ಮದುಮಕ್ಕಳ ಸಿಂಗಾರ:

ಮದುಮಗ ಮದುಮಗಳನ್ನು ಅವರವರ ಮನೆಯಲ್ಲಿ ಸಿಂಗರಿಸಲಾಗುತ್ತದೆ. ಮದುಮಗನ ಅಕ್ಕನ ಗಂಡ ಭಾವ ಈ ಕಾರ್ಯದಲ್ಲಿ ಹೆಚ್ಚು ಭಾಗವಹಿಸುತ್ತಾಣೆ. ಮದುಮಗನಿಗೆ ಹೆಚ್ಚಿಗೆ ಆಕಾರದಲ್ಲಿ ತಗಡೆ ಕಟ್ಟಿ ಬಾಸಿಂಗ ಕಟ್ಟಲಾಗುತ್ತದೆ. ಧೋತರ ಪೈರಣಗಳನ್ನು ಆತ ಧರಿಸುತ್ತಾನೆ. ಸೊಂಟಕ್ಕೆ ಬಾಕು(ಆಯುಧ) ಸಿಕ್ಕಿಸುತ್ತಾರೆ. ಕೊರಳಿಗೆ ಚಾವಲ ಸರ ತೊಡಿಸುತ್ತಾರೆ. ಮದುಮಗಳಿಗೆ ಅವಳ ಅತ್ತಿಗೆ ತೊಂಡಿಲ ಕಟ್ಟುತ್ತಾಳೆ. ಮಲ್ಲಿಗೆ ಹೂ ಸಿಂಗಾರ, ಹೂಗಳನ್ನು ಮುಡಿಸಲಾಗುತ್ತದೆ.

ಉಡುಗೊರೆ: ಎರಡೂ ಮನೆಗಳಲ್ಲಿ ಉಡುಗೊರೆ ಕಾರ್ಯಕ್ರಮ ನಡೆಯುತ್ತದೆ. ಅಜ್ಜಿಗೆ ಅತ್ತೆಯರಿಗೆ ಅಣ್ಣತಮ್ಮಂದಿರಿಗೆ ಅವರ ಹೆಂಡಂದಿರಿಗೆ ಇತರ ಸಮೀಪದ ಸಂಬಂಧಿರಿಗೆ ಮದುಮಕ್ಕಳ ಕೈಮುಟ್ಟಿಸಿ ಉಡುಗೊರೆ ನೀಡಲಾಗುತ್ತದೆ.

ಮದುಮಗಳು ತನ್ನ ಅಪ್ಪ ನೀಡಿದ “ಉಡುದಾರಿ” ಸೀರೆಯನ್ನು ಉಡುತ್ತಾಳೆ. ಸೀರೆಯುಟ್ಟು ಹಸಗರ ಗೋಡೆಯ ಬಳಿ ಕುಳಿತುಕೊಂಡಾಗ ಇವಳಿಗೆ ಊಟ ನೀಡುತ್ತಾರೆ. ಸಿಂಗಾರಗೊಂಡ ಮದುಮಗನಿಗೆ ಅವನ ಮನೆಯಲ್ಲಿ ಊಟ ನೀಡಲಾಗುತ್ತದೆ. ಹಿಂದೆ ಗೋಧೂಳಿ ಮುಹೂರ್ತದಲ್ಲಿ ಮದುವೆಯಾಗುತ್ತಿದ್ದ ಕಾರಣ ಮಧ್ಯಾಹ್ನ ಮದುಮಕ್ಕಳಿಗೆ ಊಟವನ್ನು ನೀಡುವ ಪದ್ಧತಿಯಿತ್ತು. ಆದರೆ ಈ ದಿನಗಳಲ್ಲಿ ಮಧ್ಯಾಹ್ನವೇ ಮದುವೆ ಕಾರ್ಯಕ್ರಮ ದೇವಸ್ಥಾನ ಅಥವಾ ಕಲ್ಯಾಣಮಂಟದಲ್ಲಿ ನಡೆಯುತ್ತದೆಯಾದ್ದರಿಂದ ಈ ಮಧ್ಯಾಹ್ನದ ಊಟದ ಪದ್ಧತಿಯಿಲ್ಲ. ಕಳಸ ತಯಾರಿ ಮಾಡಿಕೊಂಡು ಮದುಮಕ್ಕಳಿಬ್ಬರೂ ಮದುವೆನಡೆಯುವ ಸ್ಥಳಕ್ಕೆ ದಿಬ್ಬಣಸಮೇತ ನಡೆಯುತ್ತಾರೆ.

ಕಳಸ ತಯಾರಿ: ಮದುಮಕ್ಕಳ ಜೊತೆ ಮುಂಡಾಗಿ ಕಳಸವಿರಬೇಕು. ಇದನ್ನು ಹಿಡಿದವರು ನಡೆಯಬೇಕೆಂಬುದು ಪದ್ಧತಿ. ಇದನ್ನು ತಳಿಗೆಯೆಂದೂ ಕರೆಯುತ್ತಾರೆ.

ಒಂದುಹರಿವಾಣದಲ್ಲಿ ಕುಡಿಬಾಳೆಲೆ ಇಟ್ಟು ಅದರಲ್ಲಿ ಅರ್ಧದಷ್ಟು ಬೆಣ್ತಕ್ಕಿಯನ್ನು ತುಂಬಿ ಅದರ ಮೇಲೆ ಕಂಚಿನ ಗಿಂಡಿಯನ್ನಿಟ್ಟು ಈ ಗಿಂಡಿಯಲ್ಲಿ ತಾವಿನ ಕುಡಿ ತಮಕೆಯನ್ನು ಸಿಕ್ಕಿಸಿ ತುಯಕೆಯ ಮೇಲೆ ಜುಟ್ಟವಿರುವ ತೆಂಗಿನಕಾಯಿಯನ್ನಿಡುತ್ತಾರೆ. ಹರಿವಾಣದಲ್ಲಿರುವ ಅಕ್ಕಿಯ ಮೇಲೆ ವೀಳ್ಯದ ತಟ್ಟಿಯನ್ನಿಡುತ್ತಾರೆ. (ಎರಡು ವೀಳ್ಯದೆಲೆ ಒಂದು ಅಡಿಕೆ ಕೂಡಿದಾಗ ಅದನ್ನು ವಿಳ್ಯದ ಪಟ್ಟಿಯೆನ್ನಲಾಗುತ್ತದೆ) ಮೂರು ಬಾಳೆಕಾಯಿ, ಎರಡು ತೊಂಡೆಕಾಯಿ ಹೀಗೆ ಐದು ಫಲದ ವಸ್ತುಗಳನ್ನು ಅಕ್ಕಿ ತುಂಬಿದ ಈ ಹರಿವಾಣದಲ್ಲಿಡಲಾಗುತ್ತದೆ. ಇಲ್ಲಿ ಈ ಪುಟ್ಟ ಕನ್ನಡಿ ಹಣಿಗೆ ಕುಂಕುಮದ ಕರಡಿಗೆ ಹಾಗೂ ದೀಪ ಉರಿಯುತ್ತಿರುವ ಒಂದು ಹಣತಿಗೆಯನ್ನು ಇಡಲಾಗುತ್ತದೆ.

ತಳಿಗೆ ಅಕ್ಕ: ಈ ತಳಿಗೆ (ಕಳಸ)ಯನ್ನು ಹಿಡಿಯುವ ಅಧಿಕಾರ ಮದುಮಕ್ಕಳ ಸೋದರ ಸಂಬಂಧಿ ಮಹಿಳೆಗಿರುತ್ತದೆ. ಮದುಮಕ್ಕಳ ಸೋದರಿಯಲ್ಲಿ ಹಿರಿಯಳು ಅಥವಾ ಮದುಮಗನ ತಂದೆಯ ಸೋದರಿಯಲ್ಲಿ ಹಿರಿಯಳು ತಳಿಗೆಯನ್ನು ಹಿಡಿಯುವ ಅಧಿಕಾರವನ್ನು ಹೊಂದಿರುತ್ತಾಳೆ.

ಕಳಸವನ್ನು ತಳಿಗೆ ಅಕ್ಕನಿಗೆ
ಒಪ್ಪಿಸುವ ಅಧಿಕಾರವು ಮದುಮಕ್ಕಳ ತಾಯಿಯರ
ತಾಯಿ ತನಮಗಳ ಒಡನೆ ನಿಲ್ಲಿಸಿಕಂಡಿ
ಕಳಸ ಕೈಯೆತ್ತಿ ಕೊಡವಾಳೆ| ವನಂದಿ
ಕಳಶದ ದೀಪಾ ಜತನಾವೇ

ತಾಯಿಯ ಈಹಕ್ಕನ್ನು ಇತ್ತೀಚೆಗೆ ಪುರೋಹಿತರು ಕಸಿದುಕೊಂಡಿದ್ದಾರೆ.

ದಿಬ್ಬಣ ಬರುವುದು: ಗಂಡಿನ ದಿಬ್ಬಣವು ಹೆಣ್ಣಿನ ಊರಿನ ಸಮೀಪ ಬಂದಾಗ ಹೆಣ್ಣಿನ ಕಡೆಯವರು ಹೋಗಿ ಅವರನ್ನು ಬರಮಾಡಿಕೊಳ್ಳುತ್ತಾರೆ.

ದಿಬ್ಬಣವು ಗದ್ದೆಯ ಬಯಲಿನಲ್ಲಿ ಕುಳಿತಿರುವಾಗ ಹೆಣ್ಣಿನ ಮನೆಯವರು ಮದುಮಗನಿಗೆ ಖುರ್ಚಿ ಹಾಗೂ ದಿಬ್ಬಣದವರಿಗೆ ಹಸೆಗಳನ್ನು ನೀಡುತ್ತಾರೆ. ಗಂಡಿನವರ ಕಡೆಯ ಐದು ಜನ ಮಹಿಳೆಯರು ಐದು ಹರಿವಾಣದಲ್ಲಿ ಐದೈದು ವೀಳ್ಯವನ್ನಿಟ್ಟುಕೊಂಡು ಹೆಣ್ಣಿನ ಮನೆಯನ್ನು ಪ್ರವೇಶಿಸುತ್ತಾರೆ. ಒಳಬಂದು ಹೆಣ್ಣಿನವರು ತೆಗೆದಿಟ್ಟಿರುವ ಐದು ಹರಿವಾಣಗಳನ್ನು ಅದಲು-ಬದಲು ಮಾಡಿಕೊಳ್ಳುತ್ತಾರೆ.

ಬಳಿಕೇಳುವುದು: ಹಸಗರದ ಬಳಿ ಹೆಣ್ಣಿನ ಕಡೆಯವರು ಗಂಡಿನ ಬಳಿಯಾವುದು ಎಂದು ಕೇಳುತ್ತಾರೆ. ಈ ಕೆಲಸವನ್ನು ಗಂಡಸರು ನಡೆಸಿಕೊಡುತ್ತಾರೆ. ವಧು ಮತ್ತು ವರನ ಬಳಿ ಬೇರೆಯಾಗಿದ್ದು, ಅದು ಹೊಂದಿಕೆಯಾಗುತ್ತದೆಯೆಂದು ತಿಳಿದಾಗ ಹೆಣ್ಣಿನವರು ಗಂಡಿನ ದಿಬ್ಬಣವು ಒಳಗೆ ಬರುವುದಕ್ಕೆ ಅನುಮತಿ ನೀಡುತ್ತಾನೆ. ಆಗ ವಾಲಗಸಮೇತ ದಿಬ್ಬಣವು ಒಳಗೆ ಬರುತ್ತದೆ.

ಅಳಿಯನ್ನು ಕರೆತರುವುದು: ಅತ್ತೆಯು ಅಳಿಯನಿಗೆ ಆರತಿ ಎತ್ತುತ್ತಾಳೆ. ಮಾವನು ಎಡಗೈಯಲ್ಲಿ ದೀಪ ಹಿಡಿದು ಬಲಕೈಯಲ್ಲಿ ವೀಳ್ಯ ಸಿಂಗಾರ, ಹೂವನ್ನಿಟ್ಟುಕೊಂಡು ಅಳಿಯನ ಬಲಗೈ ಹಿಡಿದು ಮಂಟಪಕ್ಕೆ ಕರೆತಂದು ಕೂಡ್ರಿಸುತ್ತಾನೆ. ತಳಗಿ ತಂದವಳ ಜೊತೆ ನಾಲ್ಕಾರು ಹೆಂಗಸರು ಹೆಣ್ಣಿನ ಬಳಿಗೆ ಹೋಗುತ್ತಾರೆ. ಉಳಿದವರು ಚಪ್ಪರದಲ್ಲಿ ಕುಳಿತುಕೊಳ್ಳುತ್ತಾರೆ. ಎದ್ದು ಕುಳಿತುಕೊಳ್ಳು ತಿಳಿಸಲಾಗುತ್ತದೆ. ಗಂಡಿನ ಕಡೆಯವರು ಹೆಂಗಸರು ಒಳಗೆ ಬಂದಾಗ ಹೆಣ್ಣನ್ನು ಒಮ್ಮೆ ಹೆಣ್ಣಿನ ಕಡೆಯವರು ತಂದ ಹೂ, ಸೀರೆ, ಚಿನ್ನವನ್ನು ತೆಗೆದಿಡಲು ತಾಯಿ ಒಂದು ಹರಿವಾಣವನ್ನು ನೀಡುತ್ತಾಳೆ.

ಹೆಣ್ಣಿನ ಸಿಂಗಾರ: ಹೆಣ್ಣಿಗೆ ಗಂಡಿನವರು ತಂದ ಅಲಂಕಾರವನ್ನು ತೊಡಿಸಲಾಗುತ್ತದೆ. ಮದುಮಗನ ಅಕ್ಕ ಹೂ, ಚಿನ್ನಾದಿಗಳನ್ನು ಮದುಮಗನ ಕೈಮುಟ್ಟಿಸಿ ತಂದು ತೊಡಿಸುತ್ತಾರೆ.

ಹೆಣ್ಣನ್ನು ಹೊರತರುವುದು: ಧಾರೆಯ ಸಂದರ್ಭದಲ್ಲಿ ಅಜ್ಜಿ ಮನೆಯ ಮಾವನು ಹೆಣ್ಣನ್ನು ಹೆಗಲಿಗೇರಿಸಿ ಮಂಟಪಕ್ಕೆ ತರುವುದು ಹಳೆಯ ಪದ್ಧತಿ. ಈ ಇತ್ತೀತ್ತಲಾಗಿ ಅವಳನ್ನೇ ಮಾವನು ನಡೆಸಿಕೊಂಡು ಮಂಟಪಕ್ಕೆ ಕರೆತರುತ್ತಾನೆ.

ಮಾಲೆ ಹಾಕುವುದು: ಹಳೆಯ ಪದ್ಧತಿಯಂತೆ ಇಲ್ಲಿ ಮಂತ್ರ, ಘೋಷಗಳಿರುವುದಿಲ್ಲ. ಗಂಡ ಹೆಣ್ಣಿನ ಕೈಗೆ ಸಿಂಗಾರವನ್ನು ಕತ್ತರಿಸಿ ಬಾಳಪಟ್ಟಿಯ ಮಾಲೆಯನ್ನು ಕೊಡಲಾಗುತ್ತದೆ. ಹೆಂಗಸರು ಹಾಡುತ್ತಿರುತ್ತಾರೆ. ಹೆಣ್ಣು ಮೊದಲು ಗಂಡಿಗೆ ಮಾಲೆ ಹಾಕುತ್ತಾಳೆ.

ಧಾರೆ ಎರೆಯುವುದು: ಮದುಮಕ್ಕಳು ಮಂಟಪದಲ್ಲಿಕುಳಿರುತ್ತಾರೆ. ವರನ ಬೊಗಸೆಯಲ್ಲಿ ವಧುನಿನ ಬೊಗಸೆಯಿಟ್ಟು ಅದರಲ್ಲಿ ಅದರ ಮೇಲೆ, ಜುಟ್ಟವಿರುವ ತೆಂಗಿನಕಾಯಿ ಹಾಗೂ ಎರಡು ಬಾಳೆಹಣ್ಣುಗಳನ್ನಿಟ್ಟು ಕೆಳಗಡೆ ಹರಿವಾಣವನ್ನಿಡಲಾಗುತ್ತದೆ.

ಹೆಣ್ಣಿನ ಅಪ್ಪನು ತಲೆಗೆ ರುಮಾಲು ಸುತ್ತಿ ಕೊರಳಿಗೆ ಬಂಗಾರದ ಸರ, ಬೆಳ್ಳಿ ಚಾವಗೆ ಹಾಕಿಕೊಂಡು ಮಂಟಪಕ್ಕೆ ಬರುತ್ತಾನೆ. ಹೆಂಗಸರು ಗಿಂಡಿಯಲ್ಲಿ ಹಾಲನ್ನು ತುಂಬಿಡುತ್ತಾರೆ. ಇದನ್ನೂ ಹಿರಿಯರು ಎತ್ತಿ ಅಪ್ಪನ ತಲೆಯ ಮೇಲಿಡುತ್ತಾರೆ. ಧಾರೆ ಗಿಂಡಿಯನ್ನು ಹೊತ್ತು ತನ್ನ ಸುತ್ತ ಪ್ರದಕ್ಷಿಣೆಯನ್ನು ತಿರುಗಿ ಹಾಲನ್ನು ವಧುವರರ ಕೈಬೊಗಸೆಯಲ್ಲಿ ಹನಿಸುತ್ತಾನೆ. ಹೀಗೆ ಐದು ಬಾರಿ ಮಾಡಲಾಗುತ್ತದೆ. ಪ್ರತಿಬಾರಿ ನೆರೆದವರು ಜಯಘೋಷ ಮಾಡುತ್ತಾರೆ. ಹೆಂಗಸರು ಹಾಡುತ್ತಾರೆ.

ಕುಲಕೆ ತುಂಬಿ ಹೊಂದು ಚಲಕೆ ಚೊಳಚಿ ಕದದ
ಕೆಂದೀಯ ಕರದಿ ನೊರಿ ಹಾಲು| ಗಿಂಡೀ ತುಂಬಿ
ಸುತ್ತಣ ದೇವರಿಗೂ ಸರಣಂದಿ| ಅಪ್ಪಯ್ಯ
ಹೊತ್ತನಿಯೇ ಹೊನ್ನಾ ಮುಡಿಮನೆ| ಹೊತ್ತಿಕಂಡೆ
ದಾರಿಮಂಟಪಕೆ ಬರುವನೆ | ಹೆಣ್ಣೀನಪ್ಪ
ಜಯ್ಯೆಂದೇ ದಾರಿ ಎರದಾನೆ

ಮನೆಯಲ್ಲಿ ಧಾರೆ ಎರೆಯುವಾಗ ಹಾಲನ್ನೇ ಬಳಸಲಾಗುತ್ತಿತ್ತು. ಆದರೆ ಈಗಿನ ವಧುಗಳು ಮೈನೆರೆದಿರುವ ಕಾರಣ ನೀರಿನಲ್ಲಿ ಧಾರೆಯೆರೆಯಬಹುದೆಂದು ಭಟ್ಟರ ತರ್ಕವಾಗಿದೆ. ಆದ್ದರಿಂದ ಈಗಿನ ಧಾರೆಗಿಂಡಿಯಲ್ಲಿ ಹಾಲಿನ ಬದಲು ಭಟ್ಟರು ನೀರನ್ನು ತುಂಬಿ ಹೆಣ್ಣಿನ ಅಪ್ಪನ ತಲೆಯ ಮೇಲಿಡುತ್ತಾರೆ.

ಕರಿಮಣಿ ಕಟ್ಟುವುದು: ಧಾರೆಯೆರೆದ ಬಳಿಕ ತಳಗಿ ಅಕ್ಕ ಧಾರೆಮಣೆಯನ್ನೂಕರಿಮಣಿಸಹಿತ ಸುತ್ತಲಿನ ಹಿರಿಯರಿಗೆ ಕೈಮುಟ್ಟಿಸಿ ಮದುಮಗನ ಕೈಗೆ ಕೊಡುತ್ತಾಳೆ. ಹಾಡುಗಳು ಮೊಳಗುತ್ತವೆ.

ಹರಿಯೋ ಹರನೋರು ಸರನಿಟ್ಟಿಗೆಯ್ದಾರೆ
ಸರಿಯೋ ಪಾರ್ವತಿ ಸುರದಾಳೆ
ಸಿರಿಯೋ ಪಾರ್ವತಿ ಸುರದಾ ದಾರಿಮಣಿಯ
ತಿರವಂತಿ ಕಟಟಿದನೆ ಮಡದೀಗೆ
ಒಳ್ಳೊಳ್ಳ ಜೋಡಿ ವಜ್ರದ ಮಣಿಜೋಡಿ
ಬುದವಂತರ ಜೋಡಿನೆರ‍್ದದೆ
ಬುದವಂತರ ಜೋಡಿ ನೆರ‍್ದಲ್ಲಿ | ದಾರಿಮಣಿಯ
ತಿರವಂದಿ ಕಟ್ಟಿದರೆ ಮಡದೀಗೆ

ಅಕ್ಕ ಭಾವನ ಪಾದ ತೊಳೆಯುವುದು:

ಇದಾದ ಬಳಿಕ ಮಂಟಪದಲ್ಲಿ ಕುಳಿತಿರುವ ಮದುಮಕ್ಕಳ ಪಾದವನ್ನು ಹರಿವಾಣದಲ್ಲಿಟ್ಟು ಹೆಣ್ಣಿನ ಸೋದರನು ತೊಳೆಯುತ್ತಾನೆ. ಮೊದಲು ಭಾವನ ಪಾದವನ್ನೂ ಬಳಿಕ ಅಕ್ಕನ ಪಾದವನ್ನೂ ತೊಳೆಯುವುದು ಪದ್ಧತಿ.

ಉಡುಗೊರೆ: ಮದುಮಗನ ಕಡೆಯಿಂದ ಹೆಣ್ಣಿನವರಿಗೆ ಉಡುಗೊರೆ ನಡೆಯುತ್ತದೆ. ಪಾದ ತೊಳೆದವನಿಗೆ, ಅತ್ತೆ ಮಾವನಿಗೆ ಹೆಣ್ಣಿನ ಸೋದರತ್ತೆ, ಮಾವನಿಗೆ ಅಜ್ಜಿಗೆ ಹೆಣ್ಣಿನ ತಳಗಿ ಹಿಡಿದವಳಿಗೆ ಮದುಮಗನ ಕೈಮುಟ್ಟಿಸಿ ಉಡುಗೊರೆ ನೀಡಲಾಗುತ್ತದೆ. ಈ ಉಡುಗೊರೆಗಳನ್ನು ಮದುಮಗನ ಅಪ್ಪ ಉಡುಗೊರೆ ಕೊಳ್ಳುವ ವ್ಯಕ್ತಿಗಳ ಬಲಬದಿಯ ಹೆಗಲ ಮೇಲೆ ಹಾಕುವುದು ಉಡುಗೊರೆ ನೀಡುವ ಪದ್ಧತಿಯಾಗಿದೆ. ಮದುಮಗನ ಅಪ್ಪ ಹೆಣ್ಣಿನ ಕಡೆಯ ಎಲ್ಲರನ್ನೂ ಗಮನಿಸಿದ್ದೇನೆ. ಮದುಮಗನು ಉಡುಗೊರೆ ಕೊಡುತ್ತಿದ್ದಾನೆ ಎಂದು ಆಗಾಗ ಘೋಷಿಸುತ್ತಿರುತ್ತಾನೆ. ಉಡುಗೊರೆ ಪಡೆಯಲು ಬಂದವರು ಹಾಗೂ ಇವರದು ವೀಳ್ಯದಲ್ಲಿ ಹಣವನ್ನು ಇಟ್ಟುಕೊಂಡು ಮದುಮಕ್ಕಳಿಗೆ ಮರುಉಡುಗೊರೆ ನೀಡುತ್ತಾರೆ.

ಇಲ್ಲಿಗೆ ಮದುವೆಯ ಒಂದುಹಂತ ಮುಗಿಯುತ್ತದೆ. ಹೊಸ ಪದ್ಧತಿಯಂತೆ ಮದುವೆಯ ಕೆಲವು ಭಾಗ ಮಾತ್ರ ದೇವಸ್ಥಾನ ಅಥವಾ ಕಲ್ಯಾಣಮಂಟಪದಲ್ಲಿ ನಡೆಯುತ್ತದೆ.

ಇಲ್ಲಿಗೆ ಬರುವಾಗ ಹೆಣ್ಣಿನ ಕಡೆಯವರು ಬ್ರಾಹ್ಮಣರಿಗೆ ಕೊಡುವುದಕ್ಕೆಂದು ಅಕ್ಕಿ, ಕಾಯಿ, ದಕ್ಷಿಣೆಗಳನ್ನು ತರುತ್ತಾರೆ.ಮದುಮಗಳನ್ನು ಒಂದುಕೊಣೆಯಲ್ಲಿ ಕೂಡ್ರಿಸುತ್ತಾರೆ. ಅಲ್ಲಿ ಹಸಗರವಾಗಲೀ, ದೀಪವಾಗಲೀಇರುವುದಿಲ್ಲ. ವಧು-ವರರನ್ನು ಮಂಟಪಕ್ಕೆ ಕರೆತರುವ ಚಡಂಗವನ್ನು ಜನಪದ ರೀತಿಯಲ್ಲಿ ನಡೆಸುತ್ತಾರೆ. ಪಾದ ತೊಳೆಯುವ, ಉಡುಗೊರೆ ಕೊಡುವ ಕಾರ್ಯಗಳೂ ಇಲ್ಲಿ ನಡೆಯುತ್ತವೆ. ಆದರೆ ಧಾರೆ ಎರೆಯುವಾಗ ಭಟ್ಟರ ಮಂತ್ರಗಳು ಹೆಂಗಳೆಯರ ಹಾಡನ್ನು ಹಿಂದಕ್ಕಟ್ಟಿವೆ. ಹೆಣ್ಣು ಮೈನರೆದಿರುವ ಕಾರಣವನ್ನು ನೀಡಿ ಭಟ್ಟರು ಇಲ್ಲಿಯೇ ಶೋಭನದ ಹೋಮವನ್ನು ಮುಗಿಸುತ್ತಾರೆ. ಸಪ್ತಪದಿ ತುಳಿಯುವ ಆಚರಣೆಯು ಹೊಸದಾಗಿಸೇರಿಕೊಂಡಿದೆ. ಭಟ್ಟರ ಸಮಕ್ಷಮ ಅವರ ಮುಂದಾಳತ್ವದಲ್ಲಿ ಮದುವೆ ಶೋಭನ ನಡೆಯುವುದು ಇತ್ತಿಚಿನ ಬದಲಾವಣೆಯಾಗಿದೆ.

ಈಗ ಅರವತ್ತು ವರ್ಷದವ್ಯಕ್ತೃ ಹನ್ಮಿಕ್ಷೇತ್ರು ಗೌಡ ಮೊಳ್ಕೋಡು ಇವಳಿಗೆ ಆರು ಜನ ಮಕ್ಕಳು. ಇವರಲ್ಲಿ ನಾಲ್ಕು ಜನರ ಮದುವೆ ಮನೆಯಲ್ಲಿಯೇ ನಡೆದಿತ್ತು. ಭಟ್ಟರು ಬಂದಿರಲಿಲ್ಲ. ನೆರೆದವರ ಸಮಕ್ಷಮದಲ್ಲಿ ಅಕ್ಷತೆ ಹಾಕಿ ಮದುವೆ ಮಾಡಲಾಗಿತ್ತು. ಐದನೆಯವನಾದ ಗೊಯ್ದನ ಮದುವೆ ಸುಮಾರು ಹತ್ತು ವರ್ಷದ ಹಿಂದೆ ನಡೆಯಿತು. ಆಗ ಭಟ್ಟರು ಅಳ್ಳಂಕಿಯಿಂದ ಮದುವೆ ಮನೆಗೆ ಬಂದು ಮದುವೆ ಮಾಡಿದ್ದರು. ಈಗ ಮನೆಗೆ ಭಟ್ಟರು ಬರುವ ಪದ್ಧತಿ ದೂರವಾಯಿತು. ಕೊನೆಯವನಾದ ವೆಂಕಟೇಶನ ಮದುವೆ ಎರಡು ವರ್ಷದ ಹಿಂದೆ ಭಟ್ಟರ ಕೇರಿ ಅಮ್ನೋರ ಮನೆಯಲ್ಲಿ ನಡೆಯಿತು. ಮೊಮ್ಮಕ್ಕಳ ಮದುವೆಯನ್ನು ದೇವಸ್ಥಾನಗಳಲ್ಲಿ ಮಾಡಲಾಗಿದೆ.

ಮದುವೆಯ ಪ್ರಮುಖ ಭಾಗವನ್ನು ಮನೆಯಿಂದ ಹೊರಗೆ ನಡೆಸಿಕೊಂಡು ಬಳಿಕ ಧಾರೆಯಾದ ಬಳಿಕ ಮದುಮಗಳನ್ನು ಗಂಡನ ಮನೆಯವರು ಕರೆದೊಯ್ಯುತ್ತಾರೆ. ಆದರೆ ಹಿಂದಿನ ಪದ್ಧತಿಯಂತೆ ಧಾರೆಯಾದ ದಿನ ಹೆಣ್ಣು ತವರು ಮನೆಯಲ್ಲಿಯೇ ಉಳಿದು ಮರುದಿನ ಮುಂಜಾನೆ ಗಂಡನ ಮನೆಗೆ ಹೊರಡುತ್ತಾಳೆ. ಹಳೆಯ ಪದ್ಧತಿಯಲ್ಲಿಯ ಅನೇಕ ಚಡಂಗಗಳು ಎರಡೂ ಮನೆಯವರ ಸಂಬಂಧವನ್ನು ಗಾಢಗೊಳಿಸುವಲ್ಲಿ ವಧುವರರಲ್ಲಿ ಪರಿಚಯ, ಸ್ನೇಹ ಬೆಳೆಯುವಲ್ಲಿ ಹೆಚ್ಚು ಸಹಾಯಕಾರಿಯಾಗಿರುತ್ತವೆ.

ಬಡಸೆಸೆ: ಧಾರೆ ಮುಗಿದ ಬಳಿಕ ಐದು ಜನ ಮಹಿಳೆಯರು. ವಧು-ವರರಿಗೆ ಅಕ್ಷತೆ ತಳಿಯುತ್ತಾರೆ. ಅಲ್ಲಿಂದ ವಧುವರರನ್ನು ಹಸಗರದ ಬಳಿ ಕುಳ್ಳಿರಿಸಿ ಮತ್ತೆ ಐದು/ಒಂಭತ್ತು ಜನರು ಸೆಸೆ (ಸೇಸೆ=ಅಕ್ಷತೆ) ತಳಿದು ಅವರನ್ನು ದೇವರ ಮುಂದೆ ಕುಳ್ಳಿರಿಸಿ ಬಾಸಿಂಗ ತೊಂಡಿಲ ಬಿಡಿಸಿ ಹಸಗರದ ಬಳಿಯ ಪೆಟ್ಟಿಗೆಯ ಹತ್ತಿರ ಇಡುತ್ತಾ ಸೊಂಟ್ಕೆ ಸಿಕ್ಕಿಸಿದ ಚಾಕು ಕೈಯಲ್ಲಿರುವ ವೀಳ್ಯ ತೆಂಗಿನಕಾಯಿಗಳನ್ನೂ ಅಲ್ಲಿ ತೆಗೆದಿಡುತ್ತಾರೆ.

ಊಟ: ಮದುಮಕ್ಕಳಿಗೆ ಕುಡಿಬಾಳೆಲೆಯಲ್ಲಿ ಊಟ ಬಡಿಸುತ್ತಾರೆ. ಮದುವೆಗೆ ಬಂದಿರುವವರೆಲ್ಲ ಈಗ ಊಟ ಮಾಡುತ್ತಾರೆ. ಹಿಂದಿ ಪದ್ಧತಿಯಿಂದ ಗೋಧೂಳಿಯ ಮದುವೆಯಾದ ಬಳಿಕ ಊಟ ಮಾಡಲು ಮಧ್ಯರಾತ್ರಿ ಕಳೆಯುತ್ತಿತ್ತು.

ನಿದ್ಧೆ: ಮದುವೆಯ ದಿನದ ರಾತ್ರಿಯನ್ನು ಮದುಮಗನ ಚಂಚಿಭಾವ (ಅಕ್ಕನ ಗಂಡ) ಹಾಗೂ ಇತರ ನಾಲ್ಕಾರು ಜನ ಗಂಡಸರು ಇವನ ಜೊತೆ ಮಂಟಪದಲ್ಲಿ ಹಸೆ ಹಾಕಿಕೊಂಡು ಮಲಗುತ್ತಾರೆ. ಮುಂಜಾನೆ ದಿಬ್ಬಣವು ವರನ ಊರಿಗೆ ಹೊರಡುತ್ತದೆ. ಈ ದಿನ ಕಾಯ್ಗುದ್ದುವುದು, ಗಂಧೀಳ್ಯ, ಹೂವಾಲಿ, ಹೊನ್ಗೆಂಟು ಮುಂತಾದ ಆಚರಣೆಗಳು ನಡೆಯುತ್ತವೆ.

ಕಾಯ್ಗುದ್ದುವುದು: ಇದೊಂದು ಶಕ್ತಿಪ್ರದರ್ಶನದ ಆಟ. ಇಲ್ಲಿ ಮನರಂಜನೆಗೂ ಅವಕಾಶವಿದೆ. ಇಲ್ಲಿ ಗಂಡಸರೇ ಪ್ರಧಾನ ಪಾತ್ರ.

ಹೆಣ್ಣಿನ ಕಡೆಯವರು ತೆಂಗಿನಕಾಯಿಯ ಸಿಪ್ಪೆಯಲ್ಲಿ ಒಂದು ಸುಲಿದ ತೆಂಗಿನ ಕಾಯಿಯನ್ನಿಟ್ಟು ಹಸಿಮಡಲು ಸೋಗೆಗಳ ಜೊತೆ ಹೊತ್ತುಕೊಂಡು ಬಂದು ಗಂಡಿನವರ ಮುಂದಿಡುತ್ತಾರೆ. ಆಹ್ವಾನವನ್ನು ಸ್ವೀಕರಿಸಿದ ಗಂಡಿನ ಕಡೆಯ ಶಕ್ತರು ಇದನ್ನು ಒಡೆಯುತ್ತಾರೆ. ಹಾಡು ಸಾಗುತ್ತದೆ.

ಸಾಲೆ ಹಚ್ಚಡದವರು, ಕೋಲು ನೆವಳದೋರು
ಗೊಂಡೆ ಮುಂಡಸದ ದೊರಗೋಳು| ಬಂದಯ್ದಾರೆ
ಗುದ್ದೀಗೊಂದ್ ಕಾಯಾ ಒಡ್ಡಾರೆ

ಹೂವಾಲೆಗೆ ಕರೆಯುವರು:

ಹೆಣ್ಣಿನ ತಾಯಿ ಬಾಗಿಲದಾಟಿ ಹೊರಗೆ ಹೋಗಿ ಅಲ್ಲಿರುವ ಗಂಡಿನ ಕಡೆಯ ಹೆಂಗಸರಿಗೆ ವೀಳ್ಯಕೊಟ್ಟು ಹೂವಾಲೆಗೆ ಬನ್ನಿ ಗಂದೀಳ್ಯಕ್ಕೆ ಬನ್ನಿ, ಎಂದು ಕರೆಯಬೇಕು.

ಹೂವಾಲೆಗೆ ಬಂದು ಹೆಣ್ಣು ಮಕ್ಕಳು ಮದುಮಗಳಿಗೆ ಎಣ್ಣೆ ಹಾಕಿ ಮಂಡೆಬಾಚಿ ತಾವು ಸಿಂಗಾರಗೊಳ್ಳುತ್ತಾರೆ. ಪಾನಕ ಕುಡಿಯುತ್ತಾರೆ.

ಇಲ್ಲಿ ಹಸಗರ ಬರೆದ ಅಂದ -ಚೆಂದದ ಹಾಡುಗಳನ್ನು ಕೂಡ್ರಲು ಕುಳಿತ ಹಸೆಯ ವರ್ಣನೆಯ ಹಾಡುಗಳು ಮೊಳಗುತ್ತವೆ.

ಇಪ್ಪತ್ತೊರಸವ ಚಿಕ್ಕ ಹೆಣ್ಮಕ್ಕಳ ಕಯ್ಲಿ
ಪಾದಾದಲ್ಹಾಸಾ ಸಮದೀದೊ
ಪಾದಾದಲ್ಹಾಸಾ ಸಮದಿ ಸುದ್ದಾದ್ಹಾಸಾ
ಆದೂಗಿ ತಂದೇ ಬಿಡಸೀದೊ ನೆಂಟಾರೆ
ಸೇರಾಡಿ ಕೂಡಿ ಹಸೆಯಲ್ಲಿ
ನಾರ‍್ಯೋರ‍್ ನೆಯ್ದಾರೆ ನಾಕು ಮಲ್ಲಿ ಹಸಿಯಾ
ನಾಕ್ ಮಲ್ಲಿಗೆ ನಾಕೂ ಕೊಳಕೀಯೇ| ಹಸಿಯ ಮೆನೆ
ಸೇರಾಡಿಕೂಡಿ ಜನರೆಲ್ಲ

ಹೂವಾಲಿ ಆಡುವುದು:

ಹೂವಾಲಾಡ್ವರ ಮಯ್ಯೆಲ್ಲಾ ಪರಿಮಳಾ
ಕಯ್ಯಲಿ ಕನ್ನಡಿಯ ತಡದಾರೆ| ಗಂಡಿಂಡಾರು
ಹೂವಾಲಾಡಿದರೆ ಬೆಳತನಕ

ಹೆಣ್ಣಿನ ಮನೆಗೆ ಬಂದು ಮದುಮಗನ ಕಡೆಯ ಪ್ರಮುಖ ಮಹಿಳಾ ಬಂಧುಗಳು ಆತಿಥ್ಯ ಪಡೆಯುವರು. ಹಸಗರದ ಬಳಿಯಲ್ಲಿ ಉಳಿದವರುಮಂಟಪದ ಬಳಿಯ ಚಪ್ಪರದಡಿಯಲ್ಲಿ ಮಡುವೆಯ, ಮನೆಯ ಚಪ್ಪರದಡಿಯ ಸುತ್ತಲಿನ ಅನೇಕ ಗೋಡೆಗಳು ಹತ್ತಾರು ಬಗೆಯ ಶೇಡಿ ಚಿತ್ತಾರದಿಂದ ಅಲಂಕೃತಗೊಂಡಿರುತ್ತವೆ. ಗಂಡಿನ ಕಡೆಯ ಹಾಗೂ ಹೆಣ್ಣಿನ ಕಡೆಯವ ಹೆಂಗಳೆಯರು ಈ ಚಿತ್ತಾರವನ್ನು ಕುರಿತು ಹಾಡುತ್ತಿರುತ್ತಾರೆ.

ಗೋಡೆಯ ಮೇಲಿನ ಶೇಡಿ ಕಾರಣಯೇನೆ
ತೇರ‍್ನ ಮೇಲಿನ ಗರೂಡಾನೇ
ತೇರ‍್ನ ಮೇಲಿರುವ ಗರುಡ ಸಿವನ ಮರಿಯಾ
ಯಾವಕ್ಕಾ ಜಾಣಿ ಬರದಾಳೆ

ಇದಕ್ಕೆ ಉತ್ತರ ನೀಡಲು ಅಲ್ಲಿಯೇ ಹೆಣ್ಣಿನ ಕಡೆಯ ಹಾಡುಗಾರ್ತಿಯರು ಹಾಜರಿರುತ್ತಾರೆ.

ಹಂದಿಮುಲ್ಲೆ ಹಳದಿ ದೇವರಗೆದ್ದಿ ಜಾಜೂ
ಬೆಳಿಮಕ್ಕಿಲಿರುವ ಬಿಳಿಶೇಡಿ| ತಂದಿನ್ನು
ಗೋಡೆಗೆ ಚಿತ್ತರವ ಬರದೀದೊ|ನೆಂಟರ
ಕಾನೀತೇ ಕೊಡಿ ಹಸಿಯಲ್ಲಿ

ಇದಕ್ಕೆ ಪ್ರತಿಯಾಗಿ ಹಾಡಿನಲ್ಲಿಯೇ ಜರೆಯತೊಡಗುತ್ತಾಳೆ.

ಕಬ್ಬೂ ಕಡಲೀಯ ಎಲ್ಲೋರು ನೆಡುವರು
ಎಲ್ಲರೂ ಬೆಲ್ಲಾ ಬೆಳುವಾರ| ನೆಂಟರ
ಕಾಣು ಕಾಣೆಂಬ ಬಗೆಯೇನು

ಹೀಗೆ ಹೆಣ್ಣಿನ ಮನೆಯಲ್ಲಿ ಹಾಡುಗಳ ಸ್ಪರ್ಧೆ ನಡೆದರೆ ಧಾರೆ ಮುಗಿದು ಹೆಣ್ಣೊಪ್ಪಿಸಿಕೊಂಡು ಗಂಡಿನ ಕಡೆಯವರು ತಮ್ಮ ಮನೆಗೆ ತೆರಳಿದಾಗ ಹೆಣ್ಣಿನ ಕಡೆಯ ಹಾಡುಗಾರ್ತಿಯರು ದಿಬ್ಬಣದ ಜೊತೆಗೆ ಅಲ್ಲಿಗೂ ಹೋಗಿ ಹೆಣ್ಣಿನ ಮನೆಯ ಹಸಗರ ಹಾಗೂ ಇತರ ಶೇಡಿಯನ್ನು ಒಪ್ಪಿ ಹೊಗಳುತ್ತ, ತೆಗಳಿ ಜರಿಯುತ್ತಾ ಹಾಡುತ್ತಾರೆ.

ಗೃಹಪ್ರವೇಶ: ಮದುವೆಯ ಮರುದಿನ ದಿಬ್ಬಣವು ಗಂಡಿನ ಮನೆಗೆ ಹೊರಡುತ್ತದೆ. ಅಲ್ಲಿ ವಧುವರರು ಓಕುಳಿಯಾಡುವರು. ಚಿಗುರೆಣ್ಣೆ ಸ್ನಾನ ಮಾಡಿ ಬಾಸಿಂಗ ತೊಂಡಿಲ ಧರಿಸಿ ಬಾವಿಪೂಜೆ ಮಾಡುವರು ಇವೆಲ್ಲ ಚಡಂಗಗಳು. ಬಾಗಿಲು ತಡೆಯುವುದು: ಮದುಮಗನ ಸಹೋದರಿಯು ಮದುಮಕ್ಕಳನ್ನು ಬಾಗಿಲಲ್ಲಿ ತಡೆದು ನಿಲ್ಲಿಸಿ ತನ್ನ ಮಗನಿಗೆ ಮುಂದೆ ಹುಟ್ಟಲಿರುವ ಮಗಳನ್ನು ಕೊಡುವ ವಚನವನ್ನು ಕೇಳುತ್ತಾಳೆ. ತಮ್ಮನು ಎಮ್ಮೆ, ಭೂಮಿ ಇತ್ಯಾದಿಗಳನ್ನು ಕೊಡುತ್ತೇನೆ, ಬಾಗಿಲ ತಡೆಯಬೇಡವೆಂದರೂ ಕೇಳದೇ ಅವನ ವಚನಕ್ಕಾಗಿ ಒತ್ತಾಯಿಸುತ್ತಾಳೆ. ಇದೀಗ ಮದುವೆಯಾಗಿ ಬಂದಿದ್ದಾನೆ. ತಮ್ಮ ಇನ್ನೂ ಮುಂದೆ ಎಂದೋ ಹುಟ್ಟಲಿರುವ ಮಗಳನ್ನು ಕೊಡುತ್ತೇನೆ ಎಂದು ವಚನ ಕೊಡುವಂತೆ ಒತ್ತಾಯಿಸುವ ಈ ಮಧುರ ಸಲ್ಲಾಪಗಳು ನೆರದವರಿಗೆ ಅಚ್ಚುಮೆಚ್ಚಾಗಿರುತ್ತವೆ.

ಬಾಗ್ಲ ತಡೆದಕ್ಕಗೆ ಕೀಲು ಕಡಗವ ಕೊಡುವೆ
ಬಾಲರೀಗ್ ಕೊಡುವೆ ಕರವೆಮ್ಮೆ

ತಡೆದ ಬಾಗಿಲವ ಬಿಡಬೇಕೆ ಎಂದು ತಮ್ಮ ವಿನಂತಿಸಿಕೊಂಡರೆ ಅಕ್ಕ “ನಿನ ಮಡದಿ ಪಡೆದಾ ಕುವರೀಯ ಕೊಡತೇನಂದ್ರೆ ತಡೆದ ಬಾಗಿಲವ ಬಿಡವೇನೋ” ಎಂದು ಪಟ್ಟು ಹಿಡಯುತ್ತಾಳೆ. ಕೊನೆಗೂ ತಮ್ಮ ಸೋತು ಅಕ್ಕನ ಮಗನಿಗೆ ತನ್ನ ಮಗಳನ್ನು ಕೊಡುತ್ತೇನೆಂದು ವಚನ ಕೊಡುತ್ತಾನೆ.

ಚಪ್ಪರ ಚಪ್ಪರ ಸಾಕ್ಷಿ ಚಪ್ಪರದ ಕಂಬೇ ಸಾಕ್ಷಿ
ಚಪ್ಪರದಲಿ ಕುಳಿತ ಜನ ಸಾಕ್ಷಿ
ಕಾಣ ಕಾವನ ಸಾಖ್ಷಿ ಕಾವಣಕ ಕಂಬೇ ಸಾಕ್ಷಿ
ಕಾವಣದಲ್ಲಿ ಕುಳಿತ ಜನಸಾಕ್ಷಿ ನನ್ನಲತಮ್ಮ

“ಕೊಡತೇನಂದನಿಯೇ ಕುವರೀಯ” ಎನ್ನುತ್ತ ಸಂತೋಷಗೊಳ್ಳುತ್ತಾಳೆ. ಆ ಬಳಿಕ ಬಾಸಿಂಗ ತೊಂಡಿಲ ಸಡಿಲಿಸಲಾಗುತ್ತದೆ. ಊಟೋಪಚಾರಗಳು ನಡೆಯುತ್ತವೆ.

ಜೀವನಾವರ್ತನಕ್ಕೆ ಸಂಬಂಧಪಟ್ಟ ಮದುವೆ ಆಚರಣೆಯಲ್ಲಿ ಇದರ ಎಲ್ಲ ಸಂದರ್ಭಗಳಲ್ಲಿ ಮಹಿಳೆಯರಿಗೆ ಪೂರ್ಣ ಅಧಿಕಾರ ಅವಕಾಶವಿರುವುದನ್ನು ಗಮನಿಸಬಹುದಾಗಿದೆ. ಜೀವನಾವರ್ತನಕ್ಕೆ ಸಂಬಂಧಪಟ್ಟಂತೆ ಮದುವೆಯ ಬಳಿಕ ನಡೆಸುವ “ದಿಂಡು” ಎಂಬ ಆಚರಣೆ ಈಗ ನಿಂತು ಹೋಗಿದೆ. ಮೈನೆರೆದ ಬಳಿಕ ಹೆಣ್ಣು ಮಕ್ಕಳ ಮದುವೆ ನಡೆಯುವ ಕಾರಣ ಪೂರ್ಣವಾಗಿ ಹೆಂಗಸರೇ ನಡೆಸಿಕೊಡುತ್ತಿದ್ದ ಈ ಆಚರಣೆ “ಹೋಮ” ಎಂಬ ಸುಧಾರಿತ ಹೆಸರಿನಲ್ಲಿ ಪುರೋಹಿತರ ಕೈ ಸೇರಿದೆ. ಇಲ್ಲಿ ಹೆಂಗಸರ ಜನಪದ ಕಾರ್ಯಗಳು ಮರೆಯಾಗಿವೆ.

ಬಸುರಿ ಬಾಳಂತಿಯರಿಗೆ ಸಂಬಂಧಪಟ್ಟ ಜನಪದ ಆಚರಣೆಗಳು ಪೂರ್ಣವಾಗಿ ನಶಿಸಿ ಹೋಗಿಲ್ಲ.ಇಲ್ಲಿ ಮಹಿಳೆಯರು ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಚೊಚ್ಚಲು ಬಸರಿಗೆ ಬಯಕೆ ಊಟ ಹಾಕುವ ಸಂದರ್ಭದಲ್ಲಿ ಪೂರ್ಣವಾಗಿ ಮಹಿಳೆಯರು ಪಾಲ್ಗೊಳ್ಳುತ್ತಾರೆ. ಬಸುರಿಗೆ ಕಜ್ಜಾಯ ಮಾಡಿ ಬಡಿಸುತ್ತಾರೆ.

ಬಸುರಿಯರ ಹೆರಿಗೆ ಕಾರ್ಯವನ್ನು ಕೂಡ ಇಲ್ಲಿಯ ನುರಿತ ಮಹಿಳೆಯರು ಮಾಡಿಸುತ್ತಿದ್ದರು. ಆದರೆ ಈಗ ಈ ಪದ್ದತಿ ಉಳಿದಿದ್ದಲ. ಬಸುರಿಯರು ಹೆರಿಗೆಗಾಗಿ ಆಸ್ಪತ್ರೆಗೆ ಹೋಗುತ್ತಾರೆ. ಬಾಳಂತಿ ಹಾಗೂ ಮಗುವಿನ ಶುಶ್ರೂಷೆಯಲ್ಲಿಯ ಮಹಿಳೆಯರು ಬಲ್ಲ ಜನಪದ ವಿಧಾನಗಳು ಮೂಲೆ ಗುಂಪಾಗಿವೆ.

ಮಗುವಿನ ನಾಮಕರಣದ ಪೂರ್ಣ ಸೂತ್ರಧಾರತ್ವ ಇದುವರೆಗೆ ಹೆಂಗಸರ ಕೈಯಲ್ಲಿಯೇ ಇತ್ತು. ಆದರೆ ಇಲ್ಲಿಯೂ ಈಗ ಪುರೋಹಿತರ ಪ್ರವೇಶವಾಗಿದೆ.

ಬಾಳಂತಿ ಹಾಗೂ ಮಗುವಿಗೆ ಸಂಬಂಧಪಟ್ಟ ದೇವತೆ “ಅಮಿಯಜ್ಜಿ” ತಾಯಿಮಕ್ಕಳ ಹಾಗೂ ಸಂತಾನದ ಹಿತರಕ್ಷಣೆ ಮಾಡುವ ಇವಳು “ಹೆಣ್ಣು” ಎಂಬುದನ್ನು ಇಲ್ಲಿ ಗಮನಿಸಬೇಕು. ಅಮಿಯಜ್ಜಿಯ ಪೂಜೆ, ಭಾವಿಪೂಜೆಯಂತಹ ಕೆಲವು ಚಡಂಗಗಳಲ್ಲಿ ಮಹಿಳೆಯರು ತಮ್ಮ ಅಧಿಕಾರವನ್ನು ಉಳಿಸಿಕೊಂಡಿದ್ದಾರೆ.

ನಾಮಕರಣದಲ್ಲಿ ಹೋಮಾದಿ ಪುರಾಣೋಕ್ತ ವಿಧಿಗಳನ್ನು ಪುರೋಹಿತರು ಬಂದು ನಡೆಸಿಕೊಟ್ಟ ಮೇಲೆ ಶಿಶುವಿನ ಅಜ್ಜಿ ಇತರ ಮಹಿಳೆಯರ ಸಹಾಯದಿಂದ ತೊಟ್ಟಿಲನ್ನು ಜನಪದ ರೀತಿಯಲ್ಲಿ ಸಿಂಗರಿಸಿ, ಶಿಶುವಿಗೆ ಎಣ್ಣೆ ಉದ್ದಿ ಸ್ನಾನ ಮಾಡಿಸಿ ಕಾಡಿಗೆ ಹಚ್ಚಿ ಹೊಸಬಟ್ಟೆ ತೊಡಿಸುವಳು. ಶಿಶುವಿನ ಹೊಕ್ಕಳು ಬಳ್ಳಿಯನ್ನು ಹುಗಿದ ಹೊಂಡದಲ್ಲಿ ನೆಟ್ಟು ಬಾಳೆಗಿಡಕ್ಕೆ ಮೂರು ಅನ್ನದ ಮುದ್ದೆಯನ್ನು ಬಾಳಂತಿ ಪೂಜೆ ಮಾಡುತ್ತಾಳೆ.

ತೊಟ್ಟಿಲಿಗೆ ತೆಂಗಿನಕಾಯಿ ಒಡೆದು ಮೊದಲು ತೊಟ್ಟಿಲು ತೂಗುವವನು ತಂದೆ, ಆತ ಮಗುವಿನ ಬಳಿಯಿರುವ ಹರಿವಾಣಕ್ಕೆ ಹಣ ಹಾಕುತ್ತಾನೆ. ನೆಂಟರಿಷ್ಟರೂ ಹರಿವಾಣದಲ್ಲಿ ಹಣವಿಡುತ್ತಾರೆ.

ಚೊಳಂಗಿಯಲ್ಲಿ, ತಾಯಿಯ ಪ್ರತಿನಿಧಿಯಂತಿರುವ ಸೋದರ ಮಾವನಿಗೆ ಹೆಚ್ಚು ಅಧಿಕಾರವಿರುತ್ತದೆ. ಸೋದರ ಮಾವನು ಮಗುವನ್ನು ತನ್ನ ತೊಡೆಯ ಮೇಲೆ ಕೂಡ್ರಿಸಿಕೊಂಡು ಕೂದಲು ತೆಗೆಯುವ ಶಾಸ್ತ್ರದಲ್ಲಿ ಯಜಮಾನಿಕೆವಹಿಸುತ್ತಾನೆ.

ಮರಣೋತ್ತರ ಆಚರಣೆಯಲ್ಲಿಯೂ ಪ್ರಾರಂಭದ ಕೆಲವು ಕಾರ್ಯಗಳನ್ನು ಹೆಂಗಸರೇ ನಡೆಸುತ್ತಾರೆ. ಆದರೆ ವಿಧವಾಚರಣೆಗಳು ಹೆಣ ಸುಡುವ ಬೂದಿ ತೆಗೆಯುವ ಮುಂತಾದ ಶಿವಕಳದ ಕೆಲಸಗಳಲ್ಲಿ ಪೂರ್ಣವಾಗಿ ಗಂಡಸರು ಪಾಲ್ಗೊಳ್ಳುತ್ತಾರೆ. ಪುರಾಣೋತ್ತರ ಪದ್ಧತಿಯಲ್ಲಿರುವಷ್ಟು ಕಟ್ಟುನಿಟ್ಟಾಗಿಲ್ಲವಾದರೂ ಆ ದಿಕ್ಕಿನತ್ತ ಇವು ಹೊರಳುತ್ತಿವೆ, ಬ್ರಾಹ್ಮಣರೂ ಪಾಲ್ಗೊಳ್ಳುತ್ತಿದ್ದಾರೆ.

ವಾರ್ಷಿಕಾವರ್ತನಕ್ಕೆ ಸಂಬಂಧಪಟ್ಟಂತೆ ಬರುವ ಹಬ್ಬಗಳಲ್ಲಿ ಗಂಡಸರ ಹಾಗೂ ಹೆಂಗಸರ ಕಾರ್ಯ ಚಟುವಟಿಕೆಗಳಲ್ಲಿ ಪಾಲು ಪಡೆದಿದ್ದಾರೆ. ಮನೆ ಸಾರಿಸಿ ಶೇಡಿ ಬರೆದು, ಹಬ್ಬದ ವಿಶೇಷ ಅಡುಗೆ ಮಾಡುವುದು ಇತ್ಯಾದಿ ಹಲವಾರು ಚಟುವಟಿಕೆಗಳು ಮಹಿಳೆಯರವು. ಪೂಜೆ ಮಾತ್ರ ಗಂಡಸರ ಅಧೀನದಲ್ಲಿದೆ. ಜಾನಪದ ದೇವರುಗಳ್ಲಲಿ ಪುರಷ ಸ್ತ್ರೀದೇವರುಗಳಿವೆ. ಸ್ತ್ರೀ ದೇವರುಗಳಾದ ಅಮ್ಮ, ಮಾಸ್ತಿ, ಚವುಡಿ ಮುಂತಾದವುಗಳಲ್ಲಿ ಅಮ್ಮ ಮಾಸ್ತಿಯರು ಗಂಡು ದೇವರುಗಳಿಗಿಂತ ಹೆಚ್ಚು ಪ್ರಮುಖ ಸ್ಥಾನದಲ್ಲಿವೆ. ಈನ್ನೊಡಮ್ಮ, ಬೆಳಿಯಮ್ಮ, ಮಾರಿಯಮ್ಮ, ಬೋಳಜ್ಜಿ, ಅಮಿಯಜ್ಜಿಗಳ ಆರಾಧನೆಯಿದೆ. ಆದರೆ ಇವುಗಳ ಪೂಜಕರು ಗಂಡಸರಾಗಿದ್ದಾರೆ. ಗಂಡು ದೇವರುಗಳಾದ ಜಟಗ, ಈರಗಳು ಕೆಲವು ಕಡೆ ಪ್ರಾದೇಶಿಕ ವ್ಯಾಪ್ತಿಯ ಅಧಿಕಾರದಲ್ಲಿದ್ದರೆ ಮತ್ತೆ ಕೆಲವು ಕಡೆ ಅಮ್ಮನವರ ಅಂದರೆ ಗ್ರಾಮದೇವತೆಯ ಅಧಿನದಲ್ಲಿರುತ್ತದೆ.

ಗಾಮೊಕ್ಕಲು ಎಂಬ ಹೆಸರು ಬರಲು ಕಾರಣವಾದ “ಗಾಮ” ದೇವರು ಗಾಮೊಕ್ಕಲು ಕೈತಪ್ಪಿ ಊರವರೆಲ್ಲ ದೇವರಾಗಿ ಉಳಿದದ್ದು ಇದರ ಬಗ್ಗೆ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ.

ಕೃಷಿಗೆ ಸಂಬಂಧಪಟ್ಟ ಬೆಚ್ಚನ ಸಂಕ್ರಾತಿ ಕದ್ರಹಸ್ತ ಹೊಸಕ್ಕೆ ಊಟ,ದೀಪಾವಳಿಗಳಲ್ಲಿಯೂ ಹೆಂಗಸರು ಹೆಚ್ಚು ಕಾರ್ಯ ಚಟುವಟಿಕೆಯಲ್ಲಿರುತ್ತಾರೆ. ಇಲ್ಲಿಯೂ ಪೂಜೆ ಗಂಡಸರ ಪಾಲಿಗೆ ಹೋಗಿದೆ. ತುಲಸಿ ಪೂಜೆ, ಕೃಷ್ಣಾಷ್ಟಮಿ ದೇವಕಾರ್ಯ ಸಂಕ್ರಾಂತಿ, ಗ್ರಾಮದೇವತೆಗಳ ಹಬ್ಬಗಳಲ್ಲಿ ಕೂಡ ಗಂಡಸರ ಕಾರ್ಯಗಳು ಎದ್ದು ಕಾಣುತ್ತವೆ. ಆದರೆ ಪೂಜೆಯ ತಯಾರಿ ಹೆಂಗಸರದ್ದಾಗಿದೆ.

ಜಾತಿಯ ನ್ಯಾಯ ನಿರ್ಣಯ, ಆಡಳಿತ ವ್ಯವಸ್ಥೆಯಲ್ಲಿಯೂ ಗಂಡಸರ ಪಾತ್ರವು ಹೆಚ್ಚಾಗಿರುವುದು ಕಂಡುಬರುತ್ತದೆ. ಇತ್ತೀಚೆಗೆ ಹೊಸ ಆಡಳಿತ ವ್ಯವಸ್ಥೆಯ್ಲಲಿ ಗಾಮೊಕ್ಕಲು ಹೆಂಗಸರೂ ಪಾಲ್ಗೊಳ್ಳುತ್ತಿದ್ದಾರೆ.

ಸಾಹಿತ್ಯ

ಗಾಮೊಕ್ಕಲು ನೆಲೆಗಳಲ್ಲಿಯ ಅಡಕೆ ಬೇಸಾಯ ಗದ್ದೆನೆಟ್ಟಿದೋಣಿ ಪ್ರವಾಸ ಹಾಗೂ ಅಮ್ಮನವರ ಪಲ್ಲಕ್ಕಿ ಬರುವುದು, ದೇವಕಾರ್ಯಮಾಡುವುದು ತಿರುಪತಿಗೆ ಹೋಗುವ ಆಚರಣೆಗಳ ಸಂದರ್ಭಗಳು ಇಲ್ಲಿಯ ಜನಪದ ಗೀತೆಗಳ ಹುಟ್ಟಿಗೆ ಹಾಗೂ ಈ ಸಾಹಿತ್ಯ ಇಂದಿನವರೆಗೂ ಉಳಿದುಕೊಳ್ಳುವುದಕ್ಕೆ ಪೋಷಕ ಅಂಶಗಳಾಗಿವೆ. ಶರಾವತಿ ಕೊಳ್ಳಪ್ರದೇಶದ ಅನೇಕ ಕುರುವೆಗಳು ಹಾಗೂ ದ್ವೀಪಕಲ್ಪಗಳು ಜನಪದ ಹಾಡುಗಳ ಗಣಿಗಳಾಗಿದ್ದು, ಇಲ್ಲಿಯ ನೂರಕ್ಕೂ ಹೆಚ್ಚು ಮಹಿಳೆಯರು ಇಂದಿಗೂ ಜನಪದ ಹಾಡುಗಳನ್ನು ಉಳಿಸಿಕೊಂಡಿದ್ದಾರೆ. ಸುಮಾರು ಅರವತ್ತು ವರ್ಷ ದಾಟಿದ ಈ ಕೆಳಗಿನ ಕೆಲವು ಮಹಿಳೆಯರಲ್ಲದೆ ಇನ್ನೂ ಅನೇಕರು ಇಲ್ಲಿದ್ದಾರೆ. ಇವರಲ್ಲದೆ ಅರವತ್ತರೊಳಗಿನ ನೂರಾರು ಮಹಿಳೆಯರು ಜನಪದ ಗೀತೆಗಳ ಗಣಿಗಳಾಗಿರುತ್ತಾರೆ.

ಅರವತ್ತು ದಾಟಿದ ಕೆಲವು ಮಹಿಳೆಯರ ಹೆಸರುಗಳು ಇಂತಿವೆ:

ಕೇಸಿ ಗೋವಿಂದ ಗೌಡ ಕಾವೂರು, ಲಕ್ಷ್ಮಿನಾರಾಯಣ ಗೌಡ ಕೂಡ್ಲು, ದೇವಿ ನಾಗಪ್ಪಗೌಡ ಕೊಡಾಣಿ, ಕನ್ನೆ ಹನ್ಮಂತಗೌಡ ಕೆಳಗಿನ ಇಡಗುಂಜಿ, ಸಂಚಿ ಕೆಸಗೌಡ ಹಡಿನಬಾಳ, ಹನ್ಮಿಕ್ಷೇತ್ರಗೌಡ ಮಾಳ್ಕೊಡು.

ಮಹಾಭಾರತ ಖಂಡಕಾವ್ಯ:

ಈ ಪ್ರದೇಶದಲ್ಲಿ ಮಹಾಭಾರತ ವಿಷಯ ವಸ್ತುವನ್ನುಳ್ಳ ನಾಲ್ಕು ಖಂಡಕಾವ್ಯಗಳು ದೊರಕುತ್ತವೆ. ಈ ಕಾವ್ಯಗಳನ್ನು ಮಹಿಳೆಯರು ಬಹುಕಾಲದಿಂದ ಹಾಡುತ್ತಿದ್ದಾರೆ. ಇವು ಇವರ ಸ್ವಂತ ಸೃಜನಕೃತಿಗಳಾಗಿವೆ. ಇವುಗಳಲ್ಲಿ ಮಹಿಳೆಯರ ಸಂಸ್ಕೃತಿಯ ದರ್ಶನವಾಗುತ್ತದೆ. ಅಭಿಮನ್ಯು, ಕನಕಾಂಗಿ ಕಲ್ಯಾಣ, ಧರ್ಮರು, ಗೀಜಗ, ಸುಭದ್ರೆ, ಲಕ್ಷ್ಮಣ, ಅರ್ಜುನ, ಕುಸುಮಾಲಿ ನಾಲ್ವರು ಹೆಂಡಿರು, ಸೇಮಂತ್ರಿ ನಾರಾಯಣದೇವ, ರುಕ್ಮಿಣಿ, ಸತ್ತಪ್ಪನ ಹಾಡು, ಅತ್ತಗ್ ಮಯ್ದಿನಿ ಈ ಹಾಡುಗಳನ್ನೆಲ್ಲವನ್ನು ಹದಮಿ ಕ್ಷೇತ್ರುಗೌಡ ಮೊಳ್ಕೊಡು. (ತಾಹೊನ್ನಾವರ) ಇವಳೊಬ್ಬಳೇ ಹಾಡಬಲ್ಲಳು.

ಈ ಹಾಡುಗಳನ್ನು ಹಾಡಿನ ಎರಡನೆ ಸಾಲಿನಲ್ಲಿ ತಿರುಗಿ ಹೇಳಿ ಆ ಸಾಲಿಗೆ ಕೊನೆಯಲ್ಲಿ ಒಂದು ಶಬ್ದವನ್ನು ಜೋಡಿಸಿಕೊಂಡು ಮೂರನೆ ಸಾಲನ್ನು ಹೇಳುತ್ತಾಳೆ.

ಉದಾ:

ಇಂದೀಗ್ಹೇಳಿದ ಹಾಡು ಎಂದೀಗೆ ತೀರಿಗೇ
ತಿಂಗಳ್ಳೇ ಭೂಮಿ ಮಣಿ ಇರಿಸಿ
ತಿಂಗಳ್ಳೇ ಭೂಮಿ ಮಣಿ ಇರಿಸಿ ಕರದಾರೇ
ಪಂಚಪಾಂಡವ್ರ ಕತೆ ಹಾಡೆ|

ಈ ನಾಲ್ಕು ಸಾಲುಗಳನ್ನು ಈ ಕೆಳಗಿನಂತೆ ತ್ರಿಪದಿ ರೂಪದಿಂದ ಮುದ್ರಣಕ್ಕೆ ಅಳವಡಿಸಬಹುದಾಗಿದೆ.

ತಿಂಗಳ್ಳೇ ಭೂಮಿ ಮಣಿ ಇರಿಸಿ
ತಿಂಗಳ್ಳೇ ಭೂಮಿ ಮಣಿ ಇರಿಸಿ ಕರದಾರೇ
ಪಂಚಪಾಂಡವ್ರ ಕತೆ ಹಾಡೆ|

ಈ ಬಗೆಯಾಗಿ ಸಂಕ್ಷಿಪ್ತಗೊಳಿಸಿದಾಗ ಈ ಎಲ್ಲ ಮಹಾಭಾರತದ ಹಾಡುಗಳು ಸುಮಾರು ಮೂರು ಸಾವಿರ ತ್ರಿಪದಿಗಳಾಗುತ್ತವೆ. ಇತರ ಹಾಡುಗಳು ಸುಮಾರು ಎರಡು ಸಾವಿರ ತ್ರಿಪದಿಗಳಾಗಬಹುದು. ಹೀಗೆ ಗಾಮೊಕ್ಕಲ ಮಹಿಳೆಯರನೇಕರು ಸುಮಾರು ಒಂದು ಸಾವಿರದಿಂದ ಐದಾರು ಸಾವಿರ ತ್ರಿಪದಿಗಳಷ್ಟು ಹಾಡನ್ನು ಹೇಳಲು ಶಕ್ತರಾಗಿದ್ದಾರೆ. ಇಂತಹ ಮಹಿಳೆಯರಲ್ಲಿ ಹನ್ಮಿಕ್ಷೇತ್ರು ಗೌಡ ಮುಖ್ಯಳು.

ಮೊಳ್ಕೊಡನ ಇವರ ಮನೆಗೆ ದೇವಿಯ ಪಲ್ಲಕ್ಕಿ ಬಂದಾಗ ಇವರು ಪ್ರತಿವರ್ಷ ಮಹಾಭಾರತದ ಹಾಡು ದೇವಿಯ ಹಾಡುಗಳನ್ನು ಹಾಡುತ್ತಾರೆ. ದೇವಕಾರ್ಯದ ಸಮಯದಲ್ಲಿ ಆಮಂತ್ರಣ ನೀಡಿದವರ ಮನೆಗೆ ಹೋಗಿ ದೇವಕಾರ್ಯದ ಹಾಡುಗಳನ್ನು ಹೇಳುತ್ತಾರೆ. ಶೇಡಿಕಲೆ, ಒಪ್ಪಳಿ ಕಲೆಗಳಲ್ಲಿ ಇವರು ನಿಸ್ಸೀಮರು. ಜಾನಪದಶ್ರೀ ಪ್ರಶಸ್ತಿಗೆ ಅರ್ಹಳಾದ ಇವರನ್ನು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಗಮನಿಸಿದೆಯಾದರೂ ಅವಳ ಪ್ರತಿಭೆಗೆ ಅರ್ಹವಾದ ಜಾನಪದಶ್ರೀ ಪ್ರಶಸ್ತಿಯೂ ದೊರೆಯಬೇಕಾದದ್ದು ಯೋಗ್ಯವಾಗಿದೆಯೆಂದು ನನ್ನ ಜಾನಪದ ಕ್ಷೇತ್ರ ಕಾರ್ಯದ ನಲವತ್ತು ವರ್ಷಗಳ ಅನುಭವದಿಂದ ಹೇಳುತ್ತಿದ್ದೇನೆ.

ದೇವಕಾರ್ಯದ ಪೂಜೆಯ ಹಾಡು (ಪ್ರತಿ ಎರಡು ಸಾಲಿನ ಕೊನೆಯಲ್ಲಿ ಸೋಬಾನೆ ಎನ್ನಬೇಕು)

೧)        ದೇವಾರ ನೆನದಾರೆ ತಾ ಬಂದವೆ ಸೊಬಾನಾ
ಜ್ಞಾನದ ಮೊಳಿಯಾಗಿ ಕರದಾರೆ| ತಿರುಪತಿಯಾ
ದೇವಾರಾ ಮೊದಲೇ ನೆನವಾನೇ

೨)         ದೇವಾರ ನೆನದಾರೆ ತಾ ಬಂದಾವೆ ಸೊಬಾನಾ
ಕೆಂಡದ ಮೊಳಿಯಾಗಿ ಕರದಾರೆ ಧರ್ಮಸ್ಥಳದ
ಲಿಂಗಾನಾ ಮೊದಲೇ ನೆನವಾನೆ

೩)         ಲಿಂಗನ ನೆನವಾನೆ ಲಿಂಗ್ ಮಾರುತಿ ನೆನವಾನೇ
ಸಂಕಚಕ್ರದ ಒಡೆಯಾನ| ಗಿರಿಯಪ್ಪನಾ
ಸಂಕ ದಿನಿಗೇ ನೆನವಾನೆ

೪)        ಲಿಂಗನ ನೆನವಾನೆ ಲಿಂಗ್ ಮೂರುತಿ ನೆನವಾನೆ
ಚಿನ್ನದ ತ್ರಿಶೂಲದೊಡಿಯ(ನಾ) ಮಂಜುನಾಥದೇವ್ರಾ
ದೆವೂಟ ದಿನಿಗೇ ನೆನವಾನೇ

೫)        ದೇವ್ರ ನೆನವಾನೇ ದೇವಿಯೋರ ನೆನವಾನೇ
ದೇವರ ಹಿರಿಯಾ ಮಡದೀ(ಯಾ) ಮಾಲಕ್ಷ್ಮಿಯಾ
ನೆನದೊಮ್ಮೆ ತೊಡಗುವೇ

೬)        ದೆವ್ರ ನೆನವಾನೇ ದೇವಿಯರ ನೆನವಾನೇ
ದೆವರಾ ಕಿರಿಯ ಮಡದೀಯಾ| ಪದ್ಮಾವತಿಯಾ
ನೆನದೊಮ್ಮೆ ಹಾಡಾ ತೊಡಗಾವೊ

೭)         ಉದಿಯಲ್ ನೆನವಾನೇ ಮದನ ಮುರಹರಿಯಾ
ಕದಳಿಯ ಬನದ ಬಡಿಯನ್ನ ತಿಮ್ಮಪ್ಪದೇವ್ರ
ಉದಿಯಲ್ಲೇ ನಾವು ನೆನೆಯೂವೊ
ಉದಿಯಲ್ಲೇ ನಾವು ನೆನದದ್ದುಂಟಾದಾರೆ
ಯಾವತ್ತಿನ ದೋಸಾ ಪರಿಹಾರ

೮)        ಸಂಜೀಲ್ ನೆನವಾನೇ ಮಂದೀ ಮುರಾರಿಯ
ರಂಗೋಟ ಬನದಾ ಒಡೆಯನ ಮಂಜುನಾಥ ಒಡೆಯನ
ಸಂಜ್ಯಲೇ ನಾವು ನೆನವನೇ
ಸಂಜ್ಯಲೇ ನಾವು ನೆನದದ್ದುಂಟಾದರ
ಹೊಂದಿರುವ ದೋಸಾ ಪರಿಹಾರ

೯)         ಒಪ್ಪತ್ ನೆನವನೆ ಇಪ್ಪತ್ತು ಗಾರರಾ
ಒಪ್ಪತ್ತುವಳು ಜಡೆಯೊರಾ| ಗೋವಿಂದರಾಯರ
ಒಪ್ಪತ್ತೇ ನಾವು ನೆನವನಿ

೧೦)      ಒಪ್ಪತ್ ನೆನವನೆ ಇಪ್ಪತ್ತುಗಾರರ
ಇಪ್ಪತ್ತು ಏಳು ಜಡೆಯೋರಾ| ಮಂಜುನಾಥೊಡೀನಾ
ಇವತ್ತೇ ನಾವು ನೆನವನಿ

೧೧)      ಎದ್ದೊಮ್‌ ನೆನವನೆ ಸಿದ್ಧಿ ಸಿರಿರಾಮರ
ವಜ್ರ ತೊಂಡಲದ ಒಡೆಯನ್ನ| ತಿಮ್ಮಪ್ಪದೇವ್ರು
ಎದ್ದೊಮ್ಮೆ ನಾವು ನೆನವನಿ

೧೨)      ಎದ್ದೊಮ್ಮೆ ನಾವು ನೆನವನಿ
ಹೊದ್ದಿರುವ ದೋಸಾ ಪರಿಹಾರ

೧೩)     ಎದ್ದೊಮ್ಮೆ ನೆನವನೆ ಸಿದ್ದಿ ಸಿರಿರಾಮರ
ವಜ್ರತೊಂಡಿಲದ ಒಡೆಯರ| ಮಂಜುನಾಥೋಡೀನಾ
ಎದ್ದೊಮ್ಮೆ ನಾವು ನೆನವಾನೇ ನೆನದದ್ದುಂಟಾದರೆ
ಹೊದ್ದಿರುವ ದೋಷ ಪರಿಹಾರ

೧೪)      ಚಿನ್ನದ ಬಟ್ಟಿಟ್ಟಿ ಪುಣ್ಣುಳ್ಳರ ನೆನವಾನೇ
ಚಿನ್ನದ ಗೋಪುರದ ಒಡಿಯಾನಾ| ಮಾಗಣಪತಿಯಾ
ಚಿನ್ನದ ಬಟ್ಟಿಟ್ಟಿ ನೆನವಾನೇ