಮರೆತುಹೋಗುತ್ತದೆ. ಒಂದೇ ವಸ್ತು ಹಾಗೂ ಒಂದೇ ಸೂತ್ರರೂಪ ಒಬ್ಬನಿಗಿಂತ ಹೆಚ್ಚಿನವರಲ್ಲಿ ದೊರೆಯುವುದರಿಂದ, ಗಾದೆಗಳ ಮೂಲ ತೊಡಕಾಗಿದೆ. ಆದ್ದರಿಂದ ವೈಯಕ್ತಿಕತೆಯನ್ನು ಒಟ್ಟುಗೂಡಿಸಿಕೊಂಡ ಸಾಮೂಹಿಕ ಸೃಷ್ಟಿ ಇದೆಂದು ಹೇಳಬಹುದಾಗಿದೆ. ಹೀಗೆ ಗಾದೆ ಸಮಷ್ಟಿಯ ಸ್ವತ್ತಾದ ಮೇಲೆ, ಅದು ಬಾಯಿಂದ ಬಾಯಿಗೆ, ತಲೆಮಾರಿನಿಂದ ತಲೆಮಾರಿಗೆ ಬೆಳೆಯಿತು. ಉಳಿಯಿತು. ಈ ರೀತಿ ಪ್ರಯಾಣ ಮಾಡುವಾಗ ಗಾದೆ ಹರಿತವಾಯಿತು, ರೂಪಾಂತರಗಳನ್ನು ಪಡೆಯಿತು. ಸಾರ್ವತ್ರಿಕ ಜನಪ್ರಿಯತೆಯ ಮುದ್ರೆಯೊಂದು ಅದರ ಮೇಲೆ ಬಿತ್ತು.
ಗಾದೆಗಳು ವ್ಯಕ್ರಿಯೊಬ್ಬನಿಂದ ರಚಿತವಾಗಿದ್ದು, ಅವನ ಆಲೋಚನೆಗಳು ಬರೆವಣಿಗೆಯಲ್ಲಿ ದೊರೆತರೆ, ಆಗ ಕೆಲವೇಳೆ ಮೂಲವನ್ನು ಹುಡುಕಲು ಸಾಧ್ಯವಾಗುತ್ತದೆ. ಬೈಬಲ್, ವೇದ, ಉಪನಿಷತ್ತು, ಧಮ್ಮಪದ ಮುಂತಾದ ಧಾರ್ಮಿಕ ಗ್ರಂಥಗಳಲ್ಲಿ, ಮಹಾ ಕವಿಗಳ ಕಾವ್ಯಗಳಲ್ಲಿ ಇವು ಕಾಣಬರುವುದಾದರೂ ಸಾಹಿತ್ಯಿಕ ದಾಖಲೆಗೆ ಇಳಿಯುವ ಮುನ್ನ ಇವು ವಾಕ್ ಸಂಪ್ರದಾಯದಲ್ಲಿರಲಿಲ್ಲವೆಂದು ಹೇಳಲು ಹೇಗೆ ಸಾಧ್ಯ. ಆ ಕಾಲದಲ್ಲಿ ಪ್ರಚಲಿತವಿದ್ದ ಗಾದೆಗಳು ಹಲಕೆಲವು ಮಾರ್ಪಾಡುಗಳೊಡನೆ ಸಾಹಿತ್ಯದಲ್ಲಿ ಸೇರಿಕೊಂಡಿರಬಹುದು. ಯಾವುದೇ ಸಂದರ್ಭದಲ್ಲಿ ಜನಪ್ರಿಯ ಹಾಗೂ ಸಾಹಿತ್ಯಿಕ ಮೂಲಗಳೆರಡೂ ಬೆಳವಣಿಗೆಯ ಹಂತಗಳಲ್ಲಿ ಬೆರೆಯುತ್ತವೆ. ಇದರಿಂದಾಗಿ ಗಾದೆಯೊಂದರ ನಿರ್ದಿಷ್ಟಕರ್ತೃತ್ವ ಗೊತ್ತಾಗುವುದಿಲ್ಲ.
ಗಾದೆಗಳ ಅಸ್ತಿತ್ವ ಮತ್ತು ಉಪಯೋಗ ಪ್ರಾಚೀನ ಕಾಲದಿಂದಲೂ ಕಾಣಬರುತ್ತದೆ. ಪ್ರಾಚೀನ ಸಾಹಿತ್ಯ ಗ್ರಂಥಗಳಲ್ಲಿ, ಧರ್ಮಗ್ರಂಥಗಳಲ್ಲಿ, ಚರಿತ್ರ ಲೇಖನಗಳಲ್ಲಿ ಇವು ದೊರೆಯುತ್ತವೆ. ಬರೆದಿರಿಸಿದ ನ್ಯಾಯಶಾಸ್ತ್ರಗಳಿಲ್ಲದ ಜನತೆಗಳಲ್ಲಿಕ ಅದರ ವ್ಯಾಜ್ಯಗಳ ಮೇಲೆ ಪರಿಣಾಮವನ್ನುಂಟುಮಾಡುವಂತೆ ಗಾದೆಗಳನ್ನು ಉದಾಹರಿಸಲಾಗುತ್ತದೆ. ಸಂದರ್ಭೋಚಿತವಾಗಿ ಉಪಯೋಗಿಸಿದ ಗಾದೆಲಯೊಂದು ನ್ಯಾಯವೊಂದರ ತೀರ್ಮಾನಕ್ಕೆ ಕಾರಣವಾಗಬಹುದು ಅಥವಾ ಪ್ರಮುಖ ನಿರ್ಣಯವೊಂದಕ್ಕೆ ನೆರವಾವಾಗಬಹುದು. ಕೆಲವು ಆಫ್ರಿಕನ್ ಸಮಾಜಗಳಲ್ಲಿ ನಿರ್ಣಯ ಕೈಗೊಳ್ಳುವಾಗ ಜನ ಸಾಂಪ್ರದಾಯಿಕವಾಗಿ ಗಾದೆಗಳನ್ನು ಪಠಿಸುತ್ತಾರಂತೆ.
ಭಾರತೀಯ ವೈದಿಕ ಬರಹಗಳು ತತ್ತಶಾಸ್ತ್ರೀಯ ಭಾವನೆಗಳನ್ನು ಪ್ರತಿಪಾದಿಸಲು ಗಾದೆಗಳನ್ನು ಬಳಸುತ್ತಿದ್ದವು. ಪ್ರಾಚೀನ ಚೀನದಲ್ಲಿ ನೈತಿಕ ಶಿಕ್ಷಣಕ್ಕಾಗಿ ಗಾದೆಗಳನ್ನು ಉಪಯೋಗಿಸುತ್ತಿದ್ದರು. ಇಂಗ್ಲೆಂಡಿನಲ್ಲಿ ಲ್ಯಾಟಿನ್ ಬೋಧಿಸಲು ಗಾದೆಗಳನ್ನು ಬಳಸುತ್ತಿದ್ದರು. ಭಾಷಣಕಲೆಯಲ್ಲಿ ಮಾತಿಗೆ ಅಲಂಕಾರ ಕಟ್ಟಲು ಗಾದೆಗಳನ್ನೂ ಬಳಸುವುದುಂಟು. ಮಧ್ಯಕಾಲೀನ ಪಠ್ಯಗಳು ಮತ್ತು ಅರಿಸ್ಟಾಟಲ್ ಇದಕ್ಕೆ ನಿದರ್ಶನ. ಗಾದೆಗಳಲ್ಲಿ ಸಂವಾದವನ್ನು ಬರೆದವರಿದ್ದಾರೆ. ಸಾನೆಟ್ಟನ್ನು ರಚಿಸದವರಿದ್ದಾರೆ. ಹದಿನಾರನೆಯ ಶತಮಾನದಲ್ಲಿ ಇಂಗ್ಲೆಂಡಿನ ಪ್ರಜಾಪ್ರತಿನಿಧಿ ಸಭಯಲ್ಲಿ ಗಾದೆಯ ಭಾಷಣವೊಂದು ನಡೆದಿತ್ತಂತೆ. ಗಾದೆಗಳನ್ನು ಶಿರೋನಾಮೆಗಳಾಗಿ, ಆಡುಭಾಷೆಯ ವಾತಾವರಣವನ್ನು ಕೊಡುವುದಕ್ಕಾಗಿ ಬಳಸಲಾಗಿದೆ. ಹೀಗೆ ಹಲವು ರೀತಿಯಲ್ಲಿ ಗಾದೆಗಳ ಉಪಯೋಗ ಆಗಿದೆ.
ಗಾದೆ ಜ್ಞಾನದ ಅನಂತ ಆಕಾಶವನ್ನು ನಿಂತಲ್ಲಿಯೇ ನೋಡಬಲ್ಲ ನೀತಿ ನಿರ್ಣಯಗಳ ದೂರದರ್ಶಕ. ಇದರಲ್ಲಿ ಎದ್ದುಕಾಣುವುದು ಜನಸಾಮಾನ್ಯರ ಸಾಮಾನ್ಯ ಜ್ಞಾನ. ಜೀವನದ ನಾನಾ ಭಾಗಗಳಲ್ಲಿ ಅವರಿಗಿರುವ ಜ್ಞಾನಾನುಭವಗಳನ್ನು ಇಲ್ಲಿ ವಿವೇಕದ ಒರೆಗಲ್ಲಿಗೆ ಹಚ್ಚಿ ನೋಡಿದೆ. ಗಾದೆ ಸಾಮಾನ್ಯ ಜನತೆಯ ವೇದ, ಗಾದೆ ವೇದಕ್ಕೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಲ್ಲ. ವೇದ ಕೆಲವರ ಮಾತು, ಗಾದೆ ಹಲವರ ನುಡಿ. ಇಂಗ್ಲಿಷ್ ಗಾದೆಯೊಂದು ಹೇಳುವ ಹಾಗೆ ಕೆಲವರು ಹೇಳುವುದು ನಿಜವಾಗಬಹುದು, ಆದರೆ ಎಲ್ಲರೂ ಹೇಳುವುದು ನಿಜವಾಗೇ ಆಗುತ್ತದೆ.
ಗಾದೆಗಳು ಜನಪ್ರಿಯ ಅಭಿಪ್ರಾಯದ ಮೇಲೆ ಸೂಕ್ಷ್ಮವೂ ವ್ಯಾಪಕವೂ ಆದ ಪ್ರಭಾವವನ್ನು ಹೊಂದಿರುತ್ತವೆ. ಇವುಗಳ ಸೃಷ್ಟಿಗೆ ಹಾಗೂ ಪ್ರಸಾರಕ್ಕೆ ಕಾರಣರಾದ ಜನರ ಸಾಮಾಜಿಕ, ರಾಜಕೀಯ, ನೈತಿಕ ಹಾಗೂ ಧಾರ್ಮಿಕ ಆದರ್ಶಗಳಿಗೆ ನಂಬಲರ್ಹವಾದ ಸಾಕ್ಷ್ಮಗಳಾಗಿವೆ. ಗಾದೆಗಳ ಮೌಲ್ಯ ಮತ್ತು ಮಹತ್ತ್ವವನ್ನು ಈ ಮಾತುಗಳು ತಿಳಿಸುತ್ತವೆ.