ಗಾಮೊಕ್ಕಲು > ಗ್ರಾಮೊಕ್ಕಲು

ಗಾಮೊಕ್ಕಲನ್ನು ಗ್ರಾಮೊಕ್ಕಲು ಎಂದು ಸಂಬೋಧಿಸುವುದು ಹಾಗೂ ಸರಕಾರಿ ದಾಖಲೆಗಳಲ್ಲಿ ದಾಖಲಿಸುವುದು ಕಂಡುಬರುತ್ತದೆ. ‘ಗಾಮೊಕ್ಕಲು’ ಎಂಬುದಕ್ಕೆ ‘ಗ್ರಾಮ’ ಶಬ್ಧವು ಮೂಲವಾಗಿದೆ. ಆದರೆ ‘ಗ್ರಾಮ’ ಶಬ್ದದ ಅರ್ಥವನ್ನು ಅರಿಯದ ಕಾರಣದಿಂದ ಅಕ್ಷರ ಜ್ಞಾನವುಳ್ಳ ಕೆಲವರು ‘ಗಾಮೊಕ್ಕಲು’ ಶಬ್ದದಲ್ಲಿಯ ‘ಗ್ರಾಮ’ಶಬ್ದವು ತಪ್ಪು ಎಂದು ಭಾವಿಸಿಕೊಂಡರಲ್ಲದೇ ಗಾಮೊಕ್ಕಲು ಎಂಬಲ್ಲಿ ಗ್ರಾಮೊಕ್ಕಲು ಎಂಬ ಶಬ್ದವೇ ಸರಿಯಾದದ್ದೇಂದು ಭಾವಿಸಿದರು. ಹೀಗೆ ರೇಫವನ್ನು ಬಳಸುವುದು ಹೊನ್ನಾವರ ತಾಲೂಕಿನ ಭಾಷಾಪ್ರಕ್ರಿಯೆಯಲ್ಲಿ ಕಂಡುಬರುವ ಅಂಶವಾಗಿದ್ದು, ಇದು ಕೂಡ ಈ ಶಬ್ದವನ್ನು ರೇಫಯುಕ್ತವಾಗಿ ಬಳಸಲು ಕಾರಣವಾಗಿರಬಹುದು. ಹೊನ್ನಾವರ ತಾಲೂಕಿನ ಜನಪರ ಕಥೆಗಳನ್ನು ಸಂಗ್ರಹಿಸುವ ಕಾಲಕ್ಕೆ ಕೆಲವು ಶಬ್ದಗಳಿಗೆ ಈ ಬಗೆಯಾಗಿ ರೇಫವನ್ನು ಸೇರಿಸುವ ಪರಿಪಾಢವನ್ನು ಗಮನಿಸಲಾಗಿದೆ. ಶವಕ್ಕೆ ಶ್ರವವೆಂದೂ ಬಂಗಾರಕ್ಕೆ ಭೃಂಗಾರವೆಂದೂ ಒಂಭತ್ತನ್ನು ಒಂಬತ್ರು ಎಂದೂ ಉಚ್ಛರಿಸುತ್ತಿದ್ದರು. ಈ ಪರಿಪಾಠವು ಇಲ್ಲಿಯೂ ಕೆಲಸ ಮಾಡಿದೆ.

.೨ ಒಕ್ಕಲು> ಒಕ್ಕಲಿಗರು: ಒಕ್ಕಲ್, ಕುಲ, ಒಕ್ಕಲಾಗು, ನೆಲಸು ಎಂಬವು ಶಬ್ದಕೋಶಗಳು ನೀಡುವ ಅರ್ಥವಾಗಿವೆ. ಒಕ್ಕಲು ಎಂಬುದು ದಕ್ಷಿಣ ಕರ್ನಾಟಕದ ಅನೇಕ ಜಾತಿಯ ಹೆಸರಿನ ವಿಶೇಷ ಶಬ್ದವಾಗಿದ್ದು, ಅದರ ಹಿಂದಿನ ವಿಶೇಷಣವು ಆಯಾ ಒಕ್ಕಲುಗಳ ಪ್ರತ್ಯೇಕ ಗುಂಪನ್ನು ಸೂಚಿಸುತ್ತದೆ. ಗಂಗಡಿಕಾರ ಒಕ್ಕಲು, ಮರಶು ಒಕ್ಕಲು ಇತ್ಯಾದಿ.

ದಕ್ಷಿಣ ಕರ್ನಾಟಕದ ಮಂಡ್ಯದ ಕಡೆಯಲ್ಲಿ ಮದುವೆಯ ಸಂದರ್ಭದಲ್ಲಿ ಗಮನಿಸಲಾಗುವ ‘ಒಕ್ಕಲು’ ಶಬ್ದವು ಕುಲ ಅಥವಾ ಬಳಿಯ ಸಮೀಪದ ಕೆಲಸವನ್ನು ನಡೆಸುತ್ತದೆ. ಇಲ್ಲಿಯ ಈಶ್ವರನ ಒಕ್ಕಲು, ವಿಷ್ಣು ಒಕ್ಕಲು ಎಂಬ ಕುಲಸೂಚಕ ಶಬ್ದಗಳಲ್ಲಿಯ ಒಕ್ಕಲು ಶಬ್ದವು ಆಯಾ ದೇವರಿಗೆ ಸಂಬಂಧಪಟ್ಟ ವಿಶೇಷ ಶಬ್ದವಾಗಿ ಬಳಕೆಯಲ್ಲಿದೆ.

ದಕ್ಷಿಣ ಕರ್ನಾಟಕದ ಅನೇಕ ಕಡೆ ಒಕ್ಕಲು ಶಬ್ದವನ್ನು ಪರಿಷ್ಕರಿಸಿ ಒಕ್ಕಲಿಗರು ಎಂಬ ಶಬ್ದವನ್ನು ರೂಢಿಗೆ ತರಲಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಗೆಯ ಪರಿಷ್ಕರಣವು ಇತ್ತೀಚೆಗೆ ಕಾಣಿಸಿಕೊಳ್ಳತೊಡಗಿದೆಯಾದರೂ ‘ಒಕ್ಕಲು’ ಶಬ್ದವನ್ನೊಳಗೊಂಡ ಜಾತಿವಾಚಕ ಹೆಸರುಗಳು ಉಳಿದುಕೊಂಡಿವೆ.

ಹಾಲಕ್ಕಿ ಒಕ್ಕಲು, ಗಾಮೊಕ್ಕಲು ಕರಿಒಕ್ಕಲು, ಕೊಟ್ಟೆ ಒಕ್ಕಲು, ಶೀವಿ ಒಕ್ಕಲು ಇತ್ಯಾದಿ ಶಬ್ದಗಳು ಇನ್ನೂ ಬಳಕೆಯಲ್ಲಿವೆ.

ಈ ಹೆಸರುಗಳಲ್ಲಿಯ ವಿಶೇಷಣ ರೂಪಗಳನ್ನು ಗಮನಿಸಿದಾಗ ಇವು ಆರಾಧನಾ ಸಂಬಂಧಿಯಾಗಿರುವುದು ಕಂಡುಬರುತ್ತದೆ. ಮಂಡ್ಯದ ಈಶ್ವರನ ಒಕ್ಕಲು, ವಿಷ್ಣು ಒಕ್ಕಲು ಎಂಬಲ್ಲಿಯೂ ಇದನ್ನು ಗಮನಿಸಬಹುದು. ಆದರೆ ಇವು ಇಲ್ಲಿ ಜಾತಿಸೂಚಕವಾಗಿರದೆ ಒಂದು ಗುಂಪುಸೂಚಕವಾಗಿರುತ್ತವೆ. ಉತ್ತರ ಕನ್ನಡ ಜಿಲ್ಲೆಗೆ ವಲಸೆ ಬಂದಿರಬಹುದಾದ ಹಾಲಕ್ಕಿ ಒಕ್ಕಲು, ಗಾಮ ಒಕ್ಕಲು, ಕರಿ ಒಕ್ಕಲು ಕೂಡ ಮೂಲತಃ ಒಂದೊಂದು ಗುಂಪುಸೂಚಕ ಹೆಸರನ್ನು ಹೊಂದಿಕೊಂಡಿದ್ದು, ಈ ಗುಂಪು ಇತ್ತ ಬಂದ ಮೇಲೆ ಜನಸಂಖ್ಯೆ ಬೆಳೆದುಅವರದ್ದೇ ಒಂದು ಜಾತಿಯಾಗಿ ಪರಿಗಣಿಸ್ಲಪಟ್ಟಿರಬಹುದು. ಹಾಲಕ್ಕಿ ಒಕ್ಕಲು ಎಂಬ ಗುಂಪಿನ ಹಾಲಕ್ಕಿ ಎಂಬುದು ಒಂದು ಪಕ್ಷಿಯ ಹೆಸರಾಗಿದ್ದು, ಈ ಹೆಸರನ್ನು ಹೊಮದಿರುವ ಜನಸಮುದಾಯವು ದಕ್ಷಿಣ ಕರ್ನಾಟಕದಲ್ಲಿದೆಯೆಂದು ದೂರದರ್ಶನದ ಒಂದು ಕಾರ್ಯಕ್ರಮದಲ್ಲಿ ಕಂಡುಕೊಂಡಿದ್ದೇನೆ. ಇವರು ದಕ್ಷಿಣ ಕರ್ನಾಟಕದಿಂದ ಇತ್ತ ಬಂದವರೆಂಬುದಕ್ಕೆ ಅನೇಕ ಸಾಕ್ಷ್ಯಗಳು ಕೂಡ ದೊರಕುತ್ತವೆ. ತಮ್ಮ ಜಾತಿ ಗುಂಪಿಗೆ ಪ್ರಾಣಿ, ಪಕ್ಷಿ, ಸಸ್ಯ ಸಂಬಂಧಿ ಹೆಸರನ್ನು ಹೊಂದಿರುವುದು ಬುಡಕಟ್ಟುಗಳ ಲಕ್ಷಣವೂ ಅಹುದು. ಆದರೆ ಗಾಮೊಕ್ಕಲುದಲ್ಲಿಯ ‘ಗ್ರಾಮ’ ಎಂಬುದು ಮಾವಿನ ಕುರ್ವೆಯಲ್ಲಿಯ ‘ಗಾಮ’ ಎಂಬ ದೇವರಿಗೆ ಸಂಬಂಧಿಸಿದ ಹೆಸರಾಗಿದೆ. ಈ ‘ಗಾಮ’ ಎಂಬುದು ಮೂಲತಃ ಏನು ಎಂಬುದರ ಬಗ್ಗೆ ಅಧ್ಯಯನ ಸಂಶೋಧನೆ ನಡೆಯಬೇಕಾಗಿದೆ. ಗಾಮೊಕ್ಕಲು ಎಂಬ ಹೆಸರು ಈ ‘ಗಾಮ’ ದೇವರಿಗೆ ಸಂಬಂಧಿಸಿದ್ದೆಂದು ಎಂದೋವನ್ ಬಹು ಹಿಂದೆಯೇ ಊಹಿಸಿರುತ್ತಾರೆ. (ನೋಡಿ ಗೆಜೆಟಿಯರ್ ಪುಟ. ೩೫೨) ಗಾಮದೇವರ ಪೂಜೆಯಲ್ಲಿ ಕೆಲವು ಆಚರಣೆಗಳನ್ನು ನಡೆಸುವದು ತಮಗೆ ಸಾಧ್ಯವಾಗದ ಕಾರಣ, ಅದರ ಪೂಜೆಯನ್ನು ಬಿಟ್ಟುಕೊಡಲಾಯಿತು ಎಂದು ಇಲ್ಲಿಯ ಗಾಮೊಕ್ಕಲ ಹಿರಿಯರ ಅಭಿಪ್ರಾಯವಿದೆ. ಈ ಕಾರಣಗಳಿಂದ ‘ಗಾಮೊಕ್ಕಲು’ ಸಹ ಸರಿಯಾದ ಶಬ್ದವಾಗಿದೆ. ಹೊನ್ನಾವರದ ಗಾಮೊಕ್ಕಲಲ್ಲಿ ಕೆಲವರು ಗಟ್ಟದ ಮೇಲೆ ಅಲ್ಲಿಯ ಅಡಕೆ ತೋಟದ ಅಡಕೆ ಮರಕ್ಕೆ ಕೊಟ್ಟೆ ಕಟ್ಟುವ ಕೆಲಸಕ್ಕೆ ಹೋದಾಗ ಅವರನ್ನು ಅಲ್ಲಿಯ ಇತರರು ಕೊಟ್ಟೆ ಒಕ್ಕಲು ಎಂದು ಕರೆದರು. ಇಲ್ಲಿ ಪಾರಂಪರಿಕ ರೀತಿಯನ್ನು ಬಿಟ್ಟು ಉದ್ಯೋಗಕ್ಕೆ ಸಂಬಮಧಿಸಿದ ಹೆಸರು ರೂಢಿಗೆ ಬಂದಿದೆ.

ಗೌಡ, ಗೊಂಡ

ಒಕ್ಕಲು ಜನಜಾತಿಗೆ ಸೇರಿದವರು ತಮ್ಮ ಹೆಸರಿನ ಮುಂದೆ ಗೌಡ ಎಂಬುದನ್ನು ಅಡ್ಡ ಹೆಸರಾಗಿ ಸೇರಿಸಿಕೊಳ್ಳುವದು ಕರ್ನಾಟಕದ ಹಲವು ಪ್ರದೇಶಗಳಲ್ಲಿ ಕಂಡು ಬರುತ್ತದೆ. ಈ ಪ್ರಕ್ರಿಯೆ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಜಾರಿಯಲ್ಲಿದೆ.

ಗವುಡ>ಗೌಡ, ‘ಜಾತಿಕೂಡ’ವೆಂಬ ಹೆಸರಿನ ಆಡಳಿತ ವ್ಯವಸ್ಥೆಯ ಮುಖ್ಯಸ್ಥನ ಪದನಾಮವಾಗಿದ್ದು, ಇದು ಆಯಾ ಜಾತಿಯ ನಾಯಕ ಎಂಬ ಅರ್ಥವನ್ನು ಹೊಂದಿರುತ್ತದೆ. ಈ ಮುಖಂಡತ್ವವು ಆಯಾ ಮನೆತನಕ್ಕೆ ಮೀಸಲಾಗಿರುತ್ತದೆ. ಗೌಡನ ಮಗನೇ ಈ ಆಡಳಿತ ವ್ಯವಸ್ಥೆಯಲ್ಲಿ ಮುಂದಿನ ಗೌಡನಾಗುತ್ತಾನೆ. ಬಾಯಿಮಾತಿನಲ್ಲಿ ವ್ಯವಹರಿಸುವಾಗ ಬೀರಗೌಡನ ಮಗ ಸೋಮಗೌಡ ಎಂದು ಮಗನೊಬ್ಬನನ್ನು ಗುರುತಿಸಲಾಗುತ್ತದೆ. ಆದರೆ ಇದನ್ನು ಬರವಣೆಗೆಯಲ್ಲಿ ದಾಖಲಿಸುವಾಗ ಸೋಮ, ಬೀರ ಗೌಡ ಎಂದು ಬರೆಯಲಾಗುತ್ತದೆ. ಇಲ್ಲಿ ಗೌಡ ಎಂಬುದು ಆಧುನಿಕ ಪದ್ಧತಿಯ ಅಡ್ಡ ಹೆಸರಾಗಿ ಸ್ವೀಕಾರಗೊಳ್ಳುತ್ತದೆ. ಆದರೆ ಜಾತಿಕೂಟದ ಇನ್ನಿತರ ಪದಾಧಿಕಾರಿಗಳ ಹೆಸರು ಅಡ್ಡಹೆಸರಾಗಿ ಇಲ್ಲಿ ಹೆಚ್ಚು ಪ್ರಚಾರಕ್ಕೆ ಬರಲಿಲ್ಲ. ಆದರೆ ಕುಮಟಾ ತಾಲೂಕಿನ ಗಾಮೊಕ್ಕಲು ಗಜನಿ ಭೂಮಿಯಲ್ಲಿಯ ಕಗ್ಗನ ಬೆಳೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದ ಪಟಗಾರ ಎಂಬ ಪದನಾಮವನ್ನು ತಮ್ಮ ಅಡ್ಡ ಹೆಸರಾಗಿ ಉಳಿಸಿಕೊಂಡಿದ್ದಾರೆ. ಮೂಲತಃ ‘ಪಟಗಾರ’ ಎಂಬ ಪದನಾಮವನ್ನು ಹೊಂದಿದವರ ಕುಟುಂಬವು ಬೆಳೆದು ವಿಸ್ತರಿಸಿದಾಗ ಈ ಎಲ್ಲರಿಗೂ ಪಟಗಾರರು ಎಂಬ ಅಡ್ಡಹೆಸರು ಉಳಿದುಕೊಂಡಿರುವ ಸಾಧ್ಯತೆಗಳಿವೆ. ಗೌಡ ಎಂಬ ಅಡ್ಡ ಹೆಸರನ್ನು ಹೊಂದಿದರು. ಆದರೆ ಮುಂದೆ ಆಧುನಿಕ ಕಾಲದಲ್ಲಿ ಅಡ್ಡ ಹೆಸರಿನ ಅವಶ್ಯಕತೆಯು ಹೆಚ್ಚಾದಂತೆ ‘ಗೌಡ’ನ ಕುಟುಂಬಕ್ಕೆ ಸೇರದ ಇತರರೂ ‘ಗೌಡ’ ಎಂಬ ಅಡ್ಡ ಹೆಸರನ್ನು ಪಡೆದಿರಬಹುದು. ತಮ್ಮ ಜಾತಿವ್ಯವಸ್ಥೆಯ ಗೌಡನ ಮಾದರಿಯನ್ನೇ ಇತರರೂ ಅನುಸರಿಸಿರಬಹುದು. ಹೀಗಾಗಿ ಕೋಲಕಾರ, ಬುದುವಂತ ಇತ್ಯಾದಿ ಪದನಾಮವುಳ್ಳ ಕುಟುಂಬದವರೂ ‘ಗೌಡ’ ಎಂಬ ಅಡ್ಡ ಹೆಸರನ್ನೇ ಬಳಸತೊಡಗಿದರು.

ಗೊಂಡ ಎಂಬುದು ಗವುಡದಿಂದ ನಿಷ್ಪತ್ತಿ ಹೊಂದಿದ ಇನ್ನೊಂದು ರೂಪವಾಗಿದೆ. ಗವುಡದಲ್ಲಿಯ ‘ವ್’ನ್ನು ನಾನು ಅನುನಾಸಿಕವಾಗಿ ಉಚ್ಚರಿಸುವುದು ಇಲ್ಲಿಯ ಭಾಷಾ ಪ್ರಕ್ರಿಯೆಯಲ್ಲಿ ಕಂಡು ಬರುತ್ತದೆ. ಈ ಪ್ರಕ್ರಿಯೆಗೆ ತಕ್ಕಾಗಿ ಬರವಣೆಗೆಯಲ್ಲಿ ಗೊಂಡ ಶಬ್ದವು ಹುಟ್ಟಿಕೊಂಡಿದೆ. ಇದು ಕೂಡ ಮೂಲತಃ ಜಾತಿಕೂಟದ ಮುಖ್ಯಸ್ಥನ ಪದನಾಮವೇ. ಹೀಗಾಗಿ ಗಾಮೊಕ್ಕಲು ಜಾತಿಯ ಒಂದು ಪಂಗಡವು ಗೊಂಡ ಎಂಬ ಅಡ್ಡ ಹೆಸರನ್ನು ಹೊಂದಿದೆ. ಭಟ್ಖಳ ತಾಲೂಕಿನಲ್ಲಿ ಇವರು ತಮ್ಮ ಅಡ್ಡ ಹೆಸರನ್ನೇ ಜಾತಿಯ ಹೆಸರಾಗಿ ಬಳಸತೊಡಗಿದ್ದಾರೆ.

ಮಹಿಳೆಯ ವ್ಯಕ್ತಿತ್ವ

ಉಡುಪು: ಹಳೆಯ ತಲೆಮಾರಿನ ಉಡುಪು ಪದ್ಧತಿಯು ಒಂದೊಂದು ಜಾತಿಗೆ ಒಂದೊಂದು ತೆರನಾಗಿರುವುದು. ಆನಪದ ವೇಷ-ಭೂಷಣ ಕಲೆಯ ವೈಶಿಷ್ಟ್ಯವಾಗಿದೆ. ಇದರಂತೆ ಗಾಮೊಕ್ಕಲ ಮಹಿಳೆಯರ ಉಡುಪು ಪದ್ಧತಿಯಲ್ಲಿ ಇತ್ತೀಚಿನ ನಲವತ್ತು ವರ್ಷಗಳಲ್ಲಿ ಮೂರು ಹಂತದಲ್ಲಿ ಅತಿವೇಗದಿಂದ ಬದಲಾವಣೆಯಾಗಿದೆ.

ಸುಮಾರು ನಲವತ್ತು ವರ್ಷಗಳಿಗಿಂತ ಹಿಂದೆ ಬಹುಕಾಲದಿಂದ ಗಾಮೊಕ್ಕಲ ಮಹಿಳೆಯರು ತಮ್ಮ ಜಾತಿವೈಶಿಷ್ಟ್ಯವನ್ನು ಪ್ರತಿನಿಧಿಸುವಂತೆ ಸೀರೆ ಉಡುತ್ತಿದ್ದರು. ಆದರೆ ಇತ್ತೀಚೆಗೆ ಈ ಬಗೆಯಲ್ಲಿ ಸೀರೆ ಉಡುವವರ ಸಂಖ್ಯೆ ಪ್ರತಿ ಊರಿಗೆ ಬೆರಳೆಣಿಕೆಯಲ್ಲಿ ಕಂಡುಬರುತ್ತದೆ. ಇವರ ಸೀರೆ ಉಡುವ ಹಳೆಯ ಪದ್ಧತಿಯನ್ನು ‘ಕೊಳ್ಕಿ ಕಟ್ಟುವುದು’ ಎಂಬ ಹೆಸರಿನಿಂದ ಗುರುತಿಸುತ್ತಾರೆ.

ಕೊಳ್ಕಿ ಕಟ್ಟುವ ಪದ್ಧತಿ: ಈ ಪದ್ಧತಿಯಲ್ಲಿ ಹದಿನೈದರಿಂದ ಹದಿನೆಂಟು ಮೊಳದ ಸೀರೆಯನ್ನು ಬಳಸಲಾಗುತ್ತದೆ. ಈ ಪದ್ಧತಿಯಲ್ಲಿ ಸೀರೆಯನ್ನು ಎದೆಯುಡುಪಾಗಿ ಹಾಗೆಯೆ ಸೊಂಟದ ಉಡುಪಾಗಿ ಬಳಸುತ್ತಾರೆ. ಈ ಪದ್ಧತಿಯಲ್ಲಿ ಸೊಂಟದ ಮೇಲ್ಭಾಗದಲ್ಲಿ ರವಿಕೆಯನ್ನು ಧರಿಸಿರುವುದಿಲ್ಲ.

ಸೀರೆಯ ಸೆರಗನ್ನು ಎಡಹೆಗಲ ಮೇಲೆ ಹಾಕಿಕೊಂಡು ಉಳಿದ ಭಾಗವನ್ನು ಬಲಸೊಂಟದ ಹಿಂಬದಿಗೆ ತಂದು ಅಲ್ಲಿಂದ ಮುಂದೆ ಎಡಬದಿಯಿಂದ ಹಾಯಿಸಿ ಮುಂದೆ ಹೊಕ್ಕುಳದ ಬಳಿ ತರುತ್ತಾರೆ. ಇಲ್ಲಿ ಸೀರೆಯ ಮೇಲಂಚನ್ನು ಬಲಗೈಯಲ್ಲಿ ಹಿಡಿದು ಸೀರೆಯ ಉಳಿದ ಭಾಗವನ್ನು ಬಲಬದಿಯಿಂದ ಹಿಂದಕ್ಕೆ ಅಂದರೆ ಹಿಂದಿನ ಎಡಗೈಯ್ಯವರೆಗೆ ಹೊರಳಿ ತರಲಾಗುತ್ತದೆ. ಹೊರಳಿದ ಸೀರೆಯು ಹಿಂಬದಿಯಿಂದ ಮುಂದಕ್ಕೆ ಬರುತ್ತದೆ. ಈಗ ಬಲಗೈಯಲ್ಲಿ ಹಿಡಿದಿರುವ ಸೀರೆಯ ಅಂಚನ್ನು ಎಡಗೈಗೆ ಸಾಗಿಸಿ ಹಿಂಬದಿಯಿಂದ ಬಲಕ್ಕೆ ಬಂದಿರುವ ಸೀರೆಯ ಮೇಲಂಚನ್ನು ಬಲಗೈಯಲ್ಲಿ ಹಿಡಿದು ಎಡಗೈಯಲ್ಲಿ ಹಿಡಿದಿರುವ ಮೇಲಂಚಿನೊಂದಿಗೆ ಕಟ್ಟಬೇಕು. ಈ ರೀತಿಯಾಗಿ ಕಟ್ಟುವಾಗ ಹಿಂಬದಿಯ ಸೀರೆಯ ಭಾಗವು ಅಗಲದಲ್ಲಿ ಮುಂಬದಿಯ ಸೀರೆಯ ಭಾಗಕ್ಕಿಂತ ಹೆಚ್ಚಿಗೆಯಿರುತ್ತದೆ.

ಎರಡನೆಯ ಹಂತದಲ್ಲಿ ಬಲಬದಿಗೆ ಉಳಿದಿರುವ ಭಾಗವನ್ನು ಹಿಂದಿನಿಂದ ಹಾಯಿಸಿ ಎಡಬದಿಗೆ ತರಲಾಗುತ್ತದೆ. ಹೀಗೆ ಮಾಡುವಾಗ ಪ್ರತಿಬಾರಿಯೂ ಸೀರೆಯ ಮೇಲಂಚನ್ನು ಆದಷ್ಟು ಹೆಚ್ಚಿಗೆ ಸೊಂಟದೊಳಕ್ಕೆ ಸಿಕ್ಕಿಸಲಾಗುತ್ತದೆ. ಹಾಗೂ ಪ್ರತಿಬಾರಿ ಸೀರೆಯ ಪದರಿನ ಅಗಲಳತೆ ಕಡಿಮೆಯಾಗುತ್ತದೆ.

ಮೂರನೆಯ ಹಂತದಲ್ಲಿ ಎಡಬದಿಗಿರುವ ಭಾಗವು ಹಿಂಬದಿಯಿಂದಲೇ ಮುಂದೆ ಬರುತ್ತದೆ. ಈಗ ಸೀರೆಯ ಸೆರಗಿನ ಅಗಲವು ಇನ್ನಷ್ಟು ಕಡಿಮೆಯಾಗುತ್ತದೆ. ಹೀಗೆ ಸೀರೆಯನ್ನು ಮೂರು ಬಾರಿ ಸುತ್ತುವ ಕ್ರಿಯೆಯು ನಡೆದು ಸುತ್ತಿದಾಗ ಉಳಿಯುವ ಅಂಚುಗಳು ಮುರು ಹಂತವಾಗಿ ಕಾಣುತ್ತವೆ. ಈ ಮೂರು ಪಟ್ಟಿಗಳು ಉಡುಪಿನ ಅಂದವನ್ನು ಹೆಚ್ಚಿಸುತ್ತವೆ.

ಕೊನೆಯ ಹಂತದಲ್ಲಿ ಕಿಳ್‌ಸೆರಗನ್ನು ಹಿಂಬದಿಯ ಸೊಂಟಕ್ಕೆ ಸಮಾಂತರವಾಗಿ ಸಿಕ್ಕಿಸುತ್ತಾರೆ. ಈ ಸೀರೆ ಉಡುವ ಈ ಪದ್ಧತಿಯಲ್ಲಿ ಕಿಳ್ ಸೆರಗು ಹೆಚ್ಚು ಉಪಯೋಗದಲ್ಲಿರುವುದನ್ನು ಗಮನಿಸಬಹುದು. ಆಧುನಿಕ ಪದ್ಧತಿಯಲ್ಲಿ ಇದು ಹೊರಗೆ ಕಾಣುವುದಿಲ್ಲ. ನೇಕಾರರ ಉದ್ದೇಶ ಫಲಿಸುವುದಿಲ್ಲ.

ಕೊಳ್ಳಿ ಕಟ್ಟುವ ಈ ಪದ್ಧತಿಯಲ್ಲಿ ಹೆಗಲ ಮೇಲೆ ಈಗಾಗಲೇ ಇಟ್ಟಿರುವ ಸೆರಗನ್ನು ಎದೆಯ ಮೇಲೆ ಹರಡಿ ಮುಂದೆ ಅದನ್ನು ಕೊರಳ ನೂಲಿನೊಳಗಿನಿಂದ ಹಾಯಿಸಿ ಒಳಬದಿಯಿಂದ ಹೊರಬದಿಗೆ ಹೊರತೆಗೆದು ಎಡ ಕಂಕುಳಬದಿಯಿಂದ ಕೆಳಕ್ಕೆ ತಂದು ಸೊಂಟಕ್ಕೆ ಸಿಕ್ಕಿಸುತ್ತಾರೆ. ಈಗ ಈ ಸೆರಗು ಎದೆಯ ಮೇಲೆ ತ್ರೀಕೋನಾಕೃತಿಯಲ್ಲಿ ರಚನೆಗೊಳ್ಳುತ್ತದೆ.

ಹೊಸ ಪದ್ಧತಿಯಲ್ಲಿ ಕೆಳಭಾಗವನ್ನು ಉಡುವ ರೀತಿಯಲ್ಲಿ ಬದಲಾಗಿಲ್ಲ. ಆದರೆ ಎದೆಯ ಭಾಗಕ್ಕೆ ರವಿಕೆಯನ್ನು ಧರಿಸುವ ಕಾರಣ ಹೆಗಲ ಮೇಲಿನ ಸೆರಗನ್ನು ಎಡ ಹೆಗಲ ಮೇಲಿಂದ ಹಿಂದಕ್ಕೊಯ್ದು ಬಲ ಕಂಕುಳ ಕೆಳಗಿನಿಂದ ಮುಂದೆ ತಂದು ಮುಂಬದಿಯ ಬಲ ಸೊಂಟಕ್ಕೆ ಸಿಕ್ಕಿಸುತ್ತಾರೆ. ಅಪ್ಪರಕೊಂಡದ ಮಹಿಳೆಯರು ಮೂರು ಪಟ್ಟಿಗಳು ಕಾನುವಂತೆ ಉಡುತ್ತಾರೆ. ಆಧುನಿಕ ಪದ್ಧತಿಯಲ್ಲಿ ಈ ಎರಡೂ ಪದ್ಧತಿಗಳು ದೂರವಾಗಿವೆ. ನಿರಿ ಹಾಕಿ ಉಡುವ ಶಿಷ್ಟ ಪದ್ಧತಿಯಲ್ಲಿ ಸೀರೆ ಉಡುತ್ತಿದ್ದಾರೆ.

ಮದುವೆಯಾಗದ ತರುಣಿಯರು ‘ನೈಟಿ’ ಎಂಬ ಉಡುಪನ್ನು ಮನೆಯುಡುಪಾಗಿ ಧರಿಸುತ್ತಾರೆ. ಸಲ್ಪಾರ್ ಕಮೀಜನ್ನು ಮನೆಯ ಹೊರಗೆ ಹೋಗುವಾಗ ಬಳಸುತ್ತಾರೆ. ವಿಶೇಷ ಸಂದರ್ಭಗಳಲ್ಲಿ ಸೀರೆಯುತ್ತಾರೆ.

ಆಭರಣ

ಹಳೆಯ ತಲೆಮಾರಿನ ಮಹಿಳೆಯರು ಕೈಗೆ ನಾಲ್ಕಾರು ಬಗೆಯ ಬೆಳ್ಳಿಯ ಬಳೆಗಳನ್ನು ಧರಿಸುತ್ತಾರೆ. ತೋಳಿಗೆ ಸೊಸರ್ಗಿ, ಮುಂಗೈಗೆ ಹಿಂಬಳೆ, ಕಟ್‌ಬಳೆ, ಕಡಗ ಹಾಗೂ ಸಾದಾ ಬಳೆಯನ್ನು ಧರಿಸುತ್ತಾರೆ. ಕಿವಿಯ ಹಾಲೆಗೆ ವಾಲೆ, ಅದರ ಮೇಲ್ಭಾಗದಲ್ಲಿ ಕರಾಫುಲ್ ಹಾಗೂ ಲವಂಗದ ಕರೆ ಎಂಬ ಹೆಸರಿನ ಆಭರಣಗಳಿರುತ್ತವೆ. ಮೇಲ್ಗಿವಿಯ ಕೊನೆಯಲ್ಲಿ ಮುಗುಳು ಸರಪಳಿ ಎಂಬ ಆಭರಗಳು ಶೋಭಿಸುತ್ತವೆ. ಮೂಗಿಗೆ ಕೀಟದಾಕಾರದ ಮೂಗುತಿಯರಿಉತ್ತದೆ. ಬಳೆಗಳು ತೋಳಿನ ಆಭರಣಗಳು, ಸೊಂಟತಟ್ಟಿ ಕಾಲುಂಗುರಗಳು ಬೆಳ್ಳಯವಾಗಿದ್ದು, ಮೂಗುತಿ ಹಾಗು ಕಿವಿಯ ಆಭರಣಗಳು ಬಂಗಾರದ ಲೇಪವುಳ್ಳವಾಗಿದೆ. ಕುತ್ತಿಗೆಗೆ ಚಿನ್ನದ ಧಾರೆಮಣಿಯುಳ್ಳ ಕರಿಮಣಿ ಸರವಿರುತ್ತದೆ. ಬಂಗಾರದ ಲೇಪವುಳ್ಳ ಬೋರಿ ಮಣಿಸರ ವರಾಣಿಮಣಿಸರಗಳ ಬಳಕೆಯಿದೆ. ‘ವಾಲೆ’ಯೂ ಮುತೈದೆಯ ಆಭರಣವಾಗಿದ್ದು, ವಿಧವೆಯರು ಇದನ್ನು ಧರಿಸುವಂತಿಲ್ಲ. ವಾಲೆಯನ್ನು ಧರಿಸುವ ಹಾಲೆಗಳ ಭಾಗದಲ್ಲಿ ಅವರು ಹಿಂದೆ ವಾಲೆಯನ್ನು ಧರಿಸುತ್ತಿದ್ದುದರ ಕುರುಹಾಗಿ ದೊಡ್ಡ ರಂಧ್ರವನ್ನು ಕಾಣಬಹುದು. ವಿಧವೆಯರಿಗೆ ಮೂಗುತಿ ನಿಷೇಧವಿಲ್ಲ. ಇವರು ಕಿವಿಯ ಕರಾಪುಲ ಎಂಬ ಆಭರವನ್ನು ಉಳಿಸಿಕೊಳ್ಳಬಹುದಾಗಿದೆ.

ಆಧುನಿಕ ಮಹಿಳೆಯರು ಈ ಮೇಲಿನ ಎಲ್ಲ ಆಭರಣಗಳ ಬಳಕೆಯನ್ನು ಬಿಟ್ಟಿದ್ದಾರೆ. ಉಳ್ಳವರು ಬಂಗಾರದ ಆಭರಣವನ್ನು ತೊಡುತ್ತಿದ್ದಾರೆ.

ಕಲೆ: ಗಾಮೊಕ್ಕಲ ಮಹಿಳೆಯರ ಕಲೆಗಳಲ್ಲಿ ಒಪ್ಪಳಿ ನೇಯುವುದು, ಮಡಲು ನೇಯುವುದು ಹಾಗೂ ಜನಪದ ಚಿತ್ರಕಲೆಯಾದ ಶೇಡಿ ಬರೆಯುವುದು ಪ್ರಮುಖ.

ಒಪ್ಪಳಿ ಹೆಣೆಯುವ ಕಲೆ:

ಇದು ಗಾಮೊಕ್ಕಲು ಮಹಿಳೆಯರ ಪ್ರಮುಖ ಉಪಯೋಗೀ ಕರಕುಶಲ ಕಲೆ, ಹಸೆ, ಚಾಪೆ ಎಂಬುದಕ್ಕೆ ಪರ್ಯಾಯ ಹೆಸರೇ ಒಪ್ಪಳಿ. ಒಪ್ಪಳಿಯನ್ನು ಶರಾವತಿಯ ಕೊಳ್ಳದ ನೀರಿನಲ್ಲಿ ದಂಡೆಯ ಬದಿಗೆ ಬೆಳೆಯುವ ಬೇರಿನ ಹುಲ್ಲು ಹಾಗೂ ಶರಾವತಿಯ ದಂಡೆಯ ಮೇಲಿರುವ ಹಾಗೂ ಗದ್ದೆಯ ಬದಿಯಲ್ಲಿ ಬೆಳೆಯುವ ಮುಂಡಕಿ ಗಿಡದ ಎಲೆಯಿಂದ ತಯಾರಿಸುತ್ತಾರೆ.

ಬೇರಿನ ಹುಲ್ಲಿನ ಒಪ್ಪಳಿ:

ನವರಾತ್ರಿಯನ್ನು ಕಳೆದು ಬಳಿಕ ನದಿಯಲ್ಲಿ ಇಳಿತಬಿದ್ದ ಸಂದರ್ಭದಲ್ಲಿ ನದಿಗೆ ಇಳಿದು ಹುಲ್ಲನ್ನು ಕೊಯ್ದು ಹುಲ್ಲಿಗೆ ಅಂಟಿದ ಕೆಸರನ್ನು ಅದೇ ನದಿಯ ನೀರಿನಲ್ಲಿ ತೊಳೆದು ಹುಲ್ಲಿನ ತೆನೆಯ ಭಾಗವನ್ನು ಕತ್ತರಿಸಿ ಚೆಲ್ಲಿ ಬಳಿಕ ಹುಲ್ಲನ್ನು ತಂಪಿನಲ್ಲಿ ಒಣಗಿಸುತ್ತಾರೆ. ಒಣಗಿದ ಈ ಹುಲ್ಲನ್ನು ಗಂಟು ಕಟ್ಟಿ ಮನೆಯೊಳಗೆ ತೂಗಿಡುತ್ತಾರೆ. ಹಿಣಗೆಯ ಕೆಲಸವು ಮಳೆಗಾಲದಲ್ಲಿ ನಡೆಯುತ್ತದೆ. ಮಳೆಗಾಲದಲ್ಲಿ ಒಪ್ಪಳಿ ನೆಯ್ಯುವುದು, ಸುಲಭವೆಂಬ ಅಭಿಪ್ರಾಯಗಳಿವೆ. ಗದ್ದೆ ಬಿತ್ತು. ನೆಟ್ಟಿ ನೆಡುವ, ಕಳೆ ತೆಗೆಯುವ ಇತ್ಯಾದಿ ಗದ್ದೆ ಬತ್ತದ ಗದ್ದೆಯ ಕೆಲಸಗಳು ಮುಗಿದ ಬಳಿಕ ಮನೆಗೆಲಸದಲ್ಲಿ ಸವಡು ಮಾಡಿಕೊಂಡು ದಿನಕ್ಕೆ ಸ್ವಲ್ಪ ಸ್ವಲ್ಪ ಭಾಗ ಒಪ್ಪಳಿಗಳನ್ನು ಸಾಮಾನ್ಯವಾಗಿ ತಮ್ಮ ಮನೆಯ ಜನರ ಉಪಯೋಗಕ್ಕೆ ಬಳಸುತ್ತಾರೆ.

ಪೇಟೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದವು. ಮಹಿಳೆಯರು ತಾವು ನೇಯ್ದ ಒಪ್ಪಳಿಗಳನ್ನು ಹೊನ್ನಾವರದ ಪೇಟೆಗೆ ತಂದು ಮಾರಾಟ ಮಾಡುತ್ತಿದ್ದರು. ಆಗ ಈ ಒಪ್ಪಳಿಗಳು ಇವರ ಉಪಜೀವನಾಧಾರವಾಗಿದ್ದವು.

ಮುಂಡಿಗೆ ಹುಲ್ಲಿನ ಒಪ್ಪಳಿ:

ಕೇದಿಗೆ ಗಿಡಗಳನ್ನು ಇಲ್ಲಿಯ ಜನರು ಮುಂಡಿಗೊಡವೆ ಎನ್ನುತ್ತಾರೆ. ಬೇಲಿಬದಿಯಲ್ಲಿರುವ ಇವುಗಳನ್ನು ಪ್ರಾಚೀನ ಕಾಲದಿಂದ ಜೀವ ಬೇಲಿಯಾಗಿ ಸಂರಕ್ಷಿಸಿಕೊಂಡಿರುತ್ತಾರೆ. ಇವು ನೀರಿನ ಆಸರೆಯಿರುವ ಕಡೆ ಹಾಗೂ ಮರಳು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತವೆ. ಮಳೆಗಾಲ ಮುಗಿದ ಬಳಿಕ ಒಪ್ಪಳಿ ಮಾಡಲು ಇಷ್ಟಪಡುವವರು ಪ್ರತಿ ಮುಂಡಿಕಿಯ ಹಿಂಡಿನಿಂದ ಐವತ್ತರಿಂದ ನೂರು ಎಲೆಗಳನ್ನೇ ಕತ್ತರಿಸಿಕೊಳ್ಳುತ್ತಾರೆ. ಈ ಎಲೆಗಳಿಗೆ ಮೂರು ಕಡೆ ಮುಳ್ಳಿರುತ್ತವೆ.

ಇವುಗಳನ್ನು ಆರೇಳು ದಿನ ಬಿಸಿನಲ್ಲಿ ಬಯಲಿನಲ್ಲಿ ಒಣಗಿಸಿ, ಮನೆಗೆ ತಂದು ಒಂದು ರಾತ್ರಿ ನೀರು ಚಿಮುಕಿಸಿ ಹೊರಗಿಡುತ್ತಾರೆ. ಇವು ತುಸು ಮೆತ್ತಗಾದಾಗ ಮುಳ್ಳನ್ನು ಹೆರಸಿತೆಗೆಯುತ್ತಾರೆ. ಒಪ್ಪಳಿ ಹೆಣೆಯಲು ಬೇಕಾಗುವ ಅಳತೆಯಲ್ಲಿ ಸಿಗಿದು ಉದ್ದವಾಗಿ ಕಟ್ಟಿ ಹೊರೆ ಮಾಡಿ ಮಾಡಿಗೆ ಕಟ್ಟಿಡುತ್ತಾರೆ. ಮಳೆಗಾಲದಲ್ಲಿ ಒಪ್ಪಳಿ ಹೆಣೆದುಕೊಳ್ಳುತ್ತಾರೆ. ಇವು ಜೇಕಿನ ಹುಲ್ಲಿನ ಒಪ್ಪಳಿಗಿಂತ ಹೆಚ್ಚು ದಪ್ಪವಾಗಿರುತ್ತವೆ. ನದಿಯ ನೀರನ ಜವುಳು ಇವರ ಮನೆಯೊಳಗೂ ಉಕ್ಕುತ್ತಿತ್ತು. ಇಂಥ ನೆಲಕ್ಕೆ ಈ ಒಪ್ಪಳಿಗಳು ಹೆಚ್ಚು ಉಪಯುಕ್ತವಾಗಿದ್ದವು. ಈಗ ಎತ್ತಲೂ ನೆಲಗಟ್ಟಿನ ಹಂಚಿನ ಮನೆಗಳನ್ನು ಇವರು ಕಟ್ಟಿಕೊಳ್ಳುತ್ತಿದ್ದಾರೆ. ಪೇಟೆಯ ನೈಲಾನ್ ಹಸೆಗಳನ್ನು ಕೊಂಡುಕೊಳ್ಳುತ್ತಿದ್ದಾರೆ.

ಶೇಡಿಕಲೆ:

ಇದು ರಂಗೋಲಿ ಕಲೆಯ ಪರ್ಯಾಯ ನಾಮವಾಗಿದ್ದು, ಇದನ್ನು ಗಾಮೊಕ್ಕಲು ಶೇಡಿಬರೆಯುವುದು ಎನ್ನುತ್ತಾರೆ. “ಶೇಡಿ” ಎಂದರೆ ಜೇಡಿಮಣ್ಣು.ಇದು ಬಿಳಿ ಬಣ್ಣದ್ದಿರುತ್ತದೆ. ಇದು ಕರಾವಳಿ ಪ್ರದೇಶದಲ್ಲಿ ಸಂಕ್ರಾಂತಿಯ ನಂತರ ಹೆಚ್ಚಿನ ಪ್ರಮಾಣದಲ್ಲಿ ದೊರಕುತ್ತದೆ. ನೀರನ್ನು ಜಿನುಗಿಸುವ ಸ್ಥಳಗಳಲ್ಲಿ ಶೇಡಿಯು ಈ ದಿನಗಳಲ್ಲಿ ಹೆಚ್ಚಿಗೆ ಉಕ್ಕುತ್ತದೆಯೆಂದು ಆ ಪ್ರದೇಶದ ಜನರ ಅಭಿಪ್ರಾಯವಾಗಿದೆ. ಮಕರ ಸಂಕ್ರಾಂತಿಯ ಈ ದಿನಗಳಲ್ಲಿ ಇದನ್ನು ಆಯಾ ಪ್ರದೇಶದ ಜನರು ಹಾಗೂ ಮಾರಾಟಗಾರರು ಸಂಗ್ರಹಿಸಿಕೊಳ್ಳುತ್ತಾರೆ.

ಗೋಡೆಯಲ್ಲಿ ಫಲಕ ತಯಾರಿಸಿಕೊಳ್ಳಲು ಕೆಂಪು ಬಣ್ಣವನ್ನೂ ಅಲಂಕಾರಕ್ಕಾಗಿ ಹಳದಿ ಹಾಗೂ ಕರಿಬಣ್ಣಗಳನ್ನು ಇವರು ಬಳಸುತ್ತಾರೆ. ಮಳೆಗಾಲ ದಲ್ಲಿ ನೀರು ಹೀರುವ ಸ್ಥಳದಲ್ಲಿ ಕಂಡುಬರುವ ಕೆಂಪಿ ಹಾಗೂ ಹಳದಿ ಬಣ್ಣದ ಕಲ್ಲುಗಳನ್ನು ಆಯ್ದಿಟ್ಟುಕೊಂಡು ಅವುಗಳನ್ನು ಶೇಡಿ ಬರೆಯುವ ಸಂದರ್ಭದಲ್ಲಿ ಒಂದೆರಡು ದಿನ ನೀರಿನಲ್ಲಿ ನೆನೆ ಹಾಕಿ ತುಸು ನೀರನ್ನು ಸೇರಿಸಿ ಅರೆಯುವ ಕಲ್ಲಿನ ನಯವಾಗಿ (ಗಂಧವಾಗಿ) ಅರೆಯುತ್ತಾರೆ. ಬಳಿಕ ಇದನ್ನು ಬೆಂಕಿಯ ಮೇಲಿಟ್ಟು ಕುದಿಸಿ ಶೇಡಿ ಬರೆಯಲು ಬಳಸುತ್ತಾರೆ. ಕೆಂಪುಬಣ್ಣವನ್ನು ಜಾಂಜು ಎನ್ನಲಾಗುತ್ತದೆ.

ಕರಿಬಣ್ಣಕ್ಕಾಗಿ “ರಾಗಿ”ಯ ಬಳಕೆಯಿದೆ. ರಾಗಿಯ ಜೊತೆ ತೆಂಗಿನ ಕಾಯಿಯ ಸಣ್ಣ ಚೂರನ್ನು ಹಾಕಿ ಅವೆಲ್ಲವೂ ಕರಿಯಗುವವರೆಗೆ ಹುರಿದು ನಾರನ್ನು ಸೇರಿಸಿ ಅರೆದು ಕುದಿಸಿ ಕಪ್ಪು ಬಣ್ಣಕ್ಕಾಗಿ ಬಳಸುತ್ತಾರೆ.

ಶೇಡಿ ಕಲೆಯಲ್ಲಿ ಬಳಕೆಯಾಗುವ ಕುಂಚಗಳು ಸ್ಥಳೀಯ ವಸ್ತುಗಳಿಂದ ತಯಾರಾಗುತ್ತವೆ.

ಅಡಕೆಯ ಸಿಪ್ಪೆಯನ್ನು ಮೂರು, ಐದು ಬೆರಳುಗಳ ಆಕಾರದಲ್ಲಿ ಕತ್ತರಿಸಿಕೊಂಡು ಗೆರೆ ಎಳೆಯುವುದು ಒಂದು ಕ್ರಮವಾಗಿ ಈ ಕುಂಚವನ್ನು ಇವರು “ಗೆರೆ” ಎನ್ನುತ್ತಾರೆ. ಇದನ್ನು ಬಣ್ಣದಲ್ಲಿ ಅದ್ದಿಕೊಂಡು ಒಮ್ಮೆ ಫಲಕದ ಮೇಲೆ ಓಡಿಸಿದರೆ ಅಲ್ಲಿ ಸಮಾಂತರವಾದ ಮೂರು ಗೆರೆಯಲ್ಲಿಯ ಬೆರಳಿನ ಸಂಖ್ಯೆಯಷ್ಟು ರೇಖೆಗಳು ಮೂಡುತ್ತವೆ. ಶೇಡಿ ಬರೆಯುವ ಕ್ರಿಯೆ ಈ ಕ್ರಮದಿಂದ ವೇಗವಾಗಿ ನಡೆಯುತ್ತದೆ.

ಶೇಡಿ ಬರೆಯಲು ಬಳಸುವ ಇನ್ನೊಂದು ಕುಂಚವೂ ಅಡಕೆಯ ಸಿಪ್ಪೆಯ ನಾರಿನಿಂದ ತಯಾರಾಗುತ್ತದೆ. ಶೇಡಿ ಬರೆಯಲು ಬೇಕಾಗುವಷ್ಟು ಅಡಕೆಯ ಸಿಪ್ಪೆಯ ನಾರನ್ನು ತೆಗೆದುಕೊಂಡು ಹೆಬ್ಬೊಟ್ಟು ಮತ್ತು ಅದರ ಬಳಿಯ ತೋರುಬೆರಳಿನ ಸಹಾಯದಿಂದ ಶೇಡಿ ಬರೆಯುತ್ತಾರೆ.

ಶೇಡಿಯಲ್ಲಿಯ ಚೌಕಗಳಲ್ಲಿ ತುಂಬಲು ಈ ಕುಂಚವು ಹೆಚ್ಚು ಬಳಕೆಯಾಗುತ್ತದೆ.

ಮೂರನೆಯ ಕುಂಚವು ಶೇಡಿ ಬರೆಯುವವರ ತೋರುಬೆರಳು. ಇದನ್ನು ಮಲ್ಲಿಗೆ ದಂಡೆಯಂತಹಶೇಡಿಯಲ್ಲಿ ಬಳಸುತ್ತಾರೆ. ದೀಪಾವಳೆ ಹಬ್ಬದಲ್ಲಿ ಮತ್ತು ಮದುವೆ ಮನೆಯಲ್ಲಿ ಇವರ ಶೇಡಿಯ ವೈಭವವನ್ನು ಕಾಣಬಹುದು.

ಮಡಲು ಹೆಣೆಯುವುದು:

ತೆಂಗಿನ ಗರಿಗಳನ್ನು “ಮಡಲು” ಎನ್ನುತ್ತಾರೆ. ಇವುಗಳ ಬುಡದ ದೇಟನ್ನು ಕಡಿದು ಒಣಗಿಸಿ ಕಟ್ಟಿಗಾಗಿ ಬಳಸಿದರೆ ಉಳಿದ ಗರಿಯನ್ನು ಸಮೀಪದ ಹೊಳೆಯ ಕೆರೆಯ ನೀರಿನಲ್ಲಿ ನೆನೆಯಿಸಿ ಮಡಲು ಹೆಣೆಯುತ್ತಾರೆ. ಹೆಣೆದ ಮಡಲನ್ನು ಅಲಕು ಎಂದೂ ಅದನ್ನು ಇಬ್ಭಾಗಿಸಿದಾಗ ಅಲಕಿದ ಸಿನ್ರೆಯೆಂದೂ ಕರೆಯುತ್ತಾರೆ.

ಅಲಕನ್ನು ಮನೆಯ ಮಾಡು ಹೊದಿಸಲು ಮಣ್ಣಿನ ಗೋಡೆಗಳು ಮಳೆಯ ನೀರಿನಿಂದ ತೊಯ್ಯದಂತೆ ಅಡ್ಡಕಟ್ಟುವುದಕ್ಕೆ ಬಳಸಲಾಗುತ್ತದೆ. ಬೇಸಿಗೆಯಲ್ಲಿ ಮನೆಯ ಮುಂದೆ ಚಪ್ಪರದ ಹೊದಿಕೆಯಾಗಿ ದನಕರುಗಳಿಗೆ ತಂಪಾಗುವಂತೆ ಚಪ್ಪರ ಕಟ್ಟಲು ಬಳಸಲಗುತ್ತದೆ. ಹೆಣೆಗೆ ಅಲಕುಗಳ ಸಿಗ್ತೆಗಳನ್ನು ಕಲಾತ್ಮಕವಾಗಿ ಜೋಡಿಸಿ ಕಟ್ಟುವುದು ಹೊದಿಸುವುದು ಕೂಡ ಇವರ ಕರಕುಶಲ ಕಲೆಯಾಗಿದೆ.

ಅಲಕುಗಳನ್ನು ತಯಾರಿಸಿ ತಾವು ಬಳಸಿದ ಬಳಿಕ ಉಳಿದವುಗಳನ್ನು ಮಾರಾಟ ಮಾಡಲಾಗುತ್ತದೆ. ಅವರ್ಶಯಕತೆಯಿದ್ದವರು ಕೆಲವು ಹೊರೆಗಳನ್ನು ಕೊಂಡು ಹೋಗುತ್ತಾರೆ. ಆದರೆ ಪ್ಲಾಸ್ಟಿಕ್ ಬಳಕೆ ಈ ವೃತ್ತಿಗೆ ಗಂಡಾಂತರ ತಂದಿದೆ.

ಹಿಡಿ ತಯಾರಿಕೆ, ಹಿಡಿ ಎಂದರೆ ಕಸಬರಿಗೆ ತೆಂಗಿನ  ಹಸಿ ಮಡಲು ಮರದಿಂದ ಬಿದ್ದಾಗ ಅವುಗಳ ಕಡ್ಡಿಯನ್ನೂ ತೆಗೆದಿಟ್ಟುಕೊಳ್ಳುತ್ತಾರೆ. ಅವನ್ನೆಲ್ಲ ಜೋಡಿಸಿದಾಗ ಒಂದು ಕೈ ಹಿಡಿಯಷ್ಟು ದಪ್ಪನಾದಾಗ ಬಾಳೆನಾರಿನಿಂದ ಬಂಧಿಸಿ ಮಾರಾಟ ಮಾಡುತ್ತಾರೆ. ಪ್ರತಿ ಹಿಡಿಗೆ ಐದರಿಂದ ಏಳು ರೂಪಾಯಿ ಸಿಗುತ್ತದೆ.

ಕತ್ತದ ಹುರಿ ತಯಾರಿಕೆ:

ಸಮೀಪದಲ್ಲಿ ಹೊಳೆ ಇರುವ ಸ್ಥಳದಲ್ಲಿ ತೆಂಗಿನ ಸಿಪ್ಪೆಯನ್ನು ಹುಗಿದುಕೊಲೆಯಿಸಿ ನಾರನ್ನು ತೆಗೆಯುವದನ್ನು ಹೆಂಗಸರು, ಗಂಡಸರು ಲಿಂಗಭೇದವಿಲ್ಲದೆ ನಡೆಸುತ್ತಾರೆ. ಹೆಣೆಗೆಯಲ್ಲಿ ಹೆಂಗಸರು ಗಂಡಸರಿಗೆ ನೆರವಾಗುತ್ತಾರೆ. ತಮ್ಮ ಮನೆ ಖರ್ಚಿಗೆಂದು ಹೆಣೆದುಕೊಳ್ಳುತ್ತಾರೆ. ಇದು ಆರ್ಥಿಕ ಲಾಭ ತರುವ ಉದ್ಯೋಗವಾಗಿ ಬಳಕೆಯಲಿಲ್ಲ. ಕತ್ತವನ್ನು ಕೊಳೆಯಿಸಿ ಮಾರಾಟ ಮಾಡುವುದು ಅಲ್ಲಲ್ಲಿ ಕಂಡುಬರುತ್ತಿದೆಯಾದರೂ ಈ ಹಣ ಗಂಡಸರ ಕೈ ಸೇರುತ್ತದೆ.

ಆಹಾರ ಪದ್ಧತಿ:

ಶರಾವತಿ ನದಿಯ ದಂಡೆಯ ಮೇಲೆ ವಾಸಿಸುವ ಇವರು ಮೀನನ್ನು ತಮ್ಮ ಆಹಾರ ಪರಿಸರಗಳಲ್ಲೊಂದಾಗಿ ಸೇರಿಸಿಕೊಂಡಿರುವುದು ಸಹಜವಾಗಿದೆ. ಸಮುದ್ರದ ಮೀನು ಕೂಡ ಇವರಿಗೆ ಸುಲಭ ಲಭ್ಯವಾಗಿದೆ. ನದಿಯಲ್ಲಿ ನೀರು ಇವರ ವಸತಿ ಪ್ರದೇಶದ ಒಳಹೊಕ್ಕು ಸಣ್ಣ ಸಣ್ಣ ಅಳವೆಗಳಲ್ಲಿ ಹರಿಯುತ್ತದೆ. ಇಲ್ಲಿ ತಮ್ಮ ಮನೆ ಖರ್ಚಿಗಾಗಿ ವಿವಿಧ ಬಗೆಯ “ಕುಳಿ”ಗಳನ್ನು ಮಾಡಿ ಮೀನವನ್ನು ಹಿಡಿಯುತ್ತಾರೆ. ಈ ಕೆಲಸದಲ್ಲಿ ಮಕ್ಕಳು ಗಂಡಸರು ಹೆಚ್ಚು ಪಾಲ್ಗೊಳ್ಳುತ್ತಾರೆಯಾದರೂ ಹೆಂಗಸರು ಈ ಕೆಲಸದಲ್ಲಿ ಸೇರಿಕೊಳ್ಳುವುದಂಟು. ಸಮುದ್ರದಮೀನನ್ನು ಹೊನ್ನಾವರ ಬಂದರಿನಲ್ಲಿರುವ ಮರಾಟ ಸ್ಥಳದಿಂದ ಕೊಂಡು ತರುತ್ತಾರೆ. ಹೊಳೆಯ ಮೀನನ್ನು ಸ್ಥಳೀಯ ಅಂಬಿಗರಿಂದ ಕೊಂಡುಕೊಳ್ಳುತ್ತಾರೆ. ಮೀನು ಮಾರಾಟಗಾರರು ಹೊನ್ನಾವರದಿಂದದೂರದ ನೆಲೆಗಳಿಗೆ ಹೋಗಿ ಮೀನು ಮಾರಾಟ ಮಾಡುತ್ತಾರೆ. ಹೊಳೆ, ನದಿ ಸಮುದ್ರದಿಂದ ದೂರ ನೆಲೆಸಿರುವವರು ಈ ಮಾರಾಟಗಾರರಿಂದ ಮೀನನ್ನು ಕೊಂಡುಕೊಳ್ಳುತ್ತಾರೆ.

ಬಳಚು, ಚಿಪ್ಪಿಕಲ್ಲು: ಕಲಗ ಮುಂತಾದ ಸಮುದ್ರ ಮೀನುಗಳು ಸಮೀಪದ ಸಮುದ್ರ ದಂಡೆಯಲ್ಲಿ ದೊರೆಯುತ್ತವೆ. ಚಿಪ್ಪಿಕಲ್ಲು, ನೀಲಿಕಲ್ಲುಗಳು ದೂರದ ಸಮುದ್ರ ದಂಡೆಯಲ್ಲಿ ದೊರೆಯುತ್ತವೆ. ಇವುಗಳನ್ನು ಸಂಗ್ರಹಿಸುವ ಮೀನುಗಾರರು ಇವರ ಪ್ರದೇಶದಕ್ಕೆ ತಂದು ಮಾರಾಟ ಮಾಡುತ್ತಾರೆ. ಹೊನ್ನಾವರ ಮೀನು ಮಾರ್ಕೆಟ್ಟಿನಲ್ಲಿಯೂ ಇವು ದೊರೆಯುತ್ತವೆ.

ಮನೆ:ಅಡಿಗೆ, ಉಣಿಸುತಿನಿಸು:

ಆಹಾರ ಪರಿಕರಗಳನ್ನು ಅಡುವ ವಿಧಾನದಲ್ಲಿ ಸ್ಥಳೀಯ ಇತರ ಜಾತಿಯ ಜನರು ಅಡುವ ವಿಧಾನದ ಹೋಲಿಕೆಯಿದೆ.

ಮೀನಪಳ್ದೆ: ಮೀನುಗಳ ತಲೆಬಾಲ, ಕರುಳು, ಗಿರಿ(ಗರಿ), ಹಿಣಜುಗಳನ್ನು ಮೆಟ್‌ಗತ್ತಿಯ ಸಹಾಯದಿಂದ ತೆಗೆದು ಸ್ವಚ್ಛಮಾಡಿ ತೊಳೆದು ತುಂಡು ಮಾಡಿ ತುಸು ಉಪ್ಪು ಸೇರಿಸಿಡುತ್ತಾರೆ.

ತೆಂಗಿನ ಕಾಯಿಯ ಸುಳಿಗೆ, ಒಣಮೆಣಸು, (ಬ್ಯಾಡಗಿ ಮೆಣಸು) ಹಂಬಿನ ಮೇಲೆ ಎಣ್ಣೆ ಸೇರಿಸದೆ ಹುರಿದ ಒಂದೆರಡು ಕೊತ್ತಂಬರಿ, ಅರ್ಧ ಚಮಚ ಬಡಾಯಿ ಬಿಂಬಲಕಾಯಿ ಅಥವಾ ವಾಟೆ ಹುಳಿ ಸೇರಿಸಿ ಗಂಧವಾಗಿ ಅರೆದು ನೀರು ಸೇರಿಸಿ ಕುದಿಸಿ, ಅದಕ್ಕೆ ತೊಳೆದ ಮೀನಿನ ತುಂಡುಗಳನ್ನು ಹಾಕಿ ಉಪ್ಪು ಸೇರಿಸಿ ತುಸು ಕುದಿಸಿ ಇಳಿಸುತ್ತಾರೆ.

ಬಳಚು ಕಲಗಗಳನ್ನು ಕೂಡ ಮೇಲಿನಂತೆ ಮಸಾಲೆ ತಯಾರಿಸಿ ಆಡುತ್ತಾರೆಯಾದರೂ ಇದನ್ನು ಹೊಡಿ(ಪಲ್ಯ) ಮಾಡುವ ವಿಧಾನದಲ್ಲಿ ತುಸು ವ್ಯತ್ಯಾಸವಿದೆ.

ಹೊಡಿ: ಚಿಪ್ಪುಗಳನ್ನು ಬೇರ್ಪಡಿಸಿದ ಮಾಂಸಕ್ಕೆ ಕಾಯಿಸುಳಿ, ಮೆಣಸಿನ ಪುಡಿ, ಉಪ್ಪು ಸೇರಿಸಿ ನೀರು ಬತ್ತುವಂತೆ ಬೇಯಿಸಿದರೆ ಪಲ್ಯ ಸಿದ್ಧ. ಇಷ್ಟವೆನಸಿದರೆ ಮಾವಿನಕಾಯಿಯ ಐದಾರು ತುಂಡು, ಬಿಂಬಲಕಾಯಿ ಅಥವಾ ನಾಲ್ಕಾರು ಹುಳಿಸೊಪ್ಪು (ಒಣಗಿಸಿದ ಮಾವಿನ ಕಾಯಿ ಹೋಳು, ಮುರಗಲ ಹಣ್ಣಿನ ಸಿಪ್ಪಿ ಕಡಜಲಕಾಯಿ ಇತ್ಯಾದಿ) ಸೇರಿಸುತ್ತಾರೆ.

ಮಾಂಸದ ಅಡುಗೆ: ಕೋಳಿ, ಕುರಿ, ಬೇಟೆಯಲ್ಲಿ ದೊರೆತ ಪ್ರಾಣಿಗಳ ಮಾಂಸವನ್ನು ಆಡುವ ಪದ್ಧತಿಯು ಕೂಡ ಸ್ಥಳೀಯ ಇತರರ ಪದ್ಧತಿಗಿಂತ ಹೆಚ್ಚು ವ್ಯತ್ಯಾಸ ಹೊಂದಿರುವುದಿಲ್ಲ.

ಕೋಳಿಪಳ್ದೆ: ತೆಂಗಿನಕಾಯಿ ಸುಳಿ, ಒಣಮೆಣಸು, ಗರಂ ಮಸಾಲೆ, ಉಳ್ಳಾಗಡ್ಡಿ, ಬೆಳ್ಳುಳ್ಳಿ, ಅರಿಶಿನ ಮುಂತಾದ ಪರಿಕರಗಳನ್ನು ಅರೆದು ಸ್ವಚ್ಛ ಮಾಡಿ ಉಳ್ಳಾಗಡ್ಡೆಯ ಕೊಚ್ಚಲನೊಂದಿಗೆ ಬೇಯಿಸಿದ ಮಾಂಸಕ್ಕೆ ಸೇರಿಸಿ ಕುದಿಸುತ್ತಾರೆ. ಉಪ್ಪು ಸೇರಿಸುತ್ತಾರೆ;

ಹಬ್ಬ-ಹರಿದಿನ, ಮದುವೆಯ ಮೊದಲೆರಡು ದಿನ ಮಾಂಸಾಹಾರ ಸೇವನೆಯಿಲ್ಲ. ಈ ದಿನಗಳಲ್ಲಿನಿತ್ಯದ ಅಡುಗೆಗಳಾದ ಅಕ್ಕಿಯ ಅನ್ನ, ತರಕಾರಿಯ ಸಾರು ಪಲ್ಯಗಳಿರುತ್ತವೆ. ಎಲ್ಲ ಅಡುಗೆಗಳಿಗೆ ತೆಂಗಿನ ಕಾಯಿಸುಳಿ ಬೇಕೇಬೇಕು. ಎಣ್ಣೆಯ ಬಳಕೆ ಅತ್ಯಲ್ಪ. ತೆಂಗಿನ ಕಾಯಿಯ ಸುಳಿಗೆ ಮಸಾಲೆ ಜೀನಸುಗಳನ್ನು ಸೇರಿಸಿದ ಬಳಿಕ ಅದನ್ನು ರುಬ್ಬುಗಲ್ಲಿನಲ್ಲಿ ಅರೆದು ಅಡುವದು ಹೆಚ್ಚು ರೂಢಿಯಲ್ಲಿದೆ.

ಮಾವಿನ ಹಣ್ಣಿನ ತಂಬುಳಿ:

ಸಣ್ಣದಾಗಿರುವ ಹತ್ತರಿಂದ ಹದಿನೈದು ಮಾವಿನ ಹಣ್ಣುಗಳ ಸಿಪ್ಪೆಯನ್ನು ಸುಲಿಯುತ್ತಾರೆ.

ಒಂದು ಕಡಿ ತೆಂಗಿನಕಾಯಿಯ ಸುಳಿಗೆ ಎರಡು ಚಮಚ ಎಣ್ಣೆ ಸೇರಿಸದೆ ಹುರಿದ ಕೊತ್ತಂಬರಿ (ಬೀಜ) ಹಾಕಿ ಅರೆದು, ಒಂದೆರಡು ಬೇವಿನ ಸೊಪ್ಪನ್ನು ಎಣ್ಣೆಯಲ್ಲಿ ಬಾಡಿಸಿ ಅರೆಯುವ ಮಸಾಲೆಗೆ ಸೇರಿಸಿದರೆ ಪರಿಮಳ ಹೆಚ್ಚುತ್ತದೆ.

ಅರೆದ ಮಸಾಲೆಯಲ್ಲಿ ಸುಲಿದು ಹಣ್ಣುಗಳನ್ನು ಹಾಕಿ ಪ್ರತಿಯೊಂದು  ಹಣ್ಣನ್ನು ತುಸು ಹಿಂಡಿ ಗೊರಟನ್ನು ಅಲ್ಲಿಯೇ ಬಿಟ್ಟು. ಉಪ್ಪು ಸೇರಿಸುತ್ತಾರೆ. ೧ ಚಮಚ ಸಾಸಿವೆ, ಚಿಕ್ಕ ಚಿಕ್ಕ ತುಂಡು ಮಾಡಿದ ಒಂದು ಒನ ಮೆಣಸು, ೧ ಚಮಚ ಉದ್ದಿನ ಬೇಳೆ ಹಾಗೂ ಎರಡು ಚಮಚ ಎಣ್ಣೆ ಕೂಡಿಸಿ ಒಗ್ಗರಣೆ ತಯಾರಿಸಿ ತಂಬುಳಿಗೆ ಸೇರಿಸುತ್ತಾರೆ. ಇದನ್ನು ಅನ್ನಕ್ಕೆ ಸೇರಿಸಿ ಕಲಸಿ ಉಣ್ಣುತ್ತಾರೆ.

ಮಾವಿನ ಹಣ್ಣಿನ ಸಾರು:

ಹತ್ತು ಹುಳಿ ಮಾವಿನ ಹಣ್ಣುಗಳನ್ನು ಸುಲಿದು ೨ ಚಮಚ ಉಪ್ಪು, ನಾಲ್ಕು ಚಮಚ ಬೆಲ್ಲ ಸೇರಿಸಿ, ಬೇಯಿಸಿ. ಒಂದು ಕಡಿ ತೆಂಗಿನಕಾಯಿಯ ಸುಳಿ ಆರು ಒಣಮೆಣಸು ೧ ಚಮಚ ಹುರಿದ ಕೊತ್ತಂಬರಿ, ೧/೨ಚಮಚ ಬಡಾಯಿ ಸೊಪ್ಪು ಒಂದು ಸಣ್ಣ ಬೆಳ್ಳುಳ್ಳಿ ಸೇರಿಸಿ ಅರೆಯುತ್ತಾರೆ. ಇದನ್ನು ಬೆಂದ ಹಣ್ಣಿನ ಪಾತ್ರೆಗೆ ಹಾಕಿ ಕುದಿಸುತ್ತಾರೆ. ತಂಬುಳಿಯಲ್ಲಿ ಹೇಳಿದಂತೆ ಒಗ್ಗರಣೆ ಮಾಡುವರು. ಇಳಿಸುವಾಗ ಒಗ್ಗರಣೆ ಎಲೆ ಹಾಕುವರು. ಇದು ಅನ್ನವನ್ನು ಕಲಿಸಿ ಉಣ್ಣುವ ವ್ಯಂಜನವಾಗಿದೆ.

ಸುಕಿನುಂಡೆ:

ಮದುವೆಯ ಊಟಕ್ಕೆ ಹೆಣ್ಣಿನ ತಾಯಿಗೆ ಪೊಟ್ಲೆಕಟ್ಟ ಕೊಡುವುದಕ್ಕೆ ಅಮಿಯ ದಿನ ಈ ಕಜ್ಜಾಯದ ಬಳಕೆಯಿತ್ತು. ಇದನ್ನು ಮನೆಯ ಹೆಂಗಸರು ತಯಾರಿಸುತ್ತಿದ್ದರು. ಈ ಕಜ್ಜಾಯದ ಬದಲಿಗೆ ಕಜ್ಜಾಯ ಮಾಡುವ ಗಂಡಸರನ್ನು ಕರೆಸಲಾಗುತ್ತದೆ.

ವಿಧಾನ: ಸುಮಾರು ಮೂವತ್ತು ಕೆ.ಜಿ. ಕಡ್ಲೆಕಾಳನ್ನು ಮುನ್ನಾದಿನ ರಾತ್ರಿಯಲ್ಲಿ ನೆನೆಹಾಕಿ ಮರುದಿನ ಮುಂಜಾನೆ ತೊಳೆದು ಬೇಯಿಸಿ ಅರೆಯುವ ಕಲ್ಲಿನಲ್ಲಿ ಅರೆಬರೆ ಅರೆದು ತೆಗೆಯಬೇಕು.

ತೆಳುಬೆಲ್ಲ (ಸ್ಥಳೀಯ ಬೆಲ್ಲ)ವನ್ನು ದೊಡ್ಡ ಪಾತ್ರೆಗೆ ಹಾಕಿ ಅದು ಅಂಟು ಬರುವವರೆಗೆ ಕಾಯಿಸಬೇಕು. (ಈ ಬೆಲ್ಲದ ಒಂದು ಹನಿಯನ್ನು ನೀರಿಗೆ ಹಾಕಿ. ಅದು ಮುದ್ದೆಯಾದರೆ ಪಾಕ ಸಿದ್ಧವಾದಂತೆ) ಹತ್ತರಿಂದ ಹದಿನೈದು ತೆಂಗಿನಕಾಯಿಯ ಸುಳಿಯನ್ನು ಕೆರೆದು ಇಳಿಸಿದ ಪಾಕಕ್ಕೆ ಹಾಕಿರಿ, ಉಪ್ಪು-೧/೨ ಚಮಚ, ಯಾಲಕ್ಕಿ ಪುಡಿ-ನಾಲ್ಕಾರು ಚಮಚ, ಅರೆಬರೆ ಅರೆಬರೆ ಅರೆದ ಕಡ್ಲೆ ಹಾಕುವರು. ಸವಟಾಡಿಸಿ ತಣಿದ ಮೇಲೆ ಉಂಡೆ ಕಟ್ಟುವರು. ಪಾಕ ಒಲೆಯ ಮೇಲೆ ಕುದಿಯುತ್ತಿರುವಾಗ ಕಾಯಿಸುಳಿ, ಅರೆದ ಕಡ್ಲೆ ಹಾಕಿದರೆ ಬೆಲ್ಲ ನೀರಾಗುತ್ತದೆ. ಬಹಳ ಹೊತ್ತು ಸವಟಾಡಿಸಬೇಕಾಗುತ್ತದೆ.

ಪಂಚಾಕಜ್ಜಾಯ:  ಇದನ್ನು ಚವತಿ ಹಬ್ಬದ ದಿನ ತಯಾರಿಸುತ್ತಾರೆ.

ವಿಧಾನ ೧: ಕಡ್ಲೆ ಅಥವಾ ಪಚ್ಚೆಪ್ಪನ್ನು ಎಣ್ಣೆ ಹಾಕದೆ ಹುರಿದು ಬೀಸಿ, ಸಕ್ಕರೆ ಅಥವಾ ಸಕ್ಕರೆಯ ಅಥವಾ ಗಟ್ಟಿಬೆಲ್ಲದ ಪುಡಿಯನ್ನು ಹಾಗೂ ಹುರಿದ ತುಸು ಎಳ್ಳನ್ನು ಸೇರಿಸುತ್ತಾರೆ.

ವಿಧಾನ ೨: ತೆಳು ಬೆಲ್ಲವನ್ನು ಕಾಸಿ ತಣಿಸಿ ಕಾಯಿಸುಳಿ ಹುರಿದ ತುಸು ಎಳ್ಳು ಹಾಗು ಮೇಲಿನಂತೆ ತಯಾರಿಸಿಕೊಂಡ ಹಿಟ್ಟನ್ನು ಸೇರಿಸುತ್ತಾರೆ. ಪಂಚಕಜ್ಜಾಯವನ್ನು ತುಳಸಿಗೆ ನೈವ್‌ಏದ್ಯ ಮಾಡಿ ಪ್ರಸಾದ ರೂಪವಾಗಿ ಸ್ವೀಕರಿಸುತ್ತಾರೆ.

ಪನ್ನೀರು ಕಾಳು: ಇದು ಬೆಂಕಿಯನ್ನು ಬಳಸದೇ ತಯಾರಿಸುವ ಖಾದ್ಯ.

ಹೆಸರು ಅಥವಾ ಕಡಲೆಯನ್ನು ಸ್ವಚ್ಛನೀರಿನಲ್ಲಿ ಒಂದು ರಾತ್ರಿ ನೆನೆಹಾಕಿ ಮರುದಿನ ನೀರನ್ನು ಸೊಸುತ್ತಾರೆ. ನೀರಿನಲ್ಲಿ ನೆನೆದು ಕಾಳು ಪನ್ನೀರು ಕಾಳು. ಪಚ್ಚನೆಯ ನೀರಿನಲ್ಲಿ ಹಾಕಿದ ಕಾಳು ಪನ್ನೀರು ಕಾಳು ಎಂಬುದಾಗಿ ಹಳೆಯ ಹೆಸರನ್ನು ಈ ಅಡುಗೆ ಉಳಿಸಿಕೊಂಡಿದೆ.

ಹುರಿಯಕ್ಕಿ ಉಂಡೆ: ಇದು ಮಕ್ಕಳಿಗಾಗಿ ತಯಾರಿಸುವ ಖಾದ್ಯ.

ಕುಚ್ಚಗಿ ಅಕ್ಕಿಯನ್ನು ಹಂಚಿನ ಮೇಲೆ ಎಣ್ಣೆ ಹಾಕದೆ ಹುರಿಯುವರು, ಬೆಲ್ಲದ ಪಾಕ ಮಾಡಿ ಇಳಿಸುವರು. ತುಸು ತಣಿದ ಬಳಿಕ ಒಂದು ಸಿದ್ದೆ ಅಕ್ಕಿಗೆ ಒಂದು ತೆಂಗಿನ ಕಾಯಿಯ ಸುಳಿಯ ಪ್ರಮಾಣದಲ್ಲಿ ಸುಳಿಯನ್ನು ಬೆಲ್ಲದ ಪಾಕಕ್ಕೆ ಸೇರಿಸುವರು. ಅಕ್ಕಿಯ ಹಿಟ್ಟನ್ನು ಹಾಕಿ ತೊಳಸಿ ಸುಟ್ಟ ಗೇರುಬೀಜ ಒಡೆದು ಅದರೊಳಗಿನ ಹೊಂಗನ್ನು ಸೇರಿಸಿ ಉಂಡೆ ಕಟ್ಟುವರು. ಗೋಸೆಯ ಹಿಟ್ಟು ತೆಳ್ಳವಿನಷ್ಟು ಗಂಧವಾಗಬಾರದು. ಅಷ್ಟು ತೆಳ್ಳಗೂ ಇರಬಾರದು. ಕಡೆದ ಮೊಸರಿನಂತಿರಬೇಕು. ಹಿಟ್ಟಿಗೆ ಉಪ್ಪು ಸೇರಿಸಿ ಕಾವಲಿಗೆ ಎಣ್ಣೆ ತಿಕ್ಕಿ ದೋಸೆಯನ್ನು ಎರೆಯಬೇಕು.

ಇದನ್ನು ವಠಾಣಿ, ಕಡ್ಲೆ, ಪಚ್ಚೆಪ್ಪುಗಳ ಪದಾರ್ಥಗಳೊಡನೆ ತಿನ್ನಬೇಕು.

ವಠಾಣಿ ಪದಾರ್ಥ: ಅರ್ಧ ಕೆ.ಜಿ. ವಠಾಣಿ ಕಾಳನ್ನು ಅರ್ಧ ದಿನ ನೆನೆಯಿಟ್ಟು ತೊಳೆದು ಬೇಯಿಸಬೇಕು. ಇದು ಬೇಯುವಾಗ ಒಂದು ಉಳ್ಳಾಗಡ್ಡೆಯ ಸಿಗ್ಗೆ ೧/೨ಚ. ಅರಿಶಿನ, ನಾಲ್ಕು ಬಟಾಟೆಯ ತುಂಡುಗಳು, ಅಥವಾ ಬೇರ ಹಲಸಿನ ಕಾಯಿಯ ತುಂಡುಗಳನ್ನು ಕೂಡಿಸಬೇಕು.

ಒಂದು ತೆಂಗಿನಕಾಯಿಯ ಸುಳಿಗೆ ಎಣ್ಣೆ ಹನಿಸಿ ಗರಿಗರಿಯಾಗಿ ಹುರಿದುಕೊಂಡು ಹತ್ತು ಒಣಮೆಣಸು ಹುರಿದ ೨ ಚಮಚ ಕೊತ್ತಂಬರಿ ಅರ್ಧ ಚಮಚ ಬಡಾಯಿ ಸೊಪ್ಪು, ಅರ್ಧ ಚಮಚ ಜೀರಿಗೆ ಒಂದು ಚಿಕ್ಕ ಬೆಳ್ಳುಳ್ಳಿಯ ಎಸಳುಗಳನ್ನು ಸೇರಿಸಿ ಅರೆಯಬೇಕು. ೨ ಚಮಚ ಉಪ್ಪು ಸೇರಿಸಬೇಕು ಬೆಂದ ವಠಾಣೆಗೆ ಅರೆದ ಮಸಾಲೆಯನ್ನು ಹಾಕಿ ಕುದಿಸಿ ಇಳಿಸಬೇಕು.

ಹಿಂದೆ ಪಚ್ಚೆಸರು, ಹೆಸರು, ಉದ್ದುಗಳನ್ನು ತಮ್ಮ ತಮ್ಮ ಗದ್ದೆಯಲ್ಲಿ ಬೆಳೆದುಕೊಳ್ಳುತ್ತಿದ್ದರು. ಈಗ ಇಂಥ ಬೆಳೆ ಬೆಳೆಯುವುದು ನಿಂತಿದೆ. ಪೇಟೆಯಿಂದ ತರಕಾರಿ, ಬೇಳೆಕಾಳುಗಳನ್ನು ಕೊಂಡು ತರುತ್ತಾರೆ. ಇದರಿಂದ ಸಾಕಷ್ಟು ಆಹಾರ ಸಿಗುವುದಿಲ್ಲ. ಹಣವೂ ಖರ್ಚು, ಇವರಿಗೆ ಬಡತನವೂ ಹೆಚ್ಚು.

ಮಂಡಕ್ಕಿ ಉಂಡೆ: ಹಚ್ಚಿ ದೀಪಾವಳಿ ಅಷ್ಟಮಿ ಹಬ್ಬದ ದಿನ ಈ ಉಂಡೆ ಮಾಡುತ್ತಾರೆ.

ಹುರಿಯಕ್ಕಿ ಉಂಡೆಗೆ ತಯಾರಿಸಿಕೊಳ್ಳುವಂತೆ ಬೆಲ್ಲದ ಪಾಕ ಮಾಡಿಟ್ಟು ಅದು ತಣಿದು ಬಳಿಕ ಕಾಯಿ ಕೆರೆದು ಹಾಕಿ. ತೊಳಸಬೇಕು. ಕೊನೆಗೆ ಮುಂಡಕ್ಕಿ ಅಥವಾ ಹೊದಳು ಹಾಕಿ ತೊಳಸಿ ಉಂಡೆ ಕಟ್ಟಬೇಕು.

ಪಾಯಸ:

ಕಡ್ಲೆಬೇಳೆಯನ್ನು ಬೇಯಿಸಿ. ಒಂದು ಸಿದ್ದೆ ಕಡ್ಲಿಬೇಳೆಗೆ ಒಂದು ತೆಂಗಿನ ಕಾಯಿ ಪ್ರಮಾಣದಲ್ಲಿ ತೆಗೆದುಕೊಂಡು ಸುಳಿ ಮಾಡಿ. ಅದನ್ನು ನಾಲ್ಕಾರು ಯಾಲಕ್ಕಿ ಜೊತೆ ಅರೆದು ತೆಗೆಯಬೇಕು. ಒಂದು ಮುಷ್ಟಿ ಅಕ್ಕಿರವೆಯನ್ನು ಸೇರಿಸಬೇಕು. ಮತ್ತು ಬೆಲ್ಲ ಕೂಡಿಸಿ ಬೆಂದ ಕಡ್ಲೆ ಬೇಳೆಯ ಪಾಯಸಕ್ಕೆ ಹಾಕುವರು. ಪಾಯಸವು ಬಾಳೆ ಎಲೆಯ ಮೇಲೆ ಬೇಗ ಹರಿದು ಹೋಗಬಾರದಷ್ಟು ದಪ್ಪವಾಗಿರಬೇಕು.

ಮೊಗೆಕಾಯಿಯ ಹುಳಿ:

ಒಂದು ಸಣ್ಣಮೊಗೆಕಾಯಿಯನ್ನು ಚೊಮ್ಮ(ಸಿಪ್ಪೆ) ತಿರುಳು ತೆಗೆದು ದೊಡ್ಡ ಹೋಳುಗಳಾಗಿ ಕೊಚ್ಚುವರು. ಅರ್ಧ ಬೊಗಸೆ ತೊಗರಿಬೇಳೆಯನ್ನು ನೀರಿಟ್ಟು ಬೇಯಬಿಡಬೇಕು. ಅರೆಬೆಂದಾಗ ಮೊಗೆಕಾಯಿಯ ಹೋಳು ಒಂದು ಉಳ್ಳಾಗಡ್ಡೆಯ ಕೊಚ್ಚಲನ್ನ ಬೇಳೆಯ ಪಾತ್ರೆಗೆ ಹಾಕಿ ಬೇಯಿಸಬೇಕು.

ಅರ್ಧ ತೆಂಗಿನಕಾಯಿಯ ಸುಳಿ ಆರು ಒಣಮೆಣಸು ಹುರಿದ ರಾಚು ಕೊತ್ತಂಬರಿ, ಹುರಿದ ಹತ್ತು ಕಾಳು ಬಡಾಯಿ ಸೊಪ್ಪು, ಹುರಿದ ೧/೨ ಚಮಚ ಜೀರಿಗೆ ತುಸು ಅರಿಶಿಣ ಕೂಡಿಸಿ ಅರೆದು ಬೆಂದ ಬೇಳೆಯ ಪಾತ್ರೆಗೆ ಹಾಕಿ ಉಪ್ಪು ತುಸು ನೀರು ಕೂಡಿಸಬೇಕು.

ಸಿಪ್ಪೆಯನ್ನು ಗೊಜ್ಜು ಸುಕ್ಕಾ ಮಾಡಿ ಬಳಸಬಹುದು.