ಸಂಗೀತ ಪರಂಪರೆಯಲ್ಲಿ ೧೯೨೫ ರಲ್ಲಿ ಜನಿಸಿದ ಮಂಜಪ್ಪನವರ ತಾತ ರಾಮಯ್ಯನವರು ಪಿಟೀಲು ವಿದ್ವಾಂಸರು. ಮದ್ರಾಸಿನ ಕೃಷ್ಣನ್‌ ಹಾಗೂ ಧರ್ಮಪುರಿ ಕೆ. ಲಕ್ಷ್ಮಣ್‌ ಅವರಲ್ಲಿ ಗುರುಕುಲ ವಾಸ ಮಾಡಿ ಶಿಕ್ಷಣ ಪಡೆದು ನಾಗಸ್ವರ ವಾದನದಲ್ಲಿ ಉತ್ತಮ ಮಟ್ಟವನ್ನು ಏರಿದರು. ಗಾಯನದಲ್ಲೂ ಶಿಕ್ಷಣ ಪಡೆದರು. ರಟ್ಟಹಳ್ಳಿ ನಾರಾಯಣಪ್ಪನವರಲ್ಲಿ ಹಿಂದೂಸ್ಥಾನಿ ಸಂಗೀತ ಪದ್ಧತಿಯಲ್ಲೂ ಅಭ್ಯಾಸ ಮಾಡಿದರು. ರಂಗಭೂಮಿ ಮೂಡಲಾಟ ಮೊದಲಾದ ಜಾನಪದ ಕಲೆಗಳಲ್ಲೂ ಪರಿಶ್ರಮ ಹೊಂದಿದವರು ಮಂಜಪ್ಪ.

ಭದ್ರಾವತಿಯಲ್ಲಿ ಶ್ರೀ ಮುರಳೀಧರ ಸಂಗೀತ ವಿದ್ಯಾಲಯವನ್ನು ಸ್ಥಾಪಿಸಿ ತನ್ಮೂಲಕ ಹಲವಾರು ಮಂದಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಆರ್ಥಿಕ ಮುಗ್ಗಟ್ಟಿರುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ದೊರಕುತ್ತಿದೆ. ಹಲವು ಸಂಗೀತ ಶಿಬಿರಗಳನ್ನು ಏರ್ಪಡಿಸುವುದರ ಮೂಲಕ ಸಂಗೀತೋತ್ಸವಗಳನ್ನು ಮೂಲಕ, ಹಿರಿಯ ವಿದ್ವಾಂಸರನ್ನು ಸನ್ಮಾನಿಸುವ ಮೂಲಕ ಶ್ರೀಯುತರು ತಮ್ಮದೇ ಆದ ರೀತಿಯಲ್ಲಿ ಕಲಾ ಸೇವೆ ಮಾಡುತ್ತಿದ್ದಾರೆ. ಅಭಿಮಾನಿಗಳಿಂದ ‘ನಾದ ಗಾನ ಸುಧಾಕರ’ ಎಂಧು ಸನ್ಮಾನಿಸಲ್ಪಟ್ಟಿರುವ ಇವರನ್ನು ರಾಜ್ಯ ಸಂಗೀತ ನೃತ್ಯ ಅಕಾಡೆಮಿ ‘ಕರ್ನಾಟಕ ಕಲಾಶ್ರೀ’ ಎಂದು ಗೌರವಿಸಿದೆ. ರಾಜ್ಯೋತ್ಸವ ಪ್ರಶಸ್ತಿಯಿಂದಲೂ ಪುರಸ್ಕೃತರಾಗಿರುವ ಮಂಜಪ್ಪನವರು ಶಿಷ್ಯರಿಗೆ ತರಬೇತಿ ನೀಡುತ್ತಾ ತಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳುತ್ತಿದ್ದಾರೆ.